ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸ್ಮರಣ ಸಂಚಿಕೆ-2019 'ಶತಮಂದಾರ'ದಲ್ಲಿ ಪ್ರಕಟವಾದ ಲೇಖನ
ಸಹಕಾರ ಚಳುವಳಿಗೂ ಪ್ರಜಾಪ್ರಭುತ್ವಕ್ಕೂ ಅವಿನಾಭಾವ ಸಂಬಂಧ. ಏಕೆಂದರೆ ಎರಡೂ ಪರಿಕಲ್ಪನೆಗಳ ಅಂತರ್ಯದಲ್ಲಿ ಹುದುಗಿರುವುದು ಒಂದೇ - ಜನರಿಂದ ಮತ್ತು ಜನರಿಗಾಗಿ ಎಂಬ ತತ್ತ್ವ. 'ಎಲ್ಲರಿಗಾಗಿ ನಾನು ಮತ್ತು ನನಗಾಗಿ ಎಲ್ಲರೂ’ ಎಂಬ ಸಹಕಾರೀ ಚಳುವಳಿಯ ಘೋಷಣೆ ಪ್ರಜಾಪ್ರಭುತ್ವದ ಮಂತ್ರವೂ ಹೌದು. ಆದ್ದರಿಂದ ಜನಸಾಮಾನ್ಯರಲ್ಲಿ ಪ್ರಜಾಪ್ರಭುತ್ವದ ಭಾವವನ್ನು ಭದ್ರಗೊಳಿಸುವಲ್ಲಿ ಸಹಕಾರಿ ರಂಗದ ಪಾತ್ರ ತುಂಬ ದೊಡ್ಡದು. ಸಹಕಾರ ಚಳುವಳಿಯ ಗುಣಾವಗುಣಗಳ ಚರ್ಚೆ ಬೇರೆಯದ್ದೇ, ಆದರೆ ಸಮಾಜದ ಅಭಿವೃದ್ಧಿಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರ ಚಳುವಳಿ ವಹಿಸಿದ ಪಾತ್ರ ಗಣನೀಯವಾದದ್ದೆಂಬುದನ್ನು ಅಲ್ಲಗಳೆಯಲಾಗದು.
ಸಹಕಾರ ಚಳುವಳಿಗೆ ಸ್ಪಷ್ಟ ರೂಪರೇಖೆಗಳನ್ನು ಹಾಕಿಕೊಡುವಲ್ಲಿ ಕಾನೂನಿನ ಪಾತ್ರ ಮಹತ್ವದ್ದು. ಯಾವುದೇ ಚಿತ್ರವಾದರೂ ಚೆನ್ನಾಗಿ ಕಾಣಿಸಬೇಕೆಂದರೆ ಅದಕ್ಕೊಂದು ಚೌಕಟ್ಟು ಬೇಕು. ಸಹಕಾರಿ ಕಾನೂನು ಅಂತಹದೊಂದು ಚೌಕಟ್ಟು. ಕಳೆದ ವರ್ಷದ ಅಂತ್ಯಕ್ಕೆ ನಮ್ಮ ದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಒಟ್ಟು ಸಹಕಾರ ಸಂಘಗಳ ಸಂಖ್ಯೆ 42,543. ಒಟ್ಟು ಸದಸ್ಯರ ಸಂಖ್ಯೆ 2,28,85,000 ಸಂಘಗಳಲ್ಲಿರುವ ಒಟ್ಟು ಪಾಲು ಬಂಡವಾಳ ರೂ. 4,519.79 ಕೋಟಿ. ಸಹಕಾರ ರಂಗವನ್ನು ಒಂದು ಶಿಸ್ತಿನಲ್ಲಿ ಮುನ್ನಡೆಸಿ ಈ ಹಂತಕ್ಕೆ ತಂದು ನಿಲ್ಲಿಸುವಲ್ಲಿ ಕಾನೂನಿನ ಕೊಡುಗೆ ಗಮನಾರ್ಹವಾದದ್ದು. ಸಹಕಾರ ರಂಗದ ಕಾನೂನು-ಕಾಯ್ದೆಗಳ ಸಂಕ್ಷಿಪ್ತ ಅವಲೋಕನ ನಡೆಸುವುದೇ ಈ ಲೇಖನದ ಉದ್ದೇಶ.
ಕಾನೂನಿನ ಮಾರ್ಗ:
ಇಡೀ ದೇಶದ ಸಹಕಾರಿ ಚಳುವಳಿಗೆ ಮೂರ್ತರೂಪ ದೊರಕಿದ್ದು ಕರ್ನಾಟಕದಲ್ಲೇ ಎಂಬುದು ಹೆಮ್ಮೆಯ ಸಂಗತಿ. 1904ರ ಸಹಕಾರಿ ಸಂಘಗಳ ಕಾಯ್ದೆಯೇ ಭಾರತದ ಮೊತ್ತಮೊದಲ ಸಹಕಾರಿ ಕಾನೂನು. ಇದರ ಆಧಾರದಲ್ಲಿ ಗದಗ ಜಿಲ್ಲೆಯ ಕಣಗಿನಹಳ್ಳಿ ಗ್ರಾಮದ ಸಮಾನಮನಸ್ಕ ಜನತೆ ಶ್ರೀ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ್ ಎಂಬವರ ನೇತೃತ್ವದಲ್ಲಿ ರೂ. 2,000 ಪಾಲುಬಂಡವಾಳದೊಂದಿಗೆ ಸಹಕಾರಿ ಸಂಘವೊಂದನ್ನು ಜುಲೈ 8, 1905ರಂದು ಆರಂಭಿಸಿದರು. ಇದೇ ದೇಶದ ಮೊತ್ತಮೊದಲ ಕೃಷಿ ಪತ್ತಿನ ಸಹಕಾರ ಸಂಘ.
ಬೇರೆ ಬಗೆಯ ಸಹಕಾರಿ ಸಂಘಗಳನ್ನು ಕೂಡ ಆರಂಭಿಸಲು ಅನುಕೂಲವಾಗುವಂತೆ ಅಂದಿನ ಬ್ರಿಟಿಷ್ ಸರ್ಕಾರ 1912ರ ಸಹಕಾರಿ ಸಂಘಗಳ ಕಾಯ್ದೆಯನ್ನು ಜಾರಿಗೆ ತಂದಿತು. 1919ರಲ್ಲಿ ಮಾಂಟೆಗೊ-ಚೆಮ್ಸ್‌ಫೋರ್ಡ್ ಸುಧಾರಣೆಗಳ ಫಲವಾಗಿ ಸಹಕಾರವು ರಾಜ್ಯಪಟ್ಟಿಗೆ ಸೇರ್ಪಡೆಯಾದಾಗ ತಮ್ಮದೇ ಆದ ಕಾಯ್ದೆಗಳನ್ನು ರೂಪಿಸಿಕೊಳ್ಳಲು ಎಲ್ಲ ಪ್ರಾಂತ್ಯಗಳಿಗೆ 1912ರ ಕಾಯ್ದೆ ಮಾದರಿಯಾಗಿತ್ತು. ಸ್ವಾತಂತ್ರ್ಯಾನಂತರ ಅನೇಕ ರಾಜ್ಯಗಳು ತಮ್ಮದೇ ಆದ ಕಾನೂನುಗಳನ್ನು ಜಾರಿಗೆ ತಂದವು. ರಾಷ್ಟ್ರಮಟ್ಟದಲ್ಲಿ ಬಹುರಾಜ್ಯಗಳ ಸಹಕಾರಿ ಸಂಘಗಳ ಕಾಯ್ದೆಯೊಂದು ಜಾರಿಗೆ ಬಂತು. ನಮ್ಮ ರಾಜ್ಯದಲ್ಲಿ 'ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959’ ಅನ್ನು ಅನುಷ್ಠಾನಗೊಳಿಸಲಾಯಿತು.
ಸಹಕಾರಿ ಚಳುಚಳಿಯನ್ನು ಜನಪ್ರಿಯಗೊಳಿಸುವುದಕ್ಕಾಗಿ ಮತ್ತು ಅದನ್ನು ಸುಭದ್ರಗೊಳಿಸುವುದಕ್ಕಾಗಿ ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ವಿನಿಯೋಗವಾದಾಗ್ಯೂ ಅದು ನಿರೀಕ್ಷೆಯ ಫಲಿತಾಂಶಗಳನ್ನು ಸಾಧಿಸಲು ವಿಫಲವಾಗಿದೆ ಎಂಬುದನ್ನು ಮನಗಂಡ ಕೇಂದ್ರ ಯೋಜನಾ ಆಯೋಗವು ಅರ್ಧನಾರೀಶ್ವರನ್ ಸಮಿತಿಯನ್ನು ನೇಮಿಸಿತು. 1982ರಲ್ಲಿ ತನ್ನ ವರದಿ ಸಲ್ಲಿಸಿದ ಸಮಿತಿಯು ಸಹಕಾರಿ ಚಳುವಳಿ ದುರ್ಬಲವಾಗುವುದಕ್ಕೆ ಸರ್ಕಾರದ ಅತಿಯಾದ ಹಸ್ತಕ್ಷೇಪವೇ ಕಾರಣ ಎಂದು ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಚೌಧರಿ ಬ್ರಹ್ಮಪ್ರಕಾಶ್ ಅವರ ನೇತೃತ್ವದಲ್ಲಿ ಇನ್ನೊಂದು ಆಯೋಗವನ್ನು ನೇಮಿಸಿತು. ಬ್ರಹ್ಮಪ್ರಕಾಶ್ ಆಯೋಗವು 1991ರಲ್ಲಿ ಒಂದು ಮಾದರಿ ಸಹಕಾರಿ ಸಂಘಗಳ ಕಾಯ್ದೆಯನ್ನು ರೂಪಿಸಿತು. ಸಹಕಾರಿ ಚಟುವಟಿಕೆಗಳಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆಗೊಳಿಸಿ ಸದಸ್ಯರಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಈ ಕಾಯ್ದೆಯ ಅಂಶಗಳನ್ನು ತಮ್ಮ ಕಾನೂನುಗಳಲ್ಲಿ ಅಡಕಗೊಳಿಸುವಂತೆ ಕೋರಿ ಇನ್ನು ಎಲ್ಲ ರಾಜ್ಯಗಳಿಗೆ ಕಳಿಸಿಕೊಡಲಾಯಿತು.
ಪರಿಣಾಮವಾಗಿ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997 ರೂಪುಗೊಂಡಿತು. ಈ ಕಾನೂನು 2001 ಜನವರಿ 1ರಿಂದ ಜಾರಿಗೆ ಬಂತು. 2012ರಲ್ಲಿ ಈ ಕಾನೂನಿಗೆ ತಿದ್ದುಪಡಿಯನ್ನು ಕೂಡ ತರಲಾಯಿತು. 1959ರ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ವಿವಿಧ ಉದ್ದೇಶಗಳಿಗಾಗಿ 20ಕ್ಕೂ ಹೆಚ್ಚು ಬಾರಿ ತಿದ್ದುಪಡಿಗೆ ಒಳಗಾಗಿದೆ. ಕರ್ನಾಟಕದ ಒಟ್ಟಾರೆ ಸಹಕಾರ ಚಳವಳಿಗೆ ಈ ಎರಡು ಕಾಯ್ದೆಗಳೇ ಮೂಲ ಆಧಾರ.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959:
1959ರ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯು ೧೫ ಅಧ್ಯಾಯಗಳನ್ನೂ, 132 ವಿಧಿಗಳನ್ನೂ ಹೊಂದಿದೆ. ಮೊದಲನೇ ಅಧ್ಯಾಯವು ಪೀಠಿಕಾ ಭಾಗವಾಗಿದ್ದು ಕಾಯ್ದೆಯಲ್ಲಿ ಬಳಸಲಾದ ವಿವಿಧ ಪಾರಿಭಾಷಿಕ ಪದಗಳ ವ್ಯಾಖ್ಯಾನವನ್ನು ನೀಡುತ್ತದೆ. ಅಲ್ಲದೆ, ಸಹಕಾರ ಸಂಘಗಳ ರಿಜಿಸ್ಟ್ರಾರ್, ಹೆಚ್ಚುವರಿ ರಿಜಿಸ್ಟ್ರಾರ್, ಸಹ ರಿಜಿಸ್ಟ್ರಾರ್, ಉಪ ರಿಜಿಸ್ಟ್ರಾರ್, ಸಹಾಯಕ ರಿಜಿಸ್ಟ್ರಾರ್ ಮತ್ತಿತರ ಅಧಿಕಾರಿಗಳ ನೇಮಕಾತಿ ಕುರಿತು ತಿಳಿಸುತ್ತದೆ.
ಸಹಕಾರ ಸಂಘಗಳ ನೋಂದಣಿಯ ನಿಯಮಗಳನ್ನು ವಿವರಿಸುವ ಎರಡನೇ ಅಧ್ಯಾಯವು ಸಹಕಾರ ತತ್ತ್ವಗಳಿಗನುಸಾರವಾಗಿ ತನ್ನ ಸದಸ್ಯರ ಅಥವಾ ಸಾರ್ವಜನಿಕರ ಆರ್ಥಿಕ ಹಿತಗಳು ಅಥವಾ ಸಾಮಾನ್ಯ ಕಲ್ಯಾಣ ಅಭಿವೃದ್ಧಿಯನ್ನು ತನ್ನ ಉದ್ದೇಶವಾಗಿಟ್ಟುಕೊಂಡು ಸಹಕಾರ ಸಂಘವನ್ನು ನೋಂದಾಯಿಸಬಹುದು ಎನ್ನುತ್ತದೆ. ಸಾರ್ವಜನಿಕರ ಆರ್ಥಿಕ ಹಿತವೇ ಸಹಕಾರ ಸಂಘಗಳ ಮೂಲ ಉದ್ದೇಶವಾಗಿರಬೇಕು ಎಂಬ ಚಳುವಳಿಯ ಆಶಯ ಇಲ್ಲಿ ಸ್ಪಷ್ಟವಾಗುತ್ತದೆ. ಮೂರನೇ ಅಧ್ಯಾಯವು ಸಹಕಾರ ಸಂಘದ ಸದಸ್ಯರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ವಿವರಿಸುತ್ತದೆ.
ನಾಲ್ಕನೇ ಅಧ್ಯಾಯವು ಸಹಕಾರ ಸಂಘಗಳ ವ್ಯವಸ್ಥಾಪನೆಯ ನಿಯಮಗಳನ್ನು ತಿಳಿಸುತ್ತದೆ. 26ನೇ ವಿಧಿಯಲ್ಲಿ ಬರುವ ಸಹಕಾರ ಸಂಘಗಳ ಅಂತಿಮ ಅಧಿಕಾರವು ಸರ್ವಸದಸ್ಯರಲ್ಲಿ ನಿಹಿತವಾಗಿರತಕ್ಕುದು ಎಂಬ ಉಲ್ಲೇಖ ವಾಸ್ತವವಾಗಿ ಒಟ್ಟಾರೆ ಸಹಕಾರ ಚಳುವಳಿಯ ಉದ್ದೇಶವನ್ನು ಎತ್ತಿಹಿಡಿಯುತ್ತದೆ. ಕೈಗಾರಿಕಾ ಬಂಡವಾಳ ಹೂಡಿಕೆ, ಹಣಕಾಸು ನೆರವು ಅಥವಾ ಮಾರಾಟ ಮತ್ತು ಆಡಳಿತ ನಿರ್ವಹಣೆಯಲ್ಲಿ ಪ್ರಾವೀಣ್ಯತೆ ಸೇರಿದಂತೆ ಸರ್ಕಾರದ ಯಾವುದೇ ಉದ್ಯಮದೊಡನೆ ಸಹಕಾರ ಸಂಘಗಳು ಸಹೋದ್ಯಮ ನಡೆಸಬಹುದು ಎಂಬ ಸೂಚನೆಯೂ ಇಲ್ಲಿದೆ.
ಐದನೇ ಅಧ್ಯಾಯದಲ್ಲಿ ಸಹಕಾರ ಸಂಘಗಳ ವಿಶೇಷಾಧಿಕಾರಗಳ ಉಲ್ಲೇಖವಿದ್ದರೆ, ಆರನೇ ಅಧ್ಯಾಯವು ಸಂಘಗಳ ಸಮಿತಿಗಳ ಸದಸ್ಯರ ಚುನಾವಣೆ ನಡೆಸುವ ವಿಧಾನವನ್ನು ತಿಳಿಸುತ್ತದೆ. ಸಹಕಾರ ಸಂಘಗಳನ್ನು ಪ್ರವರ್ಧಿಸುವುದು ರಾಜ್ಯ ಸರ್ಕಾರದ ಒಂದು ಕರ್ತವ್ಯ ಎಂದು ಆರನೇ ಅಧ್ಯಾಯ ಸೂಚಿಸುತ್ತದೆ. ರಾಜ್ಯದಲ್ಲಿ ಸಹಕಾರಿ ಕೃಷಿಗೆ ಉತ್ತೇಜನವೂ ಸೇರಿ ಸಹಕಾರ ಚಳುವಳಿಯನ್ನು ಉತ್ತೇಜಿಸುವುದು ಮತ್ತು ಈ ದಿಸೆಯಲ್ಲಿ ಅವಶ್ಯವಾಗಿರಬಹುದಾದಂಥ ಕ್ರಮಗಳನ್ನು ಕೈಗೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿರತಕ್ಕುದು ಎನ್ನುತ್ತದೆ ಕಾನೂನಿನ 40ನೇ ವಿಧಿ.
ಏಳನೇ ಅಧ್ಯಾಯವು ಸಹಕಾರ ಸಂಘದ ಸ್ವತ್ತುಗಳು ಮತ್ತು ನಿಧಿಗಳ ಬಗ್ಗೆ, ಎಂಟನೇ ಅಧ್ಯಾಯವು ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ, ವಿಚಾರಣೆ, ಪರಿಶೀಲನೆ ಮತ್ತು ಅಧಿಭಾರಗಳ ಬಗ್ಗೆ, ಒಂಭತ್ತನೇ ಅಧ್ಯಾಯವು ವಿವಾದಗಳ ಇತ್ಯರ್ಥದ ಬಗ್ಗೆ, ಹತ್ತನೇ ಅಧ್ಯಾಯವು ಸಹಕಾರ ಸಂಘಗಳ ಸಮಾಪನ ಮತ್ತು ವಿಸರ್ಜನೆ ವಿಧಾನಗಳ ಬಗ್ಗೆ, ಹನ್ನೊಂದನೇ ಅಧ್ಯಾಯವು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳ ಕಾರ್ಯವಿಧಾನದ ಬಗ್ಗೆ, ಹನ್ನೆರಡನೇ ಅಧ್ಯಾಯವು ಐತೀರ್ಪುಗಳು, ಡಿಕ್ರಿಗಳು, ಆದೇಶಗಳು ಮತ್ತು ತೀರ್ಮಾನಗಳ ಅನುಷ್ಠಾನದ ಬಗ್ಗೆ ಬೆಳಕು ಚೆಲ್ಲುತ್ತದೆ.
ಅಪೀಲುಗಳು, ಪುನರೀಕ್ಷಣೆ ಹಾಗೂ ಪುನರ್ವಿಲೋಕನದ ಬಗ್ಗೆ ಹೇಳುವ ಹದಿಮೂರನೇ ಅಧ್ಯಾಯವು ರಿಸರ್ವ್ ಬ್ಯಾಂಕಿನ ಪೂರ್ವಾನುಮತಿ ಪಡೆದು ಸಹಕಾರ ಬ್ಯಾಂಕನ್ನು ಸಮಾಪನಗೊಳಿಸಲು ಆದೇಶಿಸಿದ್ದರೆ ಅಥವಾ ಸಹಕಾರ ಬ್ಯಾಂಕಿನ ಸಮ್ಮಿಲನ ಅಥವಾ ಪುನರ್ ಸಂಘಟನೆಯ ಯೋಜನೆಯನ್ನು ಜಾರಿಗೆ ತಂದಿದ್ದರೆ; ಅಥವಾ ಸಹಕಾರ ಸಂಘದ ಸಮಿತಿಯನ್ನು ತೆಗೆದುಹಾಕುವ ಮತ್ತು ಆಡಳಿತಗಾರನನ್ನು ಮತ್ತು ವಿಶೇಷಾಧಿಕಾರಿಯನ್ನು ನೇಮಿಸುವ ಆದೇಶ ಮಾಡಿದ್ದರೆ ಯಾವುದೇ ಪುನರೀಕ್ಷಣೆಗೆ ಅವಕಾಶವಿಲ್ಲ. ರಿಸರ್ವ್ ಬ್ಯಾಂಕಿನ ಮಂಜೂರಾತಿ ಅಥವಾ ಕೋರಿಕೆಯನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲ ಎಂದು ಸ್ಪಷ್ಪಪಡಿಸುತ್ತದೆ.
ಸಹಕಾರ ಸಂಘಗಳ ವ್ಯವಹಾರದಲ್ಲಿ ಸಂಭವಿಸಬಹುದಾದ ತಪ್ಪುಗಳಿಗೆ ದಂಡನೆಯನ್ನು ಕಾಯ್ದೆಯ 14ನೇ ಅಧ್ಯಾಯ ವಿವರಿಸುತ್ತದೆ. ಸರ್ಕಾರದ ಅನುಮತಿಯಿಲ್ಲದೆ ಯಾವುದೇ ಸಂಸ್ಥೆ ’ಸಹಕಾರ’ ಎಂಬ ಪದವನ್ನು ಬಳಸುವುದು ಕೂಡ ದಂಡನಾರ್ಹ ಅಪರಾಧ ಎಂದೇ ಕಾಯ್ದೆ ಹೇಳುತ್ತದೆ. ಸಹಕಾರ ಸಂಘವಲ್ಲದ ಇತರ ಯಾವನೇ ವ್ಯಕ್ತಿಯು ಸಹಕಾರ ಎಂಬ ಪದವು ಅಥವಾ ಭಾರತದ ಯಾವುದೇ ಭಾಷೆಯಲ್ಲಿ ಅದಕ್ಕೆ ಸಮಾನವಾದ ಪದವು ಯಾವ ಹೆಸರಿನ ಅಥವಾ ಶೀರ್ಷಿಕೆಯ ಭಾಗವಾಗಿರುವುದೋ ಆ ಯಾವುದೇ ಹೆಸರಿನ ಅಥವಾ ಶೀರ್ಷಿಕೆಯ ಅಡಿಯಲ್ಲಿ ವ್ಯಾಪಾರ ಮಾಡತಕ್ಕುದಲ್ಲ ಎಂದು ಎಚ್ಚರಿಸುತ್ತದೆ.
ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997:
2001ರಲ್ಲಿ ಜಾರಿಗೆ ಬಂದ 1997ರ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆಯು ಸದಸ್ಯರಿಗೆ ಹೆಚ್ಚಿನ ಜವಾಬ್ದಾರಿಯನ್ನು ಕೊಡುವ ಉದ್ದೇಶವನ್ನು ಹೊಂದಿದೆ. ಇದರ ಮೊದಲ ಐದು ಅಧ್ಯಾಯಗಳು ವ್ಯಾಖ್ಯಾನ, ಸಂಘಗಳ ನೋಂದಣಿ ನಿಯಮ, ನಿಧಿ ಸಂಗ್ರಹ ಮತ್ತು ಹೂಡಿಕೆ, ಲೆಕ್ಕಪತ್ರಗಳ ನಿರ್ವಹಣೆ ಇತ್ಯಾದಿಗಳ ಬಗ್ಗೆ ವಿವರಿಸಿದರೆ ಆರನೇ ಅಧ್ಯಾಯವು ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಂಘಗಳನ್ನು ಫೆಡರಲ್ ಕೋಆಪರೇಟಿವ್ಸ್ ಸೂಪರ್‌ಸೀಡ್ ಮಾಡುವ ಅವಕಾಶಗಳ ಬಗ್ಗೆ ಹಾಗೂ ಅಗತ್ಯ ಕಂಡುಬಂದಾಗ ವಿಶೇಷಾಧಿಕಾರಿಯನ್ನು ನೇಮಿಸುವ ಬಗ್ಗೆ ತಿಳಿಸುತ್ತದೆ.
ಏಳನೇ ಅಧ್ಯಾಯವು ವಿವಾದಗಳ ಇತ್ಯರ್ಥಗಳ ಬಗ್ಗೆ ಮತ್ತು ಎಂಟನೇ ಅಧ್ಯಾಯವು ಸಂಘಗಳ ಸಮಾಪನದ ನಿಯಮಗಳನ್ನು ವಿವರಿಸುತ್ತದೆ. ಒಂಭತ್ತನೇ ಅಧ್ಯಾಯವು ಸೌಹಾರ್ದ ಸಹಕಾರಿ ಸಂಘಗಳ ಒಟ್ಟಾರೆ ಅಭಿವೃದ್ಧಿಗಾಗಿ ರಾಜ್ಯಮಟ್ಟದಲ್ಲಿ 'ಫೆಡರಲ್ ಕೋಆಪರೇಟಿವ್’ ಒಂದನ್ನು ಸ್ಥಾಪಿಸುವ ಬಗ್ಗೆ ಹೇಳುತ್ತಾ ಸಹಕಾರಿ ರಂಗದ ಏಳ್ಗೆಗಾಗಿ ಅದು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆ ನೀಡುತ್ತದೆ. ಸಹಕಾರಿ ಚಳುವಳಿಯ ಯಶಸ್ಸಿಗೆ ಪೂರಕವಾದ ಸಹಕಾರಿ ತತ್ತ್ವಗಳನ್ನು ಸೂಚಿಸುವ ಹತ್ತನೇ ಅಧ್ಯಾಯವು ಈ ಕಾಯ್ದೆಯ ಒಂದು ವಿಶೇಷ ಭಾಗ. ಅದರ ಪ್ರಮುಖ ಅಂಶಗಳೆಂದರೆ:
ಸಹಕಾರಿ ಬ್ಯಾಂಕುಗಳಿಗೆ ವಿಮಾ ಸುರಕ್ಷೆಯನ್ನು ಒದಗಿಸುವುದು ಈ ಕಾಯ್ದೆಯ ಇನ್ನೊಂದು ಪ್ರಮುಖ ಲಕ್ಷಣ. ಸಹಕಾರಿ ಬ್ಯಾಂಕುಗಳು ಸಮಾಪನಗೊಳ್ಳುವ ಅನಿವಾರ್ಯತೆ ಬಂದರೆ ಸೂಕ್ತ ವಿಮಾ ಸೌಲಭ್ಯವನ್ನು ಪಡೆಯುವ ಬಗ್ಗೆ 10ಎ ಅಧ್ಯಾಯವು ವಿವರಿಸುತ್ತದೆ. ಕೊನೆಯ ಅಧ್ಯಾಯವು ಅಪರಾಧಗಳು ಮತ್ತು ದಂಡನೆಗಳ ಬಗ್ಗೆ ತಿಳಿಸುತ್ತದೆ.
ಇತರೆ ಶಾಸನಾತ್ಮಕ ಪ್ರಕಾರ್ಯಗಳು:
ಮೇಲೆ ವಿವರಿಸಿದ ಕಾಯ್ದೆಗಳಲ್ಲದೆ ಕರ್ನಾಟಕದಲ್ಲಿ ಸಹಕಾರ ಚಳುವಳಿಯನ್ನು ಇನ್ನೂ ಅನೇಕ ಶಾಸನಾತ್ಮಕ ಮತ್ತು ಅರೆನ್ಯಾಯಾಂಗದ ಪ್ರಕಾರ್ಯಗಳು ನಿರ್ದೇಶಿಸುತ್ತವೆ. ಅವುಗಳಲ್ಲಿ ಪ್ರಮುಖವಾದವೆಂದರೆ:
ಅನುಷ್ಠಾನ ಮತ್ತು ಯಶಸ್ಸು:
ನಮ್ಮ ದೇಶದ ವಿವಿಧ ಕ್ಷೇತ್ರಗಳ ಒಟ್ಟಾರೆ ಕಾರ್ಯನಿರ್ವಹಣೆಗೆ ಸಹಕಾರ ಕ್ಷೇತ್ರವೇ ಆಧಾರ ಎಂಬುದು ಆಯಾ ಕ್ಷೇತ್ರಗಳನ್ನು ನೋಡಿದಾಗ ಸಿದ್ಧವಾಗುತ್ತದೆ. ದೇಶದ ಕೃಷಿಸಾಲದ ಶೇ. 46 ಭಾಗ, ರಸಗೊಬ್ಬರ ವಿತರಣೆಯ ಶೇ. 36 ಪಾಲು, ರಸಗೊಬ್ಬರ ಉತ್ಪಾದನೆಯ ಶೇ. 27, ಸಕ್ಕರೆ ಉತ್ಪಾದನೆಯ ಶೇ. 59, ಗೋಧಿ ಸಂಗ್ರಹದ ಶೇ. 31, ಪಶು ಆಹಾರ ಉತ್ಪಾದನೆಯ ಶೇ 50, ಐಸ್‌ಕ್ರೀಂ ಉತ್ಪಾದನೆಯ ಶೇ. 50, ಖಾದ್ಯ ತೈಲ ಉತ್ಪಾದನೆಯ ಶೇ. 50, ಕೈಮಗ್ಗದ ಬಟ್ಟೆಗಳ ಉತ್ಪಾದನೆಯ ಶೇ 55, ರಬ್ಬರ್ ಸಂಸ್ಕರಣೆಯ ಶೇ. 95 ಭಾಗ ಸಹಕಾರಿ ರಂಗದ ಕೊಡುಗೆಯೇ ಆಗಿದೆ.
ಆರ್ಥಿಕವಾಗಿ ಹಿಂದುಳಿದು ಬಿಡಿಬಿಡಿಯಾಗಿರುವ ದುರ್ಬಲ ಜನರನ್ನು ಒಟ್ಟಾಗಿ ಸೇರಿಸಿ ಸಬಲರನ್ನಾಗಿಸುವುದೇ ಸಹಕಾರ ಚಳುವಳಿಯ ಮೂಲ ಉದ್ದೇಶವಾಗಿತ್ತು. ಭಾರತದ ಕೋಟ್ಯಂತರ ಜನರ ಅದರಲ್ಲೂ ಸಣ್ಣ ಮತ್ತು ಅರಿಸಣ್ಣ ರೈತರು ಮತ್ತು ಭೂರಹಿತ ಕೃಷಿ ಕಾರ್ಮಿಕರು, ದುರ್ಬಲ ವರ್ಗಗಳು ಅಂದರೆ ಕೈಮಗ್ಗ ನೇಕಾರರು, ಮೀನುಗಾರರು, ಕುಶಲಕರ್ಮಿಗಳು ಮುಂತಾದವರ ಏಳಿಗೆ ಅದರ ಮುಖ್ಯ ಗುರಿಯಾಗಿತ್ತು. ಸಹಕಾರ ಚಳುವಳಿಯ ಯಶಸ್ಸಿನ ಬಗ್ಗೆ ಅದರ ಕನಸು ಕಂಡವರ ಕಲ್ಪನೆಗಳು ಇನ್ನೂ ವಿಶಿಷ್ಟವಾಗಿದ್ದರೂ ಭಾರತದ ಜನಜೀವನದ ಮೇಲೆ ಈ ಚಳುವಳಿ ಬೀರಿದ ಪರಿಣಾಮ ತುಂಬ ದೊಡ್ಡದೇ. ಕಳೆದ ಶತಮಾನದಲ್ಲಿ ಸ್ವಾತಂತ್ರ್ಯ ಚಳುವಳಿ ಬಿಟ್ಟರೆ ಭಾರತದ ಜನಸಾಮಾನ್ಯರ ಬದುಕಿನ ಮೇಲೆ ಅತಿಹೆಚ್ಚಿನ ಪರಿಣಾಮ ಬೀರಿದ ಹೆಗ್ಗಳಿಕೆ ಸಹಕಾರ ಚಳುವಳಿಗೆ ಸಲ್ಲುತ್ತದೆ.
ಒಂದು ವ್ಯವಸ್ಥೆಯ ಯಶಸ್ಸು ಅಥವಾ ವೈಫಲ್ಯ ನಿಂತಿರುವುದು ಅದರ ಅನುಷ್ಠಾನದಲ್ಲೇ ಹೊರತು ಆದರ್ಶಗಳಲ್ಲಿ ಅಲ್ಲ. ಆದ್ದರಿಂದ ಸಹಕಾರಿ ರಂಗ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂಬ ಅಭಿಪ್ರಾಯವಿದ್ದರೆ ಅದಕ್ಕೆ ಕಾರಣ ಕಾನೂನು ಹಾಗೂ ತತ್ತ್ವಗಳ ಅಸಮರ್ಪಕ ಅನುಷ್ಠಾನ ಮತ್ತು ಅದರ ಹಿಂದಿನ ಪಟ್ಟಭದ್ರ ಹಿತಾಸಕ್ತಿಗಳೇ ಹೊರತು ಅದು ಮೂಲತಃ ಕಾನೂನಿನ ಅಥವಾ ತತ್ತ್ವಗಳ ಸಮಸ್ಯೆ ಅಲ್ಲ. ನಮ್ಮ ಮುಂದಿನ ಗಮನವಿರಬೇಕಾದ್ದು ನಿಯಮಾವಳಿಗಳ ಪರಿಣಾಮಕಾರಿ ಜಾರಿಯ ಬಗ್ಗೆ. ಕಾನೂನಿಗಿಂತಲೂ ಸಮಾಜದ ಮನೋಭಾವವೇ ಹೆಚ್ಚು ಮುಖ್ಯವಾದದ್ದು ಎಂಬುದನ್ನು ಮರೆಯಲಾಗದು.
- ಸಿಬಂತಿ ಪದ್ಮನಾಭ ಕೆ. ವಿ.

- ಸಹಕಾರಿ ಸಂಘಗಳು ಲಿಂಗ, ಸಾಮಾಜಿಕ, ಜನಾಂಗೀಯ, ರಾಜಕೀಯ ಹಾಗೂ ಧಾರ್ಮಿಕ ಬೇಧಭಾವಗಳಿಲ್ಲದೆ ಎಲ್ಲರಿಗೂ ಮುಕ್ತವಾಗಿರುವ ಸ್ವಯಂಸೇವಾ ಸಂಸ್ಥೆಗಳು.
- ಸಹಕಾರಿ ಸಂಘಗಳು ತಮ್ಮದೇ ಸದಸ್ಯರಿಂದ ನಿಯಂತ್ರಿಸಲ್ಪಡುವ ಪ್ರಜಾಪ್ರಭುತ್ವ ಮಾದರಿಯ ಸಂಸ್ಥೆಗಳು. ಪ್ರತಿಯೊಬ್ಬ ಸದಸ್ಯನಿಗೂ ಸಮಾನ ಮತದಾನದ ಹಕ್ಕು ಇರತಕ್ಕುದು.
- ಸಹಕಾರಿ ಸಂಘದ ಬಂಡವಾಳಕ್ಕೆ ಪ್ರತಿ ಸದಸ್ಯನೂ ಸಮಾನ ಕೊಡುಗೆ ನೀಡಬೇಕು ಮತ್ತು ಪ್ರಜಾಪ್ರಭುತ್ವ ಮಾದರಿಯಲ್ಲಿ ನಿಯಂತ್ರಿಸಬೇಕು.
- ಸಹಕಾರಿ ಸಂಘಗಳು ಸದಸ್ಯರಿಂದ ನಿಯಂತ್ರಿಸಲ್ಪಡುವ ಸ್ವಾಯತ್ತ, ಸ್ವಸಹಾಯ ಸಂಸ್ಥೆಗಳಾಗಿವೆ. ನಿಧಿ ಸಂಗ್ರಹಕ್ಕಾಗಿ ಸರ್ಕಾರವೂ ಸೇರಿದಂತೆ ಇತರ ಸಂಸ್ಥೆಗಳೊಂದಿಗೆ ಅವರು ಒಪ್ಪಂದ ಮಾಡಿಕೊಂಡರೂ ಸಂಘದ ಸ್ವಾಯತ್ತತೆಯೂ ಸದಸ್ಯರಲ್ಲೇ ಉಳಿಯಬೇಕು.
- ಸಹಕಾರಿ ಸಂಘಗಳು ತಮ್ಮ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ವ್ಯವಸ್ಥಾಪಕರು ಹಾಗೂ ಉದ್ಯೋಗಿಗಳಿಗೆ ತರಬೇತಿ ನೀಡಬೇಕು. ಸಹಕಾರದ ಸ್ವರೂಪ ಹಾಗೂ ಲಾಭಗಳ ಬಗ್ಗೆ ಸಾರ್ವಜನಿಕರಿಗೆ, ಮುಖ್ಯವಾಗಿ ಯುವಕರಿಗೆ ತಿಳುವಳಿಕೆ ನೀಡಬೇಕು.
ಸಹಕಾರಿ ಬ್ಯಾಂಕುಗಳಿಗೆ ವಿಮಾ ಸುರಕ್ಷೆಯನ್ನು ಒದಗಿಸುವುದು ಈ ಕಾಯ್ದೆಯ ಇನ್ನೊಂದು ಪ್ರಮುಖ ಲಕ್ಷಣ. ಸಹಕಾರಿ ಬ್ಯಾಂಕುಗಳು ಸಮಾಪನಗೊಳ್ಳುವ ಅನಿವಾರ್ಯತೆ ಬಂದರೆ ಸೂಕ್ತ ವಿಮಾ ಸೌಲಭ್ಯವನ್ನು ಪಡೆಯುವ ಬಗ್ಗೆ 10ಎ ಅಧ್ಯಾಯವು ವಿವರಿಸುತ್ತದೆ. ಕೊನೆಯ ಅಧ್ಯಾಯವು ಅಪರಾಧಗಳು ಮತ್ತು ದಂಡನೆಗಳ ಬಗ್ಗೆ ತಿಳಿಸುತ್ತದೆ.
ಇತರೆ ಶಾಸನಾತ್ಮಕ ಪ್ರಕಾರ್ಯಗಳು:
ಮೇಲೆ ವಿವರಿಸಿದ ಕಾಯ್ದೆಗಳಲ್ಲದೆ ಕರ್ನಾಟಕದಲ್ಲಿ ಸಹಕಾರ ಚಳುವಳಿಯನ್ನು ಇನ್ನೂ ಅನೇಕ ಶಾಸನಾತ್ಮಕ ಮತ್ತು ಅರೆನ್ಯಾಯಾಂಗದ ಪ್ರಕಾರ್ಯಗಳು ನಿರ್ದೇಶಿಸುತ್ತವೆ. ಅವುಗಳಲ್ಲಿ ಪ್ರಮುಖವಾದವೆಂದರೆ:
- ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿಗಳು 1960
- ಕರ್ನಾಟಕ ಲೇವಾದೇವಿಗಾರರ ಕಾಯ್ದೆ 1961 ಮತ್ತು ಕರ್ನಾಟಕ ಲೇವಾದೇವಿಗಾರರ ನಿಯಮಗಳು 1965.
- ಕರ್ನಾಟಕ ಗಿರವಿದಾರರ ಕಾಯ್ದೆ 1961 ಮತ್ತು ನಿಯಮಗಳು 1966.
- 1982ರ ಚೀಟಿ ನಿಧಿಗಳ ಕಾಯ್ದೆ ಮತ್ತು ಚೀಟಿನಿಧಿಗಳ (ಕರ್ನಾಟಕ) ನಿಯಮಾವಳಿ 1983.
- ಕರ್ನಾಟಕ ಋಣ ಪರಿಹಾರ ಕಾಯ್ದೆ 1980.
- ಕರ್ನಾಟಕ ಪಬ್ಲಿಕ್ ಮನಿ (ರಿಕವರಿ ಆಫ್ ಡ್ಯೂಸ್) ಕಾಯ್ದೆ 1980.
- ಕರ್ನಾಟಕ ಅಗ್ರಿಕಲ್ಚರಲ್ ಕ್ರೆಡಿಟ್ ಆಪರೇಶನ್ಸ್ & ಮಿಸಲೇನಿಯಸ್ ಪ್ರಾವಿಶನ್ಸ್ ಕಾಯ್ದೆ 1974.
- ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಕಾಯ್ದೆ 2004.