31 ಡಿಸೆಂಬರ್ 2020ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ
ಭಾರತದ ಮಾಧ್ಯಮ ಶಿಕ್ಷಣಕ್ಕೆ ನೂರು ವರ್ಷ ತುಂಬಿತು. ಶತಮಾನವೆಂಬುದು ಚರಿತ್ರೆಯಲ್ಲಿ ಬಹುದೊಡ್ಡ ಅವಧಿ. ಒಂದು ಲಕ್ಷಕ್ಕೂ ಹೆಚ್ಚು ಪತ್ರಿಕೆಗಳು, 900ರಷ್ಟು ಟಿವಿ ಚಾನೆಲ್‌ಗಳು, 800ರಷ್ಟು ರೇಡಿಯೋ ಕೇಂದ್ರಗಳು, ಅಸಂಖ್ಯ ಆನ್ಲೈನ್ ಸುದ್ದಿತಾಣಗಳಿರುವ ಈ ದೇಶದಲ್ಲಿ ನೂರು ವರ್ಷ ಪೂರೈಸಿರುವ ಮಾಧ್ಯಮ ಶಿಕ್ಷಣ ಏನು ಮಾಡಿದೆ, ಏನು ಮಾಡಬೇಕು ಎಂಬ ಪ್ರಶ್ನೆ ಮಹತ್ವದ್ದು.ಭಾರತದಲ್ಲಿ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದ ಹೆಗ್ಗಳಿಕೆ ಸಮಾಜ ಸುಧಾರಕಿ ಆನಿಬೆಸೆಂಟ್‌ಗೆ ಸಲ್ಲುತ್ತದೆ. ಅವರು 1920ರಲ್ಲಿ ತಮ್ಮ ಥಿಯೋಸಾಫಿಕಲ್ ಸೊಸೈಟಿಯ ಅಡಿಯಲ್ಲಿ ಮದ್ರಾಸ್‌ನ ಅಡ್ಯಾರ್‌ನಲ್ಲಿರುವ ನ್ಯಾಷನಲ್ ಯೂನಿವರ್ಸಿಟಿಯ ಮೂಲಕ ಮೊದಲ ಬಾರಿಗೆ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದರು. ಅವರೇ ನಡೆಸುತ್ತಿದ್ದ 'ನ್ಯೂ ಇಂಡಿಯಾ' ಪತ್ರಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಪಡೆಯುವ ವ್ಯವಸ್ಥೆಯೂ ಇತ್ತು.
ಮುಂದೆ ಆಲಿಘಡ ಮುಸ್ಲಿಂ ವಿಶ್ವವಿದ್ಯಾನಿಲಯ (1938), ಲಾಹೋರಿನ ಪಂಜಾಬ್ ವಿಶ್ವವಿದ್ಯಾನಿಲಯ (1941), ಮದ್ರಾಸ್ (1947) ಮತ್ತು ಕಲ್ಕತ್ತಾ (1948) ವಿಶ್ವವಿದ್ಯಾನಿಲಯಗಳಲ್ಲಿ ಪತ್ರಿಕೋದ್ಯಮದ ಕೋರ್ಸುಗಳು ಬಂದವು. 1951ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಪರಿಚಯಿಸುವುದರೊಂದಿಗೆ ಕರ್ನಾಟಕಕ್ಕೆ ಮಾಧ್ಯಮ ಶಿಕ್ಷಣ ಪ್ರವೇಶಿಸಿತು.
ಆನಿಬೆಸೆಂಟ್ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದಾಗ ಅವರ ಗಮನ ಇದ್ದುದು ಪತ್ರಿಕೆಗಳಿಗಾಗಿ ಬರೆಯುವುದರ ಮತ್ತು ಸಂಪಾದಿಸುವುದರ ಬಗ್ಗೆ. ಆಗ ಇದ್ದ ಪತ್ರಿಕೆಗಳ ಸಂಖ್ಯೆಯೂ ಬೆರಳೆಣಿಕೆಯಷ್ಟು. ಭಾರತಕ್ಕೆ ರೇಡಿಯೋ ಬಂದದ್ದೇ 1921ರಲ್ಲಿ. ಸಿನಿಮಾ ಇನ್ನೂ ಮೂಕಿಯುಗದಲ್ಲೇ ಇತ್ತು. ಟಿವಿ, ಕಂಪ್ಯೂಟರ್, ಇಂಟರ್ನೆಟ್‌ಗಳೆಲ್ಲ ನಮ್ಮ ಕಲ್ಪನೆಗೂ ಮೀರಿದವಾಗಿದ್ದವು. ಹೀಗಾಗಿ 'ಜರ್ನಲಿಸಂ' ಎಂದಾಗ ಮುದ್ರಣ ಮಾಧ್ಯಮದ ಆಚೆಗೆ ಯೋಚಿಸುವಂತಹ ಅಗತ್ಯವೇನೂ ಇರಲಿಲ್ಲ.
ಒಂದು ಶತಮಾನದ ಅಂತರದಲ್ಲಿ ಮಾಧ್ಯಮ ಜಗತ್ತು ಊಹೆಗೂ ಮೀರಿ ಬದಲಾಗಿದೆ- ಪತ್ರಿಕೋದ್ಯಮ ಎಂಬ ಪದವೇ ಅಸಹಜ ಎನಿಸುವಷ್ಟು. ಮುದ್ರಣ, ವಿದ್ಯುನ್ಮಾನ ಇತ್ಯಾದಿ ವರ್ಗೀಕರಣದ ಕಾಲವೇ ಹೊರಟುಹೋಗಿದೆ. ಎಲ್ಲವೂ ಡಿಜಿಟಲ್ ಎಂಬ ನಾಲ್ಕಕ್ಷರದೊಳಗೆ ನುಸುಳಿಕೊಂಡಿವೆ. ಡಿಜಿಟಲೇ ನಮ್ಮ ಭವಿಷ್ಯ ಎಂದು ನಿರ್ಧರಿಸಿಯಾಗಿದೆ. ಕೋವಿಡ್ ಅಂತೂ ಮಾಧ್ಯಮರಂಗದ ಒಟ್ಟಾರೆ ದೃಷ್ಟಿಕೋನವನ್ನೇ ಬದಲಾಯಿಸಿದೆ. ಜಾಹೀರಾತು, ಕಾರ್ಪೋರೇಟ್ ಕಮ್ಯೂನಿಕೇಶನ್, ಮನರಂಜನಾ ಉದ್ಯಮ, ಈವೆಂಟ್ ಮ್ಯಾನೇಜ್ಮೆಂಟ್, ವಿಎಫ್‌ಎಕ್ಸ್, ಅನಿಮೇಶನ್, ಡಿಜಿಟಲ್ ಕಂಟೆಂಟ್, ವೀಡಿಯೋ ಗೇಮ್, ಸಾಮಾಜಿಕ ಮಾಧ್ಯಮಗಳ ನಿರ್ವಹಣೆ, ಭಾಷಾಂತರ ಮುಂತಾದ ಹತ್ತಾರು ಅವಕಾಶಗಳು ಮಾಧ್ಯಮರಂಗವೆಂಬ ತೆರೆದಬಯಲಲ್ಲಿ ಬಿಡಾರ ಹೂಡಿವೆ.
ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಮಾಧ್ಯಮ ಶಿಕ್ಷಣದ ಪರಿಕಲ್ಪನೆ ಬದಲಾಗಿದೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ದೇಶದಾದ್ಯಂತ ಇರುವ ವಿವಿಧ ಬಗೆಯ ಸುಮಾರು 1000ದಷ್ಟು ಮಾಧ್ಯಮ ಶಿಕ್ಷಣ ಸಂಸ್ಥೆಗಳಿಂದ ಅಂದಾಜು 20,000ದಷ್ಟು ಯುವಕರು ಪ್ರತಿವರ್ಷ ಹೊರಬರುತ್ತಿದ್ದಾರೆ. ಹೊಸ ಮಾಧ್ಯಮ ಜಗತ್ತು ಬಯಸುವ ಜ್ಞಾನ-ಕೌಶಲಗಳು ಇವರಲ್ಲಿವೆಯೇ, ಅದಕ್ಕೆ ಬೇಕಾದಂತೆ ಹೊಸಬರನ್ನು ತರಬೇತುಗೊಳಿಸುವುದಕ್ಕೆ ನಮ್ಮ ಮಾಧ್ಯಮ ಶಿಕ್ಷಣ ವ್ಯವಸ್ಥೆ ಸನ್ನದ್ಧವಾಗಿದೆಯೇ ಎಂದು ಕೇಳಿಕೊಳ್ಳಬೇಕಾಗಿದೆ.
ಮಾಧ್ಯಮರಂಗ ಅನಿಮೇಶನ್ ಯುಗದಲ್ಲಿದ್ದರೂ ಶಿಕ್ಷಣಸಂಸ್ಥೆಗಳು ಇನ್ನೂ ಅಚ್ಚುಮೊಳೆಗಳ ಬಗೆಗೇ ಪಾಠಮಾಡುತ್ತಿವೆ, ಪತ್ರಿಕೋದ್ಯಮ ತರಗತಿಗಳಲ್ಲಿ ಬೋಧಿಸಿದ್ದಕ್ಕೂ ವಾಸ್ತವಕ್ಕೂ ಸಂಬಂಧ ಇಲ್ಲ ಎಂಬುದು ಇತ್ತೀಚಿನವರೆಗೂ ಇದ್ದ ಆರೋಪವಾಗಿತ್ತು. ವರ್ತಮಾನದ ಮಾಧ್ಯಮರಂಗ ಬಯಸುವ ಕೌಶಲಗಳು ವಿದ್ಯಾರ್ಥಿಗಳಲ್ಲಿ ಬೆಳೆಯುತ್ತಿಲ್ಲ ಎಂಬುದು ಇದರ ಸಾರ. ಮಾಧ್ಯಮ ಶಿಕ್ಷಣ ಸಂಸ್ಥೆಗಳು ಈ ಆರೋಪದಿಂದ ಹೊರಬರಲು ತಕ್ಕಮಟ್ಟಿಗೆ ಪ್ರಯತ್ನಿಸಿವೆ. ವಿಶ್ವವಿದ್ಯಾನಿಲಯಗಳ ಮಾಧ್ಯಮ ಪಠ್ಯಕ್ರಮ ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ಪರಿಷ್ಕರಣೆಗೆ ಒಳಗಾಗಿದೆ. ಸಿದ್ಧಾಂತ-ಪ್ರಯೋಗ ಎರಡಕ್ಕೂ ಸಮಾನ ಆದ್ಯತೆಯನ್ನು ನೀಡುವ, ಮಾಧ್ಯಮರಂಗದಲ್ಲಿನ ಹೊಸತುಗಳನ್ನು ಆಗಿಂದಾಗ್ಗೆ ಪಠ್ಯಕ್ರಮದೊಳಗೆ ಸೇರಿಸುವ ಪ್ರಯತ್ನಗಳು ನಡೆದಿವೆ.
ಆದರೆ ಪಠ್ಯಕ್ರಮದಷ್ಟೇ ಅದರ ಅನುಷ್ಠಾನವೂ ಮುಖ್ಯ. ಇದಕ್ಕೆ ಬೇಕಾದ ತಜ್ಞ ಅಧ್ಯಾಪಕರು, ಸಂಪನ್ಮೂಲ ಮತ್ತು ಮೂಲಭೂತ ಸೌಕರ್ಯ ಇದೆಯೇ ಎಂದರೆ ನಿರುತ್ತರ. ಮಾಧ್ಯಮ ಕೋರ್ಸುಗಳನ್ನು ತೆರೆಯುವಲ್ಲಿ ಇರುವ ಉತ್ಸಾಹ ಅವುಗಳನ್ನು ಪೋಷಿಸುವಲ್ಲಿ ಇಲ್ಲ. ಟಿವಿ, ಜಾಹೀರಾತು, ಪತ್ರಿಕೆ, ಅನಿಮೇಶನ್, ಸಿನಿಮಾ, ಗ್ರಾಫಿಕ್ಸ್, ಡಿಜಿಟಲ್ ಎಂದರೆ ಸಾಲದು; ಅವುಗಳ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವುದಕ್ಕೆ ಪರಿಣತಿ ಬೇಕು, ಸೌಕರ್ಯಗಳು ಇರಬೇಕು. ಈ ವಿಷಯದಲ್ಲಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ನಡುವೆ ಅಜಗಜಾಂತರ ಇದೆ.
ಸರ್ಕಾರಿ ಕಾಲೇಜುಗಳಲ್ಲಿರುವ ಪತ್ರಿಕೋದ್ಯಮ ವಿಭಾಗಗಳ ಸ್ಥಿತಿಯಂತೂ ಶೋಚನೀಯ. ಒಂದೆರಡು ಕಂಪ್ಯೂಟರುಗಳಾದರೂ ಇಲ್ಲದ ಪತ್ರಿಕೋದ್ಯಮ ವಿಭಾಗಗಳು ಇನ್ನೂ ಇವೆ ಎಂದರೆ ನಂಬಲೇಬೇಕು. ಸಾಹಿತ್ಯ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ ಬೋಧಿಸಿದಂತೆ ಪತ್ರಿಕೋದ್ಯಮವನ್ನೂ ಬೋಧಿಸಬೇಕು ಎಂದರೆ ಅದೆಷ್ಟು ಪರಿಣಾಮಕಾರಿಯಾದೀತು? ಅನೇಕ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರೇ ಇಲ್ಲ. ವಿಶ್ವವಿದ್ಯಾನಿಲಯಗಳಲ್ಲೂ ಅನೇಕ ಹುದ್ದೆಗಳು ಖಾಲಿ ಬಿದ್ದಿವೆ. ಖಾಸಗಿ ಸಂಸ್ಥೆಗಳೇನೋ ಒಂದಷ್ಟು ಸೌಕರ್ಯಗಳನ್ನು ಹೊಂದಿವೆ ಎಂದರೆ ಅಂತಹ ನಗರ ಕೇಂದ್ರಿತ ಕಾಲೇಜುಗಳು, ಅವು ವಿಧಿಸುವ ಶುಲ್ಕದ ಕಾರಣದಿಂದ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಗಗನಕುಸುಮ.
ವಿಶ್ವವಿದ್ಯಾನಿಲಯಗಳ ಮಾಧ್ಯಮ ಅಧ್ಯಯನ ವಿಭಾಗಗಳು ವಿದ್ಯಾರ್ಥಿಗಳನ್ನು ಅಕಡೆಮಿಕ್ ಆಗಿ ಬೆಳೆಸಬೇಕೇ ಕೌಶಲಗಳಿಗೆ ಗಮನಕೊಡಬೇಕೇ ಎಂಬ ವಿಷಯದಲ್ಲಿ ಇನ್ನೂ ಅಭಿಪ್ರಾಯ ಭೇದಗಳಿವೆ. ಆದರೆ ವೃತ್ತಿಪರರು ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಪರಸ್ಪರ ಕೊಡುಕೊಳ್ಳುವಿಕೆ ಬೇಕು, ಉತ್ತಮ ಸಂಬಂಧ ಬೆಳೆಯಬೇಕು, ಅಧ್ಯಾಪಕರೂ ಕಾಲದಿಂದ ಕಾಲಕ್ಕೆ ಅಪ್ಡೇಟ್ ಆಗಬೇಕು ಎಂಬಲ್ಲಿ ಗೊಂದಲ ಇಲ್ಲ. ಇಚ್ಛಾಶಕ್ತಿ ಎಲ್ಲದಕ್ಕಿಂತ ದೊಡ್ಡದು.
- ಸಿಬಂತಿ ಪದ್ಮನಾಭ ಕೆ. ವಿ.