ಬೋಧಿವೃಕ್ಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬೋಧಿವೃಕ್ಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಮಾರ್ಚ್ 3, 2026

ವಿವೇಕವೇ ಸಾಮಾಜಿಕ ವರ್ತನೆಯ ದಿಕ್ಸೂಚಿ

ಬೋಧಿವೃಕ್ಷ, 21-27 ಫೆಬ್ರವರಿ 2026ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಅಧ್ಯಯನ ಯೋಜನೆಯೊಂದರ ಭಾಗವಾಗಿ ಇತ್ತೀಚೆಗೆ ಭೂತಾನ್ ದೇಶದಲ್ಲಿ ಕೆಲವು ದಿನ ಕಳೆಯುವ ಅವಕಾಶ ಒದಗಿತ್ತು. ಈ ಸಂದರ್ಭದಲ್ಲಿ ವಿಶಿಷ್ಟ ಅಂಶವೊಂದು ನಮ್ಮನ್ನು ಚಕಿತಗೊಳಿಸಿತು. ಅದೇನೆಂದರೆ, ಇಡೀ ಭೂತಾನ್ ದೇಶದಲ್ಲಿ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ಇಲ್ಲದಿರುವುದು! ಅರೆ, ಈ ಕಾಲದಲ್ಲೂ ಟ್ರಾಫಿಕ್ ಸಿಗ್ನಲ್ ಇಲ್ಲದೆ ವಾಹನ ಸಂಚಾರವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಅಚ್ಚರಿ ಎನಿಸಬಹುದು. ಆದರೆ ಆ ದೇಶದ ಮಟ್ಟಿಗೆ ಈ ಅಚ್ಚರಿಯೇ ನಿಜ. ದೇಶದ ರಾಜಧಾನಿ ಥಿಂಪುವಿನಲ್ಲೇ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ಕಾಣಸಿಗುವುದಿಲ್ಲ. ಟ್ರಾಫಿಕ್ ಸಿಗ್ನಲ್ ಅಷ್ಟೇ ಅಲ್ಲ, ರಸ್ತೆ ಉಬ್ಬುಗಳು ಕೂಡ ಕಾಣಸಿಗುವುದಿಲ್ಲ. ರಸ್ತೆಗಳು ಕೂಡುವ ಜಾಗದಲ್ಲಿ ಇರುವ ವೃತ್ತಗಳು ಕೂಡ ತೀರಾ ಸಣ್ಣವು.

ಒಂದು ದೇಶದ ರಸ್ತೆಗಳು ಆ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂಬ ಪ್ರಸಿದ್ಧ ಮಾತೊಂದು ಇದೆ. ರಸ್ತೆಗಳು ಎಂಬಲ್ಲಿ ಸಂಚಾರ ವ್ಯವಸ್ಥೆ ಎಂದರೂ ಚೆನ್ನಾಗಿ ಒಪ್ಪುತ್ತದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭೂತಾನ್‌ನಲ್ಲಿ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಕಡಿಮೆ ಇರುವುದರಿಂದ ಅಲ್ಲಿ ಸಂಚಾರ ವ್ಯವಸ್ಥೆಯನ್ನು ನಿಭಾಯಿಸುವುದು ಸುಲಭ ಎಂಬ ತಾಂತ್ರಿಕ ಕಾರಣವನ್ನು ಕೊಡಬಹುದಾದರೂ, ವಾಸ್ತವವಾಗಿ ಇಂತಹದೊಂದು ಸೋಜಿಗ ಸಾಧ್ಯವಾಗಿರುವುದು ಅಲ್ಲಿನ ಜನರು ಮತ್ತವರ ಗುಣನಡತೆಯಿಂದಾಗಿ ಎಂಬುದೇ ನಿಜ.

ಭೂತಾನ್ ನಾಗರಿಕರ ಸಾಮಾಜಿಕ ವರ್ತನೆಯು ಸಾಂಸ್ಕೃತಿಕ ಮೌಲ್ಯಗಳು ಮತ್ತು ಅದರಿಂದ ಹುಟ್ಟಿಕೊಂಡಿರುವ ವಿಶಿಷ್ಟವಾಗಿರುವ ನೈತಿಕ ಪ್ರಜ್ಞೆಯಿಂದ ಪ್ರಭಾವಿಸಲ್ಪಟ್ಟಿದೆ. ಅವರ ಪ್ರತಿ ವರ್ತನೆಯಲ್ಲೂ ಅಪಾರ ಸಂಯಮ ಮತ್ತು ಸೌಜನ್ಯ ಎದ್ದು ಕಾಣುತ್ತದೆ. ನಮ್ಮಿಂದಾಗಿ ಇನ್ನೊಬ್ಬರಿಗೆ ತೊಂದರೆ ಆಗಬಾರದು, ಸಾಧ್ಯವಾದಷ್ಟು ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎಂಬ ಅವರ ಮನಸ್ಸೇ ಈ ಬಗೆಯ ವ್ಯಕ್ತಿತ್ವಕ್ಕೆ ಕಾರಣ. ಹೀಗಾಗಿ ರಸ್ತೆಯ ಮೇಲೆ ನಡೆಯುವಾಗಲಾಗಲೀ, ವಾಹನ ಚಲಾಯಿಸುವಾಗಲಾಗಲೀ ಅವರಿಗೆ ಧಾವಂತವಿಲ್ಲ. ಅನಗತ್ಯವಾಗಿ ಹಾರ್ನ್ ಮಾಡುವುದಿಲ್ಲ, ಸ್ಪರ್ಧೆಗೆ ಬಿದ್ದವರಂತೆ ಓವರ್‌ಟೇಕ್ ಮಾಡುವುದಿಲ್ಲ, ಒಂದು ನಿರ್ದಿಷ್ಟ ವೇಗಮಿತಿಯಿಂದಾಚೆ ವಾಹನ ಚಾಲನೆ ಮಾಡುವುದಿಲ್ಲ. ತಾಳ್ಮೆಯೇ ಅಲ್ಲಿನ ಸಂಚಾರ ವ್ಯವಸ್ಥೆಯ ಸ್ಥಾಯೀಭಾವ.

ಹೀಗಾಗಿ ರಸ್ತೆಗಳು ಸೇರುವಲ್ಲಿ ಟ್ರಾಫಿಕ್ ದೀಪಗಳು ಬೇಕೆಂದು ಅವರಿಗೆ ಅನ್ನಿಸಿಯೇ ಇಲ್ಲ.
ಎದುರಿನಿಂದಲೋ, ಪಕ್ಕದಿಂದಲೋ ವಾಹನವೊಂದು ಬಂತೆಂದರೆ ಈ ಕಡೆಯ ವಾಹನ ಸವಾರರು ಆ ವಾಹನ ಮೊದಲು ಹೋಗುವುದಕ್ಕೆ ಅವಕಾಶ ಮಾಡಿಕೊಡುತ್ತಾರೆ. ಅವರ ಮಧ್ಯೆ ತಮ್ಮದೇ ಆದ ಒಂದು ಸಂವಹನ ಇರುತ್ತದೆ. ಇನ್ನೊಬ್ಬರ ಅಗತ್ಯವನ್ನು ಅರ್ಥ ಮಾಡಿಕೊಂಡು ವ್ಯವಹರಿಸುವ ವಿಶೇಷ ಸಂವಹನವದು. ತಾವೇ ಮೊದಲು ಹೋಗಿಬಿಡಬೇಕು ಎಂಬ ಮನಸ್ಥಿತಿಗೂ ಇನ್ನೊಬ್ಬ ಮೊದಲು ಹೋಗಿಬಿಡಲಿ ಎಂಬ ಮನಸ್ಥಿತಿಗೂ ಎಷ್ಟೊಂದು ವ್ಯತ್ಯಾಸ ಅಲ್ಲವೇ?

ಪರಸ್ಪರ ಗೌರವ:

ಪರಸ್ಪರರನ್ನು ಗೌರವಿಸುವ ಗುಣ ಜನರಲ್ಲಿ ಇದ್ದಾಗ ಮಾತ್ರ ಇಂತಹದೊಂದು ಮನಸ್ಥಿತಿ ಮತ್ತು ವರ್ತನೆ ಸಾಧ್ಯವಾಗುತ್ತದೆ. ತಮಗೊಬ್ಬರಿಗೆ ಮಾತ್ರ ತುರ್ತು ಕೆಲಸವಿರುವುದು, ಬೇರೆಯವರ ಅಗತ್ಯಗಳ ಬಗ್ಗೆ ತಾನೇಕೆ ತಲೆಕೆಡಿಸಿಕೊಳ್ಳಲಿ ಎಂಬ ಮನೋಭಾವ ನಮ್ಮ ನಾಗರಿಕ ಪ್ರಜ್ಞೆಯನ್ನೇ ಹಾಳುಮಾಡಿಬಿಡುತ್ತದೆ. ಇದು ಕೇವಲ ರಸ್ತೆಯ ಮೇಲಿನ ವಿಷಯ ಮಾತ್ರವಲ್ಲ, ನಮ್ಮ ದಿನನಿತ್ಯದ ಜೀವನದ ಪ್ರತಿ ಹಂತದಲ್ಲೂ ನಡೆಯುತ್ತದೆ. ಇನ್ನೊಬ್ಬರ ಇಷ್ಟಾನಿಷ್ಟಗಳ ಬಗ್ಗೆ ಯೋಚಿಸಿಕೊಂಡು ತಾವೇಕೆ ಸಮಯ ಕಳೆಯಬೇಕು, ನಮ್ಮನಮ್ಮ ಕೆಲಸ ನೋಡಿಕೊಂಡರಾಯಿತು ಎಂಬುದು ನಮ್ಮ ಸಾಮಾನ್ಯ ಯೋಚನಾವಿಧಾನ. ಇನ್ನೊಬ್ಬರ ತಂಟೆಗೆ ಹೋಗದಿರುವುದು ಸರಿ, ಆದರೆ ಇನ್ನೊಬ್ಬರ ಅವಶ್ಯಕತೆಗಳ ಬಗ್ಗೆ ಗೌರವ ಮತ್ತು ಕಾಳಜಿ ಇಲ್ಲದೆ ಹೋದಾಗ ನಾವು ಕೇವಲ ಯಂತ್ರಗಳಾಗಿಬಿಡುತ್ತೇವೆ.

ಹೇಳಿಕೇಳಿ ಮನುಷ್ಯ ಸಂಘಜೀವಿ, ಸಮಾಜಜೀವಿ. ಭೂಮಿಯ ಮೇಲೆ ನಾಗರಿಕತೆಯ ವಿಕಾಸ ಆರಂಭವಾದಲ್ಲಿಂದಲೂ ಮನುಷ್ಯ ಜತೆಯಾಗಿಯೇ ಬದುಕುವುದನ್ನು ಅಭ್ಯಾಸ ಮಾಡಿಕೊಂಡ. ಜತೆಯಾಗಿಯೇ ವಾಸ, ಜತೆಯಾಗಿಯೇ ಊಟ, ಜತೆಯಾಗಿಯೇ ಓಡಾಟ. ಒಂಟಿಯಾಗಿರುವುದು ಬಲುಕಷ್ಟ. ಹಾಗೆ ನೋಡಿದರೆ ಒಂಟಿಯಾಗಿರುವುದಕ್ಕಿಂತಲೂ ಒಟ್ಟಿಗೆ ಬಾಳುವುದು ಇನ್ನೂ ಕಷ್ಟ. “ಎಷ್ಟು ಕಷ್ಟವೋ ಹೊಂದಿಕೆಯೆAಬುದು ನಾಲ್ಕು ದಿನದ ಈ ಬದುಕಿನಲಿ?” ಎಂದು ಕವಿ ಇದನ್ನೇ ಉದ್ದೇಶಿಸಿ ಕೇಳಿರುವುದು. ಇದೇ ಕವಿ “ಇಲ್ಲಿದೆ ನಂದನ ಇಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ” ಅಂತಲೂ ಸೂಚನೆ ಕೊಟ್ಟಿದ್ದಾರೆ. ನಮ್ಮನಮ್ಮ ಬದುಕನ್ನು ಸ್ವರ್ಗವಾಗಿಯೋ ನರಕವಾಗಿಯೋ ಮಾಡಿಕೊಳ್ಳುವುದು ನಮ್ಮಲ್ಲೇ ಇದೆ. ಇನ್ನೊಬ್ಬರಿಂದಾಗಿ ನಮ್ಮ ಬದುಕು ಅಸಹನೀಯವಾಯಿತು ಎಂಬ ಭಾವನೆಯೇ ಮೂರ್ಖತನದ್ದು.

ವಿವೇಕವೇ ಬದುಕು:

ಸರಿತಪ್ಪುಗಳ ವಿವೇಚನೆ, ಸಮಾಜದಲ್ಲಿ ಇನ್ನೊಬ್ಬರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ವಿವೇಕ ನಮ್ಮ ಬದುಕನ್ನು ನಿರ್ಧರಿಸುತ್ತದೆ. ಪ್ರತಿದಿನ ಹತ್ತುಹಲವು ಮಂದಿಯೊಂದಿಗೆ ನಾವು ವ್ಯವಹರಿಸುತ್ತಿರುತ್ತೇವೆ. ಅಪ್ಪ-ಅಮ್ಮ, ಕುಟುಂಬದ ಸದಸ್ಯರು, ಬಂಧುಗಳು, ಸ್ನೇಹಿತರು, ಸಹೋದ್ಯೋಗಿಗಳು, ಗುರುಗಳು, ವಿದ್ಯಾರ್ಥಿಗಳು, ನೆರೆಹೊರೆಯವರು, ಅಪರಿಚಿತರು... ಇವರೆಲ್ಲರೊಂದಿಗೆ ಒಂದಲ್ಲ ಒಂದು ರೀತಿ ಸಂವಹನ ನಡೆಸುವ ಸಂದರ್ಭ ಇದ್ದೇ ಇರುತ್ತದೆ. ತಾನು, ತನ್ನದು, ತಾನು ಮಾಡಿದ್ದು ಸರಿ, ಉಳಿದವರೆಲ್ಲ ಅವಿವೇಕಿಗಳು ಎಂಬ ಭಾವನೆ ಇದ್ದಾಗ ಸಹಬಾಳ್ವೆ, ಸಾಮರಸ್ಯ ಮರೀಚಿಕೆಯಾಗುತ್ತದೆ.

ಹೆತ್ತವರ ಮಾತನ್ನು ಯಾಕೆ ಕೇಳಬೇಕು, ಗುರುಗಳನ್ನು ಯಾಕೆ ಗೌರವಿಸಬೇಕು, ಸಹಪ್ರಯಾಣಿಕರೊಂದಿಗೆ ಯಾಕೆ ಹೊಂದಾಣಿಕೆ ಮಾಡಿಕೊಳ್ಳಬೇಕು, ರಸ್ತೆಯ ಮೇಲೆ ಯಾಕೆ ಸಂಯಮದಿಂದ ವರ್ತಿಸಬೇಕು, ಸಾಮಾಜಿಕ ಮಾಧ್ಯಮಗಳನ್ನು ಯಾಕೆ ಜವಾಬ್ದಾರಿಯಿಂದ ಬಳಸಬೇಕು, ನನ್ನ ಪರಿಸರವನ್ನು ಯಾಕೆ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು – ಇಂತಹ ಪ್ರಶ್ನೆಗಳನ್ನು ಕೇಳುವವರ ಮನಸ್ಸಿನಲ್ಲಿ “ಇದೆಲ್ಲ ನನ್ನ ಕೆಲಸವಲ್ಲ, ಬೇರೆ ಯಾರಾದರೂ ಮಾಡಲಿ” ಎಂಬ ಉಡಾಫೆಯೊಂದು ಸದಾ ಇರುತ್ತದೆ. ಈ ಉಡಾಫೆಯೇ ಅವರ ಬಾಹ್ಯ ವರ್ತನೆಗಳಿಗೆ ಕಾರಣ. ಇದರಿಂದಾಗಿಯೇ ಅವರು ಹಿರಿಯರ ಸಲಹೆಗಳಿಗೆ ಕಿವಿಗೊಡುವುದಿಲ್ಲ, ಗುರುಗಳನ್ನು ಗೌರವಿಸುವುದಿಲ್ಲ, ಸಹಪ್ರಯಾಣಿಕರೊಂದಿಗೋ ಸಹೋದ್ಯೋಗಿಗಳೊಂದಿಗೋ ಸಂಯಮದಿಂದ ವರ್ತಿಸುವುದಿಲ್ಲ, ಸಾಮಾಜಿಕ ಮಾಧ್ಯಮಗಳನ್ನು ವಿವೇಕದಿಂದ ಬಳಸುವುದಿಲ್ಲ. 

ಇಂಥವರು ಕಾನೂನನ್ನಾಗಲೀ ಸಾಮಾಜಿಕ ಮೌಲ್ಯಗಳನ್ನಾಗಲೀ ಗೌರವಿಸುವುದಿಲ್ಲ. ಸಾರ್ವಜನಿಕ ಸೌಲಭ್ಯಗಳನ್ನು ಜವಾಬ್ದಾರಿಯಿಂದ ಬಳಸಬೇಕು, ಅದು ಎಲ್ಲರಿಗೂ ಸಂಬಂಧಪಟ್ಟದ್ದು ಎಂಬ ತಿಳುವಳಿಕೆ ಇಲ್ಲದವರು ಇವರಲ್ಲ. ಶಿಕ್ಷಿತರೇ ಆಗಿರುತ್ತಾರೆ. ಆದರೆ ಶಿಕ್ಷಿತರಿಗೂ ವಿದ್ಯಾವಂತರಿಗೂ ವ್ಯತ್ಯಾಸ ಇದೆ. ಶಿಕ್ಷಣ ಕೇವಲ ಅಂಕಪಟ್ಟಿಗಳಿಗೆ, ಪ್ರಮಾಣಪತ್ರಗಳಿಗೆ ಸೀಮಿತವಾಗಿದ್ದಾಗ ಆಗುವ ಸಮಸ್ಯೆ ಇದು. ಶಿಕ್ಷಣ ವಿದ್ಯೆ ಆಗಿ ಪರಿವರ್ತನೆ ಆದರೆ ಸಾಮಾಜಿಕ ವಿವೇಕ ತಾನಾಗಿಯೇ ರೂಪುಗೊಳ್ಳುತ್ತಾ ಹೋಗುತ್ತದೆ.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಅಕ್ಟೋಬರ್ 31, 2023

ಸವಾಲುಗಳೆಂಬ ಬದುಕಿನ ದೀಪಸ್ತಂಭಗಳು

23-29 ಸೆಪ್ಟೆಂಬರ್‌ 2023ರ ʻಬೋಧಿವೃಕ್ಷʼದಲ್ಲಿ ಪ್ರಕಟವಾದ ಲೇಖನ

:

:

ತೇಜಸ್ವಿ ಪಿಯುಸಿಗೆ ಬರುವ ಹೊತ್ತಿಗೆ ಕೋವಿಡ್ ಮಹಾಮಾರಿ ಜಗತ್ತನ್ನು ಆವರಿಸಿಕೊಂಡಿತ್ತು. ಎಲ್ಲೆಡೆ ಲಾಕ್‌ಡೌನ್, ಎಲ್ಲರಿಗೂ ಗೃಹಬಂಧನ. ಅವನು ಕಾಲೇಜನ್ನು ನೋಡಿದ್ದೇ ಕಡಿಮೆ. ಪಾಠ, ಪರೀಕ್ಷೆ ಎಲ್ಲವೂ ಆನ್ಲೆನಿನಲ್ಲೇ ನಡೆಯುತ್ತಿದ್ದವು. ಅಂತರಜಾಲದ ಹೊಸ ಸಾಧ್ಯತೆ ಹೊಸಹೊಸ ಆತಂಕಗಳನ್ನೂ ತಂದಿತ್ತು. ತೇಜಸ್ವಿಯ ವಯಸ್ಸಿನ ಬಹುತೇಕ ಹುಡುಗರು ಆಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕಳೆದುಹೋಗಿದ್ದರು. ತೇಜಸ್ವಿಯೂ ಅವುಗಳಲ್ಲಿ ಮುಳುಗಿದ್ದ- ಆದರೆ ಕಾಲಯಾಪನೆಗೆ ಅಲ್ಲ.

ಅವನು ಭವಿಷ್ಯದ ಹೊಸ ಸಾಧ್ಯತೆಗಳ ಅನ್ವೇಷಣೆಯಲ್ಲಿದ್ದ. ಇಂಜಿನಿಯರಿಂಗ್, ಮೆಡಿಕಲ್ ಬಿಟ್ಟು ಜಗತ್ತಿನಲ್ಲಿ ಇನ್ನೇನಿದೆ ಎಂದು ಹುಡುಕುತ್ತಿದ್ದ. ಕೊಂಚ ಸಾಹಸಪ್ರವೃತ್ತಿಯ ಅವನನ್ನು ಸೆಳೆದದ್ದು ಮರ್ಚೆಂಟ್ ನೇವಿ. ಪ್ರಪಂಚದ ಒಟ್ಟಾರೆ ವಾಣಿಜ್ಯಕ ಸರಕು ಸಾಗಾಣಿಕೆಯ ಶೇ. ೯೦ರಷ್ಟು ವ್ಯವಹಾರ ಈ ಮರ್ಚೆಂಟ್ ನೇವಿಯ ಮೂಲಕವೇ ನಡೆಯುತ್ತದಾದರೂ ಇದರ ಬಗ್ಗೆ ತಿಳಿದುಕೊಂಡವರು ನಮ್ಮಲ್ಲಿ ಕಡಿಮೆ. ಕೋವಿಡ್ ತೆರೆದುತೋರಿಸಿದ ಆನ್ಲೈನ್ ಪ್ರಪಂಚ ತೇಜಸ್ವಿಗೆ ಅಜ್ಞಾತ ಪ್ರಪಂಚದ ಅನಾವರಣ ಮಾಡಿತು.

ಅಲ್ಲಿಂದ ಆರಂಭವಾಯಿತು ಹೊಸ ಧ್ಯಾನ. ಮರ್ಚೆಂಟ್ ನೇವಿ ಸೇರಬೇಕೆಂದರೆ ಅಗತ್ಯವಿರುವ ದೇಹದಾರ್ಢ್ಯ, ಮಾನಸಿಕ ದೃಢತೆ, ತಿಳುವಳಿಕೆ ಸಂಪಾದಿಸಲು ಸದಾ ತಯಾರಿ. ಊಟಕ್ಕೆ ಕೂರುವಾಗ ಪಕ್ಕದಲ್ಲಿ ತಕ್ಕಡಿ ಇಟ್ಟುಕೊಳ್ಳುವ ಅವನನ್ನು ನೋಡಿ ಮನೆಮಂದಿಗೆ ಸೋಜಿಗ. ಬಾಲ್ಯದಿಂದಲೂ ವೈವಿಧ್ಯಮಯ ತಿಂಡಿತಿನಿಸಿನಲ್ಲಿ ಆಸಕ್ತಿಯಿದ್ದ ಹುಡುಗ ಹೊಸ ಜಗತ್ತಿನ ಸೆಳೆತ ಹುಟ್ಟಿಕೊಂಡ ಮೇಲೆ ಶಿಸ್ತಿನ ಸಿಪಾಯಿಯಾಗಿಬಿಟ್ಟ. ಅವನದ್ದೇ ದಿನಚರಿ, ಅವನದ್ದೇ ಆಹಾರ ವಿಹಾರ, ಅವನದ್ದೇ ಕನಸಿನಲೋಕ. ಅಂತರಜಾಲದ ಅಷ್ಟೂ ಸಾಧ್ಯತೆಗಳನ್ನು ಬಳಸಿಕೊಂಡು ಮುಂದಿನ ವರ್ಷಕ್ಕೆ ಸಿದ್ಧವಾಗುತ್ತಿದ್ದ. ಸಾಮಾಜಿಕ ಜಾಲತಾಣಗಳ ಮೂಲಕ ಮರ್ಚೆಂಟ್ ನೇವಿಯಲ್ಲಿದ್ದ ಅನುಭವಸ್ಥರ ಸಂಪರ್ಕ ಮಾಡಿಕೊಂಡು ಅವರಿಂದ ಮಾರ್ಗದರ್ಶನ ಪಡೆದ. ಮಾಕ್ ಟೆಸ್ಟ್, ಮಾಕ್ ಇಂಟರ್ವ್ಯೂಗಳಲ್ಲಿ ಭಾಗವಹಿಸಿದ. ನೋಟ್ಸ್, ಪ್ರಶ್ನೋತ್ತರಗಳನ್ನು ಬರೆಯುತ್ತಾ ನೂರಾರು ಪುಟ ಮುಗಿಸಿದ. 

ನೋಡುತ್ತಲೇ ಪುಣೆಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ತಾನು ಬಯಸಿದ ಕೋರ್ಸಿಗೆ ಆಯ್ಕೆಯಾದ. ಕೋವಿಡ್ ಆತಂಕದಿಂದ ಜಗತ್ತು ನಿಧಾನಕ್ಕೆ ಹೊರಬರುವ ಹೊತ್ತಿಗೆ ಅವನ ಹೊಸ ಪಯಣ ಆರಂಭವಾಯಿತು. ಒಂದು ವರ್ಷದ ಥಿಯರಿ ತರಗತಿಗಳನ್ನು ಮುಗಿಸಿ ಪ್ರಾಯೋಗಿಕ ತರಬೇತಿಗಾಗಿ ಸಿಂಗಾಪುರದಿಂದ ಹಡಗನ್ನೇರಿದ. ಹತ್ತಾರು ದೇಶಗಳ ಕಡಲಕಿನಾರೆಗಳನ್ನು ಮುಟ್ಟಿ, ತನ್ನ ಮೊದಲ ವರ್ಷದ ಸಮುದ್ರಯಾನ ಮುಗಿಸಿ ಮೊನ್ನೆಮೊನ್ನೆ ವಾಪಸಾದ. ತಾನು ಇಷ್ಟಪಟ್ಟದ್ದನ್ನು ಸಾಧಿಸಿದ ತೃಪ್ತಿ ಅವನ ಮುಖದಲ್ಲಿ. ಮಗನ ಬಗ್ಗೆ ಹೆಮ್ಮೆ ಅಪ್ಪ-ಅಮ್ಮನ ಮುಖದಲ್ಲಿ.

ಇದು ಕನ್ನಡದ ಹುಡುಗನೊಬ್ಬನ ಕಥೆ. ಅತ್ತಿತ್ತ ಕಣ್ಣಾಡಿಸಿದರೆ ಇಂತಹ ನೂರೆಂಟು ಕಥೆಗಳು ನಮಗೆ ಸಿಗಬಹುದು- ಕೋವಿಡ್ ಮಹಾಮಾರಿಯಿಂದ ಜಗತ್ತೇ ಕಂಗೆಟ್ಟಿರುವಾಗ, ಅದು ತಂದಿಟ್ಟ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡವರ ಕಥೆಗಳು.

ಜೀವನದಲ್ಲಿ ಎದುರಾಗುವ ಬಹುತೇಕ ಕಷ್ಟಗಳು, ಸವಾಲುಗಳು ವಾಸ್ತವವಾಗಿ ಕಷ್ಟಗಳೇ ಆಗಿರುವುದಿಲ್ಲ. ನಿಜವಾಗಿಯೂ ಅವು ನಮ್ಮೆದುರಿನ ದೊಡ್ಡ ಅವಕಾಶಗಳಾಗಿರುತ್ತವೆ. ಇದನ್ನು ಅರ್ಥ ಮಾಡಿಕೊಂಡವರು ಯಶಸ್ಸು ಪಡೆಯುತ್ತಾರೆ, ಅರ್ಥ ಮಾಡಿಕೊಳ್ಳಲು ವಿಫಲರಾದವರು ಜೀವನದಲ್ಲೂ ವೈಫಲ್ಯ ಕಾಣುತ್ತಾರೆ. ಇನ್ನೇನು ಪ್ರವಾಹದಲ್ಲಿ ಮುಳುಗಿಯೇ ಹೋಗುತ್ತೇನೆ ಎಂದುಕೊಂಡವನಿಗೆ ಕೈಗೆ ಸಿಗುವ ಹುಲ್ಲುಕಡ್ಡಿಯೂ ಆಸರೆಯಾಗುತ್ತದಂತೆ. ಹುಲ್ಲುಕಡ್ಡಿಯಲ್ಲಿ ಆತ ತನ್ನ ಪುನರ್ಜನ್ಮದ ಶಕ್ತಿಯನ್ನು ಕಂಡುಕೊಳ್ಳುವುದು ಮುಖ್ಯ ಅಷ್ಟೇ. 

ಅಡೆತಡೆಗಳು ಇಲ್ಲದಾಗ ಬದುಕು ನೀರಸವೆನಿಸುತ್ತದೆ. ನಿಂತ ನೀರು ಮಾತ್ರ ಉಬ್ಬರವಿಳಿತವಿಲ್ಲದೆ ಇರಬಲ್ಲುದು. ಬದುಕು ಹರಿಯುವ ನದಿಯೆಂದು ನಾವು ಒಪ್ಪಿಕೊಳ್ಳುವುದಾದರೆ ಅಲ್ಲಲ್ಲಿ ಕಲ್ಲುಬಂಡೆಗಳು, ಜಲಪಾತಗಳು, ಕೊರಕಲುಗಳು ಇದ್ದೇ ಇರುತ್ತವೆ. ನೀರು ನಿಂತಲ್ಲೇ ಇದ್ದರೆ ಪಾಚಿ ಕಟ್ಟಿಕೊಂಡು ದುರ್ವಾಸನೆ ಬೀರುತ್ತದೆ. ಅದು ಹರಿಯಲೇಬೇಕು- ಬದುಕಿನ ಥರ. ‘ಸವಾಲುಗಳು ಬದುಕನ್ನು ಆಸಕ್ತಿದಾಯಕವನ್ನಾಗಿಸುತ್ತವೆ. ಅವುಗಳನ್ನು ಮೀರಿದಾಗ ಬದುಕು ಅರ್ಥಪೂರ್ಣವೆನಿಸುತ್ತದೆ’ ಎಂಬ ಮಾತನ್ನು ಇದೇ ಅರ್ಥದಲ್ಲಿ ಹೇಳಿರುವುದು.

ಎಂತೆಂತಹವರೆಲ್ಲ ಆರಾಮ ಜೀವನ ನಡೆಸುತ್ತಿರುತ್ತಾರೆ, ಕಷ್ಟಗಳೆಲ್ಲ ನಮಗೆ ಮಾತ್ರ ಬರುತ್ತಿರುತ್ತವೆ ಎಂದು ಕೊರಗುವವರು ಬಹಳ ಮಂದಿ. ಅವರೆಲ್ಲ ಅರ್ಥ ಮಾಡಿಕೊಳ್ಳಬೇಕಿರುವುದು ಇಷ್ಟೇ: ಕಹಿಯಿಲ್ಲದೆ ಹೋದರೆ ಸಿಹಿ ಯಾವುದೆಂದು ತಿಳಿಯುವುದಿಲ್ಲ, ಕತ್ತಲೆಯೆಂಬುದು ಇಲ್ಲದೆ ಹೋದರೆ ಬೆಳಕಿನ ಮಹಿಮೆ ತಿಳಿಯುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲೂ ನಮ್ಮೆದುರಿನ ಸವಾಲುಗಳ ಅಂತರ್ಯದಲ್ಲಿ ಜಗತ್ತನ್ನು ಬೆರಗುಗೊಳಿಸಬಲ್ಲ ಹೊಸ ಸಾಧ್ಯತೆಗಳಿರುತ್ತವೆ. ನೋಡುವ ಕಣ್ಣುಗಳು ನಮ್ಮದಾಗಿರಬೇಕು ಅಷ್ಟೇ. ಅಡುಗೆ ಮನೆಯಲ್ಲಿ ಒಂದು ಹಿಡಿ ತರಕಾರಿ ಇಲ್ಲದಾಗಲೂ ರುಚಿಕಟ್ಟಾದ ಅಡುಗೆ ಮಾಡಿ ಉಣಬಡಿಸುತ್ತಾಳೆ ಅಮ್ಮ. ಅಂತಹದೊಂದು ಮನಸ್ಸು, ಸಾಮರ್ಥ್ಯ ಅಮ್ಮನಿಗೆ ಇರುತ್ತದೆ. ಇದ್ದುದರಲ್ಲಿ ನಳಪಾಕ ಮಾಡುತ್ತಾಳೆ ಅವಳು. ಬದುಕಿನ ಇತಿಮಿತಿಗಳ ಕಥೆಯೂ ಇದೇ. ಸಾಧ್ಯವೇ ಇಲ್ಲ ಎಂಬ ಸನ್ನಿವೇಶದಲ್ಲೂ ಏನಾದರೊಂದು ಸಾಧ್ಯತೆ ಇದ್ದೇ ಇರುತ್ತದೆ. ಅದನ್ನು ಬಳಸಿಕೊಳ್ಳುವುದು ನಮ್ಮ ಧೋರಣೆಯನ್ನು ಅವಲಂಬಿಸಿದೆ ಅಷ್ಟೇ. 

ಹಿರಿಯರು ಎಷ್ಟು ಚೆನ್ನಾಗಿ ಹೇಳಿದ್ದಾರೆ ನೋಡಿ- ‘ಜೀವನದಲ್ಲಿ ಕಷ್ಟಗಳು ಬರುವುದು ನಮ್ಮನ್ನು ನಾಶ ಮಾಡುವುದಕ್ಕಲ್ಲ; ನಮ್ಮ ಅಂತಃಸತ್ವವನ್ನು ನಮಗೆ ಪರಿಚಯಿಸಿಕೊಡುವುದಕ್ಕೆ’. ನಾವು ಏನು ಎಂದು ನಮಗೆ ಅರ್ಥವಾಗುವುದು ಸವಾಲುಗಳು ಎದುರಾದಾಗಲೇ. ತುಪ್ಪವಾಗಿ ಪರಿಮಳ ಬೀರುವುದಕ್ಕೆ ಬೆಣ್ಣೆಮುದ್ದೆಗೂ ಬಿಸಿ ಬೇಕೇಬೇಕು. ಸದಾ ತಣ್ಣಗೇ ಇರುತ್ತೇನೆಂದರೆ ಸುಮ್ಮನೇ ಮಜ್ಜಿಗೆಯ ಮೇಲೆ ತೇಲುತ್ತಾ ಕಾಲಯಾಪನೆ ಮಾಡಬೇಕಷ್ಟೆ. ಅನಿವಾರ್ಯತೆಯೇ ಅನ್ವೇಷಣೆಯ ತಾಯಿ ಎಂಬ ನಾಣ್ಣುಡಿಯಿದೆ. ಅನಿವಾರ್ಯಗಳು ಎದುರಾದಾಗ ಹೊಸ ಹಾದಿಗಳು ಗೋಚರಿಸುತ್ತವೆ. ಸವಾಲುಗಳು ಎದುರಾದಾಗ ಬುದ್ಧಿ ಚುರುಕಾಗುತ್ತದೆ, ಮನಸ್ಸು ಗಟ್ಟಿಯಾಗುತ್ತದೆ, ಕ್ರಿಯಾಶೀಲತೆ ತೆರೆದುಕೊಳ್ಳುತ್ತದೆ. ಪರಿಹಾರದ ದಾರಿಗಳು ತಾವಾಗಿಯೇ ತೆರೆದುಕೊಳ್ಳುತ್ತವೆ. ಅನಿವಾರ್ಯಗಳೇ ಇಲ್ಲದಾಗ ಮನಸ್ಸು ಜಡವಾಗುತ್ತದೆ, ಬುದ್ಧಿಗೆ ಮಂಕು ಕವಿಯುತ್ತದೆ. ಸೋಮಾರಿ ಮನಸ್ಸು ದೆವ್ವಗಳ ಆಡುಂಬೊಲ. ಏನೂ ಕೆಲಸವಿಲ್ಲದ ಮನಸ್ಸಿಗೆ ಕುಚೇಷ್ಟೆ, ದುರ್ವ್ಯಸನಗಳೇ ಆಕರ್ಷಕ, ರುಚಿಕರ ಎನಿಸುತ್ತವೆ. ಅವು ಚಟಗಳಾಗಿ ಬದಲಾಗುತ್ತವೆ. ಮನುಷ್ಯ ಬದುಕಿದ್ದಾಗಲೇ ಶವವಾಗುವುದಕ್ಕೆ ಇವು ಧಾರಾಳ ಸಾಕು.

ನಡೆಯುವ ಹಾದಿಯಲ್ಲಿ ವಾಸ್ತವವಾಗಿ ನಮಗೆ ಅಡೆತಡೆ ಗೋಚರಿಸುವುದು ತಲುಪಬೇಕಾದ ಗುರಿಯ ಬಗ್ಗೆ ಗೊಂದಲವಿದ್ದಾಗ ಮಾತ್ರ. ಉಳಿದೆಲ್ಲ ದ್ರೋಣಶಿಷ್ಯರಿಗೆ ಮರ, ರೆಂಬೆಕೊಂಬೆ, ಎಲೆ, ಬಳ್ಳಿ, ಹೂವು, ಹಕ್ಕಿ ಕಾಣಿಸಿದಾಗ ಅರ್ಜುನನೊಬ್ಬನಿಗೆ ಹಕ್ಕಿಯ ಕಣ್ಣು ಕಾಣಿಸಿತಲ್ಲ, ಅಂತಹದೇ ಸನ್ನಿವೇಶ ಇದು. ಗಮ್ಯಸ್ಥಾನದ ಬಗ್ಗೆ ಸ್ಪಷ್ಟತೆಯಿದ್ದಾಗ, ಉಳಿದವೆಲ್ಲ ನಗಣ್ಯ ಎನಿಸುತ್ತದೆ. ಗುರಿಯ ಕುರಿತೇ ಅನಾಸಕ್ತಿಯಿದ್ದಾಗ ಹತ್ತಾರು ನೆಪಗಳು ತಾವಾಗಿಯೇ ಎದ್ದುಬಂದು ಕೈಕಾಲಿಗೆ ತೊಡರಿಕೊಳ್ಳುತ್ತವೆ.

ಅನೇಕ ಬಾರಿ ನಮಗೆ ಕಷ್ಟಗಳು ಎದುರಾಗುವುದು ನಾವು ತಪ್ಪು ಮಾಡುತ್ತಿದ್ದೇವೆ ಎಂಬ ಕಾರಣಕ್ಕಲ್ಲ, ಸರಿಯಾದುದನ್ನು ಮಾಡುತ್ತಿದ್ದೇವೆ ಎಂಬ ಕಾರಣಕ್ಕೆ. ಸವಾಲುಗಳು ಎದುರಾದಾಗ ನಮ್ಮ ಹಾದಿ ಸರಿಯಿದೆ ಎಂದು ಭಾವಿಸಿಕೊಳ್ಳುವುದೇ ಸೂಕ್ತ. ನಮ್ಮತ್ತ ಎಸೆದ ಕಲ್ಲುಗಳನ್ನೇ ಆರಿಸಿಕೊಂಡು ಭವಿಷ್ಯದ ಸೌಧ ಕಟ್ಟಿಕೊಳ್ಳುವ ಛಾತಿ, ಆತ್ಮವಿಶ್ವಾಸ ನಮ್ಮದಿರಬೇಕು ಅಷ್ಟೇ. ಇಂತಹ ಅನುಭವಗಳಿರುವ ಕಾರಣಕ್ಕೇ ಹಿರಿಯರ ಮಾತುಗಳನ್ನು ದಾರಿದೀಪ ಎಂದು ನಾವು ತಿಳಿಯಬೇಕಿರುವುದು- “ಬದುಕೇ ಒಂದು ಸವಾಲು, ಏಕೆಂದರೆ ಸವಾಲುಗಳಿಂದ ಮಾತ್ರ ನಾವು ಬೆಳೆಯುವುದು ಸಾಧ್ಯ.” 

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಜೂನ್ 13, 2023

ಬದುಕಿನ ಪಯಣಕ್ಕೆ ದಿಕ್ಸೂಚಿ ಯಾವುದು?

10-16 ಜೂನ್ 2023ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

‘ನಲ್ವತ್ತರ ಈ ವಯಸ್ಸಿನಲ್ಲಿ ಇಂತಹ ಸಾಧನೆ ಮಾಡುವುದು ನಿಮಗೆ ಹೇಗೆ ಸಾಧ್ಯವಾಯಿತು?’ ಜಗತ್ತಿನ ಅತಿ ಎತ್ತರದ ಪರ್ವತ ಶಿಖರ ಮೌಂಟ್ ಎವರೆಸ್ಟನ್ನು ಮೊದಲ ಬಾರಿ ತನ್ನ ಗೆಳೆಯ ಎಡ್ಮಂಡ್ ಹಿಲರಿ ಜತೆಗೆ ಏರಿ ವಿಶ್ವದಾಖಲೆ ನಿರ್ಮಿಸಿದ ತೇನ್‌ಸಿಂಗ್ ನಾರ್ಗೆಯನ್ನು ಪತ್ರಕರ್ತರು ಹೀಗೆ ಪ್ರಶ್ನಿಸಿದರಂತೆ. ‘ಅಯ್ಯೋ ಇದು ನಲ್ವತ್ತನೇ ವಯಸ್ಸಲ್ಲಿ ಸಾಧಿಸಿದ್ದಲ್ಲ, ಹತ್ತುವರ್ಷ ವಯಸ್ಸಿನವನಿರುವಾಗಲೇ ಶುರುಮಾಡಿದ್ದೆ. ಮೊನ್ನೆ ಪೂರೈಸಿದೆ ಅಷ್ಟೇ’ ಎಂದು ಉತ್ತರಿಸಿದನಂತೆ ತೇನ್‌ಸಿಂಗ್.

‘ಹತ್ತು ವರ್ಷದವನಿದ್ದಾಗ ಹಿಮಾಲಯದ ತಪ್ಪಲಲ್ಲಿ ನಾನು ಕುರಿ ಮೇಯಿಸ್ತಾ ಇದ್ದೆ. ಎವರೆಸ್ಟನ್ನು ತೋರಿಸಿ ನನ್ನಮ್ಮ- ನೋಡು ಈ ಶಿಖರವನ್ನು ಈವರೆಗೆ ಯಾರೂ ಹತ್ತಿಲ್ಲ, ನೀನು ಹತ್ತುತ್ತೀಯಾ – ಅಂತ ಕೇಳಿದರು. ಎವರೆಸ್ಟ್ ಹತ್ತುವ ಕನಸು ಅಲ್ಲಿಂದಲೇ ಆರಂಭವಾಯಿತು. ಪ್ರತಿದಿನ ಕುರಿಕಾಯುತ್ತಾ ನಾನು ಮನಸ್ಸಿನಲ್ಲೇ ಎವರೆಸ್ಟ್ ಏರುತ್ತಿದ್ದೆ’ ಎಂದು ತೇನ್‌ಸಿಂಗ್ ವಿವರಿಸಿದನಂತೆ. 

ತೇನ್‌ಸಿಂಗ್ ಕಂಡ ಕನಸು ಮತ್ತು ಅದನ್ನು ಸಾಧಿಸುವ ಛಲ - ಇವೆರಡೇ ಆತನ ಬದುಕಿನ ಪಯಣದ ದಿಕ್ಸೂಚಿಗಳು. ಸಾಧನೆಯ ಹಿಂದಿನ ಪ್ರಬಲ ಪ್ರೇರಣೆ ಒಂದು ದೊಡ್ಡ ಕನಸು. ಸಾಧಕ ತನ್ನ ಅಂತಿಮ ಯಶಸ್ಸನ್ನು ಮನಸ್ಸಿನಲ್ಲಿ ಸದಾ ದೃಶ್ಶೀಕರಿಸಿಕೊಳ್ಳುತ್ತಾ, ಧ್ಯಾನಿಸುತ್ತಾ ಇದ್ದಾಗ ಅದು ಆತ ತನ್ನ ದಾರಿಯಲ್ಲಿ ಹಿಂದೆ ಬೀಳದಂತೆ, ನಿರುತ್ಸಾಹಗೊಳ್ಳದಂತೆ ನಡೆಯುವುದಕ್ಕೆ ಪ್ರೇರಣೆಯಾಗುತ್ತದೆ. ಆದರೆ ಕನಸು ಕಂಡರಷ್ಟೇ ಸಾಲದು, ಸಾಗುವ ದಾರಿಯೂ ಮುಖ್ಯ. ದೊಡ್ಡ ಕನಸಿನ ಸಾಧನೆಗೆ ದೊಡ್ಡ ಪರಿಶ್ರಮವೇ ಬೇಕಾಗುತ್ತದೆ. ಕನಸಿನ ಗುಂಗಿನಲ್ಲೇ ಕಾಲ ಕಳೆಯುತ್ತಾ ಅದಕ್ಕಾಗಿ ವಾಸ್ತವದಲ್ಲಿ ಏನನ್ನಾದರೂ ಮಾಡದೆ ಹೋದರೆ ಕೊನೆಗೆ ಟೊಳ್ಳು ಭ್ರಮೆಯಷ್ಟೇ ಉಳಿದುಕೊಳ್ಳುತ್ತದೆ.

ಜೀವಗತಿಗೊಂದು ರೇಖಾಲೇಖವಿರಬೇಕು
ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ
ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ?
ಆವುದೀ ಜಗಕಾದಿ - ಮಂಕುತಿಮ್ಮ

ಎಂದು ಕೇಳುತ್ತಾರೆ ಡಿ.ವಿ.ಜಿ. ನಾವಿಕನಿಗೆ ದಿಕ್ಸೂಚಿ ಇರುವಂತೆ  ಜೀವನದ ಪಯಣಕ್ಕೂ ಒಂದು ಮಾರ್ಗದರ್ಶನದ ರೇಖೆ ಇರಲೇಬೇಕು; ಯಶಸ್ಸಿನ ತುದಿ-ಮೊದಲಿನ ಸ್ಪಷ್ಟ ಕಲ್ಪನೆ ಇಲ್ಲದೆ ಹೋದರೆ ಅದನ್ನು ಸಾಧಿಸುವುದಾದರೂ ಹೇಗೆ ಎಂಬುದು ಅವರ ಪ್ರಶ್ನೆ. 

ಎಲ್ಲರಿಗೂ ಸಲ್ಲುವಂಥ ಏಕರೂಪದ ದಿಕ್ಸೂಚಿಯೊಂದು ಇರುವುದು ಅಸಾಧ್ಯ. ಒಬ್ಬೊಬ್ಬರನ್ನು ನಡೆಸುವ ಶಕ್ತಿ ಒಂದೊಂದು ಇರಬಹುದು. ಕೆಲವರು ಅದನ್ನು ಕನಸು ಕಾಣುವ ಶಕ್ತಿ ಎನ್ನಬಹುದು, ಇನ್ನು ಕೆಲವರು ಛಲ ಎನ್ನಬಹುದು, ಮತ್ತೆ ಕೆಲವರು ಆತ್ಮವಿಶ್ವಾಸ ಎನ್ನಬಹುದು. ತಮ್ಮ ಕಣ್ಣೆದುರಿನ ಆದರ್ಶವೇ ತಮ್ಮ ದಿಕ್ಸೂಚಿ ಎಂದು ಹಲವರು ಭಾವಿಸಬಹುದು. ಆದರೆ ಎಲ್ಲವೂ ಮೂಲತಃ ನಮ್ಮೊಳಗಿನಿಂದಲೇ ಮೂಡಿಬರಬೇಕು ಎಂಬುದು ಮಾತ್ರ ಸತ್ಯ. ಅದನ್ನು ‘ಅಂತರಂಗದ ಧ್ವನಿ’ ಎಂದೋ, ‘ಆತ್ಮಸಾಕ್ಷಿ’ ಎಂದೋ ಕರೆದರೆ ಚೆನ್ನ.

ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನೂರು ಮಂದಿ ಸಾವಿರ ರೀತಿ ಹೇಳಬಹುದು. ಆದರೆ ಸರಿ-ತಪ್ಪುಗಳನ್ನು ಅಂತಿಮವಾಗಿ ನಿರ್ಧರಿಸಬೇಕಾದವರು ನಾವೇ. ಇಂಥ ಸಂದರ್ಭದಲ್ಲಿ ಅಂತರಂಗದ ಧ್ವನಿ ಮಾತ್ರ ನಮ್ಮ ನೆರವಿಗೆ ಬರುತ್ತದೆ. ಐಎಎಸ್ ತೇರ್ಗಡೆಯಾಗುವ ದೊಡ್ಡ ಕನಸು ಇಟ್ಟುಕೊಂಡ ವ್ಯಕ್ತಿ ಯಾವುದೋ ಕಾರಕೂನಿಕೆಯ ಕೆಲಸ ಸಿಕ್ಕಿತೆಂದು ಅದರಲ್ಲೇ ತೃಪ್ತಿಪಟ್ಟುಕೊಂಡರೆ ಐಎಎಸ್ ಕನಸಿನ ಕತೆಯೇನು? ‘ಬದುಕಿನಲ್ಲಿ ದೊಡ್ಡ ಕನಸುಗಳನ್ನು ನನಸು ಮಾಡಿಕೊಳ್ಳಬೇಕಾದರೆ ಸಣ್ಣಪುಟ್ಟ ತ್ಯಾಗಗಳನ್ನು ಮಾಡಬೇಕಾಗುತ್ತದೆ’ ಎನ್ನುತ್ತಾರೆ ಬಿ.ಜಿ.ಎಲ್. ಸ್ವಾಮಿ. ಸಾಧನೆಯ ಹಾದಿಯ ಇಕ್ಕೆಲಗಳಲ್ಲಿ ಸಾಕಷ್ಟು ಸಣ್ಣಪುಟ್ಟ ಆಕರ್ಷಣೆಗಳು ಇದ್ದೇ ಇರುತ್ತವೆ. ಅವುಗಳೇ ಸಾಕೆಂದು ಮುಂದೆ ಸಾಗುವ ಯೋಚನೆಯನ್ನು ಕೈಬಿಟ್ಟರೆ ಮುಂದೊಂದು ದಿನ ಕೊರಗಬೇಕಾಗುತ್ತದೆ. ಆಗ ಹಾಗೆ ಮಾಡಬಾರದಿತ್ತು ಅಂದುಕೊಳ್ಳುತ್ತೇವೆ. ಆದರೆ ಅಷ್ಟು ಹೊತ್ತಿಗೆ ಬಹಳ ತಡವಾಗಿರುತ್ತದೆ. ಕೆಲವು ತ್ಯಾಗಗಳು ಅನಿವಾರ್ಯ. ಆದರೆ ಅಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಹೊತ್ತು ಸಾಕಷ್ಟು ಸಲ ನೆರವಿಗೆ ಬರುವುದು ನಮ್ಮ ಅಂತರಂಗದ ಧ್ವನಿ ಮಾತ್ರ.

ಇದರರ್ಥ ಹಿರಿಯರ, ಗೆಳೆಯರ ಮಾತುಗಳಿಗೆ ಕಿವಿಗೊಡಬಾರದು ಎಂದೇ? ಖಂಡಿತ ನಾಲ್ಕು ಮಂದಿಯ ಅಭಿಪ್ರಾಯವನ್ನು ಪರಿಗಣಿಸಬೇಕು. ಅನೇಕ ಸಂದರ್ಭ ಗೊಂದಲಗಳು ಏರ್ಪಡುತ್ತೇವೆ. ಮುಂದೇನು ಎಂಬ ಅಯೋಮಯ ಸನ್ನಿವೇಶ ಎದುರಾಗುತ್ತದೆ. ಅಂತಹ ಸಂದರ್ಭ ಹಿರಿಯರ ಇಲ್ಲವೇ ಸ್ನೇಹಿತರ ಸಲಹೆಯನ್ನು ಕೇಳುವುದರಲ್ಲಿ ತಪ್ಪೇನೂ ಇಲ್ಲ. ‘ಅಪ್ಪ ನೆಟ್ಟ ಆಲದ ಮರಕ್ಕೆ ಯಾಕೆ ಜೋತು ಬೀಳಬೇಕು?’ ಎಂಬ ಉಡಾಫೆ ಸಾಕಷ್ಟು ಮಂದಿಯಲ್ಲಿ ಇರುತ್ತದೆ. ಅಪ್ಪ ನೆಟ್ಟ ಆಲದ ಮರವೂ ಮಹತ್ವದ್ದೇ. ಹಳೆಯದು, ಹಳಬರು ಎಂಬ ಕಾರಣಕ್ಕೆ ಎಲ್ಲವೂ ವರ್ಜ್ಯವಲ್ಲ. ನಮ್ಮ ಬೇರುಗಳನ್ನಂತೂ ಮರೆಯಬಾರದು. ಎಷ್ಟೇ ಉನ್ನತ ಹಂತಕ್ಕೆ ತಲುಪಿದರೂ ನಮ್ಮ ಮೂಲದ ನೆನಪು ಇರಲೇಬೇಕು. ಆದರೆ ನಾಲ್ಕು ಮಂದಿಯ ಬಳಿ ಅಭಿಪ್ರಾಯ ಕೇಳಿದ ಮೇಲೂ ಅಂತಿಮ ನಿರ್ಧಾರ ತೆಗೆದುಕೊಳ್ಳುವವರು ನಾವೇ ಆಗಿರಬೇಕು.

ಅನೇಕ ಸಂದರ್ಭಗಳಲ್ಲಿ ನಮ್ಮನ್ನು ದಾರಿ ತಪ್ಪಿಸುವವರು, ನಿರುತ್ತೇಜಿಸುವವರು ಬಹಳ ಮಂದಿ ಇರುತ್ತಾರೆ. ಅವರಲ್ಲಿ ನಾವು ‘ಆತ್ಮೀಯರು’ ಎಂದು ನಂಬಿದವರೂ ಇರುತ್ತಾರೆ. ಯಾವುದೋ ಒಂದು ಮಹತ್ವಾಕಾಂಕ್ಷೆಯನ್ನೇ ನೆಚ್ಚಿ ವಿಶ್ವಾಸದಿಂದ ಮುಂದೆ ಸಾಗುತ್ತಿರುವಾಗ ನಮ್ಮನ್ನು ಹಿಂದಕ್ಕೆ ಎಳೆಯುವವರು, ಆಮಿಷ ಒಡ್ಡುವವರು, ಉತ್ಸಾಹವನ್ನು ಕುಗ್ಗಿಸುವವರು, ಟೀಕಿಸುವವರು ಇದ್ದೇ ಇರುತ್ತಾರೆ. ಅವರ ತಂತ್ರಗಳಿಗೆ ಬಲಿಯಾದರೆ ಅಲ್ಲಿಗೆ ಕತೆ ಮುಗಿದಂತೆ. ವಾಸ್ತವವಾಗಿ ಇವೇ ನಮ್ಮ ಅಗ್ನಿಪರೀಕ್ಷೆಯ ಕ್ಷಣಗಳು. ಟೀಕೆಗಳನ್ನು ನಿರುಮ್ಮಳವಾಗಿ ಕೇಳಿಸಿಕೊಳ್ಳಬೇಕು. ಅವು ಪೊಳ್ಳು ಎಂದು ಅನಿಸಿದರೆ ನಿರ್ಲಕ್ಷಿಸಿ ಮುಂದೆ ಸಾಗಬೇಕು. ಅವುಗಳಲ್ಲೂ ಸತ್ವವಿದೆ ಅನಿಸಿದರೆ ಅವುಗಳನ್ನು ಆತ್ಮವಿಮರ್ಶೆಯ ಪರಿಕರಗಳನ್ನಾಗಿ ಬಳಸಬೇಕು. ಆ ಹಂತವನ್ನು ದೃಢಚಿತ್ತದಿಂದ ದಾಟಿ ಮುಂದೆ ಹೋದರೆ ನಮ್ಮ ಯಶಸ್ಸನ್ನು ಕಸಿದುಕೊಳ್ಳುವವರು ಯಾರೂ ಇಲ್ಲ.

ಈ ದೃಢಚಿತ್ತ ಹುಟ್ಟಿಕೊಳ್ಳುವುದು ಸ್ವಂತಿಕೆಯಲ್ಲಿ. ಅದು ಒಳಗಿನಿಂದ ಹೊಮ್ಮುವ ಬೆಳಕು. ಎರವಲು ಪಡೆದದ್ದು ತಾತ್ಕಾಲಿಕ; ಸ್ವತಂತ್ರವಾಗಿ ಆರ್ಜಿಸಿಕೊಂಡದ್ದಷ್ಟೇ ಬದುಕಿನ ಶಾಶ್ವತ ದಿಕ್ಸೂಚಿ. ಆದ್ದರಿಂದ ನಮ್ಮೆದುರಿನದ್ದು ಎಷ್ಟೇ ಚೆನ್ನಾಗಿದ್ದರೂ ಅದನ್ನು ನಕಲು ಮಾಡುವುದು ಬೇಡ. ಅದರಿಂದ ಪ್ರೇರಣೆಯನ್ನಷ್ಟೇ ಪಡೆಯೋಣ.

ಬದುಕಿನ ಪಯಣಕ್ಕೆ ಬೇಕಾದದ್ದು ನಕಾಶೆಯೋ ದಿಕ್ಸೂಚಿಯೋ ಎಂಬ ಮೂಲಪ್ರಶ್ನೆಯಿದೆ. ನಕಾಶೆ ಎಂದರೆ ಈಗಾಗಲೇ ಯಾರೋ ತಯಾರಿಸಿಟ್ಟಿರುವ ಚಿತ್ರ. ನಾವು ಎಲ್ಲಿ, ಹೇಗೆ ಸಾಗಬೇಕು ಎಂದು ಅದು ಮಾರ್ಗದರ್ಶನ ಮಾಡುತ್ತದೆ. ನಾವು ಅದರ ಪ್ರಕಾರ ಹೋದರೆ ನಿರ್ದಿಷ್ಟ ಸ್ಥಳವನ್ನು ತಲುಪಬಹುದು. ಹೊಸ ಸಾಧ್ಯತೆಗಳ ಬಗ್ಗೆ ನಾವು ಯೋಚಿಸುವುದೇ ಇಲ್ಲ. ಆದರೆ ದಿಕ್ಸೂಚಿ ದಿಕ್ಕನ್ನು ಮಾತ್ರ ತೋರಿಸುತ್ತದೆ. ನಮ್ಮ ದಾರಿಯನ್ನು ನಾವೇ ರೂಪಿಸಿಕೊಳ್ಳಬೇಕು. ಈ ಪಯಣದಲ್ಲಿ ಒಂದು ಬಗೆಯ ಹೊಸತನ ಮತ್ತು ಇದನ್ನು ನಾವೇ ಸಾಧಿಸಿದೆವೆಂಬ ಹೆಚ್ಚುವರಿ ತೃಪ್ತಿಯೂ ಇರುತ್ತದೆ. ಇದು ಅರ್ಥವಾದರೆ ಬದುಕಿನ ಪಯಣ ರೋಚಕ ಮತ್ತು ಸಾರ್ಥಕ.

- ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಏಪ್ರಿಲ್ 14, 2023

ಮನದೊಳಗಣ ಕಿಚ್ಚು ಮನವ ಸುಡುವುದು

15-21 ಏಪ್ರಿಲ್ 2023ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ.

ಕಿಚ್ಚನಾರಿಸಬಹುದು ಹೊಟ್ಟೆಯ | ಕಿಚ್ಚಿಗೌಷಧವುಂಟೆ ಲೋಕದಿ | ಮಚ್ಚರವು ಜೀವಂತ ಸುಡುವುದು ನಿಚ್ಚವೆಮ್ಮ || ಎಂದು ಬರೆಯುತ್ತಾರೆ ಯುವ ಯಕ್ಷಗಾನ ಕವಿ ಶಿವಕುಮಾರ ಅಳಗೋಡು. ಅಸೂಯೆ ಎಷ್ಟು ಘೋರವಾದದ್ದು ಎಂಬುದನ್ನು ಎಷ್ಟೊಂದು ಸರಳವಾಗಿ ಚಿತ್ರಿಸಿದ್ದಾರೆ! ಭೌತಿಕವಾಗಿ ಕಾಣುವ ಬೆಂಕಿಯನ್ನು ಹೇಗಾದರೂ ನಂದಿಸಬಹುದು, ಆದರೆ ಒಳಗಿನ ಕಿಚ್ಚಿಗೆ ಪರಿಹಾರವಿಲ್ಲ; ಅದು ವ್ಯಕ್ತಿಯನ್ನು ದಿನವೂ ಸುಡುತ್ತಿರುತ್ತದೆ ಎಂಬ ಮಾತು ನೂರು ಪ್ರತಿಶತ ಸತ್ಯ.

ಅಸೂಯೆ ಎಂಬ ಬೆಂಕಿ ವ್ಯಕ್ತಿಗಳನ್ನಷ್ಟೇ ಅಲ್ಲ, ರಾಜ್ಯ-ಕೋಶಗಳನ್ನೇ ಸುಟ್ಟುಹಾಕಿದೆ,  ಸಾಮ್ರಾಜ್ಯಗಳನ್ನೇ ಬೂದಿಮಾಡಿದೆ, ವಂಶಗಳೇ ಅಳಿದುಹೋಗುವಂತೆ ಮಾಡಿದೆ. ಅದು ಅಂತಿಂಥ ಕಿಚ್ಚಲ್ಲ. ಬದುಕನ್ನೇ ನಿರ್ನಾಮ ಮಾಡುವ ಕಿಚ್ಚು. ಕಾಳ್ಗಿಚ್ಚನ್ನಾದರೂ ಕಟ್ಟಿಹಾಕಬಹುದು, ಈರ್ಷ್ಯೆಯನ್ನಲ್ಲ. ಬರಿಗಣ್ಣಿಗೆ ತಕ್ಷಣ ಕಾಣದೆ ಇರುವ ಈ ಜ್ವಾಲೆ ಕೆನ್ನಾಲಿಗೆಯಾದ ಮೇಲೆ ತಡೆಯುವುದು ಕಷ್ಟ.

ಕೈಕೇಯಿಯ ಅಸೂಯೆಯಿಂದ ರಾಮಾಯಣವಾಯಿತು; ಗಾಂಧಾರಿಯ ಅಸೂಯೆಯಿಂದ ಮಹಾಭಾರತವೇ ಸೃಷ್ಟಿಯಾಯಿತು. ರಾಮ ಕಾಡಿಗೆ ಹೋದದ್ದರಿಂದಲಾದರೂ ಭೂಭಾರ ಹರಣ ಆಯಿತು. ಆದರೆ ಗಾಂಧಾರಿ ಹೊಟ್ಟೆ ಹಿಸುಕಿಕೊಂಡದ್ದರಿಂದ ನೂರೊಂದು ಕೌರವರು ಹುಟ್ಟಿಕೊಂಡುಬಿಟ್ಟರು. ಇಡೀ ಮಹಾಭಾರತವೇ ದಾಯಾದಿ ಕಲಹದ ವೇದಿಕೆಯಾಯಿತು. ಗಾಂಧಾರಿ ಯಾವ ಅಸಹನೆಯಿಂದ ತನ್ನ ಗರ್ಭವನ್ನು ಹಿಸುಕಿಕೊಂಡಳೋ ಅದೇ ಅಸಹನೆ ಸಮಸ್ತ ಕೌರವರ ಸ್ಥಾಯೀಗುಣವೇ ಆಗಿ ಕೊನೆಗೆ ಕುರುಕ್ಷೇತ್ರವೇ ನಿರ್ಮಾಣವಾಯಿತು.

ಧೃತರಾಷ್ಟ್ರನಂತೂ ಹುಟ್ಟುಕುರುಡ. ಆತನಿಗಿಲ್ಲದ ದೃಷ್ಟಿ ತನಗೂ ಬೇಡ ಎಂದು ಗಾಂಧಾರಿ ತಾನೂ ದೃಷ್ಟಿಯನ್ನು ಬಂಧಿಸಿಕೊಂಡಳು. ವಿಚಿತ್ರವೆಂದರೆ ಕೌರವರೆಲ್ಲರೂ ಈರ್ಷ್ಯೆಯೆಂಬ ಬಟ್ಟೆಯಿಂದ ತಮ್ಮ ಅಂತರಂಗದ ಕಣ್ಣುಗಳನ್ನೇ ಕಟ್ಟಿಕೊಂಡರು. ಅಸೂಯೆ ಒಳಗಣ್ಣನ್ನೇ ಕುರುಡಾಗಿಸುತ್ತದೆ. ಅದು ಮನುಷ್ಯನನ್ನು ಯೋಚಿಸದಂತೆ ಮಾಡುತ್ತದೆ, ಆತ್ಮಾವಲೋಕನದ ಶಕ್ತಿಯನ್ನು ಕುಂದಿಸುತ್ತದೆ. ಹೇಗಾದರೂ ಮಾಡಿ ತನ್ನ ಪ್ರತಿಸ್ಪರ್ಧಿಯನ್ನು ಮಣಿಸಬೇಕು ಎಂಬ ಉದ್ದೇಶ ಪ್ರಬಲವಾಗುತ್ತದೆಯೇ ಹೊರತು ತಾನೇಕೆ ಹೀಗಾಗಿದ್ದೇನೆ ಎಂದು ಚಿಂತಿಸುವುದೇ ಇಲ್ಲ. ತನ್ನ ಒಂದು ಕಣ್ಣು ಹೋದರೂ ಅಡ್ಡಿಯಿಲ್ಲ, ಎದುರಾಳಿಯ ಎರಡೂ ಕಣ್ಣು ಹೋಗಲಿ ಎಂಬ ಭಾವನೆಯೇ ಇಲ್ಲಿ ಪ್ರಬಲ.

ಉದ್ಯೋಗ, ವ್ಯವಹಾರ, ಸಂಪತ್ತು, ಸಂಬಂಧ- ಎಲ್ಲ ಕಡೆಗಳಲ್ಲೂ ಮತ್ಸರ ಅನಾಹುತಗಳನ್ನು ಸೃಷ್ಟಿಸಬಲ್ಲದು. ಇನ್ನೊಬ್ಬ ತನಗಿಂತ ಮುಂದಿರಬಾರದು ಎಂಬ ಮನಸ್ಥಿತಿಯೇ ಈ ಮತ್ಸರಕ್ಕೆ ಕಾರಣ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಈ ಮನಸ್ಥಿತಿಯ ಮೂಲಕಾರಣ ಸ್ಪರ್ಧೆ ಎಂಬುದಕ್ಕಿಂತಲೂ ವ್ಯಕ್ತಿಯ ಕೀಳರಿಮೆ ಎಂಬುದೇ ನಿಜ. ‘ಅಸೂಯೆ ಎಂಬುದು ಒಬ್ಬ ವ್ಯಕ್ತಿಯ ಕೀಳರಿಮೆಯ ಅಂತಃಪ್ರಜ್ಞೆ. ಅದೊಂದು ಮಾನಸಿಕ ಕ್ಯಾನ್ಸರ್’ ಎನ್ನುತ್ತಾನೆ ಫೋರ್ಬ್ಸ್. ಗುಣ, ರೂಪ, ಹಣ, ಜ್ಞಾನ, ಅಂತಸ್ತು, ಜನಪ್ರಿಯತೆ- ಯಾವ ವಿಷಯದಲ್ಲಾದರೂ ಈ ಕೀಳರಿಮೆ ಹುಟ್ಟಿಕೊಳ್ಳಬಹುದು. ಇಂತಹ ವಿಷಯಗಳಲ್ಲಿ ಇನ್ನೊಬ್ಬನ ಮಟ್ಟಕ್ಕೆ ಏರುವುದು ತನಗೆ ಸಾಧ್ಯವಿಲ್ಲ ಎಂದು ವ್ಯಕ್ತಿಗೆ ಅನ್ನಿಸಿದಾಗ ಅದು ಕೀಳರಿಮೆಯಾಗಿ ಬೆಳೆಯುವುದುಂಟು. ಅಸೂಯೆ ಕೀಳರಿಮೆಯ ಇನ್ನೊಂದು ಮುಖ.

ಕೀಳರಿಮೆಗೆ ಕಾರಣ ವಾಸ್ತವವನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿ. ಒಬ್ಬೊಬ್ಬ ವ್ಯಕ್ತಿಯೂ ಅವನದೇ ನೆಲೆಯಲ್ಲಿ ವಿಶಿಷ್ಟ ಮತ್ತು ಅನನ್ಯ. ಒಬ್ಬ ವ್ಯಕ್ತಿ ಯಾವುದೋ ಒಂದು ವಿಷಯದಲ್ಲಿ ಗಟ್ಟಿಗನಾಗಿದ್ದಾನೆಂದರೆ ಇನ್ನೊಬ್ಬ ವ್ಯಕ್ತಿ ಎಲ್ಲ ವಿಷಯಗಳಲ್ಲೂ ದುರ್ಬಲ ಎಂದರ್ಥವಲ್ಲ. ಅವನಿಗೆ ಅವನದ್ದೇ ಆದ ವೈಶಿಷ್ಟ್ಯಗಳಿರಬಹುದು, ಮತ್ತು ಅವುಗಳ ಮೂಲಕ ಯಶಸ್ಸು ಸಾಧಿಸಬಹುದು. ಒಂದು ವಿಷಯದಲ್ಲಿ ಗಟ್ಟಿಗ ಎನಿಸಿಕೊಂಡವನು ಉಳಿದ ಹತ್ತಾರು ವಿಷಯಗಳಲ್ಲಿ ದುರ್ಬಲನಾಗಿರಬಹುದು. ನಿಜವಾಗಿ ನೋಡಿದರೆ ಪರಿಪೂರ್ಣತೆಯೆಂಬುದು ಒಂದು ಭ್ರಮೆ. ಒಬ್ಬ ವ್ಯಕ್ತಿ ಪರಿಪೂರ್ಣನಾಗಿರುವುದು ಸಾಧ್ಯವೇ ಇಲ್ಲ. ಇದಿಷ್ಟು ಸ್ಪಷ್ಟ ಇರುವವನಿಗೆ ಇನ್ನೊಬ್ಬನ ಕುರಿತು ಮತ್ಸರ ಹುಟ್ಟಿಕೊಳ್ಳುವುದು ಸಾಧ್ಯವೇ ಇಲ್ಲ. ‘ಹೋಲಿಸಿಕೊಳ್ಳದೆ ಬದುಕುವುದೆಂದರೆ ದೊಡ್ಡ ಹೊರೆಯೊಂದನ್ನು ಇಳಿಸಿಕೊಂಡಂತೆ’ ಎನ್ನುತ್ತಾರೆ ಜಿಡ್ಡು ಕೃಷ್ಣಮೂರ್ತಿ. 

ತಾನು ಯಾರೊಂದಿಗೂ ಸ್ಪರ್ಧಿಸಬೇಕಿಲ್ಲ, ತನಗೆ ತಾನೇ ಸ್ಪರ್ಧಿ; ಪ್ರತಿದಿನವೂ ತನ್ನನ್ನು ತಾನು ಮೀರುವ ದಾರಿಯಲ್ಲಿ ಸಾಗಬೇಕು ಎಂಬ ಮನಸ್ಥಿತಿ ಬೆಳೆಸಿಕೊಂಡರೆ ಪ್ರತಿಸ್ಪರ್ಧಿಗಳಿಂದ ತನಗೆ ತೊಂದರೆಯಿದೆ ಎಂದು ಯಾವ ವ್ಯಕ್ತಿಗೂ ಅನ್ನಿಸಲಾರದು. ಉದ್ಯೋಗ ಸ್ಥಳದಲ್ಲೇ ಆಗಿರಲಿ, ತಾನು ಗರಿಷ್ಠ ಪ್ರಯತ್ನದೊಂದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅದಕ್ಕೆ ಸೂಕ್ತ ಪ್ರತಿಫಲ ಇಂದಲ್ಲ ನಾಳೆಯಾದರೂ ಸಿಕ್ಕಿಯೇ ಸಿಗುತ್ತದೆ ಎಂದು ಭಾವಿಸಿದವನಿಗೆ ಅಸೂಯೆಯ ಕಿಚ್ಚು ಕಾಡಲಾರದು. 

ಇದು ನಮ್ಮನ್ನು ಅಸೂಯೆ ಕಾಡದಂತೆ ನೋಡಿಕೊಳ್ಳುವ ಬಗೆಯಾಯಿತು. ನಮ್ಮನ್ನು ನೋಡಿ ಇನ್ನೊಬ್ಬ ಅಸೂಯೆಪಟ್ಟುಕೊಳ್ಳುತ್ತಿದ್ದಾನೆ, ಹೋದ ದಾರಿಗೆಲ್ಲ ಅಡ್ಡಬರುತ್ತಿದ್ದಾನೆ ಎಂದು ಅನಿಸುತ್ತಿದೆಯೇ? ಅಂಥವರ ಬಗ್ಗೆ ಎಳ್ಳಷ್ಟೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಮತ್ಸರವೆಂಬುದು ವ್ಯಕ್ತಿಯ ಒಳಗಿನ ಕಿಚ್ಚು ಎಂದು ಆಗಲೇ ಹೇಳಿಯಾಯಿತು. ಕಿಚ್ಚು ಒಳಗೆ ಇದೆ ಎಂದ ಮೇಲೆ ಅದು ಲೋಕವನ್ನು ಸುಡುವುದಕ್ಕಿಂತ ಮುಂಚೆ ವ್ಯಕ್ತಿಯನ್ನೇ ಸುಡುತ್ತದೆ. ವಾಸ್ತವವಾಗಿ ಅಂಥವರು ಪ್ರತಿದಿನವೂ ತಮ್ಮೊಳಗೇ ಸುಟ್ಟುಹೋಗುತ್ತಿರುತ್ತಾರೆ; ಯಾವುದೋ ಒಂದು ದಿನ ನೋಡನೋಡುತ್ತಿದ್ದಂತೆಯೇ ಕರಕಲಾಗುತ್ತಾರೆ. ‘ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು’ ಎಂದು ಬಸವಣ್ಣನೇ ಹೇಳಿಲ್ಲವೇ? ಇನ್ನೊಬ್ಬನನ್ನು ನೋಡಿ ಅಸೂಯೆಪಡುವವರಿಗೆ ಮಾನಸಿಕ ನೆಮ್ಮದಿಯೇ ಇರುವುದಿಲ್ಲ. ಅವರು ಸದಾ ಅತೃಪ್ತಿ, ಅಶಾಂತಿಗಳಿಂದ ಒಳಗೊಳಗೇ ಬೇಯುತ್ತಿರುತ್ತಾರೆ. ಕುದಿಯುವವರು ಆವಿಯಾಗುತ್ತಾರೆ, ಉರಿಯುವವರು ಬೂದಿಯಾಗುತ್ತಾರೆ ಎಂಬ ಮಾತೇ ಇದೆಯಲ್ಲ! 

ಇನ್ನೊಂದು ವಿಚಾರ ಏನೆಂದರೆ, ಯಾರೋ ನಮ್ಮನ್ನು ನೋಡಿ ಮತ್ಸರಪಡುತ್ತಿದ್ದಾರೆ ಎಂದರೆ ನಾವು ಸಾಧನೆಯ ದಾರಿಯಲ್ಲಿದ್ದೇವೆ ಎಂದು ಅರ್ಥ. ಸೋತವರನ್ನು ನೋಡಿ ಯಾರೂ ಅಸೂಯೆಪಡುವುದಿಲ್ಲವಲ್ಲ! “ನಿಮ್ಮನ್ನು ನೋಡಿ ಅಸೂಯೆಪಡುವವರನ್ನು ದ್ವೇಷಿಸಬೇಡಿ. ಅವರು ವಾಸ್ತವವಾಗಿ ತಮಗಿಂತ ನೀವೇ ಉತ್ತಮ ಎಂದು ಭಾವಿಸಿಕೊಂಡಿರುತ್ತಾರೆ. ಅಂಥವರಿಗೆ ಮನಸ್ಸಿನಲ್ಲೇ ಕೃತಜ್ಞತೆ ಹೇಳಿ ಮುಂದಕ್ಕೆ ಹೋಗುತ್ತಾ ಇರಿ” ಎಂದು ದಾರ್ಶನಿಕರು ಇದೇ ಕಾರಣಕ್ಕೆ ಹೇಳಿರುವುದು.

ಯಾವ ಸುಯೋಧನನ ಮತ್ಸರದಿಂದ ಕುರುಕ್ಷೇತ್ರ ಸೃಷ್ಟಿಯಾಯಿತೋ, ಅದೇ ಸುಯೋಧನ ಒಂದು ಹಂತದಲ್ಲಿ ತನ್ನ ಪ್ರತಿಸ್ಪರ್ಧಿಯ ಶೌರ್ಯವನ್ನು ಮೆಚ್ಚಿದ್ದುಂಟಂತೆ. ಯುದ್ಧದಲ್ಲಿ ಭೀಮನ ಪರಾಕ್ರಮವನ್ನು ನೋಡಿದ ಕೌರವ ‘ಸದ್ಗುಣಕೆ ಮತ್ಸರವೆ’ ಎಂದುಕೊಳ್ಳುತ್ತಾನೆ (ಕುಮಾರವ್ಯಾಸಭಾರತ). ಇನ್ನೊಬ್ಬನ ಸದ್ಗುಣವನ್ನು, ಒಳ್ಳೆಯತನವನ್ನು, ನ್ಯಾಯಮಾರ್ಗದಲ್ಲಿ ಗಳಿಸುವ ಯಶಸ್ಸನ್ನು ನೋಡಿ ಖಂಡಿತ ಮತ್ಸರಪಟ್ಟುಕೊಳ್ಳಬಾರದು. ಇನ್ನೊಬ್ಬನನ್ನು ಪ್ರಾಮಾಣಿಕವಾಗಿ ಅಭಿನಂದಿಸುವುದರಲ್ಲಿ ಇರುವ ಆತ್ಮಸಂತೋಷ ಬೇರೆಡೆ ಸಿಗಲಾರದು. ‘ಸರ್ವಂ ಪರಿಕ್ರೋಶಮ್ ಜಹಿ’ (ಎಲ್ಲ ಬಗೆಯ ಮತ್ಸರವನ್ನು ತ್ಯಜಿಸು) ಎನ್ನುತ್ತದೆ ಋಗ್ವೇದ. ವೇದದ ಬೆಳಕು ನಮ್ಮನ್ನು ಮುನ್ನಡೆಸಲಿ.

- ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಫೆಬ್ರವರಿ 24, 2023

ಒತ್ತಡ ಒಳ್ಳೆಯದು!

18-24 ಫೆಬ್ರವರಿ 2023ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಕಾಲೇಜು ಕಾಲದ ಅಥವಾ ಬೇರೆ ಯಾವುದೋ ಪರೀಕ್ಷೆಯ ದಿನಗಳನ್ನೊಮ್ಮೆ ನೆನಪಿಸಿಕೊಳ್ಳಿ. ತಡರಾತ್ರಿಯವರೆಗೆ, ಕೆಲವೊಮ್ಮ ರಾತ್ರಿಯೆಲ್ಲ ಓದು, ನಿದ್ದೆಯ ಕೊರತೆ, ದೈಹಿಕ-ಮಾನಸಿಕ ನಿತ್ರಾಣ... ಅಬ್ಬಾ, ಈ ಪರೀಕ್ಷೆ ಒಮ್ಮೆ ಮುಗಿದರೆ ಸಾಕಪ್ಪಾ, ಆಮೇಲೆ ಮೂರು ಹಗಲು ಮೂರು ರಾತ್ರಿ ಉದ್ದಕ್ಕೆ ನಿದ್ದೆ ಮಾಡುವುದೇ ಎಂದೆಲ್ಲ ನೀವು ಕನಸು ಕಾಣುತ್ತಿದ್ದಿರಬಹುದು. ಸರಿ, ಪರೀಕ್ಷೆ ಮುಗಿಯಿತು, ಇನ್ನು ಆರಾಮ; ಎಷ್ಟು ಬೇಕಾದರೂ ನಿದ್ದೆ ಮಾಡಬಹುದು ಅಂತೇನಾದರೂ ಮಲಗಲು ಪ್ರಯತ್ನಪಟ್ಟಿರೋ, ನಿದ್ದೆ ಅಷ್ಟು ಸುಲಭಕ್ಕೆ ನಿಮ್ಮ ಬಳಿ ಸುಳಿಯದು. ಪರೀಕ್ಷೆಯ ಜೊತೆಗೆ ಅದೂ ಎಲ್ಲೋ ದೂರಕ್ಕೆ ಹಾರಿರುತ್ತದೆ. ಒಂದೆರಡು ದಿನ ನೀವೂ ಅಯೋಮಯರಾಗಿ ಮಂಕುಬಡಿದವರಂತೆ ಕುಳಿತಿರುತ್ತೀರಿ. ನಿದ್ರೆಯೂ ಬಾರದು, ಹೊಸದೇನನ್ನಾದರೂ ಮಾಡುವುದಕ್ಕೆ ಮನಸ್ಸೂ ಒಪ್ಪದು. ‘ನನ್ನ ತಲೆಯೇ ಓಡುತ್ತಿಲ್ಲ’ ಎಂದು ಸಹವರ್ತಿಗಳ ಜೊತೆ ನೀವು ಹೇಳಿದ್ದನ್ನು ಜ್ಞಾಪಿಸಿಕೊಳ್ಳಿ.

ಪರೀಕ್ಷೆಯ ದಿನಗಳೇ ಆಗಬೇಕಿಲ್ಲ. ಬೇರೆ ಯಾವುದೇ ಒತ್ತಡದ ಸಂದರ್ಭ ಆಗಿರಬಹುದು. ಒಂದಷ್ಟು ದಿನ ನಿಮಿಷವೂ ಬಿಡುವಿಲ್ಲದೆ ನಿರಂತರವಾಗಿ ಕೆಲಸಕಾರ್ಯಗಳಲ್ಲಿ ವ್ಯಸ್ತರಾಗಿದ್ದು, ಅದು ಮುಗಿದ ಮೇಲೆ ಕಾಡುವ ಖಾಲಿತನವನ್ನು ನೆನಪಿಸಿಕೊಳ್ಳಿ. ಅಲ್ಲಿಯೂ ಹೀಗೆಯೇ ಆಗುತ್ತದೆ. ಎಲ್ಲ ಕೆಲಸ ಮುಗಿಸಿ ಕೊಂಚ ಬಿಡುವಾದ ಮೇಲೆ ಯಾವುದೋ ಒಂದು ಹೊಸದನ್ನು ಕೈಗೆತ್ತಿಕೊಳ್ಳೋಣ ಎಂದುಕೊAಡಿದ್ದರೆ, ಅದಕ್ಕೊಂದು ಮುಹೂರ್ತವೇ ಒದಗುವುದಿಲ್ಲ. ಮನಸ್ಸು ಏಕಾಗ್ರತೆ ಇಲ್ಲದೆ ಅತ್ತಿಂದಿತ್ತ ಇತ್ತಿಂದತ್ತ ಎತ್ತೆತ್ತಲೋ ಅಡ್ಡಾಡಿಕೊಂಡಿರುತ್ತದೆ. ಅರೆ, ಹತ್ತುಹಲವು ಕೆಲಸಗಳಿದ್ದಾಗ ಇದೊಂದನ್ನು ಮಾಡಿಮುಗಿಸಲು ಅರ್ಧ ಗಂಟೆ ಸಾಕಾಗುತ್ತಿತ್ತು, ಈಗ ದಿನಗಟ್ಟಲೆ ತೆಗೆದುಕೊಂಡರೂ ಕೆಲಸ ಪೂರ್ತಿಯಾಗುತ್ತಿಲ್ಲ ಎಂದು ನಿಮ್ಮೊಳಗೆಯೇ ಅಚ್ಚರಿಪಟ್ಟುಕೊಂಡ ಉದಾಹರಣೆಗಳೂ ಇರಬಹುದು.

ಹೌದು, ಇದು ಮನುಷ್ಯನ ಮೂಲಸ್ವಭಾವ. ಯಾವುದೇ ಕೆಲಸವನ್ನು ಗುಣಮಟ್ಟದೊಂದಿಗೆ ನಿರ್ವಹಿಸಬೇಕಾದರೆ ಒಂದು ‘ಫೋಕಸ್’ ಬೇಕು. ಈ ಫೋಕಸ್ ಹುಟ್ಟಿಕೊಳ್ಳುವುದು ಒತ್ತಡದಲ್ಲಿ. ‘ಅನಿವಾರ್ಯವೇ ಅನ್ವೇಷಣೆಯ ತಾಯಿ’ ಎಂಬ ಮಾತೇ ಇದೆಯಲ್ಲ! ಇಲ್ಲಿ ಒಂದು ಕೆಲಸವನ್ನು ಮಾಡಿಮುಗಿಸಲೇಬೇಕಾದ ಅನಿವಾರ್ಯವೇ ಕೆಲಸದ ಹಿಂದಿನ ಪ್ರೇರಣಾಶಕ್ತಿ. ಆಗ ಫೋಕಸ್ ತಾನೇತಾನಾಗಿ ಸೃಷ್ಟಿಯಾಗಿರುತ್ತದೆ. ಅದು ಇದ್ದಾಗ ಮನಸ್ಸು ಅಸ್ಥಿರಗೊಳ್ಳುವುದಿಲ್ಲ; ಮರ್ಕಟನಂತೆ ಅಲ್ಲಿ ಇಲ್ಲಿ ಅಡ್ಡಾಡುವುದಕ್ಕೆ ಎಡೆಯೇ ಇರುವುದಿಲ್ಲ. ಅರ್ಧ ದಿನದಲ್ಲಿ ಮಾಡಿಮುಗಿಸಬಹುದಾದ ಕೆಲಸ ಅರ್ಧ ಗಂಟೆಯಲ್ಲೇ ಆಗುವುದೂ ಇದೆ. 

ಸೃಜನಶೀಲ ಕೆಲಸಗಳಿಗೂ ಅನೇಕ ಬಾರಿ ಇಂತಹ ಒತ್ತಡ ಬೇಕು. ಒಂದು ಲೇಖನ ಬರೆಯಬೇಕೆಂದುಕೊಂಡಿರುತ್ತೇವೆ. ಹಾಗಂದುಕೊಂಡೇ ದಿನಗಟ್ಟಲೆ ಸಮಯ ಕಳೆದಿರುತ್ತೇವೆ. ಬರೆವಣಿಗೆ ಒಂದಂಗುಲವೂ ಮುಂದೆ ಹೋಗಿರುವುದಿಲ್ಲ. ಯಾವುದೋ ಒಂದು ದಿನ ನಾಳೆ ಬೆಳಗ್ಗೆ ಆ ಲೇಖನ ಮುಗಿದಿರಲೇಬೇಕು ಎಂಬ ಅನಿವಾರ್ಯ ಹುಟ್ಟಿಕೊಳ್ಳುತ್ತದೆ ನೋಡಿ; ಅನುಮಾನವೇ ಬೇಡ, ಲೇಖನ ಸಿದ್ಧವಾಗುತ್ತದೆ. ಕೆಲಸ ಆಗಲೇಬೇಕು ಎಂಬ ಒಳಗಿನ ಒತ್ತಡ ಕೆಲಸವನ್ನು ಆಗುಮಾಡುತ್ತದೆ. ತರ್ಕಗಳು, ಯೋಚನೆಗಳು, ಅಗತ್ಯ ನಿದರ್ಶನಗಳು ತಾವಾಗಿಯೇ ಹುಟ್ಟಿಕೊಂಡು ಮನಸ್ಸಿನ ಎದುರು ಬಂದು ಕುಣಿಯುತ್ತವೆ. ಕೈ ಬರೆಯುತ್ತಾ ಸಾಗುತ್ತದೆ. 

ಇದರರ್ಥ ಮನುಷ್ಯ ಸದಾ ಒತ್ತಡಗಳ ಮಧ್ಯೆ ಬದುಕಬೇಕು ಎಂದಲ್ಲ. ವ್ಯಕ್ತಿಗೆ ಬಿಡುವು, ವಿಶ್ರಾಂತಿ ಬಹಳ ಮುಖ್ಯ. ಅವುಗಳ ಕೊರತೆಯಿಂದ ಆರೋಗ್ಯವೇ ಹಾಳಾಗುತ್ತದೆ. ಆರೋಗ್ಯ ಕೈಕೊಟ್ಟರೆ ಉತ್ಸಾಹವೇ ಕುಂದಿಬಿಡುತ್ತದೆ. ಯಾವ ಹೊಸ ಕೆಲಸವೂ ಆಗುವುದಿಲ್ಲ. ದೈಹಿಕ, ಮಾನಸಿಕ ಆರೋಗ್ಯ ಎಲ್ಲದಕ್ಕಿಂತಲೂ ಮುಖ್ಯ. ಅದು ಇದ್ದಾಗ ಮಾತ್ರ ಎಂತಹ ಒತ್ತಡಗಳನ್ನೂ ನಿಭಾಯಿಸಬಹುದು. ಮನಸ್ಸನ್ನು ಜಡವಾಗಿರಲು ಬಿಡಬಾರದು ಎಂಬುದಷ್ಟೇ ಇಲ್ಲಿ ಒತ್ತಡ, ಗಮನ ಇತ್ಯಾದಿ ಪದಗಳನ್ನು ಬಳಸಿರುವ ಉದ್ದೇಶ.

An idle mind is a devils' workshop ಎಂಬ ನಾಣ್ಣುಡಿಯೇ ಇದೆ. ಸೋಮಾರಿ ಮನಸ್ಸು ದೆವ್ವಗಳ ಕಮ್ಮಟವಂತೆ! ಯಾವುದನ್ನೇ ಖಾಲಿಬಿಟ್ಟರೂ ಅದನ್ನು ಇನ್ನೊಬ್ಬರು ಆಕ್ರಮಿಸಿಕೊಳ್ಳುವ ಕಾಲ ಇದು. ಇನ್ನು ಮನಸ್ಸನ್ನು ಖಾಲಿ ಬಿಟ್ಟರೆ ಆಗುತ್ತದೆಯೇ? ಇಲ್ಲಸಲ್ಲದ ಯೋಚನೆಗಳು, ಅನಗತ್ಯ ವಿಚಾರಗಳು ಅಲ್ಲಿ ಬಂದು ತುಂಬಿಕೊಳ್ಳುತ್ತವೆ. ಅವುಗಳಿಗಿಂತ ದೊಡ್ಡ ದೆವ್ವಗಳಿಲ್ಲ. ನಮ್ಮ ಮನಸ್ಸನ್ನು, ಕೆಲಸಗಳನ್ನು ಕೆಡಿಸಲು ಬೇರೆಯಾರೂ ಬರಬೇಕಿಲ್ಲ. ಅದಕ್ಕೆ ನಾವೇ ಸಾಕು. ಮನಸ್ಸು ಸದಾ ಯಾವುದೋ ಕಾರ್ಯದ ಕಡೆ ವ್ಯಸ್ತವಾಗಿದ್ದರೆ ಅಲ್ಲಿ ಬೇರೆ ಇನ್ನೇನೋ ಬಂದು ಠಿಕಾಣಿ ಹೂಡುವುದಕ್ಕೆ ಅವಕಾಶವೇ ಇರುವುದಿಲ್ಲ. ನಿಮ್ಮ ಅನುಮತಿಯಿಲ್ಲದೆ ಅದು ಹೇಗೆ ಅನಗತ್ಯ ಕಿರಿಕಿರಿಗಳು ನಿಮ್ಮ ಮನಸ್ಸಿನ ಮನೆಯೊಳಗೆ ಬಂದು ಬಾಡಿಗೆ ಹಿಡಿಯುತ್ತವೆ ಹೇಳಿ?

ಬ್ಯುಸಿ ಆಗಿರುವುದರಿಂದ ಇನ್ನೊಂದು ಪ್ರಯೋಜನವೂ ಇದೆ. ‘ಬ್ಯುಸಿ ಆಗಿರುವುದು ಒಳ್ಳೆಯದು. ಏಕೆಂದರೆ ಅಂತಹ ಸಮಯದಲ್ಲಿ ಬೇರೆಯವರನ್ನು ಟೀಕಿಸುವುದಕ್ಕೆ ಸಮಯ ಇರುವುದಿಲ್ಲ’ ಎನ್ನುತ್ತಾನೆ ಒಬ್ಬ ಲೇಖಕ. ಇದಂತೂ ಒಂದು ಅದ್ಭುತ ಮಾತು. ಬಹಳ ಮಂದಿ ಇನ್ನೊಬ್ಬರ ತಪ್ಪುಗಳನ್ನು ಹುಡುಕುವುದರಲ್ಲಿ, ಅವರನ್ನು ಹಳಿಯುವಲ್ಲೇ ತಮ್ಮ ಆಯುಷ್ಯವನ್ನು ಕಳೆದುಬಿಡುತ್ತಾರೆ. ಬೇರೆಯವರನ್ನು ಸದಾ ವಿಮರ್ಶೆಯ ತಕ್ಕಡಿಯಲ್ಲಿ ತೂಗುವ ಇವರಿಗೆ ತಮ್ಮ ತಪ್ಪುಗಳು ಕಾಣಿಸುವುದೇ ಇಲ್ಲ, ಅಥವಾ ಕಂಡರೂ ಕಾಣದಂತೆ ಇರುತ್ತಾರೆ. ಯಾವಾಗಲೂ ಇನ್ನೊಬ್ಬರನ್ನು ದೂರುತ್ತಾ ಕೂರುವವರಿಗೆ ತಮ್ಮ ಉದ್ಧಾರದ ದಾರಿ ಕಾಣಿಸುವುದೇ ಇಲ್ಲ. ಅವರು ಸರಿ ಇಲ್ಲ, ಇವರು ಸರಿ ಇಲ್ಲ ಎನ್ನುತ್ತಲೇ ಇಂಥವರು ಮನಸ್ಸನ್ನು ಸದಾ ವಿಷದ ಕುಲುಮೆ ಮಾಡಿಕೊಂಡು ಅಸಂತುಷ್ಟಿಯಲ್ಲಿ ಒದ್ದಾಡುತ್ತಿರುತ್ತಾರೆ. ‘ಉದ್ಧರೇದಾತ್ಮನಾತ್ಮಾನಾಂ’ ಎಂದು ಗೀತಾಚಾರ್ಯನೇ ಹೇಳಿಲ್ಲವೇ? ಆತನ ಮಾತನ್ನು ನಾವು ಪ್ರಮಾಣವನ್ನಾಗಿ ಇಟ್ಟುಕೊಳ್ಳಬಹುದು. ನಮ್ಮ ಉದ್ಧಾರವನ್ನು ಮಾಡಲು ಇನ್ನೊಬ್ಬ ಬರುವುದಿಲ್ಲ, ಅದನ್ನು ನಾವೇ ಮಾಡಿಕೊಳ್ಳಬೇಕು. ಅದಾಗಬೇಕೆಂದರೆ ಮನಸ್ಸು ಭೂತಬಂಗಲೆಯಾಗದಂತೆ ಎಚ್ಚರವಹಿಸಬೇಕು. ‘ಏನಾದರೊಂದು ಕೆಲಸದಲ್ಲಿ ಸದಾ ನಿರತವಾಗಿರಿ, ಕಾರ್ಯನಿರತ ವ್ಯಕ್ತಿಗೆ ಅಸಂತೋಷದಿಂದಿರಲು ಸಮಯವೇ ಸಿಗುವುದಿಲ್ಲ’ ಎಂದಿದ್ದ ಪ್ರಸಿದ್ಧ ಕವಿ ಆರ್. ಎಲ್. ಸ್ಟೀವನ್‌ಸನ್. 

ಸದಾ ಬ್ಯುಸಿ ಆಗಿರುವುದು, ಒತ್ತಡಗಳ ಮಧ್ಯೆ ಬದುಕವುದು ಸರಿ; ಆದರೆ ಅದು ಎಂತಹ ಒತ್ತಡ ಎಂಬುದರ ಕುರಿತೂ ನಮಗೆ ಸ್ಪಷ್ಟತೆ ಬೇಕು. ಇಲ್ಲಿ ಬ್ಯುಸಿ ಆಗಿರುವುದು ಎಂದರೆ ನಮ್ಮಿಂದಾಗದ ಕೆಲಸಗಳನ್ನು ತಲೆಯ ಮೇಲೆ ಎಳೆದುಕೊಳ್ಳುವುದು ಎಂದಲ್ಲ, ನಮಗೆ ಒಗ್ಗುವ ಕೆಲಸಗಳಲ್ಲಿ ಸದಾ ನಿರತವಾಗಿರುವುದು ಎಂದರ್ಥ. ನಮಗೆ ಇಷ್ಟವಾದ ಕೆಲಸಗಳು ಎಷ್ಟಿದ್ದರೂ ಅದು ಒತ್ತಡ ಎನಿಸುವುದೇ ಇಲ್ಲ. ‘ಜಗತ್ತಿನಲ್ಲಿ ಅತ್ಯಂತ ಪ್ರಬಲವಾದ ಒತ್ತಡವೆಂದರೆ ಸ್ನೇಹಮಯ ಒತ್ತಡ’ ಎಂಬ ಮಾತೊಂದಿದೆ. ನಮ್ಮ ಹೊಣೆಗಾರಿಕೆಗಳನ್ನು ಸ್ನೇಹಮಯ ಒತ್ತಡಗಳನ್ನಾಗಿ ಮಾಡಿಕೊಳ್ಳುವುದು ನಮ್ಮ ಮನಸ್ಥಿತಿಯಲ್ಲಿ ಇದೆ. 

ಕೆಲಸಗಳ ಅಡಾವುಡಿಯಲ್ಲಿ, ಈಗಿಂದೀಗಲೇ ಆಗಬೇಕು ಎಂಬ ಒತ್ತಡದಲ್ಲಿ ಕವಿತೆಯೊಂದು ಹುಟ್ಟಿಕೊಳ್ಳುವುದು ಸಾಧ್ಯವೇ ಎಂದು ನೀವು ಕೇಳಬಹುದು. ಆ ಪ್ರಶ್ನೆ ಸರಿಯಾದದ್ದೇ ಆಗಿದೆ. ಸೃಜನಶೀಲ ಕೃತಿಯೊಂದು ಹುಟ್ಟಿಕೊಳ್ಳುವುದರ ಹಿಂದೆ ತಣ್ಣನೆಯ ಧ್ಯಾನವೊಂದು ಅಗತ್ಯ. ಸದಾ ಧಾವಂತದಲ್ಲಿ ಓಡಾಡುವ ಮಂದಿಗೆ ಇಂತಹ ಧ್ಯಾನಕ್ಕೆ ಸಮಯ ದೊರೆಯುವುದಿಲ್ಲ. ಧಾವಂತಗಳ ಮಧ್ಯೆ ನಮ್ಮನ್ನು ನಾವು ಕಳೆದುಕೊಳ್ಳುವ ಪರಿಸ್ಥಿತಿ ಬರಬಾರದು. ಎಲ್ಲ ಒತ್ತಡಗಳ ನಡುವೆಯೂ ನಮ್ಮದೇ ಆದ ಒಂದು ಪುಟ್ಟ ಏಕಾಂತ ಬೇಕು. ದಿನಚರಿಯನ್ನು ಸರಿಯಾಗಿ ನಿಭಾಯಿಸಿಕೊಳ್ಳಲು ಕಲಿತರೆ ಎಲ್ಲ ಒತ್ತಡಗಳ ಮಧ್ಯೆ ನಮ್ಮದೇ ಆದ ಸಮಯವೂ ಸಿಗುತ್ತದೆ. ‘ಬ್ಯುಸಿ ಆಗಿದ್ದರಷ್ಟೇ ಸಾಲದು; ಇರುವೆಗಳೂ ಬ್ಯುಸಿ ಆಗಿರುತ್ತವೆ. ನಾವು ಯಾವುದರಲ್ಲಿ ಬ್ಯುಸಿ ಆಗಿರುತ್ತೇವೆ ಎಂಬುದು ಮುಖ್ಯವಾದ ಪ್ರಶ್ನೆ’ ಎನ್ನುತ್ತಾನೆ ಒಬ್ಬ ಕವಿ. ಯಾವುದರಲ್ಲಿ ಬ್ಯುಸಿ ಆಗಿರಬೇಕು, ಅದರೊಳಗೆ ಎಷ್ಟು ಸಮಯವನ್ನು ಏಕಾಂತಕ್ಕಾಗಿ ಇಟ್ಟುಕೊಳ್ಳಬೇಕು ಎಂದು ಅರ್ಥಮಾಡಿಕೊಂಡವರನ್ನು ಯಶಸ್ಸು ಹುಡುಕಿಕೊಂಡು ಬರುತ್ತದೆ.

- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಜನವರಿ 21, 2023

ಹೇಳದೆ ನೆಪ, ಮಾಡೋಣ ಶಿಸ್ತಿನ ಜಪ

(24-30 ಡಿಸೆಂಬರ್ 2022ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ)

ಇವತ್ತು ಟ್ರೇನು ಹಿಡಿಯಲೇಬೇಕೆಂದು ಹೊರಟಿದ್ದೆ, ಒಂದೇ ನಿಮಿಷದಲ್ಲಿ ಮಿಸ್ ಆಯ್ತು. ಇವತ್ತು ಬಸ್ಸು ತಪ್ಪಿಸಿಕೊಳ್ಳಲೇಬಾರದು
ಅಂದುಕೊಂಡಿದ್ದೆ; ಕಣ್ಣೆದುರೇ ಹೊರಟುಹೋಯ್ತು... ಇಂತಹ ಮಾತುಗಳನ್ನು ಪ್ರತಿದಿನ ಅವರಿವರಿಂದ ಕೇಳಿಸಿಕೊಳ್ಳುತ್ತಲೇ ಇರುತ್ತೇವೆ. ಪ್ರತಿದಿನ ಯಾಕೆ ಕೇಳುತ್ತೇವೆ ಎಂದರೆ ಈ ಬಗೆಯ ಮಂದಿ ಎಲ್ಲ ಕಡೆ ಇರುತ್ತಾರೆ ಅಥವಾ ಇವರು ಪ್ರತಿದಿನವೂ ಟ್ರೇನು-ಬಸ್ಸುಗಳನ್ನು ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ. ಕೊನೆಗೆ ಇವರು ‘ನನ್ನ ಹಣೆಬರಹವೇ ಸರಿ ಇಲ್ಲ’ ಎಂದೋ, ಇನ್ನೊಬ್ಬರಿಂದಾಗಿ ಹೀಗಾಯ್ತು ಎಂದೋ ಷರಾ ಬರೆದುಕೊಳ್ಳುತ್ತಾ ಹೋಗುತ್ತಾರೆ. ಆದರೆ ಸಮಸ್ಯೆ ಸರಿಹೋಗುವುದಿಲ್ಲ. ಸಾಮಾನ್ಯ ಟ್ರೇನು-ಬಸ್ಸುಗಳು ತಪ್ಪಿಹೋದರೆ ಚಿಂತೆಯಿಲ್ಲ, ನಿಜಜೀವನದ ಬಂಡಿಗಳನ್ನು ತಪ್ಪಿಸಿಕೊಂಡರೆ ಮುಂದೆ ದೊಡ್ಡ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಇವರು ಟ್ರೇನು-ಬಸ್ಸುಗಳ ವಿಷಯದಲ್ಲಿ ಮಾತ್ರವಲ್ಲ, ಬಹುತೇಕ ಎಲ್ಲ ವಿಷಯಗಳಲ್ಲೂ ಗೊಂದಲ-ಗೋಜಲು ಮಾಡಿಕೊಳ್ಳುತ್ತಾರೆ. ಯಾವುದೋ ದಿನದ ಒಳಗೆ ನಿರ್ದಿಷ್ಟ ಉದ್ದೇಶಕ್ಕೆ ಅರ್ಜಿ ಸಲ್ಲಿಸಬೇಕಿರುತ್ತದೆ; ಕೊನೆಯ ದಿನಾಂಕ ಮುಗಿದ ಮರುದಿನ ಅದು ನೆನಪಾಗಿ ತಲೆತಲೆ ಚಚ್ಚಿಕೊಳ್ಳುತ್ತಾರೆ. ಇವತ್ತು ಐದು ಕೆಲಸ ಮಾಡಿ ಮುಗಿಸಲೇಬೇಕು ಎಂದು ಮನೆಯಿಂದ ಹೊರಟಿರುತ್ತಾರೆ. ಸಂಜೆಯ ವೇಳೆಗೆ ಅವುಗಳಲ್ಲಿ ಒಂದೆರಡನ್ನೂ ಮಾಡಲಾಗದೆ ಆತಂಕ ಹೆಚ್ಚಿಸಿಕೊಳ್ಳುತ್ತಾರೆ. ಯಾಕೆ ಹೀಗಾಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅರ್ಥವಾಗುವುದೇನೆಂದರೆ ಇವರು ‘ಫೋಕಸ್’ ಕಳೆದುಕೊಂಡಿರುತ್ತಾರೆ, ಅಥವಾ ಎಂದೂ ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡುವ ಬಗ್ಗೆ ತಲೆಕೆಡಿಸಿಕೊಂಡಿರುವುದಿಲ್ಲ. ಸರಳವಾಗಿ ಹೇಳಬೇಕೆಂದರೆ ಜೀವನಶಿಸ್ತು ಕುರಿತು ಇವರಿಗೆ ಆಸಕ್ತಿ ಕಡಿಮೆ.

‘ಅಶಿಸ್ತಿನಿಂದ ಬದುಕಿರಿ! ಆರಾಮವಾಗಿರಿ!’ ಎಂದು ಹೇಳುವ ಕೆಲವು ಮಂದಿ ಸಿಗುತ್ತಾರೆ. ಆದರೆ ಈ ಅಶಿಸ್ತಿನ ಸೂತ್ರ ಕೆಲವರಿಗಷ್ಟೇ ಸಂತೋಷ-ಸಮಾಧಾನ ತಂದುಕೊಡಬಹುದು. ಬೇರೆಯವರಿಗೆ ಮಾದರಿಯಾಗುವಂತೆ, ಪ್ರೇರಣೆಯಾಗುವಂತೆ ಬದುಕುವುದು ಕಷ್ಟ. ಜೀವನದಲ್ಲಿ ಎಲ್ಲವನ್ನೂ ನಿರೀಕ್ಷಿಸಿದಂತೆ, ನಿರ್ದಿಷ್ಟ ಯೋಜನೆಯಂತೆ ಮಾಡಿಕೊಂಡು ಹೋಗುವುದು ಅಸಾಧ್ಯ ಎಂಬುದೇನೋ ನಿಜ. ಆದರೆ ಎಲ್ಲರೂ ಅಶಿಸ್ತಿನಿಂದ ಬದುಕುತ್ತೇವೆ, ಆರಾಮವಾಗಿರುತ್ತೇವೆ ಎಂದುಕೊಂಡರೆ ಬದುಕೇ ಗೊಂದಲದ ಗೂಡಾಗಬಹುದು.

ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಪಾತ್ರದ ಚೌಕಟ್ಟಿನಲ್ಲೇ ಜೀವಿಸುತ್ತ ಇರುತ್ತಾನೆ. ವಿದ್ಯಾರ್ಥಿ, ಉದ್ಯೋಗಿ, ಮಾಲೀಕ, ತಂದೆ, ತಾಯಿ, ಪತಿ, ಪತ್ನಿ, ಗೃಹಿಣಿ... ಯಾವುದೋ ಒಂದು ಹೊಣೆಗಾರಿಕೆ ಹೆಗಲ ಮೇಲೆ ಸದಾ ಇರುತ್ತದೆ. ಅನೇಕ ಬಾರಿ ಒಬ್ಬ ವ್ಯಕ್ತಿ ಅನೇಕ ಚೌಕಟ್ಟುಗಳೊಳಗೆ ಏಕಕಾಲಕ್ಕೆ ಪಾತ್ರನಿರ್ವಹಿಸುತ್ತಾ ಇರುತ್ತಾನೆ. ಪ್ರತಿ ಚೌಕಟ್ಟೂ ಮಹತ್ವದ್ದೇ. ಅಲ್ಲಿ ನಿರ್ದಿಷ್ಟ ಯೋಚನೆ-ಯೋಜನೆಗಳು ಇಲ್ಲದೇ ಹೋದಾಗ ಬದುದು ಪ್ರತಿದಿನವೂ ಆತಂಕಕಾರಿ ಎನಿಸತೊಡಗುತ್ತದೆ.

ಟ್ರೇನು ತಪ್ಪಿಸಿಕೊಳ್ಳುವವನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಆ ಟ್ರೇನಿಗೆ ಆತ ಮೊದಲ ಬಾರಿ ಹೋಗುವವನೇನಲ್ಲ. ಪ್ರತಿದಿನದ ಪ್ರಯಾಣಿಕನೇ. ಅದು ಇಂತಹ ಸಮಯಕ್ಕೆ ಬರುತ್ತದೆ ಎಂಬ ತಿಳುವಳಿಕೆ ಸಹಜವಾಗಿಯೇ ಇರುತ್ತದೆ. ಆದರೂ ಯಾಕೆ ಪದೇಪದೇ ತಪ್ಪಿಸಿಕೊಳ್ಳುತ್ತಾನೆ? ಎಲ್ಲೋ ಒಂದು ಕಡೆ ಆತ ಸಮಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿಕೊಳ್ಳುವಲ್ಲಿ, ಮುಂದಾಲೋಚನೆ ಮಾಡುವಲ್ಲಿ ಸೋತಿದ್ದಾನೆ ಎಂದು ಅರ್ಥ. ಅನಿರೀಕ್ಷಿತವಾಗಿ ಬರುವ ಕೆಲವು ಅಡೆತಡೆಗಳು ಎಲ್ಲ ಕಡೆ ಇರುತ್ತವೆ, ಅವುಗಳಿಂದ ತೊಂದರೆಗೊಳಗಾಗುವುದನ್ನು ತಪ್ಪಿಸಿಕೊಳ್ಳಲಾಗದು. ಆದರೆ ಅನಿರೀಕ್ಷಿತವೇ ಒಂದು ದಿನಚರಿ ಆಗಬಾರದು. 

ಕೆಲವರಿಗೆ ಜೀವನಶಿಸ್ತು ಸಹಜವಾಗಿಯೇ ಬಂದಿರುತ್ತದೆ. ಅವರ ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟುತನ ಎದ್ದುಕಾಣುತ್ತದೆ. ಅವರು ಏನೇ ಮಾಡಿದರೂ ಚಂದ. ‘ಅಯ್ಯೋ ಯಾವುದಕ್ಕೂ ಟೈಮೇ ಸಿಗುತ್ತಿಲ್ಲ’ ಎಂಬ ದೂರು ಅವರಲ್ಲಿ ಕಡಿಮೆ. ಇರುವ ಸಮಯವನ್ನು ಅವರು ಅತ್ಯುತ್ತಮವಾಗಿ ಬಳಸಿಕೊಳ್ಳಬಲ್ಲರು. ಇನ್ನು ಕೆಲವರು ಯಾವುದನ್ನೂ ಸರಿಯಾಗಿ ಮಾಡುವುದಿಲ್ಲ. ಎಲ್ಲವೂ ಅರ್ಧಂಬರ್ಧ. ದಿನಕ್ಕೆ ನಲ್ವತ್ತೆಂಟು ಗಂಟೆ ಕೊಟ್ಟರೂ ಅವರು ಅದನ್ನು ಯಶಸ್ವಿಯಾಗಿ ಹಾಳುಗೆಡಹಬಲ್ಲರು. ಇವರಿಗೆ ಪ್ರತಿಯೊಂದಕ್ಕೂ ಏನಾದರೊಂದು ನೆಪ ಇದ್ದೇ ಇರುತ್ತದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಿಡಬೇಕೆಂದು ಅಂದುಕೊಳ್ಳುತ್ತೇನೆ, ಆದರೆ ನಮ್ಮ ಮನೆ ತುಂಬ ಸಣ್ಣದು. ಯಾವುದಕ್ಕೂ ಜಾಗ ಇಲ್ಲ ಎನ್ನುತ್ತಾರೆ. ತಮಾಷೆಯೆಂದರೆ ದೊಡ್ಡ ಮನೆ ಕೊಟ್ಟರೂ ಇವರು ಹೀಗೆಯೇ ಇರುತ್ತಾರೆ. ಏಕೆಂದರೆ ಅಶಿಸ್ತನ್ನು ಇವರು ಹುಟ್ಟುತ್ತಲೇ ಆವಾಹಿಸಿಕೊಂಡಿರುತ್ತಾರೆ. ಇವರು ಯಾವುದನ್ನೂ ಎತ್ತಿದಲ್ಲೇ ಮತ್ತೆ ಇಡಲಾರರು. ಇರುವ ಜಾಗವನ್ನು ಸದುಪಯೋಗಪಡಿಸಿಕೊಳ್ಳಲಾರರು. 

ಬಾಚಣಿಗೆ, ಪೌಡರು, ಕ್ಲಿಪ್ಪು, ಮತ್ತೊಂದು- ಇಂಥವನ್ನೆಲ್ಲ ಇಡಲು ಗೊತ್ತುಪಡಿಸಿದ ಒಂದು ನಿರ್ದಿಷ್ಟ ಜಾಗ ಇದ್ದರೂ ಅವನ್ನು ಅಲ್ಲೇ ಇಡಲಾರರು. ತಾವೆಲ್ಲಿಗೆ ಎತ್ತಿಕೊಂಡು ಹೋಗಿರುತ್ತಾರೋ ಅಲ್ಲೇ ಬಿಟ್ಟು ಮುಂದಿನ ಕೆಲಸಕ್ಕೆ ಹೋದಾರು. ಮುಂದಿನ ಸಲ ಆ ಜಾಗ ಮರೆತುಹೋಗಿರುತ್ತದೆ. ಅವುಗಳನ್ನು ಮನೆಯೆಲ್ಲ ಹುಡುಕಿ ಇರುವ ಸಮಯವನ್ನು ಕಳೆದುಕೊಂಡಾರು. ನೈಲ್ ಕಟ್ಟರ್ ಬಳಸಿ ಮತ್ತೆ ಅಲ್ಲೇ ತಂದು ಇಡಲಾರರು. ಮತ್ತೊಮ್ಮೆ ನೈಲ್ ಕಟ್ಟರ್ ಬಳಸುವ ಸಂದರ್ಭ ಬಂದಾಗ ಮತ್ತೆ ಮನೆಯೆಲ್ಲ ಹುಡುಕಾಟ. ತಮ್ಮ ಸ್ನಾನದ ಟವೆಲನ್ನು ಒಂದೇ ಕಡೆ ಒಣಹಾಕುವ ಅಭ್ಯಾಸ ಬೆಳೆಸಿಕೊಳ್ಳಲಾರರು. ಸ್ನಾನದ ಹೊತ್ತಿಗೆ ಗಡಿಬಿಡಿ ಮಾಡಿಕೊಂಡು ಅದೆಲ್ಲೆಂದು ಸಿಗದೆ ಹೊಸದೊಂದು ಟವೆಲ್ ಎಳೆದುಕೊಂಡಾರು. ತಾವು ಪ್ರತಿದಿನ ಬಳಸುವ ಪೆನ್ನು-ಪುಸ್ತಕ-ವಾಚು-ಬ್ಯಾಗುಗಳನ್ನೇ ಒಂದು ನಿರ್ದಿಷ್ಟ ಕಡೆ ಇರಿಸಿಕೊಳ್ಳಲಾರರು. ಆಮೇಲೆ ಅವುಗಳನ್ನೇ ಹುಡುಕುತ್ತಾ ಅರ್ಧರ್ಧ ಗಂಟೆ ಕಳೆದುಕೊಂಡಾರು, ಬರಿದೇ ಆತಂಕ ಹೆಚ್ಚಿಸಿಕೊಂಡಾರು.

ಇವೆಲ್ಲ ಸಣ್ಣಪುಟ್ಟ ಸಂಗತಿಗಳು ಎನಿಸಬಹುದು. ಆದರೆ ದಿನನಿತ್ಯದ ಬದುಕನ್ನು ಕಟ್ಟಿಕೊಡುವ ಸಣ್ಣ ತುಣುಕುಗಳು ಇವೇ. ಸ್ವಭಾವತಃ ಈ ಶಿಸ್ತು ಬಂದಿಲ್ಲ ಎಂದಿಟ್ಟುಕೊಳ್ಳಿ; ಕೆಲವನ್ನಾದರೂ ಪ್ರಜ್ಞಾಪೂರ್ವಕ ರೂಢಿಸಿಕೊಳ್ಳಬಹುದು. ಹುಟ್ಟುಗುಣ ಸುಟ್ಟರೂ ಹೋಗದು ಎಂಬ ಮಾತಿದೆ. ಆದರೆ ನಮ್ಮದೇ ಬದುಕಿನ ನಿರಾಳತೆಗಾಗಿ, ನೆಮ್ಮದಿಗಾಗಿ ಕೆಲವು ವಿಷಯಗಳನ್ನು ಪ್ರಜ್ಞಾಪೂರ್ವಕವಾಗಿಯೇ ಅಳವಡಿಸಿಕೊಳ್ಳುವುದು ಅನಿವಾರ್ಯ.

ದಿನಚರಿಯಲ್ಲಿ ಒಂದು ಸರಳ ವೇಳಾಪಟ್ಟಿಯನ್ನು ಅಳವಡಿಸಿಕೊಳ್ಳುವುದರಿಂದ ಬಹುತೇಕ ಅಶಿಸ್ತನ್ನು ಮತ್ತು ಅದರಿಂದುAಟಾಗುವ ಗೊಂದಲಗಳನ್ನು ತಡೆಯಬಹುದು. ಇದು ಶಾಲೆಯ ಟೈಂಟೇಬಲ್ ರೀತಿಯಲ್ಲಿ ಇರಬೇಕಾಗಿಲ್ಲ. ದಿನನಿತ್ಯದ ಅನೇಕ ಕೆಲಸಗಳನ್ನು ನಿಮಿಷ, ಸೆಕೆಂಡುಗಳ ಲೆಕ್ಕ ಇಟ್ಟುಕೊಂಡು ಮಾಡಲಾಗುವುದಿಲ್ಲ. ಆದರೆ ಅಂತಹದೊಂದು ವೇಳಾಪಟ್ಟಿಯ ಚೌಕಟ್ಟು ಇಲ್ಲದೆ ಹೋದಾಗ ಆಯಾ ದಿನದ ಉದ್ದೇಶ-ಗುರಿಗಳೆಲ್ಲ ಗೊಂದಲಗಳಾಗಿ ಮಾರ್ಪಟ್ಟು ಆತ್ಮವಿಶ್ವಾಸವನ್ನೇ ಕಳೆದುಕೊಂಡುಬಿಡುತ್ತೇವೆ. ಅದೇ ನಾವೆಂದುಕೊAಡAತೆ ಕೆಲಸಗಳು ನಡೆದಾಗ ಒಂದು ಸಂತೃಪ್ತಿಯ ನಿದ್ದೆಗೆ ಜಾರುತ್ತೇವೆ. ಮನುಷ್ಯನಿಗೆ ಆತ್ಯಂತಿಕವಾಗಿ ಬೇಕಾದುದು ಒಂದು ಸಮಾಧಾನದ ನಿದ್ದೆಯೇ ಹೊರತು ಇನ್ನೇನು!

ಬೆಳಗ್ಗೆ ಬೇಗನೆ ಏಳುವ ಅಭ್ಯಾಸದಿಂದ ಸಾಕಷ್ಟು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆರೂವರೆಗೋ ಏಳೂವರೆಗೋ ಏಳುವವರಿದ್ದರೆ ಐದುಗಂಟೆಗೆ ಎದ್ದುನೋಡಿ, ನಿಮ್ಮ ದಿನಚರಿಯೇ ಬದಲಾಗಿ ಹೋಗುತ್ತದೆ. ಸಾಮಾನ್ಯ ದಿನಗಳಿಗಿಂತ ಒಂದೆರಡು ಗಂಟೆ ಹೆಚ್ಚು ಸಮಯ ನಿಮ್ಮದಾಗುತ್ತದೆ. ನಾನು ರಾತ್ರಿ ತಡವಾಗಿ ಮಲಗುವವನು, ಆದ್ದರಿಂದ ಬೆಳಗ್ಗೆ ತಡವಾಗಿ ಏಳುವವನು- ಹೀಗೆ ಸಮಜಾಯುಷಿ ಕೊಡುವುದುಂಟು. ಕೆಲವರಿಗೆ ಒಂದೊAದು ಬಗೆಯ ದಿನಚರಿ ಒಗ್ಗುವುದುಂಟು; ಕೆಲವರ ಕೆಲಸದ ಸ್ವರೂಪ ಹೆಚ್ಚಿನ ಸಮಯ ಬೇಡುವುದೂ ಉಂಟು. ಆದರೂ ಮುಂಜಾನೆಯ ಸದುಪಯೋಗದ ಮೌಲ್ಯ ಒಂದು ಬೇರೆಯದೇ ಮಟ್ಟದ್ದು. ಮುಂಜಾನೆ ಎದ್ದು ನೀವು ಏನೇ ಮಾಡಿ, ಅದು ಉತ್ಕೃಷ್ಟವಾಗಿಯೇ ಇರುತ್ತದೆ. ಮುಂಜಾನೆ ಕೇಳುವ ಒಂದೊಳ್ಳೆಯ ಹಾಡು ಇಡೀ ದಿನ ಮನಸ್ಸಿನಲ್ಲಿ ಗುನುಗುವಂತೆ ಇರುವುದಿಲ್ಲವೇ- ಹಾಗೆ. ಇದರ ಜೊತೆಗೆ ಸಣ್ಣದೊಂದು ‘ಪ್ಲಾನಿಂಗ್’ ನಮ್ಮ ದಿನಚರಿಗೆ ಕೊಂಚ ನಿರಾಳತೆಯನ್ನು ತಂದುಕೊಡಬಹುದು. ರಾತ್ರಿ ಮಲಗುವ ಮುನ್ನ ಇವತ್ತೇನು ಮಾಡಿದೆ, ಏನೆಲ್ಲ ಬಾಕಿಯಿದೆ, ನಾಳೆಯೇನು ಮಾಡಬೇಕು ಎಂಬ ಒಂದೆರಡು ನಿಮಿಷಗಳ ಯೋಚನೆ, ಬೆಳಗ್ಗೆ ಎದ್ದ ತಕ್ಷಣ ಆ ದಿನ ಮಾಡಬೇಕಾದ ಕೆಲಸಗಳ ಕುರಿತ ಸಣ್ಣದೊಂದು ಚಿಂತನೆ- ಸಾಕಷ್ಟು ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಅನೇಕ ಜವಾಬ್ದಾರಿಗಳನ್ನು ಒಟ್ಟೊಟ್ಟಿಗೆ ನಿರ್ವಹಿಸುವವರಾದರೆ ಬಾಕಿ ಕೆಲಸಗಳ ಚೆಕ್‌ಲಿಸ್ಟ್ ಮಾಡಿಕೊಳ್ಳುವುದು ಉತ್ತಮ. ಇದರಿಂದ ಸಣ್ಣಪುಟ್ಟ ಕೆಲಸಗಳು ಮರೆತುಹೋಗುವುದನ್ನು ನಿವಾರಿಸಬಹುದು.

ನಮ್ಮ ಯಶಸ್ಸಿಗೆ ನಾವೇ ಕಾರಣರು ಎನ್ನುವುದು ನಿಜವಾದರೆ, ನಮ್ಮ ಗೊಂದಲಗಳಿಗೂ ನಾವೇ ಕಾರಣರು.

- ಸಿಬಂತಿ ಪದ್ಮನಾಭ ಕೆ.ವಿ.

ಗುರುವಾರ, ಸೆಪ್ಟೆಂಬರ್ 29, 2022

ಸೋಶಿಯಲ್ ಫೋಬಿಯಾ: ಆತ್ಮವಿಶ್ವಾಸವೇ ಅಭಯ

18-24 ಸೆಪ್ಟೆಂಬರ್ 2022ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಕೆಲವು ವರ್ಷಗಳ ಹಿಂದಿನ ಘಟನೆ. ಅದು ಕಾಲೇಜಿನ ಹೊಸ ಬ್ಯಾಚಿನ ಮೊದಲನೇ ಕ್ಲಾಸು. ಒಬ್ಬೊಬ್ಬರನ್ನೇ ತರಗತಿಯ ಎದುರಿಗೆ ಕರೆಸಿಕೊಂಡು ಅವರಿಂದ ಸ್ವಪರಿಚಯ ಹೇಳಿಸುತ್ತಿದ್ದೆ. ಕೆಲವರು ಸಲೀಸಾಗಿಯೂ ಇನ್ನು ಕೆಲವರು ಕೊಂಚ ಆತಂಕದಿಂದಲೂ ತಮ್ಮತಮ್ಮ ಪರಿಚಯ ಹೇಳಿಕೊಂಡರು. ಒಬ್ಬಳು ಮಾತ್ರ ಎದುರು ಬರುವುದಕ್ಕೇ ಒಪ್ಪಲಿಲ್ಲ. ಹೇಗೋ ಒತ್ತಾಯ ಮಾಡಿ ಅವಳನ್ನು ಈಚೆ ಕರೆತಂದದ್ದಾಯಿತು. ಮಾತು ಆರಂಭಿಸುವುದಕ್ಕೇ ಒಂದು ನಿಮಿಷ ತೆಗೆದುಕೊಂಡಳು. ಸ್ವಲ್ಪ ಹೊತ್ತಲ್ಲೇ ಏನೂ ಮಾತಾಡಲಾಗದೆ ಪೂರ್ತಿ ಬೆವರಿ ಒದ್ದೆಯಾಗಿ ಗೋಳೋ ಎಂದಳುತ್ತಾ ಅಲ್ಲೇ ಕುಸಿದುಕುಳಿತಳು. ಅವಳನ್ನು ಸಂತೈಸಿ ಅಂದಿನ ತರಗತಿ ಮುಗಿಸಿದ್ದಾಯಿತು.

ಅಚ್ಚರಿಯೆಂದರೆ ತರಗತಿ ಬಳಿಕ ತಾನಾಗಿಯೇ ಆ ಹುಡುಗಿ ವಿಭಾಗಕ್ಕೆ ಬಂದು ಭೇಟಿಯಾದಳು. ತನ್ನ ಕಷ್ಟ ಹೇಳಿಕೊಂಡಳು. ‘ಕ್ಲಾಸ್ ಅಂತ ಅಲ್ಲ ಸರ್, ಎಲ್ಲ ಕಡೆಯೂ ಹೀಗೇ ಆಗುತ್ತೆ. ಹೊಸಬರನ್ನೇನು, ಪ್ರತಿದಿನ ಎದುರಾಗುವವರು ಸಿಕ್ಕರೂ ಆತಂಕ ಆಗಿಬಿಡುತ್ತೆ. ಯಾವುದೋ ಫಂಕ್ಷನಿಗೆ ಹೋದರೂ ಟೆನ್ಷನ್ ಮಾಡ್ಕೋತೀನಿ. ಅದಕ್ಕೆ ಈಗೀಗ ಹೊರಗೆ ಹೋಗೋದನ್ನೇ ನಿಲ್ಲಿಸಿದೀನಿ. ಕಾಲೇಜಿಗೆ ಯಾಕಾದರೂ ಸೇರಿದೆನೋ ಅನ್ನಿಸ್ತಿದೆ’ ಎಂದಳು. 

‘ನಿಧಾನವಾಗಿ ಎಲ್ಲ ಸರಿ ಹೋಗುತ್ತಮ್ಮ. ನೋಡೋಣ. ಈಗ ನನ್ನ ಬಗ್ಗೆ ವಿಶ್ವಾಸ ಬಂದಿದೆ ತಾನೇ? ದಿನಕ್ಕೊಮ್ಮೆ ಬಂದು ಭೇಟಿಯಾಗು. ಏನೇ ಹೇಳಬೇಕು ಅನ್ನಿಸಿದರೂ ಹೇಳು’ ಎಂದು ಒಂದಷ್ಟು ಸಮಾಧಾನ ಹೇಳಿದೆ. ಕೆಲವು ದಿನಗಳ ಬಳಿಕ ‘ನಿನ್ನ ಹವ್ಯಾಸಗಳೇನು? ಬಿಡುವಿನ ವೇಳೆಯಲ್ಲಿ ಏನು ಮಾಡುತ್ತಿ?’ ಕೇಳಿದೆ. ‘ಸಣ್ಣಪುಟ್ಟ ಕವಿತೆ ಬರೀತೀನಿ ಸರ್. ಆದ್ರೆ ಈವರೆಗೆ ಯಾರಿಗೂ ಒಮ್ಮೆಯೂ ತೋರಿಸಿಲ್ಲ. ಎಲ್ಲ ಬರೆದು ಒಂದು ಕಡೆ ಇಟ್ಟಿದೀನಿ. ಯಾರು ಏನಂದ್ಕೋತಾರೋ ಅನ್ನೋ ಭಯ’ ಅಂದಳು. ಅವನ್ನೆಲ್ಲ ಅವಶ್ಯ ತಂದು ತೋರಿಸು, ತಪ್ಪಿದ್ದರೂ ನಾನು ತಮಾಷೆ ಮಾಡೋದಿಲ್ಲ ಅಂತ ಭರವಸೆ ತುಂಬಿದೆ.

ಅವಳ ಕವಿತೆಗಳು ನಿಜಕ್ಕೂ ಚೆನ್ನಾಗಿದ್ದವು. ಅವುಗಳಲ್ಲಿ ಹೊಸತನ ಇತ್ತು. ಅವಳನ್ನು ಅಭಿನಂದಿಸಿದೆ. ಬೇರೆ ಕೆಲವು ಕವನ ಸಂಕಲನಗಳನ್ನು ಕೊಟ್ಟು ಓದಲು ಹೇಳಿದೆ. ಅವಳು ಹೆಚ್ಚುಹೆಚ್ಚು ಬರೆದು ತೋರಿಸತೊಡಗಿದಳು. ಕೆಲವು ಕಾಲೇಜು ಮ್ಯಾಗಜಿನ್‌ನಲ್ಲಿ, ಪತ್ರಿಕೆಗಳಲ್ಲಿ ಪ್ರಕಟವಾದವು. ಸಹಪಾಠಿಗಳಿಂದ, ಬೇರೆ ಅಧ್ಯಾಪಕರಿಂದ ಅವಳಿಗೆ ಪ್ರಶಂಸೆ ಸಿಕ್ಕಿತು. ಆಕೆಯ ವ್ಯಕ್ತಿತ್ವ, ವರ್ತನೆಯಲ್ಲೂ ಕ್ರಮೇಣ ಸುಧಾರಣೆ ಕಾಣುತ್ತಿತ್ತು. ಒಂದು ವರ್ಷ ಕಳೆಯುವ ಹೊತ್ತಿಗೆ ಇದೇ ಹಳ್ಳಿಹುಡುಗಿ ಮೊದಲ ತರಗತಿಯಲ್ಲಿ ಭಯದಿಂದ ನಡುಗಿ ಬಿದ್ದುಹೋದಳಾ ಎಂದು ಅಚ್ಚರಿಯಾಗುವಷ್ಟರ ಮಟ್ಟಿಗೆ ಆಕೆ ಬದಲಾದಳು. ಪದವಿ ಮುಗಿಯುವ ಹೊತ್ತಿಗೆ ಅವಳ ಚೊಚ್ಚಲ ಕವನ ಸಂಕಲನ ಪ್ರಕಟವಾಯಿತು, ಮತ್ತು ಅದಕ್ಕೆ ರಾಜ್ಯಸರ್ಕಾರದ ಬಹುಮಾನ ಕೂಡ ಬಂತು!

ಸಾರ್ವಜನಿಕ ಸನ್ನಿವೇಶಗಳಲ್ಲಿ ಒಂದು ಬಗೆಯ ಭಯ, ಆತಂಕ ಕಾಡುವುದು ಸಾಮಾನ್ಯ. ಇದು ಎಲ್ಲರಿಗೂ ಒಂದಲ್ಲ ಒಂದು ಸಂದರ್ಭ ಎದುರಾಗುವಂಥದ್ದೇ. ಇದಕ್ಕೆ ಹಳ್ಳಿಯವರು, ಪಟ್ಟಣದವರು ಎಂಬ ಭೇದವಿಲ್ಲ. ಗಂಡು-ಹೆಣ್ಣೆAಬ ವ್ಯತ್ಯಾಸ ಇಲ್ಲ. ಇದು ಹದಿಹರೆಯದಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾದರೂ, ಆಮೇಲೆಯೂ ಇರಬಾರದು ಎಂದಿಲ್ಲ. ಕೆಲವೊಮ್ಮೆ ಇವು ದೀರ್ಘಕಾಲ ಮುಂದುವರಿಯುತ್ತವೆ. ಇದಕ್ಕೆ ‘ಸಾಮಾಜಿಕ ಭಯ’ (ಸೋಶಿಯಲ್ ಫೋಬಿಯಾ) ಎಂದು ಹೆಸರು. ಈ ದೀರ್ಘಕಾಲೀನ ಉದ್ವಿಗ್ನತೆ ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿನ ಮೇಲೆ, ಉದ್ಯೋಗದ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿ ತನ್ನಷ್ಟಕ್ಕೇ ಒಂಟಿಯಾಗುತ್ತಾ ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೆ ಒಳಗಾಗುವುದೂ ಇದೆ. 

ಸಾಮಾಜಿಕ ಭಯ ಕೇವಲ ನಾಚಿಕೆ ಅಲ್ಲ. ಅದಕ್ಕಿಂತ ಹೆಚ್ಚಾದ ಭಯ. ಗುಂಪುಗಳಲ್ಲಿ ಇರುವ, ಹೊಸಬರನ್ನು ಭೇಟಿಯಾಗುವ, ಸಭೆಯನ್ನು ಎದುರಿಸುವ- ಅಂದರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಒಬ್ಬ ವ್ಯಕ್ತಿ ಎದುರಿಸುವ ತೀವ್ರ ಉದ್ವಿಗ್ನತೆ. ತನ್ನ ಪ್ರತೀ ಚಟುವಟಿಕೆಯನ್ನೂ ಯಾರೋ ಗಮನಿಸುತ್ತಿರುತ್ತಾರೆ; ಅವುಗಳಲ್ಲಿ ಅಕಸ್ಮಾತ್ ತಪ್ಪುಗಳಾದರೆ ಎಲ್ಲರೂ ಆಡಿಕೊಳ್ಳುತ್ತಾರೆ ಎಂಬ ಭಾವನೆಯೇ ಈ ಆತಂಕದ ಬೇರು. ಆತ್ಮವಿಶ್ವಾಸವನ್ನೇ ಕುಗ್ಗಿಸುವ ಈ ಭಯದಿಂದಾಗಿ ವ್ಯಕ್ತಿ ಜೀವನದಲ್ಲೇ ಜುಗುಪ್ಸೆಯನ್ನು ತಾಳುವುದೂ ಇದೆ. ‘ನಾನು ಎಲ್ಲಿಯೂ ಸಲ್ಲದವನು, ಯಾವ ಕೆಲಸಕ್ಕೂ ಆಗದವನು, ನಿಷ್ಪ್ರಯೋಜಕ’ ಎಂಬ ಭಾವ ಬಂದರೆ ಅರ್ಧ ಬದುಕು ಮುಗಿದ ಹಾಗೆ. ಎಲ್ಲಿಯವರೆಗೆ ಎಂದರೆ ಇಂತಹ ವ್ಯಕ್ತಿಗಳು ಅಕ್ಕಪಕ್ಕ ಯಾರಾದರೂ ಇದ್ದರೆ ಶೌಚಾಲಯಕ್ಕೆ ಹೋಗಲೂ ಹಿಂಜರಿಯುತ್ತಾರೆ.

ಹೊರಬರುವುದು ಹೇಗೆ?

ಯಾವುದೇ ಸಮಸ್ಯೆಗೆ ಸುಲಭ ಪರಿಹಾರ ಎಂದರೆ ಸಮಸ್ಯೆಯ ಕಾರಣವನ್ನು ಅರ್ಥಮಾಡಿಕೊಳ್ಳುವುದು. ಇದು ಮೂರನೆಯ ವ್ಯಕ್ತಿಗಿಂತಲೂ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿ ತಾನೇ ಮಾಡುವುದೇ ಸರಿ. ತಾನು ಯಾವ ಸನ್ನಿವೇಶದಲ್ಲಿ ಆತಂಕಕ್ಕೊಳಗಾಗುತ್ತೇನೋ ಅದರ ಬಗ್ಗೆ ಗಾಢವಾಗಿ ಯೋಚನೆ ಮಾಡಿ ಅದರ ನಿರ್ದಿಷ್ಟ ಕಾರಣವನ್ನು ಅರ್ಥಮಾಡಿಕೊಳ್ಳುವುದು ಈ ನಿಟ್ಟಿನಲ್ಲಿ ಮೊದಲನೇ ಹೆಜ್ಜೆ. 

ಋಣಾತ್ಮಕ ಯೋಚನೆಗಳನ್ನು ದೂರವಿಟ್ಟು ತಾನು ಉಳಿದವರಿಗಿಂತ ಕಮ್ಮಿಯಿಲ್ಲ ಎಂಬ ಭಾವನೆಯನ್ನು ಗಟ್ಟಿಮಾಡಿಕೊಳ್ಳುವುದು ಎರಡನೇ ಹೆಜ್ಜೆ. ಯಾರೋ ತನ್ನನ್ನು ಗಮನಿಸುತ್ತಾರೆ, ಅವರು ಆಡಿಕೊಳ್ಳುತ್ತಾರೆ ಎಂಬ ಯೋಚನೆಯಿಂದ ಮೊದಲು ಹೊರಬರಬೇಕು. ಇನ್ನೊಬ್ಬರನ್ನು ಗಮನಿಸುವುದೇ ಎಲ್ಲರ ಕೆಲಸ ಅಲ್ಲ, ಅವರಿಗೆ ತಮ್ಮದೇ ಆದ ಕೆಲಸಗಳಿರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಯಾರೋ ಅದನ್ನೇ ಮಾಡುತ್ತಾರೆ ಎಂದುಕೊಳ್ಳೋಣ, ಅದರಿಂದ ಅವರ ನೆಗೆಟಿವ್ ವ್ಯಕ್ತಿತ್ವ ಗೊತ್ತಾಗುತ್ತದೆಯೇ ಹೊರತು ನಾವು ಕಳೆದುಕೊಳ್ಳುವಂಥದ್ದೇನೂ ಇಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಇನ್ನೊಂದು ಮುಖ್ಯ ವಿಷಯವೆಂದರೆ, ನಾವು ಯಾವುದೋ ಸಣ್ಣ ತಪ್ಪು ಮಾಡಿದೆವು ಎಂದುಕೊಳ್ಳೋಣ, ಅದನ್ನು ನೋಡಿದವರು ಬಹುತೇಕ ತಾವೂ ಹಿಂದೆ ಅಂತಹದೇ ತಪ್ಪು ಮಾಡಿದ್ದೆವಲ್ಲ ಎಂದು ಒಳಗೊಳಗಿಂದಲೇ ನೆನಪಿಸಿಕೊಳ್ಳುತ್ತಿರುತ್ತಾರೆ.

ಪ್ರತಿಯೊಬ್ಬನಲ್ಲೂ ಒಂದಲ್ಲ ಒಂದು ಪ್ರತಿಭೆ, ವಿಶಿಷ್ಟ ಗುಣ ಇದ್ದೇ ಇರುತ್ತದೆ. ಅದನ್ನು ತನಗೆ ತಾನೇ ಪೋಷಿಸಿಕೊಂಡು, ಅದರಿಂದ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದು ಮುಖ್ಯ. ಬರವಣಿಗೆ, ಕ್ರೀಡೆ, ಹಾಡು, ಮಾತುಗಾರಿಕೆ, ಪೈಂಟಿಂಗ್, ಕಸೂತಿ, ಡ್ಯಾನ್ಸ್, ನಾಟಕ- ಯಾವುದಾದರೊಂದು ಕಲೆ ನಮ್ಮೊಳಗೆ ಇರುತ್ತದೆ. ಅದನ್ನು ಗಮನಿಸಿಕೊಂಡು ಗಟ್ಟಿಗೊಳಿಸುವುದೇ ಒಂದು ಪ್ರಮುಖ ಪರಿಹಾರ. 

ಬರೆಯುವ ಕೌಶಲ ಇರುವವರು ಒಂದು ಕವಿತೆ, ಕತೆ, ಲೇಖನವನ್ನು ಸ್ನೇಹಿತರೊಂದಿಗೆ ಹಂಚಿಕೊಂಡಾಗ, ಎಲ್ಲೋ ಪ್ರಕಟಿಸಿದಾಗ ದೊರೆಯುವ ಪ್ರತಿಕ್ರಿಯೆಯ ಮೌಲ್ಯ, ಅದರಿಂದ ದೊರೆಯುವ ಆತ್ಮವಿಶ್ವಾಸ ಬಹಳ ದೊಡ್ಡದು. ಹಾಡುವ ಹವ್ಯಾಸ ಇರುವವರು ನಾಕು ಮಂದಿಯ ಮುಂದೆ ಹಾಡಿದಾಗ ದೊರೆಯುವ ಒಂದು ಸಣ್ಣ ಪ್ರಶಂಸೆ ಅಪೂರ್ವ ಬದಲಾವಣೆ ತರಬಲ್ಲದು. ಆಟೋಟ, ಪ್ರದರ್ಶನ ಕಲೆ- ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಮನ್ನಣೆಯನ್ನೂ, ಪ್ರತಿಫಲವಾಗಿ ಧೈರ್ಯವನ್ನೂ ತಂದುಕೊಡುತ್ತದೆ. ಪ್ರೇರಣಾದಾಯಿ ಪುಸ್ತಕಗಳ ಓದೂ ಈ ನಿಟ್ಟಿನಲ್ಲಿ ಸಹಕಾರಿ.

ಆತ್ಮವಿಶ್ವಾಸ ಎಂಬುದು ಯಾರೋ ಬೆಂಕಿಕಡ್ಡಿ ಗೀರಿ ಹಚ್ಚಲಿ ಎಂದು ಕಾಯುವ ದೀಪ ಅಲ್ಲ; ಸ್ವಯಂ ಬೆಳಗಬೇಕಾದ ಮಿಂಚುಹುಳ. 

- ಸಿಬಂತಿ ಪದ್ಮನಾಭ ಕೆ.ವಿ.

ಭಾನುವಾರ, ಜೂನ್ 19, 2022

ಅಪ್ಪನೆಂಬ ಅಂತರಂಗದ ಬೆಳಕು

'ಬೋಧಿವೃಕ್ಷ' 18-25 ಜೂನ್ 2022ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

Postmen in the Mountains ಎಂಬೊಂದು ಚೈನೀಸ್ ಚಲನಚಿತ್ರವಿದೆ. ಕಾಲ್ನಡಿಗೆಯಲ್ಲೇ ಕಡಿದಾದ ಬೆಟ್ಟಗುಡ್ಡಗಳನ್ನು ಏರಿಳಿಯುತ್ತಾ ಪತ್ರಗಳ ಬಟವಾಡೆ ಮಾಡಿಕೊಂಡು ತನ್ನ ಸುದೀರ್ಘ ವೃತ್ತಿಜೀವನವನ್ನು ಕಳೆದ ಅಂಚೆಯಣ್ಣನ ಕಥೆಯದು. ಸಿನಿಮಾ ಆರಂಭವಾಗುವುದು ಅಂಚೆಯಣ್ಣನ ವೃತ್ತಿಬದುಕಿನ ಕೊನೆಯ ದಿನದಿಂದ. ವಯೋಸಹಜ ಅನಾರೋಗ್ಯದಿಂದಾಗಿ ಅಂಚೆಯಣ್ಣ ತನ್ನ ಉದ್ಯೋಗಕ್ಕೆ ವಿದಾಯ ಹೇಳಬೇಕಾದ ಸಂದರ್ಭ ಬಂದಾಗ ಆ ಉದ್ಯೋಗ ಅವನ ಮಗನಿಗೆ ಸಿಗುತ್ತದೆ.  ಮಾಡಬೇಕಾದ ಕೆಲಸದಿಂದ ತೊಡಗಿ ನಡೆಯಬೇಕಾದ ದಾರಿಯವರೆಗೆ ಅವನಿಗೆ ಎಲ್ಲವೂ ಹೊಸದು. ಅದನ್ನು ಪರಿಚಯ ಮಾಡಿಕೊಡುವುದಕ್ಕಾಗಿ ಅಪ್ಪ ಮಗನೊಂದಿಗೆ ಹೊರಟುಬಿಡುತ್ತಾನೆ. ಬಹುಕಾಲದಿಂದ ಅಂಚೆಯಣ್ಣನ ಒಡನಾಡಿಯಾಗಿದ್ದ ನಾಯಿಯೂ ಜತೆಯಾಗುತ್ತದೆ. 

ಇಡೀ ಚಲನಚಿತ್ರದಲ್ಲಿ ಇರುವುದು ಅಪ್ಪ-ಮಗನ ಈ ಸಹಪಯಣದ ಕಥನ. ಅಂತಿಂಥ ಪಯಣವಲ್ಲ ಅದು. ಭರ್ತಿ ಇನ್ನೂರ ಅರವತ್ತು ಮೈಲಿಗಳ ನಡಿಗೆ. ಅಷ್ಟನ್ನು ಪೂರೈಸುವುದಕ್ಕೆ ಮೂರು ಹಗಲೂ ಮೂರು ಇರುಳೂ ಬೇಕು. ಗುಡ್ಡಗಾಡು ಪ್ರದೇಶಗಳಲ್ಲಿ ಚದುರಿಕೊಂಡಿರುವ ಸಣ್ಣಪುಟ್ಟ ಹಳ್ಳಿಗಳು, ಎಲ್ಲೋ ಅಡಗಿರುವ ಮನೆಗಳನ್ನು ಹುಡುಕಿ ಹೋಗಿ ಅಂಚೆ ಬಟವಾಡೆ ಮಾಡಿ ಮುಂದುವರಿಯಬೇಕು. ವಿಚಿತ್ರವೆಂದರೆ, ತರುಣ ಮಗ ತನ್ನ ದಿನನಿತ್ಯದ ಕೆಲಸಗಳನ್ನು, ಓಡಾಡಬೇಕಾದ ದಾರಿಯನ್ನು ಗಮನಿಸುವ ಬದಲು ತನ್ನ ತಂದೆಯನ್ನು ಗಮನಿಸಲು ಆರಂಭಿಸುತ್ತಾನೆ. ತಂದೆ ಮಗನನ್ನು ಗಮನಿಸಲು ಆರಂಭಿಸುತ್ತಾನೆ.

ಅವರಿಬ್ಬರೂ ಅಷ್ಟೊಂದು ಹತ್ತಿರದಿಂದ ನೋಡಿಕೊಂಡದ್ದು, ಮಾತನಾಡಿದ್ದು, ಒಬ್ಬರನ್ನೊಬ್ಬರು ಗಮನಿಸಿದ್ದು ಎರಡೂವರೆ ದಶಕದಲ್ಲಿ ಅದೇ ಮೊದಲು. ಅಂಚೆಚೀಲ ಬೆನ್ನಿಗೇರಿಸಿಕೊಂಡು ಒಮ್ಮೆ ಹೊರಟರೆ ಅಪ್ಪ ಹಿಂತಿರುಗುವುದು ಒಂದಷ್ಟು ದಿನಗಳಾದಮೇಲೆಯೇ. ಮನೆಯಲ್ಲಿ ಅಮ್ಮ-ಮಗ ಮಾತ್ರ. ಒಂದು ನಡಿಗೆ ಮುಗಿಸಿ ಮನೆಗೆ ಹಿಂತಿರುಗಿದ ಅಪ್ಪ ಮತ್ತೆ ಬೆಳಗಾಗುವ ಹೊತ್ತಿಗೆ ಎದ್ದು ಮುಂದಿನ ಪಯಣ ಆರಂಭಿಸಿರುತ್ತಾನೆ. ಮಗನ ಮನಸ್ಸಿನಲ್ಲಿರುವುದು ಅಪ್ಪನೆಂಬ ಆಕೃತಿ ಮಾತ್ರ. ಇಷ್ಟು ವರ್ಷಗಳಾದ ಮೇಲೆಯೂ ಅದರೊಂದಿಗೆ ಒಂದು ಭಾವಬಂಧ ಬಲಿತೇ ಇಲ್ಲ. ಅದಕ್ಕೆ ಸಣ್ಣ ಅವಕಾಶವೂ ಇರಲಿಲ್ಲ.  

ಅಂಥದ್ದೊಂದು ಅವಕಾಶವಾಗಿ ಒಲಿದು ಬಂದದ್ದು ಈ ಸಹಪಯಣದಿಂದ. ಪಯಣದಲ್ಲಿ ಎದುರಾಗುವ ಪ್ರತಿಕ್ಷಣವೂ ತರುಣ ಮಗನಿಗೆ ಹೊಚ್ಚಹೊಸದು. ಅವನಿಗೆ ಪ್ರತಿಯೊಂದರಲ್ಲೂ ವೈಶಿಷ್ಟ್ಯ, ಸ್ವಾರಸ್ಯ, ಕೌತುಕ. ಮುಕ್ಕಾಲು ಪಯಣ ಮುಗಿಯುವ ಹೊತ್ತಿಗೆ ನದಿಯೊಂದು ಎದುರಾಗುತ್ತದೆ. ಸೇತುವೆಯಿಲ್ಲದ ಅದನ್ನು ಹಾಗೆಯೇ ಕಾಲ್ನಡಿಗೆಯಲ್ಲಿ ದಾಟುವುದು ಕ್ರಮ. ಮಗ ನಾಯಿಯೊಂದಿಗೆ ಮೊದಲು ನದಿ ದಾಟಿ ಬೆನ್ನಮೇಲಿನ ಚೀಲವನ್ನು ಇನ್ನೊಂದು ದಡದಲ್ಲಿ ಇಟ್ಟು ಬರುತ್ತಾನೆ. ತಂದೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಇನ್ನೊಮ್ಮೆ ದಾಟುತ್ತಾನೆ. ಅಪ್ಪ-ಮಗ ಇಬ್ಬರಿಗೂ ಅದೊಂದು ವರ್ಣನಾತೀತ ಅನುಭೂತಿ.

“ಯಾವಾಗ ಮಗ ಅಪ್ಪನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಾನೋ ಆಗ ಮಗ ಬೆಳೆದು ದೊಡ್ಡವನಾದನೆಂದು ಅರ್ಥ ಅಂತ ನಮ್ಮೂರಿನ ಹಿರಿಯರು ಹೇಳ್ತಾ ಇದ್ರು. ನಾನು ಎಳೆಯವನಿದ್ದಾಗ ಅಪ್ಪ ನನಗೊಬ್ಬ ಭಾರೀ ಆಕೃತಿ ಆಗಿದ್ದ. ಇವನನ್ನು ನಾನು ಎಂದಾದರೂ ಹೊತ್ತುಕೊಂಡು ಹೋಗುವುದು ಸಾಧ್ಯವಿದೆಯೇ ಅಂತ ಕಳವಳಪಡುತ್ತಿದ್ದೆ...” ನದಿ ದಾಟುತ್ತಲೇ ಮಗ ಜ್ಞಾಪಿಸಿಕೊಳ್ಳುತ್ತಾನೆ.

ಅಪ್ಪನೊಳಗೂ ಇನ್ಯಾವುದೋ ಒಂದು ಭಾವಸ್ಫುರಣ ಉಂಟಾಗಿ ಮನಸ್ಸು ಒದ್ದೆಯಾಗಿರುತ್ತದೆ. ಬಹುಶಃ ಅವನ ಮನಸ್ಸಿನಲ್ಲೂ ಇರುವುದು ಮಗನ ಎದೆಯೊಳಗೆ ಹರಿದಾಡುತ್ತಿರುವ ಬೇಗುದಿಯೇ. ಅವನ ಕಣ್ಣುಗಳಲ್ಲಿರುವುದು ತಂದೆಯಾಗಿ ತಾನು ಮಾಡಬೇಕಾದ್ದನ್ನು ಮಾಡಿದ್ದೇನೆಯೇ ಎಂಬ ಪ್ರಾಮಾಣಿಕ ಪ್ರಶ್ನೆ. ನದಿಯನ್ನು ದಾಟುತ್ತಲೇ ಅಪ್ಪ-ಮಗ ಪರಸ್ಪರ ಮಾತುಗಳೇ ಇಲ್ಲದೆ ತಮ್ಮತಮ್ಮ ನೆಲೆಗಳನ್ನು, ಪಾತ್ರಗಳನ್ನು ಅರ್ಥೈಸಿಕೊಳ್ಳುವ ರೀತಿ ಮಾತ್ರ ಅದ್ಭುತ. ನದಿಯನ್ನು ದಾಟಿ ಮಗನ ಹೆಗಲಿನಿಂದ ಇಳಿದ ತಂದೆಗೆ ಆತನ ಮುಖ ನೋಡುವ ಧೈರ್ಯ ಇಲ್ಲ. ಮಗನಿಗೂ ಅಪ್ಪನ ಕಣ್ಣುಗಳನ್ನು ನೋಡುವ ಧೈರ್ಯ ಇಲ್ಲ. “ಈ ಪೋಸ್ಟ್ ಬ್ಯಾಗಿಗಿಂತಲೂ ನೀನೇ ಬಹಳ ಹಗುರ ಇದ್ದೀಯಾ” ಎಂದು ತಂದೆಯ ಮಾತುತಪ್ಪಿಸಲು ಪ್ರಯತ್ನಿಸುತ್ತಾನೆ.

ಅಪ್ಪನೆಂದರೆ ಹಾಗೆಯೇ. ಅದೊಂದು ವಿಚಿತ್ರ ವ್ಯಕ್ತಿತ್ವ. ಅಂಚೆಯಣ್ಣನ ಎಳೆಯ ಮಗನಿಗೆ ಕಂಡ ಹಾಗೆ ಅದೊಂದು ಭಯಂಕರ ಆಕೃತಿ. ಹೆಚ್ಚೆಂದರೆ ಅದು ಜಗತ್ತಿನ ಎಲ್ಲ ಕೆಲಸಗಳನ್ನೂ ಮಾಡಬಲ್ಲ, ಬೇಕಾದ್ದನ್ನು ತಂದುಕೊಡಬಲ್ಲ ಸೂಪರ್‍ಮ್ಯಾನ್ ಆಗಬಹುದು. ಇನ್ನು ಕೆಲವರಿಗೆ ಅದೊಂದು ಒರಟು ಮನುಷ್ಯ. ಅಮ್ಮನೊಂದಿಗೆ ಇರಬಹುದಾದ ಸಲುಗೆಯನ್ನು ಈ ವ್ಯಕ್ತಿಯೊಂದಿಗೆ ಇಟ್ಟುಕೊಳ್ಳುವುದು ಕಷ್ಟ. ಅಮ್ಮನಲ್ಲಾದರೆ ಏನು ಬೇಕಾದರೂ ಹೇಳಿಕೊಳ್ಳಬಹುದು. ಅಪ್ಪನೊಂದಿಗೆ ಮಾತಾಡುವುದಕ್ಕೆ ಅಮ್ಮನ ವಕಾಲತ್ತು ಬೇಕು. ಅನೇಕ ಸಲ ಅಮ್ಮನಿಗೂ ಬಚಾವಾಗುವುದಕ್ಕೆ ಈ ಅಪ್ಪನೆಂಬ ಗುರಾಣಿಯೇ ಬೇಕು. ‘ಇರು, ಅಪ್ಪ ಬರಲಿ, ಎಲ್ಲ ಹೇಳುತ್ತೇನೆ’ – ಆಕೆ ಹಾಗೆಂದು ಮಕ್ಕಳ ಬಹುಪಾಲು ಉಪಟಳಗಳನ್ನು ನಿಯಂತ್ರಿಸಿಯಾಳು.

ಆದರೆ ಅಪ್ಪನೆಂದರೆ ಅಷ್ಟೇ ಅಲ್ಲವೆಂದು ಮನದಟ್ಟು ಆಗುವ ಹೊತ್ತಿಗೆ ಬದುಕಿನ ಅರ್ಧ ಭಾಗವೇ ಸವೆದುಹೋಗಿರುತ್ತದೋ ಏನೋ! ಅಮ್ಮನೆಂದರೆ ಸುಲಭವಾಗಿ ಅರ್ಥವಾಗುವ ಸುಂದರ ಭಾವಗೀತೆ; ಅಪ್ಪನಾದರೋ ತಕ್ಷಣಕ್ಕೆ ಅರ್ಥವಾಗದ ಸುದೀರ್ಘ ಕಥನಕವನ. ಅಮ್ಮನೆಂದರೆ ಎರಡೂ ದಡಗಳಿಗೆ ತಂಪನ್ನುಣಿಸುತ್ತಾ ಮೆಲ್ಲಮೆಲ್ಲನೆ ಹರಿಯುವ ತಣ್ಣನೆಯ ತೊರೆ; ಅಪ್ಪನಾದರೋ ಆಳ-ಅಗಲ ತಕ್ಷಣಕ್ಕೆ ಅರಿವಿಗೆ ಬಾರದೆ ತನ್ನಷ್ಟಕ್ಕೇ ಹರಿಯುತ್ತಿರುವ ಘನಗಂಭೀರ ವಿಸ್ತಾರ ನದಿ. ಆತನ ಮುಖವನ್ನಷ್ಟೇ ನೋಡಿ ಏನನ್ನಾದರೂ ಅರ್ಥ ಮಾಡಿಕೊಳ್ಳುವುದು ಕಷ್ಟ. ಏಕೆಂದರೆ ಮುಖದಲ್ಲೇ ಆತ ಎಲ್ಲವನ್ನೂ ವ್ಯಕ್ತಪಡಿಸಲಾರ.

‘ನಿನ್ನನ್ನು ಪ್ರೀತಿಸುತ್ತೇನೆ ಎಂದು ತಂದೆ ಹೇಳುವುದಿಲ್ಲ, ಆದರೆ ಅದನ್ನು ಮಾಡುತ್ತಲೇ ಇರುತ್ತಾನೆ’ ಎಂಬ ಮಾತಿದೆ. ಹೌದು, ಆತ ಮಾತಿನಲ್ಲೇ ಎಲ್ಲವನ್ನೂ ಹೇಳಲಾರ. ಹತ್ತಿರದಿಂದ ನೋಡುವವರಿಗೆ ಕಂಡೀತು ಅಷ್ಟೆ. ತನ್ನೊಳಗೆ ತಾನೇ ಕರಗಿ ನೀರಾಗಿ ಮತ್ತೆ ಗಟ್ಟಿಯಾಗುವ ಮೇಣದಂತೆ ಅವನು- ಸಂತೋಷವಾದರೂ, ದುಃಖವಾದರೂ ಹೊರಮುಖದಲ್ಲಿ ಪ್ರಕಟವಾಗುವುದು ತುಸು ಅಪರೂಪವೇ. ಪ್ರಕಟವಾದ ಕ್ಷಣಕ್ಕೆ ಆತ ಅಪ್ಪನಾಗಿ ಉಳಿಯದೆ ಅಮ್ಮನಾಗುತ್ತಾನೆ: ಎಂಬಲ್ಲಿಗೆ ವಾಸ್ತವವಾಗಿ ಅಪ್ಪ-ಅಮ್ಮ ಇಬ್ಬರೂ ಒಂದೇ ಎಂದಾಯಿತು. ಗಂಡಿನೊಳಗೊಂದು ಹೆಣ್ಣು, ಹೆಣ್ಣಿನೊಳಗೊಬ್ಬ ಗಂಡು ಇರುವುದರಿಂದ ಅಲ್ಲವೇ ಪ್ರಕೃತಿ-ಪುರುಷರ ಪರಿಕಲ್ಪನೆ, ಆಕಾಶ-ಭೂಮಿಯ ತತ್ವಗಳು ಸಾಧ್ಯವಾಗಿರುವುದು? 

‘ಆತ್ಮಾ ವೈ ಪುತ್ರ ನಾಮಾಸಿ’- ಅಪ್ಪನೇ ಮಗನಾಗಿ ಹುಟ್ಟುತ್ತಾನೆ: ಇದು ಪೂರ್ವಿಕರ ನಂಬಿಕೆ. ತಂದೆಯಾಗುವುದು ಕಷ್ಟವಲ್ಲವಂತೆ, ತಂದೆಯಾಗಿರುವುದು ಕಷ್ಟ. ಎಳೆಯ ಮಗುವಿನಿಂದ ತೊಡಗಿ ವಯೋವೃದ್ಧರವರೆಗೆ ಎಲ್ಲ ಹೆಣ್ಣುಮಕ್ಕಳನ್ನೂ ‘ಅಮ್ಮಾ’ ಎಂದು ಸಂಬೋಧಿಸಬಹುದು. ಆದರೆ ‘ಅಪ್ಪ’ ಎಂದು ಕರೆಯುವುದು ಒಬ್ಬನನ್ನೇ. ಅದಕ್ಕೆ ಆ ಸ್ಥಾನ ಅಷ್ಟು ವಿಶಿಷ್ಟವಾದದ್ದು. ಆ ಸ್ಥಾನಕ್ಕೆ ತಲುಪುವುದು ಬದುಕಿನ ಸಹಜ ಪ್ರಕ್ರಿಯೆ, ಆದರೆ ತಂದೆಯಾಗಿ ಮಾಡಬೇಕಾದ್ದನ್ನು ಆತ್ಮತೃಪ್ತಿ ದಕ್ಕುವಂತೆ ಮಾಡುವುದು ಕೊಂಚ ನಿಧಾನಪ್ರಕ್ರಿಯೆ. ತಂದೆಯಾಗಿ ಯಾವ ಕರ್ತವ್ಯ ನಿರ್ವಹಿಸಬೇಕೋ ಅದನ್ನು ಸರಿಯಾಗಿ ನಿರ್ವಹಿಸದವನು  ಮುಂದೆ ತನ್ನ ಮಕ್ಕಳಿಂದಲೂ ಅಂತಹದನ್ನು ನಿರೀಕ್ಷಿಸಲಾಗದು.

ಮಕ್ಕಳು ಹದಿಹರೆಯ ದಾಟಿ ಪ್ರಾಯಪ್ರಬುದ್ಧರಾದ ಮೇಲೆ ಅಪ್ಪ ಅವರನ್ನು ಸ್ನೇಹಿತರಂತೆ ನೋಡಿಕೊಳ್ಳಬೇಕೆಂಬುದೊಂದು ಲೋಕರೂಢಿ. ಅಪ್ಪ ಗೆಳೆಯನೂ ಆಗಿರುವುದರಿಂದಲೇ ಅವನೊಳಗೊಬ್ಬ ಮಾರ್ಗದರ್ಶಕನೂ ಸಲಹೆಗಾರನೂ ಇರುತ್ತಾನೆ. ಅಪ್ಪ ಪ್ರತಿಯೊಬ್ಬನ ಬೆನ್ನಹಿಂದೆ ಇರುವ ಒಬ್ಬ ಫ್ರೆಂಡ್, ಗೈಡ್ ಅಂಡ್ ಫಿಲಾಸಫರ್. ಹಾಗೆಂದು ಆತ ವಾಚಾಳಿಗಳಂತೆ ಎಲ್ಲವನ್ನೂ ಮಾತಿನಲ್ಲೇ ಹೇಳಿರುತ್ತಾನೆ ಎಂದೇನೂ ಇಲ್ಲ.  ಅವನ ಮೌನವನ್ನೂ, ಮೌನದೊಳಗಿರುವ ಸೂಚನೆಗಳನ್ನೂ ಅರ್ಥಮಾಡಿಕೊಳ್ಳಬಲ್ಲವರೇ ಜೀವನದಲ್ಲಿ ಯಶಸ್ಸನ್ನು ಕಂಡಾರು. ಅಪ್ಪ ಎಂದರೆ ಅಂತರಂಗದಲ್ಲಿ ಸದಾ ಬೆಳಗುತ್ತಿರುವ ಹೊಂಬೆಳಕು. ಆ ಬೆಳಕು ಒಳಗಿನಿಂದಲೇ ಪ್ರಭೆಯನ್ನು ಹೊಮ್ಮಿಸುವ ಮಿಂಚುಹುಳ ಆಗಿರುವುದರಿಂದಲೇ ನಮ್ಮ ವ್ಯಕ್ತಿತ್ವವನ್ನೂ ಬೆಳಗುತ್ತದೆ, ಭವಿಷ್ಯದ ದಾರಿಯನ್ನೂ ತೋರಿಸುತ್ತದೆ. ಆ ಬೆಳಕು ಮುಗಿಯುವುದೇ ಇಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

ಸೋಮವಾರ, ಮೇ 9, 2022

ಮೌಲ್ಯಗಳ ಮಹಾಸಾಗರ ವಿಶ್ವಕವಿ ರವೀಂದ್ರರು

7-13 ಮೇ 2022ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ

ಎಲ್ಲಿ ಮನಕಳುಕಿರದೊ, ಎಲ್ಲಿ ತಲೆಬಾಗಿರದೊ,
ಎಲ್ಲಿ ತಿಳಿವಿಗೆ ತೊಡಕು ತೋರದಿರುವಲ್ಲಿ;
ಎಲ್ಲಿ ಮನೆಯಿಕ್ಕಟ್ಟು, ಸಂಸಾರ ನೆಲೆಗಟ್ಟು,
ದೂಳೊಡೆಯದಿಹುದೊ, - ತಾನಾ ನಾಡಿನಲ್ಲಿ

ಹೀಗೆ ಮುಂದುವರಿಯುತ್ತದೆ ವಿಶ್ವಕವಿ ರವೀಂದ್ರರ ‘ಪ್ರಾರ್ಥನೆ’ ಎಂಬ ಪ್ರಸಿದ್ಧ ಗೀತೆ (ಕನ್ನಡಾನುವಾದ ಎಂ. ಎನ್. ಕಾಮತ್). ತಮ್ಮ ಸುಂದರ ನಾಡಿನ ಕನಸನ್ನು ಬಿಚ್ಚಿಡುತ್ತಲೇ ಕೊನೆಗೆ, ‘ಅಲ್ಲಿಯಾ ಬಂಧನರಹಿತ ಸುಖದ ಸ್ವರ್ಗದಲಿ, ಪಾಲಿಸೈ ಪಿತ! ನಮ್ಮ ನಾಡೆಚ್ಚರಿಸಲಿ’ ಎಂದು ಮುಕ್ತಾಯಗೊಳಿಸುತ್ತಾರೆ. ಇದು ಅವರಿಗೆ ನೋಬೆಲ್ ಪ್ರಶಸ್ತಿ ತಂದುಕೊಟ್ಟ ‘ಗೀತಾಂಜಲಿ’ಯ ಕವಿತೆಗಳಲ್ಲೊಂದು ಕೂಡ.

ಹಾಗೆ ನೋಡಿದರೆ, ‘ಗೀತಾಂಜಲಿ’ಯಲ್ಲಿರುವ ಎಲ್ಲ ಕವಿತೆಗಳೂ ‘ಪ್ರಾರ್ಥನೆ’ಗಳೇ. ಅವೆಲ್ಲವೂ ರವೀಂದ್ರರು ತಮ್ಮ ಕಲ್ಪನೆಯ ದೇವರೆದುರು ಮಾಡಿಕೊಂಡ ನಿವೇದನೆಗಳೇ. ‘ನಿನ್ನ ಕರುಣೆಗೆಣೆಯಿಲ್ಲ ಪ್ರಭುವೆ/ ನೀನೆನ್ನ ಅನಂತವಾಗಿಸಿರುವೆ/ ಕಾಯವೆಂಬ ಗಡಿಗೆಯ ಖಾಲಿಯಾಗಿಸಿ/ ನವ ಚೈತನ್ಯವ ತುಂಬಿರುವೆ// ಬರಿದೆ ಬಿದ್ದ ಕೊಳಲು ನಾನು/ ಗಿರಿ ಗಹ್ವರಕೆ ಕೊಂಡೊಯ್ವೆ ನೀನು/ ಹೊಸಗಾಳಿಯ ಉಸಿರ ತುಂಬಿ/ ಜೀವರಾಗ ನೀ ನುಡಿಸಿರುವೆ’ ಎಂದು ಒಂದೆಡೆ ಹೇಳಿದರೆ, ಇನ್ನೊಂದೆಡೆ ‘ನಿನ್ನ ಕಾಣ್ಕೆಯಲಿ ನನ್ನ ಕವಿತನದ ಬಿಮ್ಮು ನಾಚಿ ಅಳಿಯಿತು’ ಎನ್ನುತ್ತಾರೆ. ಮತ್ತೊಂದೆಡೆ, ‘ಪ್ರಾರ್ಥಿಸುವೆ ನಿನ್ನ ಪ್ರಭುವೆ/ ಬಡಿಬಡಿದು ಎಚ್ಚರಿಸು/ ನನ್ನೆದೆಯ ಅರಿವಿನ ಬೇರು’ ಎಂದು ಬೇಡಿಕೊಳ್ಳುತ್ತಾರೆ (ಎಲ್ಲವೂ ಸುಧಾ ಅಡುಕಳ ಅವರ ಕನ್ನಡಾನುವಾದ).

ಅವರಿಗೆ ದೇವರೆಂದರೆ ಶುದ್ಧ ನಿರಾಕಾರ ಸ್ವರೂಪಿ; ಅಂತರಂಗವನ್ನು ಬೆಳಗುವ, ಒಳಗನ್ನು ಸದಾ ಎಚ್ಚರದಲ್ಲಿರಿಸುವ ಅಗೋಚರ ಶಕ್ತಿ. ಒಂದು ವೇಳೆ ಭಗವಂತನನ್ನು ಪ್ರತ್ಯಕ್ಷವಾಗಿ ನೋಡುವುದು ಸಾಧ್ಯವಾದರೆ ಅದು ಪ್ರಕೃತಿಯ ಮೂಲಕ ಎಂಬುದು ಅವರು ಕೊನೆಯವರೆಗೂ ಇಟ್ಟುಕೊಂಡಿದ್ದ ನಂಬಿಕೆ. ಅವರ ಕೃತಿಗಳಲ್ಲೆಲ್ಲ ಗಾಢವಾಗಿ ಎದ್ದುಕಾಣುವುದು ಪ್ರಕೃತಿಯೆಡೆಗಿನ ಅನಂತ ಪ್ರೇಮ.

ಗುರುದೇವ, ಕವಿಗುರು, ವಿಶ್ವಕವಿ- ಹೀಗೆಲ್ಲ ಜಗತ್ತಿನಿಂದ ಕರೆಸಿಕೊಂಡ ರವೀಂದ್ರನಾಥ ಟಾಗೋರ್ ಅಪ್ರತಿಮ ಪ್ರತಿಭಾವಂತರು ಮಾತ್ರವಲ್ಲ, ಮಹಾನ್ ದಾರ್ಶನಿಕರು ಕೂಡ. ಅವರ ಕೃತಿಗಳಲ್ಲೆಲ್ಲ ಮತ್ತೆಮತ್ತೆ ಕಾಣುವುದು ಮಾನವೀಯ ಮೌಲ್ಯಗಳ ನಿರಂತರ ಹುಡುಕಾಟ, ಪ್ರಕೃತಿಯೊಂದಿಗೆ ಒಂದಾಗಿ ಬಿಡಬೇಕೆನ್ನುವ ಎಡೆಬಿಡದ ತುಡಿತ. ‘ಪ್ರಕೃತಿಯಿಂದ ದೂರವಾದವನೇ ನಿಜವಾದ ಬಡವ. ಪ್ರಕೃತಿಯೊಂದಿಗೆ ಬಾಳುವುದೆಂದರೆ ದೇವರೊಂದಿಗೆ ಇರುವುದು. ಪ್ರಕೃತಿ ಮಾತ್ರ ಮನುಷ್ಯನ ಭೌತಿಕ ಹಾಗೂ ಮಾನಸಿಕ ಗಾಯಗಳನ್ನು ಗುಣಪಡಿಸಬಲ್ಲುದು’ ಎಂಬುದು ರವೀಂದ್ರರ ಗಟ್ಟಿ ನಂಬಿಕೆಯಾಗಿತ್ತು. ತಮ್ಮ ದಿನಚರಿಯ ಬಹುಭಾಗವನ್ನೂ ಅವರು ಪ್ರಕೃತಿಯ ನಡುವೆಯೇ ಕಳೆಯುತ್ತಿದ್ದವರು. ಗೋಡೆಗಳ ಅವಶ್ಯಕತೆ ಅವರಿಗೆ ಇರಲಿಲ್ಲ. ಗಿಡ, ಮರ, ಬಳ್ಳಿ, ಹೂವು, ತೊರೆ, ಬಿಸಿಲು, ನೆರಳುಗಳ ಮೂಲಕ ತಮ್ಮ ಕಲ್ಪನೆಯ ಲೋಕವನ್ನು ವಿಸ್ತರಿಸಿಕೊಳ್ಳಬಹುದಾದ ಭಾವಜಗತ್ತೊಂದು ಅವರೊಳಗೆ ಸದಾ ಜೀವಂತವಾಗಿತ್ತು.

ಸ್ವತಃ ಔಪಚಾರಿಕ ಶಿಕ್ಷಣವನ್ನು ಪಡೆಯದ ಟಾಗೋರರಿಗೆ ತರಗತಿ ಕೊಠಡಿಗಳ ಪಾಠಪ್ರವಚನಗಳಲ್ಲಿ ವಿಶೇಷವಾದ ಆಸಕ್ತಿಯೂ ಇರಲಿಲ್ಲ. ಅನುಭವಕ್ಕಿಂತ ದೊಡ್ಡ ಗುರುವಿಲ್ಲ, ಪ್ರಕೃತಿಗಿಂತ ದೊಡ್ಡ ಪಾಠಶಾಲೆಯಿಲ್ಲ ಎಂಬುದೇ ಅವರು ಬದುಕಿನಲ್ಲಿ ಕಂಡುಕೊಂಡ ಸತ್ಯ. ಅವರು ಸ್ಥಾಪಿಸಿದ ಶಾಂತಿನಿಕೇತನ ಅಂತಹದೊಂದು ನಂಬಿಕೆಯ ಅನುಷ್ಠಾನದ ಪ್ರಯತ್ನವೂ ಆಗಿತ್ತು. ಅವರು ತರಗತಿ ಕೊಠಡಿಗಳಿಂದಾಚೆ, ಮರಗಿಡಗಳ ಮಧ್ಯೆ ಕುಳಿತೇ ತಮ್ಮ ಶಿಷ್ಯರೊಂದಿಗೆ ಸಂವಾದ ನಡೆಸುತ್ತಿದ್ದರು.  ‘ಮಾಹಿತಿಯನ್ನಷ್ಟೇ ಕೊಡುವುದು ಶಿಕ್ಷಣ ಅಲ್ಲ. ಸೃಷ್ಟಿಯೊಂದಿಗೆ ಸೌಹಾರ್ದತೆಯಿಂದ ಬದುಕಲು ಕಲಿಯುವುದೇ ಅತ್ಯುನ್ನತವಾದ ಶಿಕ್ಷಣ’ ಅದು ಅವರ ಕಾಣ್ಕೆ.

ಪರಮ ಧಾರ್ಮಿಕರಾದರೂ, ಗುಡಿ-ವಿಗ್ರಹಗಳಿಂದಾಚೆ ದೇವರ ಇರವನ್ನು ಕಾಣಬಲ್ಲವರಾಗಿದ್ದರು. ದೇವರನ್ನು ಹಾಗೆ ಕಾಣಲು ಸಾಧ್ಯವಾಗಬೇಕು ಎಂಬುದೇ ಅವರ ಒಟ್ಟಾರೆ ಪ್ರತಿಪಾದನೆ ಕೂಡ. 

ಜಪಮಾಲೆಯ ಮಣಿಗಳನ್ನು ಎಣಿಸುತ್ತಾ
ಮಂತ್ರಗಳನ್ನು ಗೊಣಗುವುದನ್ನು ನಿಲ್ಲಿಸು
ಬಾಗಿಲು ಮುಚ್ಚಿ, ಕತ್ತಲೆಯಲ್ಲಿ ಕುಳಿತು 
ಏಕಾಂಗಿಯಾಗಿ ಯಾರನ್ನು ಸ್ತುತಿಸುವೆ?
ಕಣ್ತೆರೆದು ನೋಡು! ದೇವರು ನಿನ್ನೆದುರು ಇಲ್ಲ
ಅವನು...
ಬರಡು ನೆಲವ ನೇಗಿಲಿನಿಂದ ಹಸನುಗೊಳಿಸುತ್ತಿರುವವನೊಂದಿಗಿದ್ದಾನೆ
ಕಲ್ಲುಬಂಡೆಗಳ ಒಡೆದು ದಾರಿ ಮಾಡುವವನೊಂದಿಗಿದ್ದಾನೆ
ಬಿಸಿಲು ನೆರಳುಗಳ ಪರಿವೆಯಿಲ್ಲದೇ ದುಡಿಯುವವರೊಂದಿಗಿದ್ದಾನೆ

(ಕನ್ನಡಾನುವಾದ: ಸುಧಾ ಅಡುಕಳ)

ಎಂದು ಹೇಳುವಾಗ ರವೀಂದ್ರರಿಗೂ ‘ದುಡಿಮೆಯೇ ದೇವರು’ ಆಗಿತ್ತೆನ್ನುವುದು ಸ್ಪಷ್ಟ. ಗುಡಿಯೊಳಗೆ ದೇವರಿದ್ದಾನೆಯೇ ಎಂಬ ಪ್ರಶ್ನೆಗಿಂತಲೂ ಹೊರಗೆ ದುಡಿಯುವವರ ಕಸುವಲ್ಲಿ ದೇವರಿದ್ದಾನೆ ಎಂಬ ಅರಿವು ಅವರಿಗೆ ಮುಖ್ಯ. 

ರವೀಂದ್ರರನ್ನು ಅತ್ಯಂತ ಸೂಕ್ತವಾಗಿ ಏನೆಂದು ಗುರುತಿಸಬಹುದು? ಕವಿ? ಲೇಖಕ? ನಾಟಕಕಾರ? ಸಮಾಜ ಸುಧಾರಕ? ಕಾದಂಬರಿಕಾರ? ತತ್ತ್ವಜ್ಞಾನಿ? ಚಿತ್ರಕಾರ? ಅವರು ಅದೆಲ್ಲವೂ ಆಗಿದ್ದರು. ಒಂದರೊಳಗೆ ಇನ್ನೊಂದು ಬೆಸೆದುಕೊಂಡ ಅಸಾಧಾರಣ ವ್ಯಕ್ತಿತ್ವ ಅವರದ್ದು. ಒಂದರಿಂದ ಇನ್ನೊಂದನ್ನು ಬೇರ್ಪಡಿಸಲಾಗದು. ಅವರ ಗದ್ಯಗಳಲ್ಲಿ ಒಂದು ಕಾವ್ಯವಿದೆ, ಕಾವ್ಯದೊಳಗೊಂದು ದರ್ಶನವಿದೆ. ನಾಟಕ, ಕಾದಂಬರಿ, ಪ್ರಬಂಧ, ಚಿತ್ರ – ಯಾವುದನ್ನು ಎತ್ತಿಕೊಂಡರೂ ಅಲ್ಲೊಂದು ಮಾನವಪ್ರೀತಿಯ ಒರತೆಯಿದೆ.

‘ಮನುಷ್ಯನನ್ನು ಪ್ರೀತಿಸದ ಹೊರತು ನಾವು ಎಂದಿಗೂ ನಿಜವಾದ ದೃಷ್ಟಿಕೋನವನ್ನು ಹೊಂದಲು ಸಾಧ್ಯವಿಲ್ಲ. ನಾಗರಿಕತೆಯನ್ನು ಗೌರವಿಸಬೇಕಿರುವುದು ಅದು ಅಭಿವೃದ್ಧಿಪಡಿಸಿದ ಶಕ್ತಿಯ ಪ್ರಮಾಣದಿಂದಲ್ಲ; ಬದಲಾಗಿ, ಅದು ಎಷ್ಟು ವಿಕಾಸಗೊಂಡಿದೆ ಮತ್ತು ಮಾನವ ಜನಾಂಗದ ಪ್ರೀತಿಗೆ ಎಷ್ಟರಮಟ್ಟಿನ ಅಭಿವ್ಯಕ್ತಿ ನೀಡಿದೆ ಎಂಬುದರ ಮೇಲೆ’ ಎಂಬುದು ವಿಶ್ವಕವಿಯ ಮಾತು.

ವಿಶ್ವಮಾನವತೆಯ ಮಹಾಮಾದರಿಯೊಂದನ್ನು ಕಟ್ಟಿಕೊಟ್ಟದ್ದು ರವೀಂದ್ರರು. ಅವರು ಎಲ್ಲರನ್ನೂ ಪ್ರೀತಿಸಬಲ್ಲವರಾಗಿದ್ದರು. ವಿಶ್ವದ ಶ್ರೇಷ್ಠ ವ್ಯಕ್ತಿತ್ವಗಳೊಂದಿಗೆ ಸಂವಾದ ನಡೆಸಬಲ್ಲವರಾಗಿದ್ದರು. ಗಾಂಧೀಜಿಯವರೊಂದಿಗೆ ಒಂದಷ್ಟು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಅವರು ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸೆಯನ್ನು ಸದಾ ಬೆಂಬಲಿಸಿದರು. ವಿಶ್ವವಿಖ್ಯಾತ ವಿಜ್ಞಾನಿ ಐನ್‌ಸ್ಟೀನ್‌ರೊಂದಿಗೆ ಜಗತ್ತನ್ನು ಮುನ್ನಡೆಸುವ ಶಕ್ತಿಯ ಕುರಿತು ಚರ್ಚಿಸಿದರು. ‘ಪಶ್ಚಿಮದ ನಾಗರಿಕತೆ ಇಂಥದೊಂದು ಸಾಹಿತ್ಯ ಕೃತಿಗಾಗಿ [ಗೀತಾಂಜಲಿ] ಬಹುದಿನಗಳಿಂದ ಪ್ರಾರ್ಥಿಸುತ್ತಿತ್ತು’ ಎಂಬ ಪ್ರಶಂಸೆಯನ್ನು ಇಂಗ್ಲೀಷ್‌ನ ಪ್ರಸಿದ್ಧ ಕವಿ ಡಬ್ಲ್ಯು. ಬಿ. ಯೇಟ್ಸ್ ನಿಂದ ಪಡೆದುಕೊಂಡರು. ಭಾರತವನ್ನು ಅಪಾರವಾಗಿ ಪ್ರೀತಿಸಿದರೂ ಅವರಿಗೆ ಪಶ್ಚಿಮದ ಕುರಿತು ಅಗೌರವ ಇರಲಿಲ್ಲ. ಪೂರ್ವ-ಪಶ್ಚಿಮ ಎರಡನ್ನೂ ಸಮನ್ವಯದ ದೃಷ್ಟಿಯಿಂದ ನೋಡಬೇಕು ಎಂಬುದೇ ಅವರ ಪ್ರತಿಪಾದನೆ ಆಗಿತ್ತು. ‘ಎಲ್ಲ ಶ್ರೇಷ್ಠ ಮಾನವೀಯ ಮೌಲ್ಯಗಳಿಗೆ ಒಂದು ಕೌಟುಂಬಿಕ ಬಂಧವಿದೆ. ಈ ಮೌಲ್ಯಗಳು ರಾಷ್ಟ್ರಗಳ ಮಧ್ಯೆ ಪರಸ್ಪರ ಬೆಸೆದುಕೊಳ್ಳಬೇಕು’ ಎಂದಿದ್ದರು ಅವರು.

ಅವರು ಬಡವರಿಗಾಗಿ ಮಿಡಿದರು. ಅಶಕ್ತರಲ್ಲಿ ಸಹಾನುಭೂತಿ ಹೊಂದಿದರು. ಮನುಷ್ಯಪ್ರೀತಿಯ ಶ್ರೇಷ್ಠತೆಯನ್ನು ನಂಬಿದರು. ಕುಲೀನ ಮನೆತನದಿಂದ ಬಂದರೂ ಸರಳವಾಗಿಯೇ ಬದುಕಿದರು. ಭವಿಷ್ಯದ ಬಗ್ಗೆ ಅಪಾರ ಆಶಾವಾದ ಹೊಂದಿದ್ದರು. ಇವುಗಳನ್ನೆಲ್ಲ ತಮ್ಮ ಕವಿತೆ, ನಾಟಕಗಳಲ್ಲಿ ನಿರಂತರ ಅಭಿವ್ಯಕ್ತಿಸಿದರು. ಪುರಾಣ ಪಾತ್ರಗಳನ್ನೆಲ್ಲ ವರ್ತಮಾನದ ಬೆಳಕಿನಲ್ಲಿ ನೋಡುವ ನಮ್ಯತೆಯನ್ನೂ ಆಧುನಿಕ ಮನೋಭಾವವನ್ನೂ ಹೊಂದಿದ್ದರು. ಜಂಜಡಗಳಿಂದ ತುಂಬಿರುವ ಇಂದಿನ ಜಗತ್ತಿಗೆ ರವೀಂದ್ರರು ಹಚ್ಚಿದ ಬೆಳಕು ನೆಮ್ಮದಿಯ ಹಾದಿ ತೋರಬಲ್ಲುದು.

- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಮಾರ್ಚ್ 19, 2022

ಅನಿರೀಕ್ಷಿತ ತಿರುವುಗಳ ಆಚೆಗಿದೆ ನೆಮ್ಮದಿಯ ಹೆದ್ದಾರಿ

12-18 ಮಾರ್ಚ್ 2022 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಬದುಕೊಂದು ಅಚ್ಚರಿಗಳ ಮೂಟೆ. ದಿನಾ ಓಡಾಡುವ ಹಾದಿಗಳಲ್ಲೇ ಅಂದುಕೊಂಡಂತೆ ಹೋಗಿ ವಾಪಸ್ ಬರುತ್ತೇವೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಇನ್ನು ಕ್ಷಣಕ್ಷಣ ಬದಲಾಗುವ ಬದುಕಿನಲ್ಲಿ ನಾವಂದುಕೊಂಡಂತೆ ಎಲ್ಲವೂ ನಡೆಯುತ್ತದೆ ಎಂದು ಹೇಳುವುದು ಹೇಗೆ? 

ಒಳ್ಳೆಯ ಬಿಸಿಲೆಂದು ಬಕೆಟುಗಟ್ಟಲೆ ಬಟ್ಟೆ ಒಗೆದು ಹರವಿ ಎಲ್ಲೋ ಹೊರಗೆ ಹೋಗಿರುತ್ತೇವೆ; ಎಂದೂ ಇಲ್ಲದ ಮಳೆ ಅಂದೇ ಬರುತ್ತದೆ. ಅಪರೂಪಕ್ಕೊಮ್ಮೆ ಪೂರ್ತಿ ದಿನ ಬಿಡುವು ದೊರೆತಿದೆ, ಒಳ್ಳೆಯ ಅಡುಗೆ ಮಾಡಿಕೊಂಡು ಉಣ್ಣಬೇಕು ಎಂದು ಕನಸು ಕಾಣುತ್ತೇವೆ; ಇಡೀ ದಿನ ಕರೆಂಟೇ ಇರುವುದಿಲ್ಲ. ಕುಟುಂಬ ಸಮೇತ ಪ್ರವಾಸ ಹೋಗಬೇಕೆಂದು ದಿನಗಟ್ಟಲೆ ಸಿದ್ಧತೆ ಮಾಡಿಕೊಂಡು ಕುಳಿತಿರುತ್ತೇವೆ; ಹೊರಡುವ ಮುನ್ನಾದಿನ ಅದ್ಯಾವುದೋ ಅನಾರೋಗ್ಯ ಅಮರಿಕೊಳ್ಳುತ್ತವೆ. ಸಂಜೆಯತನಕವೂ ಹತ್ತಿರದ ಬಂಧುವಿನೊಂದಿಗೋ ಸ್ನೇಹಿತನೊಂದಿಗೋ ಸಂತೋಷವಾಗಿ ಮಾತಾಡಿಕೊಂಡು ಕಾಲ ಕಳೆದಿರುತ್ತೇವೆ; ಬೆಳಗ್ಗೆ ಏಳುವಾಗ ಆತ ಬದುಕಿಲ್ಲ ಎಂಬ ಸುದ್ದಿ ಬರುತ್ತದೆ.

ದಿನನಿತ್ಯದ ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಘಟನೆಗಳಿಂದ ತೊಡಗಿ ಮನಸ್ಸು ವಿಹ್ವಲಗೊಳ್ಳುವ ಆಘಾತಗಳವರೆಗೆ ಇಂಥವು ನಡೆಯುತ್ತಲೇ ಇರುತ್ತವೆ. ಆಗೆಲ್ಲ ‘ಬದುಕೆಂದರೆ ಇಷ್ಟೇ ಏನು?’ ಎಂಬ ಪ್ರಶ್ನೆ ಮತ್ತೆಮತ್ತೆ ಕಾಡುತ್ತದೆ. ನಾವಂದುಕೊಂಡಂತೆ ಯಾವುದೂ ನಡೆಯುವುದಿಲ್ಲ ಎಂದ ಮೇಲೆ ಹಾಗಾಗಬೇಕು ಹೀಗಾಗಬೇಕು ಎಂದು ಹಂಬಲ ಕಟ್ಟಿಕೊಳ್ಳುವ, ಏನೇನೋ ಕನಸು ಕಾಣುವ ಅಗತ್ಯವಾದರೂ ಏನು ಎಂದೆನಿಸುತ್ತದೆ. ಅಂತಹ ಸಂದರ್ಭಗಳಲ್ಲೆಲ್ಲ ಗಾಢ ನೈರಾಶ್ಯ ಆವರಿಸಿಕೊಳ್ಳುತ್ತದೆ. ಮನಸ್ಸು ಕೈಕಾಲುಗಳನ್ನು ಒಳಸರಿಸಿಕೊಂಡು ಮುದುಡಿ ಕೂರುತ್ತದೆ.

ಎಲ್ಲರೂ ಇಂತಹದೊಂದು ಮನಸ್ಥಿತಿಗೆ ಬಂದರೆ ಜಗತ್ತು ವರ್ಣಮಯವಾಗುವುದು ಹೇಗೆ? ಜೀವನದಲ್ಲಿ ಉಲ್ಲಾಸ ನಲಿದಾಡುವುದು ಹೇಗೆ? ಬದುಕನ್ನು ಮತ್ತೆ ಉತ್ಸಾಹದ ಹಳಿಗಳ ಮೇಲೆ ಎಳೆದುತರುವುದು ಹೇಗೆ?

ಹೌದು, ಬಹುತೇಕ ನಿರಾಶೆಗಳೆಲ್ಲ ಕ್ಷಣಿಕ. ಕೆಲವು ಒಂದೆರಡು ಗಂಟೆಗಳಲ್ಲಿ, ಮತ್ತೆ ಕೆಲವು ಒಂದೆರಡು ದಿನಗಳಲ್ಲಿ ಹೊರಟುಹೋಗಬಹುದು. ಇನ್ನು ಕೆಲವು ವಾರಗಟ್ಟಲೆ, ತಿಂಗಳುಗಟ್ಟಲೆ ಉಳಿಯಬಹುದು. ಕೆಲವೇ ಕೆಲವು ಬದುಕಿಡೀ ಕಾಡಬಹುದು. ಅಂಥವುಗಳ ಪ್ರಮಾಣ ತೀರಾ ಕಮ್ಮಿ. ಅವುಗಳಿಗೆ ಕಾಲವೇ ಪರಿಹಾರ ಎಂದುಕೊಳ್ಳಬೇಕಷ್ಟೆ. ಆದರೆ ಎಲ್ಲದಕ್ಕೂ ಹಾಗೆಂದು ಭಾವಿಸಿದರೆ ನಮ್ಮ ಪ್ರಯತ್ನ ಏನೂ ಇಲ್ಲ ಎಂಬಂತಾಗುತ್ತದೆ.

ಅನಿರೀಕ್ಷಿತ ಘಟನೆಗಳು ತೀರಾ ಸಾಮಾನ್ಯವಾದ್ದೇ ಇರಲಿ, ಗಂಭೀರವಾದ್ದೇ ಇರಲಿ, ವಾಸ್ತವವನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಂಡರೆ ಆಗಬಹುದಾದ ನಿರಾಸೆಯನ್ನು ಒಂದಿಷ್ಟಾದರೂ ಕಡಿಮೆ ಮಾಡಿಕೊಳ್ಳಬಹುದು. ಇಂಥದ್ದೊಂದು ನಡೆದುಹೋಗಿದೆ, ಅದನ್ನು ಮತ್ತೆ ಹಿಮ್ಮುಖವಾಗಿಸಲಾಗದು ಎಂಬುದನ್ನು ನಮಗೆ ನಾವೇ ಅರ್ಥಮಾಡಿಸಿಕೊಳ್ಳುವುದು ಮುಖ್ಯ. ಅಪಘಾತ, ಸಾವುಗಳಂತಹ ದೊಡ್ಡ ಪ್ರಮಾಣದ ಆಘಾತಗಳು ಸಂಭವಿಸಿದಾಗ ಇಂತಹ ಮಾತುಗಳನ್ನು ಹೇಳುವುದು ತಕ್ಷಣಕ್ಕೆ ಅರ್ಥಹೀನ ಅನ್ನಿಸಬಹುದು, ಆದರೆ ಅದು ನಿಜ.

ಮನಸ್ಸು ಉತ್ಸಾಹದಿಂದ ಕೂಡಿದ್ದಾಗ ನಡೆಯುವ ಕೆಲವು ಅನಿರೀಕ್ಷಿತಗಳು ದೊಡ್ಡಮಟ್ಟದ್ದಾಗಿದ್ದರೂ ಅವುಗಳನ್ನು ಎದುರಿಸಲು ನಾವು ಹೇಗೋ ಸಿದ್ಧರಾಗುತ್ತೇವೆ. ಮನಸ್ಸು ದುರ್ಬಲವಾಗಿರುವ ಹೊತ್ತು ಸಣ್ಣಪುಟ್ಟ ಏಟು ಸಿಕ್ಕರೂ ನಿರಾಶೆಯ ಸಮುದ್ರದಲ್ಲಿ ಬೀಳುತ್ತೇವೆ. ಸಾಧ್ಯವಾದಷ್ಟು ಮನಸ್ಸು ಉಲ್ಲಾಸದಿಂದ ಕೂಡಿರುವಂತೆ ನೋಡಿಕೊಳ್ಳುವುದೇ ಇದನ್ನು ನಿಭಾಯಿಸುವ ಸುಲಭದ ದಾರಿ. ಒಳ್ಳೆಯ ಪುಸ್ತಕಗಳ ನಿರಂತರ ಓದು, ಉತ್ತಮ ಗೆಳೆಯರ ಒಡನಾಟ, ಧನಾತ್ಮಕ ಚಿಂತನೆಯಿಂದ ಇದು ಸಾಧ್ಯವಾದೀತು. 

ಧನಾತ್ಮಕವಾಗಿ ಯೋಚಿಸುವುದರಿಂದ ಪರ್ವತವನ್ನು ಜರುಗಿಸಲಾದೀತೋ ಗೊತ್ತಿಲ್ಲ, ಪರ್ವತದಂತಹ ಸವಾಲುಗಳನ್ನಂತೂ ಅಲುಗಾಡಿಸಬಹುದು. ಅನೇಕ ಸಲ ಬದುಕಿನಲ್ಲಿ ಸಂಭವಿಸುವ ಋಣಾತ್ಮಕವೆನ್ನಿಸುವ ಘಟನೆಗಳು ಪರೋಕ್ಷವಾಗಿ ವರದಾನವೂ ಆಗಬಹುದು. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಸಕಾರಾತ್ಮಕ ಯೋಚನೆ ಯಾವುದೇ ಘಟನೆಯ ಇನ್ನೊಂದು ಮಗ್ಗುಲನ್ನೂ ನಾವು ಅವಲೋಕಿಸುವಂತೆ ಮಾಡಬಹುದು. ಎಲ್ಲೋ ಅಡಗಿದ್ದ ಛಲವೊಂದು ಛಂಗನೆ ಪುಟಿದೇಳುವಂತೆಯೂ ಆಗಬಹುದು.

ಯಾವುದೋ ಒಂದು ಗುರಿಯನ್ನು ಸಾಧಿಸಲೇಬೇಕೆಂದು ಹೊರಟಿರುತ್ತೇವೆ; ಅನಿರೀಕ್ಷಿತವಾಗಿ ಅದು ಕೈತಪ್ಪಿಹೋದಾಗ ಒಂದು ಕ್ಷಣ ಮನಸ್ಸು ಕುಗ್ಗಬಹುದು. ಆದರೆ ಇನ್ನೊಂದು ರೀತಿಯಲ್ಲಿ ಅದರಿಂದಾಗಿ ನಮಗೆ ಅನುಕೂಲವೂ ಆಗಿರಬಹುದು. ಅದನ್ನು ಅರ್ಥ ಮಾಡಿಕೊಂಡರೆ ಅರ್ಧ ನಿರಾಶೆ ಅಲ್ಲೇ ಕರಗಿಹೋಗುತ್ತದೆ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ, ಜೀವನದಲ್ಲಿ ಯಾವುದೇ ಉಪಕ್ರಮಕ್ಕೆ ಹೊರಟಾಗಲೂ ನಮ್ಮಲ್ಲೊಂದು ಪರ್ಯಾಯ ವ್ಯವಸ್ಥೆ ಇರಲೇಬೇಕು. ಪ್ಲಾನ್-ಎ ಯಶಸ್ವಿಯಾಗದಿದ್ದರೆ ತಕ್ಷಣಕ್ಕೆ ಏನು ಮಾಡಬೇಕೆನ್ನುವ ಪ್ಲಾನ್-ಬಿ ಕೂಡ ನಮ್ಮಲ್ಲಿರಬೇಕು. ಸೋಲು ಗೆಲುವು ಎರಡಕ್ಕೂ ಸಿದ್ಧವಾದ ಮನಸ್ಥಿತಿಯೊಂದಿಗೆ ಯೋಜನೆಯನ್ನು ಕೈಗೆತ್ತಿಕೊಂಡಾಗ, ಅಕಸ್ಮಾತ್ ಗೆಲುವು ದೊರೆಯದೆ ಹೋದರೆ ಕುಸಿದುಬೀಳುವಂತಹ ದುರಂತವೇನೂ ಸಂಭವಿಸದು. ಮೆಡಿಕಲ್ ಓದಲೇಬೇಕೆಂದು ಹಗಲು ರಾತ್ರಿ ಪ್ರಯತ್ನಪಡುವ ವಿದ್ಯಾರ್ಥಿಯೂ ಪ್ಲಾನ್-ಬಿ ಒಂದನ್ನು ಇಟ್ಟುಕೊಂಡಿರಲೇಬೇಕು. ಆಗ ಬಯಸಿದ ಯಶಸ್ಸು ಸಿಗದೇ ಹೋದರೂ ತಾನು ಸಾಗಬೇಕಾದ ಹಾದಿಯ ಬಗ್ಗೆ ಸ್ಪಷ್ಟತೆ, ಮನಸ್ಸಿನ ದೃಢತೆ ಇದ್ದೇ ಇರುತ್ತದೆ.

ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಘಟನೆ ದುಃಖ ತರುವುದೇ ಆಗಬೇಕಿಲ್ಲ. ಸಂತೋಷದಾಯಕವೂ ಆಗಿರಬಹುದು. ಆದರೆ ಅದನ್ನು ಸ್ವೀಕರಿಸುವುದಕ್ಕೂ ಒಂದು ಹದಗೊಂಡ ಮನಸ್ಸು ಬೇಕು. ಅತಿಯಾದ ಆಘಾತ, ಅತಿಯಾದ ಸಂತೋಷ ಎರಡರ ಪರಿಣಾಮವೂ ಅಂತಿಮವಾಗಿ ಒಂದೇ ಆಗಿರಬಹುದು. ಜೀವನದ ಸುದೀರ್ಘ ಪಯಣದ ನಂತರ ಯಾರೋ ಗುರುತಿಸಿ ತನಗೊಂದು ಯೋಗ್ಯ ಪ್ರಶಸ್ತಿ ಘೋಷಿಸಿದರು ಎಂಬ ಸಂತೋಷದ ಪರಾಕಾಷ್ಠೆಯಲ್ಲಿ ಕಲಾವಿದರೊಬ್ಬರು ಇತ್ತೀಚೆಗೆ ಇಹಲೋಕ ತ್ಯಜಿಸಿಬಿಟ್ಟರಂತೆ. ದುಃಖವನ್ನು ಸಂಭಾಳಿಸಿಕೊಂಡಂತೆ ಸಂತೋಷದ ಪ್ರವಾಹವನ್ನು ನಿಭಾಯಿಸಿಕೊಳ್ಳುವುದು ಕೂಡ ಮುಖ್ಯ. ಎಷ್ಟಾದರೂ ಪ್ರವಾಹ ಪ್ರವಾಹವೇ ಅಲ್ಲವೇ? ಕೊಚ್ಚಿಕೊಂಡು ಹೋಗುವುದು ಅದರ ಗುಣ.

ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ|

ವೀತರಾಗಭಯಕೋಧಃ ಸ್ಥಿತಧೀರ್ಮುನಿರುಚ್ಯತೇ||

“ದುಃಖದಾಯಕ ಪ್ರಸಂಗದಲ್ಲಿ ಯಾರ ಮನಸ್ಸು ಉದ್ವಿಗ್ನಗೊಳ್ಳುವುದಿಲ್ಲವೋ, ಸುಖಗಳ ಪ್ರಾಪ್ತಿಯಲ್ಲಿ ಯಾರಿಗೆ ಸರ್ವಥಾ ಇಚ್ಛೆಯಿಲ್ಲವೋ, ಹಾಗೆಯೇ ಯಾರಿಗೆ ಪ್ರೀತಿ, ಭಯ, ಕ್ರೋಧ ಇವು ಇಲ್ಲವಾಗಿವೆಯೋ, ಇಂತಹ ಮುನಿಯೇ ಸ್ಥಿರಬುದ್ಧಿಯವನು” ಎನ್ನುತ್ತಾನೆ ಗೀತಾಚಾರ್ಯ. “ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ” ಎಂದು ಅರ್ಜುನನಿಗೆ ಆತ ಹೇಳಿದ್ದೂ ಇದೇ ಅರ್ಥದಲ್ಲಿ. ಸ್ಥಿತಪ್ರಜ್ಞನೆಂದರೆ ಯಾರು ಎಂಬ ಕೌತುಕ ಪಾರ್ಥನದ್ದು.

ಸ್ಥಿತಪ್ರಜ್ಞನ ಅತಿದೊಡ್ಡ ಲಕ್ಷಣ ತಾಳ್ಮೆ. ಎಂತಹ ಆಘಾತ ಎದುರಾದರೂ ಎರಡು ಕ್ಷಣ ತಾಳ್ಮೆ ತೆಗೆದುಕೊಂಡರೆ ಪರಿಹಾರದ ಸಣ್ಣ ಎಳೆಯೊಂದು ಕಂಡೇ ಕಾಣುತ್ತದೆ. ಈ ಎರಡು ಕ್ಷಣಗಳ ತಾಳ್ಮೆ ನೂರಾರು ಕದನಗಳನ್ನು, ಸಾವಿರಾರು ಸಾವುಗಳನ್ನು ತಪ್ಪಿಸಬಲ್ಲುದು. ಯುದ್ಧವೇ ಆರಂಭವಾಗದಿದ್ದರೆ ಕದನವಿರಾಮ ಘೋಷಿಸುವ ಅಗತ್ಯವೂ ಬಾರದು ಅಲ್ಲವೇ?

- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಮೇ 16, 2020

ನಾಳೆಗಾಗಿ ಕಾಯಬೇಡಿ, ಇಂದೇ ಮಾಡಿಬಿಡಿ | ಸರಿ ಎನಿಸಿದ್ದನ್ನು ಮಾಡಲು ಹಿಂಜರಿಕೆ ಬೇಡ

 ಮೇ 16-22, 2020ರ ‘ಬೋಧಿವೃಕ್ಷ’ದಲ್ಲಿ ಪ್ರಕಟವಾದ ಬರೆಹ

ಸಮುದ್ರಸ್ನಾನಕ್ಕೆಂದು ಹೋದವನೊಬ್ಬ ತೆರೆ ಮುಗಿಯಲಿ ಎಂದು ಜೀವಮಾನವಿಡೀ ಕಾದನಂತೆ. ಅತ್ತ ಸ್ನಾನವೂ ಆಗಲಿಲ್ಲ, ಇತ್ತ ಜೀವನದಲ್ಲಿ ಬೇರೇನನ್ನೂ ಮಾಡಲಿಲ್ಲ. ಇದು ಸ್ನಾನಕ್ಕೆ ಹೋದ ಪುಣ್ಯಾತ್ಮನೊಬ್ಬನ ಕಥೆ ಮಾತ್ರ ಅಲ್ಲ. ಹಲವು ಬಾರಿ ನಮ್ಮೆಲ್ಲರದೂ.

ಏನೋ ಒಂದು ಕೆಲಸ ಮಾಡಬೇಕೆಂದುಕೊಂಡಿರುತ್ತೇವೆ. ತಕ್ಷಣಕ್ಕೆ ಆರಂಭಿಸುವುದಿಲ್ಲ. ಬಹುತೇಕ ಬಾರಿ ಮನಸ್ಸಿಗೆ ಬರುವ ಮೊದಲ ಯೋಚನೆಯೇ ‘ನಾಳೆಯೇ ಈ ಕೆಲಸ ಆರಂಭಿಸಬೇಕು’ ಎಂಬುದು. ವಾಸ್ತವವಾಗಿ ಸಮಸ್ಯೆ ಇರುವುದೇ ‘ನಾಳೆ ಆರಂಭಿಸಬೇಕು’ ಎಂಬಲ್ಲೇ. ಈಗಲೇ ಶುರು ಮಾಡಿಬಿಡೋಣ ಎಂದುಕೊಂಡು ಕೆಲಸ ಆರಂಭಿಸುವವ ಅಲ್ಲೇ ಅರ್ಧ ತೇರ್ಗಡೆಯಾಗಿರುತ್ತಾನೆ.
 ಬೋಧಿವೃಕ್ಷ | ಮೇ 16-22, 2020

ಕೆಲವರು ‘ನ್ಯೂ ಇಯರ್ ರೆಸಲ್ಯೂಶನ್’ ಅಥವಾ ‘ಬರ್ತ್‍ಡೇ ರೆಸೊಲ್ಯುಶನ್’ ಮಾಡಿಕೊಳ್ಳುವ ಕ್ರಮ ಇದೆ. ಬೆಳಗ್ಗೆ ಬೇಗನೆ ಏಳುವುದು, ವಾಕ್ ಮಾಡುವುದು, ಯೋಗಾಭ್ಯಾಸ ಆರಂಭಿಸುವುದು, ಕಡಿಮೆ ಊಟ ಮಾಡುವುದು, ತೂಕ ಇಳಿಸಿಕೊಳ್ಳುವುದು, ತಿಂಗಳಿಗೊಂದಾದರೂ ಹೊಸ ಪುಸ್ತಕ ಓದುವುದು, ಸಮಯಕ್ಕೆ ಸರಿಯಾಗಿ ಕಚೇರಿ ತಲುಪುವುದು, ಇತ್ಯಾದಿ ಇತ್ಯಾದಿ. ಸಮಸ್ಯೆ ಯಾವುದೆಂದರೆ ಈ ಎಲ್ಲಾ ಹೇಳಿಕೆಗಳ ಪೂರ್ವದಲ್ಲಿ ‘ಇವತ್ತಿನಿಂದಲೇ’ ಎಂಬ ಪದ ಸೇರಿಸಿಕೊಳ್ಳದಿರುವುದು. ಅವರೇನಿದ್ದರೂ ‘ನಾಳೆಯಿಂದ’ ಆರಂಭಿಸುವವರು. ನಾಳೆ ಗಣಪತಿಗೆ ಮದುವೆ ಎಂಬ ಗಾದೆ ಕೇಳಿದ್ದೀರಲ್ಲ!

ಬದುಕಿನಲ್ಲಿ ಬದಲಾಗಬೇಕು ಎಂಬ ಆಸೆ ಅನೇಕ ಮಂದಿಗೆ ಇರುತ್ತದೆ. ಈ ರೆಸಲ್ಯೂಶನ್‍ಗಳ ಹಿಂದಿನ ಕಾರಣ ಬದಲಾಗಬೇಕು ಎಂಬ ಆಸೆಯೇ. ಬದಲಾವಣೆ ಯಾಕೆ ಸಾಧ್ಯವಾಗುವುದಿಲ್ಲ ಎಂದರೆ ವಾಸ್ತವವಾಗಿ ಅದು ಆರಂಭವೇ ಆಗಿರುವುದಿಲ್ಲ. ಆಮೇಲೆ ಮಾಡೋಣ, ನಾಳೆ ಮಾಡೋಣ, ಇನ್ನೊಮ್ಮೆ ಮಾಡೋಣ, ಈಗ ಮೂಡ್ ಇಲ್ಲ, ಮನಸ್ಸು ಫ್ರೆಶ್ ಇಲ್ಲ, ಇನ್ನೂ ಸಾಕಷ್ಟು ದಿನ ಇದೆ, ಇತ್ಯಾದಿ ನಾವೇ ಸೃಷ್ಟಿಸಿಕೊಳ್ಳುವ ನೂರೆಂಟು ಕಾರಣಗಳಿಂದ ಈ ಬದಲಾಗುವ ಯೋಜನೆ ಅನುಷ್ಠಾನಕ್ಕೇ ಬರುವುದಿಲ್ಲ. ಇಂಗ್ಲಿಷಿನಲ್ಲಿ ಈ ವಿಳಂಬ ಪ್ರವೃತ್ತಿಗೆ ‘ಪ್ರೊಕ್ರಾಸ್ಟಿನೇಶನ್’ ಎಂಬ ಚಂದದ ಪದ ಇದೆ.

ಅನೇಕ ಮಂದಿಗೆ ತಾವು ಇಂಥದ್ದನ್ನೆಲ್ಲ ಮಾಡುವವರಿದ್ದೇವೆ ಎಂದು ಮೊದಲೇ ಘೋಷಿಸಿಕೊಳ್ಳುವ ಚಟ ಇರುತ್ತದೆ. ನಾನೊಂದು ಲೇಖನ ಬರೆಯಬೇಕು ಅಂದುಕೊಂಡಿದ್ದೇನೆ, ನಾನೊಂದು ಪುಸ್ತಕ ಬರೆಯಬೇಕು ಅಂದುಕೊಂಡಿದ್ದೇನೆ, ನಾನೊಂದು ಸಿನಿಮಾ ಮಾಡಬೇಕು ಅಂದುಕೊಂಡಿದ್ದೇನೆ, ನಾನೊಂದು ಬಿಸಿನೆಸ್ ಆರಂಭಿಸಬೇಕು ಅಂದುಕೊಂಡಿದ್ದೇನೆ,  ನಾನು ದೊಡ್ಡ ಸಾಧನೆ ಮಾಡಿ ಎಲ್ಲರಿಂದ ಭೇಷ್ ಅನಿಸಿಕೊಳ್ಳುತ್ತೇನೆ- ಎಂದು ಹೇಳುವವರು ಅಲ್ಲಲ್ಲಿ ಸಿಗುತ್ತಾರೆ. ಅವರು ವಾಸ್ತವವಾಗಿ ಯಾವುದನ್ನೂ ಮಾಡುವುದಿಲ್ಲ. ಜಗತ್ತು ಅರ್ಧ ಹಾಳಾಗಿರುವುದೇ ಹೀಗೆ ‘ಅಂದುಕೊಳ್ಳುವವ’ರಿಂದ. ಕುಣಿಯಬೇಕು ಅಂದುಕೊಂಡಾಗೆಲ್ಲ ನೆಲ ಡೊಂಕಾಗಿ ಕಂಡರೆ ಇನ್ನೇನು ಮಾಡಲು ಸಾಧ್ಯ?

‘ಆಡದೆ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮ, ಲೋಕದಲಿ ಆಡಿಯೂ ಮಾಡದವ ಅಧಮ’ ಎಂದು ಸರ್ವಜ್ಞ ಇವರನ್ನೆಲ್ಲ ನೋಡಿಯೇ ಹೇಳಿರುವುದು. ನಿಜವಾದ ಸಾಧಕರು ಮಾತಾಡುವುದು ಕಡಿಮೆ. ಉಳಿದವರಿಗೆ ಮಾತಾಡುವುದೇ ಸಾಧನೆ. ಬಡಾಯಿ ಕಡಿಮೆ ಮಾಡಿದರೆ ಕೆಲಸ ಮಾಡುವುದಕ್ಕೆ ಸಮಯವಾದರೂ ಸಿಗುತ್ತದೆ. ‘ಮನಸಾ ಚಿಂತಿತಂ ಕಾರ್ಯಂ, ವಾಚ್ಯಂ ನೈವ ಪ್ರಕಾಶಯೇತ್’ ಎಂದು ಹಳಬರು ಸುಮ್ಮನೇ ಹೇಳಿದ್ದಾರೆಯೇ?

ಮಾಡಬೇಕು ಅಂದುಕೊಂಡಿದ್ದನ್ನು ಮಾಡಿಯೇ ತೀರಬೇಕು. ಅದು ಆತ್ಮಸಾಕ್ಷಿಗೆ ಒಪ್ಪಿದರೆ, ನಾಲ್ವರು ಹಿರಿಯರಿಗೆ ಸರಿ ಎನ್ನಿಸಿದರೆ, ಮಾಡುವುದಕ್ಕೆ ಏನಡ್ಡಿ? ನಮ್ಮ ಸುತ್ತ ಇರುವ ಎಲ್ಲರಿಗೂ ನಮ್ಮ ನಿರ್ಧಾರಗಳು ಸರಿ ಎನಿಸಬೇಕಾಗಿಲ್ಲ. ಕೊಂಕು ನುಡಿಯುವವರು ಎಲ್ಲ ಕಡೆ, ಎಲ್ಲ ಕಾಲದಲ್ಲೂ ಇರುತ್ತಾರೆ. ನಾವು ನಮ್ಮ ಸಂತೃಪ್ತಿಗಾಗಿ ಮಾಡುವುದೇ ಆಗಿದ್ದರೆ ಬೇರೆಯವರ ಗೊಡವೆ ಏಕೆ? ಕಾರ್ಯವೊಂದನ್ನು ಮಾಡಿ ಪಶ್ಚಾತ್ತಾಪ ಪಡುವವರಿಗಿಂತ ಮಾಡದೆಯೇ ಪಶ್ಚಾತ್ತಾಪಪಡುವವರು ಲೋಕದಲ್ಲಿ ಹೆಚ್ಚಿಗೆ ಇದ್ದಾರಂತೆ.

ಮಾಡಬೇಕು ಅಂದುಕೊಂಡಿರುವ ಕೆಲಸಗಳನ್ನು ಮುಂದೂಡಲು ಪ್ರಮುಖ ಕಾರಣ ಆ ಕೆಲಸದ ಬಗೆಗಿರುವ ಸಣ್ಣ ಆತಂಕ. ಉದಾಹರಣೆಗೆ, ಪರೀಕ್ಷೆಗೆ ಓದಬೇಕು ಅಂದುಕೊಂಡಿರುವ ವಿದ್ಯಾರ್ಥಿ ಓದಲು ಆರಂಭಿಸದೆ ಇರಲು ಪ್ರಮುಖ ಕಾರಣ ತಾನು ಓದಬೇಕೆಂದುಕೊಂಡಿರುವ ವಿಷಯ ಕಠಿಣವಾಗಿದೆ ಮತ್ತು ಆ ಕಾರಣಕ್ಕೆ ಅರ್ಥವಾಗದು ಎಂಬ ಭಾವನೆ. ಲೇಖನ ಬರೆಯಬೇಕು ಅಂದುಕೊಂಡಿರುವ ವ್ಯಕ್ತಿ ಅದನ್ನು ಬರೆಯದೆ ಇರಲು ಕಾರಣ ತಾನು ಚೆನ್ನಾಗಿ ಬರೆಯಲಾರೆ, ಅದು ಓದಿದವರಿಗೆ ಇಷ್ಟವಾಗದಿದ್ದರೆ ಏನು ಗತಿ ಎಂಬ ಅಂತರಂಗದ ಆತಂಕ. ಅನೇಕ ‘ಪರ್ಪೆಕ್ಷನಿಸ್ಟ್’ಗಳಿಗೂ ಈ ಸಮಸ್ಯೆ ಇರುವುದುಂಟು. ಈ ಆತಂಕ ಮೂಡಿದಾಗಲೆಲ್ಲ ‘ಆಮೇಲೆ ಮಾಡಿದರಾಯ್ತು’, ‘ನಾಳೆ ಮಾಡೋಣ’ ಎಂದು ತಮಗೆ ತಾವೇ ಸಬೂಬು ಹೇಳಿಕೊಳ್ಳುವ ಪ್ರಸಂಗ ಬರುತ್ತದೆ. ಅವರಿಗೆ ಫೇಸ್‍ಬುಕ್, ವಾಟ್ಸಾಪುಗಳು ತಾತ್ಕಾಲಿಕ ನೆಮ್ಮದಿ ನೀಡುತ್ತವೆ.

ಬದ್ಧತೆಯೇ ಇಂತಹ ಸಮಸ್ಯೆಗಳಿಗೆ ಇರುವ ಏಕೈಕ ಪರಿಹಾರ. ಮಾಡಬೇಕಿರುವ ಕೆಲಸಗಳನ್ನು ಸಾರ್ವಜನಿಕವಾಗಿ ಘೋಷಿಸಿಕೊಳ್ಳುವುದು ಮುಖ್ಯ ಅಲ್ಲ, ಮಾಡಬೇಕು ಎಂಬ ಅಂತರ್ಯದ ಗಟ್ಟಿತನ ಮುಖ್ಯ. ಇಂಥದ್ದನ್ನೆಲ್ಲ ಮಾಡಿಬಿಡುತ್ತೇನೆ ಎಂದು ಊರಿಗೆ ಡಂಗುರ ಸಾರಲು ನಾವೆಲ್ಲರೂ ರಾಜಕಾರಣಿಗಳಲ್ಲವಲ್ಲ? ಕೆಲವೊಮ್ಮೆ ನಮ್ಮ ನಿರ್ಧಾರಗಳನ್ನು ಸ್ಪಷ್ಟಪಡಿಸಿಕೊಳ್ಳಲು ಯಾರ ಬಳಿಯಲ್ಲಾದರೂ ಹೇಳಿಕೊಳ್ಳಬೇಕಾಗುತ್ತದೆ. ಆಗ ಅಂತರಂಗದ ಮಾತುಗಳಿಗೆ ಕಿವಿಕೊಡಬಲ್ಲ ಒಂದಿಬ್ಬರು ಆಪ್ತರು ಸಿಕ್ಕರೆ ಸಾಕು. ಮನಸ್ಸಿನ ಮಾತುಗಳಿಗೆ ಧ್ವನಿವರ್ಧಕ ಯಾಕೆ?

ಹಾಗೆಂದು ಅಂದುಕೊಂಡ ತಕ್ಷಣ ಕೆಲಸವೊಂದಕ್ಕೆ ಧುಮುಕಿಬಿಡುವುದೂ ಕೆಲವೊಮ್ಮೆ ಆತುರದ ನಿರ್ಧಾರವಾಗುತ್ತದೆ. ಅನುಷ್ಠಾನದ ಹಿಂದೆ ಸಾಕಷ್ಟು ಚಿಂತನೆ ಇರಬೇಕು. ಚಿಂತನೆಗೂ ಮುಂದೂಡುವ ಪ್ರವೃತ್ತಿಗೂ ವ್ಯತ್ಯಾಸ ಇದೆ. ಚಿಂತನೆಯಿಲ್ಲದೆ ಆರಂಭಿಸುವ ಕೆಲಸ ಅನೇಕ ಬಾರಿ ಆರಂಭಶೂರತನವಷ್ಟೇ ಆಗುತ್ತದೆ. ಯಾವುದೋ ಒಂದು ಯೋಚನೆ ಬಂದ ತಕ್ಷಣ ದಬದಬನೆ ಅದನ್ನು ಆರಂಭಿಸಿಬಿಡುವವರು ಇದ್ದಾರೆ. ಅವರು ಎರಡೇ ದಿನದಲ್ಲಿ ನಿವೃತ್ತಿ ಘೋಷಿಸುತ್ತಾರೆ. ಅಂಥವರು ಯಾವುದನ್ನೂ ಪೂರ್ತಿ ಮಾಡುವುದಿಲ್ಲ. ಎಲ್ಲವೂ ಅರ್ಧಂಬರ್ಧವೇ.

ಡೆಡ್‍ಲೈನಿನಲ್ಲಿ ಕೆಲಸ ಮಾಡಬಲ್ಲವರು ಬೆರಳೆಣಿಕೆಯ ವೃತ್ತಿಪರರು ಮಾತ್ರ. ಆದ್ದರಿಂದ ಇನ್ನೂ ಸಮಯವಿದೆ ಎಂಬ ಭಾವನೆಯಿಂದ ಮೊದಲು ಹೊರಬರಬೇಕು. ಸಾಧ್ಯವಾದಷ್ಟೂ ಸದ್ದುಗದ್ದಲವಿಲ್ಲದೆ ಅಂದುಕೊಂಡದ್ದನ್ನು ಮಾಡಿಮುಗಿಸಬೇಕು. ಈ ಕೆಲಸವನ್ನು ಈಗಲೇ ಮಾಡುವುದರಿಂದ ದೊರೆಯಬಹುದಾದ ಯಶಸ್ಸಿನ ಕಲ್ಪನೆಯಿಂದ ಮನಸ್ಸಿಗೆ ಉತ್ಸಾಹವನ್ನು ತಂದುಕೊಳ್ಳಬೇಕು. ನಮ್ಮ ಸ್ನಾನಕ್ಕಾಗಿ ಸಮುದ್ರದ ತೆರೆಗಳು ಕಾಯುವುದಿಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ಏಪ್ರಿಲ್ 5, 2020

ಆಂಜನೇಯನೆಂಬ ಸ್ಫೂರ್ತಿಯ ಚಿಲುಮೆ

ಏಪ್ರಿಲ್ 4-10, 2020ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತ|
ಅಜಾಡ್ಯಂ ವಾಕ್ಪಟುತ್ವಂಚ ಹನುಮತ್ ಸ್ಮರಣಾತ್ ಭವೇತ್||
ಇದು ಜಗತ್ತಿನ ಕೋಟ್ಯಂತರ ಆಸ್ತಿಕರ ದಿನನಿತ್ಯದ ಪ್ರಾರ್ಥನೆ. ಆಂಜನೇಯನ ಸ್ಮರಣೆಯಿಂದ ಬುದ್ಧಿ, ಬಲ, ಯಶಸ್ಸು, ಧೈರ್ಯ, ನಿರ್ಭಯತ್ವ, ಆರೋಗ್ಯ, ವಾಕ್‌ಪ್ರತಿಭೆ ಇವೆಲ್ಲವೂ ತಾವಾಗಿಯೇ ಒಲಿದುಬರುತ್ತವೆ ಎಂಬುದು ಅವರೆಲ್ಲರ ಗಾಢ ನಂಬಿಕೆ. ಹನೂಮಂತ ವಜ್ರಕಾಯ, ಜಿತೇಂದ್ರಿಯ, ಶತ್ರುಭಯಂಕರ, ಮಹಾನ್ ಶಕ್ತಿಶಾಲಿ; ಹೀಗಾಗಿ ಆತ ನಂಬಿದವರ ರಕ್ಷಕ, ಉತ್ಸಾಹದ ಚಿಲುಮೆ, ಎಂತಹ ಜುಗುಪ್ಸೆಯಿಂದ ಬೆಂದ ಮನಸ್ಸಿಗೂ ನೆಮ್ಮದಿ, ಧೈರ್ಯ, ಸ್ಫೂರ್ತಿಯನ್ನು ತುಂಬಬಲ್ಲ ಐಂದ್ರಜಾಲಿಕ ಎಂಬ ಭಾವನೆಗೆ ಸಾವಿರಾರು ವರ್ಷಗಳ ಇತಿಹಾಸ.

ಸಿಬಂತಿ ಪದ್ಮನಾಭ | ಬೋಧಿವೃಕ್ಷ |  ಏಪ್ರಿಲ್ 4-10, 2020
ಆಂಜನೇಯ ಎಂದಾಕ್ಷಣ ಮನಸ್ಸಿನಲ್ಲಿ ಮೂಡುವುದು ನೂರೆಂಟು ಚಿತ್ರ. ಬಲಗಡೆ ಲಕ್ಷ್ಮಣ, ಎಡಗಡೆ ಸೀತೆಯನ್ನು ಒಡಗೂಡಿ ನಿಂತಿರುವ ಕೋದಂಡರಾಮನ ಎದುರು ಮಂಡಿಯೂರಿ ಕುಳಿತಿರುವ ಮಾರುತಿ, ರಾಮ-ಲಕ್ಷ್ಮಣರನ್ನು ಎರಡೂ ಭುಜಗಳಲ್ಲಿ ಹೊತ್ತು ಸಾಗುತ್ತಿರುವ ಹನೂಮಂತ, ಕೈಗಳನ್ನು ಮುಂದಕ್ಕೆ ಚಾಚಿ ಸಾಗರಲ್ಲೋಂಘನ ಮಾಡುತ್ತಿರುವ ಪವನಸುತ, ಸಂಜೀವಿನಿ ಪರ್ವತವನ್ನು ಹೊತ್ತುಕೊಂಡು ಬರುತ್ತಿರುವ ವಾತಾತ್ಮಜ, ತನ್ನೆದೆಯನ್ನೇ ಸೀಳಿ ರಾಮ ಇಲ್ಲಿದ್ದಾನೆ ಎಂದು ತೋರಿಸುವ ರಾಮದೂತ... ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ಚಿತ್ರ.

ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಬೇಕಾದವನು ಈ ಆಂಜನೇಯ. ಮಕ್ಕಳಿಗಂತೂ ಹನೂಮಂತ ಒಬ್ಬ ಆಪ್ತ ಗೆಳೆಯ. ತಾವು ಇಷ್ಟಪಡುವ ಮಹಿಮಾವಿಶೇಷಗಳನ್ನು ಕ್ಷಣಮಾತ್ರದಲ್ಲಿ ಮಾಡಿತೋರಿಸಬಲ್ಲ ಪವಾಡಪುರುಷ. ತಮ್ಮೊಂದಿಗೆ ಓರಗೆಯವನಾಗಿ ಆಟವಾಡಬಲ್ಲ ಬಾಲಮಾರುತಿ. ಹನೂಮಂತ ನಾಯಕನಾಗಿರುವ ಕಾರ್ಟೂನು ಇಲ್ಲದಿದ್ದರೆ ಅದು ಮಕ್ಕಳಿಗೆ ಟಿವಿ ಚಾನೆಲೇ ಅಲ್ಲ. ಯುವಕರಿಗೆ ಈ ಬ್ರಹ್ಮಚಾರಿ ಮನೋಬಲದ ಪ್ರತೀಕವಾದರೆ, ವೃದ್ಧರಿಗೆ ಮೋಕ್ಷಮಾರ್ಗದ ದಿಕ್ಸೂಚಿ. ಶರೀರಬಲ, ಬುದ್ಧಿಬಲ, ಆತ್ಮಬಲಗಳ ತ್ರಿವೇಣಿ ಸಂಗಮ. ಆದರ್ಶದಲ್ಲಿ, ಚಾರಿತ್ರ್ಯದಲ್ಲಿ, ಸದಾಚಾರದಲ್ಲಿ, ಕಾರ್ಯಕ್ಷಮತೆಯಲ್ಲಿ ಅವನಿಗೆ ಸರಿಮಿಗಿಲಾದವರು ಇನ್ನೊಬ್ಬರಿಲ್ಲ. 'ನ ಸಮಃ ಸ್ಯಾತ್ ಹನೂಮತಃ’ - ಹನೂಮಂತನಿಗೆ ಸಮ ಬೇರಾರೂ ಇಲ್ಲ ಎಂದು ಸ್ವತಃ ರಾಮಚಂದ್ರನಿಂದಲೇ ಪ್ರಶಂಸೆಗೆ ಪಾತ್ರನಾದವನು ಅವನು.

ಋಷ್ಯಮೂಕದ ಪಾದದಲ್ಲಿದ್ದ ಪಂಪಾಸರೋವರದ ತಟದಲ್ಲಿ ಆರಂಭವಾದ ರಾಮ-ಹನುಮರ ಸಖ್ಯ ಅಖಂಡ, ಚಿರಸ್ಥಾಯಿ. 'ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾ ಕ್ಲಿಷ್ಟಕರ್ಮಣಃ’ - ಉತ್ತಮ ಕರ್ಮಗಳನ್ನೇ ಎಸಗುವ ರಾಮಚಂದ್ರನಿಗೆ ನಾನು ಎಂದೆಂದಿಗೂ ದಾಸಾನುದಾಸ ಹೀಗೆ ಘೋಷಿಸಿಕೊಂಡ ಆಂಜನೇಯ ಅದನ್ನೇ ಯುಗಯುಗಗಳ ಪರ್ಯಂತ ಸಾಧಿಸಿಕೊಂಡು ಬಂದ. ಅವನು ಬಯಸಿದ್ದರೆ ರಾಮನು ವಾಲಿಯನ್ನು ವಧಿಸಿದ ಮೇಲೆ ಕಿಷ್ಕಿಂಧೆಯ ರಾಜನಾಗಬಹುದಿತ್ತು. ಆದರೆ ಅವನಿಗೆ ಬೇಕಿದ್ದದ್ದು ರಾಮನ ಸಾಹಚರ್ಯವೇ ಹೊರತು ರಾಜಕಾರಣವಾಗಲೀ, ಅಧಿಕಾರವಾಗಲೀ ಆಗಿರಲಿಲ್ಲ. ರಾಮಾವತಾರದ ಕೊನೆಯಲ್ಲಿ ’ಮುಂದೇನು’ ಎಂದು ಆಂಜನೇಯನನ್ನು ರಾಮ ಕೇಳಿದಾಗ ಅವನು ಹೇಳಿದ್ದು ಅದನ್ನೇ: ಭೂಮಿಯ ಮೇಲೆ ರಾಮಕಥೆ ಇರುವವರೆಗೆ ನನಗೆ ಅದೇ ನಾಮಸ್ಮರಣೆಯಲ್ಲಿ ಉಳಿಯುವ ಆಸೆ.

ಆಗ ರಾಮ ಹೇಳಿದನಂತೆ: ಹನುಮಾ, ನಿನ್ನ ಉಪಕಾರಗಳನ್ನು ನಾನು ಹೇಗೆ ತೀರಿಸಲಿ? ನೀನು ಮಾಡಿರುವ ಒಂದೊಂದು ಉಪಕಾರಕ್ಕೂ ನನ್ನ ಒಂದೊಂದು ಪ್ರಾಣವನ್ನು ನೀಡಬೇಕೆಂದರೂ ನನಗಿರುವುದು ಐದೇ ಪ್ರಾಣಗಳು. ಹೆಚ್ಚೆಂದರೆ ನಿನ್ನ ಐದು ಉಪಕಾರಗಳಿಗೆ ಮಾತ್ರ ಅವನ್ನು ನೀಡಬಹುದು. ಉಳಿದುದಕ್ಕೆ ಏನೂ ಕೊಡಲಾರೆ. ನಾನು ಎಂದೆಂದಿಗೂ ನಿನಗೆ ಋಣಿಯೇ.... ರಾಮ-ಹನುಮರದ್ದು ದೇವರು ಭಕ್ತರ ಸಂಬಂಧವೋ, ಸೇವ್ಯ-ಸೇವಕರ ಸಂಬಂಧವೋ, ಓರಗೆಯ ಸ್ನೇಹಿತರ ನಡುವಿನ ಸಂಬಂಧವೋ ಅವರಿಗೆ ಮಾತ್ರ ಗೊತ್ತು. ಆದರೆ ಅಂತಹದೊಂದು ಗಾಢ ಸಂಬಂಧವನ್ನು ಜಗತ್ತಿನಲ್ಲಿ ಬೇರೆಲ್ಲೂ ಕಾಣೆವು.

ಹನುಮ ಸಾಮಾನ್ಯ ಕಪಿಯಲ್ಲ. ಚತುರ್ವೇದ ಪರಿಣತ. ವ್ಯಾಕರಣ ಪಂಡಿತ. ತರ್ಕ ಮೀಮಾಂಸೆಗಳಲ್ಲಿ ಪಾರಂಗತ. ರಸಪ್ರಜ್ಞೆ, ಸಮಯಪ್ರಜ್ಞೆ, ಸೌಂದರ್ಯಪ್ರಜ್ಞೆ, ವಾಕ್ಚಾತುರ್ಯ ಹೊಂದಿದ್ದ ಅಸೀಮ ರಾಮಭಕ್ತ. ಇಂದ್ರಾದಿ ದೇವತೆಗಳಿಂದ ಅನೇಕ ವಿದ್ಯೆಗಳನ್ನು ವರರೂಪವಾಗಿ ಪಡೆದವನು. ಇನ್ನೂ ಬಾಲಕನಿದ್ದಾಗಲೇ ಸೂರ್ಯನೆಂದು ಹಣ್ಣೆಂದು ಭ್ರಮಿಸಿ ನುಂಗಹೋದವನು. ಸೀತಾನ್ವೇಷಣೆಗಾಗಿ ಸಹಸ್ರ ಯೋಜನ ವಿಸ್ತಾರದ ಸಮುದ್ರವನ್ನು ಒಂದೇ ನೆಗೆತಕ್ಕೆ ಹಾರಿದವನು. ನಡುವೆ ಎದುರಾದ ಸುರಸೆ, ಸಿಂಹಿಣಿ, ಲಂಕಿಣಿಯರನ್ನು ನಿವಾರಿಸಿ ಅಶೋಕವನದಲ್ಲಿ ಸೀತೆಯನ್ನು ಪತ್ತೆಹಚ್ಚಿ ಆಕೆಗೆ ಶುಭಸಮಾಚಾರವನ್ನು ತಲುಪಿಸಿದವನು. ಜಂಬೂಮಾಲಿ, ಅಕ್ಷಯಕುಮಾರರನ್ನೆಲ್ಲ ಸದೆಬಡಿದು ಸ್ವರ್ಣಲಂಕೆಯನ್ನು ದಹಿಸಿ ರಾಮನಿಗೆ ವರ್ತಮಾನ ಮುಟ್ಟಿಸಿದವನು. ಮಹಾಪರಾಕ್ರಮಿ. 'ನ ರಾವಣ ಸಹಸ್ರಂ ಮೇ ಯುದ್ಧೇ ಪ್ರತಿಬಲಂ ಭವೇತ್’ - ಸಾವಿರ ರಾವಣರು ಎದುರಾದರೂ ನನಗೆ ಸರಿಸಮ ಎದುರಾಳಿ ಆಗಲಾರರು ಎಂದು ಘರ್ಜಿಸಿದವನು. ಅದಕ್ಕೇ ಜನಸಾಮಾನ್ಯರಿಗೆ ಅವನೊಂದು ಮಹಾಪ್ರೇರಣೆ.

ಮನೋಜವಂ ಮಾರುತತುಲ್ಯ ವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ|
ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ||
ಅದು ಜಗತ್ತಿನ ಕೋಟಿಕೋಟಿ ಜನ ರಾಮದೂತನಿಗೆ ಪ್ರತಿದಿನ ವಂದಿಸುವ ಬಗೆ. ನಿರಾಶೆ, ಕತ್ತಲು ಮನಸ್ಸುಗಳನ್ನು, ಜಗತ್ತನ್ನು ತುಂಬಿರುವಾಗ ಚಿರಂಜೀವಿ ಆಂಜನೇಯನ ಚಿತ್ರ ಆಶಾವಾದ, ಧೈರ್ಯವನ್ನು ಕೊಡಬಲ್ಲುದಾದರೆ ಆ ಚಿತ್ರ ಸರ್ವವ್ಯಾಪಿಯಾಗಲಿ.

- ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಜನವರಿ 3, 2020

ಅಹಂನ ಅಂತ್ಯ, ಸಾಧನೆಯ ಆರಂಭ

ಡಿಸೆಂಬರ್ 28, 2019ರಿಂದ ಜನವರಿ 3, 2020ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ನೂರಾರು ಯುದ್ಧಗಳನ್ನು ಗೆದ್ದು ಸಾಮ್ರಾಜ್ಯ ವಿಸ್ತರಿಸಿ ‘ದಿ ಗ್ರೇಟ್’ ಎಂದು ಕರೆಸಿಕೊಂಡ ಅಲೆಕ್ಸಾಂಡರ್ ತನ್ನ
ದಂಡಯಾತ್ರೆಯಿಂದ ಮರಳುತ್ತಿದ್ದಾಗಲೇ ಕಾಯಿಲೆ ಬಿದ್ದುಬಿಟ್ಟ. ರೋಗ ದೇಹವನ್ನೆಲ್ಲ ವ್ಯಾಪಿಸಿ ಗುಣಪಡಿಸಲಾರದ ಹಂತಕ್ಕೆ ಬಂದು ಮರಣಶಯ್ಯೆಯ ಮೇಲೆ ಮಲಗಿದ. ಸಾವನ್ನು ಎದುರು ನೋಡುತ್ತಿದ್ದ ಅಲೆಕ್ಸಾಂಡರ್ ತನ್ನ ಸೇನಾಧಿಪತಿಗಳನ್ನು ಕರೆದು ಹೀಗೆಂದನಂತೆ:

ಬೋಧಿವೃಕ್ಷ: ಸಿಬಂತಿ ಪದ್ಮನಾಭ
‘ನಾನು ಇನ್ನೇನು ಕೊನೆಯುಸಿರು ಎಳೆಯಲಿದ್ದೇನೆ. ನನ್ನ ಮೂರು ಆಸೆಗಳನ್ನು ದಯಮಾಡಿ ಈಡೇರಿಸಿ. ಮೊದಲನೆಯದು, ನನ್ನ ಶವಪೆಟ್ಟಿಗೆಯನ್ನು ಈವರೆಗೆ ನನಗೆ ಚಿಕಿತ್ಸೆ ನೀಡಿದ ವೈದ್ಯರುಗಳೇ ಹೊತ್ತೊಯ್ಯಬೇಕು. ಎರಡನೆಯದು, ನನ್ನ ಶವಯಾತ್ರೆ ಸಾಗುವ ದಾರಿಯಲ್ಲಿ ನನ್ನ ಭಂಡಾರದಲ್ಲಿರುವ ಮುತ್ತುರತ್ನಗಳನ್ನೆಲ್ಲ ಚೆಲ್ಲಿರಬೇಕು. ಮೂರನೆಯದು, ನನ್ನ ಎರಡೂ ಕೈಗಳನ್ನು ಶವಪೆಟ್ಟಿಗೆಯಿಂದ ಆಚೆ ಕಾಣುವಂತೆ ಹೊರಚಾಚಿಸಿ ಇಟ್ಟಿರಬೇಕು.’

ದುಃಖಭರಿತರಾಗಿದ್ದ ಮಂತ್ರಿ ಸೇನಾಧಿಪತಿಗಳು, ‘ತಮ್ಮ ಆಸೆಗಳನ್ನು ಖಂಡಿತ ಈಡೇರಿಸುವೆವು ದೊರೆ. ಆದರೆ ಇವುಗಳ ಮರ್ಮವೇನು ತಿಳಿಯಲಿಲ್ಲವಲ್ಲ?’ ಎಂದು ಕೇಳಿದರಂತೆ. ಪ್ರಾಣೋತ್ಕ್ರಮಣದ ಸ್ಥಿತಿಯಲ್ಲೂ ಅಲೆಕ್ಸಾಂಡರ್ ವಿವರಿಸಿದನಂತೆ: ‘ನನಗೆ ಚಿಕಿತ್ಸೆ ನೀಡಿದ ವೈದ್ಯರುಗಳೇ ನನ್ನ ಶವಪೆಟ್ಟಿಗೆ ಹೊರುವುದನ್ನು ನೋಡಿ ಮರಣ ಸಮೀಪಿಸಿದವನನ್ನು ವಾಸ್ತವವಾಗಿ ಯಾವ ವೈದ್ಯನೂ ಉಳಿಸಲಾರ ಎಂಬುದನ್ನು ಪ್ರಪಂಚ ಅರಿಯಲಿ.  ಶವಯಾತ್ರೆಯ ದಾರಿಯಲ್ಲಿ ಚೆಲ್ಲಿರುವ ಮುತ್ತು ರತ್ನಗಳನ್ನು ನೋಡಿ ನಾನು ಈವರೆಗೆ ಗುಡ್ಡೆಹಾಕಿದ ಯಾವ ಸಂಪತ್ತೂ ನನ್ನ ಪ್ರಾಣ ಉಳಿಸಲಿಲ್ಲ ಎಂಬುದನ್ನು ಜನ ತಿಳಿಯಲಿ. ಶವಪೆಟ್ಟಿಗೆಯಿಂದ ಹೊರಚಾಚಿರುವ ಕೈಗಳನ್ನು ನೋಡಿ ಇಷ್ಟೆಲ್ಲ ಸಾಧಿಸಿದ ಅಲೆಕ್ಸಾಂಡರ್ ಕೊನೆಗೆ ಬರಿಗೈಯಲ್ಲೇ ಮರಳಿದ ಎಂಬುದನ್ನು ಜಗತ್ತು ಅರ್ಥಮಾಡಿಕೊಳ್ಳಲಿ.’

ಹೌದು, ಮನುಷ್ಯ ತಾನೇನೇ ಸಾಧಿಸಿದ್ದೇನೆ ಅಂದುಕೊಂಡರೂ ಅಂತಿಮವಾಗಿ ಯಾವುದೂ ಉಳಿಯುವುದಿಲ್ಲ. ತನ್ನೊಳಗಿನ ಅಹಂ ಕರಗದ ಹೊರತು ತಾನೇನು, ತನ್ನ ಬದುಕಿನ ಉದ್ದೇಶವೇನು ಎಂಬುದು ಅರ್ಥವಾಗುವುದೂ ಇಲ್ಲ. ತಾವು ಯಾರನ್ನೋ ಸೋಲಿಸಿದ್ದೇವೆ, ಏನನ್ನೋ ಸಾಧಿಸಿದ್ದೇವೆ, ಮುಂದೇನೋ ಮಹತ್ತರವಾದದ್ದನ್ನು ಪಡೆಯಲಿದ್ದೇವೆ ಎಂದು ಬೀಗುವವರು ಬಹಳ. ಕೊನೆಗೆ ತಮಗೂ ಅಲೆಕ್ಸಾಂಡರನ ಗತಿಯೇ ಎಂಬ ಪ್ರಜ್ಞೆಯಿರುವವರು ವಿರಳ. ಆ ಪ್ರಜ್ಞೆಯಿರುವವರ ಒಳಗೆ ಅಹಂಕಾರ ಬೆಳೆಯುವುದಾದರೂ ಹೇಗೆ?

ಆಶಾಪಾಶಶತೈರ್ಬದ್ಧಾಃ ಕಾಮಕ್ರೋಧಪರಾಯಣಾಃ ||
ಈಹಂತೇ ಕಾಮಭೋಗಾರ್ಥಮನ್ಯಾಯೇನಾರ್ಥಂಚಯಾನ್ ||
ಎನ್ನುತ್ತಾನೇ ಗೀತಾಚಾರ್ಯ. ಆಶಾರೂಪೀ ನೂರಾರು ಹಗ್ಗಗಳಿಂದ ಬಂಧಿಸಲ್ಪಟ್ಟು, ಕಾಮ-ಕ್ರೋಧಾದಿಗಳ ಪರಾಯಣರಾಗಿ ವಿಷಯಭೋಗಗಳ ಪೂರೈಕೆಗಾಗಿ ಜನರು ಅನ್ಯಾಯದಿಂದ ಹಣವೇ ಮುಂತಾದ ವಸ್ತುಗಳನ್ನು ಕೂಡಿಡಲು ಪ್ರಯತ್ನಿಸುತ್ತಾರೆ. ಆಮೇಲೆ ತಾನೇ ಶ್ರೀಮಂತ, ತಾನೇ ಬಲಾಢ್ಯ, ತನ್ನ ಸಮಾನರು ಬೇರೆ ಯಾರೂ ಇಲ್ಲ ಎಂಬ ಮದವನ್ನು ಬೆಳೆಸಿಕೊಂಡು ಘೋರ ನರಕದಲ್ಲಿ ಬೀಳುತ್ತಾರೆ.

ಕೃಷ್ಣ ಮತ್ತೆ ಅರ್ಜುನನಿಗೆ ಹೇಳುತ್ತಾನೆ:
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ |
ಮಾಮಾತ್ಮ ಪರದೇಹೇಷು ಪ್ರದ್ವಿಷಂತೋಭ್ಯಸೂಯಕಾಃ ||
ಅಂದರೆ, ಅಹಂಕಾರ, ಬಲ, ದರ್ಪ, ಕಾಮ-ಕ್ರೋಧಾದಿ ಪರಾಯಣರೂ ಮತ್ತು ಪರನಿಂದಕರೂ ಆದ ಅವರು ತಮ್ಮ ಮತ್ತು ಇತರರೆಲ್ಲರ ದೇಹದಲ್ಲಿರುವ ಅಂತರ್ಯಾಮಿಯಾದ ನನ್ನನ್ನು ದ್ವೇಷಿಸುತ್ತಾರೆ.

ವಾಸ್ತವವಾಗಿ ತಮ್ಮೊಳಗನ್ನೇ ದ್ವೇಷಿಸುವ ಇಂತಹ ಮಂದಿ ಅಂತಿಮವಾಗಿ ತಮ್ಮನ್ನು ಅರಿಯುವ ಪ್ರಯತ್ನವನ್ನೇ ಮಾಡುವುದಿಲ್ಲ. ‘ಕಾಮ, ಕ್ರೋಧ ಹಾಗೂ ಲೋಭ ಈ ಮೂರು ವಿಧವಾದ ನರಕದ ದ್ವಾರವು ಆತ್ಮನನ್ನು ನಾಶಮಾಡುವವು ಅರ್ಥಾತ್ ಅಧೋಗತಿಗೆ ತಳ್ಳುವವು’ ಎಂದು ಎಚ್ಚರಿಸುತ್ತಾನೆ ಶ್ರೀಕೃಷ್ಣ.

ಇದನ್ನು ಅರ್ಥಮಾಡಿಕೊಂಡ ದಿನವೇ ಸಿದ್ಧಾರ್ಥನೂ ತನ್ನ ಸಕಲ ಸುಖಗಳನ್ನು ತೊರೆದು ಜ್ಞಾನೋದಯದ ಮಾರ್ಗ ಹುಡುಕಿ ಹೊರಟದ್ದು? ಕಾಯಿಲೆ, ಮುಪ್ಪು, ಸಾವು- ಈ ಮೂರು ಯಾವ ಮನುಷ್ಯನನ್ನೂ ಬಿಡಲಾರವು, ಎಲ್ಲರ ಬದುಕೂ ಒಂದು ದಿನ ಕೊನೆಯಾಗಲೇಬೇಕು ಎಂದ ಮೇಲೆ ಅಂತಹ ಬದುಕನ್ನು ಅಹಂಕಾರದಿಂದಲೇ ಕಳೆಯುವ ಬದಲು ಆತ್ಮಶೋಧನೆಯಲ್ಲಿ ಕಳೆಯುವುದು ಮೇಲಲ್ಲವೇ ಎಂದು ಅವನಿಗೆ ಅನಿಸಿದ್ದು ಆತನ ನಿಜವಾದ ಯಶಸ್ಸಿನ ಹಾದಿ ಆರಂಭವಾದ ಕ್ಷಣ.

‘ಅಹಂ ಎಂಬುದು ನಮ್ಮ ಕಣ್ಣಿಗೆ ಕವಿದ ಧೂಳು. ಈ ಧೂಳನ್ನು ತೊಲಗಿಸಿದರಷ್ಟೇ ನಮ್ಮನ್ನೂ ಪ್ರಪಂಚವನ್ನೂ ಸ್ಪಷ್ಟವಾಗಿ ನೋಡಿಕೊಳ್ಳಬಹುದು’ ಎಂದ ಬುದ್ಧ. ಧೂಳನ್ನಾದರೂ ತೊಳೆದುಕೊಳ್ಳಬಹುದು, ಆದರೆ ಅಹಂ ಧೂಳಿಗಿಂತಲೂ ಹೆಚ್ಚಾದ ಒಂದು ಭ್ರಮೆ. ಅದನ್ನೇ ಮಾಯೆ ಎಂದು ಕರೆದರು. ಮಾಯೆಯಿಂದ ಬಿಡಿಸಿಕೊಳ್ಳುವುದು ಬಲುಕಷ್ಟ. ಅಹಂನ ಮಾಯೆ ದೃಷ್ಟಿಯನ್ನು ಮಂದಗೊಳಿಸುವುದಷ್ಟೇ ಅಲ್ಲ, ಮನುಷ್ಯನನ್ನೇ ಸಂಪೂರ್ಣ ಕುರುಡನನ್ನಾಗಿಸಬಹುದು. ಅಂಧತ್ವ ಶಾಪ ಅಲ್ಲ, ಆದರೆ ಒಳಗಣ್ಣನ್ನು ಕಳೆದುಕೊಳ್ಳುವುದು ಮಾತ್ರ ಮಹಾಶಾಪ.

ಪಕ್ಕದ ಸಹಪ್ರಯಾಣಿಕನೊಂದಿಗೆ ಒಂದಿಂಚು ಹೊಂದಾಣಿಕೆ ಮಾಡಿಕೊಳ್ಳಲಾಗದ, ತನ್ನೆದುರಿನ ಸಣ್ಣ ವಾಹನಕ್ಕೆ ಸಂಯಮದಿಂದ ದಾರಿ ಬಿಟ್ಟುಕೊಡಲಾಗದ ಭೂಪ ಪ್ರಯಾಣದುದ್ದಕ್ಕೂ ಕಾಣಸಿಗುವ ದೇವಸ್ಥಾನಗಳಿಗೆಲ್ಲ ಕೈಮುಗಿಯುತ್ತಾ ಸಾಗುತ್ತಾನೆ. ಎಂತಹ ವಿಪರ್ಯಾಸ! ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ/ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನನ್ನೊಳಗೆ’ ಎಂದು ಆತ್ಮಶೋಧನೆ ಮಾಡಿಕೊಳ್ಳುತ್ತಾರೆ ಕವಿ ಜಿಎಸ್ಸೆಸ್. ತನ್ನೊಳಗಿನ ಅಂಧಕಾರವನ್ನು ನೀಗಿಸಿಕೊಳ್ಳದೆ ಯಾವ ದೇವರ ಮೊರೆಹೊಕ್ಕರೂ ಆತನ ಸಾಮೀಪ್ಯ ಅರಿವಿಗೆ ಬಾರದು.  ತೇನವಿನಾ ತೃಣಮಪಿ ನ ಚಲತಿ - ನೀನಿಲ್ಲದೆ ಒಂದು ಹುಲ್ಲುಕಡ್ಡಿಯೂ ಚಲಿಸದು, ನಾನೆಂಬುದು ಈ ಜಗತ್ತಿನಲ್ಲಿ ಏನೂ ಅಲ್ಲ ಎಂದು ಅರ್ಥ ಮಾಡಿಕೊಂಡವನಿಗೆ ಮುಂದಿನ ದಾರಿ ಸುಗಮ.

ನೀನು ಸ್ವರ್ಗಕ್ಕೆ ಹೋಗಬಲ್ಲೆಯಾ? ಎಂದು ಕೇಳಿದರಂತೆ ಶಿಷ್ಯ ಕನಕದಾಸರನ್ನು ಗುರುಗಳಾದ ವ್ಯಾಸರಾಯರು. ‘ನಾನು ಹೋದರೆ ಹೋದೇನು’ ಎಂದು ಉತ್ತರಿಸಿದರಂತೆ ಕನಕದಾಸರು. ನಾನು ಎಂಬುದನ್ನು ಕಳೆದುಕೊಳ್ಳುವುದೇ ಸಾಧನೆಯ ಆರಂಭ.
- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಅಕ್ಟೋಬರ್ 22, 2019

ಬೀಗಿದಷ್ಟೂ ಬಾಗುವುದು ಕಷ್ಟ

19-25 ಅಕ್ಟೋಬರ್ 2019ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

‘ಬದುಕಲಿಕ್ಕೊಂದು ಭ್ರಾಂತಿ ಬೇಕಾಗ್ತದೆ, ಪ್ರಜೆಗಳಿಗೂ, ಸುಲ್ತಾನರಿಗೂ.’ ಹಾಗೆನ್ನುತ್ತದೆ ಕಾರ್ನಾಡರ ‘ರಾಕ್ಷಸತಂಗಡಿ’ ನಾಟಕದ ಒಂದು ಪಾತ್ರ. ಹೌದು, ಒಬ್ಬೊಬ್ಬರು ಸದಾ ಒಂದೊಂದು ಭ್ರಾಂತಿಯಲ್ಲೇ ಇರುತ್ತಾರೆ. ಕೆಲವರಿಗೆ ತಾವೇನೋ ಸಾಧಿಸಿದೆವೆನ್ನುವ, ಇನ್ನು ಕೆಲವರಿಗೆ ತಾವು ಯಾರನ್ನೋ ಸೋಲಿಸಿದೆವೆನ್ನುವ, ಇನ್ನು ಹಲವರಿಗೆ ತಾವು ಸಮಾಜವನ್ನು ಬದಲಾಯಿಸಿಬಿಡುತ್ತೇವೆನ್ನುವ, ಇನ್ನುಳಿದವರಿಗೆ ತಾವು ತುಂಬ ಸುಖ-ಸಂತೋಷದಿಂದ ಬದುಕುತ್ತಿದ್ದೇವೆನ್ನುವ ಭ್ರಾಂತಿ. ಸ್ವಲ್ಪ ಮಟ್ಟಿಗೆ ಇವೆಲ್ಲ ಬೇಕು. ಭ್ರಾಂತಿಯಿಂದ ಚಿಂತೆ ದೂರವಾಗುವುದಿದ್ದರೆ, ನಿರಾಸೆ ಒತ್ತಟ್ಟಿಗೆ ಸರಿಯುವುದಿದ್ದರೆ, ದುಃಖ ಕ್ಷಣಕಾಲ ಮರೆಯಾಗುವುದಿದ್ದರೆ, ಒಂದಷ್ಟು ಹುಮ್ಮಸ್ಸು-ಉತ್ಸಾಹ ಬೆನ್ನಿಗೆ ನಿಲ್ಲುವುದಿದ್ದರೆ ಕೊಂಚ ಭ್ರಾಂತಿ ಇದ್ದರೆ ಒಳ್ಳೆಯದು. ಆದರೆ ಭ್ರಾಂತಿಯೇ ಬದುಕಾಗಬಾರದಲ್ಲ!

ಬೋಧಿವೃಕ್ಷ | 19-25 ಅಕ್ಟೋಬರ್ 2019
‘ನಾನು ಯಾರು?’ ಎಂಬ ಪ್ರಶ್ನೆಯನ್ನು ಎಂದಾದರೂ ನಾವು ಅಂತರ್ಯಕ್ಕೆ ಕೇಳಿಕೊಂಡದ್ದಿದೆಯೇ? ಹಾಗೆ ಕೇಳಿಕೊಂಡರೆ ಮೊದಲ ಉತ್ತರವಾಗಿ ನಮ್ಮ ಹೆಸರು ಬರಬಹುದು. ಅದು ನಮ್ಮ ಹೆಸರಾಯಿತೇ ಹೊರತು ನಾವು ಯಾರೆಂದು ಹೇಳಿದಂತಾಗಲಿಲ್ಲ ಅಲ್ಲವೇ? ನಮ್ಮ ಹೆಸರನ್ನು ಬದಲಾಯಿಸಿಕೊಂಡರೆ ನಾವು ಬದಲಾಗುತ್ತೇವೆಯೇ? ಇಲ್ಲ. ಹೆಸರು ಮಾತ್ರ ಬದಲಾಗುವುದು; ನಾವು ಹಾಗೆಯೇ ಉಳಿಯುತ್ತೇವೆ. ಹಾಗಾದರೆ ನಾವೆಂದರೆ ನಮ್ಮ ಹೆಸರಲ್ಲ ಎಂದಾಯಿತು.

ಮತ್ತೆ ಪ್ರಶ್ನಿಸಿದರೆ ನಾನು ಇಂಥವರ ಮಗ ಅಥವಾ ಮಗಳು ಎಂದೋ, ಇಂಥ ಕುಟುಂಬಕ್ಕೆ ಸೇರಿದವರು ಎಂದೋ, ಇಂಥ ಜಾತಿ ಅಥವಾ ಪಂಗಡದವರು ಎಂದೋ, ಇಂಥ ಊರಿನವರು ಎಂದೋ, ಇಂಥ ಉದ್ಯೋಗದಲ್ಲಿರುವವರು ಎಂದೋ- ನಾನಾ ಉತ್ತರಗಳು ಬರುತ್ತಲೇ ಇರಬಹುದು. ಅವೆಲ್ಲ ನಮ್ಮ ವಿಳಾಸದ ವಿಚಾರವಾಯಿತೇ ಹೊರತು ನಾವು ಯಾರು ಎಂದು ಸಿದ್ಧಪಡಿಸಿದಂತೆ ಆಗಲಿಲ್ಲ.

ಹೆಚ್ಚೆಂದರೆ ಎಲ್ಲವಕ್ಕೂ ಒಂದೊಂದು ಗುರುತಿನ ಪತ್ರವನ್ನು ತಂದು ತೋರಿಸಬಹುದು. ಮಳೆಯಲ್ಲಿ ನೆನೆದರೆ, ಬೆಂಕಿಯಲ್ಲಿ ಬೆಂದರೆ ಆ ಗುರುತಿನ ಪತ್ರ ಉಳಿಯುವುದಿಲ್ಲ. ಮತ್ತೆ ಹೊಸದಾಗಿ ಮಾಡಿಸಬೇಕು. ಗುರುತಿನ ಪತ್ರ ಇಲ್ಲದೆಯೇ ನಮ್ಮನ್ನು ನಾವು ಉದ್ಘಾಟಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲವೇ?

ಸಮಾಜದಲ್ಲಿ ನಾವು ವಿವಿಧ ಅಸ್ಮಿತೆಗಳಿಂದ ಗುರುತಿಸಿಕೊಳ್ಳುತ್ತೇವೆ: ತಂದೆ, ಗಂಡ, ಹೆಂಡತಿ, ಪ್ರಯಾಣಿಕ, ಗೆಳೆಯ, ಅಧ್ಯಾಪಕ... ಮಕ್ಕಳಿರುವುದರಿಂದ ತಂದೆ, ಹೆಂಡತಿಯಿರುವುದರಿಂದ ಗಂಡ, ಗಂಡ ಇರುವುದರಿಂದ ಹೆಂಡತಿ, ಪಾಠ ಮಾಡುತ್ತಿರುವುದರಿಂದ ಅಧ್ಯಾಪಕ, ಬಸ್ಸಿನಲ್ಲಿರುವುದರಿಂದ ಪ್ರಯಾಣಿಕ. ಅಂದರೆ ಅವೆಲ್ಲ ನಾವಿರುವ ಪರಿಸರ ಅಥವಾ ಸ್ಥಾನದಿಂದಾಗಿ ಅಥವಾ ನಾವು ನಿರ್ವಹಿಸುತ್ತಿರುವ ಕಾರ್ಯದಿಂದಾಗಿ ಒದಗಿರುವ ಉಪಾಧಿಗಳೇ ಹೊರತು ನಿಜವಾದ ಅಸ್ಮಿತೆಗಳಲ್ಲ. ಪಾತ್ರಗಳು ಬದಲಾದಂತೆ ನಮ್ಮ ಉಪಾಧಿಗಳು, ಅಸ್ಮಿತೆಗಳು ಬದಲಾಗುತ್ತಾ ಹೋಗುತ್ತವೆ. ಹೊಸ ಉಪಾಧಿಗಳು ಬಂದಂತೆಲ್ಲ ವಾಸ್ತವದಿಂದ ದೂರ ಸರಿಯುತ್ತಲೇ ಇರುತ್ತೇವೆ.

ಹಾಗಾದರೆ ‘ನಾನು ಯಾರು?’ ಮತ್ತದೇ ಪ್ರಶ್ನೆ. ಈ ಪ್ರಶ್ನೆಯನ್ನು ಮನಸ್ಸಿಗೆ ಮತ್ತೆ ಮತ್ತೆ ಕೇಳಿದಾಗೆಲ್ಲ ಸತ್ಯದ ಅರಿವಾಗುತ್ತಾ ಹೋಗುತ್ತದೆ. ನಮ್ಮ ಅಸ್ಮಿತೆಯಷ್ಟೇ ಅಲ್ಲದೆ, ನಮ್ಮ ಇತಿಮಿತಿಗಳೂ ಅರ್ಥವಾಗುತ್ತಾ ಹೋಗುತ್ತವೆ. ನಾವು ಏನು ಎಂದು ತಿಳಿಯುವಷ್ಟೇ ನಾವು ಏನಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವುದೂ ಮುಖ್ಯ. ನಾವು ಏನು ಮತ್ತು ಏನಲ್ಲ ಎಂದು ತಿಳಿದುಕೊಳ್ಳುವುದಕ್ಕೆ ಸ್ವಸ್ಥಾನಪರಿಜ್ಞಾನವೆಂದು ಹೆಸರು. ಬದುಕಿನಲ್ಲಿ ಎದುರಾಗುವ ಹಲವು ದುಃಖ, ಸಂಕಟಗಳಿಗೆ ಸ್ವಸ್ಥಾನಪರಿಜ್ಞಾನ ಇಲ್ಲದಿರುವುದೇ ಕಾರಣ.

ಶ್ರೀಮಂತಿಕೆಯಿದೆಯೆಂದು ಬೀಗುತ್ತೇವೆ. ತುಂಬ ಸಂಪಾದಿಸಿದ್ದೇವೆ ಎಂದು ಬೀಗುತ್ತೇವೆ. ಜನಪ್ರಿಯರಾಗಿದ್ದೇವೆ ಎಂದು ಬೀಗುತ್ತೇವೆ. ಹಲವು ಪ್ರಶಸ್ತಿ-ಪದವಿಗಳನ್ನು ಪಡೆದುಕೊಂಡಿದ್ದೇವೆ ಎಂದು ಬೀಗುತ್ತೇವೆ. ಬೀಗಿದಷ್ಟೂ ಬಾಗುವುದು ಕಡಿಮೆಯಾಗುತ್ತದೆ. ಬಾಗದೇ ಹೋದರೆ ಕೆಲವೊಮ್ಮೆ ಫಟ್ಟನೆ ತುಂಡಾಗಿಬಿಡುವುದೂ ಇದೆ. ಸಾಧನೆಯ ತುತ್ತತುದಿಯಲ್ಲಿದ್ದೇವೆ ಎಂಬ ಭ್ರಮೆಯಲ್ಲಿರುವಾಗಲೇ ಒಂದು ದಿನ ಇದ್ದಕ್ಕಿದ್ದಂತೆ ದೊಡ್ಡ ಪ್ರಪಾತಕ್ಕೆ ಬಿದ್ದಿರುತ್ತೇವೆ.

ಕೆಲವೊಮ್ಮೆ ತುಂಬ ಕೊರಗುತ್ತೇವೆ. ಎಷ್ಟು ವರ್ಷ ದುಡಿದರೂ ಬದುಕಿನ ಬಂಡಿ ಒಂದು ಹದಕ್ಕೆ ಬಂದಿಲ್ಲವೆಂದೋ, ಎಷ್ಟು ಸಂಪಾದಿಸಿದರೂ ಕೈಯಲ್ಲೊಂದು ಕಾಸೂ ಉಳಿಯುತ್ತಿಲ್ಲವೆಂದೋ, ಕಷ್ಟಗಳೆಲ್ಲ ನಮಗೇ ಬರುತ್ತಿವೆ ಎಂದೋ, ಮಕ್ಕಳು ಮಾತನ್ನು ಕೇಳುತ್ತಿಲ್ಲ ಎಂದೋ, ಉಪಕಾರ ಪಡೆದುಕೊಂಡವರೆಲ್ಲ ತಿರುಗಿಬಿದ್ದಿದ್ದಾರೆಂದೋ, ಸುತ್ತಮುತ್ತಲಿನವರೆಲ್ಲ ನಮ್ಮ ವಿರುದ್ಧವೇ ಪಿತೂರಿ ಮಾಡುತ್ತಿದ್ದಾರೆಂದೋ ಕೊರಗುತ್ತಲೇ ಇರುತ್ತೇವೆ. ಯಾವುದೋ ಒಂದು ದಿನ ಎಲ್ಲ ಕೊರಗುವಿಕೆಗಳೂ ಏಕಾಏಕಿ ಮಾಯವಾಗಿ ಸಂತೋಷದ ಉತ್ತುಂಗಕ್ಕೆ ತಲುಪಿರುತ್ತೇವೆ.

ಅಂದರೆ ಯಾವುದೂ ಶಾಶ್ವತವಲ್ಲ. ಬದಲಾವಣೆಯೊಂದೇ ಶಾಶ್ವತವಾದದ್ದು. ಬದುಕೊಂದು ಜಲಚಕ್ರ. ಕೆಳಗಿರುವುದು ಮೇಲೇರುತ್ತದೆ. ಮೇಲೇರಿದ್ದು ಕೆಳಗಿಳಿಯುತ್ತದೆ. ಇದು ಸಂಪೂರ್ಣ ಅರ್ಥವಾದಾಗ ಭ್ರಾಂತಿ ತೊಲಗುತ್ತದೆ. ಯಾರೋ ಔಪಚಾರಿಕತೆಗಾಗಿಯೋ, ಸ್ವಂತ ಲಾಭಕ್ಕಾಗಿಯೋ ನಮ್ಮನ್ನು ಬಹುವಾಗಿ ಹೊಗಳಿ ಉಬ್ಬಿಸಲು ಪ್ರಯತ್ನಿಸಬಹುದು. ಇನ್ಯಾರೋ ಮತ್ಸರದಿಂದಲೋ, ಘಾತಿಸುವ ಉದ್ದೇಶದಿಂದಲೋ ನಮ್ಮಲ್ಲಿ ನಿರಾಶೆಯನ್ನು ತುಂಬಲು ಪ್ರಯತ್ನಿಸಬಹುದು. ಸ್ವಸ್ಥಾನಪರಿಜ್ಞಾನವುಳ್ಳವನು ಹೊಗಳಿಯಿಂದ ಹಿಗ್ಗುವುದೋ, ನಿಂದೆಯಿಂದ ಕುಗ್ಗುವುದೋ ಆಗಬಾರದು. ತನ್ನ ಸಾಮರ್ಥ್ಯ
 ಮತ್ತು ಮಿತಿಗಳ ಅರಿವು ಇರುವವನಿಗೆ ಇವುಗಳಿಂದ ಯಾವ ಪರಿಣಾಮವೂ ಆಗುವುದಿಲ್ಲ. ಆ ಸ್ಥಿತಿಗೆ ಸ್ಥಿತಪ್ರಜ್ಞತೆ ಎಂದು ಹೆಸರು. ಅದು ಸ್ವಸ್ಥಾನಪರಿಜ್ಞಾನದಿಂದ ಹುಟ್ಟಿಕೊಳ್ಳುವ ಆನಂದದ ಭಾವ.

‘ನೀನು ಯಾವ ಪುಸ್ತಕ ಓದುತ್ತೀಯೋ, ಅದು ನೀನಾಗುತ್ತಿ; ಯಾವ ಸಿನಿಮಾ ನೋಡುತ್ತೀಯೋ, ಅದು ನೀನಾಗುತ್ತಿ; ಯಾವ ಸಂಗೀತ ಕೇಳುತ್ತೀಯೋ ಅದು ನೀನಾನುತ್ತಿ; ಯಾರೊಂದಿಗೆ ಸಮಯ ಕಳೆಯುತ್ತೀಯೋ, ಅವರೇ ನೀನಾಗುತ್ತಿ. ಆದ್ದರಿಂದ ನೀನು ಯಾರಾಗಬೇಕು ಎಂಬುದನ್ನು ನಿರ್ಧರಿಸಬೇಕಾದುದು ನೀನೇ’ ಎನ್ನುತ್ತಾನೆ ಒಬ್ಬ ದಾರ್ಶನಿಕ.

‘ಬ್ರಹ್ಮ ಸತ್ಯಂ, ಜಗನ್ಮಿಥ್ಯಾ, ಜೀವೋ ಬ್ರಹ್ಮೈವನಾಪರಃ’ ಎಂದರು ಆಚಾರ್ಯ ಶಂಕರರು. ಬ್ರಹ್ಮವು ಸತ್ಯ, ಜಗತ್ತು ಮಿಥ್ಯ, ಜೀವನು ಬ್ರಹ್ಮವಲ್ಲದೆ ಬೇರೆಯಲ್ಲ ಎಂಬುದು ಅವರ ಅದ್ವೈತ ದರ್ಶನದ ಸಾರ. ಈ ಜಗತ್ತನ್ನು ತನ್ನ ಪ್ರಭಾವಳಿಯಲ್ಲಿ ಹಿಡಿದಿಟ್ಟುಕೊಂಡಿರುವ ಒಂದು ಮಹೋನ್ನತ ಶಕ್ತಿಯಿದೆ; ಅದನ್ನು ಕೆಲವರು ದೇವರು ಎಂದರು, ಇನ್ನು ಕೆಲವರು ಪ್ರಕೃತಿ ಎಂದರು. ಅಂತೂ ತಾನು ಅದರ ಒಂದು ಭಾಗ, ಅಥವಾ ಅದೇ ತಾನು ಎಂದು ಅರ್ಥವಾದಾಗ ಉಳಿದೆಲ್ಲ ಅಸ್ಮಿತೆಗಳ ಭ್ರಮೆ ತಾನಾಗಿಯೇ ಕರಗಿ ಹೋಗುತ್ತದೆ. ಆಗ ಉಳಿಯುವುದು ನಿರುಮ್ಮಳತೆಯ, ನಿರ್ವ್ಯಾಮೋಹದ, ಆನಂದದ ಭಾವ.

ಈ ಸತ್-ಚಿತ್-ಆನಂದದ ಸ್ವರೂಪ ಅಷ್ಟು ಸುಲಭವಾಗಿ ದಕ್ಕುವುದೇ? ‘ನಾನು ಹೋದರೆ ಹೋದೇನು’ ಎಂದು ಹೇಳಿದ ಕನಕದಾಸರ ಹಿಂದೆ ವ್ಯಾಸತೀರ್ಥರಿದ್ದರು. ಹೌದು, ಲೋಹಗಳ ನಡುವಿನಿಂದ ಚಿನ್ನವನ್ನು ಬೇರ್ಪಡಿಸುವುದಕ್ಕೆ ಒಬ್ಬ ಚಿನಿವಾರ ಬೇಕಿರುವಂತೆ ನಾವು ಯಾರು ಎಂದು ಅಂತಿಮವಾಗಿ ಅರ್ಥ ಮಾಡಿಕೊಳ್ಳಲು ಒಬ್ಬ ಗುರು ಬೇಕು. ಆತ ನಮ್ಮ ಅಂತರಂಗಕ್ಕೆ ಇಳಿದು ಬೆಳಕಿನ ಹಣತೆ ಹಚ್ಚಬಲ್ಲ. ಕತ್ತಲಲ್ಲಿರುವ ಎಲ್ಲರಿಗೂ ಬೇಕಾಗಿರುವುದು ಒಬ್ಬ ಗುರು. ಗುರುವನ್ನು ಹುಡುಕಿಹೊರಟವನಿಗೆ ಕತ್ತಲೆಂಬುದೇ ಇಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಸೆಪ್ಟೆಂಬರ್ 13, 2019

ವಾಸ್ತವ ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸುವ ಬಗೆ

14-20 ಸೆಪ್ಟೆಂಬರ್ 2019ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

‘ಅಯ್ಯೋ ನೀವೇ ನನ್ನ ತಂದೆತಾಯಿಯರೆಂದು ಈವರೆಗೆ ನನಗೇಕೆ ಗೊತ್ತಾಗಲಿಲ್ಲ?’ ಹಾಗೆಂದು ಕೃಷ್ಣ-ಭಾಮೆಯರ ಘಾತಕ್ಕೆ ನೆಲಕ್ಕೊರಗಿ ಹಲುಬುತ್ತಾನೆ ನರಕಾಸುರ. ‘ನಿಮ್ಮ ಮಗನಾಗಿಯೂ ನಾನೇಕೆ ಹೀಗಾದೆ? ಬದುಕನ್ನೆಲ್ಲಾ ನಾನೇಕೆ ದುಷ್ಕೃತ್ಯದಲ್ಲೇ ಕಳೆದುಬಿಟ್ಟೆ?’ ಅವನು ಪಶ್ಚಾತ್ತಾಪದಲ್ಲಿ ಬೇಯುತ್ತಾನೆ. ವಿಷ್ಣು ವರಾಹಾವತಾರಿಯಾಗಿ ಬಂದು ಹಿರಣ್ಯಾಕ್ಷನನ್ನು ವಧಿಸಿದ ಬಳಿಕ ಭೂದೇವಿಯನ್ನು ಕೂಡಿದ್ದರಿಂದ ಹುಟ್ಟಿದವನು ಈ ನರಕಾಸುರ. ತಂದೆತಾಯಿಯರು ಜತೆಯಾಗಿ ಎದುರಿಸಿದಾಗ ಮಾತ್ರವೇ ತನಗೆ ಮರಣ ಎಂಬ ಬ್ರಹ್ಮನ ವರಬಲ ಅವನಿಗಿತ್ತು. ಸತ್ಯಭಾಮೆಯು ಭೂದೇವಿಯ ಅಂಶದಿಂದ ಕೂಡಿದವಳಾದ್ದರಿಂದ ಆಕೆಯೂ ಕೃಷ್ಣನೂ ಜತೆಯಾಗಿ ಹೋರಾಡಿ ದುಷ್ಟತನದಿಂದ ಮೆರೆಯುತ್ತಿದ್ದ ನರಕನನ್ನು ವಧಿಸಬೇಕಾಯಿತು.

ಬೋಧಿವೃಕ್ಷ | 14-20 ಸೆಪ್ಟೆಂಬರ್ 2019
‘ನೀನು ನಡೆದ ಹಾದಿ ನಿನಗೆ ಮುಳುವಾಯಿತು’ ಹಾಗೆನ್ನುತ್ತಲೇ ನರಕಾಸುರನ ಒಳಗೆ ಬೆಳಕನ್ನು ಹಚ್ಚುತ್ತಾನೆ ಕೃಷ್ಣ. ‘ಬೀಜವನ್ನು ಎಲ್ಲಿ ಬಿತ್ತಲಾಗುತ್ತದೆ ಎಂಬುದಷ್ಟೇ ಮುಖ್ಯವಲ್ಲ. ಅದು ಹೇಗೆ ಬೆಳೆಯುತ್ತದೆ ಎಂಬುದೂ ಮುಖ್ಯ’ ಎಂಬುದು ಆತನ ಮಾತಿನ ಸಾರ. ಬೆಳೆ ಕಳೆಯಾಗಬಲ್ಲುದು, ಕಳೆ ಬೆಳೆಯಾಗಬಲ್ಲುದು. ಅದು ನಿರ್ಧಾರವಾಗುವುದು ಹುಟ್ಟಿದ ಮೊಳಕೆ ಯಾವ ಬಗೆಯ ಪೋಷಣೆ ಪಡೆಯುತ್ತದೆ ಎಂಬುದರ ಆಧಾರದಲ್ಲಿ. ನರಕಾಸುರ ಹುಟ್ಟಿದ್ದು ದೈವೀಶಕ್ತಿಯಿಂದಲೇ ಆದರೂ ಬೆಳೆದದ್ದು ರಕ್ಕಸ ಪರಿವಾರದಲ್ಲಿ.

ಇಲ್ಲಿ ಬೀಜ ಅಥವಾ ಮೊಳಕೆಗಿಂತಲೂ ಬಿತ್ತುವವನ ಅಥವಾ ಬೆಳೆಯುವವನ ಜವಾಬ್ದಾರಿಯೂ ದೊಡ್ಡದೆಂಬ ಧ್ವನಿಯೂ ಇದೆ. ‘ಹೆತ್ತವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ಹೋದರೆ ಮಕ್ಕಳ ಪತನವನ್ನೂ ನೋಡಬೇಕಾಗುತ್ತದೆ’ ಎಂಬ ಆತ್ಮಾವಲೋಕನದ ವಿಷಾದವೂ ಇದೆ.

ಬರೀ ತೊಂಬತ್ತು ಅಂಕ ತೆಗೆದುಕೊಂಡಿದ್ದೀಯಾ, ಇನ್ನೂ ಹೆಚ್ಚು ಯಾಕೆ ತೆಗೆದುಕೊಂಡಿಲ್ಲ ಎಂದು ಅಪ್ಪ-ಅಮ್ಮ ಮಗನಲ್ಲಿ ಎರಡು ದಿನ ಮಾತು ಬಿಟ್ಟರಂತೆ; ಮೂರನೆಯ ದಿನ ಮಗ ನೇಣುಹಾಕಿಕೊಂಡು ಪ್ರಾಣಬಿಟ್ಟನಂತೆ. ಹೊಸ ಮೊಬೈಲ್ ಕೊಡಿಸುವುದಿಲ್ಲ ಎಂದು ಅಮ್ಮ ಖಡಕ್ಕಾಗಿ ಹೇಳಿದಳಂತೆ; ಮರುದಿನ ಹನ್ನೆರಡು ವರ್ಷದ ಮಗಳು ಮನೆಬಿಟ್ಟು ಓಡಿಹೋದಳಂತೆ. ಚಟಹಿಡಿಯುವ ಗೇಮ್ ಆಡಬೇಡವೆಂದು ಅಪ್ಪ ಕಟ್ಟುನಿಟ್ಟು ಮಾಡಿದನಂತೆ; ಮಗ ಮಧ್ಯರಾತ್ರಿ ಎದ್ದು ಅಪ್ಪನನ್ನು ಉಸಿರುಗಟ್ಟಿಸಿ ಸಾಯಿಸಿಯೇಬಿಟ್ಟನಂತೆ. ಶಿಸ್ತು ಸಂಯಮದಿಂದ ಇರಿ ಎಂದು ವಿದ್ಯಾರ್ಥಿಗಳಿಗೆ ಅಧ್ಯಾಪಕನೊಬ್ಬ ಕೊಂಚ ಗಟ್ಟಿ ದನಿಯಲ್ಲೇ ಬುದ್ಧಿವಾದ ಹೇಳಿದನಂತೆ; ಶಿಷ್ಯೋತ್ತಮನೊಬ್ಬ ತರಗತಿಯಲ್ಲೇ ಗುರುವಿಗೆ ಕಪಾಳಮೋಕ್ಷ ಮಾಡಿದನಂತೆ.

ಯಾಕೆ ಹೀಗಾಗುತ್ತಿದೆ? ಮಕ್ಕಳು ಯಾಕೆ ದೊಡ್ಡವರ ಮಾತನ್ನು ಕೇಳುತ್ತಿಲ್ಲ? ಇನ್ನೂ ಹದಿಹರೆಯದ ಹೊಸಿಲಲ್ಲಿರುವ ಮಕ್ಕಳು ‘ಇದು ನನ್ನ ಪರ್ಸನಲ್ ವಿಷ್ಯ. ನೀನು ಮೂಗು ತೂರಿಸಬೇಡ’ ಎಂದು ತಂದೆತಾಯಿಯರಿಗೆ ಕಟ್ಟಪ್ಪಣೆ ಮಾಡುವ ಮಟ್ಟಕ್ಕೆ ಹೋಗಿದ್ದಾರೆ? ಅವರೇಕೆ ಸಣ್ಣಪುಟ್ಟ ಸೋಲುಗಳನ್ನೂ ಎದುರಿಸುವ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ? ಅವರೇಕೆ ದಿನೇದಿನೇ ದುರ್ಬಲರಾಗಿ ಕಳೆಗುಂದುತ್ತಿದ್ದಾರೆ? ‘ಇಂದಿನ ಮಕ್ಕಳು ನಮ್ಮ ಕಾಲದವರಂತಲ್ಲ. ಮಹಾಬುದ್ಧಿವಂತರು. ತುಂಬಾ ಫಾಸ್ಟು’ ಹೀಗೆಂದು ಹಿರಿಯರು ಮಾತಾಡಿಕೊಳ್ಳುವುದಿದೆ. ಈ ಮಹಾಬುದ್ಧಿವಂತಿಕೆ ಎಂದರೇನು? ಬುದ್ಧಿವಂತಿಕೆಯ ಮಾನದಂಡ ಯಾವುದು? ಈ ಫಾಸ್ಟ್ ಮಕ್ಕಳು ವಾಸ್ತವದಲ್ಲಿ ಯಾಕಿಷ್ಟು ಸ್ಲೋ ಆಗಿದ್ದಾರೆ?

‘ಹುಟ್ಟುವ ಪ್ರತಿಯೊಂದು ಮಗುವೂ ಮನುಷ್ಯನ ಮೇಲೆ ತಾನಿನ್ನೂ ಮುನಿದಿಲ್ಲ ಎಂಬ ದೇವರ ಸಂದೇಶವನ್ನು ಭೂಮಿಗೆ ತರುತ್ತದೆ’ ಎನ್ನುತ್ತಾರೆ ಕವಿಗುರು ರವೀಂದ್ರನಾಥ ಠಾಕೂರ್. ಜಗತ್ತನ್ನು ಮುನ್ನಡೆಸುವ ಶಕ್ತಿಯ ಪ್ರತಿನಿಧಿಗಳಾಗಿ ಮಕ್ಕಳು ಹುಟ್ಟುತ್ತಾರೆ ಎಂದೂ ಆ ಮಾತನ್ನು ಅರ್ಥ ಮಾಡಿಕೊಳ್ಳಬಹುದಲ್ಲ? ಅಂದರೆ ಪ್ರತೀ ಮಗುವೂ ಮೂಲತಃ ದೈವಾಂಶಸಂಭೂತವೇ. ಮಕ್ಕಳನ್ನು ದೇವರೆಂದು ಕರೆಯುವುದೂ ಇದೇ ಕಾರಣಕ್ಕೆ ಅಲ್ಲವೇ? ‘ಚೈಲ್ಡ್ ಈಸ್ ದಿ ಫಾದರ್ ಆಫ್ ದಿ ಮ್ಯಾನ್’ ಎಂಬ ವರ್ಡ್ಸ್'ವರ್ತನ ಸಾಲಿನಲ್ಲೂ ಇದೇ ಧ್ವನಿ ಇದೆ. ಅಂತಹ ಮಗು ಬೆಳೆಬೆಳೆಯುತ್ತಾ ನಾವೀಗ ಆತಂಕಪಡುತ್ತಿರುವ ಪರಿಸ್ಥಿತಿಗೆ ಬಂದು ನಿಲ್ಲುತ್ತದೆ ಎಂದರೆ ಅದಕ್ಕೆ ಹೊಣೆಗಾರರು ಯಾರು?

ಹೌದು, ಮಾಡಬೇಕಾದ್ದನ್ನು ಮಾಡಬೇಕಾದ ಕಾಲದಲ್ಲಿ ಮಾಡದೆ ಹೋದರೆ ಆಗಬಾರದ್ದು ಆಗುತ್ತದೆ. ಬೇವು ಬಿತ್ತಿ ಮಾವಿನ ಫಲ ನಿರೀಕ್ಷಿಸಿದರೆ ಆಗುತ್ತದೆಯೇ? ಸಂಸ್ಕಾರವೆಂಬುದು ಮನೆಯಲ್ಲಿ ಬೆಳೆಯದೆ ಹೋದರೆ ಮನೆಯೆ ಮೊದಲ ಪಾಠಶಾಲೆ ಎಂಬ ಮಾತಿಗೆ ಯಾವ ಮಹತ್ವವೂ ಉಳಿಯುವುದಿಲ್ಲ. ಹಿರಿಯರೊಂದಿಗೆ, ಕಿರಿಯರೊಂದಿಗೆ, ಓರಗೆಯವರೊಂದಿಗೆ, ಕಲಿಸುವ ಗುರುಗಳೊಂದಿಗೆ, ಬೆಳೆಸುವ ಬಂಧುಗಳೊಂದಿಗೆ ಹೇಗೆ ವರ್ತಿಸಬೇಕು ಎಂಬ ತಿಳುವಳಿಕೆಯನ್ನು ಮಕ್ಕಳಿಗೆ ಎಳವೆಯಲ್ಲೇ ಕಲಿಸಲು ನಾವು ವಿಫಲರಾದೆವೆಂದರೆ ಆಮೇಲೆ ಅವರು ನಮ್ಮ ನಿರೀಕ್ಷೆಯಂತೆ ನಡೆದುಕೊಳ್ಳುತ್ತಿಲ್ಲ ಎಂದು ಅಲವತ್ತುಕೊಳ್ಳುವುದಕ್ಕೆ ನಮಗೆ ಯಾವ ನೈತಿಕತೆಯೂ ಉಳಿಯುವುದಿಲ್ಲ.

ಮಕ್ಕಳು ನಾವು ಹೇಳಿದ್ದನ್ನು ಕೇಳಲಾರರೇನೋ? ಆದರೆ ಮಾಡಿದ್ದನ್ನು ಮಾಡುತ್ತಾರೆ. ಯಾಕೆಂದರೆ ಮಕ್ಕಳದ್ದು ಕೇಳಿ ಕಲಿಯುವ ವಯಸ್ಸಲ್ಲ, ನೋಡಿ ಮಾಡುವ ವಯಸ್ಸು. ದೊಡ್ಡವರ ಒಣ ರಾಜಕೀಯ, ವಿನಾ ಪ್ರತಿಷ್ಠೆ, ಕ್ಲುಲ್ಲಕ ವೈಮನಸ್ಸು, ಅನಗತ್ಯ ದುರಹಂಕಾರ- ಎಲ್ಲವನ್ನೂ ಎಳೆಯ ಮಕ್ಕಳು ತಮಗೂ ಗೊತ್ತಿಲ್ಲದೆ ಅನುಸರಿಸುತ್ತಿರುತ್ತಾರೆ. ಅವರಿಗೆ ಅಪ್ಪ-ಅಮ್ಮಂದಿರಿಗಿಂತ, ಅವರಿಗಿಂತಲೂ ಹೆಚ್ಚು ಸಮಯ ಜತೆಯಲ್ಲಿ ಕಳೆಯುವ ಅಧ್ಯಾಪಕರುಗಳಿಗಿಂತ ದೊಡ್ಡ ಮಾದರಿಗಳಿಲ್ಲ. ಅವರು ತಮ್ಮ ನಡೆನುಡಿಗಳಲ್ಲಿ ತೋರಲಾಗದ್ದನ್ನು ಮಕ್ಕಳ ವರ್ತನೆಗಳಲ್ಲಿ ನಿರೀಕ್ಷಿಸುವುದರಲ್ಲಿ ಯಾವ ಅರ್ಥವೂ ಇಲ್ಲ.

ನಾವೆಲ್ಲ ಮಕ್ಕಳ ಐಕ್ಯೂ ಹಿಂದೆ ಬಿದ್ದುಬಿಟ್ಟಿದ್ದೇವೆ. ಅದನ್ನೇ ಬುದ್ಧಿವಂತಿಕೆಯೆಂದೂ, ಅದೇ ಬದುಕಿನ ಯಶಸ್ಸಿನ ಮಾನದಂಡವೆಂದೂ ತಪ್ಪು ತಿಳಿದುಕೊಂಡಿದ್ದೇವೆ. ಐಕ್ಯೂವಿನಷ್ಟೇ ಸಮಾನವಾದ ಇಕ್ಯೂ (ಇಮೋಶನಲ್ ಕೋಶೆಂಟ್)ವನ್ನು ಅವರಲ್ಲಿ ಬೆಳೆಸುವುದರಲ್ಲಿ ವಿಫಲರಾಗಿದ್ದೇವೆ. ಅವರಲ್ಲಿ ಪ್ರೀತಿ, ಗೌರವ, ಸಹನೆ, ಕರುಣೆ, ಅನುಕಂಪ, ಸಹಾನುಭೂತಿ ಇನ್ನಿತ್ಯಾದಿ ಭಾವ ವೈವಿಧ್ಯತೆಗಳ ಮರುಪೂರಣದ ಅಗತ್ಯ ತುಂಬ ಇದೆ. ದಿನದ ಇಪ್ಪತ್ನಾಲ್ಕು ಗಂಟೆಗಳನ್ನೂ ಮೊಬೈಲ್ ಉಪಾಸನೆ, ಸೀರಿಯಲ್ ಮಹಾಪೂಜೆಗಳಲ್ಲಿ ತಲ್ಲೀನರಾಗಿರುವ ಮನೆಮಂದಿಗೆ ಅದಕ್ಕಿಂತ ಭಿನ್ನವಾದ ಪ್ರಸಾದ ದೊರೆಯುವುದಾದರೂ ಹೇಗೆ?

ಸ್ಪಿರಿಚುವಲ್ ಕೋಶೆಂಟ್ ಇಂದು ಎಲ್ಲಕ್ಕಿಂತಲೂ ದೊಡ್ಡ ಅನಿವಾರ್ಯತೆ. ಮಕ್ಕಳಿಗೆ ಪುರಾಣದ, ಪಂಚತಂತ್ರದ ಕಥೆಗಳನ್ನು ಹೇಳಿ. ರಾಮಾಯಣ ಮಹಾಭಾರತ ಭಾಗವತಗಳನ್ನು ಸರಳವಾಗಿ ಪರಿಚಯಿಸಿ. ಸಂಗೀತ, ಕಲೆಗಳಲ್ಲಿ ಆಸಕ್ತಿ ಕುದುರುವಂತೆ ಮಾಡಿ. ಅವರೇನು ಮಹಾದೈವಭಕ್ತರಾಗಿ ಬೆಳೆಯಬೇಕಾಗಿಲ್ಲ, ಕನಿಷ್ಟ ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ, ಕೆಟ್ಟದು ಮಾಡಿದರೆ ಕೆಟ್ಟದಾಗುತ್ತದೆ, ಕೆಟ್ಟದ್ದನ್ನು ಶಿಕ್ಷಿಸುವ ಶಕ್ತಿಯೊಂದು ನಮ್ಮ ಬೆನ್ನಹಿಂದೆ ಸದಾ ಇದೆ ಎಂಬ ಭಾವನೆಯನ್ನಾದರೂ ಬೆಳೆಸಿ.  ಗೆಲ್ಲುವುದರೊಂದಿಗೆ ಸೋಲುವುದನ್ನೂ ಕಲಿಸಿ. ಸಣ್ಣಪುಟ್ಟ ಸೋಲುಗಳನ್ನು ದೊಡ್ಡದು ಮಾಡಲು ಹೋಗಬೇಡಿ. ಅವೆಲ್ಲ ಸಾಮಾನ್ಯ ಎಂಬ ಭಾವನೆಯನ್ನು ಬೆಳೆಸಿ. ಆಗ ಬದುಕಿನ ದೊಡ್ಡ ಸವಾಲುಗಳನ್ನು ಎದುರಿಸಲು ಮಗುವಿನ ಮನಸ್ಸು ಸಹಜವಾಗಿಯೇ ಸಿದ್ಧವಾಗುತ್ತದೆ.

-ಸಿಬಂತಿ ಪದ್ಮನಾಭ ಕೆ. ವಿ. 

ಶುಕ್ರವಾರ, ಸೆಪ್ಟೆಂಬರ್ 6, 2019

ಗುರಿಯಿಲ್ಲದ ಬದುಕು ಹಾಯಿ ಇಲ್ಲದ ದೋಣಿ

ಆಗಸ್ಟ್ 31- ಸೆಪ್ಟೆಂಬರ್ 6, 2019ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ.

ಓರಗೆಯ ಮಕ್ಕಳು ಚಿನ್ನಿದಾಂಡು ಆಡುತ್ತಿದ್ದರೆ ಇವನೊಬ್ಬ ಅಂಕೆಸಂಖ್ಯೆಗಳೊಂದಿಗೆ ಆಟವಾಡುತ್ತಿದ್ದ. ದಿನಕ್ಕೆ ಒಂದು ಹೊತ್ತು ಹೊಟ್ಟೆ ತುಂಬ ಉಣ್ಣಲಾಗದ ಕಡುಬಡತನವಿದ್ದರೂ ತಲೆಯೊಳಗೆ ಬಂಗಾರದ ಗಣಿಯಿತ್ತು. ಕೂತಲ್ಲಿ ನಿಂತಲ್ಲಿ ನಡೆದಲ್ಲಿ ಗಣಿತಶಾಸ್ತ್ರೀಯ ಸೂತ್ರಗಳು ಕಣ್ಣ ಮುಂದೆ ತಕತಕನೆ ಕುಣಿಯುತ್ತಿದ್ದವು. ಇನ್ನೂ ಹನ್ನೊಂದರ ಹುಡುಗ ಯಾರೋ ಹರಿದೆಸೆದ ಬಿಳಿ ಹಾಳೆಗಳ ಮೇಲೆ ಮನಸ್ಸಿಗೆ ಬಂದ ಬೀಜಗಣಿತದ ಸಮೀಕರಣಗಳನ್ನು ಗೀಚುತ್ತಿದ್ದರೆ ಕಾಲೇಜು ಪ್ರೊಫೆಸರುಗಳಿಗೂ ಅರಗಿಸಿಕೊಳ್ಳಲಾಗದ ವಿಸ್ಮಯ.

ಆತ ಜಗತ್ತು ಕಂಡ ಶ್ರೇಷ್ಠ ಗಣಿತಶಾಸ್ತ್ರಜ್ಞರಲ್ಲಿ ಒಬ್ಬರಾದ ಶ್ರೀನಿವಾಸ ರಾಮಾನುಜನ್. ಅವರು ಬರೆದಿಟ್ಟಿದ್ದ ಗಣಿತದ ಸಮೀಕರಣಗಳನ್ನು ಕಂಡು ವಿಶ್ವವಿಖ್ಯಾತ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೇ ಬೆಚ್ಚಿಬಿದ್ದಿದ್ದರು. ‘ಸರಿಯಾದ ಕಾಲೇಜು ಶಿಕ್ಷಣವೇ ಆಗಿಲ್ಲ ನಿನಗೆ. 'ಯೂನಿವರ್ಸಿಟಿ ಡಿಗ್ರಿಯೂ ಇಲ್ಲ. ಅತ್ಯಂತ ಕಠಿಣ ಸಮೀಕರಣಗಳನ್ನೆಲ್ಲ ಬಿಡಿಸಿದ್ದೀಯ. ಅದು ಹೇಗೆ? ಉತ್ತರ ಎಲ್ಲಿಂದ ಬಂತು?’ ಪ್ರೊ. ಹಾರ್ಡಿ ಕೇಳುತ್ತಿದ್ದರೆ ರಾಮಾನುಜನ್ ಉತ್ತರ: ‘ಗೊತ್ತಿಲ್ಲ ಸರ್. ನನ್ನ ಮನಸ್ಸಿಗೆ ಹೊಳೆಯಿತು. ಬರೆದಿದ್ದೇನೆ ಅಷ್ಟೇ.’

ಇವನ್ನೆಲ್ಲ ನಿಜಕ್ಕೂ ಈ ಹುಡುಗನೇ ಬರೆದನಾ ಎಂದು ಅವರೆಲ್ಲ ತಲೆಕೆಡಿಸಿಕೊಳ್ಳುವಷ್ಟರಮಟ್ಟಿನ ಅಪೂರ್ವ ಸಂಶೋಧನೆಗಳನ್ನು ರಾಮಾನುಜನ್ ಮಾಡಿದ್ದರು. ಕೊನೆಗೊಂದು ದಿನ ಲಂಡನ್‍ನ ವಿಶ್ವವಿಖ್ಯಾತ ರಾಯಲ್ ಸೊಸೈಟಿ ತನ್ನೆಲ್ಲ ನಿಯಮಗಳನ್ನು ಸಡಿಲಿಸಿ 30ರ ತರುಣ ರಾಮಾನುಜರನ್ನು ತನ್ನ ಫೆಲೋ ಎಂದು ಘೋಷಿಸಿತು. ಅವರು ಬರೆದಿಟ್ಟದ್ದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಇನ್ನೂ ನಮ್ಮ ಗಣಿತಲೋಕಕ್ಕೆ ಸಾಧ್ಯವಾಗಿಲ್ಲ. ಹಿ ವಾಸ್ ಎ ಜೀನಿಯಸ್!

ದೊಡ್ಡದೊಂದು ಗುರಿ, ಯಾರಿಂದಲೂ ತಡೆಯಲಾಗದ ಮಹತ್ವಾಕಾಂಕ್ಷೆ- ಇವೆರಡೂ ಇದ್ದರೆ ಮನುಷ್ಯ ಏನನ್ನೂ ಸಾಧಿಸಬಲ್ಲ ಎಂಬುದಕ್ಕೆ ಶ್ರೀನಿವಾಸ ರಾಮಾನುಜನರೇ ಸಾಕ್ಷಿ. ಗಣಿತ ಬಿಟ್ಟು ಅವರಿಗೆ ಇನ್ನೇನೂ ಅರ್ಥವಾಗುತ್ತಿರಲಿಲ್ಲ. ಪ್ರತಿಕ್ಷಣ, ಪ್ರತಿನಿಮಿಷವೂ ಅವರ ಮನಸ್ಸು ಗಣಿತಕ್ಕಾಗಿ ಹಪಹಪಿಸುತ್ತಿತ್ತು. ಊಟ, ನೀರು, ನಿದ್ದೆಯಿಲ್ಲದಿದ್ದರೂ ನಡೆಯುತ್ತಿತ್ತು; ಗಣಿತವಿಲ್ಲದೆ ಅವರಿಗೆ ಬದುಕು ಅಸಾಧ್ಯವಾಗಿತ್ತು. ಕೇವಲ 32 ವರ್ಷ ಬದುಕಿದ್ದ ರಾಮಾನುಜನ್ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಕಾರಣ ಅವರೊಳಗಿದ್ದ ಗುರಿಸಾಧನೆಯ ಕಿಚ್ಚು.

‘ದೊಡ್ಡ ಗುರಿಗಳಿಂದ ದೊಡ್ಡ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ. ತಾವು ಕಾಣದ ಗುರಿಯನ್ನು ಜನ ಹೇಗೆ ತಾನೇ ಬೇಧಿಸಿಯಾರು?’ ಎಂದು ಕೇಳುತ್ತಾರೆ ರಾಯ್ ಬೆನೆಟ್. ಅದನ್ನೇ ಸಾವಿರಾರು ವರ್ಷಗಳ ಹಿಂದೆ ದ್ರೋಣಾಚಾರ್ಯರು ತಮ್ಮ ಶಿಷ್ಯರಲ್ಲಿ ಕೇಳಿದ್ದರು. ಮರದ ಮೇಲೆ ಕುಳಿತಿರುವ ಹಕ್ಕಿಯ ಕಣ್ಣಿಗೆ ಗುರಿಯಿಡಲು ಸೂಚಿಸಿದ ಮೇಲೆ ‘ಹೇಳಿ ನಿಮಗೇನು ಕಾಣುತ್ತಿದೆ’ ಎಂದು ಅವರು ಎಲ್ಲರನ್ನೂ ಕೇಳಿದರಂತೆ. ಸುತ್ತಲಿನ ತೋಟ, ಅಲ್ಲಿನ ಮರಗಿಡಗಳು, ಹೂವು, ಹಣ್ಣು, ರೆಂಬೆಕೊಂಬೆ... ಒಬ್ಬೊಬ್ಬರಿಗೆ ಒಂದೊಂದು ಕಂಡರೆ ಅರ್ಜುನ ಮಾತ್ರ ‘ಹಕ್ಕಿಯ ಕಣ್ಣು ಕಾಣಿಸುತ್ತಿದೆ ಗುರುಗಳೆ’ ಎಂದಿದ್ದನಂತೆ. ಅದಕ್ಕೇ ಅವನು ಮುಂದೆ ತ್ರಿಲೋಕಗಳಲ್ಲೂ ಸಾಟಿಯಿಲ್ಲದ ಬಿಲ್ಗಾರ ಎನಿಸಿಕೊಂಡ. ತಾವು ಸಾಧಿಸಬೇಕಿರುವುದು ಏನೆಂದು ಅರ್ಥ ಮಾಡಿಕೊಳ್ಳಲಾಗದವರು ವಾಸ್ತವವಾಗಿ ಸಾಧನೆಯೊಂದನ್ನು ಮಾಡುವುದಾದರೂ ಹೇಗೆ?

ಗುರಿಯಿಲ್ಲದ ಬದುಕು ಸೂತ್ರವಿಲ್ಲದ ಗಾಳಿಪಟದ ಹಾಗೆ, ಹಾಯಿ ಇಲ್ಲದ ದೋಣಿಯ ಹಾಗೆ. ಬಸ್ಸು ಹತ್ತಿ ಕುಳಿತವನಿಗೂ ಎಲ್ಲಿಗೆ ಟಿಕೇಟು ತೆಗೆದುಕೊಳ್ಳಬೇಕು ಎಂದು ತಿಳಿದಿರುತ್ತದೆ. ಇನ್ನು ಬದುಕಿನ ಬಂಡಿ ಏರಿದವನಿಗೆ ಎಲ್ಲಿ ಇಳಿಯಬೇಕು ಎಂಬ ಅರಿವಿಲ್ಲದಿದ್ದರೆ ಹೇಗೆ? ಗುರಿಯ ಅರಿವು ಸಾಧನೆಗೆ ಬಲವನ್ನೂ, ಹುರುಪನ್ನೂ, ಏಕಾಗ್ರತೆಯನ್ನೂ, ಶ್ರದ್ಧೆಯನ್ನೂ ಕೊಡುತ್ತದೆ. ಗುರಿಯಿಲ್ಲದ ಉತ್ಸಾಹ ಕಾಳ್ಗಿಚ್ಚಿಗೆ ಸಮ. ಕಾಡು ಉರಿದು ಬೂದಿಯಾಗುತ್ತದೆಯೇ ಹೊರತು ಒಳ್ಳೆಯದೇನೂ ಆಗುವುದಿಲ್ಲ. ಅರ್ಧ ಆಯಸ್ಸು ಕಳೆದ ಮೇಲೂ ಅನೇಕ ಮಂದಿಗೆ ಜೀವನದಲ್ಲಿ ತಾವೇನು ಮಾಡಬೇಕು ಎಂಬ ಸ್ಪಷ್ಟತೆ ಇರುವುದಿಲ್ಲ. ಹುಟ್ಟಿದ ಮೇಲೆ ಎಲ್ಲರೂ ಸಾಯಲೇಬೇಕು, ಅವರೂ ಒಂದು ದಿನ ಸಾಯುತ್ತಾರೆ. ಒಂದು ಜೀವನದ ಘನತೆ ಅಷ್ಟೇ ಏನು? ಇನ್ನು ಕೆಲವರಿಗೆ ಸಮಸ್ಯೆಗಳೇ ಮುಗಿಯುವುದಿಲ್ಲ. ಜಗತ್ತಿನ ಎಲ್ಲ ಸಮಸ್ಯೆಗಳೂ ತಮಗೊಬ್ಬರಿಗೇ ಬಂದಿದೆ ಎಂದು ಹಲುಬುತ್ತಿರುತ್ತಾರೆ. ಏನಾದರೂ ಸಾಧಿಸಬೇಕು ಎಂಬ ಆಸೆಯೇನೋ ಇದೆ, ಆದರೆ ಈ ಸಮಸ್ಯೆಗಳು ತನ್ನನ್ನು ಬಿಡುವುದಿಲ್ಲ ಎಂಬ ನೆಪ ಹೇಳುತ್ತಾರೆ. ಅವರು ಸಮಸ್ಯೆಗಳ ನಡುವೆಯೇ ಜೀವನ ನೂಕುತ್ತಾ ಅತೃಪ್ತ ಆತ್ಮಗಳಾಗಿಯೇ ಉಳಿಯುತ್ತಾರೆಯೇ ವಿನಾ ಎಂದೂ ಸಂತೃಪ್ತಿ ಕಾಣುವುದೇ ಇಲ್ಲ.

ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು|
ಗುರುತಿಸೊಳಿತಿರುವುದನು ಕೇಡುಗಳ ನಡುವೆ||
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು|
ಹರುಷಕದೆ ದಾರಿಯೆಲೊ- ಮಂಕುತಿಮ್ಮ||
ಸರ್ಕಾರಿ ಬಸ್ಸಲ್ಲಿ ಕುಳಿತ ಬಹುಮಂದಿಯೂ ಚಾಲಕನ ಹಿಂದಿರುವ ಎರಡು ಗೆರೆಗಳ ಭಾಗ್ಯದ ವಿಚಾರವನ್ನು ಓದಿ ತಲೆಕೆರೆದುಕೊಂಡು ಸುಮ್ಮನಾಗುತ್ತಾರೆಯೇ ಹೊರತು ತಮ್ಮ ಹರುಷದ ದಾರಿಯ ಬಗ್ಗೆ ಯೋಚಿಸುವುದೇ ಇಲ್ಲ. ಗುರಿ-ದಾರಿಗಳ ಸ್ಪಷ್ಟ ಅರಿವು ಇಲ್ಲದಿರುವವರು ಜೀವನದಲ್ಲಿ ಯಾವ ನಿಲ್ದಾಣವನ್ನೂ ತಲುಪುವುದಿಲ್ಲ. ‘ತನ್ನ ಕಣ್ಣುಗಳನ್ನು ಗುರಿಯಿಂದ ಕದಲಿಸುವವನು ಮಾತ್ರ ದಾರಿಯಲ್ಲಿ ಅಡೆತಡೆಗಳನ್ನು ಕಾಣುತ್ತಾನೆ’ ಎಂಬ ಜೋಸೆಫ್ ಕಾಸ್ಮಾನ್ ಮಾತು ಇಲ್ಲಿ ನೆನಪಾಗಬೇಕು. ವ್ಯಕ್ತಿಯೊಬ್ಬನಿಗೆ ತನ್ನ ಹಾದಿಯಲ್ಲಿ ಬರೀ ಅಡ್ಡಿ ಆತಂಕಗಳೇ ಕಾಣುತ್ತವೆಂದರೆ ಆತನ ದೃಷ್ಟಿ ಭದ್ರವಾಗಿ ಗುರಿಯ ಮೇಲೆ ನೆಟ್ಟಿಲ್ಲ ಎಂದೇ ಅರ್ಥ.

ಬದುಕಿನಲ್ಲಿ ಸೋತರೆ ತಪ್ಪಲ್ಲ, ಆದರೆ ಸಣ್ಣ ಗುರಿಯನ್ನು ಇಟ್ಟುಕೊಳ್ಳುವುದು ಅಪರಾಧ ಎಂಬ ದಾರ್ಶನಿಕರ ಮಾತು ನಮಗೆ ದೊಡ್ಡ ಪಾಠ. ನಮ್ಮ ಪ್ರಯತ್ನಗಳು ಸುಖಾಸುಮ್ಮನೆ ವ್ಯರ್ಥವಾಗುವುದೇ ಇಲ್ಲ. ಒಂದು ಕಡೆ ಸೋತಂತೆ ಕಂಡರೂ ಅದಕ್ಕಾಗಿ ಹಾಕಿದ ಶ್ರಮ ಇನ್ನೆಲ್ಲೋ ಒಂದು ಕಡೆ ಫಲ ನೀಡಿಯೇ ನೀಡುತ್ತದೆ. ಹತ್ತು ಕಡೆ ಹಳ್ಳ ತೋಡುವುದಕ್ಕಿಂತ ಒಂದೇ ಕಡೆ ಹತ್ತುಕಡೆಯ ಶ್ರಮವನ್ನು ಹಾಕಿದರೆ ನೀರಾದರೂ ದೊರೆತೀತು. ಗುರಿಸಾಧನೆಯ ದಾರಿಯಲ್ಲಿ ಸಣ್ಣಪುಟ್ಟ ಆಕರ್ಷಣೆಗಳು ಎದುರಾಗುವುದು ಸಹಜ. ಅವುಗಳಿಂದ ವಿಚಲಿತರಾಗದ ಗಟ್ಟಿ ಮನಸ್ಸು ಬೇಕು. ಹೆದ್ದಾರಿಯ ತುದಿಯಲ್ಲಿ ಫಲಿತಾಂಶ ಖಚಿತ ಇದೆಯೆಂದು ತಿಳಿದಿರುವಾಗ ಅಡ್ಡದಾರಿಗಳ ಗೊಡವೆಯೇಕೆ?

- ಸಿಬಂತಿ ಪದ್ಮನಾಭ ಕೆ. ವಿ.