ಮಂಗಳವಾರ, ಜೂನ್ 24, 2014

ಬಿಎ ಬಿಎಸ್ಸಿ ಕೋರ್ಸುಗಳ ಕಥೆ ಏನಾಗಲಿದೆ?

ಇದು 22 ಜೂನ್ 2014ರಂದು 'ಕನ್ನಡ ಪ್ರಭ'ದಲ್ಲಿ ಪ್ರಕಟವಾದ ಲೇಖನ.

ಪದವಿ ಹಂತದಲ್ಲಿ ವಿಜ್ಞಾನ ಮತ್ತು ಕಲಾ ವಿಭಾಗದ ತರಗತಿಗಳಿಗೆ ಆಗುತ್ತಿರುವ ಪ್ರವೇಶಾತಿಯನ್ನು ಗಮನಿಸಿದರೆ ಮಾನವಿಕ ಶಾಸ್ತ್ರ (Humanities), ಸಮಾಜವಿಜ್ಞಾನ ಹಾಗೂ ಮೂಲವಿಜ್ಞಾನಗಳ ಅವಸಾನ ಕಾಲ ಸನ್ನಿಹಿತವಾಗುತ್ತಿದೆಯೇ ಎಂಬ ಆತಂಕ ಕಾಡದಿರದು.

ಇಂಜಿನಿಯರಿಂಗ್-ಮೆಡಿಕಲ್ ಕೋರ್ಸುಗಳ ಕಡೆಗೆ ವಲಸೆ ಹೋಗುತ್ತಿರುವ ವಿದ್ಯಾರ್ಥಿಗಳಿಂದಾಗಿ ಬಿಎಸ್ಸಿ ತರಗತಿಗಳು ಬಿಕೋ ಎನ್ನುತ್ತಿದ್ದರೆ, ಭವಿಷ್ಯದ ಬಗ್ಗೆ ಭರವಸೆ ಮೂಡಿಸಲು ವಿಫಲವಾಗಿರುವ ಸಮಾಜ ವಿಜ್ಞಾನಗಳಿಂದಾಗಿ ಕಲಾ ವಿಭಾಗದ ಕೋರ್ಸುಗಳು ಪಾಳುಬಿದ್ದಿವೆ. ಪಿಯುಸಿ ಮುಗಿಸಿದ ವಿದ್ಯಾರ್ಥಿಗಳೆಲ್ಲರೂ ತಮಗೆ ಬಿ.ಕಾಂ. ಸೀಟು ಸಿಕ್ಕಿದರೆ ಸಾಕೆಂದು ಹಪಹಪಿಸುತ್ತಿರುವುದು ಸದ್ಯದ ಬೆಳವಣಿಗೆ.

ಕಳೆದ ವರ್ಷವಷ್ಟೇ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಸ್ವೀಕರಿಸಿದ ಪ್ರೊ. ಸಿ. ಎನ್. ಆರ್. ರಾವ್ ಅವರು ’ಇದು ಮೂಲವಿಜ್ಞಾನದಲ್ಲಿನ ಸಂಶೋಧನೆಗೆ ಸಂದ ಪುರಸ್ಕಾರ’ ಎಂದು ಉದ್ಗರಿಸಿದ್ದರು. ಅದರ ಬೆನ್ನಲ್ಲೇ ಮೂಲವಿಜ್ಞಾನಗಳು ಮೂಲೆಗುಂಪಾಗುತ್ತಿರುವ ಬಗೆಗೂ ಅವರು ತಮ್ಮ ಕಳವಳವನ್ನು ತೋಡಿಕೊಂಡಿದ್ದರು. ಪ್ರಸಿದ್ಧ ಅರ್ಥಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಕೂಡ ಮಾನವಿಕಶಾಸ್ತ್ರಗಳು ಅವಗಣನೆಗೆ ಒಳಗಾಗುತ್ತಿರುವ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಸಿಇಟಿಯಲ್ಲಿ ಒಳ್ಳೆಯ ರ‍್ಯಾಂಕ್ ಪಡೆದುಕೊಳ್ಳಲಾಗದವರು ಅಥವಾ ಲಕ್ಷಾಂತರ ರುಪಾಯಿ ಹಣ ನೀಡಿಯಾದರೂ ಇಂಜಿನಿಯರಿಂಗ್-ಮೆಡಿಕಲ್ ಸೀಟು ಪಡೆದುಕೊಳ್ಳಲು ಅಶಕ್ತರಾದವರು ಮಾತ್ರ ಬಿಎಸ್ಸಿಗೆ ಸೇರಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ಬೆಳೆದುಬಿಟ್ಟಿದೆ. ವೃತ್ತಿಪರ ಕೋರ್ಸುಗಳನ್ನು ಸೇರುವ ಅರ್ಹತೆಯಿದ್ದರೂ ಅವುಗಳನ್ನು ಬಿಟ್ಟು ಸಹಜ ಆಸಕ್ತಿಯಿಂದ ಮೂಲವಿಜ್ಞಾನವನ್ನು ಆಯ್ದುಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಬಿಎಸ್ಸಿಗೆ ಸೇರಿದವರಿಗೂ ಬೇಕಾಗಿರುವುದು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತಿತರ ಕೆಲವೇ ಕೆಲವು ವಿಷಯಗಳು.

ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಲ್ಲಂತೂ ಎಸ್.ಎಸ್.ಎಲ್.ಸಿ. ಹಂತದಿಂದಲೇ ಇಂಜಿನಿಯರಿಂಗ್-ಮೆಡಿಕಲ್ ಭೂತ ಮನೆಮಾಡಿಕೊಂಡುಬಿಡುತ್ತದೆ. ಎಸ್.ಎಸ್.ಎಲ್.ಸಿ.ಯಲ್ಲಿ ಒಳ್ಳೇ ಅಂಕ ಬರದಿದ್ದರೆ, ಆಮೇಲೆ ಪಿಯುಸಿಯಲ್ಲಿ ವಿಜ್ಞಾನ ಓದಲು ಒಳ್ಳೇ ಕಾಲೇಜು ಸಿಗದಿದ್ದರೆ, ನಂತರ ಸಿಇಟಿಯಲ್ಲಿ ಒಳ್ಳೇ ರ‍್ಯಾಂಕ್ ದೊರೆಯದಿದ್ದರೆ ತನ್ನ ಮಗ/ಮಗಳಿಗೆ ಭವಿಷ್ಯವೇ ಇಲ್ಲ ಎಂಬ ದಿಕ್ಕಿನಲ್ಲೇ ಹೆತ್ತವರ ಯೋಚನಾಲಹರಿ ಸಾಗುತ್ತದೆ. ಪಿಯುಸಿಯಲ್ಲಿ ಕಲಾ ವಿಭಾಗವನ್ನು ಆರಿಸಿಕೊಳ್ಳುವವರು ಇನ್ನೇನನ್ನೂ ಓದಲಾಗದ ಶತದಡ್ಡರು, ಅದು ನಾಚಿಕೆಗೇಡು ಎಂಬುದು ಪ್ರಚಲಿತದಲ್ಲಿರುವ ಧೋರಣೆ. ಅದು ಪದವಿ ಹಂತದಲ್ಲೂ ಮುಂದುವರಿದಿರುವುದು ದುರದೃಷ್ಟಕರ.

ಈಗ ಏಕಾಏಕಿ ಬಿ.ಕಾಂ. ತರಗತಿಗಳಿಗೆ ಬೇಡಿಕೆ ಹೆಚ್ಚಾಗಿಬಿಟ್ಟಿದೆ. ನಗರ ಪ್ರದೇಶದ ಅನೇಕ ಕಾಲೇಜುಗಳು ಕಲಾ ವಿಭಾಗವನ್ನೇ ಮುಚ್ಚಿಬಿಟ್ಟಿವೆ; ವಿಜ್ಞಾನ ಮತ್ತು ವಾಣಿಜ್ಯ ವಿಭಾಗವನ್ನು ಮಾತ್ರ ನಡೆಸುತ್ತಿವೆ. ವಾಣಿಜ್ಯ ವಿಭಾಗದಲ್ಲಿ ನಾಲ್ಕೈದು ಸೆಕ್ಷನುಗಳನ್ನು ತೆರೆದರೂ ಮತ್ತಷ್ಟು ಬೇಡಿಕೆ ಕುದುರುತ್ತಲೇ ಇದೆ. ವಾಣಿಜ್ಯ ವಿಭಾಗಕ್ಕೆ ಹಾಗೂ ಇಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸುಗಳಿಗೆ ಬೇಡಿಕೆ ಹೆಚ್ಚಾಗಿರುವುದು ಆಕ್ಷೇಪಾರ್ಹವೇನೂ ಅಲ್ಲ. ಆದರೆ ಈ ಓಟ ಇನ್ನೆಷ್ಟು ದಿನ? ಎಲ್ಲರೂ ಬಿ.ಕಾಂ. ಓದುತ್ತಲೇ ಹೋದರೆ ಅಥವಾ ಎಲ್ಲರೂ ಇಂಜಿನಿಯರುಗಳಾದರೆ ಅವರ ಭವಿಷ್ಯದ ಗತಿ ಏನು? ನಮ್ಮ ಮಾನವಿಕ ಶಾಸ್ತ್ರಗಳಿಂದ, ಸಮಾಜ ವಿಜ್ಞಾನಗಳಿಂದ ಯುವಜನತೆ ವಿಮುಖರಾಗಿರುವುದು ಏಕೆ? ಅವರನ್ನು ಮತ್ತೆ ಸೆಳೆಯುವುದು ಹೇಗೆ? ಈ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಿದೆ.

ಬಿಎ ಅಥವಾ ಬಿಎಸ್ಸಿ ಓದಿದವರಿಗೆ ಭವಿಷ್ಯ ಇಲ್ಲ ಎಂಬ ಅಭಿಪ್ರಾಯ ತುಂಬ ಗಾಢವಾಗಿ ಸಮಾಜದಲ್ಲಿ ಹರಡಿಕೊಂಡಿರುವುದು ಸದ್ಯದ ಪರಿಸ್ಥಿತಿಗೆ ಒಂದು ಕಾರಣ. ಈ ವಿಭಾಗದಲ್ಲಿ ಡಿಗ್ರಿ ಮುಗಿಸಿದವರು ಬಿಎಡ್ ಅಥವಾ ಸ್ನಾತಕೋತ್ತರ ಡಿಗ್ರಿ ಪಡೆದು ಮೇಸ್ಟ್ರಾಗುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲ ಎಂಬ ಭಾವನೆ ನಮ್ಮ ವಿದ್ಯಾರ್ಥಿಗಳಲ್ಲಿ ಮತ್ತು ಅವರ ಪೋಷಕರಲ್ಲಿ ಬಲವಾಗಿಯೇ ಬೇರೂರಿದೆ. ಬಿಎ/ಬಿಎಸ್ಸಿ ಓದಿದವರ ಭವಿಷ್ಯದ ಬಗ್ಗೆ ಇರುವ ಅನುಮಾನಗಳಲ್ಲಿ ಸತ್ಯ ಇಲ್ಲದಿಲ್ಲ. ಆದರೆ ಸತ್ಯಕ್ಕಿಂತಲೂ ಹೆಚ್ಚು ಪೂರ್ವಾಗ್ರಹ ಅಥವಾ ಅಜ್ಞಾನ ಇದೆ ಎಂಬುದೇ ಹೆಚ್ಚು ನಿಜ. ಒಂದೆಡೆ, ಸಮಾಜ ವಿಜ್ಞಾನ ಹಾಗೂ ಮೂಲವಿಜ್ಞಾನಗಳನ್ನು ಓದುವ ಅವಶ್ಯಕತೆಯನ್ನು ವಿದ್ಯಾರ್ಥಿಗಳಿಗೆ ಮತ್ತವರ ಪೋಷಕರಿಗೆ ಮನದಟ್ಟು ಮಾಡುವಲ್ಲಿ ನಾವು ವಿಫಲರಾಗಿದ್ದೇವೆ. ಇನ್ನೊಂದೆಡೆ, ಸಮಾಜ ವಿಜ್ಞಾನ ಮತ್ತು ಮೂಲವಿಜ್ಞಾನದ ಕೋರ್ಸುಗಳನ್ನು ಪ್ರಸಕ್ತ ಜಗತ್ತಿನ ಆದ್ಯತೆಗಳಿಗನುಗುಣವಾಗಿ ಪುನರ್ರಚಿಸುವಲ್ಲಿ ಹಾಗೂ ಅಷ್ಟೇ ಆಕರ್ಷಕವಾಗಿ ಅವುಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ನಾವು ಸೋತಿದ್ದೇವೆ.

ಈ ಎರಡು ವಿಚಾರಗಳಲ್ಲಿ ಸುಧಾರಣೆ ತರದ ಹೊರತು ಮಾನವಿಕ ಶಾಸ್ತ್ರಗಳಿಗಾಗಲೀ, ಮೂಲವಿಜ್ಞಾನಕ್ಕಾಗಲೀ ಖಂಡಿತ ಉಳಿಗಾಲವಿಲ್ಲ.  ಆದರೆ ಇದು ಒಬ್ಬಿಬ್ಬರಿಂದ ಆಗುವಂತಹ ಕೆಲಸ ಅಲ್ಲ. ಅಧ್ಯಾಪಕರು, ಶಿಕ್ಷಣ ಸಂಸ್ಥೆಗಳು, ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ನೀತಿನಿಯಮಗಳನ್ನು ರೂಪಿಸುವ, ಅನುಷ್ಠಾನಗೊಳಿಸುವ ಸಂಸ್ಥೆಗಳೆಲ್ಲರ ಸಹಭಾಗಿತ್ವದಲ್ಲಿ ನಡೆಯಬೇಕಾದ ಒಂದು ಸಮಷ್ಠಿ ಕಾರ್ಯ ಅಥವಾ ಆಂದೋಲನ.

ಇಡೀ ಸಮಾಜ ಒಂದು ಸಜೀವ ದೇಹವೆಂದು ಭಾವಿಸಿದರೆ ಅದರ ಸಮಗ್ರ ಬೆಳವಣಿಗೆ ಮತ್ತು ಅಭ್ಯುದಯಕ್ಕೆ ಮಾನವಿಕ ಶಾಸ್ತ್ರ ಹಾಗೂ ವಿಜ್ಞಾನದ ಅಧ್ಯಯನ ಮತ್ತು ಸಂಶೋಧನೆ ತೀರಾ ಅನಿವಾರ್ಯ. ಈ ತಿಳುವಳಿಕೆಯನ್ನು ಮತ್ತೆ ಸಮಾಜದಲ್ಲಿ ಮೂಡಿಸುವ ಅವಶ್ಯಕತೆ ಇದೆ. ಜೊತೆಗೆ, ಬಿಎಯಂತಹ ಕೋರ್ಸುಗಳು ನಿರುಪಯುಕ್ತವಲ್ಲ ಎಂಬ ಭಾವನೆಯನ್ನು ಬಲಗೊಳಿಸುವ ಕೆಲಸ ನಡೆಯಬೇಕಿದೆ. ಬಿಎ/ಬಿಎಸ್ಸಿ ಓದಿದವರು ನಾಳೆ ನಿರುದ್ಯೋಗಿಗಳಾಗಬೇಕಿಲ್ಲ ಅಥವಾ ಗುಮಾಸ್ತರಾಗಿ ಉಳಿಯಬೇಕಾಗಿಲ್ಲ, ಆ ಹಾದಿಯಲ್ಲಿ ಮುಂದುವರಿದು ಐಎಎಸ್/ಐಪಿಎಸ್ ಅಧಿಕಾರಿ, ವಿದೇಶೀ ರಾಯಭಾರಿ, ಶ್ರೇಷ್ಠ ಸಂಶೋಧಕ ಕೂಡ ಆಗಬಹುದೆಂಬ ಭರವಸೆಯನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕಿದೆ.

ಬಿಎ ಅಧ್ಯಯನದ ಸಾಂಪ್ರದಾಯಿಕ ವಿಷಯಗಳಾದ ಇತಿಹಾಸ, ಸಾಹಿತ್ಯ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಮುಂತಾದವುಗಳ ಬೋಧನೆಯನ್ನು ಇನ್ನಷ್ಟು ಆಕರ್ಷಕಗೊಳಿಸುವ ಮತ್ತು ಅವುಗಳ ಜೊತೆಗೆ ಉದ್ಯೋಗ ಜಗತ್ತಿಗೆ ತುಂಬ ಅವಶ್ಯಕತೆಯಿರುವ ಸಂವಹನ ಇಂಗ್ಲಿಷ್, ಕಂಪ್ಯೂಟರ್ ತರಗತಿಗಳು, ಭಾಷಾಂತರ, ತಾಂತ್ರಿಕ ಬರವಣಿಗೆ, ಛಾಯಾಗ್ರಹಣ, ಫ್ಯಾಶನ್ ಡಿಸೈನಿಂಗ್, ಜಾಹೀರಾತು ವಿನ್ಯಾಸ, ವ್ಯಕ್ತಿತ್ವ ವಿಕಸನದಂತಹ ಪ್ರಾಯೋಗಿಕ ಕೋರ್ಸುಗಳನ್ನು ಹೆಚ್ಚುವರಿಯಾಗಿ ಪರಿಚಯಿಸುವ ಅಗತ್ಯ ಇದೆ. ಇಂತಹವುಗಳ ಆಕರ್ಷಣೆಯಿಂದಲಾದರೂ ಹೆಚ್ಚುಮಂದಿ ಸಮಾಜ ವಿಜ್ಞಾನಗಳತ್ತ ಮುಖಮಾಡಿದರೆ ಅದೊಂದು ಧನಾತ್ಮಕ ಬೆಳವಣಿಗೆಯಾದೀತು. ಹಾಗೆಯೇ ಉದ್ಯೋಗಕ್ಕೆ ನೇರ ಸಂಬಂಧ ಹೊಂದಿರುವ ಪತ್ರಿಕೋದ್ಯಮ, ಮನಃಶಾಸ್ತ್ರ, ಪ್ರವಾಸೋದ್ಯಮದಂತಹ ವಿಷಯಗಳ ಔದ್ಯೋಗಿಕ ಸಾಧ್ಯತೆಗಳ ಬಗೆಗೂ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸಬೇಕಿದೆ.

ಯುಜಿಸಿಯೇನೋ ಮೌಲ್ಯವರ್ಧಿತ ಕೋರ್ಸುಗಳನ್ನು ಬಿಎ/ಬಿಎಸ್ಸಿ ಹಂತದಲ್ಲಿ ಹೆಚ್ಚುಹೆಚ್ಚಾಗಿ ಆರಂಭಿಸುವುದಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ, ಕೋಟ್ಯಂತರ ರುಪಾಯಿಗಳನ್ನೂ ತೆಗೆದಿರಿಸುತ್ತಿದೆ. ಆದರೆ ಅವುಗಳನ್ನು ಪಡೆದುಕೊಳ್ಳುವ ಮತ್ತು ಅನುಷ್ಠಾನಗೊಳಿಸುವ ಹುರುಪು ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿ ಕಾಣಿಸುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸದೇ ಹೋದರೆ ಬಿಎ, ಬಿಎಸ್ಸಿಯಂತಹ ಕೋರ್ಸುಗಳು ಕೆಲವೇ ವರ್ಷಗಳಲ್ಲಿ 'ಡೆಡ್ ಕೋರ್ಸು’ಗಳಾಗುವುದರಲ್ಲಿ ಸಂಶಯವಿಲ್ಲ.


ಗುರುವಾರ, ಜೂನ್ 12, 2014

ಅದ್ಧೂರಿ ಮದುವೆ: ಜಾಗೃತಿಯೇ ಪರಿಹಾರ


ಅದ್ಧೂರಿ ವಿವಾಹಗಳಿಗೆ ತೆರಿಗೆ ವಿಧಿಸುವ ಬಗ್ಗೆ ರಾಜ್ಯದ ಕಾನೂನು ಸಚಿವರು ಪ್ರಸ್ತಾಪಿಸಿದ್ದು, ಅದರ ಬೆನ್ನಲ್ಲೇ ತರಹೇವಾರಿ ಚರ್ಚೆಗಳು ನಡೆದದ್ದು, ಮೂರೇ ದಿನದಲ್ಲಿ ಸಚಿವರು ತಮ್ಮ ಪ್ರಸ್ತಾಪವನ್ನು ಮರುಪರಿಶೀಲಿಸುವ ಮಾತನಾಡಿದ್ದು ಎಲ್ಲವೂ ಆಯಿತು. ಆದರೆ ಇವೆಲ್ಲದರ ನಡುವೆ ಆಡಂಬರದ ಮದುವೆಗಳ ವಿರುದ್ಧ ಸಮಾಜದಲ್ಲಿ ನಡೆಯಬೇಕಿದ್ದ ನಿಜವಾದ ಚರ್ಚೆ ಮಾತ್ರ ತನ್ನಷ್ಟಕ್ಕೇ ನೇಪಥ್ಯಕ್ಕೆ ಸರಿದುಹೋಯಿತೇ ಎಂಬುದು ಸದ್ಯದ ಆತಂಕ.

ಮದುವೆ ಹೆಸರಿನಲ್ಲಿ ಮಾಡುವ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರದ ಚಿಂತನೆ ಪ್ರಶಂಸಾರ್ಹವಾದದ್ದು ಎಂದು ಕೆಲವರು ಅಭಿಪ್ರಾಯಪಟ್ಟರೆ, ಮದುವೆ ಎಂಬುದು ಖಾಸಗಿ ಹಾಗೂ ಭಾವನಾತ್ಮಕ ವಿಚಾರ, ಅದರಲ್ಲಿ ಸರ್ಕಾರ ಮೂಗುತೂರಿಸುವುದು ಸರಿಯಲ್ಲ ಎಂದು ಇನ್ನು ಕೆಲವರು ವಾದಿಸಿದರು. ಸರ್ಕಾರದ ಚಿಂತನೆ ಸರಿಯಾಗಿದೆ, ಆದರೆ ಅದನ್ನು ಕಾನೂನಿನ ಮೂಲಕ ಅನುಷ್ಠಾನಗೊಳಿಸುವುದು ಸರಿಯಾದ ಹೆಜ್ಜೆಯಲ್ಲ ಎಂದು ವಿಶ್ಲೇಷಿಸುವ ಮಂದಿಯೂ ತುಂಬ ದೊಡ್ಡಸಂಖ್ಯೆಯಲ್ಲಿದ್ದಾರೆ. ಮೂರನೆಯ ಅಭಿಪ್ರಾಯ ಹೆಚ್ಚು ಸಮಂಜಸ ಹಾಗೂ ಸಮತೋಲಿತವಾದದ್ದು ಅನಿಸುತ್ತದೆ.

ಮದುವೆಗೆ ತೆರಿಗೆ ಎಂಬ ಪ್ರಸ್ತಾಪ ಬರುತ್ತಿದ್ದಂತೆಯೇ ಕೆಲವರಂತೂ ವಾಚಾಮಗೋಚರವಾಗಿ ಸರ್ಕಾರವನ್ನೂ ಸಚಿವರನ್ನೂ ತರಾಟೆಗೆ ತೆಗೆದುಕೊಳ್ಳಲಾರಂಭಿಸಿದರು. ವೈಭವದ ಮದುವೆಗಳನ್ನು ಕಾನೂನಿನ ಮೂಲಕ ನಿಯಂತ್ರಿಸುವ ಸರ್ಕಾರದ ಯೋಜನೆಯನ್ನು ಟೀಕಿಸುವುದರಲ್ಲಿ ತಪ್ಪೇನೂ ಇಲ್ಲ, ಆದರೆ ಟೀಕೆಯನ್ನು ಲೇವಡಿಯ ಮಟ್ಟಕ್ಕೆ ತೆಗೆದುಕೊಂಡುಹೋಗಿ ಅದರ ಹಿಂದಿನ ಸದಾಶಯವನ್ನೇ ಹೀಗಳೆಯುವ ಮತ್ತು ಮುಚ್ಚಿಹಾಕುವ ಪ್ರಯತ್ನ ಮಾತ್ರ ಒಳ್ಳೆಯ ಬೆಳವಣಿಗೆ ಅಲ್ಲ.

ಬರೀ ಕಾನೂನಿನ ಮೂಲಕವೇ ಸಮಾಜದಲ್ಲಿ ಯಾವುದಾದರೂ ಸುಧಾರಣೆ ತರುವುದು ಸಾಧ್ಯವಿದ್ದರೆ ನಮ್ಮಲ್ಲಿ ಹತ್ತು ಆದರ್ಶ ಸಮಾಜಗಳನ್ನು ನಿರ್ಮಿಸುವಷ್ಟು ಕಾನೂನುಗಳಿವೆ. ದುರದೃಷ್ಟವಶಾತ್ ಒಂದು ಬಾರಿಯೂ ಅದು ಸಾಧ್ಯವಾಗಿಲ್ಲ. ಕಾನೂನುಗಳ ಸಂಖ್ಯೆ ಹೆಚ್ಚಾದಷ್ಟೂ ಅದನ್ನು ಉಲ್ಲಂಘಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಹೊಸ ಸಂಗತಿಯಲ್ಲ. ಅಂತಹ ಕಾನೂನುಗಳ ಕಣ್ಣಿಗೆ ಮಣ್ಣೆರಚಿ ಬದುಕುವುದು ಹೇಗೆಂದೂ ನಮ್ಮ ಜನಕ್ಕೆ ಗೊತ್ತು. ತಾನು ಹೇಗೆ ಟ್ರಾಫಿಕ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದೆ ಎಂಬಲ್ಲಿಂದ ತೊಡಗಿ ತಾನು ಬಾರಿ ಎಷ್ಟು ಲಕ್ಷ ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಂಡೆ ಎಂಬಲ್ಲಿಯವರೆಗೆ ತಾವು ಕಾನೂನಿನಿಂದ ಬಚಾವಾದದ್ದನ್ನು ಒಂದು ದೊಡ್ಡ ಸಾಧನೆಯೆಂಬಂತೆ ಎಲ್ಲರೆದುರು ಹೇಳಿಕೊಳ್ಳುವವರನ್ನು ದೈನಂದಿನ ಬದುಕಿನಲ್ಲಿ ನಾವು ಕಾಣುತ್ತಲೇ ಇರುತ್ತೇವೆ. ಕಾನೂನನ್ನು ಪ್ರಜ್ಞಾಪೂರ್ವಕವಾಗಿ ಪಾಲಿಸದೆ ಇರುವವರ ಮತ್ತು ಅದರಿಂದ ವಿಲಕ್ಷಣ ಸಂತೋಷ ಪಡೆಯುವವರ ಸಂಖ್ಯೆ ನಮ್ಮಲ್ಲಿ ಕಡಿಮೆಯೇನೂ ಇಲ್ಲ.

ಕಾನೂನಿನ ಮೂಲಕವೇ ಎಲ್ಲವನ್ನೂ ಸಾಧಿಸಲಾಗದು; ಅದಕ್ಕೆ ಸಮಾಜದಲ್ಲಿ ಪರಿವರ್ತನೆಯೂ ನಾಗರಿಕರಲ್ಲಿ ಪ್ರಬುದ್ಧತೆಯೂ ಮತ್ತು ಮೂಲಕ ಪ್ರಜಾಪ್ರಭುತ್ವದಲ್ಲಿ ಪಕ್ವತೆಯೂ ಮೂಡಿಬರುವುದು ಅವಶ್ಯಕ ಎಂಬ ಮಾತು ಬೇರೆಬೇರೆ ಸಂದರ್ಭಗಳಲ್ಲಿ ಪ್ರಸ್ತಾಪವಾಗಿದೆ. ಅದ್ಧೂರಿ ವಿವಾಹಗಳ ನಿಯಂತ್ರಣದ ವಿಷಯಕ್ಕೆ ಬಂದಾಗಲೂ ಮಾತು ಅನ್ವಯವಾಗುತ್ತದೆ. ಒಂದು ಕಾನೂನು ತಿದ್ದುಪಡಿಯ ಮೂಲಕ ಮದುವೆಗಳಲ್ಲಿ ವೈಭವದ ಪ್ರದರ್ಶನವನ್ನು ತಡೆಗಟ್ಟಬಹುದು ಎನ್ನುವುದು ಅಪ್ರಬುದ್ಧ ಯೋಚನೆ. ಇಷ್ಟೆಲ್ಲ ಕಾನೂನು ಕಟ್ಟಳೆಗಳಿದ್ದರೂ ದೇವದಾಸಿ ಪದ್ಧತಿಯನ್ನಾಗಲೀ, ಬೆತ್ತಲೆಸೇವೆಯನ್ನಾಗಲೀ ಸಂಪೂರ್ಣವಾಗಿ ನಿಲ್ಲಿಸಲು ನಮಗೆ ಸಾಧ್ಯವಾಗಿದೆಯೇ? ವರ್ಷದಲ್ಲಿ ಒಂದೆರಡು ಬಾರಿಯಾದರೂ ದೇಶದ ಯಾವುದಾದರೊಂದು ಮೂಲೆಯಿಂದ ಸತೀಪದ್ಧತಿ ಆಚರಣೆಯ ವರದಿಗಳು ಬರುತ್ತಿಲ್ಲವೇ? ಅನೇಕ ಸಮುದಾಯಗಳಲ್ಲಿ ಇನ್ನೂ ಬಾಲ್ಯವಿವಾಹ ರೂಢಿಯಲ್ಲಿಲ್ಲವೇ? ವರದಕ್ಷಿಣೆ ನಿಷೇಧ ಕಾಯ್ದೆ ಬಂದು ಐದು ದಶಕ ಕಳೆದರೂ ವರದಕ್ಷಿಣೆ ಪಿಡುಗಿನ ಅನಾಹುತಗಳು ಕಡಿಮೆಯಾಗಿವೆಯೇ? ಅಸ್ಪೃಶ್ಯತೆ ಆಚರಣೆಯ, ದಲಿತರಿಗೆ ದೇವಾಲಯ ಪ್ರವೇಶ ನಿಷೇಧದ ಘಟನೆಗಳು ಇನ್ನೂ ಮರುಕೊಳಿಸುತ್ತಿಲ್ಲವೇ?

ಮದುವೆಯ ನೆಪದಲ್ಲಿ ಶ್ರೀಮಂತಿಕೆಯ ಅಸಹ್ಯಕರ ಪ್ರದರ್ಶನದ ಪರಿಪಾಠವಂತೂ ನಿಲ್ಲಬೇಕೆಂಬುದರಲ್ಲಿ ಎರಡು ಮಾತಿಲ್ಲ. ಮದುವೆ ಛತ್ರವನ್ನು ಸಿಂಗರಿಸಲು ಬಳಸುವ ಲೋಡುಗಟ್ಟಲೆ ಹೂವು, ಕಣ್ಣುಕೋರೈಸುವ ವಿದ್ಯುದ್ದೀಪಗಳ ಸಾಲು, ತಿಂದದ್ದಕ್ಕಿಂತಲೂ ಹೆಚ್ಚು ಎಸೆಯುವ ತರಹೇವಾರಿ ಭಕ್ಷ್ಯಭೋಜ್ಯಗಳು... ಇಂತಹ ಒಂದು ಮದುವೆ ಸರಳವಾಗಿ ನಡೆದುಬಿಟ್ಟರೆ, ಹಾಗೆ ಉಳಿಯುವ ಹಣದಲ್ಲಿ ಒಂದು ಹಳ್ಳಿಯ ನೂರು ಮಕ್ಕಳು ಇಡೀ ವರ್ಷ ನಿಶ್ಚಿಂತರಾಗಿ ಓದಬಹುದು. ಮದುವೆಯನ್ನು ವರನ ಕಡೆಯವರ ಸ್ಥಾನಮಾನಕ್ಕೆ ಅನುಗುಣವಾಗಿ ಇಂಥಾ ಕಡೆಯೇ ನಡೆಸಬೇಕು, ಆಮಂತ್ರಣ ಪತ್ರಿಕೆ ಇಂಥಾ ಗುಣಮಟ್ಟದ್ದೇ ಆಗಿರಬೇಕು, ವಧುವಿಗೆ ಇಷ್ಟಿಷ್ಟು ಆಭರಣಗಳನ್ನು ತೊಡಿಸಲೇಬೇಕು, ವಾದ್ಯಗೋಷ್ಠಿಯನ್ನಂತೂ ತಪ್ಪಿಸಬಾರದು, ಊಟಕ್ಕೆ ಇಂತಿಂಥ ಮೆನು ಇರಲೇಬೇಕು ಎಂಬಿತ್ಯಾದಿ ಷರತ್ತುಗಳ ಮಧ್ಯೆ ನಡೆಯುವ ವಿವಾಹಗಳಿಂದಾಗಿ ಬಡ ಮತ್ತು ಮಧ್ಯಮವರ್ಗದವರಿಗೆ ಮದುವೆ ನಡೆಸುವುದೊಂದು ದುಃಸ್ವಪ್ನವಾಗಿ ಮಾರ್ಪಟ್ಟಿರುವುದು ಸುಳ್ಳಲ್ಲ. ಜೀವನಪೂರ್ತಿ ದುಡಿದು ಕೂಡಿಡುವುದೇ ಒಬ್ಬ ಮಗಳ ಮದುವೆ ಪೂರೈಸಿ ಹೈರಾಣಾಗುವುದಕ್ಕೆ ಎಂಬಂತಾಗಿದೆ ಎಷ್ಟೋ ಮಂದಿಯ ಅವಸ್ಥೆ.

ನಮ್ಮ ಸಮಾಜದಲ್ಲೊಂದು ಸಾಮೂಹಿಕ ಜಾಗೃತಿ ಮೂಡದ ಹೊರತು ಪರಿಸ್ಥಿತಿ ಸುಧಾರಿಸದು. ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಭಾಗವಹಿಸುವ ಮದುವೆಗಳಿಗೆ ಸುಂಕ ವಿಧಿಸುವುದು ಇದಕ್ಕೆ ಪರಿಹಾರವಲ್ಲ. ಗ್ರಾಮೀಣ ಪ್ರದೇಶದ ಒಬ್ಬ ಜನಪ್ರಿಯ ಅಧ್ಯಾಪಕನ ಮದುವೆಗೆ ಸಾವಿರಕ್ಕಿಂತ ಹೆಚ್ಚು ಜನ ಅಭಿಮಾನದಿಂದ ಜಮಾಯಿಸಿಬಿಟ್ಟರೆ ಅದು ಅವನ ತಪ್ಪೇ? ಅಷ್ಟೂ ಮಂದಿಯನ್ನು ಉಪಚರಿಸಿ ಕಳುಹಿಸುವುದು ಅವನ ಧರ್ಮ. ಆದರೆ ಅದನ್ನು ಆಡಂಬರವಿಲ್ಲದೆಯೂ ನಡೆಸಬಹುದು. ಮದುವೆ ಎನ್ನುವುದು ವೈಭವದ ಪ್ರದರ್ಶನಕ್ಕಿಂತಲೂ ಸಂಬಂಧಗಳನ್ನು ಹಾಗೂ ಸಾಮರಸ್ಯವನ್ನು ಪೋಷಿಸುವ ವೇದಿಕೆ ಎಂಬುದು ಸಮಾಜದ ಎಲ್ಲ ವರ್ಗದವರಿಗೂ ಮನವರಿಕೆಯಾದರೆ ಅದೇ ಪಿಡುಗಿಗೆ ಎಲ್ಲದಕ್ಕಿಂತ ಸಮರ್ಪಕ ಪರಿಹಾರ. ಅವರಲ್ಲಿ ದುಡ್ಡಿದೆ, ಖರ್ಚು ಮಾಡಲಿ ಬಿಡಿ ಅಥವಾ ಜೀವನದಲ್ಲಿ ಒಮ್ಮೆ ನಡೆಯುವ ಸಮಾರಂಭ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಮಾಡುತ್ತಾರೆ ಬಿಡಿ ಎಂಬ ಮಾತುಗಳೆಲ್ಲ ಕೇವಲ ಉಡಾಫೆಯದ್ದು.