ಸುಮಾರು 11 ವರ್ಷಗಳ ಹಿಂದೆ, ಅಂದರೆ 2009ರಲ್ಲಿ, ಅಪ್ಪನ ನೆನಪುಗಳನ್ನು ಕೆದಕಿ ನಿರೂಪಿಸಿದ ಬರೆಹ ಇದು. ನಮ್ಮ ಮುಂಡೂರುಪಳಿಕೆ ಶಾಲೆ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದಾಗ ಬೆಳ್ತಂಗಡಿಯ 'ಸುದ್ದಿ ಬಿಡುಗಡೆ'ಗಾಗಿ ಬರೆದದ್ದು. ಆಗ ಅದು ಪ್ರಕಟವಾಗಲಿಲ್ಲ. ಯಾಕೆ ಎಂದು ನನಗೆ ನೆನಪಿಲ್ಲ. ಈಗ ಯಾಕೋ ಪ್ರಕಟಿಸಬೇಕೆನಿಸಿತು.
ಗೊಂಡಾರಣ್ಯ. ಮೈಲುದೂರಕ್ಕೊಂದು ಮನೆ. ಜನರ ಮುಖ ಕಾಣಸಿಗುವುದೇ ಅಪರೂಪ. ರಸ್ತೆ, ವಾಹನಗಳಂತೂ ಕನಸಿಗೂ ಮೀರಿದ ವಿಷಯಗಳು. ಇಂತಿಪ್ಪ ಮುಂಡೂರುಪಳಿಕೆಯೆಂಬೋ ಕಾಡೂರಿನಲ್ಲಿ ಒಂದು ಶಾಲೆ ಬೇಕೆಂಬ ಬಯಕೆ ನಮ್ಮಲ್ಲಿ ಯಾವ ಕ್ಷಣ ಮೊಳಕೆಯೊಡೆಯಿತೋ ಗೊತ್ತಿಲ್ಲ. ಆದರೆ ನಮ್ಮ ಮಕ್ಕಳಾದರೂ ಒಳ್ಳೆ ವಿದ್ಯಾವಂತರಾಗಿ ಈ ಊರಿಗೆ ಅಂಟಿರುವ ಪ್ರಗತಿಯ ತೊಡಕುಗಳನ್ನು, ಇಲ್ಲಿನ ಬಡತನವನ್ನು ನಿವಾರಿಸುವಂತಾಗಬೇಕು ಎಂಬುದು ನಮ್ಮೆಲ್ಲರ ಮಹದಂಬಲವಾಗಿದ್ದಂತೂ ನೂರಕ್ಕೆ ನೂರು ನಿಜ.
ನಾನು 1975ರ ಜೂನಿನಲ್ಲಿ ಮುಂಡೂರುಪಳಿಕೆಗಿಂತ ಇನ್ನೂ ಎರಡು ಮೈಲು ಆಚೆಗಿರುವ ಸಿಬಂತಿಯಲ್ಲಿ ಬಂದು ನೆಲೆಯೂರಿದ್ದೆ. ನಾನಿದ್ದ ಗುಡಿಸಲು ಬಿಟ್ಟರೆ ಅಲ್ಲೆಲ್ಲೋ ದೂರದ ಸಂಕುವೈಲು, ಅದರಾಚೆಯ ಬಾಳ್ತಿಮಾರು, ಕಕ್ಕುದೋಳಿಗಳಲ್ಲಿ ಎರಡು ಮೂರು ಕುಟುಂಬಗಳು. ಮೈಲುಗಳಷ್ಟು ದೂರ ದಟ್ಟ ಕಾಡಿನಲ್ಲಿ ನಡೆಯಲು ಸಾಧ್ಯವಾದರೆ ನೇತ್ರಾವತಿ ದಂಡೆಯಲ್ಲಿರುವ ಬೀಬಿಮಜಲು, ಸುದೆಪೊರ್ದು, ಚೆಂಬುಕೇರಿ, ಮೈಪಾಳ. ಇನ್ನೊಂದು ದಿಕ್ಕಿನಲ್ಲಿ ಹೋದರೆ ಮಿತ್ತಡ್ಕ, ಪೊನ್ನಿತ್ತಿಮಾರು, ಕುರ್ಲೆ, ತೆಂಕುಬೈಲು, ಬದಿಜಾಲು. ನೀವು ನಂಬಲೇಬೇಕು- ಇಷ್ಟು ವಿಸ್ತಾರವಾದ ವ್ಯಾಪ್ತಿಯಲ್ಲಿ ಹುಟ್ಟಿದ ಯಾವುದೇ ಮಗುವೂ ಶಿಕ್ಷಣದಿಂದ ವಂಚಿತವಾಗಿಯೇ ಉಳಿಯಬೇಕಿತ್ತು. ಶಾಲೆ ಬೇಕೆಂದರೆ ಎಂಟೋ ಹತ್ತೋ ಕಿಲೋಮೀಟರ್ ನಡೆಯಬೇಕು. ಐದು ವರ್ಷದ ಒಂದು ಮಗು ಅಷ್ಟು ದೂರ ನಡೆದುಹೋಗಿ ಒಂದನೇ ಕ್ಲಾಸಾದರೂ ಮುಗಿಸುವುದುಂಟೇ?
ಮೊದಲೇ ಹೇಳಿದಂತೆ ನಮ್ಮದು ಅಂತಹ ಜನದಟ್ಟಣೆಯ ಊರಂತೂ ಆಗಿರಲಿಲ್ಲ. ಹಾಗೆಂದು ಇರುವ ಮಕ್ಕಳಿಗಾದರೂ ಶಿಕ್ಷಣದ ಬೆಳಕು ಕಾಣಿಸಲೇಬೇಕಿತ್ತು. ನಾನು ಪ್ರಾಥಮಿಕ ಶಿಕ್ಷಣವನ್ನೇ ಪೂರ್ತಿಯಾಗಿ ಮುಗಿಸಿರಲಿಲ್ಲವಾದರೂ ಜೀವನಾನುಭವದ ಪಾಠ ನನಗಿತ್ತು. ಒಂದು ಶಾಲೆ ಕೇವಲ ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕಷ್ಟೇ ಸೀಮಿತವಲ್ಲ, ಅದಕ್ಕೆ ಇಡೀ ಊರಿನ ಚಿತ್ರಣ ಬದಲಾಯಿಸುವ ಸಾಮರ್ಥ್ಯವಿದೆ ಎಂಬುದು ನನಗೆ ತಿಳಿದಿತ್ತು. ಆ ಪ್ರದೇಶದ ಕೆಲವು ಹಿರಿಕಿರಿಯ ತಲೆಗಳೂ ನನ್ನ ಯೋಚನೆಯನ್ನು ಬೆಂಬಲಿಸಿದವು. ಹಾಗೆ ಹುಟ್ಟಿಕೊಂಡಿತು ಒಂದು ಶಾಲೆಯ ಕನಸು.
ಆದರೆ ಸ್ವಂತ ಹಣ ಹಾಕಿ ಒಂದು ಖಾಸಗಿ ಶಾಲೆ ಆರಂಭಿಸುವ ಸಾಮರ್ಥ್ಯದವರು ನಾವ್ಯಾರೂ ಆಗಿರಲಿಲ್ಲ. ಮೂರು ಹೊತ್ತು ಗಂಜಿ ಊಟಕ್ಕೆ ಪರದಾಡುವವರೇ ಎಲ್ಲರೂ. ಹೆಚ್ಚಿನವರೂ ಕೂಲಿನಾಲಿ ಮಾಡಿ ಬದುಕುವವರು. ನಮಗೆ ಒಂದು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯೇ ಬೇಕಾಗಿತ್ತು.
ಅವು 1980ರ ದಶಕದ ಆರಂಭಿಕ ವರ್ಷಗಳು. ಕೊಕ್ಕಡ ಪಟ್ರಮೆ ಗ್ರಾಮಗಳಿಗೆ ಮಂಗನ ಕಾಯಿಲೆ (KFD)ಯ ಬರಸಿಡಿಲು ಬಡಿದಿತ್ತು. ಸಾವಿನ ಸಂಖ್ಯೆ ದಿನೇದಿನೇ ಬೆಳೆಯುತ್ತಲೇ ಇತ್ತು. ಊರಿನ ಅಭಿವೃದ್ಧಿಯ ಕನಸು ಹೊತ್ತಿದ್ದ ನಾವು ಅದಾಗಲೇ ಅಡ್ಡೈ-ಮುಂಡೂರುಪಳಿಕೆ-ಮೈಪಾಳ ರಸ್ತೆ ನಿರ್ಮಿಸಿಯಾಗಿತ್ತು. ವಿಪರ್ಯಾಸವೆಂದರೆ ಅದೇ ಹೊಸ ರಸ್ತೆಯಲ್ಲಿ ಬಂದ ಮೊದಲ ವಾಹನ ಮಂಗನಕಾಯಿಲೆಗೆ ಬಲಿಯಾದ ಇಬ್ಬರ ಶವವನ್ನು ಹೊತ್ತು ತಂದುದಾಗಿತ್ತು... ಇದೇ ಕೊನೆ, ಇನ್ನು ಈ ಊರಿನಲ್ಲಿ ಈ ರೀತಿ ಮೃತ್ಯುವಿನ ಪ್ರವೇಶವಾಗಬಾರದು ಎಂದು ನಿರ್ಧರಿಸಿದ ನಾವು ಊರಿನ ಹತ್ತು ಸಮಸ್ತರು ಒಂದಾಗಿ ಹೋಗಿ ಕೊಕ್ಕಡ ಮತ್ತು ಸೌತೆಡ್ಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಮನಸಾರೆ ಪ್ರಾರ್ಥಿಸಿದೆವು. ಹೌದು, ಅದೇ ದಿನ ನಾವು ದೇವರ ಎದುರು ನಿಂತು ನಮ್ಮೂರಿಗೊಂದು ಶಾಲೆ ತರುವ ಸಂಕಲ್ಪವನ್ನೂ ಮಾಡಿದೆವು.
ನಾನೂ ಮುಂಡೂರು ಲಕ್ಷ್ಮೀನಾರಾಯಣ ಶಬರಾಯರೂ ಒಂದೆಡೆ ಕುಳಿತು ಶಾಲೆ ಆರಂಭವಾದರೆ ಎಷ್ಟು ಮಕ್ಕಳು ಒಂದನೇ ಕ್ಲಾಸಿಗೆ ಸೇರಬಹುದೆಂದು ಒಂದು ಪಟ್ಟಿ ತಯಾರಿಸಿದೆವು. ಮೂವತ್ತು ಮಕ್ಕಳ ಪಟ್ಟಿ ಸಿದ್ಧವಾಯಿತು. ನಿಜ ಹೇಳಬೇಕೆಂದರೆ ಆ ಊರಿನಲ್ಲಿ ಏಕಾಏಕಿ ಆ ಕಾಲದಲ್ಲಿ 30 ಮಕ್ಕಳನ್ನು ಶಾಲೆಗೆ ಕರೆತರುವುದು ಸಾಧ್ಯವೇ ಇರಲಿಲ್ಲ. ಹಾಗೆಂದು ಒಂದು ಉತ್ಸಾಹದಾಯಕ ಸಂಖ್ಯೆಯನ್ನು ಸರ್ಕಾರಕ್ಕೆ ನಾವು ತೋರಿಸಲೇಬೇಕಿತ್ತು. ಆ ಪಟ್ಟಿ ಹಿಡಿದುಕೊಂಡು ನಾನೂ ಶಬರಾಯರೂ ಬೆಳ್ತಂಗಡಿಯಲ್ಲಿದ್ದ ಎಇಒ ಕಚೇರಿಗೆ ಹೋದೆವು. ನಮ್ಮ ಬೇಡಿಕೆ ಆಲಿಸಿದ ಆಗಿನ ಎಇಒ ರಾಮಚಂದ್ರರಾಯರು ನಮಗೇ ಆಶ್ಚರ್ಯವಾಗುವ ಹಾಗೆ, ಇಷ್ಟು ದಿನ ಯಾಕೆ ಬರಲಿಲ್ಲ? ಈಗ ಮೈಲಿಗೊಂದು ಶಾಲೆ ಎಂಬ ಸರ್ಕಾರದ ಕಾನೂನೇ ಇದೆಯಲ್ಲ? ಎಂದು ಕೇಳಿ ನಮ್ಮ ಉತ್ಸಾಹವನ್ನು ಇಮ್ಮಡಿಸಿದರು. ನಾಡಿದ್ದು ಮಂಗಳೂರಲ್ಲಿ ಡಿಡಿಪಿಐ ಅವರ ಮೀಟಿಂಗಿದೆ. ಎಲ್ಲ ವಿವರಗಳನ್ನು ನಾಳೆ ಸಂಜೆಯೊಳಗೆ ತಂದುಕೊಡಿ. ತಡ ಮಾಡಿದರೆ ಮುಂದಿನ ವರ್ಷದವರೆಗೆ ಕಾಯಬೇಕಾಗುತ್ತೆ, ಎಂದು ಪ್ರತ್ಯೇಕವಾಗಿ ನೆನಪಿಸಿದರು.
ಸರಿ, ತಿರುಗಿ ಬಂದವರೇ ನಾಳೆ ಮಾಡಬೇಕಾದ ಕೆಲಸಗಳ ತಯಾರಿಗೆ ತೊಡಗಿದೆವು. ಎಇಒ ಗ್ರಾಮನಕ್ಷೆ ಕೇಳಿದ್ದರು. ಅದು ಬೋಳೋಡಿ ವೆಂಕಟ್ರಮಣ ಭಟ್ರ ಕೈಲಿತ್ತು. ರಾತೋರಾತ್ರಿ ಅಲ್ಲಿಂದ ಅದನ್ನು ತಂದಾಯಿತು. ಮರುದಿನವೇ ನಮ್ಮ ಅರ್ಜಿ ಮತ್ತಿತರ ವಿವರಗಳನ್ನು ಎಇಒ ಅವರಿಗೆ ತಲುಪಿಸಿಯೂ ಆಯಿತು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಸೌತೆಡ್ಕದಲ್ಲಿ ನಾವೆಲ್ಲ ಸೇರಿ ಪ್ರಾರ್ಥನೆ ಸಲ್ಲಿಸಿದ 14ನೇ ದಿನಕ್ಕೆ ಮುಂಡೂರುಪಳಿಕೆಗೆ ಶಾಲೆ ಮಂಜೂರಾಯಿತು. ಬಹುಶಃ ಈಗಿನ ಕಾಲದಲ್ಲೂ ಸರ್ಕಾರಿ ಸೌಲಭ್ಯವೊಂದು ಇಷ್ಟೊಂದು ಶೀಘ್ರವಾಗಿ ಮಂಜೂರಾಗದೇನೋ?
ಅಲ್ಲಿಗೆ ದೊಡ್ಡದೊಂದು ಕೆಲಸ ಮುಗಿಯಿತು. ಆಗಿನ ಕೊಕ್ಕಡದ ಗ್ರಾಮಲೆಕ್ಕಿಗರಾಗಿದ್ದ ಭಂಡಾರಿ ಎಂಬವರೊಬ್ಬರು ಶಾಲೆಗೆಂದು ಒಂದೂವರೆ ಎಕ್ರೆಯಷ್ಟು ಜಾಗ ಅಳೆದು ಕೊಟ್ಟರು. ಆದರೆ ಕೂಡಲೇ ತರಗತಿ ಆರಂಭಿಸಬೇಕಿದ್ದರಿಂದ ನಮಗೆ ಮತ್ತೆ ಸಂಕಷ್ಟಕ್ಕಿಟ್ಟುಕೊಂಡಿತು. ಅಷ್ಟು ಬೇಗ ಕಟ್ಟಡ ಎಲ್ಲಿಂದ ಬರಬೇಕು? ಆ ಹೊತ್ತಿಗೆ ಮತ್ತೆ ಆಪದ್ಬಾಂಧವರಾದವರು ಮುಂಡೂರು ಶಬರಾಯರು. ತಮ್ಮ ಮನೆಯ ಒತ್ತಿಗಿದ್ದ ಕೊಟ್ಟಿಗೆಯಲ್ಲೇ ತತ್ಕಾಲಕ್ಕೆ ಶಾಲೆ ಆರಂಭಿಸಬಹುದೆಂದರು. ಜೂನ್ 27, 1984ರ ಶುಭಮುಹೂರ್ತದಲ್ಲಿ ಎಲಿಕಳ ಸೂರ್ಯನಾರಾಯಣ ಶರ್ಮರ ಅಧ್ಯಕ್ಷತೆಯಲ್ಲಿ ದ.ಕ.ಜಿ.ಪ. ಕಿರಿಯ ಪ್ರಾಥಮಿಕ ಶಾಲೆ ಉದ್ಘಾಟನೆಯಾಯಿತು. ಹಾಗೂಹೀಗೂ 13 ವಿದ್ಯಾರ್ಥಿಗಳು ಸೇರ್ಪಡೆಗೊಂಡರು. ಶಬರಾಯರನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆವು. ಆಗ ಜೋಡುಮಾರ್ಗ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ದಿ. ಲಿಗೋರಿ ಮಿನೆಜಸ್ ಡೆಪ್ಯುಟೇಶನ್ ಮೇಲೆ ಮೊದಲ ಅಧ್ಯಾಪಕರಾಗಿ ನಮ್ಮಲ್ಲಿಗೆ ಬಂದರು. ಆ ನಂತರ ಸ್ವಲ್ಪ ಸಮಯ ಅಶೋಕ ಮಾಸ್ಟ್ರು ಎಂಬವರು ಇದ್ದರು; ಅವರು ಪರವೂರಿನವರಾದ್ದರಿಂದ ನಮ್ಮ ಜೋಪಡಿಯಲ್ಲೇ ಉಳಿದುಕೊಂಡಿದ್ದರು.
ಅಲ್ಲಿಗೆ ನಮ್ಮ ಬಹುದಿನಗಳ ಕನಸೊಂದು ನನಸಾಯಿತಾದರೂ ಜವಾಬ್ದಾರಿ ಮುಗಿದಿರಲಿಲ್ಲ. ಶಾಲೆಗೊಂದು ಸ್ವಂತ ಕಟ್ಟಡ ಬೇಕಿತ್ತು. ಅದರ ಕೆಲಸವೂ ಆರಂಭವಾಯಿತು. ನಿಜ ಹೇಳಬೇಕೆಂದರೆ, ನಮ್ಮ ಶಾಲಾ ಕಟ್ಟಡಕ್ಕೆ ಯಾವ ಎಂಜಿನಿಯರೂ ಇರಲಿಲ್ಲ, ಯಾವ ಬಜೆಟ್ಟೂ ಇರಲಿಲ್ಲ. ಊರಿನ ಹಿರಿತಲೆಗಳೇ ಎಂಜಿನಿಯರುಗಳು, ನಮ್ಮ ಶ್ರಮದಾನವೇ ಬಜೆಟ್ಟು! ಅದೊಂದು ಏಕಕೊಠಡಿಯ ಮುಳಿಹುಲ್ಲು ಛಾವಣಿಯ ಮಣ್ಣಿನ ಗೋಡೆಯ ಸಣ್ಣ ಶಾಲಾ ಕಟ್ಟಡ. ಬದಿಜಾಲು ರಾಮಣ್ಣ ಗೌಡರು ಗೋಡೆ ಇಟ್ಟರು; ಕುರ್ಲೆಯ ಕಿಟ್ಟಣ್ಣ ಅದಕ್ಕೆ ಪೊಳಿಮ್ಮಣೆ ಹಾಕಿದರು; ಮುಂಡೂರಿನ ಶಬರಾಯ ಸಹೋದರರು ಎರಡು ಕಿಟಕಿ ಕೊಟ್ಟರು; ತೆಂಕುಬೈಲು ಶ್ಯಾಮ ಭಟ್ರು ಬಾಗಿಲು ಮಾಡಿಸಿಕೊಟ್ಟರು; ಸಿಬಂತಿಯ ಚಣ್ಣ ಗೌಡರು, ಸುದೆಪೊರ್ದು ಈಶ್ವರಗೌಡರು, ಕೊರಗಪ್ಪ ಗೌಡರು, ಚೆಂಬುಕೇರಿಯ ಬೋರ ಗೌಡರು ಹಗಲಿರುಳು ದುಡಿದರು. ಊರಿನ ಮಂದಿಯೆಲ್ಲ ಎಷ್ಟು ಉತ್ಸುಕರಾಗಿದ್ದರೆಂದರೆ ಪ್ರತೀ ಮನೆಯಿಂದ ಕನಿಷ್ಟ ಒಬ್ಬರಾದರೂ ಖುದ್ದು ಬಂದು ಶ್ರಮದಾನದಲ್ಲಿ ಪಾಲ್ಗೊಂಡರು. ಮೂರು ಪ್ರತ್ಯೇಕ ತಂಡಗಳಲ್ಲಿ ಜನ ದುಡಿದರು. ಒಟ್ಟು ೪೦ ಆಳಿನ ಕೆಲಸದಲ್ಲಿ ನಮ್ಮ ಶಾಲಾ ಕಟ್ಟಡ ಎದ್ದು ನಿಂತಿತು.
ಇದೆಲ್ಲ ನಡೆದು ಈಗ 25 ವರ್ಷಗಳೇ ಉರುಳಿಹೋಗಿವೆ [ಈಗ 36 ವರ್ಷ ಆಯಿತು]. ನನಗೆ 78 ವರ್ಷ ದಾಟಿದೆ [ಈಗ 90]. ಅರೆ, ಇಷ್ಟು ಬೇಗ ನಮ್ಮ ಶಾಲೆಗೆ ರಜತ ಸಂಭ್ರಮ ಬಂತೇ ಎಂದು ಆಶ್ಚರ್ಯವಾಗುತ್ತದೆ. ಶಾಲೆಯಲ್ಲಿ, ಊರಿನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಶಾಲೆಗೆ ಸಿಮೆಂಟಿನ ಗೋಡೆ, ಹೆಂಚಿನ ಮಾಡು, ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಬಂದಿದೆ. ನೂರಾರು ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಹತ್ತಾರು ಅಧ್ಯಾಪಕರು ಬಂದು ಹೋಗಿದ್ದಾರೆ. ಊರಿನಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಜನ ಮೊದಲಿನಷ್ಟು ಬಡವರಾಗಿಲ್ಲ. ಅವರು ಬೇರೆಬೇರೆ ವಿಚಾರದಲ್ಲಿ ಜಾಗೃತಿ ಹೊಂದಿದ್ದಾರೆ. ಆದಾಗ್ಯೂ ಜನರ ಹತ್ತು ಹಲವು ಬೇಡಿಕೆಗಳು ಹಾಗೆಯೇ ಇವೆ. ಈಗ ಶಾಲೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ [ಈಗ 36] ಮುಖ್ಯೋಪಾಧ್ಯಾಯರಾಗಿರುವ ಜೋಸೆಫ್ ಪಿರೇರಾ ಅವರು ಈ ಊರಿಗೆ ಏನಾದರೂ ಶಾಶ್ವತವಾದ ಕೊಡುಗೆ ನೀಡಬೇಕೆಂಬ ವಿಶಿಷ್ಟ ಯೋಜನೆ ಹಾಕಿಕೊಂಡಿದ್ದಾರೆ. ಊರಿನ ಮಂದಿಯನ್ನೆಲ್ಲ ಒಟ್ಟು ಸೇರಿಸಿ ಇಲ್ಲಿನ ಸಮಸ್ಯೆ ಸವಾಲುಗಳಿಗೆ ಅವರ ಮೂಲಕವೇ ಪರಿಹಾರ ಹುಡುಕಿಸುವ ಹೊಸ ಪ್ರಯತ್ನಕ್ಕೆ ಧುಮುಕಿದ್ದಾರೆ. ಜನರೆಲ್ಲ ಅವರೊಂದಿಗೆ ಕೈಗೂಡಿಸಿ ಒಗ್ಗಟ್ಟಾಗಿ ದುಡಿದರೆ ಇದೊಂದು ಮಾದರಿ ಊರಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲಿಗೆ ಕಾಡಿನ ನಡುವೆ ಹುಟ್ಟಿದ ಈ ಕಲಿಕೆಯ ಕನಸಿಗೆ ನಿಜವಾದ ಅರ್ಥ ಬರುತ್ತದೆ.
- ಸಿಬಂತಿ ವೆಂಕಟ್ರಮಣ ಭಟ್

ನಾನು 1975ರ ಜೂನಿನಲ್ಲಿ ಮುಂಡೂರುಪಳಿಕೆಗಿಂತ ಇನ್ನೂ ಎರಡು ಮೈಲು ಆಚೆಗಿರುವ ಸಿಬಂತಿಯಲ್ಲಿ ಬಂದು ನೆಲೆಯೂರಿದ್ದೆ. ನಾನಿದ್ದ ಗುಡಿಸಲು ಬಿಟ್ಟರೆ ಅಲ್ಲೆಲ್ಲೋ ದೂರದ ಸಂಕುವೈಲು, ಅದರಾಚೆಯ ಬಾಳ್ತಿಮಾರು, ಕಕ್ಕುದೋಳಿಗಳಲ್ಲಿ ಎರಡು ಮೂರು ಕುಟುಂಬಗಳು. ಮೈಲುಗಳಷ್ಟು ದೂರ ದಟ್ಟ ಕಾಡಿನಲ್ಲಿ ನಡೆಯಲು ಸಾಧ್ಯವಾದರೆ ನೇತ್ರಾವತಿ ದಂಡೆಯಲ್ಲಿರುವ ಬೀಬಿಮಜಲು, ಸುದೆಪೊರ್ದು, ಚೆಂಬುಕೇರಿ, ಮೈಪಾಳ. ಇನ್ನೊಂದು ದಿಕ್ಕಿನಲ್ಲಿ ಹೋದರೆ ಮಿತ್ತಡ್ಕ, ಪೊನ್ನಿತ್ತಿಮಾರು, ಕುರ್ಲೆ, ತೆಂಕುಬೈಲು, ಬದಿಜಾಲು. ನೀವು ನಂಬಲೇಬೇಕು- ಇಷ್ಟು ವಿಸ್ತಾರವಾದ ವ್ಯಾಪ್ತಿಯಲ್ಲಿ ಹುಟ್ಟಿದ ಯಾವುದೇ ಮಗುವೂ ಶಿಕ್ಷಣದಿಂದ ವಂಚಿತವಾಗಿಯೇ ಉಳಿಯಬೇಕಿತ್ತು. ಶಾಲೆ ಬೇಕೆಂದರೆ ಎಂಟೋ ಹತ್ತೋ ಕಿಲೋಮೀಟರ್ ನಡೆಯಬೇಕು. ಐದು ವರ್ಷದ ಒಂದು ಮಗು ಅಷ್ಟು ದೂರ ನಡೆದುಹೋಗಿ ಒಂದನೇ ಕ್ಲಾಸಾದರೂ ಮುಗಿಸುವುದುಂಟೇ?
ಮೊದಲೇ ಹೇಳಿದಂತೆ ನಮ್ಮದು ಅಂತಹ ಜನದಟ್ಟಣೆಯ ಊರಂತೂ ಆಗಿರಲಿಲ್ಲ. ಹಾಗೆಂದು ಇರುವ ಮಕ್ಕಳಿಗಾದರೂ ಶಿಕ್ಷಣದ ಬೆಳಕು ಕಾಣಿಸಲೇಬೇಕಿತ್ತು. ನಾನು ಪ್ರಾಥಮಿಕ ಶಿಕ್ಷಣವನ್ನೇ ಪೂರ್ತಿಯಾಗಿ ಮುಗಿಸಿರಲಿಲ್ಲವಾದರೂ ಜೀವನಾನುಭವದ ಪಾಠ ನನಗಿತ್ತು. ಒಂದು ಶಾಲೆ ಕೇವಲ ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕಷ್ಟೇ ಸೀಮಿತವಲ್ಲ, ಅದಕ್ಕೆ ಇಡೀ ಊರಿನ ಚಿತ್ರಣ ಬದಲಾಯಿಸುವ ಸಾಮರ್ಥ್ಯವಿದೆ ಎಂಬುದು ನನಗೆ ತಿಳಿದಿತ್ತು. ಆ ಪ್ರದೇಶದ ಕೆಲವು ಹಿರಿಕಿರಿಯ ತಲೆಗಳೂ ನನ್ನ ಯೋಚನೆಯನ್ನು ಬೆಂಬಲಿಸಿದವು. ಹಾಗೆ ಹುಟ್ಟಿಕೊಂಡಿತು ಒಂದು ಶಾಲೆಯ ಕನಸು.
ಆದರೆ ಸ್ವಂತ ಹಣ ಹಾಕಿ ಒಂದು ಖಾಸಗಿ ಶಾಲೆ ಆರಂಭಿಸುವ ಸಾಮರ್ಥ್ಯದವರು ನಾವ್ಯಾರೂ ಆಗಿರಲಿಲ್ಲ. ಮೂರು ಹೊತ್ತು ಗಂಜಿ ಊಟಕ್ಕೆ ಪರದಾಡುವವರೇ ಎಲ್ಲರೂ. ಹೆಚ್ಚಿನವರೂ ಕೂಲಿನಾಲಿ ಮಾಡಿ ಬದುಕುವವರು. ನಮಗೆ ಒಂದು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯೇ ಬೇಕಾಗಿತ್ತು.
ಅವು 1980ರ ದಶಕದ ಆರಂಭಿಕ ವರ್ಷಗಳು. ಕೊಕ್ಕಡ ಪಟ್ರಮೆ ಗ್ರಾಮಗಳಿಗೆ ಮಂಗನ ಕಾಯಿಲೆ (KFD)ಯ ಬರಸಿಡಿಲು ಬಡಿದಿತ್ತು. ಸಾವಿನ ಸಂಖ್ಯೆ ದಿನೇದಿನೇ ಬೆಳೆಯುತ್ತಲೇ ಇತ್ತು. ಊರಿನ ಅಭಿವೃದ್ಧಿಯ ಕನಸು ಹೊತ್ತಿದ್ದ ನಾವು ಅದಾಗಲೇ ಅಡ್ಡೈ-ಮುಂಡೂರುಪಳಿಕೆ-ಮೈಪಾಳ ರಸ್ತೆ ನಿರ್ಮಿಸಿಯಾಗಿತ್ತು. ವಿಪರ್ಯಾಸವೆಂದರೆ ಅದೇ ಹೊಸ ರಸ್ತೆಯಲ್ಲಿ ಬಂದ ಮೊದಲ ವಾಹನ ಮಂಗನಕಾಯಿಲೆಗೆ ಬಲಿಯಾದ ಇಬ್ಬರ ಶವವನ್ನು ಹೊತ್ತು ತಂದುದಾಗಿತ್ತು... ಇದೇ ಕೊನೆ, ಇನ್ನು ಈ ಊರಿನಲ್ಲಿ ಈ ರೀತಿ ಮೃತ್ಯುವಿನ ಪ್ರವೇಶವಾಗಬಾರದು ಎಂದು ನಿರ್ಧರಿಸಿದ ನಾವು ಊರಿನ ಹತ್ತು ಸಮಸ್ತರು ಒಂದಾಗಿ ಹೋಗಿ ಕೊಕ್ಕಡ ಮತ್ತು ಸೌತೆಡ್ಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಮನಸಾರೆ ಪ್ರಾರ್ಥಿಸಿದೆವು. ಹೌದು, ಅದೇ ದಿನ ನಾವು ದೇವರ ಎದುರು ನಿಂತು ನಮ್ಮೂರಿಗೊಂದು ಶಾಲೆ ತರುವ ಸಂಕಲ್ಪವನ್ನೂ ಮಾಡಿದೆವು.
ನಾನೂ ಮುಂಡೂರು ಲಕ್ಷ್ಮೀನಾರಾಯಣ ಶಬರಾಯರೂ ಒಂದೆಡೆ ಕುಳಿತು ಶಾಲೆ ಆರಂಭವಾದರೆ ಎಷ್ಟು ಮಕ್ಕಳು ಒಂದನೇ ಕ್ಲಾಸಿಗೆ ಸೇರಬಹುದೆಂದು ಒಂದು ಪಟ್ಟಿ ತಯಾರಿಸಿದೆವು. ಮೂವತ್ತು ಮಕ್ಕಳ ಪಟ್ಟಿ ಸಿದ್ಧವಾಯಿತು. ನಿಜ ಹೇಳಬೇಕೆಂದರೆ ಆ ಊರಿನಲ್ಲಿ ಏಕಾಏಕಿ ಆ ಕಾಲದಲ್ಲಿ 30 ಮಕ್ಕಳನ್ನು ಶಾಲೆಗೆ ಕರೆತರುವುದು ಸಾಧ್ಯವೇ ಇರಲಿಲ್ಲ. ಹಾಗೆಂದು ಒಂದು ಉತ್ಸಾಹದಾಯಕ ಸಂಖ್ಯೆಯನ್ನು ಸರ್ಕಾರಕ್ಕೆ ನಾವು ತೋರಿಸಲೇಬೇಕಿತ್ತು. ಆ ಪಟ್ಟಿ ಹಿಡಿದುಕೊಂಡು ನಾನೂ ಶಬರಾಯರೂ ಬೆಳ್ತಂಗಡಿಯಲ್ಲಿದ್ದ ಎಇಒ ಕಚೇರಿಗೆ ಹೋದೆವು. ನಮ್ಮ ಬೇಡಿಕೆ ಆಲಿಸಿದ ಆಗಿನ ಎಇಒ ರಾಮಚಂದ್ರರಾಯರು ನಮಗೇ ಆಶ್ಚರ್ಯವಾಗುವ ಹಾಗೆ, ಇಷ್ಟು ದಿನ ಯಾಕೆ ಬರಲಿಲ್ಲ? ಈಗ ಮೈಲಿಗೊಂದು ಶಾಲೆ ಎಂಬ ಸರ್ಕಾರದ ಕಾನೂನೇ ಇದೆಯಲ್ಲ? ಎಂದು ಕೇಳಿ ನಮ್ಮ ಉತ್ಸಾಹವನ್ನು ಇಮ್ಮಡಿಸಿದರು. ನಾಡಿದ್ದು ಮಂಗಳೂರಲ್ಲಿ ಡಿಡಿಪಿಐ ಅವರ ಮೀಟಿಂಗಿದೆ. ಎಲ್ಲ ವಿವರಗಳನ್ನು ನಾಳೆ ಸಂಜೆಯೊಳಗೆ ತಂದುಕೊಡಿ. ತಡ ಮಾಡಿದರೆ ಮುಂದಿನ ವರ್ಷದವರೆಗೆ ಕಾಯಬೇಕಾಗುತ್ತೆ, ಎಂದು ಪ್ರತ್ಯೇಕವಾಗಿ ನೆನಪಿಸಿದರು.
ಅಪ್ಪ |
ಅಲ್ಲಿಗೆ ದೊಡ್ಡದೊಂದು ಕೆಲಸ ಮುಗಿಯಿತು. ಆಗಿನ ಕೊಕ್ಕಡದ ಗ್ರಾಮಲೆಕ್ಕಿಗರಾಗಿದ್ದ ಭಂಡಾರಿ ಎಂಬವರೊಬ್ಬರು ಶಾಲೆಗೆಂದು ಒಂದೂವರೆ ಎಕ್ರೆಯಷ್ಟು ಜಾಗ ಅಳೆದು ಕೊಟ್ಟರು. ಆದರೆ ಕೂಡಲೇ ತರಗತಿ ಆರಂಭಿಸಬೇಕಿದ್ದರಿಂದ ನಮಗೆ ಮತ್ತೆ ಸಂಕಷ್ಟಕ್ಕಿಟ್ಟುಕೊಂಡಿತು. ಅಷ್ಟು ಬೇಗ ಕಟ್ಟಡ ಎಲ್ಲಿಂದ ಬರಬೇಕು? ಆ ಹೊತ್ತಿಗೆ ಮತ್ತೆ ಆಪದ್ಬಾಂಧವರಾದವರು ಮುಂಡೂರು ಶಬರಾಯರು. ತಮ್ಮ ಮನೆಯ ಒತ್ತಿಗಿದ್ದ ಕೊಟ್ಟಿಗೆಯಲ್ಲೇ ತತ್ಕಾಲಕ್ಕೆ ಶಾಲೆ ಆರಂಭಿಸಬಹುದೆಂದರು. ಜೂನ್ 27, 1984ರ ಶುಭಮುಹೂರ್ತದಲ್ಲಿ ಎಲಿಕಳ ಸೂರ್ಯನಾರಾಯಣ ಶರ್ಮರ ಅಧ್ಯಕ್ಷತೆಯಲ್ಲಿ ದ.ಕ.ಜಿ.ಪ. ಕಿರಿಯ ಪ್ರಾಥಮಿಕ ಶಾಲೆ ಉದ್ಘಾಟನೆಯಾಯಿತು. ಹಾಗೂಹೀಗೂ 13 ವಿದ್ಯಾರ್ಥಿಗಳು ಸೇರ್ಪಡೆಗೊಂಡರು. ಶಬರಾಯರನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆವು. ಆಗ ಜೋಡುಮಾರ್ಗ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ದಿ. ಲಿಗೋರಿ ಮಿನೆಜಸ್ ಡೆಪ್ಯುಟೇಶನ್ ಮೇಲೆ ಮೊದಲ ಅಧ್ಯಾಪಕರಾಗಿ ನಮ್ಮಲ್ಲಿಗೆ ಬಂದರು. ಆ ನಂತರ ಸ್ವಲ್ಪ ಸಮಯ ಅಶೋಕ ಮಾಸ್ಟ್ರು ಎಂಬವರು ಇದ್ದರು; ಅವರು ಪರವೂರಿನವರಾದ್ದರಿಂದ ನಮ್ಮ ಜೋಪಡಿಯಲ್ಲೇ ಉಳಿದುಕೊಂಡಿದ್ದರು.
ಅಲ್ಲಿಗೆ ನಮ್ಮ ಬಹುದಿನಗಳ ಕನಸೊಂದು ನನಸಾಯಿತಾದರೂ ಜವಾಬ್ದಾರಿ ಮುಗಿದಿರಲಿಲ್ಲ. ಶಾಲೆಗೊಂದು ಸ್ವಂತ ಕಟ್ಟಡ ಬೇಕಿತ್ತು. ಅದರ ಕೆಲಸವೂ ಆರಂಭವಾಯಿತು. ನಿಜ ಹೇಳಬೇಕೆಂದರೆ, ನಮ್ಮ ಶಾಲಾ ಕಟ್ಟಡಕ್ಕೆ ಯಾವ ಎಂಜಿನಿಯರೂ ಇರಲಿಲ್ಲ, ಯಾವ ಬಜೆಟ್ಟೂ ಇರಲಿಲ್ಲ. ಊರಿನ ಹಿರಿತಲೆಗಳೇ ಎಂಜಿನಿಯರುಗಳು, ನಮ್ಮ ಶ್ರಮದಾನವೇ ಬಜೆಟ್ಟು! ಅದೊಂದು ಏಕಕೊಠಡಿಯ ಮುಳಿಹುಲ್ಲು ಛಾವಣಿಯ ಮಣ್ಣಿನ ಗೋಡೆಯ ಸಣ್ಣ ಶಾಲಾ ಕಟ್ಟಡ. ಬದಿಜಾಲು ರಾಮಣ್ಣ ಗೌಡರು ಗೋಡೆ ಇಟ್ಟರು; ಕುರ್ಲೆಯ ಕಿಟ್ಟಣ್ಣ ಅದಕ್ಕೆ ಪೊಳಿಮ್ಮಣೆ ಹಾಕಿದರು; ಮುಂಡೂರಿನ ಶಬರಾಯ ಸಹೋದರರು ಎರಡು ಕಿಟಕಿ ಕೊಟ್ಟರು; ತೆಂಕುಬೈಲು ಶ್ಯಾಮ ಭಟ್ರು ಬಾಗಿಲು ಮಾಡಿಸಿಕೊಟ್ಟರು; ಸಿಬಂತಿಯ ಚಣ್ಣ ಗೌಡರು, ಸುದೆಪೊರ್ದು ಈಶ್ವರಗೌಡರು, ಕೊರಗಪ್ಪ ಗೌಡರು, ಚೆಂಬುಕೇರಿಯ ಬೋರ ಗೌಡರು ಹಗಲಿರುಳು ದುಡಿದರು. ಊರಿನ ಮಂದಿಯೆಲ್ಲ ಎಷ್ಟು ಉತ್ಸುಕರಾಗಿದ್ದರೆಂದರೆ ಪ್ರತೀ ಮನೆಯಿಂದ ಕನಿಷ್ಟ ಒಬ್ಬರಾದರೂ ಖುದ್ದು ಬಂದು ಶ್ರಮದಾನದಲ್ಲಿ ಪಾಲ್ಗೊಂಡರು. ಮೂರು ಪ್ರತ್ಯೇಕ ತಂಡಗಳಲ್ಲಿ ಜನ ದುಡಿದರು. ಒಟ್ಟು ೪೦ ಆಳಿನ ಕೆಲಸದಲ್ಲಿ ನಮ್ಮ ಶಾಲಾ ಕಟ್ಟಡ ಎದ್ದು ನಿಂತಿತು.
![]() |
ನಮ್ಮೂರ ಮುಂಡೂರುಪಳಿಕೆ ಶಾಲೆ |
- ಸಿಬಂತಿ ವೆಂಕಟ್ರಮಣ ಭಟ್