ಶುಕ್ರವಾರ, ಮಾರ್ಚ್ 31, 2017

ವಿಶ್ವಮಾನವತೆಯ ಹಾದಿಯಲ್ಲಿ ಸಾರ್ಥಕ ಪಯಣ

(ಮಾರ್ಚ್ 14, 2017ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ)

ತುಮಕೂರಿನ ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಒಂದು ನೋಟ.
ಅದು 1980ರ ದಶಕ. ಶ್ರೀ ರಾಮಕೃಷ್ಣ-ವಿವೇಕಾನಂದರ ಚಿಂತನೆಗಳನ್ನು ಯುವಜನತೆಗೆ ತಲುಪಿಸುವ ಕಾಯಕದಲ್ಲಿ ನಿರತರಾಗಿದ್ದ ರಾಮಕೃಷ್ಣ ಮಿಷನ್‌ನ ಶ್ರೀ ಪುರುಷೋತ್ತಮಾನಂದಜೀಯವರು 40 ಪುಟಗಳ ಒಂದು ಸಣ್ಣ ಪುಸ್ತಕ ಬರೆದಿದ್ದರು. ಎಲ್ಲೆಲ್ಲಿ ರಾಮಕೃಷ್ಣ ಆಶ್ರಮಗಳು ಇಲ್ಲವೋ ಅಲ್ಲೆಲ್ಲ ಅವರ ವಿಚಾರಗಳನ್ನು ಪಸರಿಸುವ ಸಂಸ್ಥೆಗಳನ್ನು ಸ್ಥಾಪಿಸಲು ಯುವಕರು ಮುಂದೆ ಬರಬೇಕೆಂಬುದು ಆ ಪುಸ್ತಕದ ಒಟ್ಟಾರೆ ಆಶಯ. 'ಕರ್ನಾಟಕದ ಯುವಜನತೆಗೊಂದು ಕರೆ’ ಎಂಬ ಒಂದು ರುಪಾಯಿ ಬೆಲೆಯ ಆ ಕಿರುಹೊತ್ತಿಗೆ ನೂರಾರು ಯುವಕರನ್ನು ಬಹುವಾಗಿ ಆಕರ್ಷಿಸಿತು.

ಹೀಗೆ ಪ್ರಭಾವಕ್ಕೆ ಒಳಗಾದ ಯುವಕರಲ್ಲಿ ಆಗತಾನೇ ಮೈಸೂರು ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಬಂದ ಶಂಕರರಾಮಯ್ಯ ಎಂಬ ತರುಣನೂ ಒಬ್ಬ. ತನ್ನೆದುರಿಗಿದ್ದ ಹತ್ತುಹಲವು ಆಯ್ಕೆಗಳನ್ನೆಲ್ಲ ಬದಿಗಿಟ್ಟ ಈ ಯುವಕ ವಿವೇಕಾನಂದರು ತೋರಿಸಿದ ಹಾದಿಯಲ್ಲಿ ನಡೆಯುವುದೇ ತನಗಿರುವ ಏಕೈಕ ದಾರಿ ಎಂದು ನಿರ್ಧರಿಸಿದ. ಒಂದಷ್ಟು ಸ್ನೇಹಿತರನ್ನು ಸೇರಿಸಿಕೊಂಡು ತಾನು ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ್ದ ಕುಣಿಗಲ್‌ನಲ್ಲಿ 1988ರಲ್ಲಿ 'ವಿವೇಕಾನಂದ ವಿಚಾರ ವೇದಿಕೆ’ಯನ್ನು ಆರಂಭಿಸಿಯೇಬಿಟ್ಟ.

ವೇದಿಕೆ ಸುತ್ತಮುತ್ತಲಿನ ಜನರಿಗೆ ಬಹುಬೇಗನೆ ಹತ್ತಿರವಾಯಿತು. ಅದು ಪ್ರಕಟಿಸಿದ ಸ್ವಾಮಿ ಪುರುಷೋತ್ತಮಾನಂದಜೀಯವರ 'ವಿದ್ಯಾರ್ಥಿಗೊಂದು ಪತ್ರ’ದ ಒಂದು ಲಕ್ಷ ಪ್ರತಿಗಳು ಮಾರಾಟವಾದವು. ವೇದಿಕೆಯನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸಿದರೆ ಹೆಚ್ಚು ಮಂದಿಗೆ ಪ್ರಯೋಜನವಾದೀತೆಂದು ಸ್ನೇಹಿತರ ಬಳಗ ಯೋಚಿಸಿತು. 1991 ಜನವರಿ 12 ವಿವೇಕಾನಂದರ ಜನ್ಮದಿನದಂದೇ ತುಮಕೂರಿನಲ್ಲಿ ವಿವೇಕಾನಂದ ವಿಚಾರ ವೇದಿಕೆಯ ಸ್ಥಾಪನೆಯಾಯಿತು. ಇದೆಲ್ಲದಕ್ಕೂ ಮೂಲಪ್ರೇರಣೆಯಾಗಿದ್ದ ಸ್ವಾಮಿ ಪುರುಷೋತ್ತಮಾನಂದರೇ ಖುದ್ದು ಆಗಮಿಸಿ ಯುವಕರ ಹೊಸ ಸಾಹಸಕ್ಕೆ ಬೆನ್ನುತಟ್ಟಿದರು.

ಆ ವೇಳೆಗಾಗಲೇ ಶಂಕರರಾಮಯ್ಯ ರಾಮಕೃಷ್ಣ-ಶಾರದಾದೇವಿ-ವಿವೇಕಾನಂದರ ಪ್ರಭಾವದಲ್ಲಿ ಬಲುದೂರ ಸಾಗಿಬಿಟ್ಟಿದ್ದ. ಲೌಕಿಕ ಜೀವನಕ್ಕಿಂತಲೂ ವೈರಾಗ್ಯದ ಬದುಕಿನತ್ತಲೇ ಹೆಚ್ಚಿನ ಒಲವು ಬೆಳೆದಿತ್ತು. ತಮ್ಮ ಜೀವನವೇನಿದ್ದರೂ ವಿವೇಕಾನಂದರ ಆದರ್ಶಗಳನ್ನು ಸಮಾಜದಲ್ಲಿ ಹರಡುವುದಕ್ಕೆ ಮೀಸಲೆಂದು ಅವರು ದೃಢನಿರ್ಧಾರ ಮಾಡಿಯಾಗಿತ್ತು. 1992 ನವೆಂಬರ್ 22ರಂದು ವಿವೇಕಾನಂದ ವೇದಿಕೆ 'ರಾಮಕೃಷ್ಣ-ವಿವೇಕಾನಂದ ಆಶ್ರಮ’ವಾಗಿ ಬದಲಾಯಿತು. ಶಂಕರರಾಮಯ್ಯ ಹಿಮಾಲಯಕ್ಕೆ ತೆರಳಿ ಸಂನ್ಯಾಸ ದೀಕ್ಷೆ ಪಡೆದು ಸ್ವಾಮಿ ವೀರೇಶಾನಂದ ಸರಸ್ವತಿಯಾಗಿ ಹಿಂತಿರುಗಿ ಆಶ್ರಮದ ನೇತೃತ್ವ ವಹಿಸಿಕೊಂಡರು. ಅವರ ಜತೆಗಿದ್ದ ಸ್ನೇಹಿತರಲ್ಲಿ ಕೆಲವರು ಕರ್ನಾಟಕದ ಬೇರೆ ಭಾಗಗಳಿಗೆ ತೆರಳಿ ಇಂತಹದೇ ಕಾರ್ಯಗಳಲ್ಲಿ ನಿರತರಾದರು.

"ತುಮಕೂರಿಗೆ ಬಂದ ಆರಂಭದಲ್ಲಿ ನಮ್ಮ ವೇದಿಕೆ ಒಂದು ಬಾಡಿಗೆ ಕಟ್ಟಡದಲ್ಲಿತ್ತು. ಆಗಿನ ಜಿಲ್ಲಾಧಿಕಾರಿ ಕೆ. ಎಚ್. ಗೋಪಾಲಕೃಷ್ಣೇಗೌಡರ ಸಹಕಾರದಿಂದ ಆಶ್ರಮಕ್ಕೆ ಸ್ವಂತ ಭೂಮಿ ಲಭಿಸಿತು. ಸಾರ್ವಜನಿಕರ ಶೌಚದ ಬಯಲೋ ಎಂಬಂತಿದ್ದ ನಿವೇಶನವನ್ನು ದೈವಸನ್ನಿಧಿಯಾಗಿ ರೂಪಿಸುವಲ್ಲಿ ಮಾಜಿ ಮಂತ್ರಿ ದಿ| ಲಕ್ಷ್ಮೀನರಸಿಂಹಯ್ಯ, ಉದ್ಯಮಿ ದಿ| ರಾಮಣ್ಣ ಮತ್ತು ಎಂಜಿನಿಯರ್ ದಿ| ಎಂ. ವಿ. ಸತ್ಯನಾರಾಯಣ ಶೆಟ್ಟಿ ಮೊದಲಾದವರ ಸೇವೆ ಮರೆಯಲಾಗದ್ದು.
 ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿ| ಅರೆಯೂರು ನರಸಿಂಹಮೂರ್ತಿ ತಮ್ಮ ಜೀವಿತದ ಅಂತ್ಯದವರೆಗೂ ಆಶ್ರಮದ ಅಭಿವೃದ್ಧಿಗೆ ಬೆಂಬಲ ನೀಡಿದರು. ಸಮಾನತೆಯ ಸಹೋದರತೆಯ ಸಮಾಜವೊಂದನ್ನು ಕಟ್ಟುವುದಕ್ಕೆ ಏನೆಲ್ಲ ಮಾಡಬಹುದೋ ಅವನ್ನೆಲ್ಲ ಆಶ್ರಮವು ರಾಮಕೃಷ್ಣ-ವಿವೇಕಾನಂದರ ಚಿಂತನೆಗಳ ನೆರಳಲ್ಲಿ ಅತ್ಯಂತ ಶ್ರದ್ಧೆಯಿಂದ ಮಾಡುತ್ತಾ ಬಂದಿದೆ. ನಾವು ಸಾಗಬೇಕಾದ ದಾರಿ ಇನ್ನೂ ಬಹುದೂರವಿದೆ" ಎನ್ನುತ್ತಾರೆ ಸ್ವಾಮಿ ವೀರೇಶಾನಂದ ಸರಸ್ವತಿಯವರು.

ಒಂದು ಸಾಮಾನ್ಯ ಚಿಂತನಾಕೂಟವಾಗಿ ಆರಂಭಗೊಂಡ ರಾಮಕೃಷ್ಣ-ವಿವೇಕಾನಂದ ಆಶ್ರಮಕ್ಕೆ ಈಗ ರಜತೋತ್ಸವದ ಸಂಭ್ರಮ. ಈ ಇಪ್ಪತ್ತೈದು ವರ್ಷಗಳ ಪಯಣದಲ್ಲಿ ಆಶ್ರಮದ ಜತೆ ಹೆಜ್ಜೆಹಾಕಿದವರು ಲಕ್ಷಾಂತರ ಮಂದಿ. ಅವರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಮಾಜದ ದುರ್ಬಲ ವರ್ಗಕ್ಕೆ ಸೇರಿದವರೇ ಹೆಚ್ಚು. ತನ್ನ ವಿಶಿಷ್ಟ, ವಿನೂತನ ಚಟುವಟಿಕೆಗಳಿಂದ ಇಡೀ ರಾಜ್ಯದ ಗಮನ ಸೆಳೆದಿರುವ ಆಶ್ರಮ ವಿಶ್ವಮಾನವತೆಯ ತತ್ತ್ವವನ್ನು ನಿಜದರ್ಥದಲ್ಲಿ ಅನುಷ್ಠಾನಕ್ಕೆ ತಂದಿದೆ.

ರಾಮಕೃಷ್ಣ-ವಿವೇಕಾನಂದ ಆಶ್ರಮಕ್ಕೆ ಜಾತಿ-ಸಮುದಾಯಗಳ ಹಂಗಿಲ್ಲ. ಇಂತಹ ಪಂಗಡದ ಮಂದಿಗೆ ಮಾತ್ರ ಪ್ರವೇಶ ಎಂಬ ಕಟ್ಟುಪಾಡುಗಳಿಲ್ಲ. ಆಶ್ರಮದ ಸಾಧುನಿವಾಸ, ಶ್ರೀರಾಮಕೃಷ್ಣ ವಿಶ್ವಭಾವೈಕ್ಯ ಮಂದಿರಗಳಿಗೆ ಎಲ್ಲರಿಗೂ ಮುಕ್ತಪ್ರವೇಶ. ಮನುಜಮತ, ವಿಶ್ವಪಥ, ಸರ್ವೋದಯಗಳೇ ಆಶ್ರಮ ಆರಂಭದಿಂದಲೂ ನಂಬಿಕೊಂಡು ಬಂದಿರುವ ಶ್ರೇಷ್ಠ ಆದರ್ಶಗಳು. ದೀನರು ನಮ್ಮ ದೇವರಾಗಲಿ, ದಲಿತರು ನಮ್ಮ ದೇವರಾಗಲಿ, ಅಶಕ್ತರು ನಮ್ಮ ದೇವರಾಗಲಿ, ರೋಗಿಗಳು ನಮ್ಮ ದೇವರಾಗಲಿ ಎಂಬ ಸ್ವಾಮಿ ವಿವೇಕಾನಂದರ ಕರೆಯೇ ಆಶ್ರಮದ ದಾರಿದೀಪ.

"ಜಾತಿ ಕೇವಲ ಒಂದು ಸಾಮಾಜಿಕ ವ್ಯವಸ್ಥೆ; ಅದಕ್ಕೂ ಅಧ್ಯಾತ್ಮಕ್ಕೂ ಸಂಬಂಧ ಇಲ್ಲ. ಪ್ರತೀ ಜೀವಿಯೂ ದೈವೀಸ್ವರೂಪವಾದದ್ದು ಎಂಬುದನ್ನು ನಾವೆಲ್ಲ ಒಪ್ಪುವುದಾದರೆ ಜಾತಿಯ ಕಾರಣಕ್ಕೆ ಯಾವ ವ್ಯಕ್ತಿಯೂ ಯಾವುದೇ ಅವಕಾಶಗಳಿಂದಲೂ ವಂಚಿತವಾಗಬಾರದು..." ಎನ್ನುತ್ತಾರೆ ಸ್ವಾಮೀಜಿ.

ಪ್ರತೀ ವರ್ಷ ಶ್ರೀ ಶಾರದಾದೇವಿಯವರ ಜನ್ಮದಿನವೆಂದರೆ ತುಮಕೂರು ಸುತ್ತಮುತ್ತಲಿನ ಬಡ, ಅಶಕ್ತ ಮಹಿಳೆಯರಿಗೆ ಹಬ್ಬದ ದಿನವೆಂದೇ ಅರ್ಥ. ಅದಕ್ಕೆ ಕಾರಣ ಆಶ್ರಮ ಆಚರಿಸಿಕೊಂಡು ಬಂದಿರುವ 'ಜೀವಂತ ದುರ್ಗಾಪೂಜೆ’ಯ ಪರಿಕಲ್ಪನೆ. ಕೊಳೆಗೇರಿಗಳಲ್ಲಿ, ಬೀದಿಬದಿಗಳಲ್ಲಿ ವಾಸಿಸುವ ಆಶಕ್ತ, ಆಶ್ರಯಹೀನ ಮಹಿಳೆಯರನ್ನೇ ಅಂದು ಆಶ್ರಮಕ್ಕೆ ಬರಮಾಡಿಕೊಂಡು ಅವರಿಗೆ ಅನ್ನ, ವಸ್ತ್ರ, ಧಾನ್ಯ ದಾನ ಮಾಡುವುದೇ ಈ ಪೂಜೆ. ಹಸಿದವನಿಗೆ ಬೇಕಾಗಿರುವುದು ಅನ್ನವೇ ಹೊರತು ನಿಮ್ಮ ಸಿದ್ಧಾಂತಗಳಲ್ಲ ಎಂಬ ವಿವೇಕಾನಂದರ ಮಾತು ಎಷ್ಟೊಂದು ಅರ್ಥಪೂರ್ಣವಾಗಿ ಇಲ್ಲಿ ಜಾರಿಗೆ ಬಂದಿದೆ! ಕಳೆದೆರಡು ದಶಕಗಳಲ್ಲಿ ಆಶ್ರಮವು ಏನಿಲ್ಲವೆಂದರೂ ಈ ರೀತಿಯ 8,000 ಬಡ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ.

ಸಮಾಜದಲ್ಲಿ ಪರಿವರ್ತನೆ ತರಬೇಕೆಂದರೆ ಬದಲಾವಣೆ ಆರಂಭವಾಗಬೇಕಾದುದು ಶಿಕ್ಷಣದಲ್ಲಿ ಎಂಬುದು ಆಶ್ರಮದ ದೃಢನಂಬಿಕೆ. ಅದಕ್ಕಾಗಿಯೇ ಮೊದಲಿನಿಂದಲೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಅದು ತನ್ನ ಯೋಜನೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದೆ. ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪರೀಕ್ಷೆಗಳು, ಶಿಕ್ಷಕರಿಗೆ ತರಬೇತಿ ಕಾರ್ಯಾಗಾರಗಳು, ಯುವಸಮ್ಮೇಳನಗಳು ಆಶ್ರಮ ನಡೆಸಿಕೊಂಡು ಬಂದಿರುವ ಪ್ರಮುಖ ಚಟುವಟಿಕೆಗಳು.

"ಆಶ್ರಮ ಈವರೆಗೆ ಒಂದು ಸಾವಿರಕ್ಕಿಂತಲೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿದೆ. ಎರಡು ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು, ಹತ್ತು ಸಾವಿರದಷ್ಟು ಶಿಕ್ಷಕರು ವ್ಯಕ್ತಿತ್ವ ನಿರ್ಮಾಣದ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆದಿದ್ದಾರೆ. ಸುಮಾರು 100 ಯುವಸಮ್ಮೇಳನಗಳಾಗಿವೆ. ಆ ಮೂಲಕ ಒಂದು ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನು ನಾವು ತಲುಪಿದ್ದೇವೆ. ಶಿಕ್ಷಕರ ಸಮಾವೇಶಗಳನ್ನು ಏರ್ಪಡಿಸುವುದರ ಮೂಲಕ 50 ಸಾವಿರ ಶಿಕ್ಷಕರನ್ನು ತಲುಪಿದ್ದೇವೆ" ಎಂದು ವಿವರಿಸುತ್ತಾರೆ ಸ್ವಾಮೀಜಿ.

ಸ್ವತಃ ಒಬ್ಬ ಉತ್ತಮ ವಾಗ್ಮಿಯಾಗಿರುವ ಸ್ವಾಮೀಜಿ ಕನ್ನಡ, ಇಂಗ್ಲಿಷ್ ಹಾಗೂ ತೆಲುಗು ಭಾಷೆಗಳಲ್ಲಿ ನಿರರ್ಗಳ ಉಪನ್ಯಾಸ ನೀಡಬಲ್ಲವರು ಮತ್ತು ಸುಶ್ರಾವ್ಯವಾಗಿ ಹಾಡಬಲ್ಲವರು. ಆಶ್ರಮದ ಚಟುವಟಿಕೆಗಳ ಹೊರತಾಗಿ ಕಳೆದ 25 ವರ್ಷಗಳಲ್ಲಿ ಸುಮಾರು 10 ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಉಪನ್ಯಾಸಗಳನ್ನು ನೀಡಿದ್ದಾರೆ. ರಾಜ್ಯದ ಸುಮಾರು 60 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವಚನ ನೀಡಿದ್ದಾರೆ. ದಕ್ಷಿಣ ಕೊರಿಯಾ, ಸ್ಪೇನ್, ಇಟಲಿ, ಅಮೇರಿಕದ ಪ್ರತಿಷ್ಠಿತ ವೇದಿಕೆಗಳಲ್ಲಿ ಉಪನ್ಯಾಸ ನೀಡಿ ರಾಮಕೃಷ್ಣ-ವಿವೇಕಾನಂದರ ತತ್ತ್ವಚಿಂತನೆಗಳನ್ನು ವಿದೇಶಗಳಲ್ಲೂ ಪಸರಿಸುವ ಕೆಲಸ ಮಾಡಿದ್ದಾರೆ. ಆಶ್ರಮ ’ವಿವೇಕದೀಪ್ತಿ’ ಎಂಬ ದ್ವೈಮಾಸಿಕವನ್ನೂ ಪ್ರಕಟಿಸುತ್ತಿದೆ.

ರಜತ ವರ್ಷಾಚರಣೆಯ ಅಂಗವಾಗಿ ಆಶ್ರಮವು ಇದೇ ಮಾರ್ಚ್ ೨೨ರಿಂದ ಒಂದು ವರ್ಷ ನಿರಂತರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲದೆ ಎರಡು ಉಪಕೇಂದ್ರಗಳನ್ನು ಸ್ಥಾಪಿಸಲು ಸಿದ್ಧತೆ ನಡೆಸುತ್ತಿದೆ. ತುಮಕೂರು ಜಿಲ್ಲೆಯ ಶಿರಾದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ವಸತಿನಿಲಯವನ್ನೂ, ರಾಮನಗರ ಜಿಲ್ಲೆಯ ಕುದೂರಿನ ಸಮೀಪದ ತೊರೆರಾಮನಹಳ್ಳಿಯಲ್ಲಿ ಒಂದು ಅಧ್ಯಾತ್ಮಿಕ ಶಿಕ್ಷಣ ಸಂಸ್ಥೆಯನ್ನೂ ತೆರೆಯುವ ಯೋಜನೆಗೆ ಸದ್ಯದಲ್ಲೇ ಚಾಲನೆ ಸಿಗಲಿದೆ.

"ಶಿರಾದಲ್ಲಿ ಸರ್ಕಾರ 4 ಎಕರೆ ಜಾಗ ಮಂಜೂರು ಮಾಡಿದೆ. ತೊರೆರಾಮನಹಳ್ಳಿಯಲ್ಲಿ ಜಗದೀಶ್ ಎಂಬವರು ತಮ್ಮ ಹೆತ್ತವರ ಗೌರವಾರ್ಥ 5 ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ. ನಮ್ಮ ಉಪಕೇಂದ್ರಗಳನ್ನು ತೆರೆಯುವ ಮೂಲಕ ಅಲ್ಲಿನ ಗ್ರಾಮೀಣ ಯುವಕರಲ್ಲಿ ವೃತ್ತಿಕೌಶಲ, ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂಬುದು ನಮ್ಮ ಆಸೆ", ಎನ್ನುತ್ತಾರೆ ಸ್ವಾಮಿ ವೀರೇಶಾನಂದರು.

"ತುಮಕೂರಿನ ಶಿಕ್ಷಣ ಕ್ರಾಂತಿಯ ಹರಿಕಾರ ದಿ| ಎಚ್. ಎಂ. ಗಂಗಾಧರಯ್ಯನವರು ನನ್ನ ಮೇಲೆ ಅಪಾರ ಪ್ರಭಾವ ಬೀರಿದ ವ್ಯಕ್ತಿ. ದಲಿತ ಸಮುದಾಯದಿಂದ ಬಂದು ಕಷ್ಟಪಟ್ಟು ದುಡಿದು ಸರ್ವರ ಏಳಿಗೆಯ ಕನಸು ಕಂಡವರು ಅವರು. ಅವರು ಸ್ಥಾಪಿಸಿದ ಕುಣಿಗಲ್‌ನ ಸಿದ್ಧಾರ್ಥ ಹೈಸ್ಕೂಲಿನಲ್ಲೇ ನಾನು ವಿದ್ಯಾಭ್ಯಾಸ ಮಾಡಿದೆ. ಅವರು ನನಗೆ ಕೊಟ್ಟ ಪ್ರೋತ್ಸಾಹ, ಬೆಂಬಲ ಅಗಾಧ. ಅವರೆಂದೂ ಜಾತೀವಾದಿಯಾಗಿರಲಿಲ್ಲ. ಪ್ರತಿಭೆಯನ್ನು ಗೌರವಿಸುತ್ತಿದ್ದ ವ್ಯಕ್ತಿತ್ವ ಅವರದು" ಎನ್ನುವ ಸ್ವಾಮೀಜಿ, ತಾವು ಕಾಣುವ ಗ್ರಾಮೀಣ ಯುವಕರ ಅಭ್ಯುದಯದ ಕನಸಿಗೆ ಗಂಗಾಧರಯ್ಯನವರೇ ಮುಖ್ಯ ಪ್ರೇರಣೆ ಎಂದು ಸ್ಮರಿಸುತ್ತಾರೆ.

ಸಮಾಜಕ್ಕೆ ಸಮರ್ಪಿತ ಕುಟುಂಬ
ಒಂದೇ ಕುಟುಂಬದ ನಾಲ್ಕು ಮಂದಿ ಸಹೋದರರು ಸಂನ್ಯಾಸಿಗಳಾಗಿ ಸಮಾಜದ ಏಳ್ಗೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆಂದರೆ ನಿಮಗೆ ಆಶ್ಚರ್ಯವೆನಿಸದೆ ಇರದು. ಆದರೆ ಇದು ನಿಜ. ಸ್ವಾಮಿ ವೀರೇಶಾನಂದರ ಕುಟುಂಬವೇ ಇಂತಹದೊಂದು ವೈಶಿಷ್ಟ್ಯತೆಗೆ ಸಾಕ್ಷಿ. ಅವರ ಅಣ್ಣ ಬಿ.ಎಸ್ಸಿ. ಪದವೀಧರ ಸ್ವಾಮಿ ನಿರ್ಭಯಾನಂದರು ಗದಗ ಮತ್ತು ಬಿಜಾಪುರಗಳಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮಗಳನ್ನು ಸ್ಥಾಪಿಸಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇನ್ನೊಬ್ಬ ಸಹೋದರ ಸ್ವಾಮಿ ಬ್ರಹ್ಮನಿಷ್ಠಾನಂದಜಿ ಚಿತ್ರದುರ್ಗದಲ್ಲಿ ಶ್ರೀ ಶಾರದಾ ರಾಮಕೃಷ್ಣಾಶ್ರಮದ ನೇತೃತ್ವ ವಹಿಸಿದ್ದಾರೆ. ಮತ್ತೊಬ್ಬ ಸಹೋದರ ಸ್ವಾಮಿ ಧೀರಾನಂದಜಿ ತುಮಕೂರಿನ ಆಶ್ರಮದಲ್ಲೇ ಇದ್ದು ಸ್ವಾಮೀಜಿಯವರ ಸೇವಾಕಾರ್ಯಗಳಲ್ಲಿ ಜತೆಯಾಗಿದ್ದಾರೆ. ತ್ಯಾಗ ಎಂದರೆ ಇದೇ ಅಲ್ಲವೇ?

ಶುಕ್ರವಾರ, ಮಾರ್ಚ್ 24, 2017

ಜೈಲಿನ ಬಾಗಿಲನ್ನು ಮುಚ್ಚುವ ಶಿಕ್ಷಣ ಎಲ್ಲಿದೆ?

ಮಾರ್ಚ್ 19, 2017ರ 'ಹೊಸದಿಗಂತ'ದಲ್ಲಿ ಪ್ರಕಟವಾದ ಲೇಖನ

ಬೆಂಗಳೂರಿನ ಹೈಸ್ಕೂಲ್ ವಿದ್ಯಾರ್ಥಿಯೊಬ್ಬನನ್ನು ಆತನ ಓರಗೆಯವರೇ ಇರಿದುಕೊಂದರೆಂದು ಈಚೆಗೆ ಕೇಳಿದಾಗ ವಿಕ್ಟರ್ ಹ್ಯೂಗೋನ ಮಾತು ನೆನಪಾಯಿತು: 'ಯಾರು ಒಂದು ಶಾಲೆಯನ್ನು ತೆರೆಯುತ್ತಾರೋ, ಅವರು ಒಂದು ಜೈಲಿನ ಬಾಗಿಲನ್ನು ಮುಚ್ಚುತ್ತಾರೆ’. ಹ್ಯೂಗೋ ಹೇಳಿದ ಆದರ್ಶ ಮತ್ತು ವಾಸ್ತವದ ವಿಪರ್ಯಾಸಗಳ ನಡುವೆ ಒಂದು ವಿಷಾದದ ನಿಟ್ಟುಸಿರಿನ ಹೊರತು ಬೇರೇನಕ್ಕೆ ಅವಕಾಶ ಇದೆ?

ವಿಶ್ವದ ದಾರ್ಶನಿಕರೆಲ್ಲ ಶಿಕ್ಷಣದ ಬಗ್ಗೆ ಕಂಡ ಕನಸು ಇಂತಹದ್ದೇ. ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟ್ರನಿರ್ಮಾಣವೇ ಶಿಕ್ಷಣದ ಪರಮಗುರಿ ಎಂದರು ಸ್ವಾಮಿ ವಿವೇಕಾನಂದರು. ಚಾರಿತ್ರ್ಯ ನಿರ್ಮಾಣ ಮಾಡದ ಶಿಕ್ಷಣ ಅರ್ಥಹೀನ ಎಂದರು ಗಾಂಧೀಜಿ. ವರ್ತಮಾನದ ನಮ್ಮ ಶಿಕ್ಷಣದ ಪರಿಸ್ಥಿತಿಯನ್ನು ನೋಡಿದಾಗೆಲ್ಲ ಈ ಪುಣ್ಯಾತ್ಮರ ಮಾತುಗಳೆಲ್ಲ ಪುಸ್ತಕಗಳಲ್ಲೇ ಉಳಿದುಹೋದವೇ ಎಂದು ಮನಸ್ಸು ವ್ಯಾಕುಲಗೊಳ್ಳುತ್ತದೆ. ನಾವು ಮತ್ತೆ ಹಳೆಶಿಲಾಯುಗದತ್ತ ನಡೆಯುತ್ತಿದ್ದೇವೆಯೇ?
ಯಲಹಂಕದ ಘಟನೆ ನಾವು ದಿನನಿತ್ಯ ಕೇಳುವ ಸುದ್ದಿಗಳ ಪೈಕಿ ಒಂದು ಮಾತ್ರ. ದಿನಬೆಳಗಾದರೆ ಇದೇ ಬಗೆಯ ಒಂದಲ್ಲ ಒಂದು ವಾರ್ತೆಗಳು ನಮ್ಮ ಕಿವಿಗೆ ಬೇಡವೆಂದರೂ ಬೀಳುತ್ತವೆ. ಇವೆಲ್ಲ ನಮ್ಮ ಶಿಕ್ಷಣ ಪದ್ಧತಿಯ ಪುನರವಲೋಕನದ ಅವಶ್ಯಕತೆಯನ್ನು ಒತ್ತಿಹೇಳುತ್ತಿಲ್ಲವೇ? ಶಿಕ್ಷಣ ಮನುಷ್ಯನನ್ನು ಮೃಗೀಯತೆಯಿಂದ ಮಾನವತ್ವದ ಕಡೆಗೂ, ಅಲ್ಲಿಂದ ದೈವತ್ವದ ಕಡೆಗೂ ಏರಿಸುವ ಸಾಧನ ಮತ್ತು ವಿಧಾನ ಎಂದಿದ್ದರು ಕುವೆಂಪು. ಅಂತಹದೊಂದು ಪ್ರಕ್ರಿಯೆ ನಮ್ಮ ಇಂದಿನ ಶಿಕ್ಷಣ ಪದ್ಧತಿಯಲ್ಲಿ ನಡೆಯುತ್ತಿದೆ ಎಂದು ಅನಿಸುತ್ತಿದೆಯೇ?

ಆಧುನಿಕತೆಯಲ್ಲಿ ನಾವು ಬಹುದೂರ ಸಾಗಿಬಂದಿದ್ದೇವೆ. ದಿನೇದಿನೇ ಬದುಕಿಗೆ ಹೊಸ ಆಯಾಮಗಳು ಸೇರಿಕೊಳ್ಳುತ್ತಿವೆ. ಔದ್ಯೋಗಿಕ ಜಗತ್ತು ವಿಸ್ತಾರಗೊಳ್ಳುತ್ತಿದೆ. ಇದಕ್ಕೆಲ್ಲ ಪೂರಕವಾದ ಶಿಕ್ಷಣ ಪದ್ಧತಿಯನ್ನು ರೂಪಿಸಿಕೊಂಡಿದ್ದೇವೆ ಎಂಬ ಭ್ರಮೆಯಲ್ಲಿ ನಾವೆಲ್ಲ ಇದ್ದೇವೆಯೇ ಹೊರತು ಇಂತಹ ಆಧುನಿಕತೆಯ ನಡುವೆಯೂ ಹೃದಯವಂತಿಕೆಯನ್ನು ಪೋಷಿಸಬಲ್ಲ, ಮನುಷ್ಯರಾಗಿ ಬಾಳಬಲ್ಲ ಬುದ್ಧಿಭಾವಗಳನ್ನು ಅರಳಿಸುವ ಶಿಕ್ಷಣವೊಂದನ್ನು ನಮ್ಮ ಮಕ್ಕಳಿಗೆ ನೀಡುತ್ತಿದ್ದೇವೆಯೇ ಎಂಬ ಆತ್ಮಾವಲೋಕನ ಮಾಡಿಕೊಳ್ಳುತ್ತಿಲ್ಲ.

ಆಧುನಿಕ ಜಗತ್ತು ನಿರೀಕ್ಷಿಸುವ ಶ್ರೇಷ್ಠ ವಿಜ್ಞಾನಿಗಳು, ಎಂಜಿನಿಯರ್‌ಗಳು, ವಕೀಲರು, ನ್ಯಾಯಾಧೀಶರು, ವೈದ್ಯರು, ಉದ್ಯಮಿಗಳನ್ನು ನಾವು ಕೊಡಬೇಕಾಗಿದೆ ನಿಜ. ಆದರೆ ಈ ’ಶ್ರೇಷ್ಠತೆ’ ಎಲ್ಲಿಂದ ಬರುತ್ತದೆ? ಇವರು ತಿಂಗಳಿಗೆ ಎಷ್ಟು ಲಕ್ಷ ಸಂಬಳ ಪಡೆಯುತ್ತಾರೆ, ಎಂತಹ ಕಾರುಗಳಲ್ಲಿ ಓಡಾಡುತ್ತಾರೆ, ಯಾವಯಾವ ದೇಶಗಳನ್ನು ಸುತ್ತಾಡುತ್ತಾರೆ ಎಂಬುದರಿಂದಲೇ?  ಲಕ್ಷ ಸಂಬಳ ಪಡೆಯುವವರಲ್ಲಿ ಎಷ್ಟು ಮಂದಿ ವೃದ್ಧಾಪ್ಯದಲ್ಲಿರುವ ತಮ್ಮ ತಂದೆತಾಯಿಗಳನ್ನು ತಮ್ಮೊಂದಿಗೇ ಇರಿಸಿಕೊಂಡು ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ? ಇನ್ನೆಷ್ಟು ಮಂದಿ ಹೈಟೆಕ್ ಗಂಡಹೆಂಡಿರು ಪರಸ್ಪರ ನಂಬಿಕೆಯ, ಸಮನ್ವಯದ ಜೀವನ ನಡೆಸುತ್ತಿದ್ದಾರೆ? ಸೂರ್ಯೋದಯ ಸೂರ್ಯಾಸ್ತಗಳಂತಹ ಪ್ರತಿದಿನದ ಖುಷಿಗಳನ್ನು ಕಣ್ತುಂಬಿಕೊಳ್ಳಲಾಗದ, ದಿನಕ್ಕೊಮ್ಮೆ ಮನಸಾರೆ ನಕ್ಕು ಹಗುರವಾಗಲು ಸಾಧ್ಯವಾಗದ ಇವರ ಸಾಧನೆಗಳು ಇದ್ದರೆಷ್ಟು ಬಿಟ್ಟರೆಷ್ಟು?

'ಹೃದಯವನ್ನು ಶಿಕ್ಷಿತಗೊಳಿಸದೆ ಕೇವಲ ಮನಸ್ಸಿಗೆ ಶಿಕ್ಷಣ ನೀಡುವುದು ವಾಸ್ತವವಾಗಿ ಶಿಕ್ಷಣವೇ ಅಲ್ಲ’ ಎಂದು ಮೂರು ಸಾವಿರ ವರ್ಷಗಳ ಹಿಂದೆ ಹೇಳಿದ್ದ ಅರಿಸ್ಟಾಟಲ್. ’ಅತ್ಯುನ್ನತವಾದ ಶಿಕ್ಷಣವೆಂದರೆ ಕೇವಲ ಮಾಹಿತಿ ನೀಡುವುದಲ್ಲ, ನಮ್ಮ ಬದುಕನ್ನು ಸುತ್ತಲಿನ ಪ್ರತೀ ಅಸ್ತಿತ್ವದೊಂದಿಗೂ ಸಮರಸದಿಂದ ಇರುವಂತೆ ಮಾಡುವುದು’ ಎಂದರು ರವೀಂದ್ರನಾಥ ಠ್ಯಾಗೋರ್. ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಹಂತದವರೆಗಿನ ನಮ್ಮ ಒಟ್ಟಾರೆ ಶಿಕ್ಷಣ ವ್ಯವಸ್ಥೆಯನ್ನು ನೋಡಿದಾಗ ಇಂತಹ ಉನ್ನತ ಆದರ್ಶಗಳ ಸಣ್ಣದೊಂದು ಪಾಲಾದರೂ ಅನುಷ್ಠಾನಕ್ಕೆ ಬಂದಿದೆ ಎಂದು ಅನಿಸುತ್ತದೆಯೇ?

ನಾವಿಂದು ತುಂಬ ಕಾಳಜಿ ವಹಿಸಬೇಕಿರುವುದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣದ ಬಗೆಗೇ. ಈ ಹಂತದಲ್ಲಿ ಮಕ್ಕಳಿಗೆ ಏನನ್ನು ಕಲಿಸಲಾಗುತ್ತದೆಯೋ ಅದೇ ಅವರ ಭವಿಷ್ಯವನ್ನು ನಿರ್ಧರಿಸುತ್ತದೆ. ಆ ವಯಸ್ಸಿನ ಮಕ್ಕಳ ಮನಸ್ಸು ಇನ್ನೂ ಹಸಿಯಾಗಿರುವ ಆವೆಮಣ್ಣಿನಂತೆ. ಅದಕ್ಕೆ ಯಾವ ಆಕಾರವನ್ನಾದರೂ ಕೊಡಬಹುದು. ಪ್ರಯತ್ನಿಸಿದರೆ ದೇವರ ವಿಗ್ರಹ ತಯಾರಾದೀತು, ನಿರ್ಲಕ್ಷಿಸಿದರೆ ಹಿತ್ತಲಿನ ತಿಪ್ಪೆಯಾದೀತು. ಆಯ್ಕೆ ಶಿಕ್ಷಕನಿಗೆ ಬಿಟ್ಟದ್ದು. ಜಗತ್ತಿನ ಅತ್ಯಂತ ಪ್ರಭಾವೀ ವ್ಯಕ್ತಿ ಅಮೇರಿಕದ ಅಧ್ಯಕ್ಷನೂ ಅಲ್ಲ, ಇಂಗ್ಲೆಂಡಿನ ರಾಣಿಯೂ ಅಲ್ಲ, ನಮ್ಮ ಪ್ರಾಥಮಿಕ ಶಾಲೆಯ ಮೇಸ್ಟ್ರು. ಆತ ಮನಸ್ಸು ಮಾಡಿದರೆ ಒಬ್ಬೊಬ್ಬ ಶಿಷ್ಯನನ್ನೂ ಸಮಾಜಕ್ಕೆ ಶ್ರೇಷ್ಠ ಕೊಡುಗೆಯಾಗಿ ನೀಡಬಲ್ಲ. ಪ್ರಾಥಮಿಕ ಶಾಲೆಯ ನಾಲ್ಕೈದು ವರ್ಷಗಳೇ ಯಾವುದೇ ವ್ಯಕ್ತಿಯ ಬದುಕಿನ ಸುವರ್ಣಕಾಲ.

ದುರದೃಷ್ಟವಶಾತ್, ದಿನೇದಿನೇ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆಯೇ ಹೊರತು ಆಶಾವಾದದ ಕಿಟಕಿಗಳು ತೆರೆಯುತ್ತಿಲ್ಲ. ಪಠ್ಯಕ್ರಮ, ಬೋಧನಾ ವಿಧಾನ, ಶಿಕ್ಷಕ-ವಿದ್ಯಾರ್ಥಿ ಸಂಬಂಧ, ಬೋಧನಾ ಗುಣಮಟ್ಟ, ಮೂಲಭೂತ ಸೌಕರ್ಯ, ಪಠ್ಯಪರಿಕರ, ಶಾಲಾಪರಿಸರ- ಒಂದೊಂದನ್ನು ಗಮನಿಸಿದರೂ ನಿರಾಶೆಯೇ ಕಾಡುತ್ತದೆ. ಪ್ರಾಥಮಿಕ ಶಿಕ್ಷಣಕ್ಕೆ ಪ್ರಥಮೋಪಚಾರವಾಗಬೇಕೆಂದು ಶಿವರಾಮ ಕಾರಂತರಾದಿಯಾಗಿ ನೂರಾರು ಪ್ರಾಜ್ಞರು ಹೇಳುತ್ತಲೇ ಬಂದಿದ್ದಾರೆ. ಪರಿಸ್ಥಿತಿ ಮಾತ್ರ ಹಾಗೆಯೇ ಇದೆ, ಅಥವಾ ಇನ್ನೂ ಚಿಂತಾಜನಕವಾಗಿದೆ.

ಮಳೆಗಾಲದಲ್ಲಿ ಸೊರ್ರೆಂದು ಸೋರುವ ಹುಲ್ಲಿನ ಮೇಲ್ಛಾವಣಿಯ, ಸೆಗಣಿ ಸಾರಿಸಿದ ನೆಲದ, ಇಪ್ಪತ್ತು-ಮೂವತ್ತಡಿಯ ಪರ್ಣಕುಟಿಯಲ್ಲೇ ನಮಗೆಲ್ಲ ಪ್ರಾಥಮಿಕ ಶಿಕ್ಷಣ ದೊರೆತದ್ದು. ಅದಕ್ಕೂ ಕನಿಷ್ಟ ಎರಡು ಮೂರು ಮೈಲಿ ನಡೆಯುವ ಅನಿವಾರ್ಯತೆಯಿತ್ತು. ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರೇ ಎಲ್ಲ ತರಗತಿಗಳನ್ನೂ ನಿಭಾಯಿಸುತ್ತಿದ್ದರು. ಅಲ್ಲಿ ನಾವು ಕೇಳದ ಕಥೆಗಳಿಲ್ಲ, ಆಡದ ಆಟಗಳಿಲ್ಲ. ಅಕ್ಕಪಕ್ಕದಲ್ಲಿ ಕುಳಿತಿದ್ದ ಗೆಳೆಯ ಗೆಳತಿಯರ ಜಾತಿ-ಮತ-ಪಂಥಗಳೆಲ್ಲ ಯಾವುದೆಂದು ಅಂದೂ ತಿಳಿದಿರಲಿಲ್ಲ, ಇಂದಿಗೂ ನೆನಪಿಲ್ಲ. ಎರಡೇ ಪ್ರತಿ ಬಟ್ಟೆಗಳಲ್ಲಿ ವರ್ಷಗಳೇ ಕಳೆದುಹೋಗುತ್ತಿದ್ದವು. ಅಲ್ಯುಮಿನಿಯಂ ಡಬ್ಬಗಳಲ್ಲಿ ಕಟ್ಟಿಕೊಂಡು ಹೋದ ತಂಗಳೇ ಮಧ್ಯಾಹ್ನಕ್ಕೆ ಮೃಷ್ಟಾನ್ನ ಭೋಜನವಾಗಿತ್ತು. ನಮಗಿಂತ ಮುಂದಿನ ಕ್ಲಾಸುಗಳಲ್ಲಿದ್ದ ಗೆಳೆಯರ ಹಳೇ ಪುಸ್ತಕಗಳನ್ನು ಅರ್ಧಬೆಲೆಗೆ ಕೊಳ್ಳುವುದಕ್ಕೆ ವರ್ಷದ ಮೊದಲೇ ಬುಕ್ ಮಾಡುತ್ತಿದ್ದೆವು.

ಇಂದು ಊರಿಗೊಂದು 'ಇಂಟರ್‌ನ್ಯಾಶನಲ್’ ಶಾಲೆ ಬಂದಿದೆ. ಮನೆಬಾಗಿಲಿಗೇ ಶಾಲಾವಾಹನ ಬರುತ್ತದೆ. ಮಕ್ಕಳು ಚೆಂದದ ಸೂಟುಬೂಟು ಧರಿಸಿ ಸಾವಿರಾರು ರುಪಾಯಿ ಮೌಲ್ಯದ ಫಳಫಳ ಹೊಳೆಯುವ ಪುಸ್ತಕಗಳನ್ನು ಹೊತ್ತುಕೊಂಡು ಓಡಾಡುತ್ತಾರೆ. ನಾವು ಸ್ಲೇಟು-ಬಳಪ ಹಿಡಿಯುತ್ತಿದ್ದ ಕೈಗಳಲ್ಲಿ ಈ ಮಕ್ಕಳು ಟ್ಯಾಬು ಮೊಬೈಲು ಹಿಡಿದು ಇಂಟರ್ನೆಟ್ ಜಾಲಾಡುತ್ತಿದ್ದಾರೆ. 'ಚಂದಿರನೇತಕೆ ಓಡುವನಮ್ಮ?’ ಎಂದು ಕೇಳಬೇಕಿದ್ದ ಮಕ್ಕಳು 'ಅಮ್ಮ ಲೂಸಾ ಅಪ್ಪ ಲೂಸಾ?’ ಎಂದು ಕೇಳುತ್ತಿದ್ದಾರೆ.

'ಅಹಿಂಸೆಯಂತಹ ಒಂದು ಮೌಲ್ಯವನ್ನು ಎತ್ತಿಹಿಡಿದ ನಮ್ಮ ಚಿಂತನೆಯನ್ನು ಯಾವುದೋ ಒಂದು ಆಧುನಿಕ ಅಲೆ ಹೊಡೆದುಕೊಂಡು ಹೋಗದಂತೆ ನಮ್ಮ ಶಿಕ್ಷಣ ಕಾಯಬೇಕು. ಇಲ್ಲದೆ ಹೋದರೆ ಕ್ರಮೇಣ ಇಡೀ ಭೂಮಿಯೇ ಹಿಟ್ಲರ್‌ನ ಭೂಮಿಯಾಗಿ ಪರಿಣಮಿಸುತ್ತದೆ’ ಎಂದು ಎಚ್ಚರಿಸುತ್ತಾರೆ ಜಿ. ಎಸ್. ಜಯದೇವ. ಮಕ್ಕಳಲ್ಲಿ ಶ್ರೇಷ್ಠ ಮೌಲ್ಯಗಳನ್ನು ಬಿತ್ತುವ ಹೊಣೆಗಾರಿಕೆ ಎಲ್ಲ ಹಂತಗಳ ಅಧ್ಯಾಪಕರಲ್ಲೂ ಇದೆ, ಆದರೆ ಅದರ ತಳಹದಿಯನ್ನು ರೂಪಿಸುವವರು ಪ್ರಾಥಮಿಕ ಶಾಲಾ ಶಿಕ್ಷಕರೇ. ಅಲ್ಲಿ ತಪ್ಪಿದ್ದನ್ನು ಮುಂದಿನ ಹಂತಗಳಲ್ಲಿ ತಿದ್ದುವುದು ತುಂಬ ಕಷ್ಟ. ನಮ್ಮ ಇಂಟರ್‌ನ್ಯಾಶನಲ್ ಸ್ಕೂಲುಗಳಾಗಲೀ, ಸರ್ಕಾರಿ ಶಾಲೆಗಳಾಗಲೀ ಈ ಜವಾಬ್ದಾರಿಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿವೆ?

ಮಕ್ಕಳನ್ನು 'ಸ್ಮಾರ್ಟ್’ ಮಾಡುವುದೇ ತಮ್ಮ ಏಕೈಕ ಧ್ಯೇಯವಾಗಿಸಿಕೊಂಡಿರುವ ಕಾರ್ಪೋರೇಟ್ ಶಾಲೆಗಳೆಂಬ ದುಡ್ಡಿನ ಟಂಕಸಾಲೆಗಳು, ಯಾರನ್ನೂ ಯಾವ ಕ್ಲಾಸಿನಲ್ಲೂ ಫೇಲ್ ಮಾಡಬಾರದು ಎಂದಷ್ಟೇ ಭಾವಿಸಿರುವ ಅಳಿವು ಉಳಿವಿನ ಹೋರಾಟದಲ್ಲಿರುವ ಸರ್ಕಾರಿ ಶಾಲೆಗಳು- ಇವೆರಡರ ನಡುವೆ ಅಂತಹ ದೊಡ್ಡ ವ್ಯತ್ಯಾಸವೇನೂ ಕಾಣುವುದಿಲ್ಲ. ಮಕ್ಕಳಿಗೆ ಒಳ್ಳೆಯ ಭಾಷೆ ಕಲಿಸಬೇಕು, ಮೌಲ್ಯಗಳನ್ನು ಬಿತ್ತಬೇಕು, ಭವಿಷ್ಯದ ಬಗ್ಗೆ ಆಶಾವಾದ ಬೆಳೆಸಬೇಕು ಎಂಬ ನೈಜ ಕಾಳಜಿ ಎಷ್ಟು ಶಾಲೆಗಳಿಗಿದೆ, ಎಷ್ಟು ಮಂದಿ ಅಧ್ಯಾಪಕರಿಗಿದೆ? ಇಂತಹವರು ಇಲ್ಲವೇ ಇಲ್ಲ ಎಂದಲ್ಲ. ತಮ್ಮ ವಿದ್ಯಾರ್ಥಿಗಳ ಬಗ್ಗೆ ಅಪಾರ ಪ್ರೀತಿ, ಅವರ ಭವಿಷ್ಯ ಬಗ್ಗೆ ಹೇರಳ ಕಾಳಜಿಯಿರುವ ಗುರುಗಳೂ ಒಂದಷ್ಟು ಮಂದಿ ಸಿಗುತ್ತಾರೆ. ಆದರೆ ಅವರೆಲ್ಲ ಬೆತ್ತಲೆ ಬದುಕುವವರ ಊರಲ್ಲಿ ವಸ್ತ್ರದ ವ್ಯಾಪಾರಿಗಳಂತೆ ಆಗಿಬಿಟ್ಟಿದ್ದಾರೆ.

ಶಾಲೆಗಳಲ್ಲಿ ಯೋಗ ಶಿಕ್ಷಣ, ನೈತಿಕ ಶಿಕ್ಷಣ ಬೇಕೆಂಬ ಒತ್ತಾಯ ಕೇಳಿ ಬಂದಾಗಲೆಲ್ಲ ಅದು ವಿವಾದದ ವಿಷಯವೇ ಆಗುತ್ತದೆ. ಶೈಕ್ಷಣಿಕ ವಿಷಯಕ್ಕಿಂತಲೂ ಅದನ್ನೊಂದು ರಾಜಕೀಯ ವಿಷಯವನ್ನಾಗಿ ನೋಡುವವರೇ ಹೆಚ್ಚು. ರಾಮಾಯಣ-ಮಹಾಭಾರತಗಳಂತಹ ಮಹಾಕಾವ್ಯಗಳು ಕಟ್ಟಿಕೊಡುವ ಮೌಲ್ಯಗಳು ಮಕ್ಕಳನ್ನು ಮತಾಂಧರನ್ನಾಗಿಯೋ ಮಾನವವಿರೋಧಿಗಳನ್ನಾಗಿಯೋ ಮಾಡುತ್ತವೆಂದು ಅದು ಹೇಗೆ ವಾದಗಳು ಹುಟ್ಟಿಕೊಳ್ಳುತ್ತವೆಯೋ ಅರ್ಥವಾಗುವುದಿಲ್ಲ. ಸರ್ಕಾರಗಳು ಬದಲಾದಂತೆ ಪಠ್ಯಪುಸ್ತಕಗಳೂ ಬದಲಾಗುವ ದಯನೀಯ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಭಾರತವನ್ನು ದಾಸ್ಯದಲ್ಲೇ ಮುಂದುವರಿಸಬೇಕೆಂದರೆ ಅದರ ಶಿಕ್ಷಣ ಪದ್ಧತಿಯನ್ನು ಬದಲಾಯಿಸಬೇಕೆಂದು ಶಿಫಾರಸು ಮಾಡಿದನಂತೆ ಮೆಕಾಲೆ. ಪಠ್ಯಪುಸ್ತಕಗಳನ್ನೂ ಸಿದ್ಧಾಂತದ ಕನ್ನಡಕಗಳಿಂದ ನೋಡಿ ತಮ್ಮ ಮೂಗಿನ ನೇರಕ್ಕೆ ಬದಲಾಯಿಸುವವರೂ ಅದೇ ಮೆಕಾಲೆಯ ಮೊಮ್ಮಕ್ಕಳೇ ಅಲ್ಲವೇ?

ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಹುಡುಗಿಯೊಬ್ಬಳ ಗೆಳೆತನದ ವಿಷಯದಲ್ಲಿ ಸಹಪಾಠಿಗಳ ನಡುವೆ ಇದ್ದ ವೈಷಮ್ಯವೇ ಯಲಹಂಕದ ಘಟನೆಗೆ ಕಾರಣ. ಪ್ರೌಢಶಾಲಾ ಹಂತದಲ್ಲೇ ನಮ್ಮ ಹುಡುಗರು ಪ್ರೀತಿ-ಪ್ರೇಮದಂತಹ ವಿಚಾರಗಳತ್ತ ಮನಸ್ಸು ಹರಿಸಿ ಅಪ್ರಬುದ್ಧ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆಂದರೆ ಅವರಲ್ಲಿ ಸದ್ಬುದ್ಧಿಯನ್ನೂ ಸದಭಿರುಚಿಯನ್ನೂ ಮೂಡಿಸುವುದಕ್ಕೆ ನಮ್ಮ ಶಿಕ್ಷಣ ಪದ್ಧತಿ ವಿಫಲವಾಗಿದೆಯೆಂದೇ ಅರ್ಥ.

ಒಂದೆಡೆ ಜಾಗತೀಕರಣದ ಸಮಾಜ ಬಯಸುವ ಸಿದ್ಧಸರಕುಗಳನ್ನು ಉತ್ಪಾದಿಸಿಕೊಡುವ ಶಾಲಾ ಕಾರ್ಖಾನೆಗಳು, ಇನ್ನೊಂದೆಡೆ ಮಕ್ಕಳ ಮನಸ್ಸು ಅರಳಿಸದ, ನೈತಿಕತೆ, ಪ್ರಾಮಾಣಿಕತೆ, ಮೌಲ್ಯಚಿಂತನೆಗಳನ್ನು ಉದ್ದೀಪಿಸದ ಶಿಕ್ಷಣ ಪದ್ಧತಿ- ಇವೆರಡು ಅಂಚುಗಳ ನಡುವೆ ನಾವು ದಿಗ್ಮೂಢರಾಗಿ ನಡೆಯುತ್ತಿದ್ದೇವೆ. ಇಂತಹ ನಿರಾಶಾವಾದ ಒಳ್ಳೆಯದಲ್ಲ ನಿಜ. ಆದರೆ ಬೆಳಕಿನ ದಾರಿ ಎಲ್ಲಿದೆ?

ಗುರುವಾರ, ಮಾರ್ಚ್ 9, 2017

ಅತಿರೇಕ ನಮ್ಮ ಯುಗಧರ್ಮವೇ?

ಮಾರ್ಚ್ 6, 2017ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಸಮಾಜದ ಎಲ್ಲ ರಂಗಗಳಲ್ಲೂ ಒಂದು ಬಗೆಯ ಅತಿರೇಕ ಮನೆಮಾಡಿಕೊಂಡುಬಿಟ್ಟಿದೆ. ನಮ್ಮ ದಿನನಿತ್ಯದ ಚಟುವಟಿಕೆಗಳಿಂದ ತೊಡಗಿ ನಾವು ಬದುಕುತ್ತಿರುವ ಒಟ್ಟಾರೆ ಸಾಮಾಜಿಕ ಸಂದರ್ಭದ ಎಲ್ಲ ಕ್ಷೇತ್ರಗಳಲ್ಲೂ ಒಂದು ರೀತಿಯ ಸಮೂಹಸನ್ನಿ ಮತ್ತು ತೀವ್ರಗಾಮಿತ್ವ ಎದ್ದು ಕಾಣಿಸುತ್ತಿದೆ. ಎಲ್ಲ ಅತಿರೇಕಗಳನ್ನೂ ತಹಬದಿಗೆ ತರುವ ಶಕ್ತಿ ಪ್ರಕೃತಿಗಿದೆ ಎನ್ನುತ್ತಾರೆ. ಆದರೆ ದಿನೇದಿನೇ ಈ ಯುದ್ಧೋನ್ಮಾದದ ಮನೋಭಾವ ಹೆಚ್ಚುತ್ತಿದೆಯೇ ಹೊರತು ಸಹಜತೆಗೆ ಬರುವ ಯಾವ ಸೂಚನೆಗಳೂ ಕಾಣಿಸುತ್ತಿಲ್ಲ. ಇದು ಹೀಗೆಯೇ ಇದ್ದರೆ ಯಾವರೀತಿ ಕೊನೆಗೊಂಡೀತು? ಈ ಅತಿರೇಕವೇ ನಮ್ಮ ಕಾಲದ ಪ್ರಮುಖ ಲಕ್ಷಣವೇ?

ಜನರ ನಡುವೆ ರಾಜಕೀಯ-ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಎಲ್ಲ ಕಾಲದಲ್ಲೂ ಇದ್ದದ್ದೇ. ಆದರೆ ಅವುಗಳನ್ನು ಅಭಿವ್ಯಕ್ತಿಸುವುದಕ್ಕೆ ಅದರದ್ದೇ ಆದ ವಿಧಾನಗಳಿವೆ. ಆರೋಗ್ಯಕರ ಟೀಕೆ, ಚರ್ಚೆಗಳು ಯಾವಾಗಲೂ ಅಪೇಕ್ಷಣೀಯವೇ. ಆದರೆ ಇಂತಹದೊಂದು ವಾತಾವರಣದಿಂದ ನಾವು ಬಹುದೂರ ಸಾಗಿಬಿಟ್ಟಿದ್ದೇವೆ ಎನಿಸುವುದಿಲ್ಲವೇ?

ಯಾರಿಗೂ ಇನ್ನೊಬ್ಬನ ಅನಿಸಿಕೆ-ಅಭಿಪ್ರಾಯಗಳನ್ನು ಕೇಳುವ ವ್ಯವಧಾನ ಇಲ್ಲ. ಎಲ್ಲರೂ ತಾವು ಹಾಕಿಕೊಂಡಿರುವ ಚೌಕಟ್ಟಿನೊಳಗೆ ಬಂಧಿಗಳಾಗಿದ್ದಾರೆ. ಅಲ್ಲಿಂದ ತಾತ್ಕಾಲಿಕವಾಗಿಯಾದರೂ ಒಂದು ಹೆಜ್ಜೆ ಈಚೆ ಬಂದು ತಮ್ಮ ಕನ್ನಡಕವನ್ನು ತೆಗೆದು ನೋಡುವ ಮನೋಭಾವವನ್ನು ಜನ ಕಳೆದುಕೊಂಡುಬಿಟ್ಟಿದ್ದಾರೆ ಎನಿಸುತ್ತದೆ.

ಪ್ರತೀ ವಾದಕ್ಕೂ ಪ್ರತಿವಾದವನ್ನು ಹೂಡುವ, ಪ್ರತೀ ಟೀಕೆಗೂ ಉತ್ತರಿಸಲೇಬೇಕೆಂಬ ಹಠದಿಂದಾಗಿ ಸಮಾಜದಲ್ಲೊಂದು ಯುದ್ಧೋನ್ಮಾದತೆ ಸೃಷ್ಟಿಯಾಗಿಬಿಟ್ಟಿದೆ. ತಾವು ಹೇಳುತ್ತಿರುವುದೇ ಪರಮಸತ್ಯ, ಉಳಿದವರು ಮಾತನಾಡುತ್ತಿರುವುದು ಬರೀ ಬೊಗಳೆ ಎಂಬ ಮನೋಭಾವದಿಂದಾಗಿ ಇನ್ನೊಬ್ಬ ಹೇಳುವುದನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಇವರಲ್ಲಿಲ್ಲದೇ ಹೋಗಿದೆ.
ರಾಜಕೀಯ ಪಕ್ಷಗಳು ತಮ್ಮ ಎದುರಾಳಿಗಳನ್ನು ಸೋಲಿಸುವ ಉದ್ದೇಶ ಹೊಂದಿಲ್ಲ, 'ಮುಗಿಸಿಬಿಡುವ’ ಬಗ್ಗೆ ಮಾತಾಡುತ್ತಿವೆ. ಪ್ರತೀ ಪಕ್ಷವೂ ಇನ್ನೊಂದು ಪಕ್ಷವನ್ನು ರಾಜ್ಯದಿಂದಲೋ ದೇಶದಿಂದಲೋ 'ಮುಕ್ತ’ವಾಗಿಸಬೇಕೆಂದು ಕರೆನೀಡುತ್ತಿದೆ.

ಆರೋಗ್ಯಕರ ರಾಜಕೀಯ ಚರ್ಚೆಗಳು ನಿಂತುಹೋಗಿ ವರ್ಷಗಳೇ ಕಳೆದಿವೆ. ಈಗೇನಿದ್ದರೂ ಬೆಂಕಿಯುಗುಳುವ, ವಿಷಕಾರುವ ಹುಮ್ಮಸ್ಸೇ. ಹಗರಣಗಳನ್ನು ಹೊರಗೆಳೆಯುವುದರ ಹಿಂದೆ ಪ್ರಜಾಪ್ರಭುತ್ವದ ಒಳಿತಿಗಿಂತಲೂ ಇನ್ನೊಂದು ಪಕ್ಷವನ್ನು ನಿರ್ನಾಮಗೊಳಿಸುವ ಉದ್ದೇಶವೇ ಹೆಚ್ಚು ಮುಖ್ಯವಾದಂತೆ ಇದೆ. ಈ ಜಿದ್ದಿನ ನಡುವೆ ನಕಲಿ ಯಾವುದು ಅಸಲಿ ಯಾವುದು ಎಂದು ಜನಸಾಮಾನ್ಯರು ಗೊಂದಲಕ್ಕೆ ಬಿದ್ದಿದ್ದಾರೆ ಅಷ್ಟೇ.

ಯುದ್ಧಭೂಮಿಗೂ ತನ್ನದೇ ಆದ ನೀತಿನಿಯಮಗಳಿರುತ್ತವೆ. ಸೋಲಿಸುವುದೇ ಬೇರೆ ಮುಗಿಸುವುದೇ ಬೇರೆ. ಎದುರಾಳಿಯನ್ನು ಸೋಲಿಸುವುದರಿಂದ ಕೊಲ್ಲುವುದರತ್ತ ನಮ್ಮ ಮನೋಭಾವ ಬದಲಾದದ್ದು ಯಾವಾಗ?

ಈ 'ಮುಗಿಸಿಬಿಡುವ’ ಚಿಂತನೆಯೇ ಇಡೀ ಸಮಾಜವನ್ನು ಆಳುತ್ತಿದೆ. ಜಾತಿ, ಧರ್ಮ, ಪಕ್ಷ, ಪಂಥ, ಪಂಗಡ, ಜನಾಂಗ, ಪ್ರದೇಶಗಳ ಹಿನ್ನೆಲೆಯಲ್ಲಿ ಯೋಚಿಸುವವರೆಲ್ಲ ತಮ್ಮ ಎದುರಿನ ವ್ಯಕ್ತಿಯನ್ನು ಇಲ್ಲವಾಗಿಸುವ ಬಗ್ಗೆಯೇ ಯೋಚಿಸುತ್ತಿದ್ದಾರೆ. ಮೂಲಭೂತವಾದ ಈ ಅತಿಯನ್ನು ತಲುಪುವುದಕ್ಕೆ ಇಂತಹ ಮನೋಭಾವಗಳೇ ಕಾರಣ. ಕೇವಲ ಜಾತಿ-ಧರ್ಮಗಳೇ ಅಸ್ಮಿತೆಯಾಗಿಲ್ಲದ ಸಮಾಜವೊಂದರ ನಿರ್ಮಾಣ ಎಂದಾದರೂ ಸಾಧ್ಯವಿದೆಯೋ ಗೊತ್ತಿಲ್ಲ, ಆದರೆ ಈ ಜಾತಿ-ಧರ್ಮ-ಪಂಥ-ಪಂಗಡಗಳು ಒಂದನ್ನೊಂದು ದ್ವೇಷಿಸದೆ ಬದುಕುವ ಸಮಾಜವನ್ನಾದರೂ ನಾವು ಕಾಣಲಾರೆವೇ?

ಈಗಿನ ಪರಿಸ್ಥಿತಿಯನ್ನು ನೋಡಿದರೆ ಇಂತಹದೊಂದು ಆಶಾವಾದಕ್ಕೆ ಎಡೆಯೇ ಇಲ್ಲವೇನೋ ಅನಿಸುತ್ತಿದೆ. ಜಾತಿಸಂಘಟನೆಗಳು ದಿನೇದಿನೇ ಬಲವಾಗುತ್ತಿವೆ. ಜನರ ನಡುವೆ ಜಾತಿ-ಧರ್ಮಗಳ ಅಸ್ಮಿತೆಯನ್ನು ಇನ್ನಷ್ಟು ಜಾಗೃಗೊಳಿಸುವ ಅಥವಾ ಕೆರಳಿಸುವ ಪ್ರಯತ್ನಗಳೇ ಹೆಚ್ಚುಹೆಚ್ಚು ನಡೆಯುತ್ತಿವೆ. ಪ್ರತೀ ಜಾತಿಗಳವರೂ ತಮ್ಮ ಜಾತಿಯೇ ಹೆಚ್ಚು ಬಲಿಷ್ಟವಾದುದೆಂದು ಬಿಂಬಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ಜಾತಿ-ಧರ್ಮಗಳ ಆಧಾರದ ಸಮಾವೇಶಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ. ಇವುಗಳನ್ನು ಹೆಚ್ಚು ವಿಜೃಂಭಣೆಯಿಂದ ನಡೆಸುವ ಬಗ್ಗೆ ಸಂಘಟನೆಗಳು ಸ್ಪರ್ಧೆಗೆ ಬಿದ್ದಿವೆ. ಸಮಾಜದಲ್ಲಿ ಸಾಕ್ಷರತೆ, ವಿದ್ಯೆ ಬೆಳೆದಂತೆ ಇವೆಲ್ಲ ಕಡಿಮೆಯಾಗಬಹುದೇ ಎಂಬ ಆಸೆ ನಮ್ಮ ಹಿರಿಯರಿಗೆ, ದಾರ್ಶನಿಕರಿಗೆ ಇತ್ತು. ದುರದೃಷ್ಟವಶಾತ್ ಜನ ಶಿಕ್ಷಿತರಾದಷ್ಟೂ ಈ ಸಂಕುಚಿತತೆ ಮತ್ತು ಮೂಲಭೂತವಾದ ಹೆಚ್ಚು ಗಟ್ಟಿಯಾಗುತ್ತಲೇ ಹೋಗುತ್ತಿದೆ. ಜಾತಿಗಳು ನಿರ್ನಾಮವಾಗಲಿ ಎಂದು ಹೋರಾಡುವವರ ಧ್ವನಿಯಲ್ಲೂ ಸಮಾನತೆಯ ಬೇಡಿಕೆಗಿಂತಲೂ ರೋಷವೇ ಹೆಚ್ಚು ದಟ್ಟವಾಗಿ ಕಾಣಿಸುತ್ತದೆ. ಸಂಘಟಿತರಾಗುವುದು ಈ ಕಾಲದ ಅನಿವಾರ್ಯತೆಯೇನೋ ಹೌದು, ಆದರೆ ಜನ ಸಂಘಟಿತರಾಗಬೇಕಿರುವುದು ಯಾವುದಕ್ಕಾಗಿ?

ವಿದ್ಯಾರ್ಥಿ ಸಂಘಟನೆಗಳು ಜಾತಿ-ಉಪಜಾತಿಗಳ ಹೆಸರಲ್ಲಿ ಒಡೆದುಹೋಗಿವೆ ಇಲ್ಲವೇ ಯಾವುದೋ ರಾಜಕೀಯ ಪಕ್ಷಗಳ ಮುಖವಾಣಿಗಳಾಗಿವೆ. ಅವು ಚಳುವಳಿಗಳ ಭಾಗವಾಗಿ ಉಳಿದಿಲ್ಲ. ಮತ್ತೆ ಯಾವುದೋ ಒಂದು ಅತಿಯ ನಡುವೆ ಹೊಯ್ದಾಡುತ್ತಿವೆ. ಅಲ್ಲಿಯೂ ಒಂದು ಇನ್ನೊಂದನ್ನು ಮುಗಿಸುವ ಮನೋವೃತ್ತಿಯೇ ಪ್ರಬಲವಾಗಿದೆಯೇ ಹೊರತು ವಿದ್ಯಾರ್ಥಿ ಸಮುದಾಯದ ಒಟ್ಟಾರೆ ಒಳಿತಿನ ಆಶಯ ಕಾಣಿಸುತ್ತಿಲ್ಲ.

ಅತಿಯಾದರೆ ಅಮೃತವೂ ವಿಷ ಎಂಬ ಜಗತ್ಪ್ರಸಿದ್ಧ ಮಾತೇ ಇದೆ. ಇದೇ ಅತಿಗಳೇ ಅಲ್ಲವೇ ನಮ್ಮ ಸುತ್ತಲಿನ ಬದುಕನ್ನು ತುಂಬಿರುವ ವಿಷ? ಬೇರೆ ಕ್ಷೇತ್ರಗಳೇಕೆ, ನಮ್ಮ ನಿತ್ಯದ ಬದುಕಿನ ಇಂಚಿಂಚನ್ನೂ ಆವರಿಸಿಕೊಂಡಿರುವ ಮಾಧ್ಯಮಗಳು, ಸಿನಿಮಾ, ಜಾಹೀರಾತುಗಳೆಲ್ಲ ಈ ಅತಿಗಳ ಪ್ರತಿಫಲನಗಳೇ ಅಲ್ಲವೇ? ಒಂದು ಚಾನೆಲ್‌ಗಿಂತ ಇನ್ನೊಂದು ಚಾನೆಲ್, ಒಂದು ಪತ್ರಿಕೆಗಿಂತ ಇನ್ನೊಂದು ಪತ್ರಿಕೆ ಹೆಚ್ಚು ಮಂದಿಯನ್ನು ಸೆಳೆಯಬೇಕೆಂಬ ಸ್ಪರ್ಧೆ, ಒಂದನ್ನೊಂದು ಮೀರಿಸುವ ಶೀರ್ಷಿಕೆಗಳು ಇವು ಏನನ್ನು ಸೂಚಿಸುತ್ತವೆ?

ಸಮಾಜದ ವಿವಿಧ ಹಂತಗಳಲ್ಲಿ ಮನೆಮಾಡಿರುವ ಯುದ್ಧೋನ್ಮಾದ ಅನೇಕ ಪತ್ರಿಕೆ-ಚಾನೆಲ್‌ಗಳು ಬಳಸುವ ಭಾಷೆಯಲ್ಲೇ ವ್ಯಕ್ತವಾಗುವುದಿಲ್ಲವೇ? ಒಂದು ಸಮಾವೇಶವನ್ನೋ ರ‍್ಯಾಲಿಯನ್ನೋ ರಾಜಕೀಯ ವಾಗ್ವಾದವನ್ನೋ ಹಗರಣವನ್ನೋ ವರದಿ ಮಾಡುತ್ತಲೇ ತಾವೇ ಸ್ವತಃ ಅಂತಹದೊಂದು ಉನ್ಮಾದದೊಳಗೆ ಸಿಲುಕಿಹೋಗುವ ಬಹುಪಾಲು ಮಾಧ್ಯಮಗಳು ಇನ್ನೂ ವಸ್ತುನಿಷ್ಠತೆಯನ್ನು ಕಾಯ್ದುಕೊಂಡಿವೆ ಎಂದು ಅನಿಸುತ್ತದೆಯೇ?

ಪ್ರತಿಯೊಂದನ್ನೂ ಅತಿಯಾಗಿ ತೋರಿಸಲು ಹೊರಟಿರುವ ಸಿನಿಮಾಗಳೂ ಈ ಪಟ್ಟಿಯಿಂದ ಹೊರಗಿಲ್ಲ. ಹಿಂಸೆ-ಅಪರಾಧಗಳ ವೈಭವೀಕರಣವೇ ಅನೇಕ ಸಿನಿಮಾಗಳ ಬಂಡವಾಳವಾದರೆ, ಉಪಭೋಗಿ ಸಂಸ್ಕೃತಿಯ ವಿಜೃಂಭಣೆ ಜಾಹೀರಾತುಗಳ ಹೂರಣ. ಹೆಚ್ಚು ತಿನ್ನಿ, ಹೆಚ್ಚು ಖರ್ಚು ಮಾಡಿ, ಹೆಚ್ಚು ಆನಂದಿಸಿ ಎಂದು ಜನರಿಗೆ ಹುಚ್ಚು ಹಿಡಿಸುವ ಜಾಹೀರಾತುಗಳು, ಮನರಂಜನೆಯ ಹೆಸರಿನಲ್ಲಿ ಟಿವಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳು, ಗೇಮ್ ಶೋಗಳು, ಮೆಗಾಧಾರಾವಾಹಿಗಳು, ಹಾಸ್ಯಕಾರ್ಯಕ್ರಮಗಳು ಎಲ್ಲದರಲ್ಲೂ ಒಂದು ಬಗೆಯ ಅತಿರೇಕವೇ ಸ್ಥಾಯೀಗುಣವಾಗಿಬಿಟ್ಟಿದೆ.

ಸಾಮಾಜಿಕ ಮಾಧ್ಯಮಗಳಂತೂ ಈ ಒಟ್ಟಾರೆ ವಿಷಮತೆಯ ನಿಲುವುಗನ್ನಡಿಗಳಾಗಿವೆ. ಯಾವ ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್‌ಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ರಹದಾರಿಗಳಾಗಿದ್ದವೋ, ಅವೇ ಮಾಧ್ಯಮಗಳು ಇಂದು ಎಲ್ಲ ಬಗೆಯ ಅತಿರೇಕಗಳ ಮೂಸೆಗಳಾಗಿವೆ. ಪರ್ಯಾಯ ಮಾಧ್ಯಮಗಳಾಗಿ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸುವ ಎಲ್ಲ ಸಾಧ್ಯತೆಗಳೂ ಸಾಮಾಜಿಕ ಜಾಲತಾಣಗಳಿಗಿವೆ. ಆದರೆ ಆ ಉದ್ದೇಶವನ್ನೇ ಬುಡಮೇಲು ಮಾಡುವ ಹಾಗೆ ಪರಸ್ಪರ ದ್ವೇಷಕಾರುವ, ಕಿಡಿಹೊತ್ತಿಸುವ ವೇದಿಕೆಗಳಾಗಿ ಇವು ಬಳಕೆಯಾಗುತ್ತಿರುವುದು ಆತಂಕಕಾರಿ.

ಫೇಸ್‌ಬುಕ್ಕಿನ ರಾಜಕೀಯ-ಸೈದ್ಧಾಂತಿಕ ಚರ್ಚೆಗಳು ಆರೋಗ್ಯಕರ ಸಂವಾದಗಳಾಗಿ ಉಳಿದಿಲ್ಲ. ಇನ್ನೊಬ್ಬನ ವಾದವನ್ನು ಆಲಿಸುವ, ಅದಕ್ಕೆ ಸಂಯಮದಿಂದ ಉತ್ತರ ನೀಡುವ, ಪ್ರತಿವಾದವನ್ನು ಮಂಡಿಸುವ ಪ್ರಕ್ರಿಯೆ ಎಂದೋ ನಿಂತುಹೋಗಿದೆ. ಅಲ್ಲಿ ಏನಿದ್ದರೂ ಪ್ರತಿವಾದಿಯನ್ನು ವೈಯುಕ್ತಿಕವಾಗಿ ಹೀಗಳೆಯುವ, ಏಕವಚನದಲ್ಲಿ ನಿಂದಿಸುವ, ಅಸಭ್ಯ ಭಾಷೆಯಿಂದ ಲೇವಡಿ ಮಾಡುವ ಚಟುವಟಿಕೆಗಳೇ ನಿರಂತರವಾಗಿವೆ. ಕಮೆಂಟುಗಳಲ್ಲೆಲ್ಲ ತಮಗೆ ಅಪಥ್ಯವಾದ ಮಾತನ್ನಾಡಿದವನನ್ನು ಕೊಚ್ಚಿಹಾಕುವ, ಗುಂಡಿಟ್ಟುಕೊಲ್ಲುವ ಈರ್ಷ್ಯೆ ಹೊಗೆಯಾಡುತ್ತಿದೆ. ಈ ವಿಷಯದಲ್ಲಿ ಸಿದ್ಧಾಂತ, ಪಕ್ಷಗಳ ಭೇದವಿಲ್ಲ; ಎಲ್ಲರೂ ಒಂದೇ ಬಗೆಯ ಸಮೂಹ ಸನ್ನಿಯಲ್ಲಿ ಬೇಯುತ್ತಿದ್ದಾರೆ. ಬಿಸಿರಕ್ತದ ತರುಣರಷ್ಟೇ ಇಂತಹದರಲ್ಲಿ ತೊಡಗಿದ್ದರೆ ಅದೊಂದು ವಯೋಸಹಜ ಲಕ್ಷಣವೆಂದು ಸುಮ್ಮನಾಗಬಹುದಿತ್ತು. ಆದರೆ ಅವರನ್ನು ಸಹನೆಯಿಂದ ಮಾತನಾಡಿಸಿ ಸಾವಧಾನವಾಗಿ ಉತ್ತರಿಸಬೇಕಾದ ವಯಸ್ಸಿನವರೂ ಬೀದಿರೌಡಿಗಳಂತೆ ಕಾಳಗಕ್ಕೆ ನಿಲ್ಲುವ ಪ್ರವೃತ್ತಿ ಬೆಳೆಸಿಕೊಂಡರೆ ಏನು ಮಾಡೋಣ?

ಯಾಕೆ ನಮ್ಮ ಸುತ್ತಮುತ್ತ ಇಂತಹದೊಂದು ವಿಲಕ್ಷಣ ಸಮಾಜ ನಿರ್ಮಾಣವಾಗುತ್ತಿದೆ? ನಾವು ಎಡವಿದ್ದೆಲ್ಲಿ? ಶಿಕ್ಷಣದಲ್ಲೇ ಅಥವಾ ಒಟ್ಟಾರೆ ಸಾಮಾಜೀಕರಣದ ಪ್ರಕ್ರಿಯೆಯಲ್ಲೇ? ಇದು ಕೇವಲ ನಮ್ಮ ರಾಜ್ಯ, ದೇಶದ ಸಮಸ್ಯೆ ಅಲ್ಲ. ಇಡೀ ಪ್ರಪಂಚ ಎದುರಿಸುತ್ತಿರುವ ಅಪಾಯ. ಅಮೇರಿಕದಲ್ಲಿ ನಡೆಯುತ್ತಿರುವ ಭಾರತೀಯರ ಮೇಲಿನ ದಾಳಿಯೂ ಇದರದ್ದೇ ಒಂದು ಭಾಗ. ಅತಿರೇಕವೇ ನಮ್ಮ ಯುಗಧರ್ಮವಾಗಿಹೋಯಿತೇ?

ಶುಕ್ರವಾರ, ಮಾರ್ಚ್ 3, 2017

ಹಾದಿತಪ್ಪುತ್ತಿವೆಯೇ ವಿದ್ಯಾರ್ಥಿ ಚಳುವಳಿಗಳು?

'ಉದಯವಾಣಿ' ಜೋಶ್ ಪುರವಣಿಯಲ್ಲಿ 28-02-2017ರಂದು ಪ್ರಕಟವಾದ ಲೇಖನ

ತರಗತಿಗಳೆಲ್ಲ ಶಾಂತವಾಗಿ ನಡೆಯುತ್ತಿದ್ದವು. ವಿದ್ಯಾರ್ಥಿಗಳು, ಅಧ್ಯಾಪಕರು ಅವರವರ ಕೆಲಸಗಳಲ್ಲಿ ತಲ್ಲೀನರಾಗಿದ್ದರು. ಇದ್ದಕ್ಕಿದ್ದಂತೆ ಹೊರಗಿನ ರಸ್ತೆಯಲ್ಲಿ ಗೌಜು ಗಲಾಟೆ. ಕೊಂಚ ಹೊತ್ತಲ್ಲೇ ಆ ಸದ್ದು ಕಾಲೇಜಿನ ಮಹಾದ್ವಾರದಲ್ಲಿ, ಇನ್ನೂ ಐದು ನಿಮಿಷಕ್ಕೆ ಅದು ಕಾಲೇಜಿನ ಮೈದಾನದಲ್ಲೇ ಕೇಳಿಸತೊಡಗಿತು. ಒಂದಷ್ಟು ಯುವಕರು ಘೋಷಣೆಗಳನ್ನು ಕೂಗುತ್ತಾ ಧಡಧಡನೆ ಮೆಟ್ಟಿಲೇರಿ ಕಾರಿಡಾರುಗಳಲ್ಲಿ ಓಡಾಡಲಾರಂಭಿಸಿದರು. ತರಗತಿ ಕೊಠಡಿಗಳಿಗೂ ಪ್ರವೇಶಿಸಿ ಅಧ್ಯಾಪಕರುಗಳನ್ನೆಲ್ಲ ಪಾಠ ನಿಲ್ಲಿಸುವಂತೆ ಸೂಚಿಸಿ ವಿದ್ಯಾರ್ಥಿಗಳು ತಮ್ಮೊಡನೆ ಪ್ರತಿಭಟನೆಗೆ ಬರುವಂತೆ ಒತ್ತಾಯಿಸಿದರು.

ಮೇಸ್ಟ್ರುಗಳು ಮೂಕಪ್ರೇಕ್ಷಕರಂತೆ ನೋಡುತ್ತಾ ನಿಲ್ಲದೆ ಬೇರೆ ದಾರಿಯಿರಲಿಲ್ಲ. ಒಂದಷ್ಟು ವಿದ್ಯಾರ್ಥಿಗಳು ಆ ಯುವಕರ ಗುಂಪನ್ನು ಸೇರಿಕೊಂಡರೆ, ಇನ್ನೂ ಒಂದಷ್ಟು ಮಂದಿ ಅಲ್ಲಿ ಇಲ್ಲಿ ಚದುರಿಕೊಂಡರು. ಕೆಲವರು ಮನೆಯ ಹಾದಿ ಹಿಡಿದರೆ ಇನ್ನು ಕೆಲವರು ಸುಲಭದ ಕಾಲಯಾಪನೆಯ ಖುಷಿಯಲ್ಲಿ ಮಾಯವಾದರು. ಅಲ್ಲಿಗೆ ಆ ದಿನದ ಪಾಠಪ್ರವಚನಗಳು ಮುಕ್ತಾಯವಾದಂತೆಯೇ!

'ಏನ್ ವಿಷ್ಯಾನಪ್ಪಾ?’ ಅಂತ ಆಮೇಲೆ ಎದುರಿಗೆ ಸಿಕ್ಕಿದ ಒಂದೆರಡು ಹುಡುಗ ಹುಡುಗಿಯರನ್ನು ಸುಮ್ಮನೇ ವಿಚಾರಿಸಿದೆ. 'ಏನೋ ಗೊತ್ತಿಲ್ಲ ಸಾರ್. ಅವರೆಲ್ಲ ಬರ್ರೋ ಅಂತ ಎಳಕೊಂಡು ಹೋದ್ರು. ನಾವೂ ಬೇರೆ ದಾರಿ ಇಲ್ದೆ ಧಿಕ್ಕಾರ ಹೇಳ್ಕೊಂಡು ಸ್ವಲ್ಪ ದೂರ ಹೋಗಿ ಬಂದ್ವಿ’ ಅಂತ ಅಮಾಯಕರಾಗಿ ಮುಖಮುಖ ನೋಡಿಕೊಂಡರು ಆ ವಿದ್ಯಾರ್ಥಿಗಳು.
ವರ್ಷದಲ್ಲಿ ಕನಿಷ್ಠ ನಾಲ್ಕೋ ಐದೋ ಬಾರಿ ಇಂತಹ ಘಟನೆಗಳು ನಡೆಯುವುದು ಈಚೀಚೆಗೆ ಸಾಮಾನ್ಯ. ತಾವೇನು ಮಾಡುತ್ತಿದ್ದೇವೆ ಎಂಬುದನ್ನು ಸಂಘಟಕರಾಗಲೀ ಭಾಗವಹಿಸಿದವರಾಗಲೀ ತಿಳಿದುಕೊಂಡಂತೆ ಇರುವುದಿಲ್ಲ. ಮರುದಿನ ಪತ್ರಿಕೆಗಳಲ್ಲಿ ಮೂರು ಕಾಲಂ ಸುದ್ದಿ ಬಂದಲ್ಲಿಗೆ ಅವರಿಗೆ ಒಂದು ರೀತಿಯ ಸಮಾಧಾನ.

ವಿದ್ಯಾರ್ಥಿ ಸಂಘಟನೆಗಳಾಗಲೀ ಅವರ ಆಂದೋಲನಗಳಾಗಲೀ ಮರಳಿನಿಂದ ನೀರು ಹಿಂಡುವ ಕೆಲಸ ಮಾಡುತ್ತಿವೆ ಎಂದು ನಾನು ಹೇಳುತ್ತಿಲ್ಲ. ವಿದ್ಯಾರ್ಥಿ ಚಳುವಳಿಗಳಿಗೆ ನಮ್ಮ ಇತಿಹಾಸದಲ್ಲಿ ಅವುಗಳದ್ದೇ ಆದ ಸ್ಥಾನ ಇದೆ. ಸ್ವಾತಂತ್ರ್ಯ ಹೋರಾಟದಿಂದ ತೊಡಗಿ ಇಂದಿನವರೆಗೂ ಹತ್ತುಹಲವು ಆಂದೋಲನಗಳಲ್ಲಿ ವಿದ್ಯಾರ್ಥಿ ಶಕ್ತಿಯ ಅನಾವರಣವಾಗಿದೆ. ಪ್ರಜ್ಞಾವಂತರು ಎಚ್ಚರಗೊಳ್ಳಬೇಕಾದ ಹತ್ತೆಂಟು ವಿಚಾರಗಳು ಬಂದಾಗಲೆಲ್ಲ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಬೀದಿಗಿಳಿದು ಹೋರಾಡಿದ್ದಾರೆ; ಪ್ರತಿಭಟನೆಯನ್ನು ದಾಖಲಿಸಿದ್ದಾರೆ; ತಮ್ಮ ಸಹವರ್ತಿಗಳಲ್ಲಿ ಇನ್ನಷ್ಟು ತಿಳುವಳಿಕೆ ಹಾಗೂ ಜಾಗೃತಿಯನ್ನು ಮೂಡಿಸಲು ಯತ್ನಿಸಿದ್ದಾರೆ.

ಆದರೆ ವರ್ಷಗಳು ಕಳೆದಂತೆ ಪರಿಸ್ಥಿತಿ ಹಾಗೆಯೇ ಉಳಿದುಕೊಂಡಿದೆಯೇ ಎಂದು ಯೋಚಿಸುವ ಅನಿವಾರ್ಯತೆ ಬಂದಿದೆ. ವಿದ್ಯಾರ್ಥಿ ಸಂಘಟನೆಗಳು ಕೈಗೆತ್ತಿಕೊಳ್ಳುತ್ತಿರುವ ವಿಷಯಗಳು ಮತ್ತು ಬಹುತೇಕ ಹೋರಾಟಗಳು ಸಾಗುತ್ತಿರುವ ದಿಕ್ಕು ನೋಡಿದರೆ ಇಂತಹ ದಿಗಿಲು ಕಾಡುವುದು ಸಹಜವೇ ಆಗಿದೆ.

ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿ ಸಂಘಟನೆಗಳಾಗಿಯೇ ಉಳಿದಿವೆಯೇ ಎಂಬುದು ಮೊತ್ತಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆ. ಬಹುಪಾಲು ಸಂಘಟನೆಗಳೂ ರಾಜಕೀಯ ಪಕ್ಷಗಳ ಮುಖವಾಣಿಗಳಾಗಿವೆ ಅಥವಾ ಸ್ವತಃ ರಾಜಕೀಯ ಪಕ್ಷಗಳೇ ಆಗಿಬಿಟ್ಟಿವೆ. ಈ ಸಂಘಟನೆಗಳ ಮುಂದಾಳುಗಳಿಗೆ ತಮ್ಮ ಸಹಪಾಠಿಗಳ ಅಭ್ಯುದಯಕ್ಕಿಂತಲೂ ತಮ್ಮ ವೈಯುಕ್ತಿಕ ರಾಜಕೀಯ ಹಿತಾಸಕ್ತಿಗಳನ್ನು ತೃಪ್ತಿಗೊಳಿಸಿಕೊಳ್ಳುವುದು ಮತ್ತು ಭವಿಷ್ಯದ ರಾಜಕೀಯ ಕನಸುಗಳಿಗೆ ಬುನಾದಿ ಹಾಕಿಕೊಳ್ಳುವುದೇ ಹೆಚ್ಚು ಮುಖ್ಯವಾಗಿದೆ. ಇಂತಹ ಸಂಘಟನೆಗಳು ಮತ್ತು ಮುಖಂಡರುಗಳ ನಡುವೆ ವೃತ್ತಿಪರ ರಾಜಕಾರಣಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಸುಲಭವಾಗಿದೆ. ಹೀಗಾಗಿ ಕ್ಯಾಂಪಸ್ ಒಳಗಿನ ಯಾವುದೇ ಘಟನೆಯೂ ಕ್ಷಣಮಾತ್ರದಲ್ಲಿ ರಾಜಕೀಯಗೊಳ್ಳುತ್ತದೆ ಮತ್ತು ಬೇಕುಬೇಕಾದ ಬಣ್ಣಗಳನ್ನು ಪಡೆದುಕೊಳ್ಳುತ್ತದೆ.

ಬಹುಪಾಲು ತಥಾಕಥಿತ ವಿದ್ಯಾರ್ಥಿ ನಾಯಕರುಗಳಿಗೆ ಸ್ವಂತಿಕೆಯ ದೂರದರ್ಶಿತ್ವ ಇಲ್ಲ; ಅವರು ತಮ್ಮ ಮುಂದಿನ ಹಾದಿಯ ಬಗ್ಗೆ ತಮಗೆ ಬೆಂಬಲ ನೀಡುವ ರಾಜಕೀಯ ಪಕ್ಷಗಳ ಇಲ್ಲವೇ ರಾಜಕಾರಣಿಗಳ ಕಡೆಗೆ ನೋಡುತ್ತಾರೆ. ಇಂತಹ ಸನ್ನಿವೇಶಗಳಿಗಾಗಿಯೇ ಕಾಯುತ್ತಿರುವ ಸಮಯಸಾಧಕ ರಾಜಕಾರಣಿಗಳು ಈ ಬಗೆಯ ವಿದ್ಯಾರ್ಥಿ ಮುಖಂಡರುಗಳನ್ನು ಸುಲಭವಾಗಿ ದುರುಪಯೋಗಪಡಿಸಿಕೊಳ್ಳುತ್ತಾರೆ. ಎಲ್ಲಿಯವರೆಗೆ ವಿದ್ಯಾರ್ಥಿ ಸಂಘಟನೆಗಳು ರಾಜಕೀಯ ಪಕ್ಷಗಳ ಹಿತಾಸಕ್ತಿಗಳಿಂದ ಮುಕ್ತವಾಗಿರುವುದಿಲ್ಲವೋ ಅಲ್ಲಿಯವರೆಗೆ ನಿಜದರ್ಥದ ವಿದ್ಯಾರ್ಥಿ ಚಳುವಳಿಗಳನ್ನು ನಿರೀಕ್ಷಿಸುವುದು ಕಷ್ಟ.

ಕ್ಯಾಂಪಸ್‌ನೊಳಗೆ ಹುಟ್ಟಿಕೊಳ್ಳುವ ಸಮಸ್ಯೆಗಳ ಬಗ್ಗೆ ತಮ್ಮ ಸಹಪಾಠಿಗಳನ್ನು ಶಿಕ್ಷಿತರನ್ನಾಗಿಸುವ ಕೆಲಸವನ್ನು ಸಂಘಟನೆಗಳು ಮಾಡುತ್ತಿಲ್ಲ. ಬದಲಾಗಿ ಯಾವುದಾದರೊಂದು ರೀತಿಯಲ್ಲಿ ಎಲ್ಲರನ್ನೂ ಒಂದು ಕುರುಡು ಪ್ರವಾಹದಲ್ಲಿ ಕೊಂಡೊಯ್ಯುವ ಅವಸರವಷ್ಟೇ ಅವರಲ್ಲಿ ಕಾಣುತ್ತಿದೆ. ತಾವು ಮಾಡುತ್ತಿರುವ ಆಂದೋಲನದ ಹಿನ್ನೆಲೆ-ಮುನ್ನೆಲೆಗಳನ್ನು ತಮ್ಮ ಸಹವರ್ತಿಗಳಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡುವುದಕ್ಕಿಂತಲೂ ತಾವು ಅರ್ಥಮಾಡಿಕೊಂಡಿರುವ ರೀತಿಯಲ್ಲಿ ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದಂತೆ ಕಾಣುತ್ತಿದೆ.

ಸಂಘಟನೆಗಳಲ್ಲಿ ಒಂದು ಬಗೆಯ ತೀವ್ರಗಾಮಿತ್ವ ಬೆಳೆಯುತ್ತಿದೆಯೇ ಹೊರತು ತಾವು ಸಾಗಬೇಕಾಗಿರುವ ದಾರಿಯ ಬಗ್ಗೆ ದೂರಗಾಮಿ ಚಿಂತನೆಗಳಿಲ್ಲ. ಒಂದು ಸಂಘಟನೆ ಎರಡು ಹೆಜ್ಜೆ ಮುಂದಕ್ಕೆ ಹೋದರೆ ಪ್ರತಿಸ್ಪರ್ಧಿ ಸಂಘಟನೆ ಹನ್ನೆರಡು ಹೆಜ್ಜೆ ಮುಂದೆ ಹೋಗಬೇಕೆಂಬ ಸ್ಪರ್ಧೆ ಮಾತ್ರ ಕಾಣುತ್ತಿದೆ. ವಿದ್ಯಾರ್ಥಿಗಳನ್ನು ಬಲವಂತವಾಗಿ ತರಗತಿಗಳಿಂದ ಹೊರಗೆ ಕಳುಹಿಸಿ 'ಈ ದಿನ ನಿಮಗೆ ಫುಲ್ ಫ್ರೀಡಂ... ನಿಮಗೆ ಇಷ್ಟ ಬಂದಂತೆ ಇರಿ’ ಎಂದು ಹೇಳಿದ ಕೂಡಲೇ ಸಂಘಟನೆಗಳ ಅಥವಾ ಹೋರಾಟದ ಉದ್ದೇಶ ಸಾರ್ಥಕವಾಯಿತೇ? ತರಗತಿಗಳನ್ನು ಬಹಿಷ್ಕರಿಸಿದ ವಿದ್ಯಾರ್ಥಿಗಳ ಪೈಕಿ ಎಷ್ಟು ಮಂದಿಗೆ ತಾವು ತರಗತಿ ಬಹಿಷ್ಕರಿಸಿದ್ದೇಕೆಂಬ ತಿಳುವಳಿಕೆ ಇದೆ?

ಇನ್ನೊಂದು ಆತಂಕಕಾರಿ ಸಂಗತಿಯೆಂದರೆ, ಎಲ್ಲ ಕ್ಷೇತ್ರಗಳಂತೆ ವಿದ್ಯಾರ್ಥಿ ಸಂಘಟನೆಗಳೂ ಜಾತೀಯತೆಯ ಕಪಿಮುಷ್ಟಿಯಲ್ಲಿ ನಲುಗುತ್ತಿರುವುದು. ವಿದ್ಯಾರ್ಥಿ ಸಂಘಟನೆಗಳ  ಒಳಗೆ ’ವಿದ್ಯಾರ್ಥಿಗಳು’ ಎಂಬ ಒಂದೇ ಜಾತಿಯ ಸದಸ್ಯರಿಲ್ಲ; ಅಲ್ಲಿಯೂ ವಿವಿಧ ಜಾತಿಗಳ, ಉಪಜಾತಿಗಳ ಬಣಗಳು ಹುಟ್ಟಿಕೊಂಡಿವೆ. ಒಂದು ಕಡೆ ರಾಜಕೀಯ ಹಿತಾಸಕ್ತಿಗಳು ಚಳುವಳಿಗಳನ್ನು ಒಡೆಯುತ್ತಿದ್ದರೆ ಇನ್ನೊಂದೆಡೆ ಜಾತಿ ಲೆಕ್ಕಾಚಾರಗಳು ವಿದ್ಯಾರ್ಥಿಗಳನ್ನು ದಶದಿಕ್ಕುಗಳಿಗೆ ಚದುರಿಸಿವೆ. ಕ್ಯಾಂಪಸ್ ಒಳಗಿನ ಜಾತಿಯ ಬೀಜಗಳಿಗೆ ನೀರೆರೆಯುವ ಕೆಲಸಗಳನ್ನು ಅಧ್ಯಾಪಕರೂ ಯಶಸ್ವಿಯಾಗಿ ಮಾಡುತ್ತಿದ್ದಾರೆ. ಎಲ್ಲವನ್ನೂ ಜಾತಿಯ ಆಧಾರದಲ್ಲೇ ಅಳೆದುತೂಗುತ್ತಿರುವ ವಿಶ್ವವಿದ್ಯಾನಿಲಯಗಳ ಅನೇಕ ಅಧ್ಯಾಪಕರುಗಳು ತಮ್ಮ ವಿದ್ಯಾರ್ಥಿಗಳಲ್ಲಿ ಇನ್ನೆಂತಹ ಜಾತ್ಯತೀತ ಮನೋಭಾವವನ್ನು ಮೂಡಿಸಬಲ್ಲರು?

ವಿದ್ಯಾರ್ಥಿ ಸಂಘಟನೆಗಳು ಇನ್ನಾದರೂ ರಾಜಕೀಯ ಬಿಟ್ಟು ನಿಜವಾದ ಸಮಸ್ಯೆಗಳತ್ತ ಗಮನ ಹರಿಸದೇ ಇದ್ದರೆ, ರಾಜಕೀಯ ಪಕ್ಷಗಳು-ಜಾತಿ ಸಂಘಟನೆಗಳ ಹಿತಾಸಕ್ತಿಗಳಿಗೆ ಬಲಿಯಾಗುವುದರ ವಿರುದ್ಧ ಎಚ್ಚರಗೊಳ್ಳದೇ ಹೋದರೆ, ವಿದ್ಯಾರ್ಥಿ ಚಳುವಳಿ ಎಂಬ ಭವ್ಯ ಕಲ್ಪನೆ ಬಹುಬೇಗನೆ ಇತಿಹಾಸದ ಪುಟಗಳಲ್ಲಿ ಸೇರಿಹೋಗುವುದರಲ್ಲಿ ಸಂಶಯವಿಲ್ಲ.