ಭಾನುವಾರ, ನವೆಂಬರ್ 27, 2016

ನಿನ್ನ ನೀನು ಮರೆತರೆ...?

ಬೋಧಿವೃಕ್ಷ (ನ. 19-25, 2016)ದಲ್ಲಿ ಪ್ರಕಟಿತ ಲೇಖನ

'ಗುರುಗಳೇ, ನಮಸ್ಕರಿಸಿದ್ದೇನೆ.’
'ಎದ್ದೇಳು. ಒಳ್ಳೆಯದಾಗಲಿ. ಯಾರು ನೀನು?’
'ನಾನು ಪ್ರಭಾಕರ.’
'ಅದು ನಿನ್ನ ಹೆಸರು. ನೀನು ಯಾರು?’
'ನಾನು ವೆಂಕಟೇಶರಾಯರ ಮಗ. .... ಕುಟುಂಬಕ್ಕೆ ಸೇರಿದವನು.’
'ಅದು ನಿನ್ನ ತಂದೆಯ ಮತ್ತು ಕುಟುಂಬದ ಹೆಸರು. ನೀನು ಯಾರು?’
'ನಾನು ಹರಿಹರದಿಂದ ಬಂದಿದ್ದೇನೆ. .... ಜಾತಿಯವನು’
'ಅದು ನಿನ್ನ ಊರು ಮತ್ತು ಜಾತಿಯ ಬಗೆಗಾಯಿತು. ನೀನು ಯಾರು?’
'ನಾನು ಬಿ.ಇ. ಓದಿದ್ದೇನೆ. ಈಗ ಒಂದು ದೊಡ್ಡ ಸಾಫ್ಟ್‌ವೇರ್ ಕಂಪೆನಿಯಲ್ಲಿ ಗ್ರೂಪ್ ಲೀಡರ್ ಆಗಿದ್ದೇನೆ.’
'ಅದು ನಿನ್ನ ವಿದ್ಯಾಭ್ಯಾಸ ಮತ್ತು ಉದ್ಯೋಗದ ವಿಷಯ. ನೀನು ಯಾರು?’
ಹೀಗೆ ಸಾಗುತ್ತದೆ ಗುರು-ಶಿಷ್ಯರ ನಡುವಿನ ಸಂಭಾಷಣೆ. ಅರ್ಧಗಂಟೆ, ಒಂದು ಗಂಟೆ. ಶಿಷ್ಯನ ಬಳಿ ಇನ್ನೇನೂ ಉತ್ತರ ಉಳಿದಿಲ್ಲ. ಆದರೆ ಗುರುವಿನ ಪ್ರಶ್ನೆ ಹಾಗೆಯೇ ಇದೆ: 'ನೀನು ಯಾರು?’ ಬೇರೆ ದಾರಿ ಕಾಣದೆ ಶಿಷ್ಯ ಗುರುವಿನ ಪಾದ ಹಿಡಿದು ಆರ್ತನಾಗಿ ಕೇಳುತ್ತಾನೆ: 'ಗುರುಗಳೇ, ನನಗೊಂದೂ ಅರ್ಥವಾಗುತ್ತಿಲ್ಲ! ನಾನು ಯಾರು?’

***

ಹೀಗೊಂದು ಪ್ರಶ್ನೆಯನ್ನು ನಮಗೆ ನಾವೇ ಎಂದಾದರೂ ಕೇಳಿಕೊಂಡದ್ದಿದೆಯೇ? ಇಲ್ಲಿಯವರೆಗೆ ಎಷ್ಟೊಂದು ಬಾರಿ 'ನೀನು ಯಾರು’ ಎಂಬ ಪ್ರಶ್ನೆಯನ್ನು ನಾವು ಎದುರಿಸಿಲ್ಲ? ಎಷ್ಟೊಂದು ಬಾರಿ ನಾವು ನಮ್ಮ ಪರಿಚಯ ಮಾಡಿಕೊಂಡಿಲ್ಲ? ಬಹುಶಃ ಪ್ರತಿನಿತ್ಯವೂ ಯಾವುದಾದರೊಂದು ಸನ್ನಿವೇಶದಲ್ಲಿ ನಮ್ಮ ಪರಿಚಯ ಮಾಡಿಕೊಂಡಿರುತ್ತೇವೆ. ಆಗೆಲ್ಲಾ ನಮ್ಮ ಹೆಸರು, ಊರು, ವಿದ್ಯಾಭ್ಯಾಸ, ಉದ್ಯೋಗ, ಕೆಲವೊಮ್ಮೆ ಧರ್ಮ, ಸಮುದಾಯ, ಜಾತಿ ಇತ್ಯಾದಿಗಳ ಬಗ್ಗೆ ಹೇಳುತ್ತೇವೆ.
ಇವೆಲ್ಲಾ ನಮಗೆ ಯಾವಾಗ ಅಂಟಿಕೊಂಡವು? ಉದ್ಯೋಗ ಸಿಕ್ಕಿದ್ದು ವಿದ್ಯಾಭ್ಯಾಸದ ಆಧಾರದಲ್ಲಿ. ಶಿಕ್ಷಣ ದೊರೆಯುವುದಕ್ಕೆ ಮುಂಚೆ ನಮಗೊಂದು ಹೆಸರು ಮಾತ್ರ ಇತ್ತು. ಅಪ್ಪ-ಅಮ್ಮ ಹೆಸರು ಇಡುವುದಕ್ಕೆ ಮುನ್ನ ನಾವು ಯಾರಾಗಿದ್ದೆವು? ಇಂತಹ ಮನೆಯಲ್ಲಿ ಹುಟ್ಟಿದೆವು ಎಂಬ ಕಾರಣಕ್ಕೆ ಜಾತಿ, ಧರ್ಮಗಳು ನಮ್ಮ ಅಕ್ಕಪಕ್ಕ ಸೇರಿಕೊಂಡವು. ಇವೆಲ್ಲವನ್ನು ಪಕ್ಕಕ್ಕಿಟ್ಟರೆ ನಮ್ಮ ಐಡೆಂಟಿಟಿ ಏನು? ‘God has given you one face, and you make yourself another’ ಎಂಬ ಶೇಕ್ಸ್‌ಪಿಯರ್‌ನ ಮಾತಲ್ಲಿರುವುದೂ ಇದೇ ಪ್ರಶ್ನೆ.

ವೃತ್ತಿ, ಜಾತಿ, ಧರ್ಮ, ಅಂತಸ್ತು, ಕುಟುಂಬ ಇತ್ಯಾದಿಗಳೇ ನಮ್ಮ ವ್ಯಕ್ತಿತ್ವವೇ? ಅವುಗಳ ಹೊರತಾಗಿ ನಮಗೆ ನಮ್ಮದೇ ಆದ ಒಂದು ಮುಖವೇ ಇಲ್ಲವೇ? ಅವುಗಳಿಲ್ಲದೇ ಹೋದರೆ ನಮಗೆ ಬೆಲೆಯೇ ಇಲ್ಲವೇ? ಇಂತಹ ಉಪಾಧಿಗಳನ್ನೆಲ್ಲ ಕಳಚಿಯೂ ಪ್ರಪಂಚದಿಂದ ಗುರುತಿಸಿಕೊಂಡವರು ಇದ್ದಾರೆಯೇ? ಇದ್ದಾರೆ ಎಂದಾದರೆ ಅವರ ಐಡೆಂಟಿಟಿ ಏನು? ಜಾತಿ, ಧರ್ಮ, ಉದ್ಯೋಗ, ಆದಾಯಗಳೆಲ್ಲ ಅವರಿಗೆ ಏನಾಗಿದ್ದವು? ಲೌಕಿಕ ಬದುಕಿನಲ್ಲಿ ನಾವು ಪ್ರತಿಕ್ಷಣ ಕೊರಳಿಗೆ ಸುತ್ತಿಕೊಂಡು ಮೆರೆಯುವ ಗುರುತುಚೀಟಿಗಳ ಯತಾರ್ಥತೆ ಏನು?

ನಾವು ಹುಟ್ಟಿದ ಬಳಿಕ ಈ ಅಸ್ಮಿತೆಗಳೆಲ್ಲ ನಮ್ಮನ್ನು ಆವರಿಸಿಕೊಂಡವು ಎಂದಾದರೆ ನಮ್ಮ ಸಾವಿನೊಂದಿಗೆ ಅವುಗಳೂ ಅಂತ್ಯ ಕಾಣಬೇಕು. ವೃತ್ತಿ, ಸಮುದಾಯ, ಸಂಪತ್ತು, ಬಿರುದು, ಬಿಗುಮಾನಗಳ್ಯಾವುವೂ ನಮ್ಮ ನಂತರ ಉಳಿಯುವುದಿಲ್ಲ ಎಂದಾದರೆ ಅವು ನಮ್ಮ ನಿಜವಾದ ಗಳಿಕೆ ಅಲ್ಲ. ಹಾಗಾದರೆ ನಮ್ಮ ನೈಜ ಗಳಿಕೆ ಯಾವುದು? ನೈಜ ಉಳಿಕೆ ಯಾವುದು?

ಏನೇ ನಿಜವಿರಲಿ ಮತ್ತೇನೇ ಸುಳ್ಳಾಗಿರಲಿ
ನಾನೆನಿಪ್ಪಾತ್ಮವೊಂದಿರುವುದನುಭವಿಕ|
ಹಾನಿಗಾವಾತನಾತ್ಮವನುಂ ಕೆಡುಹದಿರು
ಧ್ಯಾನಿಸಾತ್ಮದ ಗತಿಯ - ಮಂಕುತಿಮ್ಮ||
ಎಂಬ ಡಿವಿಜಿಯವರ ಆದೇಶ ನಮಗಿಲ್ಲಿ ಬೆಳಕಿನ ಬೀಜವಾಗಬೇಕು. 'ನಾನು’ ಎಂದೆನಿಸುವ ಆತ್ಮದ ಅನುಭವವಿರುವತನಕ ಬೇರೆ ಆತ್ಮಗಳಿಗೆ ಹಾನಿಯುಂಟುಮಾಡದೆ ನಿನ್ನ ಆತ್ಮದ ಗತಿಯ ಮತ್ತು ಗಮ್ಯದ ಬಗ್ಗೆ ನೀನು ಧ್ಯಾನಿಸು ಎಂಬ ಡಿವಿಜಿಯವರ ಮಾತು ನಾವು ಸಾಗಬೇಕಾದ ಹಾದಿಯೆಡೆಗಿನ ಸ್ಪಷ್ಟ ತೋರುಗಂಬ.

ನಾನು ಯಾರು? ಎಲ್ಲಿಂದ ಬಂದೆ? ನನ್ನ ನಿಜವಾದ ಸ್ವಭಾವವೇನು? ನಾನು ವರ್ತಿಸುತ್ತಿರುವ ರೀತಿ ಸರಿಯಾಗಿದೆಯೇ? ಇಲ್ಲವಾದರೆ ನನ್ನನ್ನು ನಾನು ಅಭಿವೃದ್ಧಿಪಡಿಸಿಕೊಳ್ಳುವುದು ಹೇಗೆ? ನನ್ನ ಬದುಕಿನ ಅಂತಿಮ ಗುರಿ ಯಾವುದು? ಅದನ್ನು ತಲುಪಲು ಇರುವ ಸರಿಯಾದ ಮಾರ್ಗ ಯಾವುದು? ಇದುವೇ ಸರಿಯಾದ ಮಾರ್ಗ ಎಂದು ತೋರಿಸಿಕೊಡುವವರು ಯಾರು? ಇವೆಲ್ಲ ತನ್ನ ನಿಜವಾದ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮನುಷ್ಯ ತನ್ನನ್ನು ತಾನು ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಎಂಬುದು ಡಿವಿಜಿ ವಚನದ ಧ್ವನಿ.

ಅವರ ಇನ್ನೊಂದು ಪ್ರಸಿದ್ಧ ಕಗ್ಗವಂತೂ ಈ ಸಂದರ್ಭಕ್ಕೆ ಚೆನ್ನಾಗಿ ಒಪ್ಪುತ್ತದೆ:
ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ|
ಉದ್ಧರಿಸುವೆನು ಜಗವನೆನ್ನುತಿಹ ಸಖನೆ
ನಿನ್ನುದ್ಧಾರವೆಷ್ಟಾಯ್ತೊ? ಮಂಕುತಿಮ್ಮ||
ಒಬ್ಬೊಬ್ಬರೂ ತಮ್ಮನ್ನು ತಾವು ಸರಿಪಡಿಸಿಕೊಂಡರೆ ಸಮಾಜವನ್ನು ತಿದ್ದುವುದಕ್ಕೆ ಮೂರನೆಯವನ ಅಗತ್ಯವಿಲ್ಲ ಎಂಬ ಈ ನುಡಿ ಎಷ್ಟೊಂದು ಅದ್ಭುತವಾಗಿದೆ ನೋಡಿ! ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್| ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ|| (ತನ್ನನ್ನು ತಾನೇ ಉದ್ಧಾರಮಾಡಿಕೊಳ್ಳಬೇಕು. ತನ್ನನ್ನು ಕುಗ್ಗಿಸಿಕೊಳ್ಳಬಾರದು. ಏಕೆಂದರೆ, ತಾನೇ ತನ್ನ ಬಂಧು. ತಾನೇ ತನ್ನ ಶತ್ರು) ಎಂಬ ಗೀತಾಚಾರ್ಯನ ಮಾತಿನ ತಾತ್ಪರ್ಯವೂ ಇದೇ ಅಲ್ಲವೇ?
'ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ’ ಎಂದು ಬಸವಣ್ಣನವರ ಮಾತಿನಲ್ಲೂ, 'ಕೆಡುಕರನ್ನು ನಾ ಹುಡುಕುತ ಹೊರಟೆ/ ಕೆಡುಕರಾರೂ ಸಿಗಲಿಲ್ಲ/ ನನ್ನಯ ಮನವನು ನಾನೇ ನೋಡೆ/ ನನಗಿಂತ ಕೆಡುಕರಿಲ್ಲ- ಕಬೀರಾ’ ('ಕಬೀರ ಬೀರಿದ ಬೆಳಕು’: ಸ್ವಾಮಿ ಪುರುಷೋತ್ತಮಾನಂದ) ಎಂಬ ಕಬೀರರ ಮಾತಿನಲ್ಲಿಯೂ ಇರುವುದು ಆತ್ಮನಿರೀಕ್ಷಣೆಯ ತತ್ವವೇ.

'ನಾನು ಯಾರು?’ ಎಂಬ ಸರಳ ಪ್ರಶ್ನೆಯೇ 'ಸಚ್ಚಿದಾನಂದ’ವೆಂಬ ಆತ್ಮಸಾಕ್ಷಾತ್ಕಾರದ ಮೂಲವೆಂದು ಪ್ರತಿಪಾದಿಸಿದವರು ಶ್ರೀ ರಮಣಮಹರ್ಷಿಗಳು. ಮನಸ್ಸೇ ಎಲ್ಲದಕ್ಕೂ ಮೂಲ. ಅದೇ ಸೂಕ್ಷ್ಮರೂಪದಲ್ಲಿರುವ ಶರೀರ. ಈ ಶರೀರದಲ್ಲಿ ನಾನೆಂದು ತೋರುವುದು ಯಾವುದೋ ಅದೇ ಮನಸ್ಸು. ಮನಸ್ಸಿಗೂ ಪ್ರಾಣಕ್ಕೂ ಮೂಲಸ್ಥಾನ ಒಂದೇ ಎಂಬ ಅವರ ಮಾತಿನಲ್ಲಿ ಮನಸ್ಸೇ ಈ ಸಚ್ಚಿದಾನಂದಕ್ಕಿರುವ ಮಹಾಮಾರ್ಗ ಎಂಬ ಸೂಚನೆಯಿದೆ.

ನಾನು ಯಾರು ಎಂಬ ಪ್ರಶ್ನೆಯ ಅಂತ್ಯದಲ್ಲಿ ದೊರೆಯುವ ಬೆಳಕಿನ ಬಿಂಬ ಯಾವುದೆಂಬುದನ್ನು ಶ್ರೀರಮಣಮಹರ್ಷಿಗಳು ಸೊಗಸಾಗಿ ವಿವರಿಸುತ್ತಾರೆ: ನಾನು ಯಾರು ಎಂಬ ವಿಚಾರದಿಂದಲೇ ಮನಸ್ಸು ಲಯವಾಗುತ್ತದೆ. ನಾನೆಂಬ ಸಂಕಲ್ಪವು ಇತರ ಸಂಕಲ್ಪಗಳನ್ನೆಲ್ಲಾ ನಾಶಮಾಡಿ ಶವವನ್ನು ಸುಟ್ಟ ಕಟ್ಟಿಗೆಯಂತೆ ಕಡೆಗೆ ತಾನೂ ನಾಶವಾಗುತ್ತದೆ... ನಾನು ಯಾರು ಎಂದು ಪ್ರಶ್ನೆ ಮಾಡಿದಲ್ಲಿ ಮನಸ್ಸು ತನ್ನ ಹುಟ್ಟಿದ ಸ್ಥಳಕ್ಕೇ ಮರಳಿ, ಹುಟ್ಟಿದ ಸಂಕಲ್ಪವೂ ಲಯವಾಗಿ ಹೋಗುವುದು... ಮನಸ್ಸನ್ನು ಹೊರಗೆ ಹೋಗಗೊಡಿಸದೆ ಹೃದಯದಲ್ಲಿ ನಿಲ್ಲಿಸಿಕೊಳ್ಳುವುದಕ್ಕೇ ಅಂತರ್ಮುಖ ಎಂದು ಹೆಸರು. ಹೀಗೆ ಮಾಡಿದಾಗ ಸಂಕಲ್ಪ ವಿಕಲ್ಪಗಳಿಗೆಲ್ಲಾ ಮೂಲವಾದ 'ನಾನು’ ಎಂಬುದು ಹೋಗಿ ಯಾವಾಗಲೂ ಇರುವ ತಾನು ಮಾತ್ರ ಪ್ರಕಾಶಿಸುವುದು. ನಾನು ಎಂಬ ಸಂಕಲ್ಪವು ಸ್ವಲ್ಪವಾದರೂ ಇಲ್ಲದ ಸ್ಥಿತಿಯೇ ಸ್ವಸ್ವರೂಪವಾಗುತ್ತದೆ. ಅದೇ ಮೌನವೆಂದು ಕರೆಯಲ್ಪಡುವುದು. ಈ ರೀತಿಯಾಗಿ ಸುಮ್ಮನೆ ಇರುವುದಕ್ಕೇ ಜ್ಞಾನದೃಷ್ಟಿ ಎಂದು ಹೆಸರು, ಹೀಗೆನ್ನುವ ಮಹರ್ಷಿಗಳು ಸತ್ಯವಾದುದು ಆತ್ಮಸ್ವರೂಪ ಒಂದೇ ಎಂಬ ಉಪನಿಷತ್ ಸಾರವನ್ನು ಸರಳವಾಗಿ ಪ್ರತಿಪಾದಿಸುತ್ತಾರೆ.

'ನೀನು ಮೋಕ್ಷಕ್ಕೆ ಹೋಗುವಿಯೋ?’ ಎಂದು ಗುರು ವ್ಯಾಸತೀರ್ಥರು ಕನಕದಾಸರನ್ನು ಕೇಳಿದ, ’ನಾನು ಹೋದರೆ ಹೋದೇನು’ ಎಂದು ಕನಕದಾಸರು ಉತ್ತರಿಸಿದ ಪ್ರಸಿದ್ಧ ದೃಷ್ಟಾಂತವೂ ನಮಗೆ ಹೇಳುವುದು ಇದೇ ವಿಚಾರವನ್ನು. ನೀವು ನಿಮ್ಮ ಮನಸ್ಸನ್ನು ಮೀರಿದಾಗಲೇ ನಿಮ್ಮ ಅಹಂಕಾರವನ್ನು ಜಯಿಸಿ ಮುಂದೆ ಸಾಗುತ್ತೀರಿ. ಆಗಲೇ ನಿಮ್ಮ ಬಗೆಗಿನ ಸತ್ಯದ ದರ್ಶನವಾಗುತ್ತದೆ. ನೀವು ಚಿತ್ರಿಸಿಕೊಂಡ ವ್ಯಕ್ತಿತ್ವಕ್ಕೂ ವಾಸ್ತವದಲ್ಲಿ ನೀವಿರುವ ರೀತಿಗೂ ಅಗಾಧವಾದ ವ್ಯತ್ಯಾಸವಿದೆ ಎಂಬುದನ್ನು ಮನಗಾಣುತ್ತೀರಿ. ನಿಮ್ಮ ಅಹಂ ಚಿತ್ರಿಸಿದ ನಿಮ್ಮ ಚಿತ್ರದಲ್ಲಿ ನಿಮ್ಮ ದೇಹ ಮತ್ತು ಮನಸ್ಸುಗಳೆರಡೂ ಇಲ್ಲವೆಂಬುದು ನಿಮ್ಮ ಅರಿವಿಗೆ ಬರುತ್ತದೆ ಎನ್ನುತ್ತಾರೆ ಓಶೋ.

ದುರದೃಷ್ಟವಶಾತ್, ಸ್ವಸ್ಥಾನಪರಿಜ್ಞಾನದ ಕೊರತೆಯೇ ಆತ್ಮಸಂತೋಷವನ್ನು ಸಾಧಿಸುವಲ್ಲಿ ಬಹುಮಂದಿಗಿರುವ ದೊಡ್ಡ ಅಡ್ಡಿ. ತಮ್ಮ ವೃತ್ತಿ, ಆದಾಯ, ಸಾಮಾಜಿಕ ಸ್ಥಾನಮಾನಗಳೆಂಬ ಮಿಥ್ಯಾ ಅಸ್ಮಿತೆಗಳೇ ಅವರನ್ನು ಸದಾಕಾಲ ಸುತ್ತುವರಿದಿರುವುದರಿಂದ ನಿಜಕ್ಕೂ ತಾವೇನು, ತಮ್ಮ ಸ್ಥಾನಮಾನವೇನು ಎಂಬ ಅರಿವು ಅವರಲ್ಲಿ ಬೆಳಗುವುದೇ ಇಲ್ಲ. 'ಯಾರೂ ಅವರವರ ಅಳತೆ ಮೀರಿ ಉದ್ಘಾಟಿಸಿಕೊಳ್ಳಬಾರದು. ಇದು ಯತಾರ್ಥವಾಗಿ ತನ್ನನ್ನು ತಾನು ಸಣ್ಣದು ಮಾಡಿಕೊಂಡಹಾಗೆ’ ಎನ್ನುತ್ತಾರೆ ಯಕ್ಷಗಾನದ ಮೇರುಪುರುಷ ದಿ| ಶೇಣಿ ಗೋಪಾಲಕೃಷ್ಣ ಭಟ್ಟರು. ಅವರು ತಮ್ಮ ಆತ್ಮಕಥೆಯಲ್ಲಿ ಒಂದೆಡೆ ದಾಖಲಿಸುವ ವಿಚಾರ ಮಾರ್ಮಿಕವೂ ಚಿಂತನಾರ್ಹವೂ ಆಗಿದೆ: ಎಷ್ಟೋ ಸಲ ತಮ್ಮನ್ನು ತಮ್ಮ ವಾಸ್ತವಿಕತೆಯ ದೃಷ್ಟಿಯಿಂದ ನೋಡಿಕೊಳ್ಳದೆ ಸಭಾಮರ್ಯಾದೆಗಾಗಿಯೋ, ಭಾಷಾ ಮರ್ಯಾದೆಗಾಗಿಯೋ ಅಭಿನಂದನಕಾರರು ಆಡುವ ಮಾತಿನಿಂದಲೂ, ಮಾನಪತ್ರಗಳ ಒಕ್ಕಣೆಗಳಿಂದಲೂ ಕೆಲವರು ಪ್ರಭಾವಿತರಾಗಿ ತನ್ನ ವ್ಯಕ್ತಿತ್ವಕ್ಕೆ ಅಳತೆಗೋಲಾಗಿ ಮಾಡಿಕೊಳ್ಳುವುದುಂಟು. ಇಂತಹವರು ತಮ್ಮನ್ನು ತಮ್ಮ ಕಲ್ಪನೆಯ ಮಟ್ಟದಿಂದ ಇತರರೂ ಗುರುತಿಸಬೇಕೆಂದು ಬಯಸಿ, ಕೆಲವೊಮ್ಮೆ ಹಾಗಾಗದಿದ್ದಾಗ ಅತೃಪ್ತರಾಗುವುದುಂಟು.

ತಮ್ಮ ಬದುಕೆಲ್ಲವೂ ಸತ್ಯಾನ್ವೇಷಣೆಯ ಪ್ರಯೋಗಶಾಲೆಯೆಂದರು ಮಹಾತ್ಮ ಗಾಂಧೀಜಿ. ಅವರು ತಮ್ಮ ಆತ್ಮಚರಿತ್ರೆಯನ್ನು 'ಮೈ ಎಕ್ಸ್‌ಪರಿಮೆಂಟ್ ವಿದ್ ಟ್ರುಥ್’ ಎಂದೇ ಕರೆದರು. ಸತ್ಯಶೋಧಕ ಧೂಳುಕಣಕ್ಕಿಂತ ಹೆಚ್ಚು ನಮ್ರನಾಗಿರಬೇಕು. ಲೋಕವು ಧೂಳಿನ ಕಣವನ್ನು ಕಾಲ ಕೆಳಗೆ ತುಳಿಯುತ್ತದೆ. ಆದರೆ ಸತ್ಯಶೋಧಕ ಆ ಧೂಳಿನ ಕಣದಿಂದಲೂ ತುಳಿಸಿಕೊಳ್ಳುವಷ್ಟು ನಮ್ರನಾಗಿರಬೇಕು. ಆಗ ಮಾತ್ರ ಅವನಿಗೆ ಸತ್ಯದ ಕಿರುನೋಟ ಲಭಿಸೀತು ಎಂದು ತಮ್ಮ ಆತ್ಮಕಥೆಯ ಮುನ್ನುಡಿಯಲ್ಲಿ ಹೇಳಿದ್ದಾರೆ ಗಾಂಧೀಜಿ.

ಬದುಕಿನ ಉದ್ದೇಶ ಮತ್ತು ಅದರ ಸಾಧನೆಗಿರುವ ರಾಜಮಾರ್ಗವನ್ನು ಮಹಾಭಾರತದಷ್ಟು ಸರಳವೂ ನೇರವೂ ಆಗಿ ಇನ್ನೆಲ್ಲೂ ಹೇಳಿಲ್ಲವೇನೋ?
ಆಹಾರಾರ್ಥಂ ಕರ್ಮ ಕುರ್ಯಾದ ನಿಂದ್ಯಂ
ಕುರ್ಯಾದಾಹಾರಂ ಪ್ರಾಣ ಸಂಧಾರಣಾರ್ಥಂ|
ಪ್ರಾಣಾಃ ಸಂಧಾರ್ಯಾಃ ತತ್ವ ವಿಜ್ಞಾನ ಹೇತೋಃ
ತತ್ತ್ವಂ ವಿಜ್ಞೇಯಂ ಯೇನ ಭೂಯೋ ನ ಜನ್ಮ||
(ಆಹಾರ ಸಂಪಾದನೆಗಾಗಿ ನಿಂದಿತವಲ್ಲದ ಕರ್ಮವನ್ನು ಮಾಡಬೇಕು. ಪ್ರಾಣಧಾರಣೆಗಾಗಿ ಆಹಾರವನ್ನು ಸೇವಿಸಬೇಕು. ತತ್ವವನ್ನರಿಯುವುದಕ್ಕಾಗಿ ಪ್ರಾಣವನ್ನು ಉಳಿಸಿಕೊಳ್ಳಬೇಕು. ಪುನರ್ಜನ್ಮವಾಗಬಾರದೆಂದು ತತ್ತ್ವವನ್ನು ತಿಳಿಯಬೇಕು).
ಜಗತ್ತಿನ ಎಲ್ಲ ಕ್ಷೆಭೆಗಳ ಮೂಲ ಜನರಿಗಿರುವ ಅಸ್ಮಿತೆಯ ಬಿಕ್ಕಟ್ಟು (ಐಡೆಂಟಿಟಿ ಕ್ರೈಸಿಸ್). ಜಾತಿ, ಧರ್ಮ, ಆಸ್ತಿ, ಅಂತಸ್ತು, ಕೀರ್ತಿ ಇತ್ಯಾದಿ ಯಾವುದೇ ಅಸ್ಮಿತೆಗಳ ಬಾಲ ಹಿಡಿದರೂ ಮನುಷ್ಯನಿಗೆ ಸಂತೃಪ್ತಿ ಇಲ್ಲ. ವಾಸ್ತವವಾಗಿ ಅವು ಯಾವುವೂ ತನ್ನವಲ್ಲ ಎಂಬ ಸರಳ ಸತ್ಯವನ್ನು ಆತ ಅರ್ಥ ಮಾಡಿಕೊಂಡರೆ ಅವುಗಳ ಹೆಸರಿನಲ್ಲಿ ಪ್ರತಿದಿನ ಕಲಹ ಮಾಡುವ ಪ್ರಮೇಯವೇ ಬರುವುದಿಲ್ಲ. ಜಾತಿ-ಧರ್ಮ-ಅಧಿಕಾರಗಳ ಹೆಸರಿನಲ್ಲಿ ಜನರ, ಪ್ರಾಂತ್ಯಗಳ, ದೇಶಗಳ ನಡುವೆ ನಡೆಯುತ್ತಿರುವ ಕದನಗಳಿಗೆ ಆತ್ಮಶೋಧನೆಯ ಸೂತ್ರದಲ್ಲಿ ಪರಿಹಾರವಿದೆಯೇ ಎಂಬ ಜಿಜ್ಞಾಸೆಯೇ ನಮ್ಮನ್ನು ರೋಮಾಂಚನಗೊಳಿಸುತ್ತದೆ. ’ನಾನು ಯಾರು’ ಎಂಬ ಪ್ರಶ್ನೆ ಅಂತಿಮವಾಗಿ ವಿಶ್ವಶಾಂತಿಯೆಡೆಗೆ ನಮ್ಮನ್ನೆಲ್ಲ ಮುನ್ನಡೆಸಬಲ್ಲುದಾದರೆ ಅದಕ್ಕಿಂದ ದೊಡ್ಡ ಸಾರ್ಥಕತೆ ಇನ್ನೇನಿದೆ?
(ನೆರವು: ವಿದ್ವಾನ್ ಹೆಚ್. ಎಸ್. ಬಾಲಕೃಷ್ಣ)