೨೦೦೩ರ ಮೇ ತಿಂಗಳು. ನಸುಕು ಹರಿಯುವ ಹೊತ್ತಿಗೆ ನಾನು ಬೆಂಗಳೂರಿನ ಮೆಜೆಸ್ಟಿಕ್ ಎಂಬೋ ಗಡಿಬಿಡಿಗೆ ತಲುಪಿಯಾಗಿತ್ತು. ಆದರೆ ಇನ್ನೂ ಆರು ಗಂಟೆಯಾದ್ದರಿಂದ ಮಹಾನಗರಿ ತನ್ನನ್ನು ಅಷ್ಟೇನೂ ಗಡಿಬಿಡಿ ಮಾಡಿಕೊಂಡಿರಲಿಲ್ಲ. ಮೊದಲು ಬಿಎಂಟಿಸಿ ಬಸ್ಟ್ಯಾಂಡಿತ್ತ ಹೋಗಿ ಅಲ್ಲೊಂದು ನಳ್ಳಿಯ ಬುಡದಲ್ಲಿ ಮುಖ ತೊಳೆದುಕೊಳ್ಳುವ ಶಾಸ್ತ್ರ ಮಾಡಿದೆ. ಹತ್ತು ಹೆಜ್ಜೆ ನಡೆದು ಒಂದು ಕ್ಯಾಂಟೀನ್ ಹೊಕ್ಕು ನನ್ನ ಪರ್ಸಿನ ಫೇವರಿಟ್ ಆಗಿದ್ದ ಪ್ಲೇಟ್ ಇಡ್ಲಿ-ಮಿನಿ ಕಾಫಿ ಕುಡಿದು ಹೊರಬಂದೆ.
ಅಲ್ಲೊಂದಿಷ್ಟು ಖಾಲಿ ಜಾಗ ಇತ್ತು. ಕುಳಿತುಕೊಳ್ಳಬಹುದಾದ ಕೆಲವು ಸಿಮೆಂಟಿನ ಕಟ್ಟೆಗಳಿದ್ದವು. ಯಾವ್ಯಾವುದೋ ಕೆಲಸಕ್ಕೆ ಎಲ್ಲೆಲ್ಲಿಂದಲೋ ಬಂದ ಹತ್ತಾರು ಮಂದಿ ಅವರವರ ತಯಾರಿಯಲ್ಲಿ ತೊಡಗಿದ್ದರು. ಬಟ್ಟೆ ಬದಲಾಯಿಸುತ್ತಿದ್ದ ಕೆಲವರನ್ನು ಕಂಡು ನಾನೂ ಅದನ್ನು ಇಲ್ಲೇ ಮಾಡಿಬಿಡಬಹುದಲ್ಲ ಅನಿಸಿತು. ಪುಸ್ತಕಗಳಿಂದ ತುಂಬಿ ಠೊಣಪನಂತಾಗಿದ್ದ ನನ್ನ ಬ್ಯಾಗು ಬಿಚ್ಚಿ ಬೇರೆ ಶರ್ಟು ಹಾಕಿಕೊಂಡೆ. ಹೆಚ್ಚೆಂದರೆ ಇನ್ನೂ ಏಳು ಗಂಟೆ. ನನ್ನ ಎಕ್ಸಾಮು ಹತ್ತು ಗಂಟೆಗೆ. ಅದೂ ಬಹಳ ದೂರದ ಜಾಗವೇನಲ್ಲ. ಕ್ವೀನ್ಸ್ ರೋಡು. ಇನ್ನೊಂದು ಗಂಟೆ ಬಿಟ್ಟು ಹೊರಟರೆ ಧಾರಾಳವಾಯ್ತು ಅಂತ ಲೆಕ್ಕ ಹಾಕಿ ಇಯರ್ ಬುಕ್ಕೊಂದನ್ನು ತೆಗೆದು ತಿರುವಿ ಹಾಕಲಾರಂಭಿಸಿದೆ.
ಇಷ್ಟೆಲ್ಲ ನಡೆಯುವಾಗಲೂ ನನ್ನೆದೆ ಮಾತ್ರ ಢವಢವ ಹೊಡಕೊಳ್ಳುತ್ತಲೇ ಇತ್ತು. ಮುಂದೆ ಹೇಗೋ ಏನೋ ಎಂಬೊಂದು ಕಳವಳ ಜತೆಗೇ ಅದಕ್ಕಿಂತ ಇದ್ದು ಹೆಚ್ಚು ಭಯವಾಗದಂತೆ ನೋಡಿಕೊಳ್ಳುತ್ತಿತ್ತು. ನಾನೊಂದು ಎಂಟ್ರೆನ್ಸ್ ಪರೀಕ್ಷೆ ಬರೆಯಬೇಕಿತ್ತು. ‘ದಿ ಹಿಂದೂ’ ಅವರ ಒಡೆತನಕ್ಕೆ ಬಂದು ಚೆನ್ನೈಗೆ ಶಿಫ್ಟ್ ಆಗಿದ್ದ ಏಶಿಯನ್ ಕಾಲೇಜ್ ಆಫ್ ಜರ್ನಲಿಸಂನ ಪ್ರವೇಶ ಪರೀಕ್ಷೆ. ಎ.ಸಿ.ಜೆ. ಕೆಲ ವರ್ಷಗಳ ಮುಂಚೆ ಬೆಂಗಳೂರಿನಲ್ಲೇ ಇತ್ತು. ಎಕ್ಸ್ಪ್ರೆಸ್ ಬಳಗದ ಒಡೆತನದಲ್ಲಿತ್ತು. ಅದರಲ್ಲಿ ಡಿಗ್ರಿ ಪಡೆದವರೆಲ್ಲ ದೊಡ್ಡ ಜರ್ನಲಿಸ್ಟ್ ಆಗುತ್ತಾರೆ ಎಂಬೊಂದು ಭ್ರಮೆ ಆ ಸಮಯಕ್ಕೆ ನನಗೂ ಇತ್ತು. ಹಾಗಂತ ಅದು ನನ್ನಂಥವರಿಗೆ ದುಬಾರಿ ಅಂತಲೂ ಗೊತ್ತಿತ್ತು. ಮುದ್ರಣ ಮಾಧ್ಯಮದ ಒಂದು ವರ್ಷದ ಕೋರ್ಸಿಗೆ ಒಂದೂವರೆ ಲಕ್ಷ. ಸಂಸ್ಥೆಯ ಪ್ರಾಸ್ಪೆಕ್ಟಸ್ಗೇ ಒಂದು ಸಾವಿರ ಕಳುಹಿಸಬೇಕು ಎಂದಾಗಲೇ ನನ್ನ ಅರ್ಧ ಉತ್ಸಾಹ ಉಡುಗಿತ್ತು. ಫೀ ಕನ್ಸೆಶನ್, ಸ್ಕಾಲರ್ಶಿಪ್ ಬೆಂಬಲದಲ್ಲೇ ಬಿ.ಎ. ಓದುತ್ತಿದ್ದ ನನಗೆ ಎ.ಸಿ.ಜೆ. ಒಂದು ಒಳ್ಳೆಯ ಯುಟೋಪಿಯಾ ಅಷ್ಟೇ ಆಗಿತ್ತು. ಆದರೂ ಆದದ್ದಾಗಲಿ ಎಂದು ಹಾಗೂ ಹೀಗೂ ಒಂದು ಸಾವಿರ ಸಂಗ್ರಹಿಸಿ ಅಪ್ಲಿಕೇಶನ್ ತರಿಸಿಕೊಂಡು ಇಲ್ಲಿಯವರೆಗೆ ಬಂದಾಗಿತ್ತು.
ಎಂಟೂಮುಕ್ಕಾಲರ ಹೊತ್ತಿಗೆಲ್ಲ ನಾನು ಇಂಡಿಯನ್ ಎಕ್ಸ್ಪ್ರೆಸ್ ಸೌಧದ ಎದುರಿನ ಬಸ್ಟ್ಯಾಂಡಿನಲ್ಲಿಳಿದುಕೊಂಡೆ. ಎರಡು ಬಾರಿ ಇಂಟರ್ನ್ಶಿಪ್ಪಿಗೆಂದು ಬಂದು ಹಾದಿ ಬೀದಿ ಅಲೆದು ಗೊತ್ತಿದ್ದರಿಂದ ಊರು ಅಷ್ಟೊಂದು ಅಪರಿಚಿತವಲ್ಲದಿದ್ದರೂ ಅದೊಂದು ಬಗೆಯ ಅಪರಿಚಿತತೆ ಸುತ್ತಮುತ್ತೆಲ್ಲ ಸುಳಿದಾಡುತ್ತಿತ್ತು. ಪುನಃ ಓದಲು ಕುಳಿತರೆ ಈ ಒಳಗೊಳಗಿನ ನಡುಕದಲ್ಲಿ ಏನೇನೂ ಅರ್ಥವಾಗುತ್ತಿರಲಿಲ್ಲ. ಆ ಸಮಯಕ್ಕೆ ಸರಿಯಾಗಿ ಅಭಯ ಸಿಂಹ http://abhayatalkies.com/ಬಾರದೇ ಹೋಗಿರುತ್ತಿದ್ದರೆ ಮುಂದಿನ ಒಂದು ಗಂಟೆ ಕಳೆಯುವುದು ನನಗೆ ಬಹಳೇ ಕಷ್ಟವಾಗುತ್ತಿತ್ತು.
ಅಭಯ ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಆಗಷ್ಟೆ ಡಿಗ್ರಿ ಮುಗಿಸಿದ್ದ. ನನ್ನದು ಉಜಿರೆಯ ಎಸ್.ಡಿ.ಎಂ. ಕಾಲೇಜು. ನಮ್ಮದು ಅದು ಮೊದಲ ಭೇಟಿಯೇನೂ ಆಗಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಭಾಷಣ-ಡಿಬೇಟು ಅಂತ ಮೂರೂ ವರ್ಷ ಅಲ್ಲಲ್ಲಿ ಭೆಟ್ಟಿ ಮಾಡುತ್ತಿದ್ದೆವು. ಶ್ರೀಶ, ಶಶಾಂಕ, ಭಾರತಿ, ರವಿಶಂಕರ, ನಾನು - ಹೀಗೆ ನಮ್ಮ ಪಟಾಲಮ್ಮು ಸುತ್ತಾಡುತ್ತಿರಬೇಕಾದರೆ ಅಭಯನೂ ಓರಗೆಯವನಿದ್ದ. ಆತ ಆಗಲೇ ಸಿನಿಮಾ, ಡಾಕ್ಯುಮೆಂಟರಿ, ಫೋಟೋಗ್ರಫಿ ಅಂತ ನನಗಿಂತ ಕೊಂಚ ಭಿನ್ನವಾದ ಆಸಕ್ತಿಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಅಷ್ಟೊಂದು ವಿವರವಾದ ಪರಿಚಯವಿರಲಿಲ್ಲ. ಕೊನೆಯ ಒಂದು ವರ್ಷದಲ್ಲಿ ನಾವು ಭೇಟಿಯಾದದ್ದು ಕಮ್ಮಿ. ಈ ಎಂಟ್ರೆನ್ಸ್ ಎಕ್ಸಾಮಿನ ನೆಪದಲ್ಲಿ ಮತ್ತೊಮ್ಮೆ ಒಂದು ಗಂಟೆ ಕುಳಿತು ನಮ್ಮ ನಮ್ಮ ಕನಸುಗಳ ಬಗ್ಗೆ ಮಾತಾಡಿಕೊಳ್ಳುವ ಅವಕಾಶ ಸಿಕ್ಕಿತು.
ಅಭಯ ಕೊಂಚ ತಯಾರಿಯಲ್ಲಿ ಬಂದಿದ್ದನೋ ಏನೋ, ನನ್ನದು ಏನೇನೂ ಇರಲಿಲ್ಲ. ನನ್ನಲ್ಲಿದ್ದ ಆಸ್ತಿ ಒಂದು ಮನೋರಮಾ ಇಯರ್ ಬುಕ್ಕು, ಭಾರತಿ ಕೊಟ್ಟಿದ್ದ ಕೆಲವು ‘ದಿಕ್ಸೂಚಿ’ಯ ಸಂಚಿಕೆಗಳು. ಅದನ್ನಾದರೂ ನೇರ್ಪಕ್ಕೆ ಓದಿಕೊಂಡಿರಲಿಲ್ಲ. ಏನನ್ನು ಓದಬೇಕು, ಹೇಗೆ ಓದಬೇಕು ಎಂಬುದ್ಯಾವುದೂ ಗೊತ್ತಿರಲಿಲ್ಲ. ಅಭಯ ತನ್ನ ಸಿನೆಮಾ ಕನಸುಗಳ ಬಗ್ಗೆ ಮಾತಾಡುತ್ತಿದ್ದ. ಅವನು ವಸ್ತುಶಃ ಪುಣೆಗೆ ಹೋಗಲು ತುದಿಗಾಲಲ್ಲಿ ನಿಂತಿದ್ದ. ಅಲ್ಲಿನ ಪ್ರತಿಷ್ಠಿತ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಅಧ್ಯಯನ ಮಾಡುವುದು ಅವನ ಮಹದಂಬಲವಿತ್ತು. ಅದಕ್ಕಾಗಿ ಆಗಲೇ ಸಾಕಷ್ಟು ತಯಾರಿ ಮಾಡಿದ್ದ, ತಿಳಿದುಕೊಂಡೂ ಇದ್ದ. ಬಹುಶಃ ಆಗಲೇ ಅದರ ಪ್ರವೇಶ ಪರೀಕ್ಷೆ ಮುಗಿಸಿ ಬಂದಿದ್ದ ಎಂದು ನೆನಪು. ಅದೇ ಸಿಗಬೇಕು, ಒಂದು ವೇಳೆ ಕೈತಪ್ಪಿದರೆ ಇದಾದರೂ ಸೇಫ್ಟಿಗಿರಲಿ ಎಂದು ಎ.ಸಿ.ಜೆ. ಎಕ್ಸಾಮ್ಗೆ ಬಂದಿದ್ದ. ಎಫ್ಟಿಐಐಯಲ್ಲಿ ಸೀಟು ಸಿಗದಿದ್ದರೆ ಎ.ಸಿ.ಜೆ.ಯ ಎಲೆಕ್ಟ್ರಾನಿಕ್ ಮಾಧ್ಯಮ ವಿಭಾಗದಲ್ಲಿ ಅಧ್ಯಯನ ಮಾಡುವ ಗುರಿಯಿತ್ತು ಅವನಿಗೆ.
ಸರಿ, ಒಂದು ಗಂಟೆ ಇಬ್ಬರೂ ಹಿಂದಿನ ವರ್ಷಗಳ ಬಗ್ಗೆ, ಮುಂದಿನ ಅಧ್ಯಯನದ ಬಗ್ಗೆ ಮಾತಾಡಿಕೊಂಡ ನಂತರ ಒಂದು ಬಗೆಯ ನಿರಾಳತೆ ಇತ್ತು. ಬಹುಶಃ ಆ ಪರೀಕ್ಷೆಗೆ ಮಂಗಳೂರು ಕಡೆಯಿಂದ ನಾವಿಬ್ಬರೇ ಹೋಗಿದ್ದೆವು ಅನಿಸುತ್ತದೆ.
ಎರಡು ಗಂಟೆಯ ಪರೀಕ್ಷೆ ನನಗಂತೂ ಕಬ್ಬಿಣದ ಕಡಲೆಯಾಗಿತ್ತು. ಭಾಷೆ-ವ್ಯಾಕರಣ-ವರದಿ ತಯಾರಿಸುವ ಪ್ರಶ್ನೆಗಳ ಹೊರತಾಗಿ ಉಳಿದವ್ಯಾವುದೂ ನನ್ನ ಕೈಗೆಟುಕುವಂಥವಿರಲಿಲ್ಲ. ಪ್ರಚಲಿತ ವಿದ್ಯಮಾನಗಳ ವಿಷಯದಲ್ಲಿ ನಾನು ಬಹಳ ಬಹಳ ಹಿಂದಿದ್ದೆ. ಪರೀಕ್ಷೆಯ ಬಹುಪಾಲು ಕರೆಂಟ್ ಅಫೇರ್ಸ್ ಮತ್ತು ಜನರಲ್ ನಾಲೆಜ್ ಪ್ರಶ್ನೆಗಳೇ ಇದ್ದವು.
ಪರೀಕ್ಷೆ ಮುಗಿಸಿ ಹೊರಬಂದು ಪರಸ್ಪರ ಬೀಳ್ಕೊಂಡ ಬಳಿಕ ನಾನೂ ಅಭಯನೂ ಭೇಟಿಯಾದದ್ದು ಬರೋಬ್ಬರಿ ಏಳು ವರ್ಷಗಳ ನಂತರ, ಮೊನ್ನೆ ‘ಅಭಯಾರಣ್ಯ’ದಲ್ಲಿ. ಅಭಯನಿಗೆ ಅವನಿಚ್ಛೆಯ ಎಫ್ಟಿಐಐ ದೊರಕಿತ್ತು, ನಾನು ಎ.ಸಿ.ಜೆ.ಗೆ ಆ ವರ್ಷ ಬೇಕಾಗಿದ್ದ ೩೦ ಮಂದಿಯ ಪಟ್ಟಿಯಲ್ಲಿ ಕಾಣಿಸಿಕೊಳ್ಳದೆ ಮಂಗಳೂರು ವಿ.ವಿ. ಸೇರಿಕೊಂಡಿದ್ದೆ.
ಅವನ ಚಟುವಟಿಕೆಗಳ ಬಗ್ಗೆ ಆಗಿಂದಾಗ್ಗೆ ಅವನ ತಂದೆ ‘ಅತ್ರಿ ಬುಕ್ ಸೆಂಟರ್’ನ ಅಶೋಕವರ್ಧನರ http://athreebook.com/ಮೂಲಕ ತಿಳಿದುಕೊಂಡಿರುತ್ತಿದ್ದರೂ ಮುಖತಾ ಭೇಟಿ ನಡೆದಿರಲಿಲ್ಲ. ಅದಕ್ಕೆ ಅಶೋಕವರ್ಧನರೂ ಮನೋಹರ ಉಪಾಧ್ಯಾಯರೂ ‘ಅಭಯಾರಣ್ಯ’ http://athreebook.com/2009/11/06/06nov2009/ದಲ್ಲಿ ಆಯೋಜಿಸಿದ್ದ ದೀವಟಿಗೆ ಯಕ್ಷಗಾನವೇ http://athreebook.com/2009/11/19/19nov2009/ಬೇಕಾಯಿತು. http://athreebook.com/2009/12/07/07dec2009/ಅಭಯ ತನ್ನ ಕ್ಯಾಮರಾ ತಂಡದೊಂದಿಗೆ ಆ ರಾತ್ರಿಯ ಪ್ರದರ್ಶನದ ವೀಡಿಯೋ ರೆಕಾರ್ಡಿಂಗ್ ಮಾಡುವುದಕ್ಕೆಂದು ಬಂದಿದ್ದ. ಇನ್ ಫ್ಯಾಕ್ಟ್, ಆ ಯಕ್ಷಗಾನ ಆಯೋಜಿಸಿದ್ದೇ ಮರೆಯಾಗುತ್ತಿರುವ ಅಥವಾ ಹೆಚ್ಚೂಕಡಿಮೆ ಮರೆಯಾಗಿರುವ ಸಾಂಪ್ರದಾಯಿಕ ಶೈಲಿಯ ದೀವಟಿಗೆ ಯಕ್ಷಗಾನದ ವೀಡಿಯೋ ದಾಖಲೀಕರಣಕ್ಕಾಗಿಯೇ. ಅಂತಹ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದ ಪುಣ್ಯವಂತರುಗಳಲ್ಲಿ ನಾನೂ ಒಬ್ಬನಾದ್ದರಿಂದ ಇಷ್ಟು ವರ್ಷಗಳ ನಂತರ ಮತ್ತೆ ಅಭಯನನ್ನು ಕಂಡು ಮಾತಾಡುವ ಸಂದರ್ಭವೂ ಒದಗಿತು. ದೀವಟಿಗೆ, ಕ್ಯಾಮರಾ, ಕಟ್, ರೋಲಿಂಗ್, ಸ್ಟಾರ್ಟ್ ಎಂದು ತಂಡದೊಂದಿದೆ ಪೂರ್ತಿ ಬ್ಯುಸಿಯಾಗಿದ್ದ ಆತನನ್ನು ಮಾತಾಡಿಸುವುದಕ್ಕೆ ಸ್ವಲ್ಪವಾದರೂ ಹೊತ್ತು ಸಿಕ್ಕಿದ್ದು ಎರಡು ಪ್ರದರ್ಶನಗಳ ಬ್ರೇಕ್ ನಡುವೆ. ಮಂದಬೆಳಕಿನಲ್ಲಿ ಪರಸ್ಪರ ಸರಿಯಾಗಿ ಮುಖ ನೋಡಿಕೊಳ್ಳಲಾಗದಿದ್ದರೂ ಸಿಕ್ಕ ಹತ್ತು ನಿಮಿಷದಲ್ಲಿ ಅದೇನೇನೋ ಮಾತಾಡಿದೆವು. ನನಗೆ ಅಚ್ಚರಿಯಾದುದು ಆಗಲೇ ಸಿನೆಮಾ ಡಾಕ್ಯುಮೆಂಟರಿ ಎಂದು ಸಾಕಷ್ಟು ಸಾಧನೆ ಮಾಡಿದ್ದ ಅಭಯ ವೈಯುಕ್ತಿಕವಾಗಿ ಒಂದಿಷ್ಟೂ ಬದಲಾಗದೆ ಇದ್ದದ್ದು. ಏಳು ವರ್ಷಗಳ ಹಿಂದೆ ಎಕ್ಸಾಮ್ ಹಾಲಿನ ಪಕ್ಕ ಕುಳಿತು ಅದ್ಯಾವ ಅಭಯ ಮಾತಾಡಿದ್ದನೋ ಅದೇ ಅಭಯ ಈಗಲೂ ಮಾತಾಡುತ್ತಿದ್ದ. ಅದಾಗಿ ಎರಡೇ ತಿಂಗಳಲ್ಲಿ, ಮೊನ್ನೆಮೊನ್ನೆ ಅವನ ನಿರ್ದೇಶನದ ‘ಗುಬ್ಬಚ್ಚಿಗಳು’ ರಾಷ್ಟ್ರಪ್ರಶಸ್ತಿ ಗೆದ್ದುಕೊಂಡಾಗ ಪ್ರತಿಕ್ರಿಯೆಗೆಂದು ಫೋನಾಯಿಸಿದರೆ, ಆ ತುದಿಯಲ್ಲಿ ಮತ್ತದೇ ವರ್ಷಗಳ ಹಿಂದಿನ ಅಭಯ ಸಿಂಹ. ಪರವಾಗಿಲ್ಲ ಎನಿಸಬಲ್ಲ ಒಂದಾದರೂ ಕೆಲಸ ಮಾಡದೆ ತಾವೇನೋ ಮಹಾ ಗುಡ್ಡೆ ಕಡಿದು ಹಾಕಿದ್ದೇವೆ ಎಂದು ತಲೆಯಲ್ಲಿ ತುಂಬಿಕೊಂಡು ನಮ್ಮ ನಡುವೆ ದಿನನಿತ್ಯ ಓಡಾಡಿಕೊಂಡಿರುವ ನೂರಾರು ಮಂದಿಯ ಎದುರು ಅಭಯ ಗ್ರೇಟ್ ಅನಿಸಿತು. ಆ ದಿನ ನಾನು ಬರೆದ ವರದಿಗಿಂತಲೂ ಅವನ ವ್ಯಕ್ತಿತ್ವವೇ ನನ್ನನ್ನು ಹೆಚ್ಚಾಗಿ ಕಾಡಿತು. ಅವನಿಗೊಂದು ‘ಸಾರ್ವಜನಿಕ ಅಭಿನಂದನೆ’ ಹೇಳುವ ನೆಪದಲ್ಲಿ ಇದನ್ನೆಲ್ಲ ನೆನಪು ಮಾಡಿಕೊಂಡೆ.