ಭಾನುವಾರ, ನವೆಂಬರ್ 17, 2019

ನವಯುಗದ ಮಾಧ್ಯಮಗಳ ಮುಂದಿರುವ ಅವಕಾಶಗಳು ಮತ್ತು ಸವಾಲುಗಳು

ರಾಷ್ಟ್ರೀಯ ಪತ್ರಿಕಾ ದಿನದ ಅಂಗವಾಗಿ ದಿನಾಂಕ: 17-11-2019ರಂದು ಬೆಂಗಳೂರಿನ 'ಮಿಥಿಕ್ ಸೊಸೈಟಿ' ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೀಡಿದ ಉಪನ್ಯಾಸದ ಸಂಕ್ಷಿಪ್ತ ರೂಪ

ಪ್ರೊ. ಕೆ. ಆರ್. ವೇಣುಗೋಪಾಲ್, ಶ್ರೀ ದು.ಗು. ಲಕ್ಷ್ಮಣ ಅವರೊಂದಿಗೆ
ಎಲ್ಲರಿಗೂ ನಮಸ್ಕಾರ. ಇಲ್ಲಿ ಕುಳಿತಿರುವ ಬಹುತೇಕರು ತುಂಬ ಹಿರಿಯರಿದ್ದೀರಿ. ನಿಮ್ಮ ಅನುಭವಕ್ಕಿಂತಲೂ ನನ್ನ ವಯಸ್ಸು ತುಂಬ ಸಣ್ಣದೆಂದು ನಾನು ತಿಳಿದಿದ್ದೇನೆ. ಈ ಅಳುಕಿನ ಜತೆಗೆ ನಿಮ್ಮೆದುರು ಮಾತನಾಡುವುದಕ್ಕಿರುವ ಸಣ್ಣ ಧೈರ್ಯವೆಂದರೆ ನೀವು ಹಿರಿಯರಿದ್ದೀರಿ ಎಂಬುದೇ ಆಗಿದೆ. ಏಕೆಂದರೆ ತಪ್ಪಾಗಿರುವುದನ್ನು ಹಿರಿಯರು ತಿದ್ದಬಲ್ಲರು.

ಇರಲಿ, ಇಂದು ನಾನು ಮಾತಾಡಬೇಕಿರುವ ವಿಷಯಕ್ಕೆ ಬರೋಣ. ಮಾಧ್ಯಮಗಳ ಬಗ್ಗೆ ಮಾತನಾಡುವುದೆಂದರೆ ಡಿಜಿಟಲ್ ಮಾಧ್ಯಮಗಳ ಬಗ್ಗೆ ಮಾತನಾಡುವುದೆಂದೇ ಆಗಿದೆ. ಏಕೆಂದರೆ ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಎಂಬಿತ್ಯಾದಿ ಪ್ರತ್ಯೇಕ ಅಸ್ಮಿತೆಗಳು ಇವತ್ತು ಉಳಿದುಕೊಂಡಿಲ್ಲ. We are in the age of media convergence.  ನಾವು ಮಾಧ್ಯಮ ಸಂಗಮದ ಕಾಲದಲ್ಲಿದ್ದೇವೆ. ಪತ್ರಿಕೆ, ಟಿವಿ ಎಲ್ಲವೂ ಡಿಜಿಟಲ್ ಆಗಿವೆ. ಆನ್‌ಲೈನ್ ಆವೃತ್ತಿ ಇಲ್ಲದ ಪತ್ರಿಕೆ ಇಲ್ಲ. ಮುದ್ರಣಕ್ಕೆ ಸೀಮಿತವಾಗಿದ್ದ ಪತ್ರಿಕೆಗಳಲ್ಲಿ ಇವತ್ತು ಆಡಿಯೋ ಇದೆ, ವೀಡಿಯೋ ಇದೆ. ಅತ್ತ ಟಿವಿ ಚಾನೆಲ್‌ಗಳು ತಮ್ಮ ಜಾಲತಾಣಗಳಲ್ಲಿ ಪಠ್ಯ ರೂಪದಲ್ಲೂ ಸುದ್ದಿ ಪ್ರಕಟಿಸುತ್ತವೆ. ಎಲ್ಲವೂ ಒಟ್ಟಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೂಪಗಳಲ್ಲಿ, ವಿವಿಧ ವೇಷಗಳಲ್ಲಿ ಹರಿದಾಡುತ್ತವೆ. ಹೀಗಾಗಿ ಸೋಷಿಯಲ್ ಮೀಡಿಯಾವನ್ನೇ ನಾನಿಲ್ಲಿ 'ನವಯುಗದ ಮಾಧ್ಯಮ'ಗಳೆಂದು ವ್ಯಾಖ್ಯಾನಿಸಿಕೊಂಡಿದ್ದೇನೆ.

ಜಗತ್ತಿನ ಸುಮಾರು 770 ಕೋಟಿ ಜನಸಂಖ್ಯೆಯಲ್ಲಿ 402 ಕೋಟಿಯಷ್ಟು - ಅಂದರೆ ಶೇ. 53 - ಇಂಟರ್ನೆಟ್ ಬಳಕೆದಾರರಿದ್ದಾರೆ. ಸುಮಾರು 319 ಕೋಟಿ ಮಂದಿ (ಶೇ. 42) ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರು.

ಭಾರತದ ಪ್ರಸಕ್ತ ಜನಸಂಖ್ಯೆ 137 ಕೋಟಿ. ಇವರಲ್ಲಿ ಅರ್ಧದಷ್ಟು ಮಂದಿ ಇಂಟರ್ನೆಟ್ ಬಳಕೆದಾರರು. ಸುಮಾರು 35 ಕೋಟಿ ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರು. ಭಾರತದಲ್ಲಿ ಸುಮಾರು 40 ಕೋಟಿ ಮಂದಿ ವಾಟ್ಸಾಪನ್ನೂ, 27 ಕೋಟಿ ಮಂದಿ ಫೇಸ್ಬುಕ್ಕನ್ನೂ, ತಲಾ 8 ಕೋಟಿ ಮಂದಿ ಇನ್‌ಸ್ಟಾಗ್ರಾಮನ್ನೂ, ಟ್ವಿಟರನ್ನೂ ಬಳಸುತ್ತಾರೆ. ಸಮೀಕ್ಷೆಗಳ ಪ್ರಕಾರ ಭಾರತೀಯ ಇಂಟರ್ನೆಟ್ ಬಳಕೆದಾರರು ದಿನಕ್ಕೆ ಸರಾಸರಿ 2.4 ಗಂಟೆಯಷ್ಟು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆ.

ಇಂಟರ್ನೆಟ್ ಇಷ್ಟೊಂದು ಕ್ಷಿಪ್ರವಾಗಿ ಭಾರತದಲ್ಲಿ ಪಸರಿಸಲು ಪ್ರಮುಖ ಕಾರಣ ನಮ್ಮಲ್ಲಿ ದೊರೆಯುತ್ತಿರುವ ಅಗ್ಗದ ಡೇಟಾ. ಒಂದು ಜಿಬಿ ಡೇಟಾದ ದರ ಸ್ವಿಟ್ಜರ್ಲೆಂಡಿನಲ್ಲಿ ರೂ. 1425-00, ಅಮೇರಿಕದಲ್ಲಿ ರೂ. 872-00, ಇಂಗ್ಲೆಂಡಿನಲ್ಲಿ ರೂ. 470-00; ಆದರೆ ಭಾರತದಲ್ಲಿ ಕೇವಲ ರೂ. 18-00.

ಜನರು ಡಿಜಿಟಲ್/ ಸಾಮಾಜಿಕ ಮಾಧ್ಯಮಗಳನ್ನು ಪರ್ಯಾಯ ಮಾಧ್ಯಮಗಳನ್ನಾಗಿ ಕಂಡುಕೊಳ್ಳಲು ಇರುವ ಇನ್ನೊಂದು ಪ್ರಮುಖ ಕಾರಣ ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಅವರ ಕಳೆದುಕೊಂಡಿರುವ ವಿಶ್ವಾಸ. ಮುಖ್ಯವಾಹಿನಿಯ ಮಾಧ್ಯಮಗಳು ವಾಣಿಜ್ಯೀಕರಣದ ಹಿಂದೆ ಬಿದ್ದಿರುವುದು, ಹೆಚ್ಚಿನ ಓದುಗರನ್ನು/ ಪ್ರೇಕ್ಷಕರನ್ನು ಸೆಳೆಯುವ ಮತ್ತು ಆ ಮೂಲಕ ಜಾಹೀರಾತು ಆದಾಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಅಪರಾಧ, ಹಿಂಸೆಗಳನ್ನು ವೈಭವೀಕರಿಸುತ್ತಿರುವುದು, ಅತಿಯಾದ ಸ್ಪರ್ಧೆ, ಧಾವಂತ,  ಕ್ಷುಲ್ಲಕ ವಿಚಾರಗಳನ್ನು ಮಹತ್ವದ ಸುದ್ದಿಗಳೆಂಬಂತೆ ಬಿಂಬಿಸುವುದು, ಬದ್ಧತೆಯ ಕೊರತೆ, ಬಹುತೇಕ ಮಾಧ್ಯಮಗಳೂ ಒಂದಲ್ಲ ಒಂದು ರಾಜಕೀಯ ಅಜೆಂಡಾ ಇಟ್ಟುಕೊಂಡಿರುವುದು, ಮಾಧ್ಯಮ ಮಾಲೀಕತ್ವದಲ್ಲಿ ಹೆಚ್ಚಿರುವ ಏಕಸ್ವಾಮ್ಯತೆ- ಇವೆಲ್ಲವನ್ನೂ ಈಗ ಜನಸಾಮಾನ್ಯರೂ ಅರ್ಥ ಮಾಡಿಕೊಂಡಿದ್ದಾರೆ. ಅದಕ್ಕೇ ಅವರಿಗೆ ಮಾಧ್ಯಮಗಳ ಮೇಲೆ ವಿಶ್ವಾಸ ಕುಸಿದಿದೆ.

ಮಾಧ್ಯಮಗಳಲ್ಲಿ ಪ್ರಕಟವಾದ ವಿಚಾರಗಳನ್ನೂ ತಮ್ಮ ಸ್ನೇಹಿತರಲ್ಲಿ ಕೇಳಿ ಖಚಿತಪಡಿಸಿಕೊಳ್ಳುವ ಮಟ್ಟಿಗೆ ಜನ ಬದಲಾಗಿದ್ದಾರೆ. ಹಿಂದೆ ಜನರ ಬಾಯಲ್ಲಿ ಕೇಳಿದ್ದನ್ನು ಮಾಧ್ಯಮಗಳ ಮೂಲಕ ಖಚಿತಪಡಿಸಿಕೊಳ್ಳುವ ಪರಿಪಾಠ ಇತ್ತು; ಇಂದು ಮಾಧ್ಯಮಗಳಲ್ಲಿ ಬಂದುದನ್ನು ತಮ್ಮ ಪರಿಚಯದವರಲ್ಲಿ ಕೇಳಿ ಖಚಿತಪಡಿಸಿಕೊಳ್ಳುವ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ ಎಂಬುದು ವಿಪರ್ಯಾಸ.

ಇಂತಹ ಪರಿಸ್ಥಿತಿಯಲ್ಲಿ ಆನ್‌ಲೈನ್ ಮಾಧ್ಯಮ ಜನರಿಗೆ ಪರ್ಯಾಯ ಸಂವಹನ ವೇದಿಕೆಯಾಗಿ ಒದಗಿಬಂದಿದೆ. ಇದು ನಾಗರಿಕ ಪತ್ರಿಕೋದ್ಯಮ - Citizen Journalism - ನ ಸುವರ್ಣಯುಗ. ನಾವು ನೀಡಿದ್ದನ್ನು ನೀವು ತೆಗೆದುಕೊಳ್ಳಿ ಎಂಬ ಮುಖ್ಯವಾಹಿನಿಯ ಮಾಧ್ಯಮಗಳ ಉಡಾಫೆಗೆ ಇಲ್ಲಿ ಎಡೆಯಿಲ್ಲ. ಇಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶ ಇದೆ. ಇಲ್ಲಿ ಸಂಪಾದಕರಿಲ್ಲ. ಸುದ್ದಿಯನ್ನೋ ಲೇಖನವನ್ನೋ ಹೀಗೆಯೇ ಬರೆಯಬೇಕು ಎಂಬ ಕಟ್ಟುಪಾಡು ಇಲ್ಲ. ಯಾರು ಬೇಕಾದರೂ ಮಾತನಾಡಬಹುದು.  Consumers of news have become producers of news. ಧ್ವನಿಯೇ ಇಲ್ಲದವರಿಗೆ ಸಾಮಾಜಿಕ ಮಾಧ್ಯಮಗಳು ಧ್ವನಿ ನೀಡಿವೆ. ಮುಖ್ಯವಾಹಿನಿ ಮಾಧ್ಯಮಗಳ ಅಜೆಂಡಾಗಳು ಇಲ್ಲಿ ಕ್ಷಣಗಳಲ್ಲಿ ಬಯಲಾಗುತ್ತವೆ. ಇಲ್ಲಿ ಸುಳ್ಳು ಹೇಳುವುದು ಸುಲಭವಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರಮೋಚ್ಛ ಸ್ಥಿತಿ ಇದು.

ಪ್ರಧಾನಮಂತ್ರಿ, ಮುಖ್ಯಮಂತ್ರಿ, ಇನ್ನೆಲ್ಲ ನಾಯಕರು ಫೇಸ್ಬುಕ್, ಟ್ವಿಟರ್‌ಗಳಲ್ಲಿ ಸಾಮಾನ್ಯ ನಾಗರಿಕರಿಗೆ ಎದುರಾಗುತ್ತಾರೆ. ಜನ ಸಾಮಾನ್ಯರೂ ಅವರನ್ನು ಟ್ಯಾಗ್ ಮಾಡಿ ಕಮೆಂಟ್ ಮಾಡಬಹುದು. ಆ ಮಟ್ಟಿನ ನಮನೀಯತೆ ಸಾಮಾಜಿಕ ಮಾಧ್ಯಮಗಳಲ್ಲಿದೆ. ಸಂವಹನ ಪ್ರಜಾಪ್ರಭುತ್ವದ ಅತ್ಯುನ್ನತ ಸ್ಥಿತಿಯೂ ಇದೇ ಆಗಿದೆ. ಸಣ್ಣಪುಟ್ಟ ಸಮಸ್ಯೆಗಳನ್ನೂ ತುಂಬ ಕ್ಷಿಪ್ರವಾಗಿ ಸಂಬಂಧಿಸಿದವರ ಗಮನಕ್ಕೆ ತರುವುದಕ್ಕೆ ಸಾಮಾಜಿಕ ಮಾಧ್ಯಮಗಳು ಸಹಕಾರಿ. ಒಂದರ್ಥದಲ್ಲಿ ಜಾಗೃತಿ ಹಾಗೂ ಅಭಿವೃದ್ಧಿಯ ಅತ್ಯುತ್ತಮ ವೇಗವರ್ಧಕಗಳು. ಇವುಗಳಿಗೆ ಭೌಗೋಳಿಕ ಸೀಮೆಗಳೂ ಇಲ್ಲದಿರುವುದರಿಂದ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಮಂದಿಯೂ ಒಂದು ಕರೆಗೆ ಓಗೊಟ್ಟು ಸಾಮೂಹಿಕ ಆಂದೋಲನಗಳಲ್ಲಿ ಸೇರಿಕೊಳ್ಳುವಂತೆ ಮಾಡುವುದರಲ್ಲಿ ಇವುಗಳ ಪಾತ್ರ ತುಂಬ ದೊಡ್ಡದು. ಅನೇಕ ಬೃಹತ್ ಆಂದೋಲನಗಳು ಸಾಮಾಜಿಕ ಮಾಧ್ಯಮಗಳ ನೆರವಿನಿಂದಲೇ ನಡೆದಿರುವ ಜೀವಂತ ಉದಾಹರಣೆಗಳು ನಮ್ಮ ಮುಂದೆ ಇವೆ.

ಇವೆಲ್ಲ ಹೊಸ ಕಾಲದ ಮಾಧ್ಯಮಗಳ ಅವಕಾಶಗಳೆಂದು ತಿಳಿದುಕೊಂಡರೆ, ಇವುಗಳ ಮುಂದಿರುವ ಸವಾಲುಗಳು ನೂರಾರು. ಮುಖ್ಯವಾಗಿ ನಿಯಂತ್ರಣದ ಕೊರತೆ. ಇಲ್ಲಿ ಸಂಪಾದಕರಿಲ್ಲ ಎಂಬುದು ಹೇಗೆ ಅನುಕೂಲವೋ, ಹಾಗೇ ಅನಾನುಕೂಲವೂ ಹೌದು. ಪತ್ರಿಕೆ, ಟಿವಿಗಳಲ್ಲಿ ಯಾವುದನ್ನು, ಎಷ್ಟು, ಹೇಗೆ ಪ್ರಕಟಿಸಬೇಕು ಎಂಬುದನ್ನು ನಿರ್ಧರಿಸಲು ವಿವಿಧ ಮಂದಿಯಿದ್ದಾರೆ. ಇಲ್ಲಿ ಅವರಿಲ್ಲ- ಗೇಟ್ ಕೀಪಿಂಗ್ ಇಲ್ಲ- ಎಂಬುದೇ ದೊಡ್ಡ ಮಿತಿ. ಇಲ್ಲಿ ಎಲ್ಲರೂ ಪತ್ರಕರ್ತರೇ. ಎಲ್ಲರೂ ಸುದ್ದಿಗಾರರೇ. ಹೀಗಾಗಿ ಯಾವುದು, ಎಷ್ಟು, ಹೇಗೆ ಪ್ರಕಟವಾಗಬೇಕು ಎಂದು ನಿರ್ಧರಿಸಲು ಯಾರೂ ಇಲ್ಲ. ಇದು ಎಷ್ಟೊಂದು ಅನಾಹುತಗಳಿಗೂ ಕಾರಣವಾಗುತ್ತದೆ ಎನ್ನುವುದನ್ನು ಸಾಮಾಜಿಕ ಮಾಧ್ಯಮಗಳ ಬಳಕೆದಾರರಾದ ನಾವು ಪ್ರತಿನಿತ್ಯ ಕಾಣುತ್ತಿದ್ದೇವೆ.

ಮಾಧ್ಯಮಗಳಿಗೆ ಪ್ರಮುಖವಾಗಿ ಬೇಕಾಗಿರುವ ವಸ್ತುನಿಷ್ಠತೆ, ಸ್ಪಷ್ಟತೆ, ನಿಖರತೆ, ಮರುಪರಿಶೀಲನೆ, ಪೂರ್ವಾಗ್ರಹಮುಕ್ತತೆ ಮುಂತಾದ ತತ್ತ್ವಗಳನ್ನು ಎಲ್ಲರೂ ಪತ್ರಕರ್ತರಾಗಿರುವ ಸನ್ನಿವೇಶದಲ್ಲಿ ಅನುಷ್ಠಾನಕ್ಕೆ ತರುವುದು ಕಡುಕಷ್ಟ.  ಇಲ್ಲಿ ವದಂತಿಗಳು, ಸುಳ್ಳುಸುದ್ದಿಗಳೇ ಜನಪ್ರಿಯ. ಸಾಮಾಜಿಕ ಮಾಧ್ಯಮಗಳು ಒಂದರ್ಥದಲ್ಲಿ ಸುಳ್ಳುಸುದ್ದಿಗಳ ಕಾರ್ಖಾನೆಗಳೇ ಆಗಿವೆ. ಕ್ಷಿಪ್ರತೆ ಎಂಬ ಗುಣ ಸಾಮಾಜಿಕ ಮಾಧ್ಯಮಗಳ ದೊಡ್ಡ ಸವಾಲೂ ಹೌದು. ಇಲ್ಲಿ ಒಳ್ಳೆಯದಕ್ಕಿಂತಲೂ ಕೆಟ್ಟದು ಬೇಗ ಹರಡುತ್ತದೆ- ಕಾಳ್ಗಿಚ್ಚಿನ ಹಾಗೆ. ಸಮಷ್ಟಿ ಹಿತದ ಚರ್ಚೆಗಳಿಗಿಂತಲೂ ವೈಯಕ್ತಿಕ ಕೆಸರೆರಚಾಟಗಳಲ್ಲಿ ಜನರಿಗೆ ಹೆಚ್ಚು ಆಸಕ್ತಿ.

ಇವನ್ನೆಲ್ಲ ನೋಡುತ್ತ ನೋಡುತ್ತ ಮುಖ್ಯವಾಹಿನಿಯ ಮಾಧ್ಯಮಗಳೂ ಸಾಮಾಜಿಕ ಮಾಧ್ಯಮಗಳ ಜಾಯಮಾನವನ್ನು ಬೆಳೆಸಿಕೊಳ್ಳುತ್ತಿವೆ. ತಮ್ಮ ಮೂಲ ರೂಪಗಳಲ್ಲಿ ಗಂಭೀರವಾಗಿರುವ ಪತ್ರಿಕೆ, ಚಾನೆಲ್‌ಗಳೂ ಸಾಮಾಜಿಕ ತಾಣಗಳಲ್ಲಿ ಬಾಲಿಶವಾಗಿ ವರ್ತಿಸುತ್ತಿರುವುದು ಇಂದಿನ ವಿದ್ಯಮಾನ. ಸೆಲೆಬ್ರಿಟಿಗಳ ಖಾಸಗಿ ಬದುಕಿನ ವಿಚಾರಗಳೇ ಅವರಿಗೆ ಪ್ರಮುಖ ಸುದ್ದಿಯಾಗುತ್ತಿವೆ. ಖಾಸಗಿಗೂ ಸಾರ್ವಜನಿಕವಾದುದಕ್ಕೂ ವ್ಯತ್ಯಾಸವೇ ಉಳಿದಿಲ್ಲ. ಎಲ್ಲವೂ ಬಟಾಬಯಲಲ್ಲೇ ನಡೆಯಬೇಕು ಎಂಬುದು ಮಾಧ್ಯಮಗಳ ಹೊಸ ನೀತಿ.

ಹೊಸ ಮಾಧ್ಯಮಗಳಿಂದ ಒಂದು ಬಗೆಯ ಮಾಹಿತಿ ಅತಿಸಾರ ಸೃಷ್ಟಿಯಾಗಿದೆ. ಎಲ್ಲ ಕಡೆಗಳಿಂದಲೂ ಬರುತ್ತಿರುವ ಭರಪೂರ ಮಾಹಿತಿಗಳಲ್ಲಿ ತಮಗೆ ಬೇಕಾದುದೇನು ಬೇಡದ್ದೇನು ಎಂದು ನಿರ್ಧರಿಸಿಕೊಳ್ಳಲಾಗದ ಸಂಕಷ್ಟ ಜನಸಾಮಾನ್ಯರನ್ನು ಕಾಡುತ್ತಿದೆ. ಅದರ ನಡುವೆ ಸುಳ್ಳುಪೊಳ್ಳುಗಳು ಸೇರಿಕೊಂಡಾಗಲಂತೂ ಜನರ ಪರಿಸ್ಥಿತಿ ಹೇಳತೀರದು. ಆಹಾರದ ಡಯೆಟ್ ಬಗ್ಗೆ ಮಾತ್ರ ಯೋಚಿಸುತ್ತಿದ್ದವರು ಇಂದು ಮೀಡಿಯಾ ಡಯೆಟ್ ಬಗ್ಗೆ ಯೋಚಿಸುವ ಸಂದರ್ಭ ಬಂದಿದೆ.

ಸಾಮಾಜಿಕ ತಾಣಗಳಲ್ಲಿ ನಾವು ಹಂಚಿಕೊಳ್ಳುತ್ತಿರುವ ಮಾಹಿತಿಗಳು ಎಲ್ಲಿ ಸಂಗ್ರಹವಾಗುತ್ತಿವೆ, ಅವು ಎಷ್ಟರಮಟ್ಟಿಗೆ ಸುರಕ್ಷಿತ ಎಂಬ ಚರ್ಚೆಗಳೂ ಈಗ ಮುನ್ನೆಲೆಗೆ ಬಂದಿವೆ. ಜನ ಡೇಟಾ ವಸಾಹತುಗಳ ಬಗ್ಗೆ ಎಚ್ಚರವಾಗತೊಡಗಿದ್ದಾರೆ. ದೇಶದ ಭದ್ರತೆ, ವೈಯಕ್ತಿಕ ಮಾಹಿತಿಗಳ ಗೌಪ್ಯತೆ, ಇವುಗಳ ಸುತ್ತಮುತ್ತ ಹರಡಿಕೊಂಡಿರುವ ಸೈಬರ್ ಅಪರಾಧ, ಮೋಸ-ವಂಚನೆಗಳು ಪರ್ಯಾಯ ಮಾಧ್ಯಮಗಳ ಕಡೆಗೂ ಜನ ಅಪನಂಬಿಕೆಯಿಂದ ನೋಡುವಂತೆ ಮಾಡಿವೆ.

ಒಟ್ಟಿನಲ್ಲಿ ಮಾಧ್ಯಮಗಳ ಜತೆಗಿನ ಒಡನಾಟ ಜನಸಾಮಾನ್ಯರಿಗೆ ಕತ್ತಿಯಂಚಿನ ನಡಿಗೆಯೇ ಆಗಿದೆ. ಈ ಒಟ್ಟಾರೆ ಪರಿಸ್ಥಿತಿಗೆ ಪರಿಹಾರ ಏನು ಎಂಬುದು ನಮ್ಮೆದುರಿನ ದೊಡ್ಡ ಪ್ರಶ್ನೆ. ಆ ಬಗ್ಗೆ ಮಾತನಾಡುವುದು ಇನ್ನೊಂದು ಸುದೀರ್ಘ ಚರ್ಚೆಯಾದೀತು. ಅದನ್ನು ಇನ್ನೊಮ್ಮೆ ಮಾಡೋಣ. ಧನ್ಯವಾದ.

- ಸಿಬಂತಿ ಪದ್ಮನಾಭ ಕೆ. ವಿ.