ಮಂಗಳವಾರ, ನವೆಂಬರ್ 28, 2017

ಜೀವನ ಎಂಬ ಕಲೆ

ನವೆಂಬರ್ 18-24, 2017ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ

ಬಾಲ್ಯವನ್ನೊಮ್ಮೆ ನೆನಪಿಸಿಕೊಳ್ಳಿ: ಬೀದಿಯುದ್ದ ಬೈಸಿಕಲ್ ಹೊಡೆಯುವ ಹುಡುಗ ಹುಡುಗಿಯರನ್ನು ಕನಸುಗಣ್ಣುಗಳಿಂದ ನೋಡಿ ತನಗೂ ಒಂದು ಪುಟ್ಟ ಬೈಸಿಕಲ್ ಬೇಕು ಎಂದು ಆಸೆಪಡದವರು ಇದ್ದೀರಾ? ಬಣ್ಣಬಣ್ಣದ ತರಹೇವಾರಿ ಸೈಕಲುಗಳಿಂದ ಗಿಜಿಗುಡುವ ಅಂಗಡಿಯೆದುರು ನಿಂತು ಈಗಲೇ ಒಂದು ಸೈಕಲ್ ಕೊಡಿಸಲೇಬೇಕೆಂದು ಅಪ್ಪ-ಅಮ್ಮನ ಎದುರು ನಿಂತು ರಸ್ತೆಯಲ್ಲೇ ಮುಷ್ಕರ ಹೂಡದವರು ಇದ್ದೀರಾ? ಬೈಸಿಕಲ್ ಕೊಡಿಸದೇ ಹೋದರೆ ಶಾಲೆಗೇ ಹೋಗುವುದಿಲ್ಲ ಎಂದು ಉಪವಾಸ ಸತ್ಯಾಗ್ರಹ ಮಾಡದವರು ಇದ್ದೀರಾ?

ಬೈಸಿಕಲ್ ಎಂದರೆ ಹಾಗೆಯೇ. ಜಗತ್ತಿನ ಎಲ್ಲರ ಆಕರ್ಷಣೆ. ವಿಮಾನ ಏರಬೇಕೆಂದು ಆಸೆಪಡದವರು ಸಿಗಬಹುದು, ಆದರೆ ಬೈಸಿಕಲ್ ಓಡಿಸಬೇಕೆಂದು ಕನಸುಕಾಣದವರು ಸಿಗುವುದು ಕಷ್ಟ. ಎಳವೆಯಲ್ಲಂತೂ ಸೈಕಲ್ ಹೊಡೆಯುವುದೇ ದೊಡ್ಡ ಗುರಿ ಮತ್ತು ಸಾಧನೆ. ಆದರೆ ಬೈಸಿಕಲ್ ಮೇಲೆ ಕುಳಿತಾಗಲೇ ಗೊತ್ತಾಗುವುದು ಅದನ್ನು ಓಡಿಸುವುದು ಕನಸು ಕಂಡಷ್ಟು ಸರಳ ಅಲ್ಲವೆಂದು. ಮೊದಲ ಸಲ ಸೈಕಲ್ ಹತ್ತಿದ ಮಗುವಂತೂ ಇದು ತನ್ನಿಂದಾಗದ ಕೆಲಸವೆಂದು ಒಂದೇ ನಿಮಿಷದಲ್ಲಿ ಆತಂಕದಿಂದ ಇಳಿದು ಬರುವ ಸಾಧ್ಯತೆಯೇ ಹೆಚ್ಚು. ಆರಂಭದ ದಿನಗಳಲ್ಲಿ ಮಕ್ಕಳ ಬೈಸಿಕಲ್ಲಿನ ಹಿಂಬದಿ ಟಯರಿಗೆ ಮತ್ತೆರಡು ಪುಟ್ಟ ಚಕ್ರಗಳು ಬೇಕು. ಮತ್ತೊಂದು ದಿನ ಮಗುವೇ ಹೇಳುತ್ತದೆ: ಸಾಕಿನ್ನು ಹಿಂಬದಿ ಚಕ್ರ, ತೆಗೆದುಬಿಡಿ ಅದನ್ನು. ಬೈಸಿಕಲ್ ಓಡಿಸುವುದು ಕರಗತವಾದ ಬಳಿಕ ಹೆಚ್ಚುವರಿ ಚಕ್ರಗಳೇ ನಮ್ಮ ಸ್ವಾಭಿಮಾನಕ್ಕೆ ಅಡ್ಡಿ!

ಬಹುಶಃ ಅಂಬೆಗಾಲಿಕ್ಕುವ ದಿನಗಳಿಂದ ತೊಡಗಿ ಬದುಕಿನ ಕೊನೆಯ ದಿನಗಳವರೆಗೂ ಬ್ಯಾಲೆನ್ಸ್ ಮಾಡುವುದೇ ಮನುಷ್ಯ ಜೀವನದ ಬಲುದೊಡ್ಡ ಸವಾಲು ಇರಬೇಕು. ಬಾಲ್ಯದಲ್ಲಿ ಸೈಕಲ್ ಬ್ಯಾಲೆನ್ಸ್ ಮಾಡುವುದೊಂದೇ ಅವಶ್ಯಕತೆ; ವರ್ಷಗಳು ಕಳೆದಂತೆ, ಹದಿಹರೆಯ, ಯೌವನ, ಉದ್ಯೋಗ, ಸಂಸಾರ, ಸಾಧನೆ, ಇಳಿವಯಸ್ಸು... ಹೀಗೆ ಒಂದೊಂದು ಹಂತಗಳು ದಾಟುತ್ತಿದ್ದಂತೆ ಬದುಕಿನ ಪ್ರತಿ ನಿಮಿಷವೂ ಪರ್ವತದಂಚಿನ ಹಾದಿಯ ಸೈಕಲ್ ಬ್ಯಾಲೆನ್ಸೇ! ಸಮತೋಲನ ಸಾಧಿಸಿದವನು ಪರ್ವತ ಏರಿಯಾನು, ಎಚ್ಚರ ತಪ್ಪಿದವನು ಮತ್ತೆಂದೂ ಏಳಲಾಗದ ಪ್ರಪಾತಕ್ಕೆ ಬಿದ್ದಾನು.

ಜೀವನವೆಂದರೆ ಬೈಸಿಕಲ್ ಓಡಿಸಿದ ಹಾಗೆ, ಸಮತೋಲನವನ್ನು ಕಾಯ್ದುಕೊಳ್ಳಬೇಕಾದರೆ ನೀವು ಚಲಿಸುತ್ತಲೇ ಇರಬೇಕು - ಎಂದರು ಆಲ್ಬರ್ಟ್ ಐನ್‌ಸ್ಟೀನ್. ಜಗತ್ತಿನ ಚಲನೆಯ ನಿಯಮಗಳನ್ನು ಅತ್ಯಂತ ಸರಳವಾಗಿ ಸೂತ್ರೀಕರಿಸಿದ ಮಹಾನ್ ವಿಜ್ಞಾನಿ ಬದುಕಿನ ಬಹುದೊಡ್ಡ ಸತ್ಯವನ್ನೂ ಎಷ್ಟೊಂದು ಸರಳವಾಗಿ ಹೇಳಿಬಿಟ್ಟಿದ್ದಾರೆ ನೋಡಿ. ಚಲಿಸದೇ ಹೋದರೆ ಸೈಕಲ್ ಅರೆಕ್ಷಣವೂ ನಿಲ್ಲದು. ಬೀಳದೆ ಇರಬೇಕೆಂದರೆ ಪೆಡಲ್ ಮಾಡುತ್ತಲೇ ಇರಬೇಕು. ಚಲನಶೀಲತೆ ಬದುಕಿನ ಸಾರಸರ್ವಸ್ವ ಎನ್ನುತ್ತಲೇ ಬದುಕೆಂಬುದೊಂದು ಕಲೆ ಎಂಬ ಸತ್ಯವನ್ನು ಐನ್‌ಸ್ಟೀನ್ ಎಷ್ಟು ಸುಲಭವಾಗಿ ವಿವರಿಸಿದ್ದಾರೆ!

ಕಲೆಯೆಂದರೆ ಹಾಗೆಯೇ, ಕಲಿಯುವವರೆಗೆ ಎಲ್ಲವೂ ಕಠಿಣ, ಕಲಿತ ಮೇಲೆ ತುಂಬ ಸಲೀಸು. ಆದರೆ ಕಲಿಯುವ ಹಾದಿಯೇ ಬಲುಕಠಿಣ. ಪೂರ್ತಿ ಕಲಿತಾಗುವ ಮುನ್ನವೇ ನಿವೃತ್ತಿ ಘೋಷಿಸುವವರೇ ಹೆಚ್ಚು. ನಮ್ಮ ಸುತ್ತಮುತ್ತ ಎಷ್ಟೊಂದು ಬಗೆಯ ಮಂದಿಯನ್ನು ನೋಡುತ್ತೇವೆ: ತೀರಾ ಕೆಳಹಂತದಿಂದ ಬೆಳೆದು ಶಿಖರಪ್ರಾಯ ಸಾಧನೆ ಮಾಡಿದವರು, ಯಶಸ್ಸಿನ ಶಿಖರಕ್ಕೇರಿ ಸೋಲಿನ ಪಾತಾಳಕ್ಕೆ ಕುಸಿದವರು, ಆರಕ್ಕೂ ಏರದೆ ಮೂರಕ್ಕೂ ಇಳಿಯದೆ ಇಡೀ ಜೀವನವನ್ನು ನೀರಸವಾಗಿಯೇ ಮುಗಿಸಿದವರು, ಅರೆಕ್ಷಣದ ದೌರ್ಬಲ್ಯಕ್ಕೆ ತುತ್ತಾಗಿ ಬದುಕಿಗೆ ಅಂತ್ಯ ಹಾಡಿದವರು, ಅದೇ ಅರೆಕ್ಷಣದಲ್ಲೂ ಮನಸ್ಸು ಬದಲಾಯಿಸಿ ಸಾವಿನ ದವಡೆಯಿಂದ ತಪ್ಪಿಸಿಕೊಂಡು ಯಶಸ್ಸಿನ ಉತ್ತುಂಗಕ್ಕೇರಿ ಮೆರೆದವರು...

ಒಬ್ಬೊಬ್ಬನ ಬದುಕೂ ಒಂದೊಂದು ಥರ. ಎಲ್ಲರೂ ಬದುಕುವ ನೆಲ ಅದೇ, ಕುಡಿಯುವ ನೀರು ಅದೇ, ಉಸಿರಾಡುವ ಗಾಳಿ ಅದೇ; ಆದರೆ ಯಾಕೆ ಎಲ್ಲರ ಬದುಕೂ ಒಂದೇ ರೀತಿ ಇರುವುದಿಲ್ಲ? ಏಕೆಂದರೆ ನೆಲ-ನೀರು-ಗಾಳಿ ಒಂದೇ ಆದರೂ ಯೋಚಿಸುವ ಮನಸ್ಸುಗಳು ಬೇರೆಬೇರೆ; ತೆಗೆದುಕೊಳ್ಳುವ ನಿರ್ಧಾರಗಳು ಬೇರೆಬೇರೆ. ನೂರು ಕೋಟಿ ಜನರಿದ್ದರೆ ನೂರು ಕೋಟಿ ಮನಸ್ಸುಗಳು, ಮುನ್ನೂರು ಕೋಟಿ ಆಲೋಚನೆಗಳು. ಜೀವನವೆಂದರೆ ಏನೆಂದು ಎಲ್ಲರನ್ನೂ ಕೇಳಿದರೆ ಒಬ್ಬೊಬ್ಬರು ಒಂದೊಂದು ವ್ಯಾಖ್ಯಾನ ನೀಡಿಯಾರು. ಆದರೆ ಜೀವನವೊಂದು ಕಲೆ ಎಂಬ ಮುಕ್ತ ರಹಸ್ಯವನ್ನು ಅವರು ಹೇಳಿಯಾರೇ?

'ಬದುಕೊಂದು ನಡೆದಾಡುವ ನೆರಳು, ರಂಗದ ಮೇಲೆ ಅತ್ತಿಂದಿತ್ತ ಇತ್ತಿಂದತ್ತ ಪರದಾಡುವ ಬಡ ಕಲಾವಿದ, ಮೂರ್ಖ ಹೇಳಿದ ಕಥೆ...’ ಎನ್ನುತ್ತಾನೆ ಶೇಕ್ಸ್‌ಪಿಯರನ ಮ್ಯಾಕ್‌ಬೆತ್. 'ಬದುಕು ಜಟಕಾ ಬಂಡಿ, ವಿಧಿಯದರ ಸಾಹೇಬ’ ಎಂದರು ಡಿ.ವಿ.ಜಿ. ಆದರೆ ಬದುಕಿನ ಎಲ್ಲ ಬೆಳವಣಿಗೆಗಳನ್ನೂ ಕೇವಲ ವಿಧಿ ಲೀಲೆಗೇ ತೂಗುಹಾಕಲಿಲ್ಲ ಅವರು. 'ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು, ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು, ಪದಕುಸಿಯೆ ನೆಲವಿಹುದು-ಮಂಕುತಿಮ್ಮ’ ಎಂದು ಸಾಗುವ ಕಗ್ಗದಲ್ಲಿ 'ಕುದುರೆ ನೀನು’ ಮತ್ತು 'ಪದಕುಸಿಯೆ ನೆಲವಿಹುದು’ ಎಂಬ ಎರಡು ಮಾತುಗಳನ್ನು ನಾವು ಪ್ರತ್ಯೇಕವಾಗಿ ಗಮನಿಸಬೇಕು. ಎಲ್ಲವೂ ಅವನ ಲೀಲೆಯೆಂದು ಅಖೈರು ಮಾಡುವ ಮೊದಲು ಸಾಗುವ ಕುದುರೆಗಳು ನಾವೇ ಎಂಬ ಸಣ್ಣ ಆಯ್ಕೆಯ ಪ್ರಜ್ಞೆ ಹಾಗೂ ಎಷ್ಟು ಕುಸಿದರೂ ಕೆಳಗೆ ನೆಲವಿದೆ ಎಂಬ ವಿಶ್ವಾಸ ಬೆಳೆಸಿಕೊಂಡರೆ ವಿಧಿಯೂ ಮನುಷ್ಯನ ಬೆಂಬಲಕ್ಕೆ ನಿಲ್ಲದೆ ಇರಲಾರದು.

ವಾಸ್ತವವಾಗಿ ಬದುಕು ತುಂಬ ಸರಳವಾಗಿರುತ್ತದೆ. ನಾವೆಲ್ಲರೂ ಅದನ್ನು ಸಂಕೀರ್ಣಗೊಳಿಸಲು ಹವಣಿಸುತ್ತಿರುತ್ತೇವೆ ಎಂದ ತತ್ತ್ವಜ್ಞಾನಿ ಕನ್‌ಫ್ಯೂಶಿಯಸ್. ಎಲ್ಲರಿಗೂ ಜೀವನದಲ್ಲಿ ದೊಡ್ಡದನ್ನು ಸಾಧಿಸುವ ಹಂಬಲ. ದೊಡ್ಡದು ಎಂದರೆ ಏನು? ಕೋಟಿಗಟ್ಟಲೆ ಸಂಪಾದಿಸುವುದೇ? ಲಕ್ಷಾಂತರ ಅಭಿಮಾನಿಗಳನ್ನು ಪಡೆಯುವುದೇ? ಹತ್ತು ಮಹಡಿಯ ಬಂಗಲೆಯಲ್ಲಿ ವಾಸಿಸುವುದೇ? ಐಷಾರಾಮಿ ಕಾರಿನಲ್ಲಿ ಓಡಾಡುವುದೇ? ಚಿನ್ನದ ತಟ್ಟೆಯಲ್ಲಿ ಉಣ್ಣುವುದೇ? ಇದೇ ಬದುಕಿನ ಯಶಸ್ಸು ಎಂದುಕೊಳ್ಳುವುದಾದರೆ ಇದರಿಂದ ಮನುಷ್ಯ ಸಂತೋಷವಾಗಿರಬಲ್ಲನೇ? ಕಣ್ತುಂಬ ನಿದ್ದೆ ಮಾಡಬಲ್ಲನೇ? ಇಲ್ಲ ಎಂದಾದರೆ ಅವನ ’ದೊಡ್ಡ ಸಾಧನೆ’ಯ ಸಾರ್ಥಕ್ಯ ಏನು? ಎಲ್ಲರಿಗಿಂತ ಹೆಚ್ಚು ಸಂಪಾದಿವುದೇ ಯಶಸ್ಸು ಎಂದು ಜಗತ್ತಿನ ಬಹುಪಾಲು ಮಂದಿ ಭಾವಿಸಿರುವುದೇ ಅವರ ಅತೃಪ್ತಿಯ ಮೂಲ. ಬದುಕಿನ ಸರಳತೆಯನ್ನು ಸಂಕೀರ್ಣಗೊಳಿಸುವುದು ಎಂದರೆ ಇದೇ ಅಲ್ಲವೇ?

ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ |
ಕೊರತೆಯೊಂದನು ನೀನು ನೆನೆನೆನೆದು ಕೆರಳಿ ||
ಧರೆಯೆಲ್ಲವನು ಶಪಿಸಿ ಮನದಿ ನರಕವ ನಿಲಿಸಿ |
ನರಳುವುದು ಬದುಕೇನೋ? - ಮಂಕುತಿಮ್ಮ ||
ಎಂದು ಡಿವಿಜಿಯವರು ಇಂತಹ ಮನಸ್ಥಿತಿಯವರನ್ನೇ ಪ್ರಶ್ನಿಸಿರುವುದು. ಸಣ್ಣ ಕೊರತೆಗಳೆಂಬ ತರಚು ಗಾಯಗಳನ್ನೇ ಕೆರೆದು ದೊಡ್ಡ ಹುಣ್ಣನ್ನಾಗಿಸುವ ಮನುಷ್ಯನ ಕೋತಿಬುದ್ಧಿಯನ್ನು ಅವರು ಎಷ್ಟೊಂದು ಮಾರ್ಮಿಕವಾಗಿ ಎತ್ತಿ ತೋರಿಸಿದ್ದಾರೆ ನೋಡಿ.  ’ಸರಿಯಾಗಲಿಲ್ಲವದು ಸರಿಯಿದಲ್ಲವೆನುತ/ ಹರಡಿಕೊಳ್ಳಬೇಡ ಮುಳ್ಳನು ಹಾಸಿಗೆಯಲಿ/ ಕೊರೆಯಾದೊಡೇನೊಂದು, ನೆರೆದೊಡೇನಿನ್ನೊಂದು/ ಒರಟು ಕೆಲಸವೋ ಬದುಕು’ ಎಂದು ಬುದ್ಧಿಮಾತನ್ನೂ ಹೇಳಿದ್ದಾರೆ. ಇನ್ನೊಬ್ಬರೊಂದಿಗೆ ತಮ್ಮನ್ನು ಹೋಲಿಸಿಕೊಂಡು, ತಮಗೆ ಅದು ಸಿಕ್ಕಿಲ್ಲ ಇದು ದಕ್ಕಿಲ್ಲ ಎಂದು ಮುಳ್ಳಹಾಸಿಗೆಯಲ್ಲಿ ಹೊರಳುವ ಜನರಿಗೆ ಡಿವಿಜಿಯವರ ನುಡಿಯೇ ದಿವ್ಯೌಷಧ.

'ಮನಸ್ಸು ರೋಗವನ್ನು ಸೃಷ್ಟಿಸಬಲ್ಲುದು, ಗುಣಪಡಿಸಬಲ್ಲದು! ತಾಳ್ಮೆ, ಪ್ರೀತಿ, ಕರುಣೆ, ದಾನಬುದ್ಧಿ, ನಿಃಸ್ವಾರ್ಥ ಸೇವಾಮನೋಭಾವ- ಇವೇ ಮೊದಲಾದ ರಚನಾತ್ಮಕ ಭಾವನೆಗಳು ದೇಹಯಂತ್ರದ ಎಲ್ಲ ಭಾಗಗಳಲ್ಲಿ ಉತ್ಸಾಹಯುತ ಆರೋಗ್ಯಕರ ಚಟುವಟಿಕೆಗಳಿಗೆ ಕಾರಣವಾಗುತ್ತವೆ’ ಎಂದು ತಮ್ಮ 'ಬದುಕಲು ಕಲಿಯಿರಿ’ ಕೃತಿಯಲ್ಲಿ ಹೇಳುವ ಸ್ವಾಮಿ ಜಗದಾತ್ಮಾನಂದರು 'ಮನಸ್ಸಿನಲ್ಲಿ ಉದಿಸುವ ಯೋಚನೆ ಎಂಬ ದ್ರವ್ಯದಿಂದ ವಿಷವನ್ನೂ ತಯಾರಿಸಬಹುದು, ಅಮೃತವನ್ನೂ ತಯಾರಿಸಬಹುದು. ತಿಳಿದೋ ತಿಳಿಯದೆಯೋ ವಿಷವನ್ನು ತಯಾರಿಸುವವರೇ ಹೆಚ್ಚು. ಮನಸ್ಸು ಕೆಲಸ ಮಾಡುವ ಸೂಕ್ಷ್ಮ ನಿಯಮವನ್ನು ತಿಳಿದುಕೊಂಡರೆ, ಶ್ರದ್ಧೆಯಿಂದ ಶ್ರಮಿಸಿದರೆ ವಿಷವನ್ನೂ ಅಮೃತವನ್ನಾಗಿಸಬಹುದು’ ಎನ್ನುತ್ತಾರೆ. ವಿಷವನ್ನೂ ಅಮೃತವಾಗಿಸುವುದೇ ಬದುಕಿನ ಕಲೆಯಲ್ಲವೇ?

ಗುರುವಾರ, ನವೆಂಬರ್ 23, 2017

ಅಟೆಂಡೆನ್ಸ್ ಪ್ಲೀಸ್!

14-11-2017ರ ಉದಯವಾಣಿ 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ

ನೋಟೀಸ್ ಬೋರ್ಡ್ ಕೆಳಗೆ ಗಿಜಿಗುಡುವ ಹುಡುಗರು, ಅವರೊಳಗೆಯೇ ಗುಸುಗುಸು ಪಿಸಪಿಸ, ಕಳೆಗುಂದಿ ವಾಪಸಾಗುವ ಮುಖಗಳು, ವೆರಾಂಡದ ತುದಿಬದಿಗಳಲ್ಲಿ ಬಿಸಿಬಿಸಿ ಚರ್ಚೆ, ಪ್ರಿನ್ಸಿಪಾಲ್ ಕೊಠಡಿಯೆದುರು ಕಣ್ಣೀರ ಧಾರೆ... ಕಾಲೇಜು ಆವರಣದಲ್ಲಿ ಇಂತಹದೆಲ್ಲ ಲಕ್ಷಣಗಳು ಕಂಡುಬರುತ್ತಿವೆಯೆಂದಾದರೆ ಅಟೆಂಡೆನ್ಸ್ ಶಾರ್ಟೇಜೆಂಬ ಜ್ವರ ಕಾಲಿಟ್ಟಿದೆಯೆಂದೇ ಅರ್ಥ. ಇದು ಎರಡು ಮೂರು ದಿನಗಳಲ್ಲಿ ವಾಸಿಯಾಗುವ ಸಾಮಾನ್ಯ ಜ್ವರವಂತೂ ಖಂಡಿತ ಅಲ್ಲ. ಕೆಲವೊಮ್ಮೆ ವಾರಗಟ್ಟಲೆ ಮುಂದುವರಿದು ಆಸ್ಪತ್ರೆ, ಅಲ್ಲಲ್ಲ, ನ್ಯಾಯಾಲಯದಲ್ಲಿ ಭರ್ಜರಿ ಟ್ರೀಟ್‌ಮೆಂಟ್ ಆದ ಬಳಿಕ ವಾಸಿಯಾಗುವುದೂ ಇದೆ.

ಪರೀಕ್ಷಾ ಜ್ವರದ ಬಗ್ಗೆ ಕೇಳಿದ್ದೇವೆ; ಇದು ಅದಕ್ಕೂ ಕೊಂಚ ಮೊದಲು ಕಾಣಿಸಿಕೊಳ್ಳುವ ಖಾಯಂ ಅತಿಥಿ. ಸೆಮಿಸ್ಟರ್ ಕೊನೆಗೊಳ್ಳುತ್ತಾ ಇದೆಯೆಂದರೆ ಈ ಅತಿಥಿ ತನ್ನ ಭೇಟಿಯನ್ನು ತಪ್ಪಿಸಿಕೊಳ್ಳುವುದೇ ಇಲ್ಲ. ಎಸ್‌ಎಸ್‌ಎಲ್‌ಸಿ-ಪಿಯುಸಿಯವರಿಗೆ ವರ್ಷಕ್ಕೊಮ್ಮೆ ಇದರ ಚಿಂತೆಯಾದರೆ, ಪದವಿ-ಇಂಜಿನಿಯರಿಂಗ್-ಸ್ನಾತಕೋತ್ತರ ಪದವಿ ಓದುವವರಿಗೆ ವರ್ಷಕ್ಕೆ ಎರಡು ಬಾರಿ ಇದರೊಂದಿಗೆ ಮುಖಾಮುಖಿಯಾಗುವುದು ಅನಿವಾರ್ಯ. ಅಂದಹಾಗೆ ಈ ಜ್ವರದ ಕಾವು ತಗಲುವುದು ಕೇವಲ ಹುಡುಗರಿಗೆ ಮಾತ್ರ ಅಲ್ಲ. ಅವರ ಶಾಲಾ-ಕಾಲೇಜುಗಳ ಪ್ರಿನ್ಸಿಪಾಲ್‌ಗಳೂ ಅನೇಕ ಬಾರಿ ಉರಿ ತಾಳಲಾಗದೆ ನೆತ್ತಿಯ ಮೇಲೆ ಐಸ್ ಹೊತ್ತು ಕೂರುವುದಿದೆ.

ಹಾಲ್ ಟಿಕೇಟಿಗೆ ಆಗ್ರಹಿಸಿ ಹಾಜರಾತಿ ಕೊರತೆಯುಳ್ಳ ವಿದ್ಯಾರ್ಥಿಗಳಿಂದ ಪ್ರಿನ್ಸಿಪಾಲರ ಮೇಲೆ ಹಲ್ಲೆ, ಕಾಲೇಜು ಮೈದಾನದಲ್ಲಿ ಪೋಷಕರಿಂದ ಪ್ರತಿಭಟನೆ, ಜನಪ್ರತಿನಿಧಿಗಳ ಮಧ್ಯಪ್ರವೇಶ ಇತ್ಯಾದಿ ಸುದ್ದಿಗಳು ವರ್ಷಕ್ಕೆ ಒಂದೆರಡು ಬಾರಿಯಾದರೂ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದಿದೆ. ಶೈಕ್ಷಣಿಕ ನಿಯಮಗಳ ಪ್ರಕಾರ ಶೇ. ೭೫ರಷ್ಟಾದರೂ ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶವಿಲ್ಲ. ಅವರು ಮುಂದಿನ ವರ್ಷ ಮತ್ತೆ ನಿಯಮಿತವಾಗಿ ತರಗತಿಗಳಿಗೆ ಹಾಜರಾಗಿ ಪರೀಕ್ಷೆ ಬರೆಯುವ ಅರ್ಹತೆ ಪಡೆದುಕೊಳ್ಳಬೇಕು. ತಮಗಿಷ್ಟ ಬಂದಾಗ ಕ್ಲಾಸ್‌ಗೆ ವಿಸಿಟ್ ಕೊಟ್ಟು ಉಳಿದ ಸಮಯಗಳಲ್ಲಿ ಬೀದಿ ಸುತ್ತುವ, ಪಾರ್ಕ್-ಹೊಟೇಲು-ಸಿನಿಮಾ ಮಂದಿರಗಳಲ್ಲಿ ಕಾಲಯಾಪನೆ ಮಾಡುವ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವುದೇ ಈ ನಿಯಮದ ಉದ್ದೇಶ.

ಈ ಹುಡುಗರು ಎಷ್ಟೇ ಬ್ಯುಸಿಯಾಗಿದ್ದರೂ ಅಟೆಂಡೆನ್ಸ್ ಶಾರ್ಟೇಜ್ ಪಟ್ಟಿ ನೋಟೀಸ್ ಬೋರ್ಡಿಗೆ ಬೀಳುವ ಕ್ಷಣಕ್ಕೆ ಮಾತ್ರ ಸಂಪೂರ್ಣ ಬಿಡುವು ಮಾಡಿಕೊಂಡು ಕಾಲೇಜಿಗೆ ಬಂದೇ ಬರುವುದು ನಿಶ್ಚಿತ. ನಿನ್ನ ಹೆಸರು ನೋಟೀಸ್ ಬೋರ್ಡಲ್ಲಿದೆ ಎಂದು ಅವರಿಗೆ ಮಾಹಿತಿ ನೀಡಿ ಸಹಾಯ ಮಾಡುವ ಸ್ನೇಹಿತರೂ ಕಾಲೇಜಲ್ಲಿರುತ್ತಾರೆ. ಅಲ್ಲಿಂದ ಚಳುವಳಿ ಆರಂಭ.

ಮೊದಲಿಗೆ ಯಥಾಪ್ರಕಾರ ಮಂದಗಾಮಿ ನೀತಿ ಅನುಸರಿಸುವ ಈ ಹುಡುಗರು ಮುಖ ಬಾಡಿಸಿಕೊಂಡು, ಅಗತ್ಯವಿದ್ದರೆ ಕಣ್ಣೀರೂ ಹಾಕಿಕೊಂಡು ಪ್ರಿನ್ಸಿಪಾಲರ ಎದುರು ಕ್ಯೂ ನಿಂತು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಅಲವತ್ತುಕೊಳ್ಳುವುದು ವಾಡಿಕೆ. ತರಗತಿಗಳಿಗೆ ಹಾಜರಾಗದಿರಲು ಅವರಿಗಿದ್ದ ಅನಿವಾರ್ಯ ಕಾರಣಗಳ ಪಟ್ಟಿ ಸೆಮಿಸ್ಟರಿಗಿಂತಲೂ ದೀರ್ಘವಾಗಿರುವುದಿದೆ. ನಿಮ್ಮ ಮಗ ಅಂತ ಅಂದುಕೊಳ್ಳಿ, ಇದೊಂದು ಬಾರಿ ಅವಕಾಶ ಮಾಡಿಕೊಡಿ, ಇನ್ನೆಂದೂ ಹೀಗಾಗದಂತೆ ನೋಡ್ಕೋತೀವಿ ಎನ್ನುತ್ತಲೇ ಪ್ರಿನ್ಸಿಪಾಲರ ಪಾದಕ್ಕೆ ಸಾಷ್ಟಾಂಗ ಪ್ರಣಾಮ ಮಾಡುವ ಛಾನ್ಸನ್ನೂ ಇವರು ತಪ್ಪಿಸಿಕೊಳ್ಳುವುದಿಲ್ಲ.

ಈ ವಿಧಾನ ನಡೆಯದೇ ಹೋದರೆ ಮುಂದಿನದ್ದು ತೀವ್ರಗಾಮಿ ನೀತಿ. ಪ್ರಿನ್ಸಿಪಾಲರೊಂದಿಗೆ ಚರ್ಚೆ-ವಾಗ್ವಾದ, ಉದ್ದೇಶಪೂರ್ವಕವಾಗಿ ನಮಗೆ ಹಾಜರಾತಿ ಕೊರತೆ ತೋರಿಸಿದ್ದೀರಿ, ನಮ್ಮ ಭವಿಷ್ಯಕ್ಕೆ ಕಲ್ಲು ಹಾಕುತ್ತಿದ್ದೀರಿ ಇತ್ಯಾದಿ ರೋಷಾವೇಷದ ಮಾತು; ಕೊನೆಗೆ ಧಿಕ್ಕಾರಾ! ಧಿಕ್ಕಾರ!! ಕಾಲೇಜಿಗೆ ಮಗನನ್ನೋ ಮಗಳನ್ನೋ ಸೇರಿಸಿದ ಮೇಲೆ ಒಮ್ಮೆಯೂ ಕ್ಯಾಂಪಸ್‌ಗೆ ಬಂದು ತಮ್ಮ ಮಗ/ಮಗಳು ಹೇಗೆ ಓದುತ್ತಿದ್ದಾರೆ ಎಂದು ಕೇಳದ ಪೋಷಕರೂ ಇಷ್ಟು ಹೊತ್ತಿಗೆ ಕಾಲೇಜಿಗೆ ಓಡೋಡಿ ಬಂದು ಪ್ರತಿಭಟನೆಗೆ ಕೂರುವುದಿದೆ.

ಈ ವಿಧಾನವೂ ನಡೆಯದೇ ಹೋದರೆ ಕೊನೆಗೆ ಕೋರ್ಟ್ ಇದ್ದೇ ಇದೆ. ಪರೀಕ್ಷೆ ಬರೆಯಲು ಕಾಲೇಜು ಅವಕಾಶ ಕೊಡುತ್ತಿಲ್ಲ ಎಂದು ಪ್ರತೀವರ್ಷ ನ್ಯಾಯಾಲಯಕ್ಕೆ ಹೋಗುವವರು ಸಾಕಷ್ಟು ಮಂದಿ. ವಿದ್ಯಾರ್ಥಿಯ ಕಡೆಯಿಂದ ಪ್ರಾಮಾಣಿಕ ಕಾರಣಗಳಿದ್ದಾಗ ಪರೀಕ್ಷೆ ಬರೆಯಲು ಅವಕಾಶ ನೀಡಿ ಎಂದು ಕೆಲವೊಮ್ಮೆ ಕೋರ್ಟ್ ಕಾಲೇಜಿಗೆ ಆದೇಶಿಸುವುದೂ ಇದೆ. ಆದರೆ ಅತ್ತ ಕ್ಲಾಸಿಗೂ ಹೋಗದೆ ಇತ್ತ ನ್ಯಾಯಾಲಯದ ಅಮೂಲ್ಯ ಸಮಯವನ್ನೂ ಹಾಳು ಮಾಡುತ್ತಿದ್ದೀರಿ ಎಂದು ಛೀಮಾರಿ, ದಂಡ ಹಾಕಿಸಿಕೊಂಡು ಬರುವವರೇ ಹೆಚ್ಚು.

ಈ ತಗಾದೆಗಳ ತಂಟೆಯೇ ಬೇಡ ಎಂದು ಅನೇಕ ಕಾಲೇಜುಗಳು ಅಟೆಂಡೆನ್ಸ್ ಶಾರ್ಟೇಜ್ ಉಸಾಬರಿಗೇ ಹೋಗುವುದಿಲ್ಲ. ಹಳ್ಳಿ ಹುಡುಗರು ಕಾಲೇಜುಗಳ ಮುಖ ನೋಡುವುದೇ ಅಪರೂಪವಾಗಿರುವಾಗ ದಾಖಲಾದ ಬೆರಳೆಣಿಕೆಯ ಮಂದಿಗೆ ಹಾಜರಾತಿ ಕೊರತೆಯೆಂದು ಪರೀಕ್ಷೆ ನಿರಾಕರಿಸಿದರೆ ಮುಂದಿನ ವರ್ಷ ಕಾಲೇಜನ್ನೇ ಮುಚ್ಚುವ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ. ಇನ್ನು ಕೆಲವು ಖಾಸಗಿ ಕಾಲೇಜುಗಳು ಅಟೆಂಡೆನ್ಸ್ ಹೆಸರಲ್ಲಿ ಲಕ್ಷಾಂತರ ರೂಪಾಯಿ ಆದಾಯ ಮಾಡಿಕೊಳ್ಳುವುದೂ ಇದೆ. ಒಂದು ಸಬ್ಜೆಕ್ಟ್‌ನಲ್ಲಿ ಹಾಜರಾತಿ ಕೊರತೆಗೆ ಇಷ್ಟು ಸಾವಿರ ದಂಡ ಎಂದು ನಿಗದಿಪಡಿಸುವ ಕಾಲೇಜುಗಳಿಗೆ ಹಾಜರಾತಿ ಕೊರತೆಯಿರುವ ವಿದ್ಯಾರ್ಥಿಗಳು ಹೆಚ್ಚಾದಷ್ಟೂ ಅನುಕೂಲವೇ! ಅಪ್ಪನ ಬಳಿ ದುಡ್ಡಿದೆ, ಶಾರ್ಟೇಜ್ ಇದ್ದರೆ ದುಡ್ಡು ತಂದು ಬಿಸಾಕಿದರಾಯಿತು ಎಂಬ ಭಂಡ ಹುಡುಗರೇ ಇಂತಹ ಕಾಲೇಜುಗಳ ಆಜೀವ ಚಂದಾದಾರರು.

ಇನ್ನೊಂದು ಮುಖ
ಹಾಜರಾತಿ ಕೊರತೆ ಎದುರಿಸುವ ಎಲ್ಲ ವಿದ್ಯಾರ್ಥಿಗಳೂ ಕ್ಲಾಸ್ ಬಂಕ್ ಮಾಡಿ ಉಡಾಫೆ ಮಾತನಾಡುವ ಉಂಡಾಡಿಗುಂಡರಲ್ಲ. ತಾವೇ ದುಡಿದು ಕುಟುಂಬವನ್ನು ಸಲಹಬೇಕಾದ ಕಡುಬಡತನದ ಹಿನ್ನೆಲೆಯ ಹುಡುಗರೂ ಇವರ ನಡುವೆ ಇದ್ದಾರೆ. ಒಂದು ಕಡೆ ಓದುವ ಆಸೆ, ಇನ್ನೊಂದು ಕಡೆ ದುಡಿಯುವ ಅನಿವಾರ್ಯತೆ. ಈ ಮಧ್ಯೆ ಸಿಕ್ಕಿಹಾಕಿಕೊಂಡು ಒದ್ದಾಡುವ ಮಕ್ಕಳೂ ಇಲ್ಲದಿಲ್ಲ. ಇನ್ನು ಕೆಲವರು ಅನಾರೋಗ್ಯ ಇತ್ಯಾದಿ ಗಂಭೀರ ಸಮಸ್ಯೆಗಳಿಂದ ಹಾಜರಾತಿ ಕೊರತೆ ಎದುರಿಸುವುದೂ ಇದೆ. ಇಂತಹವರನ್ನೆಲ್ಲ ಕಾಲೇಜುಗಳು ಮಾನವೀಯತೆಯ ನೆಲೆಯಿಂದ ನೋಡಬೇಕು ಎಂಬುದು ಒಪ್ಪಬೇಕಾದ ಮಾತು. ಆದರೆ ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವವರೇ ಹೆಚ್ಚು. ನಿಜವಾಗಿಯೂ ಕಷ್ಟದ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳು ಎಲ್ಲ ಸಮಸ್ಯೆಗಳನ್ನೂ ಸಂಭಾಳಿಸಿಕೊಂಡು ಶಿಸ್ತಾಗಿ ತರಗತಿಗಳಿಗೆ ಬಂದು ಉನ್ನತ ಶ್ರೇಣಿಯಲ್ಲಿ ಪಾಸಾಗುವುದನ್ನು ನಾನೇ ಕಣ್ಣಾರೆ ನೋಡುತ್ತಿದ್ದೇನೆ.

ನ್ಯಾಯಾಲಯ ಏನು ಹೇಳುತ್ತದೆ?
ಕರ್ನಾಟಕ ಶಿಕ್ಷಣ ಕಾಯ್ದೆ 2006ರ ಪ್ರಕಾರ ಪದವಿಪೂರ್ವ ಹಂತದಲ್ಲಿ ಶೇ. ೭೫ರಷ್ಟು ಹಾಜರಾತಿ ಕಡ್ಡಾಯ. ಬಹುತೇಕ ಎಲ್ಲ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಶೇ. 75ರಷ್ಟು ಹಾಜರಾತಿ ಇರಬೇಕೆಂದು ನಿಯಮ ರೂಪಿಸಿವೆ. ವೈದ್ಯಕೀಯ ಕಾರಣಗಳೇ ಮೊದಲಾದ ತೀರಾ ಅನಿವಾರ್ಯ ಸಂದರ್ಭಗಳಿದ್ದಾಗ ಅಭ್ಯರ್ಥಿಗೆ ಮಾನವೀಯ ದೃಷ್ಟಿಯಿಂದ ಶೇ. ೫ರಷ್ಟು ವಿನಾಯಿತಿ ನೀಡಲು ಕುಲಪತಿಗಳಿಗೆ ಮಾತ್ರ ಸ್ವವಿವೇಚನೆಯ ಅವಕಾಶವಿದೆ. ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡುವುದಕ್ಕೆ ಹಾಜರಾತಿಯಲ್ಲಿ ಕಟ್ಟುನಿಟ್ಟು ಪಾಲಿಸುವುದು ಮುಖ್ಯ ಎಂಬುದನ್ನು ಅನೇಕ ಉಚ್ಚ ನ್ಯಾಯಾಲಯಗಳು, ಭಾರತದ ಸರ್ವೋಚ್ಛ ನ್ಯಾಯಾಲಯವೂ ಮತ್ತೆಮತ್ತೆ ಹೇಳಿವೆ.

'ವಿದ್ಯಾರ್ಥಿಗಳು ತಾರುಣ್ಯ ಸಹಜ ವರ್ತನೆಗಳಿಂದಲೋ, ಅಸೌಖ್ಯದಿಂದಲೋ ತರಗತಿಗಳಿಗೆ ಗೈರುಹಾಜರಾಗುವ ಸಂದರ್ಭ ಇದೆ. ಆದರೆ ಅದಕ್ಕಾಗಿಯೇ ಅವರಿಗೆ ಶೇ. ೨೫ರಷ್ಟು ತರಗತಿಗಳಿಗೆ ಗೈರುಹಾಜರಾಗುವ ಸ್ವಾತಂತ್ರ್ಯ ಇದೆ. ಇನ್ನಷ್ಟು ವಿನಾಯಿತಿ ನೀಡಬೇಕೆಂಬುದು ನ್ಯಾಯ ಸಮ್ಮತ ಅಲ್ಲ. ಈ ಪ್ರವೃತ್ತಿಯಿಂದ ಶ್ರದ್ಧಾವಂತ ವಿದ್ಯಾರ್ಥಿಗಳ ನೈತಿಕತೆ ಮತ್ತು ನಂಬಿಕೆಯನ್ನು ದುರ್ಬಲಗೊಳಿಸಿದಂತಾಗುತ್ತದೆ’ ಎಂದು ತನ್ನ ತೀರ್ಪೊಂದರಲ್ಲಿ ದೆಹಲಿ ಹೈಕೋರ್ಟ್ ಹೇಳಿದೆ.

ಬುಧವಾರ, ನವೆಂಬರ್ 15, 2017

ಎಸ್.ಡಿ.ಎಂ. ಶೈಕ್ಷಣಿಕ ಸಂಸ್ಕೃತಿ ಎಂಬ ಮಹಾಮಾದರಿ

(ಪದ್ಮಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ನೇತೃತ್ವ ವಹಿಸಿ 50 ವರ್ಷಗಳಾದ ಹಿನ್ನೆಲೆಯಲ್ಲಿ  'ವಿಜಯವಾಣಿ' ನವೆಂಬರ್ 12, 2017ರಂದು ಹೊರತಂದ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)

Education should be in future tense - ಎನ್ನುತ್ತಾನೆ ಆಲ್ವಿನ್ ಟೋಫ್ಲರ್. ಶಿಕ್ಷಣದ ದೃಷ್ಟಿ ಎಂದಿಗೂ ಭವಿಷ್ಯದ ಕಡೆಗಿರಬೇಕು; ವಿದ್ಯಾರ್ಥಿಯ ಮತ್ತು ಸಮಾಜದ ಭವಿತವ್ಯದ ಬಗ್ಗೆ ಚಿಂತಿಸದ ಶಿಕ್ಷಣ ಅರ್ಥಹೀನ. ಆದರೆ ನಮ್ಮ ಶಿಕ್ಷಣ ವ್ಯವಸ್ಥೆ ಈ ಅವಶ್ಯಕತೆಗೆ ಪೂರಕವಾಗಿದೆಯೇ ಎಂಬುದೇ ಎಲ್ಲರನ್ನೂ ಕಾಡುವ ಪ್ರಶ್ನೆ. ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು ಕಾಲೇಜುಗಳನ್ನು ತುಂಬುವ ಯಂತ್ರಗಳಾದರೆ, ಕಾಲೇಜುಗಳು ನಿರಾಶಾವಾದಿಗಳನ್ನೂ ನಿರುದ್ಯೋಗಿಗಳನ್ನೂ ತಯಾರಿಸುವ ಕಾರ್ಖಾನೆಗಳಾಗಿ ಮಾರ್ಪಟ್ಟಿವೆ. ಒಂದೆಡೆ ಆಲಸ್ಯವೇ ಮೈವೆತ್ತಂತೆ ಮಲಗಿರುವ ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಇನ್ನೊಂದೆಡೆ ದುಡ್ಡಿನ ದುರಾಸೆಯಲ್ಲಿ ಮುಳುಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು. ಈ ಎರಡು ಅತಿರೇಕಗಳ ನಡುವೆ ಸಿಲುಕಿ ಬಡವಾಗುತ್ತಿರುವ ನೈಜ ಶಿಕ್ಷಣದ ಶಿಶುವನ್ನು ಹುಡುಕಿ ಬದುಕಿಸುವುದೆಂತು? ಇದು ಹೀಗೆಯೇ ಮುಂದುವರಿದರೆ ಈ ವ್ಯವಸ್ಥೆ ಅಂತಿಮವಾಗಿ ಎಲ್ಲಿಗೆ ತಲುಪೀತು?  ಶಿಕ್ಷಣರಂಗದ ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ? ಎಂಬ ಕಳವಳದಲ್ಲಿ ಮನಸ್ಸು ಬರಡೆನಿಸಿದಾಗ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುವ ಶಿಕ್ಷಣ ಸಂಸ್ಥೆಗಳು ಓಯಸಿಸ್ಸುಗಳಂತೆ ಕಾಣುತ್ತವೆ.

ಇವುಗಳನ್ನು ನೋಡಿದಾಗ ಶ್ರೀಕ್ಷೇತ್ರದ ಚತುರ್ದಾನ ಪರಂಪರೆಯಲ್ಲಿ ಅನ್ನದಾನ, ಔಷಧದಾನ, ವಸ್ತ್ರದಾನಗಳಿಗಿಂತಲೂ ವಿದ್ಯಾದಾನಕ್ಕೇ ಒಂದು ಹಿಡಿ ಹೆಚ್ಚು ಮಹತ್ವ ದೊರೆತಿದೆಯೇನೋ ಎಂದೆನಿಸಿದರೆ ಅತಿಶಯವೇನೂ ಇಲ್ಲ. ವಿದ್ಯೆಯೊಂದು ಲಭಿಸಿದರೆ ಉಳಿದ ಮೂರನ್ನೂ ವ್ಯಕ್ತಿ ತಾನಾಗಿಯೇ ಪಡೆದುಕೊಳ್ಳುತ್ತಾನೆ ಎಂಬುದೇ ಇದರ ಹಿಂದಿನ ಆಶಯ. ಶ್ರೀ ಕ್ಷೇತ್ರದಿಂದ ನಡೆಯುವ ಯಾವುದೇ ಶಿಕ್ಷಣ ಸಂಸ್ಥೆ ಹೊಕ್ಕು ನೋಡಿ, ಅಲ್ಲಿ ಆಡಂಬರವಿಲ್ಲ, ಅತಿರೇಕವಿಲ್ಲ. ಪ್ರತೀ ಹೆಜ್ಜೆಗೂ ಕಾಣಸಿಗುವುದು ಶಿಸ್ತು, ಸಂಯಮ, ಗಾಂಭೀರ್ಯತೆ ಮತ್ತು ವಿಧೇಯತೆ. ಎಸ್.ಡಿ.ಎಂ. ಎಂದು ಆರಂಭವಾಗುವ ಯಾವುದೇ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಐದು ನಿಮಿಷ ಇದ್ದು ಬಿಡಿ, ಶಿಕ್ಷಣ ವ್ಯವಸ್ಥೆಯ ಬಗ್ಗೆ ಇರುವ ನೂರಾರು ಆತಂಕಗಳು ಹೇಳಹೆಸರಿಲ್ಲದಂತೆ ಮಾಯವಾಗಿಬಿಡುತ್ತವೆ. ಇಂತಹ ಶಾಲಾ ಕಾಲೇಜುಗಳಿರುವಾಗ ಶಿಕ್ಷಣಕ್ಷೇತ್ರದ ಭವಿಷ್ಯದ ಬಗ್ಗೆ ಭಯಪಡುವುದರಲ್ಲಿ ಅರ್ಥವೇ ಇಲ್ಲ ಎಂದು ಯಾರಿಗಾದರೂ ಅನ್ನಿಸಿಬಿಡುತ್ತದೆ.

ಸಮಗ್ರ ಶಿಕ್ಷಣ
ವ್ಯಕ್ತಿಯನ್ನು ಸ್ವಾವಲಂಬಿಯಾಗಿ ಮಾಡುವ ಹಾಗೂ ಶಾರೀರಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಜೀವನ ನಡೆಸುವ ಕಲೆಯನ್ನು ಸ್ಫುರಿಸುವಂತಹ ಶಿಕ್ಷಣವೇ ಸಮಗ್ರ ಶಿಕ್ಷಣ - ಇದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ನೇತಾರ ಪದ್ಮಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸ್ಪಷ್ಟ ಪರಿಕಲ್ಪನೆ. ಇದೇ ಈ ಶಿಕ್ಷಣ ಸಂಸ್ಥೆಗಳ ಶ್ರೇಷ್ಠತೆಯ ಹಿಂದಿರುವ ಅಪೂರ್ವ ದರ್ಶನ ಕೂಡಾ. ಅದಕ್ಕೇ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು ಹತ್ತರೊಂದಿಗೆ ಹನ್ನೊಂದಾಗಿ ತೋರುವುದಿಲ್ಲ. ಸಾಮಾನ್ಯವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾಣುವ ದುಡ್ಡಿನ ದಂಧೆ, ವಿದ್ಯಾರ್ಥಿಗಳನ್ನು ಅಂಕಗಳಿಕೆಯ ಯಂತ್ರಗಳನ್ನಾಗಿಸುವ ಪೈಪೋಟಿ ಇಲ್ಲಿ ಕಾಣುವುದಿಲ್ಲ. ವಿದ್ಯಾರ್ಥಿಯ ನಾಳೆಯ ಬದುಕಿಗೆ ಪ್ರಯೋಜನವಾಗುವಂತಹ ಏನನ್ನಾದರೂ ಕೊಡಬೇಕು ಎಂಬ ಕಾಳಜಿಯೇ ಈ ಶಿಕ್ಷಣ ಸಂಸ್ಥೆಗಳ ಹೆಜ್ಜೆಹೆಜ್ಜೆಗೂ ಎದ್ದುಕಾಣುತ್ತದೆ.

ಶಿಕ್ಷಣವೆಂದರೆ ಓದುವುದು, ಬರೆಯುವುದು ಮತ್ತು ಗಣಿತ ಇವಿಷ್ಟೇ ಅಲ್ಲ ಅಥವಾ ಕೆಲವರು ಹೇಳುವಂತೆ ಅಧ್ಯಯನ, ಅಧ್ಯಾಪನ, ಜ್ಞಾನಪ್ರಸರಣ ಇಷ್ಟಕ್ಕೇ ಸೀಮಿತವಲ್ಲ. ಅದು ವ್ಯಕ್ತಿ ಮತ್ತು ಸಮಾಜದ ಬದುಕಿಗೆ ಬೇಕಾದ ಶಿಕ್ಷಣ ಎಂಬ ವೀರೇಂದ್ರ ಹೆಗ್ಗಡೆಯವರ ಆಶಯ ಒಂದೊಂದು ಶಿಕ್ಷಣ ಸಂಸ್ಥೆಯಲ್ಲೂ ಅತ್ಯಂತ ಸಮರ್ಥವಾಗಿ ಸಾಕಾರಗೊಂಡಿದೆ. ಯಾವ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯಲ್ಲೂ ಕೇವಲ ಓದು, ಬರೆ, ಪರೀಕ್ಷೆ ಎದುರಿಸು, ಶೇ. ೯೫ ಅಂಕ ಗಳಿಸು ಎಂಬ ಯಾಂತ್ರಿಕ ಒತ್ತಡ ಕಾಣಸಿಗುವುದಿಲ್ಲ. ತರಗತಿ ಕೊಠಡಿಯ ಪಾಠ ಪ್ರವಚನಗಳಷ್ಟೇ ಪಠ್ಯೇತರ ಚಟುವಟಿಕೆಗಳಿಗೂ ಅಲ್ಲಿ ಸಮಾನ ಪ್ರಾಶಸ್ತ್ಯ.

ಯಾವ ಹೊತ್ತಿನಲ್ಲೇ ಹೋದರೂ ಶಾಲಾ-ಕಾಲೇಜಿನ ಯಾವುದಾದರೊಂದು ಮೂಲೆಯಲ್ಲಿ ಯಕ್ಷಗಾನವೋ, ಸಂಗೀತವೋ, ನಾಟಕವೋ, ಭಾಷಣವೋ, ನೃತ್ಯವೋ ಕೇಳಿಸೀತು, ಕಾಣಿಸೀತು. ಕೇವಲ ಪಾಠ-ಪರೀಕ್ಷೆಗಳಿಗಷ್ಟೇ ಸೀಮಿತವಾದ ವಿದ್ಯಾರ್ಥಿಯೊಬ್ಬನನ್ನು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಿಂದ ಹುಡುಕಿ ತೆಗೆಯುವುದು ಬಹುಶಃ ಅಸಾಧ್ಯವಾದ ಕೆಲಸ. ಹಾಗೆಂದು ಅಲ್ಲಿ ಶಿಕ್ಷಣ ಪೂರೈಸಿ ಹೊರಗೆ ಬಂದ ವ್ಯಕ್ತಿ ಮುಂದೇನು ಮಾಡಬೇಕೆಂದು ಗೊಂದಲಕ್ಕೀಡಾಗುವ ಪ್ರಸಂಗಗಳೂ ಇಲ್ಲ. ಶಿಕ್ಷಣ ಮುಗಿಯುವ ವೇಳೆಗೆ ಆತನ ಗುರಿ-ದಾರಿಗಳೆರಡೂ ಸ್ಪಷ್ಟವಾಗಿಯೇ ಇರುತ್ತವೆ.

ಎಲ್ಲವೂ ಇದೆ
ವ್ಯಕ್ತಿಯ ಮತ್ತು ಸಮಾಜದ ಅವಶ್ಯಕತೆಗೆ ಅನುಗುಣವಾದ ಶಿಕ್ಷಣ ನೀಡುವ ಡಾ. ಹೆಗ್ಗಡೆಯವರ ಆಶಯ ಅವರು ನಡೆಸಿಕೊಂಡು ಹೋಗುತ್ತಿರುವ ಅಷ್ಟೂ ಶಿಕ್ಷಣ ಸಂಸ್ಥೆಗಳಲ್ಲಿ ಎದ್ದುಕಾಣುತ್ತದೆ. ಒಂದೊಂದು ಶಿಕ್ಷಣ ಸಂಸ್ಥೆಯನ್ನು ಆರಂಭಿಸುವಾಗಲೂ ಅದರ  ಅವಶ್ಯಕತೆ, ಅನಿವಾರ್ಯತೆ ಮತ್ತು ಪ್ರಸ್ತುತತೆಗಳ ಬಗ್ಗೆ ಅವರ ಕಲ್ಪನೆ ನಿಚ್ಚಳ. ಅದಕ್ಕೇ ಇಂದು ಎಸ್.ಡಿ.ಎಂ. ಹೆಸರಿನಲ್ಲಿ ವೈವಿಧ್ಯಮಯ ಆದರೆ ಅಷ್ಟೇ ವಿಶಿಷ್ಟ ಶಿಕ್ಷಣ ಸಂಸ್ಥೆಗಳು ನಮಗಿದಿರಾಗುತ್ತವೆ.

ಶಿಶುವಿಹಾರದಿಂದ ತೊಡಗಿ ಪಿಎಚ್.ಡಿ. ಅಧ್ಯಯನದವರೆಗೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ದೊರೆಯದ ಕೋರ್ಸ್‌ಗಳಿಲ್ಲ. ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು, ಆಡಳಿತ ನಿರ್ವಹಣೆ, ಆಯುರ್ವೇದ, ಪ್ರಕೃತಿಚಿಕಿತ್ಸೆ, ಮಾನವಿಕ ಶಾಸ್ತ್ರಗಳು, ವಿಜ್ಞಾನ- ಆಧುನಿಕ ಉದ್ಯೋಗ ಜಗತ್ತಿಗೆ ಏನು ಬೇಕೋ ಅವೆಲ್ಲವೂ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿವೆ. ಪ್ರತೀ ಸಂಸ್ಥೆಯಲ್ಲೂ ನೈತಿಕ ಶಿಕ್ಷಣ, ಸಾಂಸ್ಕೃತಿಕ ಅರಿವಿನ ರಸಪೋಷಣೆ ಒಂದು ಅನಿವಾರ್ಯ ಅಂಗವಾಗಿರುವಂತೆ ಇವುಗಳನ್ನೇ ಪ್ರಧಾನ ಉದ್ದೇಶವಾಗಿಸಿಕೊಂಡು ನಡೆಯುತ್ತಿರುವ ಪ್ರಯತ್ನಗಳೂ ಸಾಕಷ್ಟಿವೆ.

ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಮತ್ತು ಟ್ರಸ್ಟ್ ಆಶ್ರಯದಲ್ಲಿ ಇಂದು ಏನಿಲ್ಲವೆಂದರೂ ೪೦-೫೦ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಪುದುವೆಟ್ಟಿನಂತಹ ಕುಗ್ರಾಮದ ಪ್ರಾಥಮಿಕ ಶಾಲೆಯಿಂದ ತೊಡಗಿ ಧಾರವಾಡದ ಭವ್ಯ ಇಂಜಿನಿಯರಿಂಗ್-ಮೆಡಿಕಲ್ ಕಾಲೇಜುಗಳವರೆಗೆ ವೈವಿಧ್ಯಮಯ ಶಿಕ್ಷಣ ಸಂಸ್ಥೆಗಳನ್ನು ಸಮಾನ ಕಾಳಜಿ ಮತ್ತು ಆಸಕ್ತಿಗಳಿಂದ ಶ್ರೀ ಕ್ಷೇತ್ರ ನಡೆಸಿಕೊಂಡು ಹೋಗುತ್ತಿದೆ.

ನಾಡಿನಾದ್ಯಂತ ಜನಮನ್ನಣೆ ಪಡೆದಿರುವ ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜು, ಧಾರವಾಡದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ದಂತವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಉಡುಪಿ ಮತ್ತು ಹಾಸನಗಳಲ್ಲಿರುವ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮಂಗಳೂರಿನ ಕಾನೂನು ಮಹಾವಿದ್ಯಾಲಯ, ವ್ಯವಹಾರಾಡಳಿತ ಕಾಲೇಜು, ಏಷ್ಯಾದಲ್ಲೇ ಪ್ರಥಮವೆನಿಸಿರುವ ಉಜಿರೆಯ ನ್ಯಾಚುರೋಪತಿ ಮತ್ತು ಯೋಗವಿಜ್ಞಾನ ಕಾಲೇಜು, ಮೈಸೂರಿನ ಮಹಿಳಾ ಕಾಲೇಜು... ಕರ್ನಾಟಕದ ಉದ್ದಗಲದಲ್ಲಿ ಹರಡಿಕೊಂಡಿರುವ ಬಗೆಬಗೆಯ ಶಿಕ್ಷಣ ಸಂಸ್ಥೆಗಳು ಡಾ. ಹೆಗ್ಗಡೆಯವರ ದೂರದರ್ಶಿತ್ವ ಮತ್ತು ನಾಯಕತ್ವಕ್ಕೆ ಹಿಡಿದಿರುವ ಕೈಗನ್ನಡಿಗಳೇ ಸರಿ. ವಿದ್ಯಾಭ್ಯಾಸದ ಗುಣಮಟ್ಟದಲ್ಲಿ ಪ್ರತಿಯೊಂದೂ ’ಎ’ ದರ್ಜೆಯವಾದರೆ, ಸಂದರ್ಶಕರ ದೃಷ್ಟಿಗೆ ಒಂದೊಂದು ಕ್ಯಾಂಪಸ್ ಕೂಡ ಪ್ರವಾಸಿ ತಾಣಗಳೇ.

ಗ್ರಾಮ ಗಮನ 
ಆಧುನಿಕ ಅವಶ್ಯಕತೆಗಳಿಗನುಗುಣವಾಗಿ ವೃತ್ತಿಪರ ಕಾಲೇಜುಗಳನ್ನು ತೆರೆದರೂ ಗ್ರಾಮೀಣ ಪ್ರದೇಶಗಳ ಶಿಕ್ಷಣ ಸುಧಾರಣೆಯೇ ಶ್ರೀ ಕ್ಷೇತ್ರದ ಪ್ರಥಮ ಆದ್ಯತೆ. ಶಿಕ್ಷಣ ಕ್ಷೇತ್ರದಲ್ಲಿ ಧರ್ಮಸ್ಥಳದ ಗಾಥೆ ಆರಂಭವಾದದ್ದು 1903ರಲ್ಲಿ ಆಗಿನ ಧರ್ಮಾಧಿಕಾರಿ ಕೀರ್ತಿಶೇಷ ಚಂದಯ್ಯ ಹೆಗ್ಗಡೆಯವರು ಪ್ರಾಥಮಿಕ ಶಾಲೆಯೊಂದನ್ನು ತೆರೆಯುವುದರೊಂದಿಗೆ. ನಂತರ ಬಂದ ಧರ್ಮಾಧಿಕಾರಿಗಳಾದ ಡಿ. ಮಂಜಯ್ಯ ಹೆಗ್ಗಡೆ ಹಾಗೂ ಡಿ. ರತ್ನವರ್ಮ ಹೆಗ್ಗಡೆಯವರು ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಜೊತೆಗೆ ಪಾರಂಪರಿಕ ಮೌಲ್ಯಗಳನ್ನು ಹಾಗೂ ಆಧುನಿಕತೆಯನ್ನು ಬೆಸೆಯುವ ಅವಶ್ಯಕತೆಯನ್ನು ಮನಗಂಡರೆ, ಕಳೆದ ಐವತ್ತು ವರ್ಷಗಳಿಂದ ಧರ್ಮಾಧಿಕಾರಿಯಾಗಿರುವ ವೀರೇಂದ್ರ ಹೆಗ್ಗಡೆಯವರು ಶಿಕ್ಷಣ ಸಂಸ್ಥೆಗಳ ಯಶಸ್ಸನ್ನು ಉತ್ತುಂಗಕ್ಕೆ ತಲುಪಿಸಿದ್ದಾರೆ.

ಡಾ. ಹೆಗ್ಗಡೆಯವರು ಗ್ರಾಮೀಣ ಪ್ರದೇಶದ ಶಾಲೆಗಳ ಬಗ್ಗೆ ಗಮನ ನೀಡದೇ ಇರುತ್ತಿದ್ದರೆ, ಉಜಿರೆಯಲ್ಲಿ ರತ್ನಮಾನಸ-ಸಿದ್ಧವನದಂತಹ ಅನರ್ಘ್ಯ ರತ್ನಗಳು ಇಲ್ಲದೇ ಹೋಗಿರುತ್ತಿದ್ದರೆ ದಕ್ಷಿಣ ಕನ್ನಡದ ಕುಗ್ರಾಮಗಳಲ್ಲಿ ಬೆಳೆದ ನನ್ನಂತಹ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದ ಬೆಳಕನ್ನೇ ಕಾಣುತ್ತಿರಲಿಲ್ಲ ಎಂಬುದು ನೂರು ಪ್ರತಿಶತ ಸತ್ಯ. ಧರ್ಮಸ್ಥಳ, ಉಜಿರೆ, ಬೆಳಾಲು, ಪೆರಿಂಜೆ, ಪುದುವೆಟ್ಟು, ಬೈಂದೂರು-  ಇಂತಹ ಗ್ರಾಮೀಣ ಪ್ರದೇಶಗಳಲ್ಲೆಲ್ಲ ಎಸ್.ಡಿ.ಎಂ. ಶಾಲೆಗಳು ಇರುವುದರಿಂದಲೇ ಉಳಿದ ಮೂಲಕಸೌಕರ್ಯಗಳ ಕೊರತೆಯಿದ್ದರೂ ಇವೆಲ್ಲ ಶೈಕ್ಷಣಿಕವಾಗಿ ಶ್ರೀಮಂತವಾಗಿ ಬೆಳೆದಿವೆ. ಹಳ್ಳಿಗಾಡಿನ ಮೂಲೆಯಲ್ಲಿರುವ ಎಸ್.ಡಿ.ಎಂ. ಶಾಲೆಗಳೂ ಪೂರ್ಣಪ್ರಮಾಣದ ಸಿಬ್ಬಂದಿ, ತರಬೇತಾದ ಶಿಕ್ಷಕರು, ಸುಸಜ್ಜಿತ ಗ್ರಂಥಾಲಯ, ವ್ಯವಸ್ಥಿತ ಪ್ರಯೋಗಾಲಯ, ವಿಶಾಲ ಆಟದ ಮೈದಾನ, ಸುಂದರ ಉದ್ಯಾನವನಗಳಿಂದ ಕಂಗೊಳಿಸುತ್ತವೆ.

ನಗರ ಪ್ರದೇಶದಲ್ಲಿರುವ ಸುಸಜ್ಜಿತ ಶಾಲೆಗಳಿಂದ ತಮ್ಮ ಶಾಲೆಗಳೂ ಏನೇನೂ ಕಡಿಮೆಯಿಲ್ಲ ಎಂಬ ವಿಶ್ವಾಸ ಹಳ್ಳಿಗಳ ಬಡಮಕ್ಕಳಲ್ಲಿ ಮೂಡುವಲ್ಲಿ ಧರ್ಮಸ್ಥಳದ ಪಾತ್ರ ತುಂಬ ದೊಡ್ಡದು. ಕೇವಲ ತಾವು ಸ್ಥಾಪಿಸಿದ ಶಾಲೆಗಳಷ್ಟೇ ಡಾ. ಹೆಗ್ಗಡೆಯವರ ಕಾಳಜಿಯಲ್ಲ ಎಂಬುದು ಇಲ್ಲಿ ಗಮನಾರ್ಹ ಅಂಶ. ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಕುಗ್ರಾಮಗಳ ಯಾವುದೇ ಶಾಲೆಯಿರಲಿ, ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನೊದಗಿಸುವಲ್ಲಿ ಅವರು ಯಾವಾಗಲೂ ಒಂದು ಹೆಜ್ಜೆ ಮುಂದೆ.

ಡಾ. ಶಿವರಾಮ ಕಾರಂತರು 'ಪ್ರಾಥಮಿಕ ಶಿಕ್ಷಣಕ್ಕೆ ಪ್ರಥಮೋಪಚಾರವಾಗಬೇಕು’ ಎನ್ನುತ್ತಿದ್ದ ಕಾಲದಲ್ಲಿಯೇ ಧೂಳು ತಿನ್ನುತ್ತಿದ್ದ ಸರ್ಕಾರಿ ಕನ್ನಡ ಶಾಲೆಗಳಿಗೆ ಅಗತ್ಯವಿರುವ ಪೀಠೋಪಕರಣಗಳನ್ನು, ಅಧ್ಯಾಪಕರುಗಳನ್ನು ಶ್ರೀ ಕ್ಷೇತ್ರದ ಖರ್ಚಿನಲ್ಲಿಯೇ ಕಳುಹಿಸಿಕೊಟ್ಟ ಔದಾರ್ಯ ಹೆಗ್ಗಡೆಯವರದ್ದು. ಜ್ಞಾನದೀಪ, ಜ್ಞಾನವಿಕಾಸ ಮುಂತಾದ ಯೋಜನೆಗಳನ್ನು ಆರಂಭಿಸಿ ಜಿಲ್ಲೆಯ ಯಾವ ಮೂಲೆಯಲ್ಲಿ ಅಧ್ಯಾಪಕರ ಕೊರತೆಯಿದ್ದರೂ ಅಲ್ಲಿಗೆ ಅಧ್ಯಾಪಕರನ್ನು ನೇಮಿಸಿ ಸಂಬಳ ನೀಡಿ ಹಳ್ಳಿಯ ಶಾಲೆಗಳು ಬಡವಾಗದಂತೆ ನೋಡಿಕೊಂಡ ಅವರ ದೊಡ್ಡತನಕ್ಕೆ ಸಾಟಿ ಇಲ್ಲ. ಗ್ರಾಮೀಣಾಭಿವೃದ್ಧಿಯೇ ಮೂಲಮಂತ್ರವಾಗಿರುವ ಧರ್ಮಸ್ಥಳದ ಯೋಜನೆಗಳ ಹಿಂದೆ ಡಾ. ಹೆಗ್ಗಡೆಯವರ ಶೈಕ್ಷಣಿಕ ಸುಧಾರಣೆಗಳ ಪಾತ್ರ ಬಲುದೊಡ್ಡದು.

ಜೀವನ ಶಿಕ್ಷಣ
ಧರ್ಮಸ್ಥಳದ ಶೈಕ್ಷಣಿಕ ಸಾಧನೆಗಳಿಗೆಲ್ಲ ಕಿರೀಟಪ್ರಾಯವಾಗಿರುವುದು ಅದು ಮುನ್ನಡೆಸಿಕೊಂಡು ಬಂದಿರುವ ಜೀವನ ಶಿಕ್ಷಣದ ಪರಿಕಲ್ಪನೆ. ಉಜಿರೆಯಲ್ಲಿರುವ ಶ್ರೀ ಸಿದ್ಧವನ ಗುರುಕುಲ ಹಾಗೂ ರತ್ನಮಾನಸ ವಸತಿ ನಿಲಯಗಳೇ ಈ ಕಿರೀಟದ ಎರಡು ವಿಶಿಷ್ಟ ಮಣಿಗಳು. ರವೀಂದ್ರನಾಥ ಠಾಕೂರರ ’ಶಾಂತಿನಿಕೇತನ’ದ ಪರಿಕಲ್ಪನೆಯಿಂದ ಪ್ರೇರಣೆಗೊಂಡು 1940ರಲ್ಲಿ ಅಂದಿನ ಧರ್ಮಾಧಿಕಾರಿ ಡಿ. ಮಂಜಯ್ಯ ಹೆಗ್ಗಡೆಯವರು ಶ್ರೀ ಸಿದ್ಧವನ ಗುರುಕುಲವನ್ನು ಸ್ಥಾಪಿಸಿದರೆ, ಮಹಾತ್ಮ ಗಾಂಧೀಜಿಯವರ ಬುನಾದಿ ಶಿಕ್ಷಣದ ಚಿಂತನೆಯಿಂದ ಸ್ಫೂರ್ತಿ ಪಡೆದ ಡಾ. ವೀರೇಂದ್ರ ಹೆಗ್ಗಡೆಯವರು 1973ರಲ್ಲಿ ರತ್ನಮಾನಸವನ್ನು ಸ್ಥಾಪಿಸಿದರು.

ಇವು ಕೇವಲ ವಸತಿ ನಿಲಯಗಳಲ್ಲ, ವಿದ್ಯಾರ್ಥಿಗಳ ಸರ್ವತೋಮುಖ ಅಭ್ಯುದಯದ ಹೆದ್ದಾರಿಗಳು. ವಿವಿಧ ಜಾತಿ, ಮತ, ಸಮುದಾಯ, ಸಾಮಾಜಿಕ ಹಿನ್ನೆಲೆಗಳಿಗೆ ಸೇರಿದ ಮಕ್ಕಳು ಇಲ್ಲಿ ಔಪಚಾರಿಕ ಶಿಕ್ಷಣದ ಜೊತೆಗೆ ಕೃಷಿ-ಹೈನುಗಾರಿಕೆ-ವ್ಯಕ್ತಿತ್ವ ವಿಕಸನದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾ ಸಹಬಾಳ್ವೆ ನಡೆಸುವ ಪರಿ ಶಿಕ್ಷಣ ಜಗತ್ತಿಗೇ ಮಾದರಿ. ನಿಜವಾದ ಶಿಕ್ಷಣ ಓರ್ವನನ್ನು ಅವನ ಕಾಲಮೇಲೆ ನಿಲ್ಲಲು ಸಮರ್ಥನನ್ನಾಗಿಸಬೇಕು ಎನ್ನುವ ವೀರೇಂದ್ರ ಹೆಗ್ಗಡೆಯವರು ತಮ್ಮ ಕಾಣ್ಕೆಯನ್ನು ಈ ಸಂಸ್ಥೆಗಳ ಮೂಲಕ ಅನುಷ್ಠಾನಕ್ಕೆ ತಂದಿದ್ದಾರೆ.

ಶುಚಿ ಮನ, ರುಚಿ ಭೋಜನ, ಆದರ್ಶ ಶಿಕ್ಷಣ, ಸಾಹಿತ್ಯ ಚಿಂತನ, ಸಾಂಸ್ಕೃತಿಕ ಲೋಕದ ಅನಾವರಣ, ಸಂಸ್ಕೃತ ಪಠಣ, ಸರಳ ಜೀವನ, ಹಿರಿಯರು ತೋರಿದ ದಾರಿಯ ಮನನ, ಸಮಾನತೆಯ ಚಿತ್ರಣ, ನೋವು-ನಲಿವು ಭಾವನೆಗಳ ಸಮ್ಮಿಶ್ರಣ, ಪರಸ್ಪರ ಸಹಕಾರ ಸಮ್ಮಿಲನ, ಸಹಿಷ್ಣುತೆಯ ಗುಣ, ಒಗ್ಗಟ್ಟಿನ ತಾಣ - ಇದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಅವರು ಸಿದ್ಧವನ-ರತ್ನಮಾನಸಗಳ ಸಾರಸರ್ವಸ್ವವನ್ನು ಚಿತ್ರಿಸುವ ರೀತಿ.

ಇಂತಹ ವಾತಾವರಣದಲ್ಲಿ ಬೆಳೆದ ನೂರಾರು ವಿದ್ಯಾರ್ಥಿಗಳು ಇಂದು ಪ್ರಪಂಚದ ನಾನಾಕಡೆ ಉನ್ನತ ಹುದ್ದೆಗಳನ್ನು ಅಲಂಕರಿಸಿ ಯಶಸ್ಸು ಪಡೆದಿದ್ದಾರೆ. ಆದರೆ ಅವರು ತಮ್ಮ ಬೇರುಗಳನ್ನು ಮರೆತಿಲ್ಲ. ಏಕೆಂದರೆ ಅವರು ಪಡೆದಿರುವುದು ಬುನಾದಿ ಶಿಕ್ಷಣ. ಎಂತಹ ಪರಿಸ್ಥಿತಿಯನ್ನೂ ನಿಭಾಯಿಸಿಕೊಂಡು ಹೋಗಬಲ್ಲ ಆತ್ಮವಿಶ್ವಾಸವನ್ನು ದೃಢತೆಯನ್ನೂ ಘನತೆಯನ್ನೂ ಅವರಿಗೆ ಗುರುಕುಲ ಪದ್ಧತಿ ಕಲಿಸಿಕೊಟ್ಟಿದೆ. ಪಾಯ ಭದ್ರವಾಗಿರುವುದರಿಂದಲೇ ಅವರ ಬದುಕಿನ ಸೌಧ ಭವ್ಯವಾಗಿದೆ.

ಯೋಗ ಮತ್ತು ನೈತಿಕ ಶಿಕ್ಷಣ ಎಸ್.ಡಿ.ಎಂ. ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗ. ಡಾ. ಹೆಗ್ಗಡೆಯವರು ಸ್ಥಾಪಿಸಿದ ಶಾಂತಿವನ ಟ್ರಸ್ಟ್ ತನ್ನ 'ಯೋಗ ಮತ್ತು ನೈತಿಕ ಶಿಕ್ಷಣ ಅನುಷ್ಠಾನ ಯೋಜನೆ’ಯ ಮೂಲಕ ಶಿಕ್ಷಣದ ಮೌಲ್ಯವರ್ಧನೆಗೆ ನಿರಂತರ ಶ್ರಮಿಸುತ್ತಿದೆ. ಗಾಂಧೀಜಿ, ಸುಭಾಶ್ಚಂದ್ರ ಬೋಸ್, ವಿವೇಕಾನಂದ ಮೊದಲಾದ ಮಹಾತ್ಮರ ಜೀವನ ಸಂದೇಶಗಳನ್ನು ಸಾರುವ, ವ್ಯಕ್ತಿತ್ವ ವಿಕಸನದ ಮಹತ್ವ ಹೇಳುವ ಪುಸ್ತಕಗಳನ್ನು ಲಕ್ಷಾನುಗಟ್ಟಲೆ ಮುದ್ರಿಸಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚಿ ಅವುಗಳ ಬಗ್ಗೆ ಭಾಷಣ-ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡುವ ಯೋಜನೆಯ ದೂರದರ್ಶಿತ್ವ ಪ್ರಶಂಸನೀಯ.

ವಿದ್ಯಾರ್ಥಿಗಳ ಕೌಶಲ ಮತ್ತು ಸೃಜನಶೀಲತೆಯು ವೃತ್ತಿ ಆಧಾರಿತವಾಗಿರಬೇಕು ಹಾಗೂ ವಿದ್ಯಾರ್ಥಿಗಳು ನಿಸ್ವಾರ್ಥ ಗುಣಗಳಿಂದ ಸಮಾಜದ ಅಭ್ಯುದಯದಲ್ಲಿ ತೊಡಗಿಸಿಕೊಳ್ಳಬೇಕೆಂಬ ಬಯಕೆಯಿಂದ ವಿಭಿನ್ನ ವಿಷಯಗಳನ್ನು ಆಧರಿಸಿದ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಿದೆವು. ಜಗತ್ತಿನ ವೇಗದೊಂದಿಗೆ ಮುನ್ನಡೆಯಲು ಬೇಕಾದ ಎಲ್ಲ ರೀತಿಯ ಬೌದ್ಧಿಕ ಮತ್ತು ಭೌತಿಕ ಪರಿಸರವನ್ನು ರೂಪಿಸಿದೆವು. ಇದರ ಸದುಪಯೋಗವನ್ನು ಪಡೆದುಕೊಂಡ ವಿದ್ಯಾರ್ಥಿ ಸಮೂಹ ನಾಡಿನಾದ್ಯಂತ ಇಂದು ಪಸರಿಸಿ 'ಎಸ್‌ಡಿಎಂ ಸಂಸ್ಕೃತಿ’ ಎಂಬ ಮಾದರಿಯೊಂದನ್ನು ಹುಟ್ಟು ಹಾಕಿದ್ದಾರೆ ಎಂದು ತಮ್ಮ ಲೇಖನವೊಂದರಲ್ಲಿ ಬರೆಯುತ್ತಾರೆ ಡಾ. ಹೆಗ್ಗಡೆ.

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ
ಚಿತ್ತದೊಳು ಬೆಳೆದರಿವು ತರುತಳೆದ ಪುಷ್ಪ
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ
ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ
ಎಂಬ ಡಿವಿಜಿಯರ ಕನಸಿಗೆ ರಾಜರ್ಷಿ ವೀರೇಂದ್ರ ಹೆಗ್ಗಡೆಯವರು ಹೇಳುವ 'ಎಸ್‌ಡಿಎಂ ಸಂಸ್ಕತಿ’ ತುಂಬ ಅನುರೂಪವಾಗಿದೆ. ಬಹುಶಃ ವರ್ತಮಾನದ ಶಿಕ್ಷಣ ಪದ್ಧತಿ ಎದುರಿಸುತ್ತಿರುವ ಅಷ್ಟೂ ಕಾಯಿಲೆಗಳಿಗೆ ಎಸ್‌ಡಿಎಂ ಸಂಸ್ಕೃತಿಯಲ್ಲಿ ಅತ್ಯಂತ ಸೂಕ್ತ ಚಿಕಿತ್ಸೆಗಳೂ ಔಷಧಿಗಳೂ ಇವೆ.