11 ಸೆಪ್ಟೆಂಬರ್ 2022ರ 'ಉದಯವಾಣಿ' ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ.
ಯಕ್ಷಗಾನ ನಿರಂತರ ಪರಿಷ್ಕರಣೆಗೆ ಒಳಗಾಗುತ್ತಾ ಬಂದಿರುವ ಕಲೆ. ಅದರ ವಸ್ತು, ವಿನ್ಯಾಸ, ರಂಗಭಾಷೆ, ವೇಷಭೂಷಣ, ಪ್ರಸ್ತುತಿ- ಎಲ್ಲ ಆಯಾಮಗಳಲ್ಲೂ ಸಾಕಷ್ಟು ಬದಲಾವಣೆಗಳು ಆಗಿವೆ, ಆಗುತ್ತಲೇ ಇವೆ. ಇವುಗಳಲ್ಲಿ ಕೆಲವನ್ನು ಪ್ರೇಕ್ಷಕರು, ಕಲಾವಿದರು, ವಿದ್ವಾಂಸರು ಒಪ್ಪಿಕೊಂಡರು, ಇನ್ನು ಕೆಲವನ್ನು ಟೀಕಿಸಿದರು. ಕಾಳುಗಳು ಉಳಿದವು; ಜಳ್ಳುಗಳು ತೂರಿಹೋದವು. ಇದು ಕಾಲಧರ್ಮ.ಯಾವುದೇ ಕಲೆಯನ್ನು ಒಂದು ಸಜೀವ ಅಸ್ತಿತ್ವವೆಂದು ಪರಿಗಣಿಸಬಹುದಾದರೆ, ಅದರಲ್ಲಿ ಬದಲಾವಣೆ ಸಹಜ. ಕಲೆ ಬದುಕಿನ ಭಾಗ. ಜೀವನ ಬೇರೆ ಅಲ್ಲ, ಕಲೆ ಬೇರೆ ಅಲ್ಲ. ಬದುಕಿನ ಸೃಜನಶೀಲ ಭಾಗವೇ ಕಲೆ. ಬದುಕು ಶತಮಾನಗಳ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇಲ್ಲ. ಅಂದಮೇಲೆ ಕಲೆಯೂ ಯಥಾಸ್ಥಿತಿಯಲ್ಲಿರುವುದು ಸಾಧ್ಯವಿಲ್ಲ. ಅದೂ ಕಾಲಾನುಕ್ರಮದಲ್ಲಿ ಬಯಸುವ ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಈ ಪರಿಷ್ಕಾರಗಳು ಕಲೆಯ ಉನ್ನತಿಗೆ ಪೂರಕವಾಗಿರಬೇಕು ಎಂಬುದಷ್ಟೇ ಕಲೋಪಾಸಕರ ಆಗ್ರಹ.
ಯಕ್ಷಗಾನ ಕ್ಷೇತ್ರದಲ್ಲಿ ಯಾವುದೇ ಹೊಸ ವಿಚಾರ ಪ್ರಸ್ತಾಪವಾದಾಗಲೂ ಚರ್ಚೆ ಸಾಮಾನ್ಯ. ಅದಕ್ಕೆ ಕಾರಣ ಯಕ್ಷಗಾನಕ್ಕಿರುವ ದೊಡ್ಡಸಂಖ್ಯೆಯ ಪ್ರೇಕ್ಷಕರು ಮತ್ತು ಯಕ್ಷಗಾನದ ಕುರಿತು ಅವರಲ್ಲಿರುವ ವಿಶೇಷ ಅಭಿಮಾನ. ಮೂಲತಃ ಆರಾಧನಾ ಕಲೆಯಾಗಿದ್ದ ಯಕ್ಷಗಾನ ಕಾಲಕ್ರಮೇಣ ಮುಕ್ತತೆಗೆ ತೆರೆದುಕೊಂಡರೂ ಬಹುಪಾಲು ಪ್ರೇಕ್ಷಕರ ಮನಸ್ಸಿನಲ್ಲಿ ಅದರ ಕುರಿತೊಂದು ಪೂಜ್ಯ ಭಾವವೇ ಇದೆ. ಅವರು ಅದನ್ನೊಂದು ಕೇವಲ ಪ್ರದರ್ಶನ ಕಲೆಯಾಗಿ ಒಪ್ಪಿಕೊಳ್ಳಲಾರರು. ಯಕ್ಷಗಾನಕ್ಕಿರುವ ಜಾನಪದ ಸ್ವರೂಪವೂ ಇದಕ್ಕಿರುವ ಪ್ರಮುಖ ಕಾರಣ.
ಕಟೀಲು ಮೇಳಗಳು ಮುಂದಿನ ತಿರುಗಾಟದಿಂದ ಕಾಲಮಿತಿ ಪ್ರದರ್ಶನಗಳನ್ನು ನೀಡಲಿವೆ ಎಂದು ಇತ್ತೀಚೆಗೆ ಘೋಷಿಸಿದಲ್ಲಿಂದ ಯಕ್ಷಗಾನ ವಲಯದಲ್ಲಿ ಈ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಈ ಕಾಲಮಿತಿಯ ವಿಚಾರ ಯಕ್ಷಗಾನಕ್ಕೆ ಹೊಸದೇನಲ್ಲ. ಕಾಲಮಿತಿಯ ಪರಿಕಲ್ಪನೆಯನ್ನು 1955ರಷ್ಟು ಹಿಂದೆಯೇ 'ಕಾಂಚನ ಮೇಳ' ಜಾರಿಗೆ ತಂದಿತೆಂದು ನೆನಪಿಸಿಕೊಳ್ಳುತ್ತಾರೆ ಯಕ್ಷಗಾನ ಕಲಾವಿದ-ಸಂಘಟಕ ಉಜಿರೆ ಅಶೋಕ ಭಟ್ಟರು. 1985ರಲ್ಲಿ ಕೆರೆಮನೆ ಮೇಳವೂ ಕಾಲಮಿತಿಯನ್ನು ಅಳವಡಿಸಿಕೊಂಡಿತು. ಹೊಸ ಸಹಸ್ರಮಾನದಲ್ಲಿ ಹೊಸನಗರ ಮೇಳ ಕಾಲಮಿತಿಯ ಪ್ರದರ್ಶನಗಳನ್ನು ಆರಂಭಿಸಿತು. ಹೊಸಕಾಲದ ವೃತ್ತಿಪರ ಮೇಳಗಳ ಮಟ್ಟಿಗೆ ಇದೊಂದು ಕ್ರಾಂತಿಕಾರಕ ಹೆಜ್ಜೆಯೇ ಆಗಿತ್ತು. ಇದರಿಂದ ಪ್ರೇರಿತವಾದ ಧರ್ಮಸ್ಥಳ ಮೇಳವು 2015ರಲ್ಲಿ ಕಾಲಮಿತಿ ಪ್ರದರ್ಶನಗಳನ್ನು ನೀಡಲಾರಂಭಿಸಿತು. ಮುಂದೆ ಹನುಮಗಿರಿ, ಪಾವಂಜೆ ಮೊದಲಾದ ಮೇಳಗಳೂ ಕಾಲಮಿತಿಯ ಪ್ರದರ್ಶನಗಳಿಗೆ ಒಗ್ಗಿಕೊಂಡವು. ಆದರೆ ಕಟೀಲು ಮೇಳಗಳು ಕಾಲಮಿತಿಯ ಪ್ರಸ್ತಾಪ ಮಾಡಿದಾಗ ಅದರ ಬಗ್ಗೆ ಕಲಾವಿದರು ಹಾಗೂ ಪ್ರೇಕ್ಷಕರ ವಲಯದಿಂದ ಮತ್ತೆ ಪರ-ವಿರೋಧದ ಅಭಿಪ್ರಾಯಗಳು ಬರಲಾರಂಭಿಸಿವೆ.
ಯಾಕೆ ವಿರೋಧ?
ಕಟೀಲು ಮೇಳ ಯಕ್ಷಗಾನದ ಪೂರ್ವರಂಗವನ್ನೂ ಉಳಿಸಿಕೊಂಡು ಇಡೀ ರಾತ್ರಿ ಪ್ರದರ್ಶನ ನೀಡುತ್ತಿರುವ ತೆಂಕುತಿಟ್ಟಿನ ಏಕೈಕ ಮೇಳ (ಒಟ್ಟು ಆರು ಮೇಳಗಳಿವೆ). ಮುಸ್ಸಂಜೆಯ ಹೊತ್ತಲ್ಲಿ ಆರಂಭವಾಗುವ ಯಕ್ಷಗಾನದ ಪ್ರಕ್ರಿಯೆ, ರಾತ್ರಿ ಎಂಟರ ಸುಮಾರಿಗೆ ಸಭಾಲಕ್ಷಣದೊಂದಿಗೆ ಮುಂದುವರಿದು, ಹನ್ನೊಂದರ ಆಸುಪಾಸಲ್ಲಿ ಪ್ರಸಂಗವನ್ನು ಆರಂಭಿಸಿ, ಮುಂಜಾನೆ ಐದೂವರೆ-ಆರರ ಸುಮಾರಿಗೆ ಮಂಗಳವಾಗುವುದು ವಾಡಿಕೆ. ಇಡೀ ರಾತ್ರಿ ನಡೆಯುವ ಈ ಒಟ್ಟಾರೆ ಪ್ರಕ್ರಿಯೆ ಪ್ರೇಕ್ಷಕರ ಮನಸ್ಸಿನಲ್ಲೊಂದು ರಮ್ಯಾದ್ಭುತ ವರ್ಣಮಯ ಲೋಕವನ್ನು ಸೃಷ್ಟಿಸುವ ಪರಿ ಅನನ್ಯ.
ಕಟೀಲು ಮೇಳಗಳೂ ಈ ಕಾಲಮಿತಿಯ ಪ್ರದರ್ಶನಗಳಿಗೆ ಒಳಪಟ್ಟರೆ ತೆಂಕುತಿಟ್ಟಿನಲ್ಲಿ ಉಳಿದಿರುವ ಪೂರ್ಣಾವಧಿಯ ಏಕೈಕ ಮಾದರಿಯೂ ಇಲ್ಲವಾಗುತ್ತದಲ್ಲ ಎಂಬುದು ಪ್ರಸ್ತುತ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರ ನೋವು. ಇದು ನಮ್ಮ ಸಾಂಸ್ಕೃತಿಕ ಪರಂಪರೆಗೆ ಬೀಳುತ್ತಿರುವ ಏಟು ಎಂಬ ವ್ಯಾಖ್ಯಾನವೂ ಕೇಳಿಬಂದಿದೆ. ಅವಧಿಯನ್ನು ಮೊಟಕುಗೊಳಿಸುವುದರಿಂದ ಅನೇಕ ಕಲಾವಿದರಿಗೆ ಅವಕಾಶ ತಪ್ಪಿಹೋಗುತ್ತದೆ, ಪೂರ್ವರಂಗ ಇಲ್ಲವಾಗುವುದರಿಂದ ಅಭ್ಯಾಸಿಗಳಿಗೆ ತರಬೇತಿ ಸಿಗುವುದಿಲ್ಲ, ಮಧ್ಯರಾತ್ರಿ ಆಟ ಮುಕ್ತಾಯವಾಗುವುದರಿಂದ ಪ್ರೇಕ್ಷಕರು ಮನೆಗಳಿಗೆ ಹಿಂತಿರುವುದು ಕಷ್ಟ, ಪ್ರಸಂಗಗಳನ್ನು ಸಂಕ್ಷೇಪಗೊಳಿಸುವುದರಿಂದ ಗುಣಮಟ್ಟ ಕಡಿಮೆಯಾಗುತ್ತದೆ ಇತ್ಯಾದಿ ಕಾರಣಗಳೂ ಪ್ರಸ್ತಾಪವಾಗಿವೆ.
ಬದಲಾವಣೆ ಅನಿವಾರ್ಯ:
ಆದರೆ ಕಾಲವೆಂಬುದು ಎಲ್ಲದಕ್ಕಿಂತ ಮೇಲಿನದ್ದು. ಅದು ಇಚ್ಛೆಯುಳ್ಳವರನ್ನು ಕರೆದುಕೊಂಡು ಹೋಗುತ್ತದೆ, ಇಚ್ಛೆಯಿಲ್ಲದವರನ್ನು ಎಳೆದುಕೊಂಡು ಹೋಗುತ್ತದೆ. ಮುಂದಕ್ಕೆ ಹೋಗುವುದಂತೂ ಹೋಗಲೇಬೇಕು. "ಕಾಲದ ಅನಿವಾರ್ಯಗಳನ್ನು ಅರ್ಥಮಾಡಿಕೊಳ್ಳದ ಕಲೆ ಕಾಲಗರ್ಭವನ್ನು ಸೇರಬೇಕಾಗುತ್ತದೆ" ಎಂಬ ಕಲಾವಿದ-ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿಯವರ ಮಾತು ಚಿಂತನಾರ್ಹ.
ಇದೇ ಅರ್ಥವನ್ನು ಹಿರಿಯ ವಿದ್ವಾಂಸ, ಯಕ್ಷಗಾನ ಕವಿ ಪ್ರೊ. ಅಮೃತ ಸೋಮೇಶ್ವರರೂ ಧ್ವನಿಸಿದ್ದುಂಟು: “ಚಲನಶೀಲತೆಯಿರುವ ಯಾವುದೇ ಜೀವಂತ ಕಲೆಯು ವರ್ತಮಾನ, ಭವಿಷ್ಯತ್ಕಾಲಗಳ ಪರಿಕಲ್ಪನೆಯಿಲ್ಲದೆ ಕೇವಲ ಭೂತಕಾಲವಿಹಾರಿಯಾಗುವಂತಿಲ್ಲ. ಒಂದು ವೇಳೆ ಅಂಥ ಹಳೇ ಹವ್ಯಾಸವನ್ನೇ ಮುಂದುವರಿಸಿದರೆ ಅಂಥ ಕಲೆ ಪ್ರತಿಗಾಮಿಯೂ ಪ್ರಗತಿ ವಿಮುಖವೂ ಎನಿಸುತ್ತದೆ. ವರ್ತಮಾನದ ಅರ್ಥಪೂರ್ಣ ಸಂಬಂಧವನ್ನು ಕಳೆದುಕೊಳ್ಳುತ್ತದೆ.”
ನಾವೀಗ ಅಂತಹದೊಂದು ಪರಿವರ್ತನೆಯ ಸಂಕ್ರಮಣಕಾಲದಲ್ಲಿದ್ದೇವೆ. ಸಮಾಜ ಆಧುನಿಕತೆಗೆ ತೆರೆದುಕೊಂಡಿದೆ. ಆಧುನಿಕ ಸಂವಹನ ಮಾಧ್ಯಮಗಳು ಜನರನ್ನು ಇನ್ನಿಲ್ಲದಂತೆ ಆವರಿಸಿಕೊಂಡಿವೆ. ಇಂತಹ ಸನ್ನಿವೇಶದಲ್ಲೂ ಜನರು ಯಕ್ಷಗಾನದಂತಹ ಸಾಂಪ್ರದಾಯಿಕ ಕಲೆಗಳಲ್ಲಿ ಆಸಕ್ತಿ ಉಳಿಸಿಕೊಂಡಿದ್ದಾರೆ ಎಂಬುದೇ ವಿಶೇಷ. ಬಹುಶಃ ಅದು ಆ ಕಲೆಗಳ ಶಕ್ತಿ ಕೂಡಾ.
“ಈಗ ಎಲ್ಲರೂ ಒಂದಲ್ಲ ಒಂದು ಉದ್ಯೋಗ ಹಿಡಿದಿರುವವರೇ. ಯಾರೂ ಇಡೀ ರಾತ್ರಿ ನಿದ್ದೆಗೆಟ್ಟು ಆಟ ನೋಡುವ ಪರಿಸ್ಥಿತಿಯಲ್ಲಿ ಇಲ್ಲ. ಅವರು ನೋಡಬೇಕು ಎಂಬುದು ಅಪೇಕ್ಷಣೀಯವೂ ಅಲ್ಲ. ದಿನಬೆಳಗಾದರೆ ಎಲ್ಲರಿಗೂ ಅವರವರದ್ದೇ ಕೆಲಸಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಕಾಲಮಿತಿ ಪ್ರದರ್ಶನಗಳು ಖಂಡಿತ ಸ್ವಾಗತಾರ್ಹ” ಎನ್ನುತ್ತಾರೆ ಹಿರಿಯ ಕಲಾವಿದ, ಯಕ್ಷಗಾನ ಕವಿ ಡಿ. ಎಸ್. ಶ್ರೀಧರ.
“ಕಟೀಲು ಮೇಳದ್ದೇ ಜನಪ್ರಿಯ ಪ್ರಸಂಗ ‘ದೇವಿಮಹಾತ್ಮೆ’ಯನ್ನು ಮಧ್ಯರಾತ್ರಿ ಬಳಿಕ ನೋಡುವವರ ಸಂಖ್ಯೆ ಬೆರಳೆಣಿಕೆಯಷ್ಟು. ಆಟದ ವೀಳ್ಯ ಕೊಟ್ಟವರೇ ಬೆಳಗಿನವರೆಗೆ ಕೂರುವುದು ಕಡಿಮೆ. ರಕ್ತಬೀಜನ ಪಾತ್ರವನ್ನು ಸಾಮಾನ್ಯವಾಗಿ ಅನುಭವೀ ಹಿರಿಯ ಕಲಾವಿದರು ನಿರ್ವಹಿಸುತ್ತಾರೆ. ಆ ಪಾತ್ರದ ಪ್ರವೇಶವಾಗುವುದೇ ಬೆಳಗ್ಗೆ ನಾಲ್ಕು ಗಂಟೆಗೆ. ಆ ಹೊತ್ತಿಗೆ ರಂಗದ ಎದುರು ನಾಲ್ಕೈದು ಮಂದಿ ತೂಕಡಿಸುತ್ತಾ ಕುಳಿತಿದ್ದರೆ ಆ ಕಲಾವಿದರ ಶ್ರಮಕ್ಕೆ ಏನು ಬೆಲೆ?” ಎಂದು ಪ್ರಶ್ನಿಸುತ್ತಾರೆ ಯಕ್ಷಗಾನ ಸಂಘಟಕ ಡಾ. ಚಂದ್ರಶೇಖರ ದಾಮ್ಲೆ.
ಯಕ್ಷಗಾನದ ಅವಧಿ ಮೊಟಕುಗೊಳಿಸುವ ವಿದ್ಯಮಾನ ಇತ್ತೀಚಿನದ್ದೇನೂ ಅಲ್ಲವೆನ್ನುತ್ತಾರೆ ಕಲಾವಿದ-ಲೇಖಕ ಗಣರಾಜ ಕುಂಬ್ಳೆ. “ದೇವಿಮಹಾತ್ಮೆ, ಸಂಪೂರ್ಣ ರಾಮಾಯಣ ಇತ್ಯಾದಿ ಪ್ರಸಂಗಗಳನ್ನು ಮೂರು ದಿನ, ಐದು ದಿನ- ಹೀಗೆ ಪ್ರದರ್ಶಿಸುವುದು ಹಿಂದೆ ಚಾಲ್ತಿಯಲ್ಲಿತ್ತು. ಕಾಲಕ್ರಮೇಣ ಅವೆಲ್ಲ ಮರೆಯಾಗುತ್ತಾ ಒಂದು ರಾತ್ರಿಯ ಅವಧಿಗೆ ಬಂದು ನಿಂತಿತು. ಈಗಲೂ ಇಡೀ ರಾತ್ರಿ ಆಡುವುದಿದ್ದರೂ ಹೆಚ್ಚೆಂದರೆ ಆರು ಗಂಟೆ ಸಿಗಬಹುದು ಅಷ್ಟೆ. ಅದನ್ನು ನಾಲ್ಕೋ ಐದೋ ಗಂಟೆಗೆ ಸಂಕ್ಷೇಪಗೊಳಿಸುವುದು ಕಷ್ಟವೇನೂ ಅಲ್ಲ” ಎನ್ನುತ್ತಾರೆ ಅವರು.
ಇದರೊಂದಿಗೆ ಇನ್ನೊಂದು ಎಚ್ಚರಿಕೆಯ ಮಾತನ್ನೂ ಕುಂಬ್ಳೆಯವರು ಸೇರಿಸುತ್ತಾರೆ: "ಕಲೆಯಲ್ಲಿ ಆಗುವ ಭೌತಿಕ ಬದಲಾವಣೆಗಳು ಕಲೆಯ ಆಂತರಿಕ ಗುಣಕ್ಕೆ ತೊಂದರೆ ಉಂಟುಮಾಡಬಾರದು. ಇದು ಪ್ರಬುದ್ಧ ಪ್ರೇಕ್ಷಕರು ಬಯಸುವ ವಿಷಯ. ಪ್ರದರ್ಶನದ ವೇಗ ಪ್ರಸಂಗದ ಆಶಯಕ್ಕೆ ವಿರುದ್ಧವಾಗಿ ಹೋಗುವುದು, ಪ್ರಾಮುಖ್ಯತೆ ಸಿಗಬೇಕಾದ ಭಾಗವನ್ನು ಬಿಟ್ಟು ಇನ್ಯಾವುದೋ ಭಾಗಕ್ಕೆ ಮಹತ್ವ ನೀಡುವುದು- ಇಂತಹ ಅಪಸವ್ಯಗಳು ಆಗದಂತೆ ಕಲಾವಿದರು ಎಚ್ಚರಿಕೆ ವಹಿಸಬೇಕು. ಹೀಗೆ ಮಾಡಿದರೆ ಕಾಲಮಿತಿಯ ಪ್ರದರ್ಶನಗಳೂ ಹಿಂದಿನ ರಸಾನುಭವವನ್ನೇ ಪ್ರೇಕ್ಷಕರಿಗೆ ನೀಡಬಲ್ಲವು."
“ಇಡೀ ರಾತ್ರಿ ಯಕ್ಷಗಾನ ಬೇಕು ಎಂಬ ಬೇಡಿಕೆಯನ್ನು ಒಪ್ಪೋಣ. ಆದರೆ ಅದಕ್ಕೆ ಪ್ರೇಕ್ಷಕರು ಎಲ್ಲಿದ್ದಾರೆ? ಯಕ್ಷಗಾನವನ್ನೇ ಸಂಪೂರ್ಣ ನಂಬಿರುವ ಕಲಾವಿದರು ಎಲ್ಲಿದ್ದಾರೆ? ನಾವು ವಾಸ್ತವ ಅರ್ಥಮಾಡಿಕೊಳ್ಳಬೇಕು” ಎನ್ನುತ್ತಾರೆ ಕಲಾವಿದ, ಸಂಘಟಕ ಉಜಿರೆ ಅಶೋಕ ಭಟ್. “ಯಕ್ಷಗಾನದಿಂದಲೇ ಬದುಕು ಸಾಗಬೇಕು ಎನ್ನುವ ಮಂದಿ ಈಗ ಇಲ್ಲ. ಮೇಳಗಳು ಕೊಡುವ ಹದಿನೈದಿಪ್ಪತ್ತು ಸಾವಿರ ಸಂಬಳ ತಿಂಗಳ ಖರ್ಚಿಗೆ ಸಾಕಾಗುವುದಿಲ್ಲ. ಎಲ್ಲರಿಗೂ ಉಪವೃತ್ತಿ ಅನಿವಾರ್ಯವಾಗಿದೆ. ಮೇಳಗಳಿಗೆ ಕೆಲಸದಾಳುಗಳು ಸಿಗುವುದಿಲ್ಲ. ಇನ್ನೂ ಏಳೆಂಟು ವರ್ಷ ಕಳೆದರೆ ಒಂದು ಮೇಳಕ್ಕೆ ಬದ್ಧವಾಗಿರುವ ಖಾಯಂ ಕಲಾವಿದರ ತಂಡ ಸಿಗುವುದು ಕಷ್ಟ. ಆಗ ಸ್ಥಳೀಯ ಮಟ್ಟದಲ್ಲಿ ಲಭ್ಯವಿರುವ ಕಲಾವಿದರನ್ನೇ ಬಳಸಿಕೊಂಡು ಯಕ್ಷಗಾನ ಪ್ರದರ್ಶನ ಮಾಡಬೇಕಾಗುತ್ತದೆ. ಹೀಗಾಗಿ ಕಾಲಮಿತಿ ಯಕ್ಷಗಾನದ ಚಿಂತನೆಯಲ್ಲಿ ಆಕ್ಷೇಪಾರ್ಹವೇನೂ ಇಲ್ಲ” ಎನ್ನುತ್ತಾರವರು.
ಎಡಿಟಿಂಗ್ ಸಾಧ್ಯ:
ಯಕ್ಷಗಾನದ ಮೂಲಸೊಗಡನ್ನು ಕಳೆಯದೆ, ಪ್ರಸಂಗವನ್ನು ವಿರೂಪಗೊಳಿಸದೆ ಎಡಿಟಿಂಗ್ ಮಾಡುವುದು ಸಾಧ್ಯ ಎಂಬುದು ಈ ಎಲ್ಲ ಅನುಭವಿಗಳ ಅಭಿಪ್ರಾಯ. “ಪರಿಷ್ಕರಣೆ ಎಂದರೆ ಪ್ರಸಂಗವನ್ನು ಮನಬಂದಂತೆ ಕತ್ತರಿಸುವುದಲ್ಲ. ಯಾವುದು ಎಷ್ಟು ಬೇಕು ಎಂಬ ವಿವೇಚನೆಯನ್ನು ಇಟ್ಟುಕೊಂಡು ಎಡಿಟ್ ಮಾಡುವುದು. ಪೂರ್ವರಂಗವನ್ನು ಉಳಿಸಿಕೊಂಡು, ಪ್ರದರ್ಶನದ ಕಾಲಗತಿಯನ್ನು ಕಡೆಗಣಿಸದೆ, ಸನ್ನಿವೇಶಗಳನ್ನೂ ಬಿಡದೆ ಒಟ್ಟಾರೆ ಪ್ರದರ್ಶನವನ್ನು ಸಂಕ್ಷೇಪಗೊಳಿಸುವುದಕ್ಕೆ ಅವಕಾಶವಿದೆ. ಒಂದೇ ವಿಷಯಕ್ಕೆ ಸಂಬಂಧಿಸಿದ ನಾಲ್ಕೈದು ಪದ್ಯಗಳನ್ನು ಕೈಬಿಟ್ಟು ಅಗತ್ಯವಿರುವ ಒಂದೋ ಎರಡೋ ಪದ್ಯಗಳನ್ನು ವಿವೇಚನೆಯಿಂದ ತೆಗೆದುಕೊಳ್ಳಬಹುದು. ಕೋವಿಡ್ ಸಮಯದಲ್ಲಿ ಕಟೀಲು ಮೇಳಗಳೂ ಅನಿವಾರ್ಯವಾಗಿ ಕಾಲಮಿತಿ ಪ್ರದರ್ಶನ ಆರಂಭಿಸಿದಾಗ ಪ್ರೇಕ್ಷಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾದದ್ದು ಉಲ್ಲೇಖಾರ್ಹ” ಎನ್ನುತ್ತಾರೆ ಭಾಗವತ ಪುತ್ತೂರು ರಮೇಶ ಭಟ್.
“ಸೂಕ್ತ ವಿವೇಚನಾ ಸಾಮರ್ಥ್ಯವುಳ್ಳ ಸಮರ್ಥ ಭಾಗವತನೊಬ್ಬ ಈ ಎಡಿಟಿಂಗನ್ನು ಮಾಡಬಲ್ಲ. ಪೂರ್ವರಂಗದ ಪ್ರಸ್ತುತತೆಯನ್ನೂ ನಾವೀಗ ವಿವೇಚಿಸಬೇಕು. ಅದರ ಹಿಂದಿರುವುದು ಮೂಲತಃ ತರಬೇತಿಯ ಉದ್ದೇಶ. ಈಗ ತಕ್ಕಮಟ್ಟಿಗೆ ತರಬೇತಿ ಪಡೆದವರೇ ಮೇಳಕ್ಕೆ ಸೇರುತ್ತಾರೆ. ಅಲ್ಲಿ ಎರಡುಗಂಟೆಯ ಪೂರ್ವರಂಗ ಪ್ರದರ್ಶಿಸುವ ಅಗತ್ಯವೇ ಇಲ್ಲ. ಈಗಾಗಲೇ ಕಾಲಮಿತಿ ಪ್ರದರ್ಶನಕ್ಕೆ ಒಗ್ಗಿಕೊಂಡ ಮೇಳಗಳಿಂದಾಗಿಯೂ ಯಕ್ಷಗಾನಕ್ಕೆ ಅಂತಹ ನಷ್ಟವೇನೂ ಆದಂತೆ ಕಾಣುವುದಿಲ್ಲ” ಎನ್ನುತ್ತಾರೆ ಕಲಾವಿದ-ಲೇಖಕ ರಾಧಾಕೃಷ್ಣ ಕಲ್ಚಾರ್.
ರಾತ್ರಿ ಹತ್ತರ ಬಳಿಕ 50 ಡೆಸಿಬಲ್‌ಗಳಿಗಿಂತ ಹೆಚ್ಚಿನ ಧ್ವನಿಹೊಮ್ಮಿಸುವ ಮೈಕ್‌ಗಳನ್ನು ಬಳಸದಂತೆಯೂ ಸರ್ಕಾರ ಇತ್ತೀಚೆಗೆ ಧಾರ್ಮಿಕ ಕೇಂದ್ರಗಳಿಗೆ ಸೂಚನೆ ನೀಡಿದೆ. ನೆಲದ ಕಾನೂನುಗಳನ್ನು ಗೌರವಿಸುವುದೂ ನಮ್ಮ ಅನಿವಾರ್ಯಗಳಲ್ಲೊಂದು. ಕಾಲಕಳೆದಂತೆ ಸಮಾಜದ ಅದ್ಯತೆ, ದೃಷ್ಟಿಕೋನಗಳು ಬದಲಾಗುವುದು ಸಾಮಾನ್ಯ. ಅದನ್ನು ಗಮನಿಸುವ ಸೂಕ್ಷ್ಮತೆ ಬೆಳೆಸಿಕೊಳ್ಳದೆ ಹೋದರೆ ಕಲೆಯೂ ಅಪ್ರಸ್ತುತವಾಗುತ್ತದೆ.
- ಸಿಬಂತಿ ಪದ್ಮನಾಭ ಕೆ. ವಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ