ಶನಿವಾರ, ಮೇ 16, 2020

ನಾಳೆಗಾಗಿ ಕಾಯಬೇಡಿ, ಇಂದೇ ಮಾಡಿಬಿಡಿ | ಸರಿ ಎನಿಸಿದ್ದನ್ನು ಮಾಡಲು ಹಿಂಜರಿಕೆ ಬೇಡ

 ಮೇ 16-22, 2020ರ ‘ಬೋಧಿವೃಕ್ಷ’ದಲ್ಲಿ ಪ್ರಕಟವಾದ ಬರೆಹ

ಸಮುದ್ರಸ್ನಾನಕ್ಕೆಂದು ಹೋದವನೊಬ್ಬ ತೆರೆ ಮುಗಿಯಲಿ ಎಂದು ಜೀವಮಾನವಿಡೀ ಕಾದನಂತೆ. ಅತ್ತ ಸ್ನಾನವೂ ಆಗಲಿಲ್ಲ, ಇತ್ತ ಜೀವನದಲ್ಲಿ ಬೇರೇನನ್ನೂ ಮಾಡಲಿಲ್ಲ. ಇದು ಸ್ನಾನಕ್ಕೆ ಹೋದ ಪುಣ್ಯಾತ್ಮನೊಬ್ಬನ ಕಥೆ ಮಾತ್ರ ಅಲ್ಲ. ಹಲವು ಬಾರಿ ನಮ್ಮೆಲ್ಲರದೂ.

ಏನೋ ಒಂದು ಕೆಲಸ ಮಾಡಬೇಕೆಂದುಕೊಂಡಿರುತ್ತೇವೆ. ತಕ್ಷಣಕ್ಕೆ ಆರಂಭಿಸುವುದಿಲ್ಲ. ಬಹುತೇಕ ಬಾರಿ ಮನಸ್ಸಿಗೆ ಬರುವ ಮೊದಲ ಯೋಚನೆಯೇ ‘ನಾಳೆಯೇ ಈ ಕೆಲಸ ಆರಂಭಿಸಬೇಕು’ ಎಂಬುದು. ವಾಸ್ತವವಾಗಿ ಸಮಸ್ಯೆ ಇರುವುದೇ ‘ನಾಳೆ ಆರಂಭಿಸಬೇಕು’ ಎಂಬಲ್ಲೇ. ಈಗಲೇ ಶುರು ಮಾಡಿಬಿಡೋಣ ಎಂದುಕೊಂಡು ಕೆಲಸ ಆರಂಭಿಸುವವ ಅಲ್ಲೇ ಅರ್ಧ ತೇರ್ಗಡೆಯಾಗಿರುತ್ತಾನೆ.
 ಬೋಧಿವೃಕ್ಷ | ಮೇ 16-22, 2020

ಕೆಲವರು ‘ನ್ಯೂ ಇಯರ್ ರೆಸಲ್ಯೂಶನ್’ ಅಥವಾ ‘ಬರ್ತ್‍ಡೇ ರೆಸೊಲ್ಯುಶನ್’ ಮಾಡಿಕೊಳ್ಳುವ ಕ್ರಮ ಇದೆ. ಬೆಳಗ್ಗೆ ಬೇಗನೆ ಏಳುವುದು, ವಾಕ್ ಮಾಡುವುದು, ಯೋಗಾಭ್ಯಾಸ ಆರಂಭಿಸುವುದು, ಕಡಿಮೆ ಊಟ ಮಾಡುವುದು, ತೂಕ ಇಳಿಸಿಕೊಳ್ಳುವುದು, ತಿಂಗಳಿಗೊಂದಾದರೂ ಹೊಸ ಪುಸ್ತಕ ಓದುವುದು, ಸಮಯಕ್ಕೆ ಸರಿಯಾಗಿ ಕಚೇರಿ ತಲುಪುವುದು, ಇತ್ಯಾದಿ ಇತ್ಯಾದಿ. ಸಮಸ್ಯೆ ಯಾವುದೆಂದರೆ ಈ ಎಲ್ಲಾ ಹೇಳಿಕೆಗಳ ಪೂರ್ವದಲ್ಲಿ ‘ಇವತ್ತಿನಿಂದಲೇ’ ಎಂಬ ಪದ ಸೇರಿಸಿಕೊಳ್ಳದಿರುವುದು. ಅವರೇನಿದ್ದರೂ ‘ನಾಳೆಯಿಂದ’ ಆರಂಭಿಸುವವರು. ನಾಳೆ ಗಣಪತಿಗೆ ಮದುವೆ ಎಂಬ ಗಾದೆ ಕೇಳಿದ್ದೀರಲ್ಲ!

ಬದುಕಿನಲ್ಲಿ ಬದಲಾಗಬೇಕು ಎಂಬ ಆಸೆ ಅನೇಕ ಮಂದಿಗೆ ಇರುತ್ತದೆ. ಈ ರೆಸಲ್ಯೂಶನ್‍ಗಳ ಹಿಂದಿನ ಕಾರಣ ಬದಲಾಗಬೇಕು ಎಂಬ ಆಸೆಯೇ. ಬದಲಾವಣೆ ಯಾಕೆ ಸಾಧ್ಯವಾಗುವುದಿಲ್ಲ ಎಂದರೆ ವಾಸ್ತವವಾಗಿ ಅದು ಆರಂಭವೇ ಆಗಿರುವುದಿಲ್ಲ. ಆಮೇಲೆ ಮಾಡೋಣ, ನಾಳೆ ಮಾಡೋಣ, ಇನ್ನೊಮ್ಮೆ ಮಾಡೋಣ, ಈಗ ಮೂಡ್ ಇಲ್ಲ, ಮನಸ್ಸು ಫ್ರೆಶ್ ಇಲ್ಲ, ಇನ್ನೂ ಸಾಕಷ್ಟು ದಿನ ಇದೆ, ಇತ್ಯಾದಿ ನಾವೇ ಸೃಷ್ಟಿಸಿಕೊಳ್ಳುವ ನೂರೆಂಟು ಕಾರಣಗಳಿಂದ ಈ ಬದಲಾಗುವ ಯೋಜನೆ ಅನುಷ್ಠಾನಕ್ಕೇ ಬರುವುದಿಲ್ಲ. ಇಂಗ್ಲಿಷಿನಲ್ಲಿ ಈ ವಿಳಂಬ ಪ್ರವೃತ್ತಿಗೆ ‘ಪ್ರೊಕ್ರಾಸ್ಟಿನೇಶನ್’ ಎಂಬ ಚಂದದ ಪದ ಇದೆ.

ಅನೇಕ ಮಂದಿಗೆ ತಾವು ಇಂಥದ್ದನ್ನೆಲ್ಲ ಮಾಡುವವರಿದ್ದೇವೆ ಎಂದು ಮೊದಲೇ ಘೋಷಿಸಿಕೊಳ್ಳುವ ಚಟ ಇರುತ್ತದೆ. ನಾನೊಂದು ಲೇಖನ ಬರೆಯಬೇಕು ಅಂದುಕೊಂಡಿದ್ದೇನೆ, ನಾನೊಂದು ಪುಸ್ತಕ ಬರೆಯಬೇಕು ಅಂದುಕೊಂಡಿದ್ದೇನೆ, ನಾನೊಂದು ಸಿನಿಮಾ ಮಾಡಬೇಕು ಅಂದುಕೊಂಡಿದ್ದೇನೆ, ನಾನೊಂದು ಬಿಸಿನೆಸ್ ಆರಂಭಿಸಬೇಕು ಅಂದುಕೊಂಡಿದ್ದೇನೆ,  ನಾನು ದೊಡ್ಡ ಸಾಧನೆ ಮಾಡಿ ಎಲ್ಲರಿಂದ ಭೇಷ್ ಅನಿಸಿಕೊಳ್ಳುತ್ತೇನೆ- ಎಂದು ಹೇಳುವವರು ಅಲ್ಲಲ್ಲಿ ಸಿಗುತ್ತಾರೆ. ಅವರು ವಾಸ್ತವವಾಗಿ ಯಾವುದನ್ನೂ ಮಾಡುವುದಿಲ್ಲ. ಜಗತ್ತು ಅರ್ಧ ಹಾಳಾಗಿರುವುದೇ ಹೀಗೆ ‘ಅಂದುಕೊಳ್ಳುವವ’ರಿಂದ. ಕುಣಿಯಬೇಕು ಅಂದುಕೊಂಡಾಗೆಲ್ಲ ನೆಲ ಡೊಂಕಾಗಿ ಕಂಡರೆ ಇನ್ನೇನು ಮಾಡಲು ಸಾಧ್ಯ?

‘ಆಡದೆ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮ, ಲೋಕದಲಿ ಆಡಿಯೂ ಮಾಡದವ ಅಧಮ’ ಎಂದು ಸರ್ವಜ್ಞ ಇವರನ್ನೆಲ್ಲ ನೋಡಿಯೇ ಹೇಳಿರುವುದು. ನಿಜವಾದ ಸಾಧಕರು ಮಾತಾಡುವುದು ಕಡಿಮೆ. ಉಳಿದವರಿಗೆ ಮಾತಾಡುವುದೇ ಸಾಧನೆ. ಬಡಾಯಿ ಕಡಿಮೆ ಮಾಡಿದರೆ ಕೆಲಸ ಮಾಡುವುದಕ್ಕೆ ಸಮಯವಾದರೂ ಸಿಗುತ್ತದೆ. ‘ಮನಸಾ ಚಿಂತಿತಂ ಕಾರ್ಯಂ, ವಾಚ್ಯಂ ನೈವ ಪ್ರಕಾಶಯೇತ್’ ಎಂದು ಹಳಬರು ಸುಮ್ಮನೇ ಹೇಳಿದ್ದಾರೆಯೇ?

ಮಾಡಬೇಕು ಅಂದುಕೊಂಡಿದ್ದನ್ನು ಮಾಡಿಯೇ ತೀರಬೇಕು. ಅದು ಆತ್ಮಸಾಕ್ಷಿಗೆ ಒಪ್ಪಿದರೆ, ನಾಲ್ವರು ಹಿರಿಯರಿಗೆ ಸರಿ ಎನ್ನಿಸಿದರೆ, ಮಾಡುವುದಕ್ಕೆ ಏನಡ್ಡಿ? ನಮ್ಮ ಸುತ್ತ ಇರುವ ಎಲ್ಲರಿಗೂ ನಮ್ಮ ನಿರ್ಧಾರಗಳು ಸರಿ ಎನಿಸಬೇಕಾಗಿಲ್ಲ. ಕೊಂಕು ನುಡಿಯುವವರು ಎಲ್ಲ ಕಡೆ, ಎಲ್ಲ ಕಾಲದಲ್ಲೂ ಇರುತ್ತಾರೆ. ನಾವು ನಮ್ಮ ಸಂತೃಪ್ತಿಗಾಗಿ ಮಾಡುವುದೇ ಆಗಿದ್ದರೆ ಬೇರೆಯವರ ಗೊಡವೆ ಏಕೆ? ಕಾರ್ಯವೊಂದನ್ನು ಮಾಡಿ ಪಶ್ಚಾತ್ತಾಪ ಪಡುವವರಿಗಿಂತ ಮಾಡದೆಯೇ ಪಶ್ಚಾತ್ತಾಪಪಡುವವರು ಲೋಕದಲ್ಲಿ ಹೆಚ್ಚಿಗೆ ಇದ್ದಾರಂತೆ.

ಮಾಡಬೇಕು ಅಂದುಕೊಂಡಿರುವ ಕೆಲಸಗಳನ್ನು ಮುಂದೂಡಲು ಪ್ರಮುಖ ಕಾರಣ ಆ ಕೆಲಸದ ಬಗೆಗಿರುವ ಸಣ್ಣ ಆತಂಕ. ಉದಾಹರಣೆಗೆ, ಪರೀಕ್ಷೆಗೆ ಓದಬೇಕು ಅಂದುಕೊಂಡಿರುವ ವಿದ್ಯಾರ್ಥಿ ಓದಲು ಆರಂಭಿಸದೆ ಇರಲು ಪ್ರಮುಖ ಕಾರಣ ತಾನು ಓದಬೇಕೆಂದುಕೊಂಡಿರುವ ವಿಷಯ ಕಠಿಣವಾಗಿದೆ ಮತ್ತು ಆ ಕಾರಣಕ್ಕೆ ಅರ್ಥವಾಗದು ಎಂಬ ಭಾವನೆ. ಲೇಖನ ಬರೆಯಬೇಕು ಅಂದುಕೊಂಡಿರುವ ವ್ಯಕ್ತಿ ಅದನ್ನು ಬರೆಯದೆ ಇರಲು ಕಾರಣ ತಾನು ಚೆನ್ನಾಗಿ ಬರೆಯಲಾರೆ, ಅದು ಓದಿದವರಿಗೆ ಇಷ್ಟವಾಗದಿದ್ದರೆ ಏನು ಗತಿ ಎಂಬ ಅಂತರಂಗದ ಆತಂಕ. ಅನೇಕ ‘ಪರ್ಪೆಕ್ಷನಿಸ್ಟ್’ಗಳಿಗೂ ಈ ಸಮಸ್ಯೆ ಇರುವುದುಂಟು. ಈ ಆತಂಕ ಮೂಡಿದಾಗಲೆಲ್ಲ ‘ಆಮೇಲೆ ಮಾಡಿದರಾಯ್ತು’, ‘ನಾಳೆ ಮಾಡೋಣ’ ಎಂದು ತಮಗೆ ತಾವೇ ಸಬೂಬು ಹೇಳಿಕೊಳ್ಳುವ ಪ್ರಸಂಗ ಬರುತ್ತದೆ. ಅವರಿಗೆ ಫೇಸ್‍ಬುಕ್, ವಾಟ್ಸಾಪುಗಳು ತಾತ್ಕಾಲಿಕ ನೆಮ್ಮದಿ ನೀಡುತ್ತವೆ.

ಬದ್ಧತೆಯೇ ಇಂತಹ ಸಮಸ್ಯೆಗಳಿಗೆ ಇರುವ ಏಕೈಕ ಪರಿಹಾರ. ಮಾಡಬೇಕಿರುವ ಕೆಲಸಗಳನ್ನು ಸಾರ್ವಜನಿಕವಾಗಿ ಘೋಷಿಸಿಕೊಳ್ಳುವುದು ಮುಖ್ಯ ಅಲ್ಲ, ಮಾಡಬೇಕು ಎಂಬ ಅಂತರ್ಯದ ಗಟ್ಟಿತನ ಮುಖ್ಯ. ಇಂಥದ್ದನ್ನೆಲ್ಲ ಮಾಡಿಬಿಡುತ್ತೇನೆ ಎಂದು ಊರಿಗೆ ಡಂಗುರ ಸಾರಲು ನಾವೆಲ್ಲರೂ ರಾಜಕಾರಣಿಗಳಲ್ಲವಲ್ಲ? ಕೆಲವೊಮ್ಮೆ ನಮ್ಮ ನಿರ್ಧಾರಗಳನ್ನು ಸ್ಪಷ್ಟಪಡಿಸಿಕೊಳ್ಳಲು ಯಾರ ಬಳಿಯಲ್ಲಾದರೂ ಹೇಳಿಕೊಳ್ಳಬೇಕಾಗುತ್ತದೆ. ಆಗ ಅಂತರಂಗದ ಮಾತುಗಳಿಗೆ ಕಿವಿಕೊಡಬಲ್ಲ ಒಂದಿಬ್ಬರು ಆಪ್ತರು ಸಿಕ್ಕರೆ ಸಾಕು. ಮನಸ್ಸಿನ ಮಾತುಗಳಿಗೆ ಧ್ವನಿವರ್ಧಕ ಯಾಕೆ?

ಹಾಗೆಂದು ಅಂದುಕೊಂಡ ತಕ್ಷಣ ಕೆಲಸವೊಂದಕ್ಕೆ ಧುಮುಕಿಬಿಡುವುದೂ ಕೆಲವೊಮ್ಮೆ ಆತುರದ ನಿರ್ಧಾರವಾಗುತ್ತದೆ. ಅನುಷ್ಠಾನದ ಹಿಂದೆ ಸಾಕಷ್ಟು ಚಿಂತನೆ ಇರಬೇಕು. ಚಿಂತನೆಗೂ ಮುಂದೂಡುವ ಪ್ರವೃತ್ತಿಗೂ ವ್ಯತ್ಯಾಸ ಇದೆ. ಚಿಂತನೆಯಿಲ್ಲದೆ ಆರಂಭಿಸುವ ಕೆಲಸ ಅನೇಕ ಬಾರಿ ಆರಂಭಶೂರತನವಷ್ಟೇ ಆಗುತ್ತದೆ. ಯಾವುದೋ ಒಂದು ಯೋಚನೆ ಬಂದ ತಕ್ಷಣ ದಬದಬನೆ ಅದನ್ನು ಆರಂಭಿಸಿಬಿಡುವವರು ಇದ್ದಾರೆ. ಅವರು ಎರಡೇ ದಿನದಲ್ಲಿ ನಿವೃತ್ತಿ ಘೋಷಿಸುತ್ತಾರೆ. ಅಂಥವರು ಯಾವುದನ್ನೂ ಪೂರ್ತಿ ಮಾಡುವುದಿಲ್ಲ. ಎಲ್ಲವೂ ಅರ್ಧಂಬರ್ಧವೇ.

ಡೆಡ್‍ಲೈನಿನಲ್ಲಿ ಕೆಲಸ ಮಾಡಬಲ್ಲವರು ಬೆರಳೆಣಿಕೆಯ ವೃತ್ತಿಪರರು ಮಾತ್ರ. ಆದ್ದರಿಂದ ಇನ್ನೂ ಸಮಯವಿದೆ ಎಂಬ ಭಾವನೆಯಿಂದ ಮೊದಲು ಹೊರಬರಬೇಕು. ಸಾಧ್ಯವಾದಷ್ಟೂ ಸದ್ದುಗದ್ದಲವಿಲ್ಲದೆ ಅಂದುಕೊಂಡದ್ದನ್ನು ಮಾಡಿಮುಗಿಸಬೇಕು. ಈ ಕೆಲಸವನ್ನು ಈಗಲೇ ಮಾಡುವುದರಿಂದ ದೊರೆಯಬಹುದಾದ ಯಶಸ್ಸಿನ ಕಲ್ಪನೆಯಿಂದ ಮನಸ್ಸಿಗೆ ಉತ್ಸಾಹವನ್ನು ತಂದುಕೊಳ್ಳಬೇಕು. ನಮ್ಮ ಸ್ನಾನಕ್ಕಾಗಿ ಸಮುದ್ರದ ತೆರೆಗಳು ಕಾಯುವುದಿಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಮೇ 9, 2020

ಅಮ್ಮನಿದ್ದಲ್ಲಿ ಬಡತನವಿಲ್ಲ

ಮೇ 10, 2020ರ 'ವಿಜಯವಾಣಿ'ಯಲ್ಲಿ ಪ್ರಕಟವಾದ ಬರೆಹ

ಅಮ್ಮ ಇಲ್ಲದೆ ಒಂದು ವರ್ಷವೇ ಕಳೆದುಹೋಯಿತು. ಅಮ್ಮ ಇಲ್ಲದ ದಿನಗಳು ಹೇಗಿದ್ದವು? ಹಾಗೆ ಕೇಳಿಕೊಂಡರೆ ಏನೂ ಹೊಳೆಯುವುದಿಲ್ಲ. ಬರೀ ಕತ್ತಲೆಯಷ್ಟೇ ಕಾಣುತ್ತದೆ. ಹೌದು, ಆ ಪ್ರಶ್ನೆಗೆ ಅದಲ್ಲದೆ ಬೇರೆ ಉತ್ತರ ಇರುವುದು ಹೇಗೆ ಸಾಧ್ಯ? ಅಮ್ಮನೆಂಬ ಬೆಳಕು ಆರಿದ ಮೇಲೆ ಉಳಿಯುವುದು ಕತ್ತಲೆಯೇ ಅಲ್ಲವೇ?

'ನಿಮ್ಮ ಮನೆಯವರು ಇದ್ದಕ್ಕಿದ್ದಂತೆ ಆರೆಂಟು ವರ್ಷ ಹೆಚ್ಚಿಗೆ ವಯಸ್ಸಾದವರಂತೆ ಕಾಣುತ್ತಿದ್ದಾರೆ. ಏನಾಗಿದೆ? ಅಂತ ಕೊಲೀಗ್ ಒಬ್ಬರು ಕೇಳಿದರು’ ಅಂತ ಮನೆಯಾಕೆ ಹೇಳಿದಳು. ಆಗಿನ್ನೂ ಅಮ್ಮ ಹೋಗಿ ಒಂದು ತಿಂಗಳಾಗಿದ್ದಿರಬಹುದು ಅಷ್ಟೇ. ನಾನು ನಕ್ಕು ಸುಮ್ಮನಾದೆ. ತಲೆ ಬೋಳು ಮಾಡಿ, ಕ್ಲೀನ್ ಶೇವ್ ಮಾಡಿದ್ದರಿಂದ ಇರಬಹುದು ಅಂತ ಸೇರಿಸಿದೆ. ತಲೆಯ ಜೊತೆಗೆ ಮನಸ್ಸೂ ಬೋಳಾಗಿದ್ದನ್ನು ಬಿಡಿಸಿ ಹೇಳುವುದು ಹೇಗೆ? ಹೇಳದಿದ್ದರೂ ತಿಳಿದುಕೊಳ್ಳುವವಳು ಅವಳು.

ಅಮ್ಮ ತನ್ನೊಂದಿಗೆ ನನ್ನೊಳಗಿನ ಒಂದು ಹಿಡಿ ಪ್ರಕಾಶವನ್ನೂ ಜತೆಗೆ ಒಯ್ದಳೇನೋ ಎಂದು ಆಗಾಗ ಅನಿಸುವುದಿದೆ. ಆದರೆ ಅದು ಭ್ರಮೆಯೆಂದು ಮರುಕ್ಷಣ ಹೇಳುತ್ತದೆ ಒಳಮನಸ್ಸು. ಅಮ್ಮ ತನಗಾಗಿ ಏನನ್ನೂ ಇಟ್ಟುಕೊಂಡವಳಲ್ಲ. ಇನ್ನು ಆಕೆ ಅದಮ್ಯವಾಗಿ ಪ್ರೀತಿಸಿದ್ದ ಜೀವದಿಂದ ಏನನ್ನು ತಾನೇ ತೆಗೆದುಕೊಂಡು ಹೋದಾಳು? ಆದರೂ ಒಂದಿದೆ; ಹೇಗೆಂದ ಹಾಗೆ ಜಾರಿಬಿದ್ದು ಬರಿಗೈಯಲ್ಲಿ ಹೊರಟುಹೋಗಲು ಅದೇನು ಪದ್ಮಪತ್ರದ ಮೇಲಿನ ಜಲಬಿಂದುವಲ್ಲವಲ್ಲ! ಅವಳು ಅಮ್ಮ.

'ಒಬ್ಬನೇ ಬೇಕಾಬಿಟ್ಟಿ ಓಡುತ್ತೀ ಏರುತಗ್ಗು ರಸ್ತೆಯಲ್ಲಿ. ಬಿದ್ದು ಏಟು ಮಾಡಿಕೊಳ್ಳುತ್ತೀಯಾ. ಕೈ ಹಿಡಿದುಕೋ’ ಎಂದು ಎಳೆಯ ವಯಸ್ಸಿನಲ್ಲಿ ಅಮ್ಮ ಗದರಿದರೆ ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಅದೇ ಅಮ್ಮ ಉಪಾಯವಾಗಿ 'ಒಬ್ಬಳೇ ನಡೆಯುವುದಕ್ಕೆ ನಂಗೆ ಭಯವಾಗುತ್ತೆ. ನನ್ನನ್ನೂ ಕೈ ಹಿಡಕೊಂಡು ಕರಕೊಂಡು ಹೋಗು’ ಅಂತ ಹೇಳಿದರೆ ಕೈ ಹಿಡಿದು ಜತೆಗೆ ಸಾಗುತ್ತಿದ್ದೆ. ಅಮ್ಮನಿಗೆ ನಾನು ಜತೆಗಿದ್ದರೆ ಧೈರ್ಯ ಎಂಬ ಮರ್ಜಿ ಬೇರೆ. ಮೊನ್ನೆಮೊನ್ನೆ ಕೊನೆಯಬಾರಿ ಅಮ್ಮನ ಕೈಹಿಡಿದಾಗ ಅವಳ ನಾಡಿ ಮಿಡಿತ ನಿಂತೇಹೋಗಿತ್ತು. ಆದರೆ ಆ ಕೈಯ್ಯಲ್ಲಿ ಇನ್ನೂ ಒಂದಷ್ಟು ಬಿಸುಪು ಉಳಿದಿರುವ ಭಾವ. ಅದು ಕೆಲವೇ ಕೆಲವು ಕ್ಷಣ ಮಾತ್ರ. ’'ಅಮ್ಮ ಇಲ್ಲ’ ಎಂದು ಕಣ್ಣುಕತ್ತಲು ಬಂದು ಅದೇ ಎದೆಯ ಮೇಲೆ ಒಂದು ನಿಮಿಷ ಮುಖವಿಟ್ಟು ಸುಧಾರಿಸಿಕೊಂಡು ಎದ್ದು ಮುಖ ನೋಡಿದರೆ ಆ ಕ್ಷಣವನ್ನು ನಂಬುವುದು ಸಾಧ್ಯವಿರಲಿಲ್ಲ. ಆಕೆಯ ಮುಖದಲ್ಲಿ ಪ್ರಾಣ ಮಿನುಗುತ್ತಿತ್ತು. ಒಂದೆರಡು ಗಂಟೆಯೇ ಕಳೆದಮೇಲೂ ಮುಖ ಕಪ್ಪಿಟ್ಟದ್ದೋ ಊದಿಕೊಂಡದ್ದೋ ಆಗಿರಲಿಲ್ಲ. ಈಗಷ್ಟೇ ಮುಖತೊಳೆದು ಹಣೆಯಲ್ಲಿ ಕಾಸಿನಗಲ ಕುಂಕುಮ ಇಟ್ಟುಕೊಂಡ ತೇಜ ಹಾಗೆಯೇ ಉಳಿದಿತ್ತು.

ಅಮ್ಮನ ಮುಖದಲ್ಲಿ ಹಾಗೊಂದು ಗತ್ತು ಮೊದಲಿನಿಂದಲೂ ಇತ್ತು. 'ನೀನು ಹಿಂದಿನ ಜನ್ಮದಲ್ಲಿ ಯಾವುದೋ ದೊಡ್ಡ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದೆ. ಅದಕ್ಕೂ ಹಿಂದೆ ಯಾವುದಾದರೂ ರಾಜ್ಯದ ಮಹಾರಾಣಿ ಆಗಿದ್ದಿರಬಹುದು’ ಎಂದು ನಾನು ಅವಳ ಕಾಲೆಳೆಯುತ್ತಿದ್ದುದಕ್ಕೆ ಲೆಕ್ಕವೇ ಇಲ್ಲ. ತೀರಾ ನಡೆಯುವುದಕ್ಕಾಗದೆ ಅಮ್ಮ ಕುಳಿತಲ್ಲೇ ಆದ ಮೇಲೂ ದಿನಕ್ಕೊಮ್ಮೆಯಾದರೂ 'ಏನು ಪ್ರಿನ್ಸಿಪಾಲರೇ’ ಎಂದು ಅವಳನ್ನು ತಮಾಷೆಮಾಡದ ದಿನಗಳಿರಲಿಲ್ಲ.

ತವರಿನಲ್ಲೂ ಅಮ್ಮನೇ ಎಲ್ಲ ಮಕ್ಕಳಿಗಿಂತ ಹಿರಿಯವಳಾಗಿದ್ದರಿಂದ ಆಕೆಗೆ ಅಂಥದೊಂದು ಗತ್ತು ಸಹಜವಾಗಿಯೇ ಬೆಳೆದುಬಂದಿರಬೇಕು. ಆ ಗತ್ತಿನಲ್ಲಿ ಅಹಂಕಾರ ಇರಲಿಲ್ಲ. ಅಪಾರ ಸ್ವಾಭಿಮಾನ ಇತ್ತು. ಮೂವತ್ತರ ಆಸುಪಾಸಿನಲ್ಲಿ ಮದುವೆಯಾಗುವವರೆಗೂ ಮನೆಯ ಹಿರಿಮಗಳಾಗಿ ಹಗಲೂ ಇರುಳೂ ತುಂಬಿದ ಮನೆಯ ಕೂಳಿನ ಒನಕೆಗೆ ತೋಳಾಗಿದ್ದ ಅಮ್ಮ ಎಲ್ಲರಿಗೂ ಪ್ರೀತಿಪಾತ್ರ ಜೀವವಾಗಿದ್ದಳೆಂಬುದನ್ನು ಕೇಳಿಬಲ್ಲೆ. ಅಜ್ಜ-ಅಜ್ಜಿಗೂ ಅಮ್ಮನೆಂದರೆ ಒಂದು ಹಿಡಿ ಪ್ರೀತಿ ಜಾಸ್ತಿ ಎಂಬುದನ್ನು ಎಳವೆಯಲ್ಲೂ ನೋಡಿ ಗ್ರಹಿಸಿದ್ದುಂಟು.

ವಿಜಯವಾಣಿ | 10-05-2020 | ಸಿಬಂತಿ ಪದ್ಮನಾಭ
ಮದುವೆಯಾಗಿ ಬಂದ ಮೇಲೂ ಅಮ್ಮನಿಗೇನೂ ಸುಖದ ಸುಪ್ಪತ್ತಿಗೆ ಕಾದಿರಲಿಲ್ಲ. ಕೆಲಸ ಮಾಡಿದರಷ್ಟೇ ಉಂಟು ಆ ದಿನದ ಊಟ. ಚಿಕ್ಕವಯಸ್ಸಿನಿಂದಲೂ ದುಡಿಮೆ ಸಜಹವಾದ್ದರಿಂದ ಅವಳಿಗೆ ಅದೇನು ಅನಿರೀಕ್ಷಿತವೂ ಆತಂಕಕಾರಿಯೂ ಆಗಿರಲಿಲ್ಲ. ಕಷ್ಟಗಳು ಬದುಕಿನ ಭಾಗವಾಗಿದ್ದಾಗ ಹೊಸ ಕಷ್ಟಗಳು ಸವಾಲುಗಳಾಗಿ ಮಾತ್ರ ಕಾಣುತ್ತವಷ್ಟೆ! ಸವಾಲುಗಳನ್ನೇ ಎದುರಿಸಿ ಮುಂದಕ್ಕೆ ನಡೆದವರ ಮುಖ ಮತ್ತು ನಡೆನುಡಿಯಲ್ಲಿ ಉಳಿದವರಿಗಿಂತ ಒಂದಷ್ಟು ಹೆಚ್ಚೇ ಸ್ವಾಭಿಮಾನವೇನೋ? 'ಎಂಟು ತಿಂಗಳ ಬಸುರಿ ನಾನು. ಹಸಿವು ಸ್ವಲ್ಪ ಹೆಚ್ಚೇ. ಹಸಿವಾಗುತ್ತದೆ, ಮೊದಲು ಊಟ ಮಾಡೋಣ ಎಂದರೂ ಕೇಳದೆ ಸುಡುಬಿಸಿಲಿನಲ್ಲಿ ಗೇರುಬೀಜದ ಸಸಿ ನೆಡಿಸಿದ್ದರು ನಿನ್ನ ಅಪ್ಪ’ ಎಂದು ವರ್ಷಕ್ಕೆರಡುಬಾರಿಯಾದರೂ ಅಮ್ಮ ನೆನಪಿಸಿಕೊಳ್ಳದೆ ಇರಲಿಲ್ಲ. ಹಾಗೆ ನೆನಪಿಸಿಕೊಳ್ಳುವಾಗ ಗಿಡಗಳೆಲ್ಲ ಮರಗಳಾಗಿ ಫಸಲಿನಿಂದ ತೊನೆಯುತ್ತಿದ್ದವು. ಪರಿಶ್ರಮ ಫಸಲಾಗಿ ಬೆಳೆದುನಿಂತಾಗ, ಮಕ್ಕಳು ದೊಡ್ಡವರಾಗಿ ಕಷ್ಟದ ದಿನಗಳು ಒಂದಷ್ಟು ಹಗುರವಾದಾಗ ಮನಸ್ಸಿನಲ್ಲಿ ಮೂಡುವ ನೆಮ್ಮದಿಯನ್ನು ಸ್ವಾಭಿಮಾನವೆಂದಲ್ಲದೆ ಬೇರೇ ಯಾವ ಹೆಸರಿನಿಂದಲೂ ಕರೆಯಲಾಗದು.

ದಿನಕ್ಕೆ ಹದಿನೆಂಟು ಬಾರಿ ಜಗಳವಾಡಿಕೊಂಡರೂ ಅಪ್ಪನಿಗೂ ಅಮ್ಮನ ಮೇಲೆ ವಿಶೇಷವಾದ ಗೌರವವಿತ್ತು. ಪ್ರೀತಿಗಿಂತಲೂ ಮಿಗಿಲಾದ ಅಭಿಮಾನ ಅದು. ಕಾಡಿನ ನಡುವಿನ ಬೋಳುಗುಡ್ಡದಲ್ಲಿ ಅಪ್ಪನ ಬೇಸಾಯದ ಗಾಥೆ ಪಲ್ಲವಿಸಿದರೂ ಅದರ ಶ್ರೇಯದ ಅರೆಪಾಲನ್ನು ಅಮ್ಮನಿಗೆ ನೀಡುವುದರಲ್ಲಿ ಅಪ್ಪ ಎಂದೂ ಜಿಪುಣತನ ತೋರಿದ್ದಿಲ್ಲ. ತಾನು ಬಹಳ ಕಷ್ಟಪಟ್ಟೆ ಎಂದು ಅವರೆಂದೂ ಹೇಳಿದ್ದಿಲ್ಲ. 'ನಿಮ್ಮ ಅಮ್ಮ ಪಟ್ಟ ಕಷ್ಟ ದೊಡ್ಡದು’ ಅದೇ ಅವರು ದೊಡ್ಡವರಾದ ಮೇಲೂ ನಮಗೆಲ್ಲ ಕೊಟ್ಟ ಚಿತ್ರ. ಒಂದು ತರಕಾರಿ ಬೀಜವನ್ನೂ ಅಪ್ಪ ಕೈಯ್ಯಾರೆ ಹಾಕುತ್ತಿರಲಿಲ್ಲ. 'ಅಮ್ಮನನ್ನು ಬರಹೇಳು. ನಾನು ಹಾಕಿದರೆ ಬರ್ಕತ್ ಆಗದು. ಅವಳು ಹಾಕಿದರೆ ಒಳ್ಳೆ ತರಕಾರಿ ಆಗುವುದು ಗ್ಯಾರಂಟಿ’ ಎಂದು ಅವರು ಎಷ್ಟೋ ಸಲ ಹೇಳುವುದನ್ನು ಕೇಳಿದ್ದೇನೆ. ಅದು ಅಮ್ಮನ ಮೇಲೆ ಅಪ್ಪ ಇಟ್ಟ ವಿಶ್ವಾಸ.

ವ್ಯವಹಾರಗಳೆಲ್ಲ ಅಪ್ಪನದ್ದೇ ಆದರೂ ಪೇಟೆಗೆ ಹೊರಡುವಾಗ 'ಒಂದು ಹತ್ತು ರುಪಾಯಿ ಉಂಟಾ?’ ಎಂದು ಮತ್ತೆ ಅವರು ಕೇಳುತ್ತಿದ್ದುದು ಅಮ್ಮನನ್ನೇ. ಅಮ್ಮನಲ್ಲಿ ಯಾವುದೋ ಉಳಿಕೆಯ ಒಂದಿಷ್ಟು ಹಣವಾದರೂ ಇದ್ದೀತು ಎಂಬುದವರ ಗಟ್ಟಿ ನಂಬಿಕೆ. ತೋಟದ ಕೆಲಸಕ್ಕೆ ಬರುತ್ತಿದ್ದ ಆಳುಗಳೂ ಸಂಬಳವನ್ನು ಅಮ್ಮನೇ ಕೊಡಬೇಕೆಂದು ಕಾದುಕೂರುತ್ತಿದ್ದುದುಂಟು. 'ಅಕ್ಕ ಎರಡು ರುಪಾಯಿಯಾದರೂ ಕೊಟ್ಟರೆ ಗೆಲುವು ಪಕ್ಕಾ’ ಎಂದು ಆಗಾಗ್ಗೆ ಕೋಳಿ ಅಂಕಕ್ಕೆ ಹೋಗುತ್ತಿದ್ದ ಈಸರಜ್ಜ ಅಮ್ಮನಲ್ಲಿ ಕಾಡಿಬೇಡಿ ಚಿಲ್ಲರೆ ಕಾಸು ತೆಗೆದುಕೊಂಡು ಹೋಗುತ್ತಿದ್ದುದು ಸಾಮಾನ್ಯ.

ಆಗ ನಾನು ಐದನೇ ಕ್ಲಾಸಿನಲ್ಲಿ ಇದ್ದಿರಬೇಕು. ಶಾಲೆಯಲ್ಲಿ ಮೇಷ್ಟ್ರೇ ಒಂದು ಸ್ಟೇಶನರಿ ಅಂಗಡಿ ಇಟ್ಟಿದ್ದರು. ಆಗಷ್ಟೇ ಹೊಸದಾಗಿ ಟಕ್‌ಟಿಕ್ ಪೆನ್ನು ಬಂದಿತ್ತು. ಐದು ರೂಪಾಯಿ ಅದಕ್ಕೆ. ಯಾಕೋ ಅದರ ಸೊಗಸಿಗೆ ಆ ಪೆನ್ನು ನನಗೆ ಬೇಕೇಬೇಕು ಅನಿಸಿತ್ತು. ಐದು ರೂಪಾಯಿ ಎಲ್ಲಿಂದ ತರುವುದು? ಅಮ್ಮನ ದುಂಬಾಲು ಬಿದ್ದಾಯ್ತು. ಅವಳಾದರೂ ಪೆನ್ನಿಗಾಗಿ ಅಷ್ಟೊಂದು ದುಡ್ಡು ಎಲ್ಲಿಂದ ತಂದಾಳು? ಬೇಕೇಬೇಕು ಅಂತ ಅನ್ನಾಹಾರ ತ್ಯಜಿಸಿ ಸತ್ಯಾಗ್ರಹ ಆರಂಭಿಸಿದ್ದೆ. ಅತ್ತು ಕರೆದು ಗಲಾಟೆ ಮಾಡಿದೆ. ಕೊನೆಗೊಂದು ದಿನ ನನ್ನ ಕಾಟ ತಡೆಯಲಾಗದೆ ಅಮ್ಮ ಒಳಗಿಂದ ಒಂದು ಡಬ್ಬಿ ತಂದು ಹೊರಗಿನ ಜಗಲಿಯಲ್ಲಿ ಸುರುವಿ ಅದರಿಂದ ಐದು, ಹತ್ತು ಪೈಸೆಯ ನಾಣ್ಯಗಳನ್ನೆಲ್ಲ ಒಟ್ಟು ಮಾಡಿ 'ತಗೋ’ ಅಂತ ಕೊಟ್ಟಿದ್ದಳು.

ಕುಣಿದಾಡಿಕೊಂಡೇ ಹೋಗಿ ಶಾಲೆಯಿಂದ ಪೆನ್ನು ತೆಗೆದುಕೊಂಡಿದ್ದೆ. ಖರೀದಿಸಿದ ದಿನವೇ ಸಂಜೆಯಾಗುವುದರ ಒಳಗೆ ಆ ಪೆನ್ನನ್ನು ಯಾರೋ ಕ್ಲಾಸಿನಲ್ಲಿ ಕದ್ದುಬಿಟ್ಟಿದ್ದರು. ಆಗ ನನಗೆ ಭಯವಾಯಿತಾ, ಆಘಾತವಾಯಿತಾ, ಬೇಜಾರಾಯಿತಾ, ಮನೆಯಲ್ಲಿ ಯಾವ ರೀತಿ ಅದನ್ನು ತಿಳಿಸಿದೆ - ಈಗ ನೆನಪಿಲ್ಲ. ಆದರೆ 'ದೊಡ್ಡವನಾದ ಮೇಲೆ ನೀನು ಒಂದು ಲೋಡು ಪೆನ್ನು ತಗೋ’ ಎಂದು ಆಕೆ ಸಮಾಧಾನಪಡಿಸಿದ್ದು ಸರಿಯಾಗಿ ನೆನಪಿದೆ. ನಾನು ನಾಲ್ಕಕ್ಷರ ಗೀಚಲು ಕಲಿತದ್ದರ ಹಿಂದೆ ಅಮ್ಮನ ಒಂದು ಲೋಡು ಹರಕೆ ಇತ್ತೇನೋ? ಆದರೆ ಅವಳ ಐದು ರೂಪಾಯಿಯ ಹಿಂದೆ ಇದ್ದಿರಬಹುದಾದ ಸಂಕಟ ಮುಂದೆ ಬಹಳ ವರ್ಷಗಳವರೆಗೆ ನನ್ನನ್ನು ಕಾಡುತ್ತಲೇ ಇತ್ತು. ಇಂದಿಗೂ ಆ ಘಟನೆ ನೆನಪಾದರೆ ಒಳಗೊಳಗೆಯೇ ಬೆಂದು ಹೋಗುತ್ತೇನೆ. ತಿಂಗಳಿಗೆ ಲಕ್ಷ ದುಡಿದರೂ ಅಮ್ಮ ಇಟ್ಟಿದ್ದ ಐದು ರೂಪಾಯಿಯನ್ನು ಮತ್ತೆ ಸಂಪಾದಿಸಲಾರೆ.

ಎಂಎ ಓದುತ್ತಿರುವಂತೆಯೇ ಪಿಟಿಐ ವರದಿಗಾರನ ಹುದ್ದೆಗೆ ಅರ್ಜಿ ಹಾಕಿದ್ದೆ. ಲಿಖಿತ ಪರೀಕ್ಷೆ ಮುಗಿದು ಸಂದರ್ಶನಕ್ಕೆ ದೆಹಲಿಯಿಂದ ಬುಲಾವ್ ಬಂತು. ಹೋಗುವುದು ಸರಿ, ದುಡ್ಡು? ಮತ್ತೆ ಅಮ್ಮನೆಂಬ ಬ್ಯಾಂಕಿನ ಮೇಲೆ ನಂಬಿಕೆ. ದೆಹಲಿಗೆ ಕಳಿಸುವಷ್ಟು ದುಡ್ಡು ಅವಳಿಗಾದರೂ ಎಲ್ಲಿಂದ ಬರಬೇಕು? ಕೊರಳಲ್ಲಿದ್ದ ಕೂದಲೆಳೆಯಂತಹ ಚಿನ್ನದ ಚೈನನ್ನು ತೆಗೆದು ಕೈಯ್ಯಲ್ಲಿಟ್ಟಳು- ನನ್ನಲ್ಲಿರುವುದು ಇಷ್ಟೇ, ನಿನ್ನ ಅಜ್ಜ ಕೊಟ್ಟದ್ದು; ಯಾವುದಾದರೂ ಬ್ಯಾಂಕಿನಲ್ಲಿಟ್ಟು ದುಡ್ಡು ತೆಗೆದುಕೋ ಅಂತ. ನಾನು ಹಾಗೆಯೇ ಮಾಡಿದೆ. ನಾಳೆ ದೆಹಲಿಗೆ ಹೊರಡಬೇಕು ಅನ್ನುವ ಹುಮ್ಮಸ್ಸಿನಲ್ಲಿ ನಾನಿದ್ದರೆ ರಾತ್ರಿ ಅಕ್ಕಿ ಅರೆಯುತ್ತಿದ್ದ ಅಮ್ಮ ಕೇಳಿದಳು: 'ಆ ಕೆಲಸ ಬಿಟ್ಟರಾಗದೇ?’ ಅಂತ. ನನಗೆ ಎದೆ ಧಸಕ್ಕಂತು. ’ಛೇ! ಹೀಗೆ ಕೇಳೋದೇನಮ್ಮ ನೀನು?’ ಅಂತ ನಾನು ಬೇಸರಪಟ್ಟೆ ಆ ಕ್ಷಣ.

ಆ ಕೆಲಸ ಸಿಕ್ಕರೆ ನಮ್ಮ ಕಷ್ಟಗಳೆಲ್ಲ ಕರಗಿಹೋಗುತ್ತವೆ ಎಂಬ ಸಂಭ್ರಮದಲ್ಲಿ ಅಮ್ಮನೂ ಇರಬಹುದೆಂದು ನಾನಂದುಕೊಂಡಿದ್ದರೆ ಅವಳ ಚಿಂತೆ ಬೇರೆಯದೇ ಆಗಿತ್ತು. ಅದನ್ನು ಅರ್ಥ ಮಾಡಿಕೊಂಡಿದ್ದರೆ ಅವಳ ಏಕೈಕ ಬಂಗಾರವನ್ನು ಅಡವಿಡಬೇಕಾಗಿ ಬರುತ್ತಿರಲಿಲ್ಲ ಎಂದು ಆಮೇಲೆ ಎಷ್ಟೋ ಸಲ ಅಂದುಕೊಂಡದ್ದಿದೆ. ಕೊನೆಗೂ ನಾನು ಆ ಉದ್ಯೋಗಕ್ಕೆ ಆಯ್ಕೆಯಾಗಲಿಲ್ಲ. ಅಮ್ಮನ ಅಂತರಂಗಕ್ಕೆ ವಿರುದ್ಧ ಯಶಸ್ಸಾದರೂ ಹೇಗೆ ಒಲಿದೀತು?

ಇಂತಿಪ್ಪ ಸಿರಿವಂತೆ ಅಮ್ಮ ಕೊನೆಯ ಹತ್ತು ವರ್ಷ ನಡೆಯಲೂ ಆಗದೆ ಮಲಗಿದಳು. ಹೊಗೆ ಒಲೆಗೆ ಗಾಳಿ ಊದುತ್ತಲೇ ಬದುಕಿಡೀ ಸವೆಸಿದ್ದ ಅಮ್ಮನಿಗೆ ದೊಡ್ಡ ಮನೆ ಕಟ್ಟಿ ತೋರಿಸಿ ಹೆಮ್ಮೆಪಡುವಂತೆ ಮಾಡಬೇಕೆಂದು ಆಸೆಪಟ್ಟಿದ್ದೆ. ಮನೆ ಕಟ್ಟಿದಾಗ ಅದರೊಳಗೆ ನಾಲ್ಕು ಹೆಜ್ಜೆಯಾದರೂ ನಡೆಯುವ ಶಕ್ತಿಯೇ ಅವಳಿಗೆ ಇರಲಿಲ್ಲ. ತಾನೂ ಎಲ್ಲರ ಹಾಗೆ ಸಂಭ್ರಮದಿಂದ ಹೊಸ ಮನೆ ತುಂಬ ಓಡಾಡಬೇಕು ಎಂಬ ತುಡಿತ ಒಂದೆಡೆ, ಹಾಗೆ ಮಾಡಲು ಸಾಧ್ಯವಾಗದ ಅಸಹಾಯಕತೆ ನಡುವೆ, ಅಮ್ಮನ ಒಟ್ಟು ಮನಸ್ಸೇ ಕೆಲಸ ಮಾಡುವುದು ನಿಲ್ಲಿಸಿತ್ತು. ಎಷ್ಟೇ ಕಾಳಜಿ ಮಾಡಿದರೂ ಕೊನೆಕೊನೆಗೆ ಮಲಗಿದಲ್ಲೇ ಮಲಗಿ ಬೆನ್ನೆಲ್ಲ ಹುಣ್ಣಾಗಿ ಮಾತೂ ಬಾರದೆ ದೀರ್ಘಮೌನಕ್ಕೆ ಜಾರಿಬಿಟ್ಟಳು ಎಲ್ಲರನ್ನೂ ಬಡವರನ್ನಾಗಿಸಿ.

'ದೇವರು ಎಲ್ಲರೊಂದಿಗೂ ಖುದ್ದು ಇರಲಾರ. ಅದಕ್ಕೇ ಅಮ್ಮನನ್ನು ಸೃಷ್ಟಿಸಿದ’ ಎಂಬ ಯಹೂದಿ ಗಾದೆಯೊಂದಿದೆ. ಅಮ್ಮ ವಾತ್ಸಲ್ಯದ ಪ್ರತಿಮೂರ್ತಿ, ತ್ಯಾಗಮಯಿ, ಅಕ್ಕರೆಗೆ ಇನ್ನೊಂದು ಹೆಸರು- ಎಲ್ಲವೂ ನಿಜ. ಆದರೆ ಅದಕ್ಕಿಂತಲೂ ಹೆಚ್ಚು ಅವಳು ಎಲ್ಲರ ಬದುಕಿನ ಬಲುದೊಡ್ಡ ಪಾಠಶಾಲೆ. ಮಾನವಸಹಜ ದೌರ್ಬಲ್ಯಗಳೆಲ್ಲವೂ ಒಬ್ಬ ವ್ಯಕ್ತಿಯಾಗಿ ಅಮ್ಮನಲ್ಲಿರಬಹುದು. ಆದರೆ ಅವಳ ನಿರ್ಧಾರಗಳಲ್ಲಿ ಸ್ವಾರ್ಥವಿಲ್ಲ; ಮಕ್ಕಳಿಗೆ ಒಳ್ಳೆಯದಾಗಲಿ ಎಂಬ ಆಸೆ ಮಾತ್ರ. ಆದ್ದರಿಂದಲೇ ಶಂಕರಾಚಾರ್ಯರ ಮಾತು ಎಂದಿಗೂ ಒಪ್ಪುವಂಥದ್ದೇ: 'ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ’.

- ಸಿಬಂತಿ ಪದ್ಮನಾಭ ಕೆ. ವಿ.