ಭಾನುವಾರ, ಅಕ್ಟೋಬರ್ 28, 2018

ಪರೀಕ್ಷಾ ಭಯಕ್ಕೆ ಹೇಳಿ ಗುಡ್‌ಬೈ

ಫೆಬ್ರವರಿ 2018ರ 'ವಿದ್ಯಾರ್ಥಿ ಪಥ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ


'ಸಾರ್ ನಿಮ್ಮ ಸ್ಟೂಡೆಂಟು ಚೀಟಿ ಇಟ್ಟುಕೊಂಡಿದ್ದಳು. ಸದ್ಯ ಡಿಬಾರ್ ಆಗುವುದರಿಂದ ಬಚಾವಾದಳು. ಎರಡು ಬುದ್ಧಿಮಾತು ಹೇಳಿ ಕಳಿಸಿದೆ’ ಎಂದು ಪರೀಕ್ಷಾ ಕೊಠಡಿ ಮೇಲ್ವಿಚಾರಣೆಯಲ್ಲಿದ್ದ ಸಹೋದ್ಯೋಗಿಯೊಬ್ಬರು ವರದಿ ಮಾಡಿದರು. ಯಾರು ಎಂದು ಕೇಳಿದೆ. ಅವರು ಹೆಸರು ಹೇಳಿದರು. ನನಗೆ ಅಚ್ಚರಿಯಾಯಿತು. ನನಗೆ ತಿಳಿದಂತೆ ಅವಳಿಗೆ ಚೀಟಿ ಇಟ್ಟು ಪಾಸಾಗಬೇಕಾದ ಅನಿವಾರ್ಯತೆ ಏನೂ ಇರಲಿಲ್ಲ. ಆದರೆ ನಡೆದಿದ್ದು ನಿಜವಾಗಿತ್ತು. ಈ ಮಕ್ಕಳೇಕೆ ಮರ್ಯಾದೆ ಕಳೆಯುವ ಕೆಲಸ ಮಾಡುತ್ತಾರೋ ಎಂದು ಮನಸ್ಸಿಗೆ ಪಿಚ್ಚೆನಿಸಿತು.

ಆಮೇಲೆ ನಿಧಾನವಾಗಿ ಯೋಚನೆ ಮಾಡಿದೆ. 'ಮಕ್ಕಳೇಕೆ ಮರ್ಯಾದೆ ಕಳೆಯುವ ಕೆಲಸ ಮಾಡುತ್ತಾರೋ’ ಎಂಬಲ್ಲಿಂದ 'ಮಕ್ಕಳೇಕೆ ಚೀಟಿ ಇಟ್ಟುಕೊಳ್ಳುತ್ತಾರೋ’ ಎಂಬಲ್ಲಿಗೆ ನನ್ನ ಯೋಚನೆ ಬದಲಾಯಿತು. ಹೌದು, ಎಲ್ಲದಕ್ಕೂ ಪರೀಕ್ಷೆಯಲ್ಲಿ ನಪಾಸಾಗುವ ಭಯವೇ ಮೂಲಕಾರಣ ಎಂದು ಮನಸ್ಸು ಹೇಳಿತು. ಪರೀಕ್ಷೆಯ ಭಯ ಎಂತಹ ವಿದ್ಯಾರ್ಥಿಗಳಲ್ಲೂ ಎಂತೆಂತಹ ಕೆಲಸ ಮಾಡಿಸುತ್ತದೆಯಲ್ಲವೇ ಎನಿಸಿ ಸೋಜಿಗವಾಯಿತು.

ರಜೆ ಕಳೆದು ತರಗತಿಗಳು ಆರಂಭವಾದ ಮೇಲೆ ಅದೇ ಹುಡುಗಿ ನನ್ನನ್ನು ಭೇಟಿಯಾಗಿ 'ಸಾರಿ ಸರ್. ನಾನು ಹಾಗೆ ಮಾಡಬಾರದಿತ್ತು. ತಪ್ಪು ಮಾಡಿದೆ ಎಂಬ ಭಾವನೆ ನನ್ನನ್ನು ತುಂಬ ಕಾಡುತ್ತಿದೆ. ದಯಮಾಡಿ ಕ್ಷಮಿಸಿ. ಇನ್ನು ಯಾವತ್ತೂ ಹೀಗೆ ಮಾಡುವುದಿಲ್ಲ’ ಎಂದಳು. 'ಹೋಗಲಿ ಬಿಡಮ್ಮ. ಆದದ್ದಾಯಿತು. ಮುಂದೆ ಇಂಥಾದ್ದು ಆಗುವುದು ಬೇಡ. ಅಂತಹ ಸುಲಭದ ದಾರಿಗಳು ನಮಗೆ ಬೇಡ. ಮಾಡಬಾರದಿತ್ತು ಎಂದು ನಿನಗೇ ಅನ್ನಿಸಿದೆಯಲ್ಲ ಅಷ್ಟು ಸಾಕು’ ಎಂದು ಸಮಾಧಾನದ ಮಾತು ಹೇಳಿ ಕಳಿಸಿದೆ.

ಪರೀಕ್ಷಾ ಭಯ:
ಬಹುತೇಕ ವಿದ್ಯಾರ್ಥಿಗಳನ್ನು ಒಂದಲ್ಲ ಒಂದು ಸಂದರ್ಭ ಕಾಡಿಯೇ ಕಾಡುತ್ತದೆ ಈ ಪರೀಕ್ಷಾ ಭಯ. ಮೇಲೆ ಹೇಳಿದಂತೆ ಪರೀಕ್ಷೆಯಲ್ಲಿ ಎಲ್ಲಿ ಅನುತ್ತೀರ್ಣರಾಗಿ ಎಲ್ಲರೆದುರು ಸಣ್ಣವರಾಗಿಬಿಡುತ್ತೇವೋ ಎಂಬ ಮನಸ್ಸಿನ ಆತಂಕವೇ ಈ ಭಯದ ಹಿಂದಿನ ಮೂಲಕಾರಣ. ಸೆಮಿಸ್ಟರ್ ಅಥವಾ ವರ್ಷವಿಡೀ ಆದ ಪಾಠಗಳನ್ನು ಪರೀಕ್ಷೆ ಸಮೀಪಿಸಿದಾಗಷ್ಟೇ ಓದುವುದು ಅನೇಕ ವಿದ್ಯಾರ್ಥಿಗಳ ಸಾಮಾನ್ಯ ಗುಣ. ಎಲ್ಲ ಸಮಸ್ಯೆಗಳು ಇಲ್ಲಿಂದಲೇ ಆರಂಭವಾಗುತ್ತವೆ.

ಅಂದಂದಿನ ಪಾಠಗಳನ್ನು ಅಂದಂದೇ ಓದಿ ಎಂದು ಒಂದನೇ ತರಗತಿಯಿಂದಲೇ ಅಧ್ಯಾಪಕರು ಉರುಹೊಡೆಯುವ ಏಕೈಕ ಮಂತ್ರವನ್ನು ಎಲ್ಲ ವಿದ್ಯಾರ್ಥಿಗಳು ಒಂದಿಷ್ಟು ಅರ್ಥ ಮಾಡಿಕೊಂಡರೂ ಪರೀಕ್ಷಾ ಭಯ, ಪರೀಕ್ಷಾ ಅಕ್ರಮಗಳು ಇನ್ನಿತರ ಅಹವಾಲುಗಳೇ ಇರುವುದಿಲ್ಲ. ಆದರೆ ವಯೋಸಹಜ ಬೇಜವಾಬ್ದಾರಿಯೋ, ಜೀವನವನ್ನು ಎಂಜಾಯ್ ಮಾಡುವ ಕಾತರವೋ, ಚಲ್ತಾ ಹೈ ಎಂಬ ಉಡಾಫೆ ಮನೋಭಾವವೋ ಅನೇಕ ವಿದ್ಯಾರ್ಥಿಗಳು ಇದೊಂದು ಸಣ್ಣ ಸೂತ್ರವನ್ನು ಅರ್ಥವೇ ಮಾಡಿಕೊಳ್ಳುವುದಿಲ್ಲ. ಅನಾರೋಗ್ಯ, ಅಪಘಾತ, ಕುಟುಂಬದ ಜವಾಬ್ದಾರಿ ಮತ್ತಿತರ ಸಮಸ್ಯೆಗಳಿಂದ ಓದಿನ ಬಗ್ಗೆ ಗಮನ ಹರಿಸಲು ಸಾಧ್ಯವಾಗದ ಕಾರಣಗಳೂ ಇರುತ್ತವೆನ್ನಿ.

ಅಂತೂ ಪರೀಕ್ಷೆಗೆ ನಾಲ್ಕೈದು ದಿನವಿರುವಾಗ ಇವರೆಲ್ಲ ಅನಾಮತ್ತಾಗಿ ಎಚ್ಚರಗೊಳ್ಳುತ್ತಾರೆ. ಅನೇಕ ಮಂದಿಗೆ ಅಲ್ಲಿಯವರೆಗೆ ಏನೆಲ್ಲ ಪಾಠಪ್ರವಚನಗಳು ನಡೆದಿವೆ ಎಂಬ ಪ್ರಾಥಮಿಕ ಮಾಹಿತಿಯೂ ಇರುವುದಿಲ್ಲ. ಇನ್ನು ಪಠ್ಯಪುಸ್ತಕ, ನೋಟ್ಸುಗಳ ವಿಷಯ ಕೇಳುವುದೇ ಬೇಡ. ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಗುತ್ತದೆ ಅವರ ಪರಿಸ್ಥಿತಿ. ಓದಬೇಕಿರುವ ಪಾಠಗಳು ಪರ್ವತೋಪಮವಾಗಿ ಕಾಣುತ್ತವೆ. ಇದು ನನ್ನಿಂದ ಸಾಧ್ಯವಿಲ್ಲದ ಕೆಲಸ ಅನಿಸಿ ಆತ್ಮವಿಶ್ವಾಸ ಉಡುಗಿ ಹೋಗುತ್ತದೆ. ಪರೀಕ್ಷೆಯೆಂಬ ವ್ಯವಸ್ಥೆಯನ್ನು ರೂಪಿಸಿದವರ ಬಗೆಗೇ ಅಪಾರ ಸಿಟ್ಟುಬಂದುಬಿಡುತ್ತದೆ.

ಭಯದ ಪರಿಣಾಮ:
ಅಲ್ಲಿಗೆ ಸುಲಭದ ಹಾದಿಗಳ ಹುಡುಕಾಟ ಆರಂಭವಾಗುತ್ತದೆ. ನೋಟ್ಸುಗಳಿಗಾಗಿ ಅವರಿವರಲ್ಲಿ ಅಂಗಲಾಚುವುದು, ಹಗಲೂ ರಾತ್ರಿ ನಿದ್ದೆಗೆಟ್ಟು ಓದುವುದು, ಆರೋಗ್ಯ ಕೆಡಿಸಿಕೊಳ್ಳುವುದು, ಚೀಟಿಯಿಟ್ಟುಕೊಳ್ಳುವುದು, ನಕಲು ಮಾಡುವುದು, ಪರೀಕ್ಷಾ ಕೊಠಡಿಯಲ್ಲಿ ಸಿಕ್ಕಿಹಾಕಿಕೊಳ್ಳುವುದು, ಡಿಬಾರ್ ಆಗುವುದು, ಚಿನ್ನದಂತಹ ವಿದ್ಯಾರ್ಥಿ ಜೀವನವನ್ನೇ ಹಾಳುಮಾಡಿಕೊಳ್ಳುವುದು - ಇದೆಲ್ಲ ನಡೆಯುತ್ತದೆ.

ಪರೀಕ್ಷಾ ಭಯದಿಂದ ಹೊರಬರುವುದರಿಂದ ಇಷ್ಟೂ ಸಮಸ್ಯೆಗಳಿಗೆ ಸುಲಭದ ಪರಿಹಾರ ದೊರಕಿಬಿಡುತ್ತದೆ. ಆದರೆ ಇದು ಅಂದುಕೊಂಡಷ್ಟು ಸುಲಭವಲ್ಲ. ಯಾಕೆಂದರೆ ಎಲ್ಲವೂ ವಿದ್ಯಾರ್ಥಿಯ ಕೈಯ್ಯಲ್ಲೇ ಇರುವುದಿಲ್ಲ. ಅತಿಯಾದ ನಿರ್ಲಕ್ಷ್ಯದಂತೆ ಅತಿಯಾದ ನಿರೀಕ್ಷೆಯೂ ಪರೀಕ್ಷಾಭಯಕ್ಕೆ ಕಾರಣವಾಗಬಹುದು. ಹೆಚ್ಚು ಅಂಕಗಳಿಸಬೇಕೆಂಬ ಮಹದಾಸೆ ಮತ್ತು ಇದರ ಹಿಂದಿರುವ ಪಾಲಕರ ಹಾಗೂ ಶಿಕ್ಷಕರ ಒತ್ತಡಗಳು ಒಂದು ಸುಂದರ ಬದುಕನ್ನೇ ಬರಡಾಗಿಸಿಬಿಡಬಹುದು. ಪರೀಕ್ಷಾ ಫಲಿತಾಂಶದ ಮರುದಿನ ದೊರೆಯುವ ವಿದ್ಯಾರ್ಥಿಗಳ ಸಾಲುಸಾಲು ಆತ್ಮಹತ್ಯೆಗಳ ವರದಿಗಳೇ ಇದಕ್ಕೆಲ್ಲ ನಿದರ್ಶನ.

ಸಮರ್ಥ ತಯಾರಿಯೇ ದಾರಿ: 
ಅವಸರದ ಅಡುಗೆಯಿಂದ ಹೊಟ್ಟೆಯೂ ತುಂಬುವುದಿಲ್ಲ, ಆರೋಗ್ಯವೂ ಉಳಿಯುವುದಿಲ್ಲ. ತಯಾರಿ ಸಮರ್ಥವಾಗಿದ್ದಾಗ ಯಾವ ಭಯವೂ ಕಾಡುವುದಿಲ್ಲ. ಒಂದೆರಡು ದಿನದಲ್ಲೋ, ವಾರದಲ್ಲೋ ಇಡೀ ವರ್ಷದ್ದನ್ನು ಓದಿ ತೇರ್ಗಡೆಯಾಗಬಲ್ಲೆ ಎಂಬ ಭ್ರಮೆಯನ್ನಾಗಲೀ ಅತಿಯಾದ ಆತ್ಮವಿಶ್ವಾಸವನ್ನಾಗಲೀ ವಿದ್ಯಾರ್ಥಿಗಳು ಇಟ್ಟುಕೊಳ್ಳಬಾರದು. ಎಂತಹ ಆರೋಗ್ಯವಂತ ವ್ಯಕ್ತಿಯೂ ಮೂರು ದಿನದ್ದನ್ನು ಒಂದೇ ಬಾರಿಗೆ ಉಂಡರೆ ಅಜೀರ್ಣವಾಗಿ ಆಸ್ಪತ್ರೆ ಸೇರುವುದು ಖಚಿತ.

ತಯಾರಿ ಹಂತಹಂತವಾಗಿ ಇದ್ದಾಗಲೇ ಅದು ಅರ್ಥಪೂರ್ಣವಾಗುವುದು. ಇದು ಕಾಲೇಜಿನ ಮೊದಲ ದಿನದಿಂದಲೇ ಆರಂಭವಾಗಬೇಕು. ಅಂದಂದಿನ ಪಾಠಗಳನ್ನು ಮನೆಯಲ್ಲಿ ಅಂದಂದೇ ಮತ್ತೊಮ್ಮೆ ಗಮನಿಸಿಕೊಂಡರೆ ಪರೀಕ್ಷಾ ಸಮಯದಲ್ಲಿ ಒತ್ತಡ ಎನಿಸುವುದು ಸಾಧ್ಯವೇ ಇಲ್ಲ. ಆಗಿನ್ನೂ ಪಾಠಗಳನ್ನು ಕೇಳಿ ಬಂದಿರುವುದರಿಂದ ಅತಿಕಡಿಮೆ ಅವಧಿಯಲ್ಲಿಯೂ ಮರು ಓದು ಸಾಧ್ಯ. ಅದು ಬೇಗನೆ ಅರ್ಥವಾಗುವುದಲ್ಲದೆ ಹೆಚ್ಚು ಕಾಲ ಮನಸ್ಸಿನಲ್ಲಿ ಮರೆಯಾಗದೆ ಉಳಿಯುತ್ತದೆ.

ಇನ್ನೊಬ್ಬರ ನೋಟ್ಸ್‌ಗೆ ಕಾಯಬೇಡಿ:
ಅನೇಕ ವಿದ್ಯಾರ್ಥಿಗಳಿಗೆ ತಮ್ಮ ನೋಟ್ಸ್‌ಗಿಂತಲೂ ಇನ್ನೊಬ್ಬರ ನೋಟ್ಸ್ ಬಗ್ಗೆ ಹೆಚ್ಚಿನ ನಂಬಿಕೆ ಮತ್ತು ವ್ಯಾಮೋಹ. ನಿಮಗೆ ಬೇಕಾದ ನೋಟ್ಸ್‌ಗಳನ್ನು ನಿಮ್ಮಷ್ಟು ಚೆನ್ನಾಗಿ ತಯಾರಿಸಬಲ್ಲವರು ಇನ್ನೊಬ್ಬರಿಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ. ಒಬ್ಬೊಬ್ಬರು ತಯಾರಿಸುವ ನೋಟ್ಸ್ ಒಂದೊಂದು ರೀತಿ ಇರಬಹುದು. ನಿಮಗೆ ಸರಿಹೊಂದುವ ನೋಟ್ಸ್ ಅನ್ನು ನೀವೇ ತಯಾರಿಸಬೇಕು. ಇದರಿಂದ ಪಾಠಗಳು ಹೆಚ್ಚು ಚೆನ್ನಾಗಿ ಅರ್ಥವಾಗುತ್ತವೆ ಮತ್ತು ನೆನಪಿನಲ್ಲಿ ಉಳಿಯುತ್ತವೆ.

ಪರೀಕ್ಷೆಗಾಗಿ ಓದುವಾಗಲಂತೂ ಪ್ರತ್ಯೇಕ ಪಾಯಿಂಟುಗಳನ್ನು ಮಾಡಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಿ. ಕೊನೆಯ ಒಂದೆರಡು ದಿನಗಳಲ್ಲಿ ಪುನರ್ಮನನ ಮಾಡಿಕೊಳ್ಳುವುದಕ್ಕೆ ಇವು ತುಂಬ ಸಹಕಾರಿಯಾಗುತ್ತವೆ. ಸಾಕಷ್ಟು ಹಿಂದೆ ಓದಿರುವುದು ಮೇಲ್ನೋಟಕ್ಕೆ ಮರೆತುಹೋದಂತೆ ಅನಿಸಿದರೂ ನೀವೇ ಮಾಡಿಟ್ಟುಕೊಂಡ ಸಂಕ್ಷಿಪ್ತ ಪಾಯಿಂಟುಗಳನ್ನು ನೋಡಿಕೊಳ್ಳುವುದರಿಂದ ಎಲ್ಲವೂ ಮತ್ತೆ ಮುನ್ನೆಲೆಗೆ ಬಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಒಳ್ಳೆಯ ಆಹಾರ-ನಿದ್ದೆ:
ಊಟಬಿಟ್ಟು ನಿದ್ರೆಗೆಟ್ಟು ಓದಬೇಡಿ. ಪರೀಕ್ಷಾ ಸಮಯದಲ್ಲಿ ಸರಿಯಾಗಿ ಊಟ ಮಾಡಿ, ಚೆನ್ನಾಗಿ ನಿದ್ದೆ ಮಾಡಿ. ಹಾಗಂತ ಹೊಟ್ಟೆ ಬಿರಿಯುವಂತೆ ಉಣ್ಣಬೇಡಿ. ಮಿತವಾದ ಆಹಾರವನ್ನು ಹೆಚ್ಚು ಆವರ್ತನಗಳಲ್ಲಿ ಸೇವಿಸಿ. ತುಂಬ ಉಂಡುಬಿಟ್ಟರೆ ತೂಕಡಿಕೆ ಆರಂಭವಾಗಿ ಓದುವ ಆಸಕ್ತಿ ಹೊರಟುಹೋಗುತ್ತದೆ. ಸಮತೋಲಿತ ಆಹಾರ ದೇಹ ಹಾಗೂ ಮನಸ್ಸಿಗೆ ಶಕ್ತಿಯನ್ನೂ ಉತ್ಸಾಹವನ್ನೂ ತುಂಬುತ್ತದೆ.

ಒಬ್ಬ ವಿದ್ಯಾರ್ಥಿಗೆ ಕನಿಷ್ಠ ಆರೇಳು ಗಂಟೆಗಳ ಹಿತವಾದ ನಿದ್ದೆ ತುಂಬ ಅಗತ್ಯ. ರಾತ್ರಿಯೆಲ್ಲ ನಿದ್ದೆಗೆಟ್ಟು ಓದುವುದರಿಂದ ಆರೋಗ್ಯ ಏರುಪೇರಾಗುತ್ತದೆ. ಮನಸ್ಸು ದುರ್ಬಲವಾಗುತ್ತದೆ. ಮನಸ್ಸು ದುರ್ಬಲವಾದಾಗ ಮನಸ್ಸಿನಲ್ಲೆಲ್ಲ ಋಣಾತ್ಮಕ ಯೋಚನೆಗಳೇ ತುಂಬಿಕೊಳ್ಳುತ್ತವೆ. ರಾತ್ರಿ ಬೇಗನೆ ಮಲಗಿ ಬೆಳಗ್ಗೆ ಬೇಗನೆ ಎದ್ದು ಓದುವ ಸೂತ್ರ ಎಲ್ಲ ಕಾಲಕ್ಕೂ ಸಹಕಾರಿ. ನಿದ್ದೆಗೆಟ್ಟು ಗಂಟೆಗಟ್ಟಲೆ ಓದುವುದಕ್ಕಿಂತ ಸರಿಯಾಗಿ ನಿದ್ದೆ ಮಾಡಿ ಒಂದು ಗಂಟೆ ಓದುವುದೇ ಹೆಚ್ಚು ಪ್ರಯೋಜನಕಾರಿಯಾಗಬಲ್ಲುದು. ಕೆಲವು ವಿದ್ಯಾರ್ಥಿಗಳಿಗೆ ರಾತ್ರಿ ಓದುವುದೇ ಹೆಚ್ಚು ಅನುಕೂಲ ಎನಿಸಬಹುದು. ಅಂತಹವರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಯ ಹೊಂದಿಸಿಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ನಿದ್ದೆಯ ಅವಧಿ ಕಡಿಮೆಯಾಗಬಾರದು. ಪರೀಕ್ಷೆ ಸಮೀಪಿಸುತ್ತಿದ್ದಂತೆ ಅಂತೂ ನಿದ್ದೆಗೆಡಲೇಬಾರದು. ಪರೀಕ್ಷೆಯ ಮುನ್ನಾದಿನ ರಾತ್ರಿ ಒಳ್ಳೆಯ ನಿದ್ದೆ ಮಾಡುವುದರಿಂದ ಅನೇಕ ಸಮಸ್ಯೆಗಳಿಂದ ಪಾರಾಗಬಹುದು.

ಜ್ಞಾಪಕಶಕ್ತಿ ಬಗ್ಗೆ ಆತಂಕ ಬೇಡ:
ತಮ್ಮ ನೆನಪಿನ ಶಕ್ತಿ ಬಗ್ಗೆ ಆತಂಕವಿರುವುದೇ ಅನೇಕ ವಿದ್ಯಾರ್ಥಿಗಳ ಪರೀಕ್ಷಾಭಯಕ್ಕೆ ಒಂದು ಕಾರಣ. ನನಗೆ ನೆನಪಿನ ಶಕ್ತಿ ತುಂಬ ಕಡಿಮೆ, ಎಷ್ಟೇ ಓದಿದರೂ ನೆನಪು ಉಳಿಯುವುದಿಲ್ಲ ಎಂದು ಬೇಸರಪಟ್ಟುಕೊಳ್ಳುವ ವಿದ್ಯಾರ್ಥಿಗಳು ತುಂಬ ಮಂದಿ ಇದ್ದಾರೆ. ವಾಸ್ತವವಾಗಿ ನೆನಪಿನಶಕ್ತಿ ಎಲ್ಲರಿಗೂ ಒಂದೇ ಸಮನಾಗಿರುತ್ತದೆ. ನಾವು ಓದುವ ವಿಧಾನ ಮತ್ತು ಅನಗತ್ಯ ಭಯಗಳಿಂದಾಗಿ ಓದಿದ್ದು ಮರೆತುಹೋದಂತೆ ಅನಿಸುತ್ತದೆ ಅಷ್ಟೇ.

ಸಾಧ್ಯವಾದಷ್ಟು ನಿಮ್ಮ ಓದು ಅಭ್ಯಾಸಗಳಿಗೆ ಗಲಾಟೆಗಳಿಂದ ಮುಕ್ತವಾದ ಪ್ರಶಾಂತ ಸ್ಥಳವನ್ನು ಆಯ್ದುಕೊಳ್ಳಿ. ಏಕಾಗ್ರತೆಗೆ ಭಂಗ ತರುವ ಟಿವಿ, ಮೊಬೈಲಿನಂತಹ ಆಕರ್ಷಣೆಗಳನ್ನು ಸಾಕಷ್ಟು ದೂರವಿರಿಸಿಯೇ ಅಭ್ಯಾಸದಲ್ಲಿ ತೊಡಗಿ. ಸಾಮಾನ್ಯವಾಗಿ ಮುಂಜಾನೆ ಬೇಗ ಎದ್ದರೆ ಇಂತಹ ಅನುಕೂಲಕರ ವಾತಾವರಣ ಇರುತ್ತದೆ. ಆ ಸಮಯ ಮನಸ್ಸೂ ಪ್ರಫುಲ್ಲವಾಗಿರುವುದರಿಂದ ಒಂದೇ ಸಲದ ಓದು ಮನಸ್ಸಿನಲ್ಲಿ ಸ್ಥಿರವಾಗಿ ಉಳಿಯುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ಓದು ಕೂಡ ಸಾಧ್ಯವಾಗುತ್ತದೆ.

ಅಂಕವೇ ಅಂತಿಮವಲ್ಲ:
ಅಷ್ಟಕ್ಕೂ ನೆನಪಿನ ಶಕ್ತಿ ಬಗ್ಗೆ ವಿಶೇಷ ಆತಂಕ ಅಗತ್ಯವೇ ಇಲ್ಲ. ಶ್ರೀ ಸದ್ಗುರುಗಳ ಮಾತು ಇಲ್ಲಿ ಗಮನಾರ್ಹ: ನಿಮಗೇನು ಗೊತ್ತಿದೆಯೋ ನೀವದನ್ನು ಮಾಡಬಲ್ಲಿರಿ. ನಿಮಗೇನು ಗೊತ್ತಿಲ್ಲವೋ ನೀವದನ್ನು ಹೇಗೂ ಮಾಡಲಾರಿರಿ. ವೃಥಾ ಚಿಂತೆ ಯಾಕೆ ಮಾಡುತ್ತೀರಿ? ಎಂದು ಕೇಳುತ್ತಾರೆ ಅವರು. ನಾವು ಗಳಿಸುವ ಅಂಕಗಳು ನಮ್ಮ ಬದುಕಿನ ಯಶಸ್ಸಿನ ಮಾನದಂಡವಲ್ಲ ಎಂಬುದನ್ನು ವಿದ್ಯಾರ್ಥಿಗಳು ಮೊದಲು ಅರ್ಥ ಮಾಡಿಕೊಳ್ಳಬೇಕು.

ಶೇ. 99 ಅಂಕ ಗಳಿಸಿದವನೂ ಬದುಕಿನಲ್ಲಿ ವೈಫಲ್ಯದ ಪಾತಾಳ ಕಂಡ ಉದಾಹರಣೆಯಿಲ್ಲವೇ? ಕಡಿಮೆ ಅಂಕಗಳನ್ನು ಗಳಿಸಿದವನೋ ನಪಾಸಾದವನೋ ಬದುಕಿನಲ್ಲಿ ಶ್ರೇಷ್ಠ ಸಾಧನೆಗಳನ್ನು ಮಾಡಿದ ನಿದರ್ಶನಗಳಿಲ್ಲವೇ? ನಮ್ಮ ಬದುಕಿನ ಎತ್ತರವನ್ನು ನಿರ್ಧರಿಸುವುದು ನಾವು ಅಳವಡಿಸಿಕೊಂಡ ಮೌಲ್ಯಗಳೇ ಹೊರತು ಅಂಕಗಳಲ್ಲ. ಇಡೀ ಪುಸ್ತಕವನ್ನೇ ಕಂಠಪಾಠ ಮಾಡಿ ಪರೀಕ್ಷೆಯಲ್ಲಿ ಕಕ್ಕಿದವನ ತಲೆಯಲ್ಲಿ ಪರೀಕ್ಷೆ ಮುಗಿದ ಮರುದಿನ ಏನೇನೂ ಉಳಿದಿರುವುದಿಲ್ಲ. ಆದರೆ ನಾವು ನಿಜವಾಗಿಯೂ ಅರ್ಥಮಾಡಿಕೊಂಡು ಓದಿದ ವಿಚಾರಗಳು, ರೂಢಿಸಿಕೊಂಡ ಮೌಲ್ಯಗಳು ಜೀವನಪರ್ಯಂತ ಇರುತ್ತವೆ.

ಕೆಲವು ಉಪಯುಕ್ತ ಸಲಹೆಗಳು:
- ತರಾತುರಿಯಲ್ಲಿ ಓದಬೇಡಿ. ಮೊದಲ ದಿನದಿಂದಲೇ ಓದುವ ಅಭ್ಯಾಸ ಇಟ್ಟುಕೊಳ್ಳಿ. ಒಂದು ಕ್ವಿಂಟಾಲ್ ತೂಕವನ್ನು ಒಂದೇ ಬಾರಿಗೆ ಎತ್ತಿದರೆ ಬೆನ್ನು ಮುರಿದೀತು. ಒಂದೊಂದೇ ಕೆಜಿಯಂತೆ ಎಷ್ಟು ಭಾರವನ್ನಾದರೂ ಎತ್ತಬಹುದು.
- ಓದಿಗೆ ನಿಮ್ಮದೇ ವೇಳಾಪಟ್ಟಿ ಹಾಕಿಕೊಳ್ಳಿ. ಅದು ವಾಸ್ತವವಾಗಿರಲಿ. ತೀರಾ ಅವಾಸ್ತವ ಗುರಿಗಳನ್ನು ಇಟ್ಟುಕೊಳ್ಳಬೇಡಿ.
ಅಧ್ಯಯನ ರಜೆಯ ಸಂದರ್ಭದಲ್ಲಿ ಒಂದು ದಿನ ಇಂತಿಷ್ಟು ಓದಿಯಾಗಬೇಕು ಎಂಬ ಯೋಜನೆ ಮೊದಲೇ ಹಾಕಿಕೊಳ್ಳಿ.
- ನಿಮ್ಮ ವೇಳಾಪಟ್ಟಿಯಲ್ಲಿ ಎಲ್ಲ ವಿಷಯಗಳ ಓದು ಒಳಗೊಳ್ಳುವಂತೆ ನೋಡಿಕೊಳ್ಳಿ. ಯಾವುದೇ ಒಂದು ವಿಷಯವನ್ನು ಓದುವುದರಲ್ಲೇ ದಿನಪೂರ್ತಿ ಕಳೆಯಬೇಡಿ. 
- ಒಂದು ದಿನದಲ್ಲಿ ಎಲ್ಲ ವಿಷಯಗಳಿಗೂ ಸಮಾನ ಮಹತ್ವ ನೀಡಿ. ಇದರಿಂದ ಒಂದೇ ವಿಷಯವನ್ನು ಓದಿ ಬೋರ್ ಅನಿಸುವುದು ಕೂಡ ತಪ್ಪುತ್ತದೆ.
- ನಿಮ್ಮ ವೇಳಾಪಟ್ಟಿಯಲ್ಲಿ ಒಂದಿಷ್ಟು ಬಿಡುವಿನ ವೇಳೆಯನ್ನೂ ಜೋಡಿಸಿಕೊಳ್ಳಿ. ಆಗಾಗ ಸಣ್ಣ ಬ್ರೇಕ್ ತೆಗೆದುಕೊಳ್ಳುವುದರಿಂದ ಓದಿನ ಆಯಾಸ ಕಾಡುವುದಿಲ್ಲ.
- ಚೆನ್ನಾಗಿ ಊಟ-ನಿದ್ದೆ ಮಾಡಿ. ಓದಿನಷ್ಟೇ ವಿಶ್ರಾಂತಿಯೂ ಮುಖ್ಯ.
- ಬರಿದೇ ಓದುವ ಬದಲು ಪ್ರತೀ ಅಧ್ಯಾಯಕ್ಕೆ ಸಂಬಂಧಿಸಿದಂತೆ ಒಂದಷ್ಟು ಪಾಯಿಂಟುಗಳನ್ನು ಹಾಕಿಕೊಳ್ಳಿ. ಪ್ರಮುಖ ಅಂಶಗಳನ್ನು ಹೈಲೈಟ್ ಮಾಡಿಕೊಳ್ಳಿ. ಪರೀಕ್ಷೆಯ ಮುನ್ನಾದಿನ ಇವುಗಳ ಮೇಲೆ ಕಣ್ಣಾಡಿಸಿ.
- ನೋಟ್ಸ್‌ಗಳಲ್ಲಿ ಸಾಕಷ್ಟು ಶೀರ್ಷಿಕೆಗಳು ಹಾಗೂ ಉಪಶೀರ್ಷಿಕೆಗಳು ಇರಲಿ.
- ಎಲ್ಲಿ ಓದಬೇಕೆಂಬುದನ್ನು ನೀವೇ ನಿರ್ಧರಿಸಿ. ಸಂತೆಯ ನಡುವೆ ಓದಲು ಕೂರಬೇಡಿ. ನಿಮ್ಮ ಸುತ್ತಲೂ ಪ್ರಶಾಂತ ವಾತಾವರಣವಿರಲಿ. ಒಂದೇ ಕಡೆ ಕುಳಿತು ಬೋರ್ ಅನಿಸಿದರೆ ಒಂದಷ್ಟು ಹೊತ್ತು ಹೊಸ ಜಾಗದಲ್ಲಿ ಕುಳಿತೋ ನಿಂತೋ ನಡೆದಾಡುತ್ತಲೋ ಓದಿ.
- ನಿಮ್ಮದೇ ಓದುವ ಕೊಠಡಿಯನ್ನು ಹೊಂದಲು ಪ್ರಯತ್ನಿಸಿ. ನಿಮ್ಮ ಆತ್ಮವಿಶ್ವಾಸಕ್ಕೆ ಪೂರಕವಾಗುವ ಒಂದಷ್ಟು ಮಾತುಗಳನ್ನು ಬರೆದು ನಿಮಗೆ ಕಾಣುವಂತೆ ಪ್ರದರ್ಶಿಸಿ.
- ಅರ್ಥ ಮಾಡಿಕೊಳ್ಳದೇ ಏನನ್ನೂ ಓದಬೇಡಿ. ಅದರಿಂದ ಸಮಯ ವ್ಯರ್ಥ ಹೊರತು ಪ್ರಯೋಜನವಿಲ್ಲ. ಅರ್ಥವಾಗದ್ದು ನೆನಪಿನಲ್ಲಿಯೂ ಉಳಿಯುವುದಿಲ್ಲ. ಶಿಕ್ಷಕರ ಅಥವಾ ಸ್ನೇಹಿತರ ನೆರವು ಪಡೆದುಕೊಳ್ಳಿ.
- ಸಮಾನ ಮನಸ್ಕ ಸ್ನೇಹಿತರಿದ್ದರೆ ಗ್ರೂಪ್ ಸ್ಟಡಿ ಯೋಜಿಸಿಕೊಳ್ಳಿ. ನಾಲ್ಕೈದು ಮಂದಿ ಜತೆಸೇರಿದಾಗ ಅನೇಕ ವಿಷಯಗಳು ಸುಲಭವಾಗಿ ಅರ್ಥವಾಗುತ್ತವೆ. ಆದರೆ ಗ್ರೂಪ್ ಸ್ಟಡಿ ಹೆಸರಿನಲ್ಲಿ ಸಮಯ ವ್ಯರ್ಥವಾಗುವುದಾದರೆ ಅಂತಹ ಗುಂಪಿನಲ್ಲಿ ಸೇರಬೇಡಿ.
- ಹಳೆಯ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದು ತುಂಬ ಒಳ್ಳೆಯದು. ಒಂದು ಬಾರಿ ಪಾಠಗಳನ್ನೆಲ್ಲ ಓದಿಯಾದರೆ ಹಳೆಯ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸುವುದಕ್ಕೆ ಹೆಚ್ಚು ಸಮಯ ಮೀಸಲಿರಿಸುವುದೇ ಅತ್ಯುತ್ತಮ. 
- ಓದಿನ ನಡುವೆ ದೈಹಿಕ ಚಟುವಟಿಕೆಗಳಿರಲಿ. ಒಂದು ಗಂಟೆ ಓದಿನ ಬಳಿಕ ಒಂದೈದು ನಿಮಿಷ ನಡೆದಾಡಿ. ರಿಲ್ಯಾಕ್ಸ್ ಮಾಡಿಕೊಳ್ಳಿ. ಏಕತಾನತೆಯಿಂದ ಹೊರಬನ್ನಿ.
- ಇನ್ನೊಬ್ಬರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ಪ್ರತಿಯೊಬ್ಬರಿಗೆ ತಮ್ಮದೇ ಓದುವ ವಿಧಾನ ಹಾಗೂ ಸಾಮರ್ಥ್ಯವಿರುತ್ತದೆ. ನಿಮಗೆಷ್ಟು ಓದಿಯಾಯಿತು ಎಂದು ಸ್ನೇಹಿತರನ್ನು ಪದೇಪದೇ ವಿಚಾರಿಸುತ್ತಾ ಕೂರಬೇಡಿ.
- ಧನಾತ್ಮಕ ಯೋಚನೆಗಳನ್ನು ಬೆಳೆಸಿಕೊಳ್ಳಿ. ಯಶಸ್ಸಿನ ಚಿತ್ರಣವನ್ನು ಆಗಾಗ್ಗೆ ಮನಸ್ಸಿಗೆ ತಂದುಕೊಳ್ಳಿ.
- ದಿನಕ್ಕೆ ಕನಿಷ್ಠ ಹತ್ತು ನಿಮಿಷ ಧ್ಯಾನ-ಪ್ರಾಣಾಯಾಮದಲ್ಲಿ ತೊಡಗಿ. ಬಹುತೇಕ ಒತ್ತಡಗಳು ಇದರಿಂದ ಕಡಿಮೆಯಾಗಿ ಮನಸ್ಸಿನಲ್ಲಿ ನೆಮ್ಮದಿಯೂ ಆತ್ಮವಿಶ್ವಾಸವೂ ಬೆಳೆಯುತ್ತದೆ.
- ಪರೀಕ್ಷಾ ಕೊಠಡಿಗೆ ಒಯ್ಯಬೇಕಾದ ವಸ್ತುಗಳನ್ನು (ಲೇಖನ ಸಾಮಗ್ರಿಗಳು, ಹಾಲ್ ಟಿಕೇಟು ಇತ್ಯಾದಿ) ಮುನ್ನಾದಿನವೇ ಎತ್ತಿಟ್ಟುಕೊಳ್ಳಿ. ಪರೀಕ್ಷಾ ದಿನ ಗಡಿಬಿಡಿ ಮಾಡಿಕೊಳ್ಳಬೇಡಿ.
- ಪರೀಕ್ಷೆ ಆರಂಭವಾಗುವ ಅರ್ಧ ಗಂಟೆ ಮೊದಲೇ ಪರೀಕ್ಷಾ ಸ್ಥಳವನ್ನು ಸಮೀಪಿಸಿ. ಯಾವುದೇ ಕಾರಣಕ್ಕೂ ತಡವಾಗಿ ಹೋಗಬೇಡಿ. ತಡವಾಗಿ ಹೋಗಿ ಮನಸ್ಸು ಆತಂಕಗೊಂಡರೆ ನೀವು ಚೆನ್ನಾಗಿ ಓದಿಕೊಂಡಿರುವುದೂ ಪ್ರಯೋಜನಕ್ಕೆ ಬರದೇ ಹೋಗಬಹುದು.
- ಚೀಟಿ ಇಟ್ಟುಕೊಳ್ಳುವ, ನಕಲು ಮಾಡುವಂತಹ ಶಾರ್ಟ್‌ಕಟ್ ಹಾದಿಗಳ ಬಗ್ಗೆ ಯೋಚಿಸಬೇಡಿ. ಚೀಟಿ ಸಿದ್ಧಪಡಿಸಿಕೊಳ್ಳುವ ಸಮಯ ಹಾಗೂ ಕೌಶಲಗಳನ್ನು ಓದುವಲ್ಲಿ ಬಳಸಿಕೊಳ್ಳಿ.


ಮಂಗಳವಾರ, ಅಕ್ಟೋಬರ್ 2, 2018

ಹೀರೋಗಳಿದ್ದಾರೆ ನಮ್ಮ ನಡುವೆ

ಅಕ್ಟೋಬರ್ 3, 2018ರ ವಿಜಯವಾಣಿ 'ಮಸ್ತ್' ಪುರವಣಿಯಲ್ಲಿ ಪ್ರಕಟವಾಗಿರುವ ಲೇಖನ

“ಪರೀಕ್ಷೆ ಇದ್ರೂ ಬೇಕರಿಯಲ್ಲಿ ರಜೆ ಕೊಡ್ತಿರಲಿಲ್ಲ. ಮಧ್ಯರಾತ್ರಿವರೆಗೆ ಕೆಲಸ ಮಾಡಿ ಆಮೇಲೆ ಮನೆಗೆ ಹೋಗಿ ಓದ್ಕೊಂಡು ಬೆಳಗ್ಗೆ ಪರೀಕ್ಷೆ ಬರೀತಾ ಇದ್ದೆ. ಒಂದಷ್ಟು ಸಮಯ ಗಾರೆ ಕೆಲಸಕ್ಕೆ ಹೋಗ್ತಿದ್ದೆ. ಈಗಲೂ ಪಟ್ಟಣದಲ್ಲಿ ಯಾರೋ ಒಬ್ಬ ಹುಡುಗ ಗಾರೆ ಕೆಲಸ ಮಾಡೋದು ಕಂಡ್ರೆ ಕರುಳು ಚುರ್ ಅನ್ನುತ್ತೆ. ಭಾರವಾರ ಸಿಮೆಂಟ್ ಮೂಟೆ, ಇಟ್ಟಿಗೆ ಹೊತ್ತ ದಿನಗಳು ನೆನಪಾಗಿ ಕಣ್ಣು ಮಂಜಾಗುತ್ತೆ...” ಎಂದು ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ಮೆಲುಕು ಹಾಕುತ್ತಾರೆ ಮಧುಗಿರಿಯ ಧನಂಜಯ.


“ಏನಿಲ್ಲಾಂದ್ರೂ ಇನ್ನೂರೈವತ್ತು ಅಡುಗೆ ಕೆಲಸಕ್ಕೆ ಹೋಗಿದ್ದೀನಿ. ಈಗ ಚೆನ್ನಾಗಿ ಸಂಬಳ ಬರೋ ಉದ್ಯೋಗ ಇದೆ. ಆದ್ರೆ ಆ ದಿನಗಳನ್ನು ಮಾತ್ರ ಮರೆಯಕ್ಕಾಗಲ್ಲ. ಅದ್ಕೇ ಇವಾಗ್ಲೂ ಕೆಲವೊಮ್ಮೆ ಅಡುಗೆ ಕೆಲಸಕ್ಕೆ ಹೋಗ್ತೀನಿ. ಅದರಲ್ಲೇನೋ ಸಂತೃಪ್ತಿ ಇದೆ. ಕಷ್ಟದ ದಿನಗಳದ್ದು ಕಹಿ ಅನುಭವ ಅಂತ ನಂಗೆಂದೂ ಅನಿಸಿಯೇ ಇಲ್ಲ...” ಹೀಗೆ ಮುಂದುವರಿಯುತ್ತದೆ ಅವರ ಮಾತು.

ಧನಂಜಯನ ತರಹದ ನೂರಾರು ವಿದ್ಯಾರ್ಥಿಗಳು ದಿನನಿತ್ಯ ಕಾಣಸಿಗುತ್ತಿರುತ್ತಾರೆ. ಅಡುಗೆ, ಫ್ಯಾಕ್ಟರಿ, ಗಾರೆ, ಸೆಕ್ಯೂರಿಟಿ, ಸೇಲ್ಸ್, ಕೂಲಿ, ಸಪ್ಲೈಯರ್ ಎಂಬಿತ್ಯಾದಿ ಹತ್ತಾರು ಪಾತ್ರಗಳಲ್ಲಿ ಅವರ ಓದಿನ ಬದುಕು.  ವಿದ್ಯಾರ್ಥಿ ಜೀವನದಲ್ಲಿ ಪಾಠವಾದ ಬಳಿಕ ಪರೀಕ್ಷೆ. ನಿಜ ಜೀವನದಲ್ಲಿ ಪರೀಕ್ಷೆಯಾದ ಬಳಿಕ ಪಾಠ. ಆದರೆ ಇವರು ಪಾಠ-ಪರೀಕ್ಷೆಗಳೆರಡನ್ನೂ ಒಟ್ಟೊಟ್ಟಿಗೇ ನಿಭಾಯಿಸಿಕೊಂಡು ಹೋಗುವ ರಿಯಲ್ ಹೀರೋಗಳು. ಕೆಲವರಿಗೆ ಹಲ್ಲಿದ್ದಾಗ ಕಡಲೆಯಿಲ್ಲ, ಕಡಲೆಯಿದ್ದಾಗ ಹಲ್ಲಿಲ್ಲ. ಇನ್ನು ಕೆಲವರಿಗೆ ಹಲ್ಲು-ಕಡಲೆ ಎರಡೂ ಇರುವುದಿಲ್ಲ. ಅವುಗಳನ್ನು ತಾವೇ ದಕ್ಕಿಸಿಕೊಳ್ಳುವ ಪಾಠವನ್ನಂತೂ ಬದುಕಿನ ಪುಟಗಳಿಂದಲೇ ಹೆಕ್ಕಿಕೊಳ್ಳುತ್ತಾರೆ.

ವಿದೇಶಗಳಲ್ಲಿ ಓದುತ್ತಲೇ ದುಡಿಯುವುದು ವಿಶೇಷ ಸಂಗತಿಯೇನಲ್ಲ. ಉನ್ನತ ಶಿಕ್ಷಣ ಅಥವಾ ವೃತ್ತಿಪರ ಕೋರ್ಸುಗಳನ್ನು ಮಾಡುವವರು ಯಾವುದಾದರೊಂದು ಅರೆಕಾಲಿಕ ಉದ್ಯೋಗ ಹಿಡಿದೇ ಇರುತ್ತಾರೆ. ತಮ್ಮ ವ್ಯಾಸಂಗದ ವೆಚ್ಚವನ್ನು ತಾವೇ ಭರಿಸಿಕೊಳ್ಳುವುದು ಅಲ್ಲಿ ಸರ್ವೇಸಾಮಾನ್ಯ. ಆದರೆ ನಮ್ಮಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಅದೊಂದು ಅನಿವಾರ್ಯತೆ. ಮನೆಯಲ್ಲಿ ಬೆನ್ನುಬಿಡದ ದಾರಿದ್ರ್ಯ, ಕೂಲಿನಾಲಿ ಮಾಡಿ ಬದುಕುವ ಅಪ್ಪ-ಅಮ್ಮ. ಇದರ ನಡುವೆ ಕಾಲೇಜಿಗೆ ಹೋಗಬೇಕು ಎಂಬ ಆಸೆಯೇ ತುಂಬ ತುಟ್ಟಿ. ಬದುಕಿನಲ್ಲಿ ಹೇಗಾದರೂ ಸರಿ ಮೇಲೆ ಬರಬೇಕೆನ್ನುವ ಅವರ ಛಲಕ್ಕೆ ಉಳಿಯುವ ದಾರಿ ದುಡಿಮೆಯೊಂದೇ.

“ಅಪ್ಪ-ಅಮ್ಮ ಉದ್ಯೋಗ ಅರಸಿ ತಿಂಗಳುಗಟ್ಟಲೆ ಬೇರೆ ಜಿಲ್ಲೆಗಳಿಗೆ ಹೋಗಿರುತ್ತಿದ್ದರು. ನಾನು ದುಡಿಯುತ್ತಾ ಓದುವುದು ಅನಿವಾರ್ಯವಾಗಿತ್ತು. ಇಬ್ಬರು ತಮ್ಮಂದಿರಿಗೆ ಅಡುಗೆ ಮಾಡಿ ಶಾಲೆಗೆ ಕಳುಹಿಸಿ ನಾನು ಕಾಲೇಜಿಗೆ ಹೋಗಬೇಕಿತ್ತು. ಎಲ್ಲವನ್ನೂ ನಿಭಾಯಿಸುವುದು ಕಷ್ಟವೆನಿಸಿದರೂ ನನ್ನ ದುಡಿಮೆಯಿಂದ ಅಪ್ಪ-ಅಮ್ಮನ ಮೇಲಿನ ಹೊರೆ ಒಂದಷ್ಟು ಕಡಿಮೆಯಾಗುತ್ತದಲ್ಲ ಎಂಬ ಸಮಾಧಾನವಿತ್ತು” ಎಂದು ನೆನಪಿಸಿಕೊಳ್ಳುತ್ತಾರೆ ಹಿರಿಯೂರಿನ ಅರವಿಂದ.

“ಕಡಲೆಗಿಡ, ಮಾವಿನಕಾಯಿ ಕೀಳುವುದು, ಮದುವೆ ಅಡುಗೆ, ಕೇಬಲ್ ಸಂಪರ್ಕ, ಬಟ್ಟೆ ತೊಳೆದು ಇಸ್ತ್ರಿ ಮಾಡಿಕೊಡುವುದು... ಇತ್ಯಾದಿ ಹತ್ತಾರು ಕೆಲಸ ಮಾಡಿಕೊಂಡು ಓದಿದೆ. ಬೀಳುವ ಹಂತದಲ್ಲಿದ್ದ ಮನೆಯಲ್ಲಿ ಹೊತ್ತಿನ ಊಟಕ್ಕೂ ಸಮಸ್ಯೆ ಇತ್ತು. ಮಳೆ ಬಂದರೆ ಮನೆಯೆಲ್ಲಾ ಕೆರೆ. ಅದನ್ನು ಎತ್ತಿಹೊರಹಾಕುವುದರಲ್ಲೇ ರಾತ್ರಿ ಕಳೆಯುತ್ತಿತ್ತು. ನಮ್ಮಂಥವರಿಗೆ ಯಾಕೆ ಓದು ಎನ್ನುತ್ತಿದ್ದರು ಮನೆಯಲ್ಲಿ. ದುಡಿಯದೆ ಇರುತ್ತಿದ್ದರೆ ಓದು ನನಗೆ ಬರೀ ಕನಸಾಗಿರುತ್ತಿತ್ತು” ಎನ್ನುತ್ತಾರೆ ಪಾವಗಡದ ನವೀನ್ ಕುಮಾರ್.

ಮಕ್ಕಳು ದುಡಿದು ಓದುವ ಬಗ್ಗೆ ಪಾಲಕರಲ್ಲಿ ಮಿಶ್ರ ಭಾವವಿದೆ. ಮಕ್ಕಳು ದುಡಿಯುವುದು ಕುಟುಂಬಕ್ಕೆ ಅವಮಾನ ಎಂದು ಭಾವಿಸುವ ಮಂದಿ ಕೆಲವರಾದರೆ, ಮಕ್ಕಳು ಜವಾಬ್ದಾರಿ ಕಲಿಯುತ್ತಿದ್ದಾರೆ ಎಂದು ಸಮಾಧಾನಪಡುವವರು ಇನ್ನು ಕೆಲವರು. “ಕೆಲಸಕ್ಕೆ ಹೋಗ್ಬೇಡ ಅಂತ ಮೊದಮೊದಲು ಬೈದ್ರು, ಹಿಡ್ಕಂಡು ಹೊಡೆದ್ರು. ಯಾಕಂದ್ರೆ ಮನೆಯಲ್ಲಿ ತುಂಬ ಕಷ್ಟ ಇದ್ರೂ ನನಗೆ ಯಾವುದೂ ತಿಳಿಯದ ಹಾಗೆ ನೋಡ್ಕೊಂಡಿದ್ರು” ಎನ್ನುತ್ತಾರೆ ಧನಂಜಯ. “ನಾನು ಕೆಲಸ ಮಾಡುತ್ತಾ ಓದುತ್ತಿದ್ದುದು ಮನೆಯಲ್ಲಿ ಹೇಳಿರಲಿಲ್ಲ. ಆದರೆ ದುಡಿಮೆ ನನಗೆ ಅನಿವಾರ್ಯವಾಗಿತ್ತು” ಎನ್ನುತ್ತಾರೆ ಬಳ್ಳಾರಿಯ ಈರನಗೌಡ. 

“ನಾನು ಕೆಲಸ ಮಾಡುತ್ತಿದ್ದುದು ಮನೆಯವರಿಗೆ ತಿಳಿದಿತ್ತು. ಅವರೇನೂ ಆಕ್ಷೇಪ ಹೇಳಲಿಲ್ಲ. ಕೆಲಸ ಮಾಡಿಕೊಂಡು ಓದುವುದು ಒಳ್ಳೆಯದೇ, ಆದರೆ ಓದನ್ನು ನಿರ್ಲಕ್ಷ್ಯ ಮಾಡಬೇಡ ಅಂತ ಅಪ್ಪ ಪದೇಪದೇ ಹೇಳುತ್ತಿದ್ದರು” ಎಂದು ನೆನಪಿಸಿಕೊಳ್ಳುತ್ತಾರೆ ಗುಬ್ಬಿ ತಾಲೂಕಿನ ಗಿರೀಶ.

ಅವಶ್ಯಕತೆಯುಳ್ಳ ಮಕ್ಕಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರವೇ ‘ಕಲಿಕೆಯೊಂದಿಗೆ ಗಳಿಕೆ’ ಎಂಬ ಯೋಜನೆ ಆರಂಭಿಸಿದ್ದಿದೆ. ಅನೇಕ ಕಡೆಗಳಲ್ಲಿ ಇದು ಯಶಸ್ವಿಯೂ ಆಗಿದೆ. “ನಾನು ಎಂ.ಎ. ಓದುತ್ತಿದ್ದಾಗ ಪಾರ್ಟ್‍ಟೈಂ ಕೆಲಸ ಮಾಡುವ ಅವಕಾಶ ನಮ್ಮ ವಿ.ವಿ.ಯಲ್ಲಿ ಇತ್ತು. ಲೈಬ್ರರಿ, ಪರೀಕ್ಷಾ ವಿಭಾಗಗಳಲ್ಲೆಲ್ಲ ನಾನು ಕೆಲಸ ಮಾಡಿದ್ದೇನೆ. ತರಗತಿಗಳಿಲ್ಲದ ಹೊತ್ತಲ್ಲಿ ದಿನಕ್ಕೆ ಒಂದೆರಡು ಗಂಟೆಯಷ್ಟು ಕೆಲಸ ಮಾಡಬೇಕಿತ್ತು. ಓದಿಗಾಗಿ ಕುಟುಂಬವನ್ನು ಅವಲಂಬಿಸುವುದು ನನಗೆ ಇಷ್ಟವಿರಲಿಲ್ಲ” ಎನ್ನುತ್ತಾರೆ ಚಿಕ್ಕನಾಯಕನಹಳ್ಳಿಯ ಮಮತಾ. ದುಡಿಯುತ್ತಲೇ ಓದಿದ್ದರಿಂದ ಶೈಕ್ಷಣಿಕವಾಗಿ ಅಂತಹ ನಷ್ಟವೇನೂ ಆಗಲಿಲ್ಲ ಎಂಬುದು ಅವರ ಅಂಬೋಣ.

ಆದರೆ ದುಡಿಯುವ ಅನಿವಾರ್ಯತೆ ಇಲ್ಲದಿದ್ದರೆ ತಾವೂ ಹೆಚ್ಚಿನದನ್ನು ಸಾಧಿಸುತ್ತಿದ್ದೆವು ಎಂಬ ಕೊರಗು ಹಲವು ಮಂದಿಯದ್ದು. “ನನ್ನ ಕೆಲಸ ಮಧ್ಯಾಹ್ನ 3ರಿಂದ ಆರಂಭವಾಗುತ್ತಿತ್ತು. ಹೀಗಾಗಿ ಕೆಲವು ದಿನ ತರಗತಿಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತಿತ್ತು. ಹೀಗಾಗಿ ಹಾಜರಾತಿ ಕಡಿಮೆ ಆಗಿ ಇಂಟರ್ನಲ್ಸ್‍ಗೆ ಕತ್ತರಿ ಬಿತ್ತು. ಮೊದಲನೇ ವರ್ಷ ಮೊಳೆತ ಚಿನ್ನದ ಪದಕದ ಆಸೆ ಎರಡನೇ ವರ್ಷ ಕಮರಿಹೋಯಿತು. ಸ್ವಲ್ಪದರಲ್ಲೇ ಬಂಗಾರ ಕಳೆದುಕೊಂಡೆ” ಎಂದು ವಿಷಾದಪಡುತ್ತಾರೆ ಗಿರೀಶ.

“ದುಡ್ಡಿಗಾಗಿ ಆಗಾಗ ಆರ್ಕೆಸ್ಟ್ರಾಗಳಿಗೆ ಹೋಗಿ ಹಾಡುತ್ತಿದ್ದೆ. ರಾತ್ರಿ ನಿದ್ದೆಗೆಟ್ಟು ಹಗಲು ಕ್ಲಾಸಿಗೆ ಹೋಗಬೇಕಾದ ಪರಿಸ್ಥಿತಿ ಇದ್ದರೂ ಅದರಲ್ಲೇನೋ ಖುಷಿ ಇತ್ತು. ಕಾಲೇಜಿನ ಫೀಸು, ಪುಸ್ತಕ, ಉಳಿದ ಖರ್ಚುಗಳಾದ ಮೇಲೆ ಮನೆಗೂ ಒಂದಷ್ಟು ಹಣ ಕಳಿಸುತ್ತಿದ್ದೆ. ಎಲ್ಲರಂತೆ ಓದುತ್ತಿದ್ದರೆ ಇನ್ನೂ ಚೆನ್ನಾಗಿ ಅಂಕಗಳು ಬರುತ್ತಿದ್ದವು. ಆದರೆ ಕಾಲೇಜಿನ ಎನ್ನೆಸ್ಸೆಸ್‍ನಲ್ಲಿ ನಾನು ವರ್ಷದ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದೆ” ಎಂದು ಹೆಮ್ಮೆಪಡುತ್ತಾರೆ ಗಂಗಾವತಿಯ ಖಾದರ್ ಸಾಬ್.

ಇಂತಹ ಯಾರನ್ನೇ ಕೇಳಿನೋಡಿ, ಅವರಿಗೆ ತಾವು ಪಟ್ಟ ಕಷ್ಟ ಹಾಗೂ ಕಠಿಣ ದುಡಿಮೆ ಬಗ್ಗೆ ಬೇಸರವಾಗಲೀ ಅನಾದರವಾಗಲೀ ಇಲ್ಲ. ಉಳಿದ ವಿದ್ಯಾರ್ಥಿಗಳಿಗಿಂತ ಒಂದು ಹಿಡಿ ಹೆಚ್ಚೇ ಆತ್ಮವಿಶ್ವಾಸ, ತಾವು ಪಡೆದ ಅನುಭವದ ಬಗ್ಗೆ ಹೆಮ್ಮೆ ಸಾಮಾನ್ಯ. “ನನ್ನ ಇಂದಿನ ಪರಿಸ್ಥಿತಿಗೆ ದುಡಿಮೆಯೇ ಕಾರಣ. ಅಂತಹದೊಂದು ಪರಿಸ್ಥಿತಿ ಸೃಷ್ಟಿಸಿಕೊಟ್ಟ ಬಡತನ ಮತ್ತು ದೇವರಿಗೆ ನನ್ನ ಧನ್ಯವಾದಗಳು” ಎಂದು ಗದ್ಗದಿತರಾಗುತ್ತಾರೆ ಈರನಗೌಡ.

“ಅಂದಿನ ಪರಿಸ್ಥಿತಿ ನೆನೆಸಿಕೊಂಡರೆ ಮೈಝುಂ ಅನ್ನುತ್ತೆ. ಮುಂಜಾನೆ 3 ಗಂಟೆಗೆ ಎದ್ದು ರೈಲಿನಲ್ಲಿ ನಿಂತುಕೊಂಡೇ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದೆ. ಚೌಲ್ಟ್ರಿ ಸೇರಿದ ತಕ್ಷಣ ಅಡುಗೆ ಕೆಲಸ. ಎಲ್ಲರದ್ದೂ ಊಟವಾದ ಮೇಲೆ ನಮ್ಮ ಊಟ. ರಾತ್ರಿಯ ಕೆಲಸಗಳೆಲ್ಲ ಮುಗಿದಾಗ ಒಂದು ಗಂಟೆ ಆಗುತ್ತಿದ್ದುದು ಸಾಮಾನ್ಯ. ಎರಡು ದಿನ ಈ ರೀತಿ ಕೆಲಸ ಮಾಡಿದರೆ ರೂ. 1000 ಸಿಗುತ್ತಿತ್ತು. ಆಗÀ ಎಲ್ಲ ಆಯಾಸ ಮಾಯವಾಗುತ್ತಿತ್ತು. ಮುಂಜಾನೆ ಮತ್ತೆ ಕಾಲೇಜು. ಆ ಅನುಭವಕ್ಕೆ ಸಾಟಿಯಿಲ್ಲ” ಎಂದು ಜ್ಞಾಪಿಸಿಕೊಳ್ಳುತ್ತಾರೆ ಜಮಖಂಡಿಯ ವೀರನಾಗರಾಜ್.

“ಕೆಲಸ ಮಾಡುತ್ತಾ ಓದಿದ ದಿನಗಳನ್ನು ನೆನಪಿಸಿಕೊಂಡರೆ ರೋಮಾಂಚನವಾಗುತ್ತೆ. ಕೆಲವೊಮ್ಮೆ ಕಣ್ಣೀರೂ ಬರುತ್ತೆ. ಅಂದು ಕಷ್ಟಪಡದಿರುತ್ತಿದ್ದರೆ ನಾನಿಂದು ಉನ್ನತ ಶಿಕ್ಷಣ ಪಡೆಯಲು ಆಗುತ್ತಿರಲಿಲ್ಲ. ಕಷ್ಟಗಳೇ ನಮ್ಮ ಮಾರ್ಗದರ್ಶಕರು. ಸ್ವತಂತ್ರ ದುಡಿಮೆ, ಓದಿನ ಬಗ್ಗೆ ಹೆಮ್ಮೆ ಅನಿಸುತ್ತೆ” ಎನ್ನುತ್ತಾರೆ ಅರವಿಂದ್.

“ಯಾರದೋ ಹಳೆ ಉಡುಪು ಪಡೆದುಕೊಂಡು ಬಳಸುತ್ತಿದ್ದೆ. ಓದಿನಲ್ಲಿ ಏಕಾಗ್ರತೆ ಸಾಧ್ಯವಾಗ್ತಿರಲಿಲ್ಲ. ದಿನನಿತ್ಯ ಅವಮಾನ ಸಾಮಾನ್ಯವಾಗಿತ್ತು. ಆದರೆ ಅದೇ ಇಂದು ನನ್ನನ್ನು ಮಾನಸಿಕವಾಗಿ ಗಟ್ಟಿಯಾಗಿಸಿದೆ. ಕಾಲೇಜು ಕಲಿಸದ ಪಾಠಗಳನ್ನು ನನಗೆ ಬದುಕು ಕಲಿಸಿತು” ಎಂದು ಮುಗುಳ್ನಗುತ್ತಾರೆ ನವೀನ್.

ಈಗಿನ್ನೂ ಏರುಜವ್ವನದ ರಮ್ಯಕಾಲದಲ್ಲಿರುವ ಈ ಹುಡುಗರ ಪ್ರಬುದ್ಧ ಮಾತುಗಳನ್ನು ಕೇಳಿದರೆ ಯಾರಿಗಾದರೂ ಮೆಚ್ಚುಗೆಯೆನಿಸದೆ ಇರದು. ಯಾವುದೇ ಜವಾಬ್ದಾರಿಯಿಲ್ಲದೆ ಹರೆಯದ ಹುಡುಗ ಹುಡುಗಿಯರನ್ನು ಬಳಸಿಕೊಂಡು ಬೀದಿ ಅಲೆಯುತ್ತಾ ಟಾಕೀಸುಗಳೆದುರಿನ ಕಟೌಟುಗಳನ್ನೇ ಹೀರೋಗಳೆಂದು ಭ್ರಮಿಸುವ ಹೊಣೆಗೇಡಿ ಮಂದಿಯ ನಡುವೆ ಅನುಭವ-ಆತ್ಮವಿಶ್ವಾಸದ ಮಾತನ್ನಾಡುವ ಈ ಗಟ್ಟಿಗರೇ ಅಲ್ಲವೇ ನಿಜವಾದ ಹೀರೋಗಳು?