28-11-2017ರ 'ಉದಯವಾಣಿ'ಯಲ್ಲಿ ಪ್ರಕಟವಾದ ಲೇಖನ
'ನಿದ್ದೆ ಹತ್ತಿರ ಸುಳಿಯುತ್ತಿಲ್ಲ; ಊಟ ತಿಂಡಿ ರುಚಿಸುತ್ತಿಲ್ಲ; ಮನದೊಳಗೆ ಅದೇನೋ ಆತಂಕ. ದೇವರೇ, ನಾನು ಪ್ರೀತಿಯಲ್ಲಿ ಬಿದ್ದಿದ್ದೀನಾ?'
'ಮಂಕೇ ಅದು ಪ್ರೀತಿಯಲ್ಲ, ಎಕ್ಸಾಂ ಫಿಯರು.'
ಹೌದು, ಜಗತ್ತಿನ ಸಕಲ ಚರಾಚರ ವಸ್ತುಗಳನ್ನೂ ವರ್ಷಕ್ಕೆರಡು ಬಾರಿ ಕಾಡುವ ಅತಿದೊಡ್ಡ ಭಯಕ್ಕೆ ಎಕ್ಸಾಂ ಫಿಯರೆಂದು ಹೆಸರು. ಇಡೀ ಸೆಮಿಸ್ಟರಿನಲ್ಲಿ ಆದ ಪಾಠಗಳನ್ನು ಒಂದೇ ರಾತ್ರಿಯಲ್ಲಿ ಓದುವುದಕ್ಕೆ ತೊಡಗಿ ಅದರ ತುದಿಮೊದಲು ಒಂದೂ ಆರ್ಥವಾಗದೆ ಇನ್ನು ಭೂಮಿಯ ಮೇಲಿನ ಯಾವ ದೇವರೂ ತನ್ನನ್ನು ಕಾಪಾಡನೆಂದು ಬ್ರಾಹ್ಮೀ ಮುಹೂರ್ತದಲ್ಲಿ ಅರ್ಥವಾದಾಗ ಈ ಭಯದ ಜೊತೆಗೆ ಚಳಿಜ್ವರವೂ ಕಾಡುವುದುಂಟು.
ಅತ್ತ ಎಚ್ಚರವೂ ಅಲ್ಲದ ಇತ್ತ ನಿದ್ದೆಯೂ ಅಲ್ಲದ ಬೆಳ್ಳಂಬೆಳಗ್ಗಿನ ಅರೆಪ್ರಜ್ಞಾವಸ್ಥೆಯ ನಡುವೆ ಸುತ್ತಲೂ ಭೋರೆಂದು ಮಹಾಮಳೆ ಸುರಿದಂತೆ, ಅಚಾನಕ್ ಪ್ರವಾಹಕ್ಕೆ ಪ್ರಶ್ನೆಪತ್ರಿಕೆಯ ಬಂಡಲ್‌ಗಳು ಕೊಚ್ಚಿಹೋದಂತೆ, ಪರೀಕ್ಷೆಗಳೆಲ್ಲ ಮೂರು ದಿನದ ಮಟ್ಟಿಗೆ ಮುಂದೂಡಲ್ಪಟ್ಟಿವೆ ಎಂಬ ಸಿಹಿಸುದ್ದಿ ವಾಟ್ಸಾಪಿನಲ್ಲಿ ತೇಲಿಬಂದಂತೆ ಕನಸುಗಳು ಬೀಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಆದರೆ ನಿದ್ದೆಯ ಮಂಪರಿನೊಂದಿಗೆ ಕನಸೂ ಹಾರಿಹೋದಾಗ ಎಂತೆಂಥದೋ ಬ್ರೇಕಿಂಗ್ ನ್ಯೂಸ್ ಕೊಡುವ ಟಿವಿಗಳು ಕಡೇ ಪಕ್ಷ ಎಲ್ಲೋ ಪ್ರಶ್ನೆಪತ್ರಿಕೆ ಲೀಕ್ ಆಗಿದೆ, ಪರೀಕ್ಷೆಯನ್ನು ಮುಂದೂಡಲಾಗಿದೆ ಎಂಬ ಫ್ಲಾಶ್ ನ್ಯೂಸನ್ನಾದರೂ ಕೊಡಬಾರದೇ ಎಂದು ಅನ್ನಿಸುವುದುಂಟು.
ಛೇ! ತಿಂಗಳಿಗೊಮ್ಮೆಯಾದರೂ ಪುಸ್ತಕಗಳನ್ನು ತಿರುವಿ ಹಾಕಿರುತ್ತಿದ್ದರೆ ಈಗ ಇಷ್ಟೊಂದು ಟೆನ್ಷನ್ ತೆಗೆದುಕೊಳ್ಳೋ ಪರಿಸ್ಥಿತಿ ಬರುತ್ತಿರಲಿಲ್ಲ. ಹೋಗಲಿ ಹತ್ತು ದಿನದಿಂದ ರೀಡಿಂಗ್ ಹಾಲಿಡೇ ಇರುವಾಗಲಾದರೂ ಒಂದಿಷ್ಟು ಸೀರಿಯಸ್ ಆಗಿ ಓದಿರುತ್ತಿದ್ದರೆ ಕೊಂಚ ನಿರಾಳವಾಗುತ್ತಿತ್ತು. ಯೆಸ್, ಇದೇ ಕೊನೆ, ಇನ್ನು ಮುಂದೆ ಹೀಗಾಗಕೂಡದು. ಮುಂದಿನ ಸೆಮಿಸ್ಟರಿನಲ್ಲಿ ರ‍್ಯಾಂಕ್ ಸ್ಟೂಡೆಂಟ್ ರೀತಿಯಲ್ಲಿ ಓದಬೇಕು ಎಂದು ಇಂತಹ ಚಳಿಜ್ವರದ ನಡುವೆಯೂ ಪ್ರತಿಜ್ಞೆ ಮಾಡುವುದುಂಟು. ಇದೊಂಥರಾ ನ್ಯೂ ಇಯರ್ ರೆಸೊಲ್ಯೂಷನ್ ಇದ್ದ ಹಾಗೆ. ಈ ಪತ್ರಿಜ್ಞೆ ಮತ್ತೆ ನೆನಪಿಗೆ ಬರುವುದು ಮುಂದಿನ ಸೆಮಿಸ್ಟರ್ ಪರೀಕ್ಷೆಗಳು ಆರಂಭವಾದ ಮೇಲೆಯೇ.
ಇಂತಿಪ್ಪ ಗಡಿಬಿಡಿಯ ನಡುವೆ ಪರೀಕ್ಷಾ ಕೇಂದ್ರದತ್ತ ಹೊರಟಾಗ ಎಂದೂ ತಪ್ಪದ ಬಸ್ ಅಂದು ತಪ್ಪಿಸಿಕೊಳ್ಳುವುದುಂಟು. ಬಸ್ ಮಿಸ್ಸಾಗಿದೆ ಎಂದರೆ ಹಾಲ್ ಟಿಕೇಟು, ಐಡಿ ಕಾರ್ಡು, ಕೊನೆಗೆ ಬರೆಯಬೇಕಾಗಿರುವ ಪೆನ್ನೂ ಮನೆಯಲ್ಲೇ ಉಳಿದುಬಿಟ್ಟಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಪರೀಕ್ಷೆ ಬರೆಯಬೇಕಾಗಿರುವವನು ತನ್ನನ್ನೇ ತಾನು ಮರೆತಿರುವಾಗ ಹಾಲ್ ಟಿಕೇಟಿನಂತಹ ಕ್ಷುಲ್ಲಕ ವಸ್ತುಗಳು ಮರೆತುಹೋಗುವುದು ವಿಶೇಷವಲ್ಲ.
ಅಂತೂ ಪರೀಕ್ಷಾ ಮುಖ್ಯಸ್ಥರ ಕೈಕಾಲು ಹಿಡಿದು ಪರೀಕ್ಷೆ ಬರೆಯುವುದಕ್ಕೆ ಅನುಮತಿ ಪಡೆದು ಎಕ್ಸಾಂ ಹಾಲ್ ಹುಡುಕಿ ಹೊರಟರೆ ಕಣ್ಣೆದುರೇ ಇರುವ ಹಾಲ್ ಕಾಣಿಸದೆ ಈ ಹಾಲಿನಿಂದ ಆ ಹಾಲಿಗೆ, ಆ ಹಾಲಿನಿಂದ ಈ ಹಾಲಿಗೆ ಅಲೆದಾಡುತ್ತಾ ಮತ್ತೆ ಹತ್ತು ನಿಮಿಷ ಕಳೆದುಹೋಗಿರುತ್ತದೆ. ಅಷ್ಟರಲ್ಲಿ ಪ್ರಶ್ನೆಪತ್ರಿಕೆಯೆಂಬ ಭಯಾನಕ ವಸ್ತು ಅದಾಗಲೇ ಎಲ್ಲರ ಕೈಯನ್ನೂ ಅಲಂಕರಿಸಿರುತ್ತದೆ. ಏದುಸಿರು ಬಿಡುತ್ತಾ ಅದನ್ನೂ ಪಡೆದುಕೊಂಡು ಸ್ವಸ್ಥಾನದಲ್ಲಿ ಕುಕ್ಕರಿಸಿ ಪ್ರಶ್ನೆಪತ್ರಿಕೆಯ ಮೇಲೆ ಕಣ್ಣಾಡಿಸಿದರೆ ಮುಂದಕ್ಕೆ ಏನೂ ಕಾಣಲೊಲ್ಲದು. ಸುತ್ತಲೂ ಕತ್ತಲು. ಅದ್ಯಾವ ಭೂಪ ಕ್ಷೆಶ್ಚನ್ ಪೇಪರ್ ತಯಾರಿಸಿದ್ದಾನೋ? ತಾನು ರಾತ್ರಿಯಿಡೀ ಓದಿದ್ದಕ್ಕೂ ಪ್ರಶ್ನೆಪತ್ರಿಕೆಯಲ್ಲಿರುವುದಕ್ಕೂ ಒಂದಿನಿತೂ ತಾಳಮೇಳ ಇಲ್ಲ. ಕುಳಿತಲ್ಲೇ ಭೂಕಂಪ ಸಂಭವಿಸಿ ಭೂಮಿ ಬಾಯ್ದೆರೆದು ತನ್ನನ್ನು ನುಂಗಿಬಿಡಬಾರದೇ ಎಂದು ಆ ಕ್ಷಣ ಅನ್ನಿಸುವುದೂ ಉಂಟು.
'ಯಾಕೋ ತಮ್ಮಾ, ನೀರು ಬೇಕೇನೋ?’ ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕನಾಗಿ ನಿಂತಿರುವ ನಾನು ಅಲ್ಲಿಯವರೆಗಿನ ಸಮಸ್ತ ವಿದ್ಯಮಾನಗಳನ್ನೆಲ್ಲ ಊಹಿಸಿಕೊಂಡು ಆತನನ್ನು ಕೇಳುತ್ತೇನೆ. ಗಟಗಟನೆ ಒಂದು ಲೀಟರ್ ನೀರು ಕುಡಿದ ಅವನಿಗೆ ತಾನೆಲ್ಲಿದ್ದೇನೆ ಎಂದು ಅರ್ಥವಾದ ಬಳಿಕ 'ಸುಧಾರಿಸ್ಕೊಳೋ. ಟೆನ್ಷನ್ ಮಾಡ್ಕೋಬೇಡ. ನಿಧಾನವಾಗಿ ಯೋಚಿಸಿ ಬರೆಯೋದಕ್ಕೆ ಶುರುಮಾಡು’ ಎಂದು ಬೆನ್ನುತಟ್ಟುತ್ತೇನೆ.
ಎಕ್ಸಾಂ ಹಾಲ್‌ನಲ್ಲಿ ಪ್ರತಿದಿನ ಇಂತಹ ದೃಶ್ಯಗಳು ಸಾಮಾನ್ಯ. ಪ್ರತೀ ಹಾಲ್‌ನಲ್ಲೂ ಇಂತಹವರು ನಾಲ್ಕೈದು ಮಂದಿಯಾದರೂ ಸಿಗುತ್ತಾರೆ. ನನ್ನ ಮಟ್ಟಿಗಂತೂ ಎಕ್ಸಾಂ ಹಾಲ್ ಒಂದು ಕುತೂಹಲದ ಕೇಂದ್ರ. ನಲ್ವತ್ತು ಮಂದಿ ಪರೀಕ್ಷಾರ್ಥಿಗಳಿದ್ದರೆ ನಲ್ವತ್ತು ಅಧ್ಯಯನದ ವಸ್ತುಗಳಿವೆ ಎಂದೇ ಅರ್ಥ. ಒಬ್ಬೊಬ್ಬರದೂ ಒಂದೊಂದು ಭಾವ, ಒಂದೊಂದು ವರ್ತನೆ. ಅವರನ್ನೆಲ್ಲ ಗಮನಿಸುತ್ತಾ ಮೂರು ಗಂಟೆ ಕಳೆಯುವುದೇ ಒಂದು ಸೊಗಸಾದ ಅನುಭವ.
ಕಣ್ಣುಮುಚ್ಚಿ ಧ್ಯಾನಸ್ಥರಾಗಿರುವವರು ಒಂದಷ್ಟು ಮಂದಿಯಾದರೆ ಕೂದಲೇ ಕಿತ್ತುಹೋಗುವಂತೆ ತಲೆಕೆರೆದುಕೊಳ್ಳುವವರು ಇನ್ನೊಂದಷ್ಟು ಮಂದಿ. ಪ್ರಪಂಚದಲ್ಲಿ ಅತಿಹೆಚ್ಚು ಉಗುರು ತಿನ್ನುವ ಜೀವಿಗಳನ್ನು ನೋಡಬೇಕಾದರೂ ಎಕ್ಸಾಂ ಹಾಲ್‌ಗೇ ಭೇಟಿ ನೀಡಬೇಕು. ಪ್ರಶ್ನೆಪತ್ರಿಕೆ ವಿತರಣೆಯೆಂಬ ದುರ್ಘಟನೆ ನಡೆದ ಮೊದಲ ಅರ್ಧ ಗಂಟೆಯಲ್ಲಿ ಕನಿಷ್ಟ ಅರ್ಧ ಕೆ.ಜಿ. ಉಗುರಾದರೂ ಅಭ್ಯರ್ಥಿಗಳ ಹೊಟ್ಟೆಯಲ್ಲಿ ಕರಗಿ ಬೆವರಾಗಿ ಈಚೆ ಬರುವುದುಂಟು.
ತಲೆ ಮೇಲೆ ಕೈಹೊತ್ತು ಕುಳಿತವರು, ಡೆಸ್ಕ್ ಮೇಲೆ ಮೊಣಕೈಯೂರಿ ಹಣೆ ನೀವಿಕೊಳ್ಳುವವರು, ಪೆನ್ನಿನ ತುದಿ ಕಚ್ಚಿ ವಿರೂಪಗೊಳಿಸುವವರು, ಅಕ್ಕಪಕ್ಕದಲ್ಲಿ ಇರುವವರು ಏನು ಮಾಡುತ್ತಿದ್ದಾರೆ ಎಂದು ಗಮನಿಸುವುದರಲ್ಲೇ ಕಾಲಕಳೆಯುವವರು, ಎಷ್ಟು ಬರೆದರೂ ಪುಟವೇ ತುಂಬುತ್ತಿಲ್ಲವಲ್ಲ ಎಂದು ಶಪಿಸಿಕೊಳ್ಳುವವರು, ಪಕ್ಕದ ಬೆಂಚಿನಲ್ಲಿ ಕುಳಿತಿರುವ ರ‍್ಯಾಂಕ್ ಸ್ಟೂಡೆಂಟ್ ಮೇಲಿಂದ ಮೇಲೆ ಅಡಿಶನಲ್ ಪೇಪರ್ ತೆಗೆದುಕೊಳ್ಳುವುದನ್ನೇ ಜಗತ್ತಿನ ಒಂಬತ್ತನೇ ಅದ್ಭುತವೆಂಬಂತೆ ಬೆರಗಿನಿಂದ ನೋಡುವವರು, ಕಿಟಕಿಯಾಚೆ ಶೂನ್ಯದತ್ತ ದೃಷ್ಟಿ ನೆಟ್ಟು ಓದಿದ್ದನ್ನು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಾ ಮಣಮಣ ಮಂತ್ರ ಪಠಿಸುವ, ಕಣ್ಣುಕೊಂಕಿಸುವ ಹುಡುಗ ಹುಡುಗಿಯರು, ಪದೇಪದೇ ವಾಚ್ ನೋಡಿಕೊಳ್ಳುತ್ತಾ ಎದ್ದು ಹೋಗಲು ಇನ್ನೆಷ್ಟು ಹೊತ್ತು ಕಾಯಬೇಕು ಎಂದು ಸಂಕಟಪಡುವವರು, 120 ಕಿ.ಮೀ. ಸ್ಪೀಡಿನಲ್ಲಿ ಬರೆಯುತ್ತಿರುವ ಮುಂದಿನ ಬೆಂಚಿನ ಹುಡುಗಿಯ ತಲೆಯೊಳಗೆ ಏನಿರಬಹುದು ಎಂಬ ವಿಸ್ಮಯದಲ್ಲಿ ಕಣ್ಣರಳಿಸಿ ಕುಳಿತವರು... ಪರೀಕ್ಷಾ ಕೊಠಡಿಯಲ್ಲಿ ಹತ್ತೆಂಟು ಬಗೆಯ ಮಂದಿ.
ವಾರೆಗಣ್ಣಿನಲ್ಲಿ ಅಕ್ಕಪಕ್ಕದವರ ಉತ್ತರಪತ್ರಿಕೆಗಳನ್ನು ಗಮನಿಸುವ, ಅಮಾಯಕರಂತೆ ಪೋಸ್ ಕೊಡುತ್ತಾ ಎದುರು ಕುಳಿತವರ ಉತ್ತರಗಳನ್ನು ಹೇಗೆಂದಹಾಗೆ ನಕಲು ಮಾಡುವ, ಮೇಲ್ವಿಚಾರಕರು ಗಮನಿಸಿದರು ಎಂದು ಗೊತ್ತಾದ ಕೂಡಲೇ ಕುತ್ತಿಗೆ ನೆಟಿಗೆ ತೆಗೆಯಲು ಪಕ್ಕಕ್ಕೆ ಕತ್ತು ತಿರುಗಿಸಿದೆ ಎಂಬ ಹಾಗೆ ತಲೆಯಲ್ಲಾಡಿಸುವ ಕಲೆಯಲ್ಲಂತೂ ಅನೇಕ ಪರೀಕ್ಷಾರ್ಥಿಗಳಿಗೆ ನೂರರಲ್ಲಿ ನೂರು ಅಂಕ.
ಹತ್ತು ನಿಮಿಷ ತಡವಾಗಿ ಎಕ್ಸಾಂ ಹಾಲ್‌ಗೆ ಬಂದ ಆಸಾಮಿ ಹತ್ತು ನಿಮಿಷ ಮೊದಲೇ ಎದ್ದು ಹೊರಟಾಗ ಹತ್ತಿರ ಕರೆದು ಸಣ್ಣ ಧ್ವನಿಯಲ್ಲಿ 'ಹೆಂಗಾಯ್ತೋ ಎಕ್ಸಾಂ?’ ಎಂದು ಕೇಳುತ್ತೇನೆ. 'ಅವ್ರು ನಂಗೆ ಗೊತ್ತಿಲ್ಲದ ಪ್ರಶ್ನೆಗಳನ್ನೇ ಕೇಳಿದಾರೆ. ಹಂಗೇ ನಾನೂ ಅವರಿಗೆ ಗೊತ್ತಿಲ್ಲದ ಉತ್ತರಗಳನ್ನೇ ಬರೆದಿದೀನಿ ಸಾರ್’ ಎನ್ನುತ್ತಾ ಆತ ಕ್ಷಣಾರ್ಧದಲ್ಲಿ ಕಾರಿಡಾರ್ ತುದಿಯಲ್ಲಿ ಮಾಯವಾಗಿರುತ್ತಾನೆ.