ಭಾನುವಾರ, ಜೂನ್ 12, 2016

ಇದು ಯಾವ ಜನ್ಮದ ಮೈತ್ರಿ?

ಜೂನ್ 11-17, 2016ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ನೀವು ಈ ಮೊದಲು ಭೇಟಿ ನೀಡಿರದ ಯಾವುದೋ ಒಂದು ಸ್ಥಳಕ್ಕೆ ಹೋದಾಗ ‘ಅರೆ! ಈ ಜಾಗದಲ್ಲಿ ಹಿಂದೆಂದೋ ನಾನು ಓಡಾಡಿರುವ ಹಾಗಿದೆಯಲ್ಲ?’ ಎಂಬ ಭಾವ ನಿಮ್ಮನ್ನು ಕಾಡಿದ್ದುಂಟೇ? ಇನ್ಯಾವುದೋ ಒಂದು ಹೊಸ ಸನ್ನಿವೇಶ ಎದುರಾದಾಗ ಇಂತಹದೇ ಒಂದು ಘಟನೆ ಹಿಂದೆಯೂ ಒಮ್ಮೆ ಘಟಿಸಿತ್ತಲ್ಲ ಎಂದು ನಿಮಗೆ ಬಲವಾಗಿ ಅನಿಸುದ್ದುಂಟೇ? ಯಾವನೋ ಒಬ್ಬ ಅಪರಿಚಿತ ವ್ಯಕ್ತಿಯನ್ನು ಮೊದಲ ಬಾರಿ ಭೇಟಿಯಾದಾಗ ಈತ ನನಗೆ ತುಂಬ ಹತ್ತಿರದವನು, ಬಹಳ ಬೇಕಾದವನು ಎಂಬ ನವಿರಾದ ಸೆಳೆತವೊಂದು ಹುಟ್ಟಿಕೊಂಡದ್ದುಂಟೇ? ‘ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ!’ ಎಂಬ ಕುವೆಂಪು ಅವರ ಸಾಲುಗಳು ಥಟ್ಟನೆ ಮನದಲ್ಲಿ ಮೂಡಿ ಮೈ ಝುಮ್ಮೆನ್ನಿಸಿದ್ದುಂಟೇ?

ಹೌದೇ ಹೌದೆಂದು ನಿಮ್ಮ ಮನಸ್ಸು ಹೇಳುತ್ತಿದೆಯಾದರೆ ಒಂದು ಕ್ಷಣ ಕಣ್ಮುಚ್ಚಿ ಕುಳಿತುಕೊಂಡು ಧ್ಯಾನಸ್ಥರಾಗಿ. ನಿಮ್ಮ ಪೂರ್ವಿಕರನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿ. ಗರಿಷ್ಠ ಎಷ್ಟು ಮಂದಿಯ ಹೆಸರು ಪಟ್ಟಿಮಾಡಬಲ್ಲಿರಿ? ಅಪ್ಪ-ಅಮ್ಮ, ತಾತ-ಅಜ್ಜಿ, ಮುತ್ತಾತ-ಮುತ್ತಜ್ಜಿ... ಇಷ್ಟು ಮಂದಿಯನ್ನು ಮನಸ್ಸಿಗೆ ತಂದುಕೊಳ್ಳುವಾಗಲೇ ಸುಸ್ತೆದ್ದು ಹೋಗುತ್ತೀರಿ, ಇನ್ನು ಅದರ ಹಿಂದಿನ ಐದೋ ಹತ್ತೋ ತಲೆಮಾರನ್ನೋ ನೆನಪಿಸಿಕೊಳ್ಳುವ ಮಾತು ಅಷ್ಟಕ್ಕೇ ಉಳಿಯಿತು ಅಲ್ಲವೇ?

ನಮ್ಮ ಪೂರ್ವಜರು ಇಂತಹ ಕಡೆ ಇದ್ದರಂತೆ, ಮುತ್ತಾತನ ಕಾಲದಲ್ಲಿ ಅವರು ಇಂತಹ ಕಡೆಗೆ ವಲಸೆ ಬಂದರಂತೆ, ತಾತನ ಕಾಲದಿಂದ ಈಗ ನಾವಿರೋ ಜಾಗದಲ್ಲಿ ಇದ್ದೇವೆ ಎಂದು ನಿಮ್ಮ ಮನೆ ಹಿರಿಯರು ಹೇಳುವುದನ್ನು ನೀವು ಗಮನಿಸಿರಬಹುದು. ಅವರು ಹೇಳುವ ಪೂರ್ವಜರು ಎಷ್ಟು ವರ್ಷ ಹಿಂದಿನವರು? ಒಂದು ಎಂಟುನೂರು ವರ್ಷವೇ? ಹಾಗಾದರೆ ಅದರ ಹಿಂದಿನ ಕಥೆ ಏನು? ಅವರ ತಾತ ಮುತ್ತಾತಂದಿರು ಎಲ್ಲಿದ್ದರು? ಹೇಗಿದ್ದರು? ಅವರ ಕುಟುಂಬದಿಂದ ಒಡೆದ ಕವಲುಗಳು ಇನ್ನೆಲ್ಲಿ ಹಬ್ಬಿ ಪಸರಿಸಿರಬಹುದು? ಅವೆಲ್ಲ ಈಗಲೂ ಜೀವಂತವಾಗಿವೆಯೇ? ಇದ್ದರೆ ಇದೇ ದೇಶದಲ್ಲಿ ಇವೆಯೇ? ದೇಶದ ಗಡಿಗಳನ್ನು ದಾಟಿ ಖಂಡಾಂತರ ವ್ಯಾಪಿಸಿವೆಯೇ? ನಮ್ಮ ಕುಟುಂಬದ ಯಾವುದೋ ಅಜ್ಞಾತ ಬೇರು ಆಫ್ರಿಕಾದಲ್ಲೋ ಚೀನಾದಲ್ಲೋ ಇನ್ನೂ ಉಳಿದುಕೊಂಡಿದೆಯೇ? ಅಲ್ಲೆಲ್ಲೋ ಅರಳಿದ ಹೂವಿನ ಪರಾಗ ಇನ್ಯಾವುದೋ ದೇಶದ ಪುಷ್ಪದ ಮೇಲೆ ಬಿದ್ದು ಹುಟ್ಟಿಕೊಂಡ ಹಣ್ಣು ಕಾಲಾಂತರದಲ್ಲೊಂದು ದಿನ ಧುತ್ತೆಂದು ನಮ್ಮೆದುರು ಬಂದಾಗ ಇದು ‘ಎಮ್ಮ ಮನೆಯಂಗಳದಿ ಬೆಳೆದೊಂದು’ ಫಲವೆಂದು ಅನಿಸಲಾರದೆಂದು ಹೇಗೆ ಹೇಳುವುದು?

ವಿಸ್ಮಯವೆನಿಸುತ್ತಿದೆ ಅಲ್ಲವೇ? ಹೌದು ಈ ಬದುಕೊಂದು ವಿಸ್ಮಯದ ವಂಶವೃಕ್ಷ. ದ್ಯಾವಾ ಪೃಥಿವೀಗಳನ್ನು ಆವರಿಸಿಕೊಂಡಿರುವ ಈ ಹೆಮ್ಮರದ ಮೊತ್ತಮೊದಲ ಬೇರಾಗಲೀ ಕಟ್ಟಕಡೆಯ ಕವಲಾಗಲೀ ಎಲ್ಲಿದೆಯೆಂದು ಹೇಗೆ ತಾನೇ ಹುಡುಕಿಯೇವು! ಹಾಗಂತ ಇದು ಭಾರತೀಯ ನಂಬಿಕೆಗಳ ಪರಂಪರೆಯಲ್ಲಿ ಸಾಗಿಬಂದ ಜನ್ಮಾಂತರದ ಕಥೆಗಿಂತ ಸಂಪೂರ್ಣ ಭಿನ್ನ. ನಾವಿಲ್ಲಿ ಪೂರ್ವಜನ್ಮ, ಮರುಜನ್ಮಗಳ ಬಗ್ಗೆ ಮಾತಾಡುತ್ತಿಲ್ಲ. ಅದೊಂದು ಬೇರೆಯದೇ ಪರಿಕಲ್ಪನೆ. ಭೂಮಿಯ ಮೇಲಿನ ಪ್ರತಿಯೊಂದು ಜೀವಕ್ಕೂ ಜನ್ಮಾಂತರದ ನಂಟಿದೆ ಎಂಬುದೇ ಆ ನಂಬಿಕೆ. ಶ್ರೀಹರಿಯು ಭೂಭಾರಹರಣಕ್ಕಾಗಿ ದಶಾವತಾರಗಳನ್ನು ಎತ್ತಿಬಂದ ಪುರಾಣದ ಕಥೆ ನಮ್ಮ ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಂತೆ ಇದೆ. ಕರ್ಮಫಲದಲ್ಲಿ ನಂಬಿಕೆಯಿರುವ ಬಹುಪಾಲು ಭಾರತೀಯರು ಪೂರ್ವಜನ್ಮ, ಮರುಜನ್ಮಗಳ ಕಥೆಗಳನ್ನು ನಂಬುವುದೂ ಇದೆ. ಅಚ್ಚಣ್ಣಯ್ಯನ ಮಗ ವಿಶ್ವೇಶ್ವರನು ಜೋಯಿಸರ ಮನೆಯಲ್ಲಿ ಕ್ಷೇತ್ರಪಾಲನಾಗಿ ಹುಟ್ಟಿ ಎರಡು ವರ್ಷದವನಿರುವಾಗಲೇ ‘ನನಗೆ ಮದುವೆಯಾಗಿದೆ. ಹಂಡ್ತಿ ಹೆಸ್ರು ವೆಂಕಮ್ಮ. ಒಂದು ಗಂಡು ಮಗೂನೂ ಇದೆ’ ಎಂದು ದಂಗುಹಿಡಿಸುವ ಕಥೆಯುಳ್ಳ ಎಸ್. ಎಲ್. ಭೈರಪ್ಪನವರ ‘ನಾಯಿ ನೆರಳು’ ಕೂಡ ಹೊಸದೊಂದು ಲೋಕಕ್ಕೆ ನಮ್ಮನ್ನು ಕೊಂಡೊಯ್ಯಬಲ್ಲುದು. ಈಗಂತೂ ಜನ್ಮಾಂತರದ ಕಥೆಗಳೆಲ್ಲ ನಮ್ಮ ಟಿವಿ ಚಾನೆಲ್‍ಗಳಿಗೆ ಒಳ್ಳೆಯ ಟಿಆರ್‍ಪಿ ತಂದುಕೊಡುವ ಕಾರ್ಯಕ್ರಮಗಳು!

ಆದರೆ ಇಲ್ಲಿ ಹೇಳುತ್ತಿರುವ ಪೂರ್ವಜರ ಕಥೆ ಜನ್ಮಾಂತರದ ನಂಬಿಕೆಯಲ್ಲ, ವಂಶವಾಹಿನಿಯ ಕವಲುಗಳ ವೈಜ್ಞಾನಿಕ ಹುಡುಕಾಟ. ಕಳೆದ ಇಪ್ಪತ್ತು ವರ್ಷಗಳಿಂದೀಚೆಗೆ ವಂಶವಾಹಿಶಾಸ್ತ್ರ (Genealogy) ದಲ್ಲಿ ಅಭೂತಪೂರ್ವ ಬೆಳವಣಿಗೆ ಆಗಿದೆ, ಹೊಸಹೊಸ ಸಂಶೋಧನೆಗಳು ನಡೆದಿವೆ. ಮಾನವರು ಆಫ್ರಿಕಾ ಖಂಡದಿಂದ ಪೂರ್ವ ಏಷ್ಯಾ ದೇಶಗಳಿಗೆ ನೇರವಾಗಿ ಬಂದವರೆಂದೇ ಕೆಲವು ವರ್ಷಗಳ ಹಿಂದಿನವರೆಗೆ ನಂಬಲಾಗಿತ್ತು. ಆದರೆ ಏಷ್ಯಾದ ಹತ್ತು ರಾಷ್ಟ್ರಗಳಲ್ಲಿ ಈಚೆಗೆ ನಡೆಸಲಾದ ಮಾನವ ಅನುವಂಶೀಯತೆಯ ಪತ್ತೆ ಅಧ್ಯಯನವು ಈ ತಿಳುವಳಿಕೆಯ ದಿಕ್ಕನ್ನೇ ಬದಲಾಯಿಸಿತು. ಅದರ ಪ್ರಕಾರ, ದಕ್ಷಿಣ ಆಫ್ರಿಕಾದಿಂದ ಮಾನವರು ಲಕ್ಷ ವರ್ಷಗಳ ಹಿಂದೆ ಮೊತ್ತಮೊದಲು ವಲಸೆ ಬಂದದ್ದು ಭಾರತಕ್ಕೆ. ಇಲ್ಲಿಂದ ಅವರು ದಕ್ಷಿಣ ಏಷ್ಯಾ ಮತ್ತು ಪೂರ್ವ ಏಷ್ಯಾಗಳಿಗೆ, ಕೊನೆಗೆ ಅಮೇರಿಕಕ್ಕೆ ಪಸರಿಸಿಕೊಂಡರು. ಹಾಗಾಗಿ ಏಷ್ಯಾ ಖಂಡದ ಪ್ರತಿಯೊಬ್ಬರೂ ಭಾರತದೊಂದಿಗೆ ಆನುವಂಶಿಕ ಸಂಬಂಧ ಹೊಂದಿದ್ದಾರೆ ಎಂದು ಆ ಅಧ್ಯಯನವು ಬಹಿರಂಗಪಡಿಸಿತು.

ತಮ್ಮ ಪೂರ್ವಜರ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ಈಚಿನ ವರ್ಷಗಳಲ್ಲಿ ತುಸು ಹೆಚ್ಚೇ ಆಗಿರುವುದು ಒಂದು ಸೋಜಿಗದ ಸಂಗತಿ. ‘ವಂಶ ಎನ್ನುವ ಕಲ್ಪನೆ ನಮ್ಮ ಬೇರು. ನಾವು ಯಾರಿಗೆ ಹುಟ್ಟಿದ್ದು? ಯಾವ ಕ್ಷೇತ್ರದಲ್ಲಿ ಹುಟ್ಟಿದ್ದು? ಕ್ಷೇತ್ರ ಅಂದರೆ ಹೆಣ್ಣು, ಬೇರು ಅಂದರೆ ಬೀಜ. ಈ ಕುರಿತು ಎಲ್ಲರಿಗೂ ಎಲ್ಲ ಸಮಾಜದಲ್ಲೂ ದೇಶಗಳಲ್ಲೂ ಕುತೂಹಲ ಇದೆ’ ಎಂದು ‘ವಂಶವೃಕ್ಷ’ದ ಕರ್ತೃ ಎಸ್.ಎಲ್. ಭೈರಪ್ಪ ಸಂದರ್ಶನವೊಂದರಲ್ಲಿ ಹೇಳಿದ್ದಿದೆ. ಪೂರ್ವಜರ ಕುರಿತಾದ ಆಧುನಿಕರ ಕುತೂಹಲಕ್ಕೆ ಕಾರಣ ಮೇಲೆ ಹೇಳಿರುವ ವಂಶವಾಹಿಶಾಸ್ತ್ರದಲ್ಲಿ ಆಗಿರುವ ವೈಜ್ಞಾನಿಕ ಪ್ರಗತಿ. ಒಂದು ಸಂತತಿಯ ನಿಜವಾದ ಬಾಧ್ಯಸ್ತರು ಯಾರು ಎಂಬುದನ್ನು ಪತ್ತೆಮಾಡುವ ಸಾಫ್ಟ್‍ವೇರ್‍ಗಳು ಅಭಿವೃದ್ಧಿಯಾಗಿರುವುದೂ ಈ ಹೊಸ ಕುತೂಹಲಕ್ಕೆ ಕಾರಣ. ಲೀಗಸಿ ಫ್ಯಾಮಿಲಿ ಟ್ರೀ, ಫ್ಯಾಮಿಲಿ ಟ್ರೀ ಮೇಕರ್, ರೂಟ್ಸ್ ಮ್ಯಾಜಿಕ್ ಎಸೆನ್ಷಿಯಲ್ ಎಂಬ ಸಾಪ್ಟ್‍ವೇರ್‍ಗಳು, ಆನ್ಸಿಸ್ಟರಿ ಡಾಟ್ ಕಾಮ್‍ನಂತಹ ಜಾಲತಾಣಗಳು ಇಂದು ಜೀನಿಯಾಲಜಿ ಅಥವಾ ಪೆಡಿಗ್ರೀಯ ಹುಡುಕಾಟಕ್ಕೆ ಕುತೂಹಲಿಗಳ ಬೆನ್ನಿಗೆ ನಿಂತಿವೆ. ಒಂದು ಮೂಲದ ಪ್ರಕಾರ, ವಂಶವಾಹಿನಿಯ ಅಧ್ಯಯನ ಇಂದು ಅಂತರ್ಜಾಲದ ಅತ್ಯಂತ ಜನಪ್ರಿಯ ಹುಡುಕಾಟಗಳಲ್ಲಿ ಒಂದು.

ವಂಶವೃಕ್ಷದ ಆಳ ಅಗಲಗಳನ್ನು ತಿಳಿದುಕೊಳ್ಳುವಲ್ಲಿ ಇಂದು ಮೂರು ಬಗೆಯ ವೈಜ್ಞಾನಿಕ ವಿಧಾನಗಳು ಪ್ರಚಲಿತದಲ್ಲಿವೆ. ಮೊದಲನೆಯದು, ಅಟೋಸೋಮಲ್ ಡಿಎನ್‍ಎ ಟೆಸ್ಟಿಂಗ್. ಇದು ಮಗುವಿನ ಲಿಂಗ ನಿರ್ಧಾರದಲ್ಲಿ ಪಾತ್ರ ವಹಿಸದ ಇಪ್ಪತ್ತೆರಡು ಜತೆ ವರ್ಣತಂತುಗಳ ಅಧ್ಯಯನ. ತಂದೆ ತಾಯಿಯರಿಂದ ಮತ್ತು ಅವರ ಹಿರೀಕರಿಂದ ಸಮಾನವಾಗಿ ಪ್ರವಹಿಸಿಕೊಂಡು ಬಂದ ಈ ವರ್ಣತಂತುಗಳ ಪರೀಕ್ಷೆ ವಂಶವೃಕ್ಷದ ಬೇರುಗಳ ಹುಡುಕಾಟಕ್ಕೆ ತುಂಬ ಮಖ್ಯ. ಎರಡನೆಯದು, ಮೈಟೋಕಾಂಡ್ರಿಯಲ್ ಡಿಎನ್‍ಎ ಟೆಸ್ಟಿಂಗ್. ಇದು ತಾಯಿಯಿಂದ ಮಗುವಿಗೆ ವರ್ಗಾವಣೆಯಾಗುವ ಅಂಶದ ಪರೀಕ್ಷೆ. ತಾಯಿಯ ಕಡೆಯ ಪೂರ್ವಜರ ಪತ್ತೆಗೆ ಇದು ತುಂಬ ಸಹಕಾರಿ. ಮೂರನೆಯದು, ವೈ ಕ್ರೊಮೋಸೋಮ್ ಟೆಸ್ಟಿಂಗ್. ಇದು ಗಂಡಸಿನಲ್ಲಿ ಮಾತ್ರ ಇರುವ ಇಪ್ಪತ್ಮೂರನೆಯ ವರ್ಣತಂತು ಜೋಡಿಯ ಅಧ್ಯಯನ. ತಂದೆಯ ಕಡೆಯ ಪೂರ್ವಜರ ಪತ್ತೆ ಈ ಪರೀಕ್ಷೆಯಿಂದ ಸಾಧ್ಯ.

ಈ ವೈಜ್ಞಾನಿಕ ವಿಧಾನಗಳಿಗೂ ಸಾಕಷ್ಟು ಇತಿಮಿತಿಗಳಿವೆ ಮತ್ತು ಇವುಗಳಿಂದಾಗಿ ವಂಶವಾಹಿನಿಯ ಚರಿತ್ರೆಯನ್ನು ಹೆಕ್ಕಿ ತೆಗೆಯುವಾಗ ದಾರಿ ತಪ್ಪುವ ಅಪಾಯಗಳೂ ಇವೆ ಎಂಬುದನ್ನು ವಿಜ್ಞಾನಿಗಳೂ ಒಪ್ಪಿಕೊಂಡಿದ್ದಾರೆ. ಆದರೂ ಈ ವಂಶವೃಕ್ಷದ ಕಥೆ ತುಂಬ ರೋಚಕವಾದ್ದು. ಎದುರಿಗೆ ನಿಂತಿರುವ ಆಗಂತುಕನೊಬ್ಬನ ಕುರಿತು ನಮಗೆ ಅರಿವೇ ಇಲ್ಲದಂತೆ ನಮ್ಮ ಮನಸ್ಸು ‘ಇವ ನಮ್ಮವ ಇವ ನಮ್ಮವ’ ಎಂದು ಗುನುಗಿಕೊಂಡರೆ ಅದರಾಚೆಗೆ ನಮ್ಮ ನೆನಪು ಅಥವಾ ತಿಳುವಳಿಕೆಗೆ ಮೀರಿದ ಯಾವುದೋ ಒಂದು ಪುರಾತನ ನಂಟು ಇದ್ದರೂ ಇರಬಹುದು ಎಂಬ ಕಲ್ಪನೆಯೇ ವಿಸ್ಮಯಕಾರಿ.

‘ಎನ್ನ ಒಡಹುಟ್ಟಿದವನೋ ಸಂಬಂಧವೋ ತಿಳಿಯೆನು, ಕರ್ಣನಾರೈ?’ ಎಂದು ಕುರುಕ್ಷೇತ್ರದ ರಣಾಂಗಣದಲ್ಲಿ ಇದ್ದಕಿದ್ದಂತೆ ಅರ್ಜುನ ಮನಸಿಜ ಪಿತನಾದ ಕೃಷ್ಣನನ್ನು ಪಟ್ಟು ಹಿಡಿದು ಕೇಳಿದನಂತೆ. ಕಣ್ಣರಿಯದಿದ್ದರೂ ಕರುಳು ಅರಿಯುತ್ತದೆ ಎಂಬ ಗಾದೆಯ ಹಿಂದೆ ಇರುವುದು ವಂಶವಾಹಿನಿಯ ಕಥೆಯೇ?

ಗುರುವಾರ, ಜೂನ್ 9, 2016

ಚಡ್ಡಿ ಎಂಬ ಬಾಲ್ಯವೂ, ಪ್ಯಾಂಟ್ ಎಂಬ ಯೌವನವೂ

ಜೂನ್ 9, 2016ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

ಬಸವನಹುಳುವಿನಂತೆ ತೆವಳುವ ಪ್ರೈಮರಿ ಹೈಸ್ಕೂಲು ದಿನಗಳೆಲ್ಲ ಸರಸರನೆ ಸರಿದುಹೋಗಿ ಕಾಲೇಜು ಮೆಟ್ಟಿಲು ಹತ್ತುವ ಮುಹೂರ್ತ ಯಥಾಶೀಘ್ರ ಕೂಡಿಬರಲಿ ದೇವರೇ ಎಂದು ನಿತ್ಯವೂ ಬೇಡಿಕೊಳ್ಳುವುದಕ್ಕೆ ನಮಗೆ ಮೂರು ದೊಡ್ಡ ಕಾರಣಗಳಿದ್ದವು. ಮೊದಲನೆಯದು, ಬೆನ್ನಿಗೆ ಮಣಭಾರದ ಚೀಲ ನೇತುಹಾಕಿಕೊಂಡು ಒಂಟೆಗಳಂತೆ ಓಡಾಡುವ ಬದಲು ಎರಡೇ ಎರಡು ಪುಸ್ತಕಗಳನ್ನು ಕೈಯಲ್ಲಿ ಹಿಡಿದುಕೊಂಡು ಸ್ಕೂಲ್ ಹುಡುಗರೆದುರು ಸ್ಟೈಲಾಗಿ ಪೋಸು ಕೊಡಬಹುದು; ಎರಡನೆಯದು, ಚಪ್ಪಲಿಯೂ ಇಲ್ಲದೆ ಬರಿಗಾಲಲ್ಲಿ ಮೈಲುಗಟ್ಟಲೆ ನಡೆಯುವ ಬದಲು ಟ್ರಿನ್ ಟ್ರಿನ್ ಶಬ್ದ ಮಾಡಿಕೊಂಡು ಬೈಸಿಕಲ್ ಮೇಲೆ ರೊಂಯ್ಯನೆ ವಾಯುವೇಗದಲ್ಲಿ ವಿಹರಿಸಬಹುದು; ಮೂರನೆಯದು, ಜೋರಾಗಿ ಗಾಳಿ ಬೀಸಿದರೂ ಧೊಪ್ಪೆಂದು ಕೆಳಗೆ ಬೀಳಬಹುದಾಗಿದ್ದ ಖಾಕಿ ಚಡ್ಡಿಯ ಬದಲಾಗಿ ಉದ್ದುದ್ದನೆಯ ಪ್ಯಾಂಟ್ ಹಾಕಿಕೊಂಡು ಯಾವ ಆಫೀಸರುಗಳಿಗೂ ಕಮ್ಮಿಯಿಲ್ಲದಂತೆ ನಮ್ಮೂರಿನ ಕಿರುದಾರಿಗಳಲ್ಲಿ ಗತ್ತಿನಿಂದ ಹೆಜ್ಜೆ ಹಾಕಬಹುದು.

ಹಗಲು ಇರುಳು ಎಂಬ ಬೇಧವಿಲ್ಲದೆ ಬೇಕಾದ ಹಾಗೆಲ್ಲ ಬೀಳುತ್ತಿದ್ದ ಈ ಕನಸುಗಳಿಗೆ ಕಾರಣ ನಮ್ಮೂರಿನ ಚರಿತ್ರೆಯಲ್ಲೇ ಮೊದಲ ಬಾರಿಗೆ ಹೈಸ್ಕೂಲು ಮುಗಿಸಿ ಕಾಲೇಜು ಸೇರಿದ್ದ ಒಂದಿಬ್ಬರು ಹುಡುಗ ಹುಡುಗಿಯರು. ನಮಗಿಂತ ತಡವಾಗಿ ತಮ್ಮ ಮನೆಗಳಿಂದ ಹೊರಟರೂ ನಮಗಿಂತ ಮೊದಲೇ ಕಾಲೇಜು ಬಿಟ್ಟು ವಾಪಸಾಗುತ್ತಿದ್ದ ಈ ಮಹನೀಯರುಗಳು ನಮಗೆಲ್ಲ ಅತ್ಯಂತ ಕುತೂಹಲದ ಜೀವಿಗಳಾಗಿದ್ದರು. ಅದರಲ್ಲೂ ಅವರ ಮೇಲಿದ್ದ ವಿಶೇಷ ಗೌರವಾದರಗಳಿಗೆ ಕಾರಣ ಅವರು ತೊಡುತ್ತಿದ್ದ ಪ್ಯಾಂಟ್ ಶರ್ಟ್, ಹುಡುಗಿಯರಾದರೆ ಚೂಡಿದಾರ್ ಇಲ್ಲವೇ ಚೆಂದದ ಯೂನಿಫಾರ್ಮ್, ಮತ್ತು ಬ್ಯಾಗಿನ ಹಂಗಿಲ್ಲದೆ ಬರಿಗೈಲಿ ಅವಚಿಕೊಂಡು ಹೋಗುತ್ತಿದ್ದ ಎರಡೋ ಮೂರೋ ಪುಸ್ತಕಗಳು.

ಅಂತೂ ಕಾಲೇಜಿಗೆ ಸೇರುವ ಕಾಲ ಬಂತೇ ಬಂತು. ಅದು ಬಹುನಿರೀಕ್ಷಿತ ಪ್ಯಾಂಟ್ ಭಾಗ್ಯ ಯೋಜನೆ ಜಾರಿಗೊಳ್ಳುವ ಸಮಯ. ಬೂದುಬಣ್ಣದ ಪ್ಯಾಂಟು, ಬೆಳ್ಳನೆಯ ಶರ್ಟೇ ಯೂನಿಫಾರ್ಮ್. ಅದನ್ನು ಹೊಲಿಸಿಕೊಳ್ಳಲು ಊರಾಚೆ ಇರುವ ಟೈಲರ್ ಎಂಬ ಅಪರೂಪದ ವ್ಯಕ್ತಿಯ ಬಳಿಗೆ ಮರುದಿನ ಹೋಗುವುದೆಂದು ಯಾವತ್ತು ನಿಗದಿಯಾಯಿತೋ ಅಲ್ಲಿಂದ ಮತ್ತೆ ಪುನಃ ಕನಸುಗಳ ಮೆರವಣಿಗೆ ಆರಂಭವಾಗಿತ್ತು. ಇಡೀ ಊರಿಗೇ ಅತ್ಯಂತ ಬೇಡಿಕೆಯ ವ್ಯಕ್ತಿಯಾಗಿದ್ದ ನಮ್ಮ ಟೈಲರ್ ಬಾಬು ಯೂನಿಫಾರ್ಮ್ ಹೊಲಿದು ಕೊಡಲು ಏನಿಲ್ಲವೆಂದರೂ ಐದು ಬಾರಿ ಓಡಾಡಿಸಿದ್ದ. ಆದರೂ ಅವನ ಅಂಗಡಿಗೆ ಸ್ನೇಹಿತರ ಜತೆ ಭೇಟಿ ಕೊಡುವುದು ಆಪ್ಯಾಯಮಾನ ವಿಚಾರವಾಗಿತ್ತು. ಆತ ಯೂನಿಫಾರ್ಮ್ ಕೊಡದೇ ಹೋದರೂ ಬೇರೆಯವರಿಗಾಗಿ ಹೊಲಿದು ಅಂಗಡಿಯೆದುರು ನೇತುಹಾಕಿದ್ದ ಗರಿಗರಿ ಪ್ಯಾಂಟ್ ಶರ್ಟ್‌ಗಳನ್ನು ನಮ್ಮದೇ ಎಂಬಂತೆ ಹತ್ತಾರು ನಿಮಿಷ ನೋಡಿ ಕಣ್ತುಂಬಿಕೊಂಡು ಇನ್ನೊಂದು ವಾರ ಕಳೆದರೆ ಇಂಥದ್ದನ್ನು ನಾವೂ ಏರಿಸಿಕೊಂಡು ಸಂಭ್ರಮದಿಂದ ಓಡಾಡಬಹುದೆಂದು ಕನಸು ಕಾಣುತ್ತಾ ವಾಪಸ್ ಹೆಜ್ಜೆ ಹಾಕುವುದು ನಡೆದೇ ಇತ್ತು.

ಕಾಲೇಜು ಆರಂಭದ ಮುನ್ನಾದಿನ ಸಂಜೆ ಯೌವನವೇ ಮೈವೆತ್ತು ಬಂದ ಹಾಗೆ ಪ್ಯಾಂಟ್ ಶರ್ಟ್ ಮನೆಗೆ ಬಂದಿತ್ತು. ಆ ಕಟ್ಟನ್ನು ಲಗುಬಗೆಯಿಂದ ಬಿಚ್ಚಿ ಹೊಸಾ ಇಸ್ತ್ರಿಯಿಂದ ಮಿರುಗುವ ಬಟ್ಟೆಯನ್ನು ನಿಧಾನವಾಗಿ ಸವರಿ, ಆಘ್ರಾಣಿಸಿ, ಎರಡೆರಡು ಬಾರಿ ಹಾಕಿ ತೆಗೆದು ಅದು ಎಲ್ಲ ರೀತಿಯಿಂದಲೂ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಂಡು ಮನೆಮಂದಿಯೆದುರೆಲ್ಲ ಪೆರೇಡ್ ಮಾಡಿದ ಮೇಲೆಯೇ ಮನಸ್ಸಿಗೆ ಸಮಾಧಾನ. ಆದರೂ ಬೆಳಗಾಗುವುದಕ್ಕೆ ಇನ್ನೂ ತಿಂಗಳುಗಟ್ಟಲೆ ಕಾಯಬೇಕೋ ಎಂಬ ತಹತಹ.

ಕಾಲೇಜು ಆರಂಭದ ಒಂದೆರಡು ವಾರದವರೆಗೂ ಇದೇ ಗುಂಗು. ಬಹುತೇಕ ಹುಡುಗರೂ ಅದೇ ಮೊದಲ ಬಾರಿ ಪ್ಯಾಂಟ್ ಏರಿಸಿಕೊಂಡವರಾದರೆ, ಬಹುತೇಕ ಹುಡುಗಿಯರೂ ಅದೇ ಮೊದಲ ಬಾರಿಗೆ ಚೂಡಿದಾರ್ ತೊಟ್ಟಿದ್ದಿರಬೇಕು. ಪ್ಯಾಂಟ್ ಶರ್ಟ್ ಹಾಕಿದ ದೆಸೆಯಿಂದಲೇ ನಾವೆಲ್ಲ ಏಕಾಏಕಿ ಯುವಕರಾಗಿಬಿಟ್ಟಿದ್ದರಿಂದ ಸುತ್ತಲಿನ ಜಗತ್ತೆಲ್ಲ ವರ್ಣಮಯವಾಗಿ ಹೊಸಹೊಸ ಕನಸುಗಳು ಥಟ್ಟನೆ ಹೊರಗಿಣುಕಲಾರಂಭಿಸಿದ್ದವು. ಹುಡುಗರೆಲ್ಲ ಹೈಸ್ಕೂಲಿನ ಸಣ್ಣಮಟ್ಟಿನ ನಾಚಿಕೆಯ ಪೊರೆಯನ್ನು ಕಳಚಿಕೊಂಡು ಅಕ್ಕಪಕ್ಕದ ಡೆಸ್ಕುಗಳತ್ತ ವಾರೆಗಣ್ಣಿನಲ್ಲಿ ನೋಡಬಲ್ಲಷ್ಟು ಧೈರ್ಯವನ್ನು ಹೊಂದುವುದಕ್ಕೂ, ಹುಡುಗಿಯರು ಇನ್ನೂ ಒಂದಿಷ್ಟು ಹೆಚ್ಚೇ ನಾಚಿಕೆ ಹಾಗೂ ಬಿಂಕವನ್ನು ಆವಾಹಿಸಿಕೊಂಡು ಸಣ್ಣಸಣ್ಣ ಗುಂಪುಗಳಲ್ಲಿ ಮಂತ್ರಾಲೋಚನೆ ನಡೆಸುವುದಕ್ಕೂ ಈ ಡ್ರೆಸ್‌ಕೋಡಿನಲ್ಲಾದ ವಿಶೇಷ ಬದಲಾವಣೆಯೇ ಪ್ರಮುಖ ಕಾರಣವಿದ್ದೀತೆಂದು ನನ್ನ ಅನುಮಾನ.

ಆದರೆ ಪ್ರೈಮರಿ-ಹೈಸ್ಕೂಲಿನಿಂದ ಕಾಲೇಜಿಗಾದ ಪ್ರಮೋಶನ್ನಿನಿಂದಾಗಿ ಅನೇಕಾನೇಕ ಸೌಲಭ್ಯಗಳು ನಮಗರಿವಿಲ್ಲದಂತೆಯೇ ಬಿಟ್ಟುಹೋಗಿದ್ದವು. ಕಾಲೇಜಿನ ಕೃಪೆಯಿಂದ ’ದೊಡ್ಡ ಹುಡುಗರಾಗಿದ್ದ’ ನಮಗೆ ಪ್ರೈಮರಿ ಸ್ಕೂಲಿನ ಹುಡುಗರ ಸ್ವಾತಂತ್ರ್ಯ ಇರಲಿಲ್ಲ. ಮೂಗಲ್ಲೂ ಬಾಯಲ್ಲೂ ತಿಂಡಿ ಮುಕ್ಕಿ ಎರಡು ಮೈಲಿ ದೂರ ದಾಪುಗಾಲು ಹಾಕಿ ಮತ್ತೆ ಹನ್ನೆರಡು ಮೈಲಿ ಕೆಂಪು ಬಸ್ಸೆಂಬ ಡಕೋಟಾ ಎಕ್ಸ್‌ಪ್ರೆಸ್‌ನ ಮೆಟ್ಟಿಲ ಮೇಲೆ ನೇತಾಡಿಕೊಂಡು ಪ್ರಯಾಣ ಮಾಡಿ ಮತ್ತೊಂದು ಕಿಲೋಮೀಟರ್ ನಡೆದು ಕಾಲೇಜು ಸೇರುವ ಹೊತ್ತಿಗೆ ತಾರುಣ್ಯದಲ್ಲೇ ಮುದುಕರಾದ ಅನುಭವ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮೇಷ್ಟ್ರ ಗಾದೆ ಅರ್ಥವಾಗತೊಡಗಿದ್ದೂ ಆವಾಗಲೇ.

ಮೊದಲೇ ಮಜಾ ಇತ್ತು ಕಣ್ರೋ ಎಂದು ಹುಡುಗರು ಮಾತಾಡಿಕೊಳ್ಳುತ್ತಿದ್ದುದರ ಹಿಂದೆ ನೂರಾರು ಸುಂದರ ನೆನಪುಗಳಿದ್ದವು: ಕಾಡಿನ ನಡುವೆ ಅಲ್ಲೊಂದು ಇಲ್ಲೊಂದು ಮನೆಗಳ ಮಕ್ಕಳೆಲ್ಲ ಒಬ್ಬೊಬ್ಬರಾಗಿ ಕಾಲುಹಾದಿ ಸೇರಿ ಮಣಭಾರದ ಚೀಲ ಹೊತ್ತು ಕಿಲೋಮೀಟರ್‌ಗಟ್ಟಲೆ ಬಿರಬಿರನೆ ಹಾಕುವ ಬರಿಗಾಲ ಹೆಜ್ಜೆ, ಕವಲು ಹಾದಿಗಳು ಸೇರುವಲ್ಲಿ ಸ್ನೇಹಿತರು ಇನ್ನೂ ಬಂದಿಲ್ಲದಿದ್ದರೆ ಮುಂದಕ್ಕೆ ಹೋದವರ ಗುರುತಿಗಾಗಿ ಅಲ್ಲೊಂದು ಮರಳಿನ ಸರ್ಕಲ್ ಮತ್ತು ಅದರೊಳಗೆ ಒಂದು ಹಿಡಿ ಹಸಿರುಸೊಪ್ಪು, ಶನಿವಾರದ ಅರ್ಧ ದಿನ ಕಾಡಿನಲ್ಲೇ ಮಾಡುವ ಪಿಕ್ನಿಕ್, ನಗರದ ಫಾಸ್ಟ್‌ಫುಡ್‌ಗಳನ್ನು ನಿವಾಳಿಸಿ ಎಸೆಯಬಲ್ಲ ನೆಲ್ಲಿ, ನೇರಳೆ, ಕೇಪುಳ, ಸರೊಳಿ, ಕುಂಟಾಲ, ಮಾವು, ಅಬ್ಳುಕ, ಕೊಟ್ಟೆ ಇನ್ನಿತರ ತರಹೇವಾರಿ ಹೆಸರುಗಳ ರಂಗುರಂಗಿನ ತಾಜಾ ಹಣ್ಣುಗಳು, ಘಮ್ಮೆನ್ನುವ ಹೂಗಳು...

ಧೋ ಎಂದು ಸುರಿವ ಆಷಾಢದ ಮಳೆಗೆ ದಾರಿಗುಂಟ ಹರಿವ ತಂಪು ನೀರಲ್ಲಿ ತಳಂಪಳಂ ಹೆಜ್ಜೆಹಾಕುತ್ತಾ ಬೇಕುಬೇಕೆಂದೇ ಮೈಯೆಲ್ಲ ಒದ್ದೆಯಾಗಿಸಿಕೊಂಡು ಮುಸ್ಸಂಜೆ ಹೊತ್ತು ಮನೆಗೆ ತಲುಪಿ ಅದೇ ಒದ್ದೆ ಮೈಯಲ್ಲಿ ಒಲೆಯೆದುರು ಕುಳಿತು ಅಮ್ಮ ಸುಟ್ಟು ಕೊಡುವ ಹಲಸಿನ ಹಪ್ಪಳ ಮೆಲ್ಲುತ್ತಾ ಬಿಸಿಬಿಸಿ ಕಾಫಿ ಹೀರುವ ಸೌಲಭ್ಯವಂತೂ ಕಾಲೇಜು ದಿನಗಳಲ್ಲಿ ಬರೀ ನೆನಪು ಮಾತ್ರ.

ಕಾಲವೇ ಕೇಳಿಸುತ್ತಿದೆಯಾ?

ಬುಧವಾರ, ಜೂನ್ 1, 2016

ಹಾಜರಾತಿ ಕೊರತೆಯ ಅಡಕತ್ತರಿ

ಜೂನ್ 2, 2016ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಬರೆಹ. ಓದಲು ಇಲ್ಲಿ ಕ್ಲಿಕ್ಕಿಸಿ

ಹಾಜರಾತಿ ಕೊರತೆ ಶೈಕ್ಷಣಿಕ ವಲಯದಲ್ಲಿ ಬಹುಚರ್ಚಿತ ವಿಷಯ. ಪಿಯುಸಿಯಿಂದ ತೊಡಗಿ ಸ್ನಾತಕೋತ್ತರ ಅಧ್ಯಯನದವರೆಗೂ ಹಾಜರಾತಿ ಕೊರತೆಯ ಸಮಸ್ಯೆಯನ್ನು ಬಹು ಆಯಾಮಗಳಿಂದ ವಿಶ್ಲೇಷಿಸಲಾಗುತ್ತಿದೆ. ತರಗತಿಗಳಲ್ಲಿ ಕಡ್ಡಾಯ ಹಾಜರಾತಿ ಎಂಬುದು ಒಂದು ಅಮಾನವೀಯ ಕ್ರಮ ಎಂದೂ, ಇದು ವಿದ್ಯಾರ್ಥಿಗಳ ಸ್ವತಂತ್ರ ಕಲಿಕಾ ಪ್ರವೃತ್ತಿಗೆ ದೊಡ್ಡ ಅಡಚಣೆಯೆಂದೂ ವಾದಿಸುವವರು ಒಂದು ಕಡೆಯಾದರೆ, ಹಾಜರಾತಿ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಲು ತುಂಬ ಅವಶ್ಯಕವೆಂದೂ, ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಗಂಭೀರವಾಗಿ ಪಾಲ್ಗೊಳ್ಳಲು ಅದು ಅನಿವಾರ್ಯ ಎಂದೂ ವಾದಿಸುವವರು ಇನ್ನೊಂದು ಕಡೆ.

ಈ ಎಲ್ಲದರ ನಡುವೆ ಪ್ರತೀವರ್ಷ ಒಂದಷ್ಟು ವಿದ್ಯಾರ್ಥಿಗಳು ಹಾಜರಾತಿ ಕೊರತೆಯ ಕಾರಣದಿಂದ ಪರೀಕ್ಷೆ ಬರೆಯಲು ಅನರ್ಹರಾಗುವುದು, ಅವರು ಕಾಲೇಜುಗಳ ಅಥವಾ ವಿಶ್ವವಿದ್ಯಾನಿಲಯಗಳ ಎದುರು ಧರಣಿ ಕೂರುವುದು, ಸಂಘಟನೆಗಳನ್ನು ಬೆನ್ನಿಗೆ ಕಟ್ಟಿಕೊಳ್ಳುವುದು, ಆತ್ಮಹತ್ಯೆ ಬೆದರಿಕೆ ಹಾಕುವುದು, ಕೆಲವೊಮ್ಮೆ ಈ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗುವುದು, ಪರಿಹಾರಕ್ಕೆ ಕೋರ್ಟ್ ಮೊರೆಹೋಗುವುದು ಇತ್ಯಾದಿಗಳು ನಡೆದೇ ಇವೆ.

ಹಾಜರಾತಿ ಕೊರತೆ ಎದುರಿಸುವ ಬಹುತೇಕ ವಿದ್ಯಾರ್ಥಿಗಳು ನೀಡುವ ಕಾರಣ ತಾವು ನಿಯಮಿತವಾಗಿ ತರಗತಿಗಳಿಗೆ ಹಾಜರಾಗುವ ಪರಿಸ್ಥಿತಿ ಇಲ್ಲ ಎಂದು. ಅವರ ಮಾತಿನಲ್ಲಿ ನಿಜಾಂಶ ಇಲ್ಲದಿಲ್ಲ. ಗ್ರಾಮೀಣ ಹಿನ್ನೆಲೆಯ ಅನೇಕ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣಕ್ಕಿಂತಲೂ ಹೊಟ್ಟೆಪಾಡೇ ಹೆಚ್ಚು ಮುಖ್ಯವಾಗುತ್ತದೆ.

ಅವರಲ್ಲಿ ತುಂಬ ಮಂದಿ ಕೂಲಿಕಾರರ ಇಲ್ಲವೇ ಕಡುಬಡವರ ಮಕ್ಕಳಿದ್ದಾರೆ. ಮನೆಯಲ್ಲಿ ಅಶಕ್ತ ತಂದೆತಾಯಿಯರಿದ್ದು ಒಬ್ಬನೇ ಮಗನೋ ಮಗಳೋ ಆಗಿದ್ದರಂತೂ ಅದೇ ದೊಡ್ಡ ಸಮಸ್ಯೆ. ಅವರಿಗೆ ದುಡಿಮೆ ಅನಿವಾರ್ಯ. ಇಂತಹವರಿಗೆ ಅನೇಕ ಸಲ ಉನ್ನತ ಶಿಕ್ಷಣ ಗಗನ ಕುಸುಮ. ಆದರೂ ಮುಂದೆ ಒಳ್ಳೆ ಉದ್ಯೋಗ ಸಿಗಬಹುದು ಎಂಬ ಆಸೆಯಿಂದ ಕಾಲೇಜು ಸೇರುವವರು ಹಲವರು. ಓದುವ ಆಸೆಯಿದ್ದರೂ ಕೆಲವೊಮ್ಮೆ ದುಡಿಮೆಯೇ ಹೆಚ್ಚು ಅನಿವಾರ್ಯವಾದರೆ ಆಶ್ಚರ್ಯವೇನೂ ಇಲ್ಲ.

ಇಂತಹ ವಿದ್ಯಾರ್ಥಿಗಳನ್ನು ಹಾಜರಾತಿಯ ವಿಷಯದಲ್ಲಿ ಮಾನವೀಯ ದೃಷ್ಟಿಯಿಂದ ನೋಡಬೇಕು ಎಂಬ ಮಾತು ಒಪ್ಪತಕ್ಕದ್ದೇ. ಆದರೆ ಒಂದು ಕುತೂಹಲದ ವಿಷಯ ಹೇಳುತ್ತೇನೆ: ನಾನು ಪಾಠ ಮಾಡುತ್ತಿರುವ ಕಾಲೇಜಿನ ಶೇ. ೯೦ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಬಡತನದ ಮತ್ತು ಗ್ರಾಮೀಣ ಹಿನ್ನೆಲೆಯವರು. ಅನೇಕರು ತಮ್ಮ ಶುಲ್ಕ ತುಂಬಲು ತಾವೇ ದುಡಿಯುವ ಅನಿವಾರ್ಯತೆ ಇರುವವರು. ಅದಕ್ಕಾಗಿ ಅರೆಕಾಲಿಕ ಉದ್ಯೋಗಗಳನ್ನು ಹಿಡಿದವರೂ ಇದ್ದಾರೆ.

ದುಡಿಮೆಯ ಆದಾಯದ ಒಂದು ಪಾಲನ್ನು ತಮ್ಮ ಕುಟುಂಬಕ್ಕೂ ಇನ್ನೊಂದು ಪಾಲನ್ನು ತಮ್ಮ ವಿದ್ಯಾಭ್ಯಾಸಕ್ಕೂ ಬಳಸುವ ನೂರಾರು ವಿದ್ಯಾರ್ಥಿಗಳು ಕಾಣಸಿಗುತ್ತಾರೆ. ವಿಶೇಷವೆಂದರೆ, ಇವರೆಲ್ಲ ಅತ್ಯಂತ ಶಿಸ್ತಿನ ಮತ್ತು ಶ್ರದ್ಧೆಯ ವಿದ್ಯಾರ್ಥಿಗಳು. ಇವರಿಗೆ ಕನಿಷ್ಠ ಹಾಜರಾತಿಯ ಕೊರತೆ ಇಲ್ಲ. ತಮ್ಮ ಕಾಲೇಜಿನ ಸಮಯ ಮತ್ತು ದುಡಿಮೆಯ ಸಮಯವನ್ನು ಅತ್ಯಂತ ಜತನದಿಂದ ಯೋಜಿಸಿಕೊಂಡು ಬದುಕಿನಲ್ಲಿ ಹೇಗಾದರೂ ಮುಂದೆ ಬರಬೇಕೆಂದು ಒದ್ದಾಡುವ ಇವರನ್ನು ಕಂಡಾಗ ಅಭಿಮಾನ ಉಂಟಾಗುತ್ತದೆ.

ಹಾಜರಾತಿ ಕೊರತೆ ಎದುರಿಸುವ ಬಹುತೇಕ ವಿದ್ಯಾರ್ಥಿಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ ಒಂದು ಕುಂಟುನೆಪ ಮಾತ್ರ. ಕಾಲೇಜು ಆವರಣದಲ್ಲೇ ಇದ್ದು ತರಗತಿಗಳಿಗೆ ಹಾಜರಾಗದೆ, ಸ್ನೇಹಿತರ ದಂಡುಕಟ್ಟಿಕೊಂಡು ಬೀದಿ ಸುತ್ತುವ, ಟಾಕೀಸುಗಳಲ್ಲಿ ಕಾಲ ಕಳೆಯುವ ವಿದ್ಯಾರ್ಥಿಗಳಿಗೂ ಪರೀಕ್ಷಾ ಸಮಯ ಸಮೀಪಿಸಿದಾಗ ತಮ್ಮ ಕೌಟುಂಬಿಕ ಹಿನ್ನೆಲೆ ನೆನಪಾಗುವುದನ್ನು ನೋಡಿದಾಗ ಮಾತ್ರ ಅಯ್ಯೋ ಎನಿಸುತ್ತದೆ. ಇಂತಹವರಿಗೆ ಎಲ್ಲ ಸಂಕಷ್ಟಗಳ ನಡುವೆಯೂ ವಿದ್ಯಾಭ್ಯಾಸದ ವಿಷಯದಲ್ಲಿ ಶ್ರದ್ಧೆಯನ್ನು ರೂಢಿಸಿಕೊಂಡಿರುವ ವಿದ್ಯಾರ್ಥಿಗಳು ಮಾದರಿಯಾಗಬೇಕು.

ಕರ್ನಾಟಕ ಶಿಕ್ಷಣ ಕಾಯ್ದೆ 2006ರ ಪ್ರಕಾರ ಪದವಿಪೂರ್ವ ಹಂತದಲ್ಲಿ ಶೇ. 75ರಷ್ಟು ಹಾಜರಾತಿ ಕಡ್ಡಾಯ. ಬಹುತೇಕ ಎಲ್ಲ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಶೇ. 75ರಷ್ಟು ಹಾಜರಾತಿ ಇರಬೇಕೆಂದು ನಿಯಮ ರೂಪಿಸಿವೆ. ವೈದ್ಯಕೀಯ ಕಾರಣಗಳೇ ಮೊದಲಾದ ತೀರಾ ಅನಿವಾರ್ಯ ಸಂದರ್ಭಗಳಿದ್ದಾಗ ಅಭ್ಯರ್ಥಿಗೆ ಮಾನವೀಯ ದೃಷ್ಟಿಯಿಂದ ಶೇ. 5ರಷ್ಟು ವಿನಾಯಿತಿ ನೀಡಲು ಕುಲಪತಿಗಳಿಗೆ ಮಾತ್ರ ಸ್ವವಿವೇಚನೆಯ ಅವಕಾಶವಿದೆ. ನ್ಯಾ| ಜೆ. ಎಂ. ಲಿಂಗ್ಡೋ ಸಮಿತಿ ಕೂಡ ವಿದ್ಯಾರ್ಥಿ ಚುನಾವಣೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಶೇ. 75 ಹಾಜರಾತಿ ಕಡ್ಡಾಯವಾಗಿ ಇರಬೇಕೆಂದು ಶಿಫಾರಸು ಮಾಡಿದೆ. ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡುವುದಕ್ಕೆ ಹಾಜರಾತಿಯಲ್ಲಿ ಕಟ್ಟುನಿಟ್ಟು ಪಾಲಿಸುವುದು ಮುಖ್ಯ ಎಂಬುದನ್ನು ಅನೇಕ ಉಚ್ಚ ನ್ಯಾಯಾಲಯಗಳು, ಭಾರತದ ಸರ್ವೋಚ್ಛ ನ್ಯಾಯಾಲಯವೂ ಮತ್ತೆಮತ್ತೆ ಹೇಳಿವೆ.

'ವಿದ್ಯಾರ್ಥಿಗಳು ತಾರುಣ್ಯ ಸಹಜ ವರ್ತನೆಗಳಿಂದಲೋ, ಅಸೌಖ್ಯದಿಂದಲೋ ತರಗತಿಗಳಿಗೆ ಗೈರುಹಾಜರಾಗುವ ಸಂದರ್ಭ ಇದೆ. ಆದರೆ ಅದಕ್ಕಾಗಿಯೇ ಅವರಿಗೆ ಶೇ. 25ರಷ್ಟು ತರಗತಿಗಳಿಗೆ ಗೈರುಹಾಜರಾಗುವ ಸ್ವಾತಂತ್ರ್ಯ ಇದೆ. ಇನ್ನಷ್ಟು ವಿನಾಯಿತಿ ನೀಡಬೇಕೆಂಬುದು ನ್ಯಾಯ ಸಮ್ಮತ ಅಲ್ಲ. ಈ ಪ್ರವೃತ್ತಿಯಿಂದ ಶ್ರದ್ಧಾವಂತ ವಿದ್ಯಾರ್ಥಿಗಳ ನೈತಿಕತೆ ಮತ್ತು ನಂಬಿಕೆಯನ್ನು ದುರ್ಬಲಗೊಳಿಸಿದಂತಾಗುತ್ತದೆ’ ಎಂದು ತನ್ನ ತೀರ್ಪೊಂದರಲ್ಲಿ ದೆಹಲಿ ಹೈಕೋರ್ಟ್ ಹೇಳಿದೆ.

'ಅಪಾತ್ರರಿಗೆ ಅನುಕಂಪ ತೋರುವ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಕುಂಠಿತಗೊಳಿಸಬಾರದು. ಉಚ್ಚ ನ್ಯಾಯಾಲಯಗಳು ಕೂಡ ಕಾನೂನು ತತ್ವಗಳ ಉಲ್ಲಂಘನೆ ಆಗದ ಹೊರತು ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ ಹಾಗೂ ನಿಯಮಾವಳಿಗಳಲ್ಲಿ ಅನಗತ್ಯ ಮಧ್ಯಪ್ರವೇಶ ಮಾಡಬಾರದು’ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳುತ್ತಲೇ ಬಂದಿದೆ.

ಕಡ್ಡಾಯ ಹಾಜರಾತಿಯ ಅಸ್ತ್ರವನ್ನು ಶಿಕ್ಷಣ ಸಂಸ್ಥೆಗಳು ಮತ್ತು ಅಧ್ಯಾಪಕರು ದುರ್ಬಳಕೆ ಮಾಡುತ್ತಿದ್ದಾರೆ ಎಂಬುದು ಅನೇಕ ವಿದ್ಯಾರ್ಥಿಗಳ ಆರೋಪ. ತಮಗಾಗದ ವಿದ್ಯಾರ್ಥಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಕೆಲವು ಅಧ್ಯಾಪಕರು ಸುಳ್ಳೇ ಹಾಜರಾತಿ ಕೊರತೆ ತೋರಿಸುತ್ತಾರೆ ಎಂಬುದು ಕೆಲವರ ದೂರು. ಹಾಜರಾತಿ ಕೊರತೆಯ ನೆಪವೊಡ್ಡಿ ವಿದ್ಯಾರ್ಥಿಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಸಾವಿರಾರು ರೂಪಾಯಿ ಕೀಳುವ ದಂಧೆ ಮಾಡಿಕೊಂಡಿವೆ ಎಂಬುದು ಇನ್ನು ಕೆಲವರ ಆರೋಪ. ಈ ಆರೋಪಗಳೂ ತಳ್ಳಿಹಾಕುವಂಥವಲ್ಲ. ಸಾಕಷ್ಟು ಶೈಕ್ಷಣಿಕ ಅರ್ಹತೆ ಪಡೆದು ಉಪನ್ಯಾಸಕರಾದ ಮೇಲೂ ಎಲ್ಲವನ್ನೂ ಎಲ್ಲರನ್ನೂ ಜಾತಿಯ ಲೆಕ್ಕಾಚಾರದಲ್ಲೇ ಅಳೆದು ತೂಗುವ, ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣಲಾಗದ ಸಂಕುಚಿತ ಮನೋಭಾವದ ಮಂದಿ ನಮ್ಮ ನಡುವೆ ಇದ್ದಾರೆ. ಪ್ರತೀ ವಿಷಯದ ಹಾಜರಾತಿ ಕೊರತೆಗೆ ಇಂತಿಷ್ಟು ದಂಡ ನಿಗದಿ ಮಾಡಿ ವಿದ್ಯಾರ್ಥಿಗಳಿಂದ ಹಣ ಕೀಳುವ ಸಂಸ್ಥೆಗಳೂ ಇವೆ. ಇದಕ್ಕೆ ಪೂರಕವಾಗಿ ಹಾಜರಾತಿ ಕೊರತೆಯಿದ್ದರೆ ಏನಂತೆ ಇಂತಿಷ್ಟು ಹಣ ಚೆಲ್ಲಿದರಾಯಿತು ಎಂಬ ಉಡಾಫೆ ಮನಸ್ಸಿನ ವಿದ್ಯಾರ್ಥಿಗಳೂ ಇದ್ದಾರೆ.

ಆದರೆ ಇಂತಹ ಸಮಸ್ಯೆಗಳ ಪರಿಹಾರದ ದಾರಿಯನ್ನು ನಾವು ಹುಡುಕಬೇಕೇ ಹೊರತು ಹಾಜರಾತಿಯ ಪರಿಕಲ್ಪನೆಯನ್ನೇ ಒಂದು ಅನವಶ್ಯಕ ಮತ್ತು ಅನಾಗರಿಕ ಕ್ರಮವೆಂದು ವಾದಿಸುವುದು ಹಾಸ್ಯಾಸ್ಪದ. ಶಿಕ್ಷಣದ ಘನತೆಯನ್ನು ಎತ್ತಿಹಿಡಿಯಬೇಕಾದರೆ, ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಕುರಿತಾದ ಗಾಂಭೀರ್ಯತೆಯನ್ನೂ ಶ್ರದ್ಧೆಯನ್ನೂ ಬೆಳೆಸಬೇಕಾದರೆ ಉತ್ತಮ ಹಾಜರಾತಿ ಒಂದು ಪ್ರಮುಖ ಮಾರ್ಗ. ತರಗತಿಗೆ ಅನಿವಾರ್ಯವಾಗಿಯಾದರೂ ಹಾಜರಾದಾಗ ವಿದ್ಯಾರ್ಥಿಗಳು ಅನಗತ್ಯ ವಿಚಾರಗಳಲ್ಲಿ ಕಳೆದುಹೋಗುವುದು ತಪ್ಪಿ ಕಲಿಕೆಯಲ್ಲಿ ಒಂದಿಷ್ಟಾದರೂ ಶಿಸ್ತು ಮೂಡಬಹುದು. ಇಷ್ಟವಿಲ್ಲದಿದ್ದರೂ ವಿದ್ಯಾರ್ಥಿಗಳನ್ನು ತರಗತಿಗೆ ಹಾಜರಾಗುವಂತೆ ಮಾಡಿದರೆ ಅವರಿಂದ ತೊಂದರೆಯೇ ಹೆಚ್ಚು ಎಂಬ ಮಾತೂ ಅತಾರ್ಕಿಕವಾದದ್ದು. ಸ್ವತಂತ್ರ ಕಲಿಕೆಯ ವಾತಾವರಣ ಬೆಳೆಸುವುದೆಂದರೆ ವಿದ್ಯಾರ್ಥಿಗಳು ಮನಬಂದಂತೆ ತರಗತಿಗೆ ಹಾಜರಾಗುವ ಅಥವಾ ಹಾಜರಾಗದಿರುವ ಅವಕಾಶ ಮಾಡಿಕೊಡುವುದೇ?

ತರಗತಿಗಳು ವಿದ್ಯಾರ್ಥಿಗಳನ್ನು ಆಕರ್ಷಿಸುವಂತೆ ಗುಣಮಟ್ಟದ ಅಧ್ಯಾಪನ ಮಾಡುವುದು ಉಪನ್ಯಾಸಕರ ಜವಾಬ್ದಾರಿ; ಸಾಕಷ್ಟು ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದು ಶಿಕ್ಷಣ ಸಂಸ್ಥೆಗಳ ಮತ್ತು ಸರ್ಕಾರದ ಹೊಣೆ. ತಮ್ಮದೇ ಬೇಜವಾಬ್ದಾರಿಯಿಂದ ಹಾಜರಾತಿ ಕೊರತೆ ಎದುರಿಸುವ ವಿದ್ಯಾರ್ಥಿಗಳ ಬೆಂಬಲಕ್ಕೆ ಬರುವ ಜಾತಿ ಸಂಘಟನೆಗಳು ದುಡುಕಿನ ಹೋರಾಟ ಮಾಡುವ ಬದಲು ಅಂತಹ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ, ಅವರಿಗೆ ಆರ್ಥಿಕ ಸಹಾಯ ಮಾಡುವ ಕುರಿತು ಯೋಚಿಸುವುದೊಳ್ಳೆಯದು. ಉಳಿದಂತೆ, ಹಾಜರಾತಿ ಕೊರತೆಯನ್ನು ಒಂದು ಸೇಡಿನ ಅಥವಾ ಆದಾಯದ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಅಧ್ಯಾಪಕರ ಮತ್ತು ಕಾಲೇಜುಗಳ ವರ್ತನೆಯನ್ನು ನಿಯಂತ್ರಿಸುವುದಕ್ಕೆ ಬಯೋಮೆಟ್ರಿಕ್ ಹಾಜರಾತಿಯಂತಹ ಕ್ರಮಗಳು ಸಹಕಾರಿಯಾಗಬಲ್ಲವು.

ಮೇ 31 ‘ವಿಶ್ವ ತಂಬಾಕು ರಹಿತ ದಿನ’; ಧೂಮಪಾನಿಗಳೇ, ಆತ್ಮಹತ್ಯೆ ಮಾಡಿಕೊಳ್ಳಬೇಡಿ!

ಮೇ 31, 2016ರ 'ಪ್ರಜಾಪ್ರಗತಿ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

http://balto123.deviantart.com/
ದೃಶ್ಯ ಒಂದು: ಮುದ್ದು ಮಗಳು ಅಂದವಾಗಿ ಚಿತ್ರ ಬರೆಯುತ್ತಿದ್ದಾಳೆ. ಅಪ್ಪ ಕೆಮ್ಮುತ್ತಾ ಒಳಗೆ ಬರುತ್ತಾನೆ. ಮಗಳ ಮುಖ ಬಾಡುತ್ತದೆ. ದೃಶ್ಯ ಎರಡು: ಎಲ್ಲರೂ ಊಟದ ಮೇಜಿನಲ್ಲಿದ್ದಾರೆ. ಅಪ್ಪನ ಕೈಯಲ್ಲಿ ಸಿಗರೇಟು. ಮಗಳ ಮುಖ ಸೊರಗುತ್ತದೆ. ದೃಶ್ಯ ಮೂರು: ಅಪ್ಪ-ಮಗಳಿಬ್ಬರೂ ಜತೆಯಾಗಿ ಕುಳಿತು ಟಿವಿ ನೋಡುತ್ತಿದ್ದಾರೆ. ಅಪ್ಪನ ಕೈಯಲ್ಲಿ ಸಿಗರೇಟು. ಶ್ವಾಸಕೋಶದ ಕ್ಯಾನ್ಸರಿನಿಂದ ಕೆಮ್ಮಿ ಕೆಮ್ಮಿ ವ್ಯಕ್ತಿಯೊಬ್ಬ ನರಳುತ್ತಿರುವುದು ಟಿವಿಯಲ್ಲಿ ಕಾಣಿಸುತ್ತದೆ. ಮಗಳ ಮುಖ ಮತ್ತೆ ಬಾಡುತ್ತದೆ. ಅವಳು ಅಪ್ಪನ ಮುಖ ನೋಡುತ್ತಾಳೆ. ಆತ ಒಮ್ಮೆ ಟಿವಿಯನ್ನೂ ಇನ್ನೊಮ್ಮೆ ಮಗಳ ಮುಖವನ್ನೂ ನೋಡಿ ತಕ್ಷಣ ಅಲ್ಲಿಂದೆದ್ದು ಹೋಗಿ ಸಿಗರೇಟನ್ನು ಎಸೆದು ಬರುತ್ತಾನೆ. ಮಗಳು ಅಪ್ಪನನ್ನು ಪ್ರೀತಿಯಿಂದ ತಬ್ಬಿಕೊಳ್ಳುತ್ತಾಳೆ.

ನೀವು ಯಾವುದೇ ಟಾಕೀಸಿಗೆ ಹೋಗಿರುವಿರಾದರೆ ಸಿನಿಮಾ ಆರಂಭಕ್ಕೂ ಮುನ್ನ ಹೀಗೊಂದು ಜಾಹೀರಾತನ್ನು ಖಂಡಿತ ನೋಡಿರುತ್ತೀರಿ. ಆಮೇಲೆ ಮಧ್ಯಂತರದಲ್ಲಿ ಎದ್ದು ಶೌಚಾಲಯದತ್ತ ಹೋದಿರೋ, ಸಿಗರೇಟಿನ ಹೊಗೆಯ ಮೋಡ ನಿಮ್ಮನ್ನು ಸ್ವಾಗತಿಸುತ್ತದೆ! ಆ ಹೊಗೆಗೆ ನೀವು ಮೂರ್ಛೆ ಹೋಗದಿದ್ದರೆ ಅದೇ ನಿಮ್ಮ ಪುಣ್ಯ. ಕನಿಷ್ಠ ಐವತ್ತು ಮಂದಿ ಯುವಕರು ಹೆಮ್ಮೆಯಿಂದ ಸಿಗರೇಟು ಸೇದುತ್ತಾ ಅದೊಂದು ಸಾಂವಿಧಾನಿಕ ಹಕ್ಕೋ ಎಂಬಹಾಗೆ ಅಡ್ಡಾಡುತ್ತಿರುತ್ತಾರೆ. ಆ ಹೊಗೆಗೆ ‘ಧೂಮಪಾನ ನಿಷೇಧಿಸಿದೆ’ ಎಂಬ ಗೋಡೆಯ ಮೇಲಿನ ಬೋರ್ಡು ಕಾಣಿಸುವುದೇ ಇಲ್ಲ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ಎಂಟು ವರ್ಷಗಳಾದರೂ ನಾವಿನ್ನೂ ತಂಬಾಕಿನ ಹೊಗೆಯ ಅಂಧಕಾರದಲ್ಲೇ ಇದ್ದೇವೆ. ಸಿಗರೇಟ್ ಸೇದುವವರು ಅದೊಂದು ಹೆಮ್ಮೆ ಎಂಬಂತೆ, ಇನ್ಯಾರಿಗೂ ಇರದ ವಿಶಿಷ್ಟವಾದ ಅರ್ಹತೆ ಎಂಬಂತೆ ವರ್ತಿಸುತ್ತಲೇ ಇದ್ದಾರೆ. ‘ನಿಮಗೆ ಬೇಡವಾದರೆ ಸೇದಬೇಡಿ, ನಮಗೇಕೆ ಬಿಟ್ಟಿ ಉಪದೇಶ ಮಾಡುತ್ತೀರಿ’ ಎಂಬ ಉಡಾಫೆ ಮನೋಭಾವದೊಂದಿಗೆ ದಿನದಿನವೂ ಸಾವನ್ನು ಸಮೀಪಿಸುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಾದ್ಯಂತ ಪ್ರತಿವರ್ಷ 60 ಲಕ್ಷ ಮಂದಿ ಧೂಮಪಾನದಿಂದ ಸಾವಿಗೀಡಾಗುತ್ತಿದ್ದಾರೆ. ಆತಂಕಕಾರಿ ಸಂಗತಿಯೆಂದರೆ ಇವರಲ್ಲಿ ಆರು ಲಕ್ಷಕ್ಕೂ ಹೆಚ್ಚು ಮಂದಿ ಸಕ್ರಿಯ ಧೂಮಪಾನಿಗಳಲ್ಲ. ತಾವು ನೇರವಾಗಿ ಧೂಮಪಾನಿಗಳಲ್ಲದಿದ್ದರೂ ಬೇರೆಯವರು ಸಿಗರೇಟ್ ಸೇದುವಾಗ ಆ ಪರಿಸರದಲ್ಲಿ ಇದ್ದ ಕಾರಣದಿಂದಾಗಿ ಮಾರಕ ಕಾಯಿಲೆಗಳಿಗೆ ತುತ್ತಾಗಿ ಪ್ರಾಣ ಕಳಕೊಂಡಿದ್ದಾರೆ. ಇನ್ನೊಂದು ಆತಂಕದ ವಿಷಯವೆಂದರೆ ಜಗತ್ತಿನ ಒಟ್ಟಾರೆ ಧೂಮಪಾನಿಗಳ ಪೈಕಿ ಶೇ. 12ರಷ್ಟು ಮಂದಿ (ಸುಮಾರು 12 ಕೋಟಿ) ಭಾರತದಲ್ಲೇ ಇದ್ದಾರೆ.

ತಂಬಾಕಿನ ಹೊಗೆಯಲ್ಲಿರುವ 4000 ರಾಸಾಯನಿಕಗಳಲ್ಲಿ ಕನಿಷ್ಠ 250 ತುಂಬ ಅಪಾಯಕಾರಿಯಾದವು; ಅದರಲ್ಲೂ 50ಕ್ಕೂ ಹೆಚ್ಚು ಕ್ಯಾನ್ಸರ್‍ಕಾರಕ ರಾಸಾಯನಿಕಗಳು. ಶೇ. 90ರಷ್ಟು ಬಾಯಿ ಹಾಗೂ ಶ್ವಾಸಕೋಶದ ಕ್ಯಾನ್ಸರಿಗೆ ಧೂಮಪಾನವೇ ಕಾರಣ ಎಂದು ಅಧ್ಯಯನಗಳು ದೃಢಪಡಿಸಿವೆ. ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವಿಲ್ಲ ಎಂದಲ್ಲ. ಅವರು ಇರುಳು ಕಂಡ ಬಾವಿಗೆ ಹಗಲು ಬೀಳುತ್ತಿದ್ದಾರೆ ಅಷ್ಟೇ.

1987ರಿಂದಲೇ ವಿಶ್ವ ಆರೋಗ್ಯ ಸಂಸ್ಥೆ ಮೇ 31ನ್ನು ‘ತಂಬಾಕು ರಹಿತ ದಿನ’ವೆಂದು ಘೋಷಿಸಿ ತಂಬಾಕಿನ ವಿರುದ್ಧ ಜನಜಾಗೃತಿ ಮೂಡಿಸಲು ವ್ಯಾಪಕ ಪ್ರಯತ್ನ ಮಾಡುತ್ತಿದೆ. ಪ್ರತೀ ವರ್ಷ ತಂಬಾಕು ವಿರೋಧದ ಯಾವುದಾದರೊಂದು ಆಯಾಮವನ್ನು ಮುಖ್ಯ ಕಾರ್ಯಸೂಚಿಯಾಗಿಸಿಕೊಂಡು ವಿಶ್ವದೆಲ್ಲೆಡೆ ಎಚ್ಚರ ಮೂಡಿಸಲು ಪ್ರಯತ್ನಿಸುತ್ತಿದೆ. ಉದಾಹರಣೆಗೆ, ಈ ವರ್ಷ ಸಿಗರೇಟ್ ಪ್ಯಾಕೆಟ್‍ಗಳ ಮೇಲೆ ಯಾವುದೇ ಬಣ್ಣ, ಲಾಂಛನ, ಬ್ರಾಂಡ್ ಅಥವಾ ಉತ್ತೇಜಕ ವಾಕ್ಯಗಳನ್ನು ಮುದ್ರಿಸದೆ ಅವುಗಳ ಬದಲಾಗಿ ಆರೋಗ್ಯ ಎಚ್ಚರಿಕೆಗಳನ್ನು ಮಾತ್ರ ಮುದ್ರಿಸಲು ಕ್ರಮ ಕೈಗೊಳ್ಳುವಂತೆ ಡಬ್ಲ್ಯೂಎಚ್‍ಒ ವಿಶ್ವದ ವಿವಿಧ ದೇಶಗಳಿಗೆ ಕರೆ ನೀಡಿದೆ.

ಭಾರತವೂ ತಂಬಾಕಿನ ವಿರುದ್ಧ ಜಾಗೃತಿ ಮೂಡಿಸುವ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಬಂದಿದೆ. 2008ರಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಇದರ ಪ್ರಕಾರ ಸಭಾಂಗಣ, ಹೊಟೇಲು, ಚಿತ್ರಮಂದಿರ, ಆಸ್ಪತ್ರೆ, ಸಾರ್ವಜನಿಕ ಸಾರಿಗೆ, ಗ್ರಂಥಾಲಯ, ಕ್ಯಾಂಟೀನ್, ನ್ಯಾಯಾಲಯ, ಅಂಚೆ ಕಚೇರಿ, ಮಾರುಕಟ್ಟೆ, ಮಾಲ್‍ಗಳು, ಉದ್ಯಾನ, ಶಾಲಾ ಕಾಲೇಜುಗಳು ಮುಂತಾದೆಡೆ ಧೂಮಪಾನ ಮಾಡುವುದು ಒಂದು ಅಪರಾಧ. ಇದಕ್ಕಾಗಿ ಒಬ್ಬ ವ್ಯಕ್ತಿಗೆ ರೂ. 200 ದಂಡ ವಿಧಿಸಬಹುದಾಗಿದೆ. ಇದನ್ನು ರೂ. 1000ಕ್ಕೆ ಏರಿಸಬೇಕು ಎಂಬ ಪ್ರಸ್ತಾಪ ಇತ್ತೀಚೆಗೆ ಸಂಸತ್ತಿನಲ್ಲಿ ಮಂಡನೆಯಾಗಿದೆ. ಮಾಧ್ಯಮಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಸರ್ಕಾರ ನಿಷೇಧಿಸಿದೆ.

ಇಷ್ಟೆಲ್ಲ ಆದರೂ ನಮ್ಮ ಜನರು ಎಚ್ಚೆತ್ತುಕೊಂಡಿಲ್ಲ. ಕೇವಲ ಕಾನೂನುಗಳಿಂದಲೇ ಸಮಾಜ ಸುಧಾರಣೆಯಾಗದು ಎಂಬುದಕ್ಕೆ ಇದೇ ದೊಡ್ಡ ನಿದರ್ಶನ. ಮೇಲೆ ಹೇಳಿರುವ ಸಾರ್ವಜನಿಕ ಸ್ಥಳಗಳಲ್ಲಿ ಎಷ್ಟರಮಟ್ಟಿಗೆ ಧೂಮಪಾನ ನಿಷೇಧ ಜಾರಿಯಾಗಿದೆ ಎಂದು ಯೋಚಿಸಿದರೆ ಸಾಕು, ಅರ್ಥವಾಗುತ್ತದೆ. ನೀವು ಯಾವುದೇ ಟೀ ಸ್ಟಾಲ್‍ಗೆ ಭೇಟಿ ನೀಡಿ, ಅಲ್ಲಿ ಚಹಾಕ್ಕಿಂತಲೂ ಸಮೃದ್ಧವಾದ ಸಿಗರೇಟ್ ಹೊಗೆ ನಿಮಗೆ ಉಚಿತವಾಗಿ ಲಭ್ಯ. ಧೂಮಪಾನ ಬೇಡದ ಜನಸಾಮಾನ್ಯರು ಸಿಗರೇಟ್ ಅಡ್ಡೆಗಳಾಗಿರುವ ಇಂತಹ ಅಂಗಡಿಗಳಿಗೆ ಹೋಗವುದೇ ಕಷ್ಟ ಎಂಬಂತಹ ಪರಿಸ್ಥಿತಿ ಇದೆ. ವಿದ್ಯಾವಂತ ಮಂದಿಯೂ ಯಾವುದೇ ನಾಚಿಕೆ ಮರ್ಯಾದೆಯಿಲ್ಲದೆ, ನಾಗರಿಕತೆಯ ಕನಿಷ್ಠ ಲಕ್ಷಣವೂ ಇಲ್ಲದೆ ತಮ್ಮೆದುರು ನಿಂತ ಜನರ ಮುಖಕ್ಕೆ ಹೊಗೆಯುಗುಳುತ್ತಿರುತ್ತಾರೆ.

ಶಿಕ್ಷಣ ಸಂಸ್ಥೆಗಳ 200 ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಿದ್ದರೂ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಸಾಮಾನ್ಯವಾಗಿ ಸಿಗರೇಟ್, ಗುಟ್ಕಾದಂತಹ ತಂಬಾಕು ಉತ್ಪನ್ನಗಳ ಗೂಡಂಗಡಿಗಳು ಇರುವುದೂ ಕಾಲೇಜುಗಳ ಎದುರಲ್ಲೇ! ‘ಧೂಮಪಾನ ನಿಷೇಧಿಸಿದೆ. ಅದು ದಂಡನಾರ್ಹ ಅಪರಾಧ’ ಎಂಬ ಪೊಲೀಸರ ಬೋರ್ಡುಗಳನ್ನು ಅಂಗಡಿಯವರು ಅನಿವಾರ್ಯವಾಗಿ ಕಂಡೂಕಾಣಿಸದಂತೆ ತಗುಲಿಸುತ್ತಾರೆ; ಕೆಲವೊಮ್ಮೆ ತಣ್ಣಗೆ ಅದನ್ನು ಕಿತ್ತೆಸೆಯುವುದೂ ಇದೆ. ಎದುರಿಗೇ ಇದ್ದರೂ ನಮ್ಮ ದಪ್ಪ ಚರ್ಮದ ಮಂದಿಗೆ ಅದು ಕ್ಯಾರೇ ಅಲ್ಲ ಬಿಡಿ. ವಿದ್ಯಾರ್ಥಿಗಳಿಗೆ ಆರೋಗ್ಯದ, ನೀತಿ ನಿಯಮಗಳ ಪಾಠ ಹೇಳಬೇಕಾದ ಅಧ್ಯಾಪಕರುಗಳೇ ಹಲವು ಮಂದಿ ಗಂಟೆಗೊಮ್ಮೆ ಸಿಗರೇಟ್ ಸೇದದೆ, ಗುಟ್ಕಾ ಜಗಿಯದೆ ಬದುಕಲಾರರು ಎಂಬಂತಹ ಪರಿಸ್ಥಿತಿ ಇದೆ; ಇನ್ನು ಯುವಕರನ್ನು ದೂರಿ ಏನು ಪ್ರಯೋಜನ?

ಬದಲಾವಣೆಯಾಗಬೇಕಿರುವುದು ಮನಸ್ಸಿನಲ್ಲಿ. ಅದು ತಾನಾಗಿಯೇ ಸಮಾಜದಲ್ಲಿ ಪ್ರತಿಫಲಿಸುತ್ತದೆ. ಏಕೆಂದರೆ ಸಮಾಜವು ಸಮಷ್ಟಿ ಮನಸ್ಥಿತಿಯ ಕನ್ನಡಿ.