ಮಾಧ್ಯಮಶೋಧ-32, ಹೊಸದಿಗಂತ, ಡಿಸೆಂಬರ್ 27, 2012
ದೆಹಲಿಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ನಂತರದಲ್ಲಿ ನಡೆಯುತ್ತಿರುವ ಘಟನಾವಳಿಗಳು ನಮ್ಮ ಕೇಂದ್ರದ ನಾಯಕರುಗಳ ಅಪ್ರಬುದ್ಧತೆಯನ್ನೇನೋ ಜಗಜ್ಜಾಹೀರು ಮಾಡಿವೆ; ಆದರೆ ಸಮಾಧಾನದ ಸಂಗತಿಯೆಂದರೆ ನಮ್ಮ ಮಾಧ್ಯಮಗಳು, ವಿಶೇಷವಾಗಿ ಪತ್ರಿಕೆಗಳು ಈ ವಿಚಾರದಲ್ಲಿ ಅತ್ಯಂತ ಜವಾಬ್ದಾರಿ ಮತ್ತು ಪ್ರೌಢಿಮೆಯಿಂದ ವರ್ತಿಸಿವೆ.
ದೆಹಲಿಯ ದುರದೃಷ್ಟಕರ ಘಟನೆಯ ಬಳಿಕ ರಾಷ್ಟ್ರ ರಾಜಧಾನಿಯೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಖಂಡನೆ ಮತ್ತು ಪ್ರತಿಭಟನೆಗಳು ನಡೆದಿವೆ ಮತ್ತು ಇವನ್ನು ಮಾಧ್ಯಮಗಳು ಅಷ್ಟೇ ವ್ಯಾಪಕವಾಗಿ, ಸೂಕ್ಷ್ಮವಾಗಿ ವರದಿ ಮಾಡಿವೆ. ದೇಶೀಯ ಮಾಧ್ಯಮಗಳಲ್ಲಷ್ಟೇ ಅಲ್ಲದೆ, ಅನೇಕ ಪ್ರಮುಖ ವಿದೇಶೀ ಮಾಧ್ಯಮಗಳಲ್ಲೂ ಸಾಮೂಹಿಕ ಅತ್ಯಾಚಾರದ ಘಟನೆ ವಿಸ್ತೃತ ವರದಿಗಳ ಪ್ರಕಟಣೆಗೆ ಕಾರಣವಾಗಿದೆ. ಅಮೇರಿಕದ 'ನ್ಯೂಯಾರ್ಕ್ ಟೈಮ್ಸ್’, ಇಂಗ್ಲೆಂಡಿನ 'ದಿ ಗಾರ್ಡಿಯನ್’, 'ದಿ ಇಂಡಿಪೆಂಡೆಂಟ್’ನಂತಹ ಪ್ರಸಿದ್ಧ ಪತ್ರಿಕೆಗಳು ದೆಹಲಿಯ ಘಟನೆಯನ್ನಷ್ಟೇ ವರದಿ ಮಾಡಿದ್ದಲ್ಲದೆ, ಇಡೀ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರವೇ ಮೊದಲಾದ ಮಹಿಳಾ ದೌರ್ಜನ್ಯದ ಘಟನೆಗಳ ಬಗ್ಗೆ ಆತಂಕಭರಿತ ವಿಶ್ಲೇಷಣೆ ನಡೆಸಿವೆ.
ಮಹಿಳೆಯರ ಮೇಲೆ ಅತಿಹೆಚ್ಚು ಅಪರಾಧ ಕೃತ್ಯಗಳು ವರದಿಯಾಗುವ ಭಾರತದ ನಗರಗಳ ಪೈಕಿ ದೆಹಲಿಯೂ ಒಂದು ಎಂದು ವರದಿ ಮಾಡಿರುವ 'ನ್ಯೂಯಾರ್ಕ್ ಟೈಮ್ಸ್’, ರಾಷ್ಟ್ರರಾಜಧಾನಿಯಲ್ಲಿ ಕಳೆದ ವರ್ಷ 600 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಪ್ರಸಕ್ತ ವರ್ಷದಲ್ಲಿ ದಾಖಲಾದ ಪ್ರಕರಣಗಳು ಈ ಸಂಖ್ಯೆಯನ್ನೂ ಮೀರಿವೆ ಎಂದಿದೆ. ಮಹಿಳೆಯರ ಮಟ್ಟಿಗೆ ದೆಹಲಿ ಇಡೀ ಭಾರತದಲ್ಲೇ ಅತ್ಯಂತ ಅಪಾಯಕಾರಿ ನಗರ ಎಂದು ಇದೇ 'ನ್ಯೂಯಾರ್ಕ್ ಟೈಮ್ಸ್’ ಕಳೆದ ವರ್ಷ ವರದಿ ಮಾಡಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದನ್ನು ಇಲ್ಲಿ ನೆನೆಯಬಹುದು. ಇಂಗ್ಲೆಂಡಿನ 'ದಿ ಗಾರ್ಡಿಯನ್’ ಪತ್ರಿಕೆಯಂತೂ 'ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ನೂರಾರು ಪುರುಷರು ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ; ಇವರ ಪೈಕಿ 30ಕ್ಕೂ ಹೆಚ್ಚು ಮಂದಿ ಅತ್ಯಾಚಾರದ ಆರೋಪ ಎದುರಿಸುತ್ತಿದ್ದಾರೆ’ ಎಂದು ವರದಿ ಮಾಡಿದೆ.
ಭಾರತದ ರಾಜಕೀಯ ರಂಗ ಮಾಡಿಕೊಳ್ಳಬೇಕಾದ ಆತ್ಮಾವಲೋಕನದ ಅವಶ್ಯಕತೆಯನ್ನು ವಿದೇಶೀ ಮಾಧ್ಯಮಗಳು ಬೊಟ್ಟು ಮಾಡುತ್ತಿರುವಂತೆಯೇ, ನಮ್ಮ ಮಾಧ್ಯಮಗಳೂ ಒಟ್ಟು ಸನ್ನಿವೇಶವನ್ನು ಅತ್ಯಂತ ತಾಳ್ಮೆಯಿಂದ ನಿಭಾಯಿಸಿರುವುದು ಕಂಡುಬರುತ್ತದೆ. ಇಡೀ ದೇಶದ ಆತ್ಮಸಾಕ್ಷಿಯೇ ಪ್ರಶ್ನೆಗೊಳಪಟ್ಟಿರುವಂತೆ ದೊಡ್ಡ ಜನಸಮೂಹ ಈ ಪ್ರತಿಭಟನೆಯಲ್ಲಿ ತೊಡಗಿರುವುದರ ಹಿಂದೆ ನಮ್ಮ ವಿದ್ಯುನ್ಮಾನ, ಮುದ್ರಣ ಹಾಗೂ ಇಂಟರ್ನೆಟ್ ಮಾಧ್ಯಮಗಳ ಪ್ರೇರಣೆ-ಪ್ರಭಾವಗಳೂ ಸಾಕಷ್ಟು ದಟ್ಟವಾಗಿದೆ ಎಂಬುದರಲ್ಲೂ ಎರಡು ಮಾತಿಲ್ಲ.
ಘಟನಾವಳಿಗಳ ಕುರಿತು ವ್ಯಾಪಕ ವರದಿಗಳು ಪ್ರಕಟವಾಗುತ್ತಿರುವಂತೆಯೇ ನಮ್ಮ ಮುಖ್ಯವಾಹಿನಿಯ ಪತ್ರಿಕೆಗಳು ಚಿಂತನಶೀಲ ಹಾಗೂ ವಿಮರ್ಶಾತ್ಮಕ ಸಂಪಾದಕೀಯಗಳನ್ನು ಪ್ರಕಟಿಸುವುದರ ಮೂಲಕ ವೃತ್ತಿಪರತೆಯನ್ನು ಮೆರೆದಿವೆ. ಬಹುತೇಕ ಪತ್ರಿಕೆಗಳು ಒಂದೇ ವಾರದಲ್ಲಿ ಇದೇ ವಿಷಯದ ಬಗ್ಗೆ ಎರಡೆರಡು ಸಂಪಾದಕೀಯಗಳನ್ನು ಬರೆದಿವೆ. ದಿಟ್ಟ ಜನಾಭಿಪ್ರಾಯ ರೂಪಿಸುವ ಕಡೆಗೆ ಪತ್ರಿಕೆಗಳು ತಮ್ಮ ಸಂಪಾದಕೀಯ ಸ್ಥಾನಮಾನವನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಒಳ್ಳೆಯ ನಿದರ್ಶನ.
ದೇಶದ ವಿವಿಧೆಡೆಗಳಿಂದ ನಿರಂತರವಾಗಿ ವರದಿಯಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಪಟ್ಟಿಗೆ ಇದು ಇನ್ನೊಂದು ಸೇರ್ಪಡೆಯಾಗದೆ ತ್ವರಿತ ಕ್ರಮಗಳನ್ನು ಕೈಗೊಳ್ಳಲು ಪ್ರೇರಕವಾಗಬೇಕು ಎಂಬ ಆಶಯವನ್ನು 'ಪ್ರಜಾವಾಣಿ’ ವ್ಯಕ್ತಪಡಿಸಿದೆ. 'ಅತ್ಯಾಚಾರದಂತಹ ಪ್ರಕರಣಗಳಿಗೆ ಪೊಲೀಸರು ಸ್ಪಂದಿಸುವ ರೀತಿಯಲ್ಲೇ ಸುಧಾರಣೆಯಾಗಬೇಕು. ಪ್ರಕರಣ ದಾಖಲು ಮಾಡಿಕೊಳ್ಳುವುದು ಹಾಗೂ ಅತ್ಯಾಚಾರಕ್ಕೊಳಗಾದ ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ತೆಗೆದುಕೊಳ್ಳುವ ಸಮಯದಲ್ಲಿ ಯಾವುದೇ ವಿಳಂಬ ಇರಬಾರದು... ಇಂತಹ ಪ್ರಕರಣಗಳನ್ನು ನಿರ್ವಹಿಸಲು ವಿಶೇಷ ತರಬೇತಿ ಪಡೆದ ಸಂವೇದನಾಶೀಲ ಸಿಬ್ಬಂದಿಯ ನಿಯೋಜನೆ ಅತ್ಯಗತ್ಯ’ ಎಂದಿರುವ ಪತ್ರಿಕೆ 'ಅಪರಾಧಿಗೆ ತ್ವರಿತವಾಗಿ ಶಿಕ್ಷೆಯಾಗುತ್ತದೆ ಎಂಬ ಖಚಿತತೆ ಮರಣದಂಡನೆಗಿಂತಲೂ ಪರಿಣಾಮಕಾರಿ’ ಎಂದು ನೆನಪಿಸಿದೆ.
ದೇಶದಾದ್ಯಂತ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳನ್ನು 'ಕೆಟ್ಟ, ಅಸಮರ್ಥ ಆಡಳಿತ ವ್ಯವಸ್ಥೆಯ ವಿರುದ್ಧದ ಜನತೆಯ ಆಕ್ರೋಶ’ ಎಂದು ಬಣ್ಣಿಸಿರುವ 'ಕನ್ನಡ ಪ್ರಭ’, 'ಇದು ಒಬ್ಬ ಮಹಿಳೆಯ ಮೇಲೆ ನಡೆದ ಅತ್ಯಾಚಾರದ ವಿರುದ್ಧದ ಪ್ರತಿಭಟನೆ ಅಲ್ಲ; ಪ್ರತಿನಿತ್ಯ ದೇಶದ ನಾನಾಭಾಗಗಳಿಂದ ವರದಿಯಾಗುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರದ ಘಟನೆಗಳ ವಿರುದ್ಧ ಹಾಗೂ ಅಂತಹ ಸಂದರ್ಭದಲ್ಲಿ ಪೊಲೀಸರು ತೋರಿಸಿರಬಹುದಾದ ಅಲಕ್ಷ್ಯ, ಉದಾಸೀನ ಮನೋಧರ್ಮದ ವಿರುದ್ಧದ ಪ್ರತಿಭಟನೆ’ ಎಂದಿದೆ.
ಪೊಲೀಸರ ಸರ್ಪಗಾವಲಿರುವ ದೇಶದ ರಾಜಧಾನಿಯಲ್ಲೇ ಮಹಿಳೆಗೆ ಇಂಥ ಸ್ಥಿತಿ ಇರುವುದಾದರೆ ಮಿಕ್ಕ ನಗರಗಳ ಪರಿಸ್ಥಿತಿಯೇನು ಎಂದು 'ವಿಜಯ ಕರ್ನಾಟಕ’ದ ಸಂಪಾದಕೀಯ ಆತಂಕ ವ್ಯಕ್ತಪಡಿಸಿ, ಮಾರುಕಟ್ಟೆ ಸಂಸ್ಕೃತಿಗೆ ಭಾರತ ಬಾಗಿಲು ತೆರೆದುಕೊಂಡುದರ ಅನಿವಾರ್ಯ ಪರಿಣಾಮಗಳ ಪೈಕಿ ಹೆಣ್ಣನ್ನು ಭೋಗದ ವಸ್ತುವನ್ನಾಗಿ, ಕಾಮದ ಗೊಂಬೆಯನ್ನಾಗಿ ನೋಡುವ ಪ್ರವೃತ್ತಿಯೂ ಒಂದು ಎಂದಿದೆ. 'ಯಾರಿಗೂ ಕಾನೂನಿನ ಮತ್ತು ಭದ್ರತೆಯ ಹೊಣೆ ಹೊತ್ತಿರುವವರ ಭಯ ಇಲ್ಲ. ಕಾನೂನಿನ ತೆಕ್ಕೆಯಿಂದ ತಪ್ಪಿಸಿಕೊಳ್ಳುವುದು ಸುಲಭವಾಗಿದೆ. ಅಕಸ್ಮಾತ್ ಕಾನೂನಿನ ತೆಕ್ಕೆಗೆ ಸಿಕ್ಕಿಕೊಂಡರೂ ವಿಚಾರಣೆ ಬೇಗ ಮುಗಿಯುವುದಿಲ್ಲ. ಮುಗಿದರೂ ಶಿಕ್ಷೆ ಕಠಿಣವಾಗಿರುವುದಿಲ್ಲ. ಈ ಕಾರಣಗಳಿಂದಲೂ ಅಪರಾಧಿಗಳು ರಾಜಾರೋಷವಾಗಿ ತಮ್ಮ ದುಷ್ಕೃತ್ಯಗಳನ್ನು ನಡೆಸುತ್ತಲೇ ಇದ್ದಾರೆ’ ಎಂದು ವಿಶ್ಲೇಷಿಸಿದೆ.
ಒಂದೆಡೆ ನೈತಿಕ ಪತನ, ಹೆಚ್ಚುತ್ತಿರುವ ಸ್ವೇಚ್ಛಾಚಾರ ಇಂತಹ ಅನಾಚಾರಗಳಿಗೆ ಕಾರಣವಾಗುತ್ತಿದ್ದರೆ, ಇನ್ನೊಂದೆಡೆ ಕಾನೂನಿನ ಪಾಲನೆಯಲ್ಲಿನ ವೈಫಲ್ಯವೂ ಅತ್ಯಾಚಾರಿಗಳಿಗೆ ಕುಮ್ಮಕ್ಕು ನೀಡುವಂತಾಗಿದೆ ಎಂದಿರುವ 'ಹೊಸದಿಗಂತ’, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ತಮ್ಮ ಅಧಿಕಾರಾವಧಿಯ ಕೊನೆಯ ಭಾಗದಲ್ಲಿ ಗಲ್ಲುಶಿಕ್ಷೆಯಿಂದ ವಿನಾಯಿತಿ ನೀಡಿದ ಅಪರಾಧಿಗಳ ಪೈಕಿ 9 ಮಂದಿ ಅತ್ಯಾಚಾರಿಗಳೂ ಇದ್ದುದನ್ನು ಎತ್ತಿತೋರಿಸಿದೆ. 'ಕಾಂಗ್ರೆಸ್ಸೇತರ ರಾಜ್ಯಗಳಲ್ಲಿ ನಡೆಯುವ ಅಪರಾಧವೊಂದರ ಬಗ್ಗೆ ವಿಶೇಷ ಆಸಕ್ತಿ ತಳೆಯುವ ಕೇಂದ್ರ ಯುಪಿಎ ಸರ್ಕಾರ, ಮಾನವ ಹಕ್ಕು ಗುಂಪು, ರಾಷ್ಟ್ರೀಯ ಮಹಿಳಾ ಆಯೋಗ, ಬುದ್ಧಿಜೀವಿಗಳು ದಿಲ್ಲಿ ಪ್ರಕರಣದಲ್ಲಿ ಅಂತಹ ಕಾಳಜಿ ತೋರುತ್ತಿಲ್ಲ ಯಾಕೆ’ ಎಂದು ಪತ್ರಿಕೆ ಪ್ರಶ್ನಿಸಿದೆ.
ಘಟನೆ ನಡೆದ ತಕ್ಷಣ ಏನು ಮಾಡಬೇಕೋ ಅದನ್ನು ಸರ್ಕಾರ ಮಾಡಲಿಲ್ಲ ಎಂಬುದನ್ನು ಸೂಚಿಸುತ್ತಾ 'ಉದಯವಾಣಿ’, 'ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನ ನಡೆಸಿತೇ ಹೊರತು ಅತ್ಯಾಚಾರಿಗಳಿಗೆ ಆದಷ್ಟು ಬೇಗ ಶಿಕ್ಷೆ ಕೊಡಿಸುವ ಹಾಗೂ ಇನ್ನು ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳುವ ಪ್ರಮಾಣಿಕ ಭರವಸೆ ನೀಡಲಿಲ್ಲ’ ಎಂದಿದೆ.
ಸಾಮೂಹಿಕ ಅತ್ಯಾಚಾರದ ವಿರುದ್ಧದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿರುವುದಕ್ಕೆ ಕೇಂದ್ರದ ನಾಯಕರುಗಳೇ ಕಾರಣ ಎಂದು ಬೊಟ್ಟು ಮಾಡಿರುವ 'ದಿ ಹಿಂದೂ’, ನಮ್ಮ ಕೇಂದ್ರದ ನಾಯಕರುಗಳಿಗೆ ಒಂದು ಪ್ರಜಾಸತ್ತಾತ್ಮಕ ಹೋರಾಟವನ್ನು ಅರ್ಥಮಾಡಿಕೊಳ್ಳುವ ಮತ್ತು ನಿಭಾಯಿಸುವ ಸಾಮರ್ಥ್ಯವೇ ಇಲ್ಲ ಎಂದು ಬರೆದಿದೆ. ಯುವಕರಿಗೆ ಸರಿಯಾದ ಮೌಲ್ಯಗಳನ್ನು ಬೋಧಿಸುವಲ್ಲೂ ನಾವು ಎಡವಿದ್ದೇವೆ ಎಂಬ ಅಭಿಪ್ರಾಯವನ್ನು ಪತ್ರಿಕೆ ಇನ್ನೊಂದು ಸಂಪಾದಕೀಯದಲ್ಲಿ ವ್ಯಕ್ತಪಡಿಸಿದೆ.
ನಡೆದಿರುವ ಅಪರಾಧ ಕೃತ್ಯಕ್ಕೆ ಪ್ರತಿಕ್ರಿಯಿಸುವ ಬದಲು ಸರ್ಕಾರ ನಂತರದ ಪ್ರತಿಭಟನೆಗಳಿಗೆ ಪ್ರತಿಕ್ರಿಯಿಸಿದ್ದೇ ಎಲ್ಲ ಅವಘಡಗಳಿಗೆ ಕಾರಣ ಎಂದಿರುವ 'ಸ್ಟೇಟ್ಸ್‌ಮನ್’ ಪತ್ರಿಕೆ, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನೇರವಾಗಿ ಟೀಕಿಸಿದೆ. ಇಪ್ಪತ್ತು ವರ್ಷಗಳಿಂದ ರಾಜಕೀಯದಲ್ಲಿದ್ದರೂ ಅವರಿನ್ನೂ ಒಬ್ಬ ಸರ್ಕಾರಿ ಅಧಿಕಾರಿಯಂತೆ ಇದ್ದಾರೆ; ಜನತೆಯ ಭಾವನೆ ಏನೆಂಬುದನ್ನು ಮನವರಿಕೆ ಮಾಡಿಕೊಡುವುದಕ್ಕೆ ಅವರ ಬಳಿ ಸೂಕ್ತ ಜನರಿಲ್ಲ. ಅವರೇನಿದ್ದರೂ ತಮ್ಮ ಪಕ್ಷದ, ವಿಶೇಷವಾಗಿ ಸೋನಿಯಾ ಗಾಂಧಿ ಮತ್ತು ಆಕೆಯ ಮಗನ ಮಾತುಗಳಿಗೆ ಕಿವಿಗೊಡುತ್ತಾರೆ ಎಂದು 'ಸ್ಟೇಟ್ಸ್‌ಮನ್’ ಬರೆದಿದೆ. ಪ್ರಧಾನಿಯಾಗಲೀ ಗೃಹಸಚಿವರಾಗಲೀ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಯಾವ ಧನಾತ್ಮಕ ಕ್ರಮವನ್ನೂ ಕೈಗೊಂಡಿಲ್ಲ ಎಂದು 'ದಿ ಪಯೋನೀರ್’ ಪತ್ರಿಕೆ ಕುಟುಕಿದೆ.
ಅತ್ಯಾಚಾರ ಮೊಕದ್ದಮೆಗಳನ್ನು ಎದುರಿಸುತ್ತಿರುವ ನಮ್ಮ ಜನಪ್ರತಿನಿಧಿಗಳ ಸಂಖ್ಯೆಯೇ ಈ ಕ್ರೂರ ಅಪರಾಧವನ್ನು ನಾವು ಎಷ್ಟು ಹಗುರವಾಗಿ ತೆಗೆದುಕೊಂಡಿದ್ದೇವೆ ಎಂಬುದರ ನಿದರ್ಶನ ಎಂದು 'ಡೆಕ್ಕನ್ ಹೆರಾಲ್ಡ್’ ಮತ್ತು 'ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗಳು ಬರೆದಿವೆ. ಮಹಿಳೆಯರ ಚುಡಾವಣೆ, ಕೀಟಲೆ ಇತ್ಯಾದಿಗಳು ನಡೆದಾಗಲೇ ಅವನ್ನು ನಾವು ಸಾಮಾನ್ಯ ಘಟನೆಗಳೆಂದು ನೋಡದೆ ಸೂಕ್ತ ಕ್ರಮ ಕೈಗೊಂಡರೆ, ದೊಡ್ಡ ಅನಾಹುತಗಳು ತಪ್ಪುತ್ತವೆ. ಲೈಂಗಿಕ ದೌರ್ಜನ್ಯದ ಕುರಿತು ಮೌನವಾಗಿರುವ ಸಮಾಜ ಅತ್ಯಾಚಾರಕ್ಕೆ ಅನುವುಮಾಡಿಕೊಟ್ಟಂತಾಗುತ್ತದೆ ಎಂದಿದೆ 'ಡೆಕ್ಕನ್ ಹೆರಾಲ್ಡ್’ ಸಂಪಾದಕೀಯ.
ಸಂಪಾದಕೀಯಗಳೇನೋ ಸರಿ, ಇಷ್ಟು ಸಮಯ ಈ ಪತ್ರಿಕೆಗಳೆಲ್ಲ ಏನು ಮಾಡುತ್ತಿದ್ದವು? ಎಂದು ಕೇಳುವ ಸರದಿ ಕೆಲವು ಓದುಗರದ್ದು. ಅವರ ಪ್ರಶ್ನೆ ಪ್ರಾಮಾಣಿಕವಾದದ್ದೇ. ಕಳೆದ ಕೆಲವು ದಿನಗಳಿಂದ ನಮ್ಮ ಪತ್ರಿಕೆಗಳ ತುಂಬಾ ಅತ್ಯಾಚಾರದ ಸುದ್ದಿಗಳು ಕಾಣಿಸುತ್ತಿವೆ. ಟಿವಿ ಚಾನೆಲ್‌ಗಳಲ್ಲೆಲ್ಲ ಇದೇ ವಿಷಯ ಚರ್ಚೆಯಾಗುತ್ತಿದೆ. ಅಂದರೆ ಇದೇ ಮೊದಲ ಬಾರಿಗೆ ಈ ಬಗೆಯ ಪ್ರಕರಣಗಳು ವರದಿಯಾಗುತ್ತಿವೆಯೇ? ಇಲ್ಲ. ಪ್ರತಿದಿನ ಅಲ್ಲೊಂದು ಇಲ್ಲೊಂದು ಪ್ರಕರಣಗಳು ವರದಿಯಾಗುತ್ತಲೇ ಇವೆ. ಅವು ಪತ್ರಿಕೆಗಳ ಯಾವುದೋ ಮೂಲೆಯಲ್ಲಿ ಸಿಂಗಲ್ ಕಾಲಂ ಸುದ್ದಿಯಾಗಿ ಪ್ರಕಟವಾಗುತ್ತಿದ್ದವು. ನಗರ ಪ್ರದೇಶಗಳ ಅಥವಾ ಉದ್ಯೋಗಸ್ಥರಿಗೆ ಸಂಬಂಧಪಟ್ಟ ಪ್ರಕರಣಗಳಾದರೆ ಇನ್ನೊಂದೆರಡು ಕಾಲಂ ಹೆಚ್ಚು ಸಿಗುತ್ತಿತ್ತು. ಇದೀಗ ರಾಷ್ಟ್ರರಾಜಧಾನಿಯಲ್ಲೇ ಘಟನೆ ಸಂಭವಿಸಿ ದೊಡ್ಡ ಸುದ್ದಿಯಾಗಿದೆ, ಜನರೂ ದೊಡ್ಡ ಪ್ರತಿಭಟನೆಯಲ್ಲಿ ತೊಡಗಿದ್ದಾರೆ ಎಂಬರ್ಥದ ಅಸಮಾಧಾನದ ಮಾತುಗಳೂ ಕೇಳಿಬರುತ್ತಿವೆ.
ಈ ಅಸಮಾಧಾನದಲ್ಲೂ ಹುರುಳಿಲ್ಲದಿಲ್ಲ. ಈ ಬಗೆಯ ಘಟನೆಗಳನ್ನು ನೋಡಿದಾಗೆಲ್ಲ ನಮ್ಮ ಅನೇಕ ಮಾಧ್ಯಮಗಳು ಇನ್ನೂ ನಗರ ಕೇಂದ್ರಿತವಾಗಿಯೇ ಇವೆಯೇ ಎಂಬ ಅನುಮಾನ ಮೂಡದಿರುವುದಿಲ್ಲ. ಹಳ್ಳಿಗಾಡಿನ ಒಬ್ಬ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರಕ್ಕೂ ನಗರ ಪ್ರದೇಶದ ಇನ್ನೊಬ್ಬ ಯುವತಿಯ ಮೇಲೆ ನಡೆದ ಅತ್ಯಾಚಾರಕ್ಕೂ ನಮ್ಮ ಮಾಧ್ಯಮಗಳು ಒಂದೇ ರೀತಿಯ ಮಹತ್ವವನ್ನು ನೀಡುತ್ತವೆಯೇ? ಮಹಿಳೆ ನಗರದವಳಾಗಲೀ ಹಳ್ಳೀಗಾಡಿನವಳಾಗಲೀ ಶ್ರೀಮಂತಳಾಗಲೀ ಬಡವಳಾಗಲೀ ಆಕೆಯ ಸ್ವಾಭಿಮಾನ, ಚಾರಿತ್ರ್ಯ, ಘನತೆ ಗೌರವಗಳೆಲ್ಲ ಸಮಾನ ಅಲ್ಲವೇ? ಅಂದ ಮೇಲೆ ಮಾಧ್ಯಮಗಳ ದೃಷ್ಟಿಕೋನದಲ್ಲಿ ಯಾಕೆ ಈ ವ್ಯತ್ಯಾಸ? ವ್ಯತ್ಯಾಸ ಇಲ್ಲ ಎಂದಾದರೆ ದಿನನಿತ್ಯ ದೇಶದ ಮೂಲೆಮೂಲೆಗಳಲ್ಲಿ ಸಂಭವಿಸುತ್ತಿರುವ ಅತ್ಯಾಚಾರದಂತಹ ಮಹಿಳಾ ದೌರ್ಜನ್ಯಗಳು ಯಾಕೆ ಇಷ್ಟು ದೊಡ್ಡ ಸುದ್ದಿಯಾಗುತ್ತಿಲ್ಲ? ಪ್ರತಿಭಟನೆಯ ಅಲೆಗಳನ್ನು ಎಬ್ಬಿಸುತ್ತಿಲ್ಲ? ಇವು ಕೂಡ ಗಂಭೀರ ಪ್ರಶ್ನೆಗಳೇ.
ಮಾಧ್ಯಮಗಳು ಈ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳಬೇಕಾಗಿದೆ. ಅದರರ್ಥ ಈವರೆಗೆ ಈ ದಿಕ್ಕಿನಲ್ಲಿ ಅವು ಏನೂ ಮಾಡಿಲ್ಲ ಎಂದಲ್ಲ. ಸಂದರ್ಭ ಬಂದಾಗೆಲ್ಲ ಅವು ಮಹಿಳೆಯರ ಪರ ಮಾತನಾಡಿವೆ. ಈಗಂತೂ ಅವುಗಳ ಪಾತ್ರ ಒಂದು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಮಾಧ್ಯಮ ಚಳುವಳಿಯ ಈ ಕಾವು ತಕ್ಷಣಕ್ಕೆ ಆರಿಹೋಗಬಾರದು. ಸರ್ಕಾರ ಈ ದಿಕ್ಕಿನಲ್ಲಿ ಸಮರ್ಪಕ ಹೆಜ್ಜೆಗಳನ್ನು ಇಡುವವರೆಗೆ ಅವು ವಿಷಯದ ಬೆನ್ನು ಬಿಡಬಾರದು. ಕಬ್ಬಿಣ ಕಾದಾಗಲೇ ಬಡಿಯಬೇಕು. ಮಾಧ್ಯಮದ ಶಕ್ತಿ ಮತ್ತು ಜನತೆಯ ನಿರ್ಧಾರ ಒಂದಾದರೆ ಪ್ರಜಾಪ್ರಭುತ್ವದಲ್ಲಿ ಎಂತಹ ಬದಲಾವಣೆ ತರಬಹುದು ಎಂದು ತೋರಿಸುವುದಕ್ಕೆ ಇದು ಸಕಾಲ.