ಗುರುವಾರ, ನವೆಂಬರ್ 22, 2012

ಮಾಧ್ಯಮರಂಗದಲ್ಲಿ ವಿದೇಶಿ ಬಂಡವಾಳ: ಪರರ ಕೈಯಲ್ಲಿ ಕಾವಲುನಾಯಿಯ ಕುತ್ತಿಗೆಪಟ್ಟಿ


ಮಾಧ್ಯಮಶೋಧ-30, ಹೊಸದಿಗಂತ 23-11-2012

ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (FDI) ವಿಚಾರವಾಗಿ ನಡೆದ ದೊಡ್ಡಮಟ್ಟದ ಪ್ರತಿಭಟನೆ ಹಾಗೂ ಚರ್ಚೆಗಳ ಅಡಾವುಡಿಯಲ್ಲಿ ಟಿವಿ ಪ್ರಸಾರ ಸೇವಾ ಕ್ಷೇತ್ರದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿಯನ್ನು ಶೇ. 49ರಿಂದ ಶೇ. 74ಕ್ಕೆ ಏರಿಸಿದ್ದು ಒಂದು 'ಚಿಲ್ಲರೆ’ ವಿಷಯವಾಗಿ ಗೌಣವಾಯಿತೇ ಎಂಬುದು ಸದ್ಯದ ಅನುಮಾನ. ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆಯ ಕುರಿತಾಗಿ ಇಷ್ಟೆಲ್ಲ ವಾದವಿವಾದಗಳು ನಡೆಯುತ್ತಿರುವ ವೇಳೆಯಲ್ಲೇ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಂತಹದೇ ಬೆಳವಣಿಗೆ ಸಂಭವಿಸಿದರೂ ಆ ಕುರಿತು ವಿಶೇಷ ಚರ್ಚೆಗಳೇನೂ ನಡೆಯದಿರುವುದೇ ಈ ಅನುಮಾನಕ್ಕೆ ಕಾರಣ. ಚಿಲ್ಲರೆ ವಹಿವಾಟು ಕ್ಷೇತ್ರ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಎಫ್‌ಡಿಐ ಪ್ರವೇಶ ಅಥವಾ ಅದರ ಮಿತಿ ಹೆಚ್ಚಳದಿಂದ ಆಗುವ ಪರಿಣಾಮಗಳು ವಿಭಿನ್ನವಾಗಿರಬಹುದು, ಆದರೆ ಯಾವುದೇ ರಂಗದಲ್ಲಿ ಏನೇ ಸಂಭವಿಸಲಿ, ಅಂತಿಮವಾಗಿ ಎಲ್ಲ ಬಗೆಯ ಭಾರಗಳಿಗೆ ಹೆಗಲು ಕೊಡಬೇಕಾದವನು ಭಾರತವೆಂಬ ಶ್ರೀಮಂತ ಪ್ರಜಾಪ್ರಭುತ್ವದ ಬಡ ಶ್ರೀಸಾಮಾನ್ಯ ಎಂಬುದು ನಿಸ್ಸಂಶಯ.

ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿ ಹೆಚ್ಚಳವಾದುದರ ನಡುವೆಯೇ, ಡಿಟಿಎಚ್, ಕೇಬಲ್ ಜಾಲ, ಹೆಡ್‌ಎಂಡ್-ಇನ್-ದ-ಸ್ಕೈ (HITS) ಸೇವೆ, ಮಲ್ಟಿಸರ್ವಿಸ್ ಆಪರೇಶನ್‌ಗಳಲ್ಲಿನ ಎಫ್‌ಡಿಐನ್ನು ಕೇಂದ್ರ ಸರ್ಕಾರ ಸದ್ದಿಲ್ಲದೆಯೇ ಶೇ. 49ರಿಂದ ಶೇ. 74ಕ್ಕೆ ಏರಿಸಿಬಿಟ್ಟಿದೆ. ಮೇಲ್ನೋಟಕ್ಕೆ ಉದ್ಯಮಿಗಳಿಗೆ ಇದೊಂದು ವರದಾನದಂತೆ ಕಂಡುಬಂದರೂ, ಈ ಬಗೆಯ ಬೆಳವಣಿಗೆಗಳೆಲ್ಲ ದೀರ್ಘಾವಧಿಯಲ್ಲಿ ಮಾಧ್ಯಮ ಕ್ಷೇತ್ರದ ಒಟ್ಟು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ ಎನಿಸುತ್ತದೆ. ಕೇಬಲ್ ಸೇವೆ, ಡಿಟಿಎಚ್‌ಗಳಲ್ಲಿನ ವಿದೇಶಿ ನೇರಬಂಡವಾಳ ಹೂಡಿಕೆ ಮಿತಿ ಏರಿಕೆಯಿಂದ ಮಾಧ್ಯಮರಂಗಕ್ಕೆ ಅಂತಹ ಆಘಾತವಾಗುವುದೇನಿದೆ ಎಂಬ ಪ್ರಶ್ನೆ ಸಹಜವೇ; ಆದರೆ ಇದೆಲ್ಲ ಹಂತಹಂತವಾಗಿ ಪ್ರಜಾಸತ್ತೆಯ ನಾಲ್ಕನೆಯ ಸ್ತಂಭವೆನಿಸಿರುವ ನಮ್ಮ ಮಾಧ್ಯಮರಂಗವನ್ನು ವಿದೇಶಿ ಶಕ್ತಿಗಳ ಕೈಗೆ ಒಪ್ಪಿಸುವ ಪ್ರಕ್ರಿಯೆಯ ಒಂದು ಭಾಗವೇ ಆಗಿದೆ.

1954ರಷ್ಟು ಹಿಂದೆಯೇ ಭಾರತದ ಪ್ರಥಮ ಪತ್ರಿಕಾ ಆಯೋಗ ಮುದ್ರಣ ಮಾಧ್ಯಮದಲ್ಲಿ ವಿದೇಶೀ ಬಂಡವಾಳ ಹೂಡಿಕೆಯನ್ನು ವಿರೋಧಿಸಿ ಶಿಫಾರಸು ಮಾಡಿತ್ತು. ಅದರ ಮುಂದಿನ ವರ್ಷವೇ ಸುದ್ದಿ ಹಾಗೂ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವಿದೇಶಿ ಪತ್ರಿಕೆಗಳು ಹಾಗೂ ನಿಯತಕಾಲಿಕಗಳು ಯಾವುದೇ ಕಾರಣಕ್ಕೂ ಭಾರತೀಯ ಆವೃತ್ತಿಗಳನ್ನು ತರಕೂಡದೆಂದು ಕೇಂದ್ರ ಸರ್ಕಾರ ಆದೇಶವೊಂದನ್ನು ಹೊರಡಿಸಿತು. ಇದಾಗಿ ಸುಮಾರು ಮೂರು ದಶಕಗಳ ನಂತರ ಬಂದ ಎರಡನೇ ಪತ್ರಿಕಾ ಆಯೋಗವೂ ಈ ವಿಷಯವನ್ನು ಇನ್ನಷ್ಟು ಸ್ಪಷ್ಟಪಡಿಸಿತು.  ಶೇರು ರೂಪದಲ್ಲಾಗಲೀ ಸಾಲ ರೂಪದಲ್ಲಾಗಲೀ ಯಾವುದೇ ಪತ್ರಿಕೆ ವಿದೇಶಿ ಮಾಲೀಕತ್ವವನ್ನು ಹೊಂದದಂತೆ ಸ್ಪಷ್ಟ ಕಾನೂನು ನಿಯಮಗಳಿರಬೇಕು ಎಂಬುದು ಆಯೋಗದ ಅಭಿಪ್ರಾಯವಾಗಿತ್ತು.

ಆದರೆ ಮತ್ತೆ ಹತ್ತು ವರ್ಷ ಉರುಳುವಲ್ಲಿ ಇಡೀ ಜಗತ್ತೇ ಬದಲಾಗಿ ಹೋಗಬಹುದೆಂದು ಯಾರೂ ಊಹಿಸಿರಲಿಲ್ಲ. ಇದ್ದಕ್ಕಿದ್ದಂತೆ ದೇಶದೇಶಗಳ ನಡುವಿನ ಗೋಡೆಗಳೆಲ್ಲ ಕಳಚಿ ಬೀಳಲಾರಂಭಿಸಿದವು. ಬೇಲಿಗಳೆಲ್ಲ ಬಿದ್ದು ಬಾಗಿಲುಗಳೆಲ್ಲ ಉರುಳಿ ಪ್ರಪಂಚದ ಗಾತ್ರ ಕುಗ್ಗತೊಡಗಿತು. ಉದಾರೀಕರಣ ಹಾಗೂ ಖಾಸಗೀಕರಣಗಳ ಚಂಡಮಾರುತದ ನಡುವೆ ಭಾರತವೊಂದು ಒಂಟಿ ನಾವೆಯಾಗಿ ಬದುಕುಳಿಯುವ ಯಾವುದೇ ಲಕ್ಷಣ ಇರಲಿಲ್ಲ. 1990ರ ಆರಂಭದಲ್ಲಿ ಪಿ. ವಿ. ನರಸಿಂಹರಾವ್ ನೇತೃತ್ವದಲ್ಲಿ ಭಾರತಕ್ಕೆ ಅಡಿಯಿಟ್ಟ ಆರ್ಥಿಕ ಉದಾರೀಕರಣದ ಬುಲ್ಡೋಜರ್ ಮಾಧ್ಯಮ ಕ್ಷೇತ್ರದ ಕಡೆಗೂ ದೃಷ್ಟಿ ಹರಿಸದೆ ಇರಲಿಲ್ಲ. ಆದರೆ ತತ್‌ಕ್ಷಣಕ್ಕೆ ಮಾಧ್ಯಮರಂಗಕ್ಕೆ ಬಲೆಬೀಸುವುದು ಸುಲಭದ ಮಾತಾಗಿರಲಿಲ್ಲ. ಎಲ್ಲೆಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. 40-50 ವರ್ಷಗಳಿಂದ ವಿರೋಧಿಸುತ್ತ ಬಂದಿದ್ದ ಸಂಗತಿಯೊಂದನ್ನು ಇದ್ದಕ್ಕಿದ್ದಂತೆ ಒಪ್ಪಿಕೊಳ್ಳುವುದು ಹೇಗೆ ಸಾಧ್ಯ?

ಆದರೆ ಈ ಜಾಗತೀಕರಣವೆಂಬುದು ಅತಿಂಥ ಬುಲ್ಡೋಜರ್ ಏನಲ್ಲ. ಅದಕ್ಕೆ ಕಣಿವೆ-ಪರ್ವತಗಳೆಲ್ಲ ಲೆಕ್ಕವೇ ಅಲ್ಲ. ಮತ್ತೆ ಹತ್ತು ವರ್ಷ ಉರುಳಬೇಕಾದರೆ ಮಾಧ್ಯಮರಂಗದ ಕೋಟೆಯನ್ನು ಒಡೆಯುವುದರಲ್ಲೂ ಅದು ಯಶಸ್ವಿಯಾಯಿತು. 2002ರಲ್ಲಿ ಸುಷ್ಮಾ ಸ್ವರಾಜ್ ವಾರ್ತಾ ಮತ್ತು ಪ್ರಸಾರ ಸಚಿವರಾಗಿದ್ದಾಗ ಕೇಂದ್ರ ಸರ್ಕಾರ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪತ್ರಿಕಾ ಕ್ಷೇತ್ರದಲ್ಲಿ ಶೇ. 29 ಎಫ್‌ಡಿಐ ಅನ್ನೂ, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಹೊರತಾದ ಕ್ಷೇತ್ರದಲ್ಲಿ ಶೇ. 74 ಎಫ್‌ಡಿಐ ಅನ್ನೂ ಹೂಡುವುದಕ್ಕೆ ಅನುಮತಿ ನೀಡಿತು.

53 ವರ್ಷಗಳಲ್ಲಿ ಎಲ್ಲರೂ ವಿರೋಧಿಸುತ್ತ ಬಂದ ಸಂಗತಿಯೊಂದನ್ನು ನೀವೇಕೆ ಮಾಡಿದಿರಿ? ಎಂದು ಪತ್ರಕರ್ತರು ಸುಷ್ಮಾ ಸ್ವರಾಜ್ ಅವರನ್ನು ಕೇಳಿದರು. ಇದು 53 ವರ್ಷಗಳ ಪ್ರಶ್ನೆ ಅಲ್ಲ. ಸದ್ಯದ ಅನಿವಾರ್ಯತೆಯ ಪ್ರಶ್ನೆ. ಉದಾರೀಕರಣ ಆರಂಭವಾಗಿ 12 ವರ್ಷಗಳೇ ಕಳೆದುಹೋಗಿವೆ. ನಮಗೀಗ ಗತ್ಯಂತರವಿಲ್ಲ. ಇಷ್ಟು ವರ್ಷ ತಡೆದುಕೊಂಡು ಬಂದಮೇಲೆ ಈಗಷ್ಟೇ ಮಾಧ್ಯಮ ಕ್ಷೇತ್ರದಲ್ಲಿ ವಿದೇಶಿ ಬಂಡವಾಳಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ, ಎಂದು ಆಕೆ ಉತ್ತರಿಸಿದರು. ಅವರ ಬಳಿ ಬೇರೆ ಉತ್ತರವಿರಲಿಲ್ಲ. ಭಾರತ ಹತ್ತೇ ವರ್ಷಗಳಲ್ಲಿ ಜಾಗತೀಕರಣದ ದೈತ್ಯ ಪ್ರವಾಹದಲ್ಲಿ ಸಾಕಷ್ಟು ದೂರ ಸಾಗಿ ಬಂದಾಗಿತ್ತು.

2005ರಲ್ಲಿ ಸುದ್ದಿಯೇತರ ಹಾಗೂ ಪ್ರಚಲಿತ ವಿದ್ಯಮಾನೇತರ ಪತ್ರಿಕೆಗಳಲ್ಲಿ ಎಫ್‌ಡಿಐ ಮಿತಿಯನ್ನು ಶೇ. 74ರಿಂದ ಶೇ. 100ಕ್ಕೆ ಕೇಂದ್ರ ಸರ್ಕಾರ ಏರಿಸಿಬಿಟ್ಟಿತು. 2008ರಲ್ಲಿ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವಿದೇಶಿ ನಿಯತಕಾಲಿಕಗಳ ಭಾರತೀಯ ಆವೃತ್ತಿಗಳಲ್ಲಿ ಶೇ. 26 ಎಫ್‌ಡಿಐ ಹೂಡಲು ಸರ್ಕಾರ ಅನುಮತಿಸಿತು. 2009ರಲ್ಲಿ ಸರ್ಕಾರದ ಪೂರ್ವಾನುಮತಿಯೊಂದಿಗೆ ವಿದೇಶಿ ಪತ್ರಿಕೆಗಳ ತದ್ರೂಪಿ ಮುದ್ರಣದಲ್ಲಿ ಶೇ. 100 ವಿದೇಶಿ ಬಂಡವಾಳ ಹೂಡಬಹುದೆಂದು ಸರ್ಕಾರ ಘೋಷಿಸಿತು.

ಪ್ರಸಾರ ಕ್ಷೇತ್ರದ ಸದ್ಯದ ಚಿತ್ರಣ ತೆಗೆದುಕೊಂಡರೆ, ಎಫ್. ಎಂ. ರೇಡಿಯೋ ಕ್ಷೇತ್ರದಲ್ಲಿ ಶೇ. 20 ವಿದೇಶಿ ನೇರ ಬಂಡವಾಳ ಹೂಡಿಕೆಯನ್ನೂ, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಟಿವಿ ಚಾನೆಲ್‌ಗಳ ಅಪ್‌ಲಿಂಕಿಂಗ್‌ನಲ್ಲಿ ಶೇ. 26 ಎಫ್‌ಡಿಐ ಅನ್ನೂ, ಸುದ್ದಿಯೇತರ ಚಾನೆಲ್‌ಗಳ ಅಪ್‌ಲಿಂಕಿಂಗ್‌ನಲ್ಲಿ ಶೇ. 100 ಎಫ್‌ಡಿಐ ಅನ್ನೂ ಸರ್ಕಾರ ಅನುಮತಿಸಿದೆ. ಆರಂಭದಲ್ಲಿಯೇ ಪ್ರಸ್ತಾಪಿಸಿರುವಂತೆ ಕೇಬಲ್ ಪ್ರಸಾರ ಜಾಲ ಹಾಗೂ ಡಿಟಿಎಚ್ ಸೇವೆಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹಿಂದೆ ಇದ್ದ ಶೇ. 49ರ ಮಿತಿಯನ್ನು ಈಗ ಶೇ. 74ಕ್ಕೆ ಏರಿಸಲಾಗಿದೆ. ಅಂದರೆ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಎರಡು ವರ್ಷಗಳ ಹಿಂದೆ ಮಾಡಿದ್ದ ಶಿಫಾರಸು ಈಗ ನಿಜವಾಗಿದೆ. ಇಷ್ಟೆಲ್ಲ ಆದರೂ ಎಫ್‌ಡಿಐ ಮಾಯೆಯಿಂದ ದೂರವೇ ಉಳಿದಿರುವುದು ನಮ್ಮ ಸುದ್ದಿ ಸಂಸ್ಥೆಗಳು ಮಾತ್ರ!

ಸಾರಾಸಗಟಾಗಿ ಯಾರೇ ವಿದೇಶಿ ವ್ಯಕ್ತಿ ನಮ್ಮ ದೇಶಕ್ಕೆ ಬಂದು ಹೇಗೆಂದಹಾಗೆ ಪತ್ರಿಕೆ, ಚಾನೆಲ್ ಆರಂಭಿಸಬಹುದೆಂದೇನೂ ಇದರ ಅರ್ಥ ಅಲ್ಲ. ಸರ್ಕಾರ ಇದಕ್ಕೆಲ್ಲ ಹಲವಾರು ನಿಬಂಧನೆಗಳನ್ನು ಸೂಚಿಸಿದೆ. ಯಾವುದೇ ಬಗೆಯ ಹೂಡಿಕೆಗೂ ಸರ್ಕಾರದ ಪೂರ್ವಾನುಮತಿ ಬೇಕು; ವಿದೇಶಿ ಪತ್ರಿಕೆಯೊಂದರ ತದ್ರೂಪವನ್ನಾಗಲೀ, ಭಾರತೀಯ ಆವೃತ್ತಿಯನ್ನಾಗಲೀ ಆರಂಭಿಸುವ ಮುನ್ನ ಆ ಕಂಪೆನಿ 1956ರ ಭಾರತದ ಕಂಪೆನಿ ಕಾಯ್ದೆಯಡಿಯಲ್ಲಿ ನೋಂದಣಿಯಾಗಿರಬೇಕು; ಪತ್ರಿಕೆಯ ಸಂಪಾದಕೀಯ ಹಾಗೂ ಆಡಳಿತ ವಿಭಾಗಗಳ ಉನ್ನತ ಹುದ್ದೆಯಲ್ಲಿರುವವರು ಭಾರತೀಯರಾಗಿರಬೇಕು; ಸಂಸ್ಥೆಯ ನಿರ್ದೇಶಕರುಗಳ ಮಂಡಳಿಯಲ್ಲಿ ನಾಲ್ಕನೇ ಮೂರು ಭಾಗ ಭಾರತೀಯರು ಇರಬೇಕು ಇತ್ಯಾದಿ ಹಲವಾರು ನಿಯಮಗಳಿವೆ. ಆದರೆ ಈಗಾಗಲೇ ಮಾಯೆ ಎಂದಿರುವ ಈ ಎಫ್‌ಡಿಐ, ಮತ್ತದರ ಹಿರಿಯಣ್ಣ ಉದಾರೀಕರಣ, ಜಾಗತೀಕರಣಗಳಿಗೆ ಯಾವ ನಿಯಮವೂ ಅಂತಹ ಅಡಚಣೆಯಾಗಲಾರದು. ಜಗತ್ತು ಪೂರ್ತಿ ಒಂದೇ ಮಾರುತ ಬೀಸುತ್ತಿರಬೇಕಾದರೆ ಎಲ್ಲೋ ನುಸುಳಿಕೊಂಡ ವಿಷಗಾಳಿಯನ್ನು ಹಿಡಿದಿಡುವುದು ಹೇಗೆ? ನೇರವಾಗಿ ವಿದೇಶಿ ಬಂಡವಾಳ ಹೂಡಿಕೆಗೆ ಇತಿಮಿತಿಗಳಿದ್ದರೆ, ಒಳಬರಬೇಕಾದವರು ಜಾಹೀರಾತು ಕ್ಷೇತ್ರದ ಮೂಲಕವಾದರೂ ಪ್ರವೇಶಿಸಬಹುದು. ಅದಕ್ಕೆ ಇತಿಮಿತಿ ಸೂಚಿಸಿಲ್ಲ. ಮುಂಬಾಗಿಲಿಗೆ ಭದ್ರ ಬೀಗ ಜಡಿದಿದ್ದರೂ ಹಿಂಬಾಗಿಲ ಅಗುಳಿ ಹಾಕಿರದಿದ್ದರೇನು ಬಂತು!

ಮಾಧ್ಯಮ ರಂಗದಲ್ಲಿ ವಿದೇಶಿ ಬಂಡವಾಳದ ಪ್ರವೇಶ ಅನಿವಾರ್ಯವಾಗಿತ್ತೋ ಅಥವಾ ಅದಕ್ಕಿಂತಲೂ ಮುಂಚಿನ ಉದಾರೀಕರಣದ ಪ್ರಕ್ರಿಯೆ ಅನಿವಾರ್ಯವಾಗಿತ್ತೋ ಗೊತ್ತಿಲ್ಲ, ಆದರೆ ಇದರಿಂದಾಗಿ ನಮ್ಮ ಪ್ರಜಾಪ್ರಭುತ್ವದ ಕಾವಲುನಾಯಿಯೇ ಮೆಲ್ಲಮೆಲ್ಲಗೆ ವಿದೇಶಿ ಶಕ್ತಿಗಳ ಕೈಗೆ ಕುತ್ತಿಗೆ ಪಟ್ಟಿ ಒಪ್ಪಿಸುತ್ತಿರುವುದು ಮಾತ್ರ ಸುಳ್ಳಲ್ಲ. ನೇರವಾಗಿ ಸುದ್ದಿ ಮತ್ತು ಅಭಿಪ್ರಾಯಗಳ ಪ್ರಕಟಣೆಯಲ್ಲಿ ಮತ್ತು ಆ ಮೂಲಕ ದೇಶದ ರಾಜಕೀಯ, ಆಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವ ಮೂಲಕ ಮಾತ್ರ ಅಲ್ಲ, ಅಪ್‌ಲಿಂಕಿಂಗ್, ಕೇಬಲ್, ಡಿಟಿಎಚ್‌ನಂತಹ ಮೇಲ್ನೋಟಕ್ಕೆ ಅಷ್ಟೊಂದು ಸಮಸ್ಯಾತ್ಮಕವಾಗಿ ಕಾಣದ ವಿಷಯಗಳಲ್ಲೂ ವಿದೇಶಿ ಶಕ್ತಿಗಳು ನಮ್ಮನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಎಲ್ಲ ಅಪಾಯಗಳೂ ನಿಚ್ಚಳವಾಗಿವೆ.

ಭಾರತದಲ್ಲಿ ಪತ್ರಿಕೋದ್ಯಮವೇನೋ ಆರಂಭವಾದುದು ವಿದೇಶೀಯರಿಂದಲೇ. ಆದರೆ ಇಷ್ಟು ಬಲಿಷ್ಟವಾಗಿ ಬೆಳೆದ ಮೇಲೆ, ನಮ್ಮ ಸ್ವತಂತ್ರ ಪ್ರಜಾಪ್ರಭುತ್ವವನ್ನಾಗಲೀ ಅದರ ಕಾವಲುನಾಯಿಯಾಗಿರುವ ಮಾಧ್ಯಮವನ್ನಾಗಲೀ ವಿದೇಶೀಯರ ಕೈಗೆ ಒಪ್ಪಿಸುವುದು ಮಾತ್ರ ಒಂದು ದೊಡ್ಡ ದುರಂತವಲ್ಲದೆ ಬೇರೇನಲ್ಲ.

ಶುಕ್ರವಾರ, ನವೆಂಬರ್ 9, 2012

ಕೇಬಲ್ ಟಿವಿ ಡಿಜಿಟಲೀಕರಣ: ಮುಂದೇನು?


ಮಾಧ್ಯಮಶೋಧ-29, ಹೊಸದಿಗಂತ, 07 ನವೆಂಬರ್ 2012

ಜನರಿಗೆ ಉತ್ತಮ ಗುಣಮಟ್ಟದ ಟಿವಿ ವೀಕ್ಷಣಾ ಅನುಭವವನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿದ ಕೇಬಲ್ ಟಿವಿ ಡಿಜಿಟಲೀಕರಣ ಪ್ರಕ್ರಿಯೆಯ ಮೊದಲ ಹಂತದ ಗಡುವು ಮುಗಿದಿದ್ದರೂ ಈ ಯೋಜನೆ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಸರ್ಕಾರ ನೀಡುವ ಅಂಕಿಅಂಶಗಳು ಯಶಸ್ಸಿನ ಕಥೆ ಹೇಳುತ್ತಾವಾದರೂ, ಅವುಗಳು ಎಷ್ಟು ನಂಬಿಕೆಗೆ ಅರ್ಹವೆಂಬುದನ್ನು ತಕ್ಷಣಕ್ಕೆ ಊಹಿಸಲಾಗದು.

ದೇಶದ ಕೇಬಲ್ ಪ್ರಸಾರ ಜಾಲವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಬೇಕೆಂದು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶಿಫಾರಸು ಮಾಡಿದ ಒಂದು ವರ್ಷದ ಬಳಿಕ ಸರ್ಕಾರ ಆ ಪ್ರಕ್ರಿಯೆಗೆ ಚಾಲನೆ ನೀಡಿತು. ಕೇಬಲ್ ಟಿವಿ ಜಾಲಗಳ (ನಿಯಂತ್ರಣ) ತಿದ್ದುಪಡಿ ಕಾಯ್ದೆ 2011ನ್ನು ಜಾರಿಗೊಳಿಸುವ ಮೂಲಕ ಟಿವಿ ಪ್ರಸಾರಕ್ಕೆ ಸಂಬಂಧಿಸಿದಂತೆ ದೇಶದೆಲ್ಲೆಡೆ ಡಿಜಿಟಲ್ ಆಕ್ಸೆಸ್ ಸಿಸ್ಟಮ್ (ಡಿಎಎಸ್)ನ್ನು ಅನುಷ್ಠಾನಕ್ಕೆ ತರುವುದನ್ನು ಸರ್ಕಾರ ಕಡ್ಡಾಯಗೊಳಿಸಿತು.

ತನ್ನ ಮಹತ್ವಾಕಾಂಕ್ಷಿ ಯೋಜನೆಯನ್ನು ಹಂತಹಂತವಾಗಿ ಜಾರಿಗೆ ತರುವ ಉದ್ದೇಶವನ್ನೇನೋ ಸರ್ಕಾರ ಇಟ್ಟುಕೊಂಡಿದೆಯಾದರೂ, ಮೊದಲ ಹಂತ ಮುಗಿದಿರುವ ಈಗಿನ ಪರಿಸ್ಥಿತಿಯಲ್ಲಿ ಅದರ ಸಂಭವನೀಯ ಅಂತಿಮ ಯಶಸ್ಸನ್ನು ಅಂದಾಜುಮಾಡುವುದು ಕಷ್ಟ. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸೂಚನೆಯಂತೆ, ಈ ಡಿಜಿಟಲೀಕರಣ ನಾಲ್ಕು ಹಂತಗಳಲ್ಲಿ ನಡೆಯಬೇಕಾಗಿದೆ. ಮೊದಲ ಹಂತದಲ್ಲಿ 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯುಳ್ಳ ಮಹಾನಗರಗಳಾದ ಮುಂಬೈ, ದೆಹಲಿ, ಕೋಲ್ಕತ ಹಾಗೂ ಚೆನ್ನೈಗಳಲ್ಲಿ ಅಕ್ಟೋಬರ್ 31, 2012ರ ಒಳಗಡೆ ಡಿಜಿಟಲೀಕರಣವನ್ನು ಪೂರ್ಣಗೊಳಿಸಬೇಕೆಂದು ನಿರ್ದೇಶನವಿತ್ತಾದರೂ, ಅದಿನ್ನೂ ಸಂಪೂರ್ಣ ಸಾಧ್ಯವಾಗಿಲ್ಲ.

ಸದ್ಯಕ್ಕೆ ತಮಿಳುನಾಡು ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ಚೆನ್ನೈನಲ್ಲಿ ಡಿಜಿಟಲೀಕರಣ ಪೂರ್ಣಗೊಳಿಸುವುದಕ್ಕೆ ನವೆಂಬರ್ 9ರವರೆಗೆ ಅವಕಾಶ ದೊರೆತಿದೆ. ಆದರೆ ಚೆನ್ನೈನಲ್ಲಿ ಈಗ ಪೂರ್ಣಗೊಂಡಿರುವುದು ಶೇ. 60ರಷ್ಟು ಡಿಜಿಟಲೀಕರಣ ಮಾತ್ರ. ಮುಂದಿನ ಎರಡು-ಮೂರು ದಿನಗಳಲ್ಲಿ ಇದನ್ನು ಶೇ. 100ಕ್ಕೆ ತಂದು ನಿಲ್ಲಿಸುವುದು ಕಷ್ಟಕರವೇ. ಕಳೆದ ಒಂದು ವರ್ಷದಲ್ಲಿ ಸಾಧ್ಯವಾಗದ್ದನ್ನು ಒಂದು ವಾರದಲ್ಲಿ ಸಾಧ್ಯವಾಗಿಸುವುದು ಹೇಗೆ?

ಈ ನಡುವೆ ಮುಂಬೈ ಹಾಗೂ ದೆಹಲಿ ಮಹಾನಗರಗಳಲ್ಲಿ ನೂರು ಪ್ರತಿಶತ ಡಿಜಿಟಲೀಕರಣ ನಡೆದಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆಯಾದರೂ, ಅದು ಕೇವಲ ತೋರಿಕೆಯ ಅಂಕಿಅಂಶಗಳೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಏಕೆಂದರೆ ಸರ್ಕಾರದ ಗಡುವಿನ ಪ್ರಕಾರ, ಅಕ್ಟೋಬರ್ 31ರಂದು ಎಲ್ಲಾ ಮಹಾನಗರಗಳಲ್ಲೂ ಅನಲಾಗ್ ಮಾದರಿಯ ಕೇಬಲ್ ಪ್ರಸಾರ ವ್ಯವಸ್ಥೆ ನಿಂತುಹೋಗಿ ಡಿಜಿಟಲ್ ಪ್ರಸಾರ ಆರಂಭವಾಗಬೇಕಿತ್ತು. ಆದರೆ ದೆಹಲಿ ಮತ್ತು ಮುಂಬೈನ ಅನೇಕ ಭಾಗಗಳಲ್ಲಿ ಒಂದು ವಾರದ ಬಳಿಕವೂ ಅನಲಾಗ್ ಕೇಬಲ್ ಸೇವೆಗಳು ಲಭ್ಯವಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೋಲ್ಕತಾದಲ್ಲಂತೂ ಡಿಜಿಟಲೀಕರಣದ ಪ್ರಕ್ರಿಯೆ ಇನ್ನೂ ಶೇ. 85ರಲ್ಲೇ ಇದೆ. ಇದೇ ಹೊತ್ತು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಡೀ ಡಿಜಿಟಲೀಕರಣದ ಪ್ರಕ್ರಿಯೆಯೇ ಜನವಿರೋಧಿ ಎಂದು ಹರಿಹಾಯ್ದಿದ್ದಾರೆ ಕೂಡ.

ಡಿಜಿಟಲ್ ಪ್ರಸಾರ ಕಡ್ಡಾಯ ಮಾಡಿ ಅಧ್ಯಾದೇಶ ಹೊರಡಿಸಿದ ನಂತರದ ಕಳೆದೊಂದು ವರ್ಷದಲ್ಲಿ ಡಿಜಿಟಲ್ ಪ್ರಸಾರಕ್ಕೆ ಅವಶ್ಯಕವಿರುವ ಸುಮಾರು 64.31 ಲಕ್ಷ ಸೆಟ್ ಟಾಪ್ ಬಾಕ್ಸ್ (ಎಸ್‌ಟಿಬಿ)ಗಳನ್ನು ಮೇಲೆ ಹೇಳಿರುವ ನಾಲ್ಕು ಮಹಾನಗರಗಳಲ್ಲಿ ಸ್ಥಾಪಿಸಲಾಗಿದೆ. 2011ರ ಜನಗಣತಿಯ ಪ್ರಕಾರ ಈ ನಾಲ್ಕು ಮಹಾನಗರಗಳಲ್ಲಿ ಒಟ್ಟು 103.76 ಲಕ್ಷ ಕುಟುಂಬಗಳಿದ್ದು, ಅವುಗಳಲ್ಲಿ 82.59 ಲಕ್ಷ ಕುಟುಂಬಗಳು ಟಿವಿ ಸೆಟ್ ಹೊಂದಿವೆ. ಒಟ್ಟಾರೆ 28.14 ಲಕ್ಷ ಡಿಟಿಎಚ್ ಸಂಪರ್ಕ ಹೊಂದಿರುವ ಮನೆಗಳನ್ನು ಹೊರತುಪಡಿಸಿದರೆ, ಉಳಿದ 65.34 ಲಕ್ಷ ಕುಟುಂಬಗಳೂ ಕೇಬಲ್ ಸಂಪರ್ಕದಿಂದಲೇ ಟಿವಿ ವೀಕ್ಷಿಸುತ್ತಿವೆ. ಅಂದರೆ ಮೊದಲ ಹಂತದಲ್ಲೇ ಇಷ್ಟು ದೊಡ್ಡ ಸಂಖ್ಯೆಯ ಕುಟುಂಬಗಳು ಸಾಮಾನ್ಯ ಕೇಬಲ್ ಪ್ರಸಾರ ತಂತ್ರಜ್ಞಾನದಿಂದ ಡಿಜಿಟಲ್ ತಂತ್ರಜ್ಞಾನಕ್ಕೆ ಬದಲಾಗುವ ಅವಶ್ಯಕತೆ ಇತ್ತು.

ಡಿಜಿಟಲೀಕರಣದ ನಾಲ್ಕು ಹಂತಗಳಲ್ಲಿ ಇನ್ನೂ ಮೂರು ಹಂತಗಳು ಬಾಕಿಯಿವೆ. ಪುಣೆ, ಬೆಂಗಳೂರು, ಅಹಮದಾಬಾದ್‌ನಂತಹ ಒಂದು ಮಿಲಿಯನ್‌ಗಿಂತಲೂ ಕಡಿಮೆ ಜನಸಂಖ್ಯೆಯುಳ್ಳ ನಗರಗಳಲ್ಲಿ ಮಾರ್ಚ್ 31, 2012ರ ಒಳಗೆ ಸಂಪೂರ್ಣ ಡಿಜಿಟಲೀಕರಣ ನಡೆಯಬೇಕೆಂಬ ನಿರ್ದೇಶನವಿದೆ. ದೇಶದ ಎಲ್ಲಾ ನಗರ ಪ್ರದೇಶಗಳಲ್ಲೂ ಸೆಪ್ಟೆಂಬರ್ 30, 2014ರ ಒಳಗಾಗಿ ಡಿಜಿಟಲೀಕರಣ ಪೂರ್ಣಗೊಳಿಸಲು ಗಡುವು ಇದೆ. ಅಂತೂ ಡಿಸೆಂಬರ್ 31, 2014ರ ಒಳಗೆ ಇಡೀ ದೇಶದಲ್ಲಿ ಟಿವಿ ಪ್ರಸಾರ ಜಾಲ ಡಿಜಿಟಲೀಕರಣಗೊಳ್ಳಬೇಕು ಎಂಬುದು ಸರ್ಕಾರದ ಯೋಜನೆ.

ಟಿವಿ ಪ್ರಸಾರದಲ್ಲಿ ಅನಲಾಗ್ ಕೇಬಲ್ ಸೇವೆ, ಡಿಜಿಟಲ್ ಕೇಬಲ್ ಸೇವೆ ಹಾಗೂ ಡಿಟಿಎಚ್ ಸೇವೆಗಳೆಂಬ ಮೂರು ಪ್ರಮುಖ ವಿಧಾನಗಳು. ಅನಲಾಗ್ ವಿಧಾನದಲ್ಲಿ ಟಿವಿ ಪ್ರಸಾರ ಮಾಡುವುದು ಕಳೆದ ಎರಡು-ಮೂರು ದಶಕಗಳಿಂದ ಅನುಸರಿಸಿಕೊಂಡು ಬರುತ್ತಿರುವ ವ್ಯವಸ್ಥೆ. ಕೆಲವು ವರ್ಷಗಳಿಂದೀಚೆಗೆ ಡಿಟಿಎಚ್ ಸೇವೆಯೂ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದೆ. ಡಿಟಿಎಚ್ ಸೇವೆಯನ್ನು ಗಮನಿಸಿದವರಿಗೆ ಡಿಜಿಟಲ್ ಪ್ರಸಾರದ ಪ್ರಾಮುಖ್ಯತೆ ಅರ್ಥವಾಗುತ್ತದೆ.

ಅನಲಾಗ್ ತಂತ್ರಜ್ಞಾನದ ಕೇಬಲ್ ಆಪರೇಟರ್‌ಗಳು ಕೆಲವು ನಿರ್ದಿಷ್ಟ ಸಂಖ್ಯೆಯ ಚಾನೆಲ್‌ಗಳನ್ನು ಮಾತ್ರ ಒದಗಿಸಬಹುದು. ಅಂದರೆ ಕೇಬಲ್ ಸಂಪರ್ಕ ಹೊಂದಿರುವ ಮನೆಗಳಲ್ಲಿ ಅರುವತ್ತೋ ಎಪ್ಪತ್ತೋ ಎಂಭತ್ತೋ ವಾಹಿನಿಗಳನ್ನು ಮಾತ್ರ ವೀಕ್ಷಿಸಬಹುದು. ಅವೂ ಸಂಪೂರ್ಣ ಸ್ಪಷ್ಟತೆಯಿಂದ ಕಾಣಿಸಿಕೊಳ್ಳಲಾರವು. ಮೊದಲ ಒಂದಿಷ್ಟು ಚಾನೆಲ್‌ಗಳು ಚೆನ್ನಾಗಿ ಕಾಣಿಸುತ್ತಿದ್ದರೆ ಅಮೇಲಾಮೇಲೆ ಸ್ಪಷ್ಟತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ. ಹೆಚ್ಚು ಹಣ ಸುರಿದು ಉತ್ತಮ ಗುಣಮಟ್ಟದ ಟಿವಿ ಸೆಟ್ ತಂದರೂ ಪ್ರಯೋಜನವೇನೂ ಇಲ್ಲ. ಆದರೆ ಡಿಜಿಟಲ್ ಸೇವೆ ನೋಡುಗನಿಗೆ ಅತ್ಯುತ್ತಮ ವೀಕ್ಷಣಾ ಅನುಭವವನ್ನು ನೀಡುತ್ತದೆ. ಅಲ್ಲಿ ನೂರಾರು ಚಾನೆಲ್‌ಗಳನ್ನು ನೋಡಬಹುದು. ಚಿತ್ರ-ಧ್ವನಿ ಎರಡರಲ್ಲೂ ಉನ್ನತ ಗುಣಮಟ್ಟ. ಧ್ವನಿ ಹಾಗೂ ದೃಶ್ಯಗಳ ನಡುವೆ ಹೊಂದಾಣಿಕೆಯ ಸಮಸ್ಯೆಯೂ ಬರುವುದಿಲ್ಲ. ಹೀಗಾಗಿ ಡಿಜಿಟಲ್ ತಂತ್ರಜ್ಞಾನ ದಿನೇದಿನೇ ಜನಪ್ರಿಯವಾಗುತ್ತಾ ಹೋಯಿತು. ಆದರೂ ಇಡೀ ದೇಶದ ಕೇಬಲ್ ಪ್ರಸಾರ ವ್ಯವಸ್ಥೆಯನ್ನು ಡಿಜಿಟಲ್ ತಂತ್ರಜ್ಞಾನಕ್ಕೆ ಮಾರ್ಪಡಿಸುವುದು ಒಂದು ಹಿಮಾಲಯದಂಥ ಕೆಲಸವೇ.

ಅಂಕಿಅಂಶಗಳ ಪ್ರಕಾರ, ಪ್ರಸ್ತುತ ದೇಶಾದ್ಯಂತ 148 ಮಿಲಿಯನ್ ಟಿವಿ ಹೊಂದಿರುವ ಕುಟುಂಬಗಳಿವೆ. ಅವುಗಳಲ್ಲಿ 126 ಮಿಲಿಯನ್ ಕುಟುಂಬಗಳು ಕೇಬಲ್ ಹಾಗೂ ಉಪಗ್ರಹ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದರೆ, 42 ಮಿಲಿಯನ್ ಕುಟುಂಬಗಳು ಡಿಜಿಟಲ್ ವ್ಯವಸ್ಥೆಯನ್ನು ಹೊಂದಿವೆ. ಕಳೆದ ವರ್ಷ ದೇಶದಲ್ಲಿದ್ದ ಟಿವಿ ಹೊಂದಿರುವ ಕುಟುಂಬಗಳ ಸಂಖ್ಯೆ 142 ಮಿಲಿಯನ್ ಆಗಿದ್ದು, ಇದರಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸುತ್ತಿದ್ದವರು 26 ಮಿಲಿಯನ್ ಕುಟುಂಬಗಳು. ಡಿಜಿಟಲ್ ತಂತ್ರಜ್ಞಾನ ಒಂದೇ ವರ್ಷದಲ್ಲಿ ಎಷ್ಟು ಜನಪ್ರಿಯವಾಗಿದೆಯೆಂಬುದನ್ನು ಇದು ತೋರಿಸುತ್ತದೆ.

ಆದರೆ ಈಗಾಗಲೇ ಪ್ರಸ್ತಾಪಿಸಿರುವಂತೆ, ಡಿಜಿಟಲೀಕರಣ ಸುಲಭದ ಕೆಲಸವೇನೂ ಅಲ್ಲ. ಅದಕ್ಕೆ ಕೇಬಲ್ ಆಪರೇಟರ್‌ಗಳು ಹಾಗೂ ಗ್ರಾಹಕರ ಕಡೆಯಿಂದ ಸಮಾನ ಸಹಕಾರ ಇರಬೇಕು. ಏಕೆಂದರೆ, ಇದಕ್ಕಾಗಿ ಇಬ್ಬರೂ ಹಣ ಖರ್ಚು ಮಾಡಬೇಕಾಗುತ್ತದೆ. ಭಾರತದಲ್ಲಿ ಒಟ್ಟು 6,000 ಮಲ್ಟಿ-ಸಿಸ್ಟಮ್ ಆಪರೇಟರ್ (ಎಂಎಸ್‌ಒ)ಗಳೂ 60,000 ಸ್ಥಳೀಯ ಕೇಬಲ್ ಆಪರೇಟರ್‌ಗಳೂ ಇದ್ದು, ಇವರು ಏನಿಲ್ಲವೆಂದರೂ ರೂ. 10,000 ಕೋಟಿ ರೂ ಖರ್ಚು ಮಾಡಬೇಕಾಗುತ್ತದೆ. ಡಿಜಿಟಲ್ ಪ್ರಸಾರಕ್ಕಾಗಿ ಪ್ರತ್ಯೇಕ ಟ್ರಾನ್ಸ್‌ಮಿಟರ್, ಎನ್‌ಕೋಡರ್. ಡಿಕೋಡರ್, ಮಾಡ್ಯುಲೇಟರ್, ಸರ್ವರ್ ಹಾಗೂ ಸ್ಟೋರೇಜ್‌ಗಳನ್ನು ಅವರು ಸ್ಥಾಪಿಸಿಕೊಳ್ಳಬೇಕಾಗುತ್ತದೆ. ಇನ್ನೊಂದೆಡೆ ಟಿವಿ ಸೆಟ್ ಹೊಂದಿರುವವರು ಕನಿಷ್ಟ ರೂ. 1000-ರೂ. 2,000 ಖರ್ಚು ಮಾಡಿ ಸೆಟ್ ಟಾಪ್ ಬಾಕ್ಸ್‌ಗಳನ್ನು ಖರೀದಿ ಮಾಡಬೇಕಾಗುತ್ತದೆ. ಸೆಟ್ ಟಾಪ್ ಬಾಕ್ಸ್‌ಗಳ ಮಾರುಕಟ್ಟೆಯೇ ಒಂದು ದೊಡ್ಡ ದಂಧೆಯಾಗಿ ಮಾರ್ಪಡುವ ಎಲ್ಲ ಅಪಾಯಗಳೂ ನಿಚ್ಚಳವಾಗಿವೆ.

ಟಿವಿ ಹೊಂದಿರುವ ಭಾರತದ ಕುಟುಂಬಗಳ ಅನುಪಾತವನ್ನು ನೋಡಿದರೂ ಗ್ರಾಮೀಣರ ಸಂಖ್ಯೆಯೇ ಹೆಚ್ಚು. ದೇಶದ ನಗರ ಪ್ರದೇಶಗಳಲ್ಲಿ ಒಟ್ಟು 69 ಮಿಲಿಯನ್ ಟಿವಿ ಹೊಂದಿರುವ ಕುಟುಂಬಗಳಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿರುವ ಟಿವಿ ಕುಟುಂಬಗಳು 79 ಮಿಲಿಯನ್. ಹೀಗಾಗಿ, ಈ ಕುಟುಂಬಗಳೆಲ್ಲ ಡಿಜಿಟಲೀಕರಣಕ್ಕಾಗಿ ಹಣ ವಿನಿಯೋಗಿಸುವ ಸ್ಥಿತಿಯಲ್ಲಿದ್ದಾರೆಯೇ ಎಂಬುದು ಒಂದು ಪ್ರಶ್ನೆಯಾದರೆ, ಈಗ ಇರುವ ಡಿಜಿಟಲೀಕರಣದ ಹುರುಪು ಮುಂದೆಯೂ ಉಳಿಯುತ್ತದೆಯೇ ಎಂಬುದು ಇನ್ನೊಂದು ಪ್ರಶ್ನೆ. ಆದರೂ ಕುತೂಹಲದ ಸಂಗತಿಯೆಂದರೆ, ದೇಶದಾದ್ಯಂತ ಇರುವ ಡಿಟಿಎಚ್ ಸಂಪರ್ಕ ಗಮನಿಸಿದರೆ, ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಪ್ರದೇಶದ ಜನರೇ ಹೆಚ್ಚು ಡಿಟಿಎಚ್ ಸಂಪರ್ಕ ಪಡೆದುಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ 16 ಮಿಲಿಯನ್ ಡಿಟಿಎಚ್ ಸಂಪರ್ಕಗಳಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ 26 ಮಿಲಿಯನ್ ಡಿಟಿಎಚ್ ಸಂಪರ್ಕ ಪಡೆದಿರುವ ಕುಟುಂಬಗಳಿವೆ. ಬಹುಶಃ ಗ್ರಾಮಾಂತರದಲ್ಲಿ ಕೇಬಲ್ ಸಂಪರ್ಕಕ್ಕಿಂತ ಡಿಟಿಎಚ್ ಸೇವೆಯೇ ಹೆಚ್ಚು ಅನುಕೂಲಕರವಾಗಿರುವುದು ಇದಕ್ಕೆ ಕಾರಣವಿರಬಹುದು. ಒಟ್ಟಿನಲ್ಲಿ, 2014ರ ಅಂತ್ಯದ ವೇಳೆಗೆ ಈ ಪ್ರಕ್ರಿಯೆ ಯಾವ ಹಂತ ತಲುಪೀತು ಎಂಬುದನ್ನು ಕಾದುನೋಡಬೇಕು.

ಮಂಗಳವಾರ, ನವೆಂಬರ್ 6, 2012

ನಾಲ್ಕನೆಯ ಸ್ತಂಭದ ಮುಂದೆ ನಾಲ್ಕು ಪ್ರಶ್ನೆಗಳು

ಮಾಧ್ಯಮಶೋಧ-28, ಹೊಸದಿಗಂತ, 25 ಅಕ್ಟೋಬರ್ 2012

ಕೃಷ್ಣಪ್ರಸಾದ್
"ಭಾರತದಲ್ಲಿ ಮಾಧ್ಯಮಗಳ ವಿಶ್ವಾಸಾರ್ಹತೆ ಇಂದು ಅತ್ಯಂತ ಕನಿಷ್ಠ ಮಟ್ಟವನ್ನು ತಲುಪಿದೆ. Credibility of Indian media is at the lowest." ಹೀಗೆಂದು ಯಾರೋ ಒಬ್ಬ ಅನಾಮಧೇಯ ಹೇಳಿರುತ್ತಿದ್ದರೆ ಇದು ಇನ್ನೊಂದು ಕ್ಲೀಷೆ ಎಂದು ಭಾವಿಸಿ ಸುಮ್ಮನಿರಬಹುದಿತ್ತು. ಈ ಅರ್ಥದ ಹೇಳಿಕೆಗಳನ್ನು ನಾವು ಆಗಿಂದಾಗ್ಗೆ ಕೇಳುತ್ತಲೇ ಇದ್ದೇವೆ. ಮಾಧ್ಯಮ ವಿಶ್ಲೇಷಕರಿಂದ ತೊಡಗಿ ಸಾಮಾನ್ಯ ಓದುಗರು/ನೋಡುಗರವರೆಗೆ ಎಲ್ಲರಿಗೂ ನಮ್ಮ ಅನೇಕ ಮಾಧ್ಯಮಗಳ ವಿಶ್ವಾಸಾರ್ಹತೆಯ ಕಥೆ ಗೊತ್ತಿದೆ. ಆದರೆ ಮೇಲಿನ ಹೇಳಿಕೆ ಬಂದಿರುವುದು ಒಬ್ಬ ಸಾಮಾನ್ಯ ಓದುಗನಿಂದ ಅಲ್ಲ; ಒಬ್ಬ ಪ್ರತಿಭಾವಂತ ಪತ್ರಕರ್ತನಿಂದ. ಅವರು ಭಾರತದ ಪ್ರಮುಖ ಪತ್ರಿಕೆಗಳಲ್ಲಿ ಒಂದು ಎಂದು ಗುರುತಿಸಲಾಗಿರುವ 'ಔಟ್‌ಲುಕ್’ನ ಸಂಪಾದಕ ಕೃಷ್ಣಪ್ರಸಾದ್ ಅಥವಾ ಕೆ.ಪಿ.

ಕೃಷ್ಣಪ್ರಸಾದ್ ಈ ಮಾತನ್ನಾಡಿದ್ದು ಮೊನ್ನೆ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ೬೫ನೇ ಮಹಾಧಿವೇಶನದಲ್ಲಿ - ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 2000 ಪತ್ರಕರ್ತರ ಸಮ್ಮುಖದಲ್ಲಿ. ಬಹುಶಃ ಈ ಮಾತನ್ನು ಕೇಳಿದ ಯಾರಿಗೂ ಅಂತಹ ಆಶ್ಚರ್ಯವೇನೂ ಆಗಿರಲಿಕ್ಕಿಲ್ಲ. ಏಕೆಂದರೆ ಈಗಾಗಲೇ ಹೇಳಿರುವಂತೆ ಇದೊಂದು ಹೊಸ ಉದ್ಗಾರವೇನೂ ಅಲ್ಲ. ಆದರೆ ಒಂದು ಮಾತನ್ನು ಯಾರು ಎಲ್ಲಿ ಹೇಳಿದರೆಂಬುದು ತುಂಬ ಮುಖ್ಯವಾಗುತ್ತದೆ ಮತ್ತು ಅದು ಗಂಭೀರ ಚಿಂತನೆಯೊಂದಕ್ಕೆ ಪ್ರೇರಣೆಯಾಗುತ್ತದೆ.

ಮ್ಯಾಚ್ ಫಿಕ್ಸಿಂಗ್, ನೀರಾ ರಾಡಿಯಾ ಟೇಪ್ ಹಗರಣ, ಬಹುಕೋಟಿ ಮೊತ್ತದ 2ಜಿ ಸ್ಪೆಕ್ಟ್ರಂ ಹಗರಣ ಮುಂತಾದ ಕುಪ್ರಸಿದ್ಧ ಹಗರಣಗಳನ್ನು ಪ್ರಜಾಪ್ರಭುಗಳೆದುರು ಬಯಲುಮಾಡಿದ್ದ 'ಔಟ್‌ಲುಕ್’ನ ಕೆ.ಪಿ. ಪತ್ರಕರ್ತರ ಸಮ್ಮೇಳನದ ವೇದಿಕೆಯ ಮೂಲಕ ಹೇಳಿದ ನಾಲ್ಕು ವಿಚಾರಗಳು ಇಡೀ ಭಾರತೀಯ ಮಾಧ್ಯಮರಂಗದ ಆತ್ಮಾವಲೋಕನದ ದಿಕ್ಕುಗಳಾಗಬೇಕಿರುವುದು ಸುಸ್ಪಷ್ಟ.

ಕೃಷ್ಣಪ್ರಸಾದ್ ಬೊಟ್ಟುಮಾಡಿರುವ ನಾಲ್ಕು ಅಂಶಗಳಲ್ಲಿ ಮೊದಲನೆಯದು ಮಾಧ್ಯಮಗಳ ಮಾಲೀಕತ್ವದ ವಿಚಾರ. ನಮ್ಮ ಮಾಧ್ಯಮರಂಗದ ಮಾಲೀಕರುಗಳ ಕೈಯಲ್ಲಿ ಮಾಧ್ಯಮಗಳಾಗಲೀ, ಅವುಗಳ ಉದ್ಯೋಗಿಗಳಾಗಲೀ, ಸಾಮಾನ್ಯ ಓದುಗರು/ನೋಡುಗರಾಗಲೀ ಸುರಕ್ಷಿತವಾಗಿದ್ದಾರೆಯೇ? Cross-media ownership ಹಾಗೂ ಹೆಚ್ಚುತ್ತಿರುವ ಏಕಸ್ವಾಮ್ಯತೆಯ ಪ್ರವೃತ್ತಿಗಳು ಪ್ರಜಾಪ್ರಭುತ್ವದ ಮೂಲನಂಬಿಕೆಗಳನ್ನು ಛಿದ್ರಗೊಳಿಸದೆ ಬಿಟ್ಟಾವೆಯೇ? ಎಂಬುದು.

ಎರಡನೆಯದು, ಮಾಧ್ಯಮ ಶಿಕ್ಷಣ. ಟಿವಿ ಚಾನೆಲ್‌ಗಳವರು ಇಂದು ತಮ್ಮ ಯುವಪತ್ರಕರ್ತರಲ್ಲಿ ಮೌಲ್ಯಗಳನ್ನು ಮತ್ತು ನೈತಿಕತೆಯನ್ನು ಬಿತ್ತುವುದಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆಯೇ? ತಮ್ಮ ಸಂಸ್ಥೆಗೆ ಉತ್ತಮ ಗುಣಮಟ್ಟದ ಪತ್ರಕರ್ತರನ್ನು ಪಡೆಯುವುದಕ್ಕೆ ಅವರು ಸಾಕಷ್ಟು ಬಂಡವಾಳ ಹೂಡುತ್ತಿದ್ದಾರೆಯೇ? ಟಿವಿ ಚಾನೆಲ್‌ಗಳವರು ಮಾಧ್ಯಮಗಳಿಗಾಗಿ ಒಳ್ಳೆಯ ಮಾನವ ಸಂಪನ್ಮೂಲವನ್ನು ರೂಪಿಸುವುದಕ್ಕಾಗಿ ತಮ್ಮ ಸುತ್ತಲಿನ ಶಿಕ್ಷಣ ಸಂಸ್ಥೆಗಳೊಂದಿಗೆ ಸೂಕ್ತ ರೀತಿಯಲ್ಲಿ ಸಹಕರಿಸುತ್ತಿದ್ದಾರೆಯೇ? ಇದು ಕೆ.ಪಿ. ಪ್ರಶ್ನೆ.

ಮೂರನೆಯದು, ವಿಶ್ವಾಸಾರ್ಹತೆ. ಇದನ್ನೇ ಈ ಬರೆಹದ ಆರಂಭದಲ್ಲಿ ಪ್ರಸ್ತಾಪಿಸಿದ್ದು. ಭಾರತೀಯ ಮಾಧ್ಯಮರಂಗದಲ್ಲಿ ವಿಶ್ವಾಸಾರ್ಹತೆಯೆಂಬುದು ಕನಿಷ್ಠ ಮಟ್ಟವನ್ನು ತಲುಪಿದೆ. ವಿಶ್ವಾಸಾರ್ಹತೆಯ ವಿಷಯಕ್ಕೆ ಬಂದಾಗ ಎರಡು ಹಂತದಲ್ಲಿ ನಾವು ಸಮಸ್ಯೆ ಎದುರಿಸುತ್ತಿದ್ದೇವೆ: ಒಂದು ವೈಯುಕ್ತಿಕ ಮಟ್ಟದಲ್ಲಿ ಅಂದರೆ ಪತ್ರಕರ್ತರ ಮಟ್ಟದಲ್ಲಿ; ಎರಡು ಮಾಧ್ಯಮ ಸಂಸ್ಥೆಗಳ ಮಟ್ಟದಲ್ಲಿ. ಪತ್ರಕರ್ತ ಹಾಗೂ ಆತ ಕೆಲಸ ಮಾಡುವ ಸಂಸ್ಥೆ ಎರಡನ್ನೂ ನಂಬದ ಸ್ಥಿತಿಗೆ ಜನ ಬಂದಿದ್ದಾರೆ ಎಂಬುದು ಕೆ.ಪಿ. ಕಳವಳ.

ನಾಲ್ಕನೆಯದು, ಕಂಟೆಂಟ್ ಅಥವಾ ಮಾಧ್ಯಮಗಳ ಹೂರಣ. ಮಾಧ್ಯಮಗಳು ಸುದ್ದಿ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಅನುಸರಿಸುವ ಮಾನದಂಡ ಯಾವುದು? ವಸ್ತುನಿಷ್ಠವಾಗಿ ಸುದ್ದಿಮೌಲ್ಯಗಳ ಆಧಾರದಲ್ಲಿ ಸುದ್ದಿಗಳು ಪ್ರಸಾರವಾಗುತ್ತಿವೆಯೇ ಅಥವಾ ವೈಯುಕ್ತಿಕ ಪೂರ್ವಾಗ್ರಹಗಳು ಕೆಲಸ ಮಾಡುತ್ತಿವೆಯೇ? ಪತ್ರಿಕೆಗಳು ಹಾಗೂ ಚಾನೆಲ್‌ಗಳ ಹೂರಣವನ್ನು ಜನರು ನಿರ್ಧರಿಸಬೇಕೋ ಅಥವಾ ಜನರಿಗೆ ಏನು ಬೇಕೆಂಬುದನ್ನು ಮಾಧ್ಯಮಗಳು ನಿರ್ಧರಿಸಬೇಕೋ?

ಒಟ್ಟಿನಲ್ಲಿ ಇಡಿಯ ಮಾಧ್ಯಮರಂಗ ಇಂದು ಎದುರಿಸುತ್ತಿರುವ ಅಷ್ಟೂ ಸವಾಲುಗಳನ್ನು ಕೃಷ್ಣಪ್ರಸಾದ್ ನಾಲ್ಕೇ ಅಂಶಗಳಲ್ಲಿ ಸಾಂಧ್ರೀಕರಿಸಿದ್ದಾರೆ. ಅವರು ಎತ್ತಿರುವ ಒಂದೊಂದು ಪ್ರಶ್ನೆಯೂ ಒಂದೊಂದು ದೊಡ್ಡ ಸಮ್ಮೇಳನಗಳ ವಿಷಯವಾಗಬಹುದು.
ಭಾರತದಲ್ಲಿರುವ ಒಟ್ಟು ಪತ್ರಿಕೆ, ಚಾನೆಲ್, ರೇಡಿಯೋ ಇತ್ಯಾದಿಗಳ ಸಂಖ್ಯೆ ಈ ದೇಶದ ಮಾಧ್ಯಮರಂಗದ ಬಹುತ್ವ ಹಾಗೂ ವೈವಿಧ್ಯತೆಯನ್ನು ತೋರಿಸುತ್ತಾದರೂ ಈ ಕ್ಷೇತ್ರವನ್ನು ಬರೀ ನೂರರಷ್ಟು ಸಂಖ್ಯೆಯ ದೊಡ್ಡ ಮಾಧ್ಯಮ ಕುಳಗಳು ಆಳುತ್ತಿವೆ ಎಂಬುದು ವಿಚಿತ್ರವಾದರೂ ಸತ್ಯ: ’ಹಳ್ಳಿಗಳ ಮತ್ತು ಬಡವರ ದೇಶ’ವಾದ ಭಾರತದಲ್ಲಿ ವಿಶ್ವದ ಟಾಪ್-10 ಬಿಲಿಯನೇರ್‌ಗಳಿದ್ದ ಹಾಗೆ! ನಮ್ಮಲ್ಲಿ ಸುಮಾರು 82,500 ಪತ್ರಿಕೆಗಳು, 830ರಷ್ಟು ಟಿವಿ ಚಾನೆಲ್‌ಗಳು, 230ಕ್ಕಿಂತಲೂ ಹೆಚ್ಚು ಆಕಾಶವಾಣಿ ಕೇಂದ್ರಗಳು, ಅದಕ್ಕಿಂತಲೂ ಹೆಚ್ಚು ಖಾಸಗಿ ಎಫ್‌ಎಂ ಕೇಂದ್ರಗಳು, ಲಕ್ಷಾಂತರ ಜಾಲತಾಣಗಳು ಇವೆಲ್ಲ ಇದ್ದರೂ ನಾವು ಏನನ್ನು ಓದಬೇಕು, ಏನನ್ನು ನೋಡಬೇಕು, ಏನನ್ನು ಕೇಳಬೇಕು ಮತ್ತು ಯಾವುದರಿಂದ ಪ್ರಭಾವಿತವಾಗಬೇಕು ಎಂದು ನಿರ್ಧರಿಸುವವರು ಬೆರಳೆಣಿಕೆಯ ಮಂದಿ. ನಾವೆಲ್ಲ cross-media ownerಗಳ ಹಾಗೂ monopolyಗಳ ಮನದಿಚ್ಛೆಯಂತೆ ಬದುಕಬೇಕಾದ ಕಾಲದಲ್ಲಿದ್ದೇವೆ. ನಮಗೆ ಗೊತ್ತಿಲ್ಲದಂತೆಯೇ ನಾವೊಂದು ಹೊಸಬಗೆಯ ಗುಲಾಮಗಿರಿಯತ್ತ ಸಾಗುತ್ತಿದ್ದೇವೆಯೇ?

ಹಿರಿಯ ಪತ್ರಕರ್ತ ಪರಂಜಯ್ ಗುಹಾ ಠಾಕುರ್ತಾ ಒಂದು ಉದಾಹರಣೆ ಕೊಡುತ್ತಾರೆ: ದೆಹಲಿ ಮಹಾನಗರದಲ್ಲಿ ೧೬ ಇಂಗ್ಲಿಷ್ ದಿನಪತ್ರಿಕೆಗಳು ಕಾರ್ಯಾಚರಿಸುತ್ತಿವೆ. ಇವುಗಳ ಪೈಕಿ ಮೊದಲ ಮೂರು ಪತ್ರಿಕೆಗಳಾದ 'ಟೈಮ್ಸ್ ಆಫ್ ಇಂಡಿಯಾ’, 'ಹಿಂದೂಸ್ತಾನ್ ಟೈಮ್ಸ್’ ಹಾಗೂ 'ಇಕನಾಮಿಕ್ ಟೈಮ್ಸ್’ ಪತ್ರಿಕೆಗಳು ಎಲ್ಲ ಪತ್ರಿಕೆಗಳ ಒಟ್ಟು ಮಾರುಕಟ್ಟೆಯ ನಾಲ್ಕನೇ ಮೂರು ಪಾಲನ್ನು ಹೊಂದಿವೆಯಂತೆ. ಅಂದರೆ, ಇಡೀ ದೆಹಲಿಯ ಜನತೆ ಏನು ಓದಬೇಕೆಂಬುದನ್ನು ಬಹುತೇಕ ಈ ಮೂರು ಪತ್ರಿಕೆಗಳೇ ನಿರ್ಧರಿಸುವ ಸ್ಥಾನದಲ್ಲಿವೆಂದಂತಾಯ್ತು. ಅದರಲ್ಲೂ ಮೊದಲ ಮತ್ತು ಮೂರನೇ ಪತ್ರಿಕೆಗೆ ಒಬ್ಬನೇ ಮಾಲೀಕ.
ದೆಹಲಿ ಒಂದು ನಿದರ್ಶನ ಅಷ್ಟೆ. ಭಾರತದ ಬಹುತೇಕ ರಾಜ್ಯಗಳ ಕಥೆಯೂ ಇದೇ. ಕೆಲವೇ ಜನ ಮಾಲೀಕರು, ಶ್ರೀಮಂತ ಉದ್ಯಮಿಗಳು, ಪ್ರಭಾವಿ ರಾಜಕಾರಣಿಗಳು ನಮ್ಮ ಮಾಧ್ಯಮಗಳ ಕಂಟೆಂಟ್, ದೃಷ್ಟಿಕೋನ ಹಾಗೂ ಸಂಪಾದಕೀಯ ನೀತಿಯನ್ನು ನಿರ್ಧರಿಸುವ ಪರಿಸ್ಥಿತಿ ಇದೆ. ಸರ್ಕಾರವೇನಾದರೂ ಈ ಪ್ರವೃತ್ತಿಯನ್ನು ನಿಯಂತ್ರಿಸುವ ಪ್ರಸ್ತಾಪ ಮುಂದಿಟ್ಟರೆ ಅದನ್ನು ಒಕ್ಕೊರಲಿನಿಂದ ವಿರೋಧಿಸುವುದಕ್ಕೆ ಈ ಎಲ್ಲ ಕುಳಗಳೂ ತಯಾರಾಗಿಯೇ ಇರುತ್ತವೆ. ಬರೀ ಮಾಧ್ಯಮ ಮಾಲೀಕರುಗಳಷ್ಟೇ ಅಲ್ಲ, ರಾಜಕಾರಣಿಗಳೂ ಇದನ್ನು ವಿರೋಧಿಸುತ್ತಾರೆ. ಏಕೆಂದರೆ ರಾಜಕೀಯ ಪಕ್ಷಗಳಿಗೂ ದೊಡ್ಡದೊಡ್ಡ ಮಾಧ್ಯಮ ಮಹಾಶಯರುಗಳ ಕೃಪಾಕಟಾಕ್ಷದ ಅನಿವಾರ್ಯತೆ ಇದ್ದೇ ಇದೆ. ತಾವು ಬೆಳೆಯಬೇಕಾದರೆ ಅವುಗಳಿಗೆ ಮಾಧ್ಯಮಗಳ ಬೆಂಬಲ ಬೇಕೇಬೇಕಲ್ಲ? ಅದರಲ್ಲೂ ಎರಡು ಮೂರು ಪತ್ರಿಕೆಗಳು, ಚಾನೆಲ್‌ಗಳು 'ಒಪೀನಿಯನ್ ಲೀಡರ್’ಗಳಾಗಿಬಿಟ್ಟರೆ ರಾಜಕೀಯದವರ ಕೆಲಸ ಇನ್ನೂ ಸುಲಭವಾಯಿತು.

ಇದನ್ನು ವಿರೋಧಿಸುವುದಕ್ಕೆ ಯಾವ ಮಾಧ್ಯಮಗಳಿಗೂ ನೈತಿಕ ಶಕ್ತಿಯಿಲ್ಲದಂತಹ ಒಂದು ಅಸಹಾಯಕ ಪರಿಸ್ಥಿತಿ ಸೃಷ್ಟಿಯಾಗಿದೆ. ಒಂದು ಕಡೆ ಪೇಯ್ಡ್ ನ್ಯೂಸ್, ನ್ಯೂಸ್ ಪ್ಯಾಕೇಜ್, ಮೀಡಿಯಾನೆಟ್‌ನಂತಹ ಮಾಧ್ಯಮ ಹಾದರ ಎಗ್ಗಿಲ್ಲದಂತೆ ನಡೆಯುತ್ತಲೇ ಇದೆ, ಇನ್ನೊಂದೆಡೆ ರಾಜಕಾರಣಿಗಳು ಮತ್ತು ಉದ್ಯಮಿಗಳು ಮಾಧ್ಯಮಗಳ ಆಡಳಿತದಲ್ಲಿ ಪಾಲುಪಡೆದುಕೊಳ್ಳುವುದೂ ನಿರಂತರವಾಗಿ ಸಾಗಿದೆ. ಮಾಧ್ಯಮಗಳಲ್ಲಿ ಉದ್ಯಮಿಗಳು-ರಾಜಕಾರಣಿಗಳು ಯಾರು, ಉದ್ಯಮಿ-ರಾಜಕಾರಣಿಗಳಲ್ಲಿ ಮಾಧ್ಯಮವರ್ಗಕ್ಕೆ ಸೇರಿದವರ್ಯಾರು ಎಂದು ತಿಳಿದುಕೊಳ್ಳಲು ಸಾಧ್ಯವಾಗದ ಮಟ್ಟಿಗೆ ಈ ಸಖ್ಯ ಒಂದಕ್ಕೊಂದು ಬೆಸೆದುಬಿಟ್ಟಿದೆ.

ಬಿರ್ಲಾ ಕುಟುಂಬದ ಶೋಭನಾ ಭಾರ್ತಿಯಾ ಈಗ ’ಹಿಂದೂಸ್ತಾನ್ ಟೈಮ್ಸ್’ ಸಮೂಹದ ಅಧ್ಯಕ್ಷೆ. ’ಲೋಕಮತ್’ ಸಮೂಹವನ್ನು ನಡೆಸುತ್ತಿರುವುದು ರಾಜಕಾರಣ ಹಾಗೂ ಉದ್ಯಮದಲ್ಲಿರುವ ದರ್ದಾ ಕುಟುಂಬ. ’ಸನ್ ನೆಟ್‌ವರ್ಕ್’ ಮಾರನ್ ಕುಟುಂಬದ ಒಡೆತನದ್ದು. ಜಾಗರಣ್ ಪಬ್ಲಿಕೇಶನ್ಸ್, ಎಚ್‌ಟಿ ಮೀಡಿಯಾ, ದೈನಿಕ್ ಭಾಸ್ಕರ್ ಸಮೂಹ, ಎನ್‌ಡಿಟಿವಿಯಂತಹ ದೊಡ್ಡ ಸಂಸ್ಥೆಗಳ ನಿರ್ದೇಶಕರುಗಳ ಮಂಡಳಿಯಲ್ಲಿ ಉದ್ಯಮಿಗಳು ಹಾಗೂ ರಾಜಕಾರಣಿಗಳದ್ದೇ ಸಿಂಹಪಾಲು. ಜಗನ್ ಮೋಹನ್ ರೆಡ್ಡಿಯ ’ಸಾಕ್ಷಿ’, ರಾಜೀವ್ ಶುಕ್ಲಾ ಒಡೆತನದ ’ನ್ಯೂಸ್24’, ಜಯಲಲಿತಾ ಒಡೆತನದ ’ಜಯಾ ಟಿವಿ’ ಮತ್ತಿತರ ಚಾನೆಲ್‌ಗಳು, ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಟಿವಿ ಮತ್ತು ಪತ್ರಿಕಾ ಮಾಧ್ಯಮಗಳು, ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್ ಪಕ್ಷಗಳು ಬೇರೆಬೇರೆ ಹೆಸರುಗಳಲ್ಲಿ ಬೇರೆಬೇರೆ ಭಾಷೆಗಳಲ್ಲಿ ನಡೆಸುವ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು... ದೇಶದಾದ್ಯಂತ ಇಂತಹ ಹತ್ತಾರು ನಿದರ್ಶನಗಳಿವೆ. ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಂತೂ ರಾಜಕಾರಣಿಗಳು ಚಾನೆಲ್ ಹಾಗೂ ಪತ್ರಿಕೆ ನಡೆಸುವುದು ಒಂದು ಫ್ಯಾಶನ್ನೇ ಆಗಿಬಿಟ್ಟಿದೆ.

ಈ ಎಲ್ಲ ಉದ್ಯಮ ಹಾಗೂ ರಾಜಕೀಯಾಸಕ್ತಿಗಳ ನಡುವೆ ಮಾಧ್ಯಮಗಳು ಗುಣಮಟ್ಟದ ಉದ್ಯೋಗಿಗಳನ್ನು ಪಡೆಯುವುದಕ್ಕೆ ಸೂಕ್ತ ಬಂಡವಾಳ ಹೂಡುತ್ತಿಲ್ಲ ಎಂಬ ಸಂಗತಿ ವಿಷಾದನೀಯವೇ. ಸಂಪತ್ತು ಸಂಗ್ರಹಣೆಯತ್ತಲೇ ಮನಸ್ಸು ಲೆಕ್ಕಾಚಾರ ಹಾಕತೊಡಗಿದಾಗ ಗುಣಮಟ್ಟ ಕಡೆಗಣಿಸಲ್ಪಡುತ್ತದೆ. ಉತ್ತಮ ವೇತನ ನೀಡಿ ಒಳ್ಳೆಯ ಪತ್ರಕರ್ತರನ್ನು ನೇಮಿಸಿಕೊಳ್ಳುವುದು ಅವರ ಆದ್ಯತೆಯಾಗಿರುವ ಬದಲು ಮೀಡಿಯೋಕರ್‌ಗಳನ್ನು ಬಳಸಿಕೊಂಡು ಅದೇ ಗುಣಮಟ್ಟದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಕ್ಕೇ ಅವರ ಮಾಧ್ಯಮ ಸೇವೆ ಸೀಮಿತವಾಗುತ್ತದೆ. ಒಳ್ಳೆಯ ಟಿಆರ್‌ಪಿ ಗಳಿಸಿಕೊಳ್ಳುವುದಕ್ಕೆ ಅವರ ಬಳಿ ಅವರದ್ದೇ ಆದ ತಂತ್ರಗಾರಿಕೆಗಳು ಇದ್ದೇಇವೆ.

ಇಷ್ಟೆಲ್ಲ ಆದ ಮೇಲೆ ಇಂತಹ ಮಾಧ್ಯಮಗಳ ವಿಶ್ವಾಸಾರ್ಹತೆ ಅಥವಾ ಹೂರಣದ ಪ್ರಾಮಾಣಿಕತೆ ಬಗ್ಗೆ ಮಾತನಾಡುವುದು ನಿಷ್ಪ್ರಯೋಜಕ. ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎಂಬ ಗೊಂದಲವನ್ನು ಜನಸಾಮಾನ್ಯರಲ್ಲಿ ಸೃಷ್ಟಿಸುವುದೇ ಬಹುತೇಕ ಮಾಧ್ಯಮಗಳ ಹೆಚ್ಚುಗಾರಿಕೆ.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೋ ಸ್ತಂಭವೆಂದೋ ಕರೆಸಿಕೊಂಡಿರುವ ನಮ್ಮ ಮಾಧ್ಯಮಗಳು ಆ ಅಭಿದಾನವನ್ನು ಉಳಿಸಿಕೊಳ್ಳುವ ಶ್ರೇಷ್ಠತೆಯನ್ನು ಉಳಿಸಿಕೊಂಡಿದ್ದಾವೆಯೇ ಎಂಬುದು ಸದ್ಯದ ಪ್ರಶ್ನೆ. ಆದರೆ ಅದಕ್ಕೆ ಉತ್ತರಿಸುವ ಮೊದಲು ಕೆ.ಪಿ. ಎತ್ತಿರುವ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.