ಸೋಮವಾರ, ಅಕ್ಟೋಬರ್ 31, 2022

ಸಿಬಂತಿ ಪದ್ಮನಾಭ ಹಾಗೂ ಶ್ರೀಶ ಪುಣಚ ಅವರ 'ಮಾಧ್ಯಮ ತಂತ್ರಜ್ಞಾನ' ಕೃತಿಗೆ ಶ್ರೀ ಬೇಳೂರು ಸುದರ್ಶನ ಅವರು ಬರೆದ ಮುನ್ನುಡಿ

ಸಿಬಂತಿ ಪದ್ಮನಾಭ ಹಾಗೂ ಶ್ರೀಶ ಪುಣಚ ಅವರ 'ಮಾಧ್ಯಮ ತಂತ್ರಜ್ಞಾನ' ಕೃತಿಗೆ ಮುಖ್ಯಮಂತ್ರಿಗಳ ಇ-ಆಡಳಿತ
ಸಲಹೆಗಾರರೂ ಮುಕ್ತಜ್ಞಾನದ ಪ್ರತಿಪಾದಕರೂ ಆದ
ಶ್ರೀ ಬೇಳೂರು ಸುದರ್ಶನ ಅವರು ಬರೆದ ಮುನ್ನುಡಿ:

ರಾಜ್ಯದ ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗದ ಪದವಿ ವಿದ್ಯಾರ್ಥಿಗಳಿಗಾಗಿ ರೂಪಿತವಾದ ಈ ಪುಸ್ತಕವು ಕನ್ನಡದಲ್ಲಿ ಈ ವರ್ಗದ ಮೊಟ್ಟಮೊದಲ ಮತ್ತು ಸರ್ವಸ್ಪರ್ಶೀ ಪಠ್ಯವಾಗಿದೆ ಎಂದು ಹೇಳಲು ನನಗೆ ಬೇರಾವ ದಾಖಲೆಯೂ ಬೇಡ. ಏಕೆಂದರೆ ಅಂತಹ ದಾಖಲೆಗಳು ಸಿಗುವುದೂ ಇಲ್ಲ! ಹೆಚ್ಚೆಂದರೆ 2005-07 ರ ನಡುವೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ದೂರಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಗಾಗಿ ರೂಪಿಸಿದ ಗಣಕ ಪರಿಚಯ, ಯಂತ್ರಾಂಶ – ತಂತ್ರಾಂಶ ಕುರಿತ ಪಠ್ಯಪುಸ್ತಕಗಳನ್ನು ಇಲ್ಲಿ ಉಲ್ಲೇಖಿಸಬಹುದು. ಖಾಸಗಿ ಪ್ರಕಟಣಾ ರಂಗದಲ್ಲಿ ಈ ಕುರಿತ ಬಿಡಿ ವಿಷಯಗಳ ಕೆಲವು ಪುಸ್ತಕಗಳೂ ಬಂದಿರಬಹುದು. ಆದರೆ ಪತ್ರಿಕಾರಂಗದ ವಿದ್ಯಾರ್ಥಿ - ಶಿಕ್ಷಕರಿಗೆಂದು ರೂಪಿಸಿದ ಈ ಪುಸ್ತಕವು ಈ ಕಾಲದ ಮಹತ್ವದ ಕೃತಿ. 

ಮಾಹಿತಿಸ್ಫೋಟದ ಈ ಯುಗದಲ್ಲಿ ಮಾಹಿತಿ – ಜ್ಞಾನದ ನಡುವಣ ಅಂತರವೇ ತೆಳುವಾಗುತ್ತಿದೆ. ಹುಸಿ  ವ್ಯಾಖ್ಯಾನಗಳಿಂದ, ತಪ್ಪು  ಅಂಕಿ ಅಂಶ ಮತ್ತು ವಿವರಣೆಗಳಿಂದ ಅಂತರಜಾಲವು ಕಲುಷಿತಗೊಂಡಿದೆ. ವಿಕಿಪೀಡಿಯದಂತಹ ಸ್ವಯಂಘೋಷಿತ ಮುಕ್ತಜ್ಞಾನದ ವೇದಿಕೆಗಳಲ್ಲೂ ಕುಂದುಕೊರತೆಗಳು ಕಾಣುತ್ತಿವೆ.  ಫೇಸ್‌ಬುಕ್ - ಇನ್‌ಸ್ಟಾಗ್ರಾಂ ನಂತಹ ಸಿಮ್ ಆಧಾರಿತವಲ್ಲದ ಸಮಾಜತಾಣಗಳಿಂದ ಹಿಡಿದು ವಾಟ್ಸಪ್, ಕ್ಲಬ್‌ಹೌಸ್‌ನಂತಹ ಸಿಮ್ ಆಧಾರಿತ ಸಮೂಹ ಮಾಧ್ಯಮಗಳಲ್ಲೂ ಸತ್ಯದೊಂದಿಗೇ ಅಸತ್ಯದ ಅಂಶಗಳೂ ಢಾಳಾಗಿ ವಿಜೃಂಭಿಸತೊಡಗಿವೆ. ಆನ್‌ಲೈನ್ ಪತ್ರಿಕಾ ಜಾಲತಾಣಗಳಲ್ಲಿ ಹುಸಿ ವರದಿಗಳನ್ನು ಹುಡುಕುವುದೇ ದೊಡ್ಡ ಉದ್ಯಮವಾಗಿದೆ. ಇದಕ್ಕಾಗಿಯೇ ಪ್ರತ್ಯೇಕವಾದ ಜಾಲತಾಣಗಳೂ ಹುಟ್ಟಿಕೊಂಡಿದ್ದು ಅವುಗಳಲ್ಲೂ ಪಕ್ಷಪಾತಿ ವರ್ತನೆಯನ್ನು ಕಾಣಬಹುದಾಗಿದೆ. ಕಳೆದೆರಡು ವರ್ಷಗಳ ಕೊರೋನಾ ಮಹಾಪಿಡುಗಿನ ನಂತರ ಪತ್ರಿಕಾರಂಗದ ಚಹರೆಗಳು ಇನ್ನಿಲ್ಲದಂತೆ ಬದಲಾಗಿವೆ. ಮುದ್ರಣ ಮಾಧ್ಯಮವು ಕುಗ್ಗಿ ಆನ್‌ಲೈನ್ ಮಾಧ್ಯಮದ ಸಾಧ್ಯತೆಗಳು ವಿಸ್ತರಿಸಿವೆ. ಪತ್ರಿಕಾರಂಗದ ಆರ್ಥಿಕ ಲೆಕ್ಕಾಚಾರಗಳೂ ಬದಲಾಗಿವೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಜನರಿಗೆ ನೇರವಾಗಿ ತಲುಪುವ ಆನ್‌ಲೈನ್ ಮಾಧ್ಯಮಗಳಿಗೆ ಬೇಡಿಕೆ ಒದಗಿದೆ. ಆದರೆ ಜಾಹೀರಾತು ಕೊಡುತ್ತಿದ್ದ ಹಲವು ಸಂಸ್ಥೆಗಳು ನೇರವಾಗಿಯೇ ಗ್ರಾಹಕರನ್ನು ಮುಟ್ಟುವ ತಂತ್ರಗಳಿಗೆ ಮೊರೆಹೋಗಿರುವುದು ಪತ್ರಿಕಾರಂಗದ ವರಮಾನದ ಕುಸಿತಕ್ಕೆ ಕಾರಣವಾಗಿರುವುದು ವಾಸ್ತವ. 

ಹೀಗೆ ಮಾಹಿತಿಸ್ಫೋಟದ ಯುಗವು ‘ಮಾಹಿತಿ ವಿಪ್ಲವ’ದ ಕಾಲಘಟ್ಟವಾಗಿ ನಮ್ಮೆದುರಿಗೆ ನಿಂತಿರುವ, ವೆಬ್ 1.0 ರಿಂದ ವೆಬ್ 2.0 ಅನ್ನು ದಾಟಿ ವೆಬ್ 3.0 ಅನ್ನು ಅನುಭವಿಸುತ್ತಿರುವ ಈ ಹೊತ್ತಿನಲ್ಲಿ ಕನ್ನಡದ ಮಾಧ್ಯಮ ವಿದ್ಯಾರ್ಥಿಗಳು ಮಾಡಬೇಕಾದ್ದೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಇದು ಈ ಮುನ್ನುಡಿಯ ವ್ಯಾಪ್ತಿಯನ್ನು ಮೀರಿದ ಸಂಗತಿ. ‘ಮಾಧ್ಯಮ ತಂತ್ರಜ್ಞಾನ’ ಪುಸ್ತಕವು ಈ ವಿಪ್ಲವವನ್ನು ಅರಿತು ಬಾಳುವ ಹಲವು ದಿಕ್ಸೂಚಿ ಮಾಹಿತಿಗಳನ್ನು ನೀಡಿದೆ. ಇದನ್ನು ಕಂಪ್ಯೂಟರಿನ ಮಾಹಿತಿಯೆಂದೋ, ತಂತ್ರಾಂಶಗಳ ಕಸರತ್ತಿನ ವಿವರಣೆಗಳೆಂದೋ, ಆನ್‌ಲೈನ್ ಆಗುಹೋಗುಗಳ ದಾಖಲಾತಿಯೆಂದೋ ಭಾವಿಸುವಂತಿಲ್ಲ. ಈ ಪಠ್ಯವು ಜಗತ್ತಿನ ಮಾಹಿತಿ ತಂತ್ರಜ್ಞಾನ ಆಧಾರಿತ ಸಂವಹನದ ಎಲ್ಲ ಸಮಕಾಲೀನ ಆಯಾಮಗಳನ್ನು ಐತಿಹಾಸಿಕ ಹಿನ್ನೆಲೆಯೊಂದಿಗೆ ದಾಖಲಿಸಿದ ಮಹತ್ವದ ಪ್ರಯತ್ನ. 

ಇಂತಹ ನವಮಾಧ್ಯಮದ ಪಠ್ಯಪುಸ್ತಕಗಳು ಹೆಚ್ಚುಕಡಿಮೆ ಅಂತರಜಾಲದಲ್ಲಿ ಸಿಗುವ ವಿವರಣೆಗಳ ನಕಲಿನಿಂದಲೇ ತುಂಬಿಕೊಂಡಿರುವ ಅಪಾಯ ಇದ್ದೇ ಇತ್ತು. ಆದರೆ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುತ್ತಿರುವ ಶ್ರೀ ಸಿಬಂತಿ ಪದ್ಮನಾಭ ಮತ್ತು ಪತ್ರಿಕಾರಂಗದ ಯುವಪೀಳಿಗೆಯ ಬರಹಗಾರ ಶ್ರೀ ಶ್ರೀಶ ಪುಣಚ ಅವರಿಬ್ಬರೂ ಮೂಲತಃ ಸ್ವಂತ ಮಾಹಿತಿ ಸಂಗ್ರಹದಲ್ಲಿ ತೊಡಗಿರುವುದರಿಂದ ಈ ಪುಸ್ತಕವೂ ಅವರ ಅರಿವಿನ ಮೂಸೆಯಿಂದಲೇ ಅತ್ಯಂತ ಸ್ವಂತ ಕೃತಿಯಾಗಿ ಮೂಡಿದೆ. ವಿಕಿಪೀಡಿಯ ಪುಟಗಳಲ್ಲಿ ಇಂಥದ್ದೇ ಮಾಹಿತಿ ಸಿಗಬಹುದು; ಆದರೆ ಈ ಪಠ್ಯಪುಸ್ತಕದಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಬೇಕಾದ ಮಾಹಿತಿಗಳನ್ನು ವಿವಿಯ ಪಠ್ಯಕ್ರಮದ ಅನುಸಾರವಾಗಿಯೇ ಸ್ವತಂತ್ರವಾಗಿ ರೂಪಿಸಲಾಗಿದೆ. ಈ ಅಧ್ಯಾಯಗಳ ಬರಹದ ಶೈಲಿಯನ್ನು ನೋಡಿದಾಗ, ವಿಷಯಗಳನ್ನು ಚೆನ್ನಾಗಿ ಅರಿತು ವಿಶ್ಲೇಷಿಸಿ ಬರೆದಿರುವುದನ್ನು ಖಚಿತವಾಗಿ ಗುರುತಿಸಿದ್ದೇನೆ. ಇದೇ ಈ ಪುಸ್ತಕದ ಜೀವಿತಾವಧಿ ಹೆಚ್ಚಿಸಬಲ್ಲ ಒಂದು ಮುಖ್ಯ ಗುಣವಾಗಿದೆ. 

ಹೀಗಿದ್ದೂ, ಈ ಪುಸ್ತಕವು ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಮಾಧ್ಯಮ ತಂತ್ರಜ್ಞಾನದ ರಂಗಕ್ಕೆ ಒಂದು ಸಮಕಾಲೀನ ದಿಕ್ಸೂಚಿಯೇ ಹೊರತು, ಅರಿವಿನ ಸಮಗ್ರ ವಿಶ್ವಕೋಶವಲ್ಲ ಎಂಬುದೂ ನಿಜ. ಶ್ರಮವಹಿಸುವ ಮಾಧ್ಯಮ ವಿದ್ಯಾರ್ಥಿಗಳು ಈ ಪುಸ್ತಕದ ಮೂಲಕ ಹಲವು ರಂಗಗಳ ಬ್ರಹ್ಮಾಂಡ ಕಲಿಕೆಗೆ ಕೀಲಿಕೈ ಪಡೆಯುತ್ತಾರೆ. ಇಲ್ಲಿ ಬರೆದ ಪ್ರತಿಯೊಂದೂ ಅಧ್ಯಾಯ, ಉಪಶೀರ್ಷಿಕೆಗಳೇ ಪ್ರತ್ಯೇಕ ಮಾಧ್ಯಮ ತಂತ್ರಜ್ಞಾನ ರಂಗಗಳು. ಉದಾಹರಣೆಗೆ ಬ್ಲಾಕ್‌ಚೈನ್ ತಂತ್ರಜ್ಞಾನವನ್ನೇ ತೆಗೆದುಕೊಳ್ಳಿ. ಅದು ಮಾಹಿತಿ ತಂತ್ರಜ್ಞಾನದ ಭಾಗವಾಗಿ ಹ್ಯಾಶ್‌ಟ್ಯಾಗ್ ಹೆಸರಿನಲ್ಲಿ ಎರಡು ದಶಕಗಳಿಂದಲೂ ಬಳಕೆಯಲ್ಲಿತ್ತು. ಅದರ ಅವತಾರವೇ ಈಗ ಬದಲಾಗಿದೆ. ಈಗ ಬ್ಲಾಕ್‌ಚೈನನ್ನು ಎಲ್ಲ ಬಗೆಯ ಸತ್ಯದ ಮೂಲಕ್ಕೆ ಅಡಿಪಾಯ ಎಂದೇ ಬಗೆದು ವಿಜ್ಞಾನ, ಹಣಕಾಸು, ಭೂದಾಖಲೆ – ಹೀಗೆ ಹಲವು ರಂಗಗಳಲ್ಲಿ ಅಳವಡಿಸುತ್ತಿದ್ದಾರೆ. ಬ್ಲಾಕ್‌ಚೈನ್ ಕುರಿತಾಗಿ ಕನಿಷ್ಟ 20ಕ್ಕೂ ಹೆಚ್ಚು ಮಹತ್ವದ ಪುಸ್ತಕಗಳು ಕಳೆದೆರಡು ವರ್ಷಗಳಲ್ಲೇ ಬಂದಿವೆ. ಇನ್ನು ಎಐ, ವಿಆರ್‌ಗಳ ಬಗ್ಗೆ ಹೇಳಿದಷ್ಟೂ ಕಡಿಮೆ. 

ಈ ಉತ್ತಮ ಸಂಗತಿಗಳ ನಡುವೆಯೂ ಪಠ್ಯಕ್ರಮಕ್ಕೆ ಅನುಸಾರವಾಗಿಯೇ ಪುಸ್ತಕವನ್ನು ಬರೆಯುವ ಅನಿವಾರ್ಯತೆಯಲ್ಲಿ ಮಾಧ್ಯಮರಂಗಕ್ಕೆ ಬೇಕಾದ ಕೆಲವು ಅತಿಮುಖ್ಯ ತಂತ್ರಜ್ಞಾನಗಳ ಮಾಹಿತಿಗಳು ಲಭ್ಯವಿಲ್ಲ. ಉದಾಹರಣೆಗೆ ಡೇಟಾ ಜರ್ನಲಿಸಂ. ಇಂದು ಅಂಕಿಅಂಶಗಳ ಖಚಿತ ನೆರವಿಲ್ಲದೆ ಏನನ್ನೂ ಪ್ರತಿಪಾದಿಸಲು ಆಗದು; ಅಥವಾ ಅಂಕಿಅಂಶಗಳ ನೆರವಿನಿಂದ ಹಲವು ಸುದ್ದಿಗಳನ್ನು ಹೆಕ್ಕಿ ತೆಗೆಯಬಹುದು. ಇದು ಮೂಲತಃ ಪತ್ರಿಕಾರಂಗ, ಗಣಿತ ಮತ್ತು ಮಾಹಿತಿ ತಂತ್ರಜ್ಞಾನವನ್ನು ಮೇಳೈಸಿದ ಒಂದು ಮಾಧ್ಯಮ ತಂತ್ರಜ್ಞಾನ. ವೈಜ್ಞಾನಿಕವಾಗಿ ದತ್ತಾಂಶಗಳನ್ನು ವಿಶ್ಲೇಷಿಸುವ ಮೂಲಕ ನಾಡಿನ ಹಲವು ಸಮಸ್ಯೆಗಳನ್ನು ಹುಡುಕುವ, ಪರಿಹಾರಗಳನ್ನು ಅರಸುವ ಕೆಲಸವನ್ನು ಮಾಡಬಹುದು. ಈಗಾಗಲೇ ಭಾರತ ಸರ್ಕಾರ, ವಿವಿಧ ರಾಜ್ಯ ಸರ್ಕಾರಗಳು ಮುಕ್ತ ದತ್ತಾಂಶ ಪೋರ್ಟಲ್‌ಗಳನ್ನೇ ತೆರೆದಿವೆ. ಇವನ್ನೆಲ್ಲ ಮಾಧ್ಯಮ ರಂಗದ ವಿದ್ಯಾರ್ಥಿಗಳು ಅರಿತಿರಲೇಬೇಕು.  

ಪಠ್ಯಕ್ರಮಕ್ಕೇ ಹೊಂದಿಸಿಕೊಂಡು ಈ ಪುಸ್ತಕವನ್ನು ಬರೆದಿರುವುದು ಈ ಪುಸ್ತಕದ ಮಿತಿಯೂ ಹೌದು. ಇಂತಹ ಮಾಹಿತಿಪೂರ್ಣ ಪುಸ್ತಕವು ಸಾರ್ವಜನಿಕ ಓದಿಗೂ ಸಿಗಬೇಕು ಎಂಬ ಅಪೇಕ್ಷೆಯನ್ನು ಈ ಪುಸ್ತಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮದ ವಿವಿಧ ಹೊಸ ಆಯಾಮಗಳಾದ ಮೊಬೈಲ್ ಜರ್ನಲಿಸಂ, ಡಿಜಿಟಲ್ ಸುರಕ್ಷತೆ, ಗಣಿತ ತಂತ್ರಜ್ಞಾನ, ಲಿಪ್ಯಂತರಣ, ಇ–ಸಂವಹನ, ಡಿಜಿಟಲ್ ಕಥಾ ನಿರೂಪಣೆ, ಇನ್‌ಫೋಗ್ರಾಫಿಕ್ಸ್, ಡೇಟಾ ವಿಜುಯಲೈಸೇಶನ್, ಡಿಜಿಟಲ್ ಸಂಶೋಧನೆ, ಸಮುದಾಯ ಪತ್ರಿಕಾಕಾಯಕದ ತಂತ್ರಜ್ಞಾನ ಸಾಧ್ಯತೆಗಳು, ಪೋಡ್‌ಕಾಸ್ಟಿಂಗ್, ವಿಡಿಯೋ ಜರ್ನಲಿಸಂ – ಹೀಗೆ ಹಲವು ಮಾಹಿತಿ ತಂತ್ರಜ್ಞಾನ ಆಧಾರಿತ ಪತ್ರಕರ್ತರಿಗೆ ಅತ್ಯಾವಶ್ಯಕವಾದ ಸಂಗತಿಗಳ ಬಗ್ಗೆ ಕಲಿಯಲು ಈ ಪುಸ್ತಕವು ಮೊದಲ ಹೆಜ್ಜೆ ಆಗುವುದಂತೂ ನಿಶ್ಚಿತ.       

ಇನ್ನು ಈ ಪುಸ್ತಕದ ತಿರುಳೇ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಮಾಧ್ಯಮ ತಂತ್ರಜ್ಞಾನದ ಸಂಗತಿಗಳು. ಆದ್ದರಿಂದ ಮುದ್ರಿತ ಪುಸ್ತಕವಾಗಿ ಈ ಪುಸ್ತಕದ ಬಾಳಿಕೆ (ಅದರಲ್ಲೂ ಹೊಸ - ಬೆಳೆಯುತ್ತಿರುವ ತಂತ್ರಜ್ಞಾನಗಳ ಕುರಿತಾಗಿ) ಅಲ್ಪವೇ ಎಂಬುದು ಲೇಖಕರಿಗೆ ಗೊತ್ತಿರುವ ಹಾಗೆಯೇ ಶಿಕ್ಷಕ – ವಿದ್ಯಾರ್ಥಿಗಳೂ ಅರಿಯಬೇಕು. ಪತ್ರಿಕಾರಂಗದಲ್ಲಿ ವೃತ್ತಿಗೆ ಸೇರುವ ವಿದ್ಯಾರ್ಥಿಗಳ ಕಲಿಕೆಯ ಹೊಣೆಯರಿತ ಈ ವಿಶಿಷ್ಟ ಮತ್ತು ಮಾಹಿತಿಪೂರ್ಣ ಪುಸ್ತಕವನ್ನು ಸದಾ ತತ್‌ಸಾಮಯಿಕವಾಗಿ ಇರಿಸುವ ಆನ್‌ಲೈನ್ ತಾಣವನ್ನೂ ರೂಪಿಸುವುದು ಅತ್ಯಂತ ಅವಶ್ಯಕ. ಆಗ ಈ ಪುಸ್ತಕವನ್ನೇ ವಿಸ್ತರಿಸಿ ಹಲವು ಆಕರಗಳ ತಾಣಗಳಿಗೆ ಕೊಂಡಿಗಳನ್ನು ನೀಡಬಹುದು; ಬದಲಾದ ಮಾಹಿತಿಗಳನ್ನು ಸೂಕ್ತ ಉಲ್ಲೇಖದೊಂದಿಗೆ ಸೇರಿಸಬಹುದು; ಹೊಸ ಸಂಗತಿಗಳು ಅನಾವರಣಗೊಂಡ ಹಾಗೆಲ್ಲ ಸೇರಿಸುತ್ತ ಹೋಗಬಹುದು. ಇದೇ ಒಂದು ಮುಕ್ತಜ್ಞಾನ ಮಾದರಿಯ ಮಾಧ್ಯಮತಾಣ ಆಗುತ್ತದೆ. ಇಂತಹ ತಾಣವನ್ನು ಅಭಿವೃದ್ಧಿಪಡಿಸಿ ನಿರ್ವಹಿಸುವ ಖರ್ಚುಗಳನ್ನು ವಹಿಸಿಕೊಳ್ಳುವ ಬಗ್ಗೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳೂ ಒಂದು ಏಕಾಭಿಪ್ರಾಯಕ್ಕೆ ಬರಬಹುದು. ಆಗ ಇಂತಹ ಸದಾ ಬದಲಾಗುವ ಪಠ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ವರ್ಷಕ್ಕೊಂದು ಆವೃತ್ತಿಯಾಗಿ ಹೊಸತಾಗಿ ನೀಡಬಹುದು. ಜ್ಞಾನವನ್ನು ಮುಕ್ತವಾಗಿಟ್ಟು, ಜ್ಞಾನ ನಿರ್ವಹಣೆಗೆ ನಿಧಿ ನೀಡುವುದು ಈ ಕಾಲದ ಸಹಜ ಕ್ರಮವಾಗಿದೆ.  ಆಗಲೇ ಈ ಲೇಖಕರ ಶ್ರಮಕ್ಕೂ ಸೂಕ್ತ ಬೆಲೆ ಒದಗಿಸಿದಂತಾಗುತ್ತದೆ.  

ಮಾಧ್ಯಮ ತಂತ್ರಜ್ಞಾನವೆಂದರೆ ಕೇವಲ ಓದಿನ ಸರಕಲ್ಲ. ಸ್ವತಃ ಕಂಪ್ಯೂಟರ್ ಒಂದನ್ನು ಬಳಸಿ ಕಲಿಯಬೇಕಾದ ಸಂಗತಿಗಳು ಹೇರಳವಾಗಿವೆ. ಅದರಲ್ಲೂ ಮಾಧ್ಯಮ ವಿದ್ಯಾರ್ಥಿಗಳು ಡೆಸ್ಕ್ಟಾಪ್ ಕಂಪ್ಯೂಟರ್‌ಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಬೇಕು ಎಂಬುದು ನನ್ನ ಅನುಭವದ ಮಾತು. ಕಂಪ್ಯೂಟರ್‌ಗಳನ್ನು ಬೈಪಾಸ್ ಮಾಡಿ ಸ್ಮಾರ್ಟ್ಫೋನ್‌ಗಳನ್ನೇ ಬಳಸುತ್ತಿರುವ ಈ ಸಂದರ್ಭದಲ್ಲಿ ಈ ಮಾತು ವಿಚಿತ್ರವೆನ್ನಿಸಬಹುದು. ಆದರೆ ಡೆಸ್ಕ್ಟಾಪ್ ಕಂಪ್ಯೂಟರ್ ಎಂಬುದು ಪ್ರತಿಯೊಬ್ಬ ಪತ್ರಕರ್ತನ ವೃತ್ತಿಕೋಶ. ಮಾಹಿತಿ, ಕಲಿಕೆ, ತಂತ್ರಜ್ಞಾನ, ವಿಶ್ಲೇಷಣೆ, ಚಿತ್ರಣ, ವಿಷಯ ಸಂಪಾದನೆ, ಸಂಗ್ರಹ, ಸಂವಹನ - ಎಲ್ಲವನ್ನೂ ಸಾಧ್ಯವಾಗಿಸುವ ಕಂಪ್ಯೂಟರ್‌ಗಳನ್ನು ಅಂತರಜಾಲದ ಹೊಣೆಗಾರಿಕೆಯ ಬಳಕೆಯೊಂದಿಗೆ ಪತ್ರಕರ್ತರು ಸಮಾಜಮುಖಿಯಾಗಿ ಹಲವು ವರದಿಗಳನ್ನು ರೂಪಿಸಬಹುದು. 

ಕೊನೆಯ ಮಾತಾಗಿ ಹೇಳಬಹುದಾದರೆ, ಮಾಹಿತಿ ತಂತ್ರಜ್ಞಾನ, ಮಾಧ್ಯಮ ತಂತ್ರಜ್ಞಾನ – ಎಲ್ಲವೂ ನಾಡಿನ ಕಷ್ಟ ಸುಖಗಳನ್ನು ವರದಿಗಳ ಮೂಲಕ, ವಿವಿಧ ಮಾಧ್ಯಮಗಳ ಮೂಲಕ ಜನತೆಗೆ ತಲುಪಿಸುವ, ಸರ್ಕಾರಕ್ಕೆ ತಿಳಿಸುವ ಮೂಲ ಹೊಣೆಗಾರಿಕೆಗೆ ಸಹಕಾರಿಯಾಗುವ ಅಂಶಗಳೇ ಹೊರತು, ತಂತ್ರಜ್ಞಾನವೇ ಎಲ್ಲದಕ್ಕೂ ಪರಿಹಾರವಲ್ಲ. ತಂತ್ರಜ್ಞಾನವನ್ನು ಅರಿತರೆ ಪತ್ರಕರ್ತರು ಖಂಡಿತ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬಹುದು. ಪತ್ರಿಕಾರಂಗದಲ್ಲೂ ಉದ್ಯೋಗದ ಅವಕಾಶಗಳು ವೈವಿಧ್ಯವೂ, ವಿಸ್ತಾರವೂ ಆಗಿರುವ ಈ ಹೊತ್ತಿನಲ್ಲಿ ಈ ಪುಸ್ತಕವು ಹೊಸಕಾಲದ ಉದ್ಯೋಗಾವಕಾಶಗಳಿಗೆ ಕಿಟಕಿಯಾಗಿದೆ.     

ಇಂತಹ ತಾಜಾ ಪುಸ್ತಕವನ್ನು ಬರೆದ ಲೇಖಕರಿಬ್ಬರಿಗೂ ನನ್ನ ಅಭಿನಂದನೆಗಳು, ಶುಭಾಶಯಗಳು. ಜವಾಬ್ದಾರಿಯುತ ಮತ್ತು ತಂತ್ರಜ್ಞಾನಾಧಾರಿತ ಪತ್ರಿಕಾಕಾಯಕಕ್ಕೆ ಈ ಪುಸ್ತಕವು ನೆರವಾಗಲಿ ಎಂದು ಆಶಿಸುತ್ತೇನೆ. 

- ಬೇಳೂರು ಸುದರ್ಶನ 

  • ಪುಸ್ತಕದ ಶೀರ್ಷಿಕೆ: ಮಾಧ್ಯಮ ತಂತ್ರಜ್ಞಾನ
  • ಲೇಖಕರು: ಡಾ. ಸಿಬಂತಿ ಪದ್ಮನಾಭ ಕೆ. ವಿ. & ಡಾ.  ಶ್ರೀಶ ಎಂ. ಪುಣಚ
  • ಪ್ರಕಾಶನ: ಅಂಕುರ್ ಮೀಡಿಯಾ ಪಬ್ಲಿಕೇಶನ್ಸ್, ತುಮಕೂರು
  • ISBN: 978-81-958059-1-4
  • ಪ್ರಕಟಣೆಯ ವರ್ಷ: 2022
  • ಪುಟಗಳು: 234
  • ಬೆಲೆ: ರೂ. 250-00
  • ಪುಸ್ತಕಗಳಿಗಾಗಿ ಸಂಪರ್ಕ: 9449525854

ಗುರುವಾರ, ಅಕ್ಟೋಬರ್ 20, 2022

ಅಂಕಪಟ್ಟಿಯಿದ್ದರೆ ಅಷ್ಟೇ ಸಾಕೆ?

17 ಅಕ್ಟೋಬರ್ 2022ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಬರಹ

(ಉದ್ಯೋಗಾರ್ಹತೆಯ ಕೌಶಲಗಳು: ಭಾಗ-1)

ಅಂಕಪಟ್ಟಿ ನೋಡಿ ಉದ್ಯೋಗ ಕೊಡುವ ಪ್ರವೃತ್ತಿ ಹೋಗಿ ಬಹಳ ಕಾಲವೇ ಆಯಿತು. ಕೆಲವೇ ಕೆಲವು ಸರ್ಕಾರಿ ಉದ್ಯೋಗಗಳಿಗೆ ಮಾತ್ರ ಇನ್ನೂ ಪಿಯುಸಿ ಅಥವಾ ಪದವಿ ಅಂಕಗಳನ್ನು ನೋಡಿ ಮೆರಿಟ್‌ಲಿಸ್ಟ್ ತಯಾರಿಸುವ ಪದ್ಧತಿಯಿದೆ. ಉಳಿದಂತೆ ಉದ್ಯೋಗದಾತರಿಗೆ ಅಭ್ಯರ್ಥಿಗಳ ಅಂಕಗಳಿಸುವ ತಾಕತ್ತು ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಸಂಬಳಕ್ಕೆ ಪ್ರತಿಯಾಗಿ ಇವರು ಏನನ್ನು ನೀಡಬಲ್ಲರು ಎಂಬ ಪ್ರಶ್ನೆಗೆ ಉತ್ತರ ಮಾತ್ರ. ಈ ನಿರೀಕ್ಷೆಯನ್ನು ‘ಉದ್ಯೋಗಾರ್ಹತೆ’ ಎಂದೋ, ‘ಉದ್ಯೋಗಾರ್ಹತೆಯ ಕೌಶಲಗಳು’ ಎಂದೋ ಕರೆಯಬಹುದು.

ಅಂಕಪಟ್ಟಿ ತೋರಿಸುವ ಪರ್ಸೆಂಟೇಜು ಅರ್ಹ ಅಭ್ಯರ್ಥಿಗಳ ಪಟ್ಟಿ ತಯಾರಿಸುವ ಅನೇಕ ಮಾನದಂಡಗಳಲ್ಲಿ ಒಂದಷ್ಟೇ. ಬಹುತೇಕ ಆಯ್ಕೆ ಪ್ರಕ್ರಿಯೆಗಳಲ್ಲಿ ಸಂದರ್ಶನವೇ ಪ್ರಧಾನ ಭಾಗ. ನಾಗರಿಕ ಸೇವಾ ಪರೀಕ್ಷೆಗಳಲ್ಲಂತೂ ಸಂದರ್ಶನ ಎಂಬ ಪದವನ್ನೂ ಬಳಸುವುದಿಲ್ಲ. ಅವರು ಅದನ್ನು ‘ವ್ಯಕ್ತಿತ್ವ ಪರೀಕ್ಷೆ’ ಎಂದು ಕರೆಯುತ್ತಾರೆ. ಈ ವ್ಯಕ್ತಿತ್ವ ಮಾಪನ ಪ್ರಕ್ರಿಯೆಯಲ್ಲಿ ಅವರು ಹುಡುಕುವುದು ಅಭ್ಯರ್ಥಿಯ ಉದ್ಯೋಗಾರ್ಹತೆಯನ್ನೇ.

ಯಾವುದೇ ಉದ್ಯೋಗವನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗಬೇಕಾದರೆ ಶೈಕ್ಷಣಿಕ ವಿದ್ಯಾರ್ಹತೆಗಿಂತ ಹೊರತಾದ ಅನೇಕ ಗುಣಗಳು ಬೇಕೇಬೇಕು. ಸಂವಹನ ಕೌಶಲ, ಹೊಂದಾಣಿಕೆಯ ಪ್ರವೃತ್ತಿ, ಸಮಸ್ಯೆ ಬಗೆಹರಿಸುವಿಕೆ, ಸಮಯ ನಿರ್ವಹಣೆ, ತಂಡ ಮನೋಭಾವ, ಸಂಘಟನಾ ಕೌಶಲ, ಲಭ್ಯ ಮಾಹಿತಿಯ ಬಳಕೆ, ತಂತ್ರಜ್ಞಾನದ ಸದುಪಯೋಗ, ವ್ಯಕ್ತಿತ್ವ ಕೌಶಲಗಳು, ನಾಯಕತ್ವ- ಹೀಗೆ ಹತ್ತಾರು ಇವೆ. ಇವುಗಳಲ್ಲಿ ಕೆಲವು ಆಯಾ ಉದ್ಯೋಗವನ್ನು ನಿರ್ವಹಿಸಲು ಪ್ರಾಥಮಿಕ ಅವಶ್ಯಕತೆಗಳಾದರೆ, ಇನ್ನು ಕೆಲವು ಅದರಲ್ಲಿ ಕ್ಷಮತೆಯನ್ನು ಸಾಧಿಸಲು ಅನಿವಾರ್ಯ.

ಉದ್ಯೋಗಾರ್ಹತೆಯ ಕೌಶಲಗಳು:

ಯಾವುದೇ ಉದ್ಯೋಗದಲ್ಲಿರುವವನಿಗೆ ಪ್ರತಿದಿನ ಒಂದಲ್ಲ ಒಂದು ಸವಾಲು ಎದುರಾಗಿಯೇ ಆಗುತ್ತದೆ. ಸಣ್ಣ ಹುದ್ದೆಗಳಲ್ಲಿರುವವರಿಗೆ ಅವರ ಜವಾಬ್ದಾರಿ ನಿರ್ವಹಿಸುವಲ್ಲಿ ಸವಾಲುಗಳಾದರೆ, ದೊಡ್ಡ ಹುದ್ದೆಗಳಲ್ಲಿರುವವರಿಗೆ ಸಂಸ್ಥೆಯನ್ನೇ ಮುಂದಕ್ಕೆ ಒಯ್ಯುವಲ್ಲಿ ಸವಾಲುಗಳಿರುತ್ತವೆ. ಅವುಗಳು ಎದುರಾದ ತಕ್ಷಣ ಎದೆಗುಂದುವ ಬದಲು, ಅವುಗಳನ್ನು ಅಲ್ಲಲ್ಲಿಯೇ ವಿಶ್ಲೇಷಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದು, ಅಗತ್ಯ ನಿರ್ಧಾರಗಳನ್ನು ಕೈಗೊಳ್ಳುವುದು ನಿಜಕ್ಕೂ ಒಂದು ಕೌಶಲವೇ.

ಸಂವಹನ ಕೌಶಲವಂತೂ ಒಂದು ಅತಿಪ್ರಮುಖ ಅರ್ಹತೆ. ಹೇಳಬೇಕಾದುದನ್ನು ಗೊಂದಲವಿಲ್ಲದಂತೆ ಸ್ಪಷ್ಟವಾಗಿ ಇನ್ನೊಬ್ಬರಿಗೆ ಹೇಳುವುದೊಂದು ದೊಡ್ಡ ಕಲೆ. ಅನೇಕ ಸಲ ಇದನ್ನೇ ಸರಿಯಾಗಿ ಮಾಡದೆ ಎಡವಟ್ಟುಗಳನ್ನು ಮಾಡಿಕೊಂಡುಬಿಡುತ್ತೇವೆ. ಸಂವಹನವೆಂದಮೇಲೆ ಅದು ಬರವಣಿಗೆ ಮತ್ತು ಮಾತು ಎರಡನ್ನೂ ಒಳಗೊಂಡಿದೆ. ಕೆಲವು ಉದ್ಯೋಗಗಳಲ್ಲಿ ಬರವಣಿಗೆ ಮುಖ್ಯವಾದರೆ ಕೆಲವದರಲ್ಲಿ ಮಾತು ಮುಖ್ಯವಾಗುವುದೂ ಇದೆ. ಸರಿಯಾದ ಮಾತೊಂದರಿಂದ ಯುದ್ಧವನ್ನೇ ತಪ್ಪಿಸಬಹುದಂತೆ, ಇನ್ನು ಉದ್ಯೋಗದಲ್ಲಿ ಯಶಸ್ಸು ಕಾಣಲಾಗದೇ?

ಬಹುತೇಕ ಕೆಲಸಗಳನ್ನು ತಂಡಗಳಲ್ಲಿ ನಿರ್ವಹಿಸಬೇಕಾಗುತ್ತದೆ. ಒಬ್ಬಂಟಿಯಾಗಿ ಮಾಡುವ ಕೆಲಸಗಳು ಅಪರೂಪ. ಕಾರ್ಪೋರೇಟ್ ಯುಗದಲ್ಲಂತೂ ಟೀಂವರ್ಕ್ ಒಂದು ಮಹಾಮಂತ್ರ. ನಾವು ಕೆಲಸ ಮಾಡುವ ಕಂಪೆನಿಗಳಲ್ಲಿ ವಿವಿಧ ವಯೋಮಾನದ, ಸಾಮಾಜಿಕ ಹಿನ್ನೆಲೆಯ, ಭಿನ್ನ ರಾಜಕೀಯ ನಿಲುವುಗಳ ಸಹೋದ್ಯೋಗಿಗಳಿರುತ್ತಾರೆ. ಉದ್ಯೋಗದ ವೇಳೆ ಇವು ಯಾವುವೂ ಅಡ್ಡಿಯಾಗದಂತೆ ನೋಡಿಕೊಳ್ಳುವುದೊಂದು ಪ್ರಮುಖ ಕೌಶಲ. ಸಣ್ಣಪುಟ್ಟ ಅಡಚಣೆಗಳನ್ನು ನಿರ್ಲಕ್ಷಿಸಿ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುವುದೇ ಇಲ್ಲಿ ಮುಖ್ಯ.

ಯೋಜನೆ ಮತ್ತು ಸಂಘಟನೆ ಉದ್ಯೋಗ ಜಗತ್ತು ಬಯಸುವ ಇನ್ನೊಂದು ವಿಶಿಷ್ಟ ಕೌಶಲ. ಸಂಘಟನಾ ಕಲೆ ಎಲ್ಲರಿಗೂ ಒಲಿಯುವುದು ಕಷ್ಟವಾದರೂ, ಯಾವುದೇ ಉದ್ಯೋಗ ಕೈಗೊಂಡವರಿಗೆ ಅದರ ಪ್ರಾಥಮಿಕ ತಿಳುವಳಿಕೆಯಾದರೂ ಬೇಕಾಗುತ್ತದೆ. ಆಗಬೇಕಿರುವ ಕೆಲಸಗಳನ್ನು ಹೇಗೆ ವಿಭಾಗಿಸಿಕೊಳ್ಳಬೇಕು, ಯಾರಿಗೆ ಯಾವ ಹೊಣೆಗಾರಿಕೆಗಳನ್ನು ಹಂಚಬೇಕು, ಎಷ್ಟು ಸಮಯದೊಳಗೆ ಅವುಗಳನ್ನು ಪೂರೈಸುವಂತೆ ನೋಡಿಕೊಳ್ಳಬೇಕು, ಸಂಪನ್ಮೂಲಗಳನ್ನು ಹೇಗೆ ಒಟ್ಟು ಮಾಡಬೇಕು- ಇತ್ಯಾದಿಗಳನ್ನು ಅರಿತವರು ಉತ್ತಮ ಸಂಘಟಕರಾಗುತ್ತಾರೆ.

ಎಲ್ಲರೂ ರೂಢಿಸಿಕೊಳ್ಳಬೇಕೆಂದು ಬಯಸುವ ಆದರೆ ಬಹುತೇಕರು ವಿಫಲವಾಗುವ ಒಂದು ವಿಚಾರವೆಂದರೆ ಸಮಯ ನಿರ್ವಹಣೆ. ಯಾವುದೇ ವೃತ್ತಿಯ ಯಶಸ್ಸಿನಲ್ಲಿ ಸಮಯನಿರ್ವಹಣೆಯ ಪಾತ್ರ ಬಲು ಪ್ರಮುಖ. ನಿರ್ದಿಷ್ಟ ಕೆಲಸವೊಂದು ನಿಗದಿತ ಸಮಯದಲ್ಲಿ ಆಗದೇಹೋದರೆ ಕಂಪೆನಿಯ ನಿರ್ಣಾಯಕ ಯೋಜನೆಯೊಂದು ಕೈತಪ್ಪಿಹೋಗಬಹುದು. ನಾವು ಹತ್ತಬೇಕಾದ ಬಸ್ಸೋ ರೈಲೋ ತಪ್ಪಿಹೋದರೆ ಎಷ್ಟೊಂದು ಸಮಸ್ಯೆಯಾಗುತ್ತದೆ; ಇನ್ನು ಯೋಜನೆಯೇ ತಪ್ಪಿಹೋದರೆ ಆಗುವ ನಷ್ಟ ಎಷ್ಟು ದೊಡ್ಡದು? ಸಮಯ ನಿರ್ವಹಣೆಯಲ್ಲಿ ನಾವು ಯಶಸ್ವಿಯಾದರೆ ಅರ್ಧ ಉದ್ಯೋಗಜೀವನವೇ ಯಶಸ್ವಿಯಾದಂತೆ.

ಹೊಸತನ್ನು ಕಲಿಯುವುದು, ಅಗತ್ಯ ಮಾಹಿತಿಯನ್ನು ಕಲೆಹಾಕುವುದು, ಲಭ್ಯವಿರುವ ಮಾಹಿತಿಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದು, ತಂತ್ರಜ್ಞಾನವನ್ನು ಬಳಸುವ ಪ್ರಾಥಮಿಕ ತಿಳುವಳಿಕೆ ಹೊಂದಿರುವುದು ಇಂದು ಯಾವುದೇ ಉದ್ಯೋಗಕ್ಕೆ ಅಗತ್ಯ. ಕೆಲವು ವರ್ಷಗಳ ಹಿಂದೆ ಕಂಪ್ಯೂಟರ್ ಜ್ಞಾನ ಅನಿವಾರ್ಯವೇನೂ ಇರಲಿಲ್ಲ. ಇಂದು ಸಾಮಾನ್ಯ ವೃತ್ತಿಯೊಂದನ್ನು ನಿಭಾಯಿಸಬೇಕೆಂದರೂ ತಂತ್ರಜ್ಞಾನದ ಪ್ರಾಥಮಿಕ ತಿಳುವಳಿಕೆ ಅನಿವಾರ್ಯ.

ಆಯ್ದುಕೊಂಡ ವೃತ್ತಿಯಲ್ಲಿ ದಿನೇದಿನೇ ಪರಿಣತಿಯನ್ನು ಸಾಧಿಸುವುದು, ಆತ್ಮವಿಶ್ವಾಸ ಬತ್ತದಂತೆ ನೋಡಿಕೊಳ್ಳುವುದು, ಸೃಜನಶೀಲತೆಯನ್ನು ರೂಢಿಸಿಕೊಳ್ಳುವುದು ಕೂಡ ಉದ್ಯೋಗಾರ್ಹತೆಯ ಕೌಶಲವೆನಿಸಿದೆ. ಇವೆಲ್ಲಕ್ಕೂ ಕಿರೀಟಪ್ರಾಯವಾಗಿರುವುದು ಹೊಸತನಕ್ಕೆ ಉಪಕ್ರಮಿಸುವ ಮನೋಭಾವ ಮತ್ತು ನಾಯಕತ್ವದ ಗುಣ. ಇನ್ನೊಬ್ಬರನ್ನು ಮುನ್ನಡೆಸುವ ಗುಣ ಹೊಂದಿರುವವನು ತನ್ನ ಹುದ್ದೆಯಲ್ಲಿ ಉನ್ನತಿಗೇರುತ್ತಾನೆ.

ಇವೆಲ್ಲ ಆಧುನಿಕ ಉದ್ಯೋಗ ಜಗತ್ತು ಅಭ್ಯರ್ಥಿಗಳಿಂದ ಬಯಸುವ ಪ್ರಮುಖ ಕೌಶಲಗಳು. ನಮ್ಮ ಶೈಕ್ಷಣಿಕ ಅರ್ಹತೆಯ ಹಿಂದೆ ವರ್ಷಗಳ ಶ್ರಮ, ಸಾವಿರಾರು ರುಪಾಯಿಗಳ ಖರ್ಚು ಇರುತ್ತದೆ. ಅಚ್ಚರಿಯೆಂದರೆ ಇದರಾಚೆಗಿರುವ ಉದ್ಯೋಗ ಕೌಶಲಗಳಲ್ಲಿ ಹೆಚ್ಚಿನವೂ ಯಾವುದೇ ಖರ್ಚಿಲ್ಲದೆ ನಮ್ಮಷ್ಟಕ್ಕೆ ನಾವೇ ರೂಢಿಸಿಕೊಳ್ಳುವಂಥವು. ಅಂದಮೇಲೆ ಶಿಕ್ಷಣದ ಜತೆಜತೆಗೇ ಅವುಗಳನ್ನು ಪಡೆಯುವಲ್ಲಿ ಉದಾಸೀನ ಸಲ್ಲದು. ನೂರಕ್ಕೆ ನೂರು ಅಂಕ ಗಳಿಸಿದ ಅಭ್ಯರ್ಥಿ ತಾನೇ ಮಾರುಕಟ್ಟೆಗೆ ಹೋಗಿ ಆ ದಿನಕ್ಕೆ ಬೇಕಾದ ದಿನಸಿ ಸಾಮಗ್ರಿ ತಾರದೇ ಹೋದರೆ ಮನೆಮಂದಿಯೇ ಆತನನ್ನು/ಆಕೆಯನ್ನು ಜಾಣ/ಜಾಣೆ ಎಂದು ಒಪ್ಪುವುದಿಲ್ಲ. ಇನ್ನು ಪ್ರತಿತಿಂಗಳೂ ಸಂಬಳ ಕೊಡುವ ಉದ್ಯೋಗದಾತ ಪರ್ಸೆಂಟೇಜಿಗಿಂತ ಹೊರತಾದ ಅಗತ್ಯ ಕೌಶಲಗಳನ್ನು ಬಯಸುವುದರಲ್ಲಿ ಏನು ಅತಿಶಯ ಅಲ್ಲವೇ?

- ಸಿಬಂತಿ ಪದ್ಮನಾಭ ಕೆ. ವಿ.

ಗುರುವಾರ, ಸೆಪ್ಟೆಂಬರ್ 29, 2022

ಸೋಶಿಯಲ್ ಫೋಬಿಯಾ: ಆತ್ಮವಿಶ್ವಾಸವೇ ಅಭಯ

18-24 ಸೆಪ್ಟೆಂಬರ್ 2022ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಕೆಲವು ವರ್ಷಗಳ ಹಿಂದಿನ ಘಟನೆ. ಅದು ಕಾಲೇಜಿನ ಹೊಸ ಬ್ಯಾಚಿನ ಮೊದಲನೇ ಕ್ಲಾಸು. ಒಬ್ಬೊಬ್ಬರನ್ನೇ ತರಗತಿಯ ಎದುರಿಗೆ ಕರೆಸಿಕೊಂಡು ಅವರಿಂದ ಸ್ವಪರಿಚಯ ಹೇಳಿಸುತ್ತಿದ್ದೆ. ಕೆಲವರು ಸಲೀಸಾಗಿಯೂ ಇನ್ನು ಕೆಲವರು ಕೊಂಚ ಆತಂಕದಿಂದಲೂ ತಮ್ಮತಮ್ಮ ಪರಿಚಯ ಹೇಳಿಕೊಂಡರು. ಒಬ್ಬಳು ಮಾತ್ರ ಎದುರು ಬರುವುದಕ್ಕೇ ಒಪ್ಪಲಿಲ್ಲ. ಹೇಗೋ ಒತ್ತಾಯ ಮಾಡಿ ಅವಳನ್ನು ಈಚೆ ಕರೆತಂದದ್ದಾಯಿತು. ಮಾತು ಆರಂಭಿಸುವುದಕ್ಕೇ ಒಂದು ನಿಮಿಷ ತೆಗೆದುಕೊಂಡಳು. ಸ್ವಲ್ಪ ಹೊತ್ತಲ್ಲೇ ಏನೂ ಮಾತಾಡಲಾಗದೆ ಪೂರ್ತಿ ಬೆವರಿ ಒದ್ದೆಯಾಗಿ ಗೋಳೋ ಎಂದಳುತ್ತಾ ಅಲ್ಲೇ ಕುಸಿದುಕುಳಿತಳು. ಅವಳನ್ನು ಸಂತೈಸಿ ಅಂದಿನ ತರಗತಿ ಮುಗಿಸಿದ್ದಾಯಿತು.

ಅಚ್ಚರಿಯೆಂದರೆ ತರಗತಿ ಬಳಿಕ ತಾನಾಗಿಯೇ ಆ ಹುಡುಗಿ ವಿಭಾಗಕ್ಕೆ ಬಂದು ಭೇಟಿಯಾದಳು. ತನ್ನ ಕಷ್ಟ ಹೇಳಿಕೊಂಡಳು. ‘ಕ್ಲಾಸ್ ಅಂತ ಅಲ್ಲ ಸರ್, ಎಲ್ಲ ಕಡೆಯೂ ಹೀಗೇ ಆಗುತ್ತೆ. ಹೊಸಬರನ್ನೇನು, ಪ್ರತಿದಿನ ಎದುರಾಗುವವರು ಸಿಕ್ಕರೂ ಆತಂಕ ಆಗಿಬಿಡುತ್ತೆ. ಯಾವುದೋ ಫಂಕ್ಷನಿಗೆ ಹೋದರೂ ಟೆನ್ಷನ್ ಮಾಡ್ಕೋತೀನಿ. ಅದಕ್ಕೆ ಈಗೀಗ ಹೊರಗೆ ಹೋಗೋದನ್ನೇ ನಿಲ್ಲಿಸಿದೀನಿ. ಕಾಲೇಜಿಗೆ ಯಾಕಾದರೂ ಸೇರಿದೆನೋ ಅನ್ನಿಸ್ತಿದೆ’ ಎಂದಳು. 

‘ನಿಧಾನವಾಗಿ ಎಲ್ಲ ಸರಿ ಹೋಗುತ್ತಮ್ಮ. ನೋಡೋಣ. ಈಗ ನನ್ನ ಬಗ್ಗೆ ವಿಶ್ವಾಸ ಬಂದಿದೆ ತಾನೇ? ದಿನಕ್ಕೊಮ್ಮೆ ಬಂದು ಭೇಟಿಯಾಗು. ಏನೇ ಹೇಳಬೇಕು ಅನ್ನಿಸಿದರೂ ಹೇಳು’ ಎಂದು ಒಂದಷ್ಟು ಸಮಾಧಾನ ಹೇಳಿದೆ. ಕೆಲವು ದಿನಗಳ ಬಳಿಕ ‘ನಿನ್ನ ಹವ್ಯಾಸಗಳೇನು? ಬಿಡುವಿನ ವೇಳೆಯಲ್ಲಿ ಏನು ಮಾಡುತ್ತಿ?’ ಕೇಳಿದೆ. ‘ಸಣ್ಣಪುಟ್ಟ ಕವಿತೆ ಬರೀತೀನಿ ಸರ್. ಆದ್ರೆ ಈವರೆಗೆ ಯಾರಿಗೂ ಒಮ್ಮೆಯೂ ತೋರಿಸಿಲ್ಲ. ಎಲ್ಲ ಬರೆದು ಒಂದು ಕಡೆ ಇಟ್ಟಿದೀನಿ. ಯಾರು ಏನಂದ್ಕೋತಾರೋ ಅನ್ನೋ ಭಯ’ ಅಂದಳು. ಅವನ್ನೆಲ್ಲ ಅವಶ್ಯ ತಂದು ತೋರಿಸು, ತಪ್ಪಿದ್ದರೂ ನಾನು ತಮಾಷೆ ಮಾಡೋದಿಲ್ಲ ಅಂತ ಭರವಸೆ ತುಂಬಿದೆ.

ಅವಳ ಕವಿತೆಗಳು ನಿಜಕ್ಕೂ ಚೆನ್ನಾಗಿದ್ದವು. ಅವುಗಳಲ್ಲಿ ಹೊಸತನ ಇತ್ತು. ಅವಳನ್ನು ಅಭಿನಂದಿಸಿದೆ. ಬೇರೆ ಕೆಲವು ಕವನ ಸಂಕಲನಗಳನ್ನು ಕೊಟ್ಟು ಓದಲು ಹೇಳಿದೆ. ಅವಳು ಹೆಚ್ಚುಹೆಚ್ಚು ಬರೆದು ತೋರಿಸತೊಡಗಿದಳು. ಕೆಲವು ಕಾಲೇಜು ಮ್ಯಾಗಜಿನ್‌ನಲ್ಲಿ, ಪತ್ರಿಕೆಗಳಲ್ಲಿ ಪ್ರಕಟವಾದವು. ಸಹಪಾಠಿಗಳಿಂದ, ಬೇರೆ ಅಧ್ಯಾಪಕರಿಂದ ಅವಳಿಗೆ ಪ್ರಶಂಸೆ ಸಿಕ್ಕಿತು. ಆಕೆಯ ವ್ಯಕ್ತಿತ್ವ, ವರ್ತನೆಯಲ್ಲೂ ಕ್ರಮೇಣ ಸುಧಾರಣೆ ಕಾಣುತ್ತಿತ್ತು. ಒಂದು ವರ್ಷ ಕಳೆಯುವ ಹೊತ್ತಿಗೆ ಇದೇ ಹಳ್ಳಿಹುಡುಗಿ ಮೊದಲ ತರಗತಿಯಲ್ಲಿ ಭಯದಿಂದ ನಡುಗಿ ಬಿದ್ದುಹೋದಳಾ ಎಂದು ಅಚ್ಚರಿಯಾಗುವಷ್ಟರ ಮಟ್ಟಿಗೆ ಆಕೆ ಬದಲಾದಳು. ಪದವಿ ಮುಗಿಯುವ ಹೊತ್ತಿಗೆ ಅವಳ ಚೊಚ್ಚಲ ಕವನ ಸಂಕಲನ ಪ್ರಕಟವಾಯಿತು, ಮತ್ತು ಅದಕ್ಕೆ ರಾಜ್ಯಸರ್ಕಾರದ ಬಹುಮಾನ ಕೂಡ ಬಂತು!

ಸಾರ್ವಜನಿಕ ಸನ್ನಿವೇಶಗಳಲ್ಲಿ ಒಂದು ಬಗೆಯ ಭಯ, ಆತಂಕ ಕಾಡುವುದು ಸಾಮಾನ್ಯ. ಇದು ಎಲ್ಲರಿಗೂ ಒಂದಲ್ಲ ಒಂದು ಸಂದರ್ಭ ಎದುರಾಗುವಂಥದ್ದೇ. ಇದಕ್ಕೆ ಹಳ್ಳಿಯವರು, ಪಟ್ಟಣದವರು ಎಂಬ ಭೇದವಿಲ್ಲ. ಗಂಡು-ಹೆಣ್ಣೆAಬ ವ್ಯತ್ಯಾಸ ಇಲ್ಲ. ಇದು ಹದಿಹರೆಯದಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾದರೂ, ಆಮೇಲೆಯೂ ಇರಬಾರದು ಎಂದಿಲ್ಲ. ಕೆಲವೊಮ್ಮೆ ಇವು ದೀರ್ಘಕಾಲ ಮುಂದುವರಿಯುತ್ತವೆ. ಇದಕ್ಕೆ ‘ಸಾಮಾಜಿಕ ಭಯ’ (ಸೋಶಿಯಲ್ ಫೋಬಿಯಾ) ಎಂದು ಹೆಸರು. ಈ ದೀರ್ಘಕಾಲೀನ ಉದ್ವಿಗ್ನತೆ ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿನ ಮೇಲೆ, ಉದ್ಯೋಗದ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿ ತನ್ನಷ್ಟಕ್ಕೇ ಒಂಟಿಯಾಗುತ್ತಾ ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೆ ಒಳಗಾಗುವುದೂ ಇದೆ. 

ಸಾಮಾಜಿಕ ಭಯ ಕೇವಲ ನಾಚಿಕೆ ಅಲ್ಲ. ಅದಕ್ಕಿಂತ ಹೆಚ್ಚಾದ ಭಯ. ಗುಂಪುಗಳಲ್ಲಿ ಇರುವ, ಹೊಸಬರನ್ನು ಭೇಟಿಯಾಗುವ, ಸಭೆಯನ್ನು ಎದುರಿಸುವ- ಅಂದರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಒಬ್ಬ ವ್ಯಕ್ತಿ ಎದುರಿಸುವ ತೀವ್ರ ಉದ್ವಿಗ್ನತೆ. ತನ್ನ ಪ್ರತೀ ಚಟುವಟಿಕೆಯನ್ನೂ ಯಾರೋ ಗಮನಿಸುತ್ತಿರುತ್ತಾರೆ; ಅವುಗಳಲ್ಲಿ ಅಕಸ್ಮಾತ್ ತಪ್ಪುಗಳಾದರೆ ಎಲ್ಲರೂ ಆಡಿಕೊಳ್ಳುತ್ತಾರೆ ಎಂಬ ಭಾವನೆಯೇ ಈ ಆತಂಕದ ಬೇರು. ಆತ್ಮವಿಶ್ವಾಸವನ್ನೇ ಕುಗ್ಗಿಸುವ ಈ ಭಯದಿಂದಾಗಿ ವ್ಯಕ್ತಿ ಜೀವನದಲ್ಲೇ ಜುಗುಪ್ಸೆಯನ್ನು ತಾಳುವುದೂ ಇದೆ. ‘ನಾನು ಎಲ್ಲಿಯೂ ಸಲ್ಲದವನು, ಯಾವ ಕೆಲಸಕ್ಕೂ ಆಗದವನು, ನಿಷ್ಪ್ರಯೋಜಕ’ ಎಂಬ ಭಾವ ಬಂದರೆ ಅರ್ಧ ಬದುಕು ಮುಗಿದ ಹಾಗೆ. ಎಲ್ಲಿಯವರೆಗೆ ಎಂದರೆ ಇಂತಹ ವ್ಯಕ್ತಿಗಳು ಅಕ್ಕಪಕ್ಕ ಯಾರಾದರೂ ಇದ್ದರೆ ಶೌಚಾಲಯಕ್ಕೆ ಹೋಗಲೂ ಹಿಂಜರಿಯುತ್ತಾರೆ.

ಹೊರಬರುವುದು ಹೇಗೆ?

ಯಾವುದೇ ಸಮಸ್ಯೆಗೆ ಸುಲಭ ಪರಿಹಾರ ಎಂದರೆ ಸಮಸ್ಯೆಯ ಕಾರಣವನ್ನು ಅರ್ಥಮಾಡಿಕೊಳ್ಳುವುದು. ಇದು ಮೂರನೆಯ ವ್ಯಕ್ತಿಗಿಂತಲೂ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿ ತಾನೇ ಮಾಡುವುದೇ ಸರಿ. ತಾನು ಯಾವ ಸನ್ನಿವೇಶದಲ್ಲಿ ಆತಂಕಕ್ಕೊಳಗಾಗುತ್ತೇನೋ ಅದರ ಬಗ್ಗೆ ಗಾಢವಾಗಿ ಯೋಚನೆ ಮಾಡಿ ಅದರ ನಿರ್ದಿಷ್ಟ ಕಾರಣವನ್ನು ಅರ್ಥಮಾಡಿಕೊಳ್ಳುವುದು ಈ ನಿಟ್ಟಿನಲ್ಲಿ ಮೊದಲನೇ ಹೆಜ್ಜೆ. 

ಋಣಾತ್ಮಕ ಯೋಚನೆಗಳನ್ನು ದೂರವಿಟ್ಟು ತಾನು ಉಳಿದವರಿಗಿಂತ ಕಮ್ಮಿಯಿಲ್ಲ ಎಂಬ ಭಾವನೆಯನ್ನು ಗಟ್ಟಿಮಾಡಿಕೊಳ್ಳುವುದು ಎರಡನೇ ಹೆಜ್ಜೆ. ಯಾರೋ ತನ್ನನ್ನು ಗಮನಿಸುತ್ತಾರೆ, ಅವರು ಆಡಿಕೊಳ್ಳುತ್ತಾರೆ ಎಂಬ ಯೋಚನೆಯಿಂದ ಮೊದಲು ಹೊರಬರಬೇಕು. ಇನ್ನೊಬ್ಬರನ್ನು ಗಮನಿಸುವುದೇ ಎಲ್ಲರ ಕೆಲಸ ಅಲ್ಲ, ಅವರಿಗೆ ತಮ್ಮದೇ ಆದ ಕೆಲಸಗಳಿರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಯಾರೋ ಅದನ್ನೇ ಮಾಡುತ್ತಾರೆ ಎಂದುಕೊಳ್ಳೋಣ, ಅದರಿಂದ ಅವರ ನೆಗೆಟಿವ್ ವ್ಯಕ್ತಿತ್ವ ಗೊತ್ತಾಗುತ್ತದೆಯೇ ಹೊರತು ನಾವು ಕಳೆದುಕೊಳ್ಳುವಂಥದ್ದೇನೂ ಇಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಇನ್ನೊಂದು ಮುಖ್ಯ ವಿಷಯವೆಂದರೆ, ನಾವು ಯಾವುದೋ ಸಣ್ಣ ತಪ್ಪು ಮಾಡಿದೆವು ಎಂದುಕೊಳ್ಳೋಣ, ಅದನ್ನು ನೋಡಿದವರು ಬಹುತೇಕ ತಾವೂ ಹಿಂದೆ ಅಂತಹದೇ ತಪ್ಪು ಮಾಡಿದ್ದೆವಲ್ಲ ಎಂದು ಒಳಗೊಳಗಿಂದಲೇ ನೆನಪಿಸಿಕೊಳ್ಳುತ್ತಿರುತ್ತಾರೆ.

ಪ್ರತಿಯೊಬ್ಬನಲ್ಲೂ ಒಂದಲ್ಲ ಒಂದು ಪ್ರತಿಭೆ, ವಿಶಿಷ್ಟ ಗುಣ ಇದ್ದೇ ಇರುತ್ತದೆ. ಅದನ್ನು ತನಗೆ ತಾನೇ ಪೋಷಿಸಿಕೊಂಡು, ಅದರಿಂದ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದು ಮುಖ್ಯ. ಬರವಣಿಗೆ, ಕ್ರೀಡೆ, ಹಾಡು, ಮಾತುಗಾರಿಕೆ, ಪೈಂಟಿಂಗ್, ಕಸೂತಿ, ಡ್ಯಾನ್ಸ್, ನಾಟಕ- ಯಾವುದಾದರೊಂದು ಕಲೆ ನಮ್ಮೊಳಗೆ ಇರುತ್ತದೆ. ಅದನ್ನು ಗಮನಿಸಿಕೊಂಡು ಗಟ್ಟಿಗೊಳಿಸುವುದೇ ಒಂದು ಪ್ರಮುಖ ಪರಿಹಾರ. 

ಬರೆಯುವ ಕೌಶಲ ಇರುವವರು ಒಂದು ಕವಿತೆ, ಕತೆ, ಲೇಖನವನ್ನು ಸ್ನೇಹಿತರೊಂದಿಗೆ ಹಂಚಿಕೊಂಡಾಗ, ಎಲ್ಲೋ ಪ್ರಕಟಿಸಿದಾಗ ದೊರೆಯುವ ಪ್ರತಿಕ್ರಿಯೆಯ ಮೌಲ್ಯ, ಅದರಿಂದ ದೊರೆಯುವ ಆತ್ಮವಿಶ್ವಾಸ ಬಹಳ ದೊಡ್ಡದು. ಹಾಡುವ ಹವ್ಯಾಸ ಇರುವವರು ನಾಕು ಮಂದಿಯ ಮುಂದೆ ಹಾಡಿದಾಗ ದೊರೆಯುವ ಒಂದು ಸಣ್ಣ ಪ್ರಶಂಸೆ ಅಪೂರ್ವ ಬದಲಾವಣೆ ತರಬಲ್ಲದು. ಆಟೋಟ, ಪ್ರದರ್ಶನ ಕಲೆ- ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಮನ್ನಣೆಯನ್ನೂ, ಪ್ರತಿಫಲವಾಗಿ ಧೈರ್ಯವನ್ನೂ ತಂದುಕೊಡುತ್ತದೆ. ಪ್ರೇರಣಾದಾಯಿ ಪುಸ್ತಕಗಳ ಓದೂ ಈ ನಿಟ್ಟಿನಲ್ಲಿ ಸಹಕಾರಿ.

ಆತ್ಮವಿಶ್ವಾಸ ಎಂಬುದು ಯಾರೋ ಬೆಂಕಿಕಡ್ಡಿ ಗೀರಿ ಹಚ್ಚಲಿ ಎಂದು ಕಾಯುವ ದೀಪ ಅಲ್ಲ; ಸ್ವಯಂ ಬೆಳಗಬೇಕಾದ ಮಿಂಚುಹುಳ. 

- ಸಿಬಂತಿ ಪದ್ಮನಾಭ ಕೆ.ವಿ.

ಬುಧವಾರ, ಸೆಪ್ಟೆಂಬರ್ 14, 2022

ಅಜ್ಜ ಅಜ್ಜಿ ಇರಲವ್ವ ಮನೆಯಲ್ಲಿ...

11 ಸೆಪ್ಟೆಂಬರ್ 2022ರ 'ವಿಜಯ ಕರ್ನಾಟಕ' ಭಾನುವಾರದ ಪುರವಣಿಯಲ್ಲಿ ಪ್ರಕಟವಾದ ಲೇಖನ

ಅಜ್ಜ-ಅಜ್ಜಿ ಅಂದ್ರೆ ನಿಮಗೇಕೆ ಇಷ್ಟ? ಹಾಗೊಂದು ಪ್ರಶ್ನೆಯನ್ನು ಮಕ್ಕಳ ಮುಂದಿಟ್ಟೆ. ಹೆಚ್ಚುಕಮ್ಮಿ ಒಂದೇ ಅರ್ಥದ ಉತ್ತರ ಸರಕ್ಕನೆ ಬಂತು: ‘ಅವರು ನಮಗೆ ಬಯ್ಯೋದೇ ಇಲ್ಲ’. ಮಕ್ಕಳನ್ನು ಬಯ್ಯದೆಯೂ ತಿದ್ದಿತೀಡುವ ಕಲೆ ಅಜ್ಜ-ಅಜ್ಜಿಯಂದಿರಿಗೆ ಕರತಲಾಮಲಕ. ಅದಕ್ಕೇ ಅವರು ಗ್ರ್ಯಾಂಡ್ ಪೇರೆಂಟ್ಸ್ ಮಾತ್ರವಲ್ಲ ಗ್ರೇಟ್‌ಪೇರೆಂಟ್ಸ್ ಕೂಡ.

ಭೂಮಿಯ ಮೇಲೆ ನಿಮ್ಮನ್ನು ಬಯ್ಯದೆ ಇರುವ ಏಕೈಕ ಜೀವಿಗಳೆಂದರೆ ಅಜ್ಜ-ಅಜ್ಜಿ ಮಾತ್ರ. ಅದರರ್ಥ ಅವರು ನಿಮ್ಮನ್ನು ಟೀಕೆ ಮಾಡುವುದೇ ಇಲ್ಲ ಎಂದಲ್ಲ. ಕಹಿಗುಳಿಗೆಗಳನ್ನೂ ಅಕ್ಕರೆಯೆಂಬ ಸಕ್ಕರೆ ಪಾಕದಲ್ಲಿ ಅದ್ದಿ ನುಂಗಿಸುವುದು ಹೇಗೆಂದು ಅವರಿಗೆ ಗೊತ್ತು. ಅದು ಬಹಳ ಮುಖ್ಯ ಕೂಡ. ಬರೀ ಸಕ್ಕರೆ ಪಾಕ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಜ್ಜಿ ಸಾಕಿದ ಮಗು ಬೊಜ್ಜಕ್ಕೂ ಬಾರ ಅಂತೊಂದು ಗಾದೆ ಬೇರೆ ಉಂಟಲ್ಲ! ತೀರಾ ಮುಚ್ಚಟೆಯಿಂದ ಬೆಳೆದ ಮಗು ನಿಷ್ಪ್ರಯೋಜಕ ಆಗುತ್ತದೆ ಎಂಬ ಧ್ವನಿ ಅಷ್ಟೇ.

ಅದೊಂದು ಕಾಲ ಇತ್ತು: ಅಜ್ಜನ ಮನೆ ಎಂಬುದು ಸರ್ವತಂತ್ರ ಸ್ವಾತಂತ್ರ್ಯಕ್ಕೊಂದು ಪರ್ಯಾಯ ಪದ. ಅಜ್ಜನ ಮನೆಗೆ ಹೋಗುವ ಕಲ್ಪನೆಯಂತೂ ಆ ಸ್ವಾತಂತ್ರ್ಯದೆಡೆಗೊಂದು ಮಹಾ ನಡಿಗೆ. ಕೆಂಪು ಬಸ್ಸಿನಲ್ಲಿ ಕಿಟಕಿ ಪಕ್ಕ ಕೂರುವ, ಬಿರುಬಿಸಿಲಿನ ಮಧ್ಯೆ ಐವತ್ತು ಪೈಸೆಯ ಐಸ್‌ಕ್ಯಾಂಡಿ ಸವಿಯುವ, ಅಜ್ಜಿ ಮಾಡಿಟ್ಟ ಕುರುಕಲುಗಳನ್ನು ಹಗಲೂ ರಾತ್ರಿ ಮೆಲ್ಲುವ ಆ ಕಲ್ಪನೆಯೇ ಬಲು ರೋಚಕ. ಕನಿಷ್ಟ ಎರಡು ಮೂರು ತಿಂಗಳಿನಿಂದ ‘ದೊಡ್ಡರಜೆ’ಗೆ ಕಾಯುವ, ಅಜ್ಜನ ಮನೆಗೆ ಹೋಗಲು ಇನ್ನೆಷ್ಟು ದಿನ ಬಾಕಿ ಎಂದು ದಿನಾ ರಾತ್ರಿ ಕೌಂಟ್‌ಡೌನ್ ಮಾಡುವ, ಇಂಥಾ ದಿನವೇ ಹೋಗುವುದೆಂದು ಅಮ್ಮನ ಬಾಯಿಂದ ಅಧಿಕೃತವಾಗಿ ಹೇಳಿಸುವ, ಅದಕ್ಕೆ ಪೂರ್ವತಯಾರಿ ರೂಪದಲ್ಲಿ ಅಪ್ಪನನ್ನು ಒಪ್ಪಿಸುವ- ಆ ಕಾಲವಂತೂ ಒಂದು ಕನಸಿನ ಲೋಕ.

ಅಲ್ಲಿಗೆ ತಲುಪಿದ ಮೇಲಂತೂ ಮೊಮ್ಮಕ್ಕಳದ್ದೇ ಸಾಮ್ರಾಜ್ಯ. ಅಲ್ಲಿನ ಆಟಾಟೋಪಗಳಿಗೆ ಲಂಗುಲಗಾಮಿಲ್ಲ. ಯಾಕೆಂದು ಗೊತ್ತಲ್ಲ- ಅಜ್ಜನಿಗೆ ಸಿಟ್ಟು ಬರುವುದೇ ಇಲ್ಲ, ಅಜ್ಜಿ ಬಯ್ಯವುದೇ ಇಲ್ಲ. ತೋಟ ಸುತ್ತು, ಗುಡ್ಡ ಹತ್ತು, ತೋಡಿನಲ್ಲಿ ಓಡು, ಬೇಕಾದ್ದು ಮಾಡು... ಅಜ್ಜಅಜ್ಜಿ ಗದರುವ ಕ್ರಮವೇ ಇಲ್ಲ. ರಾತ್ರಿಯಾದರೂ ‘ತಡವಾಯ್ತು ಮಲಕ್ಕೊಳ್ರೋ’ ಎಂದು ಎಚ್ಚರಿಸಿಯಾರು; ಬೆಳಗ್ಗಂತೂ ಎಬ್ಬಿಸುವ ಪ್ರಶ್ನೆಯೇ ಇಲ್ಲ. ‘ಪಾಪ ಮಕ್ಳು, ರಜೆ ಅಲ್ವಾ, ಸ್ವಲ್ಪ ಹೊತ್ತು ಮಲಕ್ಕೊಳ್ಳಿ...’ ಹಾಗೆ ಹೇಳದಿದ್ದರೆ ಆಕೆ ಅಜ್ಜಿಯೇ ಅಲ್ಲ.

ಅಜ್ಜಿಗಂತೂ ದಿನವಿಡೀ ಬಿಡುವೇ ಇಲ್ಲ. ಆಕೆಗೆ ತರಹೇವಾರಿ ತಿಂಡಿತಿನಿಸು ಮಾಡಲು ಗೊತ್ತಿರುವುದೇ ಇದಕ್ಕೆ ಕಾರಣ. ಅಜ್ಜಿಗೆ ಗೊತ್ತಿಲ್ಲದ ತಿಂಡಿ ಇಲ್ಲ, ಅಜ್ಜನಿಗೆ ಗೊತ್ತಿಲ್ಲದ ಕಥೆ ಇಲ್ಲ. ಅಜ್ಜನ ಕಥೆ ಕೇಳುವುದಕ್ಕೆ ಹಗಲು-ರಾತ್ರಿ ಎಂಬ ಭೇದಗಳೂ ಇಲ್ಲ. ರಾತ್ರಿ ಹೇಗೂ ಬ್ಯಾಕ್ ಟು ಬ್ಯಾಕ್ ಕಥೆ ಇದೆ, ಹಗಲು ಹೆಚ್ಚುವರಿ ಕಥೆ ಹೇಳಿಸಿಕೊಳ್ಳುವುದು ರಜೆಗೆ ಬೋನಸ್. ಈ ಅಜ್ಜ ಎಂಬುದೊಂದು ಕಥೆಗಳ ಮಹಾಕಣಜ. ತೆಗೆದಷ್ಟೂ ಮುಗಿಯದ ಅಕ್ಷಯಪಾತ್ರೆ ಅದು. ಕಥೆ ತೆಗೆಯುತ್ತಾ ಹೋದರೆ ಅಜ್ಜನ ಜೋಳಿಗೆ ಬರಿದಾಗುವುದಿಲ್ಲ, ಕಥೆ ಹೇಳಿಹೇಳಿ ಅಜ್ಜನಿಗೆ ಬೇಜಾರೂ ಬರುವುದಿಲ್ಲ. ನಿನ್ನೆ ಹೇಳಿದ ಕಥೆಯನ್ನೇ ಇಂದು ಅಜ್ಜ ಮತ್ತೊಮ್ಮೆ ಹೇಳಿದರೆ ಮೊಮ್ಮಕ್ಕಳಿಗೂ ಆಕ್ಷೇಪ ಇಲ್ಲ. ಏಕೆಂದರೆ ಅಜ್ಜನ ಕಥೆಯೆಂದರೆ ಪ್ರತಿದಿನ ಹೊಸ ಲೋಕವನ್ನು ಕಟ್ಟಿನಿಲ್ಲಿಸುವ ವರ್ಣರಂಜಿತ ಬಯಲಾಟ. 

‘ನೋಡಿ ನಿರ್ಮಲ ಜಲಸಮೀಪದಿ ಮಾಡಿಕೊಂಡರು ಪರ್ಣಶಾಲೆಯ...’ ಅಂತ ಅಜ್ಜ ಪದ್ಯ ಸಮೇತ ಕಥೆ ಆರಂಭಿಸಿದರೆ ಅಲ್ಲಿ ರಾಮ-ಸೀತೆ-ಲಕ್ಷ್ಮಣರೆಲ್ಲ ಥಟ್ಟನೆ ಪ್ರತ್ಯಕ್ಷ. ಕಥೆ ಮುಂದಕ್ಕೆ ಹೋದಂತೆ ವಾನರಸೇನೆಯೇನೂ ಪ್ರತ್ಯೇಕ ಬರುವ ಅಗತ್ಯ ಇಲ್ಲ. ಅಜ್ಜನ ಕೋಣೆಯೇ ಕಿಷ್ಕಿಂಧೆಯಾಗಿಯೂ, ಸುತ್ತಮುತ್ತಲೆಲ್ಲ ಹತ್ತಿಹಾರುವವರು ಈ ಸೇನೆಯ ಪಟುಭಟರಾಗಿಯೂ ಬದಲಾಗುವುದುಂಟು. ಆದರೆ ಕಥೆ ಮಗ್ಗುಲು ಬದಲಾಯಿಸಿ, ಚಂದ್ರಮತಿಯ ಪ್ರಲಾಪಕ್ಕೋ, ದಮಯಂತಿಯ ಶೋಕಕ್ಕೋ ಹೊರಳಿಕೊಂಡರೆ ವಾನರವೀರರೆಲ್ಲ ಮತ್ತೆ ಎಳೆಯ ಮಕ್ಕಳಾಗಿ ಬದಲಾಗಿ ಅಜ್ಜನ ಜೊತೆ ಕಣ್ಣೀರು ಮಿಡಿಯುವುದೂ ಉಂಟು.

ಏತನ್ಮಧ್ಯೆ ಅಜ್ಜನೂ ಮೊಮ್ಮಗುವಾಗಿ ಅವತರಿಸುವ ಕ್ರಮವೂ ಉಂಟು. ಕಥೆ ಹೇಳಬೇಕೆಂದರೆ ವೀಳ್ಯಕ್ಕೆ ಬೇಕಾದ ಅಡಿಕೆಯನ್ನು ಗುದ್ದಿ ಸಿದ್ಧಪಡಿಸುವ, ಅಜ್ಜಿಗೆ ಸಿಟ್ಟು ಬರದಂತೆ ಕಾಫಿಗೆ ಡಬಲ್ ಸಕ್ಕರೆ ಹಾಕಿಸಿಕೊಂಡು ಬರುವ, ಸಮಯಕ್ಕೆ ಸರಿಯಾಗಿ ರೇಡಿಯೋ ನ್ಯೂಸು ಕೇಳಿಸುವ ಸಣ್ಣಪುಟ್ಟ ಲೋಕೋಪಕಾರಿ ಕೆಲಸ ಮಾಡಬೇಕಾಗುವ ಒತ್ತಡ ಅಜ್ಜನಿಂದ ಬಂದರೆ ಅಚ್ಚರಿಯಿಲ್ಲ. ಹಾಗೆಂದು ಕಥೆ ಹೇಳು ಅಂದಾಕ್ಷಣ ಕಥೆ ಆರಂಭಿಸುವ ಪಾಪದ ಅಜ್ಜ ಅವರಲ್ಲ. ಸಾಕಷ್ಟು ಕಾಡಿಸದೆ ಪೀಡಿಸದೆ ಅವರಿಂದ ಕಥೆ ಹೊರಡದು. ‘ನಿಂಗೆ ಕೇಳಿದ ಕಥೆ ಬೇಕೋ ಮಗಾ, ಕೇಳದ ಕಥೆ ಬೇಕಾ?’ ಅಜ್ಜನ ಪ್ರಶ್ನೆ. ‘ನಂಗೆ ಕೇಳದ ಕಥೆ ಬೇಕು ಅಜ್ಜ’ ಮೊಮ್ಮಕ್ಕಳ ಕೌತುಕ. ‘ಕೇಳದ ಕಥೆಯಲ್ವ, ಅದು ಕೇಳಿಸ್ತಾ ಇಲ್ಲ, ನಾನು ಹೇಳ್ತಾ ಇದ್ದೇನೆ’ ಅಜ್ಜ ಪೂರ್ತಿ ಸೈಲೆಂಟು. ‘ಓಹೋ ಹಾಗಾ, ಹಾಗಾದ್ರೆ ಕೇಳಿದ ಕಥೆ ಹೇಳು’ ಮೊಮ್ಮಕಳ ಜಾಣ ಪ್ರಶ್ನೆ. ‘ಕೇಳಿದ ಕಥೆಯಲ್ವ, ಮತ್ತೆ ಪುನಃ ಯಾಕೆ ಹೇಳ್ಬೇಕು’ ಅಜ್ಜ ಇನ್ನಷ್ಟು ಇಂಟೆಲಿಜೆAಟು. ಅಂತೂ ಅಜ್ಜನ ಕಥಾವಾಹಿನಿ ಆರಂಭವಾಗಬೇಕೆAದರೆ ಹತ್ತುಹಲವು ಸರ್ಕಸ್ಸು ಬೇಕು. ಒಮ್ಮೆ ಆರಂಭವಾದರೆ ಮಾತ್ರ ಅದು ಎಂದೂ ಮುಗಿಯದ ನಿರಂತರ ನೇತ್ರಾವತಿ.

ಬದಲಾಯ್ತು ಕಾಲ:

ಮತ್ತೆ ಬಂದೀತಾ ಅಂತಹದೊಂದು ಕಾಲ? ಆ ಪ್ರಶ್ನೆಯ ಜತೆಗೆ ಒಂದು ವಿಸ್ಮಯವೂ, ಅದರ ಬೆನ್ನಿಗೊಂದು ವಿಷಾದವೂ ಹಿಂಬಾಲಿಸೀತು. ಮನೆಯಲ್ಲೇ ಅಜ್ಜ-ಅಜ್ಜಿಯರಿರುವುದಿತ್ತು, ಅವರು ಕಾಲವಾಗಿದ್ದರೆ ಅಮ್ಮನ ತವರಿನಲ್ಲಾದರೂ ಅವರ ಒಟನಾಡ ಇರುತ್ತಿತ್ತು. ಅವರ ಸಾಮೀಪ್ಯ ನೀಡುವ ಬಿಸುಪು, ಭದ್ರತೆಯ ಬುತ್ತಿ, ಭಾವಪೋಷಣೆ ಅನ್ಯತ್ರ ಅಲಭ್ಯ.

ಬದುಕು ಬದಲಾಗಿ ಹೋಗಿದೆ. ಅವಿಭಕ್ತ ಕುಟುಂಬಗಳು ಸಣ್ಣಸಣ್ಣ ತುಣುಕುಗಳಾಗಿ ವಿಘಟಿಸಿವೆ. ಗಂಡ-ಹೆಂಡತಿ ಇಬ್ಬರಿಗೂ ಉದ್ಯೋಗ ಇದೆ. ಮನೆಯಲ್ಲಿ ಅಕಸ್ಮಾತ್ ಬೇರೆ ಸದಸ್ಯರಿದ್ದರೆ ಅವರಿಗೂ ಓದು, ಆಫೀಸು ಇದೆ. ಯಾರಿಗೂ ಬಿಡುವಿಲ್ಲ. ಅಜ್ಜ-ಅಜ್ಜಿ ಇದ್ದರೂ ಅವರು ಊರಲ್ಲಿದ್ದಾರೆ. ಅವರು ತಮ್ಮ ಜಮೀನನ್ನು, ಅದರೊಂದಿಗಿನ ಹಳೆಯ ನೆನಪುಗಳನ್ನು ಬಿಟ್ಟು ಬರಲಾರರು. ಬಂದರೂ ಪಟ್ಟಣದ ಗದ್ದಲದ ಮಧ್ಯೆ ಹೆಚ್ಚು ದಿನ ಉಳಿಯಲಾರರು. ಉಳಿದರೂ ನೆಮ್ಮದಿಯಿಂದ ಇರಲಾರರು. ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಎರಡು ದಿನ ಹೆಚ್ಚು ಉಳಿದಾರು ಅಷ್ಟೇ. ಹೆಚ್ಚುತ್ತಿರುವ ವೃದ್ಧಾಶ್ರಮಗಳ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು.

ಅನೇಕ ಸಲ ಮನೆಯಲ್ಲಿ ವಯಸ್ಸಾದ ಹಿರಿಯರಿದ್ದರೆ ಉದ್ಯೋಗಸ್ಥ ದಂಪತಿಗೆ ಕಿರಿಕಿರಿ. ‘ಹಿರಿಯರಿದ್ದರೆ ಮಕ್ಕಳನ್ನು ನೋಡಿಕೊಳ್ಳುವುದಕ್ಕಾದರೂ ಆಗುತ್ತದೆ’ ಎಂಬೊಂದು ಕಾಲ ಇತ್ತು. ಈಗ ಅದೂ ಹೋಗಿದೆ. ಎಲ್ಲರ ಕೈಯಲ್ಲೂ ದುಡ್ಡಿದೆ. ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತದೆ. ಸಂಬಳ ಕೊಟ್ಟರೆ ಆಯಾ ಬರುತ್ತಾಳೆ. ಮಗುವನ್ನು ಪ್ರೊಫೆಶನಲ್ ಆಗಿ ನೋಡಿಕೊಳ್ಳುತ್ತಾಳೆ. ಆಕೆ ಮಗುವಿನ ಅಜ್ಜಿ ಆಗಬಲ್ಲಳಾ?

ದುಡಿಯುವ ದಂಪತಿ ಮಧ್ಯೆ ನಾವು ಹೋಗಿ ತೊಂದರೆ ಯಾಕೆ, ಕೈಕಾಲಿಗೆ ಬಲ ಇರುವಷ್ಟು ದಿನ ನಮ್ಮಷ್ಟಕ್ಕೇ ಇರೋಣ- ಎಂಬುದು ಅಜ್ಜ-ಅಜ್ಜಿಯ ವರಸೆ. ಕೈಕಾಲು ಬಿದ್ದಮೇಲೆ ಮಕ್ಕಳ ಮನೆಗೆ ಹೋಗಿ ಮಾಡಬೇಕಿರುವುದಾದರೂ ಏನು? ಆರೋಗ್ಯವಾಗಿದ್ದಾಗಲೇ ಎಲ್ಲರೂ ಜತೆಯಾಗಿದ್ದರೆ ಮೊಮ್ಮಕ್ಕಳಿಗಾದರೂ ಅನುಕೂಲ. ಈಗಿನ ಮಕ್ಕಳಿಗೋ ಬಾಲ್ಯವೇ ಇಲ್ಲ, ಎರಡು ವರ್ಷವಾದರೆ ಅವರ ದಿನಚರಿಯೇ ಬದಲು: ಪ್ಲೇಹೋಮು, ನರ್ಸರಿ, ಶಾಲೆ, ಇತ್ಯಾದಿ. ಆ ವೇಳೆಗೆ ಅಜ್ಜ-ಅಜ್ಜಿ ದೊರೆತರೂ ಅವರು ಬಹುಪಾಲು ಅಪರಿಚಿತರಾಗಿಯೇ ಉಳಿಯುವುದು ಸಿದ್ಧ. ಮೊದಲೇ ಆಧುನಿಕತೆಯ ರಂಗಿನಾಟ: ತಾತ-ಮೊಮ್ಮಕ್ಕಳ ನಡುವೆ ತಲೆಮಾರಿನ ಅಂತರ ಅಷ್ಟೇ ಅಲ್ಲ, ಶತಮಾನಗಳ ಅಂತರ. ಮಕ್ಕಳ ಆಹಾರ-ವಿಹಾರ, ಉಡುಗೆ-ತೊಡುಗೆ, ವೇಷ-ಭಾಷೆ ಎಲ್ಲವೂ ಭಿನ್ನ. ಮಗುವಿಗೆ ಮನೆಭಾಷೆ ಬರದು, ಅಜ್ಜ-ಅಜ್ಜಿಗೆ ಇಂಗ್ಲೀಷು ತಿಳಿಯದು. ಮನೆಯೊಳಗಿನ ದೀಪಗಳೆಲ್ಲ ದ್ವೀಪಗಳಾಗಿ ಬೆಳೆಯುವ ಸಂಕಟ ಅವರಿಗೆ. ಆದರೆ ಅದನ್ನು ಹೇಳಿಕೊಳ್ಳಲಾರರು. 

ಇಷ್ಟರ ಮಧ್ಯೆ, ಯಾರ ಮನೆಯಲ್ಲಾದರೂ ಅಜ್ಜ-ಅಜ್ಜಿ ಇದ್ದರೆ ಅದೊಂದು ಅದ್ಭುತ ವಿದ್ಯಮಾನ. ಅವರೆಲ್ಲರೂ ಪರಸ್ಪರ ಹೊಂದಾಣಿಕೆಯಿಂದ ಇದ್ದರೆ ಮಕ್ಕಳಿಗೆ ಅದಕ್ಕಿಂತ ದೊಡ್ಡ ವರಪ್ರಸಾದ ಇಲ್ಲ. ಭಾರತೀಯ ಸಮಾಜದಲ್ಲಿ ಕುಟುಂಬ ಒಂದು ಘಟಕ ಮಾತ್ರ ಅಲ್ಲ, ಸಂಸ್ಥೆ ಕೂಡ. ಅಜ್ಜಿ-ತಾತ ಈ ಮಹಾವೃಕ್ಷದ ತಾಯಿಬೇರು. ಯಾವ ಮನೆಯಲ್ಲಿ ಅಜ್ಜ-ಅಜ್ಜಿ ಇದ್ದಾರೋ ಆ ಮನೆಯ ಮಕ್ಕಳಲ್ಲಿರುವ ಭದ್ರತೆಯ ಭಾವ, ಕೌಟುಂಬಿಕ ಮೌಲ್ಯಗಳು, ಸಂಸ್ಕಾರ, ಪರಸ್ಪರ ನಂಬಿಕೆ, ಸಹಕಾರ ಪ್ರವೃತ್ತಿ, ಸಮಷ್ಟಿ ಪ್ರಜ್ಞೆ, ಹಿರಿಯರ ಕುರಿತಾದ ಗೌರವ- ಉಳಿದ ಮಕ್ಕಳಿಗಿಂತ ಒಂದು ಹಿಡಿ ಹೆಚ್ಚೇ. 

‘ಪ್ರತೀ ತಲೆಮಾರೂ ತನ್ನ ತಂದೆಯವರ ವಿರುದ್ಧ ದಂಗೆಯೇಳುತ್ತದೆ, ಆದರೆ ತಾತಂದಿರೊಂದಿಗೆ ಸ್ನೇಹವನ್ನು ಬಯಸುತ್ತದೆ’ ಎಂಬ ಲೂಯಿ ಮನ್‌ಫೋರ್ಡ್ ಮಾತಿದೆ. ನಮ್ಮ ಹೊಸ ತಲೆಮಾರಿಗೆ ಅವರ ತಾತಂದಿರು ಮಾದರಿಯಾಗಬಲ್ಲರು. ಆದರೆ ಅದಕ್ಕೆ ಅವಕಾಶವನ್ನು ನಾವು ಒದಗಿಸಿಕೊಡಬೇಕಷ್ಟೇ. ‘ಒಬ್ಬ ಮನುಷ್ಯನನ್ನು ನೀವು ನಾಗರಿಕನನ್ನಾಗಿ ಬೆಳೆಸಬೇಕೆಂದರೆ ಆತನ ಅಜ್ಜನಿಂದ ಆ ಕೆಲಸವನ್ನು ಆರಂಭಿಸಿ’ ಎಂದು ವಿಕ್ಟರ್ ಹ್ಯೂಗೋ ಕೂಡ ಇದೇ ಅರ್ಥದಲ್ಲಿ ಹೇಳಿದ್ದು.

‘ಅಜ್ಜ-ಅಜ್ಜಿಯರ ದಿನ’ ಎಂಬ ಈ ಆಚರಣೆ ಮೊದಲು ಆರಂಭವಾಗಿದ್ದು ಅಮೇರಿಕದಲ್ಲಿ- ಸುಮಾರು ಅರ್ಧ ಶತಮಾನದ ಹಿಂದೆ. ಅಲ್ಲಿ ಆಗಲೇ ಅದರ ಅನಿವಾರ್ಯತೆ ಇತ್ತು. ಈಗ ನಾವೂ ಅಂತಹದೊಂದು ದಿನವನ್ನು ನೆನಪಿಸಿಕೊಳ್ಳುವ ಸಂದರ್ಭ ಬಂದಿದೆ ಎಂದರೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ನಾವೂ ಪಶ್ಚಿಮದ ಅಂಚಿಗೆ ಸರಿದಿದ್ದೇವೆ ಎಂದು ಅರ್ಥ. ಕಾಲದ ಓಟದಲ್ಲಿ ಇದೆಲ್ಲ ಅನಿವಾರ್ಯ, ತಡೆಯುವುದಕ್ಕಾಗದು. ಆದರೆ ಇದನ್ನು ನಾವು ಎಚ್ಚರದಿಂದಲೂ ಜವಾಬ್ದಾರಿಯಿಂದಲೂ ಗಮನಿಸಬೇಕು. ಏಕೆಂದರೆ, ಮನೆಯ ಹಿರಿಜೀವಗಳು ಕೇವಲ ಭೂತಕಾಲದ ಧ್ವನಿಗಳಲ್ಲ, ಭವಿಷ್ಯದ ಬಾಗಿಲುಗಳು ಕೂಡ.

- ಸಿಬಂತಿ ಪದ್ಮನಾಭ ಕೆ. ವಿ. 

ಮಂಗಳವಾರ, ಸೆಪ್ಟೆಂಬರ್ 13, 2022

ಯಕ್ಷಗಾನಕ್ಕೆ ಕಾಲಮಿತಿ: ಪರಿವರ್ತನೆ ಎಂಬ ಕಾಲಧರ್ಮ

11 ಸೆಪ್ಟೆಂಬರ್ 2022ರ 'ಉದಯವಾಣಿ' ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ.

ಯಕ್ಷಗಾನ ನಿರಂತರ ಪರಿಷ್ಕರಣೆಗೆ ಒಳಗಾಗುತ್ತಾ ಬಂದಿರುವ ಕಲೆ. ಅದರ ವಸ್ತು, ವಿನ್ಯಾಸ, ರಂಗಭಾಷೆ, ವೇಷಭೂಷಣ, ಪ್ರಸ್ತುತಿ- ಎಲ್ಲ ಆಯಾಮಗಳಲ್ಲೂ ಸಾಕಷ್ಟು ಬದಲಾವಣೆಗಳು ಆಗಿವೆ, ಆಗುತ್ತಲೇ ಇವೆ. ಇವುಗಳಲ್ಲಿ ಕೆಲವನ್ನು ಪ್ರೇಕ್ಷಕರು, ಕಲಾವಿದರು, ವಿದ್ವಾಂಸರು ಒಪ್ಪಿಕೊಂಡರು, ಇನ್ನು ಕೆಲವನ್ನು ಟೀಕಿಸಿದರು. ಕಾಳುಗಳು ಉಳಿದವು; ಜಳ್ಳುಗಳು ತೂರಿಹೋದವು. ಇದು ಕಾಲಧರ್ಮ.

ಯಾವುದೇ ಕಲೆಯನ್ನು ಒಂದು ಸಜೀವ ಅಸ್ತಿತ್ವವೆಂದು ಪರಿಗಣಿಸಬಹುದಾದರೆ, ಅದರಲ್ಲಿ ಬದಲಾವಣೆ ಸಹಜ. ಕಲೆ ಬದುಕಿನ ಭಾಗ. ಜೀವನ ಬೇರೆ ಅಲ್ಲ, ಕಲೆ ಬೇರೆ ಅಲ್ಲ. ಬದುಕಿನ ಸೃಜನಶೀಲ ಭಾಗವೇ ಕಲೆ. ಬದುಕು ಶತಮಾನಗಳ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇಲ್ಲ. ಅಂದಮೇಲೆ ಕಲೆಯೂ ಯಥಾಸ್ಥಿತಿಯಲ್ಲಿರುವುದು ಸಾಧ್ಯವಿಲ್ಲ. ಅದೂ ಕಾಲಾನುಕ್ರಮದಲ್ಲಿ ಬಯಸುವ ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಈ ಪರಿಷ್ಕಾರಗಳು ಕಲೆಯ ಉನ್ನತಿಗೆ ಪೂರಕವಾಗಿರಬೇಕು ಎಂಬುದಷ್ಟೇ ಕಲೋಪಾಸಕರ ಆಗ್ರಹ.

ಯಕ್ಷಗಾನ ಕ್ಷೇತ್ರದಲ್ಲಿ ಯಾವುದೇ ಹೊಸ ವಿಚಾರ ಪ್ರಸ್ತಾಪವಾದಾಗಲೂ ಚರ್ಚೆ ಸಾಮಾನ್ಯ. ಅದಕ್ಕೆ ಕಾರಣ ಯಕ್ಷಗಾನಕ್ಕಿರುವ ದೊಡ್ಡಸಂಖ್ಯೆಯ ಪ್ರೇಕ್ಷಕರು ಮತ್ತು ಯಕ್ಷಗಾನದ ಕುರಿತು ಅವರಲ್ಲಿರುವ ವಿಶೇಷ ಅಭಿಮಾನ. ಮೂಲತಃ ಆರಾಧನಾ ಕಲೆಯಾಗಿದ್ದ ಯಕ್ಷಗಾನ ಕಾಲಕ್ರಮೇಣ ಮುಕ್ತತೆಗೆ ತೆರೆದುಕೊಂಡರೂ ಬಹುಪಾಲು ಪ್ರೇಕ್ಷಕರ ಮನಸ್ಸಿನಲ್ಲಿ ಅದರ ಕುರಿತೊಂದು ಪೂಜ್ಯ ಭಾವವೇ ಇದೆ. ಅವರು ಅದನ್ನೊಂದು ಕೇವಲ ಪ್ರದರ್ಶನ ಕಲೆಯಾಗಿ ಒಪ್ಪಿಕೊಳ್ಳಲಾರರು. ಯಕ್ಷಗಾನಕ್ಕಿರುವ ಜಾನಪದ ಸ್ವರೂಪವೂ ಇದಕ್ಕಿರುವ ಪ್ರಮುಖ ಕಾರಣ.

ಕಟೀಲು ಮೇಳಗಳು ಮುಂದಿನ ತಿರುಗಾಟದಿಂದ ಕಾಲಮಿತಿ ಪ್ರದರ್ಶನಗಳನ್ನು ನೀಡಲಿವೆ ಎಂದು ಇತ್ತೀಚೆಗೆ ಘೋಷಿಸಿದಲ್ಲಿಂದ ಯಕ್ಷಗಾನ ವಲಯದಲ್ಲಿ ಈ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಈ ಕಾಲಮಿತಿಯ ವಿಚಾರ ಯಕ್ಷಗಾನಕ್ಕೆ ಹೊಸದೇನಲ್ಲ. ಕಾಲಮಿತಿಯ ಪರಿಕಲ್ಪನೆಯನ್ನು 1955ರಷ್ಟು ಹಿಂದೆಯೇ 'ಕಾಂಚನ ಮೇಳ' ಜಾರಿಗೆ ತಂದಿತೆಂದು ನೆನಪಿಸಿಕೊಳ್ಳುತ್ತಾರೆ ಯಕ್ಷಗಾನ ಕಲಾವಿದ-ಸಂಘಟಕ ಉಜಿರೆ ಅಶೋಕ ಭಟ್ಟರು. 1985ರಲ್ಲಿ ಕೆರೆಮನೆ ಮೇಳವೂ ಕಾಲಮಿತಿಯನ್ನು ಅಳವಡಿಸಿಕೊಂಡಿತು. ಹೊಸ ಸಹಸ್ರಮಾನದಲ್ಲಿ ಹೊಸನಗರ ಮೇಳ ಕಾಲಮಿತಿಯ ಪ್ರದರ್ಶನಗಳನ್ನು ಆರಂಭಿಸಿತು. ಹೊಸಕಾಲದ ವೃತ್ತಿಪರ ಮೇಳಗಳ ಮಟ್ಟಿಗೆ ಇದೊಂದು ಕ್ರಾಂತಿಕಾರಕ ಹೆಜ್ಜೆಯೇ ಆಗಿತ್ತು.  ಇದರಿಂದ ಪ್ರೇರಿತವಾದ ಧರ್ಮಸ್ಥಳ ಮೇಳವು 2015ರಲ್ಲಿ ಕಾಲಮಿತಿ ಪ್ರದರ್ಶನಗಳನ್ನು ನೀಡಲಾರಂಭಿಸಿತು. ಮುಂದೆ ಹನುಮಗಿರಿ, ಪಾವಂಜೆ ಮೊದಲಾದ ಮೇಳಗಳೂ ಕಾಲಮಿತಿಯ ಪ್ರದರ್ಶನಗಳಿಗೆ ಒಗ್ಗಿಕೊಂಡವು. ಆದರೆ ಕಟೀಲು ಮೇಳಗಳು ಕಾಲಮಿತಿಯ ಪ್ರಸ್ತಾಪ ಮಾಡಿದಾಗ ಅದರ ಬಗ್ಗೆ ಕಲಾವಿದರು ಹಾಗೂ ಪ್ರೇಕ್ಷಕರ ವಲಯದಿಂದ ಮತ್ತೆ ಪರ-ವಿರೋಧದ ಅಭಿಪ್ರಾಯಗಳು ಬರಲಾರಂಭಿಸಿವೆ.

ಯಾಕೆ ವಿರೋಧ?

ಕಟೀಲು ಮೇಳ ಯಕ್ಷಗಾನದ ಪೂರ್ವರಂಗವನ್ನೂ ಉಳಿಸಿಕೊಂಡು ಇಡೀ ರಾತ್ರಿ ಪ್ರದರ್ಶನ ನೀಡುತ್ತಿರುವ ತೆಂಕುತಿಟ್ಟಿನ ಏಕೈಕ ಮೇಳ (ಒಟ್ಟು ಆರು ಮೇಳಗಳಿವೆ). ಮುಸ್ಸಂಜೆಯ ಹೊತ್ತಲ್ಲಿ ಆರಂಭವಾಗುವ ಯಕ್ಷಗಾನದ ಪ್ರಕ್ರಿಯೆ, ರಾತ್ರಿ ಎಂಟರ ಸುಮಾರಿಗೆ ಸಭಾಲಕ್ಷಣದೊಂದಿಗೆ ಮುಂದುವರಿದು, ಹನ್ನೊಂದರ ಆಸುಪಾಸಲ್ಲಿ ಪ್ರಸಂಗವನ್ನು ಆರಂಭಿಸಿ, ಮುಂಜಾನೆ ಐದೂವರೆ-ಆರರ ಸುಮಾರಿಗೆ ಮಂಗಳವಾಗುವುದು ವಾಡಿಕೆ. ಇಡೀ ರಾತ್ರಿ ನಡೆಯುವ ಈ ಒಟ್ಟಾರೆ ಪ್ರಕ್ರಿಯೆ ಪ್ರೇಕ್ಷಕರ ಮನಸ್ಸಿನಲ್ಲೊಂದು ರಮ್ಯಾದ್ಭುತ ವರ್ಣಮಯ ಲೋಕವನ್ನು ಸೃಷ್ಟಿಸುವ ಪರಿ ಅನನ್ಯ.  

ಕಟೀಲು ಮೇಳಗಳೂ ಈ ಕಾಲಮಿತಿಯ ಪ್ರದರ್ಶನಗಳಿಗೆ ಒಳಪಟ್ಟರೆ ತೆಂಕುತಿಟ್ಟಿನಲ್ಲಿ ಉಳಿದಿರುವ ಪೂರ್ಣಾವಧಿಯ ಏಕೈಕ ಮಾದರಿಯೂ ಇಲ್ಲವಾಗುತ್ತದಲ್ಲ ಎಂಬುದು ಪ್ರಸ್ತುತ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರ ನೋವು. ಇದು ನಮ್ಮ ಸಾಂಸ್ಕೃತಿಕ ಪರಂಪರೆಗೆ ಬೀಳುತ್ತಿರುವ ಏಟು ಎಂಬ ವ್ಯಾಖ್ಯಾನವೂ ಕೇಳಿಬಂದಿದೆ. ಅವಧಿಯನ್ನು ಮೊಟಕುಗೊಳಿಸುವುದರಿಂದ ಅನೇಕ ಕಲಾವಿದರಿಗೆ ಅವಕಾಶ ತಪ್ಪಿಹೋಗುತ್ತದೆ, ಪೂರ್ವರಂಗ ಇಲ್ಲವಾಗುವುದರಿಂದ ಅಭ್ಯಾಸಿಗಳಿಗೆ ತರಬೇತಿ ಸಿಗುವುದಿಲ್ಲ, ಮಧ್ಯರಾತ್ರಿ ಆಟ ಮುಕ್ತಾಯವಾಗುವುದರಿಂದ ಪ್ರೇಕ್ಷಕರು ಮನೆಗಳಿಗೆ ಹಿಂತಿರುವುದು ಕಷ್ಟ, ಪ್ರಸಂಗಗಳನ್ನು ಸಂಕ್ಷೇಪಗೊಳಿಸುವುದರಿಂದ ಗುಣಮಟ್ಟ ಕಡಿಮೆಯಾಗುತ್ತದೆ ಇತ್ಯಾದಿ ಕಾರಣಗಳೂ ಪ್ರಸ್ತಾಪವಾಗಿವೆ.

ಬದಲಾವಣೆ ಅನಿವಾರ್ಯ:

ಆದರೆ ಕಾಲವೆಂಬುದು ಎಲ್ಲದಕ್ಕಿಂತ ಮೇಲಿನದ್ದು. ಅದು ಇಚ್ಛೆಯುಳ್ಳವರನ್ನು ಕರೆದುಕೊಂಡು ಹೋಗುತ್ತದೆ, ಇಚ್ಛೆಯಿಲ್ಲದವರನ್ನು ಎಳೆದುಕೊಂಡು ಹೋಗುತ್ತದೆ. ಮುಂದಕ್ಕೆ ಹೋಗುವುದಂತೂ ಹೋಗಲೇಬೇಕು. "ಕಾಲದ ಅನಿವಾರ್ಯಗಳನ್ನು ಅರ್ಥಮಾಡಿಕೊಳ್ಳದ ಕಲೆ ಕಾಲಗರ್ಭವನ್ನು ಸೇರಬೇಕಾಗುತ್ತದೆ" ಎಂಬ ಕಲಾವಿದ-ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿಯವರ ಮಾತು ಚಿಂತನಾರ್ಹ.

ಇದೇ ಅರ್ಥವನ್ನು ಹಿರಿಯ ವಿದ್ವಾಂಸ, ಯಕ್ಷಗಾನ ಕವಿ ಪ್ರೊ. ಅಮೃತ ಸೋಮೇಶ್ವರರೂ ಧ್ವನಿಸಿದ್ದುಂಟು: “ಚಲನಶೀಲತೆಯಿರುವ ಯಾವುದೇ ಜೀವಂತ ಕಲೆಯು ವರ್ತಮಾನ, ಭವಿಷ್ಯತ್ಕಾಲಗಳ ಪರಿಕಲ್ಪನೆಯಿಲ್ಲದೆ ಕೇವಲ ಭೂತಕಾಲವಿಹಾರಿಯಾಗುವಂತಿಲ್ಲ. ಒಂದು ವೇಳೆ ಅಂಥ ಹಳೇ ಹವ್ಯಾಸವನ್ನೇ ಮುಂದುವರಿಸಿದರೆ ಅಂಥ ಕಲೆ ಪ್ರತಿಗಾಮಿಯೂ ಪ್ರಗತಿ ವಿಮುಖವೂ ಎನಿಸುತ್ತದೆ. ವರ್ತಮಾನದ ಅರ್ಥಪೂರ್ಣ ಸಂಬಂಧವನ್ನು ಕಳೆದುಕೊಳ್ಳುತ್ತದೆ.”

ನಾವೀಗ ಅಂತಹದೊಂದು ಪರಿವರ್ತನೆಯ ಸಂಕ್ರಮಣಕಾಲದಲ್ಲಿದ್ದೇವೆ. ಸಮಾಜ ಆಧುನಿಕತೆಗೆ ತೆರೆದುಕೊಂಡಿದೆ. ಆಧುನಿಕ ಸಂವಹನ ಮಾಧ್ಯಮಗಳು ಜನರನ್ನು ಇನ್ನಿಲ್ಲದಂತೆ ಆವರಿಸಿಕೊಂಡಿವೆ. ಇಂತಹ ಸನ್ನಿವೇಶದಲ್ಲೂ ಜನರು ಯಕ್ಷಗಾನದಂತಹ ಸಾಂಪ್ರದಾಯಿಕ ಕಲೆಗಳಲ್ಲಿ ಆಸಕ್ತಿ ಉಳಿಸಿಕೊಂಡಿದ್ದಾರೆ ಎಂಬುದೇ ವಿಶೇಷ. ಬಹುಶಃ ಅದು ಆ ಕಲೆಗಳ ಶಕ್ತಿ ಕೂಡಾ.

“ಈಗ ಎಲ್ಲರೂ ಒಂದಲ್ಲ ಒಂದು ಉದ್ಯೋಗ ಹಿಡಿದಿರುವವರೇ. ಯಾರೂ ಇಡೀ ರಾತ್ರಿ ನಿದ್ದೆಗೆಟ್ಟು ಆಟ ನೋಡುವ ಪರಿಸ್ಥಿತಿಯಲ್ಲಿ ಇಲ್ಲ. ಅವರು ನೋಡಬೇಕು ಎಂಬುದು ಅಪೇಕ್ಷಣೀಯವೂ ಅಲ್ಲ. ದಿನಬೆಳಗಾದರೆ ಎಲ್ಲರಿಗೂ ಅವರವರದ್ದೇ ಕೆಲಸಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಕಾಲಮಿತಿ ಪ್ರದರ್ಶನಗಳು ಖಂಡಿತ ಸ್ವಾಗತಾರ್ಹ” ಎನ್ನುತ್ತಾರೆ ಹಿರಿಯ ಕಲಾವಿದ, ಯಕ್ಷಗಾನ ಕವಿ ಡಿ. ಎಸ್. ಶ್ರೀಧರ.

“ಕಟೀಲು ಮೇಳದ್ದೇ ಜನಪ್ರಿಯ ಪ್ರಸಂಗ ‘ದೇವಿಮಹಾತ್ಮೆ’ಯನ್ನು ಮಧ್ಯರಾತ್ರಿ ಬಳಿಕ ನೋಡುವವರ ಸಂಖ್ಯೆ ಬೆರಳೆಣಿಕೆಯಷ್ಟು. ಆಟದ ವೀಳ್ಯ ಕೊಟ್ಟವರೇ ಬೆಳಗಿನವರೆಗೆ ಕೂರುವುದು ಕಡಿಮೆ. ರಕ್ತಬೀಜನ ಪಾತ್ರವನ್ನು ಸಾಮಾನ್ಯವಾಗಿ ಅನುಭವೀ ಹಿರಿಯ ಕಲಾವಿದರು ನಿರ್ವಹಿಸುತ್ತಾರೆ. ಆ ಪಾತ್ರದ ಪ್ರವೇಶವಾಗುವುದೇ ಬೆಳಗ್ಗೆ ನಾಲ್ಕು ಗಂಟೆಗೆ. ಆ ಹೊತ್ತಿಗೆ ರಂಗದ ಎದುರು ನಾಲ್ಕೈದು ಮಂದಿ ತೂಕಡಿಸುತ್ತಾ ಕುಳಿತಿದ್ದರೆ ಆ ಕಲಾವಿದರ ಶ್ರಮಕ್ಕೆ ಏನು ಬೆಲೆ?” ಎಂದು ಪ್ರಶ್ನಿಸುತ್ತಾರೆ ಯಕ್ಷಗಾನ ಸಂಘಟಕ ಡಾ. ಚಂದ್ರಶೇಖರ ದಾಮ್ಲೆ.

ಯಕ್ಷಗಾನದ ಅವಧಿ ಮೊಟಕುಗೊಳಿಸುವ ವಿದ್ಯಮಾನ ಇತ್ತೀಚಿನದ್ದೇನೂ ಅಲ್ಲವೆನ್ನುತ್ತಾರೆ ಕಲಾವಿದ-ಲೇಖಕ ಗಣರಾಜ ಕುಂಬ್ಳೆ. “ದೇವಿಮಹಾತ್ಮೆ, ಸಂಪೂರ್ಣ ರಾಮಾಯಣ ಇತ್ಯಾದಿ ಪ್ರಸಂಗಗಳನ್ನು ಮೂರು ದಿನ, ಐದು ದಿನ- ಹೀಗೆ ಪ್ರದರ್ಶಿಸುವುದು ಹಿಂದೆ ಚಾಲ್ತಿಯಲ್ಲಿತ್ತು. ಕಾಲಕ್ರಮೇಣ ಅವೆಲ್ಲ ಮರೆಯಾಗುತ್ತಾ ಒಂದು ರಾತ್ರಿಯ ಅವಧಿಗೆ ಬಂದು ನಿಂತಿತು. ಈಗಲೂ ಇಡೀ ರಾತ್ರಿ ಆಡುವುದಿದ್ದರೂ ಹೆಚ್ಚೆಂದರೆ ಆರು ಗಂಟೆ ಸಿಗಬಹುದು ಅಷ್ಟೆ. ಅದನ್ನು ನಾಲ್ಕೋ ಐದೋ ಗಂಟೆಗೆ ಸಂಕ್ಷೇಪಗೊಳಿಸುವುದು ಕಷ್ಟವೇನೂ ಅಲ್ಲ” ಎನ್ನುತ್ತಾರೆ ಅವರು.

ಇದರೊಂದಿಗೆ ಇನ್ನೊಂದು ಎಚ್ಚರಿಕೆಯ ಮಾತನ್ನೂ ಕುಂಬ್ಳೆಯವರು ಸೇರಿಸುತ್ತಾರೆ: "ಕಲೆಯಲ್ಲಿ ಆಗುವ ಭೌತಿಕ ಬದಲಾವಣೆಗಳು ಕಲೆಯ ಆಂತರಿಕ ಗುಣಕ್ಕೆ ತೊಂದರೆ ಉಂಟುಮಾಡಬಾರದು. ಇದು ಪ್ರಬುದ್ಧ ಪ್ರೇಕ್ಷಕರು ಬಯಸುವ ವಿಷಯ. ಪ್ರದರ್ಶನದ ವೇಗ ಪ್ರಸಂಗದ ಆಶಯಕ್ಕೆ ವಿರುದ್ಧವಾಗಿ ಹೋಗುವುದು, ಪ್ರಾಮುಖ್ಯತೆ ಸಿಗಬೇಕಾದ ಭಾಗವನ್ನು ಬಿಟ್ಟು ಇನ್ಯಾವುದೋ ಭಾಗಕ್ಕೆ ಮಹತ್ವ ನೀಡುವುದು- ಇಂತಹ ಅಪಸವ್ಯಗಳು ಆಗದಂತೆ ಕಲಾವಿದರು ಎಚ್ಚರಿಕೆ ವಹಿಸಬೇಕು.  ಹೀಗೆ ಮಾಡಿದರೆ ಕಾಲಮಿತಿಯ ಪ್ರದರ್ಶನಗಳೂ ಹಿಂದಿನ ರಸಾನುಭವವನ್ನೇ ಪ್ರೇಕ್ಷಕರಿಗೆ ನೀಡಬಲ್ಲವು."

ವಾಸ್ತವಕ್ಕೆ ಬನ್ನಿ:

“ಇಡೀ ರಾತ್ರಿ ಯಕ್ಷಗಾನ ಬೇಕು ಎಂಬ ಬೇಡಿಕೆಯನ್ನು ಒಪ್ಪೋಣ. ಆದರೆ ಅದಕ್ಕೆ ಪ್ರೇಕ್ಷಕರು ಎಲ್ಲಿದ್ದಾರೆ? ಯಕ್ಷಗಾನವನ್ನೇ ಸಂಪೂರ್ಣ ನಂಬಿರುವ ಕಲಾವಿದರು ಎಲ್ಲಿದ್ದಾರೆ? ನಾವು ವಾಸ್ತವ ಅರ್ಥಮಾಡಿಕೊಳ್ಳಬೇಕು” ಎನ್ನುತ್ತಾರೆ ಕಲಾವಿದ, ಸಂಘಟಕ ಉಜಿರೆ ಅಶೋಕ ಭಟ್. “ಯಕ್ಷಗಾನದಿಂದಲೇ ಬದುಕು ಸಾಗಬೇಕು ಎನ್ನುವ ಮಂದಿ ಈಗ ಇಲ್ಲ. ಮೇಳಗಳು ಕೊಡುವ ಹದಿನೈದಿಪ್ಪತ್ತು ಸಾವಿರ ಸಂಬಳ ತಿಂಗಳ ಖರ್ಚಿಗೆ ಸಾಕಾಗುವುದಿಲ್ಲ. ಎಲ್ಲರಿಗೂ ಉಪವೃತ್ತಿ ಅನಿವಾರ್ಯವಾಗಿದೆ. ಮೇಳಗಳಿಗೆ ಕೆಲಸದಾಳುಗಳು ಸಿಗುವುದಿಲ್ಲ. ಇನ್ನೂ ಏಳೆಂಟು ವರ್ಷ ಕಳೆದರೆ ಒಂದು ಮೇಳಕ್ಕೆ ಬದ್ಧವಾಗಿರುವ ಖಾಯಂ ಕಲಾವಿದರ ತಂಡ ಸಿಗುವುದು ಕಷ್ಟ. ಆಗ ಸ್ಥಳೀಯ ಮಟ್ಟದಲ್ಲಿ ಲಭ್ಯವಿರುವ ಕಲಾವಿದರನ್ನೇ ಬಳಸಿಕೊಂಡು ಯಕ್ಷಗಾನ ಪ್ರದರ್ಶನ ಮಾಡಬೇಕಾಗುತ್ತದೆ. ಹೀಗಾಗಿ ಕಾಲಮಿತಿ ಯಕ್ಷಗಾನದ ಚಿಂತನೆಯಲ್ಲಿ ಆಕ್ಷೇಪಾರ್ಹವೇನೂ ಇಲ್ಲ” ಎನ್ನುತ್ತಾರವರು.

ಎಡಿಟಿಂಗ್ ಸಾಧ್ಯ:

ಯಕ್ಷಗಾನದ ಮೂಲಸೊಗಡನ್ನು ಕಳೆಯದೆ, ಪ್ರಸಂಗವನ್ನು ವಿರೂಪಗೊಳಿಸದೆ ಎಡಿಟಿಂಗ್ ಮಾಡುವುದು ಸಾಧ್ಯ ಎಂಬುದು ಈ ಎಲ್ಲ ಅನುಭವಿಗಳ ಅಭಿಪ್ರಾಯ. “ಪರಿಷ್ಕರಣೆ ಎಂದರೆ ಪ್ರಸಂಗವನ್ನು ಮನಬಂದಂತೆ ಕತ್ತರಿಸುವುದಲ್ಲ. ಯಾವುದು ಎಷ್ಟು ಬೇಕು ಎಂಬ ವಿವೇಚನೆಯನ್ನು ಇಟ್ಟುಕೊಂಡು ಎಡಿಟ್ ಮಾಡುವುದು. ಪೂರ್ವರಂಗವನ್ನು ಉಳಿಸಿಕೊಂಡು, ಪ್ರದರ್ಶನದ ಕಾಲಗತಿಯನ್ನು ಕಡೆಗಣಿಸದೆ, ಸನ್ನಿವೇಶಗಳನ್ನೂ ಬಿಡದೆ ಒಟ್ಟಾರೆ ಪ್ರದರ್ಶನವನ್ನು ಸಂಕ್ಷೇಪಗೊಳಿಸುವುದಕ್ಕೆ ಅವಕಾಶವಿದೆ. ಒಂದೇ ವಿಷಯಕ್ಕೆ ಸಂಬಂಧಿಸಿದ ನಾಲ್ಕೈದು ಪದ್ಯಗಳನ್ನು ಕೈಬಿಟ್ಟು ಅಗತ್ಯವಿರುವ ಒಂದೋ ಎರಡೋ ಪದ್ಯಗಳನ್ನು ವಿವೇಚನೆಯಿಂದ ತೆಗೆದುಕೊಳ್ಳಬಹುದು. ಕೋವಿಡ್ ಸಮಯದಲ್ಲಿ ಕಟೀಲು ಮೇಳಗಳೂ ಅನಿವಾರ್ಯವಾಗಿ ಕಾಲಮಿತಿ ಪ್ರದರ್ಶನ ಆರಂಭಿಸಿದಾಗ ಪ್ರೇಕ್ಷಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾದದ್ದು ಉಲ್ಲೇಖಾರ್ಹ” ಎನ್ನುತ್ತಾರೆ ಭಾಗವತ ಪುತ್ತೂರು ರಮೇಶ ಭಟ್.

“ಸೂಕ್ತ ವಿವೇಚನಾ ಸಾಮರ್ಥ್ಯವುಳ್ಳ ಸಮರ್ಥ ಭಾಗವತನೊಬ್ಬ ಈ ಎಡಿಟಿಂಗನ್ನು ಮಾಡಬಲ್ಲ. ಪೂರ್ವರಂಗದ ಪ್ರಸ್ತುತತೆಯನ್ನೂ ನಾವೀಗ ವಿವೇಚಿಸಬೇಕು. ಅದರ ಹಿಂದಿರುವುದು ಮೂಲತಃ ತರಬೇತಿಯ ಉದ್ದೇಶ. ಈಗ ತಕ್ಕಮಟ್ಟಿಗೆ ತರಬೇತಿ ಪಡೆದವರೇ ಮೇಳಕ್ಕೆ ಸೇರುತ್ತಾರೆ. ಅಲ್ಲಿ ಎರಡುಗಂಟೆಯ ಪೂರ್ವರಂಗ ಪ್ರದರ್ಶಿಸುವ ಅಗತ್ಯವೇ ಇಲ್ಲ. ಈಗಾಗಲೇ ಕಾಲಮಿತಿ ಪ್ರದರ್ಶನಕ್ಕೆ ಒಗ್ಗಿಕೊಂಡ ಮೇಳಗಳಿಂದಾಗಿಯೂ ಯಕ್ಷಗಾನಕ್ಕೆ ಅಂತಹ ನಷ್ಟವೇನೂ ಆದಂತೆ ಕಾಣುವುದಿಲ್ಲ” ಎನ್ನುತ್ತಾರೆ ಕಲಾವಿದ-ಲೇಖಕ ರಾಧಾಕೃಷ್ಣ ಕಲ್ಚಾರ್.

ರಾತ್ರಿ ಹತ್ತರ ಬಳಿಕ 50 ಡೆಸಿಬಲ್‌ಗಳಿಗಿಂತ ಹೆಚ್ಚಿನ ಧ್ವನಿಹೊಮ್ಮಿಸುವ ಮೈಕ್‌ಗಳನ್ನು ಬಳಸದಂತೆಯೂ ಸರ್ಕಾರ ಇತ್ತೀಚೆಗೆ ಧಾರ್ಮಿಕ ಕೇಂದ್ರಗಳಿಗೆ ಸೂಚನೆ ನೀಡಿದೆ. ನೆಲದ ಕಾನೂನುಗಳನ್ನು ಗೌರವಿಸುವುದೂ ನಮ್ಮ ಅನಿವಾರ್ಯಗಳಲ್ಲೊಂದು. ಕಾಲಕಳೆದಂತೆ ಸಮಾಜದ ಅದ್ಯತೆ, ದೃಷ್ಟಿಕೋನಗಳು ಬದಲಾಗುವುದು ಸಾಮಾನ್ಯ. ಅದನ್ನು ಗಮನಿಸುವ ಸೂಕ್ಷ್ಮತೆ ಬೆಳೆಸಿಕೊಳ್ಳದೆ ಹೋದರೆ ಕಲೆಯೂ ಅಪ್ರಸ್ತುತವಾಗುತ್ತದೆ.

- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಆಗಸ್ಟ್ 6, 2022

ಸ್ನೇಹವೆಂಬ ಬೆಳದಿಂಗಳ ಪಯಣ

 06-13 ಆಗಸ್ಟ್ 2022ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ


ಒಬ್ಬಂಟಿಯಾಗಿ ನಡೆಯುವ ಹಗಲಿಗಿಂತ, ಸ್ನೇಹಿತನೊಬ್ಬ

ಜೊತೆಗಿರುವ ಕತ್ತಲೇ ಆದೀತು ನನಗೆ ಎಂದಳಂತೆ ಹೆಲನ್ ಕೆಲ್ಲರ್. ಸ್ನೇಹ ಎಂಬ ರಮ್ಯ ಭಾವಕ್ಕೆ ಕತ್ತಲನ್ನೂ ತೊಲಗಿಸುವ ಶಕ್ತಿಯಿದೆ ಎಂದು ಆಕೆಗೆ ಅನಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಹುಟ್ಟಿ ಇನ್ನೂ ಎರಡು ವರ್ಷ ಉರುಳುವ ಮುನ್ನವೇ ದೃಷ್ಟಿಯನ್ನೂ ಶ್ರವಣ ಶಕ್ತಿಯನ್ನೂ ಕಳೆದುಕೊಂಡ ನತದೃಷ್ಟೆ ಆಕೆ. ಅವಳ ಬದುಕೆಲ್ಲ ಕತ್ತಲೇ ಆಗಿಹೋಯಿತು. ದುರಂತವೆಂದರೆ ಈ ಕತ್ತಲಿನ ಮಧ್ಯೆ ಶಬ್ದವನ್ನಾದರೂ ಕೇಳುವ ಅವಕಾಶ ಆಕೆಗೆ ಇರಲಿಲ್ಲ. ಆದರೆ ಈ ಕೊರತೆಯನ್ನು ಅವಳ ಬದುಕಿನಿಂದ ದೂರವಾಗಿಸಿದ್ದು ಗೆಳೆತನವೆಂಬ ಉತ್ಕಟ ಭಾವ. ಹೌದು, ಆ್ಯನ್ ಸುಲಿವಾನ್ ಆಕೆಯ ಬದುಕಿಗೆ ಅಂತಹದೊAದು ಅಂತರಂಗದ ಬೆಳಕು ಕೊಟ್ಟಳು.

ಹೆಲನ್ ಏಳು ವರ್ಷದವಳಿದ್ದಾಗ ಆಕೆಗೆ ಶಿಕ್ಷಕಿಯಾಗಿ ಬಂದವಳು ಆ್ಯನ್. ವಿಶೇಷವೆಂದರೆ ಹೆಲನ್‌ಗಿಂತ ಹದಿನೇಳು ವರ್ಷಗಳಷ್ಟು ಹಿರಿಯಳಾಗಿದ್ದ ಆ್ಯನ್ ಕೇವಲ ಶಿಕ್ಷಕಿಯಾಗಿರಲಿಲ್ಲ, ಅವಳ ಬದುಕಿನ ಸುದೀರ್ಘ ಅವಧಿಗೆ ಗೆಳತಿಯಾಗಿ ಪರಿಣಮಿಸಿದಳು. ಸುಮಾರು ಐದು ದಶಕಗಳ ಕಾಲ ಅವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರದ ಪ್ರಾಣಸ್ನೇಹಿತೆಯರಂತೆ ಬದುಕಿದರು. ಆ್ಯನ್ ತನ್ನ ಗೆಳತಿಯ ಕಣ್ಣಾದಳು, ಕಿವಿಯಾದಳು, ಜ್ಞಾನವಾದಳು, ಭಾವನೆಯಾದಳು, ಬಣ್ಣವಾದಳು, ಬೆಳಕಾದಳು, ಪ್ರಪಂಚವೇ ಆದಳು. ಹೆಲನ್ ಓದುವಂತೆ, ಬರೆಯುವಂತೆ, ಮಾತಾಡುವಂತೆ ಮಾಡಿದಳು. 

ಆ್ಯನ್ ಮೂಲಕ ಜಗತ್ತನ್ನು ಕಂಡ ಹೆಲನ್ ಹತ್ತಾರು ಪುಸ್ತಕ ಬರೆದಳು. ಮೂವತ್ತೈದು ದೇಶಗಳನ್ನು ಸುತ್ತಾಡಿದಳು. ನೂರಾರು ಭಾಷಣಗಳನ್ನು ಮಾಡಿದಳು. ದಿವ್ಯಾಂಗರ ಹಕ್ಕುಗಳಿಗಾಗಿ ಬದುಕೆಲ್ಲ ಹೋರಾಡಿದಳು. ಸ್ನೇಹವೆಂಬುದು ಕೇವಲ ಮನಸ್ಸಿನೊಳಗಿನ ಭಾವನೆಯಲ್ಲ, ಅಂತರAಗದ ಕಸುವು; ಸುತ್ತಲೂ ಕತ್ತಲು ಆವರಿಸಿದಾಗ ಅದರ ಮಧ್ಯೆ ಬೆಳಗುವ ಹಣತೆ. ದಾರಿ ತೋರಿಸುವ ಕೈದೀವಿಗೆ. ನಿರಾಶೆಯನ್ನು ಹೊಡೆದೋಡಿಸಿ ಆತ್ಮವಿಶ್ವಾಸವನ್ನು ತುಂಬುವ ಮಹಾಮಂತ್ರ. ಅದಕ್ಕೆ ಹೆಲನ್ ಕೆಲ್ಲರ್‌ರಂತಹ ಸಾಧಕರನ್ನು ಲೋಕಕ್ಕೆ ಕೊಡುವ ಸಾಮರ್ಥ್ಯವಿದೆ.

ಸೋಶಿಯಲ್ ಮೀಡಿಯಾದ ಕಾಲದಲ್ಲಿ ಸ್ನೇಹಿತರಿಗೇನೂ ಕೊರತೆಯಿಲ್ಲ. ಅವನಿಗೆ ಫೇಸ್ಬುಕ್ಕಲ್ಲಿ ಐದು ಸಾವಿರ ಸ್ನೇಹಿತರು. ಆಕೆಗೆ ಟ್ವಿಟರಿನಲ್ಲಿ, ಇನ್‌ಸ್ಟಾಗ್ರಾಮಿನಲ್ಲಿ ಲಕ್ಕಕ್ಕೂ ಹೆಚ್ಚು ಅನುಯಾಯಿಗಳು. ಅವನೊಂದು ಪೋಸ್ಟ್ ಹಾಕಿದರೆ ಅದಕ್ಕೆ ಸ್ನೇಹಿತರು ಹಾಕುವ ಲೈಕುಗಳು ಅರ್ಧವೇ ಗಂಟೆಯಲ್ಲಿ ಒಂದು ಸಾವಿರ ದಾಟುತ್ತದೆ. ಆಕೆಯದೊಂದು ವೀಡಿಯೋ ಬಂದರೆ ಏನಿಲ್ಲವೆಂದರೂ ಐವತ್ತು ಸಾವಿರ ಫ್ರೆಂಡ್ಸು ಮೆಚ್ಚಿಕೊಳ್ಳುತ್ತಾರೆ. ಅಬ್ಬಾ! ಸ್ನೇಹಿತರು ಎಂದರೆ ಹೀಗಿರಬೇಕು! ಎಂದುಕೊಳ್ಳುವ ಹೊತ್ತಿಗೆ ಅದ್ಯಾವುದೋ ದೊಡ್ಡ ಸಮಸ್ಯೆ ಅನಾಮತ್ತಾಗಿ ಕಚ್ಚಿಕೊಳ್ಳುತ್ತದೆ. ಇದ್ದಾರಲ್ಲ ಹಚ್ಚಿಕೊಂಡಿರುವ ಸಾವಿರಾರು ಸ್ನೇಹಿತರು ಎಂದುಕೊಂಡರೆ ಅವರೆಲ್ಲ ತಂಬಾಕನ್ನು ಮೂಸಿದ ಇಂಬಳಗಳಂತೆ ಆಗಲೇ ನಾಪತ್ತೆಯಾಗಿರುತ್ತಾರೆ. ಆಗಲೇ ಇವರ ದೇಹದ ರಕ್ತ ಪೂರ್ತಿ ಬಸಿದುಹೋಗಿರದಿದ್ದರೆ ಅದೇ ಅದೃಷ್ಟ.

ಇಂತಹ ಸ್ನೇಹಿತರು ಇದ್ದರೆಷ್ಟು ಇಲ್ಲದಿದ್ದರೆಷ್ಟು? ಇದ್ದರೆ ಇರಬೇಕು – ಸುಧಾಮನಿಗೊಬ್ಬ ಕೃಷ್ಣನಿದ್ದ ಹಾಗೆ, ಸುಯೋಧನನಿಗೊಬ್ಬ ಕರ್ಣನಿದ್ದ ಹಾಗೆ, ಹೆಲನ್‌ಗೊಬ್ಬಳು ಆ್ಯನ್ ಇದ್ದ ಹಾಗೆ. ಸ್ನೇಹಿತರೆಂದರೆ ಕಷ್ಟ ಬಂದಾಗ ಬಿಟ್ಟೋಡುವವರಲ್ಲ, ಜತೆಗಿದ್ದು ಧೈರ್ಯ ತುಂಬುವವರು. ಅವರೇನೂ ಪ್ರಾಣಕ್ಕೆ ಪ್ರಾಣ ಕೊಡಬೇಕಾಗಿಲ್ಲ, ಒಂದಿಷ್ಟು ನಂಬಿಕೆ ಉಳಿಸಿಕೊಂಡರೆ ಸಾಕು. ವಿಶ್ವಾಸ ಪ್ರಾಣಕ್ಕೆ ಸಮ, ಅಥವಾ ಅದಕ್ಕಿಂತಲೂ ದೊಡ್ಡದು. ವಿಶ್ವಾಸ ಕಳೆದುಕೊಳ್ಳುವುದೆಂದರೆ ಬದುಕಿಯೂ ಸತ್ತಹಾಗೆ.

‘ಬದುಕಿನ ತುಂಬ ಹಲವಾರು ಮಂದಿ ಓಡಾಡುತ್ತಾರೆ, ನಿಜವಾದ ಸ್ನೇಹಿತರು ಮಾತ್ರ ತಮ್ಮ ಹೆಜ್ಜೆಯ ಗುರುತುಗಳನ್ನು ಉಳಿಸಿಹೋಗುತ್ತಾರೆ’ ಎಂಬ ಮಾತಿದೆ. ಈ ಹೆಜ್ಜೆ ಗುರುತುಗಳಿಗೆ ವಿಶ್ವಾಸ, ಒಲುಮೆ, ಸಹಾನುಭೂತಿ, ನಿರ್ಮಾತ್ಸರ್ಯ, ಪ್ರಾಮಾಣಿಕತೆ ಇತ್ಯಾದಿ ಹೆಸರುಗಳೂ ಇವೆ. ಅವು ಸ್ನೇಹದ ಆಧಾರ ಸ್ತಂಭಗಳು ಕೂಡ. ಸ್ನೇಹವೆಂಬುದು ಕ್ಷಣಕಾಲ ಫಳ್ಳೆಂದು ಬೆಳಗಿ ಮರೆಯಾಗುವ ಮಿಂಚಲ್ಲ. ಸದಾ ಹೊಮ್ಮುವ ಚಂದಿರನ ಬೆಳದಿಂಗಳು. ಅದರಿಂದ ಮೈಮನಸ್ಸಿಗೆ ತಂಪಿನ, ಸೊಂಪಿನ ಅನುಭವ. ಈ ಸುದೀರ್ಘ ಸಹಪಯಣದಲ್ಲಿ ವಿಶ್ವಾಸವೇ ವಿಶ್ವ. ಒಮ್ಮೆ ಅಪನಂಬಿಕೆಯ ಸಣ್ಣ ಬಿರುಕು ಕಾಣಿಸಿಕೊಂಡರೂ ಬುನಾದಿ ಶಾಶ್ವತವಾಗಿ ಕುಸಿಯಬಲ್ಲುದು. 

ಪರಸ್ಪರ ಪ್ರೀತಿ-ಕಾಳಜಿಗಳು ಕೂಡ ಈ ಬುನಾದಿಯ ಇಟ್ಟಿಗೆಗಳು. ಈ ಒಲುಮೆ ಸದಾ ಹರಿಯುವ ಝರಿಯ ಹಾಗೆ. ಅಲ್ಲಿ ಕಲ್ಮಶಗಳು ಉಳಿಯುವುದಿಲ್ಲ. ಸ್ನೇಹವಿದ್ದಲ್ಲಿ ಸಣ್ಣ ಸಿಟ್ಟು-ಸೆಡವುಗಳು ಇರಬಾರದೆಂದಿಲ್ಲ. ಆದರೆ ಅವೆಲ್ಲ ಬಹುಕಾಲ ಉಳಿಯುವುದಿಲ್ಲ. ಝರಿಯಲ್ಲಿ ಕೊಚ್ಚಿಹೋಗುವ ಕೊಳೆಯಂತೆ, ಕಸಕಡ್ಡಿಗಳಂತೆ ಅವೆಲ್ಲ ಕೆಲವೇ ಸಮಯದಲ್ಲಿ ಮರೆಯಾಗಿ ಶುಭ್ರತೆ, ತಾಜಾತನ ಆವರಿಸಿಕೊಳ್ಳುತ್ತದೆ. ಈ ಹರಿಯುವ ನೀರಿನ ಇನ್ನೊಂದು ಗುಣವೆಂದರೆ ಅದು ಮುಂದೆಮುಂದಕ್ಕೆ ಸಾಗುತ್ತಲೇ ತನ್ನ ಎರಡೂ ದಡಗಳಿಗೆ ಜೀವಸೇಚನ ಮಾಡುತ್ತದೆ. ಫಲವಂತಿಕೆಯನ್ನು ಸುತ್ತಲಿನವರಿಗೆಲ್ಲ ಉಡುಗೊರೆಯಾಗಿ ನೀಡುತ್ತದೆ. ಅಲ್ಲಿ ಒಬ್ಬರು ಮೇಲು ಇನ್ನೊಬ್ಬರು ಕೀಳು ಎಂಬುದೂ ಇಲ್ಲ. ಎಲ್ಲರಿಗೂ ಸಮಾನವಾಗಿ ಈ ಫಲದ ಹಂಚಿಕೆಯಾಗುತ್ತದೆ. ಅಂದರೆ ಒಳ್ಳೆಯ ಸ್ನೇಹಿತರ ಸಂಪರ್ಕಕ್ಕೆ ಬಂದವರು ಅದರ ಫಲಗಳನ್ನು ತಾವೂ ಉಣ್ಣುತ್ತಾರೆ. ಅದರಿಂದ ಬೇರೊಬ್ಬರಿಗೆ ತೊಡಕೆಂಬುದಿಲ್ಲ.

ಸ್ನೇಹಿತರ ಕಷ್ಟ, ಸವಾಲುಗಳನ್ನು ಕಂಡು ಮರುಗುವುದು, ಅದನ್ನು ತಮ್ಮ ಕಷ್ಟವೆಂದೇ ಬಗೆದು ಅವರ ಸಹಾಯಕ್ಕೆ ಧಾವಿಸುವುದು ಗೆಳೆತನದ ಇನ್ನೊಂದು ಗುಣ. ಅದಕ್ಕೆ ಸಹಾನುಭೂತಿಯೆಂದು ಹೆಸರು. ಕಷ್ಟಕ್ಕೊದಗುವವನೇ ನಿಜವಾದ ಸ್ನೇಹಿತ ಎಂಬ ಮಾತಿದೆಯಲ್ಲ. ಬಂಧುಬಳಗ ನೂರಾರು ಮಂದಿ ಇದ್ದರೂ ಆಪತ್ತಿಗೆ ಓಡಿ ಬರುವವರು ಸ್ನೇಹಿತರೇ. ಗೆಳೆಯ ಕಣ್ರೆಪ್ಪೆ ಇದ್ದ ಹಾಗೆ. ಎಷ್ಟೇ ಅಚಾನಕ್ಕಾಗಿ ಕಸಕಡ್ಡಿಯೋ ಧೂಳೋ ಎದುರಿನಿಂದ ಬಂದರೂ ರೆಪ್ಪೆ ಫಕ್ಕನೆ ತಾನೇತಾನಾಗಿ ಮುಚ್ಚಿಕೊಂಡು ಕಣ್ಮಣಿಗಳನ್ನು ಕಾಪಾಡುತ್ತದೆ. ಅದಕ್ಕೆ ಸ್ನೇಹಶೀಲತೆಯೆಂದು ಹೆಸರು.

ಸ್ನೇಹದೊಳಗೆ ಮತ್ಸರಕ್ಕೆ ಜಾಗವಿಲ್ಲ. ಇದ್ದರೆ ಅದು ಸ್ನೇಹವಲ್ಲ, ವ್ಯವಹಾರ. ಪರಸ್ಪರರ ಏಳಿಗೆಯನ್ನು ಕಂಡು ಕರುಬುವವರು ಗೆಳೆಯರಲ್ಲ. ತೋರಿಕೆಗೆ ಗೆಳೆಯರಂತೆ ನಟಿಸುತ್ತಾ ಅಂತರಂಗದಲ್ಲಿ ಮತ್ಸರಪಟ್ಟರೆ ಅಂತಹವರಿಗೆ ಶತ್ರುಗಳೆಂದು ಹೆಸರು. ಇವರಿಗಿಂತ ಘೋಷಿತ ಶತ್ರುಗಳಾದರೂ ಆಗಬಹುದು. ಅವರು ಶತ್ರುಗಳೆಂದು ಮೊದಲೇ ಗೊತ್ತಿರುತ್ತದಲ್ಲ? ನಿಜವಾದ ಸ್ನೇಹಿತ ತನ್ನ ಗೆಳೆಯನ ಸಾಧನೆಗಳಲ್ಲಿ ತನ್ನ ಸಾಧನೆಯನ್ನೂ ಸೌಖ್ಯವನ್ನೂ ಕಾಣುತ್ತಾನೆ. ಅವುಗಳಿಗಾಗಿ ಹೆಮ್ಮೆಪಡುತ್ತಾನೆ. ಪರಸ್ಪರರ ಸಾಧನೆಗಳಲ್ಲಿ ಆನಂದವನ್ನೂ ಪ್ರೇರಣೆಯನ್ನೂ ಪಡೆದು ಪ್ರಗತಿಯ ಹಾದಿಯಲ್ಲಿ ಜತೆಯಾಗಿ ಮುನ್ನಡೆಯುವವರೇ ನಿಜವಾದ ಸ್ನೇಹಿತರು.

ಸ್ನೇಹವನ್ನು ಕೊನೆಯವರೆಗೂ ಕಾಪಿಟ್ಟುಕೊಳ್ಳುವುದು ಪ್ರಾಮಾಣಿಕತೆಯೆಂಬ ಉಕ್ಕಿನ ಹೊದಿಕೆ. ಸ್ನೇಹವೊಂದು ತೆರೆದ ಪುಸ್ತಕ. ಅದನ್ನು ಇಬ್ಬರಿಗೂ ಯಾವಾಗ ಬೇಕಾದರೂ ಓದಿಗೆ ಲಭ್ಯವಿದ್ದಾಗ ಮುಚ್ಚಿಡುವುದು, ಬಚ್ಚಿಡುವುದು ಏನೂ ಇರುವುದಿಲ್ಲ. ಮನುಷ್ಯರೆಂದ ಮೇಲೆ ಭಿನ್ನಾಭಿಪ್ರಾಯಗಳು ಇರಬಾರದು ಎಂದೇನೂ ಇಲ್ಲ. ಅವೆಲ್ಲ ಬದುಕಿನ ಸಹಜ ಲಕ್ಷಣಗಳು. ಆದರೆ ಅಂಥವು ಕಾಣಿಸಿಕೊಂಡಾಗ ಅವುಗಳನ್ನು ಅಲ್ಲಲ್ಲೇ ಹಂಚಿಕೊಂಡರೆ, ಸಲಹೆಗಳನ್ನು ಸ್ವೀಕರಿಸುವ ಪ್ರಾಮಾಣಿಕತೆ ಇಬ್ಬರಲ್ಲೂ ಇದ್ದರೆ ಸ್ನೇಹ ಅನಂತವಾಗಿರುತ್ತದೆ.

ಹೇಳಿಕೇಳಿ ಗೆಳೆತನವೆಂಬುದು ಒಂದು ಅವಕಾಶವಲ್ಲ, ಜವಾಬ್ದಾರಿ. ಅದು ಇಬ್ಬರಿಗೂ  ಸಂಬಂಧಿಸಿದ ಪದ. ಎರಡೂ ಕೈ ಸೇರಿದರೆ ಚಪ್ಪಾಳೆ. ಕಣ್ಣೆರಡು, ಕಿವಿಯೆರಡು, ಕೈಯೆರಡು, ಕಾಲೆರಡು. ಸ್ನೇಹಕ್ಕೂ ಇಬ್ಬರು ಬೇಕಲ್ಲ! ಇಬ್ಬರೂ ಜತೆಯಾಗಿ ಆ ಜವಾಬ್ದಾರಿ ನಿರ್ವಹಿಸಿದರೆ ಲೋಕಕ್ಕೊಂದು ಒಳ್ಳೆಯ ಮಾದರಿ ದೊರೆಯುತ್ತದೆ. ಇನ್ನೊಂದು ದಡ ಸೇರಿದ ಮೇಲೂ ಅಂಬಿಗನ ನೆನಪು ಬೇಕು. ಇಲ್ಲದಿದ್ದರೆ ಹಿಂತಿರುಗುವಾಗ ಸಮಸ್ಯೆಯಾಗುತ್ತದೆ.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಜೂನ್ 21, 2022

ಉದ್ಯೋಗ ಜಗತ್ತು ಬಯಸುವ 10 ಕೌಶಲಗಳು

4 ಜೂನ್ 2022ರ 'ವಿಜಯವಾಣಿ' ಪತ್ರಿಕೆಯ 'ಶಿಕ್ಷಣಪಥ' ಪುರವಣಿಯಲ್ಲಿ ಪ್ರಕಟವಾದ ಲೇಖನ

ಕೇವಲ ಡಿಗ್ರಿ ಆಧಾರದಲ್ಲಿ ಉದ್ಯೋಗ ಸಂಪಾದಿಸುವ ದಿನಗಳು ಇತಿಹಾಸಕ್ಕೆ ಸಂದುಹೋಗಿವೆ. ಇದು ಸ್ಪರ್ಧಾತ್ಮಕ ಯುಗ. ಉದ್ಯೋಗ ಸಂಪಾದನೆಯಿಂದ ತೊಡಗಿ ಅದರಲ್ಲಿ ಯಶಸ್ಸು ಸಾಧಿಸುವವರೆಗೆ ಪ್ರತಿ ಹಂತದಲ್ಲೂ ಇನ್ನೊಬ್ಬರಿಂದ ಕಠಿಣ ಸ್ಪರ್ಧೆ ಎದುರಿಸಬೇಕಾಗುತ್ತದೆ. ಡಿಗ್ರಿಯೊಂದಿದ್ದರೆ ಯಾವುದಾದರೊಂದು ಉದ್ಯೋಗ ಸಿಗುತ್ತದೆ ಎಂಬ ಮನೋಭಾವ ಇರುವವರಿಗೆ ಇನ್ನು ಬದುಕು ಬಲು ಕಷ್ಟ. 

ಅಂಕಪಟ್ಟಿಯಲ್ಲಿ ನಮೂದಾಗಿರುವ ಪರ್ಸೆಂಟೇಜನ್ನು ನಂಬಿ ಈಗ ಯಾರೂ ಉದ್ಯೋಗ ಕೊಡುವುದಿಲ್ಲ. ಎಷ್ಟೇ ಸಣ್ಣ ಉದ್ಯೋಗವಾದರೂ ತಾನು ಕೊಡುವ ಸಂಬಳಕ್ಕೆ ಪ್ರತಿಯಾಗಿ ಉದ್ಯೋಗಿ ತನ್ನ ಸಂಸ್ಥೆಗೆ ಏನು ಕೊಡಬಲ್ಲ ಎಂದು ಉದ್ಯೋಗಪತಿ ಯೋಚಿಸುತ್ತಾನೆ. ಆದ್ದರಿಂದ ಅಂಕಪಟ್ಟಿ, ಪ್ರಮಾಣಪತ್ರಗಳ ಜೊತೆಗೆ ಉದ್ಯೋಗ ರಂಗವು ಅಪೇಕ್ಷಿಸುವ ಒಂದಷ್ಟು ಕೌಶಲಗಳನ್ನು ಪ್ರತಿಯೊಬ್ಬನೂ ರೂಢಿಸಿಕೊಳ್ಳುವುದು ಅಗತ್ಯ. ಕ್ಷೇತ್ರ, ಉದ್ಯೋಗ ಯಾವುದೇ ಇರಲಿ, ಈ ಕೌಶಲಗಳು ಎಲ್ಲ ಉದ್ಯೋಗಾಕಾಂಕ್ಷಿಗಳಲ್ಲೂ ಇರಲೇಬೇಕು.

ಸಮಸ್ಯೆ ಬಗೆಹರಿಸುವಿಕೆ

ಉದ್ಯೋಗ ಸ್ಥಳದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಯಾವಾಗ ಯಾವ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಲು ಬರುವುದಿಲ್ಲ. ಕೆಲವು ನಿರೀಕ್ಷಿತ, ಕೆಲವು ಅನಿರೀಕ್ಷಿತ. ಎರಡನ್ನೂ ಸಮಾನ ಧೈರ್ಯದಿಂದ ಎದುರಿಸುವ ಕೌಶಲ ವ್ಯಕ್ತಿಗೆ ಇರಬೇಕು. ನಿರೀಕ್ಷಿತ ಸಮಸ್ಯೆಗಳನ್ನು ಎದುರಿಸಲು ಸಿದ್ಧ ತಂತ್ರಗಾರಿಕೆ ಬೇಕು. ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸಲು ಆತ್ಮವಿಶ್ವಾಸ, ತಾಳ್ಮೆ, ವ್ಯವಸ್ಥಿತ ನಿರ್ವಹಣೆ ಬೇಕು. 

ಸಮಸ್ಯೆ ಎದುರಾದ ಕೂಡಲೇ ಧೈರ್ಯ ಕಳೆದುಕೊಳ್ಳುವುದಲ್ಲ, ಕುಗ್ಗಿ ಬದಿಗೆ ಸರಿಯುವುದಲ್ಲ. ಸಮಸ್ಯೆ ಯಾಕೆ ಬಂತು, ಅದಕ್ಕಿರುವ ವಿವಿಧ ಪರಿಹಾರಗಳೇನು, ತಕ್ಷಣಕ್ಕೆ ಏನು ಮಾಡಬಹುದು- ಇವನ್ನೆಲ್ಲ ಕೂಲಂಕಷವಾಗಿ ಯೋಚಿಸಿ ಮುಂದಿನ ಹೆಜ್ಜೆ ಇಡುವುದು ಅಪೇಕ್ಷಣೀಯ. ದುಡುಕು, ಆತಂಕಗಳಿAದ ಸಮಸ್ಯೆ ಪರಿಹಾರವಾಗುವ ಬದಲು ಇನ್ನಷ್ಟು ಬಿಗಡಾಯಿಸುತ್ತದೆ.

ಸಂವಹನ ಕಲೆ

ಸಂವಹನದಲ್ಲಿ ವ್ಯಕ್ತಿಯ ಯಶಸ್ಸು ಅಡಗಿದೆ. ಮನಸ್ಸಿನಲ್ಲಿ ಏನಿದೆ ಎಂಬುದಕ್ಕಿಂತಲೂ ಅದನ್ನು ಇನ್ನೊಬ್ಬರೆದುರು ಹೇಗೆ ಮಂಡಿಸಬೇಕು ಎಂದು ತಿಳಿದಿರುವುದು ಮುಖ್ಯ. ಇನ್ನೊಬ್ಬನೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಸಾಧ್ಯವಾಗದ ವ್ಯಕ್ತಿ ಎಷ್ಟೇ ಉನ್ನತ ವಿದ್ಯಾರ್ಹತೆ ಹೊಂದಿದ್ದರೂ ಪ್ರಯೋಜನವಿಲ್ಲ.

ಉತ್ತಮ ಉದ್ಯೋಗ ಪಡೆಯಲು ಮತ್ತು ಅದರಲ್ಲಿ ಯಶಸ್ಸು ಸಾಧಿಸಲು ಲಿಖಿತ ಮತ್ತು ಮೌಖಿಕ ಸಂವಹನ ಕಲೆ ಬಹಳ ಮುಖ್ಯ. ತನ್ನ ಬಯೋಡಾಟಾ ಬರೆಯುವುದರಿಂದ ತೊಡಗಿ ವಿವಿಧ ಸಂದರ್ಭಗಳಲ್ಲಿ ಪತ್ರ, ಇಮೇಲ್ ಮತ್ತಿತರ ವ್ಯವಹಾರ ನಡೆಸುವುದಕ್ಕೆ ಬರೆವಣಿಗೆ ಕೌಶಲ ಬಹಳ ಮುಖ್ಯ. ಒಂದು ಕೆಟ್ಟ ಇಮೇಲ್ ಇಡೀ ಯೋಜನೆಯನ್ನೇ ಹಾಳುಗೆಡಹಬಹುದು. ಒಂದು ಉತ್ತಮ ಪತ್ರ ಅಥವಾ ಪ್ರಸ್ತಾವನೆ ಕೋಟ್ಯಂತರ ರುಪಾಯಿಯ ಪ್ರಾಜೆಕ್ಟ್ ಒಂದನ್ನು ಪಡೆದುಕೊಳ್ಳಲು ನೆರವಾಗಬಹುದು. ಮೌಖಿಕ ಸಂವಹನವAತೂ ಆಧುನಿಕ ಕಾಲದ ಅತ್ಯಗತ್ಯ ಕೌಶಲ. ಉದ್ಯೋಗ ನೀಡಲು ಸಂದರ್ಶನ ನಡೆಸುವ ವ್ಯಕ್ತಿ ನಿಮ್ಮ ಮೌಖಿಕ ಸಂವಹನ, ದೇಹಭಾಷೆಯನ್ನು ನೋಡಿಯೇ ನಿಮಗೆ ಆ ಉದ್ಯೋಗ ನೀಡಬೇಕೇ ಬೇಡವೇ ಎಂಬುದನ್ನು ಬಹುಪಾಲು ನಿರ್ಧರಿಸುವ ಸಾಧ್ಯತೆ ಇದೆ.

ಹೊಂದಾಣಿಕೆ

ಹೊಸತನ ಉದ್ಯೋಗರಂಗದ ಖಾಯಂ ಲಕ್ಷಣ. ಯಾವುದೇ ಉದ್ಯೋಗದಲ್ಲಿ ಹೊಸಹೊಸ ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಹೊಸ ತಂತ್ರಜ್ಞಾನ, ಹೊಸ ಬಗೆಯ ಸ್ಪರ್ಧೆಗಳು, ಹೊಸ ವ್ಯವಹಾರದ ಮಾದರಿಗಳು ಪ್ರತಿದಿನ ಗೋಚರವಾಗುತ್ತವೆ. ಈ ಬದಲಾವಣೆಗಳಿಗೆ ಆಗಿಂದಾಗ್ಗೆ ಹೊಂದಿಕೊಳ್ಳುವುದು ಉದ್ಯೋಗಿಯ ಆದ್ಯತೆಯಾಗಬೇಕು. ಸದಾ ಹೊಸತನ್ನು ಕಲಿಯುವ ಅಭ್ಯಾಸ ರೂಢಿಯಾಗಬೇಕು. ಹೊಸ ವಿಷಯ ಹಾಗೂ ಹೊಸ ವ್ಯಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗದ ಉದ್ಯೋಗಿ ಯಶಸ್ಸು ಕಾಣುವುದು ಕಷ್ಟ.

ತಂಡ ಮನೋಭಾವ

ತಂಡದೊಂದಿಗೆ ಕೆಲಸ ಮಾಡುವ ಗುಣ ಅತ್ಯಂತ ದೊಡ್ಡ ಉದ್ಯೋಗ ಕೌಶಲವೆಂದು ಪರಿಗಣಿಸಲ್ಪಟ್ಟಿದೆ. ಒಂದು ಸಂಸ್ಥೆಯಲ್ಲಿ ಮಾಡುವ ಬಹುತೇಕ ಕೆಲಸಗಳು ತಂಡ ಪ್ರಯತ್ನಗಳೇ. ಒಬ್ಬ ವ್ಯಕ್ತಿ ಏಕಾಂಗಿಯಾಗಿ ಪೂರೈಸಬಹುದಾದ ಕೆಲಸಗಳು ಕಡಿಮೆ. ಇಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದೇ ಪ್ರಮುಖ ಕೌಶಲ. 

ಒಬ್ಬ ಉದ್ಯೋಗಾಕಾಂಕ್ಷಿ ವಿವಿಧ ಹಿನ್ನೆಲೆಯ, ವಯಸ್ಸಿನ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯ ಮಂದಿಯೊAದಿಗೆ ತಂಡ ಮನೋಭಾವದಿಂದ ಕೆಲಸ ಮಾಡಲು ಸಿದ್ಧವಿರಬೇಕು. ತಂಡದ ಮುಖ್ಯಸ್ಥನಾಗಬಯಸುವವನಿಗಂತೂ ಇನ್ನೊಬ್ಬರ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಗಮನಿಸಿ, ಅವರಿಗೆ ತಕ್ಕುದಾದ ಜವಾಬ್ದಾರಿಗಳನ್ನು ವಹಿಸುವ ಸಾಮರ್ಥ್ಯವಿರಬೇಕು.

ಸಮಯ ನಿರ್ವಹಣೆ

ಸಮಯ ನಿರ್ವಹಣೆಯು ಸಂಪನ್ಮೂಲ ನಿರ್ವಹಣೆಯ ಒಂದು ಭಾಗ. ಅತ್ಯಂತ ಕಡಿಮೆ ಸಮಯದಲ್ಲಿ ಗರಿಷ್ಠ ಪ್ರಯೋಜನವನ್ನು ಪಡೆಯುವುದು ಯಾವನೇ ಉದ್ಯೋಗಿಯ ಪ್ರಮುಖ ಗುರಿಯಾಗಬೇಕು. ಇದಕ್ಕೆ ಸೂಕ್ತ ಯೋಜನೆ ಅಗತ್ಯ. ಸರಿಯಾದ ಪ್ಲಾನಿಂಗ್ ಇದ್ದಾಗ ಮಾತ್ರ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.

ಸಮಯವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವುದು ಒಂದು ಶ್ರೇಷ್ಠ ಕೌಶಲ. ಒಂದೊಂದು ನಿಮಿಷವೂ ಮುಖ್ಯ ಎಂಬ ಭಾವನೆ ಹೊಂದಿರುವವನಿಗೆ ಮಾತ್ರ ಸಮಯದ ಮೌಲ್ಯ ಅರ್ಥವಾಗಲು ಸಾಧ್ಯ. ನಿಗದಿತ ವೇಳೆಗೆ ಒಂದು ಕೆಲಸಕ್ಕೆ ಹಾಜರಾಗುವುದು, ನಿರ್ದಿಷ್ಟ ಕಾಲಮಿತಿಯಲ್ಲಿ ಜವಾಬ್ದಾರಿಯನ್ನು ಪೂರೈಸುವುದು- ಇವೆಲ್ಲ ಒಬ್ಬ ವ್ಯಕ್ತಿಯ ಉದ್ಯೋಗಾರ್ಹತೆಯನ್ನು ನಿರ್ಧರಿಸುತ್ತವೆ.

ಸಂಘಟನೆ

ವ್ಯಕ್ತಿಗಳು ಹಾಗೂ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಹಾಗೂ ಬುದ್ಧಿವಂತಿಕೆಯಿಂದ ಬಳಸುವುದು ಸಂಘಟನೆಯ ಗುಟ್ಟು. ಎಲ್ಲ ಕೆಲಸಗಳನ್ನೂ ಒಬ್ಬನೇ ನಿರ್ವಹಿಸಲಾಗದು. ಯಾರಿಗೆ ಯಾವಾಗ ಯಾವ ಕೆಲಸವನ್ನು ವಹಿಸಬೇಕೆಂಬುದು ಒಬ್ಬ ಉತ್ತಮ ಸಂಘಟಕನಿಗೆ ತಿಳಿದಿರುತ್ತದೆ. ಇದರಿಂದ ಒಂದು ತಂಡದಲ್ಲಿ ಪರಸ್ಪರ ವಿಶ್ವಾಸವೂ ಬೆಳೆಯುತ್ತದೆ. ಜವಾಬ್ದಾರಿಗಳ ಸಮಾನ ಹಂಚಿಕೆಯಾಗುತ್ತದೆ.

ಸ್ವಪ್ರೇರಣೆಯನ್ನು ಹೆಚ್ಚಿಸಿಕೊಳ್ಳವುದು, ತನ್ನ ಹಾಗೂ ಸಹೋದ್ಯೋಗಿಗಳ ಸಾಮರ್ಥ್ಯದ ಗರಿಷ್ಠ ಬಳಕೆ ಮಾಡುವುದು, ಜವಾಬ್ದಾರಿಗಳನ್ನು ಜಾಗರೂಕತೆಯಿಂದ ನಿರ್ವಹಿಸುವುದು, ತಕ್ಷಣದ ಆದ್ಯತೆ ಯಾವುದು ಎಂದು ಅರ್ಥಮಾಡಿಕೊಳ್ಳವುದು- ಇವೆಲ್ಲ ಒಬ್ಬ ಉದ್ಯೋಗಸ್ಥ ಅಥವಾ ಉದ್ಯೋಗಾಕಾಂಕ್ಷಿಯ ಪ್ರಧಾನ ಗುಣಗಳಾಗಿರಬೇಕು.

ತಂತ್ರಜ್ಞಾನದ ಬಳಕೆ

ಇದು ತಂತ್ರಜ್ಞಾನದ ಯುಗ. ಪ್ರತಿದಿನ ಹೊಸ ತಂತ್ರಜ್ಞಾನ ನಮ್ಮೆದುರು ಕಾಣಿಸಿಕೊಳ್ಳುತ್ತಿದೆ. ಕಡೇ ಪಕ್ಷ ಕಂಪ್ಯೂಟರನ್ನಾದರೂ ತನ್ನ ಕೆಲಸಗಳಿಗೆ ಸರಿಯಾಗಿ ಬಳಸಿಕೊಳ್ಳಲಾಗದ ವ್ಯಕ್ತಿ ಇಂದು ಅನಕ್ಷರಸ್ಥನೇ ಸರಿ. ಇತ್ತೀಚಿನ ವರ್ಷಗಳಲ್ಲಂತೂ ಕಂಪ್ಯೂಟರ್‌ನಲ್ಲಿ ಮಾಡಬಹುದಾದ ಅನೇಕ ಕೆಲಸಗಳನ್ನು ಮೊಬೈಲ್ ಫೋನಿನಲ್ಲೇ ಮಾಡುವುದು ಸಾಧ್ಯ. 

ಆದ್ದರಿಂದ ತಂತ್ರಜ್ಞಾನದ ವಿಷಯದಲ್ಲಿ ವ್ಯಕ್ತಿ ಆಗಿಂದಾಗ್ಗೆ ಅಪ್ಡೇಟ್ ಆಗುವುದು ಅನಿವಾರ್ಯ. ಕಂಪ್ಯೂಟರ್, ಮೊಬೈಲ್‌ಗಳನ್ನು ಸ್ಮಾರ್ಟ್ ಆಗಿ ಬಳಸಿಕೊಳ್ಳಬಲ್ಲ ವ್ಯಕ್ತಿ ಇಂದು ಯಾವುದೇ ಉದ್ಯೋಗಕ್ಕೆ ಹೆಚ್ಚು ಯೋಗ್ಯ ಎನಿಸಿಕೊಳ್ಳುತ್ತಾನೆ.

ಮಾಹಿತಿಯ ಬಳಕೆ

21ನೇ ಶತಮಾನದಲ್ಲಿ ಮಾಹಿತಿಯೇ ಕರೆನ್ಸಿ. ಯಾವುದೇ ಮಾಧ್ಯಮವನ್ನು ಬಳಸಿ ಸರಿಯಾದ ಮಾಹಿತಿಯನ್ನು ಸಂಗ್ರಹಿಸುವುದು, ಸಂಗ್ರಹಿಸಿದ ಮಾಹಿತಿಯನ್ನು ಒಪ್ಪ ಓರಣವಾಗಿ ವ್ಯವಸ್ಥೆಗೊಳಿಸುವುದು, ಅದನ್ನು ಸರಿಯಾದ ರೀತಿಯಲ್ಲಿ ವಿಶ್ಲೇಷಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉದ್ಯೋಗಿಗಳ ಪ್ರಮುಖ ಕೌಶಲ. ವಿಷಯಗಳು ಗೊತ್ತಿದ್ದರೆ ಸಾಲದು, ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದು, ಇನ್ನೊಬ್ಬರಿಗೆ ಸಂವಹನ ಮಾಡುವುದು ಮುಖ್ಯ.

ಉತ್ತಮ ವ್ಯಕ್ತಿತ್ವ 

ಉತ್ತಮ ವ್ಯಕ್ತಿತ್ವ ಎಲ್ಲ ಅರ್ಹತೆಗಳನ್ನು ಬೆಳಗುವ ಶೋಕೇಸು. ಎಂತಹದೇ ವಿದ್ಯಾರ್ಹತೆ ಇದ್ದರೂ ಅದು ನಮ್ಮ ವ್ಯಕ್ತಿತ್ವದಲ್ಲಿ ಪ್ರತಿಫಲಿತವಾಗದೇ ಹೋದರೆ ಅದಕ್ಕೆ ಈ ಕಾಲದಲ್ಲಿ ಮೌಲ್ಯವಿಲ್ಲ. ವೃತ್ತಿಪರತೆ, ಉತ್ಸಾಹ, ಆತ್ಮವಿಶ್ವಾಸ, ಸೃಜನಶೀಲತೆ, ಪಾರದರ್ಶಕತೆ – ಇವೆಲ್ಲ ವ್ಯಕ್ತಿತ್ವದ ವಿವಿಧ ಆಯಾಮಗಳೆಂದು ಗುರುತಿಸಲ್ಪಟ್ಟಿವೆ. ಇವುಗಳನ್ನು ರೂಢಿಸಿಕೊಂಡು ಬೆಳೆಸಿಕೊಳ್ಳುವುದು ಉತ್ತಮ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಬಹಳ ಅಗತ್ಯ.

ನಾಯಕತ್ವ

ಎಲ್ಲರನ್ನೂ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಯಶಸ್ಸಿನ ಪ್ರಾಥಮಿಕ ಅರ್ಹತೆ. ನಾಯಕನಾದವನು ಉಳಿದವರಿಗೆ ಮಾದರಿಯಾಗಬೇಕು. ಆತ ತನ್ನ ವರ್ಚಸ್ಸು ಹಾಗೂ ಸಾಮರ್ಥ್ಯದಿಂದ ಉಳಿದವರಿಗೆ ಪ್ರೇರಕನಾಗಿರಬೇಕು.

ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದು, ಇನ್ನೊಬ್ಬರ ಸಾಮರ್ಥ್ಯವನ್ನು ಗುರುತಿಸುವುದು, ವ್ಯವಸ್ಥಿತ ಚಿಂತನೆ ಹಾಗೂ ಯೋಜನೆ, ತನ್ನೊಂದಿಗೆ ಇರುವವರ ಸಾಧನೆಗಳನ್ನು ಗುರುತಿಸಿ ಸೂಕ್ತ ಮನ್ನಣೆಯನ್ನು ನೀಡುವುದು, ವೈಫಲ್ಯದ ಜವಾಬ್ದಾರಿ ಹೊತ್ತುಕೊಳ್ಳುವುದು ಇತ್ಯಾದಿಗಳು ಉತ್ತಮ ನಾಯಕನ ಲಕ್ಷಣಗಳು. 

ಒಳ್ಳೆಯ ಉದ್ಯೋಗ ಪಡೆಯುವ ಕನಸು ಕಂಡರೆ ಸಾಲದು. ಅದಕ್ಕೆ ತಕ್ಕುದಾದ ತಯಾರಿ ನಮ್ಮಲ್ಲಿರಬೇಕು. ಉದ್ಯೋಗಕ್ಕೆ ತಯಾರಿ ನಡೆಸುವುದೆಂದರೆ ಇಂತಹ ಕೌಶಲಗಳನ್ನು ಹೊಂದುವುದಕ್ಕೆ ನಿರಂತರ ಪ್ರಯತ್ನಶೀಲರಾಗವುದು. ಇದು ಒಂದು ವಾರದಲ್ಲಿ ಅಥವಾ ತಿಂಗಳಿನಲ್ಲಿ ಕರಗತವಾಗುವ ವಿಷಯಗಳಲ್ಲ. ನಿರಂತರ ಪ್ರಯತ್ನ ಹಾಗೂ ಅಭ್ಯಾಸ ಬೇಕು. ವಿದ್ಯಾಭ್ಯಾಸದ ಜತೆಜತೆಗೆ ಈ ಕೌಶಲಗಳನ್ನು ರೂಢಿಸಿಕೊಳ್ಳಲು ಪ್ರಯತ್ನವು ಜಾಗೃತವಾಗಿದ್ದರೆ ವ್ಯಾಸಂಗ ಮುಗಿಯುವ ವೇಳೆಗೆ ಉದ್ಯೋಗಕ್ಕೂ ನಾವು ಸಿದ್ಧರಾಗಿರುತ್ತೇವೆ. ಇಲ್ಲಿ ಹೇಳಿರುವ ಕೌಶಲಗಳನ್ನು ರೂಢಿಸಿಕೊಳ್ಳುವುದರಿಂದ ಉತ್ತಮ ಉದ್ಯೋಗ ಪಡೆಯುವುದು ಮಾತ್ರವಲ್ಲ, ಪಡೆದ ಉದ್ಯೋಗದಲ್ಲಿ ಯಶಸ್ಸನ್ನು ಸಾಧಿಸಿ ಇನ್ನೂ ಉತ್ತಮ ಸ್ಥಾನಕ್ಕೆ ಏರುವುದೂ ಸಾಧ್ಯ.

- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ಜೂನ್ 19, 2022

ಅಪ್ಪನೆಂಬ ಅಂತರಂಗದ ಬೆಳಕು

'ಬೋಧಿವೃಕ್ಷ' 18-25 ಜೂನ್ 2022ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

Postmen in the Mountains ಎಂಬೊಂದು ಚೈನೀಸ್ ಚಲನಚಿತ್ರವಿದೆ. ಕಾಲ್ನಡಿಗೆಯಲ್ಲೇ ಕಡಿದಾದ ಬೆಟ್ಟಗುಡ್ಡಗಳನ್ನು ಏರಿಳಿಯುತ್ತಾ ಪತ್ರಗಳ ಬಟವಾಡೆ ಮಾಡಿಕೊಂಡು ತನ್ನ ಸುದೀರ್ಘ ವೃತ್ತಿಜೀವನವನ್ನು ಕಳೆದ ಅಂಚೆಯಣ್ಣನ ಕಥೆಯದು. ಸಿನಿಮಾ ಆರಂಭವಾಗುವುದು ಅಂಚೆಯಣ್ಣನ ವೃತ್ತಿಬದುಕಿನ ಕೊನೆಯ ದಿನದಿಂದ. ವಯೋಸಹಜ ಅನಾರೋಗ್ಯದಿಂದಾಗಿ ಅಂಚೆಯಣ್ಣ ತನ್ನ ಉದ್ಯೋಗಕ್ಕೆ ವಿದಾಯ ಹೇಳಬೇಕಾದ ಸಂದರ್ಭ ಬಂದಾಗ ಆ ಉದ್ಯೋಗ ಅವನ ಮಗನಿಗೆ ಸಿಗುತ್ತದೆ.  ಮಾಡಬೇಕಾದ ಕೆಲಸದಿಂದ ತೊಡಗಿ ನಡೆಯಬೇಕಾದ ದಾರಿಯವರೆಗೆ ಅವನಿಗೆ ಎಲ್ಲವೂ ಹೊಸದು. ಅದನ್ನು ಪರಿಚಯ ಮಾಡಿಕೊಡುವುದಕ್ಕಾಗಿ ಅಪ್ಪ ಮಗನೊಂದಿಗೆ ಹೊರಟುಬಿಡುತ್ತಾನೆ. ಬಹುಕಾಲದಿಂದ ಅಂಚೆಯಣ್ಣನ ಒಡನಾಡಿಯಾಗಿದ್ದ ನಾಯಿಯೂ ಜತೆಯಾಗುತ್ತದೆ. 

ಇಡೀ ಚಲನಚಿತ್ರದಲ್ಲಿ ಇರುವುದು ಅಪ್ಪ-ಮಗನ ಈ ಸಹಪಯಣದ ಕಥನ. ಅಂತಿಂಥ ಪಯಣವಲ್ಲ ಅದು. ಭರ್ತಿ ಇನ್ನೂರ ಅರವತ್ತು ಮೈಲಿಗಳ ನಡಿಗೆ. ಅಷ್ಟನ್ನು ಪೂರೈಸುವುದಕ್ಕೆ ಮೂರು ಹಗಲೂ ಮೂರು ಇರುಳೂ ಬೇಕು. ಗುಡ್ಡಗಾಡು ಪ್ರದೇಶಗಳಲ್ಲಿ ಚದುರಿಕೊಂಡಿರುವ ಸಣ್ಣಪುಟ್ಟ ಹಳ್ಳಿಗಳು, ಎಲ್ಲೋ ಅಡಗಿರುವ ಮನೆಗಳನ್ನು ಹುಡುಕಿ ಹೋಗಿ ಅಂಚೆ ಬಟವಾಡೆ ಮಾಡಿ ಮುಂದುವರಿಯಬೇಕು. ವಿಚಿತ್ರವೆಂದರೆ, ತರುಣ ಮಗ ತನ್ನ ದಿನನಿತ್ಯದ ಕೆಲಸಗಳನ್ನು, ಓಡಾಡಬೇಕಾದ ದಾರಿಯನ್ನು ಗಮನಿಸುವ ಬದಲು ತನ್ನ ತಂದೆಯನ್ನು ಗಮನಿಸಲು ಆರಂಭಿಸುತ್ತಾನೆ. ತಂದೆ ಮಗನನ್ನು ಗಮನಿಸಲು ಆರಂಭಿಸುತ್ತಾನೆ.

ಅವರಿಬ್ಬರೂ ಅಷ್ಟೊಂದು ಹತ್ತಿರದಿಂದ ನೋಡಿಕೊಂಡದ್ದು, ಮಾತನಾಡಿದ್ದು, ಒಬ್ಬರನ್ನೊಬ್ಬರು ಗಮನಿಸಿದ್ದು ಎರಡೂವರೆ ದಶಕದಲ್ಲಿ ಅದೇ ಮೊದಲು. ಅಂಚೆಚೀಲ ಬೆನ್ನಿಗೇರಿಸಿಕೊಂಡು ಒಮ್ಮೆ ಹೊರಟರೆ ಅಪ್ಪ ಹಿಂತಿರುಗುವುದು ಒಂದಷ್ಟು ದಿನಗಳಾದಮೇಲೆಯೇ. ಮನೆಯಲ್ಲಿ ಅಮ್ಮ-ಮಗ ಮಾತ್ರ. ಒಂದು ನಡಿಗೆ ಮುಗಿಸಿ ಮನೆಗೆ ಹಿಂತಿರುಗಿದ ಅಪ್ಪ ಮತ್ತೆ ಬೆಳಗಾಗುವ ಹೊತ್ತಿಗೆ ಎದ್ದು ಮುಂದಿನ ಪಯಣ ಆರಂಭಿಸಿರುತ್ತಾನೆ. ಮಗನ ಮನಸ್ಸಿನಲ್ಲಿರುವುದು ಅಪ್ಪನೆಂಬ ಆಕೃತಿ ಮಾತ್ರ. ಇಷ್ಟು ವರ್ಷಗಳಾದ ಮೇಲೆಯೂ ಅದರೊಂದಿಗೆ ಒಂದು ಭಾವಬಂಧ ಬಲಿತೇ ಇಲ್ಲ. ಅದಕ್ಕೆ ಸಣ್ಣ ಅವಕಾಶವೂ ಇರಲಿಲ್ಲ.  

ಅಂಥದ್ದೊಂದು ಅವಕಾಶವಾಗಿ ಒಲಿದು ಬಂದದ್ದು ಈ ಸಹಪಯಣದಿಂದ. ಪಯಣದಲ್ಲಿ ಎದುರಾಗುವ ಪ್ರತಿಕ್ಷಣವೂ ತರುಣ ಮಗನಿಗೆ ಹೊಚ್ಚಹೊಸದು. ಅವನಿಗೆ ಪ್ರತಿಯೊಂದರಲ್ಲೂ ವೈಶಿಷ್ಟ್ಯ, ಸ್ವಾರಸ್ಯ, ಕೌತುಕ. ಮುಕ್ಕಾಲು ಪಯಣ ಮುಗಿಯುವ ಹೊತ್ತಿಗೆ ನದಿಯೊಂದು ಎದುರಾಗುತ್ತದೆ. ಸೇತುವೆಯಿಲ್ಲದ ಅದನ್ನು ಹಾಗೆಯೇ ಕಾಲ್ನಡಿಗೆಯಲ್ಲಿ ದಾಟುವುದು ಕ್ರಮ. ಮಗ ನಾಯಿಯೊಂದಿಗೆ ಮೊದಲು ನದಿ ದಾಟಿ ಬೆನ್ನಮೇಲಿನ ಚೀಲವನ್ನು ಇನ್ನೊಂದು ದಡದಲ್ಲಿ ಇಟ್ಟು ಬರುತ್ತಾನೆ. ತಂದೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಇನ್ನೊಮ್ಮೆ ದಾಟುತ್ತಾನೆ. ಅಪ್ಪ-ಮಗ ಇಬ್ಬರಿಗೂ ಅದೊಂದು ವರ್ಣನಾತೀತ ಅನುಭೂತಿ.

“ಯಾವಾಗ ಮಗ ಅಪ್ಪನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಾನೋ ಆಗ ಮಗ ಬೆಳೆದು ದೊಡ್ಡವನಾದನೆಂದು ಅರ್ಥ ಅಂತ ನಮ್ಮೂರಿನ ಹಿರಿಯರು ಹೇಳ್ತಾ ಇದ್ರು. ನಾನು ಎಳೆಯವನಿದ್ದಾಗ ಅಪ್ಪ ನನಗೊಬ್ಬ ಭಾರೀ ಆಕೃತಿ ಆಗಿದ್ದ. ಇವನನ್ನು ನಾನು ಎಂದಾದರೂ ಹೊತ್ತುಕೊಂಡು ಹೋಗುವುದು ಸಾಧ್ಯವಿದೆಯೇ ಅಂತ ಕಳವಳಪಡುತ್ತಿದ್ದೆ...” ನದಿ ದಾಟುತ್ತಲೇ ಮಗ ಜ್ಞಾಪಿಸಿಕೊಳ್ಳುತ್ತಾನೆ.

ಅಪ್ಪನೊಳಗೂ ಇನ್ಯಾವುದೋ ಒಂದು ಭಾವಸ್ಫುರಣ ಉಂಟಾಗಿ ಮನಸ್ಸು ಒದ್ದೆಯಾಗಿರುತ್ತದೆ. ಬಹುಶಃ ಅವನ ಮನಸ್ಸಿನಲ್ಲೂ ಇರುವುದು ಮಗನ ಎದೆಯೊಳಗೆ ಹರಿದಾಡುತ್ತಿರುವ ಬೇಗುದಿಯೇ. ಅವನ ಕಣ್ಣುಗಳಲ್ಲಿರುವುದು ತಂದೆಯಾಗಿ ತಾನು ಮಾಡಬೇಕಾದ್ದನ್ನು ಮಾಡಿದ್ದೇನೆಯೇ ಎಂಬ ಪ್ರಾಮಾಣಿಕ ಪ್ರಶ್ನೆ. ನದಿಯನ್ನು ದಾಟುತ್ತಲೇ ಅಪ್ಪ-ಮಗ ಪರಸ್ಪರ ಮಾತುಗಳೇ ಇಲ್ಲದೆ ತಮ್ಮತಮ್ಮ ನೆಲೆಗಳನ್ನು, ಪಾತ್ರಗಳನ್ನು ಅರ್ಥೈಸಿಕೊಳ್ಳುವ ರೀತಿ ಮಾತ್ರ ಅದ್ಭುತ. ನದಿಯನ್ನು ದಾಟಿ ಮಗನ ಹೆಗಲಿನಿಂದ ಇಳಿದ ತಂದೆಗೆ ಆತನ ಮುಖ ನೋಡುವ ಧೈರ್ಯ ಇಲ್ಲ. ಮಗನಿಗೂ ಅಪ್ಪನ ಕಣ್ಣುಗಳನ್ನು ನೋಡುವ ಧೈರ್ಯ ಇಲ್ಲ. “ಈ ಪೋಸ್ಟ್ ಬ್ಯಾಗಿಗಿಂತಲೂ ನೀನೇ ಬಹಳ ಹಗುರ ಇದ್ದೀಯಾ” ಎಂದು ತಂದೆಯ ಮಾತುತಪ್ಪಿಸಲು ಪ್ರಯತ್ನಿಸುತ್ತಾನೆ.

ಅಪ್ಪನೆಂದರೆ ಹಾಗೆಯೇ. ಅದೊಂದು ವಿಚಿತ್ರ ವ್ಯಕ್ತಿತ್ವ. ಅಂಚೆಯಣ್ಣನ ಎಳೆಯ ಮಗನಿಗೆ ಕಂಡ ಹಾಗೆ ಅದೊಂದು ಭಯಂಕರ ಆಕೃತಿ. ಹೆಚ್ಚೆಂದರೆ ಅದು ಜಗತ್ತಿನ ಎಲ್ಲ ಕೆಲಸಗಳನ್ನೂ ಮಾಡಬಲ್ಲ, ಬೇಕಾದ್ದನ್ನು ತಂದುಕೊಡಬಲ್ಲ ಸೂಪರ್‍ಮ್ಯಾನ್ ಆಗಬಹುದು. ಇನ್ನು ಕೆಲವರಿಗೆ ಅದೊಂದು ಒರಟು ಮನುಷ್ಯ. ಅಮ್ಮನೊಂದಿಗೆ ಇರಬಹುದಾದ ಸಲುಗೆಯನ್ನು ಈ ವ್ಯಕ್ತಿಯೊಂದಿಗೆ ಇಟ್ಟುಕೊಳ್ಳುವುದು ಕಷ್ಟ. ಅಮ್ಮನಲ್ಲಾದರೆ ಏನು ಬೇಕಾದರೂ ಹೇಳಿಕೊಳ್ಳಬಹುದು. ಅಪ್ಪನೊಂದಿಗೆ ಮಾತಾಡುವುದಕ್ಕೆ ಅಮ್ಮನ ವಕಾಲತ್ತು ಬೇಕು. ಅನೇಕ ಸಲ ಅಮ್ಮನಿಗೂ ಬಚಾವಾಗುವುದಕ್ಕೆ ಈ ಅಪ್ಪನೆಂಬ ಗುರಾಣಿಯೇ ಬೇಕು. ‘ಇರು, ಅಪ್ಪ ಬರಲಿ, ಎಲ್ಲ ಹೇಳುತ್ತೇನೆ’ – ಆಕೆ ಹಾಗೆಂದು ಮಕ್ಕಳ ಬಹುಪಾಲು ಉಪಟಳಗಳನ್ನು ನಿಯಂತ್ರಿಸಿಯಾಳು.

ಆದರೆ ಅಪ್ಪನೆಂದರೆ ಅಷ್ಟೇ ಅಲ್ಲವೆಂದು ಮನದಟ್ಟು ಆಗುವ ಹೊತ್ತಿಗೆ ಬದುಕಿನ ಅರ್ಧ ಭಾಗವೇ ಸವೆದುಹೋಗಿರುತ್ತದೋ ಏನೋ! ಅಮ್ಮನೆಂದರೆ ಸುಲಭವಾಗಿ ಅರ್ಥವಾಗುವ ಸುಂದರ ಭಾವಗೀತೆ; ಅಪ್ಪನಾದರೋ ತಕ್ಷಣಕ್ಕೆ ಅರ್ಥವಾಗದ ಸುದೀರ್ಘ ಕಥನಕವನ. ಅಮ್ಮನೆಂದರೆ ಎರಡೂ ದಡಗಳಿಗೆ ತಂಪನ್ನುಣಿಸುತ್ತಾ ಮೆಲ್ಲಮೆಲ್ಲನೆ ಹರಿಯುವ ತಣ್ಣನೆಯ ತೊರೆ; ಅಪ್ಪನಾದರೋ ಆಳ-ಅಗಲ ತಕ್ಷಣಕ್ಕೆ ಅರಿವಿಗೆ ಬಾರದೆ ತನ್ನಷ್ಟಕ್ಕೇ ಹರಿಯುತ್ತಿರುವ ಘನಗಂಭೀರ ವಿಸ್ತಾರ ನದಿ. ಆತನ ಮುಖವನ್ನಷ್ಟೇ ನೋಡಿ ಏನನ್ನಾದರೂ ಅರ್ಥ ಮಾಡಿಕೊಳ್ಳುವುದು ಕಷ್ಟ. ಏಕೆಂದರೆ ಮುಖದಲ್ಲೇ ಆತ ಎಲ್ಲವನ್ನೂ ವ್ಯಕ್ತಪಡಿಸಲಾರ.

‘ನಿನ್ನನ್ನು ಪ್ರೀತಿಸುತ್ತೇನೆ ಎಂದು ತಂದೆ ಹೇಳುವುದಿಲ್ಲ, ಆದರೆ ಅದನ್ನು ಮಾಡುತ್ತಲೇ ಇರುತ್ತಾನೆ’ ಎಂಬ ಮಾತಿದೆ. ಹೌದು, ಆತ ಮಾತಿನಲ್ಲೇ ಎಲ್ಲವನ್ನೂ ಹೇಳಲಾರ. ಹತ್ತಿರದಿಂದ ನೋಡುವವರಿಗೆ ಕಂಡೀತು ಅಷ್ಟೆ. ತನ್ನೊಳಗೆ ತಾನೇ ಕರಗಿ ನೀರಾಗಿ ಮತ್ತೆ ಗಟ್ಟಿಯಾಗುವ ಮೇಣದಂತೆ ಅವನು- ಸಂತೋಷವಾದರೂ, ದುಃಖವಾದರೂ ಹೊರಮುಖದಲ್ಲಿ ಪ್ರಕಟವಾಗುವುದು ತುಸು ಅಪರೂಪವೇ. ಪ್ರಕಟವಾದ ಕ್ಷಣಕ್ಕೆ ಆತ ಅಪ್ಪನಾಗಿ ಉಳಿಯದೆ ಅಮ್ಮನಾಗುತ್ತಾನೆ: ಎಂಬಲ್ಲಿಗೆ ವಾಸ್ತವವಾಗಿ ಅಪ್ಪ-ಅಮ್ಮ ಇಬ್ಬರೂ ಒಂದೇ ಎಂದಾಯಿತು. ಗಂಡಿನೊಳಗೊಂದು ಹೆಣ್ಣು, ಹೆಣ್ಣಿನೊಳಗೊಬ್ಬ ಗಂಡು ಇರುವುದರಿಂದ ಅಲ್ಲವೇ ಪ್ರಕೃತಿ-ಪುರುಷರ ಪರಿಕಲ್ಪನೆ, ಆಕಾಶ-ಭೂಮಿಯ ತತ್ವಗಳು ಸಾಧ್ಯವಾಗಿರುವುದು? 

‘ಆತ್ಮಾ ವೈ ಪುತ್ರ ನಾಮಾಸಿ’- ಅಪ್ಪನೇ ಮಗನಾಗಿ ಹುಟ್ಟುತ್ತಾನೆ: ಇದು ಪೂರ್ವಿಕರ ನಂಬಿಕೆ. ತಂದೆಯಾಗುವುದು ಕಷ್ಟವಲ್ಲವಂತೆ, ತಂದೆಯಾಗಿರುವುದು ಕಷ್ಟ. ಎಳೆಯ ಮಗುವಿನಿಂದ ತೊಡಗಿ ವಯೋವೃದ್ಧರವರೆಗೆ ಎಲ್ಲ ಹೆಣ್ಣುಮಕ್ಕಳನ್ನೂ ‘ಅಮ್ಮಾ’ ಎಂದು ಸಂಬೋಧಿಸಬಹುದು. ಆದರೆ ‘ಅಪ್ಪ’ ಎಂದು ಕರೆಯುವುದು ಒಬ್ಬನನ್ನೇ. ಅದಕ್ಕೆ ಆ ಸ್ಥಾನ ಅಷ್ಟು ವಿಶಿಷ್ಟವಾದದ್ದು. ಆ ಸ್ಥಾನಕ್ಕೆ ತಲುಪುವುದು ಬದುಕಿನ ಸಹಜ ಪ್ರಕ್ರಿಯೆ, ಆದರೆ ತಂದೆಯಾಗಿ ಮಾಡಬೇಕಾದ್ದನ್ನು ಆತ್ಮತೃಪ್ತಿ ದಕ್ಕುವಂತೆ ಮಾಡುವುದು ಕೊಂಚ ನಿಧಾನಪ್ರಕ್ರಿಯೆ. ತಂದೆಯಾಗಿ ಯಾವ ಕರ್ತವ್ಯ ನಿರ್ವಹಿಸಬೇಕೋ ಅದನ್ನು ಸರಿಯಾಗಿ ನಿರ್ವಹಿಸದವನು  ಮುಂದೆ ತನ್ನ ಮಕ್ಕಳಿಂದಲೂ ಅಂತಹದನ್ನು ನಿರೀಕ್ಷಿಸಲಾಗದು.

ಮಕ್ಕಳು ಹದಿಹರೆಯ ದಾಟಿ ಪ್ರಾಯಪ್ರಬುದ್ಧರಾದ ಮೇಲೆ ಅಪ್ಪ ಅವರನ್ನು ಸ್ನೇಹಿತರಂತೆ ನೋಡಿಕೊಳ್ಳಬೇಕೆಂಬುದೊಂದು ಲೋಕರೂಢಿ. ಅಪ್ಪ ಗೆಳೆಯನೂ ಆಗಿರುವುದರಿಂದಲೇ ಅವನೊಳಗೊಬ್ಬ ಮಾರ್ಗದರ್ಶಕನೂ ಸಲಹೆಗಾರನೂ ಇರುತ್ತಾನೆ. ಅಪ್ಪ ಪ್ರತಿಯೊಬ್ಬನ ಬೆನ್ನಹಿಂದೆ ಇರುವ ಒಬ್ಬ ಫ್ರೆಂಡ್, ಗೈಡ್ ಅಂಡ್ ಫಿಲಾಸಫರ್. ಹಾಗೆಂದು ಆತ ವಾಚಾಳಿಗಳಂತೆ ಎಲ್ಲವನ್ನೂ ಮಾತಿನಲ್ಲೇ ಹೇಳಿರುತ್ತಾನೆ ಎಂದೇನೂ ಇಲ್ಲ.  ಅವನ ಮೌನವನ್ನೂ, ಮೌನದೊಳಗಿರುವ ಸೂಚನೆಗಳನ್ನೂ ಅರ್ಥಮಾಡಿಕೊಳ್ಳಬಲ್ಲವರೇ ಜೀವನದಲ್ಲಿ ಯಶಸ್ಸನ್ನು ಕಂಡಾರು. ಅಪ್ಪ ಎಂದರೆ ಅಂತರಂಗದಲ್ಲಿ ಸದಾ ಬೆಳಗುತ್ತಿರುವ ಹೊಂಬೆಳಕು. ಆ ಬೆಳಕು ಒಳಗಿನಿಂದಲೇ ಪ್ರಭೆಯನ್ನು ಹೊಮ್ಮಿಸುವ ಮಿಂಚುಹುಳ ಆಗಿರುವುದರಿಂದಲೇ ನಮ್ಮ ವ್ಯಕ್ತಿತ್ವವನ್ನೂ ಬೆಳಗುತ್ತದೆ, ಭವಿಷ್ಯದ ದಾರಿಯನ್ನೂ ತೋರಿಸುತ್ತದೆ. ಆ ಬೆಳಕು ಮುಗಿಯುವುದೇ ಇಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ಮೇ 22, 2022

UGC-NET ಎಂಬ ಆಕರ್ಷಕ ಗಮ್ಯ

20 ಮೇ 2022ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ

ನೆಟ್ (NET) ಪರೀಕ್ಷೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಪ್ರತೀ ವರ್ಷ ಏರುತ್ತಲೇ ಇದೆ. ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಸಾಫ್ಟ್ ವೇರ್ ಇಂಜಿನಿಯರುಗಳಂತೆ ಸಂಬಳ ಪಡೆಯುತ್ತಿರುವುದು, ಮತ್ತು ಇಂತಹ ಹುದ್ದೆಗೆ ಆಯ್ಕೆಯಾಗಲು ನೆಟ್ ಪರೀಕ್ಷೆ ಪ್ರಾಥಮಿಕ ಅರ್ಹತೆಯಾಗಿರುವುದೇ ಇದಕ್ಕೆ ಪ್ರಮುಖ ಕಾರಣ. ಇದು ರಾಷ್ಟ್ರೀಯ ಅರ್ಹತಾ ಪರೀಕ್ಷೆ. ಯುಜಿಸಿ ಪರೀಕ್ಷೆ, ನೆಟ್ ಪರೀಕ್ಷೆ ಎಂದೆಲ್ಲ ಪ್ರಸಿದ್ಧಿ. 2018ರವರೆಗೆ ಈ ಪರೀಕ್ಷೆಯನ್ನು ಯುಜಿಸಿ- ಅಂದರೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ನೇರವಾಗಿ ನಡೆಸುತ್ತಿತ್ತು. ಈಗ ಯುಜಿಸಿಯ ಪರವಾಗಿ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸುತ್ತಿದೆ. ವಿಜ್ಞಾನ ವಿಷಯಗಳ ಎನ್‍ಇಟಿ ಪರೀಕ್ಷೆಯನ್ನು ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (CSIR) ನಡೆಸುತ್ತದೆ.

ಯುಜಿಸಿ-ಎನ್‍ಇಟಿ ಹಿಂದಿನಿಂದಲೂ ಒಂದು ಪ್ರತಿಷ್ಠಿತ ಪರೀಕ್ಷೆ. ಅದನ್ನು ತೇರ್ಗಡೆಯಾದವರೆಲ್ಲರಿಗೂ ಸರ್ಕಾರಿ ನೇಮಕಾತಿ ಖಾತ್ರಿಯಲ್ಲವಾದರೂ, ತೇರ್ಗಡೆಯಾಗುವುದೇ ಒಂದು ಹೆಮ್ಮೆಯ ಸಂಗತಿ. ಒಮ್ಮೆ ತೇರ್ಗಡೆಯಾದರೆ ಅದು ಜೀವಮಾನದ ಅರ್ಹತೆ - ಅದಕ್ಕೆ expiry date ಇಲ್ಲ; ಅವಕಾಶ ಕೂಡಿ ಬಂದಾಗ ಈ ಅರ್ಹತೆ ಬೆನ್ನಿಗೆ ನಿಲ್ಲುತ್ತದೆ. ಖಾಸಗಿ ಕಾಲೇಜುಗಳೂ ನೆಟ್ ತೇರ್ಗಡೆಯಾದ ಅಭ್ಯರ್ಥಿಗಳಿಗೇ ಮಣೆ ಹಾಕುತ್ತವೆ. ಅತ್ಯುನ್ನತ ಶ್ರೇಣಿಯಲ್ಲಿ ನೆಟ್ ತೇರ್ಗಡೆಯಾದವರು ಪಿಎಚ್‍ಡಿ ಸಂಶೋಧನೆ ಕೈಗೊಳ್ಳುವುದಕ್ಕೆ ಸರ್ಕಾರದಿಂದ ಆಕರ್ಷಕ ಶಿಷ್ಯವೇತನ (JRF) ಪಡೆಯುವುದೂ ನೆಟ್ ಜನಪ್ರಿಯತೆಗೆ ಇನ್ನೊಂದು ಕಾರಣ.

ಕಷ್ಟದ ಪರೀಕ್ಷೆಯೇ?

ಕಷ್ಟವೆನ್ನುವವರಿಗೆ ಕಷ್ಟ, ಸುಲಭವೆನ್ನುವವರಿಗೆ ಸುಲಭ. ಈಜು ಬಲ್ಲವರಿಗೆ ಅದೊಂದು ಆಟ, ನಿಂತು ನೋಡುವವರಿಗೆ ಆತಂಕ. ಆದರೆ ಇದು ಎಂ.ಎ., ಎಂಎಸ್ಸಿ ಪರೀಕ್ಷೆಗಳನ್ನು ಬರೆದಂತೆ ಅಲ್ಲ. ರಾಷ್ಟೀಯ ಅರ್ಹತಾ ಪರೀಕ್ಷೆ. ತೇರ್ಗಡೆಯಾದವರು ದೇಶದ ಯಾವ ಭಾಗದಲ್ಲಾದರೂ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಬಹುದು. ಸ್ನಾತಕೋತ್ತರ ಹಂತದ ಪಠ್ಯಕ್ರಮವೇ ಆದರೂ, ಪರೀಕ್ಷಾ ವಿಧಾನ ಹಾಗೂ ಪ್ರಶ್ನೆಗಳ ಸಂಕೀರ್ಣತೆಯಿಂದಾಗಿ ಗಟ್ಟಿ ಮನಸ್ಸು, ಅಪಾರ ಬದ್ಧತೆ ಹಾಗೂ ಶ್ರದ್ಧೆಯ ತಯಾರಿಯನ್ನು ಅಪೇಕ್ಷಿಸುತ್ತದೆ.

ಯಾರು ಬರೆಯಬಹುದು?

ಸ್ನಾತಕೋತ್ತರ ಪದವೀಧರರು ಅಥವಾ ಅದರ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಈ ಪರೀಕ್ಷೆ ಬರೆಯಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ. 55, ಒಬಿಸಿ/ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳು ಶೇ. 50 ಅಂಕ ಪಡೆದಿರಬೇಕು. ಸ್ನಾತಕೋತ್ತರ ಪದವಿ ಅಂತಿಮ ವರ್ಷದಲ್ಲೇ ನೆಟ್ ತೇರ್ಗಡೆಯಾದರೆ, ಪದವಿ ಫಲಿತಾಂಶ ಬಂದಮೇಲಷ್ಟೇ ಅರ್ಹತಾ ಪ್ರಮಾಣಪತ್ರ ದೊರೆಯುತ್ತದೆ. 

ನೆಟ್ ಬರೆದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆಯುವುದಕ್ಕೆ ಗರಿಷ್ಠ ವಯೋಮಿತಿ ಇಲ್ಲ. ಆದರೆ ಸಂಶೋಧನಾ ಫೆಲೋಷಿಪ್ (ಜೆಆರ್‍ಎಫ್) ಪಡೆಯಲು ಅರ್ಹರಾಗಬೇಕೆಂದರೆ 30 ವರ್ಷದ ಒಳಗಿನವರಾಗಿರಬೇಕು. ಒಬಿಸಿ/ಎಸ್‍ಸಿ/ಎಸ್‍ಟಿ/ಭಿನ್ನಲಿಂಗಿ ಅಭ್ಯರ್ಥಿಗಳಿಗೆ 35 ವರ್ಷದವರೆಗೆ ಅವಕಾಶವಿದೆ.

ಹೇಗಿರುತ್ತದೆ ನೆಟ್?

ಈಗ ಎನ್‍ಇಟಿ ಪರೀಕ್ಷೆ ಆನ್‍ಲೈನ್ ಮಾದರಿಯಲ್ಲಿ ನಡೆಯುತ್ತದೆ. ಕಲೆ/ವಾಣಿಜ್ಯ/ಸಾಹಿತ್ಯ ವಿಷಯಗಳಲ್ಲಿ ಎರಡು ಪ್ರತ್ಯೇಕ ಪತ್ರಿಕೆಗಳಿದ್ದು ಒಟ್ಟು ಮೂರು ಗಂಟೆಯ ಅವಧಿ ಇರುತ್ತದೆ. ಪ್ರಶ್ನೆಗಳು ಬಹುಆಯ್ಕೆಯ ವಸ್ತುನಿಷ್ಠ ಮಾದರಿಯವು. ಮೊದಲನೇ ಪತ್ರಿಕೆ ಎಲ್ಲ ವಿಷಯಗಳ ಅಭ್ಯರ್ಥಿಗಳಿಗೂ ಸಾಮಾನ್ಯ. ಇದರಲ್ಲಿ ಎರಡು ಅಂಕಗಳ 50 ಪ್ರಶ್ನೆಗಳಿದ್ದು ಅವು ಬೋಧನೆ ಹಾಗೂ ಸಂಶೋಧನ ಕೌಶಲಗಳಿಗೆ ಸಂಬಂಧಪಟ್ಟವು. ಎರಡನೇ ಪತ್ರಿಕೆ ಆಯಾ ಅಭ್ಯರ್ಥಿಗಳ ಸ್ನಾತಕೋತ್ತರ ಪದವಿಯಲ್ಲಿ ಓದಿದ ವಿಷಯಗಳಿಗೆ ಸಂಬಂಧಪಟ್ಟವು; ಉದಾ: ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ, ಕನ್ನಡ, ಇಂಗ್ಲಿಷ್, ಇತ್ಯಾದಿ. ಇದರಲ್ಲಿ ತಲಾ ಎರಡು ಅಂಕಗಳ 100 ಪ್ರಶ್ನೆಗಳಿರುತ್ತವೆ. ಎರಡೂ ಪರೀಕ್ಷೆಗಳ ನಡುವೆ ಬ್ರೇಕ್ ಇಲ್ಲ. ಪ್ರಶ್ನೆಗಳ ನಡುವೆ ಆಯ್ಕೆ ಇಲ್ಲ, ನೆಗೆಟಿವ್ ಮಾರ್ಕಿಂಗ್ ಕೂಡ ಇಲ್ಲ.

ವಿಜ್ಞಾನ ವಿಷಯಗಳಲ್ಲಿ ಮೂರು ಗಂಟೆ ಅವಧಿಯ ಒಂದೇ ಪರೀಕ್ಷೆ. ಎರಡು ಪತ್ರಿಕೆಗಳಿಲ್ಲ. 200 ಅಂಕಗಳ ಬಹು ಆಯ್ಕೆಯ ವಸ್ತುನಿಷ್ಠ ಮಾದರಿಯ ಪತ್ರಿಕೆ. ಇದರಲ್ಲಿ ಮೂರು ವಿಭಾಗಗಳಿರುತ್ತವೆ: ಮೊದಲನೇ ಭಾಗ (30 ಅಂಕ) ಎಲ್ಲರಿಗೂ ಸಾಮಾನ್ಯ; ಎರಡನೇ ಭಾಗ (70 ಅಂಕ) ಅವರವರ ಎಂಎಸ್ಸಿ ವಿಷಯಗಳಿಗೆ ಸಂಬಂಧಿಸಿದ್ದು; ಮೂರನೇ ಭಾಗ (100 ಅಂಕ) ಅದೇ ವಿಷಯ, ಕೊಂಚ ಹೆಚ್ಚಿನ ಸಂಕೀರ್ಣತೆ ಹೊಂದಿರುವ ಪ್ರಶ್ನೆಗಳಿರುತ್ತವೆ. ಇಲ್ಲಿ ಪ್ರಶ್ನೆಗಳ ಆಯ್ಕೆಯೂ ಇರುತ್ತದೆ, ನೆಗೆಟಿವ್ ಮಾರ್ಕಿಂಗ್ ಕೂಡ ಇರುತ್ತದೆ.

ತಯಾರಿ ಹೇಗೆ?

ಎನ್‍ಇಟಿ ಪರೀಕ್ಷೆಗೆ ಕನಿಷ್ಠ ಆರು ತಿಂಗಳ ಗಂಭೀರ ತಯಾರಿ ಬೇಕು. ಮಾನವಿಕ ವಿಷಯಗಳ ಪಠ್ಯಕ್ರಮ www.ugcnetonline.in ಜಾಲತಾಣದಲ್ಲಿಯೂ, ವಿಜ್ಞಾನ ವಿಷಯಗಳ ಪಠ್ಯಕ್ರಮ https://csirhrdg.res.in ಜಾಲತಾಣದಲ್ಲಿಯೂ ಲಭ್ಯವಿದೆ. ತಯಾರಿಯ ಮೊದಲು ಪಠ್ಯಕ್ರಮದ ಸಂಪೂರ್ಣ ಪರಿಚಯ ಮಾಡಿಕೊಳ್ಳುವುದು ಅಗತ್ಯ.

ನೆಟ್ ಸಾಮಾನ್ಯ ಪತ್ರಿಕೆಯ ಪಠ್ಯಕ್ರಮದಲ್ಲಿ 10 ಅಧ್ಯಾಯಗಳಿವೆ. ಬೋಧನೆ ಹಾಗೂ ಸಂಶೋಧನೆಯ ಕೌಶಲ, ವಿಷಯ ಗ್ರಹಿಕೆ, ಸಂವಹನ, ಪ್ರಾಥಮಿಕ ಗಣಿತ, ತಾರ್ಕಿಕ ಚಿಂತನೆ, ದತ್ತಾಂಶ ವಿಶ್ಲೇಷಣೆ, ಮಾಹಿತಿ ಸಂವಹನ ತಂತ್ರಜ್ಞಾನ (ICT), ಅಭಿವೃದ್ಧಿ ಮತ್ತು ಪರಿಸರ, ಉನ್ನತ ಶಿಕ್ಷಣ ವ್ಯವಸ್ಥೆ- ಹೀಗೆ ವೈವಿಧ್ಯಮಯ ವಿಷಯಗಳಿರುತ್ತವೆ. ಐಚ್ಛಿಕ ವಿಷಯದ ಪಠ್ಯಕ್ರಮ ಸ್ನಾತಕೋತ್ತರ ಕೋರ್ಸಿಗೆ ಸಮಾನವಾಗಿದ್ದು, ಸಮಗ್ರ ಹಾಗೂ ಆಳವಾದ ಅಧ್ಯಯನ ಅಗತ್ಯ.

ಒಂದು ವೇಳಾಪಟ್ಟಿಯನ್ನು ಹಾಕಿಕೊಂಡು ದಿನದಲ್ಲಿ ಕನಿಷ್ಠ 3-4 ಗಂಟೆಯನ್ನಾದರೂ ಅಭ್ಯಾಸಕ್ಕೆ ಮೀಸಲಿಡುವುದು ಒಳ್ಳೆಯದು. ಪರೀಕ್ಷೆ ವಸ್ತುನಿಷ್ಠ ಮಾದರಿಯದ್ದಾಗಿರುವುದರಿಂದ ಸಣ್ಣಸಣ್ಣ ವಿವರಗಳಿಗೂ ಹೆಚ್ಚಿನ ಗಮನ ಕೊಡುವುದು ಮುಖ್ಯ. ಓದುತ್ತಲೇ ನೋಟ್ಸ್ ಮಾಡಿಕೊಳ್ಳುವುದು ಕೊನೆಯ ಕ್ಷಣದ ರಿವಿಶನ್‍ಗೆ ಬಹಳ ಅಗತ್ಯ. ಈಗ ಮಾರುಕಟ್ಟೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಸಾಕಷ್ಟು ಪುಸ್ತಕಗಳು ಲಭ್ಯ. ಹತ್ತಾರು ಪುಸ್ತಕಗಳನ್ನು ತಂದು ಗುಡ್ಡೆ ಹಾಕಿ ಗೊಂದಲಕ್ಕೆ ಬೀಳುವುದಕ್ಕಿಂತ ಉತ್ತಮ ಗುಣಮಟ್ಟದ ಒಂದೋ ಎರಡೋ ಪುಸ್ತಕ ಸಾಕು. 

ಹಳೆಯ ಪ್ರಶ್ನೆಪತ್ರಿಕೆಗಳ ಅಭ್ಯಾಸ ಅತ್ಯಂತ ಮುಖ್ಯ. ಕನಿಷ್ಠ 7-8 ವರ್ಷಗಳ ಹಿಂದಿನ ಎಲ್ಲ ಪ್ರಶ್ನೆಪತ್ರಿಕೆಗಳನ್ನು ಬಿಡಿಸಲು ಕಲಿತರೆ ಪರೀಕ್ಷೆ ತೇರ್ಗಡೆಯಾಗುವುದರಲ್ಲಿ ಅನುಮಾನವೇ ಇಲ್ಲ. ಆಯಾ ಪರೀಕ್ಷೆಗಳ ವೆಬ್‍ಸೈಟಿನಿಂದ ಅನೇಕ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗೆ ನೋಡಿದರೆ ಈ ಪರೀಕ್ಷೆಗೆ ಪ್ರತ್ಯೇಕ ಕೋಚಿಂಗ್ ಅನಿವಾರ್ಯವೇನೂ ಅಲ್ಲ. ಪರಿಶ್ರಮಪಟ್ಟು ಸ್ವಂತ ಅಧ್ಯಯನ ಮಾಡಿದರೆ ಸಾಕು. ಈಗಂತೂ ಇಂಟರ್ನೆಟ್ಟಲ್ಲಿ ಧಾರಾಳ ಅಭ್ಯಾಸ ಸಾಮಗ್ರಿಗಳು, ಮಾಕ್ ಟೆಸ್ಟ್ ಗಳು ದೊರೆಯುತ್ತವೆ. ತೀರಾ ಅರ್ಥವಾಗದ ವಿಷಯಗಳಿದ್ದರೆ ಸ್ನೇಹಿತರ ಅಥವಾ ಅಧ್ಯಾಪಕರ ಬಳಿ ಪಾಠ ಹೇಳಿಸಿಕೊಳ್ಳಬಹುದು. ವಿದ್ಯಾರ್ಥಿಗಳಾಗಿರುವಾಗಲೇ ನೆಟ್ ಬರೆಯುವುದು ತಯಾರಿ ದೃಷ್ಟಿಯಿಂದ ತುಂಬ ಒಳ್ಳೆಯದು.

ಏನಿದು ಜೆಆರ್‍ಎಫ್?

ನೆಟ್ ಪರೀಕ್ಷೆಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಜೂನಿಯರ್ ರಿಸರ್ಚ್ ಫೆಲೋಷಿಪ್ (JRF) ಎಂಬ ಬಂಪರ್ ಬಹುಮಾನವಿದೆ. ಪಿಎಚ್‍ಡಿ ಮಾಡಲು ಯುಜಿಸಿ ಪ್ರತೀ ತಿಂಗಳೂ ಕೈತುಂಬ ಫೆಲೋಷಿಪ್ ನೀಡುತ್ತದೆ. ಮೊದಲ ಎರಡು ವರ್ಷ ಪ್ರತೀ ತಿಂಗಳೂ ರೂ. 31,000, ಮುಂದಿನ ಮೂರು ವರ್ಷ (SRF) ಪ್ರತೀ ತಿಂಗಳೂ ರೂ. 35,000 ಲಭ್ಯ. ಬೇರೆ ಭತ್ಯೆಗಳೂ ಇವೆ. ಯಾವ ಉದ್ಯೋಗ ಹಿಡಿಯುವ ಆತಂಕವೂ ಇಲ್ಲದೆ ನೆಮ್ಮದಿಯಾಗಿ ಸಂಶೋಧನೆಯಲ್ಲಿ ನಿರತರಾಗಬಹುದು. ಜೆಆರ್‍ಎಫ್ ಬಯಸುವವರು ನೆಟ್ ಅರ್ಜಿ ತುಂಬುವಾಗ ಮಾತ್ರ ‘ಅಸಿಸ್ಟೆಂಟ್ ಪ್ರೊಫೆಸರ್ & ಜೆಆರ್‍ಎಫ್’ ಎಂಬ ಅಂಕಣವನ್ನು ಕಡ್ಡಾಯ ತುಂಬಬೇಕು. ಕೇವಲ ‘ಅಸಿಸ್ಟೆಂಟ್ ಪ್ರೊಫೆಸರ್’ ಎಂದು ತುಂಬಿದರೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೂ ಫೆಲೋಷಿಪ್‍ಗೆ ಪರಿಗಣಿಸುವುದಿಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

ಸೋಮವಾರ, ಮೇ 9, 2022

ಮೌಲ್ಯಗಳ ಮಹಾಸಾಗರ ವಿಶ್ವಕವಿ ರವೀಂದ್ರರು

7-13 ಮೇ 2022ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ

ಎಲ್ಲಿ ಮನಕಳುಕಿರದೊ, ಎಲ್ಲಿ ತಲೆಬಾಗಿರದೊ,
ಎಲ್ಲಿ ತಿಳಿವಿಗೆ ತೊಡಕು ತೋರದಿರುವಲ್ಲಿ;
ಎಲ್ಲಿ ಮನೆಯಿಕ್ಕಟ್ಟು, ಸಂಸಾರ ನೆಲೆಗಟ್ಟು,
ದೂಳೊಡೆಯದಿಹುದೊ, - ತಾನಾ ನಾಡಿನಲ್ಲಿ

ಹೀಗೆ ಮುಂದುವರಿಯುತ್ತದೆ ವಿಶ್ವಕವಿ ರವೀಂದ್ರರ ‘ಪ್ರಾರ್ಥನೆ’ ಎಂಬ ಪ್ರಸಿದ್ಧ ಗೀತೆ (ಕನ್ನಡಾನುವಾದ ಎಂ. ಎನ್. ಕಾಮತ್). ತಮ್ಮ ಸುಂದರ ನಾಡಿನ ಕನಸನ್ನು ಬಿಚ್ಚಿಡುತ್ತಲೇ ಕೊನೆಗೆ, ‘ಅಲ್ಲಿಯಾ ಬಂಧನರಹಿತ ಸುಖದ ಸ್ವರ್ಗದಲಿ, ಪಾಲಿಸೈ ಪಿತ! ನಮ್ಮ ನಾಡೆಚ್ಚರಿಸಲಿ’ ಎಂದು ಮುಕ್ತಾಯಗೊಳಿಸುತ್ತಾರೆ. ಇದು ಅವರಿಗೆ ನೋಬೆಲ್ ಪ್ರಶಸ್ತಿ ತಂದುಕೊಟ್ಟ ‘ಗೀತಾಂಜಲಿ’ಯ ಕವಿತೆಗಳಲ್ಲೊಂದು ಕೂಡ.

ಹಾಗೆ ನೋಡಿದರೆ, ‘ಗೀತಾಂಜಲಿ’ಯಲ್ಲಿರುವ ಎಲ್ಲ ಕವಿತೆಗಳೂ ‘ಪ್ರಾರ್ಥನೆ’ಗಳೇ. ಅವೆಲ್ಲವೂ ರವೀಂದ್ರರು ತಮ್ಮ ಕಲ್ಪನೆಯ ದೇವರೆದುರು ಮಾಡಿಕೊಂಡ ನಿವೇದನೆಗಳೇ. ‘ನಿನ್ನ ಕರುಣೆಗೆಣೆಯಿಲ್ಲ ಪ್ರಭುವೆ/ ನೀನೆನ್ನ ಅನಂತವಾಗಿಸಿರುವೆ/ ಕಾಯವೆಂಬ ಗಡಿಗೆಯ ಖಾಲಿಯಾಗಿಸಿ/ ನವ ಚೈತನ್ಯವ ತುಂಬಿರುವೆ// ಬರಿದೆ ಬಿದ್ದ ಕೊಳಲು ನಾನು/ ಗಿರಿ ಗಹ್ವರಕೆ ಕೊಂಡೊಯ್ವೆ ನೀನು/ ಹೊಸಗಾಳಿಯ ಉಸಿರ ತುಂಬಿ/ ಜೀವರಾಗ ನೀ ನುಡಿಸಿರುವೆ’ ಎಂದು ಒಂದೆಡೆ ಹೇಳಿದರೆ, ಇನ್ನೊಂದೆಡೆ ‘ನಿನ್ನ ಕಾಣ್ಕೆಯಲಿ ನನ್ನ ಕವಿತನದ ಬಿಮ್ಮು ನಾಚಿ ಅಳಿಯಿತು’ ಎನ್ನುತ್ತಾರೆ. ಮತ್ತೊಂದೆಡೆ, ‘ಪ್ರಾರ್ಥಿಸುವೆ ನಿನ್ನ ಪ್ರಭುವೆ/ ಬಡಿಬಡಿದು ಎಚ್ಚರಿಸು/ ನನ್ನೆದೆಯ ಅರಿವಿನ ಬೇರು’ ಎಂದು ಬೇಡಿಕೊಳ್ಳುತ್ತಾರೆ (ಎಲ್ಲವೂ ಸುಧಾ ಅಡುಕಳ ಅವರ ಕನ್ನಡಾನುವಾದ).

ಅವರಿಗೆ ದೇವರೆಂದರೆ ಶುದ್ಧ ನಿರಾಕಾರ ಸ್ವರೂಪಿ; ಅಂತರಂಗವನ್ನು ಬೆಳಗುವ, ಒಳಗನ್ನು ಸದಾ ಎಚ್ಚರದಲ್ಲಿರಿಸುವ ಅಗೋಚರ ಶಕ್ತಿ. ಒಂದು ವೇಳೆ ಭಗವಂತನನ್ನು ಪ್ರತ್ಯಕ್ಷವಾಗಿ ನೋಡುವುದು ಸಾಧ್ಯವಾದರೆ ಅದು ಪ್ರಕೃತಿಯ ಮೂಲಕ ಎಂಬುದು ಅವರು ಕೊನೆಯವರೆಗೂ ಇಟ್ಟುಕೊಂಡಿದ್ದ ನಂಬಿಕೆ. ಅವರ ಕೃತಿಗಳಲ್ಲೆಲ್ಲ ಗಾಢವಾಗಿ ಎದ್ದುಕಾಣುವುದು ಪ್ರಕೃತಿಯೆಡೆಗಿನ ಅನಂತ ಪ್ರೇಮ.

ಗುರುದೇವ, ಕವಿಗುರು, ವಿಶ್ವಕವಿ- ಹೀಗೆಲ್ಲ ಜಗತ್ತಿನಿಂದ ಕರೆಸಿಕೊಂಡ ರವೀಂದ್ರನಾಥ ಟಾಗೋರ್ ಅಪ್ರತಿಮ ಪ್ರತಿಭಾವಂತರು ಮಾತ್ರವಲ್ಲ, ಮಹಾನ್ ದಾರ್ಶನಿಕರು ಕೂಡ. ಅವರ ಕೃತಿಗಳಲ್ಲೆಲ್ಲ ಮತ್ತೆಮತ್ತೆ ಕಾಣುವುದು ಮಾನವೀಯ ಮೌಲ್ಯಗಳ ನಿರಂತರ ಹುಡುಕಾಟ, ಪ್ರಕೃತಿಯೊಂದಿಗೆ ಒಂದಾಗಿ ಬಿಡಬೇಕೆನ್ನುವ ಎಡೆಬಿಡದ ತುಡಿತ. ‘ಪ್ರಕೃತಿಯಿಂದ ದೂರವಾದವನೇ ನಿಜವಾದ ಬಡವ. ಪ್ರಕೃತಿಯೊಂದಿಗೆ ಬಾಳುವುದೆಂದರೆ ದೇವರೊಂದಿಗೆ ಇರುವುದು. ಪ್ರಕೃತಿ ಮಾತ್ರ ಮನುಷ್ಯನ ಭೌತಿಕ ಹಾಗೂ ಮಾನಸಿಕ ಗಾಯಗಳನ್ನು ಗುಣಪಡಿಸಬಲ್ಲುದು’ ಎಂಬುದು ರವೀಂದ್ರರ ಗಟ್ಟಿ ನಂಬಿಕೆಯಾಗಿತ್ತು. ತಮ್ಮ ದಿನಚರಿಯ ಬಹುಭಾಗವನ್ನೂ ಅವರು ಪ್ರಕೃತಿಯ ನಡುವೆಯೇ ಕಳೆಯುತ್ತಿದ್ದವರು. ಗೋಡೆಗಳ ಅವಶ್ಯಕತೆ ಅವರಿಗೆ ಇರಲಿಲ್ಲ. ಗಿಡ, ಮರ, ಬಳ್ಳಿ, ಹೂವು, ತೊರೆ, ಬಿಸಿಲು, ನೆರಳುಗಳ ಮೂಲಕ ತಮ್ಮ ಕಲ್ಪನೆಯ ಲೋಕವನ್ನು ವಿಸ್ತರಿಸಿಕೊಳ್ಳಬಹುದಾದ ಭಾವಜಗತ್ತೊಂದು ಅವರೊಳಗೆ ಸದಾ ಜೀವಂತವಾಗಿತ್ತು.

ಸ್ವತಃ ಔಪಚಾರಿಕ ಶಿಕ್ಷಣವನ್ನು ಪಡೆಯದ ಟಾಗೋರರಿಗೆ ತರಗತಿ ಕೊಠಡಿಗಳ ಪಾಠಪ್ರವಚನಗಳಲ್ಲಿ ವಿಶೇಷವಾದ ಆಸಕ್ತಿಯೂ ಇರಲಿಲ್ಲ. ಅನುಭವಕ್ಕಿಂತ ದೊಡ್ಡ ಗುರುವಿಲ್ಲ, ಪ್ರಕೃತಿಗಿಂತ ದೊಡ್ಡ ಪಾಠಶಾಲೆಯಿಲ್ಲ ಎಂಬುದೇ ಅವರು ಬದುಕಿನಲ್ಲಿ ಕಂಡುಕೊಂಡ ಸತ್ಯ. ಅವರು ಸ್ಥಾಪಿಸಿದ ಶಾಂತಿನಿಕೇತನ ಅಂತಹದೊಂದು ನಂಬಿಕೆಯ ಅನುಷ್ಠಾನದ ಪ್ರಯತ್ನವೂ ಆಗಿತ್ತು. ಅವರು ತರಗತಿ ಕೊಠಡಿಗಳಿಂದಾಚೆ, ಮರಗಿಡಗಳ ಮಧ್ಯೆ ಕುಳಿತೇ ತಮ್ಮ ಶಿಷ್ಯರೊಂದಿಗೆ ಸಂವಾದ ನಡೆಸುತ್ತಿದ್ದರು.  ‘ಮಾಹಿತಿಯನ್ನಷ್ಟೇ ಕೊಡುವುದು ಶಿಕ್ಷಣ ಅಲ್ಲ. ಸೃಷ್ಟಿಯೊಂದಿಗೆ ಸೌಹಾರ್ದತೆಯಿಂದ ಬದುಕಲು ಕಲಿಯುವುದೇ ಅತ್ಯುನ್ನತವಾದ ಶಿಕ್ಷಣ’ ಅದು ಅವರ ಕಾಣ್ಕೆ.

ಪರಮ ಧಾರ್ಮಿಕರಾದರೂ, ಗುಡಿ-ವಿಗ್ರಹಗಳಿಂದಾಚೆ ದೇವರ ಇರವನ್ನು ಕಾಣಬಲ್ಲವರಾಗಿದ್ದರು. ದೇವರನ್ನು ಹಾಗೆ ಕಾಣಲು ಸಾಧ್ಯವಾಗಬೇಕು ಎಂಬುದೇ ಅವರ ಒಟ್ಟಾರೆ ಪ್ರತಿಪಾದನೆ ಕೂಡ. 

ಜಪಮಾಲೆಯ ಮಣಿಗಳನ್ನು ಎಣಿಸುತ್ತಾ
ಮಂತ್ರಗಳನ್ನು ಗೊಣಗುವುದನ್ನು ನಿಲ್ಲಿಸು
ಬಾಗಿಲು ಮುಚ್ಚಿ, ಕತ್ತಲೆಯಲ್ಲಿ ಕುಳಿತು 
ಏಕಾಂಗಿಯಾಗಿ ಯಾರನ್ನು ಸ್ತುತಿಸುವೆ?
ಕಣ್ತೆರೆದು ನೋಡು! ದೇವರು ನಿನ್ನೆದುರು ಇಲ್ಲ
ಅವನು...
ಬರಡು ನೆಲವ ನೇಗಿಲಿನಿಂದ ಹಸನುಗೊಳಿಸುತ್ತಿರುವವನೊಂದಿಗಿದ್ದಾನೆ
ಕಲ್ಲುಬಂಡೆಗಳ ಒಡೆದು ದಾರಿ ಮಾಡುವವನೊಂದಿಗಿದ್ದಾನೆ
ಬಿಸಿಲು ನೆರಳುಗಳ ಪರಿವೆಯಿಲ್ಲದೇ ದುಡಿಯುವವರೊಂದಿಗಿದ್ದಾನೆ

(ಕನ್ನಡಾನುವಾದ: ಸುಧಾ ಅಡುಕಳ)

ಎಂದು ಹೇಳುವಾಗ ರವೀಂದ್ರರಿಗೂ ‘ದುಡಿಮೆಯೇ ದೇವರು’ ಆಗಿತ್ತೆನ್ನುವುದು ಸ್ಪಷ್ಟ. ಗುಡಿಯೊಳಗೆ ದೇವರಿದ್ದಾನೆಯೇ ಎಂಬ ಪ್ರಶ್ನೆಗಿಂತಲೂ ಹೊರಗೆ ದುಡಿಯುವವರ ಕಸುವಲ್ಲಿ ದೇವರಿದ್ದಾನೆ ಎಂಬ ಅರಿವು ಅವರಿಗೆ ಮುಖ್ಯ. 

ರವೀಂದ್ರರನ್ನು ಅತ್ಯಂತ ಸೂಕ್ತವಾಗಿ ಏನೆಂದು ಗುರುತಿಸಬಹುದು? ಕವಿ? ಲೇಖಕ? ನಾಟಕಕಾರ? ಸಮಾಜ ಸುಧಾರಕ? ಕಾದಂಬರಿಕಾರ? ತತ್ತ್ವಜ್ಞಾನಿ? ಚಿತ್ರಕಾರ? ಅವರು ಅದೆಲ್ಲವೂ ಆಗಿದ್ದರು. ಒಂದರೊಳಗೆ ಇನ್ನೊಂದು ಬೆಸೆದುಕೊಂಡ ಅಸಾಧಾರಣ ವ್ಯಕ್ತಿತ್ವ ಅವರದ್ದು. ಒಂದರಿಂದ ಇನ್ನೊಂದನ್ನು ಬೇರ್ಪಡಿಸಲಾಗದು. ಅವರ ಗದ್ಯಗಳಲ್ಲಿ ಒಂದು ಕಾವ್ಯವಿದೆ, ಕಾವ್ಯದೊಳಗೊಂದು ದರ್ಶನವಿದೆ. ನಾಟಕ, ಕಾದಂಬರಿ, ಪ್ರಬಂಧ, ಚಿತ್ರ – ಯಾವುದನ್ನು ಎತ್ತಿಕೊಂಡರೂ ಅಲ್ಲೊಂದು ಮಾನವಪ್ರೀತಿಯ ಒರತೆಯಿದೆ.

‘ಮನುಷ್ಯನನ್ನು ಪ್ರೀತಿಸದ ಹೊರತು ನಾವು ಎಂದಿಗೂ ನಿಜವಾದ ದೃಷ್ಟಿಕೋನವನ್ನು ಹೊಂದಲು ಸಾಧ್ಯವಿಲ್ಲ. ನಾಗರಿಕತೆಯನ್ನು ಗೌರವಿಸಬೇಕಿರುವುದು ಅದು ಅಭಿವೃದ್ಧಿಪಡಿಸಿದ ಶಕ್ತಿಯ ಪ್ರಮಾಣದಿಂದಲ್ಲ; ಬದಲಾಗಿ, ಅದು ಎಷ್ಟು ವಿಕಾಸಗೊಂಡಿದೆ ಮತ್ತು ಮಾನವ ಜನಾಂಗದ ಪ್ರೀತಿಗೆ ಎಷ್ಟರಮಟ್ಟಿನ ಅಭಿವ್ಯಕ್ತಿ ನೀಡಿದೆ ಎಂಬುದರ ಮೇಲೆ’ ಎಂಬುದು ವಿಶ್ವಕವಿಯ ಮಾತು.

ವಿಶ್ವಮಾನವತೆಯ ಮಹಾಮಾದರಿಯೊಂದನ್ನು ಕಟ್ಟಿಕೊಟ್ಟದ್ದು ರವೀಂದ್ರರು. ಅವರು ಎಲ್ಲರನ್ನೂ ಪ್ರೀತಿಸಬಲ್ಲವರಾಗಿದ್ದರು. ವಿಶ್ವದ ಶ್ರೇಷ್ಠ ವ್ಯಕ್ತಿತ್ವಗಳೊಂದಿಗೆ ಸಂವಾದ ನಡೆಸಬಲ್ಲವರಾಗಿದ್ದರು. ಗಾಂಧೀಜಿಯವರೊಂದಿಗೆ ಒಂದಷ್ಟು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಅವರು ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸೆಯನ್ನು ಸದಾ ಬೆಂಬಲಿಸಿದರು. ವಿಶ್ವವಿಖ್ಯಾತ ವಿಜ್ಞಾನಿ ಐನ್‌ಸ್ಟೀನ್‌ರೊಂದಿಗೆ ಜಗತ್ತನ್ನು ಮುನ್ನಡೆಸುವ ಶಕ್ತಿಯ ಕುರಿತು ಚರ್ಚಿಸಿದರು. ‘ಪಶ್ಚಿಮದ ನಾಗರಿಕತೆ ಇಂಥದೊಂದು ಸಾಹಿತ್ಯ ಕೃತಿಗಾಗಿ [ಗೀತಾಂಜಲಿ] ಬಹುದಿನಗಳಿಂದ ಪ್ರಾರ್ಥಿಸುತ್ತಿತ್ತು’ ಎಂಬ ಪ್ರಶಂಸೆಯನ್ನು ಇಂಗ್ಲೀಷ್‌ನ ಪ್ರಸಿದ್ಧ ಕವಿ ಡಬ್ಲ್ಯು. ಬಿ. ಯೇಟ್ಸ್ ನಿಂದ ಪಡೆದುಕೊಂಡರು. ಭಾರತವನ್ನು ಅಪಾರವಾಗಿ ಪ್ರೀತಿಸಿದರೂ ಅವರಿಗೆ ಪಶ್ಚಿಮದ ಕುರಿತು ಅಗೌರವ ಇರಲಿಲ್ಲ. ಪೂರ್ವ-ಪಶ್ಚಿಮ ಎರಡನ್ನೂ ಸಮನ್ವಯದ ದೃಷ್ಟಿಯಿಂದ ನೋಡಬೇಕು ಎಂಬುದೇ ಅವರ ಪ್ರತಿಪಾದನೆ ಆಗಿತ್ತು. ‘ಎಲ್ಲ ಶ್ರೇಷ್ಠ ಮಾನವೀಯ ಮೌಲ್ಯಗಳಿಗೆ ಒಂದು ಕೌಟುಂಬಿಕ ಬಂಧವಿದೆ. ಈ ಮೌಲ್ಯಗಳು ರಾಷ್ಟ್ರಗಳ ಮಧ್ಯೆ ಪರಸ್ಪರ ಬೆಸೆದುಕೊಳ್ಳಬೇಕು’ ಎಂದಿದ್ದರು ಅವರು.

ಅವರು ಬಡವರಿಗಾಗಿ ಮಿಡಿದರು. ಅಶಕ್ತರಲ್ಲಿ ಸಹಾನುಭೂತಿ ಹೊಂದಿದರು. ಮನುಷ್ಯಪ್ರೀತಿಯ ಶ್ರೇಷ್ಠತೆಯನ್ನು ನಂಬಿದರು. ಕುಲೀನ ಮನೆತನದಿಂದ ಬಂದರೂ ಸರಳವಾಗಿಯೇ ಬದುಕಿದರು. ಭವಿಷ್ಯದ ಬಗ್ಗೆ ಅಪಾರ ಆಶಾವಾದ ಹೊಂದಿದ್ದರು. ಇವುಗಳನ್ನೆಲ್ಲ ತಮ್ಮ ಕವಿತೆ, ನಾಟಕಗಳಲ್ಲಿ ನಿರಂತರ ಅಭಿವ್ಯಕ್ತಿಸಿದರು. ಪುರಾಣ ಪಾತ್ರಗಳನ್ನೆಲ್ಲ ವರ್ತಮಾನದ ಬೆಳಕಿನಲ್ಲಿ ನೋಡುವ ನಮ್ಯತೆಯನ್ನೂ ಆಧುನಿಕ ಮನೋಭಾವವನ್ನೂ ಹೊಂದಿದ್ದರು. ಜಂಜಡಗಳಿಂದ ತುಂಬಿರುವ ಇಂದಿನ ಜಗತ್ತಿಗೆ ರವೀಂದ್ರರು ಹಚ್ಚಿದ ಬೆಳಕು ನೆಮ್ಮದಿಯ ಹಾದಿ ತೋರಬಲ್ಲುದು.

- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಮಾರ್ಚ್ 19, 2022

ಅನಿರೀಕ್ಷಿತ ತಿರುವುಗಳ ಆಚೆಗಿದೆ ನೆಮ್ಮದಿಯ ಹೆದ್ದಾರಿ

12-18 ಮಾರ್ಚ್ 2022 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಬದುಕೊಂದು ಅಚ್ಚರಿಗಳ ಮೂಟೆ. ದಿನಾ ಓಡಾಡುವ ಹಾದಿಗಳಲ್ಲೇ ಅಂದುಕೊಂಡಂತೆ ಹೋಗಿ ವಾಪಸ್ ಬರುತ್ತೇವೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಇನ್ನು ಕ್ಷಣಕ್ಷಣ ಬದಲಾಗುವ ಬದುಕಿನಲ್ಲಿ ನಾವಂದುಕೊಂಡಂತೆ ಎಲ್ಲವೂ ನಡೆಯುತ್ತದೆ ಎಂದು ಹೇಳುವುದು ಹೇಗೆ? 

ಒಳ್ಳೆಯ ಬಿಸಿಲೆಂದು ಬಕೆಟುಗಟ್ಟಲೆ ಬಟ್ಟೆ ಒಗೆದು ಹರವಿ ಎಲ್ಲೋ ಹೊರಗೆ ಹೋಗಿರುತ್ತೇವೆ; ಎಂದೂ ಇಲ್ಲದ ಮಳೆ ಅಂದೇ ಬರುತ್ತದೆ. ಅಪರೂಪಕ್ಕೊಮ್ಮೆ ಪೂರ್ತಿ ದಿನ ಬಿಡುವು ದೊರೆತಿದೆ, ಒಳ್ಳೆಯ ಅಡುಗೆ ಮಾಡಿಕೊಂಡು ಉಣ್ಣಬೇಕು ಎಂದು ಕನಸು ಕಾಣುತ್ತೇವೆ; ಇಡೀ ದಿನ ಕರೆಂಟೇ ಇರುವುದಿಲ್ಲ. ಕುಟುಂಬ ಸಮೇತ ಪ್ರವಾಸ ಹೋಗಬೇಕೆಂದು ದಿನಗಟ್ಟಲೆ ಸಿದ್ಧತೆ ಮಾಡಿಕೊಂಡು ಕುಳಿತಿರುತ್ತೇವೆ; ಹೊರಡುವ ಮುನ್ನಾದಿನ ಅದ್ಯಾವುದೋ ಅನಾರೋಗ್ಯ ಅಮರಿಕೊಳ್ಳುತ್ತವೆ. ಸಂಜೆಯತನಕವೂ ಹತ್ತಿರದ ಬಂಧುವಿನೊಂದಿಗೋ ಸ್ನೇಹಿತನೊಂದಿಗೋ ಸಂತೋಷವಾಗಿ ಮಾತಾಡಿಕೊಂಡು ಕಾಲ ಕಳೆದಿರುತ್ತೇವೆ; ಬೆಳಗ್ಗೆ ಏಳುವಾಗ ಆತ ಬದುಕಿಲ್ಲ ಎಂಬ ಸುದ್ದಿ ಬರುತ್ತದೆ.

ದಿನನಿತ್ಯದ ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಘಟನೆಗಳಿಂದ ತೊಡಗಿ ಮನಸ್ಸು ವಿಹ್ವಲಗೊಳ್ಳುವ ಆಘಾತಗಳವರೆಗೆ ಇಂಥವು ನಡೆಯುತ್ತಲೇ ಇರುತ್ತವೆ. ಆಗೆಲ್ಲ ‘ಬದುಕೆಂದರೆ ಇಷ್ಟೇ ಏನು?’ ಎಂಬ ಪ್ರಶ್ನೆ ಮತ್ತೆಮತ್ತೆ ಕಾಡುತ್ತದೆ. ನಾವಂದುಕೊಂಡಂತೆ ಯಾವುದೂ ನಡೆಯುವುದಿಲ್ಲ ಎಂದ ಮೇಲೆ ಹಾಗಾಗಬೇಕು ಹೀಗಾಗಬೇಕು ಎಂದು ಹಂಬಲ ಕಟ್ಟಿಕೊಳ್ಳುವ, ಏನೇನೋ ಕನಸು ಕಾಣುವ ಅಗತ್ಯವಾದರೂ ಏನು ಎಂದೆನಿಸುತ್ತದೆ. ಅಂತಹ ಸಂದರ್ಭಗಳಲ್ಲೆಲ್ಲ ಗಾಢ ನೈರಾಶ್ಯ ಆವರಿಸಿಕೊಳ್ಳುತ್ತದೆ. ಮನಸ್ಸು ಕೈಕಾಲುಗಳನ್ನು ಒಳಸರಿಸಿಕೊಂಡು ಮುದುಡಿ ಕೂರುತ್ತದೆ.

ಎಲ್ಲರೂ ಇಂತಹದೊಂದು ಮನಸ್ಥಿತಿಗೆ ಬಂದರೆ ಜಗತ್ತು ವರ್ಣಮಯವಾಗುವುದು ಹೇಗೆ? ಜೀವನದಲ್ಲಿ ಉಲ್ಲಾಸ ನಲಿದಾಡುವುದು ಹೇಗೆ? ಬದುಕನ್ನು ಮತ್ತೆ ಉತ್ಸಾಹದ ಹಳಿಗಳ ಮೇಲೆ ಎಳೆದುತರುವುದು ಹೇಗೆ?

ಹೌದು, ಬಹುತೇಕ ನಿರಾಶೆಗಳೆಲ್ಲ ಕ್ಷಣಿಕ. ಕೆಲವು ಒಂದೆರಡು ಗಂಟೆಗಳಲ್ಲಿ, ಮತ್ತೆ ಕೆಲವು ಒಂದೆರಡು ದಿನಗಳಲ್ಲಿ ಹೊರಟುಹೋಗಬಹುದು. ಇನ್ನು ಕೆಲವು ವಾರಗಟ್ಟಲೆ, ತಿಂಗಳುಗಟ್ಟಲೆ ಉಳಿಯಬಹುದು. ಕೆಲವೇ ಕೆಲವು ಬದುಕಿಡೀ ಕಾಡಬಹುದು. ಅಂಥವುಗಳ ಪ್ರಮಾಣ ತೀರಾ ಕಮ್ಮಿ. ಅವುಗಳಿಗೆ ಕಾಲವೇ ಪರಿಹಾರ ಎಂದುಕೊಳ್ಳಬೇಕಷ್ಟೆ. ಆದರೆ ಎಲ್ಲದಕ್ಕೂ ಹಾಗೆಂದು ಭಾವಿಸಿದರೆ ನಮ್ಮ ಪ್ರಯತ್ನ ಏನೂ ಇಲ್ಲ ಎಂಬಂತಾಗುತ್ತದೆ.

ಅನಿರೀಕ್ಷಿತ ಘಟನೆಗಳು ತೀರಾ ಸಾಮಾನ್ಯವಾದ್ದೇ ಇರಲಿ, ಗಂಭೀರವಾದ್ದೇ ಇರಲಿ, ವಾಸ್ತವವನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಂಡರೆ ಆಗಬಹುದಾದ ನಿರಾಸೆಯನ್ನು ಒಂದಿಷ್ಟಾದರೂ ಕಡಿಮೆ ಮಾಡಿಕೊಳ್ಳಬಹುದು. ಇಂಥದ್ದೊಂದು ನಡೆದುಹೋಗಿದೆ, ಅದನ್ನು ಮತ್ತೆ ಹಿಮ್ಮುಖವಾಗಿಸಲಾಗದು ಎಂಬುದನ್ನು ನಮಗೆ ನಾವೇ ಅರ್ಥಮಾಡಿಸಿಕೊಳ್ಳುವುದು ಮುಖ್ಯ. ಅಪಘಾತ, ಸಾವುಗಳಂತಹ ದೊಡ್ಡ ಪ್ರಮಾಣದ ಆಘಾತಗಳು ಸಂಭವಿಸಿದಾಗ ಇಂತಹ ಮಾತುಗಳನ್ನು ಹೇಳುವುದು ತಕ್ಷಣಕ್ಕೆ ಅರ್ಥಹೀನ ಅನ್ನಿಸಬಹುದು, ಆದರೆ ಅದು ನಿಜ.

ಮನಸ್ಸು ಉತ್ಸಾಹದಿಂದ ಕೂಡಿದ್ದಾಗ ನಡೆಯುವ ಕೆಲವು ಅನಿರೀಕ್ಷಿತಗಳು ದೊಡ್ಡಮಟ್ಟದ್ದಾಗಿದ್ದರೂ ಅವುಗಳನ್ನು ಎದುರಿಸಲು ನಾವು ಹೇಗೋ ಸಿದ್ಧರಾಗುತ್ತೇವೆ. ಮನಸ್ಸು ದುರ್ಬಲವಾಗಿರುವ ಹೊತ್ತು ಸಣ್ಣಪುಟ್ಟ ಏಟು ಸಿಕ್ಕರೂ ನಿರಾಶೆಯ ಸಮುದ್ರದಲ್ಲಿ ಬೀಳುತ್ತೇವೆ. ಸಾಧ್ಯವಾದಷ್ಟು ಮನಸ್ಸು ಉಲ್ಲಾಸದಿಂದ ಕೂಡಿರುವಂತೆ ನೋಡಿಕೊಳ್ಳುವುದೇ ಇದನ್ನು ನಿಭಾಯಿಸುವ ಸುಲಭದ ದಾರಿ. ಒಳ್ಳೆಯ ಪುಸ್ತಕಗಳ ನಿರಂತರ ಓದು, ಉತ್ತಮ ಗೆಳೆಯರ ಒಡನಾಟ, ಧನಾತ್ಮಕ ಚಿಂತನೆಯಿಂದ ಇದು ಸಾಧ್ಯವಾದೀತು. 

ಧನಾತ್ಮಕವಾಗಿ ಯೋಚಿಸುವುದರಿಂದ ಪರ್ವತವನ್ನು ಜರುಗಿಸಲಾದೀತೋ ಗೊತ್ತಿಲ್ಲ, ಪರ್ವತದಂತಹ ಸವಾಲುಗಳನ್ನಂತೂ ಅಲುಗಾಡಿಸಬಹುದು. ಅನೇಕ ಸಲ ಬದುಕಿನಲ್ಲಿ ಸಂಭವಿಸುವ ಋಣಾತ್ಮಕವೆನ್ನಿಸುವ ಘಟನೆಗಳು ಪರೋಕ್ಷವಾಗಿ ವರದಾನವೂ ಆಗಬಹುದು. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಸಕಾರಾತ್ಮಕ ಯೋಚನೆ ಯಾವುದೇ ಘಟನೆಯ ಇನ್ನೊಂದು ಮಗ್ಗುಲನ್ನೂ ನಾವು ಅವಲೋಕಿಸುವಂತೆ ಮಾಡಬಹುದು. ಎಲ್ಲೋ ಅಡಗಿದ್ದ ಛಲವೊಂದು ಛಂಗನೆ ಪುಟಿದೇಳುವಂತೆಯೂ ಆಗಬಹುದು.

ಯಾವುದೋ ಒಂದು ಗುರಿಯನ್ನು ಸಾಧಿಸಲೇಬೇಕೆಂದು ಹೊರಟಿರುತ್ತೇವೆ; ಅನಿರೀಕ್ಷಿತವಾಗಿ ಅದು ಕೈತಪ್ಪಿಹೋದಾಗ ಒಂದು ಕ್ಷಣ ಮನಸ್ಸು ಕುಗ್ಗಬಹುದು. ಆದರೆ ಇನ್ನೊಂದು ರೀತಿಯಲ್ಲಿ ಅದರಿಂದಾಗಿ ನಮಗೆ ಅನುಕೂಲವೂ ಆಗಿರಬಹುದು. ಅದನ್ನು ಅರ್ಥ ಮಾಡಿಕೊಂಡರೆ ಅರ್ಧ ನಿರಾಶೆ ಅಲ್ಲೇ ಕರಗಿಹೋಗುತ್ತದೆ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ, ಜೀವನದಲ್ಲಿ ಯಾವುದೇ ಉಪಕ್ರಮಕ್ಕೆ ಹೊರಟಾಗಲೂ ನಮ್ಮಲ್ಲೊಂದು ಪರ್ಯಾಯ ವ್ಯವಸ್ಥೆ ಇರಲೇಬೇಕು. ಪ್ಲಾನ್-ಎ ಯಶಸ್ವಿಯಾಗದಿದ್ದರೆ ತಕ್ಷಣಕ್ಕೆ ಏನು ಮಾಡಬೇಕೆನ್ನುವ ಪ್ಲಾನ್-ಬಿ ಕೂಡ ನಮ್ಮಲ್ಲಿರಬೇಕು. ಸೋಲು ಗೆಲುವು ಎರಡಕ್ಕೂ ಸಿದ್ಧವಾದ ಮನಸ್ಥಿತಿಯೊಂದಿಗೆ ಯೋಜನೆಯನ್ನು ಕೈಗೆತ್ತಿಕೊಂಡಾಗ, ಅಕಸ್ಮಾತ್ ಗೆಲುವು ದೊರೆಯದೆ ಹೋದರೆ ಕುಸಿದುಬೀಳುವಂತಹ ದುರಂತವೇನೂ ಸಂಭವಿಸದು. ಮೆಡಿಕಲ್ ಓದಲೇಬೇಕೆಂದು ಹಗಲು ರಾತ್ರಿ ಪ್ರಯತ್ನಪಡುವ ವಿದ್ಯಾರ್ಥಿಯೂ ಪ್ಲಾನ್-ಬಿ ಒಂದನ್ನು ಇಟ್ಟುಕೊಂಡಿರಲೇಬೇಕು. ಆಗ ಬಯಸಿದ ಯಶಸ್ಸು ಸಿಗದೇ ಹೋದರೂ ತಾನು ಸಾಗಬೇಕಾದ ಹಾದಿಯ ಬಗ್ಗೆ ಸ್ಪಷ್ಟತೆ, ಮನಸ್ಸಿನ ದೃಢತೆ ಇದ್ದೇ ಇರುತ್ತದೆ.

ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಘಟನೆ ದುಃಖ ತರುವುದೇ ಆಗಬೇಕಿಲ್ಲ. ಸಂತೋಷದಾಯಕವೂ ಆಗಿರಬಹುದು. ಆದರೆ ಅದನ್ನು ಸ್ವೀಕರಿಸುವುದಕ್ಕೂ ಒಂದು ಹದಗೊಂಡ ಮನಸ್ಸು ಬೇಕು. ಅತಿಯಾದ ಆಘಾತ, ಅತಿಯಾದ ಸಂತೋಷ ಎರಡರ ಪರಿಣಾಮವೂ ಅಂತಿಮವಾಗಿ ಒಂದೇ ಆಗಿರಬಹುದು. ಜೀವನದ ಸುದೀರ್ಘ ಪಯಣದ ನಂತರ ಯಾರೋ ಗುರುತಿಸಿ ತನಗೊಂದು ಯೋಗ್ಯ ಪ್ರಶಸ್ತಿ ಘೋಷಿಸಿದರು ಎಂಬ ಸಂತೋಷದ ಪರಾಕಾಷ್ಠೆಯಲ್ಲಿ ಕಲಾವಿದರೊಬ್ಬರು ಇತ್ತೀಚೆಗೆ ಇಹಲೋಕ ತ್ಯಜಿಸಿಬಿಟ್ಟರಂತೆ. ದುಃಖವನ್ನು ಸಂಭಾಳಿಸಿಕೊಂಡಂತೆ ಸಂತೋಷದ ಪ್ರವಾಹವನ್ನು ನಿಭಾಯಿಸಿಕೊಳ್ಳುವುದು ಕೂಡ ಮುಖ್ಯ. ಎಷ್ಟಾದರೂ ಪ್ರವಾಹ ಪ್ರವಾಹವೇ ಅಲ್ಲವೇ? ಕೊಚ್ಚಿಕೊಂಡು ಹೋಗುವುದು ಅದರ ಗುಣ.

ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ|

ವೀತರಾಗಭಯಕೋಧಃ ಸ್ಥಿತಧೀರ್ಮುನಿರುಚ್ಯತೇ||

“ದುಃಖದಾಯಕ ಪ್ರಸಂಗದಲ್ಲಿ ಯಾರ ಮನಸ್ಸು ಉದ್ವಿಗ್ನಗೊಳ್ಳುವುದಿಲ್ಲವೋ, ಸುಖಗಳ ಪ್ರಾಪ್ತಿಯಲ್ಲಿ ಯಾರಿಗೆ ಸರ್ವಥಾ ಇಚ್ಛೆಯಿಲ್ಲವೋ, ಹಾಗೆಯೇ ಯಾರಿಗೆ ಪ್ರೀತಿ, ಭಯ, ಕ್ರೋಧ ಇವು ಇಲ್ಲವಾಗಿವೆಯೋ, ಇಂತಹ ಮುನಿಯೇ ಸ್ಥಿರಬುದ್ಧಿಯವನು” ಎನ್ನುತ್ತಾನೆ ಗೀತಾಚಾರ್ಯ. “ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ” ಎಂದು ಅರ್ಜುನನಿಗೆ ಆತ ಹೇಳಿದ್ದೂ ಇದೇ ಅರ್ಥದಲ್ಲಿ. ಸ್ಥಿತಪ್ರಜ್ಞನೆಂದರೆ ಯಾರು ಎಂಬ ಕೌತುಕ ಪಾರ್ಥನದ್ದು.

ಸ್ಥಿತಪ್ರಜ್ಞನ ಅತಿದೊಡ್ಡ ಲಕ್ಷಣ ತಾಳ್ಮೆ. ಎಂತಹ ಆಘಾತ ಎದುರಾದರೂ ಎರಡು ಕ್ಷಣ ತಾಳ್ಮೆ ತೆಗೆದುಕೊಂಡರೆ ಪರಿಹಾರದ ಸಣ್ಣ ಎಳೆಯೊಂದು ಕಂಡೇ ಕಾಣುತ್ತದೆ. ಈ ಎರಡು ಕ್ಷಣಗಳ ತಾಳ್ಮೆ ನೂರಾರು ಕದನಗಳನ್ನು, ಸಾವಿರಾರು ಸಾವುಗಳನ್ನು ತಪ್ಪಿಸಬಲ್ಲುದು. ಯುದ್ಧವೇ ಆರಂಭವಾಗದಿದ್ದರೆ ಕದನವಿರಾಮ ಘೋಷಿಸುವ ಅಗತ್ಯವೂ ಬಾರದು ಅಲ್ಲವೇ?

- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ಮಾರ್ಚ್ 13, 2022

ಹೀಗುಂಟು ಸಾಹಿತ್ಯ-ಮಾಧ್ಯಮಗಳ ನಂಟು

ಮಾರ್ಚ್ 2022ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾಗಿರುವ ಲೇಖನ

‘ಪತ್ರಿಕೋದ್ಯಮವು ಒಂದು ಅವಸರದ ಸಾಹಿತ್ಯ’ ಎಂಬ ಮಾತಿದೆ. ಪತ್ರಿಕಾ ಬರೆಹಗಳು ಅವಸರದಲ್ಲಿ ತಯಾರಾಗುವ ಪಾಕ ಎಂಬ ಧ್ವನಿ ಇಲ್ಲಿರುವಂತೆಯೇ, ಅವು ಸಾಹಿತ್ಯದ ಒಂದು ಭಾಗ ಎಂಬ ಸೂಚನೆಯೂ ಇದೆ. ಸಾಹಿತ್ಯಕ್ಕೂ ಪತ್ರಿಕಾವೃತ್ತಿಗೂ ಮೊದಲಿನಿಂದಲೂ ಒಂದು ಅವಿಭಾಜ್ಯ ಸಂಬಂಧ. ಒಂದೆಡೆ, ಪತ್ರಿಕಾವೃತ್ತಿ ಬೆಳೆಯುವಲ್ಲಿ ಸಾಹಿತ್ಯದ ಕೊಡುಗೆ ಗಣನೀಯವಾಗಿದ್ದರೆ, ಇನ್ನೊಂದೆಡೆ ಭಾಷೆ ಹಾಗೂ ಸಾಹಿತ್ಯದ ವಿಕಾಸದಲ್ಲಿ ಪತ್ರಿಕೋದ್ಯಮದ ಕೊಡುಗೆ ವಿಶಿಷ್ಟವಾಗಿದೆ. ಜನರಿಗೆ ಸುದ್ದಿಸಮಾಚಾರಗಳ ಕುರಿತಾದ ಕುತೂಹಲ ತುಸು ಹೆಚ್ಚೇ. ಆದರೆ ಅಷ್ಟಕ್ಕೇ ಅವರ ಆಸಕ್ತಿ ಮುಗಿಯವುದಿಲ್ಲ. ಕೇವಲ ಸುದ್ದಿಯಷ್ಟೇ ಅವರಿಗೆ ಸಾಕಾಗುವುದಿಲ್ಲ. ಸುದ್ದಿಸಮಾಚಾರಗಳೊಂದಿಗೆ ಸಾಹಿತ್ಯದ ವಿವಿಧ ಪ್ರಕಾರಗಳನ್ನೂ ಆಸ್ವಾದಿಸುವ ಅವಕಾಶ ಸಿಕ್ಕಾಗಲಷ್ಟೇ ಅವರಿಗೆ ಪತ್ರಿಕೆ ಇತ್ಯಾದಿ ಮಾಧ್ಯಮಗಳು ಹೆಚ್ಚು ಕುತೂಹಲಕರ ಹಾಗೂ ಪ್ರಯೋಜನಕರ ಎನಿಸುತ್ತವೆ.

ಆದರೆ ಸಾಹಿತ್ಯ ಮತ್ತು ಮಾಧ್ಯಮಗಳ ಸಂಬಂಧವನ್ನು ಗಮನಿಸಿದಾಗ, ಅದು ಕೇವಲ ಮುದ್ರಣ ಮಾಧ್ಯಮಕ್ಕಷ್ಟೇ ಸೀಮಿತವಾದದ್ದಲ್ಲ ಎಂಬುದು ಅರಿವಾಗುತ್ತದೆ. ಪತ್ರಿಕೆಗಳಿಂದ ತೊಡಗಿ ಆನ್ಲೈನ್ ವೇದಿಕೆಗಳವರೆಗೆ ವಿವಿಧ ಸಮೂಹ ಮಾಧ್ಯಮಗಳು ತಮ್ಮದೇ ನೆಲೆಯಲ್ಲಿ ಸಾಹಿತ್ಯದ ಪೋಷಣೆಯಲ್ಲಿ ತೊಡಗಿಸಿಕೊಂಡಿವೆ. ಕಾಲದಿಂದ ಕಾಲಕ್ಕೆ ಬದಲಾಗುವ ಜನರ ಆಸಕ್ತಿ-ಅಭಿರುಚಿಗಳನ್ನು ಮಾಧ್ಯಮಗಳು ಗಮನಿಸಿಕೊಂಡು ತಮ್ಮನ್ನು ತಾವು ಮರುರೂಪಿಸಿಕೊಳ್ಳಬೇಕಾಗುತ್ತದೆ.

ಪತ್ರಿಕಾ ಮಾಧ್ಯಮ:

ಮುದ್ರಣ ಮಾಧ್ಯಮದ ಸಾಹಿತ್ಯ ಪರಿಚಾರಿಕೆ ಎರಡು ಬಗೆಯದ್ದು. ಕಲೆ-ಸಾಹಿತ್ಯಕ್ಕೆಂದೇ ಮೀಸಲಾದ ಪತ್ರಿಕೆಗಳ ಕಾರ್ಯವೈಖರಿ ಒಂದು ತೆರನಾದರೆ, ಮುಖ್ಯ ವಾಹಿನಿಯ ಪತ್ರಿಕೆಗಳು ಸಾಹಿತ್ಯಕ್ಕೆ ಕೊಡುವ ಮಹತ್ವ ಇನ್ನೊಂದು ವಿಧವಾದದ್ದು. ಎರಡೂ ಬಗೆಯ ಪತ್ರಿಕೆಗಳು ತಮ್ಮದೇ ಆದ ರೀತಿಯಲ್ಲಿ ಸಾರಸ್ವತಲೋಕದ ಬೆಳವಣಿಗೆಯಲ್ಲಿ ಪಾತ್ರ ವಹಿಸಿವೆ. ಸಾಹಿತ್ಯ ಕ್ಷೇತ್ರದ ಹಲವು ದಿಗ್ಗಜರು ಸ್ವತಃ ಪತ್ರಕರ್ತರಾಗಿದ್ದರು ಎಂಬುದು ಗಮನಾರ್ಹ ಸಂಗತಿ. ಆಂಗ್ಲಸಾಹಿತ್ಯದ ಶ್ರೇಷ್ಠ ಪ್ರಬಂಧಕಾರರೆನಿಸಿದ ರಿಚರ್ಡ್ ಸ್ಟೀಲ್, ಡೇನಿಯಲ್ ಡೆಫೋ ಮೊದಲಾದವರೆಲ್ಲ ಉತ್ತಮ ಪತ್ರಿಕಾ ಬರೆಹಗಾರರೂ ಆಗಿದ್ದರು. ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ಮಾಸ್ತಿ, ಡಿವಿಜಿ, ತಿ. ತಾ. ಶರ್ಮ, ನಿರಂಜನ, ನಂಜನಗೂಡು ತಿರುಮಲಾಂಬಾ, ಸಿದ್ಧವನಹಳ್ಳಿ ಕೃಷ್ಣಶರ್ಮ, ಅ.ನ.ಕೃ. ಮುಂತಾದವರು ಸಾಹಿತ್ಯವನ್ನೂ ಪತ್ರಿಕೋದ್ಯಮವನ್ನೂ ಜತೆಜತೆಗೇ ಬೆಳೆಸಿಕೊಂಡು ಬಂದರು.

19ನೇ ಶತಮಾನ ಹೊಸಗನ್ನಡ ಸಾಹಿತ್ಯದ ಉದಯಕಾಲ. ಕನ್ನಡ ಪತ್ರಿಕೋದ್ಯಮವೂ ಅದೇ ಅವಧಿಯಲ್ಲೇ ಬೆಳೆಯಿತು. ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರಗಳ ವಿಕಾಸದ ಪಾತಳಿ ಒಂದೇ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಮುದ್ರಣಕಲೆ ಬೆಳೆದುದಕ್ಕೂ, ಸಾಹಿತ್ಯ ಕೃತಿಗಳು ದೊಡ್ಡ ಸಂಖ್ಯೆಯಲ್ಲಿ ಮುದ್ರಣಗೊಂಡು ವಿಸ್ತಾರ ಓದುಗವರ್ಗವನ್ನು ತಲುಪಿದ್ದಕ್ಕೂ ಸಂಬಂಧವಿರುವುದನ್ನು ಕೂಡ ನಾವಿಲ್ಲಿ ಗಮನಿಸಬಹುದು. ಪತ್ರಿಕೋದ್ಯಮವು ಮುದ್ರಣತಂತ್ರಜ್ಞಾನದ ಇನ್ನೊಂದು ಕೂಸು.

ಪತ್ರಿಕಾವೃತ್ತಿ ಬೆಳೆದುಬರುತ್ತಾ, ರಂಗಭೂಮಿ, ಸಂಗೀತ, ಜಾನಪದ, ಯಕ್ಷಗಾನ, ಕಾವ್ಯ, ಹಾಸ್ಯ, ಕತೆ - ಹೀಗೆ ಸಾಹಿತ್ಯದ ವಿವಿಧ ಮಗ್ಗುಲುಗಳಿಗೆ ಸಂಬಂಧಿಸಿದ ವಿಶೇಷ ಪತ್ರಿಕೆಗಳು ಹುಟ್ಟಿಕೊಂಡವು. ಬೆನೆಗಲ್ ರಾಮರಾಯರ ‘ಸುವಾಸಿನಿ’, ರಾಶಿಯವರ ‘ಕೊರವಂಜಿ’, ಅನಕೃ ಅವರ ‘ಕಥಾಂಜಲಿ’, ಮಾಸ್ತಿಯವರ ‘ಜೀವನ’, ಅಡಿಗರ ‘ಸಾಕ್ಷಿ’, ಕಾರಂತರ ‘ವಸಂತ’, ಮೈಸೂರು ವಿವಿ ಪ್ರಕಟಿಸುತ್ತಿದ್ದ ‘ಪ್ರಬುದ್ಧ ಕರ್ನಾಟಕ’- ಹೀಗೆ ಹತ್ತಾರು ಉಪಕ್ರಮಗಳನ್ನು ಗುರುತಿಸಬಹುದು ಪತ್ರಿಕೋದ್ಯಮ ಪ್ರಾಧ್ಯಾಪಕ ಡಾ. ನಿರಂಜನ ವಾನಳ್ಳಿಯವರು ತಮ್ಮ ‘ಕನ್ನಡದಲ್ಲಿ ಕಲೆ-ಸಾಹಿತ್ಯ ಪತ್ರಿಕೆಗಳು’ ಎಂಬ ಪಿಎಚ್.ಡಿ. ಪ್ರಬಂಧದಲ್ಲಿ ಈ ಐತಿಹಾಸಿಕ ಹೆಜ್ಜೆಗಳನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ. 

ಕನ್ನಡ ಪತ್ರಿಕೆಗಳ ಸಾಹಿತ್ಯ ಸೇವೆಯನ್ನು ಅವರು ಈ ಕೆಳಕಂಡಂತೆ ಪಟ್ಟಿಮಾಡಿದ್ದಾರೆ:

1. ದಿನಪತ್ರಿಕೆಗಳು ಹಾಗೂ ನಿಯತಕಾಲಿಕಗಳು ಸಾಮಾನ್ಯ ಆಸಕ್ತಿಯ ಪತ್ರಿಕೆಗಳೇ ಆಗಿರುವ ಸಂದರ್ಭದಲ್ಲಿಯೂ ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಹಾಸ್ಯಬರಹಗಳು, ಮುಂತಾದವನ್ನು ತಪ್ಪದೇ ಪ್ರಕಟಿಸುತ್ತವೆ.

2. ಕಾದಂಬರಿಗಳು ಧಾರಾವಾಹಿಗಳಾಗಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತವೆ. ಹಿಂದೆ ನಿಯತಕಾಲಿಕಗಳಿಗಷ್ಟೇ ಧಾರಾವಾಹಿಗಳು ಸೀಮಿತವಾಗಿದ್ದವು. ಈಗ ದಿನಪತ್ರಿಕೆಗಳೂ ಧಾರಾವಾಹಿಗಳನ್ನು ಪ್ರಕಟಿಸುತ್ತವೆ.

3. ಸಾಹಿತಿಗಳ ಅಂಕಣಗಳನ್ನು ಪ್ರಕಟಿಸುವ ಮೂಲಕ ಅಂಕಣ ಸಾಹಿತ್ಯವೇ ಕನ್ನಡದಲ್ಲಿ ಪ್ರತ್ಯೇಕ ಸಮೃದ್ಧ ಸಾಹಿತ್ಯ ಪ್ರಕಾರವಾಗಿ ಬೆಳೆಯಲು ಕಾರಣವಾಗಿವೆ.

4. ಪತ್ರಿಕೆಗಳು ಏರ್ಪಡಿಸುವ ಸಾಹಿತ್ಯ ಸ್ಪರ್ಧೆಗಳು ಹೊಸತಲೆಮಾರಿನ ಬರಹರಾರರನ್ನು ಹೆಕ್ಕಿ ತೆಗೆಯಲು ನೆರವಾಗುತ್ತವೆ.

5. ದೀಪಾವಳಿ, ಯುಗಾದಿ, ಸಂಕ್ರಾಂತಿ, ಮುಂತಾದ ಹಬ್ಬದ ಸಂದರ್ಭಗಳಲ್ಲಿ ನಮ್ಮ ಪತ್ರಿಕೆಗಳು ಹೊರತರುವ ವಿಶೇಷಾಂಕಗಳು ಸಾಹಿತ್ಯ ಸಂಪುಟಗಳೇ ಎಂದು ಕರೆಯಬಹುದಾದಷ್ಟು ಸಮೃದ್ಧವಾಗಿರುತ್ತವೆ.

6. ಕಾಲಕಾಲಕ್ಕೆ ಪ್ರಶ್ನೆ ಮಾಲಿಕೆಗಳನ್ನು ಏರ್ಪಡಿಸಿ ಒಂದೇ ರೀತಿಯ ಪ್ರಶ್ನೆಗಳಿಗೆ ಸಾಹಿತಿಗಳಿಂದ ಉತ್ತರಗಳನ್ನು ಬರೆಯಿಸಿ ಸಾಹಿತ್ಯ ಪಡೆದುಕೊಳ್ಳುವ ತಿರುವುಗಳಿಗೆ ಸೈದ್ಧಾಂತಿಕ ರೂಪ ನೀಡುತ್ತವೆ.

7. ಪತ್ರಿಕೆಗಳೇ ಸಾಹಿತ್ಯ ಪ್ರಕಾಶನದ ಸಂಸ್ಥೆಗಳಾಗಿ ಕೆಲಸ ಮಾಡುವುದಿದೆ. ಅಂದರೆ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವುದು.

8. ನವ ಪ್ರಕಾಶನಗಳ ಪಟ್ಟಿಯನ್ನು ಪ್ರಕಟಿಸಿ ಓದುಗರಿಗೆ ಹೊಸ ಕೃತಿ ಹೊರಬಂದುದರ ಬಗ್ಗೆ ತಿಳಿಯಲು ಅನುವುಮಾಡಿಕೊಡುತ್ತವೆ.

9. ಪುಸ್ತಕಗಳ ಸಮೀಕ್ಷೆ, ವಿಮರ್ಶೆಗಳನ್ನು ತಜ್ಞರಿಂದ ಬರೆಸುತ್ತವೆ.

10. ಓದುಗರಿಗೆ ವಿಮರ್ಶಾ ಸ್ಪರ್ಧೆಗಳನ್ನು ಏರ್ಪಡಿಸುತ್ತವೆ.

11. ಚಿತ್ರಕವನ ಸ್ಪರ್ಧೆ ಹಾಗೂ ಅಪೂರ್ಣ ಕಥೆಗಳನ್ನು ಪೂರ್ಣಗೊಳಿಸುವಂಥ ಸ್ಪರ್ಧೆಗಳ ಮೂಲಕ ಓದುಗರ ಸೃಜನಶೀಲತೆಯನ್ನು ಹೆಚ್ಚಿಸುತ್ತವೆ.

12. ಇವೆಲ್ಲ ಸಾಮಾನ್ಯ ಆಸಕ್ತಿಯ ಪತ್ರಿಕೆಗಳ ಮಾತಾದರೆ, ಸಾಹಿತ್ಯಕ್ಕೇ ಮೀಸಲಾಗಿ ನಿಯತಕಾಲಿಕಗಳನ್ನು ಹೊರಡಿಸುವುದೂ ಕನ್ನಡ ಪತ್ರಿಕೋದ್ಯಮ ಮಾಡುವ ಸಾಹಿತ್ಯ ಸೇವೆಯ ಮಾದರಿ.

ಸಾಹಿತ್ಯದ ಬೆನ್ನೆಲುಬೆನಿಸಿರುವ ಭಾಷೆಯ ಬೆಳವಣಿಗೆಯಲ್ಲೂ ಪತ್ರಿಕೆಗಳ ಕೊಡುಗೆ ಅದ್ವಿತೀಯ. ಕಾಲದಿಂದ ಕಾಲಕ್ಕೆ ಭಾಷೆ ವಿಕಾಸವಾಗುವಲ್ಲಿ, ಹೊಸ ಪದಗಳ ಸೃಷ್ಟಿಯಾಗುವಲ್ಲಿ, ಹೊಸ ಪದಪುಂಜಗಳ ಅನ್ವೇಷಣೆ ಮಾಡುವಲ್ಲಿ ಮಾಧ್ಯಮಗಳ ಪಾತ್ರ ತುಂಬ ದೊಡ್ಡದು. ಆಧುನೀಕರಣ ಮತ್ತು ಆ ಕಾರಣದಿಂದ ನಡೆದಿರುವ ಟಂಕೀಕರಣ, ಭಾಷಾಂತರೀಕರಣ, ಅನ್ಯ ಭಾಷಾ ಸ್ವೀಕರಣ, ನುಡಿಬೆರಕೆ ಮೊದಲಾದವುಗಳಿಂದ ಒಂದು ಭಾಷೆಗೆ ಹೊಸ ಪದಗಳು ಸೇರ್ಪಡೆಯಾಗುತ್ತಾ ಹೋಗುತ್ತವೆ; ಈ ಪ್ರಕ್ರಿಯೆಯಲ್ಲಿ ಮಾಧ್ಯಮಗಳ ಪಾತ್ರ ತುಂಬ ದೊಡ್ಡದು ಎಂದು ಭಾಷಾತಜ್ಞರು ಗುರುತಿಸಿದ್ದುಂಟು. ಉದಾಹರಣೆಗೆ: ಕಪ್ಪುಹಣ, ಪ್ರಣಾಳಿಕೆ, ಏಕಸ್ವಾಮ್ಯ, ಯಥಾಸ್ಥಿತಿ, ಭೂಗತಲೋಕ, ಸ್ವಜನಪಕ್ಷಪಾತ, ಮಾಹಿತಿ ತಂತ್ರಜ್ಞಾನ, ಶೀತಲ ಸಮರ, ವಿಕೇಂದ್ರೀಕರಣ, ಬೆರಳಚ್ಚು, ನುಡಿಚಿತ್ರ, ಗೃಹಬಂಧ, ಪ್ರಣಾಳಶಿಶು, ಹಕ್ಕೊತ್ತಾಯ, ಅಜೇಯ ಶತಕ- ಇವೆಲ್ಲ ಆಯಾ ಸಂದರ್ಭದ ಅನಿವಾರ್ಯಗಳಲ್ಲಿ ಹುಟ್ಟಿಕೊಂಡಿರುವ ಬಳಕೆಗಳು.

ಗಣನೀಯ ಇಳಿಮುಖ:

ಕಲೆ-ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಓದುಗರ ಸಾಹಿತ್ಯಾಸಕ್ತಿಯಲ್ಲಿ ಆಗಿರುವ ಬದಲಾವಣೆ, ಪತ್ರಿಕೆ ನಡೆಸುವವರ ಹಣಕಾಸಿನ ಸಂಕಷ್ಟ, ಮಾರಾಟ-ಪ್ರಸರಣೆಯಲ್ಲಿ ವೃತ್ತಿಪರತೆಯನ್ನು ಕಾಯ್ದುಕೊಳ್ಳಲು ಆಗದೇ ಇರುವುದು, ಬಹುತೇಕ ಸಾಹಿತ್ಯ ಪತ್ರಿಕೆಗಳ ವಹಿವಾಟು ಏಕವ್ಯಕ್ತಿ ಹೋರಾಟ ಆಗಿರುವುದು- ಹೀಗೆ ಅನೇಕ ಕಾರಣಗಳನ್ನು ಈ ನಿಟ್ಟಿನಲ್ಲಿ ಊಹಿಸಬಹುದು.

ಮುಖ್ಯವಾಹಿನಿಯ ಪತ್ರಿಕೆಗಳನ್ನು ಗಮನಿಸಿದರಂತೂ ಬಹುತೇಕ ಪತ್ರಿಕೆಗಳು ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯವನ್ನು ದೂರ ಸರಿಸಿರುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಮೇಲೆ ಪಟ್ಟಿಮಾಡಿರುವ, ನಿರಂಜನ ವಾನಳ್ಳಿಯವರು ಗುರುತಿಸಿರುವ ಅಂಶಗಳನ್ನು ಗಮನಿಸಿದರೆ, ದಶಕಗಳ ಹಿಂದೆ ಪತ್ರಿಕೆಗಳು ಸಾಹಿತ್ಯಕ್ಕೆ ನೀಡುತ್ತಿದ್ದ ಆದ್ಯತೆಗೂ ಇಂದಿನ ವಾಸ್ತವಕ್ಕೂ ಸ್ಪಷ್ಟ ವ್ಯತ್ಯಾಸವಿರುವುದು ಸಾಮಾನ್ಯ ಓದುಗನಿಗೂ ಅರ್ಥವಾಗುತ್ತದೆ.

ಒಂದು ಕಾಲದಲ್ಲಿ ಪತ್ರಿಕೆಗಳ ಭಾನುವಾರದ ಪುರವಣಿ, ವಾರ್ಷಿಕ ವಿಶೇಷಾಂಕಗಳಲ್ಲಿ ಕಥೆ-ಕವಿತೆಗಳನ್ನು ಬರೆದು ಬಹುಮಾನ ಪಡೆದು ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ನೂರಾರು ಮಂದಿಯ ಉದಾಹರಣೆ ಇದ್ದರೆ, ಅಂತಹದೊಂದು ಕಾಲ ಇತ್ತೇ ಎಂದು ಅಚ್ಚರಿಪಡುವ ಸಂದರ್ಭ ಇಂದಿನದು. ಕಳೆದ ಹತ್ತು ವರ್ಷಗಳಲ್ಲಿ ಅನೇಕ ಪತ್ರಿಕೆಗಳ ಸಾಹಿತ್ಯ ಪುರವಣಿಗಳು ಗುರುತೇ ಸಿಗದಷ್ಟು ಸೊರಗಿ ಹೋಗಿವೆ. ಕಥೆ, ಕಾವ್ಯ ವಿಭಾಗಗಳೆಲ್ಲ ಮಾಯವಾಗಿವೆ. ‘ಅವನ್ನೆಲ್ಲ ಓದುವವರು ಇಲ್ಲ’ ಎಂಬುದು ಎಲ್ಲರೂ ಕೊಡುವ ಸುಲಭ ಸಬೂಬು. ‘ಜಾಹೀರಾತುದಾರರಿಗೆ ಅಂತಹ ಪುಟಗಳ ಬಗ್ಗೆ ಆಸಕ್ತಿ ಇಲ್ಲ’ ಎಂಬುದು ಒಳಗಿನಿಂದ ಕೇಳುವ ಧ್ವನಿ. ವಾಸ್ತವ ಏನು ಎಂಬುದು ಯಕ್ಷಪ್ರಶ್ನೆ. ಕೊರೋನ ಅಂತೂ ಸಾಪ್ತಾಹಿಕ ಪುರವಣಿಗಳನ್ನೇ ನಿಲ್ಲಿಸಿಬಿಡುವುದಕ್ಕೆ ಒಳ್ಳೆಯ ನೆಪವಾಗಿದೆ. ಕೊರೋನದ ಆತಂಕಗಳು ಕಡಿಮೆಯಾಗಿ ಮಾಧ್ಯಮಗಳು ಆರ್ಥಿಕವಾಗಿ ಚೇತರಿಸಿಕೊಂಡರೂ, ಅವುಗಳ ಸಾಹಿತ್ಯಪ್ರೀತಿ ಚೇತರಿಸಿಕೊಂಡಂತೆ ಕಾಣುವುದಿಲ್ಲ. ಸಾಧ್ಯವಾದಷ್ಟು ಕಾಲ ಯಥಾಸ್ಥಿತಿ ಮುಂದುವರಿದರೆ ವ್ಯಾವಹಾರಿಕ ದೃಷ್ಟಿಯಿಂದ ಅನುಕೂಲವೇ ಹೆಚ್ಚು ಎಂದು ಅವು ಭಾವಿಸಿಕೊಂಡಂತಿದೆ.

ವಿದ್ಯುನ್ಮಾನ ಮಾಧ್ಯಮ:

ವಿದ್ಯುನ್ಮಾನ ಮಾಧ್ಯಮಗಳ ಪೈಕಿ, ದೂರದರ್ಶನ ಮೊದಲಿನಿಂದಲೂ ಕಲೆ-ಸಾಹಿತ್ಯಕ್ಕೆ ಸಾಕಷ್ಟು ಒತ್ತು ನೀಡುತ್ತಾ ಬಂದಿದೆ. ಸಾಹಿತ್ಯ, ಕಲಾ ಮೌಲ್ಯವುಳ್ಳ ಧಾರಾವಾಹಿಗಳು ವಿವಿಧ ಭಾಷೆಗಳಲ್ಲಿ ಬಂದಿವೆ. ಹಿಂದಿಯಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದ ರಾಮಾಯಣ, ಮಹಾಭಾರತ ಧಾರಾವಾಹಿಗಳು, ಕನ್ನಡದಲ್ಲಿ ಬಂದ ಮಲೆಗಳಲ್ಲಿ ಮದುಮಗಳು, ಗೃಹಭಂಗ, ಕಾನೂರು ಹೆಗ್ಗಡತಿ; ‘ಕತೆಗಾರ’ನಂತಹ ಸರಣಿಗಳು, ಲೇಖಕರು-ಕಲಾವಿದರ ಕುರಿತ ಸಾಕ್ಷ್ಯಚಿತ್ರ, ಸಂದರ್ಶನಗಳು, ನಿಯಮಿತವಾಗಿ ಪ್ರಸಾರವಾಗುವ ನಾಟಕ, ಸಿನಿಮಾ, ಯಕ್ಷಗಾನ, ಹರಿಕಥೆ, ಸಂಗೀತ, ನೃತ್ಯ, ರೂಪಕಗಳು ಒಟ್ಟಾರೆ ಸಾಹಿತ್ಯ ಸಂವರ್ಧನೆಗೆ ಗಣನೀಯ ಕೊಡುಗೆ ನೀಡಿವೆ. 

ಆದರೆ ಖಾಸಗಿ ವಾಹಿನಿಗಳಲ್ಲಿ ಈ ಕುರಿತ ಆಸಕ್ತಿಯಾಗಲೀ ಕಾಳಜಿಯಾಗಲೀ ವ್ಯಕ್ತವಾಗುವುದು ಅಪರೂಪ. ಟಿಆರ್‍ಪಿಯನ್ನು ಹುಟ್ಟಿಸದಿರುವ ಯಾವ ವಿಷಯದಲ್ಲೂ ಅವುಗಳಿಗೆ ಆಸಕ್ತಿ ಇಲ್ಲ. ಟಿವಿ ವಾಹಿನಿಗಳು ಕಲೆ-ಸಾಹಿತ್ಯಕ್ಕೆ ಒತ್ತು ನೀಡುವ ಬಗ್ಗೆ ಮಾತಾಡುವುದು ವ್ಯಾವಹಾರಿಕ ಜಗತ್ತಿನ ಬಗ್ಗೆ ಏನೂ ಅರಿವಿಲ್ಲದವರ ಹಳಹಳಿಕೆ ಎಂಬಂತಾಗಿದೆ.

ನಾಡು-ನುಡಿ-ಸಂಸ್ಕೃತಿಯ ಪ್ರಸರಣೆಯಲ್ಲಿ ಆಕಾಶವಾಣಿಯೂ ಹಿಂದೆ ಬಿದ್ದಿಲ್ಲ. ಕಲೆ-ಸಾಹಿತ್ಯಗಳನ್ನು ಜನಸಾಮಾನ್ಯರ ಬಳಿಗೆ ಒಯ್ಯುವಲ್ಲಿ ಬಾನುಲಿಯ ಪಾತ್ರವನ್ನು ಯಾರೂ ಅಲ್ಲಗಳೆಯಲಾಗದು. ಶಾಸ್ತ್ರೀಯ ಸಂಗೀತ, ಜಾನಪದ ಹಾಡುಗಳು, ಚಲನಚಿತ್ರ ಗೀತೆಗಳು, ಭಾವಗೀತೆ, ಗಮಕ ವಾಚನ, ನಾಟಕ, ರೂಪಕ, ಭಾಷಣ, ಸಂವಾದ, ಹರಿಕಥೆ, ಯಕ್ಷಗಾನ, ಹೀಗೆ ವಿವಿಧ ಮಾದರಿಗಳಲ್ಲಿ ಅಭಿವ್ಯಕ್ತಗೊಳ್ಳುವ ಆಕಾಶವಾಣಿಯ ಸಾಹಿತ್ಯಪ್ರೀತಿಯಿಂದಾಗಿ ಅದು ಸಾಮಾನ್ಯ ಕೇಳುಗರ ಹೃದಯದಲ್ಲಿ ಸುಭದ್ರ ಸ್ಥಾನ ಪಡೆದುಕೊಂಡಿದೆ. ಆದರೆ ಆಕಾಶವಾಣಿಯ ಪ್ರಾದೇಶಿಕ ಪ್ರಸಾರಕ್ಕೆ ದೊರೆಯುತ್ತಿದ್ದ ಪ್ರಾಮುಖ್ಯತೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಆಕಾಶವಾಣಿಯ ಅಸ್ತಿತ್ವ ಇರುವುದೇ ಅದರ ಪ್ರಾದೇಶಿಕ ಪ್ರಸಾರದಲ್ಲಿ ಮತ್ತು ಅದು ಒಳಗೊಂಡಿರುವ ಕಲೆ-ಸಾಹಿತ್ಯ-ಸಂಸ್ಕೃತಿಯ ಸತ್ವದಲ್ಲಿ. ಅದೇ ಕಳೆದುಹೋದರೆ ಬಾನುಲಿ ಇನ್ನೊಂದು ಯಾಂತ್ರಿಕ ಮಾಧ್ಯಮವಾಗುವುದರಲ್ಲಿ ಸಂಶಯವಿಲ್ಲ.

ನವಮಾಧ್ಯಮ:

ನಾವು ಗಮನಿಸಬೇಕಾಗಿರುವ ಮಾಧ್ಯಮಗಳ ಇನ್ನೊಂದು ಮುಖ ಆನ್ಲೈನ್ ಮಾಧ್ಯಮ ಅಥವಾ ನವ ಮಾಧ್ಯಮ. ಇಂಟರ್ನೆಟ್ ಇಂದು ಬಹುಜನರನ್ನು, ಅದರಲ್ಲೂ ಯುವತಲೆಮಾರನ್ನು ಬಹುವಾಗಿ ಆಕರ್ಷಿಸಿದೆ. ಅದನ್ನು ನಾವು ಅಲಕ್ಷಿಸುವಂತಿಲ್ಲ. ಯುವಕರು ಹೆಚ್ಚುಹೆಚ್ಚಾಗಿ ಅಂತರಜಾಲವನ್ನು, ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ ಎಂದರೆ ಅಲ್ಲಿ ಸಾಹಿತ್ಯದ ನೆಲೆ-ಬೆಲೆ ಏನು, ಎಷ್ಟು ಎಂಬುದನ್ನು ನಾವು ಯೋಚಿಸಬೇಕಾಗುತ್ತದೆ. ಸಾಮಾನ್ಯ ಆಸಕ್ತಿಯ ಜಾಲತಾಣಗಳು, ಸಾಹಿತ್ಯಕ್ಕೇ ಮೀಸಲಾದ ವೆಬ್ ಮ್ಯಾಗಜಿನ್‍ಗಳು ಇಂದು ನೂರಾರು ಸಂಖ್ಯೆಯಲ್ಲಿ ಇವೆ. ಅವುಗಳನ್ನು ಗಮನಿಸುವವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲೇ ಇದೆ. ಫೇಸ್ಬುಕ್, ವಾಟ್ಸಾಪ್‍ನಂತಹ ಮಾಧ್ಯಮಗಳಲ್ಲೂ ಸಾಹಿತ್ಯದ ಗಂಭೀರ ಚರ್ಚೆಗಳಾಗುವುದಿದೆ. ಕೊರೋನ ಒಂದು ನೆಪವಾಗಿ ಮುಖ್ಯಭೂಮಿಕೆಗೆ ಬಂದ ಆನ್ಲೈನ್ ವೇದಿಕೆಗಳು, ಇತ್ತೀಚೆಗೆ ಜನಪ್ರಿಯವಾದ ಕ್ಲಬ್‍ಹೌಸ್ – ಇವನ್ನೆಲ್ಲ ನಾವು ಕಡೆಗಣಿಸುವಂತಿಲ್ಲ.

ಹಾಗೆ ನೋಡಿದರೆ, ಯುವಕರಲ್ಲಿ ಸಾಹಿತ್ಯಾಸಕ್ತಿ ಕುಸಿದಿದೆ ಎಂದು ಸಾರಾಸಗಟಾಗಿ ಹೇಳಿಬಿಡುವಂತಿಲ್ಲ. ಅವರು ಬಯಸುವ ಸಾಹಿತ್ಯ ಹಾಗೂ ಅದು ಅನಾವರಣಗೊಳ್ಳುವ ಮಾಧ್ಯಮದ ಸ್ವರೂಪ ಬದಲಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು.  ಪುಸ್ತಕ ಹಿಡಿದು ಓದುವವರಿಗಿಂತ ಮೊಬೈಲ್, ಕಂಪ್ಯೂಟರ್, ಟ್ಯಾಬ್ ಅಥವಾ ಕಿಂಡಲ್ ಮೂಲಕ ಓದುವವರ ಪ್ರಮಾಣ ಹೆಚ್ಚಾಗುತ್ತಿದೆ. ಈಗಿನ ಹೊಸ ತಲೆಮಾರಿಗೆ ಈ ಪರಿಕರಗಳು ಹೆಚ್ಚು ಆಕರ್ಷಕವೂ, ಅನುಕೂಲಕರವೂ ಆಗಿರಬಹುದು. ಅವರಿಗೆ ನಾವು ಪುಸ್ತಕಗಳ ಹಾರ್ಡ್ ಪ್ರತಿಯನ್ನೇ ಓದಿ ಎಂದು ಒತ್ತಾಯಿಸುವುದರಲ್ಲಿ ಅರ್ಥವಿಲ್ಲ. ಅವರು ಬಯಸುವ ಮಾದರಿಗೆ ಬದಲಾಯಿಸಿಕೊಡುವುದು ಹೆಚ್ಚು ಪ್ರಶಸ್ತ. ಕಾಲ ಬದಲಾದಂತೆ ಜನರ ಅವಶ್ಯಕತೆ, ಆದ್ಯತೆಗಳಲ್ಲಿ ಬದಲಾವಣೆ ಉಂಟಾಗುವುದು ವಿಚಿತ್ರವೇನೂ ಅಲ್ಲ. ಈ ಬದಲಾವಣೆಯನ್ನು ಗಮನಿಸದೆ, ಅದಕ್ಕೆ ಹೊಂದಿಕೊಳ್ಳದೆ ಹೋದರೆ ನಷ್ಟವೇ ಹೆಚ್ಚು.

‘ಸಾಹಿತ್ಯ ಮತ್ತು ಮಾಧ್ಯಮ’ ವಿಚಾರವನ್ನು ಧನಾತ್ಮಕ ದೃಷ್ಟಿಕೋನದಿಂದ ನೋಡುತ್ತಾ ಹೋದರೆ ಈ ಬಗೆಯ ಆಯಾಮಗಳು ಗೊತ್ತಾಗುತ್ತಾ ಹೋಗುತ್ತವೆ. ಆದ್ದರಿಂದ ನಿರಾಶೆಗೊಳ್ಳದೆ, ಬದಲಾದ ಕಾಲದಲ್ಲಿ ಒಟ್ಟಾರೆ ಸಮಾಜ ಮಾಡಬಹುದಾದ್ದೇನು ಎಂದು ಯೋಚಿಸುವುದು, ಮತ್ತು ಇರುವ ಅವಕಾಶಗಳನ್ನು ಗರಿಷ್ಠ ಸದುಪಯೋಗಪಡಿಸಿಕೊಳ್ಳುವುದು ಒಳ್ಳೆಯದು.

- ಸಿಬಂತಿ ಪದ್ಮನಾಭ ಕೆ. ವಿ.

ಮಕ್ಕಳಿಗೇಕೆ ಪುರಾಣ ಕಥೆಗಳನ್ನು ಹೇಳಬೇಕು?

ಫೆಬ್ರವರಿ 2022ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ

ಮೌಲ್ಯಗಳ ಕುಸಿತ ನಮ್ಮ ಕಾಲದ ಬಹುದೊಡ್ಡ ಆತಂಕಗಳಲ್ಲೊಂದು. ‘ಸಮಾಜದಲ್ಲಿ ಮೌಲ್ಯಗಳು ಅಧಃಪತನಗೊಂಡಿವೆ; ಯುವಕರಿಗೆ ಗೊತ್ತುಗುರಿಯಿಲ್ಲ; ಇದು ಹೀಗೆಯೇ ಮುಂದುವರಿದರೆ ಎಲ್ಲಿಗೆ ಹೋಗಿ ತಲುಪೀತು?’ ಎಂಬ ಪ್ರಶ್ನೆಯನ್ನು ಹಿರಿಯ ತಲೆಮಾರಿನ ಮಂದಿ ಆಗಾಗ ಕೇಳುವುದಿದೆ. ಅವರ ಪ್ರಶ್ನೆಯನ್ನು ಹಳಬರ ಹಳಹಳಿಕೆಯೆಂದು ಉಪೇಕ್ಷೆ ಮಾಡುವ ಪರಿಸ್ಥಿತಿಯಲ್ಲಿ ನಾವಿಲ್ಲ. ನಾವು ನಿಜಕ್ಕೂ ಒಂದು ವಿಚಿತ್ರ ಗೊಂದಲಪುರದಲ್ಲಿ ಬದುಕುತ್ತಿದ್ದೇವೆ. 

ಎಲ್ಲರೂ ತಮ್ಮ ತಮ್ಮ ಕರ್ತವ್ಯಗಳನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರೆ ಇಂತಹ ಸಮಸ್ಯೆಯೇ ಬರುತ್ತಿರಲಿಲ್ಲ. ರಾಜಕಾರಣಿ, ಅಧಿಕಾರಿ, ಶಿಕ್ಷಕ, ಇಂಜಿನಿಯರ್, ವ್ಯಾಪಾರಿ, ನೌಕರ, ವೈದ್ಯ, ಪೊಲೀಸ್, ವಕೀಲ - ಇವರೆಲ್ಲ ವಾಸ್ತವವಾಗಿ ಏನು ಮಾಡಬೇಕಿತ್ತೋ ಅದನ್ನು ಮಾಡುತ್ತಿದ್ದಾರೆಯೇ? ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆ, ಬದ್ಧತೆ ಇದೆಯೇ? ಬರುವ ಉತ್ತರ ನಿರಾಸೆಯದ್ದೇ. ಯಾಕೆ ಹೀಗಾಯಿತು? ಯೋಚನೆ ಮಾಡಿದರೆ ಸಮಸ್ಯೆಯ ಮೂಲ ಅರಿವಾಗುತ್ತದೆ: ಜನರಿಗೆ ಅವರ ಬಾಲ್ಯ, ಕೌಮಾರ್ಯಗಳಲ್ಲಿ ದೊರೆಯದ ಮೌಲ್ಯಪೋಷಣೆ.

ಹೌದು, ಬಾಲ್ಯಕಾಲದಲ್ಲಿ ದೊರೆಯದ್ದು ಬೇರೆ ಯಾವಾಗ ದೊರೆತರೂ ನಿಷ್ಪ್ರಯೋಜಕವೇ. ಅದು ನಿಜವಾದ ವ್ಯಕ್ತಿತ್ವ ರೂಪುಗೊಳ್ಳುವ ಕಾಲ. ಏನನ್ನೇ ಕೊಟ್ಟರೂ ತಕ್ಷಣ ಸ್ವೀಕರಿಸುವ ಮನಸ್ಸು. ಮೆತ್ತಗಿನ ಹಸಿಮಣ್ಣಿನ ಮುದ್ದೆಯ ಹಾಗೆ. ಸದುದ್ದೇಶದಿಂದ ಹೊರಟರೆ ಅದಕ್ಕೊಂದು ಒಳ್ಳೆಯ ರೂಪ ಕೊಡಬಹುದು. ನಿಜವಾದ ಮೌಲ್ಯಪೋಷಣೆಗೆ ಅದು ಅತ್ಯಂತ ಪ್ರಶಸ್ತ ಸಮಯ. ಅದಕ್ಕಾಗಿ ಬೇರೇನೂ ಮಾಡಬೇಕಿಲ್ಲ. ನಮ್ಮ ಪುರಾಣಗಳಲ್ಲಿನ ಜೀವಪರ ಗುಣಗಳನ್ನು ಅವರಲ್ಲಿ ತುಂಬಿದರೆ ಸಾಕು. ಉಳಿದದ್ದು ತಾನಾಗಿಯೇ ನಡೆಯುತ್ತದೆ.

ಭಾರತೀಯ ಪುರಾಣಗಳು ಮೌಲ್ಯಗಳ ಮಹಾಸಾಗರಗಳು. ನಮ್ಮ ಸಂಸ್ಕೃತಿಯ ಬೇರು-ಬಿಳಲುಗಳು ಅವುಗಳಲ್ಲಿ ಹಾಸುಹೊಕ್ಕಾಗಿವೆ. ನೀತಿ-ಅನೀತಿ, ಒಳ್ಳೆಯದು-ಕೆಟ್ಟದ್ದು, ಧರ್ಮ-ಅಧರ್ಮ ಎಲ್ಲವುಗಳಿಗೂ ಉದಾಹರಣೆ ಅವುಗಳಲ್ಲಿವೆ. ಯಾವುದೇ ಕಥೆ ಮುಕ್ತಾಯವಾಗುವುದೇ ಕೆಟ್ಟ ವ್ಯಕ್ತಿ ಅಥವಾ ಕೆಟ್ಟ ಗುಣಕ್ಕೆ ಸೋಲಾಗುವಲ್ಲಿ. ಅಧರ್ಮದ ಸೋಲು, ಧರ್ಮದ ಗೆಲವು ಅವುಗಳ ಮೂಲ ತಿರುಳು. ಮಕ್ಕಳಿಗೆ ಎಳವೆಯಲ್ಲೇ ಅವುಗಳ ಪರಿಚಯ ಆಗುವುದರಿಂದ ಅಂತಹದೊಂದು ಭಾವನೆ ಅವರ ವ್ಯಕ್ತಿತ್ವದ ಭಾಗವೇ ಆಗುತ್ತದೆ.

ಪ್ರೀತಿ, ಸಹಾನುಭೂತಿ, ಸಹನೆ, ಗೌರವ, ದಯೆ, ಕರುಣೆ, ಅನುಕಂಪ, ತ್ಯಾಗ, ದಾನ, ಸ್ನೇಹ – ಮೊದಲಾದವು ಒಂದು ಉತ್ತಮ ಸಮಾಜ ಎಲ್ಲ ಕಾಲದಲ್ಲೂ ಬಯಸುವ ಮಾನವೀಯ ಗುಣಗಳು; ಅಂದಮೇಲೆ ಇಂಥವುಗಳ ಕೊರತೆಯೇ ಸಮಾಜದಲ್ಲಿ ನಾವಿಂದು ಕಾಣುವ ಅಸ್ಥಿರತೆ ಹಾಗೂ ಗೊಂದಲಗಳಿಗೆ ಕಾರಣ ಎಂದು ಬೇರೆ ಹೇಳಬೇಕಾಗಿಲ್ಲ. ನಮ್ಮ ಪುರಾಣಗಳಲ್ಲಿ ಇಂತಹ ಮೌಲ್ಯಗಳ ಪೋಷಣೆ ಧಾರಾಳವಾಗಿ ಕಾಣಸಿಗುತ್ತದೆ. ರಾಮಾಯಣ, ಮಹಾಭಾರತ, ಭಾಗವತಗಳಲ್ಲೆಲ್ಲ ದೊರೆಯುವುದು ಇಂತಹ ಆದರ್ಶಗಳ ಹುಲುಸಾದ ಫಸಲೇ. ಅವುಗಳ ಬೀಜಗಳು ನಮ್ಮ ಮಕ್ಕಳ ಮನಸ್ಸುಗಳಲ್ಲಿ ಬಿತ್ತನೆಯಾಗಬೇಕು. ಬಿತ್ತಿದಂತೆ ಬೆಳೆ ಅಲ್ಲವೇ?

ಮಕ್ಕಳಿಗೆ ಇನ್ನೇನು ಹೇಳದಿದ್ದರೂ ನಮ್ಮ ರಾಮಾಯಣ-ಮಹಾಭಾರತಗಳ ಕಥೆಗಳನ್ನು ದಾಟಿಸಲೇಬೇಕು. ಅವುಗಳನ್ನು ಹೇಳಿ ಮುಗಿಸುವ ಹೊತ್ತಿಗೆ ಎಂತೆಂತಹ ವ್ಯಕ್ತಿಗಳು, ಮೌಲ್ಯಗಳನ್ನು ಮಕ್ಕಳಿಗೆ ಪರಿಚಯ ಮಾಡಿಸಬಹುದು! ರಾಮನೆಂಬ ಒಂದು ವ್ಯಕ್ತಿತ್ವ ಸಾಕು ಮಕ್ಕಳಿಗೆ ಆದರ್ಶ ಜೀವನವೆಂದರೆ ಎಂತಹದೆಂಬುದನ್ನು ಮನದಟ್ಟು ಮಾಡಿಸಲು. ಆದರ್ಶ ಪುತ್ರ, ಆದರ್ಶ ತಂದೆ, ಆದರ್ಶ ಅಣ್ಣ, ಆದರ್ಶ ಚಕ್ರವರ್ತಿ, ಆದರ್ಶ ಪತಿ, ಆದರ್ಶ ಸ್ನೇಹಿತ- ಆತನ ವ್ಯಕ್ತಿತ್ವದ ಒಂದೊಂದು ಆಯಾಮವೂ ಆದರ್ಶಮಯ. ವಯಸ್ಸಾದ ತಂದೆ-ತಾಯಿಯರೊಂದಿಗೆ ಮಕ್ಕಳು ಹೇಗೆ ವ್ಯವಹರಿಸಬೇಕು, ಮಕ್ಕಳೊಂದಿಗೆ ಎಂತಹ ಸಂಬಂಧ ಹೊಂದಿರಬೇಕು, ಸಹೋದರರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಹೇಗೆ ನಡೆದುಕೊಳ್ಳಬೇಕು, ರಾಜನಾದವನು ಪ್ರಜೆಗಳನ್ನು ಹೇಗೆ ಪಾಲಿಸಬೇಕು ಎಲ್ಲವಕ್ಕೂ ಒಂದು ಮಾದರಿ ಹಾಕಿಕೊಟ್ಟವನು ಶ್ರೀರಾಮ. ಅದಕ್ಕೇ ಅವನು ಜ್ಞಾನಿಗಳಿಂದ ಪುರುಷೋತ್ತಮನೆಂದು ಕರೆಸಿಕೊಂಡದ್ದು.

ಮಕ್ಕಳು ಮೌಲ್ಯಗಳನ್ನು ಬಹುಬೇಗನೆ ಗುರುತಿಸಿಕೊಳ್ಳುತ್ತಾರೆ ಮತ್ತು ಅವುಗಳು ತಮಗೆ ಬೇಕಾದವೆಂದು ಆರಿಸಿಕೊಳ್ಳುತ್ತಾರೆ. ರಾಮ, ಭರತ, ಲಕ್ಷ್ಮಣ, ಸೀತೆ, ಆಂಜನೇಯ, ಅಂಗದ, ಜಟಾಯು, ಶಬರಿ, ಗುಹ, ವಿಭೀಷಣ, ಜಾಂಬವ, ಮಂಡೋದರಿ- ಇಂಥವರಿಂದ ಒಳ್ಳೆಯತನ ಎಂದರೆ ಏನೆಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಹೇಗಿರಬಾರದು ಎಂಬುದನ್ನು ಕೈಕೇಯಿ, ಮಂಥರೆ, ವಾಲಿ, ಶೂರ್ಪನಖಿ, ರಾವಣ, ಕುಂಭಕರ್ಣ ಮುಂತಾದ ಪಾತ್ರಗಳಿಂದ ಅರ್ಥ ಮಾಡಿಕೊಳ್ಳುತ್ತಾರೆ. ಪುಟ್ಟ ಅಳಿಲಿನ ಕಥೆಯೂ ಅವರಲ್ಲೊಂದು ದೊಡ್ಡ ಕನಸನ್ನು ತುಂಬಬಲ್ಲುದು. ಭರತದ ಭ್ರಾತೃಪ್ರೇಮ, ಹನೂಮಂತನ ಭಕ್ತಿ, ವಿಭೀಷಣದ ಧಾರ್ಮಿಕತೆ, ಶಬರಿಯ ಶುದ್ಧಾಂತಃಕರಣ ಮಕ್ಕಳಲ್ಲೊಂದು ಹೊಸ ಲೋಕವನ್ನು ತೆರೆಯಬಹುದು.

ಮಹಾಭಾರತವೇ ಇನ್ನೊಂದು ಜಗತ್ತು. ಧರ್ಮರಾಯ, ಶ್ರೀಕೃಷ್ಣ, ಭೀಷ್ಮ, ಪಾಂಚಾಲಿ, ಭೀಮ, ಏಕಲವ್ಯ, ದ್ರೋಣ, ಕರ್ಣ, ವಿದುರ, ಸುಧಾಮ, ಅಭಿಮನ್ಯು ಮುಂತಾದ ಹತ್ತುಹಲವು ಪಾತ್ರಗಳು ಮಕ್ಕಳನ್ನು ಇನ್ನಿಲ್ಲದಂತೆ ಆಕರ್ಷಿಸಬಲ್ಲವು. ದುರ್ಯೋಧನ, ಶಕುನಿ, ಕೀಚಕ, ಶಿಶುಪಾಲ, ಜರಾಸಂಧ ಮುಂತಾದ ಪಾತ್ರಗಳನ್ನು ನೋಡಿ ಬದುಕಿನಲ್ಲಿ ಹೇಗೆ ಇರಬಾರದೆಂದು ಅವರು ಅರ್ಥಮಾಡಿಕೊಳ್ಳಬಲ್ಲರು. ಎಲ್ಲ ಪುರಾಣ ಕಥೆಗಳ ಅಂತಿಮ ಸಾರ ಒಂದೇ- ಒಳ್ಳೆಯದಕ್ಕೆ ಒಳ್ಳೆಯದಾಗುತ್ತದೆ, ಕೆಟ್ಟದ್ದರಿಂದ ಕೆಟ್ಟದ್ದಾಗುತ್ತದೆ. ಅಧರ್ಮಕ್ಕೆ ಸೋಲು, ಧರ್ಮಕ್ಕೆ ವಿಜಯ. 

ಪುರಾಣಗಳೆಂದರೆ ವರ್ತಮಾನಕ್ಕೆ ವಿರುದ್ಧವಾದವು, ಬದಲಾದ ಕಾಲಕ್ಕೆ ಅಗತ್ಯವಿರುವ ಮೌಲ್ಯಗಳಿಗೆ ವಿರುದ್ಧವಾದವು ಎಂಬೊಂದು ತಪ್ಪು ಕಲ್ಪನೆ ಇದೆ. ಆದರೆ ನಾವು ಅರ್ಥಮಾಡಿಕೊಳ್ಳಬೇಕಿರುವುದೆಂದರೆ ಪುರಾಣಗಳೆಂದರೆ ಹಳಸಲು ಕಥೆಗಳಲ್ಲ. ಪ್ರತಿಗಾಮಿ ಚಿಂತನೆಗಳಲ್ಲ. ಅವು ವರ್ತಮಾನದ ಪ್ರತಿಬಿಂಬಗಳೂ ಹೌದು. ಈ ಪುರಾಣಗಳು ಎಷ್ಟು ಹೊಸತಾಗಿವೆಯೆಂದರೆ ಆಧುನಿಕ ಕಾಲದೊಂದಿಗೂ ಯಶಸ್ವಿಯಾಗಿ ಸಂವಾದ ನಡೆಸಬಲ್ಲವು. ಪ್ರಜಾಪ್ರಭುತ್ವ. ಜಾತ್ಯತೀತತೆ, ಸಮಾನತೆ, ಹೆಣ್ತನ, ಸಾಮರಸ್ಯ, ಉದಾರಶೀಲತೆ, ಅಹಿಂಸೆ ಮೊದಲಾದ ‘ಆಧುನಿಕ’ ಮೌಲ್ಯಗಳು ಪುರಾಣಗಳಲ್ಲಿಯೂ ಧಾರಾಳವಾಗಿ ಸಿಗುತ್ತವೆ. ಜಾತಿ, ವರ್ಗಗಳಿಗಿಂತ ವಿದ್ಯೆ ಮತ್ತು ಗುಣ ಮುಖ್ಯ ಎಂಬ ಚಿಂತನೆಯನ್ನು ಪುರಾಣ ಕಥೆಯೊಂದರ ಮೂಲಕವೂ ಮಕ್ಕಳಿಗೆ ತಿಳಿಹೇಳಲು ಸಾಕಷ್ಟು ಅವಕಾಶ ಇದೆ.

ಪುರಾಣಲೋಕದಲ್ಲಿ ನಮಗೆದುರಾಗುವ ಬಾಲಕರಂತೂ ಮಕ್ಕಳಿಗೆ ಹೆಚ್ಚು ಆಪ್ತ ಪಾತ್ರಗಳೆನಿಸಬಲ್ಲವು. ಧ್ರುವ, ನಚಿಕೇತ, ಮಾರ್ಕಂಡೇಯ, ಪ್ರಹ್ಲಾದ, ಜಡಭರತ, ಅಭಿಮನ್ಯು, ಸುಧನ್ವ, ಬಭ್ರುವಾಹನ, ಅಷ್ಟಾವಕ್ರ, ಭಗೀರಥ, ಸುಧಾಮ, ಸತ್ಯಕಾಮ ಮೊದಲಾದ ಉದಾತ್ತ ಬಾಲಪಾತ್ರಗಳು ಮಕ್ಕಳಲ್ಲಿ ಅಚ್ಚಳಿಯದೆ ಉಳಿಯಬಲ್ಲವು. ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕೇಸಿಗುತ್ತದೆ ಎಂದು ಸಾರುವ ಭಗೀರಥ, ಧ್ರುವ ಮುಂತಾದವರ ಕಥೆ; ಎಲ್ಲರೂ ಸಮಾನರೆಂದು ಸಾರುವ ಜಡಭರತನ ಇತಿಹಾಸ; ಬುದ್ಧಿ, ಸಂಸ್ಕಾರ, ಶ್ರದ್ಧೆ ಇದ್ದರೆ ಆಯುಷ್ಯವೂ ಹೆಚ್ಚುತ್ತದೆ ಎಂಬ ಮಾರ್ಕಂಡೇಯನ ಚರಿತ್ರೆ, ಸಾತ್ವಿಕತೆಯದ್ದೇ ಎಂದಿಗೂ ಗೆಲುವು ಎಂಬ ಪ್ರಹ್ಲಾದನ ನಿದರ್ಶನ, ಅಂತರ್ಯದ ವಿದ್ಯೆಗೆ ಶಾಶ್ವತ ಮೌಲ್ಯ ಎಂಬ ಸಾರವುಳ್ಳ ಜಡಭರತನ ಕಥೆ; ವಿದ್ಯೆ ಕಲಿವ ಹಂಬಲವುಳ್ಳವನಿಗೆ ಯಾವ ಸಮಸ್ಯೆಯೂ ಅಡ್ಡಿಯಲ್ಲ ಎಂದು ಪ್ರತಿಪಾದಿಸುವ ಏಕಲವ್ಯನ ಉದಾಹರಣೆ... ಮಕ್ಕಳಿಗೆ ಎಲ್ಲವೂ ಅರ್ಥವಾಗುತ್ತದೆ. ಒಂದೊಂದು ಕಥೆಯನ್ನು ಕೇಳುತ್ತಿದ್ದ ಹಾಗೆ ಅದು ಅವರ ವ್ಯಕ್ತಿತ್ವದ ಭಾಗವಾಗುತ್ತಾ ಹೋಗುತ್ತದೆ. ಅವರಿಗೆ ಗೊತ್ತಿಲ್ಲದಂತೆ ಕಥೆಗಳು ಅವರೊಳಗೆ ಹೊಸ ಜಗತ್ತನ್ನು ತೆರೆಯುತ್ತಾ ಭವಿಷ್ಯದ ಸುಂದರ ಬದುಕಿಗೆ ಅವರನ್ನು ಸಿದ್ಧಗೊಳಿಸುತ್ತವೆ. 

ಸತ್ಯಹರಿಶ್ಚಂದ್ರನ ಕುರಿತಾದ ಕಥೆ, ಶ್ರವಣಕುಮಾರನ ಪಿತೃಭಕ್ತಿಯ ದೃಷ್ಟಾಂತ ತಮ್ಮ ದೃಷ್ಟಿಕೋನವನ್ನೇ ಬದಲಾಯಿಸಿತೆಂಬುದನ್ನು ಮಹಾತ್ಮ ಗಾಂಧೀಜಿಯಂಥವರೇ ತಮ್ಮ ಆತ್ಮಕಥನದಲ್ಲಿ ಬರೆದುಕೊಂಡಿದ್ದಾರೆ. ಪುರಾಣಗಳಿಂದಾಗಿ ತಮ್ಮ ಬದುಕು ಹದಗೆಟ್ಟಿತೆಂದು ಹೇಳಿದವರು ಯಾರೂ ಇಲ್ಲ. ಅವು ಜೀವನವನ್ನು ಪಕ್ವಗೊಳಿಸುವ ಪ್ರಕ್ರಿಯೆ ವಿಸ್ಮಯಕಾರಿ. ಹಾಗೆಂದು ಪುರಾಣಗಳಲ್ಲಿರುವುದನ್ನೆಲ್ಲ ಇದ್ದಹಾಗೇ ಸ್ವೀಕರಿಸಬೇಕೆಂದು ಸ್ವತಃ ನಮ್ಮ ಹಿರಿಯರೇ ಹೇಳಿಲ್ಲ. ಕಾಳಿದಾಸನ ‘ಮಾಲವಿಕಾಗ್ನಿಮಿತ್ರಮ್’ ನಾಟಕದಲ್ಲಿ ಬರುವ ಮಾತಿದು:

ಪುರಾಣಮಿತ್ಯೇವ ನ ಸಾಧು ಸರ್ವಂ, ನ ಚಾಪಿ ಕಾವ್ಯಂ ನವಮಿತ್ಯವದ್ಯಂ |

ಸಂತಃ ಪರೀಕ್ಷ್ಯಾನ್ಯತರದ್ಭಜನ್ತೇ, ಮೂಢಃ ಪರಪ್ರತ್ಯಯನೇಯಬುದ್ಧಿಃ ||

ಅಂದರೆ, ಹಳೆಯದೆಂದ ಮಾತ್ರಕ್ಕೆ ಎಲ್ಲ ಕಾವ್ಯವೂ ಚೆನ್ನೆಂದು ಹೇಳಲಾಗದು; ಹೊಸತೆಲ್ಲವೂ ಕೆಟ್ಟವಾಗವು. ವಿವೇಕಿಗಳು ತಮ್ಮ ಬುದ್ಧಿಯಿಂದ ಪರೀಕ್ಷಿಸಿ, ಉತ್ತಮ ಕೃತಿಯನ್ನು ಪುರಸ್ಕರಿಸುತ್ತಾರೆ. ಮೂಢರು ಇನ್ನೊಬ್ಬರ ಹೇಳಿಕೆಯನ್ನು ಅನುಸರಿಸಿ ಅದರಂತೆ ನಡೆಯುತ್ತಾರೆ.

ಮಕ್ಕಳಲ್ಲಿ ಅಂತಹ ವಿವೇಚನಾಗುಣವನ್ನು ಬೆಳೆಸುವ ಕರ್ತವ್ಯವೂ ನಮ್ಮಲ್ಲಿದೆ. ಒಳ್ಳೆಯದು ಕೆಟ್ಟದನ್ನು ಗುರುತಿಸಿ ಸ್ವತಂತ್ರ ತೀರ್ಮಾನಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಅವರು ಕಾಲಕ್ರಮೇಣ ಪಡೆದುಕೊಳ್ಳುತ್ತಾರೆ. ಅದಕ್ಕೆ ಸೂಕ್ತ ಮೂಲಪೋಷಣೆಯನ್ನು ನೀಡುವ ಜವಾಬ್ದಾರಿ ಹಿರಿಯರದ್ದು. ಅದನ್ನು ಸಕಾಲದಲ್ಲಿ ಮಾಡದೆ, ಹೊಸ ತಲೆಮಾರನ್ನು ಹಳಿಯುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ನಾವು ನಿರಾಶಾವಾದಿಗಳಾಗಬಾರದು ನಿಜ, ಆದರೆ ಆಶಾವಾದಿಗಳಾಗಿರುವುದಕ್ಕೂ ಒಂದು ಯೋಗ್ಯತೆ ಬೇಕು.

- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ಜನವರಿ 9, 2022

ನಿಮ್ಮನ್ನು ನೀವು ನಂಬಿ, ಜಗತ್ತು ನಿಮ್ಮ ಕಾಲಬುಡದಲ್ಲಿ ಬಂದು ಮಂಡಿಯೂರುತ್ತದೆ...

ಜನವರಿ 2022 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ

ಕಾರ್ಯನಿಮಿತ್ತ ಪಟ್ಟಣದ ದೊಡ್ಡ ಆಸ್ಪತ್ರೆಯೊಂದರ ನಿರ್ಗಮನ ದ್ವಾರದಲ್ಲಿದ್ದೆ. ತಳ್ಳುಗಾಡಿಯೊಂದನ್ನು ಅನುಸರಿಸಿ ಏಳೆಂಟು ಮಂದಿ ನಡೆದುಹೋದರು. ಒಂದಿಬ್ಬರು ಗೋಳಾಡುತ್ತಿದ್ದರೆ, ಇನ್ನುಳಿದವ ಮುಖದಲ್ಲಿ ಗಾಢ ವಿಷಣ್ಣತೆ ಮಡುಗಟ್ಟಿತ್ತು. ಗಾಡಿಯ ಮೇಲೆ ಯುವಕನೊಬ್ಬ ಶವವಾಗಿ ಮಲಗಿದ್ದ. ಇನ್ನೂ 26ರ ಗಟ್ಟಿ ಜವ್ವನಿಗ.

“ಲವ್ ಫೈಲ್ಯೂರಂತೆ; ನಿದ್ದೆ ಮಾತ್ರೆ ನುಂಗಿದ್ದನಂತೆ...” ಆಸ್ಪತ್ರೆಯ ಕಾವಲು ಸಿಬ್ಬಂದಿ ನಿರ್ಲಿಪ್ತ ಧ್ವನಿಯಲ್ಲಿ ಮಾತಾಡಿಕೊಳ್ಳುತ್ತಿದ್ದರು. “ಯಾವುದಾದರೂ ಒಳ್ಳೆ ವಿಷ ಕುಡಿದು ಅಲ್ಲೇ ಸಾಯಬಹುದಿತ್ತು. ಅರೆಜೀವವಾಗಿ ಬಂದಿದ್ದ. ಆ ಅಪ್ಪ-ಅಮ್ಮನ ಗೋಳಾಟ ನೋಡಕ್ಕಾಗಲ್ಲ. ಯಾಕಾಗಿ ಇಂಥ ಮಕ್ಕಳು ಹುಟ್ತಾರೋ...” ಅದು ಅವರ ಮುಂದಿನ ಸಂಭಾಷಣೆಯ ಸಾರ.

ಯಾಕಾಗಿ ಇಂಥ ಮಕ್ಕಳು ಹುಟ್ತಾರೋ... ಆ ಪ್ರಶ್ನೆಯ ಹಿಂದೆ ನೋವು, ಅಸಹನೆ, ಸಿಟ್ಟು ಎಲ್ಲ ಇದೆ. ಆದರೆ ಆ ಪ್ರಶ್ನೆಯನ್ನು ಬೇರೆ ರೀತಿಯಲ್ಲಿ ಕೇಳಬೇಕು ಅನಿಸಿತು: ಯಾಕಾಗಿ ನಮ್ಮ ಮಕ್ಕಳು ಇಂತಹ ಯುವಕರಾಗಿ ಬದಲಾಗ್ತಾರೋ? ಯಾಕಾಗಿ ಅವರಲ್ಲಿ ಇಂತಹ ಮನಸ್ಥಿತಿ ನಿರ್ಮಾಣವಾಗುತ್ತೋ? ಯಾಕಾಗಿ ಇಂತಹ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೋ?

ನಿನ್ನೆ ಮೊನ್ನೆ ಪರಿಚಯವಾದ ಹುಡುಗಿ ಕೈಕೊಟ್ಟು ಹೋಗಿರಬಹುದು; ಇವನು ಹುಟ್ಟುವುದಕ್ಕೂ ಮೊದಲಿನ ಒಂಬತ್ತು ತಿಂಗಳಿಂದಲೇ ಹೊತ್ತು, ಬೆಳೆಸಿ, ಆ ಹುಡುಗಿಗಿಂತಲೂ ಹೆಚ್ಚು ಮುಚ್ಚಟೆಯಿಂದ 26 ವರ್ಷ ಸಾಕಿ ಸಲಹಿದ ಅಪ್ಪ-ಅಮ್ಮ ಎಂಬ ಜೀವಗಳಿಗೆ ಯಾವ ಬೆಲೆಯೂ ಇಲ್ಲವೇ? ಇಂತಹ ಪ್ರಶ್ನೆ ಎಲ್ಲರ ಮನಸ್ಸಿನಲ್ಲೂ ಮೂಡುವುದು ಸಹಜ. ಆದರೆ ಉತ್ತರಿಸುವುದು ಅಷ್ಟು ಸುಲಭವಲ್ಲ.

ಯುವಕರಲ್ಲೇ ಹೆಚ್ಚು ಆತ್ಮಹತ್ಯೆ:

ನಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಪೈಕಿ ಯುವಕರ ಸಂಖ್ಯೆಯೇ ಹೆಚ್ಚು. ರಾಷ್ಟ್ರೀಯ ಅಪರಾಧ ದಾಖಲು ಸಂಸ್ಥೆ (NCRB)ಯ 2019ರ ವರದಿಯ ಪ್ರಕಾರ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಪೈಕಿ ಶೇ. 35.1ರಷ್ಟು ಮಂದಿ 18ರಿಂದ 30 ವರ್ಷದವರೂ, ಶೇ. 31.8ರಷ್ಟು ಮಂದಿ 30ರಿಂದ 45 ವರ್ಷದವರೂ ಇದ್ದಾರೆ. ಅಂದರೆ ಒಟ್ಟಾರೆಯಾಗಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ. 67ರಷ್ಟು ಮಂದಿ 18ರಿಂದ 45ವರ್ಷ ವಯಸ್ಸಿನ ಯುವಕರೇ ಇದ್ದಾರೆ! 2019ರಲ್ಲಿ ದೇಶದಲ್ಲಿ ನಡೆದ 1,39,123 ಆತ್ಮಹತ್ಯೆಗಳ ಪೈಕಿ 93,061 ಮಂದಿ ಯುವಕರೇ ಆಗಿದ್ದಾರೆ. ಇದು ನಿಜಕ್ಕೂ ಆಘಾತಕಾರಿ ವಿಷಯ.

ಅತ್ಯಂತ ಮುಂದುವರಿದ ದೇಶ ಅಮೇರಿಕದಲ್ಲಿ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಯುವಕರಲ್ಲ, 65 ವರ್ಷ ಮೀರಿದ ವೃದ್ಧರು. ಅಲ್ಲಿ ಆತ್ಮಹತ್ಯೆಗೆ ಒಳಗಾಗುತ್ತಿರುವ ಈ ವಯೋಮಾನದ ಮಂದಿ ಲಕ್ಷಕ್ಕೆ 28ರಷ್ಟು.

ಆತ್ಮಹತ್ಯೆ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಏರುತ್ತಲೇ ಇದೆ. 2019ಕ್ಕೆ ಹೋಲಿಸಿದರೆ 2020ರಲ್ಲಿ ಆತ್ಮಹತ್ಯೆ ಪ್ರಮಾಣ ಶೇ. 10ರಷ್ಟು ಹೆಚ್ಚಾಗಿದೆ. 2020ರ ಎನ್‍ಸಿಆರ್‍ಬಿ ವರದಿಯ ಪ್ರಕಾರ ಕೊರೋನ ಮಹಾಮಾರಿ ಅಪ್ಪಳಿಸಿದ ಸದರಿ ವರ್ಷದಲ್ಲಿ ಇಲ್ಲಿಯವರೆಗಿನ ಅತಿಹೆಚ್ಚು ಆತ್ಮಹತ್ಯೆ ಪ್ರಕರಣಗಳು ಭಾರತದಲ್ಲಿ ದಾಖಲಾಗಿವೆ. 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ 1,53,052 ಮಂದಿಯ ಪೈಕಿ ವಿದ್ಯಾರ್ಥಿಗಳ ಪ್ರಮಾಣ ಶೇ. 21.20ರಷ್ಟು ಹೆಚ್ಚಾಗಿದೆ ಎಂಬುದು ಇನ್ನೂ ಗಂಭೀರವಾದ ವಿಷಯ.

ದೇಶದಲ್ಲಿ ಪ್ರತೀ ಗಂಟೆಗೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂಬುದು ಎನ್‍ಸಿಆರ್‍ಬಿಯ ವರದಿಯಿಂದ ವ್ಯಕ್ತವಾಗುವ ಅಂಶ. 2019ರಲ್ಲಿ ಕಳೆದ 25 ವರ್ಷಗಳಲ್ಲೇ ಅತಿಹೆಚ್ಚು ವಿದ್ಯಾರ್ಥಿಗಳ ಆತ್ಮಹತ್ಯೆ (10,335) ದಾಖಲಾಗಿದೆ. 1995ರಿಂದ 2019ರವರೆಗಿನ ಅಂಕಿಅಂಶಗಳನ್ನು ತೆಗೆದುಕೊಂಡರೆ ನಮ್ಮ ದೇಶದಲ್ಲಿ 1.7 ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಎಂಬ ಭೂತಕ್ಕೆ ಬಲಿಯಾಗಿದ್ದಾರೆ.

2019ರ ಅಂಕಿ ಅಂಶಗಳನ್ನು ನೋಡಿದರೆ, ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಆತ್ಮಹತ್ಯೆಗಳು ನಡೆದಿವೆ. ಹೆಚ್ಚು ಆತ್ಮಹತ್ಯೆ ನಡೆಯುವ ಐದು ರಾಜ್ಯಗಳಲ್ಲಿ ಕರ್ನಾಟಕವೂ ಸೇರಿಕೊಂಡಿದೆ ಎಂಬುದೊಂದು ಗಮನಾರ್ಹ ಸಂಗತಿ. ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಕರ್ನಾಟಕಗಳಲ್ಲಿ ನಡೆದ ಆತ್ಮಹತ್ಯೆ ಪ್ರಕರಣಗಳನ್ನು ಸೇರಿಸಿದರೆ ಒಟ್ಟಾರೆ ಪ್ರಕರಣಗಳ ಶೇ. 44ರಷ್ಟು ಆಗುತ್ತದೆ. ಅಂದರೆ ಸುಮಾರು ಅರ್ಧದಷ್ಟು ಪ್ರಕರಣಗಳು ಕೇವಲ ಐದು ರಾಜ್ಯಗಳಲ್ಲಿ ನಡೆದಿವೆ.

ಆತ್ಮಹತ್ಯೆಗೇನು ಕಾರಣ?

ಕೌಟುಂಬಿಕ ಸಮಸ್ಯೆಗಳು, ಅನಾರೋಗ್ಯ, ಡ್ರಗ್ಸ್ ಚಟದಿಂದ ಉಂಟಾಗುವ ಖಿನ್ನತೆ, ಮದುವೆಗೆ ಸಂಬಂಧಿಸಿದ ಸಮಸ್ಯೆಗಳು, ಪ್ರೇಮವೈಫಲ್ಯ, ಸಾಲದ ಸಮಸ್ಯೆ ಇತ್ಯಾದಿಗಳು ನಮ್ಮ ದೇಶದಲ್ಲಿ ನಡೆಯುತ್ತಿರುವ ಆತ್ಮಹತ್ಯೆಗಳಿಗೆ ಪ್ರಮುಖ ಕಾರಣಗಳು. ಕೌಟುಂಬಿಕ ಸಮಸ್ಯೆಗಳಿಂದಾಗಿ ಅತಿಹೆಚ್ಚು ಅಂದರೆ ಶೇ. 32.4ರಷ್ಟು ಆತ್ಮಹತ್ಯೆಗಳು ನಡೆಯುತ್ತವೆ. ಅನಾರೋಗ್ಯದಿಂದಾಗಿ ಶೇ. 17ರಷ್ಟು, ಸಾಲದಿಂದಾಗಿ ಶೇ. 4.2ರಷ್ಟು ಆತ್ಮಹತ್ಯೆಗಳು ನಡೆಯುತ್ತವೆ. ಶೇ. 5.6ರಷ್ಟು ಆತ್ಮಹತ್ಯೆಗಳು ಡ್ರಗ್ಸ್‍ಗೆ ಸಂಬಂಧಿಸಿದಂತೆ, ಶೇ. 5.5 ಆತ್ಮಹತ್ಯೆಗಳು ಮದುವೆಗೆ ಸಂಬಂಧಿಸಿದಂತೆ, ಶೇ. 4.5ರಷ್ಟು ಆತ್ಮಹತ್ಯೆಗಳು ಪ್ರೇಮವೈಫಲ್ಯದ ಕಾರಣಕ್ಕೆ ನಡೆಯುತ್ತವೆ ಎಂಬುದನ್ನು ನಾವಿಲ್ಲಿ ಗಂಭೀರವಾಗಿ ನೋಡಬೇಕು.

ಇವೆಲ್ಲ ಕಾರಣಗಳನ್ನು ಒತ್ತಟ್ಟಿಗಿರಿಸಿ, ‘ಯುವಕರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ?’ ಎಂದು ಸ್ಥೂಲವಾಗಿ ಕೇಳಿದರೆ ಮನೋವಿಜ್ಞಾನಿಗಳು ಕೊಡುವ ಮೊದಲನೇ ಉತ್ತರ: ‘ಕನಸುಗಳ ವೈಫಲ್ಯ’. ಅದು ಯಾವ ರೂಪದ್ದೂ ಆಗಿರಬಹುದು. ಆರ್ಥಿಕವಾಗಿ ತಾವೇನೋ ಘನವಾದದ್ದನ್ನು ಸಾಧಿಸಬೇಕು, ದೊಡ್ಡ ಉದ್ಯೋಗ ಹಿಡಿಯಬೇಕು, ಒಳ್ಳೆಯ ಜೀವನಸಂಗಾತಿ ಸಿಗಬೇಕು, ಚಂದದ ಸಂಸಾರ ನಡೆಸಬೇಕು... ಯಾವ ಕನಸೂ ಆಗಿರಬಹುದು. ಅದು ಅಂದುಕೊಂಡಂತೆ ಕೈಗೂಡದೆ ಇದ್ದಾಗ ಅವರಿಗೆ ಆತ್ಮಹತ್ಯೆಯ ದಾರಿ ಸುಲಭವಾಗಿ ಕಾಣುತ್ತದೆ.

ಯುವಕರೇಕೆ ಹೀಗೆ?

ಕನಸುಗಳನ್ನು ಕಟ್ಟಿಕೊಳ್ಳುವುದು ತಪ್ಪಲ್ಲ. ಕನಸುಗಳೇ ಬದುಕಿಗೆ ಆಧಾರ. ಅವೇ ನಮ್ಮನ್ನು ಮುನ್ನಡೆಸುವ ಶಕ್ತಿಗಳು. ಬಾಹ್ಯ ಬೆಂಬಲ ಕಡಿಮೆಯಾದಾಗ ಅಂತರಂಗವನ್ನು ತಬ್ಬಿಕೊಂಡು ನಮ್ಮೊಳಗೊಂದು ಬಲವನ್ನೂ ಛಲವನ್ನೂ ತುಂಬುವವು ಇವೇ ಕನಸುಗಳು. ಭವಿಷ್ಯದಲ್ಲಿ ದೊರೆಯಬಹುದಾದ ಯಶಸ್ಸಿನ ದೃಶ್ಶೀಕರಣ ನಮ್ಮೊಳಗೆ ಹೆಚ್ಚಿನ ಆತ್ಮವಿಶ್ವಾಸ ತುಂಬುತ್ತದೆ. ಇನ್ನಷ್ಟು ದೃಢ ಹೆಜ್ಜೆಗಳನ್ನು ಇಡುವುದಕ್ಕೆ ಸಹಕಾರಿಯಾಗುತ್ತದೆ. ಆದರೆ ನಾವು ಕಾಣುತ್ತಿರುವುದು ಕನಸು, ಇನ್ನೂ ನನಸಾಗಬೇಕಷ್ಟೆ ಎಂಬ ಎಚ್ಚರವೂ ಸದಾ ನಮ್ಮೊಂದಿಗೆ ಇರಬೇಕು. ಈ ಎಚ್ಚರ ಹೊರಟುಹೋದರೆ ನಾವು ಕಾಣುವುದು ಬರೀ ಹಗಲುಗನಸು ಆಗಿಬಿಡುತ್ತದೆ. ಅದಕ್ಕೆ ಆತ್ಮವಿಶ್ವಾಸ ತುಂಬುವ ಕಸುವು ಇರುವುದಿಲ್ಲ.

ನಮ್ಮ ಯುವತಲೆಮಾರು ಎಲ್ಲದರಲ್ಲೂ ಮುಂದಿದೆ. ಶಿಕ್ಷಣ, ಉದ್ಯೋಗ, ಸಂಶೋಧನೆ, ಸಾಧನೆ... ಯಾವ ಕ್ಷೇತ್ರವನ್ನು ತೆಗೆದುಕೊಂಡರೂ ಯುವಕರೇ ನಮ್ಮ ಮೂಲದ್ರವ್ಯ. ಅವರ ಸಾಧನೆ, ಉನ್ನತಿಗಳೇ ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತವೆ. ಎಲ್ಲದರಲ್ಲೂ ಜಗತ್ತು ಮೆಚ್ಚುವ ಸಾಧನೆ ಮಾಡಿರುವ ಯುವಕರು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಏಕೆ ಎಡವುತ್ತಿದ್ದಾರೆ?

ಹಾಗಾದರೆ ನಮ್ಮ ಯುವತಲೆಮಾರಿನ ಒಟ್ಟಾರೆ ಬೆಳವಣಿಗೆಯಲ್ಲೇ ಏನಾದರೂ ದೋಷವಿದೆಯೇ ಎಂದು ಕೇಳಿಕೊಳ್ಳಬೇಕಾಗುತ್ತದೆ. ಯೋಚಿಸಿದರೆ ‘ಹೌದು’ ಎಂಬ ಉತ್ತರ ಬರುತ್ತದೆ. ಬಾಲ್ಯ, ವಿದ್ಯಾರ್ಥಿ ಜೀವನದ ಕಾಲದಲ್ಲಿ ಏನು ಆಗಬೇಕೋ ಅದು ಆಗುತ್ತಿಲ್ಲ ಎಂಬುದು ಸ್ಪಷ್ಟ.

ಸೋಲುವುದನ್ನು ಕಲಿಸಿಲ್ಲ

ಹೊಸ ಕಾಲದ ಮಕ್ಕಳು ಬಹಳ ಬುದ್ಧಿವಂತರು. ಓದು-ಅಧ್ಯಯನದಲ್ಲಿ ಸದಾ ಮುಂದು. ಮಾತಿನಲ್ಲಿ ಪ್ರಚಂಡರು. ಚಟಪಟನೆ ಮಾತನಾಡಿ, ಹತ್ತೆಂಟು ಪ್ರಶ್ನೆಗಳನ್ನು ಕೇಳಿ ಎದುರಿಗಿರುವ ಹಿರಿಯರನ್ನು ಬೇಸ್ತು ಬೀಳಿಸಬಲ್ಲರು. ನಾವು ಅವರಿಗೆ ಕೇಳಿದ್ದೆಲ್ಲವನ್ನು ಕೊಡಿಸುತ್ತೇವೆ. ಗೊತ್ತಿದ್ದನ್ನೆಲ್ಲ ಕಲಿಸುತ್ತೇವೆ. ಟಿವಿ ತೋರಿಸುತ್ತೇವೆ. ಕಂಪ್ಯೂಟರ್ ಕೊಡಿಸುತ್ತೇವೆ. ವೀಡಿಯೋ ಗೇಮ್ ಆಡಿಸುತ್ತೇವೆ. ಅವರು ಎಲ್ಲವನ್ನೂ ಕ್ಷಣಮಾತ್ರದಲ್ಲಿ ಕಲಿತು ನಿಪುಣರಾಗಬಲ್ಲರು. ಎಲ್ಲವನ್ನೂ ಕಲಿಸುತ್ತೇವೆ, ಸೋಲುವುದನ್ನು ಮಾತ್ರ ಕಲಿಸುತ್ತಿಲ್ಲ.

ಹೌದು, ಗೆಲ್ಲುವುದನ್ನು ಕಲಿಸಬಹುದು, ಸೋಲುವುದನ್ನು ಕಲಿಸಲು ಕಷ್ಟ. ಮಕ್ಕಳಿಗೆ ಗೆಲುವಿನಲ್ಲೇ ಬದುಕಿನ ಸರ್ವಸ್ವವೂ ಇದೆ ಎಂಬ ಭ್ರಮೆ ಬೆಳೆಸುವ ನಾವು ಸೋಲೆಂದರೆ ಏನು, ಅದು ಹೇಗಿರುತ್ತದೆ, ಅದು ಎದುರಾದಾಗ ಮನಸ್ಸು ಎಷ್ಟು ಮುದುಡುತ್ತದೆ, ಅಂತಹ ಸಂದರ್ಭಗಳನ್ನು ಎದುರಿಸುವುದು ಹೇಗೆ, ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಹೇಗೆ, ಎಲ್ಲವನ್ನೂ ಮೆಟ್ಟಿನಿಂತು ಹೊಸ ಸಾಧನೆ ಮಾಡುವುದು ಹೇಗೆ ಎಂಬುದನ್ನು ಕಲಿಸಿಕೊಡುವುದೇ ಇಲ್ಲ. ಇದು ಸಮಸ್ಯೆಯ ಮೂಲ.

ಮಕ್ಕಳು ಕೇಳಿದ್ದನ್ನೆಲ್ಲ ಮರುಮಾತನಾಡದೆ ಕೊಡಿಸುವಲ್ಲಿಂದ ಇದು ಆರಂಭವಾಗುತ್ತದೆ. ಈಗಿನ ಬಹುತೇಕ ಮಕ್ಕಳಿಗೆ ದುಡ್ಡಿನ ಮೌಲ್ಯ ತಿಳಿಯದು. ಹಿಂದಿನ ತಲೆಮಾರು ಕಂಡುಂಡ ಕಷ್ಟ ಇವರಿಗಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಟ ಎಂದರೇನು ಎಂಬುದನ್ನು ಅವರು ಊಹಿಸಲೂ ಸಾಧ್ಯವಿಲ್ಲ. ಮೈಲುಗಟ್ಟಲೆ ನಡೆಯುವುದು ಏನು ಎಂಬುದು ಗೊತ್ತಿಲ್ಲ. ಅವರು ಹುಟ್ಟುವಾಗಲೇ ಮನೆಯಲ್ಲಿ ಒಂದು ಬೈಕಾದರೂ ಇದೆ. ಕಾರು ಇದ್ದರೆ ಕೇಳುವುದೇ ಬೇಡ, ಅನಿವಾರ್ಯಕ್ಕೂ ಹತ್ತು ಹೆಜ್ಜೆ ನಡೆದು ಹೋಗಲಾರರು ಅವರು. ಯಾವುದಾದರೂ ವಾಹನವೇ ಬೇಕು. ಸಾರ್ವಜನಿಕ ಬಸ್ಸುಗಳಲ್ಲಿಯೂ ಪ್ರಯಾಣಿಸಲು ಅವರು ಸಿದ್ಧರಿಲ್ಲ. ಬೇಕೆಂದಾಗ ಬಸ್ಸು ಸಿಗುವುದಿಲ್ಲ, ಅಲ್ಲಿ ಕೂರಲು ಸೀಟಿಲ್ಲ, ರಶ್ಶು ಜಾಸ್ತಿ, ಉಸಿರುಗಟ್ಟುವ ವಾತಾವರಣ, ಕುರುಕಲು ತಿಂಡಿ ತಿನ್ನಲೂ ಅವಕಾಶ ಇಲ್ಲ. ಅವರಿಗೆ ನೂರೆಂಟು ನೆಪಗಳು. ತಮ್ಮದೇ ಕಾರು ಇದ್ದರೆ ಬಹಳ ಒಳ್ಳೆಯದು. ಅಲ್ಲಿಯೂ ಧಾರಾಳ ಸ್ಥಳಾವಕಾಶ ಇರಬೇಕು. ಮಲಗಿಕೊಂಡು, ಕುಣಿದಾಡಿಕೊಂಡು ಹೋಗಲು ಸಾಧ್ಯವಿದ್ದರೆ ಇನ್ನೂ ಒಳ್ಳೆಯದು.

ಇದು ಅವರ ಮನಸ್ಥಿತಿ. ಒಂದೆರಡು ತಲೆಮಾರು ಹಿಂದಿನ ಮಂದಿ ಬಾಲ್ಯಕಾಲದಲ್ಲಿ ಅನುಭವಿಸಿದ ಕಷ್ಟ ಈಗಿನವರಿಗೆ ಇಲ್ಲ. ಕೇಳಿದ ತಕ್ಷಣ ಪೆನ್ನು, ಪೆನ್ಸಿಲು, ಪುಸ್ತಕ ಏನು ಬೇಕಾದರೂ ಹಾಜರಾಗುತ್ತದೆ. ಹಿಂದೆ ಒಂದು ಪೆನ್ನು ಸಿಗಬೇಕೆಂದರೆ ತಿಂಗಳುಗಟ್ಟಲೆ ಕಾಯಬೇಕಿತ್ತು. ಹೊಸ ಪೆನ್ಸಿಲು ಮುಂದಿನ ವರ್ಷವೇ ಸಿಗುವುದು. ಹಾಗಾಗಿ ಅದು ಬೇಗನೆ ಸವೆಯದಂತೆ, ಎಲ್ಲಿಯೂ ಕಳೆದುಹೋಗದಂತೆ ಜೋಪಾನ ಮಾಡಬೇಕು. ಚಾಕಲೇಟು ಅಪರೂಪಕ್ಕೊಮ್ಮೆ ನೆಂಟರು ತಂದರೆ ಅದೇ ವಿಶೇಷ. ಅದೂ ಐವತ್ತು ಪೈಸೆಯದ್ದು. ಈಗಿನ ಮಕ್ಕಳಿಗೆ ಐವತ್ತು ಪೈಸೆ ನೋಡಿಯೇ ತಿಳಿಯದು. ಅವರ ಕಣ್ಣಿಗೆ ಬೀಳುವುದು ಹತ್ತು ರೂಪಾಯಿ ಮೇಲಿನ ಚಾಕಲೇಟು ಅಥವಾ ಕುರುಕಲು ತಿನಿಸು.

ಒಟ್ಟಾರೆಯಾಗಿ ಇವರಿಗೆ ಕಷ್ಟಗಳ ಅರಿವು ಕಡಿಮೆ. ನಮ್ಮ ಮಕ್ಕಳು ನಮ್ಮಂತೆ ಕಷ್ಟಪಡಬಾರದು ಎಂದೇ ಎಲ್ಲ ಪೋಷಕರೂ ಭಾವಿಸುತ್ತಾರೆ. ಅದು ಸರಿ ಕೂಡ. ಆದರೆ ಬದುಕು ನಾವು ಅಂದುಕೊಂಡಹಾಗೆ ಇರುವುದಿಲ್ಲ. ಎಂತಹ ಸುಖಸವಲತ್ತುಗಳಲ್ಲಿ ಬೆಳೆದರೂ ಇಡೀ ಜೀವನ ಹೂವಿನ ಹಾಸಿಗೆಯಾಗಿರುವುದಿಲ್ಲ. ಯಾವುದಾದರೊಂದು ಸವಾಲು, ಕಷ್ಟ ಅಚಾನಕ್ಕಾಗಿ ಎದುರಾಗಿಯೇ ಆಗುತ್ತದೆ. ಅಂತಹ ಸಂಕಷ್ಟಗಳನ್ನು, ಸೋಲುಗಳನ್ನು ಎದುರಿಸುವ ಮನಸ್ಥಿತಿಯನ್ನು ಪೋಷಕರು ತಮ್ಮ ಮಕ್ಕಳಲ್ಲಿ ಬೆಳೆಸಲೇಬೇಕು. ಇಲ್ಲವಾದರೆ ಮುಂದೆ ಎದುರಾಗುವ ಸಣ್ಣ ಸಮಸ್ಯೆಯೂ ಅವರಿಗೆ ಬೆಟ್ಟದಂತೆ ಕಾಣತೊಡಗುತ್ತದೆ. ಆಗ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಳ್ಳುವ ದುರ್ಬಲ ಮನಸ್ಥಿತಿ ನಿರ್ಮಾಣವಾಗುತ್ತದೆ.

ಆಟ ಮತ್ತು ಸೋಲು

ಮನೆಮಂದಿಯ ಕತೆ ಹಾಗಿರಲಿ; ಇನ್ನೊಂದೆಡೆ ಶಾಲೆಗಳೂ ಅದನ್ನೇ ಮಾಡುತ್ತವೆ. ಮುಖ್ಯವಾಗಿ, ಶಾಲಾ ಹಂತದಲ್ಲಿ ಆಟೋಟಗಳಿಗೆ ಕೊಡುವ ಪ್ರಾಮುಖ್ಯತೆ ಗಣನೀಯವಾಗಿ ಕಡಿಮೆ ಆಗಿದೆ. ಒಂದನೇ ತರಗತಿಯಿಂದಲೇ ಅಂಕಗಳ ಓಟ ಆರಂಭವಾಗುವುದರಿಂದ ಮಕ್ಕಳಿಗೆ ಬಯಲಿನಲ್ಲಿ ಓಡುವ ಅಭ್ಯಾಸ ಇಲ್ಲ, ಅಥವಾ ಅವಕಾಶವಿಲ್ಲ. ಬಾಲ್ಯದಲ್ಲಿ ಆಟೋಟ ಬಹಳ ಮುಖ್ಯ. ಅವು ಸೋಲು ಗೆಲುವು ಎರಡನ್ನೂ ಕಲಿಸುತ್ತವೆ. ಆಟೋಟಗಳಲ್ಲಿ ಒಮ್ಮೆ ಗೆದ್ದವರು ಮರುದಿನ ಸೋಲುತ್ತಾರೆ, ಒಮ್ಮೆ ಸೋತವರು ಮಾರನೆಯ ದಿನ ಗೆಲ್ಲುತ್ತಾರೆ. ಸೋಲುಗೆಲುವುಗಳೆಲ್ಲ ಸಾಮಾನ್ಯ ಎಂಬ ಸೂಕ್ಷ್ಮ ಮಕ್ಕಳಲ್ಲಿ ಈ ಹಂತದಲ್ಲೇ ಬೆಳೆಯುತ್ತದೆ. ಆದರೆ ಅಂತಹದೊಂದು ಅವಕಾಶವನ್ನೇ ನಮ್ಮ ಸ್ಪರ್ಧಾಯುಗದ ಶಿಕ್ಷಣ ವ್ಯವಸ್ಥೆ ಕಸಿದುಕೊಂಡಿದೆ.

ಇನ್ನು ಪಠ್ಯಪುಸ್ತಕ ಆದಿಯಾಗಿ ಶಾಲಾ ಕಾಲೇಜುಗಳಲ್ಲಿ ಮಕ್ಕಳು ಯಾವ ಜೀವನ ಪಾಠ ಕಲಿಯುತ್ತಾರೆ ಎಂಬ ಪ್ರಶ್ನೆ ಈಗಲ್ಲ, ಸ್ವಾಮಿ ವಿವೇಕಾನಂದರ ಕಾಲದಿಂದಲೂ ಇದೆ. “ನಮ್ಮ ಶಿಕ್ಷಣವೆಲ್ಲ ನಿಷೇಧಾತ್ಮಕವಾಗಿದೆ; ವ್ಯಕ್ತಿಯನ್ನು ಬೆಳೆಸುವ ಬದಲು ಅದು ಆತನನ್ನು ಇನ್ನಷ್ಟು ನಿಸ್ಸತ್ವಗೊಳಿಸುತ್ತದೆ” ಎಂದು ಬಹಳ ಹಿಂದೆಯೇ ಬೇಸರಪಟ್ಟುಕೊಂಡಿದ್ದರು ಅವರು. “ಇದು ಪುರುಷಸಿಂಹರನ್ನು ಮಾಡುವ ವಿದ್ಯಾಭ್ಯಾಸವಲ್ಲ. ಇದು ಕೇವಲ ನಿಷೇಧಮಯವಾದುದು. ನಿಷೇಧಮಯ ಶಿಕ್ಷಣ ಮೃತ್ಯುವಿಗಿಂತ ಘೋರವಾದುದು... ನಮ್ಮ ಶಿಕ್ಷಣ ಅದನ್ನು ಮಾಡಬೇಡ, ಇದನ್ನು ಮಾಡಬೇಡ ಎಂದು ಬೋಧಿಸುತ್ತದೆಯೇ ಹೊರತು, ಇದನ್ನು ಮಾಡು ಎಂದು ವಿದ್ಯಾರ್ಥಿಗೆ ಸ್ಪಷ್ಟ ನಿರ್ದೇಶನವನ್ನು ನೀಡುವಲ್ಲಿ ಸೋತಿದೆ” ಎಂದಿದ್ದರು ವಿವೇಕಾನಂದರು. ಆ ಪರಿಸ್ಥಿತಿ ವಿಶೇಷವಾಗಿ ಸುಧಾರಿಸಿದಂತೆ ಕಾಣುತ್ತಿಲ್ಲ. ಇದೇ ತಲೆಮಾರು ಬೆಳೆದು ದೊಡ್ಡವರಾದ ಮೇಲೆ ಇನ್ನೆಂತಹ ಬಲಿಷ್ಠ ಮನಸ್ಥಿತಿ ನಿರ್ಮಾಣವಾದೀತು?

ಶಕ್ತಿಯೇ ಜೀವನ

‘ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ’- ಇದು ಸ್ವಾಮಿ ವಿವೇಕಾನಂದರ ಜೀವನ ಸಂದೇಶ. ಅವರು ನೀಡಿದ ಸಮಸ್ತ ಬೋಧನೆಯ ಸಾರ ಇದೇ. ಆತ್ಮವಿಶ್ವಾಸ ಕೊನೆಯಾದಲ್ಲಿಗೆ ಜೀವನ ಕೊನೆಯಾಯಿತೆಂದೇ ಅರ್ಥ. ಅದೊಂದು ಇದ್ದರೆ ಉಳಿದ ಯಾವ ಸಮಸ್ಯೆಗಳೂ ಸಮಸ್ಯೆಗಳೇ ಅಲ್ಲ. ಬೆಟ್ಟದಂತಹ ಸವಾಲುಗಳೂ ಆತ್ಮವಿಶ್ವಾಸದ ಎದುರು ಮಂಜಿನಂತೆ ಕರಗಬಲ್ಲವು.

ಲೇಖನದ ಆರಂಭದಲ್ಲಿ ಹೇಳಿದ- ಪ್ರೇಮವೈಫಲ್ಯದಿಂದ ನೊಂದು ಆತ್ಮಹತ್ಯೆಗೆ ಶರಣಾದ 26ರ ಯುವಕನ – ನಿದರ್ಶನವನ್ನು ಮತ್ತೆ ತೆಗೆದುಕೊಳ್ಳೋಣ. ಪ್ರೇಮವೈಫಲ್ಯವೆಂಬುದು ನಿಜಕ್ಕೂ ಪ್ರಾಣವನ್ನೇ ಕಳೆದುಕೊಳ್ಳುವಂತಹ ಸಮಸ್ಯೆಯೇ? ಜೀವನದಲ್ಲಿ ಒಮ್ಮೆಯಾದರೂ ಪ್ರೀತಿ-ಪ್ರೇಮದಂತಹ ಸೆಳೆತಕ್ಕೆ ಒಳಗಾಗದವರು ಬಹುಶಃ ಯಾರೂ ಇಲ್ಲ, ಅಥವಾ ಅವರದ್ದು ತೀರಾ ಸಣ್ಣಪ್ರಮಾಣ. ಅವರೆಲ್ಲ ಅದರಲ್ಲಿ ಯಶಸ್ವಿಯಾದರೆ? ಇಲ್ಲ ಎನ್ನುವವರೆಲ್ಲ ಆತ್ಮಹತ್ಯೆ ಮಾಡಿಕೊಂಡರೇ? ಆ ವಯಸ್ಸಿಗೆ ಇಷ್ಟಪಟ್ಟವರು ದೂರವಾದಾಗ ದೊಡ್ಡದೊಂದು ಸೊತ್ತು ಕಳೆದುಹೋದಂತೆ ಖಿನ್ನತೆಗೆ ಜಾರುವುದು ಸಹಜ. ಆದರೆ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚೆ ಮನಸ್ಸಿನ ನೋವನ್ನು ಇನ್ನೊಬ್ಬ ಸ್ನೇಹಿತನಲ್ಲಿ ಹಂಚಿಕೊಳ್ಳುವ ವ್ಯವಧಾನವೂ ಉಳಿಯದೆ ಹೋದರೆ ‘ಶಕ್ತಿಯೇ ಜೀವನ’ ಎಂಬ ಮಾತಿಗೆ ಮೌಲ್ಯವೇ ಉಳಿಯುವುದಿಲ್ಲ.

ಭಯಾನಕವಾದ ಬೇಸರವೊಂದು ಕಾಡಿದಾಗ ಮೊದಲು ಮಾಡಬೇಕಾದ್ದೇ ಅದನ್ನು ಯಾವುದೋ ಒಂದು ರೀತಿಯಲ್ಲಿ ಹೊರಗೆಡಹುವುದು. ಹಂಚಿದಷ್ಟೂ ಹೆಚ್ಚಾಗುವುದು ಸಂತೋಷ, ಹಂಚಿದಷ್ಟೂ ಕಡಿಮೆಯಾಗುವುದು ದುಃಖ. ಆಪ್ತ ಸ್ನೇಹಿತರಲ್ಲಿ ಎಲ್ಲವನ್ನೂ ಹೇಳಿಕೊಳ್ಳಬಹುದು. ಅಂತಹ ಯಾರೂ ಇಲ್ಲ ಎಂದುಕೊಂಡರೆ ಒಂದು ಕಾಗದದ ಮೇಲೆ ಎಲ್ಲವನ್ನೂ ಕಥೆಯೋ, ಕವಿತೆಯೋ, ಲೇಖನವೋ ಆಗಿ ಬರೆದುಕೊಳ್ಳಬಹುದು. ಒಳ್ಳೆಯ ಪುಸ್ತಕಗಳನ್ನು ಓದಬಹುದು. ಅಲ್ಲಿಗೆ ಮನಸ್ಸಿನೊಳಗಿನ ಒತ್ತಡ ಅರ್ಧ ಕಡಿಮೆಯಾದಂತೆ.

ಅತಿರೇಕದ ನಿರ್ಧಾರಗಳೆಲ್ಲ ಮೂಡುವುದು ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ. ಅದೊಂದು ಕ್ಷಣ ದಾಟಿಬಿಟ್ಟರೆ ಉಳಿದದ್ದೆಲ್ಲ ಸಲೀಸು. ಅಂತಹ ಘಳಿಗೆಯನ್ನು ದಾಟುವ ವ್ಯವಧಾನ, ಸೋಲನ್ನು ಎದುರಿಸುವ ಧೈರ್ಯ, ವೈಫಲ್ಯವನ್ನು ಮೆಟ್ಟಿನಿಲ್ಲುವ ಆತ್ಮವಿಶ್ವಾಸ, ಎಲ್ಲಿ ಸೋತಿದ್ದೇನೋ ಅಲ್ಲೇ ಬೆಳೆದುನಿಲ್ಲುತ್ತೇನೆ ಎಂಬ ಪಂಥ- ಇವಿಷ್ಟನ್ನು ನಮ್ಮ ಯುವಕರು ಬೆಳೆಸಿಕೊಳ್ಳಲೇ ಬೇಕು. ಇಲ್ಲವಾದ ಯೌವನ ಎಂಬ ಬದುಕಿನ ಅಮೂಲ್ಯ ಅವಧಿಗೆ ಅರ್ಥವೇ ಇಲ್ಲ. ‘ನಿಮ್ಮನ್ನು ನೀವು ನಂಬಿ, ಜಗತ್ತು ನಿಮ್ಮ ಕಾಲಬುಡದಲ್ಲಿ ಬಂದು ಮಂಡಿಯೂರುತ್ತದೆ’ ಎಂಬ ವಿವೇಕಾನಂದರ ಒಂದು ಮಾತು ನಮ್ಮ ಯುವಕರ ಹೃದಯದಲ್ಲಿ ಬೆಚ್ಚಗೆ ಮನೆಮಾಡಿದರೆ ಅಷ್ಟೇ ಧಾರಾಳ ಸಾಕು.

- ಸಿಬಂತಿ ಪದ್ಮನಾಭ ಕೆ. ವಿ.