ಭಾನುವಾರ, ಮಾರ್ಚ್ 13, 2022

ಮಕ್ಕಳಿಗೇಕೆ ಪುರಾಣ ಕಥೆಗಳನ್ನು ಹೇಳಬೇಕು?

ಫೆಬ್ರವರಿ 2022ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ

ಮೌಲ್ಯಗಳ ಕುಸಿತ ನಮ್ಮ ಕಾಲದ ಬಹುದೊಡ್ಡ ಆತಂಕಗಳಲ್ಲೊಂದು. ‘ಸಮಾಜದಲ್ಲಿ ಮೌಲ್ಯಗಳು ಅಧಃಪತನಗೊಂಡಿವೆ; ಯುವಕರಿಗೆ ಗೊತ್ತುಗುರಿಯಿಲ್ಲ; ಇದು ಹೀಗೆಯೇ ಮುಂದುವರಿದರೆ ಎಲ್ಲಿಗೆ ಹೋಗಿ ತಲುಪೀತು?’ ಎಂಬ ಪ್ರಶ್ನೆಯನ್ನು ಹಿರಿಯ ತಲೆಮಾರಿನ ಮಂದಿ ಆಗಾಗ ಕೇಳುವುದಿದೆ. ಅವರ ಪ್ರಶ್ನೆಯನ್ನು ಹಳಬರ ಹಳಹಳಿಕೆಯೆಂದು ಉಪೇಕ್ಷೆ ಮಾಡುವ ಪರಿಸ್ಥಿತಿಯಲ್ಲಿ ನಾವಿಲ್ಲ. ನಾವು ನಿಜಕ್ಕೂ ಒಂದು ವಿಚಿತ್ರ ಗೊಂದಲಪುರದಲ್ಲಿ ಬದುಕುತ್ತಿದ್ದೇವೆ. 

ಎಲ್ಲರೂ ತಮ್ಮ ತಮ್ಮ ಕರ್ತವ್ಯಗಳನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರೆ ಇಂತಹ ಸಮಸ್ಯೆಯೇ ಬರುತ್ತಿರಲಿಲ್ಲ. ರಾಜಕಾರಣಿ, ಅಧಿಕಾರಿ, ಶಿಕ್ಷಕ, ಇಂಜಿನಿಯರ್, ವ್ಯಾಪಾರಿ, ನೌಕರ, ವೈದ್ಯ, ಪೊಲೀಸ್, ವಕೀಲ - ಇವರೆಲ್ಲ ವಾಸ್ತವವಾಗಿ ಏನು ಮಾಡಬೇಕಿತ್ತೋ ಅದನ್ನು ಮಾಡುತ್ತಿದ್ದಾರೆಯೇ? ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆ, ಬದ್ಧತೆ ಇದೆಯೇ? ಬರುವ ಉತ್ತರ ನಿರಾಸೆಯದ್ದೇ. ಯಾಕೆ ಹೀಗಾಯಿತು? ಯೋಚನೆ ಮಾಡಿದರೆ ಸಮಸ್ಯೆಯ ಮೂಲ ಅರಿವಾಗುತ್ತದೆ: ಜನರಿಗೆ ಅವರ ಬಾಲ್ಯ, ಕೌಮಾರ್ಯಗಳಲ್ಲಿ ದೊರೆಯದ ಮೌಲ್ಯಪೋಷಣೆ.

ಹೌದು, ಬಾಲ್ಯಕಾಲದಲ್ಲಿ ದೊರೆಯದ್ದು ಬೇರೆ ಯಾವಾಗ ದೊರೆತರೂ ನಿಷ್ಪ್ರಯೋಜಕವೇ. ಅದು ನಿಜವಾದ ವ್ಯಕ್ತಿತ್ವ ರೂಪುಗೊಳ್ಳುವ ಕಾಲ. ಏನನ್ನೇ ಕೊಟ್ಟರೂ ತಕ್ಷಣ ಸ್ವೀಕರಿಸುವ ಮನಸ್ಸು. ಮೆತ್ತಗಿನ ಹಸಿಮಣ್ಣಿನ ಮುದ್ದೆಯ ಹಾಗೆ. ಸದುದ್ದೇಶದಿಂದ ಹೊರಟರೆ ಅದಕ್ಕೊಂದು ಒಳ್ಳೆಯ ರೂಪ ಕೊಡಬಹುದು. ನಿಜವಾದ ಮೌಲ್ಯಪೋಷಣೆಗೆ ಅದು ಅತ್ಯಂತ ಪ್ರಶಸ್ತ ಸಮಯ. ಅದಕ್ಕಾಗಿ ಬೇರೇನೂ ಮಾಡಬೇಕಿಲ್ಲ. ನಮ್ಮ ಪುರಾಣಗಳಲ್ಲಿನ ಜೀವಪರ ಗುಣಗಳನ್ನು ಅವರಲ್ಲಿ ತುಂಬಿದರೆ ಸಾಕು. ಉಳಿದದ್ದು ತಾನಾಗಿಯೇ ನಡೆಯುತ್ತದೆ.

ಭಾರತೀಯ ಪುರಾಣಗಳು ಮೌಲ್ಯಗಳ ಮಹಾಸಾಗರಗಳು. ನಮ್ಮ ಸಂಸ್ಕೃತಿಯ ಬೇರು-ಬಿಳಲುಗಳು ಅವುಗಳಲ್ಲಿ ಹಾಸುಹೊಕ್ಕಾಗಿವೆ. ನೀತಿ-ಅನೀತಿ, ಒಳ್ಳೆಯದು-ಕೆಟ್ಟದ್ದು, ಧರ್ಮ-ಅಧರ್ಮ ಎಲ್ಲವುಗಳಿಗೂ ಉದಾಹರಣೆ ಅವುಗಳಲ್ಲಿವೆ. ಯಾವುದೇ ಕಥೆ ಮುಕ್ತಾಯವಾಗುವುದೇ ಕೆಟ್ಟ ವ್ಯಕ್ತಿ ಅಥವಾ ಕೆಟ್ಟ ಗುಣಕ್ಕೆ ಸೋಲಾಗುವಲ್ಲಿ. ಅಧರ್ಮದ ಸೋಲು, ಧರ್ಮದ ಗೆಲವು ಅವುಗಳ ಮೂಲ ತಿರುಳು. ಮಕ್ಕಳಿಗೆ ಎಳವೆಯಲ್ಲೇ ಅವುಗಳ ಪರಿಚಯ ಆಗುವುದರಿಂದ ಅಂತಹದೊಂದು ಭಾವನೆ ಅವರ ವ್ಯಕ್ತಿತ್ವದ ಭಾಗವೇ ಆಗುತ್ತದೆ.

ಪ್ರೀತಿ, ಸಹಾನುಭೂತಿ, ಸಹನೆ, ಗೌರವ, ದಯೆ, ಕರುಣೆ, ಅನುಕಂಪ, ತ್ಯಾಗ, ದಾನ, ಸ್ನೇಹ – ಮೊದಲಾದವು ಒಂದು ಉತ್ತಮ ಸಮಾಜ ಎಲ್ಲ ಕಾಲದಲ್ಲೂ ಬಯಸುವ ಮಾನವೀಯ ಗುಣಗಳು; ಅಂದಮೇಲೆ ಇಂಥವುಗಳ ಕೊರತೆಯೇ ಸಮಾಜದಲ್ಲಿ ನಾವಿಂದು ಕಾಣುವ ಅಸ್ಥಿರತೆ ಹಾಗೂ ಗೊಂದಲಗಳಿಗೆ ಕಾರಣ ಎಂದು ಬೇರೆ ಹೇಳಬೇಕಾಗಿಲ್ಲ. ನಮ್ಮ ಪುರಾಣಗಳಲ್ಲಿ ಇಂತಹ ಮೌಲ್ಯಗಳ ಪೋಷಣೆ ಧಾರಾಳವಾಗಿ ಕಾಣಸಿಗುತ್ತದೆ. ರಾಮಾಯಣ, ಮಹಾಭಾರತ, ಭಾಗವತಗಳಲ್ಲೆಲ್ಲ ದೊರೆಯುವುದು ಇಂತಹ ಆದರ್ಶಗಳ ಹುಲುಸಾದ ಫಸಲೇ. ಅವುಗಳ ಬೀಜಗಳು ನಮ್ಮ ಮಕ್ಕಳ ಮನಸ್ಸುಗಳಲ್ಲಿ ಬಿತ್ತನೆಯಾಗಬೇಕು. ಬಿತ್ತಿದಂತೆ ಬೆಳೆ ಅಲ್ಲವೇ?

ಮಕ್ಕಳಿಗೆ ಇನ್ನೇನು ಹೇಳದಿದ್ದರೂ ನಮ್ಮ ರಾಮಾಯಣ-ಮಹಾಭಾರತಗಳ ಕಥೆಗಳನ್ನು ದಾಟಿಸಲೇಬೇಕು. ಅವುಗಳನ್ನು ಹೇಳಿ ಮುಗಿಸುವ ಹೊತ್ತಿಗೆ ಎಂತೆಂತಹ ವ್ಯಕ್ತಿಗಳು, ಮೌಲ್ಯಗಳನ್ನು ಮಕ್ಕಳಿಗೆ ಪರಿಚಯ ಮಾಡಿಸಬಹುದು! ರಾಮನೆಂಬ ಒಂದು ವ್ಯಕ್ತಿತ್ವ ಸಾಕು ಮಕ್ಕಳಿಗೆ ಆದರ್ಶ ಜೀವನವೆಂದರೆ ಎಂತಹದೆಂಬುದನ್ನು ಮನದಟ್ಟು ಮಾಡಿಸಲು. ಆದರ್ಶ ಪುತ್ರ, ಆದರ್ಶ ತಂದೆ, ಆದರ್ಶ ಅಣ್ಣ, ಆದರ್ಶ ಚಕ್ರವರ್ತಿ, ಆದರ್ಶ ಪತಿ, ಆದರ್ಶ ಸ್ನೇಹಿತ- ಆತನ ವ್ಯಕ್ತಿತ್ವದ ಒಂದೊಂದು ಆಯಾಮವೂ ಆದರ್ಶಮಯ. ವಯಸ್ಸಾದ ತಂದೆ-ತಾಯಿಯರೊಂದಿಗೆ ಮಕ್ಕಳು ಹೇಗೆ ವ್ಯವಹರಿಸಬೇಕು, ಮಕ್ಕಳೊಂದಿಗೆ ಎಂತಹ ಸಂಬಂಧ ಹೊಂದಿರಬೇಕು, ಸಹೋದರರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಹೇಗೆ ನಡೆದುಕೊಳ್ಳಬೇಕು, ರಾಜನಾದವನು ಪ್ರಜೆಗಳನ್ನು ಹೇಗೆ ಪಾಲಿಸಬೇಕು ಎಲ್ಲವಕ್ಕೂ ಒಂದು ಮಾದರಿ ಹಾಕಿಕೊಟ್ಟವನು ಶ್ರೀರಾಮ. ಅದಕ್ಕೇ ಅವನು ಜ್ಞಾನಿಗಳಿಂದ ಪುರುಷೋತ್ತಮನೆಂದು ಕರೆಸಿಕೊಂಡದ್ದು.

ಮಕ್ಕಳು ಮೌಲ್ಯಗಳನ್ನು ಬಹುಬೇಗನೆ ಗುರುತಿಸಿಕೊಳ್ಳುತ್ತಾರೆ ಮತ್ತು ಅವುಗಳು ತಮಗೆ ಬೇಕಾದವೆಂದು ಆರಿಸಿಕೊಳ್ಳುತ್ತಾರೆ. ರಾಮ, ಭರತ, ಲಕ್ಷ್ಮಣ, ಸೀತೆ, ಆಂಜನೇಯ, ಅಂಗದ, ಜಟಾಯು, ಶಬರಿ, ಗುಹ, ವಿಭೀಷಣ, ಜಾಂಬವ, ಮಂಡೋದರಿ- ಇಂಥವರಿಂದ ಒಳ್ಳೆಯತನ ಎಂದರೆ ಏನೆಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಹೇಗಿರಬಾರದು ಎಂಬುದನ್ನು ಕೈಕೇಯಿ, ಮಂಥರೆ, ವಾಲಿ, ಶೂರ್ಪನಖಿ, ರಾವಣ, ಕುಂಭಕರ್ಣ ಮುಂತಾದ ಪಾತ್ರಗಳಿಂದ ಅರ್ಥ ಮಾಡಿಕೊಳ್ಳುತ್ತಾರೆ. ಪುಟ್ಟ ಅಳಿಲಿನ ಕಥೆಯೂ ಅವರಲ್ಲೊಂದು ದೊಡ್ಡ ಕನಸನ್ನು ತುಂಬಬಲ್ಲುದು. ಭರತದ ಭ್ರಾತೃಪ್ರೇಮ, ಹನೂಮಂತನ ಭಕ್ತಿ, ವಿಭೀಷಣದ ಧಾರ್ಮಿಕತೆ, ಶಬರಿಯ ಶುದ್ಧಾಂತಃಕರಣ ಮಕ್ಕಳಲ್ಲೊಂದು ಹೊಸ ಲೋಕವನ್ನು ತೆರೆಯಬಹುದು.

ಮಹಾಭಾರತವೇ ಇನ್ನೊಂದು ಜಗತ್ತು. ಧರ್ಮರಾಯ, ಶ್ರೀಕೃಷ್ಣ, ಭೀಷ್ಮ, ಪಾಂಚಾಲಿ, ಭೀಮ, ಏಕಲವ್ಯ, ದ್ರೋಣ, ಕರ್ಣ, ವಿದುರ, ಸುಧಾಮ, ಅಭಿಮನ್ಯು ಮುಂತಾದ ಹತ್ತುಹಲವು ಪಾತ್ರಗಳು ಮಕ್ಕಳನ್ನು ಇನ್ನಿಲ್ಲದಂತೆ ಆಕರ್ಷಿಸಬಲ್ಲವು. ದುರ್ಯೋಧನ, ಶಕುನಿ, ಕೀಚಕ, ಶಿಶುಪಾಲ, ಜರಾಸಂಧ ಮುಂತಾದ ಪಾತ್ರಗಳನ್ನು ನೋಡಿ ಬದುಕಿನಲ್ಲಿ ಹೇಗೆ ಇರಬಾರದೆಂದು ಅವರು ಅರ್ಥಮಾಡಿಕೊಳ್ಳಬಲ್ಲರು. ಎಲ್ಲ ಪುರಾಣ ಕಥೆಗಳ ಅಂತಿಮ ಸಾರ ಒಂದೇ- ಒಳ್ಳೆಯದಕ್ಕೆ ಒಳ್ಳೆಯದಾಗುತ್ತದೆ, ಕೆಟ್ಟದ್ದರಿಂದ ಕೆಟ್ಟದ್ದಾಗುತ್ತದೆ. ಅಧರ್ಮಕ್ಕೆ ಸೋಲು, ಧರ್ಮಕ್ಕೆ ವಿಜಯ. 

ಪುರಾಣಗಳೆಂದರೆ ವರ್ತಮಾನಕ್ಕೆ ವಿರುದ್ಧವಾದವು, ಬದಲಾದ ಕಾಲಕ್ಕೆ ಅಗತ್ಯವಿರುವ ಮೌಲ್ಯಗಳಿಗೆ ವಿರುದ್ಧವಾದವು ಎಂಬೊಂದು ತಪ್ಪು ಕಲ್ಪನೆ ಇದೆ. ಆದರೆ ನಾವು ಅರ್ಥಮಾಡಿಕೊಳ್ಳಬೇಕಿರುವುದೆಂದರೆ ಪುರಾಣಗಳೆಂದರೆ ಹಳಸಲು ಕಥೆಗಳಲ್ಲ. ಪ್ರತಿಗಾಮಿ ಚಿಂತನೆಗಳಲ್ಲ. ಅವು ವರ್ತಮಾನದ ಪ್ರತಿಬಿಂಬಗಳೂ ಹೌದು. ಈ ಪುರಾಣಗಳು ಎಷ್ಟು ಹೊಸತಾಗಿವೆಯೆಂದರೆ ಆಧುನಿಕ ಕಾಲದೊಂದಿಗೂ ಯಶಸ್ವಿಯಾಗಿ ಸಂವಾದ ನಡೆಸಬಲ್ಲವು. ಪ್ರಜಾಪ್ರಭುತ್ವ. ಜಾತ್ಯತೀತತೆ, ಸಮಾನತೆ, ಹೆಣ್ತನ, ಸಾಮರಸ್ಯ, ಉದಾರಶೀಲತೆ, ಅಹಿಂಸೆ ಮೊದಲಾದ ‘ಆಧುನಿಕ’ ಮೌಲ್ಯಗಳು ಪುರಾಣಗಳಲ್ಲಿಯೂ ಧಾರಾಳವಾಗಿ ಸಿಗುತ್ತವೆ. ಜಾತಿ, ವರ್ಗಗಳಿಗಿಂತ ವಿದ್ಯೆ ಮತ್ತು ಗುಣ ಮುಖ್ಯ ಎಂಬ ಚಿಂತನೆಯನ್ನು ಪುರಾಣ ಕಥೆಯೊಂದರ ಮೂಲಕವೂ ಮಕ್ಕಳಿಗೆ ತಿಳಿಹೇಳಲು ಸಾಕಷ್ಟು ಅವಕಾಶ ಇದೆ.

ಪುರಾಣಲೋಕದಲ್ಲಿ ನಮಗೆದುರಾಗುವ ಬಾಲಕರಂತೂ ಮಕ್ಕಳಿಗೆ ಹೆಚ್ಚು ಆಪ್ತ ಪಾತ್ರಗಳೆನಿಸಬಲ್ಲವು. ಧ್ರುವ, ನಚಿಕೇತ, ಮಾರ್ಕಂಡೇಯ, ಪ್ರಹ್ಲಾದ, ಜಡಭರತ, ಅಭಿಮನ್ಯು, ಸುಧನ್ವ, ಬಭ್ರುವಾಹನ, ಅಷ್ಟಾವಕ್ರ, ಭಗೀರಥ, ಸುಧಾಮ, ಸತ್ಯಕಾಮ ಮೊದಲಾದ ಉದಾತ್ತ ಬಾಲಪಾತ್ರಗಳು ಮಕ್ಕಳಲ್ಲಿ ಅಚ್ಚಳಿಯದೆ ಉಳಿಯಬಲ್ಲವು. ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕೇಸಿಗುತ್ತದೆ ಎಂದು ಸಾರುವ ಭಗೀರಥ, ಧ್ರುವ ಮುಂತಾದವರ ಕಥೆ; ಎಲ್ಲರೂ ಸಮಾನರೆಂದು ಸಾರುವ ಜಡಭರತನ ಇತಿಹಾಸ; ಬುದ್ಧಿ, ಸಂಸ್ಕಾರ, ಶ್ರದ್ಧೆ ಇದ್ದರೆ ಆಯುಷ್ಯವೂ ಹೆಚ್ಚುತ್ತದೆ ಎಂಬ ಮಾರ್ಕಂಡೇಯನ ಚರಿತ್ರೆ, ಸಾತ್ವಿಕತೆಯದ್ದೇ ಎಂದಿಗೂ ಗೆಲುವು ಎಂಬ ಪ್ರಹ್ಲಾದನ ನಿದರ್ಶನ, ಅಂತರ್ಯದ ವಿದ್ಯೆಗೆ ಶಾಶ್ವತ ಮೌಲ್ಯ ಎಂಬ ಸಾರವುಳ್ಳ ಜಡಭರತನ ಕಥೆ; ವಿದ್ಯೆ ಕಲಿವ ಹಂಬಲವುಳ್ಳವನಿಗೆ ಯಾವ ಸಮಸ್ಯೆಯೂ ಅಡ್ಡಿಯಲ್ಲ ಎಂದು ಪ್ರತಿಪಾದಿಸುವ ಏಕಲವ್ಯನ ಉದಾಹರಣೆ... ಮಕ್ಕಳಿಗೆ ಎಲ್ಲವೂ ಅರ್ಥವಾಗುತ್ತದೆ. ಒಂದೊಂದು ಕಥೆಯನ್ನು ಕೇಳುತ್ತಿದ್ದ ಹಾಗೆ ಅದು ಅವರ ವ್ಯಕ್ತಿತ್ವದ ಭಾಗವಾಗುತ್ತಾ ಹೋಗುತ್ತದೆ. ಅವರಿಗೆ ಗೊತ್ತಿಲ್ಲದಂತೆ ಕಥೆಗಳು ಅವರೊಳಗೆ ಹೊಸ ಜಗತ್ತನ್ನು ತೆರೆಯುತ್ತಾ ಭವಿಷ್ಯದ ಸುಂದರ ಬದುಕಿಗೆ ಅವರನ್ನು ಸಿದ್ಧಗೊಳಿಸುತ್ತವೆ. 

ಸತ್ಯಹರಿಶ್ಚಂದ್ರನ ಕುರಿತಾದ ಕಥೆ, ಶ್ರವಣಕುಮಾರನ ಪಿತೃಭಕ್ತಿಯ ದೃಷ್ಟಾಂತ ತಮ್ಮ ದೃಷ್ಟಿಕೋನವನ್ನೇ ಬದಲಾಯಿಸಿತೆಂಬುದನ್ನು ಮಹಾತ್ಮ ಗಾಂಧೀಜಿಯಂಥವರೇ ತಮ್ಮ ಆತ್ಮಕಥನದಲ್ಲಿ ಬರೆದುಕೊಂಡಿದ್ದಾರೆ. ಪುರಾಣಗಳಿಂದಾಗಿ ತಮ್ಮ ಬದುಕು ಹದಗೆಟ್ಟಿತೆಂದು ಹೇಳಿದವರು ಯಾರೂ ಇಲ್ಲ. ಅವು ಜೀವನವನ್ನು ಪಕ್ವಗೊಳಿಸುವ ಪ್ರಕ್ರಿಯೆ ವಿಸ್ಮಯಕಾರಿ. ಹಾಗೆಂದು ಪುರಾಣಗಳಲ್ಲಿರುವುದನ್ನೆಲ್ಲ ಇದ್ದಹಾಗೇ ಸ್ವೀಕರಿಸಬೇಕೆಂದು ಸ್ವತಃ ನಮ್ಮ ಹಿರಿಯರೇ ಹೇಳಿಲ್ಲ. ಕಾಳಿದಾಸನ ‘ಮಾಲವಿಕಾಗ್ನಿಮಿತ್ರಮ್’ ನಾಟಕದಲ್ಲಿ ಬರುವ ಮಾತಿದು:

ಪುರಾಣಮಿತ್ಯೇವ ನ ಸಾಧು ಸರ್ವಂ, ನ ಚಾಪಿ ಕಾವ್ಯಂ ನವಮಿತ್ಯವದ್ಯಂ |

ಸಂತಃ ಪರೀಕ್ಷ್ಯಾನ್ಯತರದ್ಭಜನ್ತೇ, ಮೂಢಃ ಪರಪ್ರತ್ಯಯನೇಯಬುದ್ಧಿಃ ||

ಅಂದರೆ, ಹಳೆಯದೆಂದ ಮಾತ್ರಕ್ಕೆ ಎಲ್ಲ ಕಾವ್ಯವೂ ಚೆನ್ನೆಂದು ಹೇಳಲಾಗದು; ಹೊಸತೆಲ್ಲವೂ ಕೆಟ್ಟವಾಗವು. ವಿವೇಕಿಗಳು ತಮ್ಮ ಬುದ್ಧಿಯಿಂದ ಪರೀಕ್ಷಿಸಿ, ಉತ್ತಮ ಕೃತಿಯನ್ನು ಪುರಸ್ಕರಿಸುತ್ತಾರೆ. ಮೂಢರು ಇನ್ನೊಬ್ಬರ ಹೇಳಿಕೆಯನ್ನು ಅನುಸರಿಸಿ ಅದರಂತೆ ನಡೆಯುತ್ತಾರೆ.

ಮಕ್ಕಳಲ್ಲಿ ಅಂತಹ ವಿವೇಚನಾಗುಣವನ್ನು ಬೆಳೆಸುವ ಕರ್ತವ್ಯವೂ ನಮ್ಮಲ್ಲಿದೆ. ಒಳ್ಳೆಯದು ಕೆಟ್ಟದನ್ನು ಗುರುತಿಸಿ ಸ್ವತಂತ್ರ ತೀರ್ಮಾನಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಅವರು ಕಾಲಕ್ರಮೇಣ ಪಡೆದುಕೊಳ್ಳುತ್ತಾರೆ. ಅದಕ್ಕೆ ಸೂಕ್ತ ಮೂಲಪೋಷಣೆಯನ್ನು ನೀಡುವ ಜವಾಬ್ದಾರಿ ಹಿರಿಯರದ್ದು. ಅದನ್ನು ಸಕಾಲದಲ್ಲಿ ಮಾಡದೆ, ಹೊಸ ತಲೆಮಾರನ್ನು ಹಳಿಯುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ನಾವು ನಿರಾಶಾವಾದಿಗಳಾಗಬಾರದು ನಿಜ, ಆದರೆ ಆಶಾವಾದಿಗಳಾಗಿರುವುದಕ್ಕೂ ಒಂದು ಯೋಗ್ಯತೆ ಬೇಕು.

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: