ಬುಧವಾರ, ಫೆಬ್ರವರಿ 6, 2013

'ವಿಶ್ವರೂಪಂ'ನ ಹಿಂದಿರುವ ವಿಶ್ವವ್ಯಾಪಿ ಕಾಯಿಲೆ


ಮಾಧ್ಯಮಶೋಧ-35, ಹೊಸದಿಗಂತ, 07-02-2013

ಮಾಧ್ಯಮರಂಗಕ್ಕೆ ಸಂಬಂಧಿಸಿದಂತೆ ಈಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಈಡಾಗಿರುವ ವಿಷಯ ಅಭಿವ್ಯಕ್ತಿ ಸ್ವಾತಂತ್ರ್ಯ. ಕೇವಲ ಭಾರತದಲ್ಲಷ್ಟೇ ಅಲ್ಲ, ಇಡೀ ಜಗತ್ತಿನಲ್ಲೇ ಮಾಧ್ಯಮಗಳ ಮೂಲಭೂತ ಸ್ವಾತಂತ್ರ್ಯದ ಕುರಿತು ದೊಡ್ಡಮಟ್ಟದ ವಾಗ್ವಾದಗಳೇ ನಡೆಯುತ್ತಿವೆ. ಇದೇ ಕಾರಣಕ್ಕೆ ಇಂದು ಮಾಧ್ಯಮಗಳು ಅತ್ಯಂತ ಸಂಕೀರ್ಣ ಮತ್ತು ಸೂಕ್ಷ್ಮ ಕಾಲಘಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಮಲ್ ಹಾಸನ್ ಅವರ ಬಹುಕೋಟಿ ವೆಚ್ಚದ 'ವಿಶ್ವರೂಪಂ’ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗಿನ ಈ ಚರ್ಚೆಯಲ್ಲಿ ದೇಶದಲ್ಲಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೊಸ ಅಲೆಯನ್ನು ಹುಟ್ಟುಹಾಕಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿ ಏನು, ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿಗಳು ತಮಗನಿಸಿದ್ದನ್ನು ಮುಕ್ತವಾಗಿ ವ್ಯಕ್ತಪಡಿಸುವುದರ ಮಹತ್ವ ಏನು, ಅದರಲ್ಲಿ ಸರ್ಕಾರಗಳ ಮತ್ತು ನಾಗರಿಕ ಸಮಾಜದ ಪಾತ್ರ ಏನು ಎಂಬುದರ ಬಗ್ಗೆ ಚಿಂತನೆ ನಡೆಸುವುದಕ್ಕೆ ಇದೊಂದು ಸೂಕ್ತ ನಿಮಿತ್ತವೆನಿಸಿದೆ.

'ವಿಶ್ವರೂಪಂ’ನಲ್ಲಿ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಘಾಸಿಯನ್ನುಂಟುಮಾಡುವ ದೃಶ್ಯಗಳಿವೆ ಮತ್ತು ಈ ಕಾರಣಕ್ಕೆ ಅದನ್ನು ನಿಷೇಧಿಸಬೇಕು ಎಂದು ತಮಿಳುನಾಡಿನ ಕೆಲವು ಮುಸ್ಲಿಂ ಸಂಘಟನೆಗಳು ಆಗ್ರಹಿಸುವುದರೊಂದಿಗೆ ವಿಶ್ವರೂಪಂ 'ವಿವಾದಾತ್ಮಕ’ ಚಿತ್ರವಾಯ್ತು. ತಮಿಳುನಾಡು ಸರ್ಕಾರಕ್ಕೆ ಏನನ್ನಿಸಿತೋ, ಭದ್ರತೆಯ ಕಾರಣ ನೀಡಿ ಈ ಸಿನಿಮಾವನ್ನು ರಾಜ್ಯದಲ್ಲೆಲ್ಲಿಯೂ ಪ್ರದರ್ಶಿಸುವ ಅವಕಾಶ ನೀಡಬಾರದೆಂದು ತೀರ್ಮಾನಿಸಿತು. ತಮಿಳುನಾಡಿನ ಅಷ್ಟೂ ಜಿಲ್ಲಾ ಮ್ಯಾಜಿಸ್ಟ್ರೇಟರುಗಳು ಆದೇಶಿಸಿದ ನಿಷೇಧವನ್ನು ಮದ್ರಾಸ್ ಹೈಕೋರ್ಟ್ ಕೂಡ ಎತ್ತಿಹಿಡಿಯಿತು.

ಹೀಗಾಗಿ ಜನವರಿ 25ರಂದು ವಿಶ್ವದಾದ್ಯಂತ ಬಿಡುಗಡೆ ಕಂಡರೂ, 'ವಿಶ್ವರೂಪಂ’ ತಮಿಳುನಾಡಿಗೆ ಕಾಲಿಡಲಿಲ್ಲ. ಗಣರಾಜ್ಯೋತ್ಸವ ಹಾಗೂ ಈದ್-ಮಿಲಾದ್‌ಗಳ ಹಿನ್ನೆಲೆಯಿಂದ ಕರ್ನಾಟಕದಲ್ಲೂ ಸಿನಿಮಾ ಬಿಡುಗಡೆಯನ್ನು ಜನವರಿ 27ರವರೆಗೆ ಮುಂದೂಡಲಾಯಿತು. ತನ್ನ ಸಿನಿಮಾದಲ್ಲಿ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗುವ ಯಾವುದೇ ಅಂಶವಿಲ್ಲವೆಂದೂ, ಸಿನಿಮಾದ ಯಾವ ಭಾಗವನ್ನೂ ಮತ್ತೆ ಎಡಿಟ್ ಮಾಡುವುದಿಲ್ಲವೆಂದೂ, ಸರ್ಕಾರ ತನ್ನ ಪಟ್ಟು ಬಿಡದಿದ್ದರೆ ದೇಶವನ್ನೇ ಬಿಟ್ಟು ಹೋಗುವೆನೆಂದೂ ಕಮಲ್ ಹಾಸನ್ ಹೇಳಿದ್ದಾಯಿತು. ಆದರೆ ಅಂತಿಮವಾಗಿ ಕಮಲ್ ಹಾಸನ್ ಅವರೇ ಸೋಲೊಪ್ಪಿಕೊಳ್ಳಬೇಕಾಯಿತು. ಮುಸ್ಲಿಂ ಸಂಘಟನೆಗಳು ಸೂಚಿಸಿರುವ ಏಳು ದೃಶ್ಯಗಳನ್ನು ಸಿನಿಮಾದಿಂದ ತೆಗೆದುಹಾಕಲು ಕಮಲ್ ಒಪ್ಪಿಕೊಂಡಿದ್ದಾರೆ. ಫೆಬ್ರವರಿ 7ರಂದು 'ವಿಶ್ವರೂಪಂ’ ತಮಿಳುನಾಡಿನಾದ್ಯಂತ ಬಿಡುಗಡೆ ಕಾಣುತ್ತಿದೆ. ಇಷ್ಟಕ್ಕೂ ದೊಡ್ಡ ಕೋಲಾಹಲವೇ ಆರಂಭವಾಯಿತು ಎಂಬಷ್ಟರಮಟ್ಟಿದೆ ಗಂಭೀರ ವಾತಾವರಣವನ್ನು ಸೃಷ್ಟಿಸಿದ ಈ 'ವಿಶ್ವರೂಪಂ’ನಲ್ಲಿ ಏನಿದೆ?

'ವಿಶ್ವರೂಪಂ’ ಅಂತಾರಾಷ್ಟ್ರೀಯ ಭಯೋತ್ಪಾದನೆಯನ್ನು ಕೇಂದ್ರವಾಗಿ ಹೊಂದಿರುವ ಒಂದು ಪತ್ತೇದಾರಿ ಥ್ರಿಲ್ಲರ್. ಅಪ್ಘಾನಿಸ್ತಾನವನ್ನು ತಮ್ಮ ನೆಲೆಯಾಗಿಸಿಕೊಂಡು ಕಾರ್ಯನಿರ್ವಹಿಸುವ ಅಲ್-ಖೈದಾ ಜಿಹಾದಿಗಳ ಜಾಲ ಅಮೇರಿಕದ ಮಹಾನಗರ ನ್ಯೂಯಾರ್ಕನ್ನೇ ಸ್ಫೋಟಿಸಲು ರೂಪಿಸುವ ಸಂಚಿನ ಬೆಂಬತ್ತಿ ಸಾಗುತ್ತದೆ ಇದರ ಕಥಾಹಂದರ.

ವಿಶ್ವನಾಥ್ (ಕಮಲ್ ಹಾಸನ್) ನ್ಯೂಯಾರ್ಕ್‌ನಲ್ಲಿ ಒಂದು ಕಥಕ್ ತರಬೇತಿ ಶಾಲೆ ನಡೆಸುತ್ತಿರುತ್ತಾನೆ. ಆತನ ಪತ್ನಿ ನಿರುಪಮಾ (ಪೂಜಾ ಕುಮಾರ್) ವೃತ್ತಿಯಲ್ಲಿ ಒಬ್ಬ ಕ್ಯಾನ್ಸರ್ ತಜ್ಞೆ. ಒಂದೆಡೆ ತನಗೂ ಪತಿಗೂ ಇರುವ ವಯಸ್ಸಿನ ಅಂತರ, ಇನ್ನೊಂದೆಡೆ ಆತನ ಹೆಣ್ತನದ ಗುಣಗಳಿಂದಾಗಿ ಗಂಡನ ಬಗ್ಗೆ ನಿರಾಸಕ್ತಿ ಬೆಳೆಸಿಕೊಳ್ಳುವ ನಿರುಪಮಾ ಆತನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಬೇಕೆಂದು ಭಾವಿಸುತ್ತಾಳೆ. ಈ ನಡುವೆ ತನ್ನ ಪತಿ ಏನೋ ರಹಸ್ಯಗಳನ್ನು ಇರಿಸಿಕೊಂಡಿದ್ದಾನೆ ಎಂದು ಅನುಮಾನಿಸುವ ಆಕೆ ಒಬ್ಬ ಖಾಸಗಿ ಪತ್ತೇದಾರನನ್ನು ಗೊತ್ತುಮಾಡುತ್ತಾಳೆ.

ಪತ್ತೇದಾರನ ಮೂಲಕ ವಿಶ್ವನಾಥ್ ಒಬ್ಬ ಹಿಂದೂ ಅಲ್ಲವೆಂದೂ ಆತನೊಬ್ಬ ಮುಸ್ಲಿಂ ಎಂದೂ ನಿರುಪಮಾಗೆ ಗೊತ್ತಾಗುತ್ತದೆ. ಅನಿರೀಕ್ಷಿತ ಘಟನೆಯೊಂದರಲ್ಲಿ, ಈ ಪತ್ತೇದಾರ ಭಯೋತ್ಪಾದಕ ಗುಂಪಿನಿಂದ ಹತ್ಯೆಗೀಡಾಗುತ್ತಾನೆ. ಆತನ ಜೇಬಿನಲ್ಲಿದ್ದ ವಿಸಿಟಿಂಗ್ ಕಾರ್ಡ್ ಮೂಲಕ ನಿರುಪಮಾ ಬಗ್ಗೆ ತಿಳಿದುಕೊಂಡ ಭಯೋತ್ಪಾದಕರು ನಿರುಪಮಾ-ವಿಶ್ವನಾಥ್ ಇಬ್ಬರನ್ನೂ ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಾರೆ. ನಗರದ ಹೊರವಲಯದಲ್ಲಿರುವ ದಾಸ್ತಾನು ಮಳಿಗೆಯೇ ಅವರ ತಂಗುದಾಣ. ಆದರೆ ವಿಶ್ವನಾಥ್ ಭಯೋತ್ಪಾದಕರೊಂದಿಗೆ ಹೊಡೆದಾಡಿ ತನ್ನ ಪತ್ನಿ ನಿರುಪಮಾ ಜೊತೆಗೆ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ.

ಒಮರ್ ಎಂಬಾತನ ನೇತೃತ್ವದಲ್ಲಿ ಭಯೋತ್ಪಾದಕರು ಸಿಸಿಯಮ್ ಎಂಬ ಲೋಹವನ್ನು ಬಳಸಿಕೊಂಡು ನ್ಯೂಯಾರ್ಕ್ ಮೇಲೆ ಬಾಂಬ್ ದಾಳಿ ನಡೆಸಲು ನೀಲನಕ್ಷೆ ರೂಪಿಸುತ್ತಿರುತ್ತಾರೆ. ಏತನ್ಮಧ್ಯೆ ತನ್ನ ಪತಿ ವಿಶ್ವನಾಥ್ ಮತ್ತು ಆತನ ಕೆಲವು ಸಹವರ್ತಿಗಳ ನಿಜಸ್ವರೂಪ ನಿರುಪಮಾಗೆ ಗೊತ್ತಾಗಿ ಆಕೆ ದಂಗಾಗುತ್ತಾಳೆ. ವಿಶ್ವನಾಥ್ ವಾಸ್ತವದಲ್ಲಿ ವಿಸಾಮ್ ಅಹ್ಮದ್ ಕಾಶ್ಮೀರಿ ಹೆಸರಿನ ಒಬ್ಬ ಮುಸ್ಲಿಂ 'ರಾ’ ಏಜೆಂಟ್ ಎಂದೂ, ತನ್ನ ಬಾಸ್ ದೀಪಕ್ ಮತ್ತು ಅವನ ನಾಯಕ ಒಮರ್ ಹಾಕಿಕೊಂಡಿದ್ದ ನ್ಯೂಯಾರ್ಕ್ ಬಾಂಬ್ ಸ್ಫೋಟ ಯೋಜನೆಯ ತನಿಖೆಗಾಗಿಯೇ ಆತ ನಿರುಪಮಾಳನ್ನು ಮದುವೆಯಾಗಿದ್ದಾನೆಂದೂ ಆಕೆಗೆ ಅರ್ಥವಾಗುತ್ತದೆ.

ಮುಂದೆ ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐನಿಂದ ವಿಶ್ವನಾಥ್ ಬಂಧನ, ಬಿಡುಗಡೆ ಎಲ್ಲ ನಡೆಯುತ್ತದೆ. ವಿಶ್ವನಾಥ್ ಹಾಗೂ ಎಫ್‌ಬಿಐ ಜತೆಯಾಗಿ ಬಾಂಬ್ ಸ್ಫೋಟದ ದುರಂತವನ್ನು ತಡೆಯುವಲ್ಲಿ ಯಶಸ್ವಿಯಾಗುತ್ತಾರೆಯೇ ಎಂಬುದು ಸಿನಿಮಾದ ಕ್ಲೈಮಾಕ್ಸ್.

ಕಮಲ್ ಹಾಸನ್ ತೆಗೆದುಹಾಕಲು ಒಪ್ಪಿಕೊಂಡಿರುವ ದೃಶ್ಯಗಳೂ ಸೇರಿದಂತೆ ಇಡೀ ಸಿನಿಮಾವನ್ನು ಲಕ್ಷಾಂತರ ಜನರು ಈಗಾಗಲೇ ನೋಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳೂ ಸೇರಿದಂತೆ ನೂರಾರು ಮಂದಿ ಅದರ ಬಗ್ಗೆ ವಿಮರ್ಶೆಗಳನ್ನು ಬರೆದಿದ್ದಾರೆ. ಬಹುತೇಕರೂ ಸಿನಿಮಾದಲ್ಲಿ ಮುಸ್ಲಿಮರ ಭಾವನೆಗಳಿಗೆ ಘಾಸಿಯನ್ನುಂಟುಮಾಡುವ ಸನ್ನಿವೇಶಗಳಾಗಲೀ ಸಂಭಾಷಣೆಗಳಾಗಲೀ ಇಲ್ಲವೆಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಬಹುತೇಕ ಚಿತ್ರ ವಿಮರ್ಶಕರು ಗುರುತಿಸುವಂತೆ, ವಿಶ್ವರೂಪಂ ತಾಂತ್ರಿಕವಾಗಿ ಒಂದು ಶ್ರೇಷ್ಠ ಮತ್ತು ಮಹತ್ವಾಕಾಂಕ್ಷಿ ಚಿತ್ರ; ಅದೊಂದು ಅಂತಾರಾಷ್ಟ್ರೀಯ ಗುಣಮಟ್ಟದ ಥ್ರಿಲ್ಲರ್; ತಮಿಳು ಸಿನಿಮಾ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಎನಿಸಬಹುದಾದ ಕಮರ್ಶಿಯಲ್ ಚಿತ್ರ. 'ವಿಶ್ವರೂಪಂ ಒಂದು ಸುಂದರ ಕಲಾಕೃತಿ; ಇದು ಸೃಷ್ಟಿಸುವ ರೋಮಾಂಚನ ಯಾವ ಹಾಲಿವುಡ್ ಚಿತ್ರಗಳಿಗೂ ಕಡಿಮೆ ಇಲ್ಲ’ ಎಂದು ಕೆಲವರು ಬರೆದಿದ್ದಾರೆ. 95 ಕೋಟಿ ರೂಪಾಯಿ ಬೃಹತ್ ಬಂಡವಾಳದ ಈ ಸಿನಿಮಾ ಹತ್ತೇ ದಿನಗಳಲ್ಲಿ 85 ಕೋಟಿ ಆದಾಯ ಗಳಿಸಿದೆ ಎಂದರೆ ಅದರ ತಾಂತ್ರಿಕ ಉತ್ಕೃಷ್ಟತೆ ಬಗ್ಗೆ ಬೇರೇನೂ ಹೇಳಬೇಕಾಗಿಲ್ಲ.

ಹಾಗಾದರೆ, ತಮಿಳುನಾಡು ಸರ್ಕಾರ ವಿಶ್ವರೂಪಂನ್ನು ನಿಷೇಧಿಸಿದ್ದಾದರೂ ಏಕೆ? ಕೆಲವು ಸಂಘಟನೆಗಳು ಆಗ್ರಹಿಸಿದ ಮಾತ್ರಕ್ಕೆ ಒಂದು ಸಿನಿಮಾವನ್ನು ರಾಜ್ಯಾದ್ಯಂತ ನಿಷೇಧಿಸಬೇಕೆ? ನಿಷೇಧಿಸುವ ಮೊದಲು ಸರ್ಕಾರ ಅದನ್ನು ವೀಕ್ಷಿಸಿ ಕೂಲಂಕಷವಾಗಿ ಚಿಂತನೆ ನಡೆಸಿತೆ? ಎಲ್ಲ ವರ್ಗಗಳನ್ನೂ ಪ್ರತಿನಿಧಿಸುವ ಸಮಿತಿಯೊಂದನ್ನು ರಚನೆ ಮಾಡಿ ಅವರ ಅಭಿಪ್ರಾಯವನ್ನು ಕೇಳಿತೆ? ಒಂದು ಪ್ರಜಾಪ್ರಭುತ್ವ ಮಾದರಿಯ ಸರ್ಕಾರ ಇಷ್ಟಾದರೂ ಮಾಡದೆ ಇದ್ದರೆ ಹೇಗೆ?

'ಮುಸ್ಲಿಂರನ್ನು ಘಾಸಿಗೊಳಿಸುವ ದೃಶ್ಯ-ಸಂಭಾಷಣೆಗಳು ಅದರಲ್ಲಿವೆ ಎಂದರೆ ಹಿಂದೂಗಳ ಭಾವನೆಗಳಿಗೂ ಧಕ್ಕೆಯಾಗುವಂತಹ ಸಂಭಾಷಣೆಗಳೂ ಅದರಲ್ಲಿವೆ; ಹಾಗಂತ ಅವರೇನೂ ಅದರ ಬಗ್ಗೆ ತಕರಾರು ತೆಗೆದಿಲ್ಲ' ಎಂಬುದು ಕೆಲವು ವೀಕ್ಷಕರ ಅಭಿಪ್ರಾಯ. ಹಾಗೆ ನೋಡಿದರೆ, ಬಹುಸಂಖ್ಯಾತರ ನಂಬಿಕೆ-ಭಾವನೆಗಳನ್ನು ನೋಯಿಸುವ ಸನ್ನಿವೇಶ-ಸಂಭಾಷಣೆಗಳು ನಮ್ಮ ಅನೇಕ ಸಿನಿಮಾಗಳಲ್ಲಿ ಹೇಗೆಂದಹಾಗೆ ಬಂದುಹೋಗುತ್ತವೆ. ಹಿಂದೂ ದೈವದೇವರುಗಳನ್ನು, ಧಾರ್ಮಿಕ ಹಾಗೂ ಸಾಂಸ್ಕೃತಿಕ ನಂಬಿಕೆಗಳನ್ನು ಕುಚೋದ್ಯ ಮಾಡುವ ಸನ್ನಿವೇಶ, ಹಾಡು, ಮಾತುಗಳಿಗೆ ಕನ್ನಡ ಸಿನಿಮಾಗಳಲ್ಲಂತೂ ಕೊರತೆಯಿಲ್ಲ. ಅದೊಂಥರಾ 'ಟೇಕನ್ ಫಾರ್ ಗ್ರಾಂಟೆಡ್’ ಎಂಬ ಹಾಗೆ ನಡೆಯುತ್ತಲೇ ಇರುತ್ತದೆ. ಅದಕ್ಕೆ ಪ್ರಗತಿಪರ ದೃಷ್ಟಿಕೋನ ಎಂಬ ಹಣೆಪಟ್ಟಿ ಬೇರೆ ಇರುತ್ತದೆ. ಇರಲಿ, ಈ ಆಧಾರದಲ್ಲಿ ಸಿನಿಮಾಗಳನ್ನು ನಿಷೇಧಿಸುತ್ತಾ ಹೋದರೆ ಅರ್ಧಕ್ಕರ್ಧ ಸಿನಿಮಾಗಳನ್ನು ಪೆಟ್ಟಿಗೆಯಿಂದ ಈಚೆಗೆ ತೆಗೆಯುವ ಪ್ರಶ್ನೆಯೇ ಬರುವುದಿಲ್ಲ. ಹೀಗೆಂದು ಹೇಳಿದುದರ ಅರ್ಥ ಸಿನಿಮಾ ಸೃಜನಶೀಲತೆಯಿಂದ ದೂರವುಳಿಯಬೇಕೆಂದೋ, ಸೃಜನಶೀಲತೆಯ ಹೆಸರಿನಲ್ಲಿ ಯಾವುದೋ ಒಂದು ವರ್ಗದ, ಸಮುದಾಯದ ಮಂದಿಗೆ ನೋವನ್ನುಂಟುಮಾಡಬೇಕೆಂದೋ ಅಲ್ಲ; ರಾಜಕೀಯ ಲಾಭಕ್ಕಾಗಿ ಗಾಳಿಬಂದ ಕಡೆ ತೂರಿಕೊಳ್ಳುವ ಮನೋಭಾವ ತೋರಿಸಬಾರದು ಎಂದಷ್ಟೇ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹಿಂದೆ ಮುಂದೆ ಕಳೆದೆರಡು ವರ್ಷಗಳಲ್ಲೇ ಸಾಕಷ್ಟು ಘಟನೆಗಳು ಮತ್ತು ಆ ಕುರಿತ ಚರ್ಚೆಗಳು ನಡೆದಿವೆ. ಕೇಂದ್ರ ಸರ್ಕಾರ ಅಧಿಕೃತವಾಗಿಯೇ ಘೋಷಿಸಿಕೊಂಡು ಆರಂಭಿಸಿದ ಇಂಟರ್ನೆಟ್ ಸೆನ್ಸಾರ್‌ನಿಂದ ತೊಡಗಿ ತೀರಾ ಇತ್ತೀಚೆಗೆ ವರದಿಯಾಗಿರುವ ಪೈಂಟಿಂಗ್ಸ್ ಪ್ರದರ್ಶನದ ವಿವಾದ, ಮಣಿರತ್ನಂ ಅವರ ಹೊಸ ಚಿತ್ರ 'ಕಡಲ್’ ಕುರಿತ ಆಕ್ಷೇಪದವರೆಗೆ ಭಾರತದಾದ್ಯಂತ ಹತ್ತುಹಲವು ಘಟನೆಗಳು ದಿನಬೆಳಗಾದರೆ ಬೆಳಕಿಗೆ ಬರುತ್ತಿವೆ. ಪ್ರತೀ ಘಟನೆ ನಡೆದಾಗಲೂ ಅದರ ಪರವಾಗಿ ಮತ್ತು ವಿರೋಧವಾಗಿ ಮಾತನಾಡುವ ಮಂದಿ ಇದ್ದೇ ಇರುತ್ತಾರೆ. ತಮ್ಮ ಚಿಂತನೆಗಳಿಗೆ ಪೂರಕವಾಗಿರುವ ಘಟನೆ ನಡೆದಾಗ ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದೂ, ವಿರುದ್ಧವಾದ ಘಟನೆಗಳು ನಡೆದಾಗ ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಎಂದೂ ವಿಶ್ಲೇಷಿಸುವುದು ನಡೆಯುತ್ತಲೇ ಇರುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಎರಡಲಗಿನ ಖಡ್ಗವಿದ್ದಂತೆ. ಅದನ್ನು ಕೈಗೆತ್ತಿಕೊಳ್ಳುವಾಗ ಮತ್ತು ಬಳಸುವಾಗ ಎಲ್ಲರ ಭಾವನೆಗಳನ್ನು ಗೌರವಿಸುವ ಉದಾರತೆ, ತಮಗೆ ಸರಿಯೆನಿಸುವುದು ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ ಎಂಬ ಪ್ರೌಢಿಮೆ ಎರಡೂ ಬೇಕು.

ಹಾಗಂತ, ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಹಾಕಿಕೊಟ್ಟಿರುವ ಚೌಕಟ್ಟಿಗೆ ಎಲ್ಲರೂ ಬದ್ಧರೇ. ನಮ್ಮ ಸಂವಿಧಾನದ ವಿಧಿ 19(1)(ಎ) ಎಲ್ಲ ನಾಗರಿಕರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಆದರೆ ಅದರ ನಂತರದಲ್ಲಿ ಬಂದಿರುವ ವಿಧಿ 19(2)ರಲ್ಲಿ ಸಂವಿಧಾನವು ಈ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೆಲವು ಸಕಾರಣ ನಿರ್ಬಂಧಗಳನ್ನೂ ಸೂಚಿಸಿದೆ. 'ವಿಶ್ವರೂಪಂ’ನಲ್ಲಿ ಸಂವಿಧಾನ ಅಥವಾ ಭಾರತೀಯ ದಂಡ ಸಂಹಿತೆ ಹೇಳುವ ಯಾವುದೇ ಆಕ್ಷೇಪಾರ್ಹ ಅಂಶ ಇಲ್ಲವಾಗಿರುವುದು ನಿಜವಾದರೆ, ಅದರ ನಿಷೇಧ ಒಂದು ಸಂವಿಧಾನ ವಿರೋಧಿ ಕ್ರಮವಾಗುತ್ತದೆ.

ಅಭಿವ್ಯಕ್ತಿ ಸ್ವಾತಂತ್ರ್ಯವಾಗಲೀ ಮಾಧ್ಯಮ ನಿಯಂತ್ರಣವಾಗಲೀ ಒಂದು ರಾಜಕೀಯ ಮತ್ತು ವೈಯುಕ್ತಿಕ ಹಿತಾಸಕ್ತಿಗಳ ಹಿನ್ನೆಲೆಯಲ್ಲಿ ಬಳಕೆಯಾಗುತ್ತಿರುವುದು ಮಾತ್ರ ಎಲ್ಲಕ್ಕಿಂತ ದೊಡ್ಡ ದುರಂತ. 'ವಿಶ್ವರೂಪಂ’ ನಿಷೇಧದ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ರಾಜಕೀಯ ಮತ್ತು ವಾಣಿಜ್ಯ ಹಿತಾಸಕ್ತಿಗಳಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಒಂದು ವೇಳೆ ಇದೇ ಕಾರಣಕ್ಕೆ 'ವಿಶ್ವರೂಪಂ’ ನಿಷೇಧಗೊಂಡಿದ್ದರೆ, ಅದು ಪ್ರಜಾಸತ್ತೆಯ ಲೇವಡಿ ಎನ್ನದೆ ವಿಧಿಯಿಲ್ಲ. ಯಾವ ಕಾರಣಕ್ಕೂ ತನ್ನ ಸಿನಿಮಾದಲ್ಲಿ ಬದಲಾವಣೆ ಇಲ್ಲ ಎಂಬ ದೃಢನಿಲುವು ಹೊಂದಿದ್ದ ಕಮಲ್ ಹಾಸನ್ ಕೂಡ ಈಗ ಏಕಾಏಕಿ ಮೃದುವಾಗಿದ್ದಾರೆ ಎಂದರೆ ಅದರ ಹಿಂದೆಯೂ ದೊಡ್ಡದೊಂದು ಲಾಬಿ ಕೆಲಸ ಮಾಡಿದೆ. ಆ ಲಾಬಿಯೂ, ಪ್ರಜಾಪ್ರಭುತ್ವದ ಒಂದು ವ್ಯಂಗ್ಯ.