ಮಂಗಳವಾರ, ಡಿಸೆಂಬರ್ 25, 2018

ಡೆಸ್ಕ್ ಚಿತ್ರಕಥಾ

ಡಿಸೆಂಬರ್ 25, 2018ರ ಉದಯವಾಣಿ 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ

ತನ್ನ ವಿದ್ಯಾರ್ಥಿಗಳನ್ನು ಕುರಿತು ಕಾಲೇಜು ಮೇಷ್ಟ್ರೊಬ್ಬ ಶತದಡ್ಡರು ನಾಲಾಯಕ್ಕುಗಳು ಎಂದು ಎಂದಾದರೂ ರೇಗಿದ್ದಾನೆ ಎಂದರೆ ಆತ ಆವರೆಗೆ ಇಡೀ ತರಗತಿಗೆ ಒಮ್ಮೆಯೂ ಪ್ರದಕ್ಷಿಣೆ ಬಂದಿಲ್ಲವೆಂದೇ ಅರ್ಥ. ಬಂದಿದ್ದರೆ ಆತನ ತರಗತಿಯಲ್ಲಿರುವ ಸಿನಿಮಾ ಹೀರೋಗಳು, ಅಮರ ಪ್ರೇಮಿಗಳು, ಮಹಾಕವಿಗಳು, ತತ್ತ್ವಜ್ಞಾನಿಗಳ ಬಗ್ಗೆ ಅವನಿಗೆ ಜ್ಞಾನೋದಯವಾಗದೇ ಇರುತ್ತಿರಲಿಲ್ಲ.

'ರಾತ್ರಿಯಿಡೀ ಓದಿಯೂ ಏನೂ ಬರಿಯಕ್ಕೆ ಹೊಳೀತಿಲ್ರೀ. ದಯಮಾಡಿ ಪಾಸು ಮಾಡಿ ಸರಾ...’ ಎಂದು ಉತ್ತರ ಪತ್ರಿಕೆಯ ಕೊನೆಯಲ್ಲಿ ಸಾಷ್ಟಾಂಗ ಸಮಸ್ಕಾರ ಸಮೇತ ವಿನಂತಿ ಮಾಡಿಕೊಳ್ಳುವ ಉತ್ತರ ಭೂಪರೂ ಕ್ಲಾಸಿನಲ್ಲಿ ಕುಳಿತರೆಂದರೆ ಅವರ ಸುಪ್ತ ಪ್ರತಿಭೆ ತಾನಾಗೇ ಚಿಗುರಲು ಆರಂಭಿಸುತ್ತದೆ. ಅದರಿಂದ ಒಡಮೂಡುವ ಪ್ರಕಾರವೇ ಸಾರಸ್ವತ ಲೋಕದಲ್ಲಿ ತೀರಾ ವಿಶಿಷ್ಟವೆನಿಸುವ ಡೆಸ್ಕ್ ಸಾಹಿತ್ಯ. ತೀರಾ ಬೋರು ಹುಟ್ಟಿಸುವ ಮೇಷ್ಟ್ರುಗಳೇ ಇಂತಹ ಪ್ರತಿಭೆಗಳ ನಿಜವಾದ ಪ್ರೇರಣೆಯಾಗಿರುವುದರಿಂದ ಅವರನ್ನು ಸಾಹಿತ್ಯ ಪೋಷಕರು ಎಂದು ಎಲ್ಲ ರೀತಿಯಿಂದಲೂ ಒಪ್ಪಿಕೊಳ್ಳಬಹುದು.

ಡೆಸ್ಕ್ ಸಾಹಿತ್ಯಕ್ಕೆ ಹಲವು ಆಯಾಮಗಳಿದ್ದರೂ ಅದರಲ್ಲಿ ಪ್ರೇಮಸಾಹಿತ್ಯಕ್ಕೇ ಸಿಂಹಪಾಲು. ಅಲ್ಲದೆ, ಇಂತಹ ಸಾಹಿತಿಗಳ ಪೈಕಿ ಹುಡುಗರದ್ದೇ ಬಹುಸಂಖ್ಯೆ ಎಂಬ ವೈಜ್ಞಾನಿಕ ಸತ್ಯವನ್ನು ಯಾವ ಸಂಶೋಧನೆಯೂ ಇಲ್ಲದೆ ದೃಢೀಕರಿಸಬಹುದು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಎಲ್ಲದರಲ್ಲೂ ಹುಡುಗಿಯರದ್ದೇ ಮೇಲುಗೈ ಎಂದು ಪದೇಪದೇ ಮುಖಪುಟದಲ್ಲಿ ಬರೆಯುವ ಪತ್ರಿಕೆಗಳು ಡೆಸ್ಕ್ ಸಾಹಿತ್ಯ ನಿರ್ಮಾಣದಲ್ಲಿ ಹುಡುಗರದ್ದೇ ಮೇಲುಗೈ ಎಂಬುದನ್ನು ಬೇಷರತ್ತಾಗಿ ಪ್ರಕಟಿಸಬೇಕಾಗುತ್ತದೆ.
ಮೇಘಸಂದೇಶದ ಬಳಿಕ ಪ್ರೇಮಪತ್ರಗಳ ಕಾಲ ಸರಿದುಹೋಗಿ ವಾಟ್ಸಾಪು ಅವತರಿಸಿದರೂ ಡೆಸ್ಕಿನ ಮೇಲೆ ಪ್ರೇಮನಿವೇದನೆ ಮಾಡುವ ಸಂಪ್ರದಾಯಕ್ಕೆ ಎಳ್ಳಿನಿತೂ ಧಕ್ಕೆಯಾಗಿಲ್ಲ. ಯಾವುದಾದರೂ ಡೆಸ್ಕಿನ ಮೇಲೆ ಪ್ರೇಮ ಪ್ರತೀಕವಾದ ಹೃದಯದ ಒಂದಾದರೂ ರೇಖಾಚಿತ್ರ ಇಲ್ಲದೇ ಹೋದರೆ ಅಂತಹ ಕಾಲೇಜನ್ನು ಕಾಲೇಜೆಂದು ಕರೆಯುವುದು ಹುಡುಗರಿಗೆ ಮಾಡುವ ಅವಮಾನವೆಂದೇ ಭಾವಿಸಬಹುದು.

ಡೆಸ್ಕಿನ ಮೇಲೆ ಈಗಾಗಲೇ ಇರುವ ಹೃದಯದ ಚಿತ್ರವನ್ನು ಇನ್ನಷ್ಟು ಬಲಪಡಿಸುವ ಹೊಣೆ ಮುಂದಿನ ವರ್ಷಗಳಲ್ಲಿ ಬರುವ ಕಿರಿಯ ತಲೆಮಾರಿನದ್ದು. ಈ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ಜೂನಿಯರ‍್ಸ್ ಮುಂದುವರಿಸುತ್ತಾರೆಂದು ಕನಿಷ್ಟ ಐದು ವರ್ಷ ಹಳೆಯದಾದ ಯಾವ ಡೆಸ್ಕುಗಳನ್ನು ನೋಡಿದರೂ ಹೇಳಬಹುದು. ಡೆಸ್ಕು ಹಳೆಯದಾದಷ್ಟು ಸಾಹಿತ್ಯ ಹೆಚ್ಚು ಗಟ್ಟಿ.

'ಬುಲ್‌ಬುಲ್ ಮಾತಾಡಕಿಲ್ವ?’ ಎಂಬ ತನ್ನ ಬಹುಕಾಲದ ಬೇಡಿಕೆಯನ್ನು ಹುಡುಗಿ ಕೂರುವ ಡೆಸ್ಕಿನ ಮೇಲೆ ಸೂಚ್ಯವಾಗಿ ಬಹಿರಂಗಪಡಿಸಿ ನಾಪತ್ತೆಯಾಗುವ ಬಯಲುಸೀಮೆಯ ಹುಡುಗ, 'ಎನ್’ ಐ ಮಿಸ್ ಯೂ ಎಂದೋ, ಐ ಲವ್ ಯೂ 'ಕೆ’ ಎಂದೋ ಡೆಸ್ಕಿನ ಮೇಲೆ ಗೀಚಿ ಬರೆದದ್ದು ಹುಡುಗನೋ ಹುಡುಗಿಯೋ ಎಂಬ ರಹಸ್ಯವನ್ನು ಕಾಪಾಡಿಕೊಳ್ಳುವ ಅನಾಮಿಕ ಪ್ರೇಮಿ, ಈ ಕಣ್ಣಿರೋದು ನಿನ್ನನ್ನೇ ನೋಡಲು ಚಿನ್ನೂ ಎಂದೋ, ನೀನಿಲ್ಲನ ನಾನು ನೀರಿಲ್ಲದ ಮೀನು ಎಂದೋ ಒಂದೇ ಸಾಲಿನ ಕವಿತೆಯನ್ನು ಬರೆದು ಅಡಗಿ ಕೂರುವ ಭಾವಜೀವಿ- ಎಲ್ಲರೂ ಈ ಸಾಹಿತ್ಯ ವಲಯದ ಆಧಾರ ಸ್ತಂಭಗಳು.

ಆಕ್ಷನ್ ಪ್ರಿನ್ಸ್‌ಗೂ ಡಿಂಪಲ್ ಕ್ವೀನ್‌ಗೂ ಸಿಂಪಲ್ಲಾಗ್ ಲವ್ ಆಯ್ತು ಎಂದು ತನ್ನ ಪ್ರೇಮಕಥನವನ್ನೇ ಸಿನಿಮಾ ಶೈಲಿಯಲ್ಲಿ ಪ್ರಸ್ತುತ ಪಡಿಸುವ ಸುಪ್ತಪ್ರತಿಭೆ, ಆರ್ ಲವ್ಸ್ ಇ: ಗ್ರೇಟ್ ಲವರ್ಸ್ ಫಾರೆವರ್ ಎಂದು ತಾನು ನಿರ್ಮಿಸಲಿರುವ ಹೊಸ ಸಿನಿಮಾದ ಟೈಟಲನ್ನು ಪ್ರಕಟಿಸುವ ಭಾವೀ ನಿರ್ದೇಶಕ, ಕನ್ನಡ ಮೇಷ್ಟ್ರ ಪಾಠ ಕೇಳುತ್ತಲೇ ಪಕ್ಕದ ಬೆಂಚಿನ ಕನಸಿನ ಕನ್ಯೆಯನ್ನು ನೋಡಿ 'ಓ ನನ್ನ ಚೇತನ’ ಎಂದು ಬರೆದು ಅದರ ಸುತ್ತಲೊಂದು ಹೃದಯದ ನಕಾಶೆಯನ್ನು ಕೊರೆವ ಕಳ್ಳಕವಿ- ಇವರೂ ಈ ಸಾಹಿತ್ಯಸಮಾಜದ ಸಕ್ರಿಯ ನಾಗರಿಕರು.

ಯಾವ ಸಿನಿಮಾ ಹೀರೋಗಳು ಹೆಚ್ಚು ಜನಪ್ರಿಯರು, ಪಡ್ಡೆಗಳ ಹೃದಯ ಗೆದ್ದಿರುವ ಚಿತ್ರಗಳು ಯಾವವೆಂದು ತಿಳಿಯಲೂ ಪ್ರತ್ಯೇಕ ಸಮೀಕ್ಷೆಗಳು ಬೇಕಿಲ್ಲ. ಡೆಸ್ಕುಗಳ ಮೇಲೆ ಐದು ನಿಮಿಷ ಕಣ್ಣಾಡಿಸಿಕೊಂಡು ಬಂದರೆ ಧಾರಾಳವಾಯ್ತು. ಎಲ್ಲ ಬಗೆಯ ರಿಯಲ್ ಸ್ಟಾರುಗಳು, ಗೋಲ್ಡನ್ ಸ್ಟಾರ್‌ಗಳು, ರೆಬೆಲ್ ಸಾರ್‌ಗಳು, ಪವರ್ ಸ್ಟಾರ್‌ಗಳು ಸಾಲುಸಾಲಾಗಿ ಪವಡಿಸಿರುತ್ತಾರೆ. ಅದ್ದೂರಿ, ಭರ್ಜರಿ, ಬಹದ್ದೂರ್, ಗಜಕೇಸರಿ, ಜಗ್ಗುದಾದ, ಕಿರಾತಕ, ರಾಮಾಚಾರಿ... ಎಂಬಿತ್ಯಾದಿ ಸಿನಿಮಾಗಳು ಥಿಯೇಟರುಗಳಲ್ಲಿ ಎಷ್ಟು ವಾರ ಓಡುತ್ತವೋ ಗೊತ್ತಿಲ್ಲ, ನಮ್ಮ ಹುಡುಗರ ಕೃಪೆಯಿಂದ ಡೆಸ್ಕುಗಳ ಮೇಲೆ ಒಂದು ಶತಮಾನವಾದರೂ ಬಾಳಿ ಬದುಕುವುದು ಶತಃಸಿದ್ಧ.

ಭರ್ತಿ ಎರಡು ತಿಂಗಳ ಬಳಿಕ ಕ್ಲಾಸಿಗೆ ಹಾಜರಾಗಿ 'ಪ್ರಶೂ ಈಸ್ ಬ್ಯಾಕ್’ ಎಂದು ಡೆಸ್ಕ್ ಮೇಲೆ ಹಾಜರಿ ಹಾಕಿ ಹೋಗಿ ಮತ್ತೆ ಎರಡು ತಿಂಗಳ ನಾಪತ್ತೆಯಾಗುವ ಉಡಾಳ, ಕರುನಾಡ ಸಿಂಗಂ ರವಿ ಚನ್ನಣ್ಣನವರ್ ಎಂದು ದೊಡ್ಡದಾಗಿ ಬರೆದು ಕುಸುರಿ ಕೆಲಸದಿಂದ ಸಿಂಗರಿಸುವ ಅಪ್ರತಿಮ ಅಭಿಮಾನಿ, 'ಎವರಿಬಡಿ ಈಸ್ ಈಕ್ವಲ್ ಬಿಫೋರ್ ಲಾ’ ಎಂಬ ಮೇಷ್ಟ್ರ ಹೇಳಿಕೆಯನ್ನು ಕರಾರುವಾಕ್ಕಾಗಿ ಬರೆದು ಅದರ ಮುಂದೆ 'ಸೋ, ಮುಂದಿನ ಬೆಂಚೂ ಹಿಂದಿನ ಬೆಂಚಿನ ನಡುವೆ ವ್ಯತ್ಯಾಸ ಇಲ್ಲ ತಿಳ್ಕಳಿ’ ಎಂದು ಷರಾ ನಮೂದಿಸುವ ಕೊನೇ ಬೆಂಚಿನ ಹುಡುಗ- ಇವರೆಲ್ಲ ತರಗತಿ ಬಹುಮುಖ ಪ್ರತಿಭೆಗಳಿಂದ ಕೂಡಿದೆಯೆಂಬುದಕ್ಕೆ ಪ್ರಮುಖ ಸಾಕ್ಷಿಗಳು.

ಇಷ್ಟೆಲ್ಲದರ ನಡುವೆ ಭಾರತೀಯ ಸಂವಿಧಾನದ ಪ್ರಮುಖ ಲಕ್ಷಣಗಳು, ಪ್ರಧಾನಮಂತ್ರಿಯ ಅಧಿಕಾರ ಮತ್ತು ಕರ್ತವ್ಯಗಳು, ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣಗಳು, ಸಣ್ಣ ಕೈಗಾರಿಕೆಗಳ ಸಮಸ್ಯೆಗಳು, ಕುಮಾರವ್ಯಾಸನ ಕಾವ್ಯಸೌಂದರ್ಯ ಮತ್ತಿತರ ಘನಗಂಭೀರ ಟಿಪ್ಪಣಿಗಳೂ ಡೆಸ್ಕುಗಳ ಮೇಲೆ ಕಾಣಸಿಗುವುದುಂಟು. ಇವೆಲ್ಲ ತರಗತಿಲ್ಲಾಗಲೀ ಮನೆಯಲ್ಲಾಗಲೀ ಎಂದೂ ಒಂದು ಪುಟ ನೋಟ್ಸ್ ಬರೆಯದ ಮಹಾನ್ ಸೋಮಾರಿಗಳ ಶ್ರದ್ಧೆಯ ಫಲ ಎಂದು ಮೇಲ್ನೋಟಕ್ಕೇ ಹೇಳಬಹುದು. ಪರೀಕ್ಷೆಯಲ್ಲಿ ಪಾಸಾಗುವುದೇ ಈ ಸಾಹಿತ್ಯ ಪ್ರಕಾರದ ಏಕೈಕ ಉದ್ದೇಶ.

ಈ ಬಹುಮುಖ ಪ್ರತಿಭೆಗಳ ನಡುವಿನ ತತ್ತ್ವಜ್ಞಾನಿಗಳ ಬಗ್ಗೆ ಹೇಳದೆ ಹೋದರೆ ಲೇಖನವೇ ಅಪೂರ್ಣವಲ್ಲವೇ? 'ಒಳ್ಳೆಯವರು ನೆನಪು ನೀಡುತ್ತಾರೆ. ಕೆಟ್ಟವರು ಅನುಭವ ನೀಡುತ್ತಾರೆ. ದುಷ್ಟರು ಪಾಠ ಕಲಿಸುತ್ತಾರೆ. ಅತ್ಯುತ್ತಮರು ಸವಿ ನೆನಪು ನೀಡುತ್ತಾರೆ. ಆದ್ದರಿಂದ ಯಾರನ್ನೂ ದೂಷಿಸುವುದು ಸರಿಯಲ್ಲ. ಎಲ್ಲರಿಂದಲೂ ಒಂದು ರೀತಿಯ ಅನುಕೂಲವಿರುತ್ತದೆ...’ - ಎಂಬೊಂದು ಮಾತು ಬರೆದ ಪುಣ್ಯಾತ್ಮ ಕೊನೆಗೆ ತನ್ನ ಹೆಸರು ಬರೆಯಲು ಮನಸ್ಸಾಗದೆ 'ಗೌತಮ ಬುದ್ಧ’ ಎಂದು ಬರೆದಿದ್ದ. ಅವನಿಗೆ ಡೆಸ್ಕಿನ ಮೇಲೆ ಜ್ಞಾನೋದಯವಾದದ್ದಿರಬೇಕು.

ಶನಿವಾರ, ಡಿಸೆಂಬರ್ 22, 2018

ಮುಚ್ಚಿದ ವ್ಯವಸ್ಥೆಯ 'ತೆರೆದ ಪುಸ್ತಕ'

28 ನವೆಂಬರ್ 2018ರ 'ಪ್ರಜಾವಾಣಿ' ಶಿಕ್ಷಣ ಪುರವಣಿಯಲ್ಲಿ ಪ್ರಕಟವಾದ ಲೇಖನ

ಪ್ರಜಾವಾಣಿ, 28 ನವೆಂಬರ್ 2018
ತೆರೆದ ಪುಸ್ತಕ ಪರೀಕ್ಷೆಗಳ ಬಗ್ಗೆ ಶಿಕ್ಷಣ ಸಚಿವರ ಪ್ರಸ್ತಾಪದಿಂದ ಹುಟ್ಟಿಕೊಂಡ ಚರ್ಚೆಗಳು ಅಲ್ಲಲ್ಲೇ ಮೌನವಾಗತ್ತಿದ್ದ ಹಾಗೆಯೇ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಮುಂದಿನ ವರ್ಷದಿಂದ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಲ್ಲೂ ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರುವುದಾಗಿ ಪ್ರಕಟಿಸಿದೆ. ಯಾವುದೇ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಯೊಂದು ಪ್ರಸ್ತಾಪವಾದಾಗ ಅದರ ಬಗ್ಗೆ ಪರ ವಿರೋಧ ಚರ್ಚೆಗಳು ಬರುವುದು ಸಾಮಾನ್ಯ. ಆದರೆ ಅವುಗಳ ಸಾರ್ಥಕತೆಯಿರುವುದು ಅವೇನಾದರೂ ತಾರ್ಕಿಕ ಅಂತ್ಯ ಕಾಣುತ್ತವೆಯೇ ಎಂಬುದರಲ್ಲಿ.

ತೆರೆದ ಪುಸ್ತಕ ಪರೀಕ್ಷೆಯ ಅಗತ್ಯವನ್ನು ಪ್ರತಿಪಾದಿಸುವವರು ಗುರುತಿಸುವ ಪ್ರಧಾನ ಅಂಶಗಳು ಎರಡು: ಮೊದಲನೆಯದು, ಅದು ಮಕ್ಕಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸುತ್ತದೆ; ಎರಡನೆಯದು, ಅದು ಮಕ್ಕಳಲ್ಲಿ ವಿಶ್ಲೇಷಣಾ ಕೌಶಲವನ್ನು ಬೆಳೆಸುತ್ತದೆ. ಮತ್ತು ಇವೆರಡೂ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ಈ ಅಭಿಪ್ರಾಯದಲ್ಲಿ ಹುರುಳೇನೋ ಇದೆ. ಆದರೆ ಇದರಿಂದಲೇ ನಮ್ಮ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದೋಷಗಳು ಪರಿಹಾರವಾಗುತ್ತವೆಯೇ ಎಂಬುದು ನಮ್ಮ ಮುಂದಿನ ಪ್ರಶ್ನೆ. ವಿಷಯದ ಎರಡೂ ಮಗ್ಗುಲನ್ನು ಪರಿಶೀಲಿಸೋಣ.

ನಮ್ಮಲ್ಲಿ ಚಾಲ್ತಿಯಲ್ಲಿರುವ ಪರೀಕ್ಷಾ ಪದ್ಧತಿ ವಿದ್ಯಾರ್ಥಿ ಗಳಿಸಿದ ಜ್ಞಾನ ಮತ್ತು ಕೌಶಲಗಳ ಮೌಲ್ಯಮಾಪನಕ್ಕಿಂತಲೂ ಆತನ ಜ್ಞಾಪಕ ಶಕ್ತಿಯ ಪರೀಕ್ಷೆ ಆಗಿರುವುದೇ ಹೆಚ್ಚು. ಇಡೀ ಸೆಮಿಸ್ಟರ್ ಓದಿದ್ದರ ಸಾರಸರ್ವಸ್ವವನ್ನು ಕಂಠಪಾಠ ಮಾಡಿ ನೆನಪುಳಿದದ್ದನ್ನು ಮೂರು ಗಂಟೆಗಳಲ್ಲಿ ಕಕ್ಕುವ ಈ ಪದ್ಧತಿ ಯಾವ ರೀತಿಯಲ್ಲೂ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಬೆಳೆಸೀತು ಎಂದು ನಿರೀಕ್ಷಿಸುವುದು ಕಷ್ಟ. ಬದುಕನ್ನು ಎದುರಿಸುವ ವಿಚಾರ ಹಾಗಿರಲಿ, ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಯೊಬ್ಬ ತನ್ನ ದಿನನಿತ್ಯದ ಜವಾಬ್ದಾರಿಗಳನ್ನಾದರೂ ಸಮರ್ಥನಾಗಿ ನಿರ್ವಹಿಸಬಲ್ಲನೇ? ಅದಕ್ಕೆ ಬೇಕಾದ ಸಾಮಾನ್ಯ ವಿವೇಕ, ವ್ಯವಹಾರ ಕುಶಲತೆಯನ್ನು ಅವನ ಶಿಕ್ಷಣ ಪದ್ಧತಿ ಬೆಳೆಸಿದೆಯೇ? ಇಲ್ಲವಾದರೆ ಶಿಕ್ಷಣ ಅವನಿಗೇನು ಕೊಟ್ಟಿದೆ? ನೂರಕ್ಕೆ ನೂರು ಅಂಕ ಕೊಟ್ಟ ಪರೀಕ್ಷೆ ಅವನ ಯಾವ ಜ್ಞಾನವನ್ನು ಅಳೆದಿದೆ?

ತೆರೆದ ಪುಸ್ತಕದ ಪರೀಕ್ಷೆ ಇಂತಹ ಸಮಸ್ಯೆಗೇನಾದರೂ ಪರಿಹಾರ ತೋರಿಸೀತೇ ಎಂದು ಅನಿಸುವುದು ಇಂತಹ ಪ್ರಶ್ನೆಗಳ ನಡುವೆ. ಪಠ್ಯಪುಸ್ತಕದಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳ ತಲೆಗೆ ವರ್ಗಾಯಿಸುವುದೇ ಬೋಧನೆ ಎಂಬುದು ರೂಢಿಗತ ಚಿಂತನೆಯಾದರೆ ವಿದ್ಯಾರ್ಥಿಗಳು ಕಲಿಯುವುದನ್ನು ಕಲಿಸುವುದೇ ಬೊಧನೆ ಎಂಬುದು ಹೊಸ ಬಗೆಯ ಚಿಂತನೆ. ಜಗತ್ತು ಆಧುನಿಕವಾಗುತ್ತಿದ್ದಂತೆಯೇ, ದಿನನಿತ್ಯದ ಬದುಕು ಹಾಗೂ ವೃತ್ತಿಜೀವನದಲ್ಲಿ ಹೊಸ ಸವಾಲುಗಳು ಎದುರಾಗುತ್ತಿದ್ದಂತೆಯೇ ಅದಕ್ಕೆ ಸೂಕ್ತವಾದ ಮಾನಸಿಕತೆಯನ್ನು ಸಿದ್ಧಗೊಳಿಸುವುದು ಶಿಕ್ಷಕರ ಹಾಗೂ ಶಿಕ್ಷಣದ ಜವಾಬ್ದಾರಿ.

ಶಿಕ್ಷಣ ತಜ್ಞ ಬೆಂಜಮಿನ್ ಬ್ಲೂಮ್ ಬೋಧನೆಯ ಆರು ಉದ್ದೇಶಗಳನ್ನು ಗುರುತಿಸುತ್ತಾನೆ: ಜ್ಞಾನ, ಗ್ರಹಿಕೆ, ಆನ್ವಯಿಕತೆ, ವಿಶ್ಲೇಷಣೆ, ಸಂಶ್ಲೇಷಣೆ ಹಾಗೂ ಮೌಲ್ಯಮಾಪನ. ಮೊದಲನೇ ಹಂತ ವಿಷಯಗಳನ್ನು ತಿಳಿದುಕೊಳ್ಳುವುದು ಮತ್ತು ಅಗತ್ಯವಿರುವಲ್ಲಿ ನೆನಪಿಸಿಕೊಳ್ಳುವುದಾದರೆ, ಎರಡನೆಯ ಹಂತ ಪಡೆದ ಮಾಹಿತಿಗಳನ್ನು ಅರ್ಥೈಸಿಕೊಳ್ಳುವುದಾಗಿದೆ. ಮೂರನೇ ಹಂತ ನಿರ್ದಿಷ್ಟ ಸಮಸ್ಯೆಗೆ ಜ್ಞಾನವನ್ನು ಅನ್ವಯಿಸಿಕೊಳ್ಳುವುದಕ್ಕೆ ಸಂಬಂಧಿಸಿದ್ದಾದರೆ, ನಾಲ್ಕನೇ ಹಂತ ವಿವಿಧ ಪರಿಕಲ್ಪನೆಗಳನ್ನು ಪರಿಶೀಲಿಸಿ ಅವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದಾಗಿದೆ. ಐದನೇ ಹಂತದಲ್ಲಿ ಪರಿಕಲ್ಪನೆ ಅಥವಾ ವಿಚಾರಗಳ ಕುರಿತು ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾದರೆ ಕೊನೆಯ ಹಂತದಲ್ಲಿ ವಿದ್ಯಾರ್ಥಿಯೇ ಹೊಸ ಚಿಂತನೆಗಳನ್ನು ಸೃಜಿಸಲು ಸಮರ್ಥನಾಗಬೇಕಾಗುತ್ತದೆ. ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ಮೊದಲನೇ ಹಂತಲ್ಲಿ ಆರಂಭವಾಗಿ ಅದರಲ್ಲೇ ಅಂತ್ಯ ಕಾಣುತ್ತಿರುವುದೇ ವಿದ್ಯಾರ್ಥಿಗಳು ನಂಬಿಕೊಂಡಿರುವ ಪುಸ್ತಕದ ಬದನೆಕಾಯಿಯ ಹಿಂದಿರುವ ರಹಸ್ಯ. ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯಲ್ಲಿ ಇದಕ್ಕೇನಾದರೂ ಪರಿಹಾರ ದೊರೆತೀತೇ ಎಂಬುದು ಸದ್ಯದ ಪ್ರಶ್ನೆ.

ತೆರೆದ ಪುಸ್ತಕ ಪರೀಕ್ಷೆಯೆಂದರೆ ಪರೀಕ್ಷಾ ಕೊಠಡಿಯೊಳಗೆ ಸಿದ್ಧ ಉತ್ತರಗಳ ಗೈಡುಗಳನ್ನು ಒಯ್ದು ಉತ್ತರಗಳನ್ನು ನಕಲು ಮಾಡುವ ವಿಧಾನವೇನೂ ಅಲ್ಲ. ಪಠ್ಯಪುಸ್ತಕ, ಪರಾಮರ್ಶನ ಗ್ರಂಥ ಮತ್ತಿತರ ಪೂರ್ವನಿರ್ಧರಿತ ಸಾಮಗ್ರಿಗಳನ್ನು ಮಾತ್ರ ಒಳಗೆ ಒಯ್ಯಲು ಅವಕಾಶ ನೀಡಲಾಗುತ್ತದೆ. ಪ್ರಶ್ನೆಪತ್ರಿಕೆಗಳೂ ರೂಢಿಯಲ್ಲಿರುವಂತೆ 'ಎಂದರೇನು’, 'ವ್ಯಾಖ್ಯಾನಿಸಿ’, 'ಪಟ್ಟಿಮಾಡಿ’, 'ವಿವರಿಸಿ’ ಎಂಬಿತ್ಯಾದಿ ಪ್ರಶ್ನೆಗಳಿಗೆ ಸೀಮಿತವಾಗಿರುವುದಿಲ್ಲ. ಅಲ್ಲಿ ವಿಮರ್ಶೆ-ವಿಶ್ಲೇಷಣೆಗಳಿಗೆ ಆದ್ಯತೆ. ಆಗ ಮೌಲ್ಯಮಾಪನದ ವಿಧಾನವೂ ಬದಲಾಗುತ್ತದೆ. ಪದವಿ, ಸ್ನಾತಕೋತ್ತರ ಪದವಿ, ಕಾನೂನು, ವೈದ್ಯಕೀಯ, ಇಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳಲ್ಲಿ ಈ ಪದ್ಧತಿ ಸಾಧ್ಯವಾದೀತೇನೋ? ಆದರೆ ಪ್ರಾಥಮಿಕ ಅಥವಾ ಮಾಧ್ಯಮಿಕ ಶಾಲಾ ಹಂತದಲ್ಲಿ ಇದನ್ನು ಅನುಷ್ಠಾನಕ್ಕೆ ತರುವ ಮುನ್ನ ಸಾಕಷ್ಟು ಯೋಚಿಸಬೇಕಾಗುತ್ತದೆ.

ತೆರೆದ ಪುಸ್ತಕ ಪರೀಕ್ಷೆಗಳ ಪದ್ಧತಿ ಅಮೇರಿಕ, ಆಸ್ಟ್ರೇಲಿಯ, ಫಿನ್‌ಲ್ಯಾಂಡ್, ಕೆನಡಾ, ಜರ್ಮನಿ, ಸ್ವಿಡ್ಜರ್‌ಲ್ಯಾಂಡಿನಂತಹ ದೇಶಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಅಲ್ಲಿ ತೆರೆದ ಪುಸ್ತಕವೇನು, ಪ್ರಶ್ನೆಪತ್ರಿಕೆಯನ್ನು ಮನೆಗೇ ಒಯ್ದು ಪರೀಕ್ಷೆ ಬರೆಯುವ ಪದ್ಧತಿಯೂ ಯಶಸ್ವಿಯಾಗಿದೆ. ಎಂಬ ಕಾರಣಕ್ಕೆ ನಮ್ಮಲ್ಲೂ ಅದು ಯಶಸ್ವಿಯಾದೀತೇ? ಇದು ಕೇವಲ ಪರೀಕ್ಷೆಯ ಪ್ರಶ್ನೆ ಮಾತ್ರವಾಗಿದ್ದರೆ ಉತ್ತರಿಸುವುದು ಸುಲಭವಿತ್ತು. ಆದರೆ ನಮ್ಮ ಸಮಸ್ಯೆ ಪರೀಕ್ಷೆಗೆ ಮಾತ್ರ ಸಂಬಂಧಿಸಿದ್ದಲ್ಲ. ನಮ್ಮ ಶಿಕ್ಷಣ ವ್ಯವಸ್ಥೆ ಆಮೂಲಾಗ್ರ ಪರಿವರ್ತನೆಯನ್ನು ಬಯಸುತ್ತಿದೆ.

ಇಂದಿಗೂ ಬಹುತೇಕ ಶಾಲೆಗಳು ಮೂಲಭೂತ ಸೌಕರ್ಯಗಳ ಕೊರತೆ, ಪೀಠೋಪಕರಣ, ಬೋಧನೋಪಕರಣಗಳ ಕೊರತೆಯಿಂದ ಬಳಲುತ್ತಿವೆ. ಶಿಕ್ಷಕರನ್ನು ಪಾಠಮಾಡುವುದೊಂದನ್ನುಳಿದು ಇನ್ನೆಲ್ಲ ಕೆಲಸಗಳಿಗೂ ಬಳಸಿಕೊಳ್ಳಲಾಗುತ್ತಿದೆ. ಯತಾರ್ಥವಾಗಿ ಅವರಿಗೆ ಮಕ್ಕಳೊಂದಿಗೆ ಬೆರೆಯುವುದಕ್ಕೆ, ಅವರು ಇಷ್ಟಪಡುವಂತೆ ಪಾಠಮಾಡುವುದಕ್ಕೆ ಸಮಯವೇ ಇಲ್ಲ. ಅದರ ಮೇಲೆ ಹೇಗಾದರೂ ಮಾಡಿ ನೂರಕ್ಕೆ ನೂರು ಫಲಿತಾಂಶ ಪಡೆಯುವ ಒತ್ತಡ. ಇದರ ನಡುವೆ ತೆರೆದ ಪುಸ್ತಕದ ಪರೀಕ್ಷೆಗೆ ಮಕ್ಕಳನ್ನು ಸಿದ್ಧಪಡಿಸುವ ಹೊಸ ಬಗೆಯ ಬೋಧನಾ ವಿಧಾನಕ್ಕೆ ಅವರು ಒಗ್ಗಿಕೊಳ್ಳುವುದೆಂತು? ಅದಕ್ಕೆ ತಕ್ಕುದಾದ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವುದಕ್ಕೆ ಎಷ್ಟು ಮಂದಿ ಶಿಕ್ಷಕರು ಸ್ವತಃ ಸಮರ್ಥರಿದ್ದಾರೆ?

ಇನ್ನೊಂದೆಡೆ, ಇಡೀ ಸಮಾಜ ಅಂಕ ಗಳಿಕೆಯ ಓಟದಲ್ಲಿ ನಿರತವಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಪಡೆವ ಅಂಕಗಳೇ ಮಕ್ಕಳ ಒಟ್ಟಾರೆ ಭವಿಷ್ಯದ ಅಡಿಗಲ್ಲುಗಳೆಂಬಂತೆ ಬಿಂಬಿಸಲಾಗುತ್ತಿದೆ. ನಿದ್ದೆ ಮಾಡುವ ನಾಲ್ಕೈದು ಗಂಟೆಗಳ ಹೊರತಾಗಿ ಉಳಿದೆಲ್ಲ ಸಮಯದಲ್ಲೂ ಬೆಳಗು, ಸಂಜೆ, ಮಳೆ, ಚಳಿಗಳೆಂಬ ವ್ಯತ್ಯಾಸ ಗೊತ್ತಾಗದಂತೆ ವಿದ್ಯಾರ್ಥಿಗಳನ್ನು ಟ್ಯೂಶನ್ ಗಿರಣಿಗಳಲ್ಲಿ ರುಬ್ಬಲಾಗುತ್ತಿದೆ. ನೂರಕ್ಕೆ ನೂರು ಅಂಕ ಗಳಿಸುವ ಹೊರತಾಗಿ ಅವರ ವಿದ್ಯಾರ್ಥಿ ಜೀವನಕ್ಕೆ ಇನ್ನೇನೂ ಗುರಿಗಳೇ ಇಲ್ಲ. ಇಂಥ ಮಕ್ಕಳಿಗೆ ಪುಸ್ತಕ ತೆರೆದರೂ ಅಷ್ಟೆ, ಮುಚ್ಚಿದರೂ ಅಷ್ಟೆ. ಪರೀಕ್ಷಾ ಭಯದಿಂದ ಎಷ್ಟು ವಿದ್ಯಾರ್ಥಿಗಳು ಈವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ, ಆದರೆ ಫಲಿತಾಂಶದ ಮತ್ತು ಅದರಿಂದ ಬರುವ ಪ್ರಕ್ರಿಯೆಯ ಭಯದಿಂದಾಗಿ ಈವರೆಗೆ ಪ್ರಾಣಕಳಕೊಂಡಿರುವ ಅಮಾಯಕ ಜೀವಗಳು ಸಾವಿರಾರು.

ಈ ಮೂಲಭೂತ ವ್ಯವಸ್ಥೆಯನ್ನು ಸರಿಪಡಿಸದೆ ಏಕಾಏಕಿ ತೆರೆದ ಪುಸ್ತಕ ಪರೀಕ್ಷೆಗಳನ್ನು ಜಾರಿಗೆ ತಂದು ಎಲ್ಲವನ್ನೂ ಬದಲಾಯಿಸಿಬಿಡುತ್ತೇವೆ ಎಂಬ ಯೋಚನೆ ಮೂರ್ಖತನದ್ದು. ಒಳಗೆ ಮುಳ್ಳನ್ನು ಉಳಿಸಿಕೊಂಡು ಹೊರಗಿನಿಂತ ಎಷ್ಟು ಮುಲಾಮು ಹಚ್ಚಿದರೇನು ಪ್ರಯೋಜನ?


ಬುಧವಾರ, ಡಿಸೆಂಬರ್ 19, 2018

ಒಂದೇ ಜಗತ್ತು: ಹಲವು ದೀಪಾವಳಿ

'ಹೊಸದಿಗಂತ' ದೀಪಾವಳಿ ವಿಶೇಷಾಂಕ 2018ರಲ್ಲಿ ಪ್ರಕಟವಾದ ಲೇಖನ

ಹೊಸದಿಗಂತ ದೀಪಾವಳಿ ವಿಶೇಷಾಂಕ 2018
ದೀಪಾವಳಿಯಷ್ಟು ವರ್ಣಮಯ ಹಬ್ಬ ಭಾರತದಲ್ಲಿ ಮತ್ತೊಂದು ಹೇಗೆ ಇಲ್ಲವೋ, ಅದರಷ್ಟು ವಿಸ್ತಾರವಾದ ಮಾನ್ಯತೆ ಪಡೆದ ಹಬ್ಬವೂ ಜಗತ್ತಿನಲ್ಲಿ ಇನ್ನೊಂದಿಲ್ಲ ಎನಿಸುತ್ತದೆ. ಅಷ್ಟರಮಟ್ಟಿಗೆ ದೀಪಾವಳಿ ಸರ್ವಮಾನ್ಯ, ವಿಶ್ವಮಾನ್ಯ. ಫಿಜಿ, ನೇಪಾಳ, ಮಾರಿಷಸ್, ಮಯನ್ಮಾರ್, ಸಿಂಗಾಪುರ, ಶ್ರೀಲಂಕಾ, ಟ್ರಿನಿಡಾಡ್, ಇಂಗ್ಲೆಂಡ್, ಇಂಡೋನೇಷ್ಯಾ, ಜಪಾನ್, ಥಾಯ್‌ಲ್ಯಾಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ, ಅಮೇರಿಕಗಳಲ್ಲೆಲ್ಲ ದೀಪಾವಳಿ ವಿಶಿಷ್ಟವಾಗಿ ಆಚರಿಸಲ್ಪಡುತ್ತದೆ. ಈ ದೇಶಗಳ ಪೈಕಿ ಬಹುತೇಕ ಕಡೆ ದೀಪಾವಳಿ ಆಚರಣೆಗೆ ಸಾರ್ವಜನಿಕ ರಜೆಯನ್ನೂ ಘೋಷಿಸಲಾಗುತ್ತದೆ ಎಂಬುದು ಗಮನಾರ್ಹ.

ದೀಪಗಳನ್ನು ಬೆಳಗಿ ಕತ್ತಲೆಯ ಎದುರು ಬೆಳಕಿನ ವಿಜಯವನ್ನು ಸಾರುವ ದೀಪಾವಳಿ ಈ ವೈಶಿಷ್ಟ್ಯಪೂರ್ಣ ಸಂದೇಶದಿಂದಲೇ ಜಗತ್ತಿನ ಗಮನ ಸೆಳೆದಿದೆ. ಇನ್ನೊಂದೆಡೆ ಜಗತ್ತಿನ ವಿವಿಧ ಭಾಗಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಭಾರತೀಯರು ತಮ್ಮ ಪ್ರಭಾವಳಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಸಂಕೇತವೂ ಇದೆಂದು ಭಾವಿಸಬಹುದು. ಜಗತ್ತಿನ ಯಾವ ಭಾಗಕ್ಕೆ ದೀಪಾವಳಿ ಹೋದರೂ ಅದರ ಮೂಲ ಸ್ವರೂಪ ಮತ್ತು ಅದು ನೀಡುವ ಸಂದೇಶ ಬದಲಾಗಲು ಸಾಧ್ಯವಿಲ್ಲ ಅಲ್ಲವೇ?

2009ರಲ್ಲಿ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮ ಖುದ್ದು ಶ್ವೇತಭವನದಲ್ಲಿ ಹಣತೆ ಬೆಳಗುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು ಮತ್ತು ಆ ಮೂಲಕ ವಿಶ್ವದ ಗಮನ ಸೆಳೆದರು. ಪ್ರಪಂಚದ ಬೇರೆ ಬೇರೆ ದೇಶಗಳು ದೀಪಾವಳಿಯನ್ನು ಆಚರಿಸುವ ಬಗೆಯೇನು ಎಂಬುದನ್ನು ಮುಂದೆ ನೋಡೋಣ:

ನೇಪಾಳ
2008ರವರೆಗೂ ಪ್ರಪಂಚದ ಏಕೈಕ ಹಿಂದೂ ರಾಷ್ಟ್ರವೆಂಬ ಅಧಿಕೃತ ಮನ್ನಣೆಗೆ ಪಾತ್ರವಾಗಿದ್ದ ನೇಪಾಳದಲ್ಲಿ ದೀಪಾವಳಿ ಬಹುಸಂಭ್ರಮದ ಹಬ್ಬ. ಹಿಮಾಲಯದ ತಪ್ಪಲಿನಲ್ಲಿ ತಂಪಾಗಿರುವ ನೇಪಾಳಿಯನ್ನರು ಪಶುಪತಿನಾಥನ ಆರಾಧಕರು. ಅವರ ದೀಪಾವಳಿ ಆಚರಣೆ ಕುತೂಹಲಕರವೂ ವಿಶಿಷ್ಟವೂ ಆಗಿದೆ.  ನೇಪಾಳದಲ್ಲಿ ತಿಹಾರ್ ಎಂದು ಕರೆಯಲ್ಪಡುವ ದೀಪಾವಳಿಯು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಮೈತ್ರಿಯ ಸುಂದರ ಸಂಕೇತದಂತಿದೆ.  ದೀಪಾವಳಿಯ ಮೊದಲನೆಯ ದಿನ 'ಕಾಗ್ ತಿಹಾರ್’. ಸಾಮಾನ್ಯ ದಿನಗಳಲ್ಲಿ ಜನರಿಂದ ಅಶುಭವೆಂದು ಕರೆಸಿಕೊಳ್ಳುವ ಕಾಗೆಗಳಿಗೆ ಅಂದು ಅಗ್ರಪೂಜೆ. ಕೆಟ್ಟ ಸುದ್ದಿಗಳನ್ನು ತರಬೇಡಿರಪ್ಪಾ ಎಂದು ಕೈಮುಗಿದು ಕಾಗೆಗಳಿಗೆ ಸಿಹಿತಿಂಡಿ ಬಡಿಸುವುದು ಅಂದಿನ ರೂಢಿ. ಎರಡನೆಯ ದಿನ 'ಕುಕುರ್ ತಿಹಾರ್’. ಅಂದು ನಾಯಿಗಳಿಗೆ ಸಿಹಿಯೂಟ. ಮೂರನೆಯ ದಿನ 'ಗಾಯ್ ತಿಹಾರ್’. ಗೋಪೂಜೆ ಮತ್ತು ಲಕ್ಷ್ಮೀಪೂಜೆ ಅಂದಿನ ವಿಶೇಷ. ನಾಲ್ಕನೆಯ ದಿನ ಗೋರು ತಿಹಾರ್ ಅಥವಾ ಎತ್ತುಗಳಿಗೆ ಪೂಜೆ. ಕೆಲವು ಪಂಗಡಗಳು ಇದನ್ನು ಗೋವರ್ಧನ ಪೂಜೆ ಎಂದು ಅಚರಿಸುವುದೂ ಇದೆ. ಐದನೆಯ ದಿನ 'ಭಾಯಿ ಟಿಕಾ’ ಅಂದರೆ ಸೋದರ-ಸೋದರಿಯರು ಒಂದೆಡೆ ಸೇರಿ ಸಂಭ್ರಮಿಸುವ ದಿನ. ಹೆಣ್ಣುಮಕ್ಕಳು ತಮ್ಮ ಅಣ್ಣತಮ್ಮಂದಿರ ಮನೆಗಳಿಗೆ ತೆರಳಿ ಹಣೆಗೆ ತಿಲಕ ಹಚ್ಚಿ ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ಅಂದಿನ ವಿಶೇಷ. ಹಬ್ಬದ ದಿನಗಳಲ್ಲಿ ಸ್ನೇಹಿತರು ಅಲ್ಲಲ್ಲಿ ಸೇರಿ ಜೂಜಾಡುವುದೂ ಇದೆ. ದೀಪಾವಳಿ ಸಮಯದಲ್ಲಿ ಜೂಜಾಡುವುದು ನೇಪಾಳದಲ್ಲಿ ಕಾನೂನುಬಾಹಿರ ಅಲ್ಲ.

ಮಾರಿಷಸ್
ಪ್ರಕೃತಿಯ ಸೌಂದರ್ಯದ ಮಡಿಲಂತಿರುವ ಮಾರಿಷಸ್ ಒಂದು ಬಹುಧರ್ಮೀಯ, ಬಹುಸಂಸ್ಕೃತಿಯ, ಬಹುಭಾಷಿಕ ನಾಡು. ಆಫ್ರಿಕಾದ ಆಗ್ನೇಯ ಕಡಲ ತೀರದಿಂದ 2000 ಕಿ.ಮೀ. ದೂರದಲ್ಲಿರುವ ಮಾರಿಷಸ್ ಜೀವವೈವಿಧ್ಯಕ್ಕೆ ಹೆಸರಾದ ದೇಶವೂ ಹೌದು. ಆಫ್ರಿಕಾದಲ್ಲೇ ಅತಿಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಈ ದ್ವೀಪರಾಷ್ಟ್ರದಲ್ಲಿ ಧಾರ್ಮಿಕ ಶ್ರದ್ಧಾಳುಗಳು ಹೆಚ್ಚು. ಅದಕ್ಕೇ ಮಾರಿಷಸ್‌ನಲ್ಲಿ ದೀಪಾವಳಿ ವಿಶೇಷ ಹಬ್ಬ. ಗಣಪತಿ ಹಾಗೂ ಲಕ್ಷ್ಮಿಗೆ ವಿಶಿಷ್ಟ ಪೂಜೆ ಸಲ್ಲಿಸುವ ಅಲ್ಲಿನ ಮಂದಿ ಮನೆ, ದೇಗುಲಗಳನ್ನು ವಿಶಿಷ್ಟವಾಗಿ ಅಲಂಕರಿಸುವುದರಲ್ಲೂ ಎತ್ತಿದ ಕೈ.

ದೀಪಾವಳಿಯ ಸಂದರ್ಭ ಹೊಸ ಉಡುಗೆ-ತೊಡುಗೆ, ಒಡವೆಗಳನ್ನು ಖರೀದಿಸುವುದೂ ಇಲ್ಲಿನ ವಾಡಿಕೆ. ಮನೆಗೆ ಸಂಪತ್ತನ್ನು ಬರಮಾಡಿಕೊಳ್ಳುವ ಈ ಸಾಂಕೇತಿಕ ದಿನಕ್ಕೆ ಮಾರಿಷಸ್‌ನಲ್ಲಿ 'ಧಂತೇರ’ ಎಂದು ಹೆಸರು. ದೀಪಾವಳಿಯ ಕೊನೆಯ ದಿನದಂದು ಸೋದರ ಸೋದರಿಯರು ಒಂದೆಡೆ ಸೇರಿ ಸಂಭ್ರಮಿಸುವ ಹಾಗೂ ಸ್ನೇಹಿತರು ಜೂಜಾಡುವ ಸಂಪ್ರದಾಯ ಇಲ್ಲಿಯೂ ಇದೆ. ಆದರೆ ಈ ಜೂಜಾಟದ ಹಿಂದೆ ಶಿವ-ಪಾರ್ವತಿಯರ ಪಗಡೆಯಾಟದ ಕಥೆಯಿದೆ. ದೀಪಾವಳಿಯಂದು ಪಗಡೆ ಆಡುವವರನ್ನು ಅದೃಷ್ಟ ಹುಡುಕಿಕೊಂಡು ಬರಲಿ ಎಂದು ಪಾರ್ವತಿ ಹರಸುತ್ತಾಳೆಂಬುದು ಜನಪದರ ನಂಬಿಕೆ.

ಫಿಜಿ
ದಕ್ಷಿಣ ಪೆಸಿಫಿಕ್‌ನಲ್ಲಿರುವ ಫಿಜಿ ಮುನ್ನೂರಕ್ಕಿಂತಲೂ ಹೆಚ್ಚು ಪುಟ್ಟ ದ್ವೀಪಗಳ ಒಂದು ಸಮೂಹ. ಮನೋಹರ ಕಡಲ ಕಿನಾರೆಗಳು ಹಾಗೂ ಹವಳದ ದಂಡೆಗಳಿಂದ ಕೂಡಿರುವ ಫಿಜಿ ಶ್ರೀಮಂತ ದೇಶವೂ ಹೌದು. ಇಲ್ಲಿನ ಜನಸಂಖ್ಯೆಯ ಶೇ. 28 ಹಿಂದೂಗಳು ಎಂಬುದು ಗಮನಾರ್ಹ ಮತ್ತು ಅದಕ್ಕಾಗಿಯೇ ಇಲ್ಲಿ ದೀಪಾವಳಿ ಒಂದು ವಿಶೇಷ ಆಚರಣೆ. ಇಷ್ಟೊಂದು ಸಂಖ್ಯೆಯ ಭಾರತೀಯರು ಫಿಜಿಯಲ್ಲಿ ಇರುವುದಕ್ಕೆ ಕಾರಣ 19ನೇ ಶತಮಾನದಲ್ಲಿ ಬ್ರಿಟಿಷರು ತೋಟದ ಕೆಲಸಕ್ಕಾಗಿ ಭಾರತೀಯರದನ್ನು ಸಾವಿರಾರು ಸಂಖ್ಯೆಯಲ್ಲಿ ಅಲ್ಲಿಗೆ ಕೊಂಡೊಯ್ದದ್ದು. ದೀಪಗಳ ಅಲಂಕಾರ, ಭೂರಿ ಭೋಜನ, ಪಟಾಕಿಗಳ ಗಮ್ಮತ್ತು ಅಲ್ಲದೆ ಶಾಲೆಗಳಲ್ಲೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು ಫಿಜಿಯ ವೈಶಿಷ್ಟ್ಯತೆ.

ಮಲೇಷ್ಯಾ
ಸುಮಾರು ೪೦ ಲಕ್ಷ ಅನಿವಾಸಿ ಭಾರತೀಯರು ನೆಲೆಸಿರುವ ಮಲೇಷ್ಯಾ ಅತ್ಯುತ್ತಮ ಪ್ರವಾಸೀ ತಾಣವೂ ಹೌದು. ಇಲ್ಲಿ ದೀಪಾವಳಿ ಕುಟುಂಬ ಮರುಮಿಲನಗಳಿಗೆ ಹೆಸರುವಾಸಿ. ವರ್ಷಕ್ಕೊಮ್ಮೆಯಾದರೂ ದೇಶದ ಬೇರೆಬೇರೆ ಕಡೆಯ ಬಂಧುಬಳಗ, ಸ್ನೇಹಿತರು ಒಂದೆಡೆ ಸೇರಿ ದೀಪ ಹಚ್ಚಿ ಪಟಾಕಿ ಸಿಡಿಸಿ ಸಿಹಿಯುಂಡು ಖುಷಿಪಡುವುದಕ್ಕೆ ದೀಪಾವಳಿ ಒಂದು ಒಳ್ಳೆಯ ಕಾರಣ. ಮಲೇಷ್ಯಾದ 'ಲಿಟಲ್ ಇಂಡಿಯಾ’ವಂತೂ ದೀಪಾವಳಿ ವೇಳೆಗೆ ಸಾಕ್ಷಾತ್ ಭಾರತವಾಗಿಯೇ ಮಾರ್ಪಟ್ಟು ಆಕರ್ಷಣೆಯ ಕೇಂದ್ರ ಬಿಂದುವಾಗುತ್ತದೆ.

ಶ್ರೀಲಂಕಾ
ಐತಿಹಾಸಿಕವಾಗಿಯೂ ಸಾಂಸ್ಕೃತಿಕವಾಗಿಯೂ ಶ್ರೀಲಂಕಾ ಭಾರತ ಉಪಖಂಡದ ಒಂದು ಭಾಗವೇ. ಅಲ್ಲಿ ಬೌದ್ಧರನ್ನು ಬಿಟ್ಟರೆ ಹಿಂದೂಗಳೇ ಬಹುಸಂಖ್ಯಾತರು (ಜನಸಂಖ್ಯೆಯ ಶೇ. 13 ಭಾಗ). ಶ್ರೀರಾಮ ರಾವಣನನ್ನು ವಧಿಸಿ ಸೀತಾಲಕ್ಷ್ಮಣ ಸಮೇತನಾಗಿ ಅಯೋಧ್ಯೆಗೆ ಹಿಂತಿರುಗಿದ ದಿನವೇ ದೀಪಾವಳಿ ಆಗಿರುವುದರಿಂದ ಲಂಕೆಗೆ ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ಮಹತ್ವ ಇದೆ. ತಮಿಳರು ಹೆಚ್ಚಾಗಿ ನೆಲೆಸಿರುವ ಶ್ರೀಲಂಕಾದಲ್ಲಿ ಬಹುತೇಕ ಭಾರತದಲ್ಲಿ ನಡೆಯುವಂತೆಯೇ ದೀಪಾವಳಿ ಆಚರಣೆ ನಡೆಯುತ್ತದೆ.

ಅಮೇರಿಕ
ಐದೂವರೆ ಲಕ್ಷ ಹಿಂದೂಗಳು ಸೇರಿದಂತೆ 44 ಲಕ್ಷ ಅನಿವಾಸಿ ಭಾರತೀಯರಿರುವ ಅಮೇರಿಕದಲ್ಲಿ ದೀಪಾವಳಿ ಒಂದು ಅಧಿಕೃತ ಹಬ್ಬವೆನಿಸಿದ್ದು ಹೊಸ ಸಹಸ್ರಮಾನದಲ್ಲಿ. 2003ರಲ್ಲಿ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಶ್ವೇತಭವನದಲ್ಲಿ ದೀಪಾವಳಿ ಆಚರಣೆಗೆ ಅವಕಾಶ ಮಾಡಿಕೊಟ್ಟರು. ಅಲ್ಲಿಂದ ಶ್ವೇತಭವನದಲ್ಲಿ ಅದೊಂದು ವಾರ್ಷಿಕ ಸಂಪ್ರದಾಯವೇ ಆಯಿತು. 2007ರಲ್ಲಿ ಅಮೇರಿಕದ ಸಂಸತ್ತು ದೀಪಾವಳಿಯ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಸರ್ವಾನುಮತದಿಂದ ಅಂಗೀಕರಿಸಿತು. 2009ರಲ್ಲಿ ಖುದ್ದು ಬರಾಕ್ ಒಬಾಮ ಅವರೇ ವೇದಘೋಷಗಳ ನಡುವೆ ಸಪತ್ನೀಕರಾಗಿ ಶ್ವೇತಭವನದಲ್ಲಿ ದೀಪಾವಳಿಯ ಹಣತೆ ಬೆಳಗಿ ದೀಪಾವಳಿ ಆಚರಿಸಿದ ಮೊದಲ ಅಮೇರಿಕದ ಅಧ್ಯಕ್ಷರೆನಿಸಿದರು. 2016ರಲ್ಲಿ ಅಮೇರಿಕದ ಅಂಚೆ ಇಲಾಖೆಯು ಹಣತೆಯ ಚಿತ್ರವುಳ್ಳ ಅಂಚೆಚೀಟಿ ಬಿಡುಗಡೆ ಮಾಡಿ ಅಲ್ಲಿನ ಭಾರತೀಯರ ಸಂಭ್ರಮಕ್ಕೆ ಇನ್ನಷ್ಟು ಗರಿ ಮೂಡಿಸಿತು.

ಅಮೇರಿಕದ ಡ್ಯೂಕ್, ಪ್ರಿನ್ಸ್‌ಟನ್, ಹೋವಾರ್ಡ್, ರಗ್ಟರ್ಸ್, ಕಾರ್ನೆಗಿ ವಿಶ್ವವಿದ್ಯಾನಿಲಯಗಳಲ್ಲೂ ಭಾರತೀಯ ವಿದ್ಯಾರ್ಥಿಗಳು ವಿಶೇಷವಾಗಿ ದೀಪಾವಳಿ ಆಚರಿಸುತ್ತಾರೆ. ಅಮೇರಿಕದಲ್ಲಿರುವ ಸಿಖ್ಖರಿಗೂ ದೀಪಾವಳಿ ವಿಶೇಷ ಹಬ್ಬ. ಆದರೆ ಅವರ ದೀಪಾವಳಿಯ ಹಿನ್ನೆಲೆ ಬೇರೆ. ಜಹಾಂಗೀರನ ಸೆರೆಯಿಂದ ಹೊರಬಂದ ಗುರು ಹರಗೋವಿಂದರ ಸ್ಮರಣೆಗೆ ಅಮೃತಸರದ ಸ್ವರ್ಣಮಂದಿರ ಹೇಗೆ ಲಕಲಕನೆ ಹೊಳೆಯುತ್ತದೋ ಹಾಗೆಯೇ ಅಮೇರಿಕದಲ್ಲಿರುವ ಗುರುದ್ವಾರಗಳೂ ದೀಪಾವಳಿಯಂದು ಝಗಮಗಿಸುತ್ತವೆ.

ಮಯನ್ಮಾರ್
ಶೇ. 88ರಷ್ಟು ಬೌದ್ಧಧರ್ಮೀಯರೇ ಇದ್ದರೂ ಮಯನ್ಮಾರ್ ಒಂದು ವೈವಿಧ್ಯಮಯ ತಾಣ. ಒಂದು ಕಾಲಕ್ಕೆ ಹಿಂದೂಗಳೇ ಬಹುಸಂಖ್ಯಾತರಾಗಿದ್ದ ದೇಶವೂ ಹೌದು. ಆಗ್ನೇಯ ಏಷ್ಯಾದಲ್ಲೇ ಅತಿ ಹಿಂದುಳಿದ ದೇಶಗಳಲ್ಲೊಂದು ಎಂದು ಕರೆಯಲ್ಪಟ್ಟರೂ ಮಯನ್ಮಾರ್ ಅಥವಾ ಬರ್ಮಾಕ್ಕೆ ದೀಪಾವಳಿ ಆಚರಣೆಯಲ್ಲಿ ಬಡತನವಿಲ್ಲ. ಅಲ್ಲಿ ನೆಲೆಸಿರುವ ಭಾರತೀಯರಿಗೆ ದೀಪಾವಳಿ ಅಭ್ಯುದಯದ ಸಂಕೇತ.

ಇಂಡೋನೇಷ್ಯಾ
ಜಗತ್ತಿನ ಅತಿದೊಡ್ಡ ದ್ವೀಪರಾಷ್ಟ್ರ ಇಂಡೋನೇಷ್ಯಾದಲ್ಲಿ ಮುಸ್ಲಿಮರು ಬಹುಸಂಖ್ಯಾರು (ಶೇ. 87). ಅಲ್ಲಿನ ಬಾಲಿ ದ್ವೀಪದಲ್ಲಿ ದೀಪಾವಳಿ ಆಚರಣೆ ಹೆಚ್ಚು ಅದ್ದೂರಿಯಾಗಿ ನಡೆಯುತ್ತದೆ. ಅಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವುದೂ ಇದಕ್ಕೊಂದು ಕಾರಣ.

ಟ್ರಿನಿಡಾಡ್ & ಟೊಬಾಗೊ
ಕೆರಿಬಿಯನ್ ಪ್ರದೇಶದಲ್ಲಿ ಬರುವ ಟ್ರಿನಿಡಾಡ್ & ಟೊಬಾಗೊ ವೆಸ್ಟ್ ಇಂಡೀಸ್‌ನ ಪ್ರಸಿದ್ಧ ಅವಳಿ ದ್ವೀಪಗಳು. ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾಗಿರುವ ಇವು ದೀಪಾವಳಿ ಆಚರಣೆಗೂ ಹೆಸರುವಾಸಿ. ಜನಸಂಖ್ಯೆಯ ಶೇ. 18ರಷ್ಟು ಹಿಂದೂಗಳು ಇಲ್ಲಿ ನೆಲೆಸಿರುವುದರಿಂದ ದೀಪವಳಿಗೆ ಸಹಜವಾಗಿಯೇ ಹೆಚ್ಚಿನ ಮಾನ್ಯತೆ ದೊರಕಿದೆ.

ಸಿಂಗಾಪುರ
ಜಗತ್ತಿನ ಶ್ರೀಮಂತ ಹಾಗೂ ತುಟ್ಟಿ ದೇಶಗಳಲ್ಲೊಂದಾಗಿರುವ ಸಿಂಗಾಪುರದ ಭಾರತೀಯರಲ್ಲಿ ತಮಿಳರು ಹೆಚ್ಚು. ಇಲ್ಲಿ ಸುಮಾರು 8.5 ಲಕ್ಷ ಅನಿವಾಸಿ ಭಾರತೀಯರು ಮತ್ತು ಭಾರತ ಮೂಲದ ಜನರಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಚಿನ್ನಾಭರಣಗಳ ಖರೀದಿ ಭರಾಟೆ ಇಲ್ಲಿನ ವಿಶೇಷತೆ.

ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾದ ನತಾಲ್ ಮತ್ತು ಟ್ರಾನ್ಸ್‌ವಾಲ್‌ನಲ್ಲಿ ಹಿಂದೂಗಳು ಅಧಿಕ. ಉತ್ತರ ಪ್ರದೇಶ, ಗುಜರಾತ್ ಹಾಗೂ ತಮಿಳುನಾಡಿನಿಂದ ವಲಸೆ ಹೋದ ಕುಟುಂಬಗಳು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಮಹಾತ್ಮ ಗಾಂಧಿಯವರ ಚಳವಳಿಗಳ ಕಾರಣದಿಂದ ಆಫ್ರಿಕಾದಲ್ಲಿ ಭಾರತೀಯರಿಂಗೆ ಒಂದಿಷ್ಟು ಹೆಚ್ಚಿನದೇ ಅಸ್ಮಿತೆ ಇದೆ. ಅಲ್ಲಿ ಸುಮಾರು 13 ಲಕ್ಷ ಭಾರತೀಯರು ನೆಲೆಸಿದ್ದಾರೆ. ಭಾರತೀಯರು ಇರುವ ಪ್ರದೇಶಗಳಲ್ಲೆಲ್ಲ ದೀಪಾವಳಿ ವೈಭವದಿಂದ ನಡೆಯುತ್ತದೆ. ಕೀನ್ಯಾ, ತಾಂಜಾನಿಯ ಹಾಗೂ ಉಗಾಂಡದಂತಹ ಆಫ್ರಿಕಾದ ಇತರ ದೇಶಗಳಲ್ಲೂ ದೀಪಾವಳಿ ಆಚರಣೆ ಇದೆ.

ಆಸ್ಟ್ರೇಲಿಯ
ಸುಮಾರು 4.68 ಲಕ್ಷ ಭಾರತೀಯರು ಹಾಗೂ ಭಾರತೀಯ ಸಂಜಾತರು ಇರುವ ಆಸ್ಟ್ರೇಲಿಯ ದೀಪಾವಳಿಯನ್ನು ಸಂಭ್ರಮದಿಂದ ಸ್ವಾಗತಿಸುತ್ತದೆ. ಮೆಲ್ಬರ್ನ್, ಸಿಡ್ನಿ, ಕ್ಯಾನ್ಬೆರ, ಅಡಿಲೇಡ್, ಪರ್ತ್ ಹಾಗೂ ಬ್ರಿಸ್ಬೇನ್ ಮಹಾನಗರಗಳಲ್ಲಿ ದೀಪಾವಳಿಯ ಉತ್ಸಾಹ ಹೆಚ್ಚು. 19ನೇ ಶತಮಾನದಲ್ಲಿ ಬ್ರಿಟಿಷರು ತಮ್ಮ ವಸಾಹತುಗಳ ಹತ್ತಿ ಮತ್ತು ಕಬ್ಬಿನ ತೋಟಗಳಿಗೆ ಕಾರ್ಮಿಕರನ್ನಾಗಿ ಭಾರತೀಯರನ್ನು ಅಲ್ಲಿಗೆ ಒಯ್ದ ಪರಿಣಾಮವಾಗಿ ಆಸ್ಟ್ರೇಲಿಯದೊಂದಿಗೆ ನಮ್ಮವರ ಬಾಂಧವ್ಯ ಇನ್ನೂ ಉಳಿದುಕೊಂಡಿದೆ. ಭಾರತೀಯರಲ್ಲದೆ ಶ್ರೀಲಂಕಾ, ಫಿಜಿ, ಮಲೇಷ್ಯಾ, ಸಿಂಗಾಪುರ, ನೇಪಾಳ ಹಾಗೂ ಬಾಂಗ್ಲಾದಿಂದ ಬಂದಿರುವ ಹಿಂದೂಗಳು ಇಲ್ಲಿ ದೀಪಾವಳಿ ಆಚರಣೆಗೆ ಜತೆಯಾಗುತ್ತಾರೆ. ಸಿಡ್ನಿಯಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂ ದೇವಾಲಯಗಳಿವೆ.

ಥಾಯ್ಲಂಡ್
ಶೇ. ೯೫ರಷ್ಟು ಬೌದ್ಧಧರ್ಮೀಯರು ಇರುವ ಥಾಯ್ಲಂಡ್ನಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಆದರೆ ದೀಪಾವಳಿ ಅಲ್ಲಿ ಸಹಜ ಸುಂದರ ಸಂಭ್ರಮದಿಂದಲೇ ಆಚರಿಸಲ್ಪಡುತ್ತದೆ. ಅಲ್ಲಿ ದೀಪಾವಳಿಗೆ 'ಲಾಮ್ ಕ್ರಿಯೋನ್’ ಎಂದು ಹೆಸರು. ದೀಪಾವಳಿ ಆಚರಣೆಗೆ ಇಲ್ಲಿ ಸಿಖ್ ಧರ್ಮೀಯರೂ ಜತೆಯಾಗುತ್ತಾರೆ. ಬಾಳೆ ಎಲೆಯಿಂದ ಮಾಡಿದ ದೀಪಗಳನ್ನು ಹಚ್ಚಿ ನದಿಗಳಲ್ಲಿ ತೇಲಿ ಬಿಡುವುದು ದೀಪಾವಳಿ ದಿನಗಳಲ್ಲಿ ಥಾಲಂಡ್‌ನಲ್ಲಿ ಕಂಡು ಬರುವ ಮನೋಹರ ದೃಶ್ಯ.

ಜಪಾನ್
ಪಾರಂಪರಿಕ ತಾಣಗಳು, ಆತ್ಮರಕ್ಷಣಾ ಕಲೆಗಳು, ಸಂಶೋಧನೆ ಹಾಗೂ ಸ್ವಾದಿಷ್ಟ ಆಹಾರಗಳಿಗೆ ಹೆಸರಾದ ಪೂರ್ವ ಏಷ್ಯಾದ ದ್ವೀಪರಾಷ್ಟ್ರ ಜಪಾನ್ ದೀಪಾವಳಿಯನ್ನೂ ಪ್ರೀತಿಯಿಂದ ಆಚರಿಸುತ್ತದೆ. ಮೊನ್ನೆ ಅಕ್ಟೋಬರ್ ಕೊನೆಯ ವಾರದಲ್ಲಿ ಜಪಾನಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಟೋಕಿಯೋದಲ್ಲಿ ಭಾರತೀಯರೊಂದಿಗೆ ಮಾತನಾಡುತ್ತಾ ದೀಪಾವಳಿ ಹಣತೆಗಳಂತೆ ನೀವು ಭಾರತದ ಬೆಳಕನ್ನು ಜಪಾನ್ ಹಾಗೂ ಜಗತ್ತಿನೆಲ್ಲೆಡೆ ಹರಡುತ್ತಿದ್ದೀರಿ. ನಿಮಗೆ ನನ್ನ ಶುಭಾಶಯ ಮತ್ತು ಮೆಚ್ಚುಗೆಗಳು ಎಂದು ಹೇಳಿರುವುದು ಸ್ಮರಣೀಯ.

ಬುಧವಾರ, ನವೆಂಬರ್ 28, 2018

ಕೃತಿಚೌರ್ಯಕ್ಕೆ ಆತ್ಮಸಾಕ್ಷಿಯ ಕಾನೂನು?

ಪ್ರಜಾವಾಣಿ ಭಾನುವಾರದ ಪುರವಣಿ | 25-11-2018
25 ನವೆಂಬರ್ 2018ರ 'ಪ್ರಜಾವಾಣಿ' ಭಾನುವಾರದ ಪುರವಣಿಯಲ್ಲಿ ಪ್ರಕಟವಾದ ಲೇಖನ

ಸುಮಾರು 15 ವರ್ಷಗಳ ಹಿಂದಿನ ಘಟನೆ. ನಾನು ಆಗಿನ್ನೂ ಎರಡನೇ ವರ್ಷದ ಪದವಿ ಓದುತ್ತಿದ್ದೆ. ಸರ್ಕಾರದ ಇಲಾಖೆಯೊಂದರಿಂದ ಪ್ರಕಟವಾಗುವ ಮಾಸ ಪತ್ರಿಕೆಯೊಂದನ್ನು ಕಾಲೇಜು ಗ್ರಂಥಾಲಯದಲ್ಲಿ ತಿರುವಿ ಹಾಕುತ್ತಿದ್ದೆ. ಮೊದಲ ಪುಟದಲ್ಲೇ ಪ್ರಕಟವಾಗಿದ್ದ ಸಂಪಾದಕೀಯ ಓದುತ್ತಿದ್ದಂತೆಯೇ ಇದನ್ನೆಲ್ಲೋ ಹಿಂದೆ ಓದಿದ್ದೆನಲ್ಲ ಎನಿಸಿತು. ಮುಂದಿನ ಒಂದೆರಡು ಸಾಲು ಓದುತ್ತಿದ್ದಂತೆಯೇ ಇದು ಎಲ್ಲೋ ಓದಿದ್ದಲ್ಲ, ನಾನೇ ಬರೆದದ್ದು ಎಂಬುದು ಸ್ಪಷ್ಟವಾಯಿತು. ಅದರ ಹಿಂದಿನ ವರ್ಷವಷ್ಟೇ ಪತ್ರಿಕೆಯೊಂದರಲ್ಲಿ ನಾನು ಬರೆದಿದ್ದ ಲೇಖನ ಈ ಪತ್ರಿಕೆಯಲ್ಲಿ ಸಂಪಾದಕೀಯವಾಗಿತ್ತು. ಕೊನೆಯಲ್ಲಿ ಐಎಎಸ್ ಅಧಿಕಾರಿಯೊಬ್ಬರ ಸಹಿಯೂ ಇತ್ತು. ಅವರು ಆ ಇಲಾಖೆಯ ಮುಖ್ಯಸ್ಥರಾದ್ದರಿಂದ ಅವರೇ ಆ ಪತ್ರಿಕೆಯ ಸಂಪಾದಕರು. ಚಕಿತನಾದ ನಾನು ಆ ಪುಟದ ಜೆರಾಕ್ಸ್ ಪ್ರತಿಯೊಂದನ್ನು ತೆಗೆದು ನಮ್ಮ ಅಧ್ಯಾಪಕರಿಗೆ ನೀಡಿ ವಿಷಯ ತಿಳಿಸಿದೆ. ಅವರು ಆಗ ಅವರು ಏನು ಹೇಳಿದರೋ ಅಮೇಲೇನು ಮಾಡಿದರೂ ಈಗ ನೆನಪಿಲ್ಲ. ಎಂತೆಂತಹ ಕಳ್ಳರಿದ್ದಾರೆ ಎಂದು ಮೊದಲ ಬಾರಿಗೆ ಖುದ್ದು ಅನುಭವಕ್ಕೆ ಬಂದ ಘಟನೆ ಅದು.

ಇತ್ತೀಚೆಗೂ ಇಂತಹ ಒಂದೆರಡು ಘಟನೆಗಳು ಗಮನಕ್ಕೆ ಬಂದವು. 2016 ಜೂನ್ 2ರ 'ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ನನ್ನ 'ಹಾಜರಾತಿ ಕೊರತೆಯ ಅಡಕತ್ತರಿ’ ಎಂಬ ಲೇಖನ ಕಳೆದ ವರ್ಷ ಎರಡು ಪತ್ರಿಕೆಗಳಲ್ಲಿ ಒಂದು ವಾರದ ಅಂತರದಲ್ಲಿ ಅದೇ ಶೀರ್ಷಿಕೆಯೊಂದಿಗೆ ಪ್ರಕಟವಾಯಿತು. ಒಂದೂ ಅಕ್ಷರ ಹೆಚ್ಚುಕಮ್ಮಿ ಇರಲಿಲ್ಲ. ಲೇಖಕ ಮಾತ್ರ ಬೇರೆ. ಈ ಪುಣ್ಯಾತ್ಮ ವಿಶ್ವವಿದ್ಯಾನಿಲಯವೊಂದರಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಓದುತ್ತಿದ್ದ ವ್ಯಕ್ತಿಯೆಂದು ಆಮೇಲೆ ತಿಳಿಯಿತು. ಪತ್ರಿಕೆಗಳಿಗೆ ಮಾಹಿತಿ ನೀಡಿದೆ. ಬರೆದವನಿಗೂ ಒಂದು ಮೇಲ್ ಮಾಡಿ 'ನೋಡಪ್ಪಾ, ಕೃತಿಸ್ವಾಮ್ಯ ಕಾಯ್ದೆಯ ಪ್ರಕಾರ ಇದೊಂದು ಗಂಭೀರ ಅಪರಾಧ. ನಾನು ನಿನ್ನ ಮೇಲೆ ಕೇಸ್ ಹಾಕಬಹುದು. ಆದರೆ ನೀನು ವಿದ್ಯಾರ್ಥಿ, ನಾನು ಅಧ್ಯಾಪಕ. ಹಾಗೆ ಮಾಡಲು ಹೋಗುವುದಿಲ್ಲ. ಇದು ಒಳ್ಳೆಯ ಕೆಲಸ ಅಲ್ಲ ಎಂಬುದನ್ನಾದರೂ ಅರ್ಥ ಮಾಡಿಕೋ. ಸ್ವಂತಿಕೆ ಬೆಳೆಸಿಕೋ. ಹೆಸರು ಮಾಡುವುದಕ್ಕೆ ತುಂಬ ದಾರಿಗಳಿವೆ’ ಎಂದೆ. ಅವನೋ ಆ ಘಟನೆ ಉದ್ದೇಶಪೂರ್ವಕ ಅಲ್ಲವೆಂದೂ ಆಕಸ್ಮಿಕವಾಗಿ ನಡೆದದ್ದೆಂದೂ ಸಮಜಾಯುಷಿ ನೀಡಿ, ಕ್ಷಮೆ ಕೋರಿದ. ಅವು ನಂಬುವಂತೆ ಇರಲಿಲ್ಲವಾದರೂ ಅದನ್ನು ಮುಂದಕ್ಕೆ ಒಯ್ಯುವ ಉದ್ದೇಶ ನನಗೆ ಇರಲಿಲ್ಲ.

ಕೆಲದಿನಗಳ ಹಿಂದೆ ಇಂಟರ್ನೆಟ್ ಜಾಲಾಡುತ್ತಿದ್ದಾಗ ಮತ್ತೆ ನಾನೇ ಬರೆದ ಸಾಲುಗಳು ಕಣ್ಣಿಗೆ ಬಿದ್ದವು. ಕನ್ನಡ ಪತ್ರಿಕೆಯೊಂದರ ಆನ್‌ಲೈನ್ ಆವೃತ್ತಿಯ ಲೇಖನದ ಲಿಂಕ್ ಅದು. ಪ್ರಕಟವಾಗಿ ಎರಡು ಮೂರು ತಿಂಗಳಾಗಿತ್ತು. ಆನ್‌ಲೈನ್ ಇದ್ದುದರಿಂದ ಈಗ ಗಮನಕ್ಕೆ ಬಂತು. ಪೂರ್ತಿ ಓದಿದರೆ ಹೆಚ್ಚುಕಡಿಮೆ ಮುಕ್ಕಾಲು ಪಾಲು ಲೇಖನ ನಾನು 2005ರಲ್ಲಿ ಪತ್ರಿಕೆಯೊಂದಕ್ಕಾಗಿ ಬರೆದ ಅಂಕಣವೊಂದರ ಯಥಾನಕಲು ಆಗಿತ್ತು. ಕೊನೆಯ ಎರಡು ಮೂರು ಪ್ಯಾರಾಗಳು ಮಾತ್ರ ಬೇರೆ ಇದ್ದವು. ನಡುನಡುವೆ ಒಂದೆರಡು ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಲಾಗಿತ್ತು. ನಾನು ಫೇಸ್‌ಬುಕ್ಕಿನಲ್ಲಿ ಎರಡು ಮಾತು ಬರೆದು ಸುಮ್ಮನಾದೆ.

ಅಂತರ್ಜಾಲವೆಂಬ ಬಟಾಬಯಲಲ್ಲಿ ಕದಿಯುವುದೂ ಸುಲಭ, ಸಿಕ್ಕಿಹಾಕಿಕೊಳ್ಳುವುದೂ ಸುಲಭ. ಆದರೆ ಕಾನೂನು ಕ್ರಮ ಕೈಗೊಳ್ಳುವುದೊಂದೇ ಇದಕ್ಕೆ ಪರಿಹಾರವಲ್ಲ. ಕೋರ್ಟ್ ಮೆಟ್ಟಿಲೇರಿದ ಕೂಡಲೇ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬುದರಲ್ಲೂ ಅರ್ಥವಿಲ್ಲ. ಕೃತಿಚೌರ್ಯವೆಂಬುದು ಇಂದು ನಿನ್ನೆಯ ವಿಷಯವೂ ಅಲ್ಲ. ಕ್ರಿ.ಶ. 1 ಮತ್ತು 2ನೇ ಶತಮಾನದ ನಡುವೆ ಬದುಕಿದ್ದ ಮಾರ್ಷಲ್ ಕವಿ ತನ್ನ ಸಾಲುಗಳನ್ನು ಇನ್ನೊಬ್ಬ ಕವಿ ಅಪಹರಿಸಿದ್ದಾನೆಂದು ದೂರಿದ ನಿದರ್ಶನವಿದೆ. ಆಮೇಲಿನ ನೂರಾರು ವರ್ಷಗಳಲ್ಲಿ ಕಲೆ-ಸಾಹಿತ್ಯದ ಇತಿಹಾಸದಲ್ಲಿ ಕೇಳಿಬಂದ ಕೃತಿಚೌರ್ಯದ ವಾಗ್ವಾದಗಳಿಗಂತೂ ಲೆಕ್ಕವೇ ಇಲ್ಲ. ಸೃಜನಶೀಲಯ ರಚನೆಗಳಲ್ಲಿ ಯಾವುದು ಮೂಲ, ಯಾವುದು ಖೋಟಾ ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವುದು ಕಷ್ಟ. ಅದರಲ್ಲೂ ಮುಕ್ತ ಬಳಕೆಯ ಹಕ್ಕುಗಳ ಚಳುವಳಿ (Free Book Culture) ವಿಸ್ತಾರಗೊಳ್ಳುತ್ತಿರುವ ಈ ಕಾಲದಲ್ಲಿ 'ಬೌದ್ಧಿಕ ಆಸ್ತಿ’, 'ಹಕ್ಕುಸ್ವಾಮ್ಯ’ ಮುಂತಾದ ಪದಗಳೂ ಗೊಂದಲಮಯ ಅನ್ನಿಸುವುದುಂಟು. ಹಾಗಂತ ಇನ್ನೊಬ್ಬ ದುಡಿದು ಬೆಳೆದ ಫಸಲನ್ನು ತಮ್ಮದೇ ಎಂದು ಉಂಡು ಬದುಕುವ ಮಂದಿಯನ್ನು ಸಮಾಜ ಎಚ್ಚರದಿಂದ ಗಮನಿಸುವ ಅಗತ್ಯವಂತೂ ಇದ್ದೇ ಇದೆ.

ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಸಂಶೋಧನ ವಲಯದಲ್ಲಿ ಕೃತಿಚೌರ್ಯವೆಂಬ ಅಪ್ರಾಮಾಣಿಕತೆ ಆಳವಾಗಿ ಬೇರುಬಿಟ್ಟಿದೆ. ಅದರಲ್ಲೂ ಭಾರತದ ಸಂಶೋಧನ ಕ್ಷೇತ್ರ ಪ್ರಪಂಚದಲ್ಲೇ ಕೃತಿಚೌರ್ಯಕ್ಕೆ ಕುಪ್ರಸಿದ್ಧವಾಗಿದೆ. ಜನಸಾಮಾನ್ಯರು ಕದ್ದರೆ ಕೃತಿಚೌರ್ಯ, ಪ್ರಾಧ್ಯಾಪಕರು ಕದ್ದರೆ ಸಂಶೋಧನೆ ಎಂಬಷ್ಟರ ಮಟ್ಟಿಗೆ ನಮ್ಮ ಅಕಡೆಮಿಕ್ ಕ್ಷೇತ್ರ ನಗೆಪಾಟಲಿಗೀಡಾಗಿದೆ. ಇನ್ನೊಬ್ಬರ ಸಂಶೋಧನ ಪ್ರಬಂಧವನ್ನೇ ಇಡಿಯಿಡಿಯಾಗಿ ಕದ್ದು ಪಿಎಚ್‌ಡಿ ಗಿಟ್ಟಿಸಿಕೊಂಡ ಮಹಾನುಭಾವರಿದ್ದಾರೆ. ಬೇರೊಬ್ಬರ ಸಂಶೋಧನ ಫಲಿತಾಂಶಗಳನ್ನು ತಮ್ಮದೇ ಎಂದು ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿಕೊಂಡು ರಾತೋರಾತ್ರಿ ಪ್ರಸಿದ್ಧರಾಗಿ ಅದನ್ನು ಸಮರ್ಥಿಸಿಕೊಂಡ ನಿರ್ಲಜ್ಜರಿದ್ದಾರೆ. ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಚಾರ ಸಂಕಿರಣ, ಸಮ್ಮೇಳನಗಳಲ್ಲಿ ಮಂಡನೆಯಾಗುವ ಪ್ರಬಂಧಗಳಲ್ಲಿ ಸ್ವಂತದ್ದಲ್ಲದ ಹೂರಣವೆಷ್ಟೋ ಲೆಕ್ಕಕ್ಕಿಲ್ಲ. ಈಗಂತೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವರ್ಷಕ್ಕೆ ಲಕ್ಷಗಟ್ಟಲೆ ಸಂಬಳ ಪೀಕುವ ಕೆಲವು ಅಧ್ಯಾಪಕರನ್ನು ವಿಷಯ ಪರಿಣಿತರು ಎನ್ನುವುದಕ್ಕಿಂತಲೂ 'ವಿಕಿಪೀಡಿಯ ತಜ್ಞ’ರೆಂದು ಕರೆಯುವುದೇ ಹೆಚ್ಚು ಸೂಕ್ತ.

ನೈನಿತಾಲ್‌ನ ಕುಮಾಲ್ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಪ್ರೊ. ಬಿ. ಎಸ್. ರಜಪೂತ್ ಕೃತಿಚೌರ್ಯದ ಆರೋಪದಿಂದಾಗಿ 2002ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಆರಂಭದಲ್ಲಿ ಅವರು ಆರೋಪಗಳನ್ನು ನಿರಾಕರಿಸಿದರೂ ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿಯೂ ಸೇರಿದಂತೆ ಜಗತ್ತಿನ ಹಲವು ಪ್ರಸಿದ್ಧ ಸಂಶೋಧಕರು ಇದನ್ನು ದೃಢಪಡಿಸಿ ಅಂದಿನ ರಾಷ್ಟ್ರಪತಿ ಎ. ಪಿ. ಜೆ. ಅಬ್ದುಲ್ ಕಲಾಂ ಅವರಿಗೆ ಪತ್ರ ಬರೆದ ಮೇಲೆ ಅವರು ಕೃತಿಚೌರ್ಯವನ್ನು ಒಪ್ಪಿಕೊಂಡು ರಾಜೀನಾಮೆ ನೀಡಿದರು.

2016ರಲ್ಲಿ ಪಾಂಡಿಚೇರಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಚಂದ್ರಾ ಕೃಷ್ಣಮೂರ್ತಿಯವರೂ ಇಂತಹದೇ ಆರೋಪ ಎದುರಾದ್ದರಿಂದ ತಮ್ಮ ಹುದ್ದೆ ತ್ಯಜಿಸಬೇಕಾಯಿತು. ಅವರೂ ತಮ್ಮನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದೊಂದಿಗೆ ದೀರ್ಘ ಹೋರಾಟ ನಡೆಸಿದ್ದರು. ಕೊನೆಗೂ ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರೇ ಅವರ ವಜಾಕ್ಕೆ ಆದೇಶಿದ ಬಳಿಕ ತಾವೇ ರಾಜೀನಾಮೆ ನೀಡಿದರು.

ಸಂಶೋಧಕರನ್ನೇಕೆ, ನ್ಯಾಯಾಧೀಶರನ್ನೂ ಕೃತಿಚೌರ್ಯದ ಆರೋಪ ಹೊರತು ಮಾಡಿಲ್ಲ ಎಂಬುದನ್ನು ಗಮನಿಸಬೇಕು. 2015ರಲ್ಲಿ ದೆಹಲಿ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವೊಂದು ನೀಡಿದ ತೀರ್ಪಿನಲ್ಲೇ ಮೂಲವನ್ನು ಉಲ್ಲೇಖಿಸದೆ ಶ್ವೇತ್ರಶ್ರೀ ಮಜುಂದಾರ್ ಮತ್ತು ಈಶಾನ್ ಘೋಷ್ ಎಂಬವರ ಪ್ರಬಂಧದ 33 ಪ್ಯಾರಾಗಳನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಯಿತು. ಕೊನೆಗೆ ಆ ತೀರ್ಪು ನೀಡಿದ ನ್ಯಾಯಾಧೀಶರು ಆಗಿರುವ ಪ್ರಮಾದವನ್ನು ಒಪ್ಪಿಕೊಂಡು 'ಇದು ಇಂಟರ್ನಿಯೊಬ್ಬರು ಮಾಡಿದ ತಪ್ಪಿನಿಂದಾದ ಎಡವಟ್ಟು’ ಎಂದು ವಿಷಾದ ವ್ಯಕ್ತಪಡಿಸಿದಲ್ಲಿಗೆ ಪ್ರಕರಣ ಸುಖಾಂತ್ಯ ಕಂಡಿತು.

ಅಕಡೆಮಿಕ್ ವಲಯದಲ್ಲದೆ ಕಲೆ, ಸಿನಿಮಾ, ಸಾಹಿತ್ಯ ಕ್ಷೇತ್ರದಲ್ಲೂ ಕೃತಿಚೌರ್ಯದ ಕುರಿತ ಗುರುತರ ಆರೋಪಗಳು ಕೇಳಿಬರುತ್ತಲೇ ಇವೆ. 2011ರ ಸ್ವರ್ಣಕಮಲ ಪ್ರಶಸ್ತಿ ಪುರಸ್ಕೃತ 'ಬ್ಯಾರಿ’ ಸಿನಿಮಾ ತಮ್ಮ 'ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯ ನಕಲು ಎಂದು ಸಾರಾ ಅಬೂಬಕ್ಕರ್ ಆರೋಪಿಸಿದರು. ಚೇತನ್ ಭಗತ್ ಅವರು ತಮ್ಮ 'ಒನ್ ಇಂಡಿಯನ್ ಗರ್ಲ್’ ಕೃತಿಯಲ್ಲಿ ತಮ್ಮ 'ಲೈಫ್, ಓಡ್ಸ್ & ಎಂಡ್ಸ್’ ಪುಸ್ತಕದ ಪಾತ್ರ, ಸ್ಥಳ ಹಾಗೂ ಭಾವನಾತ್ಮಕ ಹರಿವನ್ನು ಕದ್ದಿದ್ದಾರೆ ಎಂದು ಕಳೆದ ವರ್ಷ ಅನ್ವಿತಾ ಬಾಜಪಯೀ ಆರೋಪಿಸಿದರು. ಸ್ವತಃ ಚೇತನ್ ಭಗತ್ ಅವರು ರಾಜ್‌ಕುಮಾರ್ ಹಿರಾನಿ ಅವರ 'ತ್ರೀ ಈಡಿಯಟ್ಸ್’ ಸಿನಿಮಾ ತಮ್ಮ 'ಫೈವ್ ಪಾಯಿಂಟ್ಸ್ ಸಮ್‌ವನ್’ ಕೃತಿಯ ರೂಪಾಂತರದಂತಿದೆ ಎಂದು 2009ರಲ್ಲಿ ಆರೋಪಿಸಿದ್ದರು.

ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ 'ದಿ ಹಿಂದೂ’ ಪತ್ರಿಕೆಯಲ್ಲಿ ೨೦೧೫ರಲ್ಲಿ ಪ್ರಕಟಿಸಿದ 'ಫ್ರಂ ವೆಲ್‌ಫೇರ್ ಟು ಪ್ಯಾಟರ್ನಲಿಸಂ’ ಲೇಖನವು ಅದೇ ಪತ್ರಿಕೆಯಲ್ಲಿ ಪ್ರಕಟವಾದ ಜಿ. ಸಂಪತ್ ಅವರ 'ಮಿ. ಮೋದೀಸ್ ವಾರ್ ಆನ್ ವೆಲ್‌ಫೇರ್’ ಲೇಖನದಿಂದ ಅನೇಕ ಪ್ಯಾರಾಗಳನ್ನು ಒಳಗೊಂಡಿದೆ ಎಂದು ಆರೋಪಿಸಲಾಯಿತು. ಇದನ್ನು ಸ್ವತಃ ಮೊಯ್ಲಿಯವರೇ ಆಮೇಲೆ ಒಪ್ಪಿಕೊಂಡು ಕಣ್ತಪ್ಪಿನಿಂದಾದ ದೋಷ ವಿಷಾದಿಸಿದರು. ಅಮೀರ್ ಖಾನ್ ಅವರ 'ಪಿಕೆ’, ರಜನೀಕಾಂತ್ ನಟನೆಯ 'ಲಿಂಗಾ’, 'ಕಾಳಕರಿಕಾಳನ್’, ಉಪೇಂದ್ರ ನಟನೆಯ 'ಕಠಾರಿವೀರ ಸುರಸುಂದರಾಂಗಿ’ ಚಿತ್ರಗಳ ವಿರುದ್ಧವೂ ಕೃತಿಚೌರ್ಯದ ಆರೋಪಗಳು ಕೇಳಿಬಂದಿವೆ.

ಕೃತಿಸ್ವಾಮ್ಯ ಕಾಯ್ದೆ 1957ರ ಹೊರತಾಗಿ ಕೃತಿಚೌರ್ಯವನ್ನು ತಡೆಗಟ್ಟುವ ಯಾವುದೇ ನಿರ್ದಿಷ್ಟ ಕಾನೂನುಗಳು ಭಾರತದಲ್ಲಿಲ್ಲ. ವಾಸ್ತವವಾಗಿ ಕೃತಿಸ್ವಾಮ್ಯ ಹಾಗೂ ಕೃತಿಚೌರ್ಯದ ತಡೆಗಟ್ಟುವಿಕೆ ವಿಭಿನ್ನ ವಿಷಯಗಳು. ಕೃತಿಸ್ವಾಮ್ಯ ಕಾಯ್ದೆಯು ಕೃತಿಸ್ವಾಮ್ಯದ ಉಲ್ಲಂಘನೆ ಎಂದರೇನು ಎಂಬುದನ್ನು ವ್ಯಾಖ್ಯಾನಿಸುತ್ತದೆಯೇ ಹೊರತು ಕೃತಿಚೌರ್ಯವನ್ನು ವ್ಯಾಖ್ಯಾನಿಸುವುದಿಲ್ಲ. ಕಾಯ್ದೆಯ ಸೆಕ್ಷನಗ 63ರ ಪ್ರಕಾರ ಕಾಯ್ದೆಯನ್ನು ಉಲ್ಲಂಘಿಸಿದವರಿಗೆ 6 ತಿಂಗಳಿನಿಂದ 3 ವರ್ಷದವರೆಗೆ ಜೈಲುಶಿಕ್ಷೆ ಹಾಗೂ ರೂ. 50,000 ದಿಂದ ರೂ. 2 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ.

ಅಕಡೆಮಿಕ್ ಕ್ಷೇತ್ರದ ಕೃತಿಚೌರ್ಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು ಎಂಬ ಕೂಗು ಇತ್ತೀಚೆಗೆ ಜೋರಾಗಿ ಕೇಳುಬರುತ್ತಿದೆ. ಸಂಶೋಧನಾ ವಲಯದ ಕೃತಿಚೌರ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯುಜಿಸಿ ಇತ್ತೀಚೆಗೆ ಒಂದಷ್ಟು ನಿಯಮಗಳನ್ನು ರೂಪಿಸಿದೆ. ಯಾವುದೇ ಪಿಎಚ್‌ಡಿ ಪ್ರಬಂಧ ಸ್ವೀಕರಿಸುವ ಮೊದಲು ಕೃತಿಚೌರ್ಯ ಪರಿಶೀಲನೆ ಕಡ್ಡಾಯಗೊಳಿಸಿದೆ. ಪರಿಶೀಲನೆ ವೇಳೆಗೆ ಶೇ. 10-40ರಷ್ಟು ಕೃತಿಚೌರ್ಯ ಕಂಡುಬಂದರೆ ಸಂಶೋಧನಾರ್ಥಿಯು 6 ತಿಂಗಳೊಳಗೆ ಪ್ರಬಂಧವನ್ನು ಮರುಸಲ್ಲಿಸಬೇಕಾಗುತ್ತದೆ. ಶೇ. 40-60ರಷ್ಟು ಕೃತಿಚೌರ್ಯವಿದ್ದರೆ ಅಭ್ಯರ್ಥಿಯು ಒಂದು ವರ್ಷ ಡಿಬಾರ್ ಆಗಬೇಕಾಗುತ್ತದೆ. ಅದಕ್ಕಿಂತಲೂ ಹೆಚ್ಚಿದ್ದರೆ ನೋಂದಣಿಯನ್ನೇ ರದ್ದು ಮಾಡಬಹುದು. ಕೃತಿಚೌರ್ಯ ಸಾಬೀತಾದರೆ ಮಾರ್ಗದರ್ಶಕ ಪ್ರಾಧ್ಯಾಪಕರ ವೇತನ ಭಡ್ತಿಗೆ ಕತ್ತರಿ ಬೀಳಲಿದೆ. ಶೇ. 60ಕ್ಕಿಂತಲೂ ಹೆಚ್ಚು ಕೃತಿಚೌರ್ಯ ಕಂಡುಬಂದರೆ ವರನ್ನು ಅಮಾನತುಗೊಳಿಸುವ ಇಲ್ಲವೇ ಕೆಲಸದಿಂದ ವಜಾ ಮಾಡುವ ಅವಕಾಶವೂ ಹೊಸ ನಿಯಮದಲ್ಲಿದೆ.

ಕಾನೂನು ನಿಯಮಗಳಿಂದಲೇ ಎಲ್ಲ ಸಮಸ್ಯೆಗಳು ಪರಿಹಾರವಾಗುವುದಿದ್ದರೆ ಜಗತ್ತು ಯಾವತ್ತೋ ಕಲ್ಯಾಣರಾಜ್ಯವಾಗುತ್ತಿತ್ತು. ಆತ್ಮಸಾಕ್ಷಿಗಿಂತ ಮಿಗಿಲಾದ ಕಾನೂನು ಇದೆಯೇ?

ಮಂಗಳವಾರ, ನವೆಂಬರ್ 20, 2018

ಆಹಾ ಪುರುಷಾಕಾರಂ!

ನವೆಂಬರ್ 18, 2018ರಂದು ವಿಜಯ ಕರ್ನಾಟಕ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿರುವ ಲೇಖನ

ಯಾರು ನಿಮ್ಮ ಹೀರೋ? ಹಾಗೆಂದು ಆಗಷ್ಟೇ ಪದವಿ ತರಗತಿಗಳಿಗೆ ಹೊಸದಾಗಿ ಪ್ರವೇಶ ಪಡೆದು ಬೆರಗುಗಣ್ಣುಗಳೊಂದಿಗೆ ಕುಳಿತಿದ್ದ ಹುಡುಗ ಹುಡುಗಿಯರನ್ನು ಕೇಳಿದೆ. ಒಂದಷ್ಟು ಸಿನಿಮಾ ನಾಯಕರು, ಸ್ವಾತಂತ್ರ್ಯ ಹೋರಾಟಗಾರರು, ರಾಜಕೀಯ ನೇತಾರರರ ಹೆಸರುಗಳು ಒಂದಾದಮೇಲೊಂದು ಬಂದವು. ಅವೆಲ್ಲ ನಿರೀಕ್ಷಿತವೇ ಆಗಿದ್ದರೂ ಆ ಹೊಸ ಮಕ್ಕಳು ತಿರುಗಿ ಇನ್ನೊಂದು ಪ್ರಶ್ನೆ ಕೇಳಬಹುದೆಂದು ಅಂದುಕೊಂಡಿರಲಿಲ್ಲ. ‘ನಿಮ್ಮ ಹೀರೋ ಯಾರು ಸರ್?’ ನಾನು ಚಕಿತನಾಗಿ ಎರಡು ಕ್ಷಣ ತಡೆದು ‘ನನ್ನ ಅಪ್ಪ’ ಅಂದೆ. ಹ್ಞಾ? ಎಂದು ಚುರುಕಾದ ಅವರ ಮುಖದಲ್ಲೀಗ ಮಂದಹಾಸ ಬೆರೆತ ಸಣ್ಣ ಕುತೂಹಲವೂ ಇತ್ತು.

ಅವರಿಗೆ ಎರಡು ಮಾತಿನ ವಿವರಣೆ ಕೊಡುವುದು ನನಗೆ ಅನಿವಾರ್ಯವಾಗಿತ್ತು: ನನ್ನ ಅಪ್ಪ ಹುಟ್ಟಿ ಎರಡೂವರೆ ವರ್ಷಕ್ಕೆ ಅವರಮ್ಮ ತೀರಿಕೊಂಡರಂತೆ. ಎರಡು ಹೊತ್ತಿನ ಕೂಳು ಸಂಪಾದಿಸುವುದೇ ಬದುಕಿನ ಏಕೈಕ ಉದ್ದೇಶವಾಗಿದ್ದ ಮೇಲೆ ಓದು ಬರಹ ದೂರವೇ ಉಳಿಯಿತು. ಎಲ್ಲೋ ಎರಡನೇ ಕ್ಲಾಸು ಮುಗಿಸಿದ್ದರೆಂದು ಕಾಣುತ್ತದೆ. ಆಮೇಲಿನದ್ದೆಲ್ಲ ಅವರಿವರ ಮನೆ ಚಾಕರಿಯ ಗತವೈಭವ.

ಓಡಾಟ, ಹೋರಾಟ. ಮರಳಿನಿಂದ ಎಣ್ಣೆ ಹಿಂಡುವ ಛಲ. ಬರಡು ನೆಲದಲ್ಲಿ ಬೆಳೆ ತೆಗೆವ ಬಲ. ನಮಗೆ ನೆನಪಿರುವುದು ನಸುಕಿನ ಮೂರು ಗಂಟೆಗೆ ಎದ್ದು ತಲೆ ಮೇಲೆ ಬಾಳೆಗೊನೆ ಹೊತ್ತು ಹದಿನೈದು ಕಿಲೋಮೀಟರ್ ಕಾಡು ಹಾದಿ ಬಳಸಿ ಸಂತೆಗೆ ಹೋಗಿ ಮಾರಾಟ ಮಾಡಿ ಮಟಮಟ ಮಧ್ಯಾಹ್ನ ಅಕ್ಕಿ ದಿನಸಿ ಹೊರೆ ಹೊತ್ತು ಬಸವಳಿದು ಬಂದು ಮುಳಿಹುಲ್ಲಿನ ಮನೆಯ ಸೆಗಣಿ ಸಾರಿಸಿದ ಜಗುಲಿಯ ಅಂಚಿನಲ್ಲಿ ಕುಳಿತು ಮಜ್ಜಿಗೆ ನೀರು ಕುಡಿಯುತ್ತಿರುವ ಅಪ್ಪನ ಕಪ್ಪುಬಿಳುಪು ಚಿತ್ರ.

ಆ ಚಿತ್ರ ಕಣ್ಣೆದುರು ಬಂದಾಗಲೆಲ್ಲ ‘ನನಗೆ ಕೇಳಿಸದೇ ಅಪ್ಪಯ್ಯ/ ಆ ಬಿರುಕು ಬಿಟ್ಟಿರುವ ಬರಡು ಕೊಳಗಳ ಹಿಂದೆ/ ಮಡುಗಟ್ಟಿ ನಿಂತಿರುವ ಕೊಳಗಗಟ್ಟಲೆ ಉಪ್ಪುನೀರು?/ ಒಂದೊಮ್ಮೆ ಜೀವಜಲದಲ್ಲಿ ಮಿಂದೆದ್ದ ಮೀನುಗಳ ಕಳೇಬರ?/ ಕರಟಿ ಗಬ್ಬದ್ದಿರುವ ನೈದಿಲೆ, ತಾವರೆಗಳ ರಾಶಿರಾಶಿ?’ ಎಂಬಿತ್ಯಾದಿ ಕವಿತೆ ಸಾಲುಗಳನ್ನೆಲ್ಲ ಗೀಚಿ ಪುಸ್ತಕಗಳ ನಡುವೆ ಜೋಡಿಸಿದ್ದೂ ಉಂಟು. ಅಪ್ಪನ ಬಳಿ ನೂರೆಂಟು ಪುರಾಣ ಕತೆಗಳಿದ್ದವು, ಬರೆಯದ ಆತ್ಮಕಥೆಯ ಸಾವಿರದೆಂಟು ಪುಟಗಳಿದ್ದವು. ಎಷ್ಟು ಓದಿದೆವೋ ಎಷ್ಟು ಓದದೆ ಉಳಿದೆವೋ ಗೊತ್ತಿಲ್ಲ, ಆದರೆ ಮೂವತ್ತು ಚಿಲ್ಲರೆ ವರ್ಷಗಳಲ್ಲಿ ಅಪ್ಪನಂತಹ ಇನ್ನೊಬ್ಬ ಮಹಾತ್ಮ ಕಣ್ಣಿಗೆ ಬಿದ್ದಿಲ್ಲ. ಅದಕ್ಕೆ ಅವರೇ ನನ್ನ ಹೀರೋ.

ಎಂಬ ಇತಿವೃತ್ತವನ್ನು ಮೂರು ವಾಕ್ಯದಲ್ಲಿ ಹೇಳಿಮುಗಿಸಿದೆ. ಬಹುಶಃ ಅವರೆಲ್ಲರಿಗೂ ಅವರವರ ಬಾಲ್ಯದ ನೆನಪು ಬಂದಿರಬೇಕು. ಅವರಲ್ಲಿ ಬಹುತೇಕರು ತೀರಾ ಬಡತನದಿಂದ ಬಂದ ಕಷ್ಟಜೀವಿಗಳೇ. ಅದರಲ್ಲೂ ಹೆಚ್ಚಿನವರು ಅವರ ಕುಟುಂಬದಿಂದಲೇ ಮೊದಲ ಬಾರಿ ಶಾಲೆಯ ಮೆಟ್ಟಿಲು ಹತ್ತಿದವರು. ‘ಹೇಳಿ, ಅಪ್ಪ ಯಾವ ಹೀರೋಗೆ ಕಡಿಮೆ?’ ಎಂದು ಕೇಳಿದೆ. ಅಷ್ಟು ಹೊತ್ತಿಗೆಲ್ಲ ಅವರೂ ತಮ್ಮ ಮನಸ್ಸಿನೊಳಗೆ ಇದ್ದ ಹೀರೋನ ಪ್ರತಿಮೆಯನ್ನು ಬದಲಾಯಿಸಿಕೊಂಡಿದ್ದರು. ಜಗತ್ತಿನ ಶೇಕಡಾ ತೊಂಬತ್ತೊಂಬತ್ತು ಮಂದಿಯ ಮೊದಲ ಹೀರೋ-ಹೀರೋಯಿನ್ನುಗಳು ಅವರ ಮನೆಯಲ್ಲೇ ಇದ್ದಾರೆ.

ಹಾಗೆಂದುಕೊಂಡಿರುವುದು ವಾಸ್ತವವೇ ಅಥವಾ ಬರೀ ಗತಕಾಲದ ಭ್ರಮೆಯೇ ಎಂಬ ಪ್ರಶ್ನೆ ಕಾಡಿದ್ದು ಈ ಬಾರಿಯ ‘ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ’ಯ ಘೋಷವಾಕ್ಯವನ್ನು ನೋಡಿದಾಗ. ಧನಾತ್ಮಕ ಪುರುಷ ಮಾದರಿ (Positive Male Role Models) ಎಂಬುದೇ ಆ ಸ್ಲೋಗನ್. ವಾಟ್ಸಾಪು ಫೇಸ್ಬುಕ್ಕಿನ ಭಾಷೆಯಲ್ಲಿ ವ್ಯವಹರಿಸುವ ನಮ್ಮ ಹೊಸ ಜಮಾನಾದ ಹುಡುಗರಿಗೆ ಧನಾತ್ಮಕ ಪುರುಷ ಮಾದರಿಯೊಂದರ ಅಗತ್ಯ ಇದೆಯೇ? ಇದ್ದರೆ ಅವರ ಕಣ್ಣೆದುರು ಬರುವ ಮಾದರಿ ಯಾವುದು? ಅವರು ಬೆಳೆದು ವಿಶಾಲ ಸಮಾಜವೊಂದರ ಭಾಗವಾದಾಗ ಅವರ ಸಮಾಜೋ-ಸಾಂಸ್ಕೃತಿಕ ಬದುಕಿನ ಹಿಂದೆ ಈ ಮಾಡೆಲ್ಲಿನ ಪಾತ್ರ ಏನು?

ಪುರುಷನೆಂಬ ಆಕೃತಿ ಮನುಷ್ಯನ ಇತಿಹಾಸದಷ್ಟೇ ಹಳೆಯದು. ಅದ್ಯಾಕೆ ಇಷ್ಟು ಸಾವಿರ ವರ್ಷಗಳಲ್ಲಿ ಇಲ್ಲದ ಪುರುಷರ ದಿನಾಚರಣೆ ಈಗ ಆರಂಭವಾಗಿದೆ? ಪುರುಷನ ಧನಾತ್ಮಕ ಮಾದರಿಯ ಬಗ್ಗೆ ಚಿಂತಿಸುವ, ಚರ್ಚಿಸುವ ಅವಶ್ಯಕತೆಯೊಂದು ಜಗತ್ತಿನೆದುರು ಈಗ ಯಾಕೆ ತೆರೆದುಕೊಂಡಿದೆ? ಧನಾತ್ಮಕ ಮಾದರಿಯ ಬಗ್ಗೆ ಒತ್ತಿ ಹೇಳುತ್ತಿದ್ದೇವೆ ಎಂದರೆ ಋಣಾತ್ಮಕ ಮಾದರಿಯ ಪ್ರಭಾವ ಜಾಸ್ತಿ ಇದೆ ಎಂದು ಅರ್ಥ ಅಲ್ಲವೇ?

...ಗುಣಕೆ ಮಚ್ಚರವೇಕೆ? 
ಶ್ರೀರಾಮನಾಹ್ಲಾದ ರೂಪಿ. ಔದಾರ್ಯ ನಿಧಿ.
ನಿರಸೂಯೆಯಿಂ ಸರ್ವರನುರಾಗ ಭಜನಂ.
ಕಲಿ. ಮತ್ಸರವಿದೂರನತ್ಯಂತ ಶಾಂತಿಖನಿ.
ಪ್ರಿಯಭಾಷಿ. ಹಿತಸಖಂ. ಮಿತಮಾರ್ಗಿ. ಧೀರವಶಿ.
ನಗುಮೊಗದ ಸಂಯಮಿ. ಕೃತಜ್ಞತಾ ಮೂರ್ತಿ. ಮೇಣ್
ಜ್ಞಾನಿ. ಸಜ್ಜನಪ್ರೇಮಿ. ಸೂಕ್ಷ್ಮಮತಿ. ಪಂಡಿತಂ.
ಶೃತಿವಿದಂ; ಸುವಿಚಾರಿ; ನಿತ್ಯಪ್ರಜಾಪ್ರೇಮಿ!
ಸುಸ್ಥಿರಂ; ಸಂಬುದ್ಧ ಪ್ರಜ್ಞಾ ಮಹೇಶ್ವರಂ! 
ಇದು ಕುವೆಂಪು ಅವರ ದಶರಥ ಕಡೆದ ರಾಮನ ಚಿತ್ರ. ಲೋಕದಲ್ಲಿ ಕೋಟ್ಯಂತರ ಪುರುಷರಿದ್ದರೂ ರಾಮನೊಬ್ಬನೇ ಪುರುಷೋತ್ತಮನೆಂದು ಕರೆಯಲ್ಪಟ್ಟ. ಪುರುಷೋತ್ತಮನ ಹೊಸದೊಂದು ಮಾದರಿಗೆ ಆಧುನಿಕ ಜಗತ್ತು ತಹತಹಿಸುತ್ತಿದೆಯೇ?

ಒಂಬತ್ತು ತಿಂಗಳ ಹೆಣ್ಣು ಶಿಶುವಿನ ಮೇಲೆ ಅದನ್ನು ನೋಡಿಕೊಳ್ಳುವ ಸಹಾಯಕನೊಬ್ಬ ಮೊನ್ನೆ ಅತ್ಯಾಚಾರ ಮಾಡಿದನಂತೆ. ಅದಕ್ಕೂ ಮೂರು ದಿನದ ಹಿಂದೆ ಉತ್ತರ ಪ್ರದೇಶದ ಆಸ್ಪತ್ರೆಯೊಂದರ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾತು ಬಾರದ ಹದಿಹರೆಯದ ಹುಡುಗಿಯ ಮೇಲೆ ವಾರ್ಡ್‍ಬಾಯ್‍ಗಳೇ ಸಾಮೂಹಿಕ ಅತ್ಯಾಚಾರ ಎಸಗಿದರಂತೆ. ಇಂತಹ ಸುದ್ದಿಗಳು ಬೇಡವೆಂದರೂ ಪ್ರತೀದಿನ ಎಂಬ ಹಾಗೆ ಕಣ್ಣಿಗೆ ರಾಚುತ್ತವೆ. ಇನ್ನೂ ಜಗತ್ತಿನ ಬೆಳಕಿಗೆ ಕಣ್ಣು ತೆರೆಯುತ್ತಿರುವ ಹಸುಳೆಯ ಮೇಲೆ ಅತ್ಯಾಚಾರ ಎಸಗಬೇಕೆಂದು ಅನಿಸುವ ಆ ಪುರುಷನ ಒಳಗಿನ ಮನಸ್ಸು ಎಂತಹದು? ಚಿಕಿತ್ಸೆಗಾಗಿ ಬಂದು ಅಸಹಾಯಕಳಾಗಿ ಬಿದ್ದಿರುವ ಹುಡುಗಿಯ ಮೇಲೆ ಅತ್ಯಾಚಾರ ಎಸಗುವ ಆಸ್ಪತ್ರೆ ಹುಡುಗರ ಎದೆ ಇನ್ನೆಂತಹ ಬಂಡೆಗಲ್ಲು ಇದ್ದೀತು? ಇವರೆಲ್ಲ ಯಾವ ಸೀಮೆಯ ಪುರುಷರು?

ನಾವೆಲ್ಲೋ ದಯನೀಯವಾಗಿ ಸೋತುಬಿಟ್ಟಿದ್ದೇವೆ. ಈ ಸೋಲಿಗೆ ಯಾರು ಕಾರಣರು? ಅಪ್ಪನೇ, ಅಮ್ಮನೇ, ಅಧ್ಯಾಪಕನೇ, ಸ್ನೇಹಿತನೇ, ಸುತ್ತಲಿನ ಸಮಾಜವೇ? ಎದುರಿಗಿರುವ ಹೆಣ್ಣನ್ನು ಕಾಮದ ಕಣ್ಣಿನಿಂದಷ್ಟೇ ನೋಡುವ ಮನಸ್ಸು ಈ ಯುವಕರಲ್ಲಿ ಬೆಳೆದದ್ದಾದರೂ ಹೇಗೆ? ಹೆಣ್ಣೊಬ್ಬಳನ್ನು ಕಂಡಾಗ ತನ್ನ ಮನೆಯಲ್ಲೇ ಇರುವ ಅಕ್ಕನೋ ತಂಗಿಯೋ ಅಮ್ಮನೋ ಚಿಕ್ಕಮ್ಮನೋ ಯಾರೂ ನೆನಪಾಗುವುದಿಲ್ಲವೇ?

ನಮ್ಮ ಸೋಲಿನ ಮೂಲ ನಮ್ಮ ಮನೆಗಳಲ್ಲೇ ಇದೆ. ಪಕ್ಕದಲ್ಲಿರುವ ಹೆಣ್ಣುಮಗುವನ್ನು ಸಹೋದರಿಯಂತೆಯೋ ಒಳ್ಳೆಯ ಸ್ನೇಹಿತೆಯಂತೆಯೋ ಹೆತ್ತಮ್ಮನಂತೆಯೋ ನೋಡುವುದು ನಮ್ಮ ಪುರುಷರಿಗೆ ಸಾಧ್ಯವಾಗುತ್ತಿಲ್ಲವೆಂದರೆ ಅದಕ್ಕೆ ಸಂಸ್ಕಾರಹೀನತೆಯಲ್ಲದೆ ಬೇರೆ ಕಾರಣಗಳಿಲ್ಲ. ಮನೆಯಲ್ಲಿ ಕಲಿಯದ ಸಂಸ್ಕಾರ ಹೊರಗೆಲ್ಲಿ ದಕ್ಕೀತು? ಹೆಣ್ಣನ್ನು ಪ್ರಕೃತಿಯೆಂದು, ದೇವರೆಂದು ಕಂಡ ಪರಂಪರೆಯ ಪ್ರವಾಹ ನಮ್ಮ ಮನಸ್ಸುಗಳ ಕೊಳೆಯನ್ನು ತೊಳೆಯುತ್ತಿಲ್ಲ. ಸಂಸ್ಕಾರದ ವಿಶಾಲ ವಟವೃಕ್ಷ ಹೊಸ ಮನಸ್ಸುಗಳಲ್ಲಿ ಬೇರು ಬಿಡುತ್ತಿಲ್ಲ. ನಾವು ಯಾವುದೋ ಸುಂದರ ಜಲಪಾತದಲ್ಲಿ ಮೀಯುತ್ತಿರುವ ಭ್ರಮೆಯಲ್ಲಿ ನಮ್ಮದಲ್ಲದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದೇವೆ? ಯಾವುದೀ ಪ್ರವಾಹವು?

ಮನೆ, ಮನೆಯೊಳಗಿನ ಮಂದಿ ಮನಸ್ಸು ಮಾಡಿದರೆ ಏನೂ ಆಗಬಹುದು. ಆದರೆ ಅದಕ್ಕೆ ಯಾರಿಗೂ ವ್ಯವಧಾನವಾಗಲೀ ಸಮಯವಾಗಲೀ ಇಲ್ಲ. ಅಮೇರಿಕದಲ್ಲಿ ಪ್ರತೀ ತಂದೆ ತನ್ನ ಮಗುವಿನ ಜೊತೆಗೆ ದಿನವೊಂದಕ್ಕೆ 10 ನಿಮಿಷ ಕಳೆಯುತ್ತಿದ್ದಾನಂತೆ. ನಾವೂ ಹೆಚ್ಚೂ ಕಡಿಮೆ ಅದೇ ಹಾದಿಯಲ್ಲಿದ್ದೇವೆ. ಜಗತ್ತು ಹುಡುಕುತ್ತಿರುವ ಪಾಸಿಟಿವ್ ರೋಲ್ ಮಾಡೆಲ್ ಯಾವ ಸಿದ್ಧ ಮಾರುಕಟ್ಟೆಯಲ್ಲೂ ಲಭ್ಯವಿಲ್ಲ. ಒಬ್ಬ ಅಪ್ಪ, ಒಬ್ಬ ಅಧ್ಯಾಪಕ ಮನಸ್ಸು ಮಾಡಿದರೆ ಕಲ್ಮಷವಿಲ್ಲದ ಮನಸ್ಸಿನ ಮಕ್ಕಳನ್ನು ಸಮಾಜಕ್ಕೆ ಕೊಡಲು ಅಡ್ಡಿ ಬರುವವರು ಯಾರಿದ್ದಾರೆ? ಒಮ್ಮೆ ಅಂತಹದೊಂದು ಮಾದರಿ ಮನೆಯಿಂದ, ಶಾಲೆಯಿಂದ ಆಚೆ ಬಂದರೆ ಅದನ್ನು ಕೆಡಿಸುವ ತಾಕತ್ತು ಬೇರೆ ಯಾರಿಗಿದೆ? ಮನೆ-ಶಾಲೆಯಲ್ಲಿ ಸರಿಯಾದ ಮಾದರಿ ದೊರೆಯದೇ ಹೋದರೆ ಮಕ್ಕಳು ನಿಸ್ಸಂಶಯವಾಗಿ ಟಿವಿ, ಧಾರಾವಾಹಿ, ಸಿನಿಮಾ, ಮೊಬೈಲ್‍ನಲ್ಲಿ ಅಡ್ಡಾಡುವ ಮಾದರಿಗಳನ್ನೇ ಅನುಸರಿಸಬೇಕು. ಅದು ಅವರ ತಪ್ಪಲ್ಲ.

ಎಲ್ಲ ಪುರುಷನೊಳಗೂ ಒಬ್ಬಳು ಸ್ತ್ರೀ ಇದ್ದಾಳೆ, ಇರಬೇಕು. ಅಂತಹದೊಂದು ಪರಂಪರೆಯ ಛಾಯೆ ನಮ್ಮಲ್ಲಿದೆ. ನಾವು ವಿಸ್ಮøತಿಗೆ ಜಾರಿದ್ದೇವೆ ಅಷ್ಟೇ. ಶಿವೆಯನ್ನು ತನ್ನ ಹೃದಯೇಶ್ವರಿಯೆಂದ ಶಿವ ತನ್ನ ದೇಹದ ಅರ್ಧಭಾಗವನ್ನೇ ಆಕೆಗೆ ನೀಡಿ ಅರ್ಧನಾರೀಶ್ವರನಾದ. ಪ್ರಕೃತಿ-ಪುರುಷ, ದ್ಯಾವಾ-ಪೃಥೀವೀಗಳೆಂಬ ಪರಿಕಲ್ಪನೆ ಈ ನೆಲದಷ್ಟೇ ಹಳೆಯದು. ಅದನ್ನು ಹೊಸದಾಗಿ ಎಲ್ಲಿಂದಲೂ ಕಡ ತರಬೇಕಾಗಿಲ್ಲ. ಹಾಗೆ ನೋಡಿದರೆ ಮಹಿಳೆಗಿಂತ ಪುರುಷನೇ ದುರ್ಬಲ. ಜಗತ್ತಿನಲ್ಲಿ ಅತಿಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರು ಪುರುಷರೇ ಹೊರತು ಮಹಿಳೆಯರಲ್ಲ! ‘ಒರಟುತನವೆಂಬುದು ದುರ್ಬಲ ವ್ಯಕ್ತಿಯ ಬಲಾಢ್ಯತೆಯ ಸೋಗು’ ಎಂದ ಎಮರ್ಸನ್. ದುರ್ಬಲ ಪುರುಷನೇ ಅಹಮಿಕೆಯ ಒರಟುತನವನ್ನು ಬೆಳೆಸಿಕೊಂಡು ಬಲಾಢ್ಯನೆಂಬ ಸೋಗು ಹೊದ್ದುಕೊಂಡ. ಮಾನಸಿಕವಾಗಿ ಅವನಷ್ಟು ಪುಕ್ಕಲನೂ ದುರ್ಬಲನೂ ಇನ್ಯಾರೂ ಇಲ್ಲ. ಅದನ್ನು ಮರೆಮಾಚಲು ಹೆಣ್ಣನ್ನು ಅಬಲೆಯೆಂದು ಕರೆದ ಅಷ್ಟೇ.

ನೀರು-ನೆಲ ಸೇರದೆ ಯಾವ ತೆನೆಯೂ ಬಲಿಯದು. ಸ್ತ್ರೀ-ಪುರುಷರನ್ನು ಪ್ರತ್ಯೇಕವಾಗಿ ಇಟ್ಟು ಯಾವ ಮಾದರಿಯನ್ನೂ ಬೆಳೆಸಲಾಗದು. ಗಂಡು ತನ್ನೊಳಗಿನ ಹೆಣ್ಣನ್ನು ಒಪ್ಪಿಕೊಂಡು ವಾಸ್ತವವನ್ನು ಅರ್ಥ ಮಾಡಿಕೊಂಡರೆ ನಿಜವಾದ ಪುರುಷ ಮಾದರಿಯೊಂದು ತಲೆಯೆತ್ತೀತು. ಅಲ್ಲಿ ಹೆಣ್ಣಿನ ಬಗ್ಗೆ ಗೌರವ ತಾನಾಗಿಯೇ ಅರಳುತ್ತದೆ. ಆಗಷ್ಟೇ ಹೆಣ್ಣೂ ಯಾವುದೇ ಬಿಗುಮಾನವಿಲ್ಲದೇ ತೆರೆದ ಮನಸ್ಸಿನಿಂದ ಹೇಳಬಲ್ಲಳು: ಆಹಾ ಪುರುಷಾಕಾರಂ!

ಭಾನುವಾರ, ಅಕ್ಟೋಬರ್ 28, 2018

ಪರೀಕ್ಷಾ ಭಯಕ್ಕೆ ಹೇಳಿ ಗುಡ್‌ಬೈ

ಫೆಬ್ರವರಿ 2018ರ 'ವಿದ್ಯಾರ್ಥಿ ಪಥ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ


'ಸಾರ್ ನಿಮ್ಮ ಸ್ಟೂಡೆಂಟು ಚೀಟಿ ಇಟ್ಟುಕೊಂಡಿದ್ದಳು. ಸದ್ಯ ಡಿಬಾರ್ ಆಗುವುದರಿಂದ ಬಚಾವಾದಳು. ಎರಡು ಬುದ್ಧಿಮಾತು ಹೇಳಿ ಕಳಿಸಿದೆ’ ಎಂದು ಪರೀಕ್ಷಾ ಕೊಠಡಿ ಮೇಲ್ವಿಚಾರಣೆಯಲ್ಲಿದ್ದ ಸಹೋದ್ಯೋಗಿಯೊಬ್ಬರು ವರದಿ ಮಾಡಿದರು. ಯಾರು ಎಂದು ಕೇಳಿದೆ. ಅವರು ಹೆಸರು ಹೇಳಿದರು. ನನಗೆ ಅಚ್ಚರಿಯಾಯಿತು. ನನಗೆ ತಿಳಿದಂತೆ ಅವಳಿಗೆ ಚೀಟಿ ಇಟ್ಟು ಪಾಸಾಗಬೇಕಾದ ಅನಿವಾರ್ಯತೆ ಏನೂ ಇರಲಿಲ್ಲ. ಆದರೆ ನಡೆದಿದ್ದು ನಿಜವಾಗಿತ್ತು. ಈ ಮಕ್ಕಳೇಕೆ ಮರ್ಯಾದೆ ಕಳೆಯುವ ಕೆಲಸ ಮಾಡುತ್ತಾರೋ ಎಂದು ಮನಸ್ಸಿಗೆ ಪಿಚ್ಚೆನಿಸಿತು.

ಆಮೇಲೆ ನಿಧಾನವಾಗಿ ಯೋಚನೆ ಮಾಡಿದೆ. 'ಮಕ್ಕಳೇಕೆ ಮರ್ಯಾದೆ ಕಳೆಯುವ ಕೆಲಸ ಮಾಡುತ್ತಾರೋ’ ಎಂಬಲ್ಲಿಂದ 'ಮಕ್ಕಳೇಕೆ ಚೀಟಿ ಇಟ್ಟುಕೊಳ್ಳುತ್ತಾರೋ’ ಎಂಬಲ್ಲಿಗೆ ನನ್ನ ಯೋಚನೆ ಬದಲಾಯಿತು. ಹೌದು, ಎಲ್ಲದಕ್ಕೂ ಪರೀಕ್ಷೆಯಲ್ಲಿ ನಪಾಸಾಗುವ ಭಯವೇ ಮೂಲಕಾರಣ ಎಂದು ಮನಸ್ಸು ಹೇಳಿತು. ಪರೀಕ್ಷೆಯ ಭಯ ಎಂತಹ ವಿದ್ಯಾರ್ಥಿಗಳಲ್ಲೂ ಎಂತೆಂತಹ ಕೆಲಸ ಮಾಡಿಸುತ್ತದೆಯಲ್ಲವೇ ಎನಿಸಿ ಸೋಜಿಗವಾಯಿತು.

ರಜೆ ಕಳೆದು ತರಗತಿಗಳು ಆರಂಭವಾದ ಮೇಲೆ ಅದೇ ಹುಡುಗಿ ನನ್ನನ್ನು ಭೇಟಿಯಾಗಿ 'ಸಾರಿ ಸರ್. ನಾನು ಹಾಗೆ ಮಾಡಬಾರದಿತ್ತು. ತಪ್ಪು ಮಾಡಿದೆ ಎಂಬ ಭಾವನೆ ನನ್ನನ್ನು ತುಂಬ ಕಾಡುತ್ತಿದೆ. ದಯಮಾಡಿ ಕ್ಷಮಿಸಿ. ಇನ್ನು ಯಾವತ್ತೂ ಹೀಗೆ ಮಾಡುವುದಿಲ್ಲ’ ಎಂದಳು. 'ಹೋಗಲಿ ಬಿಡಮ್ಮ. ಆದದ್ದಾಯಿತು. ಮುಂದೆ ಇಂಥಾದ್ದು ಆಗುವುದು ಬೇಡ. ಅಂತಹ ಸುಲಭದ ದಾರಿಗಳು ನಮಗೆ ಬೇಡ. ಮಾಡಬಾರದಿತ್ತು ಎಂದು ನಿನಗೇ ಅನ್ನಿಸಿದೆಯಲ್ಲ ಅಷ್ಟು ಸಾಕು’ ಎಂದು ಸಮಾಧಾನದ ಮಾತು ಹೇಳಿ ಕಳಿಸಿದೆ.

ಪರೀಕ್ಷಾ ಭಯ:
ಬಹುತೇಕ ವಿದ್ಯಾರ್ಥಿಗಳನ್ನು ಒಂದಲ್ಲ ಒಂದು ಸಂದರ್ಭ ಕಾಡಿಯೇ ಕಾಡುತ್ತದೆ ಈ ಪರೀಕ್ಷಾ ಭಯ. ಮೇಲೆ ಹೇಳಿದಂತೆ ಪರೀಕ್ಷೆಯಲ್ಲಿ ಎಲ್ಲಿ ಅನುತ್ತೀರ್ಣರಾಗಿ ಎಲ್ಲರೆದುರು ಸಣ್ಣವರಾಗಿಬಿಡುತ್ತೇವೋ ಎಂಬ ಮನಸ್ಸಿನ ಆತಂಕವೇ ಈ ಭಯದ ಹಿಂದಿನ ಮೂಲಕಾರಣ. ಸೆಮಿಸ್ಟರ್ ಅಥವಾ ವರ್ಷವಿಡೀ ಆದ ಪಾಠಗಳನ್ನು ಪರೀಕ್ಷೆ ಸಮೀಪಿಸಿದಾಗಷ್ಟೇ ಓದುವುದು ಅನೇಕ ವಿದ್ಯಾರ್ಥಿಗಳ ಸಾಮಾನ್ಯ ಗುಣ. ಎಲ್ಲ ಸಮಸ್ಯೆಗಳು ಇಲ್ಲಿಂದಲೇ ಆರಂಭವಾಗುತ್ತವೆ.

ಅಂದಂದಿನ ಪಾಠಗಳನ್ನು ಅಂದಂದೇ ಓದಿ ಎಂದು ಒಂದನೇ ತರಗತಿಯಿಂದಲೇ ಅಧ್ಯಾಪಕರು ಉರುಹೊಡೆಯುವ ಏಕೈಕ ಮಂತ್ರವನ್ನು ಎಲ್ಲ ವಿದ್ಯಾರ್ಥಿಗಳು ಒಂದಿಷ್ಟು ಅರ್ಥ ಮಾಡಿಕೊಂಡರೂ ಪರೀಕ್ಷಾ ಭಯ, ಪರೀಕ್ಷಾ ಅಕ್ರಮಗಳು ಇನ್ನಿತರ ಅಹವಾಲುಗಳೇ ಇರುವುದಿಲ್ಲ. ಆದರೆ ವಯೋಸಹಜ ಬೇಜವಾಬ್ದಾರಿಯೋ, ಜೀವನವನ್ನು ಎಂಜಾಯ್ ಮಾಡುವ ಕಾತರವೋ, ಚಲ್ತಾ ಹೈ ಎಂಬ ಉಡಾಫೆ ಮನೋಭಾವವೋ ಅನೇಕ ವಿದ್ಯಾರ್ಥಿಗಳು ಇದೊಂದು ಸಣ್ಣ ಸೂತ್ರವನ್ನು ಅರ್ಥವೇ ಮಾಡಿಕೊಳ್ಳುವುದಿಲ್ಲ. ಅನಾರೋಗ್ಯ, ಅಪಘಾತ, ಕುಟುಂಬದ ಜವಾಬ್ದಾರಿ ಮತ್ತಿತರ ಸಮಸ್ಯೆಗಳಿಂದ ಓದಿನ ಬಗ್ಗೆ ಗಮನ ಹರಿಸಲು ಸಾಧ್ಯವಾಗದ ಕಾರಣಗಳೂ ಇರುತ್ತವೆನ್ನಿ.

ಅಂತೂ ಪರೀಕ್ಷೆಗೆ ನಾಲ್ಕೈದು ದಿನವಿರುವಾಗ ಇವರೆಲ್ಲ ಅನಾಮತ್ತಾಗಿ ಎಚ್ಚರಗೊಳ್ಳುತ್ತಾರೆ. ಅನೇಕ ಮಂದಿಗೆ ಅಲ್ಲಿಯವರೆಗೆ ಏನೆಲ್ಲ ಪಾಠಪ್ರವಚನಗಳು ನಡೆದಿವೆ ಎಂಬ ಪ್ರಾಥಮಿಕ ಮಾಹಿತಿಯೂ ಇರುವುದಿಲ್ಲ. ಇನ್ನು ಪಠ್ಯಪುಸ್ತಕ, ನೋಟ್ಸುಗಳ ವಿಷಯ ಕೇಳುವುದೇ ಬೇಡ. ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಗುತ್ತದೆ ಅವರ ಪರಿಸ್ಥಿತಿ. ಓದಬೇಕಿರುವ ಪಾಠಗಳು ಪರ್ವತೋಪಮವಾಗಿ ಕಾಣುತ್ತವೆ. ಇದು ನನ್ನಿಂದ ಸಾಧ್ಯವಿಲ್ಲದ ಕೆಲಸ ಅನಿಸಿ ಆತ್ಮವಿಶ್ವಾಸ ಉಡುಗಿ ಹೋಗುತ್ತದೆ. ಪರೀಕ್ಷೆಯೆಂಬ ವ್ಯವಸ್ಥೆಯನ್ನು ರೂಪಿಸಿದವರ ಬಗೆಗೇ ಅಪಾರ ಸಿಟ್ಟುಬಂದುಬಿಡುತ್ತದೆ.

ಭಯದ ಪರಿಣಾಮ:
ಅಲ್ಲಿಗೆ ಸುಲಭದ ಹಾದಿಗಳ ಹುಡುಕಾಟ ಆರಂಭವಾಗುತ್ತದೆ. ನೋಟ್ಸುಗಳಿಗಾಗಿ ಅವರಿವರಲ್ಲಿ ಅಂಗಲಾಚುವುದು, ಹಗಲೂ ರಾತ್ರಿ ನಿದ್ದೆಗೆಟ್ಟು ಓದುವುದು, ಆರೋಗ್ಯ ಕೆಡಿಸಿಕೊಳ್ಳುವುದು, ಚೀಟಿಯಿಟ್ಟುಕೊಳ್ಳುವುದು, ನಕಲು ಮಾಡುವುದು, ಪರೀಕ್ಷಾ ಕೊಠಡಿಯಲ್ಲಿ ಸಿಕ್ಕಿಹಾಕಿಕೊಳ್ಳುವುದು, ಡಿಬಾರ್ ಆಗುವುದು, ಚಿನ್ನದಂತಹ ವಿದ್ಯಾರ್ಥಿ ಜೀವನವನ್ನೇ ಹಾಳುಮಾಡಿಕೊಳ್ಳುವುದು - ಇದೆಲ್ಲ ನಡೆಯುತ್ತದೆ.

ಪರೀಕ್ಷಾ ಭಯದಿಂದ ಹೊರಬರುವುದರಿಂದ ಇಷ್ಟೂ ಸಮಸ್ಯೆಗಳಿಗೆ ಸುಲಭದ ಪರಿಹಾರ ದೊರಕಿಬಿಡುತ್ತದೆ. ಆದರೆ ಇದು ಅಂದುಕೊಂಡಷ್ಟು ಸುಲಭವಲ್ಲ. ಯಾಕೆಂದರೆ ಎಲ್ಲವೂ ವಿದ್ಯಾರ್ಥಿಯ ಕೈಯ್ಯಲ್ಲೇ ಇರುವುದಿಲ್ಲ. ಅತಿಯಾದ ನಿರ್ಲಕ್ಷ್ಯದಂತೆ ಅತಿಯಾದ ನಿರೀಕ್ಷೆಯೂ ಪರೀಕ್ಷಾಭಯಕ್ಕೆ ಕಾರಣವಾಗಬಹುದು. ಹೆಚ್ಚು ಅಂಕಗಳಿಸಬೇಕೆಂಬ ಮಹದಾಸೆ ಮತ್ತು ಇದರ ಹಿಂದಿರುವ ಪಾಲಕರ ಹಾಗೂ ಶಿಕ್ಷಕರ ಒತ್ತಡಗಳು ಒಂದು ಸುಂದರ ಬದುಕನ್ನೇ ಬರಡಾಗಿಸಿಬಿಡಬಹುದು. ಪರೀಕ್ಷಾ ಫಲಿತಾಂಶದ ಮರುದಿನ ದೊರೆಯುವ ವಿದ್ಯಾರ್ಥಿಗಳ ಸಾಲುಸಾಲು ಆತ್ಮಹತ್ಯೆಗಳ ವರದಿಗಳೇ ಇದಕ್ಕೆಲ್ಲ ನಿದರ್ಶನ.

ಸಮರ್ಥ ತಯಾರಿಯೇ ದಾರಿ: 
ಅವಸರದ ಅಡುಗೆಯಿಂದ ಹೊಟ್ಟೆಯೂ ತುಂಬುವುದಿಲ್ಲ, ಆರೋಗ್ಯವೂ ಉಳಿಯುವುದಿಲ್ಲ. ತಯಾರಿ ಸಮರ್ಥವಾಗಿದ್ದಾಗ ಯಾವ ಭಯವೂ ಕಾಡುವುದಿಲ್ಲ. ಒಂದೆರಡು ದಿನದಲ್ಲೋ, ವಾರದಲ್ಲೋ ಇಡೀ ವರ್ಷದ್ದನ್ನು ಓದಿ ತೇರ್ಗಡೆಯಾಗಬಲ್ಲೆ ಎಂಬ ಭ್ರಮೆಯನ್ನಾಗಲೀ ಅತಿಯಾದ ಆತ್ಮವಿಶ್ವಾಸವನ್ನಾಗಲೀ ವಿದ್ಯಾರ್ಥಿಗಳು ಇಟ್ಟುಕೊಳ್ಳಬಾರದು. ಎಂತಹ ಆರೋಗ್ಯವಂತ ವ್ಯಕ್ತಿಯೂ ಮೂರು ದಿನದ್ದನ್ನು ಒಂದೇ ಬಾರಿಗೆ ಉಂಡರೆ ಅಜೀರ್ಣವಾಗಿ ಆಸ್ಪತ್ರೆ ಸೇರುವುದು ಖಚಿತ.

ತಯಾರಿ ಹಂತಹಂತವಾಗಿ ಇದ್ದಾಗಲೇ ಅದು ಅರ್ಥಪೂರ್ಣವಾಗುವುದು. ಇದು ಕಾಲೇಜಿನ ಮೊದಲ ದಿನದಿಂದಲೇ ಆರಂಭವಾಗಬೇಕು. ಅಂದಂದಿನ ಪಾಠಗಳನ್ನು ಮನೆಯಲ್ಲಿ ಅಂದಂದೇ ಮತ್ತೊಮ್ಮೆ ಗಮನಿಸಿಕೊಂಡರೆ ಪರೀಕ್ಷಾ ಸಮಯದಲ್ಲಿ ಒತ್ತಡ ಎನಿಸುವುದು ಸಾಧ್ಯವೇ ಇಲ್ಲ. ಆಗಿನ್ನೂ ಪಾಠಗಳನ್ನು ಕೇಳಿ ಬಂದಿರುವುದರಿಂದ ಅತಿಕಡಿಮೆ ಅವಧಿಯಲ್ಲಿಯೂ ಮರು ಓದು ಸಾಧ್ಯ. ಅದು ಬೇಗನೆ ಅರ್ಥವಾಗುವುದಲ್ಲದೆ ಹೆಚ್ಚು ಕಾಲ ಮನಸ್ಸಿನಲ್ಲಿ ಮರೆಯಾಗದೆ ಉಳಿಯುತ್ತದೆ.

ಇನ್ನೊಬ್ಬರ ನೋಟ್ಸ್‌ಗೆ ಕಾಯಬೇಡಿ:
ಅನೇಕ ವಿದ್ಯಾರ್ಥಿಗಳಿಗೆ ತಮ್ಮ ನೋಟ್ಸ್‌ಗಿಂತಲೂ ಇನ್ನೊಬ್ಬರ ನೋಟ್ಸ್ ಬಗ್ಗೆ ಹೆಚ್ಚಿನ ನಂಬಿಕೆ ಮತ್ತು ವ್ಯಾಮೋಹ. ನಿಮಗೆ ಬೇಕಾದ ನೋಟ್ಸ್‌ಗಳನ್ನು ನಿಮ್ಮಷ್ಟು ಚೆನ್ನಾಗಿ ತಯಾರಿಸಬಲ್ಲವರು ಇನ್ನೊಬ್ಬರಿಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ. ಒಬ್ಬೊಬ್ಬರು ತಯಾರಿಸುವ ನೋಟ್ಸ್ ಒಂದೊಂದು ರೀತಿ ಇರಬಹುದು. ನಿಮಗೆ ಸರಿಹೊಂದುವ ನೋಟ್ಸ್ ಅನ್ನು ನೀವೇ ತಯಾರಿಸಬೇಕು. ಇದರಿಂದ ಪಾಠಗಳು ಹೆಚ್ಚು ಚೆನ್ನಾಗಿ ಅರ್ಥವಾಗುತ್ತವೆ ಮತ್ತು ನೆನಪಿನಲ್ಲಿ ಉಳಿಯುತ್ತವೆ.

ಪರೀಕ್ಷೆಗಾಗಿ ಓದುವಾಗಲಂತೂ ಪ್ರತ್ಯೇಕ ಪಾಯಿಂಟುಗಳನ್ನು ಮಾಡಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಿ. ಕೊನೆಯ ಒಂದೆರಡು ದಿನಗಳಲ್ಲಿ ಪುನರ್ಮನನ ಮಾಡಿಕೊಳ್ಳುವುದಕ್ಕೆ ಇವು ತುಂಬ ಸಹಕಾರಿಯಾಗುತ್ತವೆ. ಸಾಕಷ್ಟು ಹಿಂದೆ ಓದಿರುವುದು ಮೇಲ್ನೋಟಕ್ಕೆ ಮರೆತುಹೋದಂತೆ ಅನಿಸಿದರೂ ನೀವೇ ಮಾಡಿಟ್ಟುಕೊಂಡ ಸಂಕ್ಷಿಪ್ತ ಪಾಯಿಂಟುಗಳನ್ನು ನೋಡಿಕೊಳ್ಳುವುದರಿಂದ ಎಲ್ಲವೂ ಮತ್ತೆ ಮುನ್ನೆಲೆಗೆ ಬಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಒಳ್ಳೆಯ ಆಹಾರ-ನಿದ್ದೆ:
ಊಟಬಿಟ್ಟು ನಿದ್ರೆಗೆಟ್ಟು ಓದಬೇಡಿ. ಪರೀಕ್ಷಾ ಸಮಯದಲ್ಲಿ ಸರಿಯಾಗಿ ಊಟ ಮಾಡಿ, ಚೆನ್ನಾಗಿ ನಿದ್ದೆ ಮಾಡಿ. ಹಾಗಂತ ಹೊಟ್ಟೆ ಬಿರಿಯುವಂತೆ ಉಣ್ಣಬೇಡಿ. ಮಿತವಾದ ಆಹಾರವನ್ನು ಹೆಚ್ಚು ಆವರ್ತನಗಳಲ್ಲಿ ಸೇವಿಸಿ. ತುಂಬ ಉಂಡುಬಿಟ್ಟರೆ ತೂಕಡಿಕೆ ಆರಂಭವಾಗಿ ಓದುವ ಆಸಕ್ತಿ ಹೊರಟುಹೋಗುತ್ತದೆ. ಸಮತೋಲಿತ ಆಹಾರ ದೇಹ ಹಾಗೂ ಮನಸ್ಸಿಗೆ ಶಕ್ತಿಯನ್ನೂ ಉತ್ಸಾಹವನ್ನೂ ತುಂಬುತ್ತದೆ.

ಒಬ್ಬ ವಿದ್ಯಾರ್ಥಿಗೆ ಕನಿಷ್ಠ ಆರೇಳು ಗಂಟೆಗಳ ಹಿತವಾದ ನಿದ್ದೆ ತುಂಬ ಅಗತ್ಯ. ರಾತ್ರಿಯೆಲ್ಲ ನಿದ್ದೆಗೆಟ್ಟು ಓದುವುದರಿಂದ ಆರೋಗ್ಯ ಏರುಪೇರಾಗುತ್ತದೆ. ಮನಸ್ಸು ದುರ್ಬಲವಾಗುತ್ತದೆ. ಮನಸ್ಸು ದುರ್ಬಲವಾದಾಗ ಮನಸ್ಸಿನಲ್ಲೆಲ್ಲ ಋಣಾತ್ಮಕ ಯೋಚನೆಗಳೇ ತುಂಬಿಕೊಳ್ಳುತ್ತವೆ. ರಾತ್ರಿ ಬೇಗನೆ ಮಲಗಿ ಬೆಳಗ್ಗೆ ಬೇಗನೆ ಎದ್ದು ಓದುವ ಸೂತ್ರ ಎಲ್ಲ ಕಾಲಕ್ಕೂ ಸಹಕಾರಿ. ನಿದ್ದೆಗೆಟ್ಟು ಗಂಟೆಗಟ್ಟಲೆ ಓದುವುದಕ್ಕಿಂತ ಸರಿಯಾಗಿ ನಿದ್ದೆ ಮಾಡಿ ಒಂದು ಗಂಟೆ ಓದುವುದೇ ಹೆಚ್ಚು ಪ್ರಯೋಜನಕಾರಿಯಾಗಬಲ್ಲುದು. ಕೆಲವು ವಿದ್ಯಾರ್ಥಿಗಳಿಗೆ ರಾತ್ರಿ ಓದುವುದೇ ಹೆಚ್ಚು ಅನುಕೂಲ ಎನಿಸಬಹುದು. ಅಂತಹವರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಯ ಹೊಂದಿಸಿಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ನಿದ್ದೆಯ ಅವಧಿ ಕಡಿಮೆಯಾಗಬಾರದು. ಪರೀಕ್ಷೆ ಸಮೀಪಿಸುತ್ತಿದ್ದಂತೆ ಅಂತೂ ನಿದ್ದೆಗೆಡಲೇಬಾರದು. ಪರೀಕ್ಷೆಯ ಮುನ್ನಾದಿನ ರಾತ್ರಿ ಒಳ್ಳೆಯ ನಿದ್ದೆ ಮಾಡುವುದರಿಂದ ಅನೇಕ ಸಮಸ್ಯೆಗಳಿಂದ ಪಾರಾಗಬಹುದು.

ಜ್ಞಾಪಕಶಕ್ತಿ ಬಗ್ಗೆ ಆತಂಕ ಬೇಡ:
ತಮ್ಮ ನೆನಪಿನ ಶಕ್ತಿ ಬಗ್ಗೆ ಆತಂಕವಿರುವುದೇ ಅನೇಕ ವಿದ್ಯಾರ್ಥಿಗಳ ಪರೀಕ್ಷಾಭಯಕ್ಕೆ ಒಂದು ಕಾರಣ. ನನಗೆ ನೆನಪಿನ ಶಕ್ತಿ ತುಂಬ ಕಡಿಮೆ, ಎಷ್ಟೇ ಓದಿದರೂ ನೆನಪು ಉಳಿಯುವುದಿಲ್ಲ ಎಂದು ಬೇಸರಪಟ್ಟುಕೊಳ್ಳುವ ವಿದ್ಯಾರ್ಥಿಗಳು ತುಂಬ ಮಂದಿ ಇದ್ದಾರೆ. ವಾಸ್ತವವಾಗಿ ನೆನಪಿನಶಕ್ತಿ ಎಲ್ಲರಿಗೂ ಒಂದೇ ಸಮನಾಗಿರುತ್ತದೆ. ನಾವು ಓದುವ ವಿಧಾನ ಮತ್ತು ಅನಗತ್ಯ ಭಯಗಳಿಂದಾಗಿ ಓದಿದ್ದು ಮರೆತುಹೋದಂತೆ ಅನಿಸುತ್ತದೆ ಅಷ್ಟೇ.

ಸಾಧ್ಯವಾದಷ್ಟು ನಿಮ್ಮ ಓದು ಅಭ್ಯಾಸಗಳಿಗೆ ಗಲಾಟೆಗಳಿಂದ ಮುಕ್ತವಾದ ಪ್ರಶಾಂತ ಸ್ಥಳವನ್ನು ಆಯ್ದುಕೊಳ್ಳಿ. ಏಕಾಗ್ರತೆಗೆ ಭಂಗ ತರುವ ಟಿವಿ, ಮೊಬೈಲಿನಂತಹ ಆಕರ್ಷಣೆಗಳನ್ನು ಸಾಕಷ್ಟು ದೂರವಿರಿಸಿಯೇ ಅಭ್ಯಾಸದಲ್ಲಿ ತೊಡಗಿ. ಸಾಮಾನ್ಯವಾಗಿ ಮುಂಜಾನೆ ಬೇಗ ಎದ್ದರೆ ಇಂತಹ ಅನುಕೂಲಕರ ವಾತಾವರಣ ಇರುತ್ತದೆ. ಆ ಸಮಯ ಮನಸ್ಸೂ ಪ್ರಫುಲ್ಲವಾಗಿರುವುದರಿಂದ ಒಂದೇ ಸಲದ ಓದು ಮನಸ್ಸಿನಲ್ಲಿ ಸ್ಥಿರವಾಗಿ ಉಳಿಯುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ಓದು ಕೂಡ ಸಾಧ್ಯವಾಗುತ್ತದೆ.

ಅಂಕವೇ ಅಂತಿಮವಲ್ಲ:
ಅಷ್ಟಕ್ಕೂ ನೆನಪಿನ ಶಕ್ತಿ ಬಗ್ಗೆ ವಿಶೇಷ ಆತಂಕ ಅಗತ್ಯವೇ ಇಲ್ಲ. ಶ್ರೀ ಸದ್ಗುರುಗಳ ಮಾತು ಇಲ್ಲಿ ಗಮನಾರ್ಹ: ನಿಮಗೇನು ಗೊತ್ತಿದೆಯೋ ನೀವದನ್ನು ಮಾಡಬಲ್ಲಿರಿ. ನಿಮಗೇನು ಗೊತ್ತಿಲ್ಲವೋ ನೀವದನ್ನು ಹೇಗೂ ಮಾಡಲಾರಿರಿ. ವೃಥಾ ಚಿಂತೆ ಯಾಕೆ ಮಾಡುತ್ತೀರಿ? ಎಂದು ಕೇಳುತ್ತಾರೆ ಅವರು. ನಾವು ಗಳಿಸುವ ಅಂಕಗಳು ನಮ್ಮ ಬದುಕಿನ ಯಶಸ್ಸಿನ ಮಾನದಂಡವಲ್ಲ ಎಂಬುದನ್ನು ವಿದ್ಯಾರ್ಥಿಗಳು ಮೊದಲು ಅರ್ಥ ಮಾಡಿಕೊಳ್ಳಬೇಕು.

ಶೇ. 99 ಅಂಕ ಗಳಿಸಿದವನೂ ಬದುಕಿನಲ್ಲಿ ವೈಫಲ್ಯದ ಪಾತಾಳ ಕಂಡ ಉದಾಹರಣೆಯಿಲ್ಲವೇ? ಕಡಿಮೆ ಅಂಕಗಳನ್ನು ಗಳಿಸಿದವನೋ ನಪಾಸಾದವನೋ ಬದುಕಿನಲ್ಲಿ ಶ್ರೇಷ್ಠ ಸಾಧನೆಗಳನ್ನು ಮಾಡಿದ ನಿದರ್ಶನಗಳಿಲ್ಲವೇ? ನಮ್ಮ ಬದುಕಿನ ಎತ್ತರವನ್ನು ನಿರ್ಧರಿಸುವುದು ನಾವು ಅಳವಡಿಸಿಕೊಂಡ ಮೌಲ್ಯಗಳೇ ಹೊರತು ಅಂಕಗಳಲ್ಲ. ಇಡೀ ಪುಸ್ತಕವನ್ನೇ ಕಂಠಪಾಠ ಮಾಡಿ ಪರೀಕ್ಷೆಯಲ್ಲಿ ಕಕ್ಕಿದವನ ತಲೆಯಲ್ಲಿ ಪರೀಕ್ಷೆ ಮುಗಿದ ಮರುದಿನ ಏನೇನೂ ಉಳಿದಿರುವುದಿಲ್ಲ. ಆದರೆ ನಾವು ನಿಜವಾಗಿಯೂ ಅರ್ಥಮಾಡಿಕೊಂಡು ಓದಿದ ವಿಚಾರಗಳು, ರೂಢಿಸಿಕೊಂಡ ಮೌಲ್ಯಗಳು ಜೀವನಪರ್ಯಂತ ಇರುತ್ತವೆ.

ಕೆಲವು ಉಪಯುಕ್ತ ಸಲಹೆಗಳು:
- ತರಾತುರಿಯಲ್ಲಿ ಓದಬೇಡಿ. ಮೊದಲ ದಿನದಿಂದಲೇ ಓದುವ ಅಭ್ಯಾಸ ಇಟ್ಟುಕೊಳ್ಳಿ. ಒಂದು ಕ್ವಿಂಟಾಲ್ ತೂಕವನ್ನು ಒಂದೇ ಬಾರಿಗೆ ಎತ್ತಿದರೆ ಬೆನ್ನು ಮುರಿದೀತು. ಒಂದೊಂದೇ ಕೆಜಿಯಂತೆ ಎಷ್ಟು ಭಾರವನ್ನಾದರೂ ಎತ್ತಬಹುದು.
- ಓದಿಗೆ ನಿಮ್ಮದೇ ವೇಳಾಪಟ್ಟಿ ಹಾಕಿಕೊಳ್ಳಿ. ಅದು ವಾಸ್ತವವಾಗಿರಲಿ. ತೀರಾ ಅವಾಸ್ತವ ಗುರಿಗಳನ್ನು ಇಟ್ಟುಕೊಳ್ಳಬೇಡಿ.
ಅಧ್ಯಯನ ರಜೆಯ ಸಂದರ್ಭದಲ್ಲಿ ಒಂದು ದಿನ ಇಂತಿಷ್ಟು ಓದಿಯಾಗಬೇಕು ಎಂಬ ಯೋಜನೆ ಮೊದಲೇ ಹಾಕಿಕೊಳ್ಳಿ.
- ನಿಮ್ಮ ವೇಳಾಪಟ್ಟಿಯಲ್ಲಿ ಎಲ್ಲ ವಿಷಯಗಳ ಓದು ಒಳಗೊಳ್ಳುವಂತೆ ನೋಡಿಕೊಳ್ಳಿ. ಯಾವುದೇ ಒಂದು ವಿಷಯವನ್ನು ಓದುವುದರಲ್ಲೇ ದಿನಪೂರ್ತಿ ಕಳೆಯಬೇಡಿ. 
- ಒಂದು ದಿನದಲ್ಲಿ ಎಲ್ಲ ವಿಷಯಗಳಿಗೂ ಸಮಾನ ಮಹತ್ವ ನೀಡಿ. ಇದರಿಂದ ಒಂದೇ ವಿಷಯವನ್ನು ಓದಿ ಬೋರ್ ಅನಿಸುವುದು ಕೂಡ ತಪ್ಪುತ್ತದೆ.
- ನಿಮ್ಮ ವೇಳಾಪಟ್ಟಿಯಲ್ಲಿ ಒಂದಿಷ್ಟು ಬಿಡುವಿನ ವೇಳೆಯನ್ನೂ ಜೋಡಿಸಿಕೊಳ್ಳಿ. ಆಗಾಗ ಸಣ್ಣ ಬ್ರೇಕ್ ತೆಗೆದುಕೊಳ್ಳುವುದರಿಂದ ಓದಿನ ಆಯಾಸ ಕಾಡುವುದಿಲ್ಲ.
- ಚೆನ್ನಾಗಿ ಊಟ-ನಿದ್ದೆ ಮಾಡಿ. ಓದಿನಷ್ಟೇ ವಿಶ್ರಾಂತಿಯೂ ಮುಖ್ಯ.
- ಬರಿದೇ ಓದುವ ಬದಲು ಪ್ರತೀ ಅಧ್ಯಾಯಕ್ಕೆ ಸಂಬಂಧಿಸಿದಂತೆ ಒಂದಷ್ಟು ಪಾಯಿಂಟುಗಳನ್ನು ಹಾಕಿಕೊಳ್ಳಿ. ಪ್ರಮುಖ ಅಂಶಗಳನ್ನು ಹೈಲೈಟ್ ಮಾಡಿಕೊಳ್ಳಿ. ಪರೀಕ್ಷೆಯ ಮುನ್ನಾದಿನ ಇವುಗಳ ಮೇಲೆ ಕಣ್ಣಾಡಿಸಿ.
- ನೋಟ್ಸ್‌ಗಳಲ್ಲಿ ಸಾಕಷ್ಟು ಶೀರ್ಷಿಕೆಗಳು ಹಾಗೂ ಉಪಶೀರ್ಷಿಕೆಗಳು ಇರಲಿ.
- ಎಲ್ಲಿ ಓದಬೇಕೆಂಬುದನ್ನು ನೀವೇ ನಿರ್ಧರಿಸಿ. ಸಂತೆಯ ನಡುವೆ ಓದಲು ಕೂರಬೇಡಿ. ನಿಮ್ಮ ಸುತ್ತಲೂ ಪ್ರಶಾಂತ ವಾತಾವರಣವಿರಲಿ. ಒಂದೇ ಕಡೆ ಕುಳಿತು ಬೋರ್ ಅನಿಸಿದರೆ ಒಂದಷ್ಟು ಹೊತ್ತು ಹೊಸ ಜಾಗದಲ್ಲಿ ಕುಳಿತೋ ನಿಂತೋ ನಡೆದಾಡುತ್ತಲೋ ಓದಿ.
- ನಿಮ್ಮದೇ ಓದುವ ಕೊಠಡಿಯನ್ನು ಹೊಂದಲು ಪ್ರಯತ್ನಿಸಿ. ನಿಮ್ಮ ಆತ್ಮವಿಶ್ವಾಸಕ್ಕೆ ಪೂರಕವಾಗುವ ಒಂದಷ್ಟು ಮಾತುಗಳನ್ನು ಬರೆದು ನಿಮಗೆ ಕಾಣುವಂತೆ ಪ್ರದರ್ಶಿಸಿ.
- ಅರ್ಥ ಮಾಡಿಕೊಳ್ಳದೇ ಏನನ್ನೂ ಓದಬೇಡಿ. ಅದರಿಂದ ಸಮಯ ವ್ಯರ್ಥ ಹೊರತು ಪ್ರಯೋಜನವಿಲ್ಲ. ಅರ್ಥವಾಗದ್ದು ನೆನಪಿನಲ್ಲಿಯೂ ಉಳಿಯುವುದಿಲ್ಲ. ಶಿಕ್ಷಕರ ಅಥವಾ ಸ್ನೇಹಿತರ ನೆರವು ಪಡೆದುಕೊಳ್ಳಿ.
- ಸಮಾನ ಮನಸ್ಕ ಸ್ನೇಹಿತರಿದ್ದರೆ ಗ್ರೂಪ್ ಸ್ಟಡಿ ಯೋಜಿಸಿಕೊಳ್ಳಿ. ನಾಲ್ಕೈದು ಮಂದಿ ಜತೆಸೇರಿದಾಗ ಅನೇಕ ವಿಷಯಗಳು ಸುಲಭವಾಗಿ ಅರ್ಥವಾಗುತ್ತವೆ. ಆದರೆ ಗ್ರೂಪ್ ಸ್ಟಡಿ ಹೆಸರಿನಲ್ಲಿ ಸಮಯ ವ್ಯರ್ಥವಾಗುವುದಾದರೆ ಅಂತಹ ಗುಂಪಿನಲ್ಲಿ ಸೇರಬೇಡಿ.
- ಹಳೆಯ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದು ತುಂಬ ಒಳ್ಳೆಯದು. ಒಂದು ಬಾರಿ ಪಾಠಗಳನ್ನೆಲ್ಲ ಓದಿಯಾದರೆ ಹಳೆಯ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸುವುದಕ್ಕೆ ಹೆಚ್ಚು ಸಮಯ ಮೀಸಲಿರಿಸುವುದೇ ಅತ್ಯುತ್ತಮ. 
- ಓದಿನ ನಡುವೆ ದೈಹಿಕ ಚಟುವಟಿಕೆಗಳಿರಲಿ. ಒಂದು ಗಂಟೆ ಓದಿನ ಬಳಿಕ ಒಂದೈದು ನಿಮಿಷ ನಡೆದಾಡಿ. ರಿಲ್ಯಾಕ್ಸ್ ಮಾಡಿಕೊಳ್ಳಿ. ಏಕತಾನತೆಯಿಂದ ಹೊರಬನ್ನಿ.
- ಇನ್ನೊಬ್ಬರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ಪ್ರತಿಯೊಬ್ಬರಿಗೆ ತಮ್ಮದೇ ಓದುವ ವಿಧಾನ ಹಾಗೂ ಸಾಮರ್ಥ್ಯವಿರುತ್ತದೆ. ನಿಮಗೆಷ್ಟು ಓದಿಯಾಯಿತು ಎಂದು ಸ್ನೇಹಿತರನ್ನು ಪದೇಪದೇ ವಿಚಾರಿಸುತ್ತಾ ಕೂರಬೇಡಿ.
- ಧನಾತ್ಮಕ ಯೋಚನೆಗಳನ್ನು ಬೆಳೆಸಿಕೊಳ್ಳಿ. ಯಶಸ್ಸಿನ ಚಿತ್ರಣವನ್ನು ಆಗಾಗ್ಗೆ ಮನಸ್ಸಿಗೆ ತಂದುಕೊಳ್ಳಿ.
- ದಿನಕ್ಕೆ ಕನಿಷ್ಠ ಹತ್ತು ನಿಮಿಷ ಧ್ಯಾನ-ಪ್ರಾಣಾಯಾಮದಲ್ಲಿ ತೊಡಗಿ. ಬಹುತೇಕ ಒತ್ತಡಗಳು ಇದರಿಂದ ಕಡಿಮೆಯಾಗಿ ಮನಸ್ಸಿನಲ್ಲಿ ನೆಮ್ಮದಿಯೂ ಆತ್ಮವಿಶ್ವಾಸವೂ ಬೆಳೆಯುತ್ತದೆ.
- ಪರೀಕ್ಷಾ ಕೊಠಡಿಗೆ ಒಯ್ಯಬೇಕಾದ ವಸ್ತುಗಳನ್ನು (ಲೇಖನ ಸಾಮಗ್ರಿಗಳು, ಹಾಲ್ ಟಿಕೇಟು ಇತ್ಯಾದಿ) ಮುನ್ನಾದಿನವೇ ಎತ್ತಿಟ್ಟುಕೊಳ್ಳಿ. ಪರೀಕ್ಷಾ ದಿನ ಗಡಿಬಿಡಿ ಮಾಡಿಕೊಳ್ಳಬೇಡಿ.
- ಪರೀಕ್ಷೆ ಆರಂಭವಾಗುವ ಅರ್ಧ ಗಂಟೆ ಮೊದಲೇ ಪರೀಕ್ಷಾ ಸ್ಥಳವನ್ನು ಸಮೀಪಿಸಿ. ಯಾವುದೇ ಕಾರಣಕ್ಕೂ ತಡವಾಗಿ ಹೋಗಬೇಡಿ. ತಡವಾಗಿ ಹೋಗಿ ಮನಸ್ಸು ಆತಂಕಗೊಂಡರೆ ನೀವು ಚೆನ್ನಾಗಿ ಓದಿಕೊಂಡಿರುವುದೂ ಪ್ರಯೋಜನಕ್ಕೆ ಬರದೇ ಹೋಗಬಹುದು.
- ಚೀಟಿ ಇಟ್ಟುಕೊಳ್ಳುವ, ನಕಲು ಮಾಡುವಂತಹ ಶಾರ್ಟ್‌ಕಟ್ ಹಾದಿಗಳ ಬಗ್ಗೆ ಯೋಚಿಸಬೇಡಿ. ಚೀಟಿ ಸಿದ್ಧಪಡಿಸಿಕೊಳ್ಳುವ ಸಮಯ ಹಾಗೂ ಕೌಶಲಗಳನ್ನು ಓದುವಲ್ಲಿ ಬಳಸಿಕೊಳ್ಳಿ.


ಮಂಗಳವಾರ, ಅಕ್ಟೋಬರ್ 2, 2018

ಹೀರೋಗಳಿದ್ದಾರೆ ನಮ್ಮ ನಡುವೆ

ಅಕ್ಟೋಬರ್ 3, 2018ರ ವಿಜಯವಾಣಿ 'ಮಸ್ತ್' ಪುರವಣಿಯಲ್ಲಿ ಪ್ರಕಟವಾಗಿರುವ ಲೇಖನ

“ಪರೀಕ್ಷೆ ಇದ್ರೂ ಬೇಕರಿಯಲ್ಲಿ ರಜೆ ಕೊಡ್ತಿರಲಿಲ್ಲ. ಮಧ್ಯರಾತ್ರಿವರೆಗೆ ಕೆಲಸ ಮಾಡಿ ಆಮೇಲೆ ಮನೆಗೆ ಹೋಗಿ ಓದ್ಕೊಂಡು ಬೆಳಗ್ಗೆ ಪರೀಕ್ಷೆ ಬರೀತಾ ಇದ್ದೆ. ಒಂದಷ್ಟು ಸಮಯ ಗಾರೆ ಕೆಲಸಕ್ಕೆ ಹೋಗ್ತಿದ್ದೆ. ಈಗಲೂ ಪಟ್ಟಣದಲ್ಲಿ ಯಾರೋ ಒಬ್ಬ ಹುಡುಗ ಗಾರೆ ಕೆಲಸ ಮಾಡೋದು ಕಂಡ್ರೆ ಕರುಳು ಚುರ್ ಅನ್ನುತ್ತೆ. ಭಾರವಾರ ಸಿಮೆಂಟ್ ಮೂಟೆ, ಇಟ್ಟಿಗೆ ಹೊತ್ತ ದಿನಗಳು ನೆನಪಾಗಿ ಕಣ್ಣು ಮಂಜಾಗುತ್ತೆ...” ಎಂದು ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ಮೆಲುಕು ಹಾಕುತ್ತಾರೆ ಮಧುಗಿರಿಯ ಧನಂಜಯ.


“ಏನಿಲ್ಲಾಂದ್ರೂ ಇನ್ನೂರೈವತ್ತು ಅಡುಗೆ ಕೆಲಸಕ್ಕೆ ಹೋಗಿದ್ದೀನಿ. ಈಗ ಚೆನ್ನಾಗಿ ಸಂಬಳ ಬರೋ ಉದ್ಯೋಗ ಇದೆ. ಆದ್ರೆ ಆ ದಿನಗಳನ್ನು ಮಾತ್ರ ಮರೆಯಕ್ಕಾಗಲ್ಲ. ಅದ್ಕೇ ಇವಾಗ್ಲೂ ಕೆಲವೊಮ್ಮೆ ಅಡುಗೆ ಕೆಲಸಕ್ಕೆ ಹೋಗ್ತೀನಿ. ಅದರಲ್ಲೇನೋ ಸಂತೃಪ್ತಿ ಇದೆ. ಕಷ್ಟದ ದಿನಗಳದ್ದು ಕಹಿ ಅನುಭವ ಅಂತ ನಂಗೆಂದೂ ಅನಿಸಿಯೇ ಇಲ್ಲ...” ಹೀಗೆ ಮುಂದುವರಿಯುತ್ತದೆ ಅವರ ಮಾತು.

ಧನಂಜಯನ ತರಹದ ನೂರಾರು ವಿದ್ಯಾರ್ಥಿಗಳು ದಿನನಿತ್ಯ ಕಾಣಸಿಗುತ್ತಿರುತ್ತಾರೆ. ಅಡುಗೆ, ಫ್ಯಾಕ್ಟರಿ, ಗಾರೆ, ಸೆಕ್ಯೂರಿಟಿ, ಸೇಲ್ಸ್, ಕೂಲಿ, ಸಪ್ಲೈಯರ್ ಎಂಬಿತ್ಯಾದಿ ಹತ್ತಾರು ಪಾತ್ರಗಳಲ್ಲಿ ಅವರ ಓದಿನ ಬದುಕು.  ವಿದ್ಯಾರ್ಥಿ ಜೀವನದಲ್ಲಿ ಪಾಠವಾದ ಬಳಿಕ ಪರೀಕ್ಷೆ. ನಿಜ ಜೀವನದಲ್ಲಿ ಪರೀಕ್ಷೆಯಾದ ಬಳಿಕ ಪಾಠ. ಆದರೆ ಇವರು ಪಾಠ-ಪರೀಕ್ಷೆಗಳೆರಡನ್ನೂ ಒಟ್ಟೊಟ್ಟಿಗೇ ನಿಭಾಯಿಸಿಕೊಂಡು ಹೋಗುವ ರಿಯಲ್ ಹೀರೋಗಳು. ಕೆಲವರಿಗೆ ಹಲ್ಲಿದ್ದಾಗ ಕಡಲೆಯಿಲ್ಲ, ಕಡಲೆಯಿದ್ದಾಗ ಹಲ್ಲಿಲ್ಲ. ಇನ್ನು ಕೆಲವರಿಗೆ ಹಲ್ಲು-ಕಡಲೆ ಎರಡೂ ಇರುವುದಿಲ್ಲ. ಅವುಗಳನ್ನು ತಾವೇ ದಕ್ಕಿಸಿಕೊಳ್ಳುವ ಪಾಠವನ್ನಂತೂ ಬದುಕಿನ ಪುಟಗಳಿಂದಲೇ ಹೆಕ್ಕಿಕೊಳ್ಳುತ್ತಾರೆ.

ವಿದೇಶಗಳಲ್ಲಿ ಓದುತ್ತಲೇ ದುಡಿಯುವುದು ವಿಶೇಷ ಸಂಗತಿಯೇನಲ್ಲ. ಉನ್ನತ ಶಿಕ್ಷಣ ಅಥವಾ ವೃತ್ತಿಪರ ಕೋರ್ಸುಗಳನ್ನು ಮಾಡುವವರು ಯಾವುದಾದರೊಂದು ಅರೆಕಾಲಿಕ ಉದ್ಯೋಗ ಹಿಡಿದೇ ಇರುತ್ತಾರೆ. ತಮ್ಮ ವ್ಯಾಸಂಗದ ವೆಚ್ಚವನ್ನು ತಾವೇ ಭರಿಸಿಕೊಳ್ಳುವುದು ಅಲ್ಲಿ ಸರ್ವೇಸಾಮಾನ್ಯ. ಆದರೆ ನಮ್ಮಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಅದೊಂದು ಅನಿವಾರ್ಯತೆ. ಮನೆಯಲ್ಲಿ ಬೆನ್ನುಬಿಡದ ದಾರಿದ್ರ್ಯ, ಕೂಲಿನಾಲಿ ಮಾಡಿ ಬದುಕುವ ಅಪ್ಪ-ಅಮ್ಮ. ಇದರ ನಡುವೆ ಕಾಲೇಜಿಗೆ ಹೋಗಬೇಕು ಎಂಬ ಆಸೆಯೇ ತುಂಬ ತುಟ್ಟಿ. ಬದುಕಿನಲ್ಲಿ ಹೇಗಾದರೂ ಸರಿ ಮೇಲೆ ಬರಬೇಕೆನ್ನುವ ಅವರ ಛಲಕ್ಕೆ ಉಳಿಯುವ ದಾರಿ ದುಡಿಮೆಯೊಂದೇ.

“ಅಪ್ಪ-ಅಮ್ಮ ಉದ್ಯೋಗ ಅರಸಿ ತಿಂಗಳುಗಟ್ಟಲೆ ಬೇರೆ ಜಿಲ್ಲೆಗಳಿಗೆ ಹೋಗಿರುತ್ತಿದ್ದರು. ನಾನು ದುಡಿಯುತ್ತಾ ಓದುವುದು ಅನಿವಾರ್ಯವಾಗಿತ್ತು. ಇಬ್ಬರು ತಮ್ಮಂದಿರಿಗೆ ಅಡುಗೆ ಮಾಡಿ ಶಾಲೆಗೆ ಕಳುಹಿಸಿ ನಾನು ಕಾಲೇಜಿಗೆ ಹೋಗಬೇಕಿತ್ತು. ಎಲ್ಲವನ್ನೂ ನಿಭಾಯಿಸುವುದು ಕಷ್ಟವೆನಿಸಿದರೂ ನನ್ನ ದುಡಿಮೆಯಿಂದ ಅಪ್ಪ-ಅಮ್ಮನ ಮೇಲಿನ ಹೊರೆ ಒಂದಷ್ಟು ಕಡಿಮೆಯಾಗುತ್ತದಲ್ಲ ಎಂಬ ಸಮಾಧಾನವಿತ್ತು” ಎಂದು ನೆನಪಿಸಿಕೊಳ್ಳುತ್ತಾರೆ ಹಿರಿಯೂರಿನ ಅರವಿಂದ.

“ಕಡಲೆಗಿಡ, ಮಾವಿನಕಾಯಿ ಕೀಳುವುದು, ಮದುವೆ ಅಡುಗೆ, ಕೇಬಲ್ ಸಂಪರ್ಕ, ಬಟ್ಟೆ ತೊಳೆದು ಇಸ್ತ್ರಿ ಮಾಡಿಕೊಡುವುದು... ಇತ್ಯಾದಿ ಹತ್ತಾರು ಕೆಲಸ ಮಾಡಿಕೊಂಡು ಓದಿದೆ. ಬೀಳುವ ಹಂತದಲ್ಲಿದ್ದ ಮನೆಯಲ್ಲಿ ಹೊತ್ತಿನ ಊಟಕ್ಕೂ ಸಮಸ್ಯೆ ಇತ್ತು. ಮಳೆ ಬಂದರೆ ಮನೆಯೆಲ್ಲಾ ಕೆರೆ. ಅದನ್ನು ಎತ್ತಿಹೊರಹಾಕುವುದರಲ್ಲೇ ರಾತ್ರಿ ಕಳೆಯುತ್ತಿತ್ತು. ನಮ್ಮಂಥವರಿಗೆ ಯಾಕೆ ಓದು ಎನ್ನುತ್ತಿದ್ದರು ಮನೆಯಲ್ಲಿ. ದುಡಿಯದೆ ಇರುತ್ತಿದ್ದರೆ ಓದು ನನಗೆ ಬರೀ ಕನಸಾಗಿರುತ್ತಿತ್ತು” ಎನ್ನುತ್ತಾರೆ ಪಾವಗಡದ ನವೀನ್ ಕುಮಾರ್.

ಮಕ್ಕಳು ದುಡಿದು ಓದುವ ಬಗ್ಗೆ ಪಾಲಕರಲ್ಲಿ ಮಿಶ್ರ ಭಾವವಿದೆ. ಮಕ್ಕಳು ದುಡಿಯುವುದು ಕುಟುಂಬಕ್ಕೆ ಅವಮಾನ ಎಂದು ಭಾವಿಸುವ ಮಂದಿ ಕೆಲವರಾದರೆ, ಮಕ್ಕಳು ಜವಾಬ್ದಾರಿ ಕಲಿಯುತ್ತಿದ್ದಾರೆ ಎಂದು ಸಮಾಧಾನಪಡುವವರು ಇನ್ನು ಕೆಲವರು. “ಕೆಲಸಕ್ಕೆ ಹೋಗ್ಬೇಡ ಅಂತ ಮೊದಮೊದಲು ಬೈದ್ರು, ಹಿಡ್ಕಂಡು ಹೊಡೆದ್ರು. ಯಾಕಂದ್ರೆ ಮನೆಯಲ್ಲಿ ತುಂಬ ಕಷ್ಟ ಇದ್ರೂ ನನಗೆ ಯಾವುದೂ ತಿಳಿಯದ ಹಾಗೆ ನೋಡ್ಕೊಂಡಿದ್ರು” ಎನ್ನುತ್ತಾರೆ ಧನಂಜಯ. “ನಾನು ಕೆಲಸ ಮಾಡುತ್ತಾ ಓದುತ್ತಿದ್ದುದು ಮನೆಯಲ್ಲಿ ಹೇಳಿರಲಿಲ್ಲ. ಆದರೆ ದುಡಿಮೆ ನನಗೆ ಅನಿವಾರ್ಯವಾಗಿತ್ತು” ಎನ್ನುತ್ತಾರೆ ಬಳ್ಳಾರಿಯ ಈರನಗೌಡ. 

“ನಾನು ಕೆಲಸ ಮಾಡುತ್ತಿದ್ದುದು ಮನೆಯವರಿಗೆ ತಿಳಿದಿತ್ತು. ಅವರೇನೂ ಆಕ್ಷೇಪ ಹೇಳಲಿಲ್ಲ. ಕೆಲಸ ಮಾಡಿಕೊಂಡು ಓದುವುದು ಒಳ್ಳೆಯದೇ, ಆದರೆ ಓದನ್ನು ನಿರ್ಲಕ್ಷ್ಯ ಮಾಡಬೇಡ ಅಂತ ಅಪ್ಪ ಪದೇಪದೇ ಹೇಳುತ್ತಿದ್ದರು” ಎಂದು ನೆನಪಿಸಿಕೊಳ್ಳುತ್ತಾರೆ ಗುಬ್ಬಿ ತಾಲೂಕಿನ ಗಿರೀಶ.

ಅವಶ್ಯಕತೆಯುಳ್ಳ ಮಕ್ಕಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರವೇ ‘ಕಲಿಕೆಯೊಂದಿಗೆ ಗಳಿಕೆ’ ಎಂಬ ಯೋಜನೆ ಆರಂಭಿಸಿದ್ದಿದೆ. ಅನೇಕ ಕಡೆಗಳಲ್ಲಿ ಇದು ಯಶಸ್ವಿಯೂ ಆಗಿದೆ. “ನಾನು ಎಂ.ಎ. ಓದುತ್ತಿದ್ದಾಗ ಪಾರ್ಟ್‍ಟೈಂ ಕೆಲಸ ಮಾಡುವ ಅವಕಾಶ ನಮ್ಮ ವಿ.ವಿ.ಯಲ್ಲಿ ಇತ್ತು. ಲೈಬ್ರರಿ, ಪರೀಕ್ಷಾ ವಿಭಾಗಗಳಲ್ಲೆಲ್ಲ ನಾನು ಕೆಲಸ ಮಾಡಿದ್ದೇನೆ. ತರಗತಿಗಳಿಲ್ಲದ ಹೊತ್ತಲ್ಲಿ ದಿನಕ್ಕೆ ಒಂದೆರಡು ಗಂಟೆಯಷ್ಟು ಕೆಲಸ ಮಾಡಬೇಕಿತ್ತು. ಓದಿಗಾಗಿ ಕುಟುಂಬವನ್ನು ಅವಲಂಬಿಸುವುದು ನನಗೆ ಇಷ್ಟವಿರಲಿಲ್ಲ” ಎನ್ನುತ್ತಾರೆ ಚಿಕ್ಕನಾಯಕನಹಳ್ಳಿಯ ಮಮತಾ. ದುಡಿಯುತ್ತಲೇ ಓದಿದ್ದರಿಂದ ಶೈಕ್ಷಣಿಕವಾಗಿ ಅಂತಹ ನಷ್ಟವೇನೂ ಆಗಲಿಲ್ಲ ಎಂಬುದು ಅವರ ಅಂಬೋಣ.

ಆದರೆ ದುಡಿಯುವ ಅನಿವಾರ್ಯತೆ ಇಲ್ಲದಿದ್ದರೆ ತಾವೂ ಹೆಚ್ಚಿನದನ್ನು ಸಾಧಿಸುತ್ತಿದ್ದೆವು ಎಂಬ ಕೊರಗು ಹಲವು ಮಂದಿಯದ್ದು. “ನನ್ನ ಕೆಲಸ ಮಧ್ಯಾಹ್ನ 3ರಿಂದ ಆರಂಭವಾಗುತ್ತಿತ್ತು. ಹೀಗಾಗಿ ಕೆಲವು ದಿನ ತರಗತಿಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತಿತ್ತು. ಹೀಗಾಗಿ ಹಾಜರಾತಿ ಕಡಿಮೆ ಆಗಿ ಇಂಟರ್ನಲ್ಸ್‍ಗೆ ಕತ್ತರಿ ಬಿತ್ತು. ಮೊದಲನೇ ವರ್ಷ ಮೊಳೆತ ಚಿನ್ನದ ಪದಕದ ಆಸೆ ಎರಡನೇ ವರ್ಷ ಕಮರಿಹೋಯಿತು. ಸ್ವಲ್ಪದರಲ್ಲೇ ಬಂಗಾರ ಕಳೆದುಕೊಂಡೆ” ಎಂದು ವಿಷಾದಪಡುತ್ತಾರೆ ಗಿರೀಶ.

“ದುಡ್ಡಿಗಾಗಿ ಆಗಾಗ ಆರ್ಕೆಸ್ಟ್ರಾಗಳಿಗೆ ಹೋಗಿ ಹಾಡುತ್ತಿದ್ದೆ. ರಾತ್ರಿ ನಿದ್ದೆಗೆಟ್ಟು ಹಗಲು ಕ್ಲಾಸಿಗೆ ಹೋಗಬೇಕಾದ ಪರಿಸ್ಥಿತಿ ಇದ್ದರೂ ಅದರಲ್ಲೇನೋ ಖುಷಿ ಇತ್ತು. ಕಾಲೇಜಿನ ಫೀಸು, ಪುಸ್ತಕ, ಉಳಿದ ಖರ್ಚುಗಳಾದ ಮೇಲೆ ಮನೆಗೂ ಒಂದಷ್ಟು ಹಣ ಕಳಿಸುತ್ತಿದ್ದೆ. ಎಲ್ಲರಂತೆ ಓದುತ್ತಿದ್ದರೆ ಇನ್ನೂ ಚೆನ್ನಾಗಿ ಅಂಕಗಳು ಬರುತ್ತಿದ್ದವು. ಆದರೆ ಕಾಲೇಜಿನ ಎನ್ನೆಸ್ಸೆಸ್‍ನಲ್ಲಿ ನಾನು ವರ್ಷದ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದೆ” ಎಂದು ಹೆಮ್ಮೆಪಡುತ್ತಾರೆ ಗಂಗಾವತಿಯ ಖಾದರ್ ಸಾಬ್.

ಇಂತಹ ಯಾರನ್ನೇ ಕೇಳಿನೋಡಿ, ಅವರಿಗೆ ತಾವು ಪಟ್ಟ ಕಷ್ಟ ಹಾಗೂ ಕಠಿಣ ದುಡಿಮೆ ಬಗ್ಗೆ ಬೇಸರವಾಗಲೀ ಅನಾದರವಾಗಲೀ ಇಲ್ಲ. ಉಳಿದ ವಿದ್ಯಾರ್ಥಿಗಳಿಗಿಂತ ಒಂದು ಹಿಡಿ ಹೆಚ್ಚೇ ಆತ್ಮವಿಶ್ವಾಸ, ತಾವು ಪಡೆದ ಅನುಭವದ ಬಗ್ಗೆ ಹೆಮ್ಮೆ ಸಾಮಾನ್ಯ. “ನನ್ನ ಇಂದಿನ ಪರಿಸ್ಥಿತಿಗೆ ದುಡಿಮೆಯೇ ಕಾರಣ. ಅಂತಹದೊಂದು ಪರಿಸ್ಥಿತಿ ಸೃಷ್ಟಿಸಿಕೊಟ್ಟ ಬಡತನ ಮತ್ತು ದೇವರಿಗೆ ನನ್ನ ಧನ್ಯವಾದಗಳು” ಎಂದು ಗದ್ಗದಿತರಾಗುತ್ತಾರೆ ಈರನಗೌಡ.

“ಅಂದಿನ ಪರಿಸ್ಥಿತಿ ನೆನೆಸಿಕೊಂಡರೆ ಮೈಝುಂ ಅನ್ನುತ್ತೆ. ಮುಂಜಾನೆ 3 ಗಂಟೆಗೆ ಎದ್ದು ರೈಲಿನಲ್ಲಿ ನಿಂತುಕೊಂಡೇ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದೆ. ಚೌಲ್ಟ್ರಿ ಸೇರಿದ ತಕ್ಷಣ ಅಡುಗೆ ಕೆಲಸ. ಎಲ್ಲರದ್ದೂ ಊಟವಾದ ಮೇಲೆ ನಮ್ಮ ಊಟ. ರಾತ್ರಿಯ ಕೆಲಸಗಳೆಲ್ಲ ಮುಗಿದಾಗ ಒಂದು ಗಂಟೆ ಆಗುತ್ತಿದ್ದುದು ಸಾಮಾನ್ಯ. ಎರಡು ದಿನ ಈ ರೀತಿ ಕೆಲಸ ಮಾಡಿದರೆ ರೂ. 1000 ಸಿಗುತ್ತಿತ್ತು. ಆಗÀ ಎಲ್ಲ ಆಯಾಸ ಮಾಯವಾಗುತ್ತಿತ್ತು. ಮುಂಜಾನೆ ಮತ್ತೆ ಕಾಲೇಜು. ಆ ಅನುಭವಕ್ಕೆ ಸಾಟಿಯಿಲ್ಲ” ಎಂದು ಜ್ಞಾಪಿಸಿಕೊಳ್ಳುತ್ತಾರೆ ಜಮಖಂಡಿಯ ವೀರನಾಗರಾಜ್.

“ಕೆಲಸ ಮಾಡುತ್ತಾ ಓದಿದ ದಿನಗಳನ್ನು ನೆನಪಿಸಿಕೊಂಡರೆ ರೋಮಾಂಚನವಾಗುತ್ತೆ. ಕೆಲವೊಮ್ಮೆ ಕಣ್ಣೀರೂ ಬರುತ್ತೆ. ಅಂದು ಕಷ್ಟಪಡದಿರುತ್ತಿದ್ದರೆ ನಾನಿಂದು ಉನ್ನತ ಶಿಕ್ಷಣ ಪಡೆಯಲು ಆಗುತ್ತಿರಲಿಲ್ಲ. ಕಷ್ಟಗಳೇ ನಮ್ಮ ಮಾರ್ಗದರ್ಶಕರು. ಸ್ವತಂತ್ರ ದುಡಿಮೆ, ಓದಿನ ಬಗ್ಗೆ ಹೆಮ್ಮೆ ಅನಿಸುತ್ತೆ” ಎನ್ನುತ್ತಾರೆ ಅರವಿಂದ್.

“ಯಾರದೋ ಹಳೆ ಉಡುಪು ಪಡೆದುಕೊಂಡು ಬಳಸುತ್ತಿದ್ದೆ. ಓದಿನಲ್ಲಿ ಏಕಾಗ್ರತೆ ಸಾಧ್ಯವಾಗ್ತಿರಲಿಲ್ಲ. ದಿನನಿತ್ಯ ಅವಮಾನ ಸಾಮಾನ್ಯವಾಗಿತ್ತು. ಆದರೆ ಅದೇ ಇಂದು ನನ್ನನ್ನು ಮಾನಸಿಕವಾಗಿ ಗಟ್ಟಿಯಾಗಿಸಿದೆ. ಕಾಲೇಜು ಕಲಿಸದ ಪಾಠಗಳನ್ನು ನನಗೆ ಬದುಕು ಕಲಿಸಿತು” ಎಂದು ಮುಗುಳ್ನಗುತ್ತಾರೆ ನವೀನ್.

ಈಗಿನ್ನೂ ಏರುಜವ್ವನದ ರಮ್ಯಕಾಲದಲ್ಲಿರುವ ಈ ಹುಡುಗರ ಪ್ರಬುದ್ಧ ಮಾತುಗಳನ್ನು ಕೇಳಿದರೆ ಯಾರಿಗಾದರೂ ಮೆಚ್ಚುಗೆಯೆನಿಸದೆ ಇರದು. ಯಾವುದೇ ಜವಾಬ್ದಾರಿಯಿಲ್ಲದೆ ಹರೆಯದ ಹುಡುಗ ಹುಡುಗಿಯರನ್ನು ಬಳಸಿಕೊಂಡು ಬೀದಿ ಅಲೆಯುತ್ತಾ ಟಾಕೀಸುಗಳೆದುರಿನ ಕಟೌಟುಗಳನ್ನೇ ಹೀರೋಗಳೆಂದು ಭ್ರಮಿಸುವ ಹೊಣೆಗೇಡಿ ಮಂದಿಯ ನಡುವೆ ಅನುಭವ-ಆತ್ಮವಿಶ್ವಾಸದ ಮಾತನ್ನಾಡುವ ಈ ಗಟ್ಟಿಗರೇ ಅಲ್ಲವೇ ನಿಜವಾದ ಹೀರೋಗಳು?

ಶುಕ್ರವಾರ, ಸೆಪ್ಟೆಂಬರ್ 7, 2018

ಲಘುವಾಗಬಾರದು ಗುರು

ಪ್ರಜಾಪ್ರಗತಿ, ತುಮಕೂರು | ಸೆಪ್ಟೆಂಬರ್ 5, 2018

“ಆರೋಗ್ಯವಂತರಾದ ಮತ್ತು ತಿಳುವಳಿಕೆಯುಳ್ಳ ಒಂದು ಡಜನ್ ಶಿಶುಗಳನ್ನೂ, ಅವನ್ನು ಬೆಳೆಸುವುದಕ್ಕೆ ಬೇಕಾದ ನನ್ನದೇ ಕಲ್ಪನೆಯ ವಿಶೇಷ ಪ್ರಪಂಚವನ್ನೂ ಒದಗಿಸಿರಿ. ಆದ ನಾನು ಯಾವುದೇ ಪೂರ್ವ ನಿರ್ಧಾರವಿಲ್ಲದೆಯೇ, ಅವರಲ್ಲೊಬ್ಬನನ್ನು ಆಯ್ದು- ಅವನ ಪ್ರತಿಭೆ, ಒಲವು, ಪ್ರವೃತ್ತಿ, ಸಾಮಥ್ರ್ಯ, ವೃತ್ತಿ ಹಾಗೂ ವಂಶದ ಪರಂಪರೆಯು ಯಾವುದೇ ಇರಲಿ- ಆತನನ್ನು ತಜ್ಞ ವೈದ್ಯನೋ, ನ್ಯಾಯವಾದಿಯೋ, ಕಲಾವಿದನೋ, ವ್ಯಾಪಾರಿಯೋ, ನಾಯಕನೋ, ಅಷ್ಟೇ ಏಕೆ ಭಿಕ್ಷುಕನೋ ಅಥವಾ ಕಳ್ಳನೋ ಆಗುವಂತೆ ತರಬೇತಿ ನೀಡುವುದಾಗಿ ಭರವಸೆ ಕೊಡುತ್ತೇನೆ” – ಇದು ವರ್ತನಾವಾದಿ ಜೆ. ಬಿ. ವಾಟ್ಸನ್ ಅವರ ಮಾತು.

ಒಬ್ಬ ವ್ಯಕ್ತಿಯ ಬದುಕಿನಲ್ಲಿ ಶಿಕ್ಷಕನ ಪಾತ್ರವೇನು ಎಂಬುದನ್ನು ಬಹುಶಃ ಇದಕ್ಕಿಂತ ಸಮರ್ಥವಾಗಿ ಬಣ್ಣಿಸುವುದು ಕಷ್ಟವೇನೋ? ಶಿಕ್ಷಕ ಮನಸ್ಸು ಮಾಡಿದರೆ ಎಂತಹ ಅದ್ಭುತವನ್ನೂ ಸಾಧಿಸಬಲ್ಲ. ಆತ ಮೈಮರೆತರೆ ಎಂತಹ ಶಾಶ್ವತ ದುರಂತಗಳಿಗೂ ಕಾರಣವಾಗಬಲ್ಲ. ಅದನ್ನು ಚಿಂತಕನೊಬ್ಬ ತುಂಬ ಚೆನ್ನಾಗಿ ವಿವರಿಸುತ್ತಾನೆ: “ವೈದ್ಯರ ತಪ್ಪುಗಳು ಹೂಳಲ್ಪಡುತ್ತವೆ; ವಕೀಲರ ತಪ್ಪುಗಳು ನೇಣುಹಾಕಲ್ಪಡುತ್ತವೆ. ಆದರೆ ಶಿಕ್ಷಕರ ತಪ್ಪುಗಳು ಶತಮಾನದುದ್ದಕ್ಕೂ ಅನಾಥ ಪ್ರೇತಗಳಾಗಿ ವಿಹರಿಸುತ್ತವೆ.”

ಒಬ್ಬ ವ್ಯಕ್ತಿ ವಿದ್ಯಾಭ್ಯಾಸವನ್ನು ಪೂರೈಸಿ ಉದ್ಯೋಗ ಹಿಡಿಯುವವರೆಗಿನ ಅವಧಿಯಲ್ಲಿ ಬಹುಪಾಲು ಸಮಯವನ್ನು ತಂದೆ-ತಾಯಿಗಿಂತಲೂ ಹೆಚ್ಚು ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಜತೆಯಲ್ಲೇ ಕಳೆದಿರುತ್ತಾನೆ. ಮನೆಯೆ ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರುವಾದರೂ ವ್ಯಕ್ತಿಯ ಒಟ್ಟಾರೆ ವರ್ತನೆಯ ಮೇಲೆ ಅಪಾರ ಪ್ರಭಾವವನ್ನು ಬೀರುವವರು ಶಿಕ್ಷಕರೇ. ಪ್ರಾಥಮಿಕ ಶಾಲಾ ಹಂತದಲ್ಲಂತೂ ಶಿಕ್ಷಕರು ಹೇಳಿದ್ದೆಲ್ಲವನ್ನೂ ಒಂದಿಷ್ಟೂ ಅನುಮಾನಿಸದೆ ಸ್ವೀಕರಿಸುವ ಮುಗ್ಧ ಮನಸ್ಸು ಮಕ್ಕಳದು. ಶಿಕ್ಷಕರು ತಪ್ಪನ್ನೇ ಹೇಳಿಕೊಟ್ಟರೂ ಅದೇ ಸರಿ ನಂಬುವ ವಯಸ್ಸು ಅದು. ಅಮಾಯಕ ಮಕ್ಕಳು ತಮ್ಮ ಗುರುಗಳ ಮೇಲೆ ಇಡುವ ವಿಶ್ವಾಸ ಆ ಮಟ್ಟದ್ದು. ಅವರದ್ದು ಹೂವು-ಬಳ್ಳಿಯ ಸಂಬಂಧ. ನೀವು ಎಷ್ಟಾದರೂ ಪದವಿಗಳನ್ನು ಪಡೆದಿರಿ, ಕ್ಷಣಕಾಲ ಕಣ್ಮುಚ್ಚಿ ಕುಳಿತು ನಿಮ್ಮ ಜೀವನದಲ್ಲಿ ನಿಜವಾಗಿಯೂ ಅತಿದೊಡ್ಡ ಪ್ರಭಾವ ಬೀರಿದವರು ಯಾರೆಂದು ಯೋಚಿಸಿದರೆ ಮನಸ್ಸು ಅನಾಯಾಸವಾಗಿ ಪ್ರಾಥಮಿಕ ಶಾಲಾ ದಿನಗಳ ಕಡೆಗೇ ಹೊರಳುತ್ತದೆ.

ಗುರು ಗೋವಿಂದ ದೋವೂ ಖಡೇ ಕಾಕೇ ಲಾಗೂ ಪಾಯ್|
ಬಲಿಹಾರಿ ಗುರು ಆಪ್‍ನೀ ಗೋವಿಂದ ದಿಯೋ ಬತಾಯ್||
ಎಂಬುದು ಸಂತ ಕಬೀರರ ಪ್ರಸಿದ್ಧ ದ್ವಿಪದಿ. ಗುರು ಹಾಗೂ ದೇವರು ಜತೆಗೇ ನಿಂತಿದ್ದರೆ ನೀನು ಮೊದಲು ಯಾರಿಗೆ ನಮಸ್ಕರಿಸುತ್ತೀ ಎಂದು ಕಬೀರರನ್ನು ಯಾರೋ ಕೇಳಿದರಂತೆ. ನಾನು ಮೊದಲು ಗುರುಗಳಿಗೇ ನಮಸ್ಕರಿಸುತ್ತೇನೆ, ಏಕೆಂದರೆ ದೇವರನ್ನು ತೋರಿಸಿಕೊಟ್ಟವರು ಗುರುಗಳು ಎಂದರಂತೆ ಕಬೀರರು.

ಗುರುವಿಗೆ ಸಮಾಜದಲ್ಲಿ ಇರುವ ಸ್ಥಾನವೇನೋ ದೊಡ್ಡದೇ. ಆದರೆ ಆ ಸ್ಥಾನವನ್ನು ಉಳಿಸಿಕೊಳ್ಳುವುದೂ ಅವನ ಜವಾಬ್ದಾರಿ. ಅಧ್ಯಾಪಕರ ಬಗ್ಗೆ ತೀರಾ ಕನಿಷ್ಟವೆನಿಸುವ ಮಾತುಗಳೂ ಸಮಾಜದಲ್ಲಿ ಆಗಾಗ ಕೇಳಿ ಬರುವುದಿದೆ. ಅದಕ್ಕೆ  ಗುರು ಎಂಬ ಸ್ಥಾನ ಶಿಕ್ಷಕ ಎಂಬ ವೃತ್ತಿಯಾಗಿ ಬದಲಾಗಿರುವುದೇ ಪ್ರಮುಖ ಕಾರಣ. ಜೀವನೋಪಾಯಕ್ಕೆ ಯಾವುದಾದರೂ ವೃತ್ತಿ ಅಗತ್ಯ. ಅಧ್ಯಾಪನವನ್ನು ಆರಿಸಿಕೊಂಡವರಿಗೂ ಸಂಬಳ ಬೇಕು. ಆದರೆ ಸಂಬಳವನ್ನು ಪಡೆಯುವುದಷ್ಟೇ ಶಿಕ್ಷಕನ ಪ್ರಮುಖ ಗುರಿ ಆದಾಗ ಅವನ ವೃತ್ತಿಯ ನಿಜವಾದ ಉದ್ದೇಶ ಹಿನ್ನೆಲೆಗೆ ಸರಿಯುತ್ತದೆ.

ಶಿಕ್ಷಕನಿಂದ ಲೈಂಗಿಕ ಕಿರುಕುಳ, ಶಿಕ್ಷಕನಿಂದಲೇ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಇತ್ಯಾದಿ ಸುದ್ದಿಗಳನ್ನು ದಿನನಿತ್ಯ ಎಂಬಂತೆ ಕೇಳುತ್ತೇವೆ. ಯಾಕೆ ಹೀಗಾಗುತ್ತಿದೆ? ಅತ್ಯುನ್ನತ ನೈತಿಕ ಮೌಲ್ಯಗಳನ್ನು ತಾನು ಹೊಂದುತ್ತಲೇ ತನ್ನನ್ನು ನಂಬಿರುವ ವಿದ್ಯಾರ್ಥಿಗಳಿಗೂ ಅವನ್ನು ದಾಟಿಸುವ ಮಹತ್ತರ ಹೊಣೆಗಾರಿಕೆ ಗುರುವಿನದ್ದು. ಅವನೇ ಅನೈತಿಕ ಕೆಲಸಗಳಿಗೆ ಜಾರಿದರೆ ವಿದ್ಯಾರ್ಥಿಗಳು ಯಾವ ಮಾದರಿಯನ್ನು ಅನುಸರಿಸಬೇಕು? ಬೇಲಿಯೇ ಎದ್ದು ಹೊಲವನ್ನು ಮೇಯುವುದಕ್ಕೆ ಇದರಿಂದ ದೊಡ್ಡ ನಿದರ್ಶನ ಇದೆಯೇ? ವಿದ್ಯಾರ್ಥಿಗಳಿಗೆ ಅಧ್ಯಾಪಕನೇ ನಿಜವಾದ ಪಠ್ಯಪುಸ್ತಕ. ಕೈಯಲ್ಲಿರುವ ಪುಸ್ತಕಗಳಿಗಿಂತಲೂ ಎದುರಿಗಿರುವ ಗುರುವನ್ನೇ ಅವರು ಹೆಚ್ಚು ಓದುತ್ತಾರೆ ಮತ್ತು ಅನುಕರಿಸುತ್ತಾರೆ. ಪುಸ್ತಕ ತಪ್ಪಿದರೆ ಮಸ್ತಕದ ಗತಿಯೇನು?

ಏಕಲವ್ಯನ ಹಿಂದೆ ಒಬ್ಬ ದ್ರೋಣಾಚಾರ್ಯರಿದ್ದರು. ಶಿವಾಜಿಯ ಹಿಂದೆ ಒಬ್ಬ ಸಮರ್ಥ ರಾಮದಾಸರಿದ್ದರು. ಹಕ್ಕಬುಕ್ಕರ ಹಿಂದೆ ವಿದ್ಯಾರಣ್ಯರಿದ್ದರು. ವಿವೇಕಾನಂದರ ಹಿಂದೊಬ್ಬ ರಾಮಕೃಷ್ಣ ಪರಮಹಂಸರಿದ್ದರು. ಯಾವ ಮಹಾತ್ಮರ ಜೀವನ ಚರಿತ್ರೆಯನ್ನು ತೆರೆದರೂ ಗುರುಗಳು ಅವರ ಮೇಲೆ ಬೀರಿದ ಅದ್ಭುತ ಪ್ರಭಾವ ಕಣ್ಣಿಗೆ ಕಟ್ಟುತ್ತದೆ. ಭಾರತದ ಗುರುಪರಂಪರೆಯೇ ಅಂತಹದು. ಗುರು ಇಲ್ಲದ ಬದುಕು ಕತ್ತಲ ಹಾದಿಯ ಪಯಣವಷ್ಟೇ. ‘ವಿದ್ಯಾರ್ಥಿ ಕಲಿಯಲು ವಿಫಲನಾದರೆ, ಅಧ್ಯಾಪಕ ಕಲಿಸಲು ವಿಫಲನಾಗಿದ್ದಾನೆಂದು ಅರ್ಥ’ ಎಂಬ ಮಾತೂ ಮತ್ತೆ ಗುರುವಿನ ಜವಾಬ್ದಾರಿಯನ್ನೇ ಬೊಟ್ಟುಮಾಡುತ್ತದೆ.

ಗುರುವನ್ನು ಗೌರವಿಸಿ, ಅವರ ಸದಾಶಯದ ಶ್ರೀರಕ್ಷೆ ನಿಮ್ಮ ಮೇಲಿದ್ದರೆ ಜೀವನದಲ್ಲಿ ಎಷ್ಟು ಎತ್ತರಕ್ಕಾದರೂ ಏರಬಲ್ಲಿರಿ. ಹೀಗೆಂದು ಹೇಳುವುದರ ಜೊತೆಗೆ ಅಂತಹ ಎತ್ತರದ ವ್ಯಕ್ತಿತ್ವವನ್ನು ಗುರುವೂ ಉಳಿಸಿಕೊಳ್ಳಬೇಕು ಎಂಬುದನ್ನೂ ಹೇಳಬೇಕು. ಶಿಕ್ಷಕ ಸಮಾಜದ ಎದುರು ಸಣ್ಣವನಾಗಬಾರದು. ಎಲ್ಲ ಸಣ್ಣತನಗಳನ್ನು ಮೀರಲು ಅವನಿಗೆ ಸಾಧ್ಯವಾದಾಗಲಷ್ಟೇ ನಿಜವಾದ ಗುರುತ್ವ ಲಭಿಸುತ್ತದೆ. ಹೌದು, ಗುರು ಲಘುವಾಗಬಾರದು.

ಬುಧವಾರ, ಆಗಸ್ಟ್ 22, 2018

ಹೊಸ ಇ-ಕಾಮರ್ಸ್ ನೀತಿ: ಲಾಭದ ಚೆಂಡು ಯಾರ ಅಂಗಳಕ್ಕೆ?

'ವಿಜಯವಾಣಿ' - ವಿತ್ತವಾಣಿ ಪುರವಣಿಯಲ್ಲಿ 20-08-2018ರಂದು ಪ್ರಕಟವಾದ ಲೇಖನ

ನಾಲ್ಕು ವರ್ಷಗಳ ಹಿಂದಿನ ಮಾತು. ಅದು 2014ರ ಅಕ್ಟೋಬರ್ 6. ದೇಶದುದ್ದಗಲದಲ್ಲಿ ನಡೆಯುತ್ತಿದ್ದ ತರಹೇವಾರಿ ಹಬ್ಬಗಳಿಗೆ ಆನ್‌ಲೈನ್ ದಿಗ್ಗಜ ಫ್ಲಿಪ್‌ಕಾರ್ಟ್ ಹೊಸ ರಂಗು ತುಂಬಿತ್ತು. ಆ ದಿನವನ್ನು 'ಬಿಗ್ ಬಿಲಿಯನ್ ಡೇ’ ಎಂದು ಘೋಷಿಸಿದ ಕಂಪೆನಿ ಸಾವಿರಾರು ಉತ್ಪನ್ನಗಳನ್ನು ಭಾರೀ ರಿಯಾಯಿತಿಯಲ್ಲಿ ಬಿಕರಿ ಮಾಡಿತು. ಇಷ್ಟೊಂದು ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುವುದು ಸಾಧ್ಯವೇ ಎಂದು ಮುನ್ನಾದಿನದವರೆಗೆ ಅನುಮಾನಪಡುತ್ತಿದ್ದ ಗ್ರಾಹಕರು ಮರುದಿನ ಅದೇ ವಿಸ್ಮಯವನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಕೇವಲ ಹತ್ತೇ ಗಂಟೆಗಳಲ್ಲಿ 15 ಲಕ್ಷ ಗ್ರಾಹಕರು 600 ಕೋಟಿ ರೂಪಾಯಿ ಮೌಲ್ಯದ ವ್ಯಾಪಾರ ನಡೆಸಿಬಿಟ್ಟರು!

'ಬಿಗ್ ಬಿಲಿಯನ್ ಡೇ’ ಭಾರತದ ದೊಡ್ಡದೊಡ್ಡ ಸಗಟು ಹಾಗೂ ರೀಟೇಲ್ ವ್ಯಾಪಾರಿಗಳಿಗೆ 'ಬಿಗ್ ಬ್ಲೋ ಡೇ’ ಕೂಡ ಆಗಿತ್ತು. ಆನ್‌ಲೈನ್ ವ್ಯಾಪಾರದ ಹೆಸರಿನಲ್ಲಿ ಇಷ್ಟೊಂದು ರಿಯಾಯಿತಿ ಕೊಟ್ಟುಬಿಟ್ಟರೆ ಮಾರುಕಟ್ಟೆ ವ್ಯಾಪಾರದ ಪಾಡೇನು ಎಂಬ ಪ್ರತಿಭಟನೆಗಳು ದಾಖಲಾದವು. ಚಿಲ್ಲರೆ ಮಾರಾಟಗಾರರಿಗಂತೂ ಅದು ದೊಡ್ಡ ಹೊಡೆತವೇ ಆಗಿತ್ತು. ಎಂಬಲ್ಲಿಗೆ ಇ-ಕಾಮರ್ಸ್‌ನ ಸಾಧಕ-ಬಾಧಕಗಳ ಬಗ್ಗೆ ಹೊಸ ಚರ್ಚೆಗಳು ಆರಂಭವಾದವು. ಆನ್‌ಲೈನ್ ವ್ಯಾಪಾರದ ರಿಯಾಯಿತಿ ಆಕರ್ಷಣೆಗೆ ಗ್ರಾಹಕರು ಮುಗಿಬೀಳುವುದು ಆಮೇಲೆಯೂ ಮುಂದುವರಿಯಿತು.

2015ರಲ್ಲಿ ರೀಟೇಲರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಹಾಗೂ ಆಲ್ ಇಂಡಿಯಾ ಫೂಟ್‌ವೇರ್ ಮ್ಯಾನುಫ್ಯಾಕ್ಚರರ್ಸ್ & ರೀಟೇಲರ್ಸ್ ಅಸೋಸಿಯೇಶನ್ ಈ ಸಂಬಂಧ ದೆಹಲಿ ಹೈಕೋರ್ಟ್‌ನ ಮೊರೆಹೊಕ್ಕರು. ಇ-ಕಾಮರ್ಸ್ ಕಂಪೆನಿಗಳಿಂದ ಇತರ ಚಿಲ್ಲರೆ ವ್ಯಾಪಾರಿಗಳಿಗೆ ಅನ್ಯಾಯವಾಗುತ್ತಿದೆಯೆಂದು ದೂರುಕೊಟ್ಟರು. ಇ-ಕಾಮರ್ಸ್ ಕಂಪೆನಿಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶವಿರುವುದರಿಂದ ಅವರು ಭಾರೀ ರಿಯಾಯಿತಿಗಳನ್ನು ನೀಡುವುದು ಸಾಧ್ಯವಾಗುತ್ತಿದೆ; ಸಾಮಾನ್ಯ ಚಿಲ್ಲರೆ ವ್ಯಾಪಾರಿಗಳು ಈ ಅಲೆಯೆದುರು ಈಜಿ ಬದುಕಲು ಸಾಧ್ಯವೇ ಎಂದು ಪ್ರಶ್ನಿಸಿದರು.

2016ರಲ್ಲಿ ಆನ್‌ಲೈನ್ ಚಿಲ್ಲರೆ ವ್ಯಾಪಾರದ 'ಮಾರ್ಕೆಟ್‌ಪ್ಲೇಸ್ ಮಾಡೆಲ್’ ಅಡಿಯಲ್ಲಿ ಶೇ. 100 ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಯಿತು. ಇದರ ಪ್ರಕಾರ ಇ-ಕಾಮರ್ಸ್ ಸಂಸ್ಥೆಗಳು ಬೇರೆ ಕಂಪೆನಿಗಳ ಉತ್ಪನ್ನಗಳ ಪಟ್ಟಿಯನ್ನು ಪ್ರಕಟಿಸಿ ವ್ಯಾಪಾರ ವಹಿವಾಟು ಉತ್ತೇಜಿಸುವ ವೇದಿಕೆಗಳಾಗಬಹುದೇ ವಿನಾ ನೇರವಾಗಿ ಬೇರೆ ಕಂಪೆನಿಗಳ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ನೇರವಾಗಿ ಮಾರಾಟ ಮಾಡುವ ಇ-ಕಾಮರ್ಸ್ ಕಂಪೆನಿಗಳಿಗೆ ಎಫ್‌ಡಿಐ ಪಡೆದುಕೊಳ್ಳಲು ಅವಕಾಶ ಇಲ್ಲ. ಈ ಕಂಪೆನಿಗಳೂ ಒಂದೇ ಕಂಪೆನಿಯ ಶೇ. 25ಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಇಲ್ಲ. ಆದರೆ ಈ ಎಲ್ಲ ನಿರ್ಬಂಧಗಳನ್ನು ಆನ್‌ಲೈನ್ ವ್ಯಾಪಾರಸ್ಥರು ಗಾಳಿಗೆ ತೂರಿ ತಮ್ಮ ಅನ್ಯಾಯವನ್ನು  ಮುಂದುವರಿಸಿದ್ದಾರೆ ಎಂಬುದು ಸದ್ಯದ ಆರೋಪ. ಕೇಂದ್ರ ಸರ್ಕಾರ ಈಗ ಜಾರಿಗೆ ತರಲು ಉದ್ದೇಶಿಸಿರುವ ಹೊಸ 'ರಾಷ್ಟ್ರೀಯ ಇ-ಕಾಮರ್ಸ್ ನೀತಿ’ ಈ ಚರ್ಚೆ, ವಾದ-ವಿವಾದಗಳ ಒಂದು ನಿರ್ಣಾಯಕ ಹಂತ.

ಏನಿದು ಹೊಸ ನೀತಿ?
ಇ-ಕಾಮರ್ಸ್ ವಲಯದಲ್ಲಿ ಉಂಟಾಗಿರುವ ತಲ್ಲಣಗಳನ್ನು ತಹಬದಿಗೆ ತಂದು ಅದರಲ್ಲಿ ಸುಧಾರಣೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಮೊದಲ ಬಾರಿಗೆ ಜಾರಿಗೆ ತರಲು ಉದ್ದೇಶಿಸಿರುವುದೇ ಹೊಸ ರಾಷ್ಟ್ರೀಯ ಇ-ಕಾಮರ್ಸ್ ನೀತಿ. ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ನೇತೃತ್ವದ 70 ಸದಸ್ಯರ 'ಥಿಂಕ್ ಟ್ಯಾಂಕ್’ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರೀಟಾ ತಿಯೋತಿಯಾ ನೇತೃತ್ವದಲ್ಲಿ ಒಂದು ಕಾರ್ಯಪಡೆಯನ್ನು ರಚಿಸಿತು. ಈ ಥಿಂಕ್ ಟ್ಯಾಂಕ್ ವಾಣಿಜ್ಯ, ಮಾಹಿತಿ ತಂತ್ರಜ್ಞಾನ, ಸಂವಹನ, ಗ್ರಾಹಕ ವ್ಯವಹಾರ ಸಚಿವಾಲಯಗಳ ಕಾರ್ಯದರ್ಶಿಗಳು ಹಾಗೂ ಉದ್ದಿಮೆ ವಲಯದ ಪ್ರತಿನಿಧಿಗಳನ್ನು ಒಳಗೊಂಡಿತ್ತು.

ರಾಷ್ಟ್ರೀಯ ಇ-ಕಾಮರ್ಸ್ ನೀತಿಗೊಂದು ಚೌಕಟ್ಟು ರೂಪಿಸಿ ಸೂಕ್ತ ಶಿಫಾರಸುಗಳನ್ನು ಮಾಡುವಂತೆ ಕಾರ್ಯಪಡೆಗೆ ಸೂಚಿಸಲಾಗಿತ್ತು. ಸಾಕಷ್ಟು ಚಿಂತನೆ-ಚರ್ಚೆ-ಸಂವಾದಗಳ ಬಳಿಕ ಮೊನ್ನೆ ಜುಲೈ ಅಂತ್ಯಕ್ಕೆ ಕಾರ್ಯಪಡೆಯು ಇ-ಕಾಮರ್ಸ್ ನೀತಿಯ ಕರಡು ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಗ್ರಾಹಕರು, ಉದ್ದಿಮೆದಾರರು ಹಾಗೂ ಮಾರಾಟಗಾರರೂ ಸೇರಿದಂತೆ ಎಲ್ಲ ಸಾರ್ವಜನಿಕರಿಂದ ಸಲಹೆ ಸೂಚನೆ ಅಹವಾಲುಗಳನ್ನು ಸರ್ಕಾರ ಆಹ್ವಾನಿಸಿದೆ. ಅವುಗಳ ಆಧಾರದಲ್ಲಿ ಅಂತಿಮ ನೀತಿ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ.

ಸಾಧಕ-ಬಾಧಕಗಳ ಚರ್ಚೆ
ನೀತಿ ಜಾರಿಗೆ ಬಂದರೆ ಏನಾಗಬಹುದು ಎಂಬ ಊಹೆಗಳ ಆಧಾರದಲ್ಲಿ ಮತ್ತೆ ಸಾಕಷ್ಟು ಚರ್ಚೆಗಳು ಗರಿಗೆದರಿವೆ. ಕಂಪೆನಿಗಳು ಹಾಗೂ ಮಾರುಕಟ್ಟೆ ತಜ್ಞರ ಕಡೆಯಿಂದ ಕರಡು ನೀತಿ ಬಗ್ಗೆ ಮಿಶ್ರಪತ್ರಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಫ್ಲಿಪ್‌ಕಾರ್ಟ್, ಅಮೆಜಾನ್, ಸ್ನಾಪ್‌ಡೀಲ್, ವಾಲ್‌ಮಾರ್ಟ್, ಸಾಫ್ಟ್‌ಬ್ಯಾಂಕ್‌ನಂತಹ ಇ-ಕಾಮರ್ಸ್ ಕಂಪೆನಿಗಳ ಭರ್ಜರಿ ವ್ಯವಹಾರಕ್ಕೆ ಹೊಸ ನೀತಿಯಿಂದ ಅಂಕುಶ ಬೀಳಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಇದರಿಂದ ಗ್ರಾಹಕರು ಕಡಿಮೆ ಬೆಲೆಗೆ ವಸ್ತುಗಳು ಕೊಳ್ಳುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ ಎಂಬ ಆತಂಕ ಕೆಲವರದ್ದು.

ಇನ್ನೊಂದೆಡೆ, ಹೊಸ ನೀತಿಯು ಸ್ವದೇಶಿ ಕಂಪೆನಿಗಳಿಗೆ ಜೀವದಾನ ಮಾಡಲಿದೆ ಎಂಬ ವಿಶ್ಲೇಷಣೆಯನ್ನೂ ಮಾಡಲಾಗುತ್ತಿದೆ. ಮಾರುಕಟ್ಟೆ ದರಗಳ ಮೇಲೆ ಪ್ರಭಾವ ಬೀರುವಂತೆ ಹೆಚ್ಚಿನ ಪ್ರಮಾಣದಲ್ಲಿ (ಶೇ. 25ರ ನಿರ್ಬಂಧವನ್ನು ಮೀರಿ) ಉತ್ಪನ್ನಗಳನ್ನು ಖರೀದಿಸಿ ದಾಸ್ತಾನು ಮಾಡುವಂತಿಲ್ಲ ಎಂದು ಕರಡು ನೀತಿ ಹೇಳುತ್ತದೆಯಾದರೂ, ಸಂಪೂರ್ಣವಾಗಿ ದೇಶೀಯವಾಗಿಯೇ ತಯಾರಾದ ಉತ್ಪನ್ನಗಳ ಮಾರಾಟಕ್ಕೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಇದು ಎಫ್‌ಡಿಐ ಯುಗದಲ್ಲಿ ಸ್ವದೇಶಿ ಕಂಪೆನಿಗಳಿಗೆ ಹೊಸ ಶಕ್ತಿಯನ್ನು ನೀಡಬಲ್ಲ ಕ್ರಮ ಎಂಬುದು ನೀತಿನಿರೂಪಕರ ಸಮರ್ಥನೆ.

ಜಾಗತೀಕರಣದ ಯುಗದಲ್ಲೂ ಭಾರತದ ಮಧ್ಯಮ, ಸಣ್ಣ ಹಾಗೂ ಅತಿಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ನೀತಿ ಒಂದು ಮೈಲಿಗಲ್ಲಾಗಲಿದೆ ಎಂಬುದು ತಜ್ಞರ ಅಭಿಮತ. ಶೇ. 49ಕ್ಕಿಂತ ಕಡಿಮೆ ವಿದೇಶಿ ಬಂಡವಾಳ ಇರುವ ಇ-ಕಾಮರ್ಸ್ ಕಂಪೆನಿಗಳಲ್ಲಿ ಭಾರತೀಯರಿಗೆ ಹೆಚ್ಚಿನ ಅಧಿಕಾರ ನೀಡುವ ಪ್ರಸ್ತಾಪವೂ ಕರಡು ನೀತಿಯಲ್ಲಿ ಇದೆ.
ಇ-ಕಾಮರ್ಸ್ ವಲಯದ ಅಹವಾಲುಗಳು ಹಾಗೂ ಎಫ್‌ಡಿಐ ಕುರಿತ ವಿವಾದಗಳ ಇತ್ಯರ್ಥಕ್ಕೆ ಜಾರಿ ನಿರ್ದೇಶನಾಲಯದಲ್ಲಿ ಪ್ರತ್ಯೇಕ ವಿಭಾಗವೊಂದನ್ನು ತೆರೆಯುವಂತೆಯೂ ಕಾರ್ಯಪಡೆ ಶಿಫಾರಸು ಮಾಡಿದೆ. ಎಲ್ಲ ಬಗೆಯ ಡಿಜಿಟಲ್ ವಹಿವಾಟುಗಳನ್ನು ನಿಯಂತ್ರಿಸಲು ಒಂದು ಪ್ರತ್ಯೇಕ ಪ್ರಾಧಿಕಾರವನ್ನು ರಚಿಸುವಂತೆ ಶಿಫಾರಸು ಮಾಡಿರುವುದು ಹೊಸ ಕರಡು ನೀತಿಯ ಅತ್ಯಂತ ಪ್ರಮುಖ ಅಂಶ.

ಹೊಸ ಕರಡು ನೀತಿಯಿಂದ ಅಂತಹ ಮಹತ್ವದ ಸುಧಾರಣೆಗಳನ್ನೇನೂ ಮಾಡಲಾಗದು; ಆನ್‌ಲೈನ್ ಮಾರಾಟ ದೇಶದ ಒಟ್ಟಾರೆ ಮಾರಾಟದ ಶೇ. 2ರಷ್ಟು ಮಾತ್ರ ಇದೆ. ಹೀಗಿರುವಾಗ ಆನ್‌ಲೈನ್ ಮಾರುಕಟ್ಟೆಯನ್ನು ನಿಯಂತ್ರಿಸುವ ಮೂಲಕ ಏನು ಸಾಧನೆ ಮಾಡಿದಂತಾಗುತ್ತದೆ ಎಂದು ಪ್ರಶ್ನಿಸುವವರೂ ಇದ್ದಾರೆ.

ಅನೇಕ ಸಮಸ್ಯೆಗಳಿಗೆ ಏಕಕಾಲಕ್ಕೆ ಪರಿಹಾರ ಹುಡುಕುವ ಹಾದಿಯಲ್ಲಿರುವ ಹೊಸ ಕರಡು ನೀತಿ ಪ್ರಾಯೋಗಿಕ ಮತ್ತು ಕಾರ್ಯಸಾಧುವಲ್ಲ. ನೀತಿಯಲ್ಲಿ ಶಿಫಾರಸುಮಾಡಲಾಗಿರುವ ಕಠಿಣಕ್ರಮಗಳು ಕುಖ್ಯಾತ 'ಲೈಸೆನ್ಸ್ ರಾಜ್’ನ ದಿನಗಳಿಗೆ ಇ-ಕಾಮರ್ಸನ್ನು ಒಯ್ಯಲಿವೆ. ಗ್ರಾಹಕ ದತ್ತಾಂಶದ ಕಡ್ಡಾಯ ಸ್ಥಳೀಯಗೊಳಿಸುವಿಕೆ ಹಾಗೂ ರಿಯಾಯಿತಿಯ ಮೇಲಿನ ನಿರ್ಬಂಧಗಳಿಂದ ದೊಡ್ಡ ಕಾರ್ಖಾನೆಗಳಿಗೆ ಭಾರೀ ಹೊಡೆತ ಬೀಳುವುದು ಖಚಿತ. ಇದು ದೇಶದ ಆರ್ಥಿಕತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂಬುದು ಇನ್ನೊಂದು ಕಡೆಯ ವಾದ. ಅಲ್ಲದೆ, ಪ್ರಸ್ತುತ ನೀತಿ ವಿಶ್ವ ವ್ಯಾಪಾರ ಸಂಘಟನೆ (WTO)ಯ ಜೊತೆಗೆ ಹೊಸದೊಂದು ಸಂಘರ್ಷಕ್ಕೆ ಎಡೆಮಾಡಿಕೊಡಲಿದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

ನಿಯಂತ್ರಣ ಪ್ರಾಧಿಕಾರ ಏಕೆ?
ತಾವು ಆನ್‌ಲೈನ್‌ನಲ್ಲಿ ಖರೀದಿಸಿದ ವಸ್ತುಗಳ ಬಗ್ಗೆ ಗ್ರಾಹಕರು ಅತೃಪ್ತಿ ವ್ಯಕ್ತಪಡಿಸಿದ ಹಲವಾರು ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ದೇಶದೆಲ್ಲೆಡೆ ದಾಖಲಾಗಿವೆ. ಮೊಬೈಲ್ ಫೋನ್‌ಗಳನ್ನು ಆರ್ಡರ್ ಮಾಡಿದವರು ಕಲ್ಲುಗಳನ್ನೋ ಇಟ್ಟಿಗೆಗಳನ್ನೋ ಪಡೆದ ಉದಾಹರಣೆಗಳು ಸಾಕಷ್ಟಿವೆ. ಮಾರುಕಟ್ಟೆ ಮಾದರಿಯಲ್ಲಿ ಸಪ್ಲೈಚೈನ್ ಮೇಲೆ ಪೂರ್ತಿ ಹಿಡಿತ ಇಲ್ಲವಾಗಿರುವುದರ ಅನನುಕೂಲ ಇದು. ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚು ದರವನ್ನು ತೋರಿಸುವುದು, ಸರಬರಾಜಿನಲ್ಲಿ ಆಗುವ ತೊಂದರೆಗಳ ಬಗೆಗೂ ಗ್ರಾಹಕರು ದೂರು ಸಲ್ಲಿಸಿದ ಘಟನೆಗಳು ನಡೆದಿವೆ.

ಈ ಬಗೆಯ ದೂರುಗಳನ್ನು ಸಲ್ಲಿಸಲು ಗ್ರಾಹಕ ವ್ಯವಹಾರಗಳ ಸಚಿವಾಲಯದ ರಾಷ್ಟ್ರೀಯ ಗ್ರಾಹಕ ಹೆಲ್ಪ್‌ಲೈನ್ ಒಂದೇ ಸದ್ಯಕ್ಕೆ ತೊಂದರೆಗೊಳಗಾದ ಗ್ರಾಹಕರಿಗೆ ಇರುವ ವೇದಿಕೆ. ಇಕಾಮರ್ಸ್‌ಗೆ ಸಂಬಂಧಿಸಿದಂತೆ ಕಳೆದ ವರ್ಷ ಏಪ್ರಿಲ್-ನವೆಂಬರ್ ಮಧ್ಯೆ 54,114 ದೂರುಗಳು ಹೆಲ್ಪ್‌ಲೈನ್‌ನಲ್ಲಿ ದಾಖಲಾಗಿವೆ ಎಂಬುದು ಗಮನಾರ್ಹ ಅಂಶ. ಹೊಸ ಕರಡು ನೀತಿಯಲ್ಲಿ ಇದಕ್ಕಾಗಿ ಪ್ರತ್ಯೇಕ ನಿಯಂತ್ರಣ ಪ್ರಾಧಿಕಾರ ರಚನೆಯ ಪ್ರಸ್ತಾಪ ಇರುವುದು ಒಂದು ಗಮನಾರ್ಹ ಅಂಶ.

ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್ ಎಂಬ ಹೊಸ ಹುರುಪಿನ ಐಐಟಿ ಪದವೀಧರ ಯುವಕರು 2007ರಲ್ಲಿ ಫ್ಲಿಪ್‌ಕಾರ್ಟ್ ಆರಂಭಿಸಿ ಕೆಲವೇ ವರ್ಷಗಳಲ್ಲಿ ವಿಶ್ವದ ಪ್ರಭಾವಿ ಯುವಕರ ಸಾಲಿಗೆ ಸೇರಿದಾಗ ನಿಸ್ಸಂಶಯವಾಗಿ ಅದೊಂದು ಯಶೋಗಾಥೆಯಾಗಿತ್ತು. ಆದರೆ ಕಳೆದ ಒಂದು ದಶಕದಲ್ಲಿ ಭಾರತದ ಇ-ಕಾಮರ್ಸ್ ಕ್ಷೇತ್ರ ಅಭೂತಪೂರ್ವ ಬೆಳವಣಿಗೆ ಹಾಗೂ ಬದಲಾವಣೆಯನ್ನು ಕಂಡಿದೆ. ಫ್ಲಿಪ್‌ಕಾರ್ಟ್ ಅಮೇರಿಕದ ಅಮೆಜಾನ್‌ಗೆ ಸರಿಸಮನಾಗಿ ನಿಂತಿದೆ. ಇತ್ತ ಭಾರತದ್ದೇ ಸ್ನಾಪ್‌ಡೀಲ್‌ನ ತೀವ್ರ ಸ್ಪರ್ಧೆಯೂ ಇದೆ. ಎಲ್ಲದರ ನಡುವೆ ಅಮೇರಿಕದ ವಾಲ್‌ಮಾರ್ಟ್ 16 ಬಿಲಿಯನ್ ಡಾಲರ್‌ಗಳಿಗೆ ಫ್ಲಿಪ್‌ಕಾರ್ಟಿನ ಶೇ. 77 ಪಾಲನ್ನು ಖರೀದಿಸುವುದಾಗಿ ಘೋಷಿಸಿದೆ.

ಇ-ಕಾಮರ್ಸ್ ಕಂಪೆನಿಗಳು ಮಹಾನಗರಗಳನ್ನು ಆವರಿಸಿಕೊಂಡ ಬಳಿಕ ಎರಡನೇ ಹಾಗೂ ಮೂರನೇ ಹಂತದ ನಗರಗಳತ್ತ ದೃಷ್ಟಿ ನೆಟ್ಟಿವೆ. ಬಹುಪಾಲು ಯುವಕರನ್ನೇ ಹೊಂದಿರುವ ಭಾರತದಲ್ಲಿ ಇಂಟರ್ನೆಟ್ ಬಳಸುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಕಡಿಮೆ ದರಕ್ಕೆ ಮೊಬೈಲ್ ಸೆಟ್‌ಗಳು ಹಾಗೂ ಡೇಟಾ ದೊರೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಆನ್‌ಲೈನ್ ವ್ಯವಹಾರ ನೂರಾರು ಪಟ್ಟು ಹೆಚ್ಚಾಗಲಿದೆ. ಪ್ರಸ್ತುತ ೨೫೦೦ ಕೋಟಿ ಬೆಲೆಬಾಳುವ ಭಾರತದ ಇ-ಕಾಮರ್ಸ್ ಮಾರುಕಟ್ಟೆ ಮುಂದಿನ 10 ವರ್ಷಗಳಲ್ಲಿ 20,000 ಕೋಟಿಗೆ ಹಿಗ್ಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಇ-ಕಾಮರ್ಸ್ ನೀತಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಅಂತಿಮವಾಗಿ ಲಾಭದ ಚೆಂಡು ಬೀಳುವುದು ಗ್ರಾಹಕರ ಅಂಗಳಕ್ಕೋ, ಕಂಪೆನಿಗಳ ಮೈದಾನಕ್ಕೋ, ಕಾಲವೇ ಉತ್ತರಿಸಬೇಕು.


ಮಂಗಳವಾರ, ಮೇ 15, 2018

ಕಡಲ ತೀರದ ಜಾಣರು

ಮೇ 15, 2018ರಂದು 'ಉದಯವಾಣಿ' 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ.

ಮಂಗ್ಳೂರಿನವರು ತುಂಬ ಚೆನ್ನಾಗಿ ಏನನ್ನು ಮಾಡಬಲ್ಲರು? - ಸ್ನೇಹಿತರೊಬ್ಬರು ಅಚಾನಕ್ಕಾಗಿ ಹಾಗೊಂದು ಪ್ರಶ್ನೆ ಕೇಳಿದರು. ಒಂದೊಂದಾಗಿ ಹೇಳುತ್ತಾ ಹೋದೆ: ಮಂಗ್ಳೂರಿನವರು ತುಂಬ ಚೆನ್ನಾಗಿ ಬಿಸಿನೆಸ್ ಮಾಡಬಲ್ಲರು; ಬೆಸ್ಟ್ ಅನಿಸುವ ಹೋಟೆಲ್ ನಡೆಸಬಲ್ಲರು; ಚೆನ್ನಾಗಿ ಬೇಸಾಯ ಮಾಡಬಲ್ಲರು; ಸೊಗಸಾದ ಕನ್ನಡ ಮಾತಾಡಬಲ್ಲರು; ಒಳ್ಳೊಳ್ಳೆಯ ಮನೆ ಕಟ್ಟಬಲ್ಲರು; ಯಾವ ಊರಿಗೇ ಹೋದರೂ ಯಕ್ಷಗಾನ, ತುಳು ಮತ್ತು ಮೀನು ಬಿಡಲೊಲ್ಲರು. 'ಅದೆಲ್ಲ ಸರಿ, ಬಹಳ ಮುಖ್ಯವಾದದ್ದನ್ನೇ ಬಿಟ್ಟಿದ್ದೀರಲ್ಲಾ?’ - ಅವರು ಮತ್ತೆ ಕೇಳಿದರು. ಏನದು? ಎಂಬಂತೆ ಅವರ ಮುಖವನ್ನೇ ನೋಡಿದೆ. 'ಮಂಗ್ಳೂರಿನವರು ಭಯಂಕರ ಮ್ಯಾಜಿಕ್ ಮಾಡಬಲ್ಲರು ಮಾರಾಯ್ರೆ’ ಎನ್ನುತ್ತಾ ಘೊಳ್ಳನೆ ನಕ್ಕುಬಿಟ್ಟರು.

ಆಮೇಲೆ ತಮ್ಮ ಮಾತಿಗೆ ಅವರೇ ವಿವರಣೆ ಕೊಟ್ಟರು: ಯಾವ ವರ್ಷವೇ ಇರಲಿ, ಎಸ್‌ಎಸ್‌ಎಲ್‌ಸಿ/ ಪಿಯುಸಿ ರಿಸಲ್ಟ್ ಬಂದಾಗ ಪತ್ರಿಕೆಯವರಿಗೆ ಹೆಡ್‌ಲೈನ್ ಬದಲಾಯಿಸುವ ಕೆಲಸವೇ ಇರೋದಿಲ್ಲ ನೋಡಿ. ’ಪಿಯುಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ, ಉಡುಪಿಗೆ ಮೊದಲೆರಡು ಸ್ಥಾನ’ ಎಂಬ ಹೆಡ್‌ಲೈನ್ ಶಾಶ್ವತ. ಈ ಸ್ಥಾನ ಬೇರೆ ಯಾವ ಜಿಲ್ಲೆಗೂ ಬಿಟ್ಟು ಹೋಗದಂತೆ ಅದು ಹೇಗೆ ನೋಡಿಕೊಳ್ಳುತ್ತಾರೆ ಈ ಮಂದಿ? ಒಂದು ವರ್ಷ, ಎರಡು ವರ್ಷವೇನೋ ಓಕೆ. ಶತಮಾನದಿಂದಲೂ ಇದೇ ಕತೆ. ಇದು ಮ್ಯಾಜಿಕ್ ಅಲ್ಲದೆ ಇನ್ನೇನು?

ಅವರ ಪ್ರಶ್ನೆ ಸಹಜವಾದದ್ದೇ. ಆದರೆ ಅದು ಮ್ಯಾಜಿಕ್ ಅಲ್ಲ ಎಂದು ಸಿದ್ಧಪಡಿಸುವುದು ಬಹಳ ಕಷ್ಟ. ಮ್ಯಾಜಿಕ್ ಅಲ್ಲ ಎಂದರೆ ಬೇರೆ ಏನು ಎಂದು ವಿವರಣೆ ಕೊಡಬೇಕು. ಅದುವೇ ತುಸು ಕಠಿಣ ಕೆಲಸ. ಕರಾವಳಿ ಜಿಲ್ಲೆಗಳು ಯಾಕೆ ಶಿಕ್ಷಣದಲ್ಲಿ ಯಾವಾಗಲೂ ಮುಂದು? ಅದು ಆ ನೆಲದ ಗುಣವೇ? ನೀರು-ಗಾಳಿಯ ಫಸಲೇ? ಪ್ರಕೃತಿಯ ವರವೇ? ಪರಿಶ್ರಮದ ಪ್ರತಿಫಲವೇ? ಉತ್ತರಿಸುವುದು ಸುಲಭ ಅಲ್ಲ.

ಯಾವ ವಿಷಯದಲ್ಲೂ ಒಂದೇ ಒಂದು ಮಾರ್ಕೂ ಕಮ್ಮಿಯಿಲ್ಲದಂತೆ ಅಷ್ಟನ್ನೂ ಬಾಚಿಕೊಂಡ ಹುಡುಗನನ್ನೋ ಹುಡುಗಿಯನ್ನೋ ಸುಮ್ಮನೇ ಕೇಳಿನೋಡಿ, ಇಷ್ಟು ಮಾರ್ಕ್ಸ್ ನಿನಗೆ ಹೇಗೆ ಬಂತು ಎಂದು. 'ನಮ್ಮ ಶಾಲೆಯಲ್ಲಿ ಚೆನ್ನಾಗಿ ಪಾಠ ಮಾಡ್ತಾರೆ ಸಾರ್. ನಾನು ಚೆನ್ನಾಗಿ ಓದಿಕೊಂಡಿದ್ದೆ’ - ಇದರ ಹೊರತಾಗಿ ಇನ್ಯಾವ ಮ್ಯಾಜಿಕಲ್ ಫಾರ್ಮುಲಾ ಕೂಡ ಈಚೆ ಬರುವುದಿಲ್ಲ. ಅಸಲಿಗೆ ಅವರು ಮುಚ್ಚಿಡುವಂಥದ್ದೇನೂ ಇರುವುದಿಲ್ಲ. ಅವರ ಉತ್ತರ ನೂರಕ್ಕೆ ನೂರು ಪ್ರಾಮಾಣಿಕ. ಅವರು ಹೇಳುವ 'ಚೆನ್ನಾಗಿ ಪಾಠ ಮಾಡುವುದು, ಚೆನ್ನಾಗಿ ಓದುವುದು’ ಅಂದರೇನು ಎಂಬುದಷ್ಟೇ ನಾವು ಅರ್ಥಮಾಡಿಕೊಳ್ಳಬೇಕಾದ ಸಂಗತಿ.

'ದಕ್ಷಿಣ ಕನ್ನಡದಲ್ಲಿ ಕಲಿಕೆಗೆ ಪೂರಕ ವಾತಾವರಣ ಇದೆ. ಇದನ್ನು ನಿರ್ಮಿಸುವಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ತುಂಬ ದೊಡ್ಡದು. ಚೆನ್ನಾಗಿ ಕಲಿತರೆ ಮಾತ್ರ ನಾಳಿನ ಬದುಕು ಚೆನ್ನಾಗಿರುತ್ತದೆ ಎಂಬ ಭಾವನೆಯನ್ನು ಮಕ್ಕಳು ಚಿಕ್ಕವರಾಗಿದ್ದಾಗಿಂದಲೂ ಬೆಳೆಸಿಕೊಂಡು ಬರಲಾಗುತ್ತದೆ. ಇದೊಂದು ಮನಸ್ಥಿತಿಯಾಗಿ ಬೆಳೆಯುವುದರಿಂದ ತಮ್ಮ ಓದು ಮುಗಿಯುವವರೆಗೂ ಮಕ್ಕಳು ಬೇರೆ ಆಕರ್ಷಣೆಗಳಿಗೆ ಒಳಗಾಗುವುದು ಕಡಿಮೆ. ಶಿಸ್ತು ಹಾಗೂ ಕಟ್ಟುನಿಟ್ಟಿನ ದಿನಚರಿಯೂ ಇದಕ್ಕೊಂದು ಕಾರಣ’ ಎನ್ನುತ್ತಾರೆ ವೇಣೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ ಎಸ್. ತುಳುಪುಳೆ.

ನಿಯಮ ಹೇರಲ್ಪಟ್ಟಾಗ ಅದು ಶಿಕ್ಷೆಯೆನಿಸುವುದುಂಟು. ಆದರೆ ಅದು ಬದುಕಿಗೆ ಮುಖ್ಯ ಎಂಬ ಭಾವನೆ ವಿದ್ಯಾರ್ಥಿಯ ಮನಸ್ಸಿನಲ್ಲೇ ಮೂಡಿದಾಗ ಸ್ವಯಂಶಿಸ್ತು ಬೆಳೆಯುತ್ತದೆ. ಇದು ಮಗು ಶಾಲೆಗೆ ಸೇರಿದ ಮೇಲೆ ಉಂಟಾಗುವ ಹೊಸ ಬೆಳವಣಿಗೆ ಅಲ್ಲ. ಮನೆಯೇ ಮೊದಲ ಪಾಠಶಾಲೆ ಎಂಬ ಮಾತು ಕರಾವಳಿಯಲ್ಲಿ ಅಕ್ಷರಶಃ ಸತ್ಯ. ಜವಾಬ್ದಾರಿಯುತ ಜೀವನದ ಕಲ್ಪನೆ ಮನೆಯಲ್ಲೇ ಆರಂಭವಾಗುತ್ತದೆ. ಗುರುಹಿರಿಯರನ್ನು ಗೌರವಿಸು, ಓರಗೆಯವರನ್ನು ಪ್ರೀತಿಸು, ನಿನ್ನ ಮೇಲೆ ಬೆಟ್ಟದಷ್ಟು ಭರವಸೆ ಇಟ್ಟಿರುವ ಅಪ್ಪ-ಅಮ್ಮನಿಗೆ ನಿರಾಸೆ ಮಾಡಬೇಡ ಎಂಬ ಪಾಠ ಪ್ರತಿದಿನ ಕಿವಿಗೆ ಬೀಳುತ್ತಲೇ ಇರುತ್ತದೆ. ಅದು ಲಕ್ಷಗಟ್ಟಲೆ ದುಡ್ಡು ಚೆಲ್ಲಿ ಕೊಡುವ ಕೋಚಿಂಗ್ ಅಲ್ಲ. ಆದ್ದರಿಂದಲೇ ಅದಕ್ಕೆ ಸಂಸ್ಕಾರ ಎಂದು ಹೆಸರು.

'ಎಸ್‌ಎಸ್‌ಎಲ್‌ಸಿ ಇರಲಿ, ಪಿಯುಸಿ ಇರಲಿ, ಇನ್ಯಾವುದೋ ಮಹತ್ವದ ಹಂತ ಇರಲಿ, ಮಕ್ಕಳನ್ನು ಕ್ಷಣಕ್ಷಣವೂ ಎಚ್ಚರಿಸಿ ಮುನ್ನಡೆಸುವುದು ಇದೇ ಸಂಸ್ಕಾರ. ಇದರ ಮುಂದುವರಿದ ಭಾಗ ಶಾಲೆಗಳಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ ಮತ್ತು ಶಿಕ್ಷಕರ ಮನಸ್ಥಿತಿ. ಕೇವಲ ಸಂಬಳಕ್ಕಾಗಿ ದುಡಿಯುವ ಶಿಕ್ಷಕರು ಇಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಕಮ್ಮಿ. ವಿದ್ಯಾರ್ಥಿಗಳು ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು ಎಂದು ನಮ್ಮ ಮೇಷ್ಟ್ರುಗಳು ಪ್ರಾಮಾಣಿಕವಾಗಿ ಬಯಸುತ್ತಾರೆ’ ಎನ್ನುತ್ತಾರೆ ನಿಡ್ಲೆ ಎಂಬ ಹಳ್ಳಿಯಲ್ಲಿರುವ ಪೋಷಕ ಕೃಷ್ಣಮೋಹನ.

ಕಟ್ಟುನಿಟ್ಟಾಗಿ ತರಗತಿಗಳನ್ನು ನಡೆಸುವುದು ಎಷ್ಟು ಮುಖ್ಯ ಎಂದು ವಿವರಿಸುತ್ತಾರೆ ಉಪ್ಪಿನಂಗಡಿ ಸಮೀಪದ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸ ಗಣರಾಜ ಕುಂಬ್ಳೆ. 'ಇಲಾಖೆಯ ನಿಯಮ ಪ್ರಕಾರ ನಡೆಸಬೇಕಾದ ತರಗತಿಗಳಿಗಿಂತ ಹೆಚ್ಚೇ ತರಗತಿಗಳು ಇಲ್ಲಿ ನಡೆಯುತ್ತವೆ. ರಿವಿಶನ್‌ಗೂ ಹೆಚ್ಚಿನ ಮಹತ್ವ. ಪಿಯುಸಿ ಹಂತದಲ್ಲೂ ಹೋಂವರ್ಕ್ ನೀಡುವ ಪದ್ಧತಿಯಿದೆ. ಇದರಿಂದ ತರಗತಿಯಲ್ಲಿ ಆದ ಪಾಠದ ಮನನ ಅದೇ ದಿನ ನಡೆಯುತ್ತದೆ’ ಎನ್ನುತ್ತಾರೆ ಅವರು.

'ಪರೀಕ್ಷೆಗಳಂತೂ ಕಟ್ಟುನಿಟ್ಟಾಗಿ ನಡೆಯುತ್ತವೆ. ನಕಲು ಮಾಡಬಾರದು, ಅದು ನಾಚಿಕೆಗೇಡು ಎಂಬ ಭಾವನೆ ಮಕ್ಕಳಲ್ಲಿ ಮೊದಲಿನಿಂದಲೂ ಬೆಳೆದಿರುತ್ತದೆ. ಕ್ಲಾಸ್ ಟೆಸ್ಟುಗಳೂ ವಾರ್ಷಿಕ ಪರೀಕ್ಷೆಯಷ್ಟೇ ಶಿಸ್ತಿನಿಂದ ನಡೆಯುತ್ತವೆ. ಗೈಡುಗಳ ಮೇಲೆ ವಿದ್ಯಾರ್ಥಿಗಳ ಅವಲಂಬನೆ ಕಡಿಮೆ. ಹೀಗಾಗಿ ಸ್ವತಂತ್ರ ಕಲಿಕೆಯ ಸಾಮರ್ಥ್ಯ ಮಕ್ಕಳಲ್ಲಿ ಸಹಜವಾಗಿ ಬೆಳೆದಿರುತ್ತದೆ. ನೀರಿಗೆ ನೂಕಿದ ಮೇಲೆ ಈಜು ಕಲಿಯಲೇಬೇಕಲ್ಲ?’ ಎಂದು ಪ್ರಶ್ನಿಸುತ್ತಾರೆ ಕುಂಬ್ಳೆ.

ಇದನ್ನು ವಿದ್ಯಾರ್ಥಿಗಳೂ ಒಪ್ಪುತ್ತಾರೆ. 'ಪರೀಕ್ಷೆ ಮಾತ್ರ ಅಲ್ಲ, ಮೌಲ್ಯಮಾಪನವೂ ಕಟ್ಟುನಿಟ್ಟು. ಇದರಿಂದ ಚೆನ್ನಾಗಿ ಬರೆದರೆ ಮಾತ್ರ ಒಳ್ಳೆಯ ಅಂಕ ಎಂಬ ಭಾವನೆ ನಮ್ಮಲ್ಲಿ ಬೆಳೆದಿರುತ್ತದೆ. ನಿಧಾನ ಕಲಿಕೆಯವರನ್ನು ಗುರುತಿಸಿ ಅವರಿಗೆ ಹೆಚ್ಚಿನ ಮಾರ್ಗದರ್ಶನ ನೀಡುವ ಪದ್ಧತಿ ನಮ್ಮ ಶಾಲೆಯಲ್ಲಿದೆ. ಎಂತಹವರೂ ಪಾಸ್ ಆಗುವಂತೆ ಬೆಳೆಸಿ ಬೆನ್ನುತಟ್ಟುವ ವಿಶಿಷ್ಟ ಗುಣ ನಮ್ಮ ಹೆಡ್‌ಮಿಸ್‌ಗಿದೆ. ಬೆಳಗ್ಗೆ ೮ ಗಂಟೆಯಿಂದ ರಾತ್ರಿ ೮ರವರೆಗೂ ಅವರು ಶಾಲೆಯಲ್ಲೇ ಇರುವುದುಂಟು’ ಎನ್ನುತ್ತಾರೆ ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲಮಾಧ್ಯಮ ಶಾಲೆಯಲ್ಲಿ ಈಗಷ್ಟೇ ಎಸ್‌ಎಸ್‌ಎಲ್‌ಸಿ ಮುಗಿಸಿರುವ ಅಶ್ವಿನ್.

'ದಕ್ಷಿಣ ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಭದ್ರವಾಗಿದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಭಾಷಾಕೌಶಲ ಬೆಳೆದಿರುತ್ತದೆ. ವಿದ್ಯಾರ್ಥಿದೆಸೆಯಲ್ಲಿ ಓದುವುದೇ ಪರಮಗುರಿ ಎಂಬ ಭಾವನೆ ವಿದ್ಯಾರ್ಥಿಯಲ್ಲಿ ಮೂಡಿದಾಗ ಅಡ್ಡದಾರಿಗಳ ಕಡೆಗೆ ಮನಸ್ಸು ಹೋಗುವುದೇ ಇಲ್ಲ. ಪೋಷಕರಲ್ಲೂ ಹೆಚ್ಚಿನವರು ವಿದ್ಯಾವಂತರು ಇರುವುದೂ ಇದಕ್ಕೆ ಕಾರಣ’ ಎನ್ನುತ್ತಾರೆ ಕುಂತೂರುಪದವು ಸಂತ ಜಾರ್ಜ್ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ತಮ್ಮಯ್ಯ ಗೌಡರು.

ಕರುನಾಡು, ಹೆಣ್ಣುಮಕ್ಕಳ ಬೀಡು
ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಸಾಕ್ಷರತಾ ಪ್ರಮಾಣ ರಾಜ್ಯದ ಸರಾಸರಿ ಸಾಕ್ಷರತೆಗಿಂತ ತುಂಬ ಮೇಲ್ಮಟ್ಟದಲ್ಲಿದೆ. ಇಡೀ ರಾಜ್ಯದಲ್ಲೇ ಅತಿಹೆಚ್ಚು ಅಂದರೆ ಶೇ. ೮೮.೫೭ರಷ್ಟು ಸಾಕ್ಷರತಾ ಪ್ರಮಾಣ ದ.ಕ. ಜಿಲ್ಲೆಯಲ್ಲಿದೆ. ಉಡುಪಿಯಲ್ಲಿ ಇದು ಶೇ. ೮೬.೨೪ ಇದೆ. ಇನ್ನೊಂದು ವಿಶೇಷವೆಂದರೆ ಗಂಡು-ಹೆಣ್ಣು ಅನುಪಾತ ಉಳಿದ ಜಿಲ್ಲೆಗಳಿಗಿಂತ ಕರಾವಳಿ ಜಿಲ್ಲೆಯಲ್ಲಿ ಭಿನ್ನವಾಗಿದೆ. ಉಳಿದ ಕಡೆ ಹೆಣ್ಣುಮಕ್ಕಳ ಸಂಖ್ಯೆ ಕುಸಿಯುತ್ತಿದ್ದರೆ, ದ.ಕ.ದಲ್ಲಿ 1000:1020 ಹಾಗೂ ಉಡುಪಿಯಲ್ಲಿ 1000:1094 ಪುರುಷ-ಸ್ತ್ರೀ ಅನುಪಾತ ಇದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿಗೂ ಕರಾವಳಿಯ ಶಿಕ್ಷಣದ ಗುಣಮಟ್ಟಕ್ಕೂ ಏನಾದರೂ ಸಂಬಂಧವಿರಬಹುದೇ?

ಗುರುವಾರ, ಮೇ 3, 2018

ಸೃಜನಶೀಲರ ಬದುಕು ಬದಲಿಸಬಲ್ಲ ಪಂಚತಂತ್ರ | ಸೃಜನಶೀಲತೆಯ ಹೊಸ ಡಿಸೈನುಗಳು!

ಪ್ರಜಾವಾಣಿ | ಏಪ್ರಿಲ್ 27 ಹಾಗೂ 30, 2018ರಂದು ಪ್ರಕಟವಾದ ಲೇಖನಗಳು
ಪ್ರಜಾವಾಣಿ ಗ್ರಾಫಿಕ್ಸ್


ಪ್ರಜಾವಾಣಿ (27-04-2018) ಲಿಂಕ್ ಇಲ್ಲಿ ನೋಡಿ.
ಪ್ರಜಾವಾಣಿ (30-04-2018) ಇನ್ನೊಂದು ಲಿಂಕ್ ಇಲ್ಲಿ ನೋಡಿ.


ಯಾವುದೋ ಒಂದು ಪದವಿ ಪಡೆದರೆ ಸಾಕು, ಉದ್ಯೋಗ ಸಿಕ್ಕಿಬಿಡುತ್ತದೆ ಎಂಬ ನಮ್ಮ ಯುವಕರ ಸಾಂಪ್ರದಾಯಿಕ ಮನಸ್ಥಿತಿ ಬದಲಾಗುತ್ತಿದೆ. ಓದಿನ ಬಳಿಕ ನೌಕರಿ ಸಿಗುತ್ತದೆಯೇ ಎನ್ನುವುದನ್ನು ಅವರು ಗಂಭೀರವಾಗಿ ಯೋಚಿಸುತ್ತಿದ್ದಾರೆ. ಸಮೀಕ್ಷೆಗಳ ಪ್ರಕಾರ ಶೇ 47ರಷ್ಟು ಭಾರತೀಯ ಪದವೀಧರರು ಮಾತ್ರ ಉದ್ಯೋಗಾರ್ಹತೆ ಪಡೆದುಕೊಂಡಿದ್ದಾರೆ. ಹೀಗಾಗಿ ಉದ್ಯೋಗಾರ್ಹತೆ ಹೆಚ್ಚಿಸುವ ಕೋರ್ಸುಗಳಿಗೆ ಇಂದು ಹೆಚ್ಚಿನ ಬೇಡಿಕೆ.
ಪಿಯುಸಿ ಬಳಿಕ ಬಿಎ/ ಬಿಕಾಂ/ ಬಿಎಸ್ಸಿ ಇಲ್ಲವೇ ಎಂಜಿನಿಯರಿಂಗ್-ಮೆಡಿಕಲ್ ಪದವಿ ಎಂಬ ಸೀಮಿತ ಚೌಕಟ್ಟಿನಿಂದ ಈಚೆ ಬಂದು ಹೊಸ ಸಾಧ್ಯತೆಗಳತ್ತ ನಮ್ಮ ಯುವಕರು ಯೋಚಿಸುವ ಕಾಲ ಬಂದಿದೆ. ಇಲ್ಲಿ ಅಂತಹ ಐದು ಹೊಸ ಕ್ಷೇತ್ರಗಳ ವಿವರಗಳನ್ನು ನೀಡಲಾಗಿದೆ. ಕಷ್ಟಪಟ್ಟು ಓದುವುದಕ್ಕಿಂತಲೂ ಇಷ್ಟಪಟ್ಟು ಓದಿದರೆ ಭವಿಷ್ಯ ಭದ್ರ ಎಂದು ಯೋಚಿಸುವ ಸೃಜನಶೀಲ ಮನಸ್ಸುಳ್ಳವರಿಗೆ ಹೇಳಿ ಮಾಡಿಸಿದ ಕೋರ್ಸ್‌ಗಳು ಇಲ್ಲಿವೆ.
ಫ್ಯಾಷನ್/ಅಪಾರೆಲ್/ಟೆಕ್ಸ್‌ಟೈಲ್ ಡಿಸೈನಿಂಗ್ 
ಸಾಮಾನ್ಯ ಪೇಟೆಗಳಿಂದ ತೊಡಗಿ ಮಹಾನಗರಗಳವರೆಗೆ ದಿನೇದಿನೇ ಹೆಚ್ಚುತ್ತಲೇ ಇರುವ ವ್ಯಾಪಾರ ಬಟ್ಟೆಬರೆಗಳದ್ದು. ಆಬಾಲವೃದ್ಧರಾದಿಯಾಗಿ ಎಲ್ಲ ವಯಸ್ಸಿನ ಮಂದಿಯನ್ನೂ ಸೆಳೆಯುವ ಈ ಅಂಗಡಿಗಳಿಗೆ ಬೇಡಿಕೆ ಕಡಿಮೆಯಾದದ್ದೇ ಇಲ್ಲ. ಹೀಗಾಗಿ ಫ್ಯಾಷನ್ ಅಥವಾ ಟೆಕ್ಸ್‌ಟೈಲ್ ಡಿಸೈನಿಂಗ್ ಎಂದೂ ಜನಪ್ರಿಯತೆಯನ್ನು ಕಳೆದುಕೊಳ್ಳದ ಕ್ಷೇತ್ರ. ಜನ ಸದಾ ಹೊಸತಿಗೆ ಹಾತೊರೆಯುವ ಈ ಕಾಲದಲ್ಲಿ ಗ್ರಾಹಕರ ಅಭಿರುಚಿಗೆ ಅನುಗುಣವಾದ ಹೊಸ ಮಾದರಿಯ ಉಡುಗೆ-ತೊಡುಗೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಷ್ಟೂ ಸಾಲದು. ಕ್ರಿಯಾಶೀಲ ಯುವಕ-ಯುವತಿಯರಿಗೆ ಇದು ಹೇಳಿ ಮಾಡಿಸಿದ ಕ್ಷೇತ್ರ. ಫ್ಯಾಷನ್ ಡಿಸೈನ್ ಮತ್ತು ಸಂಬಂಧಿತ ವಿಷಯಗಳಲ್ಲಿ ಸರ್ಟಿಫಿಕೇಟ್, ಡಿಪ್ಲೊಮಾ, ಡಿಗ್ರಿ, ಪಿಜಿ ಡಿಪ್ಲೊಮಾ ನೀಡುವ ಅನೇಕ ಸಂಸ್ಥೆಗಳು ರಾಜ್ಯದಲ್ಲಿವೆ. ವಿವರಗಳಿಗೆ design.careers360.com, academiccourses.com ಜಾಲತಾಣಗಳನ್ನು ನೋಡಿ. 
* ವೋಗ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ರಿಚ್ಮಂಡ್ ಸರ್ಕಲ್, ಬೆಂಗಳೂರು. ಫ್ಯಾಷನ್ ಡಿಸೈನಿಂಗ್‌ನಲ್ಲಿ ಸರ್ಟಿಫಿಕೇಟ್, ಡಿಪ್ಲೊಮಾ, ಪದವಿ ಮತ್ತು ಪಿ.ಜಿ. ಡಿಪ್ಲೊಮಾ ಕೋರ್ಸ್‌ಗಳು. ವೆಬ್‍ಸೈಟ್: voguefashioninstitute.com
* ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ, ವಿಜಯನಗರ, ಬೆಂಗಳೂರು. ಫ್ಯಾಶನ್ & ಅಪಾರೆಲ್ ಡಿಸೈನ್‌ನಲ್ಲಿ ಬಿಎಸ್ಸಿ, ಫ್ಯಾಷನ್ ಡಿಸೈನಿಂಗ್ ಅಂಡ್ ಬುಟೀಕ್ ಮ್ಯಾನೇಜ್ಮೆಂಟ್‌ನಲ್ಲಿ ಡಿಪ್ಲೊಮಾ. ವೆಬ್‍ಸೈಟ್: iiftbangalore.com
* ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು. ಆಕ್ಸೆಸರಿ ಡಿಸೈನ್, ಫ್ಯಾಷನ್ ಕಮ್ಯುನಿಕೇಶನ್, ಫ್ಯಾಷನ್ ಡಿಸೈನ್‌ನಲ್ಲಿ ಪ್ರತ್ಯೇಕ ಪದವಿಗಳು ಹಾಗೂ ಸ್ನಾತಕೋತ್ತರ ಕೋರ್ಸ್. ವೆಬ್‍ಸೈಟ್: nift.ac.in
* ಮಂಗಳೂರು ಇನ್‍ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಕಂಕನಾಡಿ, ಮಂಗಳೂರು. ಫ್ಯಾಷನ್ ಡಿಸೈನಿಂಗ್‌ನಲ್ಲಿ ಬಿಎಸ್ಸಿ ಪದವಿ. ವೆಬ್‍ಸೈಟ್‍: miftcollege.in
* ಮೈಸೂರು ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ವಿಜಯನಗರ, ಸಂಗಮ್ ವೃತ್ತ, ಮೈಸೂರು. ವೆಬ್‍ಸೈಟ್: www.mift.in
ಫೋಟೊಗ್ರಫಿ: ಮೂರನೇ ಕಣ್ಣು 
ಅಪಾರ ಸಾಧ್ಯತೆಗಳಿರುವ ಕ್ಷೇತ್ರ ಛಾಯಾಗ್ರಹಣ. ಜಾಹೀರಾತು ಸಂಸ್ಥೆಗಳಿಂದ ಫ್ಯಾಷನ್‌ ರಂಗದವರೆಗೆ ಕ್ರಿಯಾಶೀಲ ಛಾಯಾಗ್ರಾಹಕರಿಗೆ ಇಂದು ಎಲ್ಲಿಲ್ಲದ ಬೇಡಿಕೆಯಿದೆ. ಮದುವೆಯಂತಹ ಕೌಟುಂಬಿಕ ಕಾರ್ಯಕ್ರಮಗಳಿಂದ ತೊಡಗಿ ಸಾರ್ವಜನಿಕ ಸಭೆ-ಸಮಾರಂಭಗಳವರೆಗೆ ಎಲ್ಲ ಸಂದರ್ಭಗಳಿಗೂ ಫೋಟೊ ಅನಿವಾರ್ಯವಾಗಿರುವುದರಿಂದ ಫೋಟೊಗ್ರಫಿಯನ್ನು ವೃತ್ತಿಯನ್ನಾಗಿ ಸ್ವೀಕರಿಸಿದವರಿಗೆ ಇಂದು ಬಿಡುವೇ ಇಲ್ಲ. ಅನೇಕ ಸಂಸ್ಥೆಗಳು ಛಾಯಾಗ್ರಹಣದಲ್ಲಿ ಡಿಪ್ಲೊಮಾ ಹಾಗೂ ಪದವಿ ಕೋರ್ಸುಗಳನ್ನು ಒದಗಿಸುತ್ತಿವೆ. ಫ್ಯಾಷನ್ ಫೋಟೊಗ್ರಫಿ, ಅಟೋಮೊಬೈಲ್ ಫೋಟೊಗ್ರಫಿ, ವೈಲ್ಡ್‌ಲೈಫ್ ಫೋಟೊಗ್ರಫಿ - ಹೀಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತಲೇ ಇವೆ. ವಿವರಗಳಿಗೆ goo.gl/qfsJsF, goo.gl/vYwEiW ಜಾಲತಾಣಗಳನ್ನು ನೋಡಿ.
* ಸೀಮ್‌ಎಜು ಸ್ಕೂಲ್ ಆಫ್ ಎಕ್ಸ್‌ಪ್ರೆಶನಿಸಂ, ಭುವನಗಿರಿ, ಒಎಂಬಿಆರ್ ಬಡಾವಣೆ, ಬೆಂಗಳೂರು. ಛಾಯಾಗ್ರಹಣದಲ್ಲಿ ಮೂರು ವರ್ಷದ ಬಿಎಸ್ಸಿ ಪದವಿ. ವೆಬ್‍ಸೈಟ್: seamedu.com
* ಜೆಡಿ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಲ್ಯಾವೆಲ್ಲೆ ರಸ್ತೆ, ಬೆಂಗಳೂರು. ಫ್ಯಾಷನ್ ಫೋಟೋಗ್ರಫಿಯಲ್ಲಿ ಡಿಪ್ಲೊಮಾ ಪದವಿ.
ದೃಷ್ಟಿ ಸ್ಕೂಲ್ ಆಫ್ ಫೋಟೋಗ್ರಫಿ, ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ, ಹೆಬ್ಬಾಳ, ಬೆಂಗಳೂರು.
ಹೊಸಬರಿಗೆ ವಾರಾಂತ್ಯದ ಕೋರ್ಸುಗಳು ಹಾಗೂ ಇತರರಿಗೆ 50 ದಿನಗಳ ಕೋರ್ಸ್. ವೆಬ್‍ಸೈಟ್: jdinstitute.com
ಸೌಂಡ್ ಎಂಜಿನಿಯರಿಂಗ್: ಶಬ್ದಪ್ರಸಂಗ 
ಮನರಂಜನೆ ಬಹುಕೋಟಿ ಉದ್ಯಮವಾಗಿ ಬೆಳೆದಿರುವುದರಿಂದ ಕಳೆದೊಂದು ದಶಕದಿಂದ ಸೌಂಡ್ ಎಂಜಿನಿಯರಿಂಗ್ ತುಂಬ ಜನಪ್ರಿಯವೆನಿಸಿದೆ. ಚಲನಚಿತ್ರ (ಧ್ವನಿಪರಿಷ್ಕರಣೆ, ಧ್ವನಿಪರಿಣಾಮ), ಟೀವಿ ಕಾರ್ಯಕ್ರಮ ನಿರ್ಮಾಣ, ಜಾಹೀರಾತು, ಸಂಗೀತ ಕ್ಷೇತ್ರಗಳಲ್ಲಿ ಸೌಂಡ್ ಎಂಜಿನಿಯರ್‌ಗಳಿಗೆ ಭಾರೀ ಬೇಡಿಕೆಯಿದೆ. ಈ ವಿಷಯದಲ್ಲಿ ಡಿಪ್ಲೊಮಾ, ಬಿ.ಇ./ಬಿ.ಟೆಕ್. ಪದವಿಗಳನ್ನು ನೀಡುವ ಅನೇಕ ಸಂಸ್ಥೆಗಳಿವೆ. ವಿವರಗಳಿಗೆ audiolife.in, audioacademy.in ಜಾಲತಾಣಗಳನ್ನು ನೋಡಿ.
* ಸೀಮ್‌ಎಜು ಸ್ಕೂಲ್ ಆಫ್ ಎಕ್ಸ್‌ಪ್ರೆಶನಿಸಂ, ಭುವನಗಿರಿ, ಒಎಂಬಿಆರ್ ಬಡಾವಣೆ, ಬೆಂಗಳೂರು. ಸೌಂಡ್ ಎಂಜಿನಿಯರಿಂಗ್‌ನಲ್ಲಿ ಬಿ.ಎಸ್ಸಿ. ಪದವಿ.
* ಆಡಿಯೋ ಅಕಾಡೆಮಿ, ಆವಲಹಳ್ಳಿ, ಬೆಂಗಳೂರು. ಸೌಂಡ್ ಎಂಜಿನಿಯರಿಂಗ್‌ನ ವಿವಿಧ ವಿಷಯಗಳಲ್ಲಿ ಸಣ್ಣ ಅವಧಿಯ ಕೋರ್ಸ್‌ಗಳು. ವೆಬ್‍ಸೈಟ್: audioacademy.in
* ಆಡಿಯೋಲೈಫ್-ಇನ್‍ಸ್ಟಿಟ್ಯೂಟ್ ಆಫ್ ಸೌಂಡ್ ಎಂಜಿನಿಯರಿಂಗ್, ಜೆಪಿ ನಗರ, ಬೆಂಗಳೂರು. ಸೌಂಡ್ ಎಂಜಿನಿಯರಿಂಗ್ ಹಾಗೂ ಎಲೆಕ್ಟ್ರಾನಿಕ್ ಮ್ಯೂಸಿಕ್ ಪ್ರೊಡಕ್ಷನ್‌ನಲ್ಲಿ ಸಣ್ಣ ಅವಧಿ ಹಾಗೂ ದೀರ್ಘಾವಧಿ ಕೋರ್ಸ್‌ಗಳು. ವೆಬ್‍ಸೈಟ್: audiolife.in
* ಎಎಟಿ ಮೀಡಿಯಾ ಕಾಲೇಜ್, ಮಲ್ಲೇಶ್ವರಂ, ಬೆಂಗಳೂರು. ಸೌಂಡ್ ಎಂಜಿನಿಯರಿಂಗ್‌ನಲ್ಲಿ ಪದವಿ,ಡಿಪ್ಲೊಮಾ ಕೋರ್ಸ್.
ಸಿಆರ್‌ಇಒ ವ್ಯಾಲಿ ಸ್ಕೂಲ್ ಆಫ್ ಕ್ರಿಯೇಟಿವಿಟಿ, ಡಿಸೈನ್ & ಮ್ಯಾನೇಜ್ಮೆಂಟ್, ಕೋರಮಂಗಲ, ಬೆಂಗಳೂರು. ಸೌಂಡ್ ಎಂಜಿನಿಯರಿಂಗ್‌ನಲ್ಲಿ ಅಂತರರಾಷ್ಟ್ರೀಯ ಮಾನ್ಯತೆಯ ಕೋರ್ಸ್‌ಗಳು. ವೆಬ್‍ಸೈಟ್: aatcollege.com
ಸಂಘಟನೆ-ಸಂಭ್ರಮದ ಇವೆಂಟ್ ಮ್ಯಾನೇಜ್‍ಮೆಂಟ್‍ 
ವಾರ್ಷಿಕೋತ್ಸವ, ರ‍್ಯಾಲಿ, ವಸ್ತುಪ್ರದರ್ಶನ ಇತ್ಯಾದಿ ಸಾರ್ವಜನಿಕ ಸಭೆ-ಸಮಾರಂಭಗಳಿಂದ ತೊಡಗಿ ಮದುವೆಯಂತಹ ಕೌಟುಂಬಿಕ ಕಾರ್ಯಕ್ರಮಗಳನ್ನೂ ಅಚ್ಚುಕಟ್ಟಾಗಿ ಆಯೋಜಿಸಿಕೊಡುವ ಇವೆಂಟ್ ಮ್ಯಾನೇಜ್‍ಮೆಂಟ್‍ ಕಂಪನಿಗಳಿಗೆ ಈಗ ಬಿಡುವಿಲ್ಲದ ಕೆಲಸ. ಕಾರ್ಯಕ್ರಮಗಳು ಸೊಗಸಾಗಿ ನಡೆಯಬೇಕು. ಆದರೆ ಅದರ ಆಯೋಜನೆಯ ಒತ್ತಡಗಳಿಂದ ದೂರವಿರಬೇಕು ಎಂದು ಬಯಸುವವರೇ ಹೆಚ್ಚಾಗಿರುವುದರಿಂದ ಇವೆಂಟ್ ಮ್ಯಾನೇಜರ್ಸ್‌ಗೆ ಭಾರೀ ಬೇಡಿಕೆ. ಈ ವಿಷಯದಲ್ಲಿ ಡಿಪ್ಲೊಮಾದಿಂದ ತೊಡಗಿ ಎಂಬಿಎ ವರೆಗೆ ಅನೇಕ ಬಗೆಯ ಕೋರ್ಸ್‌ಗಳನ್ನು ನೀಡುವ ಸಂಸ್ಥೆಗಳಿವೆ. ವಿವರಗಳಿಗೆ: niemindia.com, emdiworld.com/bengaluru ಜಾಲತಾಣಗಳನ್ನು ನೋಡಿ. 
* ಇಎಂಡಿಐ ಇನ್‍ಸ್ಟಿಟ್ಯೂಟ್ ಆಫ್ ಇವೆಂಟ್ ಮ್ಯಾನೇಜ್‍ಮೆಂಟ್, ಇಂದಿರಾನಗರ, ಬೆಂಗಳೂರು. ಇವೆಂಟ್ ಮ್ಯಾನೇಜ್‍ಮೆಂಟ್ ಡಿಪ್ಲೊಮಾ  ಮತ್ತು ಪಿಜಿ ಡಿಪ್ಲೊಮಾ ಕೋರ್ಸ್‌ಗಳು. ವೆಬ್‍ಸೈಟ್: emdiworld.com
* ಶಾರದಾ ವಿಕಾಸ್ ಟ್ರಸ್ಟ್, ಜಯನಗರ 4ನೇ ಬ್ಲಾಕ್, ಬೆಂಗಳೂರು. ಇವೆಂಟ್ ಮ್ಯಾನೇಜ್‍ಮೆಂಟ್‍ನಲ್ಲಿ ಡಿಪ್ಲೊಮಾ ಕೋರ್ಸ್.
* ಪಿಇಎಸ್ ವಿಶ್ವವಿದ್ಯಾಲಯ, ಬನಶಂಕರಿ 3ನೇ ಹಂತ, ಬೆಂಗಳೂರು. ಹಾಸ್ಪಿಟಾಲಿಟಿ & ಇವೆಂಟ್ ಮ್ಯಾನೇಜ್‍ಮೆಂಟ್‍ನಲ್ಲಿ ಬಿಬಿಎ ಪದವಿ. ವೆಬ್‍ಸೈಟ್: pes.edu
ನೋಟ ನವನವೀನ: ಇಂಟೀರಿಯರ್ ಡಿಸೈನ್ 
ಮನೆ-ಕಚೇರಿ ಕಟ್ಟಿಕೊಂಡರೆ ಸಾಲದು, ಅವು ಚೆನ್ನಾಗಿರಬೇಕು ಎಂದು ಬಯಸುವ ಜನರು ಹೆಚ್ಚು. ಹೀಗಾಗಿ ಇಂಟೀರಿಯರ್ ಡಿಸೈನಿಂಗ್ ದೊಡ್ಡ ಉದ್ಯಮವಾಗಿ ಬೆಳೆದಿದೆ. ಜನರ ಆಸಕ್ತಿ-ಅಭಿರುಚಿಗೆ ಅನುಗುಣವಾಗಿ ಒಳಾಂಗಣ ವಿನ್ಯಾಸ ಮಾಡುವವರು ಇಂದು ಬಹುಬೇಡಿಕೆಯಲ್ಲಿದ್ದಾರೆ. ಅಂತಹ ಮಂದಿಯನ್ನು ತರಬೇತುಗೊಳಿಸುವ ಸಾಕಷ್ಟು ಸಂಸ್ಥೆಗಳೂ ಹುಟ್ಟಿಕೊಂಡಿವೆ. ವಿವರಗಳಿಗೆ plancareer.org, www.bsd.edu.in ಜಾಲತಾಣಗಳನ್ನು ನೋಡಿ.
* ಬೆಂಗಳೂರು ಸ್ಕೂಲ್ ಆಫ್ ಡಿಸೈನ್, ಕೆ. ನಾರಾಯಣಪುರ, ಕೊತ್ತನೂರು, ಬೆಂಗಳೂರು. ಇಂಟೀರಿಯರ್ ಡಿಸೈನ್‌ನಲ್ಲಿ ಬಿ.ಎಸ್ಸಿ. ಹಾಗೂ ಡಿಪ್ಲೊಮ ಕೋರ್ಸ್‌ಗಳು. ವೆಬ್‍ಸೈಟ್: bsd.edu.in
* ನಿಟ್ಟೆ ಸ್ಕೂಲ್ ಆಫ್ ಫ್ಯಾಶನ್ ಟೆಕ್ನಾಲಜಿ & ಇಂಟೀರಿಯರ್ ಡಿಸೈನ್, ಯಲಹಂಕ, ಬೆಂಗಳೂರು. ಇಂಟೀರಿಯರ್ ಡಿಸೈನ್ & ಡೆಕೋರೇಶನ್‌ನಲ್ಲಿ ಬಿ.ಎಸ್ಸಿ. ಪದವಿ. ವೆಬ್‍ಸೈಟ್: nitteftid.com
* ಇಂಟರ್‌ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಶನ್ ಡಿಸೈನ್, ಎಚ್‌ಎಸ್‌ಆರ್ ಲೇಔಟ್ ಹಾಗೂ ಎಂಜಿ ರಸ್ತೆ, ಬೆಂಗಳೂರು. ಇಂಟೀರಿಯರ್ ಡಿಸೈನ್‌ನಲ್ಲಿ ಬಿ.ಎಸ್ಸಿ. ಪದವಿ. ವೆಬ್‍ಸೈಟ್: iiftbangalore.com
* ಎನಿಮಾಸ್ಟರ್, ಗುಟ್ಟಹಳ್ಳಿ, ಬೆಂಗಳೂರು. ಬ್ಯಾಚಿಲರ್ ಆಫ್ ವಿಶುವಲ್ ಆರ್ಟ್ಸ್ ಇನ್ ಇಂಟೀರಿಯರ್ & ಸ್ಪೇಶಿಯಲ್ ಡಿಸೈನ್.
* ಮೈಸೂರು ಇಂಟೀರಿಯರ್ಸ್ & ಡಿಸೈನ್ಸ್ ಅಕಾಡೆಮಿ, ಕುವೆಂಪುನಗರ, ಮೈಸೂರು. ಇಂಟೀರಿಯರ್ ಡಿಸೈನ್‌ನಲ್ಲಿ ಬಿ.ಎಸ್ಸಿ. ಮತ್ತು ಸಣ್ಣ ಅವಧಿಯ ಕೋರ್ಸ್‌ಗಳು. ವೆಬ್‍ಸೈಟ್: animaster.com
ಜ್ಯುವೆಲ್ಲರಿ ಡಿಸೈನ್: ಚಿನ್ನದ ಚೆಂದದ ಲೋಕ 
ಆಭರಣ ಮಳಿಗೆಗಳೂ, ಒಡವೆಗಳ ಖರೀದಿದಾರರೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದಾರೆ. ಅಂದರೆ ಹೊಸ ವಿನ್ಯಾಸಗಳನ್ನು ಸೃಜಿಸುವವರೂ ಮಾರುಕಟ್ಟೆಗೆ ಪರಿಚಯಿಸುವವರೂ ದೊಡ್ಡ ಸಂಖ್ಯೆಯಲ್ಲಿ ಬೇಕಾಗಿದ್ದಾರೆ ಎಂದರ್ಥ. ಆಭರಣ ವಿನ್ಯಾಸದಲ್ಲಿ ಡಿಪ್ಲೊಮಾ ಮತ್ತು ಪದವಿ ನೀಡುವ ಹತ್ತಾರು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ವಿವರಗಳಿಗೆ ನೋಡಿ: goo.gl/Vswq5n, goo.gl/7xuWFp
* ವೋಗ್ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಷನ್ ಟೆಕ್ನಾಲಜಿ, ರಿಚ್ಮಂಡ್ ಸರ್ಕಲ್, ಬೆಂಗಳೂರು. ಮಾಹಿತಿಗೆ: voguefashioninstitute.com
* ಜೆಡಿ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಶನ್ ಟೆಕ್ನಾಲಜಿ, ಬೆಂಗಳೂರು (ಜಯನಗರ, ಇಂದಿರಾನಗರ, ಲ್ಯಾವೆಲ್ಲೆ ರಸ್ತೆ, ಯಲಹಂಕ ಕೇಂದ್ರಗಳಿವೆ). ಮಾಹಿತಿಗೆ: jdinstitute.com
* ಸ್ವರ್ಣ ಇನ್‌ಸ್ಟಿಟ್ಯೂಟ್‌ ಆಫ್ ಜ್ಯುವೆಲ್ಲರಿ ಡಿಸೈನಿಂಗ್, 7ನೇ ಬ್ಲಾಕ್ (ಪಶ್ಚಿಮ), ಜಯನಗರ, ಬೆಂಗಳೂರು. ಮಾಹಿತಿಗೆ: swarnaacademy.co.in
* ಡ್ರೀಮ್‌ಜೋನ್ (ಮೈಸೂರು, ಮಂಗಳೂರು ಹಾಗೂ ಬೆಂಗಳೂರಿನ ಇಂದಿರಾನಗರ, ಬಸವೇಶ್ವರನಗರ, ಸದಾಶಿವನಗರ ಮುಂತಾದ ಕಡೆ ಕೇಂದ್ರಗಳಿವೆ). ಮಾಹಿತಿಗೆ: dreamzone.co.in
ರುಚಿಮೀಮಾಂಸೆ: ಪಾಕವಿದ್ಯೆಗೂ ಪದವಿ
ಆತಿಥ್ಯವೇ ಉದ್ಯಮವಾಗಿ ಬೆಳೆದಿರುವ ಕಾಲವಿದು. ಹೀಗಾಗಿ ಹೋಟೆಲ್ ಮ್ಯಾನೇಜ್‍ಮೆಂಟಿನಿಂದಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಪಾಕಶಾಸ್ತ್ರದಲ್ಲೇ ಪದವಿ ನೀಡುವ ಪದ್ಧತಿ ಜನಪ್ರಿಯವಾಗುತ್ತಿದೆ. ಕ್ಯುಲಿನರಿ ಆರ್ಟ್ಸ್‌ನಲ್ಲಿ ಡಿಪ್ಲೊಮಾ ಹಾಗೂ ಬಿ.ವೋಕ್ ಕೋರ್ಸ್‌ಗಳನ್ನು ಮಾಡುವುದಕ್ಕೆ ನಗರಗಳಲ್ಲಿ ಹೇರಳ ಅವಕಾಶಗಳಿವೆ. ವಿವರಗಳಿಗೆ bangaloreculinaryacademy.com, studyask.com ಜಾಲತಾಣಗಳನ್ನು ನೋಡಿ.
* ಎಎಸ್‌ಕೆ ಇನ್‌ಸ್ಟಿಟ್ಯೂಟ್‌ ಆಫ್ ಹಾಸ್ಪಿಟಾಲಿಟಿ ಮ್ಯಾನೇಜ್‍ಮೆಂಟ್ & ಕ್ಯುಲಿನರಿ ಆರ್ಟ್ಸ್, ಸಿಂಗಸಂದ್ರ, ಬೆಂಗಳೂರು. ಪಾಕಕಲೆ, ಆತಿಥ್ಯ ನಿರ್ವಹಣೆ ಮತ್ತು ಹೊಟೇಲ್ ಆಡಳಿತದಲ್ಲಿ ಡಿಪ್ಲೊಮಾ ಮತ್ತು ಪದವಿ ಕೋರ್ಸುಗಳು. ಮಾಹಿತಿಗೆ: studyask.com
* ಬೆಂಗಳೂರು ಕ್ಯುಲಿನರಿ ಅಕಾಡೆಮಿ, ಕೆಂಪಾಪುರ, ಭುವನೇಶ್ವರಿನಗರ, ಬೆಂಗಳೂರು. ಪಾಕಶಾಸ್ತ್ರ ಮತ್ತು ಆಹಾರ ತಯಾರಿ, ಹೊಟೇಲ್ ಮ್ಯಾನೇಜ್‍ಮೆಂಟಿನಲ್ಲಿ ಡಿಪ್ಲೊಮಾ ಕೋರ್ಸ್‌ಗಳು. ಮಾಹಿತಿಗೆ: bangaloreculinaryacademy.com
* ಎಂ.ಎಸ್. ರಾಮಯ್ಯ ಯುನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್, ಎಂಎಸ್‌ಆರ್ ನಗರ, ಬೆಂಗಳೂರು. ಕ್ಯುಲಿನರಿ ಆಪರೇಷನ್ಸ್‌ನಲ್ಲಿ ಬಿ.ವೋಕ್ ಪದವಿ. ಮಾಹಿತಿಗೆ: msruas.ac.in
* ಮಣಿಪಾಲ ವಿಶ್ವವಿದ್ಯಾಲಯ, ಮಣಿಪಾಲ. ಪಾಕಕಲೆಯಲ್ಲಿ ಬಿಎ ಪದವಿ ಹಾಗೂ ಹೋಟೆಲ್ ನಿರ್ವಹಣೆಯಲ್ಲಿ ಬಿಎಚ್‌ಎಂ ಪದವಿ.  ಮಾಹಿತಿಗೆ: manipal.edu/mu.html
* ಕರಾವಳಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್ (karavalicollege.com/?page_id=1119) ಹಾಗೂ ಶ್ರೀದೇವಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್, ಮಂಗಳೂರು (hm.sdc.ac.in). ಹೋಟೆಲ್ ಮ್ಯಾನೇಜ್‍ಮೆಂಟ್‍ನಲ್ಲಿ ಡಿಪ್ಲೊಮಾ ಮತ್ತು ಡಿಗ್ರಿ ಕೋರ್ಸ್‌ಗಳು.
ಅನಿಮೇಷನ್/ ಮಲ್ಟಿಮೀಡಿಯ/ ಗ್ರಾಫಿಕ್ಸ್ ಡಿಸೈನ್: 
ಅನಿಮೇಷನ್ ಆಧಾರಿತ ಸಿನಿಮಾ ಹಾಗೂ ಟೀವಿ ಕಾರ್ಯಕ್ರಮಗಳಿಗೆ ನಮ್ಮಲ್ಲೇ ಅಪಾರ ಬೇಡಿಕೆಯಿದೆ. ಜೊತೆಗೆ, ಅನೇಕ ದೇಶಗಳು ಅನಿಮೇಶನ್‌ಗಾಗಿ ಭಾರತವನ್ನು ಅವಲಂಬಿಸಿವೆ. ಅನಿಮೇಷನ್, ಮಲ್ಟಿಮೀಡಿಯಾ, ಗ್ರಾಫಿಕ್ಸ್ ಡಿಸೈನಿಂಗ್‌ನಲ್ಲಿ ಪದವಿ ಪಡೆಯುವವರಿಗೆ ಹೇರಳ ಅವಕಾಶಗಳಿವೆ: ವಿವರಗಳಿಗೆ arena-multimedia.com ಮತ್ತು maacindia.com ಜಾಲತಾಣಗಳನ್ನು ನೋಡಿ.
* ಅನಿಮಾಸ್ಟರ್, ಗುಟ್ಟಹಳ್ಳಿ, ಬೆಂಗಳೂರು. ಅನಿಮೇಷನ್ & ಮಲ್ಟಿಮೀಡಿಯ ಡಿಸೈನ್‌ನಲ್ಲಿ ಬಿವಿಎ ಪದವಿ. ಮಾಹಿತಿಗೆ: animaster.com
* ಅರೆನಾ ಅನಿಮೇಷನ್, ಬೆಂಗಳೂರು. ರಾಜ್ಯದ ಸುಮಾರು 20 ಕಡೆ ತರಬೇತಿ ಕೇಂದ್ರಗಳಿವೆ. ಅನಿಮೇಷನ್-ಮಲ್ಟಿಮೀಡಿಯ ಸಂಬಂಧಿಸಿದಂತೆ ಪದವಿ ಹಾಗೂ ಅಲ್ಪಾವಧಿಯ ಕೋರ್ಸ್‌ಗಳು. ಮಾಹಿತಿಗೆ: arena-multimedia.com/arena-centre-karnataka.aspx
* ಮಾಯಾ ಅಕಾಡೆಮಿ ಆಫ್ ಅಡ್ವಾನ್ಸ್‌ಡ್ ಸಿನಿಮಾಟಿಕ್ಸ್ (ಮ್ಯಾಕ್), ಬೆಂಗಳೂರು. ಕತ್ರಿಗುಪ್ಪೆ, ಮಲ್ಲೇಶ್ವರಂ, ಜಯನಗರ ಸೇರಿದಂತೆ ಬೆಂಗಳೂರಿನ ಹಲವೆಡೆ ಹಾಗೂ ಮಂಗಳೂರು, ಮೈಸೂರುಗಳಲ್ಲಿ ಕೇಂದ್ರಗಳಿವೆ. 3ಡಿ ಅನಿಮೇಷನ್, ವಿಎಫ್‌ಎಕ್ಸ್, ಮಲ್ಟಿಮೀಡಿಯ & ಡಿಸೈನ್ ಸಂಬಂಧಿಸಿದ ಕೋರ್ಸ್‌ಗಳು. ಮಾಹಿತಿಗೆ: maacindia.com
ಮಾಧ್ಯಮ ಜಗತ್ತು!: 
ಪತ್ರಿಕೆ, ಟಿ.ವಿ.ಯಂತಹ ಸಾಂಪ್ರದಾಯಿಕ ಮಾಧ್ಯಮಗಳ ಜೊತೆಗೆ, ಅಂತರ್ಜಾಲ, ಸಿನಿಮಾ, ಜಾಹೀರಾತು, ಸಾರ್ವಜನಿಕ ಸಂಪರ್ಕ ಕ್ಷೇತ್ರಗಳು ವಿಸ್ತಾರವಾಗಿ ಬೆಳೆದಿರುವುದರಿಂದ ಪತ್ರಿಕೋದ್ಯಮ/ ಮಾಧ್ಯಮ ಅಧ್ಯಯನದಲ್ಲಿ ಒಳ್ಳೆಯ ತರಬೇತಿ ಪಡೆದವರಿಗೆ ಬೇಡಿಕೆಯಿದೆ. ವಿವರಗಳಿಗೆ goo.gl/Blcz5N ಮತ್ತು iijnm.org ಜಾಲತಾಣಗಳನ್ನು ನೋಡಿ.
ಕರ್ನಾಟಕದ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳಿವೆ. ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಜರ್ನಲಿಸಂ & ನ್ಯೂ ಮೀಡಿಯಾದಂತಹ ಖಾಸಗಿ ಸಂಸ್ಥೆಗಳಿವೆ. ಪದವಿ ಹಂತದಲ್ಲಿ ಪತ್ರಿಕೋದ್ಯಮವನ್ನು ಕಲಿಸುವ ಸುಮಾರು 150 ಕಾಲೇಜುಗಳು ಕರ್ನಾಟಕದಲ್ಲಿವೆ.
ಡಿಜಿಟಲ್ ಮಾರ್ಕೆಟಿಂಗ್
ಜಗತ್ತೆಲ್ಲ ಡಿಜಿಟಲ್ ಆಗಿರುವ ಹೊಸ ಕಾಲದಲ್ಲಿ ಸಣ್ಣ-ದೊಡ್ಡ ಉದ್ದಿಮೆಗಳಲ್ಲಿರುವವರೂ ಆನ್‌ಲೈನ್ ತಂತ್ರಜ್ಞಾನ ಅವಲಂಬಿಸದೆ ಬೇರೆ ದಾರಿಯಿಲ್ಲ. ವಿಡಿಯೊ/ಆಡಿಯೊ ಜಾಹೀರಾತುಗಳಿಂದ ತೊಡಗಿ ಇಂಟರ‍್ಯಾಕ್ಟಿವ್ ತಂತ್ರಜ್ಞಾನ, ಮೊಬೈಲ್ ಮಾರ್ಕೆಟಿಂಗ್, ಸರ್ಚ್ ಎಂಜಿನ್ ಮಾರ್ಕೆಟಿಂಗ್, ಸಾಮಾಜಿಕ ಮಾಧ್ಯಮಗಳ ಬಳಕೆ, ಇ-ಕಾಮರ್ಸ್, ಇ-ಮೇಲ್ ಮಾರ್ಕೆಟಿಂಗ್, ವೆಬ್‌ ಡಿಸೈನಿಂಗ್, ಕಂಟೆಂಟ್ ಮ್ಯಾನೇಜ್‍ಮೆಂಟ್ ಇತ್ಯಾದಿಗಳು ಇಂದು ಅನಿವಾರ್ಯವಾಗಿವೆ. ಇದಕ್ಕೆಂದೇ ಹಲವು ಕೋರ್ಸ್‌ಗಳೂ ಬಂದಿವೆ. ವಿವರಗಳಿಗೆ: digitalacademy360.com ಮತ್ತು goo.gl/hHGmis ಜಾಲತಾಣಗಳನ್ನು ನೋಡಿ.
* ಡಿಜಿಟಲ್ ಅಕಾಡೆಮಿ 360 - ಬೆಂಗಳೂರಿನಲ್ಲಿ ಜಯನಗರ, ಇಂದಿರಾನಗರ, ಮಲ್ಲೇಶ್ವರಂ ಮತ್ತಿತರ ಕಡೆ ಕೇಂದ್ರಗಳಿವೆ. ವಿವಿಧ ಬಗೆಯ ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಟ್ ಕೋರ್ಸುಗಳು. ಮಾಹಿತಿಗೆ: digitalacademy360.com
* ಇಂಟರ್‌ನೆಟ್‌ & ಮೊಬೈಲ್ ರಿಸರ್ಚ್ ಇನ್‍ಸ್ಟಿಟ್ಯೂಟ್, ಎಂ.ಜಿ. ರಸ್ತೆ, ಬೆಂಗಳೂರು. ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಡಿಜಿಟಲ್ ಅನಾಲಿಟಿಕ್ಸ್ ಕೋರ್ಸ್‌ಗಳು. ಮಾಹಿತಿಗೆ: imri.in
* ಡಿಜಿಟಲ್ ಲವ್, ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು. ಡಿಜಿಟಲ್ ಮಾರ್ಕೆಟಿಂಗ್ ತರಬೇತಿ. ಮಾಹಿತಿಗೆ: digitallove.in