ಸೋಮವಾರ, ಜನವರಿ 16, 2017

ದುಃಖವನ್ನು ದೂರವಾಗಿಸಿ

'ಬೋಧಿವೃಕ್ಷ' ಜನವರಿ 14-20, 2017ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಮುಸ್ಸಂಜೆಯ ಹೊತ್ತು. ಮುದುಕಿಯೊಬ್ಬಳು ಬಹುಹೊತ್ತಿನಿಂದ ಬೀದಿದೀಪದಡಿಯಲ್ಲಿ ಅದೇನನ್ನೋ ಹುಡುಕುತ್ತಲೇ ಇದ್ದಳು. ಇದನ್ನೇ ಗಮನಿಸುತ್ತಾ ಇದ್ದ ಯುವಕನೊಬ್ಬ ಮುದುಕಿಯನ್ನು ಸಮೀಪಿಸಿ ಕೇಳಿದನಂತೆ: 'ಅಜ್ಜೀ ಅಷ್ಟು ಹೊತ್ತಿನಿಂದ ಅದೇನನ್ನು ಅಷ್ಟೊಂದು ಧಾವಂತದಿಂದ ಹುಡುಕುತ್ತಾ ಇದ್ದೀ?’ ಮುದುಕಿ ಹೇಳಿದಳಂತೆ: ’ಮನೆ ಜಗುಲಿಯಲ್ಲಿ ಕುಳಿತು ಅದೇನೋ ಹೊಲೀತಾ ಇದ್ದೆ. ಸೂಜಿ ಬಿದ್ದು ಹೋಯಿತು. ಮನೆಯಲ್ಲಿ ಬೆಳಕಿಲ್ಲ. ಇಲ್ಲಿ ದೀಪ ಉರೀತಾ ಇದೆ ನೋಡು. ಅದಕ್ಕೇ ಇಲ್ಲಿ ಹುಡುಕುತ್ತಾ ಇರುವೆ.’

ಮನೆ ಜಗುಲಿಯಲ್ಲಿ ಕಳೆದುಕೊಂಡದ್ದನ್ನು ಬೀದಿದೀಪದಡಿಯಲ್ಲಿ ಹುಡುಕಿದರೆ ಸಿಗುತ್ತದೆಯೇ? ಎಂದು ಸುಲಭವಾಗಿ ಕೇಳಿ ನಕ್ಕುಬಿಡುತ್ತೇವೆ ನಾವು. ಆದರೆ ಬಹುತೇಕ ಸಂದರ್ಭಗಳಲ್ಲಿ ನಾವೂ ಹಾಗೆಯೇ ಮಾಡುತ್ತಿರುತ್ತೇವೆ. ಎಲ್ಲೋ ಕಳೆದುಕೊಂಡದ್ದನ್ನು ಇನ್ನೆಲ್ಲೋ ಹುಡುಕುತ್ತಾ ಸಮಯವನ್ನೂ ಮನಸ್ಸಿನ ನೆಮ್ಮದಿಯನ್ನೂ ಹಾಳುಮಾಡಿಕೊಂಡು ಒಳಗೊಳಗೆಯೇ ಒದ್ದಾಡುತ್ತಿರುತ್ತೇವೆ.

ಬೆಳಗ್ಗೆ ಏಳುತ್ತಲೇ ನಮ್ಮ ನೂರೆಂಟು ತಾಪತ್ರಯಗಳನ್ನು ನೆನೆದು ಮನಸ್ಸನ್ನು ಕುಗ್ಗಿಸಿಕೊಳ್ಳುತ್ತೇವೆ; ನಮ್ಮನಮ್ಮ ಕೆಲಸಗಳಿಗೆ ಸಿದ್ಧವಾಗುತ್ತಲೇ ಸಿಕ್ಕಸಿಕ್ಕವರ ಮೇಲೆ ಸಿಡುಕುತ್ತೇವೆ; ವಿನಾಕಾರಣ ಜತೆಗಿರುವವರನ್ನು ಅನುಮಾನಿಸುತ್ತಾ ಒಳಗೊಳಗೆಯೇ ಬೇಯುತ್ತೇವೆ; ನಮ್ಮದಲ್ಲದ ವಸ್ತುಗಳಿಗಾಗಿ ಹಾತೊರೆಯುತ್ತೇವೆ; ನಮ್ಮದಲ್ಲದ ದಾರಿಗಳಲ್ಲಿ ಸಾಗಿ ಬಸವಳಿಯುತ್ತೇವೆ; ಇನ್ನೊಬ್ಬ ನಿರುಮ್ಮಳವಾಗಿ ಓಡಾಡುವುದನ್ನು ನೋಡಿ ಎಂತಹಾ ಸೌಭಾಗ್ಯ ಇವರದ್ದು, ಎಂತಹಾ ಆರಾಮ ಜೀವನ ಎಂದು ಕರುಬುತ್ತೇವೆ; ನನ್ನ ಕಂಡರೆ ಇವರ‍್ಯಾರಿಗೂ ಆಗುವುದಿಲ್ಲ, ಎಲ್ಲರೂ ನನ್ನನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಬುಸುಗುಡುತ್ತೇವೆ; ಹಾಗೂಹೀಗೂ ಇಡೀ ದಿನ ಮುಗಿದ ಮೇಲೆ ಅಯ್ಯೋ ನನ್ನ ಇಡೀ ದಿನ ಹಾಳಾಗಿಹೋಯಿತು ಎಂದು ವಿಹ್ವಲರಾಗುತ್ತೇವೆ.

ಮನವೇ ನೀನೇಕೆ ಹೀಗೆ ಎಂದು ಒಂದು ಕ್ಷಣವೂ ತಣ್ಣಗೆ ಕುಳಿತು ಯೋಚಿಸುವುದಿಲ್ಲ. ನನ್ನ ದಿನಗಳೇಕೆ ಹೀಗೆ ವ್ಯರ್ಥಪ್ರಲಾಪದಲ್ಲಿ ಕೊನೆಯಾಗುತ್ತಿವೆ ಎಂದು ಆತ್ಮಾವಲೋಕನ ಮಾಡಿಕೊಳ್ಳವುದಿಲ್ಲ. ನನ್ನನ್ನು ನಾನು ಎಲ್ಲಿಯಾದರೂ ಸರಿಪಡಿಸಿಕೊಳ್ಳುವ ಅಗತ್ಯವಿದೆಯೇ ಎಂದು ಅಂತರಂಗವನ್ನು ಕೇಳಿಕೊಳ್ಳುವುದಿಲ್ಲ. ಏಕೆಂದರೆ ಇಂತಹವರ ಬಹುಮುಖ್ಯ ಸಮಸ್ಯೆಯೇ ತಾವು ಎಲ್ಲ ರೀತಿಯಲ್ಲೂ ಸರಿಯಾಗಿದ್ದೇವೆ, ಉಳಿದವರ‍್ಯಾರೂ ಸರಿಯಿಲ್ಲ ಎಂದು ಭ್ರಮಿಸುವುದು. ಆದ್ದರಿಂದಲೇ ದುಃಖ-ವ್ಯಾಕುಲತೆ ಇವರ ಖಾಯಂ ಒಡನಾಡಿ.

'ಸಂತೋಷವು ಬಾಹ್ಯ ಸನ್ನಿವೇಶಗಳ ಮೇಲೆ ಅವಲಂಬಿತವಾಗಿಲ್ಲ. ಅದು ನಮ್ಮ ನಮ್ಮ ಮನೋಭಾವದ ಮೇಲೆ ನಿಂತಿದೆ’ ಎನ್ನುತ್ತಾರೆ ಪ್ರಸಿದ್ಧ ತರಬೇತುದಾರ ಡೇಲ್ ಕಾರ್ನೆಗಿ. ಹೌದು, ನೆಮ್ಮದಿಯು ನಮ್ಮೊಳಗೆಯೇ ಇದೆ ಎಂಬ ಸರಳ ಸತ್ಯ ನಮಗರ್ಥವಾದರೆ ಬಹುತೇಕ ಸಮಸ್ಯೆಗಳು ದೂರವಾದಂತೆ. ’ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ| ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ’ ಎಂದಿಲ್ಲವೇ ಜಿ. ಎಸ್. ಶಿವರುದ್ರಪ್ಪನವರು? ಸಂತೋಷವೆಂಬ ದೇವರೂ ನಮ್ಮೊಳಗೆಯೇ ಇದ್ದಾನೆ ಎಂದು ಒಂದು ಕ್ಷಣ ಭಾವಿಸಿಕೊಂಡು ಬಿಟ್ಟರೆ ಅದೇ ದೇವರು ನಮ್ಮನ್ನು ಕಾಪಾಡುವುದು ಶತಃಸಿದ್ಧ.

ನಮ್ಮ ಅಷ್ಟೂ ಅಭದ್ರತೆ, ಚಿಂತೆ, ದುಃಖ, ಹಪಾಹಪಿಕೆಗಳಿಗೆ ಕಾರಣ ನಮ್ಮೊಳಗಿನ ನಕಾರಾತ್ಮಕ ಚಿಂತನೆಗಳು. ಅವು ಹೆಚ್ಚಾದಂತೆ ಮನಸ್ಸು ಬ್ರಹ್ಮಾಂಡ ಭಾರವಾಗುತ್ತಾ ಹೋಗುತ್ತದೆ. ನಮಗೆ ನಾವೇ ಭಾರವೆನಿಸುತ್ತೇವೆ. ಒಮ್ಮೆ ನಕಾರಾತ್ಮಕ ಯೋಚನೆಗಳು ತೊಲಗಿ ಸಕಾರಾತ್ಮಕ ಚಿಂತನೆಗಳು ಮನಸ್ಸಿನಲ್ಲಿ ಸ್ಥಾಪನೆಯಾದರೆ ಮುಂದೆ ಒದಗುವ ಫಲಿತಾಂಶಗಳೆಲ್ಲವೂ ಸಕಾರಾತ್ಮಕವಾಗಿಯೇ ಇರುತ್ತವೆ. 'ಇಂದು ತುಂಬ ಒಳ್ಳೆಯ ದಿನ. ನನಗೆಲ್ಲವೂ ಒಳ್ಳೆಯದೇ ಆಗುತ್ತದೆ’ ಎಂಬ ಭಾವನೆಯೊಂದಿಗೆ ತುಸು ಬೇಗನೆ ಹಾಸಿಗೆಯಿಂದೆದ್ದು ಹೊರಗಿನ ತಂಗಾಳಿಯನ್ನೂ ಎಳೆಯ ಸೂರ್ಯಕಿರಣಗಳನ್ನೂ ಆಸ್ವಾದಿಸಿ; ಉದ್ವೇಗಕ್ಕೊಳಗಾಗದೆ ಅದೇ ಪ್ರಫುಲ್ಲತೆಯಿಂದಲೇ ಒಂದೊಂದಾಗಿ ಕೆಲಸಗಳನ್ನು ಮುಗಿಸುತ್ತಾ ಹೋಗಿ. ಆ ದಿನ ನಿಸ್ಸಂಶಯವಾಗಿ ನೀವು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ.

ನಕಾರಾತ್ಮಕ ಯೋಚನೆಗಳು ನಮ್ಮನ್ನು ಇನ್ನಷ್ಟು ಕುಗ್ಗಿಸುತ್ತಲೇ ಹೋಗುತ್ತವೆ; ಭಯಗೊಳಿಸುತ್ತವೆ, ವ್ಯಗ್ರರನ್ನಾಗಿಸುತ್ತವೆ, ಮನಸ್ಸನ್ನು ಕದಡಿ ರಾಡಿಯನ್ನಾಗಿಸುತ್ತವೆ. ಅಂತಹ ಯೋಚನೆಗಳೊಂದಿಗೇ ನಮ್ಮ ದಿನ ಆರಂಭವಾದರೆ ಇಡೀ ದಿನದ ಫಲಿತಾಂಶವೂ ಅಷ್ಟೇ ನಿಷ್ಪ್ರಯೋಜಕವಾಗಿರುವುದರಲ್ಲಿ ಸಂಶಯವಿಲ್ಲ. ಮನಸ್ಸಿನಲ್ಲಿರುವ ಅಸಂತುಷ್ಟಿ, ಆತಂಕ, ವ್ಯಾಕುಲತೆ, ನಕಾರಾತ್ಮಕ ಧೋರಣೆಗಳು ಎಲ್ಲವನ್ನೂ ಅದೇ ಕೋನದಿಂದ ನೋಡುವಂತೆ ನಮ್ಮನ್ನು ಮಾಡುತ್ತವೆ. ಸಣ್ಣಪುಟ್ಟ ವಿಚಾರಗಳೂ ನಮ್ಮನ್ನು ಧೃತಿಗೆಡಿಸುತ್ತವೆ. ಎದುರಿಗೆ ಸಿಗುವ ಪ್ರತಿಯೊಬ್ಬ ವ್ಯಕ್ತಿಯಿಂದಲೂ ನಮಗೆ ಕಿರಿಕಿರಿಯೆನಿಸುತ್ತದೆ. ಮನೆಯಲ್ಲಿ ಏನೋ ಮರೆತು ಬಂದಿರುತ್ತೇವೆ. ಒಂದೇ ನಿಮಿಷದಲ್ಲಿ ಸಿಗುವ ವಸ್ತುವನ್ನು ಗಂಟೆಗಟ್ಟಲೆ ಹುಡುಕಿ ಅದು ಸಿಗದೆ ಕೊನೆಗೆ ಅದಕ್ಕೆ ಇನ್ಯಾರೋ ಒಬ್ಬರನ್ನು ಹೊಣೆಗಾರರನ್ನಾಗಿಸಿ ರೇಗಾಡುತ್ತೇವೆ. ಬಸ್-ಟ್ರೈನ್ ತಪ್ಪಿಸಿಕೊಳ್ಳುತ್ತೇವೆ; ರಸ್ತೆಯಲ್ಲಿ ಅಕ್ಕಪಕ್ಕ ಓಡಾಡುವ ವಾಹನ ಸವಾರರ ಮೇಲೆ ಸಿಡಿಮಿಡಿಯಾಗುತ್ತೇವೆ; ಅವರೊಂದಿಗೆ ಎಗರಾಡುತ್ತೇವೆ; ಸಾಮಾನ್ಯ ಟ್ರಾಫಿಕ್ ನಡುವೆಯೂ ಸಿಡಿಮಿಡಿಗೊಂಡು ರಸ್ತೆ ನಡುವೆ ಜಗಳ ಕಾಯುತ್ತೇವೆ. ಕಚೇರಿ ಹೊಕ್ಕರೆ ಸಹೋದ್ಯೋಗಿಗಳೆಲ್ಲರೂ ಏಳೂವರೆ ಶನಿಗಳಂತೆ ನಮ್ಮನ್ನು ಕಾಡುವುದಕ್ಕೇ ಕಾದುಕುಳಿತಿದ್ದಾರೆ ಎಂದು ನಮ್ಮಷ್ಟಕ್ಕೇ ಭಾವಿಸಿಕೊಂಡು ಮನಸನ್ನು ರಣರಂಗ ಮಾಡಿಕೊಳ್ಳುತ್ತೇವೆ. ಇಷ್ಟೆಲ್ಲ ಆದದ್ದು ಬೆಳ್ಳಂಬೆಳಗ್ಗೆ ಮನಸ್ಸಿನಲ್ಲಿ ಮನೆಮಾಡಿದ ಒಂದು ಸಣ್ಣ ನಕಾರಾತ್ಮಕ ಯೋಚನೆಯಿಂದ ಎಂಬುದು ನಮಗೆ ನೆನಪೇ ಆಗುವುದಿಲ್ಲ.

ಸಂತೃಪ್ತಿಗಿಂತ ದೊಡ್ಡ ಸಂತೋಷವಿಲ್ಲ ಎನ್ನುತ್ತಾರೆ. ನಾವು ಮಾಡುವ ಕೆಲಸಗಳಲ್ಲಿ ನಮಗೆ ತೃಪ್ತಿಯಿಲ್ಲದೇ ಹೋದರೆ ಅದೇ ನಮ್ಮ ದುಃಖದ ಮೂಲ. 'ಡೇ ಬೈ ಡೇ, ಇನ್ ಎವೆರಿ ವೇ, ಐಯಾಮ್ ಬಿಕಮಿಂಗ್ ಬೆಟರ್ ಅಂಡ್ ಬೆಟರ್’ ಎಂಬ ಭಾವನೆಯೇ ನಮ್ಮ ಅತಿದೊಡ್ಡ ಶಕ್ತಿ. ಅದು ಆತ್ಮವಿಶ್ವಾಸವನ್ನೂ ಆತ್ಮಸಂತೋಷವನ್ನೂ ತಂದುಕೊಡುತ್ತದೆ. ನಮಗೆ ನಾವೇ ಕಂಡುಕೊಳ್ಳುವ ಸಂತೃಪ್ತಿ ಎಂತಹದೆಂದರೆ ಆ ನಂಬಿಕೆಯ ಸೌಧವನ್ನು ಯಾವ ಭೂಕಂಪ ಚಂಡಮಾರುತಗಳೂ ಅಲುಗಾಡಿಸಲಾರವು. ನಮ್ಮ ಬದುಕಿನ ಸುಖ ಸಂತೋಷಗಳು ನಮ್ಮ ಚಿಂತನೆಗಳ ಗುಣಮಟ್ಟವನ್ನು ಅವಲಂಬಿಸಿವೆ ಎಂದು ಇದೇ ಅರ್ಥದಲ್ಲಿ ಹೇಳಿರುವುದು. ಬದುಕಿನಲ್ಲಿ ತುಂಬ ಯಶಸ್ವಿಯಾಗಿದ್ದಾರೆ ಎಂದು ನಿಮಗನ್ನಿಸುವ ಯಾರನ್ನೇ ಆದರೂ ನಿಮ್ಮ ಯಶಸ್ಸಿನ ರಹಸ್ಯವೇನೆಂದು ಕೇಳಿನೋಡಿ. ಅವರು ಕೊಡುವ ಉತ್ತರ ಒಂದೇ: ಆತ್ಮ ವಿಶ್ವಾಸ ಮತ್ತು ಮಾಡಿದ ಕೆಲಸದ ಬಗ್ಗೆ ಸಂತೃಪ್ತಿ. ಕೈಯಲ್ಲಿ ಬಿಡಿಗಾಸು ಇಲ್ಲದವನೂ ಕೋಟ್ಯಧಿಪತಿ ಆದ ಉದಾಹರಣೆಗಳಿಲ್ಲವೇ? ಅದಕ್ಕೆ ನಿಜವಾದ ಕಾರಣ ಯಾರಿಗೂ ಕಾಣಿಸದ ಅದೃಷ್ಟವೇ ಅಥವಾ ಅವನೊಳಗಿಂದ ಚಿಮ್ಮುವ ಆತ್ಮವಿಶ್ವಾಸವೇ?

'ಸಂತೋಷವು ನಮ್ಮ ಹಿತ್ತಿಲಲ್ಲೇ ಬೆಳೆಯತ್ತದೆ. ಅದನ್ನು ಅಪರಿಚಿತರ ತೋಟಗಳಿಂದ ಕಿತ್ತುಕೊಳ್ಳಬೇಕಿಲ್ಲ’ ಎನ್ನುತ್ತಾನೆ ಚಿಂತಕ ದಗ್ಲಾಸ್ ಜೆರಾಲ್ಡ್. ನಾವು ಮಾಡುವ ಸಣ್ಣಪುಟ್ಟ ಕೆಲಸಗಳನ್ನು ಶ್ರದ್ಧೆ ಹಾಗೂ ಪ್ರೀತಿಗಳಿಂದ ಮಾಡಿದರೆ, ಇನ್ನೊಬ್ಬರೊಂದಿಗೆ ನಮ್ಮನ್ನು ನಾವು ಹೋಲಿಸಿಕೊಳ್ಳದೆ ಮಾಡಬೇಕಾದ ಕೆಲಸಗಳನ್ನು ಮಾಡುತ್ತಾ ಹೋದರೆ ಯಶಸ್ಸು ಮತ್ತು ನೆಮ್ಮದಿ ನಮ್ಮನ್ನರಸಿಕೊಂಡು ಬರುತ್ತದೆ. ಇತರರನ್ನು ಮೆಚ್ಚಿಕೊಳ್ಳುವ, ಅವರು ಮಾಡಿದ ಸಣ್ಣ ಸಹಾಯಕ್ಕಾದರೂ ಮನಃಪೂರ್ವಕ ಕೃತಜ್ಞತೆಯನ್ನು ಅರ್ಪಿಸುವ ಅಭ್ಯಾಸದಿಂದ ನಮ್ಮಲ್ಲಿ ಚಿಗುರುವ ಧನ್ಯತೆಯ ಭಾವವೇ ಸಾಕು ನಮ್ಮನ್ನು ಸದಾ ಉಲ್ಲಾಸದಿಂದ ಇರುವಂತೆ ಮಾಡುವುದಕ್ಕೆ.

'ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ’ ಎಂಬ ಗೀತಾಚಾರ್ಯನ ಮಾತೇ ಎಲ್ಲಾ ಕಾಲದಲ್ಲೂ ನಮಗೆ ದಾರಿದೀಪ. ನಾವು ಮಾಡಬೇಕಾದ ಕೆಲಸಗಳನ್ನು ಮಾಡೋಣ. ಅದಕ್ಕೆ ಪ್ರತಿಯಾಗಿ ಏನನ್ನಾದರೂ ಪಡೆಯಲೇಬೇಕು ಎಂಬ ಭಾವವದಿಂದ ಹೊರಬರೋಣ. ಆಗ ಮನಸ್ಸು ಕುಗ್ಗುವುದೇ ಇಲ್ಲ. ನಾವು ಮಾಡುವುದು ನಮ್ಮ ಸಂತೋಷಕ್ಕೆ ಎಂಬ ಭಾವ ಒಡಮೂಡಿದಾಗ ಇದು ಸಾಧ್ಯವಾಗುತ್ತದೆ. ಆದದ್ದೆಲ್ಲಾ ಒಳ್ಳೆಯದಕ್ಕೆ, ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಭಾವಿಸುವುದು ಸಾಧ್ಯವಾದಾಗ ಮನಸ್ಸು ತಾನಾಗಿಯೇ ಅರಳುತ್ತದೆ. 'ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ’ (ಸುಖ ದುಃಖ, ಲಾಭ ನಷ್ಟ, ಜಯ ಅಪಜಯ ಇವುಗಳನ್ನು ಸಮನಾಗಿ ಸ್ವೀಕರಿಸು) ಎಂದು ಶ್ರೀಕೃಷ್ಣ ಅರ್ಜುನನಿಗೆ ಹೇಳುವ ಮಾತು ಎಲ್ಲಾ ಕಾಲಕ್ಕೂ ಎಲ್ಲರಿಗೂ ಅನ್ವಯಿಸುವ ಮಹಾಮಂತ್ರ. ಬದುಕಿನಲ್ಲಿ ಸುಖ ದುಃಖಗಳು ಸಾಮಾನ್ಯ, ಆದರೆ ಶಾಶ್ವತವಲ್ಲ, ಅವುಗಳನ್ನು ಬಂದಹಾಗೆ ಸ್ವೀಕರಿಸುತ್ತಾ ಮುನ್ನಡೆಯಬೇಕು, ಹಗಲು ಕಳೆದ ಮೇಲೆ ಇರುಳಾಗುತ್ತದೆ, ಇರುಳು ಮತ್ತೆ ಹಗಲಾಗಲೇಬೇಕು ಎಂಬ ಭಾವ ನೆಲೆಗೊಂಡಾಗಲೇ ಬದುಕಿನ ಯುಗಾದಿ.

ಒಮ್ಮೆ ವ್ಯಕ್ತಿಯೊಬ್ಬ ಬುದ್ಧನನ್ನು ಭೇಟಿಯಾಗಿ 'ಹೀಗೆ ಗಂಟೆಗಟ್ಟಲೆ, ದಿನಗಟ್ಟಲೆ, ವಾರಗಟ್ಟಲೆ ಕಣ್ಣುಮುಚ್ಚಿ ಕುಳಿತು ಧ್ಯಾನ ಮಾಡಿ ನೀವೇನು ಪಡೆದುಕೊಂಡಿರಿ ಸ್ವಾಮಿ?’ ಎಂದು ಕೇಳಿದನಂತೆ. ಬುದ್ಧ ನಸುನಕ್ಕು ಹೀಗೆ ಹೇಳಿದನಂತೆ: 'ಏನೂ ಇಲ್ಲ! ಆದರೆ ನಾನು ಏನು ಕಳೆದುಕೊಂಡೆ ಎಂದು ಹೇಳಬಲ್ಲೆ - ಕ್ರೋಧ, ಆತಂಕ, ಖಿನ್ನತೆ, ಅಭದ್ರತೆ, ಮುಪ್ಪು ಹಾಗೂ ಸಾವಿನ ಭಯ.’ ಸ್ವಸ್ಥಾನಪರಿಜ್ಞಾನವುಳ್ಳ ಸಮಚಿತ್ತದ ಮಹಾತ್ಮನೊಬ್ಬ ಮಾತ್ರ ಇಂತಹ ಉತ್ತರ ನೀಡಬಲ್ಲ. ಇನ್ನೇನೂ ಸಾಧ್ಯವಾಗದಿದ್ದಾಗ ಕಣ್ಮುಚ್ಚಿ ಕುಳಿತು ಧ್ಯಾನಿಸುವ ಮತ್ತು ಧೇನಿಸುವ ಕೆಲಸವನ್ನಾದರೂ ನಾವು ಮಾಡಬಹುದು. ಅಂತಹ ಧ್ಯಾನ ಮಾತ್ರ ನಮ್ಮ ತಪ್ಪುಗಳನ್ನು ನಮಗೆ ತೋರಿಸಿಕೊಡಬಹುದು ಮತ್ತು ಅವುಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗುವ ದಾರಿಯತ್ತಲೂ ಬೆಳಕು ಬೀರಬಹುದು. ಕತ್ತಲನ್ನು ಶಪಿಸುತ್ತಾ ಕೂರುವ ಬದಲು ದೀಪ ಹಚ್ಚೋಣ ಆಗದೇ?

****************************************************************

ನೆಮ್ಮದಿಯ ಬದುಕಿಗೆ 10 ಸೂತ್ರಗಳು
1. ಸಂತೃಪ್ತಿಗಿಂತ ದೊಡ್ಡ ಸಾಧನೆಯಿಲ್ಲ. ನಾವು ಮಾಡುವ ಸಣ್ಣಪುಟ್ಟ ಕೆಲಸಗಳನ್ನೂ ಸಂತೋಷದಿಂದ ಮಾಡೋಣ.
2. ನಮ್ಮ ವೃತ್ತಿಯನ್ನು ಪ್ರೀತಿಸೋಣ. ಉದ್ಯೋಗದಲ್ಲಿ ಸಮಾಧಾನವಿಲ್ಲದೆ ಹೋದರೆ ಅದೇ ಬದುಕಿನ ನೆಮ್ಮದಿಯನ್ನು ಕಸಿದುಕೊಳ್ಳಬಹುದು.
3. ಎಂದೂ ಇನ್ನೊಬ್ಬರೊಂದಿಗೆ ನಮ್ಮನ್ನು ಹೋಲಿಸಿ ಕೊಳ್ಳುವುದು ಬೇಡ. ನಾವು ಅವರಾಗುವುದು, ಅವರು ನಾವಾಗುವುದು ಸಾಧ್ಯವಿಲ್ಲ.
4. ಅಹಂಕಾರಕ್ಕೆ ಉದಾಸೀನವೇ ಮದ್ದು. ಇನ್ನೊಬ್ಬರು ನಮ್ಮೆದುರಲ್ಲಿ ಅಹಂಕಾರದಿಂದ ವರ್ತಿಸುತ್ತಿದ್ದಾರೆ ಅನಿಸಿದರೆ ಅಂತಹವರನ್ನು ನಿರ್ಲಕ್ಷಿಸೋಣ.
5. ಇನ್ನೊಬ್ಬರ ಒಳ್ಳೆಯ ಕೆಲಸಗಳನ್ನು ಪ್ರಶಂಸಿಸೋಣ. ಅದರಿಂದ ನಾವು ಕಳೆದುಕೊಳ್ಳುವುದು ಏನೂ ಇಲ್ಲ.  ನಮ್ಮ ಉದಾರತೆ ನಮಗೆ ಸಂತೋಷವನ್ನೇ ತಂದುಕೊಡುತ್ತದೆ.
6. ನಕಾರಾತ್ಮಕ ಯೋಚನೆಗಳೇ ನಮಗಿರುವ ದೊಡ್ಡ ಶಾಪ. ಎಲ್ಲ ಬದಲಾವಣೆಗಳನ್ನು ಧನಾತ್ಮಕವಾಗಿಯೇ ಸ್ವೀಕರಿಸೋಣ. ಕೆಡುಕೂ ಒಳಿತಾಗಿ ಬದಲಾಗುತ್ತದೆ.
7. ಯಾವುದರ ಬಗೆಗೂ ಅತಿಯಾದ ಮೋಹ ಬೇಡ. ಯಾವುದೂ ಶಾಶ್ವತವಲ್ಲ. ನಮಗೆ ಅರ್ಹವಾಗಿ ಏನು ದಕ್ಕಬೇಕೋ ಅದು ಇಂದಲ್ಲ ನಾಳೆ ಸಿಕ್ಕೇ ಸಿಗುತ್ತದೆ.
8. ಒಳ್ಳೆಯ ಹವ್ಯಾಸಗಳು ಸದಾ ನಮ್ಮ ಸಂಗಾತಿಗಳಾಗಿರಲಿ. ಓದು, ಬರೆವಣಿಗೆ, ಸಂಗೀತ, ನೃತ್ಯ ಮೊದಲಾದ ಲಲಿತಕಲೆಗಳು ನಮ್ಮನ್ನು ಕ್ರಿಯಾಶೀಲರನ್ನಾಗಿರಿಸಬಲ್ಲವು.
9. ವರ್ತಮಾನದಲ್ಲಿ ಬದುಕೋಣ. ಹಳೆಯದನ್ನು ಕೆದಕುತ್ತಾ ಹೋದಷ್ಟೂ ಮನದಲ್ಲಿ ಕೊಳೆ ಬೆಳೆಯುವ ಸಾಧ್ಯತೆಯೇ ಹೆಚ್ಚು. ಮುಂದೆ ಆಗಬೇಕಿರುವುದರ ಬಗ್ಗೆ ಸಕಾರಾತ್ಮಕವಾಗಿ ಯೋಚಿಸೋಣ.
10. ನಿರುತ್ಸಾಹ ಕಾಡಿದಾಗ ಯಶಸ್ಸನ್ನು ವಿಶುವಲೈಸ್ ಮಾಡಿಕೊಳ್ಳೋಣ. ಅದರಿಂದ ಒದಗುವ ಹುಮ್ಮಸ್ಸು ಹೆಚ್ಚಿನ ಆತ್ಮವಿಶ್ವಾಸವನ್ನು ಮೂಡಿಸೀತು.
**************************************************************