ಗುರುವಾರ, ಸೆಪ್ಟೆಂಬರ್ 29, 2011

ಅಭಿವೃದ್ಧಿ ಪತ್ರಿಕೋದ್ಯಮ ಎಂಬ ಆಶಾವಾದದ ಬೆಳಕಿಂಡಿ

ನಮ್ಮ ಗ್ರಾಮಭಾರತದ ಪತ್ರಕರ್ತರು ಈ ಬಾರಿಯ ಗಾಂಧೀಜಯಂತಿಯಂದು ಸಂಭ್ರಮಿಸುವುದಕ್ಕೆ ಒಂದು ವಿಶೇಷ ಕಾರಣವಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಾಳೇಪುಣಿ ಎಂಬ ಪುಟ್ಟ ಹಳ್ಳಿಯ ಪತ್ರಕರ್ತ ಗುರುವಪ್ಪ ಎನ್. ಟಿ. ಬಾಳೇಪುಣಿಯವರು ನಾಡಿದ್ದು ಗಾಂಧೀಜಯಂತಿಯ ದಿನ ಸರೋಜಿನಿ ನಾಯ್ಡು ಹೆಸರಲ್ಲಿ ನೀಡಲಾಗುವ ರಾಷ್ಟ್ರಮಟ್ಟದ ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಸ್ವೀಕರಿಸಲಿದ್ದಾರೆ - ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ. ಪ್ರಶಸ್ತಿಯ ಮೊತ್ತ ಎರಡು ಲಕ್ಷ ರೂಪಾಯಿ.


ಪ್ರಶಸ್ತಿಯ ಮೌಲ್ಯ ನಿರ್ಧಾರವಾಗುವುದು ಅದರೊಂದಿಗೆ ಬರುವ ಮೊತ್ತದಿಂದಲ್ಲ, ಬದಲಿಗೆ ಅದನ್ನು ಕೊಡುವವರ ಮತ್ತು ಸ್ವೀಕರಿಸುವವರ ಘನತೆಯಿಂದ ಎಂಬುದು ಅಕ್ಷರಶಃ ನಿಜವಾದರೂ, ಬಾಳೇಪುಣಿಯವರ ಮಟ್ಟಿಗೆ ಅದೊಂದು ದೊಡ್ಡ ಮತ್ತು ಉಲ್ಲೇಖಾರ್ಹ ಮೊತ್ತವೇ. ಬಂಟ್ವಾಳ ತಾಲೂಕಿನ ಇಡ್ಕಿದು ಎಂಬ ಮಾದರಿ ಗ್ರಾಮ ಪಂಚಾಯತ್ ಒಂದರ ಯಶೋಗಾಥೆಯ ಬಗ್ಗೆ ಬಾಳೇಪುಣಿ ’ಹೊಸದಿಗಂತ’ದಲ್ಲಿ ಮಾಡಿದ ವರದಿಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆಯಾದರೂ, ಇದು ಅವರ ಇಪ್ಪತ್ತೈದು ವರ್ಷಗಳ ಅಭಿವೃದ್ಧಿ ಪತ್ರಿಕೋದ್ಯಮದ ಮೌನ ಸಾಧನೆಗೆ ಸಂದ ಗೌರವ ಎಂದು ಅವರನ್ನು ಹತ್ತಿರದಿಂದ ಬಲ್ಲ ಯಾರಾದರೂ ಒಪ್ಪಿಕೊಳ್ಳುವ ಮಾತು. ಇಷ್ಟು ದೀರ್ಘ ಅವಧಿಯ ಸೇವೆಯಲ್ಲಿ ’ತನಗಾಗಿ’ ಏನೂ ಮಾಡಿಕೊಳ್ಳದ, ಇನ್ನೂ ಕಾಲ್ನಡಿಗೆಯಲ್ಲೇ ಗ್ರಾಮಗಳನ್ನು ಸುತ್ತುವ, ಮತ್ತು - ಅವರದೇ ಮಾತಿನಂತೆ - ಸಿಟಿಬಸ್‌ನಲ್ಲೇ ನೇತಾಡಿಕೊಂಡು ಪ್ರಯಾಣಿಸುವ ಒಬ್ಬ ಪತ್ರಕರ್ತನ ಮಟ್ಟಿಗೆ ಪ್ರಶಸ್ತಿಯ ಮೊತ್ತವೂ ಮಹತ್ವದ್ದು ಎಂದರೆ ತಪ್ಪಲ್ಲ.


ಹಾಜಬ್ಬ ಎಂಬ ಸಾಮಾನ್ಯ ಕಿತ್ತಳೆ ವ್ಯಾಪಾರಿಯೊಬ್ಬರು ತನ್ನೂರು ಹರೇಕಳದಲ್ಲಿ ಸದ್ದಿಲ್ಲದೆ ಒಂದು ಹೈಸ್ಕೂಲು ಕಟ್ಟಿ ನೂರಾರು ಹಳ್ಳಿ ಹುಡುಗರ ವಿದ್ಯಾಭ್ಯಾಸಕ್ಕೆ ಕಾರಣವಾದ ಅಸಾಮಾನ್ಯ ಸಂಗತಿ ಬಗ್ಗೆ ಬಾಳೇಪುಣಿಯವರು ’ಹೊಸದಿಗಂತ’ದಲ್ಲಿ ಮಾಡಿದ ವರದಿ ನಾಡಿನ ಗಮನ ಸೆಳೆದಿತ್ತು. ಮುಂದೆ ವಿವಿಧ ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು ಮತ್ತು ಸಂಘಸಂಸ್ಥೆಗಳಿಂದ ಹಾಜಬ್ಬನವರ ಸಾಧನೆಗೆ ಸಾಕಷ್ಟು ಮನ್ನಣೆ ದೊರೆಯಿತು; ಆದರೆ ಹಾಜಬ್ಬ ಅವರನ್ನು ಮೊದಲ ಬಾರಿಗೆ ಎಲೆಮರೆಯಿಂದ ಈಚೆಗೆ ಕರೆತಂದ ಕೀರ್ತಿ ಬಾಳೆಪುಣಿಯವರದ್ದೇ. ಅವರ ಹಳೆಯ ಕಡತಗಳನ್ನು ಬಿಚ್ಚುತ್ತಾ ಹೋದರೆ ಇಂತಹ ಹತ್ತಾರು ನಿದರ್ಶನಗಳು ತೆರೆದುಕೊಳ್ಳುತ್ತವೆ.ಅಂದಹಾಗೆ, ’ದಿ ಹಂಗರ್ ಪ್ರಾಜೆಕ್ಟ್’ ಎಂಬ ಸ್ವಯಂಸೇವಾ ಸಂಸ್ಥೆ ನೀಡುವ ಈ ಸರೋಜಿನಿ ನಾಯ್ಡು ಪ್ರಶಸ್ತಿ ಮಂಗಳೂರಿಗೆ ಎರಡನೆಯ ಬಾರಿಗೆ ಬಂದಿದೆ. ಮೊದಲ ಬಾರಿಗೆ ಬಂದದ್ದು ೨೦೦೯ರಲ್ಲಿ - ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಬ್ಯೂರೋ ಮುಖ್ಯಸ್ಥ ಡಾ. ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಅವರಿಗೆ. ’ಕೊಲ: ದಿ ಓನ್ಲಿ ಮಾಡೆಲ್ ಗ್ರಾಮ ಪಂಚಾಯತ್ ಇನ್ ಅನ್‌ಡಿವೈಡೆಡ್ ದಕ್ಷಿಣ ಕನ್ನಡ’ ಎಂಬ ಅವರ ವರದಿಗೆ ಈ ರಾಷ್ಟ್ರೀಯ ಪುರಸ್ಕಾರ ಲಭಿಸಿತ್ತು.
ಕಳೆದ ೧೪ ವರ್ಷಗಳಿಂದ ಪತ್ರಿಕಾ ವ್ಯವಸಾಯದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ಸೂಕ್ಷ್ಮ ಸಂವೇದನೆಯ ಪತ್ರಕರ್ತ ರೊನಾಲ್ಡ್. ವೃತ್ತಿಪರತೆಯಷ್ಟೇ ಅಕಾಡೆಮಿಕ್ ಶಿಸ್ತನ್ನೂ ಬೆಳೆಸಿಕೊಂಡಿರುವ, ಸಂಶೋಧನೆ ನಡೆಸಿ ಪಿಎಚ್.ಡಿ. ಪದವಿ ಪಡೆದಿರುವ ಅಪರೂಪದ ಪತ್ರಕರ್ತರಲ್ಲಿ ಅವರೂ ಒಬ್ಬರು. ವಿವಿಧ ಶಿಕ್ಷಣ ಸಂಸ್ಥೆಗಳ ಅಧ್ಯಯನ ಮಂಡಳಿಗಳ ಸದಸ್ಯತನ, ವಿದೇಶ ಪ್ರವಾಸ, ಹಳ್ಳಿಗಳ ಸುತ್ತಾಟ - ಇವೆಲ್ಲ ಅವರ ವ್ಯಕ್ತಿತ್ವದ ಮುಖಗಳಾಗಿರುವಂತೆಯೇ ಸರಸ್ವತಿ ಎಂಬ ದಲಿತ ಮಹಿಳೆಯೊಬ್ಬರು ಕೊಲ ಗ್ರಾಮ ಪಂಚಾಯತ್‌ನ ಅಧ್ಯಕ್ಷೆಯಾಗಿ ಅದನ್ನೊಂದು ಮಾದರಿ ಗ್ರಾಮ ಪಂಚಾಯತ್ ಆಗಿ ರೂಪಿಸಿದ ಕಥೆಯನ್ನು ಪತ್ರಿಕೆಯಲ್ಲಿ ತೆರೆದಿಟ್ಟು ಅರ್ಹವಾಗಿಯೇ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾದರು. ಅಂದಹಾಗೆ ಪ್ರಶಸ್ತಿಯೊಂದಿಗೆ ತಮಗೆ ದೊರೆತ ಎರಡು ಲಕ್ಷ ರೂಪಾಯಿಯಲ್ಲಿ ಒಂದು ಲಕ್ಷವನ್ನು ರೊನಾಲ್ಡ್ ದಲಿತರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜನಶಿಕ್ಷಣ ಟ್ರಸ್ಟ್ ಸಂಸ್ಥೆಗೆ ದೇಣಿಗೆಯಾಗಿ ನೀಡಿದ್ದರೆಂಬುದು ಬಹಳ ಮಂದಿಗೆ ಗೊತ್ತಿಲ್ಲ.


ಕಾರ್ಪೋರೇಟ್ ಪತ್ರಿಕೋದ್ಯಮದ ಭರಾಟೆಯಲ್ಲಿ ಜನಪರ ದನಿಗಳು ದಿನೇದಿನೇ ಗೌಣವಾಗುತ್ತಿವೆ ಎಂಬ ಕೊರಗಿನ ನಡುವೆಯೂ ಅಭಿವೃದ್ಧಿ ಪತ್ರಿಕೋದ್ಯಮದ ಈ ಬಗೆಯ ತಾಜಾ ನಿದರ್ಶನಗಳು ಪ್ರಜ್ಞಾವಂತ ಜನತೆಗೆ ಒಂದಷ್ಟು ಹುರುಪನ್ನೂ, ಉತ್ಸಾಹವನ್ನೂ, ಪ್ರೇರಣೆಯನ್ನೂ ನೀಡುತ್ತವೆ ಎಂಬುದು ಸುಳ್ಳಲ್ಲ. ಜಾಹೀರಾತು ವಿಭಾಗವೇ ಸಂಪಾದಕೀಯ ವಿಭಾಗವನ್ನು ಆಳುತ್ತಿರುವ ಇಂದಿನ ಮಾಧ್ಯಮ ಜಗತ್ತಿನ ಬದಲಾದ ಸನ್ನಿವೇಶದಲ್ಲೂ ಇಡ್ಕಿದು-ಕೊಲಗಳನ್ನು, ಅವುಗಳ ಸಾಧನೆಯ ಹಿಂದಿನ ಪ್ರೇರಕ ಶಕ್ತಿಗಳಾದ ದಲಿತ ಮಹಿಳೆಯರನ್ನು ಗುರುತಿಸುವ ಪತ್ರಕರ್ತರು ಇದ್ದಾರೆ ಅಷ್ಟೇ ಅಲ್ಲ, ಅಂತಹ ಪತ್ರಕರ್ತರನ್ನೂ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ ಎಂಬುದು ಒಂದು ಸಣ್ಣ ನಿರಾಳತೆಯನ್ನು ತಂದುಕೊಡುತ್ತದೆ.


೧೯೯೩ರಲ್ಲಿ ’ಟೈಮ್ಸ್ ಆಫ್ ಇಂಡಿಯಾ’ದ ಫೆಲೋಶಿಪ್‌ಗೆ ಅರ್ಜಿ ಹಾಕಿದ ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಅವರನ್ನು ಆ ಸಂಬಂಧ ಪ್ರಶ್ನಿಸಿದ ಸಂದರ್ಶನಾ ಮಂಡಳಿಯ ಸದಸ್ಯರೊಬ್ಬರು ’ನೀವು ಕೊಡಲಿರುವ ಗ್ರಾಮೀಣ ವರದಿಗಳನ್ನು ನಮ್ಮ ಓದುಗರು ಇಷ್ಟಪಡುತ್ತಾರೆಂದು ಏನು ಗ್ಯಾರಂಟಿ?’ ಎಂದು ಕೇಳಿದರಂತೆ. ಅದಕ್ಕೆ ಪ್ರತಿಯಾಗಿ ಸಾಯಿನಾಥ್, ’ನೀವು ನಿಮ್ಮ ಓದುಗರನ್ನು ಎಂದಾದರೂ ಈ ಬಗ್ಗೆ ಕೇಳಿ ನೋಡಿದ್ದೀರಾ?’ ಎಂದು ಮತ್ತೆ ಪ್ರಶ್ನಿಸಿದರಂತೆ. ಕೊನೆಗೂ ಅವರಿಗೆ ಆ ಫೆಲೋಶಿಪ್ ಸಿಕ್ಕಿತು ಮತ್ತು ಅದರ ಫಲವೇ ಅವರ ಜನಪ್ರಿಯ ’ಎವೆರಿಬಡಿ ಲವ್ಸ್ ಎ ಗುಡ್ ಡ್ರೌಟ್’ ಪುಸ್ತಕ. ಭಾರತದ ಏಳೆಂಟು ರಾಜ್ಯಗಳ ಹತ್ತಾರು ಕಡುಬಡತನದ ಜಿಲ್ಲೆಗಳನ್ನು ಸುತ್ತಾಡಿ ಅವರು ಬರೆದ ವರದಿಗಳು ದೊಡ್ಡ ಸಂಚಲನ ಮೂಡಿಸಿದ್ದು ಎಲ್ಲರಿಗೂ ತಿಳಿದಿದೆ. ಪ್ರಸ್ತುತ ’ದಿ ಹಿಂದೂ’ ಪತ್ರಿಕೆಯ ಗ್ರಾಮೀಣ ವಿದ್ಯಮಾನಗಳ ಸಂಪಾದಕರಾಗಿರುವ ಸಾಯಿನಾಥ್ ಈಗಲೂ ತಮ್ಮ ಅಧ್ಯಯನಪೂರ್ಣ ವರದಿಗಳಿಗೆ ಪ್ರಸಿದ್ಧರು.

ಮಾಧ್ಯಮಗಳ ವಾಣಿಜ್ಯೀಕರಣದಿಂದಾಗಿ ಅಭಿವೃದ್ಧಿ ವರದಿಗಾರಿಕೆಯ ಸಾಧ್ಯತೆಗಳು ಕ್ಷೀಣಿಸುತ್ತಿವೆ ಎಂಬ ಮಾತು ನಿಜವೇ ಇರಬಹುದಾದರೂ, ಓದುಗರ ಬೇಕುಬೇಡಗಳನ್ನು ತಾವೇ ನಿರ್ಧರಿಸಿಬಿಡುವ ಮಾಧ್ಯಮಗಳ ಪೂರ್ವಾಗ್ರಹವೂ ಇದಕ್ಕೊಂದು ಕಾರಣ ಎಂಬುದನ್ನೂ ಒಪ್ಪಿಕೊಳ್ಳಬೇಕು. ತಮ್ಮ ಸುತ್ತಲಿನ ಮಿತಿಗಳ ನಡುವೆಯೂ ಅಭಿವೃದ್ಧಿ ಪತ್ರಿಕೋದ್ಯಮವನ್ನು ಬಲಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ಮತ್ತು ಮಾಡುತ್ತಿರುವ ಸಂವೇದನಾಶೀಲ ಪತ್ರಕರ್ತರ ಒಂದು ತಂಡವೂ ಬದುಕಿಕೊಂಡುಬಂದಿದೆ.

ಅಭಿವೃದ್ಧಿ ಪತ್ರಿಕೋದ್ಯಮದ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟದ್ದಲ್ಲದೆ, ಆ ಬಗೆಯ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಲೇ ’ನಮ್ಮೊಳಗಿನ ಬ್ರಹ್ಮಾಂಡ’, ’ಇರುವುದೊಂದೇ ಭೂಮಿ’, ’ಅಭಿವೃದ್ಧಿಯ ಅಂಧಯುಗ’ದಂತಹ ವಿಶಿಷ್ಟ ಕೃತಿಗಳನ್ನು ಪ್ರಕಟಿಸಿದ ’ಪ್ರಜಾವಾಣಿ’ಯ ಸಹ ಸಂಪಾದಕರಾಗಿದ್ದ ನಾಗೇಶ ಹೆಗಡೆ ಸದಾ ನೆನಪಲ್ಲಿ ಉಳಿಯುತ್ತಾರೆ. ವಿಜ್ಞಾನಿಗಳ ಸಂಶೋಧನೆಗಳೆಲ್ಲ ಹೊಲಗಳಿಗೆ ತಲುಪದೆ ಪ್ರಯೋಗಾಲಯಗಳಲ್ಲಿಯೇ ಬಿದ್ದು ಕೊಳೆಯುತ್ತಿರಬೇಕಾದರೆ, ’ಅಡಿಕೆ ಪತ್ರಿಕೆ’ಯೆಂಬ ಕೃಷಿಕರ ಪ್ರಯೋಗಾಲಯವನ್ನು ಹುಟ್ಟುಹಾಕಿದ, ರೈತರ ಕೈಗೆ ಲೇಖನಿ ಕೊಟ್ಟ, ಜಲಸಾಕ್ಷರತೆಯ ಬಗ್ಗೆ ಒಂದು ಬಗೆಯ ಆಂದೋಲನವನ್ನೇ ಸೃಷ್ಟಿಸಿದ ಶ್ರೀಪಡ್ರೆ ಹೊಸ ಭರವಸೆ ಮೂಡಿಸುತ್ತಾರೆ. ’ಉದಯವಾಣಿ’ಯ ಸಂಪಾದಕರಾಗಿ ೧೯೮೦ರ ದಶಕದ ಆದಿಯಲ್ಲೇ ’ಕುಗ್ರಾಮ ಗುರುತಿಸಿ’ ಯೋಜನೆಯ ಮೂಲಕ ಬೆಳ್ತಂಗಡಿ ತಾಲೂಕಿನ ದಿಡುಪೆ ಗ್ರಾಮದಲ್ಲಿ ಅಭ್ಯುದಯದ ಹಣತೆ ಬೆಳಗಿಸಿದ ಈಶ್ವರ ದೈತೋಟ ಈ ಸಾಲಿಗೆ ಸೇರುವ ಇನ್ನೊಂದು ಹೆಸರು. ೧೯೮೪ರಲ್ಲಿ ಆ ಯೋಜನೆ ಸಮಾಪ್ತಿಯಾದ ಮೇಲೆ ಅವರು ಪ್ರಕಟಿಸಿದ ’ದಿ ಎಯ್ಟೀನ್ತ್ ಎಲಿಫೆಂಟ್’ ಪುಸ್ತಕ ಅಭಿವೃದ್ಧಿ ಪತ್ರಿಕೋದ್ಯಮದ ಮಟ್ಟಿಗೆ ಈಗಲೂ ಅತ್ಯಂತ ಸ್ಮರಣೀಯ ದಾಖಲೆ.


ಹಲವು ವರ್ಷ ವೃತ್ತಿನಿರತ ಪತ್ರಕರ್ತರಾಗಿ ಮುಂದೆ ಅಧ್ಯಾಪನದಲ್ಲಿ ತೊಡಗಿಕೊಂಡು, ’ಸಾವಯವ ಕೃಷಿ’, ’ಕಾಂಕ್ರೀಟ್ ಕಾಡಿನ ಪುಟ್ಟ ಕಿಟಕಿ’, ’ನೆಲದವರು’ ಮುಂತಾದ ಕೃತಿಗಳ ಮೂಲಕ ಗುರುತಿಸಿಕೊಂಡ ಡಾ. ನರೇಂದ್ರ ರೈ ದೇರ್ಲ, ಅಭಿವೃದ್ಧಿಪರ ಬರವಣಿಗೆ ಮತ್ತು ಅಂತಹದೇ ಹಾದಿಯಲ್ಲಿ ಮುಂದುವರಿಯುವುದಕ್ಕೆ ಸಹಕಾರಿಯಾಗಿ ಯುವಕರಿಗೆ ಕಾರ್ಯಾಗಾರಗಳ ಆಯೋಜನೆ, ’ಒಡಲ ನೋವಿನ ತೊಟ್ಟಿಲ ಹಾಡು’, ’ಮೋನೋಕಲ್ಚರ್ ಮಹಾಯಾನ’, ’ಕಾನ್‌ಚಿಟ್ಟೆ’ಯಂತಹ ಪುಸ್ತಗಳನ್ನು ಪ್ರಕಟಿಸಿರುವ ಶಿವಾನಂದ ಕಳವೆ, ಬೇರೆಬೇರೆ ರೀತಿಯಾಗಿ ಈ ಬಗೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸತೀಶ್ ಚಪ್ಪರಿಕೆ, ಅನಿತಾ ಪೈಲೂರು, ಆನಂದತೀರ್ಥಪ್ಯಾಟಿ, ಪ. ರಾಮಕೃಷ್ಣ ಶಾಸ್ತ್ರಿ, ಬೇಳೂರು ಸುದರ್ಶನ, ನಾ. ಕಾರಂತ ಪೆರಾಜೆ, ಪೂರ್ಣಪ್ರಜ್ಞ ಬೇಳೂರು ಮುಂತಾದವರು ಕನ್ನಡದ ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸುತ್ತಾರೆ. ಕೃಷಿ ಮಾಧ್ಯಮ ಕೇಂದ್ರ, ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಮುಂತಾದ ಸಂಸ್ಥೆಗಳು ಸ್ವಇಚ್ಛೆಯಿಂದ ಅಭಿವೃದ್ಧಿ ಪತ್ರಿಕೋದ್ಯಮದ ಜಾಡನ್ನು ಗಟ್ಟಿಗೊಳಿಸುವತ್ತ ಶಿಕ್ಷಣ ಹಾಗೂ ತರಬೇತಿಗಳಲ್ಲಿ ತೊಡಗಿಕೊಂಡಿರುವುದೂ ಒಂದು ಆಶಾದಾಯಕ ಅಂಶವೇ.


ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ನೀಡುವ ಮುರುಘಾಶ್ರೀ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಬೆಂಗಳೂರಿನ ಕಮ್ಯುನಿಕೇಶನ್ ಫಾರ್ ಡೆವಲಪ್‌ಮೆಂಟ್ ಅಂಡ್ ಲರ್ನಿಂಗ್ ಸಂಸ್ಥೆ ನೀಡುವ ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಹಿರಿಯ ಪತ್ರಕರ್ತ ದಿ ಪ. ಗೋಪಾಲಕೃಷ್ಣ ಅವರ ಹೆಸರಲ್ಲಿ ನೀಡುವ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ, ರಾಜ್ಯ ಸರ್ಕಾರ ನೀಡುವ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳು ಹೊಸಬಗೆಯ ಪ್ರಯತ್ನಗಳಿಗೆ ಪ್ರೋತ್ಸಾಹ ಕೊಡುವಲ್ಲಿ ಸಫಲವಾದರೆ ಅವೂ ಅಭಿನಂದನೀಯವೇ.


ಆದರೂ, ಒಟ್ಟು ಪತ್ರಿಕೋದ್ಯಮದ ಸನ್ನಿವೇಶ ಗಮನಿಸಿದಾಗ ಅಭಿವೃದ್ಧಿ ವರದಿಗಾರಿಕೆಗೆ ದೊರೆಯುವ ಅವಕಾಶ ತೀರಾ ಕಡಿಮೆ ಎಂಬುದು ಈಗಲೂ ಸತ್ಯ. ೨೦೧೦ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ದೇಶದ ಐದು ರಾಜ್ಯಗಳಿಂದ ಆಯ್ದ ೧೦ ಪ್ರಮುಖ ಪತ್ರಿಕೆಗಳನ್ನಿಟ್ಟುಕೊಂಡು ಸಂಶೋಧನ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ಪರಿಸರ ವಿಚಾರಗಳಿಗೆ ದೊರೆತ ಸ್ಥಳಾವಕಾಶ ಶೇ. ೩ ಮತ್ತು ಕೃಷಿಗೆ ದೊರೆತ ಅವಕಾಶ ಶೇ. ೦.೯. ಆದರೆ ರಾಜಕೀಯಕ್ಕೆ ದೊರೆತ ಸ್ಥಳಾವಕಾಶ ಶೇ. ೧೫. ೭ ಮತ್ತು ವಾಣಿಜ್ಯ ವಿಷಯಗಳಿಗೆ ದೊರೆತ ಅವಕಾಶ ಶೇ. ೧೩.೬. ಅಭಿವೃದ್ಧಿ ವರದಿಗಾರಿಕೆಗೆ ನಮ್ಮಲ್ಲಿರುವ ಅವಕಾಶ ಏನೆಂಬುದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ. ಆದಾಗ್ಯೂ ಎಲ್ಲ ಒತ್ತಡ ಅನಿವಾರ್ಯತೆಗಳ ನಡುವೆಯೂ ಕನ್ನಡ ಪತ್ರಿಕೋದ್ಯಮದಲ್ಲಿ ಒಂದು ಆಶಾವಾದದ ಬೆಳಕಿಂಡಿ ಇನ್ನೂ ತೆರೆದುಕೊಂಡಿಯೆಂದಾದರೆ ಅಂತಹ ಹತ್ತಾರು ಕಿಂಡಿಗಳು ಇನ್ನೂ ತೆರೆದುಕೊಳ್ಳಲಿ ಎಂಬುದೇ ಸದ್ಯದ ಆಶಯ.(ಇದು ೨೯-೦೯-೨೦೧೧ರ ’ಹೊಸದಿಗಂತ’ದಲ್ಲಿ ಪ್ರಕಟವಾದ ಬರಹ. ಮೂಲ ಪುಟವನ್ನು ಈ ಲಿಂಕಿನ ಮೂಲಕ ನೋಡಬಹುದು. ಬೇಳೂರು ಸುದರ್ಶನ ಅವರೂ ತಮ್ಮ ಮಿತ್ರಮಾಧ್ಯಮ ಬ್ಲಾಗಿನಲ್ಲಿ ಬಾಳೇಪುಣಿಯವರ ಬಗ್ಗೆ ಒಂದು ಒಳ್ಳೆಯ ಲೇಖನ ಬರೆದಿದ್ದಾರೆ. ಅದನ್ನು ಕೂಡ ಓದಿ.)