ಮಾಧ್ಯಮಶೋಧ (೭), ಹೊಸದಿಗಂತ, ೧೩.೧೦.೨೦೧೧
ಪೇಯ್ಡ್ ನ್ಯೂಸ್ (Paid News) ಅಥವಾ ಸುದ್ದಿಗೂ ಕಾಸು ಎಂಬ ಹೆಸರಿನ ಮಾಧ್ಯಮ ಭ್ರಷ್ಟಾಚಾರದ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಭಾರತೀಯ ಪತ್ರಿಕಾ ಮಂಡಳಿ ನೇಮಿಸಿದ್ದ ಉಪಸಮಿತಿಯ ವರದಿಗೆ ಕೊನೆಗೂ ಮೋಕ್ಷ ಪ್ರಾಪ್ತಿಯಾಗಿದೆ. ಕಳೆದೊಂದು ವರ್ಷದಿಂದ ಪತ್ರಿಕಾ ಮಂಡಳಿಯ ಸೇಫ್ ಲಾಕರ್‌ನಲ್ಲಿ ಮೌನವಾಗಿ ಬಚ್ಚಿಟ್ಟುಕೊಂಡಿದ್ದ ಈ ವರದಿ ಕೇಂದ್ರ ಮಾಹಿತಿ ಆಯೋಗದ ಚಾಟಿಯೇಟಿಗೆ ಬೆದರಿ ಅದು ನೀಡಿದ ಅಂತಿಮ ಗಡುವು ಅಕ್ಟೋಬರ್ ೧೦ರಂದು ಸಾರ್ವಜನಿಕರೆದುರು ತೆರೆದುಕೊಂಡಿದೆ.
ಅಂದಹಾಗೆ ಉಪಸಮಿತಿಯ ವರದಿ ಒಂದು ಬ್ರೇಕಿಂಗ್ ನ್ಯೂಸ್ ಏನೂ ಅಲ್ಲ. ಕಳೆದ ವರ್ಷ ಎಪ್ರಿಲ್ ತಿಂಗಳಿನಲ್ಲಿ ಸಮಿತಿಯು ಸಲ್ಲಿಸಿದ ವರದಿಯನ್ನು ಈವರೆಗೆ ಪತ್ರಿಕಾ ಮಂಡಳಿ ತನ್ನಲ್ಲೇ ಗೌಪ್ಯವಾಗಿ ಇಟ್ಟುಕೊಂಡಿದ್ದರೂ, ಅದು ಯಾವತ್ತೋ ಅಂತರ್ಜಾಲದ ಮೂಲಕ ಎಷ್ಟೋ ಮಂದಿಯನ್ನು ತಲುಪಿಯಾಗಿದೆ. ಅದೊಂಥರಾ ಓಪನ್ ಸೀಕ್ರೆಟ್. ಅಲ್ಲದೆ ಯಾರ‍್ಯಾರು ಪೇಯ್ಡ್ ನ್ಯೂಸ್ ದಂಧೆಗಳಲ್ಲಿ ತೊಡಗಿದ್ದಾರೆಂದು ಸ್ವತಃ ಮಾಧ್ಯಮಗಳಿಗೂ ಗೊತ್ತು, ಸಾಕಷ್ಟು ಸಾರ್ವಜನಿಕರಿಗೂ ಗೊತ್ತು. ಆದರೆ, ಪತ್ರಿಕಾ ಮಂಡಳಿ ತನ್ನ ಉಪಸಮಿತಿಯ ವರದಿಯನ್ನು ಬಹಿರಂಗಗೊಳಿಸುವುದರೊಂದಿಗೆ ಈಗ ಅದಕ್ಕೊಂದು ಅಧಿಕೃತತೆ ಲಭಿಸಿದೆ ಎಂಬುದು ಗಮನಿಸಬೇಕಾದ ವಿಷಯ.
ದುರಂತವೆಂದರೆ ಈ ಕೆಲಸವನ್ನೂ ಪತ್ರಿಕಾ ಮಂಡಳಿ ಮನಃಪೂರ್ವಕವಾಗಿ ಮಾಡಿಲ್ಲ. ಪೇಯ್ಡ್ ನ್ಯೂಸ್ ಕುರಿತ ವರದಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಾ ಮಂಡಳಿಯು, ಈ ವರದಿಯನ್ನು ಕೇಂದ್ರ ಮಾಹಿತಿ ಆಯೋಗದ ನಿರ್ದೇಶನದ ಮೇರೆಗೆ ಪ್ರಕಟಿಸಲಾಗುತ್ತಿದೆ... ಉಪಸಮಿತಿಯ ವರದಿಯನ್ನು ಮಂಡಳಿ ಅಂಗೀಕರಿಸಿಲ್ಲ; ಅಂತಿಮ ವರದಿ ತಯಾರಿಸುವಲ್ಲಿ ಅದನ್ನು ಆಧಾರವಾಗಿಟ್ಟುಕೊಂಡಿತ್ತು ಅಷ್ಟೇ ಎಂದು ತಿಪ್ಪೆ ಸಾರಿಸಿದೆ. ಅಲ್ಲಿಗೆ ಪತ್ರಿಕಾ ಮಂಡಳಿಯೂ ಎಂತಹ ಒತ್ತಡಗಳ ನಡುವೆ ಕೆಲಸ ಮಾಡುತ್ತಿದೆ ಎಂಬುದು ಅರ್ಥವಾಗುತ್ತದೆ. ಅಲ್ಲದೆ, ’ಹಲ್ಲಿಲ್ಲದ ಹಾವು’, ’ಕಾಗದದ ಹುಲಿ’ ಮತ್ತಿತರ ಅದರ ಅಭಿದಾನಗಳೂ ಮತ್ತೊಮ್ಮೆ ಅನ್ವರ್ಥವಾಗಿವೆ.
೨೦೦೯ರ ಮಹಾಚುನಾವಣೆ ಹಾಗೂ ಕೆಲವು ರಾಜ್ಯ ವಿಧಾನಸಭೆಗಳ ಚುನಾವಣೆಯ ಸಂದರ್ಭ ನಡೆದ ಪೇಯ್ಡ್ ನ್ಯೂಸ್ ಚಟುವಟಿಕೆಗಳ ಬಗ್ಗೆ ಚುನಾವಣಾ ಆಯೋಗ, ಅಖಿಲ ಭಾರತ ಸಂಪಾದಕರ ಮಂಡಳಿಯೂ ಸೇರಿದಂತೆ ಹಲವಾರು ಸಂಘಸಂಸ್ಥೆಗಳಿಂದ, ಹಿರಿಯ ಪತ್ರಕರ್ತರಿಂದ, ಸಾರ್ವಜನಿಕರಿಂದ ದೇಶವ್ಯಾಪಿ ಅಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ೨೦೦೯ರ ಜುಲೈ ತಿಂಗಳಲ್ಲಿ ಭಾರತೀಯ ಪತ್ರಿಕಾ ಮಂಡಳಿಯು ತನ್ನ ಸದಸ್ಯರಲ್ಲೇ ಇಬ್ಬರನ್ನು (ಪರಂಜಯ್ ಗುಹಾ ಠಾಕುರ್ತಾ ಹಾಗೂ ಕೆ. ಶ್ರೀನಿವಾಸ ರೆಡ್ಡಿ) ಆಯ್ದುಕೊಂಡು ಉಪಸಮಿತಿಯೊಂದನ್ನು ರಚಿಸಿತು. ಸುದ್ದಿಗೂ ಕಾಸು ಪ್ರವೃತ್ತಿಯ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸುವ ಬಗ್ಗೆ ಅವರನ್ನು ಕೇಳಿಕೊಂಡಿತು. ಅವರಾದರೋ ಅತ್ಯಂತ ಶ್ರದ್ಧೆಯಿಂದ ಈ ಕೆಲಸ ಮಾಡಿ ಮುಗಿಸಿದರು. ೨೦೧೦ ಎಪ್ರಿಲ್‌ನಲ್ಲಿ ತಮ್ಮ ವರದಿಯನ್ನೂ ಸಲ್ಲಿಸಿದರು. ಆದರೆ ೭೧ ಪುಟಗಳ ಆ ವರದಿ ಮಂಡಳಿಯನ್ನೇ ಚಿಂತೆಗೀಡು ಮಾಡಿರಬೇಕು. ಅದನ್ನು ಹಾಗೆಯೇ ಸ್ವೀಕರಿಸುವ ಅಥವಾ ಬಹಿರಂಗಪಡಿಸುವ ಎಂಟೆದೆ ಮಂಡಳಿಗಂತೂ ಇದ್ದಿರಲಿಲ್ಲ. ಅಂದರೆ ಅದರಲ್ಲಿದ್ದ ಹಲವಾರು ಖ್ಯಾತನಾಮ ಪತ್ರಿಕೆಗಳ ಹೆಸರುಗಳನ್ನು ಸಾರ್ವಜನಿಕಗೊಳಿಸುವುದು ಮಂಡಳಿಗೆ ಬೇಕಿರಲಿಲ್ಲ. ಆಗ ಅದರ ಮುಂದಿದ್ದ ಸುಲಭದ ದಾರಿಯೆಂದರೆ ಆ ವರದಿಯನ್ನು ಅಧ್ಯಯನ ಮಾಡಲು ಇನ್ನೊಂದು ಸಮಿತಿಯನ್ನು ನೇಮಿಸುವುದು!
ಪತ್ರಿಕಾ ಮಂಡಳಿ ಮತ್ತೆ ೧೨ ಮಂದಿ ಸದಸ್ಯರ ಇನ್ನೊಂದು ಸಮಿತಿ ರಚಿಸಿತು. ಆ ಸಮಿತಿಯು ಉಪಸಮಿತಿ ನೀಡಿದ ವರದಿಯನ್ನು ಅರೆದು ಕುಡಿದು ೧೩ ಪುಟಗಳ ’ಅಂತಿಮ ವರದಿ’ಯನ್ನು ಭಟ್ಟಿಯಿಳಿಸಿತು. ಆ ವರದಿಯೊಂದಿಗೆ ಒಂದು ಅಡಿಟಿಪ್ಪಣಿ ಕೂಡಾ ಇತ್ತು: ಉಪಸಮಿತಿಯ ವರದಿಯು ಒಂದು ಪರಾಮರ್ಶನ ಕಡತವಾಗಿ ಮಂಡಳಿಯ ದಾಖಲೆಯಲ್ಲಿ ಇರಬಹುದು ಎಂದು ಮಂಡಳಿಯು ನಿರ್ಧರಿಸಿದೆ. ಅಬ್ಬ, ಎಂತಹ ಅದ್ಭುತ ಅಧ್ಯಯನ! ಸತತ ಹತ್ತು ತಿಂಗಳ ಕಾಲ ದೇಶದೆಲ್ಲೆಡೆ ಸುತ್ತಾಡಿ, ದೆಹಲಿ, ಮುಂಬೈ, ಹೈದರಾಬಾದ್‌ಗಳಲ್ಲಿ ವಿಶೇಷ ತನಿಖೆಗಳನ್ನು ನಡೆಸಿ, ಹತ್ತಾರು ಸಾಕ್ಷಿಗಳ ವಿಚಾರಣೆ ನಡೆಸಿ, ಪತ್ರಕರ್ತರನ್ನು, ಮಾಧ್ಯಮ ಮಾಲೀಕರನ್ನು, ರಾಜಕಾರಣಿಗಳನ್ನು, ಕಾನೂನು ತಜ್ಞರನ್ನು ಸಂಪರ್ಕಿಸಿ ತಯಾರಿಸಲಾದ ಸುದೀರ್ಘ ವರದಿಗೆ ಒಂದೇ ವಾಕ್ಯದ ಭಾಷ್ಯ! ಈಗ ಉಪಸಮಿತಿಯ ವರದಿಯ ಪೂರ್ಣಪಾಠವನ್ನು ಸಾರ್ವಜನಿಕರಿಗಾಗಿ ಪ್ರಕಟಿಸಿದ್ದರೂ ಅದರಲ್ಲಿ ಪುನಃ ತನ್ನ ’ಡಿಸ್‌ಕ್ಲೇಮರ್’ನ್ನು ಹಾಕಿಕೊಳ್ಳುವುದರೊಂದಿಗೆ ಮಂಡಳಿ ತನ್ನದು ’ಒತ್ತಾಯದ ರುಜು’ ಎಂಬುದನ್ನು ಮುಕ್ತವಾಗಿ ಹೇಳಿಕೊಂಡಂತಾಗಿದೆ.
ಆದಾಗ್ಯೂ ಉಪಸಮಿತಿಯ ವರದಿಯಲ್ಲಿ ಉಲ್ಲೇಖವಾಗಿರುವ ಕೆಲವು ಅಂಶಗಳು ಸಮಸ್ಯೆಯ ಗಾಂಭೀರ್ಯತೆಯ ದೃಷ್ಟಿಯಿಂದ ಹೆಚ್ಚು ಮಹತ್ವ ಪಡೆದಿವೆ. ಸಮಿತಿಯು ನೇರವಾಗಿ ಪತ್ರಿಕೆಗಳನ್ನು, ಚಾನೆಲ್‌ಗಳನ್ನು ಆರೋಪಿಗಳೆಂದು ಬೊಟ್ಟು ಮಾಡಿಲ್ಲವಾದರೂ, ತಾನು ವಿಚಾರಣೆ ನಡೆಸಿದ ವ್ಯಕ್ತಿಗಳ ಹೇಳಿಕೆಗಳನ್ನೆಲ್ಲ ಅದು ತನ್ನ ವರದಿಯಲ್ಲಿ ದಾಖಲಿಸಿದೆ. ಹಲವಾರು ಸಾಕ್ಷಿಗಳು, ಪ್ರಮುಖವಾಗಿ ರಾಜಕಾರಣಿಗಳು, ’ಪಾಸಿಟಿವ್ ಕವರೇಜ್’ಗಾಗಿ ತಮ್ಮಲ್ಲಿ ಲಕ್ಷಗಟ್ಟಲೆ ಹಣ ಕೇಳಿದ ಮಾಧ್ಯಮಗಳ ಹೆಸರುಗಳನ್ನು ಸಮಿತಿಯ ಮುಂದೆ ಬಹಿರಂಗಪಡಿಸಿದ್ದಾರೆ. ದೈನಿಕ್ ಜಾಗರಣ್, ಲೋಕಮತ್, ಪುಢಾರಿ, ಪ್ರಥಮ್ ಪ್ರವಕ್ತಾ, ಪಂಜಾಬ್ ಕೇಸರಿ, ದೈನಿಕ್ ಭಾಸ್ಕರ್, ಹಿಂದೂಸ್ತಾನ್, ಅಮರ್ ಉಜಾಲ, ಆಜ್, ಉರ್ದು ಸಹರಾ, ಈನಾಡು, ಆಂಧ್ರಜ್ಯೋತಿ, ಸಾಕ್ಷಿ, ವಾರ್ತಾ, ಆಂಧ್ರಭೂಮಿ, ಸೂರ್ಯ ಮೊದಲಾದ ಪತ್ರಿಕೆಗಳನ್ನೂ, ಆಂಧ್ರ ಪ್ರದೇಶದ ಚಾನೆಲ್‌ಗಳಾದ ಟಿವಿ೯, ಈಟಿವಿ-೨, ಟಿವಿ-೫, ಎಚ್‌ಎಮ್‌ಟಿವಿ ನ್ಯೂಸ್ ಇತ್ಯಾದಿಗಳನ್ನೂ ಸಾಕ್ಷಿಗಳು ಹೆಸರಿಸಿದ್ದಾರೆ ಮತ್ತು ಅವನ್ನು ವರದಿ ದಾಖಲಿಸಿದೆ. ಮೀಡಿಯಾನೆಟ್ ಹಾಗೂ ಪ್ರೈವೇಟ್ ಟ್ರೀಟೀಸ್ ಯೋಜನೆಗಳ ಮೂಲಕ ಸುದ್ದಿಗೂ ಕಾಸು ಸಮಸ್ಯೆಯ ಬೀಜವನ್ನು ಬಿತ್ತಿದ್ದು ಟೈಮ್ಸ್ ಆಫ್ ಇಂಡಿಯಾ ಒಡೆತನದ ಬೆನೆಟ್, ಕೋಲ್‌ಮನ್ ಕಂಪೆನಿ ಲಿಮಿಟೆಡ್ ಸಂಸ್ಥೆಯೇ ಎಂಬುದನ್ನು ಸಮಿತಿಯು ಒಂದರ್ಥದಲ್ಲಿ ನೇರವಾಗಿಯೇ ಹೇಳಿದೆ. ಪೇಯ್ಡ್‌ನ್ಯೂಸ್ ಕುರಿತಂತೆ ಔಟ್‌ಲುಕ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳು, ಪತ್ರಕರ್ತ ಪಿ. ಸಾಯಿನಾಥ್ ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟಿಸಿದ ವರದಿಗಳು, ಮೃಣಾಲ್ ಪಾಂಡೆ, ಪ್ರಭಾಶ್ ಜೋಶಿ ಮೊದಲಾದ ಹಿರಿಯ ಪತ್ರಕರ್ತರ ಅಭಿಪ್ರಾಯಗಳನ್ನೂ ವರದಿ ಉಲ್ಲೇಖಿಸಿದೆ.
ಇಡಿ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ರೀತಿಯಲ್ಲಿ ಸುದ್ದಿಗೂ ಕಾಸು ಕಾಯಿಲೆ ಸಂಘಟನಾತ್ಮಕವಾಗಿ ಇಡೀ ದೇಶವನ್ನು ವ್ಯಾಪಿಸಿರುವ ಕುರಿತು ತನ್ನ ಕಳವಳ ವ್ಯಕ್ತಪಡಿಸಿರುವ ಸಮಿತಿ, ತನ್ನ ವರದಿಯ ಕೊನೆಯಲ್ಲಿ ಈ ಸಮಸ್ಯೆಯ ನಿಯಂತ್ರಣಕ್ಕೆ ಅವಶ್ಯವಾಗಿರುವ ಕೆಲವು ಕ್ರಮಗಳನ್ನೂ ಶಿಫಾರಸು ಮಾಡಿದ್ದು ಅವು ಗಮನಾರ್ಹವಾಗಿವೆ: ಜಾಹೀರಾತು ಮತ್ತು ಸುದ್ದಿ ನಡುವೆ ಸ್ಪಷ್ಟ ವ್ಯತ್ಯಾಸ ತೋರಿಸುವಂತೆ ಪತ್ರಿಕಾ ಮಂಡಳಿಯು ಎಲ್ಲ ಪತ್ರಿಕೆಗಳಿಗೆ ಕಡ್ಡಾಯ ಮಾಡುವುದು; ರಾಜಕಾರಣಿಗಳು ಮತ್ತು ಪಕ್ಷಗಳು ತಾವು ಚುನಾವಣೆ ಸಂದರ್ಭದಲ್ಲಿ ಮಾಧ್ಯಮ ಪ್ರಚಾರಕ್ಕಾಗಿ ಮಾಡಿದ ಖರ್ಚಿನ ಲೆಕ್ಕ ಕೊಡುವುದು; ೧೯೫೧ರ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದು ಪ್ರಚಾರಕ್ಕಾಗಿ ಮಾಧ್ಯಮಗಳಿಗೆ ಹಣ ನೀಡುವುದನ್ನೂ ಚುನಾವಣಾ ಅಕ್ರಮ ಎಂದು ಪರಿಗಣಿಸಿ ಅದನ್ನೊಂದು ಶಿಕ್ಷಾರ್ಹ ಅಪರಾಧ ಎಂದು ಘೋಷಿಸುವುದು; ಪೇಯ್ಡ್ ನ್ಯೂಸ್ ಬಗ್ಗೆ ದೂರು ದಾಖಲಿಸಲು ಭಾರತೀಯ ಚುನಾವಣಾ ಆಯೋಗ ಪ್ರತ್ಯೇಕ ವಿಭಾಗವೊಂದನ್ನು ತೆರೆಯುವುದು; ಪತ್ರಿಕಾ ಮಂಡಳಿಯ ಸಹಯೋಗದಲ್ಲಿ ಚುನಾವಣಾ ಆಯೋಗವು ಪೇಯ್ಡ್ ನ್ಯೂಸ್ ಅಕ್ರಮಗಳನ್ನು ಪತ್ತೆ ಮಾಡುವುದಕ್ಕಾಗಿ ಪ್ರತ್ಯೇಕ ವೀಕ್ಷಕರನ್ನು ನೇಮಿಸುವುದು; ಅರೆಕಾಲಿಕ ವರದಿಗಾರರು ಮತ್ತು ವರದಿಗಾರರು ಜಾಹೀರಾತು ಏಜೆಂಟರ ಕೆಲಸ ಮಾಡುವುದನ್ನು ಪತ್ರಿಕೆಗಳು ಕಡ್ಡಾಯವಾಗಿ ತಡೆಗಟ್ಟುವುದು; ೧೯೭೮ರ ಪತ್ರಿಕಾ ಮಂಡಳಿ ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಅಧಿಕಾರವನ್ನು ಮಂಡಳಿಗೆ ನೀಡುವುದು; ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಲ್ಲಿ ಸುದ್ದಿಗೂ ಕಾಸು ಮೋಸದಾಟದ ಬಗ್ಗೆ ಜಾಗೃತಿ ಮೂಡಿಸುವುದು... ಇತ್ಯಾದಿ.
ಭಾರತೀಯ ಪತ್ರಿಕಾ ಮಂಡಳಿಯನ್ನು ಬಲಪಡಿಸುವ ಅವಶ್ಯಕತೆಯನ್ನೂ ವರದಿ ಒತ್ತಿ ಹೇಳಿದೆ. ಪತ್ರಿಕಾ ಮಂಡಳಿ ಒಂದು ಆಂಶಿಕ ನ್ಯಾಯಿಕ ಸಂಸ್ಥೆಯಾಗಿದ್ದರೂ, ಅದು ವಾಗ್ದಂಡನೆ ವಿಧಿಸುವ, ಛೀಮಾರಿ ಹಾಕುವ, ಆಕ್ಷೇಪಣೆ ವ್ಯಕ್ತಪಡಿಸುವ ಅಧಿಕಾರ ಹೊಂದಿದೆಯೇ ಹೊರತು ತಪ್ಪಿತಸ್ಥರು ಎದುರಿಗಿದ್ದರೂ ಅವರನ್ನು ದಂಡಿಸುವ ಅಧಿಕಾರ ಹೊಂದಿಲ್ಲ. ಅದಕ್ಕೇ ಅದು ಹಲ್ಲಿಲ್ಲದ ಹಾವು. ಅಲ್ಲದೆ ಕೇವಲ ಮುದ್ರಣ ಮಾಧ್ಯಮ ಮಾತ್ರ ಮಂಡಳಿಯ ವ್ಯಾಪ್ತಿಗೆ ಬರುತ್ತದೆ. ಈ ಪರಿಸ್ಥಿತಿಯನ್ನು ಸುಧಾರಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉಪಸಮಿತಿ ಒತ್ತಾಯಿಸಿದೆ. ಪತ್ರಿಕೆಗಳನ್ನಷ್ಟೇ ಅಲ್ಲದೆ, ಟಿವಿ, ರೇಡಿಯೋ, ಇಂಟರ್ನೆಟ್‌ಗಳಲ್ಲೂ ನಡೆಯುವ ಅಕ್ರಮಗಳನ್ನು ತಡೆಯಲು ಪತ್ರಿಕಾ ಮಂಡಳಿಗೆ ಅಧಿಕಾರ ನೀಡಬೇಕು; ತಪ್ಪಿತಸ್ಥರನ್ನು ದಂಡಿಸುವ ಕಾನೂನಾತ್ಮಕ ಅಧಿಕಾರವನ್ನೂ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿರುವುದು ಉಲ್ಲೇಖಾರ್ಹ. ಈ ರೀತಿಯ ಒತ್ತಾಯವೇನೋ ಬಹಳ ಹಿಂದಿನಿಂದಲೂ ಇದೆ, ಆದರೆ ಅದಿನ್ನೂ ಕಾರ್ಯಗತವಾಗುವ ಸೂಚನೆ ಕಾಣಿಸುತ್ತಿಲ್ಲ; ಬಹುಶಃ ಕಾರ್ಯಗತವಾಗುವುದು ಅದನ್ನು ಸಾಧ್ಯವಾಗಿಸಬಲ್ಲವರಿಗೂ ಬೇಕಾಗಿಲ್ಲ.
ಎಲ್ಲಾ ಶಿಫಾರಸು ಮಾಡಿದ ಮೇಲೂ, ಉಪಸಮಿತಿ ತನ್ನ ವರದಿಯ ಕೊನೆಗೆ ಬರೆದಿರುವ ಒಂದು ಮಾತು ಗಮನಾರ್ಹ: ಈ ಎಲ್ಲ ಕ್ರಮಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಿದರೆ ಭಾರತೀಯ ಮಾಧ್ಯಮ ರಂಗದಲ್ಲಿನ ಅಕ್ರಮಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗದಿದ್ದರೂ, ಅವುಗಳ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು. ಗಣನೀಯವಾಗಿ ತಗ್ಗಿಸಬಹುದು ಎಂಬ ಮಾತು ಒಂದು ಆಶಾವಾದದಂತೆ ಕಂಡುಬಂದರೂ, ’ಪ್ರಾಮಾಣಿಕವಾಗಿ ಜಾರಿಗೊಳಿಸಿದರೆ...’ ಎಂಬ ಮಾತು ನಮ್ಮನ್ನು ಚಿಂತೆಗೀಡುಮಾಡುತ್ತದೆ. ಏಕೆಂದರೆ, ಅದೊಂದಿದ್ದರೆ ನಾವು ಇಷ್ಟೆಲ್ಲ ಸಮಸ್ಯೆಗಳೆಡೆಯಲ್ಲಿ ಸಿಕ್ಕಿಹಾಕಿಕೊಳ್ಳುವ, ಅವುಗಳ ನಡುವೆ ಒದ್ದಾಡುವ, ಗುದ್ದಾಡುವ ಪ್ರಮೇಯವೇ ಬರುತ್ತಿರಲಿಲ್ಲವಲ್ಲ!