ಶುಕ್ರವಾರ, ಜುಲೈ 31, 2020

ಕನ್ನಡ ಶಾಲೆಯ ಮುನ್ನಡೆಯ ಕಥೆ

ಒಂದು ಶಾಲೆಯ ಬಗ್ಗೆ ಏನು ಬರೆಯಬಹುದು? ಎಷ್ಟು ಬರೆಯಬಹುದು? ಬೆಳಗ್ಗೆ, ಮಧ್ಯಾಹ್ನ, ಸಂಜೆ, ಅದರೊಳಗಿನ ಚಟುವಟಿಕೆ, ಪಾಠಪ್ರವಚನ, ಶಿಕ್ಷಕರು, ವಿದ್ಯಾರ್ಥಿಗಳು, ಶಾಲೆಯ ಪರಿಸರ. ಹೆಚ್ಚೆಂದರೆ ಎರಡು-ಮೂರು ಪುಟ. ಅದೊಂದು ಪುಸ್ತಕವೇ ಆಗಬಲ್ಲುದೇ?

ಡಾ. ಚಂದ್ರಶೇಖರ ದಾಮ್ಲೆಯವರ ‘ನಿಮ್ಮ ನಮ್ಮ ಸ್ನೇಹ ಕನ್ನಡ ಶಾಲೆ’ ಪುಸ್ತಕ ಓದಿದ ಮೇಲೆ ‘ಆಗಿಯೇ ಆಗಬಹುದು’ ಅನ್ನಿಸಿತು.

ದಾಮ್ಲೆಯವರ ಬಳಗದ ‘ಸ್ನೇಹ’ವೆಂಬ ಮಾನಸ ಕೂಸು ಈಗ ಇಪ್ಪತ್ತೈದರ ಜವ್ವನಿಗನಾಗಿ ಬೆಳೆದು ನಿಂತಿದೆ. ಅತ್ತ 2020ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಮೋದನೆ ಪಡೆದಿದೆ. ಇದು ‘ನಿಮ್ಮ ನಮ್ಮ ಸ್ನೇಹ ಕನ್ನಡ ಶಾಲೆ’ಯ ಬಗ್ಗೆ ಮಾತನಾಡಲು ಸಕಾಲ.

ಐದು ವಿಭಾಗಗಳಲ್ಲಿ ಪುಸ್ತಕ ಹರಡಿಕೊಂಡಿದೆ. ‘ಒಂದು ಶಾಲೆಯ ಕನಸು’ ವಿಭಾಗದಲ್ಲಿ ‘ಸ್ನೇಹ’ ಶಾಲೆಯೆಂಬ ಕನಸು ಹುಟ್ಟಿದುದರ ಹಿಂದಿನ ಕಥೆ, ‘ಸ್ನೇಹ ಶಾಲೆ ನೋಡಲು ಬನ್ನಿ’ ವಿಭಾಗದಲ್ಲಿ ಶಾಲೆಯ ಭೌತಿಕ ಸ್ವರೂಪದ ವಿವರಗಳು, ‘ಶಿಕ್ಷಣದ ಪ್ರಕ್ರಿಯೆ’ ಎಂಬ ಮೂರನೇ ವಿಭಾಗದಲ್ಲಿ ಸ್ನೇಹ ಶಾಲೆಯ ಒಟ್ಟಾರೆ ಸಿದ್ಧಾಂತ ಮತ್ತದರ ಜಾರಿಯ ವಿಚಾರ, ನಾಲ್ಕನೇ ವಿಭಾಗದಲ್ಲಿ ಶಾಲೆ ಎದುರಿಸುತ್ತಿರುವ ಸವಾಲುಗಳು ಹಾಗೂ ಕೊನೆಯ ವಿಭಾಗದಲ್ಲಿ ಶಾಲೆಗೆ ದೊರಕಿರುವ ಪ್ರತಿಕ್ರಿಯೆಯ ವಿವರಗಳಿವೆ. ಮಧ್ಯೆ ಶಾಲೆಯ ಇತಿಹಾಸ ಹಾಗೂ ವರ್ತಮಾನ ಹೇಳುವ 20 ಪುಟಗಳಷ್ಟು ವರ್ಣರಂಜಿತ ಚಿತ್ರಗಳಿವೆ.

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನಡೆಯಬೇಕೆಂದು ಹೇಳುವವರು ಬೇಕಾದಷ್ಟು ಮಂದಿ ಇದ್ದಾರೆ. ಶಿಕ್ಷಣದ ಇತಿಹಾಸದುದ್ದಕ್ಕೂ ಈ ಚರ್ಚೆ ಜೋರಾಗಿಯೇ ನಡೆದಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯೂ ಅದನ್ನೇ ಹೇಳಿದೆ. ಯತಾರ್ಥದಲ್ಲಿ ಅದನ್ನು ಜಾರಿಗೆ ತರುವ ಕೆಲಸ ತುಂಬ ಸವಾಲಿನದು. ಆದರೆ ದಾಮ್ಲೆ ಮತ್ತವರ ಸಂಗಡಿಗರು ಈ ಸವಾಲನ್ನು ದಿಟ್ಟವಾಗಿಯೇ ಎದುರಿಸಿ ಒಂದು ಮಾದರಿಯನ್ನು ಹಾಕಿಕೊಟ್ಟಿದ್ದಾರೆ. ನಿಜ ಹೇಳಬೇಕೆಂದರೆ ಇದು ಇಡೀ ದೇಶಕ್ಕೇ ಕೊಟ್ಟ ಮಾದರಿ. ಒಂದು ಕಡೆ ಖಾಸಗಿ ಸಂಸ್ಥೆಗಳ ಮೇಲಾಟದಲ್ಲಿ ಶಿಕ್ಷಣ ಮಾರಾಟದ ಸರಕಾಗಿ ಬದಲಾಗಿದ್ದರೆ, ‘ಸ್ನೇಹ’ ಸರ್ಕಾರದ ಅನುದಾನವಿಲ್ಲದ ಖಾಸಗಿ ಸಂಸ್ಥೆಯಾಗಿದ್ದುಕೊಂಡೇ ಶಿಕ್ಷಣ ಮಾರಾಟದ ಸರಕಲ್ಲ ಎಂಬುದನ್ನು ಗಟ್ಟಿ ದನಿಯಲ್ಲಿ ಹೇಳಿದೆ; ಪ್ರಾಯೋಗಿಕವಾಗಿ ಸಿದ್ಧಪಡಿಸಿದೆ.

ಪುಸ್ತಕದ ಮೊದಲನೆಯ ಪ್ಯಾರಾ ಇಡೀ ಶಾಲೆಯ ಆತ್ಮದರ್ಶನವಾಗುತ್ತದೆ:

“ಶಾಲೆ ಎಂದರೆ ಅದು ತನ್ನದೇ ಮನೆ ಎಂಬ ಭಾವ ಮಕ್ಕಳಲ್ಲಿ ಬೆಳೆಯಬೇಕು. ಅಂತಹ ಒಂದು ಶಾಲೆಯನ್ನು ನಿರ್ಮಿಸುವುದಾದರೆ ಅಲ್ಲಿ ಏನೇನೆಲ್ಲ ಇರಬೇಕು? ಮುಖ್ಯವಾಗಿ ಮಕ್ಕಳು ಸಂತೋಷದಿಂದ ಅಲ್ಲಿಗೆ ಬರಬೇಕು. ಅದಕ್ಕಾಗಿ ವಿಶಾಲವಾದ ಜಾಗೆ ಇರಬೇಕು, ಅಲ್ಲಿ ಸಮೃದ್ಧವಾಗಿ ಮರ-ಗಿಡ-ಬಳ್ಳಿ ಹೂಗಳು ಕಾಣಸಿಗುತ್ತಿರಬೇಕು. ಓಡಾಡಲು ಏರುತಗ್ಗುಗಳುಳ್ಳ ದಿಣ್ಣೆ ಬಯಲುಗಳಿರಬೇಕು. ಕಟ್ಟಡಗಳು ಸುಭದ್ರವಾಗಿದ್ದು ಸಾಕಷ್ಟು ಗಾಳಿ ಬೆಳಕು ಇರಬೇಕು. ಕೊರತೆಯೆನಿಸದಷ್ಟು ಪಾಠೋಪಕರಣ ಮತ್ತು ಪೀಠೋಪಕರಣಗಳು ಇರಬೇಕು. ಪ್ರೀತಿಯಿಂದ ಮಾತಾಡಿಸುವ ಶಿಕ್ಷಕಿಯರು ಇರಬೇಕು. ಮಕ್ಕಳ ಬೇಕು ಬೇಡಗಳಿಗೆ ಸ್ಪಂದಿಸುವ ಗುಣ ಅವರಲ್ಲಿರಬೇಕು. ಮಕ್ಕಳಲ್ಲಿ ಕಲಿಯುವ ಕುತೂಹಲವನ್ನು ಮೂಡಿಸುವವರಾಗಿರಬೇಕು. ಮಗುವಿನ ಸಹಜ ಸಾಮರ್ಥ್ಯವನ್ನು ಅರಿತುಕೊಂಡು ಕಲಿಕೆಯ ಸ್ಫುರಣೆ ನೀಡುವವರಾಗಿರಬೇಕು………. ಶಾಲೆಗೆ ಬರುವ ಪ್ರತಿ ಮಗುವಿಗೂ ಇವರು ತನಗೆ ಬೇಕಾದವರು ಎನ್ನಿಸುವಂತಹ ವರ್ಚಸ್ಸನ್ನು ಹೊಂದಿರಬೇಕು.”

ಇದೆಲ್ಲ ಆದರ್ಶದ ಮಾತಾದೀತು ಎಂದು ಓದಿದ ತಕ್ಷಣ ಸಾಕಷ್ಟು ಮಂದಿ ಹೇಳಬಹುದು. ಸ್ನೇಹವನ್ನು ನೋಡಿದರಷ್ಟೇ ಇದು ಬರೀ ಆದರ್ಶವಲ್ಲ ಎಂದು ಅರ್ಥವಾದೀತು. ಕಳೆದ ಕಾಲು ಶತಮಾನದಲ್ಲಿ ಇಂತಹದೊಂದು ಆದರ್ಶ ಕಾರ್ಯರೂಪಕ್ಕೆ ಬಂದ ರೀತಿ ಮಾತ್ರ ಅನನ್ಯ.

ನಿತ್ಯಹರಿದ್ವರ್ಣ ಕಾಡು ತುಂಬಿದ ಪಶ್ಚಿಮಘಟ್ಟದ ತಪ್ಪಲಿನ ಸುಳ್ಯ ಪೇಟೆಯ ಹೊರವಲಯದ ಗುಡ್ಡದ ಮೇಲೆ ಇದೆ ಈ ಸ್ನೇಹ ಕನ್ನಡ ಶಾಲೆ. ಎತ್ತರದಲ್ಲಿ ಇದ್ದರೆ ಮಕ್ಕಳಿಗೆ ಕಷ್ಟವಲ್ಲವೇ ಎಂದರೆ ಈ ಗುಡ್ಡ ಹತ್ತಿಕೊಂಡು ಹೋಗುವುದೇ ಅವರಿಗೊಂದು ಖುಷಿ. ಮುಖ್ಯದ್ವಾರದಿಂದಲೇ ಸಿಗುವ ಆವರಣ ಗೋಡೆಯ ಉದ್ದಕ್ಕೂ ನಿಂತಿರುವ ಕನ್ನಡ ಸಾಹಿತ್ಯ ಲೋಕದ ದಿಗ್ಗಜರು ಮಕ್ಕಳಿಗೆ ಪ್ರತಿದಿನ ಎದುರಾಗುತ್ತಾರೆ.

ಕಟ್ಟಡಗಳ ಆಕರ್ಷಕ ವಿನ್ಯಾಸ ಸ್ನೇಹ ಶಾಲೆಯ ಪ್ರಮುಖ ಲಕ್ಷಣ. ಪ್ರಾಥಮಿಕ ಶಾಲಾ ತರಗತಿಗಳು ಬಹುತೇಕ ನಡೆಯುವುದು ವೃತ್ತಾಕಾರದ ಕೊಠಡಿಗಳಲ್ಲಿ. ಸಾಕಷ್ಟು ಗಾಳಿಬೆಳಕು, ಮಕ್ಕಳು ಎದುರು ಬದುರಾಗಿ ಕುಳಿತುಕೊಳ್ಳುವ ಅವಕಾಶ, ಪ್ರತಿ ವಿದ್ಯಾರ್ಥಿಗೂ ಶಿಕ್ಷಕರ ಸಮಾನ ಸಾಮೀಪ್ಯ… ವೃತ್ತಾಕಾರದ ಈ ಕೊಠಡಿಗಳ ಅನುಕೂಲ ಅರ್ಥವಾಗಬೇಕಾದರೆ ಪ್ರತ್ಯಕ್ಷ ನೋಡಬೇಕು.

ಗುಡ್ಡ ಮತ್ತು ಅದರಲ್ಲಿರುವ ನೂರಾರು ಮರಗಳನ್ನು ಬಹುತೇಕ ಹಾಗೆಯೇ ಉಳಿಸಿಕೊಂಡು ಶಾಲೆಗೆ ಬೇಕಾದ ಸೌಕರ್ಯಗಳನ್ನು ನಿರ್ಮಿಸಿರುವುದು ಇಲ್ಲಿನ ವಿಶಿಷ್ಟತೆ. ಎರಡು ಹಲಸಿನ ಮರಗಳ ನಡುವೆ ಆಕರ್ಷಕವಾದ ಬಯಲು ರಂಗ ಮಂದಿರ, ಅದರ ಎದುರು 600ರಷ್ಟು ಮಂದಿ ಕುಳಿತುಕೊಳ್ಳಬಲ್ಲ ಅರ್ಧಚಂದ್ರಾಕೃತಿಯ ಮೆಟ್ಟಿಲುಗಳು, ವಿವಿಧ ಚಟುವಟಿಕೆಗಳಿಗೆ ಅವಕಾಶ ಕೊಡುವ ‘ಸ್ನೇಹ ಸದನ’, ಚಿಣ್ಣರನ್ನೇಕೆ ದೊಡ್ಡವರನ್ನೇ ಮರುಳು ಮಾಡುವ ಮರಳು ತುಂಬಿರುವ ‘ಬರಹದ ಮನೆ’, ಕಲಾಶಾಲೆ,  ಆಟದ ಬಯಲು, ಬಹುಮಾಧ್ಯಮ ಕೇಂದ್ರ, ವಿಜ್ಞಾನ ಉದ್ಯಾನ, ಸುತ್ತಲಿನ ಸಹಜ ಅರಣ್ಯ, ಸಾಲು ಸಾಲು ಔಷಧೀಯ ಗಿಡಗಳು, ಅವುಗಳ ನಡುವೆಯೇ ಕುಳಿತು ಪಾಠ ಕೇಳುವ, ಅಭ್ಯಾಸ ನಡೆಸುವ ಅವಕಾಶ… ಇವುಗಳ ಬಗ್ಗೆ ಪುಸ್ತಕ ಓದಿದರೂ ಸಾಲದು, ಕಣ್ಣಾರೆ ನೋಡಬೇಕು.

ಇವೆಲ್ಲವುಗಳ ನಡುವೆ ಇರುವ ‘ಸೂರ್ಯಾಲಯ’ ಒಂದು ಪ್ರಮುಖ ಆಕರ್ಷಣೆ. ವಿದ್ಯಾಲಯವೇ ದೇವಾಲಯ, ಇನ್ನು ಅದರಲ್ಲೊಂದು ದೇವಸ್ಥಾನವೇ ಎನ್ನಬೇಡಿ. ಇಲ್ಲಿರುವುದು ಸಕಲ ಜೀವರಾಶಿಗಳ ಚೈತನ್ಯದ ಮೂಲ ಸೂರ್ಯ. ಇಲ್ಲಿ ಕಟ್ಟಡವಿಲ್ಲ, ಗರ್ಭಗುಡಿಯಿಲ್ಲ. ಸೂರ್ಯನನ್ನು ಹೋಲುವ ದೊಡ್ಡದಾದ ಕಲ್ಲಿನ ಗುಂಡು ಬಲಿಷ್ಠ ಸ್ತಂಭವೊಂದರ ಮೇಲೆ ಸ್ಥಾಪಿತವಾಗಿದೆ. ಸುತ್ತಲೂ ನವಗ್ರಹಗಳನ್ನು ಸೂಚಿಸುವ ಪ್ರತಿಮೆಗಳು, ಮೆಟ್ಟಿಲುಗಳು, ಸಾಕಷ್ಟು ಮಂದಿ ಕುಳಿತು ಯೋಗವನ್ನೋ ಧ್ಯಾನವನ್ನೋ ಅಭ್ಯಾಸ ಮಾಡಲು ಅನುಕೂಲವಿರುವ ಕಲ್ಲುಹಾಸುಗಳು. ಈ ದೇವರನ್ನು ಯಾರು ಬೇಕಾದರೂ ಮುಟ್ಟಬಹುದು, ಮಾತಾಡಿಸಬಹುದು. 

“ಆಕಾರಕ್ಕಿಂತಲೂ ಮಿಗಿಲಾದ ನಿರಾಕಾರ ಶಕ್ತಿಯೊಂದು ನಮ್ಮ ಸುತ್ತ ಇದೆ. ಅದನ್ನು ತಿಳಿದಾದರೂ ಮನುಷ್ಯ ತನ್ನ ಅಹಂಕಾರವನ್ನು ನಿಯಂತ್ರಿಸಿಕೊಳ್ಳಬೇಕು. ಇದರ ಸೂಚನೆಯಾದರೂ ಮಕ್ಕಳಿಗೆ ಸಿಗಲಿ” ಎಂಬ ಉದ್ದೇಶದಿಂದ ಇಂತಹದೊಂದು ದೇವಾಲಯ ಬೇಕು ಎಂದು ಯೋಚಿಸಿದವರು ದಾಮ್ಲೆಯವರು (ಪು. 25).

ಕನ್ನಡ ಮಾಧ್ಯಮವೆಂಬ ಕಾರಣಕ್ಕೆ ಇಲ್ಲಿನ ಮಕ್ಕಳು ಯಾವ ಕ್ಷೇತ್ರದಲ್ಲೂ ಹಿಂದಿಲ್ಲ. ಒಂದನೇ ತರಗತಿಯಿಂದ ಇಂಗ್ಲಿಷನ್ನೂ ಒಂದು ಭಾಷೆಯನ್ನಾಗಿ ಕಲಿಸುವುದರಿಂದ ಮಕ್ಕಳಿಗೆ ಇಂಗ್ಲೀಷೂ ಸಲೀಸು. “ಮಗುವಿನ ನಗು ಮಾಸದಂತಹ ಶಿಕ್ಷಣ ಸಾಧ್ಯವೇ?’ (ಪು.35) ಎಂದು ಒಂದೆಡೆ ಕೇಳುತ್ತಾರೆ ದಾಮ್ಲೆಯವರು. ಅಂತಹದೊಂದು ಶಿಕ್ಷಣ ಕೊಡಿಸುವ ಪ್ರಕ್ರಿಯೆ ಅಲ್ಲಿ ಜೀವಂತವಾಗಿದೆ. ವ್ಯಕ್ತಿತ್ವ ವಿಕಸನವೇ ಅಲ್ಲಿನ ಎಲ್ಲ ಚಟುವಟಿಕೆಗಳ ಮೂಲ ಉದ್ದೇಶ. ಸಂಗೀತ, ನೃತ್ಯ, ಯಕ್ಷಗಾನ, ಚಿತ್ರಕಲೆ, ನಾಟಕ, ಭಾಷಣ, ರಸಪ್ರಶ್ನೆ, ಸುದ್ದಿಪತ್ರ- ಅಲ್ಲಿ ಎಲ್ಲವೂ ಕಲಿಕೆಯ ಭಾಗ. ಇಲ್ಲಿ ಕಲಿತ ಮಕ್ಕಳೆಲ್ಲ ಉತ್ತಮ ಉದ್ಯೋಗಗಳನ್ನು ಪಡೆದು ಸಂತೃಪ್ತಿಯ ಬದುಕು ಕಟ್ಟಿಕೊಂಡಿದ್ದಾರೆ.

ಶಾಲಾ ವಾರ್ಷಿಕೋತ್ಸವದಲ್ಲಿ ಎಲ್ಲರೂ ವೇದಿಕೆಗೆ ಬಂದು ಬಹುಮಾನ ಸ್ವೀಕರಿಸುವಂತಾಗಬೇಕು ಎಂಬುದು ಶಾಲೆಯ ಆಶಯ. ಒಮ್ಮೆ ಇಬ್ಬರು ಹುಡುಗರಿಗೆ ಯಾವ ಸ್ಪರ್ಧೆಯಲ್ಲೂ ಬಹುಮಾನ ಸಿಗಲಿಲ್ಲವಂತೆ. ತಕ್ಷಣ ಆಯೋಜನೆಯಾದದ್ದು ಮರ ಹತ್ತುವ ಸ್ಪರ್ಧೆ! ಪ್ರಥಮ, ದ್ವಿತೀಯ ಬಹುಮಾನ ಅವರಿಗಲ್ಲದೆ ಬೇರೆ ಯಾರಿಗೂ ಬರಲಿಲ್ಲ ಎಂದು ಬೇರೆ ಹೇಳಬೇಕಿಲ್ಲವಷ್ಟೆ?

ಇಂತಹ ಪರಿಸರದ ನಡುವೆ ಇದ್ದ ಮೇಲೆ ನೆಲ-ಜಲ ಸಂರಕ್ಷಣೆಯ ಪ್ರತ್ಯೇಕ ಪಾಠವೇನೂ ಮಕ್ಕಳಿಗೆ ಬೇಕಾಗದು. ಆದರೆ ಸ್ನೇಹ ಶಾಲೆ ಅದನ್ನೂ ಮಾಡಿದೆ. ತನ್ನ ವಿಶಾಲ ನೈಸರ್ಗಿಕ ಕ್ಯಾಂಪಸಿನಲ್ಲಿ ಹತ್ತಾರು ಇಂಗುಗುಂಡಿಗಳನ್ನು ನಿರ್ಮಿಸಿ ತನಗೆ ನೀರಿನ ಕೊರತೆಯಾಗದಂತೆ ನೋಡಿಕೊಂಡಿದೆ. ಶಾಲೆಯ ಪ್ರತಿಯೊಂದು ಮಗುವೂ ತನ್ನ ಮನೆಯಲ್ಲೂ ಇಂಗುಗುಂಡಿ ನಿರ್ಮಿಸುವ ದೊಡ್ಡದೊಂದು ಆಂದೋಲನವೂ ಇಲ್ಲಿ ನಡೆದಿದೆ. ಅದರ ಬಗ್ಗೆ ಕೆಲಸಮಯದ ಹಿಂದೆ ನಾನು 'ಡೆಕ್ಕನ್ ಹೆರಾಲ್ಡ್' ಪತ್ರಿಕೆಯಲ್ಲಿ ಬರೆದದ್ದುಂಟು. ಇಲ್ಲಿ ಕ್ಲಿಕ್ ಮಾಡಿ ಓದಬಹುದು.

Lessons of water conservation

ಭಾರತರತ್ನ ಡಾ. ಸಿ. ಎನ್. ಆರ್. ರಾವ್, ವಿಜ್ಞಾನಿ ಶ್ರೀ ಹಾಲ್ದೊಡ್ಡೇರಿ ಸುಧೀಂದ್ರ, ಈಗ ಶಿಕ್ಷಣ ಸಚಿವರಾಗಿರುವ ಶ್ರೀ ಸುರೇಶ್ ಕುಮಾರ್ ಅವರಿಂದ ತೊಡಗಿ ಅನೇಕಾನೇಕ ಗಣ್ಯರು ಈ ಶಾಲೆಗೆ ಬಂದು ಸಂತೋಷಪಟ್ಟು ಹೋಗಿದ್ದಾರೆ. ಸಾಕಷ್ಟು ಮಂದಿ ವಿದೇಶೀಯರು ಇಲ್ಲೇ ಇದ್ದು ಅಧ್ಯಯನ ನಡೆಸಿದ್ದಾರೆ. ಇಲ್ಲಿನ ಕಲಿಕಾಪ್ರಕ್ರಿಯೆಯನ್ನು ಮನಸಾರೆ ಪ್ರಶಂಸಿಸಿದ್ದಾರೆ.

ಇಷ್ಟೆಲ್ಲ ಆದ ಮೇಲೂ ಶಿಕ್ಷಣ ಇಲಾಖೆ ಸ್ನೇಹ ಶಾಲೆಯ ಬಗ್ಗೆ ಕನಿಷ್ಟ ಆಸಕ್ತಿಯನ್ನೂ ತೋರಿಲ್ಲ ಎಂಬ ಬೇಸರ ಡಾ. ದಾಮ್ಲೆಯವರದ್ದು. “ಹೆಚ್ಚುತ್ತಿರುವ ಇಂಗ್ಲಿಷ್ ಮಾಧ್ಯಮದ ಶಾಲೆಗಳ ವ್ಯಾಪಕತೆಯಿಂದಾಗಿ ಪ್ರವಾಹದ ವಿರುದ್ಧ ಈಜುವುದು ಎಷ್ಟು ಕಾಲ ಮತ್ತು ಯಾಕಾಗಿ” ಎಂಬ ಪ್ರಶ್ನೆಯನ್ನು ಅವರೇ ಕೇಳಿರುವುದು ತುಸು ಆತಂಕದ ವಿಷಯವೇ. ಆದರೆ ಇಷ್ಟು ವರ್ಷ ಒಂದು ಕನ್ನಡ ಮಾಧ್ಯಮ ಖಾಸಗಿ ಶಾಲೆ ನಡೆದುಬಂದುದರ ಹಿಂದೆ ಸ್ನೇಹ ಬಳಗದ ಕರ್ತೃತ್ವಶಕ್ತಿ ತುಂಬ ದೊಡ್ಡದು. ಶಾಲೆಯ ಮುಖ್ಯೋಫಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮೀ ದಾಮ್ಲೆ, ಉಪಾಧ್ಯಕ್ಷ ಶ್ರೀ ಎಸ್. ಕೆ. ಆನಂದ ಕುಮಾರ್, ಕಾರ್ಯದರ್ಶಿ ಡಾ. ವಿದ್ಯಾಶಾಂಭವ ಪಾರೆ, ನಿರ್ದೇಶಕರಾದ ಶ್ರೀಮತಿ ರೇಖಾ ಆನಂದ್, ಶ್ರೀ ಗಿರೀಶ್ ಭಾರದ್ವಾಜ್, ಶ್ರೀ ಶ್ರೀಕರ ದಾಮ್ಲೆ- ಇವರೆಲ್ಲ ಆ ಬಳಗದಲ್ಲಿ ಇದ್ದಾರೆ.

ಪುಸ್ತಕದ ಬಗ್ಗೆ ಬರೆಯಬೇಕೆಂದು ಹೊರಟು ಶಾಲೆಯ ಬಗೆಗೇ ಬರೆದುಬಿಟ್ಟೆ. ಪುಸ್ತಕ ಶಾಲೆಯ ಕುರಿತೇ ಆದ್ದರಿಂದ ಹೀಗಾಯ್ತು. ನಾನೂ ಒಂದು ದಿನವನ್ನು ಅಲ್ಲಿ ಕಳೆದದ್ದರಿಂದ ಆ ಪರಿಸರ ನನ್ನ ಹೃದಯಕ್ಕೆ ಹತ್ತಿರವಾಗಿರುವುದೂ ಇದಕ್ಕೆ ಇನ್ನೊಂದು ಕಾರಣ.

ನಿಮ್ಮಲ್ಲಿ ಸಾಕಷ್ಟು ಮಂದಿ ಸ್ನೇಹ ಶಾಲೆಗೆ ಭೇಟಿ ನೀಡಿರಬಹುದು. ಇಲ್ಲವಾದರೆ ಈ ಕೊರೋನಾ ಕಾಟ ಮುಗಿದ ಮೇಲಾದರೂ ಒಮ್ಮೆ ಹೋಗಿ ಬನ್ನಿ. ಕನ್ನಡ ಶಾಲೆಗಳು ಮುಚ್ಚುತ್ತಿರುವ ಇಂದಿನ ಕಾಲದಲ್ಲಿ ಅವುಗಳನ್ನು ಉಳಿಸಲು ಏನು ಮಾಡಬೇಕು ಎಂಬ ಯಕ್ಷಪ್ರಶ್ನೆಗಾದರೂ ಒಂದು ಪ್ರಾಯೋಗಿಕ ಪರಿಹಾರ ನಿಮ್ಮ ಮನಸ್ಸಿಗೆ ಹೊಳೆದೀತು. ಇಲ್ಲದಿದ್ದರೆ ಇಂತಹ ಇನ್ನು ಹತ್ತು ಶಿಕ್ಷಣ ನೀತಿ ಬಂದೂ ಪ್ರಯೋಜನ ಇಲ್ಲ.

-ಸಿಬಂತಿ ಪದ್ಮನಾಭ

ಶನಿವಾರ, ಜುಲೈ 25, 2020

ಆಧುನಿಕ ಬದುಕಿನೊಂದಿಗೆ ಮುಖಾಮುಖಿಯಾಗಿಸುವ ಕಲ್ಚಾರರ 'ಆ ಲೋಚನ'


ಆರಂಭದಲ್ಲೇ ಹೇಳಿಬಿಡಬೇಕು: ಇದು ವಿಮರ್ಶೆ ಅಲ್ಲ. ಹೊಗಳುವ ಉದ್ದೇಶವೂ ಇಲ್ಲ. ಹೆಚ್ಚೆಂದರೆ ಪುಸ್ತಕ ಪರಿಚಯ ಎನ್ನಬಹುದು. ಶ್ರೀ ರಾಧಾಕೃಷ್ಣ ಕಲ್ಚಾರರ ಮೊನ್ನೆಯಷ್ಟೇ ಬಿಡುಗಡೆಯಾಗಿರುವ ‘ಆ-ಲೋಚನ’ವನ್ನು ಓದಿದ ಮೇಲೆ ಮನಸ್ಸಿನಲ್ಲಿ ಉಳಿದದ್ದನ್ನು ಹೇಳುವ ಪ್ರಯತ್ನ ಅಷ್ಟೇ.

ಒಟ್ಟು 216 ಪುಟಗಳಿರುವ ‘ಆ-ಲೋಚನ’ದಲ್ಲಿ 54 ಲೇಖನಗಳಿವೆ. ಸಂಜೆ ಆರು ಗಂಟೆಗೆ ಪುಸ್ತಕ ಹಿಡಿದವನು ರಾತ್ರಿ ಹನ್ನೆರಡಕ್ಕೆ ಓದಿ ಮುಗಿಸಿದೆ. ಇಷ್ಟು ಹೇಳಿದ ಮೇಲೆ ಸುಲಲಿತವಾಗಿ ಓದಿಸಿಕೊಂಡು ಹೋಗುವ ಪುಸ್ತಕ ಎಂದು ಪ್ರತ್ಯೇಕ ಹೇಳಬೇಕಿಲ್ಲ. ಅಂಕಣರೂಪದಲ್ಲಿ ಈಗಾಗಲೇ ಪ್ರಕಟವಾಗಿರುವುದರಿಂದ ನಾನೂ ಸೇರಿದಂತೆ ಹಲವಾರು ಓದುಗರು ಮೆಚ್ಚಿಕೊಂಡ ಬರೆಹಗಳೇ.  ಆದರೂ ಎಲ್ಲ ಲೇಖನಗಳನ್ನೂ ಪುಸ್ತಕದ ಚೌಕಟ್ಟಿನಲ್ಲಿ ಒಟ್ಟಿಗೆ ಓದುವ ಅನುಭವ ಬೇರೆ.

ಲೇಖಕನ ವ್ಯಕ್ತಿತ್ವದಲ್ಲಿ ವೈವಿಧ್ಯತೆಯಿದ್ದರೆ ಬರೆಹದಲ್ಲೂ ಅದು ಕಾಣುತ್ತದೆ – ಪುಸ್ತಕ ಓದಿ ಮುಗಿಸಿದ ಮೇಲೆ ತಕ್ಷಣಕ್ಕೆ ಅನಿಸಿದ್ದು ಇಷ್ಟು. ಶ್ರೀ ಕಲ್ಚಾರರು ಮೂಲತಃ ಸಾಹಿತ್ಯದ ವಿದ್ಯಾರ್ಥಿ. ಪತ್ರಕರ್ತರಾಗಿ, ಉಪನ್ಯಾಸಕರಾಗಿ ಅನುಭವ ಪಡೆದವರು. ಯಕ್ಷಗಾನ ತಾಳಮದ್ದಳೆಯ ಪ್ರಮುಖ ಅರ್ಥಧಾರಿ. ಪತ್ರಿಕಾ ಬರೆಹ, ಪುಸ್ತಕಗಳಿಂದ ಮನ್ನಣೆಯನ್ನೂ ಪಡೆದವರು. ಅವರ ಬರೆವಣಿಗೆ ಹಿತ ಕೊಡುವುದರ ಹಿಂದೆ ಈ ಎಲ್ಲ ಕಾರಣಗಳಿವೆ ಅನಿಸುತ್ತದೆ.

ಯಾವುದೇ ವ್ಯಕ್ತಿಯ ವಿದ್ವತ್ತು ಒಂದು ತೂಕವಾದರೆ, ಅದನ್ನು ಪ್ರಸ್ತುತಪಡಿಸುವ ಸಾಮರ್ಥ್ಯದ್ದು ಇನ್ನೊಂದು ತೂಕ. ಎರಡೂ ಹದವಾಗಿ ಬೆರೆತಿದ್ದರೆ ಓದುಗ ಪುಣ್ಯವಂತ. ಜ್ಞಾನ, ಅನುಭವದ ಜೊತೆಗೆ ಅವುಗಳನ್ನು ಸರಳ ಮತ್ತು ಆಕರ್ಷಕವಾಗಿ ಅಭಿವ್ಯಕ್ತಗೊಳಿಸುವ ಕಲೆ ಕಲ್ಚಾರರಿಗೆ ಕರಗತವಾಗಿರುವುದರಿಂದ ಈ ಪುಸ್ತಕ ಓದುವುದೂ ಒಂದು ಹಿತಾನುಭವವೇ. ಈ ಕೌಶಲದ ಹಿಂದೆ ಮೇಲೆ ಹೇಳಿದ ಅವರ ಬಹುಮುಖೀ ವ್ಯಕ್ತಿತ್ವದ ಪಾತ್ರ ದೊಡ್ಡದು. "ಕಿರಿದರೊಳ್ ಪಿರಿದರ್ಥ"ವನ್ನು ತುಂಬಿ ಕೊಡುವ ಕಲೆ ಅವರಿಗೆ ಸಿದ್ಧಿಸಿದೆ ಎಂದು ನನ್ನಂತಹ ಕಿರಿಯ ಹೇಳುವುದು ಅಧಿಕಪ್ರಸಂಗ ಆದೀತು. ಹಾಗಾಗಿ ಹೇಳುವುದಿಲ್ಲ.

ಅಂಕಣ ಬರೆಹಗಳಿಗೆ ಮೂಲತಃ ಪದ ಮತ್ತು ವಸ್ತುಗಳ ಇತಿಮಿತಿಗಳಿದ್ದರೂ ಇಲ್ಲಿ ಲೇಖಕರಿಗೆ ಹೆಚ್ಚೆಂದರೆ ಪದದ ಮಿತಿ ಕಾಡಿರಬಹುದು ಅಷ್ಟೇ. ವಸ್ತುಗಳ ಮಿತಿ ಅಡ್ಡಿಪಡಿಸದಂತೆ ಒಂದು ವಿಸ್ತಾರವಾದ ಚೌಕಟ್ಟು ‘ಆ ಲೋಚನ’ಕ್ಕೆ ಇತ್ತು. ಅದಕ್ಕೇ ಅದು ಎಲ್ಲೂ ಬೋರ್ ಅನಿಸುವುದಿಲ್ಲ. 10-12ನೇ ಶತಮಾನದ ಪಂಪ, ರನ್ನ, ಜನ್ನ, ರಾಘವಾಂಕ, ವಚನಕಾರರು ಎಲ್ಲರನ್ನೂ ಅವರು ಕರೆದು ತಂದಿದ್ದಾರೆ. ಹಾಗೆಂದು ವರ್ತಮಾನದ ವಿಷಯಗಳನ್ನೂ ಮಾತಾಡಿದ್ದಾರೆ. ವಿಶೇಷವೆಂದರೆ ಈ ಎರಡೂ ತುದಿಗಳನ್ನು ಸುಂದರವಾಗಿ ಬೆಸೆದಿರುವುದು.

ಇಡೀ ಪುಸ್ತಕದಲ್ಲಿ ಎದ್ದು ಕಾಣುವ ಅಂಶ ಅವರು ಆಧುನಿಕ ಬದುಕಿಗೆ ಮುಖಾಮುಖಿಯಾಗುವ ರೀತಿ. ಹಾಗೆಂದು ಯಾವುದೋ ಘನಗಂಭೀರ ಥಿಯರಿಗಳನ್ನು ತಂದು ಸಾಮಾನ್ಯ ಓದುಗರ ಕೈಗೆಟುಕದ ಹಣ್ಣಿನಂತೆ ಇಟ್ಟಿಲ್ಲ. ದಿನನಿತ್ಯ ಕಣ್ಣೆದುರು ನಡೆಯುವ ಘಟನೆಗಳನ್ನೇ, ಸುತ್ತಮುತ್ತಲಿನ ವ್ಯಕ್ತಿಗಳನ್ನೇ ಉದಾಹರಣೆಯಾಗಿಟ್ಟುಕೊಂಡು ಬದುಕಿನ ವಿಶ್ಲೇಷಣೆ ಮಾಡಿದ್ದಾರೆ. ಆಧುನಿಕ ಸಮಾಜದಲ್ಲಿ ಆಗಿರುವ ಮೌಲ್ಯಗಳ ಕುಸಿತ, ಜನರ ಸ್ವಾರ್ಥಪರತೆ, ಸಂಕುಚಿತ ಮನೋಭಾವ ಇವೆಲ್ಲವುಗಳ ಕುರಿತಾದ ಲೇಖಕರ ವಿಷಾದ ಪ್ರತಿಯೊಂದು ಲೇಖನದಲ್ಲೂ ಒಂದಲ್ಲ ಒಂದು ರೀತಿ ಕಾಣಿಸಿಕೊಂಡಿದೆ. ಹಾಗೆಂದು ಅವರು ನಿರಾಶಾವಾದಿಯಲ್ಲ ಎಂಬಷ್ಟರ ಮಟ್ಟಿಗೆ ಭರವಸೆಯ ಮಾತನಾಡುವ ಲೇಖನಗಳೂ ಸಾಕಷ್ಟು ಇವೆ. ಬಹುಶಃ ಅದೇ ಕಾರಣಕ್ಕೆ ಅವರ ಸಾಕಷ್ಟು ಓದುಗರು ಗುರುತಿಸಿರುವ ಹಾಗೆ ಅವರ ಲೇಖನಗಳಲ್ಲಿ ಒಂದು ಬಗೆಯ ಆಪ್ತಸಮಾಲೋಚನೆಯ ಗುಣವಿದೆ.

ಇಡೀ ಪುಸ್ತಕದಲ್ಲಿ ನನಗೆ ಹೆಚ್ಚು ನೆನಪುಳಿದಿರುವುದು ಹಳೆಯ ಮತ್ತು ಹೊಸ ತಲೆಮಾರಿನ ಕುರಿತ ಲೇಖಕರ ಕಾಳಜಿ. ಅದರಲ್ಲೂ ಹಿರಿಯ ಜೀವಗಳ ಬಗ್ಗೆ ಅವರು ತುಸು ಹೆಚ್ಚೇ ಆತಂಕಿತರಾಗಿರುವುದು ಎದ್ದು ಕಾಣುತ್ತದೆ. ಏನಿಲ್ಲವೆಂದರೂ ಐದಾರು ಲೇಖನಗಳು ಪೂರ್ತಿಯಾಗಿ ಇದೇ ವಿಷಯವನ್ನು ಮಾತಾಡುತ್ತವೆ. ಪುಸ್ತಕ ಆರಂಭವಾಗುವುದೇ ಎಂಬತ್ತು ದಾಟಿದ ಹಿರಿಯ ಕಲಾವಿದರೊಬ್ಬರ ಒಂಟಿತನದ ಸಂಕಟದ ಜೊತೆಗೆ (‘ನಿರ್ಮಿತ್ರನಿರಲು ಕಲಿ’). ‘ನಿವೃತ್ತಿಯ ಅನಂತರ’, ‘ಕನಸುಗಳಿಲ್ಲದ ದಾರಿಯಲ್ಲಿ’, ‘ಐವತ್ತರಾಚೆಯ ಆತಂಕಗಳು’, ‘ನೋ ಕಂಟ್ರಿ ಫಾರ್ ಓಲ್ಡ್ ಮೆನ್’ ಮುಂತಾದ ಲೇಖನಗಳೆಲ್ಲ ಆಧುನಿಕ ಸಮಾಜದ ಅಂಚಿನಲ್ಲಿರುವ ವಯೋವೃದ್ಧರ ತೊಳಲಾಟಗಳ ಬಗೆಗೆ ಚರ್ಚಿಸುತ್ತವೆ.

“ಬೀದಿನಾಯಿಗಳ ಬಗ್ಗೆ ನಮಗಿರುವ ಅನುಕಂಪದ ಒಂದಂಶವಾದರೂ ನಮ್ಮ ಮನೆಗಳ ವೃದ್ಧಜೀವಗಳ ಕುರಿತು ಬೇಡವೇ?” (ಪು. 195) ಎಂದು ಒಂದೆಡೆ ಅವರು ಬರೆದದ್ದು ನಮ್ಮ ಸಮಾಜದ ಆತ್ಮಸಾಕ್ಷಿಗೆ ಕೇಳಿದ ಪ್ರಶ್ನೆಯೇನೋ ಎಂಬ ಹಾಗಿದೆ. “ಉಪಯೋಗವಿಲ್ಲದ ಜೀವಕ್ಕೆ ಬದುಕುವ ಹಕ್ಕಿಲ್ಲ ಎಂಬ ಸಿದ್ಧಾಂತಕ್ಕೆ ಒಲಿಯುತ್ತಿದ್ದೇವೆ”, “ಗಲ್ಲುಶಿಕ್ಷೆಯನ್ನು ನಿರೀಕ್ಷಿಸುವ ಕೈದಿಗಳಂತೆ ಕಾಣುತ್ತಾರೆ” (ಪು. 29) ಎಂಬ ಮಾತುಗಳೂ ಅಷ್ಟೇ ಬೆಚ್ಚಿಬೀಳಿಸುವಂಥದ್ದು. 

ಮಕ್ಕಳು ಹಿಡಿದಿರುವ ಹಾದಿ, ಅವರ ಭವಿಷ್ಯ ಲೇಖಕರಿಗೆ ಪ್ರಮುಖವಾಗಿ ಕಾಡಿರುವ ಇನ್ನೊಂದು ವಿಷಯ. ಜತೆಯಲ್ಲಿ ಉಣ್ಣುವ ಸೊಗಸು, ಮಂಗಳದ ಬೆಳೆಗಿಂಗಳಿನ ಮಳೆ, ಹೆತ್ತೊಡಲ ತಲ್ಲಣಗಳು, ಕಮರುವ ಕುಡಿಗಳು ಮುಂತಾದ ಲೇಖನಗಳಲ್ಲಿ ಮಕ್ಕಳ ಕುರಿತಾದ ಆತಂಕ, ಭರವಸೆ ಎರಡರ ಕುರಿತೂ ಮಾತನಾಡಿದ್ದಾರೆ. ಟಿವಿ, ಮೊಬೈಲ್, ಸಾಮಾಜಿಕ ಮಾಧ್ಯಮಗಳ ನಡುವೆ ಕುಸಿಯುತ್ತಿರುವ ಕುಟುಂಬ ವ್ಯವಸ್ಥೆ, ದಾರಿತಪ್ಪುತ್ತಿರುವ ಮಕ್ಕಳು, ಮಕ್ಕಳಲ್ಲಿ ಮೌಲ್ಯಗಳನ್ನು ತುಂಬುವ ಬಗೆ ಹೇಗೆ ಎಂಬ ಹೆತ್ತವರ ಆತಂಕ ಅನೇಕ ಲೇಖನಗಳಲ್ಲಿ ಚರ್ಚೆಗೆ ಬಂದಿದೆ. “ಮುಂದಿನ ಜನಾಂಗ ವ್ಯಾಧನಾಗುತ್ತದೋ? ವಾಲ್ಮೀಕಿಯಾಗುತ್ತದೋ?” (ಪು. 184) ಎಂದು ಒಂದೆಡೆ ಕೇಳಿರುವುದು ಮಾರ್ಮಿಕವಾಗಿದೆ.

ನೈತಿಕತೆಯ ತಳಹದಿಯಿಲ್ಲದ ರಾಜಕಾರಣ, ಅಹಮಿಕೆಯ ಆಡಳಿತಾರೂಢರು, ಸಂಪತ್ತನ್ನೇ ಗೌರವ ಎಂದುಕೊಂಡ ಶ್ರೀಮಂತವರ್ಗ,  ಸಾಮಾಜಿಕ ಜಾಲತಾಣಗಳ ನಡುವೆ ಹಿಡಿತ ತಪ್ಪುತ್ತಿರುವ ಭಾಷೆ - ಎಲ್ಲದರ ಕುರಿತೂ ಅಲ್ಲಲ್ಲಿ ಸಾಕಷ್ಟು ಪ್ರಸ್ತಾಪವಾಗಿದೆ. ಇಂತಹ ವಿಷಯಗಳ ಬಗ್ಗೆ ಮಾತಾಡುವಾಗೆಲ್ಲ ಲೇಖಕರು ಮಹಾಭಾರತ, ರಾಮಾಯಣ ಮತ್ತಿತರ ಮಹಾಕಾವ್ಯಗಳಿಂದ ಸಾಕಷ್ಟು ನಿದರ್ಶನಗಳನ್ನು ಕೊಡುತ್ತಾರೆ (ಮಹಾಭಾರತ ಅವರನ್ನು ಹೆಚ್ಚು ಕಾಡಿದಂತೆ ಕಾಣುತ್ತದೆ). ಪಂಪನಿಂದ ತೊಡಗಿ ಡಿವಿಜಿಯವರವರೆಗಿನ ಹಲವು ಸಾಹಿತ್ಯರತ್ನಗಳನ್ನು ಅವರು ಪ್ರಸ್ತುತವಾಗಿಸುವ ರೀತಿಯೂ ಚಂದ. ಸಾವಿರ ವರ್ಷಗಳ ಹಿಂದೆ ಬರೆದದ್ದೆಲ್ಲ ವರ್ತಮಾನದ ರಾಜಕಾರಣಕ್ಕೆ ಇಷ್ಟೊಂದು ಪ್ರಸ್ತುತವೇ ಎಂಬ ಸೋಜಿಗ ಓದುಗರನ್ನು ಕಾಡದಿರದು. ಲೇಖಕನೊಬ್ಬನಿಗೆ ಸಾಹಿತ್ಯದ ವಿಸ್ತಾರವಾದ ಓದು ಎಷ್ಟೊಂದು ಮುಖ್ಯ ಎಂಬುದು ಅಲ್ಲಲ್ಲೇ ಮನದಟ್ಟಾಗುತ್ತದೆ.

ಓದುತ್ತಾ ಥಟ್ಟನೆ ಸೆಳೆದ ಕೆಲವು ಮಾತುಗಳನ್ನು ಟಿಪ್ಪಣಿ ಮಾಡಿಕೊಂಡಿದ್ದೆ. ಗಮನಿಸಿ.
 • ಯೌವ್ವನದ ಹುಮ್ಮಸ್ಸಿನಲ್ಲಿದ್ದ ಎಲ್ಲದರ ನಿರ್ಣಾಯಕ ನಾನು ಅನ್ನುವ ಅಹಂಕಾರ ಅಳಿದು ಬದುಕಿನ ಬಂಡಿಯನ್ನೆಳೆದು ಬಳಲಿಕೆಯಾದ ನಡುವಯಸ್ಸಿನಲ್ಲಿ ತುಸು ಹೊತ್ತು ವಿಶ್ರಾಂತಿಗೆ ನಿಂತಾಗ ಮತ್ತದೇ ಪ್ರಶ್ನೆ. ಆ ದಾರಿಯಲ್ಲಿ ಹೋಗುತ್ತಿದ್ದರೆ? (ಪು. 24)
 • ಓದುತ್ತಿರುವಷ್ಟು ಕಾಲ ಬೇರಾವುದರ ಅರಿವೂ ಇಲ್ಲದ ತನ್ಮಯತೆ,ವರ್ತಮಾನವನ್ನು ಮರೆಯುವ ಧ್ಯಾನಸ್ಥ ಸ್ಥಿತಿ ಕೊಡುವ ವಿಶಿಷ್ಟ ಅನುಭವ ಎಂದಿಗೂ ಹೊಳಪು ಕಳಕೊಳ್ಳದ ಹೊನ್ನು (ಪು.  27).
 • ದಾಂಪತ್ಯದಲ್ಲಿ ಪ್ರೇಮ, ಹೊಂದಾಣಿಕೆಗಳಿಗಿಂತ ಸ್ಪರ್ಧೆ, ಸಮಾನತೆ ಮುಖ್ಯವಾದಾಗ ಸಂಬಂಧ ಕತ್ತರಿಸಿ ಹೋಗುವುದು ಅನಿವಾರ್ಯ (ಪು. 34).
 • ನಾವು ಸತ್ಯವನ್ನು ಹೇಳುವಾಗ ನಮ್ಮ ಭಾಷೆ ಕಟುವಾಗಬೇಕಿಲ್ಲ. ಸೌಮ್ಯವಾಗಿ ಹೇಳುವುದು ದೌರ್ಬಲ್ಯವೂ ಅಲ್ಲ. ಭಾಷೆ ಕಟುವಾಗುವುದು ಮತ್ತು ಮಾತು ಆರ್ಭಟವಾಗುವುದು ತನ್ನ ನಿಲುವಿನ ಕುರಿತು ತನೇ ಸಂದೇಹವಿದ್ದಾಗ ಅಥವಾ ಸುಳಳು ಹೇಳುವಾಗ (ಪು.39).
 • ನಿಜವಾದ ಯೋಗ್ಯತೆ ಇಲ್ಲದೆ ಬಂದ ಕೀರ್ತಿಯ ಆಯಸ್ಸು ಎಷ್ಟು? (ಪು. 50).
 • ಕೈಬೆರಳು ಬಳಸಿಕೊಂಡು ಉಣ್ಣಲಾಗದ, ಹಿತವಾದ ಉಡುಪು ಧರಿಸಲಾಗದ, ದುಃಖವಾದರೆ ಮನಸ್ಸು ತೆರೆದು ಅಳಲಾಗದ, ಸಂತೋಷವಾದರೆ ಮನಃಪೂರ್ವಕ ನಗಲಾರದ ಈ ಕೃತಕತೆ ನಮಗೆ ಬೇಕೆ? (ಪು. 72)
 • ಒಬ್ಬ ಮೋಸಗಾರನಿಂದಾಗಿ ಜಗತ್ತಿನಲ್ಲಿ ಉದಾರಿಗಳೇ ಇಲ್ಲ ಎಂದು ನಿರ್ಣಯಿಸಲಾಗದು (ಪು. 74)
 • ಮೂರ್ಖರ ಊರಿನಲ್ಲಿ ಬುದ್ಧಿವಂತನಾಗಿರುವುದೇ ಅಪಾಯ ಅಲ್ಲವೇ? (ಪು. 84)
 • ಪ್ರಸಿದ್ಧಿಗಿಂತ ಸಿದ್ಧಿಯೇ ಕಲಾಕಾರನ ಆತ್ಮಶಕ್ತಿಯನ್ನು ವರ್ಧಿಸುವುದು (ಪು. 94).
 • ವೃದ್ಧರನ್ನು ಅವರಿರುವಷ್ಟು ಕಾಲ ಪ್ರೀತಿಯಿಂದ ನೋಡಿಕೊಳ್ಳುವವನಿಗಿಂತ ಅವರ ಉತ್ತರಕ್ರಿಯೆಯನ್ನು ವಿಜೃಂಭಣೆಯಿಂದ ಮಾಡುವವನನ್ನು ಲೋಕ ಹೊಗಳುತ್ತದೆ (ಪು. 103).
 • ಹೊರಗಿನ ಒತ್ತಡದಿಂದ ಯಾವ ಕಲೆಯೂ ಒಲಿಯಲಾರದು (ಪು. 140)
 • ಕ್ಷಮಿಸಿದವನ ಔದಾರ್ಯ ಅರ್ಥವಾಗದಿದ್ದಾಗ ಕ್ಷಮೆಯಿಂದ ಪ್ರಯೋಜನವೇನು? (ಪು. 150).
 • ಒಂದು ಸಮೂಹವನ್ನು ಪ್ರಭಾವಿಸುವ ಸಾಮರ್ಥ್ಯವುಳ್ಳವರ ಜೀವನ ಭ್ರಷ್ಟವೆಂದು ಬಹಿರಂಗವಾದಾಗ ಅವರ ಜಸ (ಕೀರ್ತಿ) ಮಾತ್ರವಲ್ಲ ದೇಶಚರಿತೆಯೂ ಕಳಂಕವಾಗುವುದಷ್ಟೆ? (ಪು. 164).
 • ಅಭಿಮಾನಿಗಳ ಉಘೇ ಎಂಬ ಉದ್ಗಾರ ಕಲಾವಿದನನ್ನು ಸಿದ್ಧಗೊಳಿಸಲಾರದು, ಬೆಂಬಲಿಗರ ಜಯಘೋಷ ನಾಯಕನನ್ನು ರೂಪಿಸಲಾರದು (ಪು. 204).
ಪ್ರತೀಪುಟದಲ್ಲೂ ಕಂಡುಬರುವ ಇಂತಹ ಸತ್ವಯುತ ಮಾತುಗಳು ಮನಸ್ಸನ್ನು ಚಿಂತನೆಗೆ ಹಚ್ಚುತ್ತವೆ. ಎಲ್ಲಾ ಬರೆದುಬಿಟ್ಟರೆ ಇನ್ನು ಪುಸ್ತಕ ಓದುವುದು ಯಾಕೆ ಎಂದು ನೀವು ಕೇಳಿಬಿಟ್ಟರೆ ಕಷ್ಟ. ಆ ಖುಷಿ ಇಡೀ ಪುಸ್ತಕದ ಓದಿನಿಂದಲೇ ಸಿಗಬೇಕು. ಹಾಗಾಗಿ ಇಲ್ಲಿ ನಿಲ್ಲಿಸುತ್ತೇನೆ.

ಬಂಟ್ವಾಳದ ಸೇವಂತಿ ಪ್ರಕಾಶನ ‘ಆ ಲೋಚನ’ವನ್ನು ಪ್ರಕಟಿಸಿದೆ. ಹೊಸದಿಂಗತ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣ ಬರೆಹಗಳಿವು. ಡಾ. ನಾಗವೇಣಿ ಮಂಚಿಯವರು ಚಂದದ ಬೆನ್ನುಡಿ ಬರೆದಿದ್ದಾರೆ. ಕಲ್ಚಾರರ ಮಗ ಅಭಿರಾಮನೇ ಅರ್ಥಪೂರ್ಣ ರಕ್ಷಾಪುಟ ವಿನ್ಯಾಸ ಮಾಡಿ ಹೊಸಹುಡುಗರ ತಾಕತ್ತೇನು ಅಂತ ತೋರಿಸಿದ್ದಾನೆ. ಪುಸ್ತಕದ ಕ್ರಯ ರೂ. 170.

‘ಕಟ್ಟಿಯುಮೇನೋ ಮಾಲೆಗಾರನ ಪೊಸ ಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೇ’ ಎಂಬ ಜನ್ನನ ಮಾತನ್ನು ಒಂದೆಡೆ ಉದ್ಧರಿಸಿದ್ದಾರೆ ಲೇಖಕರು. ಮಾಲೆಗಾರ ಎಷ್ಟೇ ಚೆನ್ನಾಗಿ ಹೂಗಳನ್ನು ಪೋಣಿಸಿಟ್ಟರೂ ಮುಡಿಯುವ ರಸಿಕರಿಲ್ಲದೆ ಹೋದರೆ ಅದು ಬಾಡಿಹೋಗುವುದಿಲ್ಲವೇ ಎಂದು ಅರ್ಥ. “ಮಾಲೆಗಾರನ ಮಾಲೆಗಳನ್ನು ಯೋಗ್ಯ ರಸಿಕರು ಮುಡಿಯಲಿ. ಕೋಮಲ ಮಾಲೆಗಳು ಬಾಡದಿರಲಿ” (ಪು. 20) ಎಂದು ಆ ಲೇಖನ ಮುಗಿದಿದೆ. 

ಮಾಲೆ ಸಿದ್ಧವಿದೆ. ತಾವೂ ಮುಡಿದುಕೊಳ್ಳಿರಿ. ಮಾಲೆಗಾರನ ಶ್ರಮ ಸಾರ್ಥಕವಾಗಲಿ.

- ಸಿಬಂತಿ ಪದ್ಮನಾಭ ಕೆ. ವಿ.