ಗುರುವಾರ, ಮಾರ್ಚ್ 13, 2014

ಡಾ. ಶ್ರೀಪಾದ ಭಟ್ ಲೇಖನ: ತೀರ್ಪು ನೀಡುವ ಮಾಧ್ಯಮಗಳು!

ಸಹೋದ್ಯೋಗಿ ಡಾ. ಶ್ರೀಪಾದ ಭಟ್ (ಸಹಾಯಕ ಪ್ರಾಧ್ಯಾಪಕರು, ಡಾ. ಡಿವಿಜಿ ಕನ್ನಡ ಅಧ್ಯಯನ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ) ತುಮಕೂರಿನ 'ಪ್ರಜಾಪ್ರಗತಿ' ಪತ್ರಿಕೆಗಾಗಿ ಬರೆಯುತ್ತಿರುವ 'ಅಂತರ್ಯಾನ' ಕಾಲಮ್ಮಿನ ಒಂದು ಬರೆಹ)

ಇತ್ತೀಚಿನ ವಿದ್ಯಮಾನಗಳನ್ನು ಮಾಧ್ಯಮಗಳಲ್ಲಿ ವೀಕ್ಷಿಸುವವರಿಗೆ, ಪತ್ರಿಕೆ ಓದುವವರಿಗೆ ಈ ಶೀರ್ಷಿಕೆ ಅರ್ಥವಾಗುತ್ತದೆ. ಹೇಳಿ ಕೇಳಿ ಉದ್ಯಮವಾದ ಮಾಧ್ಯಮ ಸಮಾಜವನ್ನು ಎತ್ತ ಕೊಂಡೊಯ್ಯುತ್ತಿದೆ ಎಂಬುದನ್ನು ಗಮನಿಸಿದರೆ ಬೇಸರವಾಗುತ್ತದೆ. ಸಂವಿಧಾನದ ನಾಲ್ಕನೆಯ ಸ್ತಂಭ ಎನ್ನಲಾಗುವ (ಹಾಗೆ ಕರೆದಿದ್ದು ಎಡ್ಮಂಡ್ ಬ್ರೂಕ್‌ನೇ ವಿನಾ ಸಂವಿಧಾನವಲ್ಲ) ಮಾಧ್ಯಮಗಳು ಉಳಿದ ಮೂರು ಸ್ತಂಭಗಳನ್ನು ಅಲ್ಲಾಡಿಸುತ್ತಿವೆ. ಸಾಮಾನ್ಯವಾಗಿ ಮಾಧ್ಯಮದವರು ತಾವು ಸಮಾಜದ ಅಂಗ ಎಂಬುದನ್ನು ಮರೆತಿರುತ್ತಾರೆ. ಸಮಾಜಕ್ಕೆ ದಾರಿ ತೋರಿಸುವವರು ತಾವು ಎಂಬ ಗ್ರಹಿಕೆ ಅವರಲ್ಲಿ ಮನೆ ಮಾಡಿರುವುದುಂಟು. ಅದೇನೋ ಸರಿ, ಆದರೆ ಅದಕ್ಕೆ ತಕ್ಕಂತೆ ಅವರು ನಡೆದುಕೊಳ್ಳಬೇಕಲ್ಲ? ಶಾಲೆ-ಕಾಲೇಜುಗಳು ನಮ್ಮ ಕಾಲದಲ್ಲಿದ್ದಂತಿಲ್ಲ ಎಂದು ಹೇಳುವುದನ್ನು ಕೇಳುವಂತೆಯೇ ಮಾಧ್ಯಮಗಳೂ ಈ ಹಿಂದಿನಂತೆ ಇಲ್ಲ ಎಂಬುದು ಕಿವಿಗೆ ಬೀಳುವುದೂ ಅಪರೂಪವಲ್ಲ. ಮಾಧ್ಯಮ ಒಂದು ಉದ್ಯಮದ ಸ್ವರೂಪ ಪಡೆದ ಮೇಲೆ ಹೀಗಾಗಿರಲೂ ಸಾಕು.

ವಿದ್ಯುನ್ಮಾನ ಮಾಧ್ಯಮಗಳಂತೂ ಮೊದಲು ಸುದ್ದಿ ಬಿತ್ತರಿಸಿ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಧಾವಂತದಲ್ಲಿ ಸುದ್ದಿಯ ಹಿಂದು ಮುಂದು ಪರಿಶೀಲಿಸದೇ ಪರದೆಯ ಮೇಲೆ ತಮ್ಮ ಚಾನಲ್ಲಿನ ಛಾಪು ಒತ್ತಿ ಮತ್ತೆ ಮತ್ತೆ ಪ್ರಸಾರ ಮಾಡುತ್ತವೆ. ಬಹಳಷ್ಟು ಬಾರಿ ಒಂದೇ ಸಾಲಿನ ಸುದ್ದಿ, ಒಂದೇ ಚಿತ್ರವನ್ನು ದಿನವಿಡೀ ಮತ್ತೆ ಮತ್ತೆ ಪ್ರಸಾರ ಮಾಡುತ್ತಲೇ ಇರುತ್ತವೆ. ಅವು ಹೀಗೆ ಬಿತ್ತರಿಸುವ ಸುದ್ದಿ ಸಾಮಾನ್ಯವಾಗಿ ವ್ಯಕ್ತಿಯೊಬ್ಬ ಹಣ ಪಡೆಯುತ್ತಿರುವ ಸನ್ನಿವೇಶವೋ, ಮಹಿಳೆಯೊಬ್ಬಳು ವ್ಯಕ್ತಿಗೆ ಥಳಿಸುವ ಸನ್ನಿವೇಶವೋ ಆಗಿರುತ್ತದೆ. ವರದಿಗಾರ ನೀಡುವ ಧಾವಂತದ ವಿವರಣೆಯೇ ಆಯಾ ಸನ್ನಿವೇಶದ ಸತ್ಯವಾಗಿರುತ್ತದೆ! ಕೆಲವೊಮ್ಮೆ ಸಂಘಟನೆಗಳ ಕಾರ್ಯಕರ್ತರೆಂದು ಕರೆದುಕೊಳ್ಳುವವರು ಇಂಥ ಸನ್ನಿವೇಶಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುತ್ತಾರೆ. ಹೊಡೆಯುವವರು, ಹೊಡೆಸಿಕೊಳ್ಳುವವರು, ಸುದ್ದಿ ತಿಳಿದು ನೆರೆದ ಅಕ್ಕಪಕ್ಕದ ಒಂದಿಷ್ಟು ಜನರ ಗುಂಪನ್ನು ಬಿಟ್ಟರೆ ಅಲ್ಲಿರುವುದು ಚಾನೆಲ್ಲಿನ ಛಾಯಾಗ್ರಾಹಕ ಮತ್ತು ವರದಿಗಾರರು ಮಾತ್ರ! ಇವರಿಬ್ಬರೂ ಇಂಥ ಪ್ರಸಂಗದ ಆರಂಭದ ಬಿಂದುವಿನಿಂದಲೂ ಪ್ರಸಾರ ಕೈಗೊಂಡಿರುತ್ತಾರೆ. ಅನೇಕ ಬಾರಿ ಇಂಥ ಸಂದರ್ಭಗಳು ಚಾನೆಲ್‌ಗಳಲ್ಲಿ ಪ್ರಸಾರವಾಗಿವೆ, ಆಗಾಗ ಆಗುತ್ತಲೇ ಇರುತ್ತದೆ. ಇದು ಹೇಗೆ ಸಾಧ್ಯ? ಇಂಥಲ್ಲಿ, ಇಂಥ ಪ್ರಸಂಗ ನಡೆಯಲಿದೆ ಎಂದು ವರದಿಗಾರನಿಗೂ ಛಾಯಾಗ್ರಾಕನಿಗೂ ತಿಳಿಯುವುದಾದರೂ ಹೇಗೆ? ಘಟನೆ ನಡೆಯತೊಡಗಿದ ಮೇಲೆ ವರದಿಗಾರರು ಬಂದರೆ ಯಾರೋ ತಿಳಿಸಿದ ಮೇಲೆ ಬಂದಿದ್ದಾರೆ ಎಂದು ಭಾವಿಸಬಹುದು. ಇಲ್ಲಿ ಹಾಗಾಗುವುದಿಲ್ಲ. ಈಚೆಗೆ ಬೆಂಗಳೂರಿನಲ್ಲಿ ಹೆಣ್ಣೊಬ್ಬಳು ತಾನು ಕೆಲಸ ಬಿಟ್ಟ ಕಚೇರಿಯೊಂದರ ಮಾಲೀಕನ ಮೇಲೆ ಹಲ್ಲೆ ನಡೆಸಿದಳು. ಅವಳು ಆ ಕಚೇರಿಯೊಳಗೆ ಹೋಗುವುದು, ಅವಳೊಂದಿಗೆ ಸಂಘಟನೆಯೊಂದರ ಕಾರ್ಯಕರ್ತರು ನುಗ್ಗುವುದು, ಮಾಲೀಕನನ್ನು ಎಳೆದು ಥಳಿಸುವುದು, ಕೊನೆಗೆ ಹೆಣ್ಣು ಮಗಳು ಚಪ್ಪಲಿಯಲ್ಲಿ ಆತನಿಗೆ ಬಾರಿಸುವುದು ಎಲ್ಲವನ್ನೂ ಆಮೂಲಾಗ್ರವಾಗಿ (ಸಿಸಿ ಕ್ಯಾಮರ ಸೆರೆ ಹಿಡಿದ ಚಿತ್ರವಲ್ಲ) ಚಾನೆಲ್ಲು ಬಿತ್ತರಿಸಿತು. ಮೂರ್ನಾಲ್ಕು ಜನರನ್ನು ಸ್ಟುಡಿಯೋಗೆ ಕರೆಸಿ ಭಾರೀ ಚರ್ಚೆ ನಡೆಸಿತು. ಮಾಲೀಕನೂ ಬಂದ. ಆತ ದೌರ್ಜನ್ಯ ಎಸಗಿದ್ದಾನೆ, ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾನೆ, ಇತ್ಯಾದಿ ಆರೋಪಗಳನ್ನು ಆಕೆ ಮಾಡಿದರೆ, ಆತ ಇವೆಲ್ಲ ಸುಳ್ಳು, ಆಕೆ ತನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ, ವೃಥಾ ಹಣ ಕೀಳುವ ಆಕೆಯ ಪ್ಲಾನ್ ಇದು ಎಂದು ಹೇಳುತ್ತಿದ್ದ.

ಇಷ್ಟಾದ ಮೇಲೆ ಕೇಸು ದಾಖಲಾಗಿ ತನಿಖೆ ನಡೆದು ತಿಂಗಳುಗಳ ನಂತರ ಆತನ ತಪ್ಪು ಏನೂ ಇಲ್ಲ ಎಂದು ಸಾಬೀತಾಯಿತು. ಅಲ್ಲದೇ ಆ ಹೆಣ್ಣು ಮಗಳೇ ತಪ್ಪೊಪ್ಪಿಕೊಂಡಳು! ಮಾಲೀಕ ಸತ್ಯವಂತನೇ ಇರಬಹುದು. ಆದರೆ ಆಕೆ ಆರೋಪಿಸುವಾಗ, ಸಂಘಟನೆಯವರು ನುಗ್ಗಿ ದಾಂಧಲೆ ಮಾಡುವಾಗ, ಈತನ ಅಸಹಾಯಕತೆಯನ್ನು ಏಕಪಕ್ಷೀಯವಾಗಿ ಜಗತ್ತಿಗೆ ಬಿತ್ತರಿಸಿ ಅವನ ವ್ಯಕ್ತಿತ್ವಕ್ಕೆ ಹಾನಿ ಮಾಡುವಾಗ ಆ ಮಾಧ್ಯಮದ ಜನರ ಸಾಮಾಜಿಕ ಜವಾಬ್ದಾರಿ ಎಲ್ಲಿ ಹೋಗಿತ್ತು? ಇವರ ತಪ್ಪಿಗೆ ತಪ್ಪು ಮಾಡದ ಜನ ತೆರಬೇಕಾದ ಬೆಲೆ ಏನು?

ಇಂಥ ಸನ್ನಿವೇಶ ವೀಕ್ಷಿಸುವ ಜನ ಕೂಡ ಆ ಕ್ಷಣದ ಪ್ರತಿಕ್ರಿಯೆಗೆ ಪಕ್ಕಾಗಿ ವ್ಯಕ್ತಿ ಕೈಗೆ ಸಿಕ್ಕರೇ ತಾವೂ ನಾಲ್ಕು ಬಾರಿಸುವ ನಿರ್ಧಾರಕ್ಕೆ ಬಂದಿರುತ್ತಾರೆ! ಅಲ್ಲದೇ ಗಂಡು-ಹೆಣ್ಣುಗಳ ಸಂಬಂಧ ಕುರಿತ ಗ್ರಹಿಕೆ ಸೂಕ್ಷ್ಮವಾಗಿರುವ ನಮ್ಮ ಸಮಾಜದಲ್ಲಿ ಗಾಳಿ ಸುದ್ದಿಗಳೇ ವ್ಯಕ್ತಿತ್ವ ನಾಶಕ್ಕೆ ಸಾಕು. ಅಂಥದ್ದರಲ್ಲಿ ಸಚಿತ್ರ ವಿವರ ನೋಡಿದರೆ ಜನ ಸುಮ್ಮನಿದ್ದಾರೆಯೇ? ಯಾರೋ ಒಬ್ಬಳು ಯಾರನ್ನೋ ನಂಬಿ ಮೋಸ ಹೋದಳಂತೆ ಎಂಬುದು ನಮ್ಮ ವೈಯಕ್ತಿಕ ಜೀವನವನ್ನು ಯಾವ ರೀತಿಯಲ್ಲೂ ಸುಧಾರಿಸುವ ಸಂಗತಿಯಲ್ಲ. ಆದರೆ ಆತ ಹೇಗೆ ಮೋಸ ಮಾಡಿದ ಅಥವಾ ಈಕೆ ಹೇಗೆ ನಂಬಿ ಕೆಟ್ಟಳು ಎಂಬುದನ್ನು ಕೆದಕಿ, ಬೆದಕಿ ಆಡಿಯೋ ವಿಡಿಯೋ (ಅಸಲಿಯೋ ನಕಲಿಯೋ ತಿಳಿಯುವುದು ಆಮೇಲೆ) ಇತ್ಯಾದಿ ಸಿಕ್ಕಿದ ದಾಖಲೆಗಳನ್ನು ಮತ್ತೆ ಮತ್ತೆ ಪ್ರಸಾರ ಮಾಡುತ್ತಿದ್ದರೆ ಕಣ್ಣು ಬಾಯಿ ಬಿಟ್ಟುಕೊಂಡು ನೋಡುವ, ತಮ್ಮ ನೂರು ಸಮಸ್ಯೆಗಳನ್ನು ಬದಿಗಿಟ್ಟು ಅದರ ಬಗ್ಗೆ ಹರಟುವ ಜನರ ಸಂಖ್ಯೆಯೇನೂ ಕಡಿಮೆ ಇಲ್ಲ. ಚಾನೆಲ್ಲಿಗೆ ಬೇಕಾದುದು ಇಂಥವರೇ. ಇಂಥವರ ಸಂಖ್ಯೆ ಹೆಚ್ಚಿದಷ್ಟೂ ಅದರ ಟಿಆರ್‌ಪಿ ಹೆಚ್ಚುತ್ತದೆ! ಈ ಬಗೆಯ ಸಂಗತಿಗಳಲ್ಲಿ ಬಹುಪಾಲು ಜನರಿಗೆ ಇರುವ ಕೆಟ್ಟ ಕುತೂಹಲವನ್ನು ಚಾನೆಲ್ಲುಗಳು ಹಣವನ್ನಾಗಿ ಪರಿವರ್ತಿಸಿಕೊಳ್ಳುತ್ತವೆ.

ಗಂಡ-ಹೆಂಡತಿಯ, ಪ್ರಿಯಕರ-ಪ್ರೇಯಸಿಯ, ಅಪ್ಪ-ಮಕ್ಕಳ ಒಟ್ಟಿನಲ್ಲಿ ನಾಲ್ಕು ಗೋಡೆ ನಡುವೆ ಇರಲೆಂದು ಸಮಾಜ ಬಯಸುವ ಸಂಗತಿಗಳನ್ನು ನ್ಯಾಯದ ಹೆಸರಿನಲ್ಲಿ ಮಾಧ್ಯಮಗಳು ಬಯಲಿಗೆ ಎಳೆಯುತ್ತವೆ. ಇಂಥ ವಿಷಯಗಳ ಸರಿ ತಪ್ಪುಗಳನ್ನು ಪರಿಶೀಲಿಸಲು ನಮ್ಮಲ್ಲಿ ಕಾನೂನು ವ್ಯವಸ್ಥೆ ಇದೆ ಎಂಬುದನ್ನು ಅವು ಮರೆಯುತ್ತವೆ.    
       
ಈ ಬಗೆಯ ವರದಿಗಾರಿಕೆಯಲ್ಲಿ ಮುದ್ರಣ ಮಾಧ್ಯಮಗಳೂ ಕಡಿಮೆ ಏನಿಲ್ಲ. ಇಂಥ ಸುದ್ದಿಗಳನ್ನೇ ಪ್ರಕಟಿಸುವ ಟ್ಯಾಬ್ಲಾಯ್ಡ್‌ಗಳು ಸಹಜ ಸುದ್ದಿ, ವಿಶ್ಲೇಷಣೆ ಹೊತ್ತು ತರುವ ಪತ್ರಿಕೆಗಳಿಗಳಿಗಿಂತ ಹೆಚ್ಚು ಪ್ರಸಾರ ಕಾಣುತ್ತವೆ!

ಕೆಲವು ಪತ್ರಿಕೆಗಳು ಒಮ್ಮೆ ಎಬಿಸಿ ವರದಿಯಲ್ಲಿ ಮೇಲಿನ ಸ್ಥಾನ ಪಡೆದರೆ ತಾವು ಆಡಿದ್ದೇ ಆಟ ಎಂಬಂತೆ ವರ್ತಿಸುತ್ತವೆ. ಅನೇಕ ಒಳ ವ್ಯವಹಾರಗಳು, ಬ್ಲಾಕ್‌ಮೇಲ್, ಗುಂಪುಗಾರಿಕೆ ಏನೆಲ್ಲ ಅಲ್ಲಿ ಶುರುವಾಗುತ್ತದೆ. ಸುದ್ದಿ ಯಾವುದು, ಜಾಹೀರಾತು ಯಾವುದು ಎಂಬುದು ಜಾಣ ಓದುಗರಿಗೂ ತಿಳಿಯದಂತೆ ಕೊಡಬಲ್ಲ ಅತಿ ಜಾಣತನ ಅವುಗಳಿಗೆ ಕರಗತವಾಗಿರುತ್ತದೆ. ಪತ್ರಿಕೆಯ ಪ್ರಭಾವದ ಮೂಲಕ ಬೇಳೆ ಬೇಯಿಸಿಕೊಳ್ಳುವುದು, ಸ್ವಾರ್ಥಕ್ಕೆ ನೆರವಾದವರನ್ನು ಸಂದರ್ಭ ಸೃಷ್ಟಿಸಿಕೊಂಡು ಹೊಗಳುವುದು, ಅಡ್ಡಿಯಾದವರನ್ನು ಮಟ್ಟ ಹಾಕಲು ಸಂದರ್ಭ ಸಿಕ್ಕಾಗ ಅಥವಾ ಸೃಷ್ಟಿಸಿಕೊಂಡು ಯತ್ನಿಸುವುದು ಇತ್ಯಾದಿ, ಇತ್ಯಾದಿ ನಡೆದೇ ಇರುತ್ತದೆ. ಬೆಣ್ಣೆಯಲ್ಲಿ ಕೂದಲು ತೆಗೆದಂತೆ ನಡೆ ನುಡಿ ತೋರಿಸಿಕೊಳ್ಳುವ ಜಾಣ್ಮೆ ಇದ್ದರೆ ಜಾಣ ಓದುಗರನ್ನು ಮರಳು ಮಾಡುವುದು ಕಷ್ಟವೇನೂ ಅಲ್ಲ. ಆದರೆ ಇವೆಲ್ಲ ಸದಾ ಕಾಲ ನಡೆಯುವುದಿಲ್ಲ. ಪತ್ರಿಕೆ ಓದುವವರು ಅಥವಾ ಟಿವಿ ವೀಕ್ಷಕರು ಓದು ಬರಹ ಗೊತ್ತಿರುವವರೇ. ಆದರೆ ಇವೆಲ್ಲ ಓದುಗರ ಗಮನಕ್ಕೆ ಬರುವಷ್ಟರಲ್ಲಿ ಸ್ವಾರ್ಥಿಗಳ ಬೇಳೆ ಬೆಂದಿರುತ್ತದೆ.

ಈ ಕಾರಣಕ್ಕಾಗಿಯೇ ಮಾಧ್ಯಮಗಳ ವಿಶ್ವಾಸಾರ್ಹತೆಯ ಸಮೀಕ್ಷೆ ಆಗಾಗ ನಡೆಯಬೇಕು. ಪಶ್ಚಿಮ ದೇಶಗಳಲ್ಲಿ ಕೆಲವು ಸಂಸ್ಥೆಗಳು ನಿಯತವಾಗಿ ಇಂಥ ಕೆಲಸವನ್ನು ವೃತ್ತಿಯಾಗಿಯೇ ಮಾಡುತ್ತವೆ. ಫ್ಯೂ ರಿಸರ್ಚ್ ಸೆಂಟರ್ ಫಾರ್ ಪೀಪಲ್ ಆಂಡ್ ಪ್ರೆಸ್ ಸಂಸ್ಥೆ ಅಮೆರಿಕದಲ್ಲಿ ಈಚೆಗೆ ಇಂಥ ಒಂದು ಸಮೀಕ್ಷೆ ನಡೆಸಿದೆ. ಅದರ ಪ್ರಕಾರ ಮೂರರಲ್ಲಿ ಎರಡು ಭಾಗ ಜನರಿಗೆ ತಾವು ಓದುವ, ಕೇಳುವ ಅಥವಾ ವೀಕ್ಷಿಸುವ ಸುದ್ದಿಯ ಖಚಿತತೆಯ ಬಗ್ಗೆ ಶಂಕೆ ಇದ್ದರೆ ಶೇ.೫೩ ಜನರಿಗೆ ಸುದ್ದಿಯ ಬಗ್ಗೆ ವಿಶ್ವಾಸವೇ ಇಲ್ಲವಂತೆ.

ಆಂಧ್ರಪ್ರದೇಶದ ಸೆಂಟರ್ ಫಾರ್ ಮೀಡಿಯಾ ಸ್ಟಡಿ ನಡೆಸಿದ ಇಂಥ ಒಂದು ಸಮೀಕ್ಷೆಯಲ್ಲಿ ವಿದ್ಯುನ್ಮಾನ ಮಾಧ್ಯಮಕ್ಕಿಂತ ಮುದ್ರಣ ಮಾಧ್ಯಮದ ಸುದ್ದಿ ಹೆಚ್ಚು ವಿಶ್ವಾಸಾರ್ಹ ಎಂದು ಬಹುತೇಕ ಜನ ಹೇಳಿದ್ದಾರೆ. ಸ್ಕೂಪ್, ಬ್ರೇಕಿಂಗ್ ನ್ಯೂಸ್ ಕೊಟ್ಟು ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಮತ್ತು ಹೆಚ್ಚು ಜನರನ್ನು ತಲುಪುವ ಪೈಪೋಟಿಯಲ್ಲಿ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಯ ಮೂಲಭೂತ ಸಂಗತಿಯನ್ನೇ ಮರೆಯುತ್ತಿವೆ. ಏನೇನೋ ಸ್ವಾರ್ಥ ಉದ್ದೇಶದಿಂದ ಮಾಧ್ಯಮಗಳು ತಮ್ಮ ಮೂಗಿನ ನೇರಕ್ಕೇ ಸಮಾಜವನ್ನು ಅಡ್ಡಾದಿಡ್ಡಿ ಎಳೆದು ದಿಕ್ಕು ತಪ್ಪಿಸಲು ತೊಡಗಿದರೆ ಅದೇ ಸಮಾಜದ ಒಂದು ಭಾಗವಾದ ಮಾಧ್ಯಮಗಳು ಸುರಕ್ಷಿತವಾಗಿ ಇರಬಲ್ಲವೇ, ಕುಳಿತ ಟೊಂಗೆಯ ಬುಡವನ್ನೇ ಕಡಿಯುವ ಮೂರ್ಖತನ ಇದಾಗದೇ ಎಂಬುದೇ ಈಗ ಕೇಳಿಕೊಳ್ಳಬೇಕಾದ ಪ್ರಶ್ನೆ.