(30 ಜನವರಿ 2016ರಂದು ತುಮಕೂರಿನ 'ಪ್ರಜಾಪ್ರಗತಿ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಅದು 1969. ಮಹಾತ್ಮ ಗಾಂಧೀಜಿಯವರ ಜನ್ಮಶತಮಾನೋತ್ಸವ ವರ್ಷ. ಅದರ ಆಚರಣೆಯ ಅಂಗವಾಗಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ಆಯ್ದ ಪ್ರೌಢಶಾಲಾ
ಶಿಕ್ಷಕರಿಗೆ ಹತ್ತು ದಿನಗಳ ವಿಶೇಷ ತರಬೇತಿ ಶಿಬಿರವನ್ನು ಗಾಂಧೀಜಿಯವರ ಕರ್ಮಭೂಮಿ ವಾರ್ಧಾದಲ್ಲಿ ಹಮ್ಮಿಕೊಂಡಿತ್ತು. ಕರ್ನಾಟಕದಿಂದ ಆಯ್ಕೆಯಾದ 25 ಶಿಕ್ಷಕರಲ್ಲಿ ಹಾರೋಹಳ್ಳಿ ಪ್ರೌಢಶಾಲೆಯ ಯುವ ಹೆಡ್ಮಾಸ್ತರರೂ ಸೇರಿದ್ದರು. ಆದರೆ 34ರ ಆಜುಬಾಜಿನಲ್ಲಿದ್ದ ಆ ಉತ್ಸಾಹೀ ತರುಣನಿಗೆ ವಾರ್ಧಾ ಶಿಬಿರ ತನ್ನ ಬದುಕಿನ ಉದ್ದೇಶ ಮತ್ತು ಗತಿಯನ್ನೇ ಬದಲಿಸೀತು ಎಂಬ ಊಹನೆ ಬಹುಶಃ ಇದ್ದಿರಲಾರದು.
ಹೌದು, ವಾರ್ಧಾ ಕಾರ್ಯಕ್ರಮ ಆ ಯುವಕನ ಜೀವನದ ಬಹುದೊಡ್ಡ ತಿರುವಾಯಿತು; ಆತನ ಬದುಕಿಗೆ ಹೊಸ ಕಾಣ್ಕೆ ನೀಡಿತು. ಶಿಬಿರದ ಭಾಗವಾಗಿದ್ದ ಸರಳ ಜೀವನ, ಹಳ್ಳಿಗಳ ಭೇಟಿ, ಶ್ರಮದಾನ, ಗಾಂಧೀ ಚಿಂತನ-ಮಂಥನಗಳು ಅವನ ಮನಸ್ಸನ್ನು ಅಪಾರವಾಗಿ ಪ್ರಭಾವಿಸಿದವು. 'ಗಾಂಧಿಯಂತೆ ಬದುಕಲಾದೀತೋ ಗೊತ್ತಿಲ್ಲ, ಆದರೆ ಅವರ ಹಾದಿಯಲ್ಲಿ ಕಿಂಚಿತ್ತಾದರೂ ಕ್ರಮಿಸಿದರೆ ಅದೇ ಅವರಿಗೆ ಸಲ್ಲಿಸುವ ಗೌರವ. ಅದನ್ನು ತಾನು ಮಾಡುವುದರ ಜೊತೆಗೆ ಸ್ವತಃ ಶಿಕ್ಷಕನಾಗಿ ಎಳೆಯ ಮನಸ್ಸುಗಳಲ್ಲಿ ಗಾಂಧೀ ಕನಸುಗಳ ಬೀಜ ಬಿತ್ತಬೇಕು’ ಎಂದು ಆ ಯುವಕ ಅಂದೇ ದೃಢ ಸಂಕಲ್ಪ ಮಾಡಿದ.
ಊರಿಗೆ ವಾಪಸಾದ ಮೇಲೆ ಆತ ಮಾಡಿದ ಮೊದಲ ಕೆಲಸ ತನ್ನ ಶಾಲೆಯ ಹೆಸರನ್ನು ಬಾಪೂ ಶಾಲೆಯೆಂದು ಬದಲಾಯಿಸಿದ್ದು. ಅಲ್ಲಿಂದ ಆರಂಭವಾಯಿತು ಹೊಸ ಹಾದಿ, ಹೊಸ ಬದುಕು, ಹೊಸ ಜಗತ್ತು. ಗಾಂಧೀ ತತ್ವ ಸಿದ್ಧಾಂತಗಳನ್ನು ಹೆಜ್ಜೆಹೆಜ್ಜೆಗೂ ಕನವರಿಸುತ್ತಿದ್ದ ಯುವಹೆಡ್ಮಾಸ್ತರರು ಶಾಲೆಯನ್ನು ಎತ್ತರೆತ್ತರಕ್ಕೆ ಬೆಳೆಸಿದರು. ವಿದ್ಯಾರ್ಥಿಗಳನ್ನೂ ಬೆಳೆಸಿದರು, ತಾನೂ ಬೆಳೆದರು. ಗಾಂಧೀ ಕುರಿತ ಓದು-ಅಧ್ಯಯನ-ಚಟುವಟಿಕೆಗಳು ಅವ್ಯಾಹತವಾದವು. ಇಡೀ ಹಾರೋಹಳ್ಳಿಯಲ್ಲಿ ಹೊಸ ಉತ್ಸಾಹ, ಎಚ್ಚರ, ಅಭಿಮಾನ ತುಂಬಿಕೊಂಡಿತು. ಹಳ್ಳಿಯೇ ಒಂದು ಶಾಲೆಯಾಯಿತು ಎಂದರೂ ಸರಿಯೇ.
ಅಂದಹಾಗೆ, ಆ ಯುವಕನ ಹೆಸರು ತೊಂಡೋಟಿ ಎಲ್. ನರಸಿಂಹಯ್ಯ ಎಂದು. ತುಮಕೂರಿನವರಿಗಷ್ಟೇ ಅಲ್ಲ, ಗಾಂಧೀ ಚಿಂತನೆಗಳಿಂದ ಪುಳಕಿತರಾಗುವ ನಾಡಿನ ಸಾವಿರಾರು ಮಂದಿಗೆ ಆತ್ಮೀಯತೆಯ, ಅಭಿಮಾನದ ಹೆಸರು. ಪ್ರಸ್ತುತ ಕರ್ನಾಟಕ ರಾಜ್ಯ ಸರ್ವೋದಯ ಮಂಡಲದ ಕಾರ್ಯದರ್ಶಿ ಹಾಗೂ ಗಾಂಧೀ ಸ್ಮಾರಕ ನಿಧಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ನರಸಿಂಹಯ್ಯ ಕಳೆದ ಐವತ್ತು ವರ್ಷಗಳಿಂದಲೂ ಗಾಂಧೀ ಆದರ್ಶಗಳನ್ನು ಉಸಿರಾಡಿದವರು, ಅಂತೆಯೇ ಬದುಕಿದವರು.
ಪ್ರಜಾತಂತ್ರದ ಚೌಕಟ್ಟಿನಲ್ಲೇ ಅಸಮಾನತೆ, ಸ್ವಾತಂತ್ರ್ಯಹರಣದ ವಿರುದ್ಧ ನ್ಯಾಯಯುತವಾಗಿ ಸೆಣಸಬಹುದೆಂದು ತೋರಿಸಿಕೊಟ್ಟವರು ಗಾಂಧಿ. ಶಾಂತಿ-ಸತ್ಯ-ಅಹಿಂಸೆಗಳಿಂದಲೇ ವೈರಿಗಳನ್ನು ಮಣಿಸಬಹುದೆಂದು ಸಿದ್ಧಪಡಿಸಿದ ಮಹಾತ್ಮ ಅವರು. ಸತ್ಯಾಗ್ರಹ, ಸ್ವದೇಶೀ ಆಂದೋಲನಗಳಿಗೆ ರಾಷ್ಟ್ರೀಯ ಸ್ವರೂಪ ಕೊಟ್ಟ ನೇತಾರ ಅವರು. ಅಸ್ಪೃಶ್ಯತೆ ಅಳಿಯದೆ ಸ್ವಾತಂತ್ರ್ಯಕ್ಕೆ ಬೆಲೆಯಿಲ್ಲ ಎಂದು ನಂಬಿದವರು ಅವರು. ಎಲ್ಲಕ್ಕಿಂತ ಮುಖ್ಯವಾಗಿ ನಡೆ-ನುಡಿಗಳ ಸಮನ್ವಯ ಪುರುಷ ಗಾಂಧಿ... ಇದು ನರಸಿಂಹಯ್ಯನವರು ಮಹಾತ್ಮನನ್ನು ಕಟ್ಟಿಕೊಡುವ ರೀತಿ. ಗಾಂಧೀಜಿ ಅವರ ಹೃದಯದ ಮಿಡಿತ. ಬದುಕಿನ ಬಿಂಬ.
ಮಧುಗಿರಿ ತಾಲೂಕಿನ ಐಡಿಹಳ್ಳಿ ಹೋಬಳಿಯ ತೊಂಡೋಟಿ ಗ್ರಾಮದಲ್ಲಿ ದಿ| ಮಾದಮ್ಮ - ದಿ| ಲಕ್ಷ್ಮೀನರಸಿಂಹಯ್ಯ ಕೃಷಿಕ ದಂಪತಿಗಳ ಮಗನಾಗಿ ಜನವರಿ 9, 1935ರಂದು ಜನಿಸಿದ ನರಸಿಂಹಯ್ಯನವರು ಬಾಲ್ಯದಲ್ಲೇ ತಂದೆಯ ಅಗಲಿಕೆ ಹಾಗೂ ಕೌಟುಂಬಿಕ ಅವಮಾನದ ಬೇನೆಗಳನ್ನು ಉಂಡವರು. ಹುಟ್ಟೂರಿನಲ್ಲಿ ಶಾಲೆಯಿಲ್ಲದ್ದರಿಂದ 9-10 ವಯಸ್ಸಿನವರೆಗೂ ಶಿಕ್ಷಣದಿಂದ ದೂರವೇ ಉಳಿಯಬೇಕಾಯಿತು. ಅವರೇ ಹೇಳುವಂತೆ ಪ್ರಾಥಮಿಕ ಶಿಕ್ಷಣ ಅವರಿಗೆ ಬಿಸಿಲು-ಬೆಳದಿಂಗಳು. ಮುಂದೆ ಕೊರಟಗೆರೆ ತಾಲೂಕಿನ ತುಂಬಾಡಿ ಮತ್ತು ಸರ್ಕಾರಿ ಪ್ರೌಢಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ.ವರೆಗಿನ ಶಿಕ್ಷಣ ಪಡೆದು, ಬೆಂಗಳೂರು, ತುಮಕೂರು, ಮಂಗಳೂರುಗಳಲ್ಲಿ ಬಿ.ಇಡಿ.ವರೆಗಿನ ಶಿಕ್ಷಣ ಪೂರೈಸುವಷ್ಟರಲ್ಲಿ ನರಸಿಂಹಯ್ಯನವರ ಭವಿಷ್ಯದ ನಡೆ ನಿರ್ಧಾರವಾಗಿತ್ತು. ಮೂರು ದಶಕಗಳಿಗೂ ಹೆಚ್ಚುಕಾಲ ಮುಖ್ಯೋಪಾಧ್ಯಾಯರಾಗಿ ಹಾರೋಹಳ್ಳಿ ಶಾಲೆಯನ್ನು ಜನಮೆಚ್ಚುವಂತೆ ಮುನ್ನಡೆಸಿದ ಅವರಿಗೆ ಅಧ್ಯಾಪನ ವೃತ್ತಿ-ಪ್ರವೃತ್ತಿ ಎಲ್ಲವೂ ಆಗಿತ್ತು. 1993ರಲ್ಲಿ ಅವರು ನಿವೃತ್ತರಾದುದು ಉದ್ಯೋಗದಿಂದ ಮಾತ್ರ, ಪ್ರವೃತ್ತಿಯಿಂದ ಅಲ್ಲ.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ರಾಜ್ಯ ಶಿಕ್ಷಣ ಕಲ್ಯಾಣ ನಿಧಿಯ ಸದಸ್ಯರಾಗಿ, ರಾಷ್ಟ್ರೀಯ ಶಿಕ್ಷಣ ನೀತಿಯ ರಾಜ್ಯಮಟ್ಟದ ತರಬೇತುದಾರರಾಗಿ, ಬೆಂಗಳೂರು ಸಾಕ್ಷರತಾ ಆಂದೋಲನದ ಕಾರ್ಯದರ್ಶಿಯಾಗಿ, ಕ.ಸಾಪ.ದ ತಾಲೂಕು ಹಾಗೂ ಜಿಲ್ಲಾ ಘಟಕಗಳ ಸದಸ್ಯರಾಗಿ ಅವರು ನಿರ್ವಹಿಸಿದ ಜವಾಬ್ದಾರಿಗಳು, ಸಂಘಟಿಸಿದ ಕಾರ್ಯಕ್ರಮಗಳು ನೂರಾರು. ಆಕಾಶವಾಣಿ-ದೂರದರ್ಶನಗಳಲ್ಲಿ ಯುವ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದ ಸಂದರ್ಭಗಳು ಹಲವಾರು. ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳು, ರಾಷ್ಟ್ರೀಯ ಭಾವೈಕ್ಯತೆ, ಯುವಸಬಲೀಕರಣ ವಿಷಯಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸಗಳನ್ನು ನೀಡುತ್ತಾ, ಗಾಂಧಿ ಕುರಿತ ಕ್ವಿಜ್ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ತಮ್ಮ 81ರ ಇಳಿವಯಸ್ಸಿನಲ್ಲೂ ಬಳಲಿಕೆಯಿಲ್ಲದೆ ಓಡಾಡುತ್ತಿರುವ ನರಸಿಂಹಯ್ಯನವರು ನಮ್ಮ 18ರ ಯುವಕರಿಗೂ ಒಂದು ಅಚ್ಚರಿ.
'ಸ್ಪರ್ಧಾಪ್ರಪಂಚ’ ಪತ್ರಿಕೆಯ ಗೌರವ ಸಂಪಾದಕರಾಗಿ ೧೦ ವರ್ಷ ಸೇವೆ ಸಲ್ಲಿಸಿದ ಅವರು ನಾಡಿನ ವಿವಿಧ ಪತ್ರಿಕೆಗಳಿಗೆ ಬರೆದ ಲೇಖನಗಳು ಅಸಂಖ್ಯ. ಕೆ.ಜಿ.ಮಲ್ಯ ಅವರ The Statue of Mahatma ವಿಡಂಬನಾತ್ಮಕ ಕಾದಂಬರಿಯನ್ನು 'ಮಹಾತ್ಮರ ಪ್ರತಿಮೆ’ ಎಂಬ ಶೀರ್ಷಿಕೆಯಲ್ಲಿ ಸಮರ್ಥವಾಗಿ ಕನ್ನಡಕ್ಕೆ ತಂದು ಗಾಂಧೀ ಸ್ಮಾರಕ ನಿಧಿಯ ಪುರಸ್ಕಾರಕ್ಕೆ ಪಾತ್ರರಾದ ಅವರು ಇದೀಗ ಹೊಸದೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಅದುವೇ 'ಗಾಂಧೀ ಗೋವಿನ ಕಥೆ’.
ಯಾವ ಗಾಂಧೀಜಿಯನ್ನು ಶ್ರೇಷ್ಠ ಆದರ್ಶವೆಂದು ತಮ್ಮ ಬದುಕಿನುದ್ದಕ್ಕೂ ನಂಬಿದ್ದರೋ, ಆ ಮಹಾತ್ಮನ ಚಿಂತನೆಗಳ ಸಾರ ಸರ್ವಸ್ವವನ್ನೂ ಸಾಂಧ್ರಗೊಳಿಸಿ 'ಗಾಂಧೀ ಗೋವಿನ ಕಥೆಯಿದು!’ ಎಂಬ ವಿನೂತನ ಕೃತಿಯನ್ನು ನರಸಿಂಹಯ್ಯನವರು ರಚಿಸಿದ್ದಾರೆ. ಪ್ರೌಢಶಾಲಾ ವಿದ್ಯಾರ್ಥಿಗಳನ್ನೇ ಗಮನದಲ್ಲಿರಿಸಿಕೊಂಡು ಬರೆದ ಈ ಕಾವ್ಯಕ್ಕೆ ಅವರು ಗೋವಿನಹಾಡಿನ ಸ್ವರೂಪವನ್ನು ಉದ್ದೇಶಪೂರ್ವಕವಾಗಿಯೇ ನೀಡಿದ್ದಾರೆ.
ಗೋವು ಮತ್ತು ಗಾಂಧೀಗೋವು ಎರಡೂ ಹಿಂಸೆ ಮಾಡದೆ ಹಿಂಸೆ ಸಹಿಸುವ ಜಾಯಮಾನದವು. ಪುಣ್ಯಕೋಟಿ ಒಂದು ವ್ಯಾಘ್ರವನ್ನು ಮಾತ್ರ ಎದುರಿಸಬೇಕಾಯಿತು, ಆದರೆ ಗಾಂಧೀಜಿ ತಮ್ಮ ಹೋರಾಟದುದ್ದಕ್ಕೂ ಹತ್ತಾರು ವ್ಯಾಘ್ರಗಳನ್ನು ಎದುರಿಸಿ ಸತ್ಯ-ಅಹಿಂಸೆಗಳಿಂದಲೇ ಅವುಗಳನ್ನು ಮಣಿಸಿದರು. ಹೀಗಾಗಿ ಗಾಂಧೀಜಿಯವರ ಬದುಕನ್ನು ನಮ್ಮ ಹೊಸತಲೆಮಾರಿಗೆ ಹೇಳುವುದಕ್ಕೆ ಗೋವಿನಹಾಡೇ ಅತ್ಯಂತ ಸೂಕ್ತ ವಿಧಾನ. ಇದು ಮಕ್ಕಳಿಗೆ ಆಪ್ಯಾಯಮಾನವೂ ಆದೀತು ಎನ್ನುತ್ತಾರೆ ನರಸಿಂಹಯ್ಯನವರು.
ಅಸ್ತ್ರ ಬಳಸದೆ, ವ್ಯಾಘ್ರ ಬಳಗವ
ಶಾಂತಿ ಮೌಲ್ಯದ ಬಲೆಗೆ ಬೀಳೀಸಿ;
ಹದವ ಮಾಡಿದ ಶ್ರೇಷ್ಠವೆನಿಸಿದ
ಗಾಂಧಿ ಗೋವಿನ ಕಥೆಯಿದು||
ಎಂದು ಪೀಠಿಕಾ ಭಾಗದಲ್ಲೇ ಅವರು ಹೇಳಿಕೊಂಡಿರುವುದು ಹೃದ್ಯವಾಗಿದೆ. ಗಾಂಧೀಜಿಯವರು ಆಫ್ರಿಕಾದಿಂದ ಹಿಂತಿರುಗಿ 100 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಈ ಕೃತಿ ರಚಿಸಿರುವ ನರಸಿಂಹಯ್ಯನವರು, ಗಾಂಧೀಜಿಯವರ ಬಾಲ್ಯ, ವಿದ್ಯಾಭ್ಯಾಸ, ಆಫ್ರಿಕಾ ಜೀವನ, ವರ್ಣಬೇಧ ನೀತಿಯ ವಿರುದ್ಧದ ಹೋರಾಟ, ಸತ್ಯಾಗ್ರಹಗಳ ಗಾಥೆಯನ್ನು ಎಳೆಯೆಳೆಯಾಗಿ ಎಳೆಯ ಮನಸ್ಸುಗಳಿಗೆ ನಾಟುವಂತೆ ಚಿತ್ರಿಸಿದ್ದಾರೆ. ಸ್ವಾತಂತ್ರ್ಯ ಸೇನಾನಿ ಡಾ. ಎಚ್. ಎಸ್. ದೊರೆಸ್ವಾಮಿ ಹಾಗೂ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರ ಮುನ್ನುಡಿಯಿಂದ ಇನ್ನಷ್ಟು ಮೌಲಿಕವಾಗಿರುವ ಕೃತಿ ಅದೇ ಮಹನೀಯರ ಉಪಸ್ಥಿತಿಯಲ್ಲಿ ಇಂದು (ಜನವರಿ 30, 2016) ಗಾಂಧೀಜಿ ಪುಣ್ಯತಿಥಿಯಂದೇ ಬಿಡುಗಡೆಯಾಗುತ್ತಿದೆ. ಗಾಂಧೀ ಗೋವಿನ ಕಥೆಯ ಮುಂದಿನ ಭಾಗಗಳನ್ನು ನಾವು ಬೇಗನೇ ಓದುವಂತಾಗಲಿ.
ರಕ್ಷಾಪುಟ ವಿನ್ಯಾಸ: ಶ್ರೀಶ ಪುಣಚ (ಚಿತ್ರ-ಮುದಿಗೆರೆ ಸಂದೀಪ್) |