ಸೋಮವಾರ, ಅಕ್ಟೋಬರ್ 31, 2022

ಸಿಬಂತಿ ಪದ್ಮನಾಭ ಹಾಗೂ ಶ್ರೀಶ ಪುಣಚ ಅವರ 'ಮಾಧ್ಯಮ ತಂತ್ರಜ್ಞಾನ' ಕೃತಿಗೆ ಶ್ರೀ ಬೇಳೂರು ಸುದರ್ಶನ ಅವರು ಬರೆದ ಮುನ್ನುಡಿ

ಸಿಬಂತಿ ಪದ್ಮನಾಭ ಹಾಗೂ ಶ್ರೀಶ ಪುಣಚ ಅವರ 'ಮಾಧ್ಯಮ ತಂತ್ರಜ್ಞಾನ' ಕೃತಿಗೆ ಮುಖ್ಯಮಂತ್ರಿಗಳ ಇ-ಆಡಳಿತ
ಸಲಹೆಗಾರರೂ ಮುಕ್ತಜ್ಞಾನದ ಪ್ರತಿಪಾದಕರೂ ಆದ
ಶ್ರೀ ಬೇಳೂರು ಸುದರ್ಶನ ಅವರು ಬರೆದ ಮುನ್ನುಡಿ:

ರಾಜ್ಯದ ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗದ ಪದವಿ ವಿದ್ಯಾರ್ಥಿಗಳಿಗಾಗಿ ರೂಪಿತವಾದ ಈ ಪುಸ್ತಕವು ಕನ್ನಡದಲ್ಲಿ ಈ ವರ್ಗದ ಮೊಟ್ಟಮೊದಲ ಮತ್ತು ಸರ್ವಸ್ಪರ್ಶೀ ಪಠ್ಯವಾಗಿದೆ ಎಂದು ಹೇಳಲು ನನಗೆ ಬೇರಾವ ದಾಖಲೆಯೂ ಬೇಡ. ಏಕೆಂದರೆ ಅಂತಹ ದಾಖಲೆಗಳು ಸಿಗುವುದೂ ಇಲ್ಲ! ಹೆಚ್ಚೆಂದರೆ 2005-07 ರ ನಡುವೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ದೂರಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಗಾಗಿ ರೂಪಿಸಿದ ಗಣಕ ಪರಿಚಯ, ಯಂತ್ರಾಂಶ – ತಂತ್ರಾಂಶ ಕುರಿತ ಪಠ್ಯಪುಸ್ತಕಗಳನ್ನು ಇಲ್ಲಿ ಉಲ್ಲೇಖಿಸಬಹುದು. ಖಾಸಗಿ ಪ್ರಕಟಣಾ ರಂಗದಲ್ಲಿ ಈ ಕುರಿತ ಬಿಡಿ ವಿಷಯಗಳ ಕೆಲವು ಪುಸ್ತಕಗಳೂ ಬಂದಿರಬಹುದು. ಆದರೆ ಪತ್ರಿಕಾರಂಗದ ವಿದ್ಯಾರ್ಥಿ - ಶಿಕ್ಷಕರಿಗೆಂದು ರೂಪಿಸಿದ ಈ ಪುಸ್ತಕವು ಈ ಕಾಲದ ಮಹತ್ವದ ಕೃತಿ. 

ಮಾಹಿತಿಸ್ಫೋಟದ ಈ ಯುಗದಲ್ಲಿ ಮಾಹಿತಿ – ಜ್ಞಾನದ ನಡುವಣ ಅಂತರವೇ ತೆಳುವಾಗುತ್ತಿದೆ. ಹುಸಿ  ವ್ಯಾಖ್ಯಾನಗಳಿಂದ, ತಪ್ಪು  ಅಂಕಿ ಅಂಶ ಮತ್ತು ವಿವರಣೆಗಳಿಂದ ಅಂತರಜಾಲವು ಕಲುಷಿತಗೊಂಡಿದೆ. ವಿಕಿಪೀಡಿಯದಂತಹ ಸ್ವಯಂಘೋಷಿತ ಮುಕ್ತಜ್ಞಾನದ ವೇದಿಕೆಗಳಲ್ಲೂ ಕುಂದುಕೊರತೆಗಳು ಕಾಣುತ್ತಿವೆ.  ಫೇಸ್‌ಬುಕ್ - ಇನ್‌ಸ್ಟಾಗ್ರಾಂ ನಂತಹ ಸಿಮ್ ಆಧಾರಿತವಲ್ಲದ ಸಮಾಜತಾಣಗಳಿಂದ ಹಿಡಿದು ವಾಟ್ಸಪ್, ಕ್ಲಬ್‌ಹೌಸ್‌ನಂತಹ ಸಿಮ್ ಆಧಾರಿತ ಸಮೂಹ ಮಾಧ್ಯಮಗಳಲ್ಲೂ ಸತ್ಯದೊಂದಿಗೇ ಅಸತ್ಯದ ಅಂಶಗಳೂ ಢಾಳಾಗಿ ವಿಜೃಂಭಿಸತೊಡಗಿವೆ. ಆನ್‌ಲೈನ್ ಪತ್ರಿಕಾ ಜಾಲತಾಣಗಳಲ್ಲಿ ಹುಸಿ ವರದಿಗಳನ್ನು ಹುಡುಕುವುದೇ ದೊಡ್ಡ ಉದ್ಯಮವಾಗಿದೆ. ಇದಕ್ಕಾಗಿಯೇ ಪ್ರತ್ಯೇಕವಾದ ಜಾಲತಾಣಗಳೂ ಹುಟ್ಟಿಕೊಂಡಿದ್ದು ಅವುಗಳಲ್ಲೂ ಪಕ್ಷಪಾತಿ ವರ್ತನೆಯನ್ನು ಕಾಣಬಹುದಾಗಿದೆ. ಕಳೆದೆರಡು ವರ್ಷಗಳ ಕೊರೋನಾ ಮಹಾಪಿಡುಗಿನ ನಂತರ ಪತ್ರಿಕಾರಂಗದ ಚಹರೆಗಳು ಇನ್ನಿಲ್ಲದಂತೆ ಬದಲಾಗಿವೆ. ಮುದ್ರಣ ಮಾಧ್ಯಮವು ಕುಗ್ಗಿ ಆನ್‌ಲೈನ್ ಮಾಧ್ಯಮದ ಸಾಧ್ಯತೆಗಳು ವಿಸ್ತರಿಸಿವೆ. ಪತ್ರಿಕಾರಂಗದ ಆರ್ಥಿಕ ಲೆಕ್ಕಾಚಾರಗಳೂ ಬದಲಾಗಿವೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಜನರಿಗೆ ನೇರವಾಗಿ ತಲುಪುವ ಆನ್‌ಲೈನ್ ಮಾಧ್ಯಮಗಳಿಗೆ ಬೇಡಿಕೆ ಒದಗಿದೆ. ಆದರೆ ಜಾಹೀರಾತು ಕೊಡುತ್ತಿದ್ದ ಹಲವು ಸಂಸ್ಥೆಗಳು ನೇರವಾಗಿಯೇ ಗ್ರಾಹಕರನ್ನು ಮುಟ್ಟುವ ತಂತ್ರಗಳಿಗೆ ಮೊರೆಹೋಗಿರುವುದು ಪತ್ರಿಕಾರಂಗದ ವರಮಾನದ ಕುಸಿತಕ್ಕೆ ಕಾರಣವಾಗಿರುವುದು ವಾಸ್ತವ. 

ಹೀಗೆ ಮಾಹಿತಿಸ್ಫೋಟದ ಯುಗವು ‘ಮಾಹಿತಿ ವಿಪ್ಲವ’ದ ಕಾಲಘಟ್ಟವಾಗಿ ನಮ್ಮೆದುರಿಗೆ ನಿಂತಿರುವ, ವೆಬ್ 1.0 ರಿಂದ ವೆಬ್ 2.0 ಅನ್ನು ದಾಟಿ ವೆಬ್ 3.0 ಅನ್ನು ಅನುಭವಿಸುತ್ತಿರುವ ಈ ಹೊತ್ತಿನಲ್ಲಿ ಕನ್ನಡದ ಮಾಧ್ಯಮ ವಿದ್ಯಾರ್ಥಿಗಳು ಮಾಡಬೇಕಾದ್ದೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಇದು ಈ ಮುನ್ನುಡಿಯ ವ್ಯಾಪ್ತಿಯನ್ನು ಮೀರಿದ ಸಂಗತಿ. ‘ಮಾಧ್ಯಮ ತಂತ್ರಜ್ಞಾನ’ ಪುಸ್ತಕವು ಈ ವಿಪ್ಲವವನ್ನು ಅರಿತು ಬಾಳುವ ಹಲವು ದಿಕ್ಸೂಚಿ ಮಾಹಿತಿಗಳನ್ನು ನೀಡಿದೆ. ಇದನ್ನು ಕಂಪ್ಯೂಟರಿನ ಮಾಹಿತಿಯೆಂದೋ, ತಂತ್ರಾಂಶಗಳ ಕಸರತ್ತಿನ ವಿವರಣೆಗಳೆಂದೋ, ಆನ್‌ಲೈನ್ ಆಗುಹೋಗುಗಳ ದಾಖಲಾತಿಯೆಂದೋ ಭಾವಿಸುವಂತಿಲ್ಲ. ಈ ಪಠ್ಯವು ಜಗತ್ತಿನ ಮಾಹಿತಿ ತಂತ್ರಜ್ಞಾನ ಆಧಾರಿತ ಸಂವಹನದ ಎಲ್ಲ ಸಮಕಾಲೀನ ಆಯಾಮಗಳನ್ನು ಐತಿಹಾಸಿಕ ಹಿನ್ನೆಲೆಯೊಂದಿಗೆ ದಾಖಲಿಸಿದ ಮಹತ್ವದ ಪ್ರಯತ್ನ. 

ಇಂತಹ ನವಮಾಧ್ಯಮದ ಪಠ್ಯಪುಸ್ತಕಗಳು ಹೆಚ್ಚುಕಡಿಮೆ ಅಂತರಜಾಲದಲ್ಲಿ ಸಿಗುವ ವಿವರಣೆಗಳ ನಕಲಿನಿಂದಲೇ ತುಂಬಿಕೊಂಡಿರುವ ಅಪಾಯ ಇದ್ದೇ ಇತ್ತು. ಆದರೆ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುತ್ತಿರುವ ಶ್ರೀ ಸಿಬಂತಿ ಪದ್ಮನಾಭ ಮತ್ತು ಪತ್ರಿಕಾರಂಗದ ಯುವಪೀಳಿಗೆಯ ಬರಹಗಾರ ಶ್ರೀ ಶ್ರೀಶ ಪುಣಚ ಅವರಿಬ್ಬರೂ ಮೂಲತಃ ಸ್ವಂತ ಮಾಹಿತಿ ಸಂಗ್ರಹದಲ್ಲಿ ತೊಡಗಿರುವುದರಿಂದ ಈ ಪುಸ್ತಕವೂ ಅವರ ಅರಿವಿನ ಮೂಸೆಯಿಂದಲೇ ಅತ್ಯಂತ ಸ್ವಂತ ಕೃತಿಯಾಗಿ ಮೂಡಿದೆ. ವಿಕಿಪೀಡಿಯ ಪುಟಗಳಲ್ಲಿ ಇಂಥದ್ದೇ ಮಾಹಿತಿ ಸಿಗಬಹುದು; ಆದರೆ ಈ ಪಠ್ಯಪುಸ್ತಕದಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಬೇಕಾದ ಮಾಹಿತಿಗಳನ್ನು ವಿವಿಯ ಪಠ್ಯಕ್ರಮದ ಅನುಸಾರವಾಗಿಯೇ ಸ್ವತಂತ್ರವಾಗಿ ರೂಪಿಸಲಾಗಿದೆ. ಈ ಅಧ್ಯಾಯಗಳ ಬರಹದ ಶೈಲಿಯನ್ನು ನೋಡಿದಾಗ, ವಿಷಯಗಳನ್ನು ಚೆನ್ನಾಗಿ ಅರಿತು ವಿಶ್ಲೇಷಿಸಿ ಬರೆದಿರುವುದನ್ನು ಖಚಿತವಾಗಿ ಗುರುತಿಸಿದ್ದೇನೆ. ಇದೇ ಈ ಪುಸ್ತಕದ ಜೀವಿತಾವಧಿ ಹೆಚ್ಚಿಸಬಲ್ಲ ಒಂದು ಮುಖ್ಯ ಗುಣವಾಗಿದೆ. 

ಹೀಗಿದ್ದೂ, ಈ ಪುಸ್ತಕವು ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಮಾಧ್ಯಮ ತಂತ್ರಜ್ಞಾನದ ರಂಗಕ್ಕೆ ಒಂದು ಸಮಕಾಲೀನ ದಿಕ್ಸೂಚಿಯೇ ಹೊರತು, ಅರಿವಿನ ಸಮಗ್ರ ವಿಶ್ವಕೋಶವಲ್ಲ ಎಂಬುದೂ ನಿಜ. ಶ್ರಮವಹಿಸುವ ಮಾಧ್ಯಮ ವಿದ್ಯಾರ್ಥಿಗಳು ಈ ಪುಸ್ತಕದ ಮೂಲಕ ಹಲವು ರಂಗಗಳ ಬ್ರಹ್ಮಾಂಡ ಕಲಿಕೆಗೆ ಕೀಲಿಕೈ ಪಡೆಯುತ್ತಾರೆ. ಇಲ್ಲಿ ಬರೆದ ಪ್ರತಿಯೊಂದೂ ಅಧ್ಯಾಯ, ಉಪಶೀರ್ಷಿಕೆಗಳೇ ಪ್ರತ್ಯೇಕ ಮಾಧ್ಯಮ ತಂತ್ರಜ್ಞಾನ ರಂಗಗಳು. ಉದಾಹರಣೆಗೆ ಬ್ಲಾಕ್‌ಚೈನ್ ತಂತ್ರಜ್ಞಾನವನ್ನೇ ತೆಗೆದುಕೊಳ್ಳಿ. ಅದು ಮಾಹಿತಿ ತಂತ್ರಜ್ಞಾನದ ಭಾಗವಾಗಿ ಹ್ಯಾಶ್‌ಟ್ಯಾಗ್ ಹೆಸರಿನಲ್ಲಿ ಎರಡು ದಶಕಗಳಿಂದಲೂ ಬಳಕೆಯಲ್ಲಿತ್ತು. ಅದರ ಅವತಾರವೇ ಈಗ ಬದಲಾಗಿದೆ. ಈಗ ಬ್ಲಾಕ್‌ಚೈನನ್ನು ಎಲ್ಲ ಬಗೆಯ ಸತ್ಯದ ಮೂಲಕ್ಕೆ ಅಡಿಪಾಯ ಎಂದೇ ಬಗೆದು ವಿಜ್ಞಾನ, ಹಣಕಾಸು, ಭೂದಾಖಲೆ – ಹೀಗೆ ಹಲವು ರಂಗಗಳಲ್ಲಿ ಅಳವಡಿಸುತ್ತಿದ್ದಾರೆ. ಬ್ಲಾಕ್‌ಚೈನ್ ಕುರಿತಾಗಿ ಕನಿಷ್ಟ 20ಕ್ಕೂ ಹೆಚ್ಚು ಮಹತ್ವದ ಪುಸ್ತಕಗಳು ಕಳೆದೆರಡು ವರ್ಷಗಳಲ್ಲೇ ಬಂದಿವೆ. ಇನ್ನು ಎಐ, ವಿಆರ್‌ಗಳ ಬಗ್ಗೆ ಹೇಳಿದಷ್ಟೂ ಕಡಿಮೆ. 

ಈ ಉತ್ತಮ ಸಂಗತಿಗಳ ನಡುವೆಯೂ ಪಠ್ಯಕ್ರಮಕ್ಕೆ ಅನುಸಾರವಾಗಿಯೇ ಪುಸ್ತಕವನ್ನು ಬರೆಯುವ ಅನಿವಾರ್ಯತೆಯಲ್ಲಿ ಮಾಧ್ಯಮರಂಗಕ್ಕೆ ಬೇಕಾದ ಕೆಲವು ಅತಿಮುಖ್ಯ ತಂತ್ರಜ್ಞಾನಗಳ ಮಾಹಿತಿಗಳು ಲಭ್ಯವಿಲ್ಲ. ಉದಾಹರಣೆಗೆ ಡೇಟಾ ಜರ್ನಲಿಸಂ. ಇಂದು ಅಂಕಿಅಂಶಗಳ ಖಚಿತ ನೆರವಿಲ್ಲದೆ ಏನನ್ನೂ ಪ್ರತಿಪಾದಿಸಲು ಆಗದು; ಅಥವಾ ಅಂಕಿಅಂಶಗಳ ನೆರವಿನಿಂದ ಹಲವು ಸುದ್ದಿಗಳನ್ನು ಹೆಕ್ಕಿ ತೆಗೆಯಬಹುದು. ಇದು ಮೂಲತಃ ಪತ್ರಿಕಾರಂಗ, ಗಣಿತ ಮತ್ತು ಮಾಹಿತಿ ತಂತ್ರಜ್ಞಾನವನ್ನು ಮೇಳೈಸಿದ ಒಂದು ಮಾಧ್ಯಮ ತಂತ್ರಜ್ಞಾನ. ವೈಜ್ಞಾನಿಕವಾಗಿ ದತ್ತಾಂಶಗಳನ್ನು ವಿಶ್ಲೇಷಿಸುವ ಮೂಲಕ ನಾಡಿನ ಹಲವು ಸಮಸ್ಯೆಗಳನ್ನು ಹುಡುಕುವ, ಪರಿಹಾರಗಳನ್ನು ಅರಸುವ ಕೆಲಸವನ್ನು ಮಾಡಬಹುದು. ಈಗಾಗಲೇ ಭಾರತ ಸರ್ಕಾರ, ವಿವಿಧ ರಾಜ್ಯ ಸರ್ಕಾರಗಳು ಮುಕ್ತ ದತ್ತಾಂಶ ಪೋರ್ಟಲ್‌ಗಳನ್ನೇ ತೆರೆದಿವೆ. ಇವನ್ನೆಲ್ಲ ಮಾಧ್ಯಮ ರಂಗದ ವಿದ್ಯಾರ್ಥಿಗಳು ಅರಿತಿರಲೇಬೇಕು.  

ಪಠ್ಯಕ್ರಮಕ್ಕೇ ಹೊಂದಿಸಿಕೊಂಡು ಈ ಪುಸ್ತಕವನ್ನು ಬರೆದಿರುವುದು ಈ ಪುಸ್ತಕದ ಮಿತಿಯೂ ಹೌದು. ಇಂತಹ ಮಾಹಿತಿಪೂರ್ಣ ಪುಸ್ತಕವು ಸಾರ್ವಜನಿಕ ಓದಿಗೂ ಸಿಗಬೇಕು ಎಂಬ ಅಪೇಕ್ಷೆಯನ್ನು ಈ ಪುಸ್ತಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮದ ವಿವಿಧ ಹೊಸ ಆಯಾಮಗಳಾದ ಮೊಬೈಲ್ ಜರ್ನಲಿಸಂ, ಡಿಜಿಟಲ್ ಸುರಕ್ಷತೆ, ಗಣಿತ ತಂತ್ರಜ್ಞಾನ, ಲಿಪ್ಯಂತರಣ, ಇ–ಸಂವಹನ, ಡಿಜಿಟಲ್ ಕಥಾ ನಿರೂಪಣೆ, ಇನ್‌ಫೋಗ್ರಾಫಿಕ್ಸ್, ಡೇಟಾ ವಿಜುಯಲೈಸೇಶನ್, ಡಿಜಿಟಲ್ ಸಂಶೋಧನೆ, ಸಮುದಾಯ ಪತ್ರಿಕಾಕಾಯಕದ ತಂತ್ರಜ್ಞಾನ ಸಾಧ್ಯತೆಗಳು, ಪೋಡ್‌ಕಾಸ್ಟಿಂಗ್, ವಿಡಿಯೋ ಜರ್ನಲಿಸಂ – ಹೀಗೆ ಹಲವು ಮಾಹಿತಿ ತಂತ್ರಜ್ಞಾನ ಆಧಾರಿತ ಪತ್ರಕರ್ತರಿಗೆ ಅತ್ಯಾವಶ್ಯಕವಾದ ಸಂಗತಿಗಳ ಬಗ್ಗೆ ಕಲಿಯಲು ಈ ಪುಸ್ತಕವು ಮೊದಲ ಹೆಜ್ಜೆ ಆಗುವುದಂತೂ ನಿಶ್ಚಿತ.       

ಇನ್ನು ಈ ಪುಸ್ತಕದ ತಿರುಳೇ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಮಾಧ್ಯಮ ತಂತ್ರಜ್ಞಾನದ ಸಂಗತಿಗಳು. ಆದ್ದರಿಂದ ಮುದ್ರಿತ ಪುಸ್ತಕವಾಗಿ ಈ ಪುಸ್ತಕದ ಬಾಳಿಕೆ (ಅದರಲ್ಲೂ ಹೊಸ - ಬೆಳೆಯುತ್ತಿರುವ ತಂತ್ರಜ್ಞಾನಗಳ ಕುರಿತಾಗಿ) ಅಲ್ಪವೇ ಎಂಬುದು ಲೇಖಕರಿಗೆ ಗೊತ್ತಿರುವ ಹಾಗೆಯೇ ಶಿಕ್ಷಕ – ವಿದ್ಯಾರ್ಥಿಗಳೂ ಅರಿಯಬೇಕು. ಪತ್ರಿಕಾರಂಗದಲ್ಲಿ ವೃತ್ತಿಗೆ ಸೇರುವ ವಿದ್ಯಾರ್ಥಿಗಳ ಕಲಿಕೆಯ ಹೊಣೆಯರಿತ ಈ ವಿಶಿಷ್ಟ ಮತ್ತು ಮಾಹಿತಿಪೂರ್ಣ ಪುಸ್ತಕವನ್ನು ಸದಾ ತತ್‌ಸಾಮಯಿಕವಾಗಿ ಇರಿಸುವ ಆನ್‌ಲೈನ್ ತಾಣವನ್ನೂ ರೂಪಿಸುವುದು ಅತ್ಯಂತ ಅವಶ್ಯಕ. ಆಗ ಈ ಪುಸ್ತಕವನ್ನೇ ವಿಸ್ತರಿಸಿ ಹಲವು ಆಕರಗಳ ತಾಣಗಳಿಗೆ ಕೊಂಡಿಗಳನ್ನು ನೀಡಬಹುದು; ಬದಲಾದ ಮಾಹಿತಿಗಳನ್ನು ಸೂಕ್ತ ಉಲ್ಲೇಖದೊಂದಿಗೆ ಸೇರಿಸಬಹುದು; ಹೊಸ ಸಂಗತಿಗಳು ಅನಾವರಣಗೊಂಡ ಹಾಗೆಲ್ಲ ಸೇರಿಸುತ್ತ ಹೋಗಬಹುದು. ಇದೇ ಒಂದು ಮುಕ್ತಜ್ಞಾನ ಮಾದರಿಯ ಮಾಧ್ಯಮತಾಣ ಆಗುತ್ತದೆ. ಇಂತಹ ತಾಣವನ್ನು ಅಭಿವೃದ್ಧಿಪಡಿಸಿ ನಿರ್ವಹಿಸುವ ಖರ್ಚುಗಳನ್ನು ವಹಿಸಿಕೊಳ್ಳುವ ಬಗ್ಗೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳೂ ಒಂದು ಏಕಾಭಿಪ್ರಾಯಕ್ಕೆ ಬರಬಹುದು. ಆಗ ಇಂತಹ ಸದಾ ಬದಲಾಗುವ ಪಠ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ವರ್ಷಕ್ಕೊಂದು ಆವೃತ್ತಿಯಾಗಿ ಹೊಸತಾಗಿ ನೀಡಬಹುದು. ಜ್ಞಾನವನ್ನು ಮುಕ್ತವಾಗಿಟ್ಟು, ಜ್ಞಾನ ನಿರ್ವಹಣೆಗೆ ನಿಧಿ ನೀಡುವುದು ಈ ಕಾಲದ ಸಹಜ ಕ್ರಮವಾಗಿದೆ.  ಆಗಲೇ ಈ ಲೇಖಕರ ಶ್ರಮಕ್ಕೂ ಸೂಕ್ತ ಬೆಲೆ ಒದಗಿಸಿದಂತಾಗುತ್ತದೆ.  

ಮಾಧ್ಯಮ ತಂತ್ರಜ್ಞಾನವೆಂದರೆ ಕೇವಲ ಓದಿನ ಸರಕಲ್ಲ. ಸ್ವತಃ ಕಂಪ್ಯೂಟರ್ ಒಂದನ್ನು ಬಳಸಿ ಕಲಿಯಬೇಕಾದ ಸಂಗತಿಗಳು ಹೇರಳವಾಗಿವೆ. ಅದರಲ್ಲೂ ಮಾಧ್ಯಮ ವಿದ್ಯಾರ್ಥಿಗಳು ಡೆಸ್ಕ್ಟಾಪ್ ಕಂಪ್ಯೂಟರ್‌ಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಬೇಕು ಎಂಬುದು ನನ್ನ ಅನುಭವದ ಮಾತು. ಕಂಪ್ಯೂಟರ್‌ಗಳನ್ನು ಬೈಪಾಸ್ ಮಾಡಿ ಸ್ಮಾರ್ಟ್ಫೋನ್‌ಗಳನ್ನೇ ಬಳಸುತ್ತಿರುವ ಈ ಸಂದರ್ಭದಲ್ಲಿ ಈ ಮಾತು ವಿಚಿತ್ರವೆನ್ನಿಸಬಹುದು. ಆದರೆ ಡೆಸ್ಕ್ಟಾಪ್ ಕಂಪ್ಯೂಟರ್ ಎಂಬುದು ಪ್ರತಿಯೊಬ್ಬ ಪತ್ರಕರ್ತನ ವೃತ್ತಿಕೋಶ. ಮಾಹಿತಿ, ಕಲಿಕೆ, ತಂತ್ರಜ್ಞಾನ, ವಿಶ್ಲೇಷಣೆ, ಚಿತ್ರಣ, ವಿಷಯ ಸಂಪಾದನೆ, ಸಂಗ್ರಹ, ಸಂವಹನ - ಎಲ್ಲವನ್ನೂ ಸಾಧ್ಯವಾಗಿಸುವ ಕಂಪ್ಯೂಟರ್‌ಗಳನ್ನು ಅಂತರಜಾಲದ ಹೊಣೆಗಾರಿಕೆಯ ಬಳಕೆಯೊಂದಿಗೆ ಪತ್ರಕರ್ತರು ಸಮಾಜಮುಖಿಯಾಗಿ ಹಲವು ವರದಿಗಳನ್ನು ರೂಪಿಸಬಹುದು. 

ಕೊನೆಯ ಮಾತಾಗಿ ಹೇಳಬಹುದಾದರೆ, ಮಾಹಿತಿ ತಂತ್ರಜ್ಞಾನ, ಮಾಧ್ಯಮ ತಂತ್ರಜ್ಞಾನ – ಎಲ್ಲವೂ ನಾಡಿನ ಕಷ್ಟ ಸುಖಗಳನ್ನು ವರದಿಗಳ ಮೂಲಕ, ವಿವಿಧ ಮಾಧ್ಯಮಗಳ ಮೂಲಕ ಜನತೆಗೆ ತಲುಪಿಸುವ, ಸರ್ಕಾರಕ್ಕೆ ತಿಳಿಸುವ ಮೂಲ ಹೊಣೆಗಾರಿಕೆಗೆ ಸಹಕಾರಿಯಾಗುವ ಅಂಶಗಳೇ ಹೊರತು, ತಂತ್ರಜ್ಞಾನವೇ ಎಲ್ಲದಕ್ಕೂ ಪರಿಹಾರವಲ್ಲ. ತಂತ್ರಜ್ಞಾನವನ್ನು ಅರಿತರೆ ಪತ್ರಕರ್ತರು ಖಂಡಿತ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬಹುದು. ಪತ್ರಿಕಾರಂಗದಲ್ಲೂ ಉದ್ಯೋಗದ ಅವಕಾಶಗಳು ವೈವಿಧ್ಯವೂ, ವಿಸ್ತಾರವೂ ಆಗಿರುವ ಈ ಹೊತ್ತಿನಲ್ಲಿ ಈ ಪುಸ್ತಕವು ಹೊಸಕಾಲದ ಉದ್ಯೋಗಾವಕಾಶಗಳಿಗೆ ಕಿಟಕಿಯಾಗಿದೆ.     

ಇಂತಹ ತಾಜಾ ಪುಸ್ತಕವನ್ನು ಬರೆದ ಲೇಖಕರಿಬ್ಬರಿಗೂ ನನ್ನ ಅಭಿನಂದನೆಗಳು, ಶುಭಾಶಯಗಳು. ಜವಾಬ್ದಾರಿಯುತ ಮತ್ತು ತಂತ್ರಜ್ಞಾನಾಧಾರಿತ ಪತ್ರಿಕಾಕಾಯಕಕ್ಕೆ ಈ ಪುಸ್ತಕವು ನೆರವಾಗಲಿ ಎಂದು ಆಶಿಸುತ್ತೇನೆ. 

- ಬೇಳೂರು ಸುದರ್ಶನ 

  • ಪುಸ್ತಕದ ಶೀರ್ಷಿಕೆ: ಮಾಧ್ಯಮ ತಂತ್ರಜ್ಞಾನ
  • ಲೇಖಕರು: ಡಾ. ಸಿಬಂತಿ ಪದ್ಮನಾಭ ಕೆ. ವಿ. & ಡಾ.  ಶ್ರೀಶ ಎಂ. ಪುಣಚ
  • ಪ್ರಕಾಶನ: ಅಂಕುರ್ ಮೀಡಿಯಾ ಪಬ್ಲಿಕೇಶನ್ಸ್, ತುಮಕೂರು
  • ISBN: 978-81-958059-1-4
  • ಪ್ರಕಟಣೆಯ ವರ್ಷ: 2022
  • ಪುಟಗಳು: 234
  • ಬೆಲೆ: ರೂ. 250-00
  • ಪುಸ್ತಕಗಳಿಗಾಗಿ ಸಂಪರ್ಕ: 9449525854

ಕಾಮೆಂಟ್‌ಗಳಿಲ್ಲ: