ಮಂಗಳವಾರ, ಮೇ 13, 2014

ರಾಷ್ಟ್ರೀಯ ವಿಚಾರಸಂಕಿರಣಗಳೆಂಬ ವಿನೋದ ನಾಟಕಗಳು

(ಮೇ 11, 2014ರ 'ವಿಜಯವಾಣಿ'ಯ ಸಾಪ್ತಾಹಿಕ ಸಂಚಿಕೆ 'ವಿಜಯವಿಹಾರ'ದಲ್ಲಿ ಈ ಲೇಖನ 'ವಿನೋದ ನಾಟಕಗಳು' ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ. "ಸೆಮಿ'ನಾರು' ಎಂಬ ವ್ಯಾಪಾರ "- ಎಂಬ ಉಪಶೀರ್ಷಿಕೆಯ ನಂತರದ ಭಾಗ ಮಾತ್ರ ಅಪ್ರಕಟಿತ).

ರಾಷ್ಟ್ರೀಯ ವಿಚಾರಸಂಕಿರಣವೊಂದು ನಡೆಯುವುದರಲ್ಲಿತ್ತು. 'ಸೆಮಿನಾರ್‌ಗೆ ನೀವು ಬರ್ತಿದ್ದೀರಾ ಸಾರ್?’ ಎಂದು ಹಿರಿಯ ಪ್ರಾಧ್ಯಾಪಕರೊಬ್ಬರನ್ನು ಕೇಳಿದೆ. ಅವರು ಮೈಮೇಲೆ ಹಾವು ಬೀಳಿಸಿಕೊಂಡವರಂತೆ ಹೌಹಾರಿ 'ಅಯ್ಯಯ್ಯೋ... ನನ್ನ ಮೇಲೆ ನಿನಗೇನಾದರೂ ಹಗೆಯಿದ್ದರೆ ಬೇರೆ ರೀತಿ ತೀರಿಸಿಕೋ ಪುಣ್ಯಾತ್ಮ... ಸೆಮಿನಾರಿಗೆ ಮಾತ್ರ ಕರೀಬೇಡ’ ಎಂದರಲ್ಲದೆ, ಸೆಮಿನಾರೆಂಬೋ ಸೆಮಿನಾರುಗಳ ಎರಡು ದಿನವನ್ನು ಕಳೆಯುವುದು ಎಂತಹ ನರಕಯಾತನೆಯಾಗಿಬಿಟ್ಟಿದೆ ಎಂಬುದನ್ನೂ ವಿವರಿಸಿದರು.

ಅವರ ಪ್ರತಿಕ್ರಿಯೆಯಲ್ಲಿ ಎಳ್ಳಷ್ಟೂ ಅತಿಶಯವಿರಲಿಲ್ಲ. ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಹೆಸರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಸೆಮಿನಾರು, ಕಾನ್ಫರೆನ್ಸ್‌ಗಳೆಂಬ ವಿನೋದ ನಾಟಕಗಳ ಬಗ್ಗೆ ತುಂಬ ಬೇಸರವಿತ್ತು. ಗುಣಮಟ್ಟದ ಬಗ್ಗೆ ಒಂದಿಷ್ಟೂ ಕಾಳಜಿಯಿಲ್ಲದಿರುವ ಇಂತಹ ಕಾರ್ಯಕ್ರಮಗಳಿಂದಾಗಿ ವಿಚಾರಗೋಷ್ಠಿ, ಸಮ್ಮೇಳನಗಳೆಲ್ಲ ಎಷ್ಟೊಂದು ನಗೆಪಾಟಲಿಗೀಡಾಗುತ್ತಿದೆ ಎಂಬ ವಿಷಾದವೂ ಇತ್ತು.

ಉನ್ನತ ಶಿಕ್ಷಣದಲ್ಲಿ ಸಂಶೋಧನೆ ಹಾಗೂ ವಿದ್ವತ್ಪೂರ್ಣ ಚರ್ಚೆಗಳನ್ನು ಹುಟ್ಟುಹಾಕಿ ಅದರ ಒಟ್ಟಾರೆ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ನಡೆಯಬೇಕಾಗಿರುವ ವಿಚಾರಸಂಕಿರಣಗಳು ಈಚಿನ ವರ್ಷಗಳಲ್ಲಿ ಕಾಟಾಚಾರದ ಸಮಾರಂಭಗಳಾಗಿ ಬದಲಾಗಿರುವುದು ವಿದ್ವಾಂಸರ ವಲಯದಲ್ಲಷ್ಟೇ ಅಲ್ಲದೆ ಜನಸಾಮಾನ್ಯರಲ್ಲೂ ಆತಂಕಕ್ಕೆ ಕಾರಣವಾಗಿದೆ. ಸಾವಿರಾರು ರೂಪಾಯಿಗಳ ಖರ್ಚಿನಲ್ಲಿ ಆಯೋಜಿಸಲ್ಪಡುವ ಈ ಸೆಮಿನಾರುಗಳೆಂಬ ಸಿದ್ಧಪಾಕಗಳು ಹೆಚ್ಚಿನ ಸಂದರ್ಭಗಳಲ್ಲಿ ಸಮಯ ಹಾಗೂ ಹಣದ ದುರ್ವಿನಿಯೋಗವಷ್ಟೇ ಅಲ್ಲದೆ ಇನ್ನೇನೂ ಆಗುತ್ತಿಲ್ಲ.

ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ವಿಚಾರಸಂಕಿರಣಗಳಿಗೆ ತಮ್ಮದೇ ಆದ ಗಾಂಭೀರ್ಯ ಹಾಗೂ ವೈಶಿಷ್ಠ್ಯತೆಗಳಿದ್ದವು. ವಿಚಾರಸಂಕಿರಣವೊಂದಕ್ಕೆ ಒಬ್ಬನ ಪ್ರಬಂಧ ಆಯ್ಕೆಯಾಗುವುದೇ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಅವುಗಳಲ್ಲಿ ಪ್ರಬಂಧ ಮಂಡಿಸುವುದೇ ಒಂದು ಅಪೂರ್ವ ಅವಕಾಶವೆಂಬ ಭಾವನೆಯಿತ್ತು. ತಿಂಗಳುಗಟ್ಟಲೆ ಅಧ್ಯಯನ ಹಾಗೂ ಸಂಶೋಧನೆಯಿಂದ ರೂಪುಗೊಳ್ಳುವ ಒಂದು ಪ್ರಬಂಧ ವಿದ್ವತ್ ವೇದಿಕೆಯಲ್ಲಿ ಮಂಡನೆಯಾಗಿ ತಜ್ಞರುಗಳ ನಡುವೆ ಚರ್ಚೆಗೊಳಗಾದಾಗ ಪ್ರಬಂಧಕಾರನಿಗೆ ಅದೇನೋ ಸಾರ್ಥಕತೆ, ಸಮಾಧಾನ.

ಈಗ ಯಾರು ಬೇಕಾದರೂ ಸಮ್ಮೇಳನ ಆಯೋಜಿಸಬಹುದು, ಯಾರು ಬೇಕಾದರೂ ಪ್ರಬಂಧ ಮಂಡಿಸಬಹುದು ಎಂಬಷ್ಟರ ಮಟ್ಟಿಗೆ ಸಮ್ಮೇಳನದ ಆಯೋಜನೆ, ಪ್ರಬಂಧ ಮಂಡನೆ ಅಗ್ಗವಾಗಿಬಿಟ್ಟಿದೆ. ಪ್ರಬಂಧ ಮಂಡಿಸಿದಾತ ಪ್ರಮಾಣಪತ್ರ ಪಡೆದಲ್ಲಿಗೆ, ಸಂಕಿರಣದ ಆಯೋಜಕರು ಬಂದವರೆಲ್ಲರಿಗೂ ಪ್ರಮಾಣಪತ್ರ ನೀಡಿ ಕೈತೊಳೆದುಕೊಂಡಲ್ಲಿಗೆ ಇಬ್ಬರಿಗೂ ಜೀವನ ಪಾವನವಾದ ಅನುಭವ. ರೋಗಿ ಬಯಸಿದ್ದೂ ವೈದ್ಯ ಕೊಟ್ಟದ್ದೂ ಒಂದೇ ಆಗಿರುವುದರಿಂದ ವಿಚಾರಸಂಕಿರಣದ ನೋಂದಣಿ ಹಾಗೂ ಪ್ರಮಾಣಪತ್ರ ವಿತರಣೆಗಳ ನಡುವೆ ನಡೆಯುವ ಪ್ರಹಸನವನ್ನು ಕೇಳುವವರೇ ಇಲ್ಲ ಎನಿಸಿಬಿಟ್ಟಿದೆ.

ಸಮ್ಮೇಳನದ ಕುರಿತ ಪರಿಚಯ ಪತ್ರವನ್ನಂತೂ ಆಯೋಜಕರು ಭರ್ಜರಿಯಾಗಿಯೇ ರೂಪಿಸಿರುತ್ತಾರೆ. ತಮ್ಮ ಸಮ್ಮೇಳನ ಯಾವ ಅಂತಾರಾಷ್ಟ್ರೀಯ ಸಮಾರಂಭಕ್ಕೂ ಕಮ್ಮಿಯಿಲ್ಲ ಎಂದು ನಿರೂಪಿಸುವುದೇ ಅವರ ಮೊಟ್ಟಮೊದಲ ಯಶಸ್ಸು. ಪ್ರಬಂಧಗಳನ್ನು ಸಿದ್ಧಪಡಿಸುವಾಗ ಅನುಸರಿಸಬೇಕಾದ ಅಂತಾರಾಷ್ಟ್ರೀಯ ನಿಯಮಾವಳಿ, ಅವುಗಳನ್ನು ಸಮ್ಮೇಳನಕ್ಕೆ ಆಯ್ಕೆ ಮಾಡುವಾಗ ಆಯೋಜಕರು ಅನುಸರಿಸುವ ಕಠಿಣ ವಿಧಾನಗಳ ಬಗ್ಗೆ ಸ್ಪಷ್ಟ ಉಲ್ಲೇಖ ಇರುತ್ತದೆ. ಸಂಸ್ಥೆಯ ಪರಿಚಯ, ಅಲ್ಲಿನ ಸೌಲಭ್ಯಗಳು, ಪ್ರವಾಸೀತಾಣಗಳು ಇತ್ಯಾದಿಗಳ ವಿಸ್ತೃತ ಮಾಹಿತಿಯನ್ನೆಲ್ಲ ತುಂಬ ಎಚ್ಚರಿಕೆಯಿಂದಲೇ ವಿನ್ಯಾಸಗೊಳಿಸಿರುತ್ತಾರೆ. ಅಂತೂ ಇಡೀ ಮಾಹಿತಿಪತ್ರದ ಸೊಗಸಿಗೆ ಮಾರುಹೋಗಿ ತುಂಬ ಆಸ್ಥೆಯಿಂದ ಪ್ರಬಂಧ ಸಿದ್ಧಪಡಿಸಿ ಅವರು ಕೇಳುವ ಒಂದೋ ಎರಡೋ ಸಾವಿರ ರೂಪಾಯಿಗಳನ್ನು ನೋಂದಣಿ ಶುಲ್ಕವೆಂದು ಪಾವತಿಸಿ ಸಮ್ಮೇಳನಕ್ಕೆ ನೀವು ಹೋದಿರೋ, ಆಮೇಲಿನ ಸಕಲ ಭ್ರಮನಿರಸನಗಳಿಗೆ ಸಂಘಟಕರು ಜವಾಬ್ದಾರರಲ್ಲ.

ಇದೋ ಇಲ್ಲಿದೆ ಸ್ಯಾಂಪಲ್

ಇತ್ತೀಚೆಗಿನ ಒಂದು ಸಮ್ಮೇಳನದ ಸ್ಯಾಂಪಲ್ ಕೇಳಿ: ಅದು ಬೆಂಗಳೂರಿನ 'ಪ್ರತಿಷ್ಠಿತ’ ಖಾಸಗಿ ಕಾಲೇಜು. ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಆಯೋಜಿಸುತ್ತಿರುವುದಾಗಿ ಅವರು ಪ್ರಕಟಿಸಿದ್ದಾರೆ. ಬರೋಬ್ಬರಿ ಮೂರು ತಿಂಗಳಿನಿಂದ ಭರ್ಜರಿ ತಯಾರಿ ನಡೆದಿದೆ.  ಪ್ರಬಂಧಗಳ ಆಹ್ವಾನ, ಪರಿಶೀಲನೆ, ಸ್ವೀಕೃತಿ ಎಲ್ಲ ಆಗಿದೆ. ಎಲ್ಲ ಪ್ರಬಂಧಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದೆಂದು ಆರಂಭದಲ್ಲೇ ಅವರು ಹೇಳಿದ್ದಾರೆ. ಪ್ರತಿ ಸಮ್ಮೇಳನಾರ್ಥಿಯಿಂದ ನೋಂದಣಿಶುಲ್ಕ ಒಂದು ಸಾವಿರ ರೂಪಾಯಿಗಳನ್ನು ಮುಂಗಡವಾಗಿಯೇ ಸ್ವೀಕರಿಸಲಾಗಿದೆ. ದಿನಕ್ಕೆ ಮೂರು ಬಾರಿ ಫೋನ್, ಇ-ಮೇಲ್ ಮೂಲಕ ಸಮ್ಮೇಳನಾರ್ಥಿಗಳ ಬರುವಿಕೆ ಬಗ್ಗೆ ಸಂಘಟಕರು ಪರಿಪರಿಯಾಗಿ ಖಚಿತಪಡಿಸಿಕೊಂಡಿದ್ದಾರೆ.

ಅಂತೂ ಸಮ್ಮೇಳನದ ದಿನ ಬಂತು. ಮಹಾನಗರದ ಹೊರವಲಯದಲ್ಲಿ ಧಾರಾಳವಾಗಿ ದೊರೆತ ಹೆಕ್ಟೇರ್‌ಗಟ್ಟಲೆ ಜಮೀನಿನಲ್ಲಿ ಎದ್ದುನಿಂತಿದೆ ಚಮಕ್ ಚಮಕ್ ಕ್ಯಾಂಪಸ್. ಬೆಳಗ್ಗೆ ಹತ್ತೂವರೆತನಕವೂ ನೋಂದಣಿ, ಉಪಾಹಾರದ ಔಪಚಾರಿಕತೆಗಳು ಮುಗಿದ ಮೇಲೆ ಸಮ್ಮೇಳನವೆಂಬೋ ಸಮ್ಮೇಳನದ ಆರಂಭ. ಮೊದಲ ಅರ್ಧ-ಮುಕ್ಕಾಲು ಗಂಟೆ ತಮ್ಮ ಆಲ್ಟ್ರಾಮಾಡರ್ನ್ ಕಾಲೇಜಿನ ಬಗ್ಗೆ ವೀಡಿಯೋ, ಫೋಟೋ, ಗಡಚಿಕ್ಕುವ ಸಂಗೀತ ಇತ್ಯಾದಿಗಳನ್ನೊಳಗೊಂಡ ಪರಿಚಯ, ಅಮೇಲೆ ಅತಿಥಿ ಆಭ್ಯಾಗತರ ಸ್ವಾಗತ, ಮತ್ತೆ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಪ್ರಾಂಶುಪಾಲ ಮತ್ತಿತರರಿಂದ ಭಾಷಣ ವೈವಿಧ್ಯ, ಉಳಿದ ಒಂದಿಷ್ಟು ಸಮಯದಲ್ಲಿ ಮುಖ್ಯ ಅತಿಥಿಯೆಂಬ ಬಡಪಾಯಿಯಿಂದ ದಿಕ್ಸೂಚಿ ಉಪನ್ಯಾಸ. ಅಯ್ಯೋ ಮಧ್ಯಾಹ್ನವೇ ಆಗಿಹೋಯಿತಲ್ಲ; ಇನ್ನು ಊಟ.

ಸಮ್ಮೇಳನದ ಸಂತ್ರಸ್ಥರೆಲ್ಲ ಸರತಿಯಲ್ಲಿ ನಿಂತು ಹೈಟೆಕ್ ಊಟದ ಪೊಟ್ಟಣಗಳನ್ನು ಪಡೆದು ರುಚಿಸಿದಷ್ಟು ತಿಂದು ಮತ್ತೆ ಸಭಾಂಗಣ ಸೇರುವ ಹೊತ್ತಿಗೆ ಮೂರು ಗಂಟೆ. ಇನ್ನು ನಿಜವಾದ ಸೆಮಿನಾರು ಆರಂಭ. ಸಮ್ಮೇಳನಕ್ಕೆ ಆಯ್ಕೆಯಾದ ನೂರಾರು ಪ್ರಬಂಧಗಳ ಮಂಡನೆಯಾಗಬೇಕು. ದೂರದೂರಿನಿಂದ ಬಂದವರಿಗೆ ತಡವಾಗುತ್ತದಲ್ಲ ಎಂಬುದು ಸಂಘಟಕರ ಕಾಳಜಿಯಾದ್ದರಿಂದ ನಾಲ್ಕೂವರೆಯೊಳಗೆ ಕಾರ್ಯಕ್ರಮ ಮುಗಿಸಿಬಿಡುವ ತರಾತುರಿ. ಅದಕ್ಕಾಗಿಯೇ ಅವರು ಐದಾರು ಕಡೆ ಸಮಾನಾಂತರ ಗೋಷ್ಠಿಗಳನ್ನು ಆಯೋಜಿಸಿದ್ದಾರೆ. ಪ್ರತೀ ಕೊಠಡಿಯಲ್ಲೂ ಇಪ್ಪತ್ತು ಪ್ರಬಂಧಗಳ ಮಂಡನೆ. ಒಬ್ಬಬ್ಬರಿಗೆ ಮೂರೂವರೆ ನಿಮಿಷ ಅವಧಿ. ಕೆಲವು ಸಮ್ಮೇಳನಾರ್ಥಿಗಳ ಎರಡುಮೂರು ಪ್ರಬಂಧಗಳು ಆಯ್ಕೆಯಾಗಿರುವುದರಿಂದ ಅವರು ಒಂದು ಕಡೆ ತಮ್ಮ ಪ್ರಬಂಧವನ್ನಷ್ಟೇ ಮಂಡಿಸಿ ಸಭಾತ್ಯಾಗ ಮಾಡಿ ಇನ್ನೊಂದು ಗೋಷ್ಠಿಯಲ್ಲಿ ಪ್ರತ್ಯಕ್ಷರಾಗುತ್ತಾರೆ. ಉಳಿದವರಿಗೆ ಆಗಲೇ ತಡವಾಗಿರುವುದರಿಂದ ತಮ್ಮತಮ್ಮ ಪ್ರಬಂಧಗಳ ಮಂಡನೆ ಮುಗಿಯುತ್ತಿದ್ದಂತೆ ಜಾಗ ಖಾಲಿಮಾಡುತ್ತಾರೆ. ಅಂತೂ ಗೋಷ್ಠಿಯ ಅಂತ್ಯಕ್ಕೆ ಉಳಿದವರು ಇಬ್ಬರೇ- ಕೊನೆಯ ಪ್ರಬಂಧಕಾರ ಮತ್ತು ಆ ಗೋಷ್ಠಿಯ ಅಸಹಾಯಕ ಅಧ್ಯಕ್ಷ.

ಅಷ್ಟು ಹೊತ್ತಿಗೆ ಎಲ್ಲರಿಗೂ ಪ್ರಮಾಣಪತ್ರಗಳು ತಲುಪಿರುತ್ತವೆ. ಪ್ರಮಾಣಪತ್ರ ಬಂದಲ್ಲಿಗೆ ಸಮ್ಮೇಳನ ಸಮಾರೋಪವಾಯಿತು ಎಂದೇ ಅರ್ಥ. ಮತ್ತೆ ಸಮ್ಮೇಳನದ ಎರಡನೇ ದಿನ? 'ನೀವೆಲ್ಲ ತುಂಬ ಬ್ಯುಸಿ ಇರುತ್ತೀರೆಂದು ನಮಗೆ ಗೊತ್ತು ಸಾರ್! ನಿಮಗೆ ಯಾಕೆ ಸುಮ್ಮನೇ ತೊಂದರೆ ಎಂದು ನಾವೇ ಒಂದು ದಿನದಲ್ಲಿ ಎಲ್ಲ ಪ್ರೆಸೆಂಟೇಶನುಗಳೂ ಮುಗಿಯುವಂತೆ ಪ್ಲಾನ್ ಮಾಡಿದ್ವಿ. ನಾಳೆ ಸಿನಿಮಾ ಸ್ಕ್ರೀನಿಂಗ್ ಇಟ್ಕೊಂಡಿದೀವಿ. ಇಂಟರೆಸ್ಟ್ ಇದ್ರೆ ನೀವು ನಮ್ಮೊಂದಿಗೆ ಇರಬಹುದು. ಡೋಂಟ್ ವರಿ, ನಿಮಗೆ ಅವಶ್ಯವಿದ್ರೆ ಎರಡೂ ದಿನ ಸಮ್ಮೇಳನದಲ್ಲಿ ನೀವು ಭಾಗವಹಿಸಿದ್ದೀರೆಂದು ಅಟೆಂಡೆನ್ಸ್ ಸರ್ಟಿಫಿಕೇಟ್ ಕೊಡ್ತೀವಿ...’ ಅದು ಸಂಘಟಕರ ಸಮಜಾಯುಷಿ. ಹೋಗಲಿ, ಸಮ್ಮೇಳನದ ಪುಸ್ತಕ? ಅದು ಖುದ್ದು ಸಂಘಟಕರಿಗೇ ಮರೆತುಹೋಗಿದೆ. ಅಳಿದುಳಿದ ಸಮ್ಮೇಳನಾರ್ಥಿಗಳು ಸಂಘಟಕರ ಆ ದಿನದ ಆದಾಯ  ಎಷ್ಟಾಗಿರಬಹುದೆಂದು ಲೆಕ್ಕಾಚಾರ ಹಾಕುತ್ತಾ ನಿಧಾನವಾಗಿ ಕ್ಯಾಂಪಸ್‌ನಿಂದ ಹೊರನಡೆಯುತ್ತಾರೆ.

ಇದು ನಮ್ಮ ಸುತ್ತಮುತ್ತ ನಡೆಯುವ ಹತ್ತಾರು ರಾಷ್ಟ್ರೀಯ-ಅಂತಾರಾಷ್ಟ್ರೀಯ ಸಮ್ಮೇಳನಗಳ ಪೈಕಿ ಒಂದರ ಉದಾಹರಣೆ ಅಷ್ಟೇ. ಎಲ್ಲ ವಿಚಾರಸಂಕಿರಣ, ಸಮ್ಮೇಳನಗಳನ್ನು ಒಂದೇ ವರ್ಗಕ್ಕೆ ಸೇರಿಸುವುದೇನೋ ಸರಿಯಲ್ಲ, ಆದರೆ ಇಂದಿನ ಬಹುತೇಕ ಸಮ್ಮೇಳನಗಳ ಕಥೆ ಇದೇ ಆಗಿ ಸೆಮಿನಾರ್ ಎಂದಾಕ್ಷಣ ಬೆಚ್ಚಿಬೀಳುವ ಪರಿಸ್ಥಿತಿ ಬಂದಿರುವುದಂತೂ ನಿಜ.

ಸೆಮಿ'ನಾರು' ಎಂಬ ವ್ಯಾಪಾರ

ಕಾಲೇಜುಗಳಿಗೆ ನ್ಯಾಕ್ ಮಾನ್ಯತೆ, ಸ್ವಂತದ ಪ್ರತಿಷ್ಠೆ ಹಾಗೂ ಪ್ರಚಾರದ ಹಕೀಕತ್ತಾದರೆ ಸಮ್ಮೇಳನಾರ್ಥಿಗಳಿಗೆ ತಮ್ಮ ಶೈಕ್ಷಣಿಕೆ ಸಾಧನೆಯ ಕಡತವನ್ನು ಹಿಗ್ಗಿಸಿಕೊಳ್ಳುವ ತವಕ. ಕಾಲೇಜು, ವಿಶ್ವವಿದ್ಯಾನಿಲಯಗಳ ಅಧ್ಯಾಪಕರ ಸಾಧನೆ-ಭಡ್ತಿಗಳಿಗೆ, ಪಿಎಚ್‌ಡಿ ಸಂಶೋಧನಾರ್ಥಿಗಳ ಪ್ರೌಢಿಮೆಗೆ ಅವರ ಪ್ರಬಂಧ ಮಂಡನೆ, ಪ್ರಕಟಣೆಗಳೇ ಮಾನದಂಡವೆಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ನಿರ್ಧರಿಸಿದ ಮೇಲಂತೂ ಸೆಮಿನಾರು ನಡೆಸುವುದು, ಪ್ರಬಂಧ ಮಂಡಿಸುವುದೇ ಒಂದು ದೊಡ್ಡ ವ್ಯಾಪಾರವಾಗಿಬಿಟ್ಟಿದೆ.

ಬಂದಿರುವ ಪ್ರಬಂಧಗಳ ಪೈಕಿ ಗುಣಮಟ್ಟದವೆಷ್ಟು, ಕಳಪೆಯೆಷ್ಟು, ಇಂಟರ್ನೆಟ್ಟಿನಿಂದ ಕದ್ದಿರುವುದೆಷ್ಟು, ಮೌಲಿಕವಾದದ್ದೆಷ್ಟು ಎಂದು ಪರಿಶೀಲಿಸುವುದಕ್ಕೆ ಯಾವುದೇ ವ್ಯವಸ್ಥೆಯಿಲ್ಲ. ಯಾರೆಲ್ಲ ನೋಂದಣಿ ಶುಲ್ಕ ಕೊಡಲು ತಯಾರಿದ್ದಾರೋ ಅವರೆಲ್ಲರ ಪ್ರಬಂಧಗಳು ಆಯ್ಕೆಯಾದವೆಂದೇ ಅರ್ಥ. ಅವುಗಳ ಮಂಡನೆಗೆ ಮೂರು ನಿಮಿಷವಾದರೂ ಸಿಗುವುದೇ ಹೆಚ್ಚು, ಇನ್ನು ಚರ್ಚೆ ಸಂವಾದಗಳ ಮಾತೇ ಇಲ್ಲ. ಅವರೇನೋ ಹೇಳಿದರು, ಇವರೇನೋ ಕೇಳಿಸಿಕೊಂಡರು, ಅಷ್ಟೇ. ವಾಸ್ತವವಾಗಿ ವಿದ್ವತ್ಪೂರ್ಣ ಚರ್ಚೆ ನಡೆಯುವುದಾಗಲೀ, ಅದರ ದಾಖಲೀಕರಣವಾಗುವುದಾಗಲೀ ಯಾರಿಗೂ ಬೇಕಿಲ್ಲ. ಯಾರ‍್ಯಾರೆಲ್ಲ ಯಾವ್ಯಾವ ಹೊತ್ತಿಗೆ ಬಂದರೋ ಹೋದರೋ ತಿಳಿಯದು; ಸಮ್ಮೇಳನಕ್ಕೇ ಹಾಜರಾಗದೆ ಪ್ರಬಂಧಗಳನ್ನು ಮಂಡಿಸದೇ ಪ್ರಮಾಣಪತ್ರ ತರಿಸಿಕೊಂಡವರು ಇನ್ನೆಷ್ಟಿದ್ದಾರೋ ಲೆಕ್ಕವಿಲ್ಲ. ಕೆಲವರಂತೂ ಖುದ್ದು ವೇದಿಕೆ ಹತ್ತಿ ಒಂದೂ ಪ್ರಬಂಧ ಮಂಡಿಸದೆಯೂ ವರ್ಷಕ್ಕೆ ಹತ್ತಾರು ಪ್ರಬಂಧಗಳ ಕರ್ತೃತ್ವ ಪಡೆಯುತ್ತಾರೆ. ಯಾರೋ ಶ್ರಮಪಟ್ಟು ಪ್ರಬಂಧ ಬರೆದಿದ್ದರೆ ಅವರಿಗೆ ದುಂಬಾಲು ಬಿದ್ದು ತಮ್ಮನ್ನು ಎರಡನೆಯೋ ಮೂರನೆಯೋ ಕರ್ತೃವನ್ನಾಗಿ 'ಹಾಕಿಸಿ’ಕೊಳ್ಳುವುದೇ ಇವರ ಸಾಧನೆಯ ಗುಟ್ಟು.

ನಮ್ಮ ಸೆಮಿ'ನಾರು’ಗಳ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇನ್ನೊಂದೆರಡು ವರ್ಷಗಳಲ್ಲಿ ಇದು ಎಲ್ಲಿಗೆ ಬಂದು ನಿಂತೀತೋ ಅರ್ಥವಾಗುವುದಿಲ್ಲ. ಇವುಗಳ ಬಗ್ಗೆ ಯುಜಿಸಿಯೋ ಸರ್ಕಾರವೋ ಶಿಕ್ಷಣ ಇಲಾಖೆಯೋ ತಕ್ಷಣ ಗಮನ ಹರಿಸದೇ ಹೋದರೆ ಅನಾಹುತವಂತೂ ತಪ್ಪಿದ್ದಲ್ಲ.

ಶುಕ್ರವಾರ, ಮೇ 9, 2014

'ಹೊಣೆ'ಬರಹ: ಬೇರು ಮರೆಯದಿರೋಣ, ಬಿಳಲು ಕಡಿಯದಿರೋಣ...

('ಕನ್ನಡ ಪ್ರಭ'ದ 'ಬೈಟೂಕಾಫಿ' ಪುರವಣಿಯಲ್ಲಿ ಮೇ 7, 2014ರಂದು ಪ್ರಕಟವಾದ ಲೇಖನ)
ಇಲ್ಲಿಯೂ ಓದಬಹುದು...

ಹುಟ್ಟಿ ಕಣ್ತೆರೆದಂದಿನಿಂದಲೇ ಈ ಮಕ್ಕಳು ಕಾರಿನಲ್ಲಿ ಓಡಾಡುತ್ತಿದ್ದಾರೆ. ಸ್ವಿಚ್ ಆನ್ ಮಾಡಿದರೆ ಮನೆತುಂಬಾ ಬೆಳಕು, ತಂಪುತಂಪು ಗಾಳಿ, ಸ್ನಾನಕ್ಕೆ ಬಿಸಿನೀರು. ಮೆತ್ತಗಿನ ಹಾಸಿಗೆ, ತರಹೇವಾರಿ ಡ್ರೆಸ್ಸು, ಒಳ್ಳೆಯ ಚಪ್ಪಲಿ, ಕೈತುಂಬಾ ಚಾಕಲೇಟು. ಅಷ್ಟಗಲದ ಟಿವಿಯಲ್ಲಿ ಸದಾ ಕಾರ್ಟೂನು ಕುಣಿಯುತ್ತಿದೆ, ಅಟಕ್ಕೆ ಕಂಪ್ಯೂಟರೇ ಇದೆ. ಸ್ಕೂಲ್ ವ್ಯಾನು ಮನೆಯೆದುರಿಗೇ ಬಂದು ಹಾರ್ನ್ ಮಾಡುತ್ತದೆ. ಇವನ್ನೆಲ್ಲ ನೋಡುತ್ತಲೇ ಕೆಲವೊಮ್ಮೆ ನನಗೆ ದಿಗಿಲೆನಿಸುವುದಿದೆ.

ಅರೆ! ಮಕ್ಕಳು ಖುಷಿಯಾಗಿದ್ದಾರೆ, ಯಾವ ಕಷ್ಟಗಳೂ ಇಲ್ಲದೆ ನೆಮ್ಮದಿಯಿಂದ ಬಾಲ್ಯ ಕಳೆಯುತ್ತಿದ್ದಾರೆ ಎಂಬುದು ಸಂತೋಷದ ಸಂಗತಿಯಲ್ಲವೇ? ಅದರಲ್ಲಿ ಆತಂಕಪಡುವಂಥದ್ದೇನಿದೆ ಎಂದು ನಿಮಗೆ ಸೋಜಿಗವೆನಿಸಬಹುದು. ಅದು ನಿಜವೇ. ಮಕ್ಕಳೇ ಮನೆಯ ಬೆಳಕು. ಅವು ಚಿಲಿಪಿಲಿ ಅನ್ನುತ್ತಾ ಮನೆತುಂಬಾ ಓಡಾಡಿಕೊಂಡಿದ್ದರೆ, ಅದೇ ಮನೆಯ ಸಂಪತ್ತು, ಸಮಾಧಾನ. ಆದರೆ ನನ್ನ ಆತಂಕ ಅವರ ಸಂತೋಷದ ಕುರಿತಾದದ್ದಲ್ಲ. ಈ ಸಂತೋಷದ ನಿಜವಾದ ಬೆಲೆ ಏನು ಎಂಬುದನ್ನು ಅವರಿಗೆ ಅರ್ಥ ಮಾಡಿಸುವ ಬಗೆಗಿನದ್ದು.

ಫಳಫಳ ಹೊಳೆಯುವ ಟೈಲ್ಸ್ ನೆಲದ ಮೇಲೆ ಓಡಾಡಿಕೊಂಡಿರುವ ಈ ಮಕ್ಕಳಿಗೆ ಮುಳಿಹುಲ್ಲು ಮಾಡಿನ, ಸೆಗಣಿ ಸಾರಿಸಿದ ನೆಲದ, ಹೊಗೆಯಿಂದ ಕಪ್ಪಾದ ಗೋಡೆಗಳ ಪುಟ್ಟ ಜೋಪಡಿಯನ್ನು ಅರ್ಥ ಮಾಡಿಸುವುದು ಹೇಗೆ? ಕಿತ್ತುಹೋದ ಮಾಡಿನ ಸಂದಿಗಳಿಂದ ಧೋ ಎಂದು ಸುರಿವ ಮಳೆನೀರಿಗೆ ಮಧ್ಯರಾತ್ರಿ ಎಚ್ಚೆತ್ತು ಇನ್ನೆಲ್ಲೂ ಮಲಗಲು ಜಾಗವಿಲ್ಲದೆ ಅಮ್ಮನ ಸೆರಗಿನ ಹಿಂದೆ ಮುದುಡಿಕೊಂಡು ಬೆಳಗಿನವರೆಗೂ ಜಾಗರಣೆ ಮಾಡಿದ್ದನ್ನು ಅರ್ಥ ಮಾಡಿಸುವುದು ಹೇಗೆ?

ಬೇಕೆಂದಾಗೆಲ್ಲ ಹಾರ್ಲಿಕ್ಸ್, ಬೂಸ್ಟು, ಒಳ್ಳೊಳ್ಳೆ ಹಣ್ಣುಹಂಪಲು, ಸವಿಯಾದ ತಿಂಡಿಗಳೆಲ್ಲ ಲಭ್ಯವಿರುವ ಈ ಮಕ್ಕಳಿಗೆ ಬೇಯಿಸಿದ ಗೋಧಿಯೆಂಬ ಫೈವ್‌ಸ್ಟಾರ್ ತಿಂಡಿ, ಪಾತ್ರೆ ತಳದಲ್ಲಿರುವ ಮುನ್ನಾದಿನದ ಸಪ್ಪೆ ಗಂಜಿ, ಕಣ್ಣುಮೂಗಲ್ಲೆಲ್ಲ ಸೊರಸೊರ ಸುರಿಸುವ ಹುಣಸೆ ಹಣ್ಣು-ಉಪ್ಪು-ಮೆಣಸಿನಕಾ ಗೊಜ್ಜನ್ನು ಅರ್ಥ ಮಾಡಿಸುವುದು ಹೇಗೆ?

ಮನೆಬಾಗಿಲಿನಿಂದ ಸ್ಕೂಲಿಗೂ ಸ್ಕೂಲಿನಿಂದ ಮನೆಬಾಗಿಲಿಗೂ ವ್ಯಾನಿನಲ್ಲೇ ಓಡಾಡುವ ಈ ಮಕ್ಕಳಿಗೆ ಪ್ರತಿದಿನ ಬರಿಗಾಲಿನಲ್ಲಿ ನಾಲ್ಕೈದು ಮೈಲಿ ಕಾಡುಹಾದಿ ಕ್ರಮಿಸಿ ಊರಿನ ಏಕೈಕ ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗುವುದನ್ನು ಅರ್ಥ ಮಾಡಿಸುವುದು ಹೇಗೆ? ಒಪ್ಪೊತ್ತಿನೂಟ ಉಂಡು ವಾರಪೂರ್ತಿ ಸರ್ಕಾರ ದಯಪಾಲಿಸಿದ ಏಕೈಕ ಉಡುಪನ್ನೇ ಏರಿಸಿಕೊಂಡು ಬಂದು ಅಕ್ಕಪಕ್ಕದಲ್ಲಿ ಕೂರುತ್ತಿದ್ದ ಕೃಶದೇಹಿ ಸಹಪಾಠಿಗಳ ಬದುಕನ್ನು ಅರ್ಥ ಮಾಡಿಸುವುದು ಹೇಗೆ? ನೆಲದ ಮೇಲೆ ಕುಕ್ಕರುಗಾಲಿನಲ್ಲಿ ಬಾಗಿ ಕುಳಿತು ಸೀಮೆಎಣ್ಣೆ ಬುಡ್ಡಿಯ ಮಿಣಿಮಿಣಿ ಬೆಳಕಿನಲ್ಲಿ ಸರಿರಾತ್ರಿ ದಾಟುವವರೆಗೂ ಓದಿಬರೆಯುತ್ತಿದ್ದುದನ್ನು ಅರ್ಥ ಮಾಡಿಸುವುದು ಹೇಗೆ?

ಬೇಕು ಅನಿಸಿದ್ದನ್ನೆಲ್ಲ ಕೊಡಿಸು ಎಂದು ನಡುಪೇಟೆಯಲ್ಲಿ ಮುಷ್ಕರ ಹೂಡುವ ಈ ಮಕ್ಕಳಿಗೆ ತಿಂಗಳಿಗೊಮ್ಮೆಯಾದರೂ ಐದು ಪೈಸೆಯ ಆರೆಂಜ್ ಮಿಠಾಯಿಗೆ ಕಷ್ಟವಿದ್ದ, ಒಂದು ’ಚಂದಮಾಮ’ಕ್ಕಾಗಿ ತಿಂಗಳುಗಟ್ಟಲೆ ಗೋಗರೆಯಬೇಕಿದ್ದ, ಐದು ರೂಪಾಯಿಯ ಇಂಗ್ಲಿಷ್-ಕನ್ನಡ ಪಾಕೆಟ್ ಡಿಕ್ಷನರಿಗಾಗಿ ಇಡೀ ವರ್ಷ ಅಪ್ಪನಿಗೆ ದುಂಬಾಲುಬಿದ್ದ ದಿನಗಳನ್ನು ಅರ್ಥ ಮಾಡಿಸುವುದು ಹೇಗೆ? ಮನೆ ಬಾಗಿಲು ದಾಟಿದರೆ ಕಾರು ಏರುವ ಈ ಮಕ್ಕಳಿಗೆ ಹತ್ತು ಸೀಟಿನ ಗುಜರಿ ಜೀಪಿನಲ್ಲಿ ನಲ್ವತ್ತು ಜನ ನೇತಾಡಿಕೊಂಡು ಮಾಡುತ್ತಿದ್ದ ಪಯಣಗಳನ್ನು, ಎಲ್ಲ ಊರುಗಳಿಂದಲೂ ತಿರಸ್ಕೃತವಾಗಿ ಬಂದು ಕೊನೆಗೆ ನಮ್ಮೂರಿನ ರಸ್ತೆಗಳನ್ನು ಆಶ್ರಯಿಸಿಕೊಳ್ಳುತ್ತಿದ್ದ ಗ್ರಾಮಾಂತರ ಸಾರಿಗೆಯ ಬಸ್ಸುಗಳನ್ನು ಅರ್ಥ ಮಾಡಿಸುವುದು ಹೇಗೆ?

ನೀವೀಗ ಕೇಳಬಹುದು - ನಾವು ಅನುಭವಿಸಿದ ಕಷ್ಟಕೋಟಲೆಗಳನ್ನೆಲ್ಲ ನಮ್ಮ ಮಕ್ಕಳೂ ಅನುಭವಿಸಬೇಕೇ? ಅಯ್ಯೋ ಹಾಗಾಗುವುದು ಖಂಡಿತಾ ಬೇಡ. ಅವರು ಸುಖವಾಗಿರಲಿ, ಸಂತೋಷವಾಗಿರಲಿ. ಆಗಲೇ ಹೇಳಿದೆ, ಅವರ ನಗು ಮನೆಯ ಬೆಳಕು. ಅದುವೇ ನಮ್ಮ ಬದುಕು. ಅಂತಹ ದಿನಗಳನ್ನೆಲ್ಲ ಮತ್ತೆ ಈ ಮಕ್ಕಳು ಎಂದೂ ಅನುಭವಿಸದಿರಲಿ. ನನ್ನ ಆತಂಕವಿರುವುದು ಅವರು ಸಂತೋಷವಾಗಿರುವುದರ ಬಗ್ಗೆ ಅಲ್ಲ; ಅವರು ಬದುಕಿರುವ ಈ ನಿರಾತಂಕದ ಪ್ರಪಂಚ ಬದುಕಿನ ನಿಜವಾದ ಸ್ವಾರಸ್ಯದಿಂದ ಅವರನ್ನು ದೂರವಿಟ್ಟಿರುವ ಬಗ್ಗೆ.

ನನ್ನ ಸಹೋದ್ಯೋಗಿಯೊಬ್ಬರು ಯವಾಗಲೂ ಹೇಳುತ್ತಿರುತ್ತಾರೆ: ನಮ್ಮ ನಮ್ಮ ಬೇರುಗಳನ್ನು ಎಂದಿಗೂ ಮರೆಯಬಾರದು ಸರ್ ಅಂತ. ಹೌದು, ನಾವು ಇಂದು ಏನಾಗಿದ್ದೇವೆ ಅನ್ನುವುದಕ್ಕಿಂತಲೂ ನಿನ್ನೆ ಏನಾಗಿದ್ದೆವು ಎಂಬ ಅರಿವು ಜೀವಂತವಾಗಿರುವುದು ಮುಖ್ಯ. ಇಲ್ಲದೇ ಹೋದರೆ ಬದುಕಿನ ಸತ್ವವನ್ನು, ತಳಹದಿಯನ್ನು ಕಳೆದುಕೊಂಡುಬಿಡುತ್ತೇವೆ. ಅದೃಷ್ಟವಶಾತ್ ಆ ಅರಿವು ನಮ್ಮೊಳಗೆ ಭದ್ರವಾಗಿದೆ; ನಮ್ಮ ಮುಂದಿನ ತಲೆಮಾರಿನಲ್ಲೂ ಅದು ಇಷ್ಟೇ ಭದ್ರವಾಗಿ ನೆಲೆಯೂರೀತೇ? ಅದು ಅವರ ಬದುಕನ್ನು ಅರ್ಥಪೂರ್ಣಗೊಳಿಸೀತೇ? ಇದು ನನ್ನ ಆತಂಕ.

ಎಲ್ಲ ಸೌಕರ್ಯಗಳ ನಡುವೆ ಬದುಕುತ್ತಿರುವ ನಮ್ಮ ಮಕ್ಕಳು ಜೋಪಡಿಯೊಳಗಿನ ಬದುಕನ್ನು, ಕಾಲ್ನಡಿಗೆಯ ಆಯಾಸವನ್ನು, ಬಡತನದ ಅವಮಾನಗಳನ್ನು, ದಿನನಿತ್ಯದ ಸಂಕಷ್ಟಗಳನ್ನು ಅರಗಿಸಿಕೊಳ್ಳುವುದು ಬಲು ದುಸ್ತರ. ಇದನ್ನೆಲ್ಲ ಅರ್ಥ ಮಾಡಿಕೊಳ್ಳದ ಬದುಕು ಎಷ್ಟಾದರೂ ಟೊಳ್ಳೇ ಅಲ್ಲವೇ? ಅದಕ್ಕೆ ಜೀವನದ ಅನಿರೀಕ್ಷಿತ ಸ್ಥಿತ್ಯಂತರಗಳನ್ನು ಎದುರಿಸುವ ಗಟ್ಟಿತನ ಬರಲು ಸಾಧ್ಯವೇ? ಜೀವನ ನೂರಕ್ಕೆ ನೂರು ಸುಖದ ಸುಪ್ಪತ್ತಿಗೆಯಾಗಿರುವುದು ಸಾಧ್ಯವೇ ಇಲ್ಲ. ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಕಷ್ಟಗಳಿಗೆ, ದುಃಖ ಅವಮಾನ, ಅಸಹಾಯಕತೆಗಳಿಗೆ ಎದೆಯೊಡ್ಡಲೇ ಬೇಕು. ಈ ಮಕ್ಕಳು ಮುಂದೆ ಅಂತಹ ಯಾವುದಾದರೊಂದು ಸನ್ನಿವೇಶಕ್ಕೆ ಮುಖಾಮುಖಿಯಾಗುವ ಸಂದರ್ಭ ಬಂದರೆ ಅದನ್ನು ನಿಭಾಯಿಸುವ ಸ್ಥಿತಪ್ರಜ್ಞತೆ, ಮಾನಸಿಕ ದೃಢತೆ ಅವರಲ್ಲಿದ್ದೀತೇ? ಒಂದು ವೇಳೆ ಇಲ್ಲದೇ ಹೋದರೆ ಅದಕ್ಕೆ ಅವರು ಹೇಗೆ ಪ್ರತಿಕ್ರಿಯಿಸಿಯಾರು? 'ಕ್ರಿಟಿಕಲ್’ ಎನಿಸುವ ಬದುಕಿನ ಕ್ಷಣಗಳಲ್ಲಿ ಅವರು ಕೈಚೆಲ್ಲಿಕುಳಿತರೆ, ಸುಲಭವಾಗಿ ನಿಭಾಯಿಸಬಲ್ಲ ಸನ್ನಿವೇಶಗಳಲ್ಲೂ ಅವರು ಸೋತುಬಿಟ್ಟರೆ ಅದಕ್ಕೆ ನಾವೇ ಜವಾಬ್ದಾರರಾಗುವುದಿಲ್ಲವೇ?

ನಮ್ಮ ಬೇರುಗಳನ್ನು ಮರೆಯದಿರುವ ಎಚ್ಚರಿಕೆಯ ಜೊತೆಗೆ ನಮ್ಮ ಜೊತೆಗಿನ ಬಿಳಲುಗಳನ್ನೂ ಗಟ್ಟಿಯಾಗಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಅಲ್ಲವೇ?

ತನ್ನಂತೆಯೇ ಪರರ ಬಗೆದೊಡೆ...?

('ವಿಜಯ ಕರ್ನಾಟಕ'ದ ತುಮಕೂರು ಆವೃತ್ತಿಯಲ್ಲಿ ಏಪ್ರಿಲ್ 3, 2014ರಂದು ಪ್ರಕಟವಾದ ಲೇಖನ)

ನಗರಜೀವನದ ಮೋಹಕ ಜಾಲದಲ್ಲಿ ಸಿಲುಕಿಕೊಳ್ಳುತ್ತಾ ನಮ್ಮ ಸಂವೇದನಾಶೀಲತೆ ಎಷ್ಟೊಂದು ಬರಡಾಗಿಹೋಗುತ್ತಿದೆ ಎಂದು ಯೋಚಿಸಿದರೆ ಆಶ್ಚರ್ಯವೂ ಆತಂಕವೂ ಆಗುತ್ತದೆ. ದಿನನಿತ್ಯ ನಮ್ಮ ಕಣ್ಣೆದುರೇ ನಡೆಯುವ ಹತ್ತಾರು ವರ್ತನೆ, ಘಟನೆಗಳನ್ನು ಸುಮ್ಮನೇ ಅವಲೋಕಿಸಿ ನೋಡಿ; ತಮ್ಮೊಂದಿಗೆ ಬದುಕುತ್ತಿರುವ ಇತರ ಮಂದಿಯ ಬಗ್ಗೆ ಅನೇಕರು ಎಷ್ಟೊಂದು ಅಗೌರವ ಮತ್ತು ನಿರ್ಲಕ್ಷ್ಯ ಹೊಂದಿದ್ದಾರೆ ಎಂಬುದು ಅರ್ಥವಾಗುತ್ತದೆ.

ಆತ ತನ್ನ ಮನೆಯೆದುರು 'ನೋ ಪಾರ್ಕಿಂಗ್’ ಎಂದು ದೊಡ್ಡ ಬೋರ್ಡು ನೇತುಹಾಕಿದ್ದಾನೆ. ಎಲ್ಲೋ ಹೋಗಿ ವಾಪಸ್ ಬಂದವನು ತನ್ನ ಬೈಕನ್ನು ಪಕ್ಕದ ಮನೆಯದ್ದೋ ಎದುರಿನ ಮನೆಯದ್ದೋ ಗೇಟಿನೆದುರು ನಿಲ್ಲಿಸಿ ತನ್ನ ಮನೆಯೊಳಗೆ ನಡೆದುಬಿಡುತ್ತಾನೆ. ಆ ಮನೆಯವನು ಗೇಟು ತೆರೆದಾಗೆಲ್ಲ ಅಡ್ಡಲಾಗಿ ನಿಂತು ತೊಂದರೆ ಉಂಟುಮಾಡುತ್ತಿರುತ್ತದೆ ಇವನ ವಾಹನ. ಇನ್ನು ಪರಿಚಯದವರ, ಸ್ನೇಹಿತರ, ಬಂಧುಗಳ ಮನೆಗೆಂದು ಬರುವವರ ಕಥೆ ಕೇಳುವುದೇ ಬೇಡ. ಅವರಿಗೆ ತಾವು ಭೇಟಿನೀಡುವ ಮನೆಯ ಹೊರತಾಗಿ ಆ ವಠಾರದಲ್ಲಿ ಬೇರೆ ಮನುಷ್ಯ ಜೀವಿಗಳೂ ವಾಸಿಸುತ್ತಿವೆ ಎಂಬ ಗೊಡವೆಯೇ ಇರುವುದಿಲ್ಲ.

ಬಡಾವಣೆಯ ಜನರೆಲ್ಲ ರಾತ್ರಿ ತಮ್ಮ ಮನೆಗಳ ಬಾಗಿಲು ಭದ್ರಪಡಿಸಿಕೊಂಡು ಒಳಸೇರಿಕೊಂಡರು ಎಂದು ಖಚಿತವಾಗುತ್ತಿದ್ದಂತೆ, ಇನ್ನೊಬ್ಬ ತನ್ನ ಮುದ್ದಿನ ನಾಯಿಯೊಂದಿಗೆ ಹೊರಬೀಳುತ್ತಾನೆ. ಅದು ಆ ನಾಯಿಯ ಬಹಿರ್ದೆಸೆಯ ಅವಧಿಯಂತೆ! ನಾಯಿಯನ್ನು ಕರೆದುಕೊಂಡು ಆತ ಪಕ್ಕದ ಬೀದಿಯಲ್ಲಿ ಒಂದು ಸುತ್ತು ವಾಕಿಂಗ್ ಮುಗಿಸುತ್ತಿದ್ದಂತೆ ನಾಯಿ ಅಲ್ಲಲ್ಲಿ ತನ್ನ ದೇಹ ಹಗುರ ಮಾಡಿಕೊಂಡು ತನ್ನ ಬಗೆಗಿನ ಒಡೆಯನ ಕಾಳಜಿಗೆ ಮುಗುಳ್ನಗುತ್ತಾ ಅವನನ್ನು ಹಿಂಬಾಲಿಸುತ್ತಿರುತ್ತದೆ. ಆದರೆ ತನ್ನ ಮನೆಯೆದುರು ಇನ್ಯಾರೂ ನಾಯಿಯೊಂದಿಗೆ ನಿಂತಿಲ್ಲ ಎಂಬುದನ್ನು ಆಗಿಂದಾಗ್ಗೆ ಖಚಿತಪಡಿಸಿಕೊಳ್ಳುತ್ತಾನೆ ಈ ಭೂಪ.

ಟ್ಯಾಂಕ್‌ನಲ್ಲಿ ನೀರು ಖಾಲಿಯಾಗಿದೆಯೆಂದು ಆ ಮನೆಯವರು ಅದೆಷ್ಟು ಹೊತ್ತಿಗೆ ಪಂಪ್ ಚಲಾಯಿಸಿದ್ದಾರೋ ಗೊತ್ತಿಲ್ಲ, ಟ್ಯಾಂಕ್ ತುಂಬಿಹೋಗಿ ಟೆರೇಸ್‌ನಿಂದ ನೀರು ಧಾರಾಕಾರವಾಗಿ ಸುರಿದು ಹೋಗುತ್ತಿದೆ. ಪಕ್ಕದ ಮನೆಯವನೋ ಎದುರು ಮನೆಯವನೋ ಎಚ್ಚೆತ್ತುಕೊಂಡು ತಮ್ಮ ಸಹವಾಸಿಯ ದಿನನಿತ್ಯದ ಪರಿಪಾಠದ ಬಗ್ಗೆ ಮರುಕಪಟ್ಟುಕೊಂಡು ಹೋಗಿ ಬಾಗಿಲು ತಟ್ಟುತ್ತಾನೆ: 'ಪಂಪ್ ಆಫ್ ಮಾಡ್ರೀ... ಆವಾಗಿನಿಂದ ನೀರು ಹೋಗುತ್ತಲೇ ಇದೆ’. ಮನೆಯೊಳಗಿಂದ ಒಂದು ವ್ಯಕ್ತಿ ನಿಧಾನವಾಗಿ ಹೊರಬಂದು ಏನೂ ಆಗಿಲ್ಲವೇನೋ ಎಂಬಂತೆ ಪಂಪ್ ನಿಲ್ಲಿಸಿ ಮರಳುತ್ತದೆ. ಜೊತೆಗೆ ಬಾಗಿಲು ಬಡಿದವನ ಕಡೆಗೊಂದು ಅಸಹನೆಯ ನೋಟ ಬೇರೆ. ಹೀಗೆ ಬಾಗಿಲು ಬಡಿದದ್ದರಿಂದ ಅವರ ಸ್ನಾನ, ಪೂಜೆ, ಧ್ಯಾನ ಊಟ-ತಿಂಡಿ, ಟಿವಿ ವೀಕ್ಷಣೆಗಳಿಗೆ ಅಡ್ಡಿಯಾಯಿತೆಂದು ಅವನಿಗೆ ಸಿಟ್ಟು.

ಬೆಳಗ್ಗೆ ಅಥವಾ ಸಂಜೆ ಹೊತ್ತು ನಗರದ ರಸ್ತೆಯಲ್ಲಿ ವಾಹನಗಳ ದಟ್ಟಣೆ. ಎರಡು, ಮೂರು, ನಾಲ್ಕು ಚಕ್ರದ ವಾಹನಗಳು ಒತ್ತೊತ್ತಾಗಿ ಚಲಿಸುತ್ತಿರುತ್ತವೆ. ಮಾರುಕಟ್ಟೆಗೆ ಬಂದ ಗೃಹಿಣಿ ಆತಂಕದಿಂದ ತನ್ನ ದ್ವಿಚಕ್ರವಾಹನ ಚಲಾಯಿಸುತ್ತಾ ಬೇಗ ಮನೆಸೇರುವ ತವಕದಲ್ಲಿದ್ದಾಳೆ. ಇದ್ದಕ್ಕಿದ್ದಂತೆ ಒಂದು ಬೈಕೋ ರಿಕ್ಷಾವೋ ಎಡಗಡೆಯಿಂದ ಭರ್ರೆಂದು ಓವರ್‌ಟೇಕ್ ಮಾಡಿ ಮುಂದಕ್ಕೋಡಿರುತ್ತದೆ. ಈಕೆ ಕಕ್ಕಾಬಿಕ್ಕಿಯಾಗಿ ಹೇಗೋ ಸುಧಾರಿಸಿಕೊಂಡು ಮುಂದಕ್ಕೆ ಸಾಗುತ್ತಿರಬೇಕಾದರೆ ಎದುರಿನ ಆಟೋದವನು ಯಾವುದೇ ಮುನ್ಸೂಚನೆಯಿಲ್ಲದೆ ಸರ್ರೆಂದು ಎಡಕ್ಕೋ ಬಲಕ್ಕೋ ತಿರುಗಿರುತ್ತಾನೆ. ಅದೇ ಸಮಯಕ್ಕೇ ನಮ್ಮ ಹೈಟೆಕ್ ಕಾಲೇಜುಗಳ ಶ್ರೀಮಂತ ಹುಡುಗ-ಹುಡುಗಿಯರು ಅದ್ಯಾವುದೋ ಯುದ್ಧವನ್ನು ಗೆದ್ದ ಉತ್ಸಾಹದಲ್ಲಿ ಕನಿಷ್ಠ ನೂರು ಕಿ.ಮೀ. ವೇಗದಲ್ಲಿ ಭಯಂಕರ ಸದ್ದಿನೊಂದಿಗೆ ಬೈಕುಗಳನ್ನು ಓಡಿಸುತ್ತಾ ಕ್ಷಣಾರ್ಧದಲ್ಲಿ ಮಿಂಚಿ ಮರೆಯಾಗುತ್ತಾರೆ. ಸದ್ಯ ಜೀವವಾದರೂ ಉಳಿಯಿತಲ್ಲ ಎಂಬ ಸಮಾಧಾನದೊಂದಿಗೆ ಬಡಪಾಯಿ ಗೃಹಿಣಿ ಮನೆಸೇರುತ್ತಾಳೆ.

ಹೊಸ ಮನೆಯೊಂದರ ನಿರ್ಮಾಣ ಶುರುವಾಗಿದೆ ಎಂದರೆ ಆ ಬೀದಿಯವರಿಗೆ ಮುಂದಿನ ಒಂದು ವರ್ಷ ಸಂಕಷ್ಟ ಕಾದಿದೆ ಎಂದೇ ಅರ್ಥ. ನಿರ್ಮಾಣ ಕಾರ್ಯ ನಡೆಯುವ ಅಷ್ಟೂ ಸಮಯ ಅಲ್ಲಿ ವಾಹನ ಹಾಗೂ ಜನಸಂಚಾರದ ದುರವಸ್ಥೆ ಹೇಳತೀರದು. ಸಿಮೆಂಟು, ಮಣ್ಣು, ಕಲ್ಲು, ಕಬ್ಬಿಣ ಇತ್ಯಾದಿ ನಿರ್ಮಾಣ ಸಾಮಗ್ರಿಗಳು ಹೇಗೆಂದಹಾಗೆ ರಸ್ತೆಯ ಉದ್ದಗಲದಲ್ಲಿ ಅಲಂಕೃತವಾಗಿರುತ್ತವೆ. ಅವುಗಳಿಂದ ಅಕ್ಕಪಕ್ಕದ ಮನೆಮಂದಿಗಾಗಲೀ ದಾರಿಯಲ್ಲಿ ನಡೆದಾಡುವವರಿಗಾಗಲೀ ಆಗುವ ತೊಂದರೆ ಬಗ್ಗೆ ಅದರ ಉಸ್ತುವಾರಿಗಳಿಗೆ ಗೊಡವೆಯೇ ಇರುವುದಿಲ್ಲ.

ಇನ್ನು ಕೆಲವರ ಮನೆಯಲ್ಲಿ ಏನಾದರೂ ಸಮಾರಂಭಗಳಿದ್ದರಂತೂ ಎರಡು ಮೂರು ದಿನ ಆ ಬೀದಿಯಲ್ಲಿ ಸಾರ್ವಜನಿಕ ಸಂಚಾರ ಬಂದ್. ತಮ್ಮ ಮನೆಯೆದುರು ಉಚಿತವಾಗಿ ಬಿದ್ದುಕೊಂಡಿರುವ ರಸ್ತೆಯನ್ನೂ ಬಿಡದೆ ಅವರ ಶಾಮಿಯಾನ ಹೆಮ್ಮೆಯಿಂದ ಎದ್ದುನಿಂತಿರುತ್ತದೆ. ಯಾವನಾದರೊಬ್ಬ ಈ ವಿಷಯ ಗೊತ್ತಿಲ್ಲದೆ ಅದೇ ದಾರಿಯಾಗಿ ವಾಹನ ಸಮೇತ ಬಂದನೋ, ಅವನ ಗ್ರಹಚಾರ ಕೆಟ್ಟಿದೆ ಎಂದೇ ಅರ್ಥ. ಭೂಮಿ ಮೇಲೆ ಇದೊಂದೇ ರೋಡ್ ಇರೋದಾ? ಪಕ್ಕದ ರೋಡಲ್ಲಿ ಹೋಗ್ರೀ ಎಂಬ ದಬಾವಣೆ ಸಿಗದಿದ್ದರೆ ಅದೇ ಅವನ ಪುಣ್ಯ.

ಬಡಾವಣೆ ನಡುವೆ ಖಾಲಿ ಸೈಟುಗಳಿದ್ದರಂತೂ ಕೇಳುವುದೇ ಬೇಡ, ಅವೆಲ್ಲ ಆ ಪ್ರದೇಶದವರ ಅಘೋಷಿತ ಡಂಪಿಂಗ್ ಯಾರ್ಡ್‌ಗಳು. ಸುತ್ತಮುತ್ತಲಿನ ಬೀದಿಯವರೆಲ್ಲ ಇಷ್ಟಬಂದಂತೆ ತಮ್ಮ ಮನೆಯ ಅಷ್ಟೂ ಕಸವನ್ನು ಅಲ್ಲಿಗೆಸೆದು ಏನೂ ಆಗಲಿಲ್ಲವೆಂಬಂತೆ ಮುಂದೆ ಸಾಗುತ್ತಿರುತ್ತಾರೆ. ಆ ಸೈಟು ಹಂದಿಹಿಂಡುಗಳ, ಬೀದಿನಾಯಿಗಳ ಆಟದ ಮೈದಾನವಾಗಿ ಅಕ್ಕಪಕ್ಕದ ಮನೆಮಂದಿಗೆ ಸದಾ ನರಕದರ್ಶನ ಮಾಡುತ್ತಿರುತ್ತದೆ. ತಮ್ಮ ಮನೆಯಲ್ಲಿ ಮಾಡಿದ ಅಡುಗೆಯೇನಾದರೂ ಉಳಿದ್ದರೆ ಅದನ್ನು ಬೀಡಾಡಿ ಹಸುಗಳೋ ನಾಯಿಗಳೋ ತಿಂದು ಹೊಟ್ಟೆಹೊರೆದುಕೊಳ್ಳಲಿ ಎಂದು ಭಾವಿಸುವ ಉದಾರಿಗಳೇನೋ ಇರುತ್ತಾರೆ. ಆದರೆ ಅವುಗಳನ್ನು ಅವರೆಂದೂ ತಮ್ಮ ಮನೆಯೆದುರು ಸುರಿಯುವುದಿಲ್ಲ. ಪಕ್ಕದ ಅಥವಾ ಎದುರು ಮನೆಯ ಬದಿಗೆ ಸುರಿದು ಪುಣ್ಯಸಂಪಾದನೆ ಮಾಡುತ್ತಾರೆ. ಅವರ ವಿಶಾಲಹೃದಯದಲ್ಲಿ ಪಕ್ಕದ ಮನೆಯವರಿಗೆ ಸ್ಥಾನ ಇಲ್ಲ!

ಹೌದು, ಈ ಬಗೆಯ ನೂರೆಂಟು ನೋಟಗಳು ನಮ್ಮ ದಿನನಿತ್ಯದ ಬದುಕಿನ ಭಾಗಗಳೇ ಆಗಿಬಿಟ್ಟಿವೆ. ಇಂತಹ ದೃಶ್ಯಗಳೆಲ್ಲ ಪ್ರಜ್ಞಾಪೂರ್ವಕವಾಗಿ ಘಟಿಸುತ್ತವೆಯೋ ಅಥವಾ ಜನ ತಮಗರಿವಿಲ್ಲದಂತೆ ಅಚಾತುರ್ಯಗಳನ್ನು ಎಸಗಿರುತ್ತಾರೋ ಎಂದು ಅಚ್ಚರಿಯಾಗುತ್ತದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ನಡೆಯುವುದು ಅಚಾತುರ್ಯ ಅಲ್ಲ, ಪ್ರಜ್ಞಾಪೂರ್ವಕ ಅನಾಗರಿಕ ಕೃತ್ಯಗಳೇ.

ನಗರ ಜೀವನದ ಧಾವಂತದಲ್ಲಿ ನಾವೆಷ್ಟು ಸ್ವಾರ್ಥಿಗಳಾತ್ತಿದ್ದೇವೆ! ನಾನು, ನನ್ನದು, ನನ್ನ ಮನೆ, ಸಂಸಾರ ಇತ್ಯಾದಿ ಭಾವನೆಗಳ ನಡುವೆ ನಾವೊಂದು ಸಹಬಾಳ್ವೆಯ ಸಮಾಜದಲ್ಲಿ ಬದುಕುತ್ತಿದ್ದೇವೆಂದು ಮರೆತೇಬಿಡುತ್ತಿದ್ದೇವೆ. ನಾವು ನಿಲ್ಲಿಸುವ ವಾಹನ, ಸುಮ್ಮನೇ ತೆರೆದಿಟ್ಟು ಹೋಗುವ ಗೇಟು, ಎಸೆಯುವ ಕಸ, ಗಡಿಬಿಡಿಯಲ್ಲಿ ಓಡಿಸುವ ವಾಹನ, ನಮ್ಮ ನಾಯಿಯ ಶೌಚ, ಬೇಕಾಬಿಟ್ಟಿ ಹರಿದುಹೋಗುವ ಅಮೂಲ್ಯ ನೀರು, ರಸ್ತೆಯಲ್ಲಿ ಹಾಕುವ ಟೆಂಟು, ಜಗಳಗಂಟತನಗಳು ನಮ್ಮೊಂದಿಗಿನ ಸಾವಿರಾರು ಮಂದಿಯ ಬದುಕನ್ನು ಪ್ರತಿದಿನವೂ ಅಸಹನೀಯಗೊಳಿಸೀತು ಎಂಬ ಕಲ್ಪನೆಯೇ ಇರುವುದಿಲ್ಲ. ಬದುಕಿನಲ್ಲಿ ಅಂತಿಮವಾಗಿ ಬೆಲೆ ಪಡೆದುಕೊಳ್ಳುವುದು ನಮ್ಮ ಸಂವೇದನಾಶೀಲತೆಯೇ ಹೊರತು ವಿದ್ಯಾರ್ಹತೆ, ಪಾಂಡಿತ್ಯ, ಉದ್ಯೋಗ, ಸ್ಥಾನಮಾನ ಅಥವಾ ಸಂಪತ್ತು ಖಂಡಿತ ಅಲ್ಲ.

ಗುರುವಾರ, ಮೇ 8, 2014

ಅಭಿವೃದ್ಧಿ ಬಂಡಿಯ ಕಟ್ಟಕಡೆಯ ಪ್ರಯಾಣಿಕರು

('ಪ್ರಜಾವಾಣಿ'ಯ 'ಸಂಗತ' ಅಂಕಣದಲ್ಲಿ ಮಾರ್ಚ್ 28, 2014ರಂದು ಪ್ರಕಟವಾದ ಲೇಖನ)

ವಿದ್ಯಾರ್ಥಿಯೊಬ್ಬನ ಅರ್ಧಪುಟದ ಬರೆಹದಿಂದ ಒಂದು ಗಂಟೆಯ ಚರ್ಚೆ ತೆರೆದುಕೊಳ್ಳುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನಿಮ್ಮನಿಮ್ಮ ಹಳ್ಳಿಗಳ ಯಾವುದಾದರೊಂದು ಪ್ರಮುಖ ಸಮಸ್ಯೆಯ ಬಗ್ಗೆ ಅರ್ಧರ್ಧ ಪುಟ ಬರೆದುಕೊಂಡು ಬನ್ನಿ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದೆ. ಅವರ ಬರವಣಿಗೆಯನ್ನು ತಿದ್ದುವುದಷ್ಟೇ ನನ್ನ ಸದ್ಯದ ಉದ್ದೇಶವಾಗಿತ್ತು. ಕುಡಿಯುವ ನೀರಿನ ಸಮಸ್ಯೆಯಿಂದ ತೊಡಗಿ ಚಿರತೆ ಹಾವಳಿಯವರೆಗೆ ಹತ್ತಾರು ಸಮಸ್ಯೆಗಳು ನನ್ನ ಮೇಜಿನ ಮೇಲೇರಿ ಕುಳಿತಿದ್ದವು. ಒಂದೊಂದನ್ನೇ ಓದಿ ತಿದ್ದುಪಡಿ ಸೂಚಿಸುತ್ತಾ ಅವಶ್ಯವಿದ್ದ ಕಡೆ ಮರುಬರವಣಿಗೆ ಮಾಡಿ 'ಹೀಗೆ ಬರೆದರೆ ಒಳ್ಳೆಯದು’ ಎಂದು ಓದಿಹೇಳುತ್ತಿದ್ದೆ.

ಅಚಾನಕ್ಕಾಗಿ ಒಂದು ಬರೆಹ ನನ್ನ ಗಮನ ಸೆಳೆಯಿತು. ದೂರದ ಜಿಲ್ಲೆಯಿಂದ ಬಂದು ಹಾಸ್ಟೆಲಿನಲ್ಲಿದ್ದ ಒಬ್ಬ ಹುಡುಗ ಪಕ್ಕದ ಹಳ್ಳಿಗೆ ಹೋಗಿ ಒಂದು ದಿನ ಸುತ್ತಾಡಿ ಅರ್ಧಪುಟ ಬರೆದುಕೊಂಡುಬಂದಿದ್ದ. ಬೇರೆಯ ಬರೆಹಗಳಿಗಿಂತ ಅದು ವಿಭಿನ್ನವಾಗಿತ್ತು. 'ಅದರಲ್ಲಿ ಬರೆದಿರೋದನ್ನು ನೀನೇ ಎಲ್ಲರಿಗೂ ಎರಡು ನಿಮಿಷದಲ್ಲಿ ಹೇಳಿಬಿಡಪ್ಪ’ ಎಂದೆ. ಅವನು ಚೆನ್ನಾಗಿಯೇ ಹೇಳಿದ. ಮೇಲ್ನೋಟಕ್ಕೆ ಅದು ಅಂತಹ ಸಂಕೀರ್ಣವಾದ ಸಮಸ್ಯೆ ಅಲ್ಲ. ಬಹುತೇಕ ಹಳ್ಳಿಗಳಲ್ಲಿ ಕಾಣಸಿಗಬಹುದಾದ ಶೌಚಾಲಯದ ಸಮಸ್ಯೆ. ಆದರೆ ಅದು ಅಷ್ಟಕ್ಕೇ ಸೀಮಿತವಲ್ಲ ಎನಿಸಿತು.

ಆ ಹಳ್ಳಿಯ ಬಹುತೇಕ ಮನೆಗಳಲ್ಲಿ ಟಿವಿ ಇದೆ. ಅನೇಕರಲ್ಲಿ ಸ್ವಂತ ವಾಹನವೂ ಇದೆ. ಆದರೆ ಹೆಚ್ಚಿನ ಮನೆಗಳಲ್ಲಿ ಶೌಚಾಲಯವೇ ಇಲ್ಲ. 'ಯಾಕೆ, ಆ ಹಳ್ಳಿ ಜನರು ತುಂಬ ಬಡವರೇ?’ ನಾನು ಕೇಳಿದೆ. 'ಇಲ್ಲ ಅಷ್ಟೊಂದು ಬಡವರೇನಲ್ಲ. ಅವರಿಗೆಲ್ಲ ಸಾಕಷ್ಟು ಜಮೀನು ಇದೆ’ ಎಂದ ಆ ವಿದ್ಯಾರ್ಥಿ. 'ಸರ್ಕಾರದ ಶೌಚಾಲಯ ಯೋಜನೆ ಇನ್ನೂ ಆ ಹಳ್ಳಿ ತಲುಪಿಲ್ಲವೇ?’ ಉಳಿದ ಹುಡುಗರೇ ಅವನನ್ನು ಕೇಳಿದರು. 'ಯೋಜನೆ ಆರಂಭವಾಗಿ ಇಷ್ಟು ವರ್ಷವಾಗಿ ಇದೊಂದು ಹಳ್ಳಿ ಬಾಕಿಯಾಗಿರಲು ಸಾಧ್ಯವಿಲ್ಲ ಅಲ್ಲವೇ?’ ನಾನೂ ದನಿಸೇರಿಸಿದೆ. 'ಯೋಜನೆ ತಲುಪದಿರುವುದು ಸಮಸ್ಯೆ ಅಲ್ಲ. ಊರಿನವರೇ ಶೌಚಾಲಯ ಕಟ್ಟಿಕೊಳ್ಳುತ್ತಿಲ್ಲ’ ಆತ ಹೇಳಿದ. 'ಅರೆ, ಚೆನ್ನಾಗಿದೆಯಲ್ಲ! ಜನರು ಬಡವರಲ್ಲ. ಯೋಜನೆಯ ಬಗ್ಗೆ ತಿಳಿದಿದೆ. ಇನ್ನೇನು ಸಮಸ್ಯೆ? ನೀನು ಅವರನ್ನೇ ಕೇಳಬೇಕಿತ್ತು’ ನಾನು ಮತ್ತೆ ಹೇಳಿದೆ. 'ಅದನ್ನೆಲ್ಲ ಹೇಗೆ ಕೇಳುವುದು ಸರ್?’ ಅವನು ಒಂದಿಷ್ಟು ಮುಜುಗರದಿಂದ ಕೇಳಿದ. ತರಗತಿಯಲ್ಲಿ ನಗು.

'ನನಗೆ ಗೊತ್ತು ಸಾರ್. ನಾನು ಹೇಳುತ್ತೇನೆ. ನಾನು ಆ ಹಳ್ಳಿಯ ಪಕ್ಕದಿಂದಲೇ ಬರುತ್ತೇನೆ’ ಎಂದು ಅಷ್ಟರಲ್ಲಿ ಎದ್ದುನಿಂತ ಇನ್ನೊಬ್ಬ ವಿದ್ಯಾರ್ಥಿ. ಎಲ್ಲರ ಕುತೂಹಲ ಅವನ ಕಡೆಗೆ. 'ಆ ಹಳ್ಳಿಯ ಬಹುತೇಕರು ಒಳ್ಳೇ ಅನುಕೂಲವಂತರೇ. ಎಲ್ಲರಿಗೂ ಏನಿಲ್ಲವೆಂದರೂ ಐದಾರು ಎಕರೆ ಜಮೀನಿದೆ. ಆದರೆ ಟಾಯ್ಲೆಟ್ ಕಟ್ಟಿಕೊಳ್ಳುವುದಕ್ಕೆ ಅವರೇ ತಯಾರಿಲ್ಲ’ ಎಂದು ನಿಲ್ಲಿಸಿದ. 'ತಯಾರಿಲ್ಲ ಎಂದರೆ? ಮನಸ್ಸಿಲ್ಲವೇ?’ ಮತ್ತೆ ಪ್ರಶ್ನೆ. 'ಅವರಿಗೆ ಇಷ್ಟ ಇಲ್ಲ ಸಾರ್. ನಮಗೆ ಇಷ್ಟು ದೊಡ್ಡ ಜಮೀನಿರುವಾಗ ಟಾಯ್ಲೆಟ್ ಏಕೆ ಎಂಬ ಪ್ರಶ್ನೆ ಅವರದ್ದು. ಅವರು ಅಗತ್ಯವಿದ್ದಾಗೆಲ್ಲ ಜಮೀನಿನ ಯಾವುದಾದರೊಂದು ಮೂಲೆಗೆ ಓಡುತ್ತಾರೆ...’ ಅವನು ವಿವರಿಸಿದ. ತರಗತಿಯಲ್ಲಿ ಮತ್ತೆ ಘೊಳ್ಳನೆ ನಗು.

ಇದು ನಗುವ ವಿಷಯ ಅಲ್ಲ ಕಣ್ರೋ ಎಂದು ನಾನು ಗಂಭೀರನಾದೆ. ಆಮೇಲೆ ತರಗತಿ ಮುಗಿಯುವವರೆಗೂ ಅದೇ ಚರ್ಚೆ ಮುಂದುವರಿಯಿತು. ಅಭಿವೃದ್ಧಿಗೆ ಸಂಬಂಧಪಟ್ಟಂತೆ ಎಂತಹ ದೊಡ್ಡದೊಂದು ಸಮಸ್ಯೆ ಇನ್ನೂ ನಮ್ಮೆದುರು ಹಾಗೆಯೇ ಉಳಿದುಕೊಂಡಿದೆ ಎನಿಸಿತು. ನಮ್ಮಲ್ಲಿ ಯೋಜನೆಗಳಿಗೆ ಕೊರತೆಯಿಲ್ಲ. ವರ್ಷದಿಂದ ವರ್ಷಕ್ಕೆ ಅವುಗಳ ಸಂಖ್ಯೆ ಏರುತ್ತಲೇ ಇದೆ. ಗಾತ್ರ ಹಿಗ್ಗುತ್ತಲೇ ಇದೆ. ಹಣಕ್ಕೆ ಕೊರತೆಯಿಲ್ಲ. ಬಾಯಿ ತೆರೆದರೆ ಕೋಟಿಗಳಲ್ಲೇ ಮಾತಾಡುತ್ತವೆ ನಮ್ಮ ಸರ್ಕಾರಗಳು. ಅಂಕಿಅಂಶಗಳ ಆಧಾರದಲ್ಲಿ ಪ್ರಗತಿ ಪರಿಶೀಲನೆ ನಡೆಯುತ್ತದೆ. ಆ ಜಿಲ್ಲೆಗೆ, ಈ ಹಳ್ಳಿಗೆ ಇಷ್ಟು ಯೋಜನೆ, ಇಷ್ಟಿಷ್ಟು ಹಣ ಮಂಜೂರಾಗಿದೆ ಎಂಬ ಲೆಕ್ಕಾಚಾರವೂ ಸಿಗುತ್ತದೆ. ಈ ಯೋಜನೆಗಳು ಜನರಿಗೆ ತಲುಪುವಲ್ಲಿ ಆಗುತ್ತಿರುವ ಲೋಪ, ಅಧಿಕಾರಿಗಳ ಭ್ರಷ್ಟಾಚಾರ, ಮಧ್ಯವರ್ತಿಗಳ ಕಾಟ ಎಲ್ಲದರ ಬಗೆಗೂ ಚರ್ಚೆಗಳು ನಡೆಯುತ್ತವೆ. ಅವು ವಾಸ್ತವವೇ ಹೌದು. ಆದರೆ ಅಭಿವೃದ್ಧಿಗೆ ಜನರನ್ನು ಸಿದ್ಧಗೊಳಿಸುವ ಅಂಶವೊಂದು ಅನೇಕಬಾರಿ ತೆರೆಮರೆಗೆ ಸರಿದಿರುವುದನ್ನೂ ಗಮನಿಸಬೇಕು.

ದೊಡ್ಡದೊಡ್ಡ ಯೋಜನೆಗಳನ್ನು ಮಂಜೂರು ಮಾಡಿದರೆ ಸಾಲದು, ಎಲ್ಲಕ್ಕಿಂತ ಮೊದಲು ಅವುಗಳನ್ನು ಸ್ವೀಕರಿಸುವ ಮನೋಭೂಮಿಕೆಯನ್ನು ಫಲಾನುಭವಿಗಳಲ್ಲಿ ಸಿದ್ಧಪಡಿಸುವುದು ಮುಖ್ಯ ಎಂದು ಅಭಿವೃದ್ಧಿ ಚಿಂತಕರು ಆಗಾಗ್ಗೆ ಹೇಳುತ್ತಲೇ ಬಂದಿದ್ದಾರೆ. ಅಭಿವೃದ್ಧಿ ಅಧ್ಯಯನದಲ್ಲಿ 'ಆವಿಷ್ಕಾರದ ಪ್ರಸರಣೆ’ (Diffusion of Innovations) ಪರಿಕಲ್ಪನೆಯನ್ನು ಬಳಕೆಗೆ ತಂದ ಪ್ರಸಿದ್ಧ ಸಂವಹನ ತಜ್ಞ ಎವರೆಟ್ ರೋಜರ‍್ಸ್ ಪ್ರಕಾರ, ಯಾವುದೇ ಹೊಸ ಕಲ್ಪನೆ ಮತ್ತು ತಂತ್ರಜ್ಞಾನವನ್ನು ಜನರು ಅಳವಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಜಾಗೃತಿ, ಆಸಕ್ತಿ, ಮೌಲ್ಯಮಾಪನ, ಪ್ರಯೋಗ ಮತ್ತು ಅಳವಡಿಕೆ ಎಂಬ ಐದು ಹಂತಗಳಿವೆ. ಯಾವುದೇ ಯೋಜನೆಯನ್ನೂ ಜನರು ಏಕಾಏಕಿ ಒಪ್ಪಿಕೊಳ್ಳುವುದಿಲ್ಲ. ಅದರ ಕುರಿತು ಅವರು ಒಂದಿಷ್ಟು ತಿಳುವಳಿಕೆ ಹೊಂದಿದ ಮೇಲೆ ಆ ಬಗ್ಗೆ ಆಸಕ್ತಿ ತಳೆದು ಅದರ ಸಾಧಕ ಬಾಧಕಗಳ ಪರಿಶೀಲನೆ ಮಾಡಿ ತೃಪ್ತರಾದ ಬಳಿಕವಷ್ಟೇ ಅದನ್ನು ಸ್ವೀಕರಿಸುತ್ತಾರೆ.

ಹೊಸ ಯೋಜನೆಯೊಂದನ್ನು ಸ್ವೀಕರಿಸುವಲ್ಲಿ ಎಲ್ಲರದ್ದೂ ಒಂದೇ ವೇಗ ಅಲ್ಲ. ಜನರನ್ನು ಆವಿಷ್ಕಾರಪ್ರಿಯರು, ಬೇಗನೆ ಅಳವಡಿಸಿಕೊಳ್ಳುವವರು, ತಡವಾಗಿ ಅಳವಡಿಸಿಕೊಳ್ಳುವವರು, ಮತ್ತು ಮಂದಗಾಮಿಗಳು ಎಂದು ವಿಂಗಡಿಸುತ್ತಾರೆ ರೋಜರ್. ಆವಿಷ್ಕಾರಪ್ರಿಯರು ಯಾವುದೇ ಹೊಸ ಯೋಜನೆಯನ್ನು ತಕ್ಷಣ ಅಳವಡಿಸಿಕೊಳ್ಳುವವರಾದರೆ ಉಳಿದವರು ಒಂದಿಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಅವರ ಬಗ್ಗೆ ಆತಂಕವಿಲ್ಲ. ಅವರು ಇಂದಲ್ಲ ನಾಳೆಯಾದರೂ ಬದಲಾಗುತ್ತಾರೆ. ಸಮಸ್ಯೆಯಿರುವುದು ಮಂದಗಾಮಿಗಳೆಂದು ಕರೆಸಿಕೊಳ್ಳುವವರಲ್ಲಿ. ಅವರು ಹೊಸತನಕ್ಕೆ ತೆರೆದುಕೊಳ್ಳುವಲ್ಲಿ ಕಟ್ಟಕಡೆಯವರು. ಅವರ ಮನಸ್ಸನ್ನು ಹದಗೊಳಿಸುವುದು ಅಭಿವೃದ್ಧಿ ಪ್ರಕ್ರಿಯೆಯ ಅತಿಮಹತ್ವದ ಹೆಜ್ಜೆ.

ಯಾವುದೋ ಒಂದು ಕಾರಣಕ್ಕೆ ಅಭಿವೃದ್ಧಿಯ ಬಂಡಿಯೇರುವುದಕ್ಕೆ ಅವರು ಸಿದ್ಧರಿರುವುದಿಲ್ಲ. ಹಾಗೆಂದು ಅವರನ್ನು ಅಲ್ಲೇ ಬಿಟ್ಟು ಮುಂದಕ್ಕೆ ಸಾಗುವುದರಲ್ಲಿ ಅರ್ಥವಿಲ್ಲ. ಎಲ್ಲರನ್ನೂ ಒಳಗೊಳ್ಳದ ಅಭಿವೃದ್ಧಿ ಅಭಿವೃದ್ಧಿಯೇ ಅಲ್ಲ. ಇದು ಒಂದು ದೇಶದ ಅಥವಾ ಒಂದು ಕಾಲದ ಸಮಸ್ಯೆ ಅಲ್ಲ.  ಎಲ್ಲಾ ಕಾಲದಲ್ಲೂ ಇರುವ ಎಲ್ಲ ಅಭಿವೃದ್ಧಿಶೀಲ ದೇಶಗಳ ಸಂಕೀರ್ಣ ಪರಿಸ್ಥಿತಿ ಇದು. ಒಂದು ಊರಿಗೆ ರಸ್ತೆ, ಶಾಲೆ ಇತ್ಯಾದಿ ಮೂಲಭೂತ ಸೌಕರ್ಯ ಬೇಕು ಮತ್ತು ಅದಕ್ಕೆ ಆ ಊರಿನ ಎಲ್ಲರ ಸಹಕಾರ ಬೇಕು ಎಂದಾಗಲೆಲ್ಲ ರೋಜರ್ ಹೇಳಿದ ವಿವಿಧ ಮನೋಸ್ಥಿತಿಯ ಮಂದಿ ಎದುರಾಗುತ್ತಾರೆ. ಆದರೆ ಒಂದು ಹಂತದಲ್ಲಿ ಅವರೆಲ್ಲ ಬದಲಾಗಲೇಬೇಕಾಗುತ್ತದೆ.

ಈ ದೇಶದ ಅಭಿವೃದ್ಧಿಗೆ ಬಣ್ಣಬಣ್ಣದ ದೊಡ್ಡ ಯೋಜನೆಗಳು, ಕೋಟಿಗಟ್ಟಲೆ ಅನುದಾನ ಸಾಲದು. ಅವುಗಳನ್ನು ಸ್ವೀಕರಿಸುವ ಮನೋಭೂಮಿಕೆ ಎಲ್ಲ ಜನರಲ್ಲೂ ಮೊದಲು ತಯಾರಾಗಬೇಕು. ನಮ್ಮ ನೀತಿನಿರೂಪಕರು ಹಾಗೂ ಯೋಜನೆಗಳ ನಿರ್ಮಾತೃಗಳು ಅಭಿವೃದ್ಧಿ ಯೋಜನೆಗಳಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಜನರ ಮನಸ್ಸನ್ನು ಹದಗೊಳಿಸುವ ಕಾರ್ಯಕ್ಕೂ ನೀಡುವುದೇ ಇಂದಿನ ಅನಿವಾರ್ಯತೆ.


ಮಾಧ್ಯಮಪ್ರವೇಶಕ್ಕೆ 15 ಸೂತ್ರಗಳು

(ವಿಜಯವಾಣಿಯ 'ಮಸ್ತ್' ಪುರವಣಿಯಲ್ಲಿ ಮಾರ್ಚ್ 12, 2014ರಂದು ಪ್ರಕಟವಾದ ಲೇಖನದ ಉಳಿದ ಭಾಗ. ಮೊದಲ ಭಾಗವನ್ನು ಇಲ್ಲಿ ಓದಿ...)
  • ಉತ್ತಮ ಬರವಣಿಗೆ ಕಲೆಯನ್ನು ರೂಢಿಸಿಕೊಳ್ಳಿ. ನಿರಂತರವಾಗಿ ಬರೆಯುವುದೊಂದೇ ಇದಕ್ಕಿರುವ ದಾರಿ.
  • ಪ್ರತಿದಿನ ರಾತ್ರಿ ಮಲಗುವ ಮುನ್ನ ನಿಮ್ಮ ಮನಸ್ಸಿಗೆ ತೋಚುವ ಯಾವುದಾದರೊಂದು ವಿಷಯದ ಬಗ್ಗೆ ಒಂದು ಪುಟ ಬರೆಯಿರಿ. ಒಂದೇ ತಿಂಗಳಲ್ಲಿ ನಿಮ್ಮ ಬರವಣಿಗೆ ಶೈಲಿಯಲ್ಲಿ ಆಗುವ ಪ್ರಗತಿಯನ್ನು ನೀವೇ ಗಮನಿಸಿ.
  • ಪತ್ರಿಕೆಗಳಿಗೆ ನಿರಂತರವಾಗಿ ಲೇಖನಗಳನ್ನು ಬರೆಯಿರಿ. ಒಂದು ಲೇಖನ ಕಳಿಸಿ ಅದು ಪ್ರಕಟವಾಗದಿದ್ದರೆ ಅಲ್ಲಿಗೇ ನಿಲ್ಲಿಸಬೇಡಿ. ಮತ್ತೆಮತ್ತೆ ಬರೆಯಿರಿ. ಸಂಪಾದಕರಿಗೆ ಪತ್ರ/ಓದುಗರ ಪತ್ರ ಅಂಕಣಗಳನ್ನು ಬಳಸಿಕೊಳ್ಳಿ.
  • ಯಾವ ಪತ್ರಿಕೆ/ಪುರವಣಿ ಎಂತಹ ಲೇಖನಗಳನ್ನು ಪ್ರಕಟಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ಅದಕ್ಕೆ ಸರಿಹೊಂದುವ ಲೇಖನಗಳನ್ನು ಬರೆಯಿರಿ. 
  • ಒಂದೇ ಲೇಖನವನ್ನು ಎರಡೋ ಮೂರೋ ಪತ್ರಿಕೆಗಳಿಗೆ ತರಾತುರಿಯಲ್ಲಿ ಒಮ್ಮೆಲೇ ಕಳಿಸಬೇಡಿ. ಕನಿಷ್ಠ ಪಕ್ಷ ಮೂರು ತಿಂಗಳಾದರೂ ಕಾಯಿರಿ.
  • ದಿನಕ್ಕೆ ಒಂದು ಗಂಟೆಯಾದರೂ ನಿಮ್ಮ ಗ್ರಂಥಾಲಯದಲ್ಲಿ ಲಭ್ಯವಿರುವ ಎಲ್ಲ ಪತ್ರಿಕೆಗಳನ್ನು ಓದಿ. ವರದಿ, ಲೇಖನಗಳನ್ನು ಬರೆದಿರುವ ರೀತಿ, ವಾಕ್ಯರಚನೆ, ಪದಗಳ ಬಳಕೆಯಿಂದ ತೊಡಗಿ ಪತ್ರಿಕೆಗಳಲ್ಲಿ ಬಂದಿರುವ ಜಾಹೀರಾತು, ಪುಟವಿನ್ಯಾಸ ಎಲ್ಲವನ್ನೂ ಗಮನಿಸಿ.
  • ಪತ್ರಿಕೆ ಓದುವಾಗ ಒಂದು ಪುಟ್ಟ ನೋಟ್‌ಬುಕ್ ನಿಮ್ಮ ಬಳಿಯಿರಲಿ. ಪ್ರಮುಖ ಮಾಹಿತಿ, ಅಂಕಿಅಂಶ, ನುಡಿಮುತ್ತು ಇತ್ಯಾದಿಗಳನ್ನೆಲ್ಲ ಬರೆದಿಟ್ಟುಕೊಳ್ಳಿ. ನಿಮ್ಮ ಬರವಣಿಗೆಗೆ ಅದು ಸಹಾಯಕವಾದೀತು.
  • ದಿನಕ್ಕೆ ಅರ್ಧಗಂಟೆಯಾದರೂ ಟಿವಿ ಕಾರ್ಯಕ್ರಮಗಳನ್ನು ಅಧ್ಯಯನದ ದೃಷ್ಟಿಯಿಂದ ನೋಡಿ. ಸುದ್ದಿವಾಚಕರು, ವರದಿಗಾರರ ಕೌಶಲಗಳನ್ನು ಗಮನಿಸಿ. ಕಾರ್ಯಕ್ರಮಗಳ ತಾಂತ್ರಿಕ ಅಂಶಗಳಿಗೆ ಗಮನಕೊಡಿ. 
  • ಉತ್ತಮ ಅನುವಾದ ಕಲೆಯನ್ನು ರೂಢಿಸಿಕೊಳ್ಳಿ. ದಿನಕ್ಕೆ ಒಂದಾದರೂ ವರದಿ/ಪುಟ್ಟ ಬರಹವನ್ನು ಕನ್ನಡಕ್ಕೋ ಇಂಗ್ಲಿಷಿಗೋ ಅನುವಾದಿಸಿ. 
  • ಕೇವಲ ಎಫ್‌ಎಂ ರೇಡಿಯೋಗಳ ಹಾಡು, ತಮಾಷೆಗಳನ್ನಷ್ಟೇ ಕೇಳಬೇಡಿ. ಬಿಡುವಿದ್ದಾಗ ಆಕಾಶವಾಣಿಯ ವಾರ್ತೆಗಳನ್ನೂ ವಿವಿಧ ಕಾರ್ಯಕ್ರಮಗಳನ್ನೂ ಕೇಳಿ.
  • ಉತ್ತಮ ಮಾತುಗಾರರಾಗಿ. ತರಗತಿಯ ಒಳಗೆ, ಹೊರಗೆ ಮಾತನಾಡುವ ಅವಕಾಶ ಸಿಕ್ಕಾಗ ಬಳಸಿಕೊಳ್ಳಿ. ಭಾಷಣ, ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಿ. ಒಂದು ವಿಷಯವನ್ನು ನಿರ್ದಿಷ್ಟ ಸಮಯಮಿತಿಯಲ್ಲಿ ಸಮಗ್ರವಾಗಿ ಅಭಿವ್ಯಕ್ತಿಸಲು ಬರುತ್ತದೆಯೇ ಗಮನಿಸಿಕೊಳ್ಳಿ.
  • ನಿಮ್ಮ ಊರಿನಲ್ಲಿ/ನಗರದಲ್ಲಿ ನಡೆಯುವ ಸಮಾರಂಭಗಳಲ್ಲಿ ಭಾಗವಹಿಸಿ. ಅವುಗಳ ವರದಿ ತಯಾರಿಸಿ. ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾಗುವ ವರದಿಗಳೊಂದಿಗೆ ಹೋಲಿಸಿನೋಡಿ.
  • ಕಂಪ್ಯೂಟರ್, ಇಂಟರ್ನೆಟ್‌ನ ಸಾಮಾನ್ಯ ತಿಳುವಳಿಕೆಯಾದರೂ ನಿಮಗಿರಲಿ. ಅವಕಾಶ ಸಿಕ್ಕಾಗಲೆಲ್ಲ ಅವನ್ನು ಬಳಸಿ. ಇದಕ್ಕಾಗಿ ಕಂಪ್ಯೂಟರ್ ತರಗತಿಗಳಿಗೆ ಸೇರಬೇಕೆಂದಿಲ್ಲ. ಬಳಸುತ್ತಾ ಹೋದಂತೆ ಅದು ತಾನಾಗಿಯೇ ಕರಗತವಾಗುತ್ತದೆ.
  • ಸಾಮಾನ್ಯ ಜ್ಞಾನ (ಜನರಲ್ ನಾಲೆಜ್)ಕ್ಕೆ ಹೆಚ್ಚಿನ ಒತ್ತು ನೀಡಿ. ರಾಜಕೀಯ, ವಾಣಿಜ್ಯ, ಸಾಂಸ್ಕೃತಿಕ, ಸಿನಿಮಾ, ಕ್ರೀಡಾ ರಂಗಗಳ ದಿನನಿತ್ಯದ ಬೆಳವಣಿಗೆಗಳನ್ನು ಗಮನಿಸಿ. 
  • ಇದು ಸ್ಪೆಷಲೈಸೇಶನ್ ಯುಗ. ಯಾವುದಾದರೊಂದು ಕ್ಷೇತ್ರದಲ್ಲಿ ನೀವು ಎಕ್ಸ್‌ಪರ್ಟ್ ಆಗುವತ್ತ ಗಮನಕೊಡಿ.
ಕೃಪೆ: ವಿಜಯವಾಣಿ, ಮಸ್ತ್ ಪುರವಣಿ, ಮಾರ್ಚ್ 12, 2014

ಐಡಿಯಾ ಇದ್ರೆ ಮೀಡಿಯಾ!

('ವಿಜಯವಾಣಿ'ಯ 'ಮಸ್ತ್' ಪುರವಣಿಯಲ್ಲಿ ಮಾರ್ಚ್ 12, 2014ರಂದು ಪ್ರಕಟವಾದ ಲೇಖನ)

ಮೀಡಿಯಾ ಇಂದು ಹೊಸತಲೆಮಾರಿನ ಹೃದಯ ಮಿಡಿತ. ಸಾವಿರಾರು ಹುಡುಗ ಹುಡುಗಿಯರ ಕನಸಿನ ಲೋಕ. ಹಲವರಿಗೆ ಅದೊಂದು ಆಕರ್ಷಣೆಯಾದರೆ ಕೆಲವರಿಗೆ ಅದು ಬದುಕಿನ ಮಹತ್ವಾಕಾಂಕ್ಷೆ. ಇನ್ನೂ ಕೆಲವರಿಗೆ ಅದೊಂದು ದೊಡ್ಡ ಕ್ರೇಜ್. ಪತ್ರಕರ್ತರಾಗುವ ಮೂಲಕ ಸಮಾಜಕ್ಕೆ ತಮ್ಮಿಂದೇನಾದರೂ ಕೊಡಬಹುದೆಂಬ ಹುಮ್ಮಸ್ಸು ಎಷ್ಟು ಮಂದಿಯಲ್ಲಿದೆಯೋ ಗೊತ್ತಿಲ್ಲ; ಆದರೆ ಮಾಧ್ಯಮಜಗತ್ತಿಗೊಮ್ಮೆ ಪ್ರವೇಶ ಪಡೆದುಬಿಟ್ಟರೆ ಸಾಕು, ಅಲ್ಲಿಗೆ ಜೀವನ ಸಾರ್ಥಕ ಎಂದು ಕನಸು ಕಾಣುವ ಯುವಕರ ಸಂಖ್ಯೆಯಂತೂ ದೊಡ್ಡದಾಗಿಯೇ ಇದೆ.

ಜೀವನದ ಒಂದೊಂದು ಕ್ಷಣವನ್ನೂ ಮಾಧ್ಯಮಗಳೇ ಆವರಿಸಿಕೊಂಡಿರುವ ಈ ಹೊತ್ತು ಅವುಗಳ ಬಗ್ಗೆ ಅಂತಹದೊಂದು ಸೆಳೆತ ಹುಟ್ಟಿಕೊಳ್ಳುವುದರಲ್ಲಿ ಅತಿಶಯವೇನೂ ಇಲ್ಲ. ಅದರಲ್ಲೂ ಭವಿಷ್ಯದ ಬಗ್ಗೆ ಸ್ವತಂತ್ರವಾಗಿ ಮತ್ತು ವಿಭಿನ್ನವಾಗಿ ಯೋಚಿಸಬಲ್ಲ ಇಂದಿನ ಯುವಕ ಯುವತಿಯರು ಮಾಧ್ಯಮಗಳ ಬಗ್ಗೆ ಅಪಾರ ಆಕರ್ಷಣೆ ಬೆಳೆಸಿಕೊಳ್ಳುವುದು ಸಹಜವಾಗಿಯೇ ಇದೆ.

ಮೀಡಿಯಾ ಕ್ರೇಜ್‌ನ ಹಿಂದೆ...

ಆದರೆ ಮೀಡಿಯಾ ಎಂದರೆ ಟಿವಿ ವಾಹಿನಿಗಳು, ಅದರಲ್ಲೂ ಇಪ್ಪತ್ನಾಲ್ಕು ಗಂಟೆ ಸುದ್ದಿಬಿತ್ತರಿಸುವ ನ್ಯೂಸ್ ಚಾನೆಲ್‌ಗಳು, ಎಂಬುದೇ ಮಾಧ್ಯಮ ಲೋಕದ ಕನಸಿಗೆ ಬಿದ್ದಿರುವ ಬಹುತೇಕ ಹೊಸಹುಡುಗರ ಕಲ್ಪನೆ. ಮೀಡಿಯಾಕ್ಕೆ ಪ್ರವೇಶ ಪಡೆಯುವುದೆಂದರೆ ಸುದ್ದಿವಾಹಿನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಎಂದೇ ಮಾಧ್ಯಮ ಕೋರ್ಸುಗಳನ್ನು ಆರಿಸಿಕೊಳ್ಳುತ್ತಿರುವ ಹೆಚ್ಚಿನ ವಿದ್ಯಾರ್ಥಿಗಳ ನಂಬಿಕೆ. ಟಿವಿ ಸ್ಕ್ರೀನಿನ ಒಳಗೆ ನಿಂತು ಪಟಪಟನೆ ಸುದ್ದಿ ಹೇಳುವ ಯುವ ಆಂಕರ್‌ಗಳು, ಚಾನೆಲ್‌ನ  ಲೋಗೋ ಹಿಡಿದುಕೊಂಡು ಘಟನೆಯ ಸ್ಥಳದಿಂದಲೇ ಬ್ರೇಕಿಂಗ್ ನ್ಯೂಸ್ ಕೊಡುವ ವರದಿಗಾರರು, ತಮ್ಮೆದುರು ಕೂತ ರಾಜಕಾರಣಿಯ ಬೆವರಿಳಿಯುವಂತೆ ಒಂದಾದಮೇಲೊಂದು ಪ್ರಶ್ನೆ ಎಸೆದು ನೇರಾನೇರ ಸಂದರ್ಶನ ಮಾಡುವ ಮಾತಿನ ಮಲ್ಲರು... ಇವರನ್ನೆಲ್ಲ ನೋಡುತ್ತ ತಾವೂ ಒಂದು ದಿನ ಅಂತಹದೇ ಕೆಲಸ ಮಾಡಿ ಶೈನ್ ಆಗಬೇಕು ಎಂಬ ಕನಸು ಈ ಹುಡುಗರದ್ದು. ಸಿನಿಮಾಗಳ ಗ್ಲಾಮರ್ ಸುದ್ದಿವಾಹಿನಿಗಳಲ್ಲಿ ಇದೆಯೆಂದು ಅನಿಸಿರುವುದೇ ಇವರ ಕ್ರೇಜ್ ಹಿಂದಿನ ರಹಸ್ಯ.

ಪತ್ರಿಕೋದ್ಯಮ ಕೋರ್ಸಿಗೆ ಹೊಸದಾಗಿ ಸೇರಿಕೊಂಡಿರುವ ಯಾರನ್ನಾದರೂ, ಅದರಲ್ಲೂ ಪಟ್ಟಣಗಳ ಹುಡುಗ ಹುಡುಗಿಯರನ್ನು 'ಏನಾಗಬೇಕು ಅಂದುಕೊಂಡಿದ್ದೀರಿ?’ ಎಂದು ಕೇಳಿನೋಡಿ. ಅವರಿಂದ ತಕ್ಷಣ ಬರುವ ಉತ್ತರ 'ಟಿವಿ ಆಂಕರ್ ಆಗೋದು’. ಪತ್ರಿಕೆಗಳಿಂದ ತೊಡಗಿ ಅನಿಮೇಶನ್ ಕ್ಷೇತ್ರದವರೆಗೆ ಮಾಧ್ಯಮಲೋಕ ವಿಸ್ತಾರವಾಗಿ ಹರಡಿಕೊಂಡಿರುವುದು ಮತ್ತು ಅದರಲ್ಲಿ ಬಗೆಬಗೆಯ ಉದ್ಯೋಗಾವಕಾಶಗಳಿರುವುದರ ಬಗ್ಗೆ ಅವರು ಯೋಚಿಸುವುದಿಲ್ಲ. ಪತ್ರಿಕೋದ್ಯಮ ಕೋರ್ಸು ಮುಗಿದ ಕೂಡಲೇ ಜರ್ನಲಿಸ್ಟ್ ಆಗಿಬಿಡುವ ಕನಸೇ ಹೆಚ್ಚಿನವರದ್ದು. ಮಾಧ್ಯಮಲೋಕದ ಸ್ಪರ್ಧೆಯೇನು, ಅದು ಬಯಸುವ ಜ್ಞಾನ-ಕೌಶಲಗಳೇನು, ಅವುಗಳನ್ನು ಮೈಗೂಡಿಸಿಕೊಳ್ಳಬೇಕಾದರೆ ಪುಸ್ತಕದ ಬದನೆಕಾಯಿಯ ಹೊರತಾಗಿ ತಾವು ಮಾಡಬೇಕಿರುವುದೇನು ಎಂದೆಲ್ಲ ತಿಳಿದುಕೊಳ್ಳುವ ಗೋಜಿಗೇ ಹೋಗುವುದಿಲ್ಲ.

ವಾಸ್ತವಕ್ಕೆ ಬನ್ನಿ...

ಆದರೆ ಇಂದು ಅದರ ಅನಿವಾರ್ಯತೆ ಇದೆ. ಮಾಧ್ಯಮ ಜಗತ್ತು ವಿಶಾಲವಾಗಿ ಬೆಳೆದುಕೊಂಡಿರುವುದೇನೋ ನಿಜ. ಆದರೆ ಅದಕ್ಕೆ ಪ್ರವೇಶ ಪಡೆಯುವುದು ಮತ್ತು ಅಲ್ಲಿ ಒಳ್ಳೆಯ ಹೆಸರು ಗಳಿಸಿಕೊಳ್ಳುವುದು ಕನಸು ಕಂಡಷ್ಟು ಸುಲಭ ಅಲ್ಲ. ಎಲ್ಲಕ್ಕಿಂತ ಮೊದಲು ಮೀಡಿಯಾ ಎಂದ ಕೂಡಲೇ ಟಿವಿ ಎನ್ನುವ ಭ್ರಮೆಯಿಂದ ಯುವ ಉತ್ಸಾಹಿಗಳು ಈಚೆ ಬರಬೇಕು. ಟಿವಿ ಈ ಕಾಲದ ಅತ್ಯಂತ ಪ್ರಭಾವಿ ಮಾಧ್ಯಮಗಳಲ್ಲೊಂದು ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ಮಾಧ್ಯಮಗಳಲ್ಲಿ ಕೆಲಸ ಮಾಡಬೇಕೆಂಬ ಆಸಕ್ತಿಯಿರುವವರು ಟಿವಿಯಾಚೆಗೂ ಒಂದು ಜಗತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಚಾನೆಲ್‌ಗಳ ಬಗ್ಗೆ ವಿಶೇಷ ಆಸಕ್ತಿ ಇರುವವರೂ ಕೂಡ ಚಾನೆಲ್ ಎಂದ ಕೂಡಲೇ ನ್ಯೂಸ್ ಆಂಕರ್ ಆಗಿಬಿಡುವುದು ಎಂಬ ಕಲ್ಪನೆಯಿಂದ ಹೊರಬರಬೇಕು. ಆಂಕರ್ ಆಡುವ ನಾಲ್ಕು ಮಾತಿನ ಹಿಂದೆ ಹತ್ತಾರು ಜನರ ಒದ್ದಾಟ, ಧಾವಂತ, ಶ್ರಮ ಇರುತ್ತದೆ.

ಜರ್ನಲಿಸಂ ಇಂದು ಡಿವಿಜಿ, ತಿ.ತಾ. ಶರ್ಮರ ಕಾಲದ ಪತ್ರಿಕಾವೃತ್ತಿಯಾಗಿ ಉಳಿದಿಲ್ಲ, ಉದ್ಯಮವಾಗಿ ಬದಲಾಗಿದೆ. ಅದರ ವ್ಯಾಪ್ತಿ-ವಿಸ್ತಾರ ಕೂಡ ನೂರು ಪಟ್ಟು ಹಿಗ್ಗಿದೆ. ಅಲ್ಲಿರುವ ಅವಕಾಶಗಳು ಹೇರಳ. ಭಾರತದಲ್ಲಿಂದು ೮೨,೦೦೦ಕ್ಕಿಂತಲೂ ಹೆಚ್ಚು ಪತ್ರಿಕೆಗಳಿವೆ. ೭೫೦ರಷ್ಟು ಖಾಸಗಿ ಚಾನೆಲ್‌ಗಳೂ ೩೦ಕ್ಕೂ ಅಧಿಕ ದೂರದರ್ಶನದ ವಾಹಿನಿಗಳೂ ಇವೆ. ೪೦೦ಕ್ಕೂ ಹೆಚ್ಚು ಆಕಾಶವಾಣಿ ಕೇಂದ್ರಗಳು, ೩೦೦ರಷ್ಟು ಖಾಸಗಿ ಎಫ್‌ಎಂ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಾವಿರಾರು ಆನ್‌ಲೈನ್ ತಾಣಗಳಿವೆ. ೫೦೦ ಮಿಲಿಯನ್ ಡಾಲರ್ ಮೌಲ್ಯದ ಅನಿಮೇಶನ್ ಮಾರುಕಟ್ಟೆಯಿದೆ. ವರ್ಷಕ್ಕೆ ೩೬,೦೦೦ ಕೋಟಿ ರೂಪಾಯಿ ಆದಾಯ ಹುಟ್ಟುಹಾಕುವ ಜಾಹೀರಾತು ಕ್ಷೇತ್ರವಿದೆ. ವರ್ಷಂಪ್ರತಿ ಏನಿಲ್ಲವೆಂದರೂ ೧೫೦೦ ಸಿನಿಮಾಗಳು ತಯಾರಾಗುತ್ತಿವೆ. ಊಹಿಸಿಕೊಂಡರೆ ಅಬ್ಬಾ ಎನಿಸುತ್ತದೆ; ನಮ್ಮ ಮಾಧ್ಯಮ ವಿದ್ಯಾರ್ಥಿಗಳ ಎದುರು ಎಷ್ಟು ದೊಡ್ಡ ಉದ್ಯೋಗ ಜಗತ್ತು ಇದೆ ಎಂದು ಸೋಜಿಗವಾಗುತ್ತದೆ.

ಜತೆಗೆ ಈ ಉತ್ಸಾಹಿಗಳು ಇಂತಹ ಸ್ಪರ್ಧಾತ್ಮಕ ರಂಗದಲ್ಲಿ ಬದುಕುಳಿಯಬೇಕಾದರೆ ಎಷ್ಟೊಂದು ಸನ್ನದ್ಧರಾಗಬೇಕಿದೆ ಎಂದು ಆತಂಕವೂ ಆಗುತ್ತದೆ. ಉದ್ಯೋಗಾವಕಾಶಗಳೇನೋ ಧಾರಾಳ ಇವೆ. ಆದರೆ ಅವುಗಳ ನಿರೀಕ್ಷೆಗಳನ್ನೆಲ್ಲ ಪೂರೈಸಿ ಸಮರ್ಥವಾಗಿ ನಿಭಾಯಿಸಬಲ್ಲ ಪ್ರಾಯೋಗಿಕ ತಿಳುವಳಿಕೆ ನಮ್ಮ ತರುಣಪಡೆಗೆ ಇದೆಯೇ?

ಬರೀ ಕರ್ನಾಟಕದಲ್ಲೇ ಇಂದು ಸುಮಾರು ನೂರೈವತ್ತರಷ್ಟು ಸಂಸ್ಥೆಗಳು ಪತ್ರಿಕೋದ್ಯಮವನ್ನು ಒಂದು ಪ್ರಧಾನ ವಿಷಯವನ್ನಾಗಿ ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲಿ ಬೋಧಿಸುತ್ತಿವೆ. ಒಂದು ಕಾಲೇಜು/ವಿಭಾಗದಿಂದ ವರ್ಷವೊಂದಕ್ಕೆ ಸರಾಸರಿ ೨೦ ವಿದ್ಯಾರ್ಥಿಗಳು ಹೊರಬಂದರೂ ಮೂರು ಸಾವಿರ ಮಂದಿ ಮಾಧ್ಯಮ ಶಿಕ್ಷಣ ಪಡೆದವರು ತಯಾರಾದಂತಾಯಿತು. ಪದವಿ ಹಂತದಲ್ಲಿ ಪತ್ರಿಕೋದ್ಯಮ ಓದಿದವರೆಲ್ಲ ಅದರಲ್ಲೇ ಮುಂದುವರಿಯಬೇಕೆಂದೇನೂ ಇಲ್ಲ. ಅವರಲ್ಲಿ ಬರೀ ೫೦೦ ಮಂದಿ ಮಾಧ್ಯಮ ಕ್ಷೇತ್ರಕ್ಕೆ ಬಂದರೂ, ಅವರೆಲ್ಲರಿಗೂ ಕೊಡುವುದಕ್ಕೆ ನಮ್ಮಲ್ಲಿ ಉದ್ಯೋಗ ಇದೆಯೇ? ಅಥವಾ ಇನ್ನೊಂದು ರೀತಿಯಲ್ಲಿ ಕೇಳುವುದಾದರೆ, ನಮ್ಮ ಮಾಧ್ಯಮ ಕ್ಷೇತ್ರದ ತೆಕ್ಕೆಗೆ ಸೇರುವುದಕ್ಕೆ ಇಷ್ಟು ಮಂದಿಯಲ್ಲಿ ನಿಜವಾಗಿಯೂ ಅರ್ಹತೆಯಿರುವವರ ಸಂಖ್ಯೆ ಎಷ್ಟು?

ಪತ್ರಿಕೋದ್ಯಮವನ್ನು ಬೋಧಿಸುವ ಕಾಲೇಜುಗಳ ಮೂಲಭೂತ ಸೌಕರ್ಯಗಳ ಬಗ್ಗೆ, ಅಲ್ಲಿ ಪತ್ರಿಕೋದ್ಯಮವನ್ನು ಬೋಧಿಸುವ ವಿಧಾನದ ಬಗ್ಗೆ, ಅಲ್ಲಿನ ಬೋಧಕರ ಪ್ರಾಯೋಗಿಕ ಜ್ಞಾನ ಮತ್ತು ಕೌಶಲಗಳ ಬಗೆಗೆಲ್ಲ ಸಾಕಷ್ಟು ಚರ್ಚೆಗಳಿವೆ. ಅದು ಪ್ರತ್ಯೇಕ ವಿಚಾರ. ಮಾಧ್ಯಮಲೋಕವನ್ನು ಸೇರುವುದಕ್ಕೆ ಕನಸುಗಣ್ಣುಗಳಿಂದ ಕಾಯುತ್ತಿರುವ ಯುವತಲೆಮಾರಿನ ವೈಯುಕ್ತಿಕ ಸವಾಲುಗಳೂ ಗಂಭೀರ ವಿಷಯವೇ.

ಗ್ಲಾಮರ್ ಅಲ್ಲ, ಕೌಶಲ

ಸ್ನೇಹಿತರೇ, ಮಾಧ್ಯಮಕ್ಷೇತ್ರ ಬಯಸುತ್ತಿರುವುದು ಗ್ಲಾಮರನ್ನು ಅಲ್ಲ. ಅಲ್ಲಿಗೆ ಬೇಕಾಗಿರುವುದು ನಿಮ್ಮ ಪರಿಶ್ರಮ, ಮತ್ತು ಅದರ ಮೂಲಕ ನೀವು ಮೈಗೂಡಿಸಿಕೊಳ್ಳಬೇಕಾದ ಕೌಶಲ ಮತ್ತು ಜ್ಞಾನ. ಮುಖ್ಯವಾಗಿ ಮಾಧ್ಯಮಕ್ಷೇತ್ರ ಪತ್ರಿಕೋದ್ಯಮವನ್ನು ಕಾಲೇಜು-ವಿಶ್ವವಿದ್ಯಾನಿಲಯಗಳಲ್ಲಿ ಓದಿದವರಿಗಷ್ಟೇ ಮೀಸಲಾಗಿಲ್ಲ. ಅದೊಂದು ಮುಕ್ತ ಕ್ಷೇತ್ರ. ತಾವು ಬಯಸುವ ಅರ್ಹತೆ, ಆಸಕ್ತಿಯಿರುವ ಯಾರನ್ನೇ ಆದರೂ ಮಾಧ್ಯಮಗಳು ಸಂತೋಷದಿಂದ ಬರಮಾಡಿಕೊಳ್ಳುತ್ತವೆ. ಅವರಿಗೆ ಬೇಕಾಗಿರುವುದು ನಿಮ್ಮ ಡಿಗ್ರಿ-ಅಂಕಪಟ್ಟಿ ಅಲ್ಲ, ಬದಲಿಗೆ ನಿಮ್ಮ ಆಸಕ್ತಿ, ಶ್ರಮ, ಜ್ಞಾನ ಮತ್ತು ತಿಳುವಳಿಕೆ.

ಮೀಡಿಯಾದ ಬಗ್ಗೆ ನೀವು ಎಂತಹ ಕ್ರೇಜ್ ಇದ್ದವರಾದರೂ, ಪದವಿ ಮುಗಿಯುವ ಹೊತ್ತಿಗೆ ಕಡೇಪಕ್ಷ ಒಳ್ಳೆಯ ಬರವಣಿಗೆ ಮತ್ತು ಮಾತಿನ ಕೌಶಲ ರೂಢಿಸಿಕೊಳ್ಳದೆ ಹೋದರೆ ಯಾವ ಮಾಧ್ಯಮದಲ್ಲಾದರೂ ಜಾಗಕಂಡುಕೊಳ್ಳುವುದು ಕಷ್ಟ. ಸಮಕಾಲೀನ ವಿದ್ಯಮಾನಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆ, ಸಾಹಿತ್ಯ-ಸಂಸ್ಕೃತಿ-ರಾಜಕೀಯ-ಇತಿಹಾಸ-ವಾಣಿಜ್ಯ ವಿಷಯಗಳ ಸಾಮಾನ್ಯಜ್ಞಾನ ಬೇಕೇಬೇಕು. ಅಯ್ಯೋ ಇವನ್ನೆಲ್ಲ ಮೇಸ್ಟ್ರುಗಳು ಕಲಿಸುತ್ತಿಲ್ಲ ಎಂದು ಕೊರಗುತ್ತಲೋ ದೂರುತ್ತಲೋ ಕೂರಬೇಡಿ. ಇವಕ್ಕೆಲ್ಲ ನಿಮಗೆ ನೀವೇ ಗುರುಗಳು. ಮತ್ತೆಮತ್ತೆ ಬರೆಯುವುದರಿಂದಷ್ಟೇ ಉತ್ತಮ ಬರವಣಿಗೆ ಕೌಶಲ ಸಾಧಿಸಲು ಸಾಧ್ಯ. ನಿಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಿಸುವ ಅವಕಾಶ ಸಿಕ್ಕಾಗಲೆಲ್ಲ ಮಾತನಾಡಿದರಷ್ಟೇ ಮಾತಿನ ಕೌಶಲ ಬೆಳೆಯಲು ಸಾಧ್ಯ. ಬರೆಯಲು, ಮಾತನಾಡಲು ನಿಮ್ಮೆದುರು ಇಂದು ಇರುವ ಅವಕಾಶಗಳಿಗೆ ಲೆಕ್ಕವಿಲ್ಲ. ಪದವಿ ಮುಗಿಯುವ ಹೊತ್ತಿಗೆ ಕನ್ನಡದಲ್ಲೋ ಇಂಗ್ಲಿಷಿನಲ್ಲೋ ಒಂದು ಪುಟ ತಪ್ಪಿಲ್ಲದೆ ಬರೆಯುವ, ಐದು ನಿಮಿಷ ತಡಬಡಾಯಿಸದೆ ಮಾತನಾಡುವ ಸಾಮರ್ಥ್ಯ ನಿಮ್ಮಲ್ಲಿ ಬೆಳೆಯದೇ ಹೋದರೆ ಆ ಪದವಿಗೆ ಯಾವ ಬೆಲೆ?

ಇವಕ್ಕೆ ಪೂರಕವಾಗಿ ತಿಂಗಳಿಗೊಂದಾದರೂ ಒಳ್ಳೆಯ ಪುಸ್ತಕ ಓದುವ, ಪ್ರತಿದಿನ ಒಂದು ಗಂಟೆಯಷ್ಟಾದರೂ ಪತ್ರಿಕೆ, ನಿಯತಕಾಲಿಕಗಳನ್ನು ತಿರುವಿ ಹಾಕುವ, ಟಿವಿ ವಾರ್ತೆಗಳನ್ನು ಗಮನಿಸುವ ಹವ್ಯಾಸ ರೂಢಿಸಿಕೊಳ್ಳಿ.  ನೀವು ನಿಜವಾಗಿಯೂ ಸೃಜನಶೀಲರೇ ಆಗಿದ್ದರೆ ಪತ್ರಿಕೆ, ಟಿವಿ, ರೇಡಿಯೋ ಅಲ್ಲದೆ ಜಾಹೀರಾತು, ಸಾರ್ವಜನಿಕ ಸಂಪರ್ಕ, ಅನಿಮೇಶನ್, ಗ್ರಾಫಿಕ್ಸ್, ಛಾಯಾಗ್ರಹಣ ಕ್ಷೇತ್ರಗಳೂ ನಿಮಗಾಗಿ ಕಾದಿವೆ. ಆದರೆ ನೆನಪಿಡಿ, ಇವು ಯಾವುವೂ ತಾವಾಗಿಯೇ ಬಂದು ನಿಮ್ಮ ಮನೆಮುಂದೆ ನಿಲ್ಲುವುದಿಲ್ಲ.

(ಮಾಧ್ಯಮ ಪ್ರವೇಶಕ್ಕೆ 15 ಸೂತ್ರಗಳು, ಮಾಧ್ಯಮ ಉದ್ಯೋಗಾವಕಾಶಗಳ ವಿವರಗಳಿಗೆ ಇಲ್ಲಿಗೆ ಹೋಗಿ)

ವಿದ್ಯಾರ್ಥಿಗಳೇ, ಪತ್ರಕರ್ತರಾಗಬೇಕೆಂದು ಬಯಸಿದ್ದೀರಾ?

(ತುಮಕೂರಿನಿಂದ ಪ್ರಕಟವಾಗುವ 'ಪ್ರಜಾಪ್ರಗತಿ' ದೈನಿಕದಲ್ಲಿ ಮಾರ್ಚ್ 17, 2014ರಂದು ಪ್ರಕಟವಾದ ಲೇಖನ)

ಟಿವಿ ಸ್ಕ್ರೀನಿನ ಹಿಂದೆ ನಿಂತು ಅರಳು ಹುರಿದಂತೆ ಪಟಪಟನೆ ಸುದ್ದಿ ಹೇಳುವ ಆಂಕರ್‌ನ್ನು ನೋಡಿದಾಗೆಲ್ಲ ನಾನೂ ಒಂದು ದಿನ ಅಂತಹದೇ ಆಂಕರ್ ಆಗಬೇಕೆಂದು ಕನಸು ಕಂಡಿದ್ದೀರಾ? ಖಾಸಗಿ ಎಫ್‌ಎಂ ರೇಡಿಯೋದ ಬೆಡಗಿ ಯಾವುದೋ ವಿಷಯದ ಎಳೆ ಹಿಡಿದು ಲೀಲಾಜಾಲವಾಗಿ ಸರಸರನೆ ಹರಟುತ್ತಿರಬೇಕಾದರೆ ನಾನೂ ಒಂದು ದಿನ ಹೀಗೆಯೇ ರೇಡಿಯೋ ಜಾಕಿ ಆಗುವೆನೆಂದು ಊಹಿಸಿ ಪುಳಕಗೊಂಡಿದ್ದೀರಾ? ದೊಡ್ಡ ಹಗರಣವೊಂದರ ಮೇಲೆ ಬೆಳಕುಚೆಲ್ಲಿ ತಪ್ಪಿತಸ್ಥರಿಗೆ ಚಾಟಿಯೇಟು ನೀಡುವ ವಿಸ್ತೃತ ವರದಿಯೊಂದನ್ನು ಪತ್ರಿಕೆಯಲ್ಲಿ ಓದುತ್ತಾ ನಾನೂ ಒಂದು ದಿನ ಇಂತಹ ವರದಿಗಳನ್ನು ಮಾಡುವ ನಿಷ್ಠುರ ಪತ್ರಕರ್ತನಾಗಬೇಕೆಂದು ಬಯಸಿದ್ದೀರಾ?

ಇಂದಿನ ಯುವಕರು ಈ ಬಗೆಯ ಕನಸುಗಳನ್ನು ಕಾಣುವುದು ಸಾಮಾನ್ಯ. ಅದರಲ್ಲೂ ಹದಿಹರೆಯದವರಿಗಂತೂ ಮೀಡಿಯಾ ಒಂದು ದೊಡ್ಡ ಕ್ರೇಜ್. ನಮ್ಮ ಸುತ್ತಮುತ್ತಲಿನ ಮಾಧ್ಯಮಗಳ ಮಾಯಾಲೋಕವೇ ಅಂತಹದು. ಊಹನೆಗೂ ನಿಲುಕದಷ್ಟು ವಿಸ್ತಾರವಾಗಿ ಅದು ಬೆಳೆದುಬಿಟ್ಟಿದೆ. ಮಾಧ್ಯಮಗಳಿಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಅಷ್ಟೇ ಏಕೆ, ಟಿವಿ ಪತ್ರಿಕೆಗಳಿಲ್ಲದ ಒಂದು ದಿನದ ಬಗೆಗಾದರೂ ನಾವಿಂದು ಊಹಿಸಲಾರೆವು. ನಮ್ಮ ದಿನನಿತ್ಯದ ಬದುಕಿನಲ್ಲಿ ಊಟ, ನಿದ್ದೆ, ನೀರಿನಷ್ಟೇ ಅನಿವಾರ್ಯವಾಗಿಬಿಟ್ಟಿವೆ ಅವು.

ಮಾಧ್ಯಮರಂಗದಲ್ಲಿ ಇಂದು ಹೇರಳ ಉದ್ಯೋಗಾವಕಾಶವಿದೆ. ಜರ್ನಲಿಸಂ ಎಂದರೆ ಇಂದು ಕೇವಲ ವೃತ್ತಪತ್ರಿಕೆ, ಟಿವಿ ಚಾನೆಲ್ ಮಾತ್ರ ಅಲ್ಲ; ರೇಡಿಯೋ, ಜಾಹೀರಾತು, ಸುದ್ದಿಸಂಸ್ಥೆ, ಸಾರ್ವಜನಿಕ ಸಂಪರ್ಕ, ಆನ್‌ಲೈನ್ ಮೀಡಿಯಾ, ಗ್ರಾಫಿಕ್ಸ್, ಅನಿಮೇಶನ್, ಸಿನಿಮಾ, ಕಿರುತೆರೆ ಕ್ಷೇತ್ರಗಳಿಗೆ ಅದು ಹರಡಿಕೊಂಡಿದೆ. ಅಲ್ಲೆಲ್ಲ ವಿಫುಲ ಉದ್ಯೋಗಾವಕಾಶವಿದೆ. ನಮ್ಮ ಮಾಧ್ಯಮ ಕ್ಷೇತ್ರಕ್ಕೆ ಇಂದು ಪ್ರತಿಭಾವಂತ ಮಾನವ ಸಂಪನ್ಮೂಲದ ಅವಶ್ಯಕತೆ ತುಂಬಾ ಇದೆ.

ಪತ್ರಿಕೋದ್ಯಮ ಕೋರ್ಸ್

ಮಾಧ್ಯಮರಂಗವನ್ನು ಸೇರುವ ಕನಸುಳ್ಳವರಿಗಾಗಿಯೇ ಇಂದು ಪತ್ರಿಕೋದ್ಯಮವನ್ನು ಕಾಲೇಜು-ವಿಶ್ವವಿದ್ಯಾನಿಲಯ ಹಂತಗಳಲ್ಲಿ ಬೋಧಿಸಲಾಗುತ್ತಿದೆ. ಪತ್ರಿಕೋದ್ಯಮ ಶಿಕ್ಷಣ ಈಚಿನ ವರ್ಷಗಳಲ್ಲಿ ತುಂಬ ಜನಪ್ರಿಯವಾಗುತ್ತಿದೆ. ಪತ್ರಿಕೋದ್ಯಮ ಪದವಿ ಪಡೆದವರಿಗೆ ಮಾಧ್ಯಮಗಳಲ್ಲಿ ವಿಶೇಷ ಆದ್ಯತೆಯಿರುವುದೇ ಇದಕ್ಕೆ ಕಾರಣ. ನಗರ ಪ್ರದೇಶಗಳಲ್ಲಂತೂ ಖಾಸಗಿ ಸಂಸ್ಥೆಗಳು ಸ್ಪರ್ಧೆಗೆ ಬಿದ್ದು ಪತ್ರಿಕೋದ್ಯಮ ಕೋರ್ಸುಗಳನ್ನು ಆರಂಭಿಸುತ್ತಿವೆ. ಕಲಾ ಪದವಿಗಳಿಗೆ ಅಷ್ಟಾಗಿ ಮಹತ್ವ ನೀಡದೆ ಬಿ.ಕಾಂ. ಬಿ.ಎಸ್ಸಿ. ಪದವಿಗಳನ್ನು ಮುಂದುವರಿಸುತ್ತಿರುವ ಕಾಲೇಜುಗಳೂ ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಇರಿಸಿ ಬಿ.ಎ. ಪದವಿ ನೀಡುತ್ತಿರುವುದು ಬೆಂಗಳೂರಿನಂತಹ ಮಹಾನಗರಗಳಲ್ಲಿ ಹೊಸ ಬೆಳವಣಿಗೆಯೆನಿಸಿದೆ.
ಪತ್ರಿಕೋದ್ಯಮ ಶಿಕ್ಷಣ ನಗರಕೇಂದ್ರಿತವಾಗಿರುವುದೇನೋ ನಿಜ. ಆದರೆ ಈಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಕಾಲೇಜುಗಳಲ್ಲೂ ಪತ್ರಿಕೋದ್ಯಮ ಪದವಿ ಲಭ್ಯವಾಗುತ್ತಿದೆ. ಕನ್ನಡ, ಇಂಗ್ಲಿಷ್, ಇತಿಹಾಸ, ರಾಜ್ಯಶಾಸ್ತ್ರ, ಮನಃಶಾಸ್ತ್ರ, ಅರ್ಥಶಾಸ್ತ್ರಗಳಂತಹ ಜನಪ್ರಿಯ ವಿಷಯಗಳ ಜತೆ ಇಂದು ಪತ್ರಿಕೋದ್ಯಮವನ್ನೂ ಓದಬಹುದಾಗಿದೆ.

ಯಾರಿಗೆ ಕೋರ್ಸ್?

ಇಂದು ಪತ್ರಿಕೋದ್ಯಮವನ್ನು ಪದವಿ ಹಾಗೂ ಸ್ನಾತಕೋತ್ತರ ಹಂತದಲ್ಲಿ ಕಲಿಯಬಹುದು. ನೀವು ಪಿಯುಸಿ ವಿದ್ಯಾರ್ಥಿಗಳಾಗಿದ್ದರೆ ಪತ್ರಿಕೋದ್ಯಮ ಕೋರ್ಸಿನ ಬಗ್ಗೆ ಯೋಚಿಸುವುದಕ್ಕೆ ಇದು ಸಕಾಲ. ಪಿಯುಸಿಯಲ್ಲಿ ಕಲಾ ವಿಭಾಗದಲ್ಲೇ ಓದಿರಬೇಕೆಂದೇನೂ ಇಲ್ಲ. ವಾಣಿಜ್ಯ, ವಿಜ್ಞಾನ ಏನೇ ಓದಿದ್ದರೂ ನೀವು ಮಾಧ್ಯಮ ಕ್ಷೇತ್ರದ ಬಗ್ಗೆ ಆಸಕ್ತಿ ಉಳ್ಳವರಾದರೆ ಖಂಡಿತವಾಗಿಯೂ ಪದವಿ ಹಂತದಲ್ಲಿ ಬಿ.ಎ. ಆಯ್ದುಕೊಂಡು ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಓದಬಹುದು.

ನಿಮ್ಮ ಸುತ್ತಮುತ್ತಲಿನ ಕಾಲೇಜುಗಳಲ್ಲಿ ಪತ್ರಿಕೋದ್ಯಮವನ್ನು ಬೋಧಿಸಲಾಗುತ್ತಿದೆಯೇ ವಿಚಾರಿಸಿನೋಡಿ. ಇಲ್ಲವಾದರೆ ನಿಮಗೆ ಅನುಕೂಲವೆನಿಸುವ ಊರುಗಳಲ್ಲಿ ಆ ಸೌಲಭ್ಯವಿದೆಯೇ ತಿಳಿದುಕೊಳ್ಳಿ. ಪತ್ರಿಕೋದ್ಯಮ ಓದಲೆಂದೇ ನೂರಾರು ಮೈಲಿ ದೂರದ ಕಾಲೇಜುಗಳನ್ನು ಹುಡುಕಿ ಹೋಗಿ ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡು ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ವಿದ್ಯಾರ್ಥಿಗಳು ಸಾಕಷ್ಟು ಸಿಗುತ್ತಾರೆ.

ಸ್ನಾತಕೋತ್ತರ ಹಂತದಲ್ಲೂ ಸಮೂಹ ಸಂವಹನ, ಪತ್ರಿಕೋದ್ಯಮ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಇಂದು ಶಿಕ್ಷಣ ಅವಕಾಶಗಳಿವೆ. ಕರ್ನಾಟಕದ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ, ಅನೇಕ ಖಾಸಗಿ ಸಂಸ್ಥೆಗಳಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಶಿಕ್ಷಣ ಲಭ್ಯವಿದೆ. ಪತ್ರಿಕೋದ್ಯಮದಲ್ಲಿ ಎಂ.ಎ. ಪದವಿ ಓದಬೇಕೆಂದಿದ್ದರೆ ನೀವು ಸ್ನಾತಕ ಪದವಿಯಲ್ಲೂ ಅದನ್ನೇ ಓದಿರಬೇಕೆಂದೇನೂ ಇಲ್ಲ. ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಎಸ್‌ಡಬ್ಲ್ಯೂ ಯಾವುದೇ ಪದವಿ ಓದಿದ್ದರೂ ನೀವು ಪತ್ರಿಕೋದ್ಯಮ ಎಂ.ಎ. ಓದಬಹುದು. ನಿಮ್ಮ ಮೆರಿಟ್, ವರ್ಗ ಮತ್ತು ಆಯಾ ಸಂಸ್ಥೆಗಳು ನಡೆಸುವ ಪ್ರವೇಶ ಪರೀಕ್ಷೆಗಳ ಆಧಾರದಲ್ಲಿ ಸೀಟ್ ಸಿಗುತ್ತದೆ. ಸಾಮಾನ್ಯವಾಗಿ ಪದವಿ ಪರೀಕ್ಷೆಗಳ ಫಲಿತಾಂಶ ಹೊರಬೀಳುವ ಸಮಯದಲ್ಲೇ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ವಿಶ್ವವಿದ್ಯಾನಿಲಯಗಳು ಅರ್ಜಿ ಆಹ್ವಾನಿಸುತ್ತವೆ. ಪತ್ರಿಕೆಗಳನ್ನು ಹಾಗೂ ಆಯಾ ಸಂಸ್ಥೆಗಳ ವೆಬ್‌ಸೈಟುಗಳನ್ನು ಆಗಿಂದಾಗ್ಗೆ ಗಮನಿಸುತ್ತಿರಬೇಕು.

ತುಮಕೂರಿನಲ್ಲಿ ಪತ್ರಿಕೋದ್ಯಮ ಕೋರ್ಸ್

ಪತ್ರಿಕೋದ್ಯಮ ಓದಬಯಸುವವರಿಗೆ ತುಮಕೂರು ಜಿಲ್ಲೆಯಲ್ಲಂತೂ ಧಾರಾಳ ಅವಕಾಶವಿದೆ. ಈಗಾಗಲೇ ಆರು ಕಾಲೇಜುಗಳಲ್ಲಿ ಪದವಿ ಹಂತದಲ್ಲೂ ಒಂದು ಸಂಸ್ಥೆಯಲ್ಲಿ ಸ್ನಾತಕೋತ್ತರ ಹಂತದಲ್ಲೂ ಪತ್ರಿಕೋದ್ಯಮ ಶಿಕ್ಷಣ ಲಭ್ಯವಿದೆ. ನಿಮ್ಮ ಅನುಕೂಲಕ್ಕಾಗಿ ಅವುಗಳ ವಿವರ ನೀಡಲಾಗಿದೆ:

ವಿಶ್ವವಿದ್ಯಾನಿಲಯ ಕಲಾ ಕಾಲೇಜು, ತುಮಕೂರು
ಶ್ರೀ ಸಿದ್ಧಗಂಗಾ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ತುಮಕೂರು
ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು, ತುಮಕೂರು
ಕೌಟಿಲ್ಯ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್, ತುಮಕೂರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಬ್ಬಿ 
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಪಟೂರು
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು (ಸ್ನಾತಕೋತ್ತರ ಪದವಿ)

ಪತ್ರಿಕೆ-ಟಿವಿ ನೋಡಿ ಅವುಗಳಲ್ಲಿ ಕೆಲಸಮಾಡಬೇಕೆಂದು ಬಯಸುವ ನೂರಾರು ವಿದ್ಯಾರ್ಥಿಗಳೇನೋ ಇದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿರುವ ಅನೇಕ ಹುಡುಗ ಹುಡುಗಿಯರಿಗೆ, ಮತ್ತವರ ಹೆತ್ತವರಿಗೆ ಹೀಗೊಂದು ಕೋರ್ಸು ಇದೆಯೆಂದು ಇನ್ನೂ ಗೊತ್ತೇ ಇಲ್ಲ. ಅನೇಕ ವಿದ್ಯಾರ್ಥಿಗಳು ತಮ್ಮ ಸ್ನೇಹಿತರು, ಅಕ್ಕ-ಅಣ್ಣ ಓದಿದ ಸಾಂಪ್ರದಾಯಿಕ ಕೋರ್ಸುಗಳೇ ಬೇಕೆಂದು ಅರ್ಜಿ ಹಾಕಿ ಸೀಟು ಸಿಗದೆ ಕೊನೆಗೆ ಯಾರೋ ಹೇಳಿದರೆಂದು ಪತ್ರಿಕೋದ್ಯಮ ಆಯ್ದುಕೊಳ್ಳುವ ಪರಿಸ್ಥಿತಿ ಇದೆ. ಕೆಲವರಿಗೆ ಈ ಅವಕಾಶವೂ ಕೈತಪ್ಪಿ ಹೋಗಿರುತ್ತದೆ.

ಬೇರೆ ವಿಷಯಗಳ ಜೊತೆ ಪತ್ರಿಕೋದ್ಯಮವೂ ಇದ್ದರೆ ಮುಂದೊಂದು ದಿನ ಉಜ್ವಲ ಭವಿಷ್ಯ ತಮ್ಮದಾಗಬಹುದೆಂದು ವಿದ್ಯಾರ್ಥಿಗಳು ಅರಿತುಕೊಂಡರೆ ನಮ್ಮ ಮಾಧ್ಯಮ ಕ್ಷೇತ್ರಕ್ಕೆ ನಿಜವಾದ ಪ್ರತಿಭೆಗಳ ಪರಿಚಯವಾಗುವುದಂತೂ ಖಂಡಿತ. ಪತ್ರಕರ್ತರಾಗುವ ಬಯಕೆ ಇಲ್ಲದಿದ್ದರೂ ತಮ್ಮ ವ್ಯಕ್ತಿತ್ವದ ಸಮಗ್ರ ವಿಕಸನವಾಗಬೇಕೆಂದು ಬಯಸುವ ಯಾರೇ ಆದರೂ ಈ ಕೋರ್ಸನ್ನು ಆಯ್ದುಕೊಳ್ಳಬಹುದು.

ಅಂದಹಾಗೆ...

ಇವೆಲ್ಲದರ ಜೊತೆಗೆ ಒಂದು ಪ್ರಮುಖ ಅಂಶವನ್ನು ಇಲ್ಲಿ ಹೇಳಲೇಬೇಕು. ಕೇವಲ ಪತ್ರಿಕೋದ್ಯಮ ಓದಿ ಡಿಗ್ರಿ ಪಡೆದುಕೊಂಡ ಕೂಡಲೇ ಒಳ್ಳೆಯ ಪತ್ರಕರ್ತರಾಗಲು ಸಾಧ್ಯವಿಲ್ಲ. ನಿಮ್ಮ ಡಿಗ್ರಿ, ಅಂಕಪಟ್ಟಿ ನೋಡಿದ ಕೂಡಲೇ ಮಾಧ್ಯಮದವರು ಕೆಲಸ ಕೊಡುವುದೂ ಇಲ್ಲ. ಅವರಿಗೆ ಬೇಕಾಗಿರುವುದು ಡಿಗ್ರಿ ಅಲ್ಲ; ನಿಮ್ಮ ಕೌಶಲ, ಆಸಕ್ತಿ ಹಾಗೂ ತಿಳುವಳಿಕೆ. ನೀವು ಸ್ನಾತಕ, ಸ್ನಾತಕೋತ್ತರ ಪದವಿ ಜತೆಗೆ ಹತ್ತು ಚಿನ್ನದ ಪದಕ ಹೊತ್ತುಕೊಂಡಿದ್ದರೂ ಒಳ್ಳೆಯ ಭಾಷೆ, ಬರವಣಿಗೆ ಹಾಗೂ ಸಂವಹನ ಕೌಶಲ ರೂಢಿಸಿಕೊಳ್ಳದೇ ಹೋದರೆ ಮಾಧ್ಯಮಗಳಲ್ಲಿ ಕೆಲಸ ಮಾಡುವುದಕ್ಕೆ ಅನರ್ಹರೆಂದೇ ಅರ್ಥ. ಈ ನಿಟ್ಟಿನಲ್ಲಿ ಒಳ್ಳೆಯ ಕೌಶಲ ರೂಢಿಸಿಕೊಳ್ಳುವ ಆಸಕ್ತಿ, ಪತ್ರಿಕೋದ್ಯಮವನ್ನು ಪ್ರೀತಿಸುವ ಮನಸ್ಸು ನಿಮ್ಮದಾಗಿದ್ದರೆ ಖಂಡಿತ ಪದವಿಯಲ್ಲಿ ಅದನ್ನೊಂದು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಳ್ಳಿ. ಮಾಧ್ಯಮಕ್ಷೇತ್ರಕ್ಕೆ ಪೂರಕವಾದ ಅರ್ಹತೆ, ಗುಣಗಳನ್ನು ನಿಮ್ಮಲ್ಲಿ ರೂಢಿಸಿಕೊಳ್ಳಲು ಸದಾ ಪ್ರಯತ್ನಶೀಲರಾಗಿ. ಆಲ್ ದ ಬೆಸ್ಟ್!

ಮತ-'ಮನಿ’ಗಳ ನಡುವೆ ಕೇಳುವುದೇ ಪ್ರಜೆಯ ದನಿ?

(ಮಾರ್ಚ್ 3, 2014ರಂದು 'ವಿಜಯ ಕರ್ನಾಟಕ'ದ ತುಮಕೂರು ಆವೃತ್ತಿಯಲ್ಲಿ ಪ್ರಕಟವಾದ ಲೇಖನ)

ದೇಶ ಮತ್ತೆ ರಾಜಕೀಯದ ಗುಂಗಿಗೆ ಬಿದ್ದಿದೆ. ಮಹಾಸಮರವೇ ಮನೆಯಂಗಳಕ್ಕೆ ಬಂತೇ ಎಂಬಹಾಗೆ ರಾಜಕೀಯ ಪಕ್ಷಗಳೆಲ್ಲ ಎಚ್ಚೆತ್ತು ಕುಳಿತಿವೆ. ನೋಡಿದಲ್ಲೆಲ್ಲ ರ‍್ಯಾಲಿ, ಸಮಾವೇಶ, ಮೆರವಣಿಗೆ, ಆರೋಪ-ಪ್ರತ್ಯಾರೋಪಗಳ ಭರಾಟೆ. ಮಾಧ್ಯಮಗಳ ಚರ್ಚೆಗಳಿಂದ ತೊಡಗಿ ಜಾಹೀರಾತುಗಳವರೆಗೆ ಎಲ್ಲವೂ ಚುನಾವಣೆಯ ಭಾಷೆಯಲ್ಲೇ ಮಾತನಾಡುತ್ತಿವೆ. ಹೌದು, ಮತದಾರ ಮಹಾಪ್ರಭು ಮತ್ತೊಂದು ಸವಾಲಿನೆದುರು ಚಕಿತನಾಗಿ ನಿಂತಿದ್ದಾನೆ. ಇಷ್ಟೊಂದು ಯುದ್ಧಸನ್ನಾಹವನ್ನು ಅವನು ಹಿಂದೆಂದೂ ಕಂಡಿರಲಿಲ್ಲ. ಈ ರಾಜಕೀಯ ಧ್ರುವೀಕರಣ, ಜಾತಿ ಲೆಕ್ಕಾಚಾರ, ದಿನಕ್ಕೊಂದು ಸಮೀಕ್ಷೆ, ಹಣದ ಝಣಝಣಗಳ ನಡುವೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಮೂಲವಾರಸುದಾರನ ದನಿ ನಿಜವಾಗಿಯೂ ಕೇಳಿಸೀತೇ ಎಂಬ ಆತಂಕದಲ್ಲಿ ಅವನು ಮುಳುಗಿದ್ದಾನೆ.

ಆದರೆ ಪ್ರಶ್ನೆಯಿರುವುದು, ಇಂತಹ ಆತಂಕಕ್ಕೆ ಒಳಗಾಗಿರುವ ಒಟ್ಟು ಪ್ರಜ್ಞಾವಂತರ ಸಂಖ್ಯೆ ವಾಸ್ತವವಾಗಿ ಎಷ್ಟು? ಅದನ್ನು ತಕ್ಷಣಕ್ಕೆ ಊಹಿಸಿಕೊಳ್ಳುವುದು ಕಷ್ಟ. ಆದಾಗ್ಯೂ ನಿಸ್ಸಂಶಯವಾಗಿ ಅಂತಹವರ ಸಂಖ್ಯೆ ತೀರಾ ಕಡಿಮೆಯೆಂದು ಹೇಳುವುದಕ್ಕಂತೂ ಯಾವ ಸಮೀಕ್ಷೆಯೂ ಬೇಡ. ಈಚಿನ ವರ್ಷಗಳಲ್ಲಿ ನಡೆಯುತ್ತಿರುವ ಚುನಾವಣೆಗಳ ಆಟಾಟೋಪಗಳನ್ನು ನೋಡಿದರಂತೂ ಪ್ರಜಾಪ್ರಭುತ್ವ, ಶ್ರೀಸಾಮಾನ್ಯನ ಅಧಿಕಾರ, ರಾಜಕೀಯ ಪೌಢಿಮೆ ಇತ್ಯಾದಿಗಳೆಲ್ಲ ಬರೀ ಭಾಷಣದ ಸರಕುಗಳು ಮಾತ್ರ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ.

ಯಾವುದೇ ಚುನಾವಣೆ ಬಂದರೆ ಸಾಕು, ರಾಜಕೀಯ ಪಕ್ಷಗಳ ಮೊದಲ ಗುರಿ ಜನಸಾಮಾನ್ಯರನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದು. ನಗರ ಪ್ರದೇಶಗಳಲ್ಲಿ ಕೈತುಂಬ ಸಂಬಳ ತೆಗೆದುಕೊಳ್ಳುತ್ತಾ ರಾಜಕೀಯ ವಿಚಾರ ವಿಮರ್ಶೆ ಮಾಡುವ ಬಹುತೇಕ ಜನರು ಮತದಾನದ ದಿನ ಮಾತ್ರ ಸಿನಿಮಾ ಥಿಯೇಟರ್‌ನಲ್ಲಿರುತ್ತಾರೆ ಎಂಬುದು ಎಲ್ಲ ರಾಜಕಾರಣಿಗಳಿಗೂ ಗೊತ್ತು. ಅವರ ಏಕೈಕ ಬೇಟೆ ಗ್ರಾಮಾಂತರ ಪ್ರದೇಶಗಳಲ್ಲಿ ಕೂಲಿನಾಲಿ ಮಾಡಿಯೋ, ಬೇಸಾಯ ಮಾಡಿಯೋ ಬದುಕುವ ಜನಸಾಮಾನ್ಯರ ಓಟಿನ ಮೂಟೆ. ಇದಕ್ಕಾಗಿ ಅವರು ಕಂಡುಕೊಂಡಿರುವ ಬಹುಸುಲಭದ ವಿಧಾನ ಇಂತಹ ಜನಸಾಮಾನ್ಯರನ್ನೇ ಭ್ರಷ್ಟತೆಯ ಕೂಪಕ್ಕೆ ತಳ್ಳುವುದು. ಕೋತಿ ತಾನೂ ಕೆಟ್ಟಿತಲ್ಲದೆ ವನವನ್ನೆಲ್ಲ ಕೆಡಿಸಿತು ಎನ್ನುತ್ತಾರಲ್ಲ, ಹಾಗೆಯೇ ಇದು.

ಚುನಾವಣಾ ರ‍್ಯಾಲಿಗಳಿಗೆ ಬಂದ 'ಬೃಹತ್ ಜನಸ್ತೋಮ’ ಅಲ್ಲಿಂದ ವಾಪಸ್ ಹೊರಡಬೇಕಾದರೆ ತನ್ನಪಾಲಿನ ಬಾಡಿಗೆ ಬಂದಿಲ್ಲವೆಂದು ತಗಾದೆ ತೆಗೆಯುತ್ತದೆ. ಚುನಾವಣೆಯ ದಿನ ಸಮೀಪಿಸುತ್ತಿದ್ದಂತೆ ಗಲ್ಲಿಗಲ್ಲಿಗಳ ಕತ್ತಲಲ್ಲಿ ಕಂತೆಕಂತೆ ಹಣ ಹರಿದಾಡುತ್ತದೆ. ವಾಚು, ಪಂಚೆ, ಸೀರೆ, ಪಾತ್ರೆ ಇತ್ಯಾದಿ ಆಮಿಷಗಳ ವಿಷ ವ್ಯಾಪಿಸುತ್ತದೆ. ಮತದಾರ ಮಹಾಪ್ರಭುವನ್ನು ಮದ್ಯದಲ್ಲಿ ಅದ್ದಿತೆಗೆಯಲು ಎಲ್ಲ ವ್ಯವಸ್ಥೆಯೂ ಎಗ್ಗಿಲ್ಲದೆ ಸಾಗುತ್ತದೆ. ಮತಗಟ್ಟೆಯ ಎದುರೇ ಕಾನೂನು ಕಟ್ಟಳೆಗಳ ಕಣ್ಣಿಗೆ ಬಟ್ಟೆಕಟ್ಟಿ ಚೌಕಾಸಿ ವ್ಯಾಪಾರ ನಡೆಯುತ್ತದೆ; ಮತ್ತು ಇವೆಲ್ಲ ಪತ್ರಿಕೆಗಳಲ್ಲಿ ಟಿವಿಗಳಲ್ಲಿ ಧಾರಾಳವಾಗಿ ವರದಿಯಾಗುತ್ತವೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಈ ಕೃತ್ಯಗಳು ಚುನಾವಣಾ ಅಧಿಕಾರಿಗಳ, ಪೊಲೀಸರ ಹದ್ದಿನಕಣ್ಣಿಗೆ ಮಾತ್ರ ಬೀಳುವುದೇ ಇಲ್ಲ.

ಜನಸಾಮಾನ್ಯರನ್ನು ಭ್ರಷ್ಟರನ್ನಾಗಿಸುವಲ್ಲಿ ರಾಜಕೀಯ ಪಕ್ಷಗಳು ನಾಮುಂದು ತಾಮುಂದು ಎಂಬ ತುರುಸಿಗೆ ಬಿದ್ದಿವೆ. ಹಣದ ಪ್ರಭಾವದ ಎದುರು ಎಲ್ಲ ಬಗೆಯ ಪ್ರಜ್ಞಾವಂತಿಕೆಗಳೂ ಜೀವಕಳೆದುಕೊಳ್ಳುತ್ತವೆ. ಚುನಾವಣೆಯ ದಿನ ಹತ್ತಿರವಾಗುತ್ತಿದ್ದಂತೆ ಸಾಮಾನ್ಯ ಮತದಾರ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು ಎಂದು ಯೋಚಿಸುವುದಕ್ಕಿಂತಲೂ ಯಾವ ರಾಜಕೀಯ ಪಕ್ಷದವರಿಂದ ಎಷ್ಟು ಹಣ ಪೀಕಬಹುದೆಂಬ ಲೆಕ್ಕಾಚಾರದಲ್ಲಿ ತೊಡಗುವ ಪರಿಸ್ಥಿತಿ ಬಂದಿದೆ. ಆ ಪಾರ್ಟಿಯವರು ಮನೆಯ ಒಬ್ಬೊಬ್ಬರಿಗೆ ಇಷ್ಟಿಷ್ಟು ಹಣ ಕೊಡುತ್ತಿದ್ದಾರೆ, ನೀವು ಎಷ್ಟು ಕೊಡುತ್ತೀರಿ ಎಂದು ಚುನಾವಣಾ ಪ್ರಚಾರಕ್ಕೆ ಬಂದವರೊಡನೆಯೇ ಚೌಕಾಸಿ ನಡೆಯುತ್ತದೆ. ಮನೆಮನೆಗಳಲ್ಲಿ ಪ್ರತಿದಿನ ಸಂಜೆ ಇಂದಿನ ಒಟ್ಟು ಸಂಗ್ರಹವೆಷ್ಟು ಎಂಬ ಲೆಕ್ಕಚಾರ. ಅಲ್ಲಿ ಅಷ್ಟು ಕೋಟಿ ನಗದು ವಶಪಡಿಸಿಕೊಳ್ಳಲಾಯಿತಂತೆ, ಇಲ್ಲಿ ಇಷ್ಟು ಕೋಟಿ ಜಪ್ತಿ ಮಾಡಲಾಯಿತಂತೆ ಸುದ್ದಿಗಳು ಬರುತ್ತಲೇ ಇರುತ್ತವೆ; ಹಳ್ಳಿಗಳಲ್ಲಿ ಗಲ್ಲಿಗಳಲ್ಲಿ ಗರಿಗರಿ ನೋಟುಗಳು ಓಡಾಡುತ್ತಲೇ ಇರುತ್ತವೆ. ಎಲ್ಲಿಗೆ ಬಂತು ಪ್ರಜಾಪ್ರಭುತ್ವದ ದುರವಸ್ಥೆ?

ಇಲ್ಲಿ ಟೀಕಿಸಬೇಕಿರುವುದು ಯಾರನ್ನು? ಜನಸಾಮಾನ್ಯರ ಮತಗಳನ್ನು ಹಣ ಇತ್ಯಾದಿ ಆಮಿಷಗಳಿಂದ ಕೊಂಡುಕೊಳ್ಳಬಹುದೆಂದು ತೀರ್ಮಾನಿಸಿರುವ ರಾಜಕಾರಣಿಗಳನ್ನೇ? ಚುನಾವಣಾ ಸಮಯದಲ್ಲಾದರೂ ಒಂದಿಷ್ಟು ದುಡಿದುಕೊಳ್ಳೋಣ ಎಂಬ ಮನೋಭಾವಕ್ಕೆ ಬಂದಿರುವ ಜನಸಾಮಾನ್ಯರನ್ನೇ? ಇವುಗಳಿಗೆಲ್ಲ ಕಡಿವಾಣ ಹಾಕಲು ವಿಫಲವಾಗಿರುವ ನಮ್ಮ ಕಾನೂನು ಪರಿಪಾಲಕರನ್ನೇ? ಅಥವಾ ಇವೆಲ್ಲವಕ್ಕೂ ಮೂಲಕಾರಣದಂತಿರುವ ನಮ್ಮ ಕುಲಗೆಟ್ಟ ವ್ಯವಸ್ಥೆಯನ್ನೇ?

ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವ ಕಾಲ ಬಂದಿದೆ. ದೇಶ ಮತ್ತೊಂದು ಮಹಾಪರ್ವದ ಎದುರು ನಿಂತಿದೆ. ದೇಶವೇನು, ಇಡೀ ಜಗತ್ತೇ ಭಾರತದತ್ತ ಕುತೂಹಲದ ಕಣ್ಣುಗಳಿಂದ ನೋಡುತ್ತಿದೆ. ಇಲ್ಲಿನ ಸಣ್ಣಪುಟ್ಟ ಘಟನೆಗಳೂ ಅಂತಾರಾಷ್ಟ್ರೀಯ ಸುದ್ದಿಯಾಗುತ್ತಿವೆ. ವಿಶ್ವದ ಅನೇಕ ಶ್ರೀಮಂತ ಮತ್ತು ಅಭಿವೃದ್ಧಿಶೀಲ ದೇಶಗಳಿಗೆ ಭಾರತ ಯಾವತ್ತೂ ಆಸಕ್ತಿಯ ಕೇಂದ್ರ. ಈ ಬಾರಿಯ ಲೋಕಸಭಾ ಚುನಾವಣೆಗಂತೂ ಹಿಂದೆಂದೂ ಇಲ್ಲದ ಮಹತ್ವ ಬಂದುಬಿಟ್ಟಿದೆ. ಚುನಾವಣಾ ಅಧಿಸೂಚನೆ ಹೊರಬೀಳುವ ಮುನ್ನವೇ ಎಲ್ಲ ರಾಜಕೀಯ ಪಕ್ಷಗಳೂ ಮಾಡು ಇಲ್ಲವೇ ಮಡಿ ಎಂಬಂತಹ ಯುದ್ಧಸನ್ನಾಹದಲ್ಲಿ ತೊಡಗಿಯಾಗಿದೆ. ಕೆಲವರಂತೂ ತಾವು ಚುನಾವಣೆ ಗೆದ್ದೇಬಿಟ್ಟಿದ್ದೇವೆ ಎಂಬ ಭ್ರಮೆಗೆ ಬಿದ್ದಿದ್ದರೆ, ಒಂದಷ್ಟು ಮಂದಿ ತಾವು ಹೊಸ ಸರ್ಕಾರವನ್ನೇ ರಚಿಸಿಬಿಟ್ಟಿದ್ದೇವೆ ಎಂಬ ಕನಸಿನಲ್ಲಿ ತೇಲಾಡುತ್ತಿದ್ದಾರೆ. ಮತದಾರ ಯಾವ ಕನಸು ಕಾಣುತ್ತಿದ್ದಾನೆ?

ಇದು ಕನಸು ಕಾಣುವ ಕಾಲ ಅಲ್ಲ, ಕನಸಿನಿಂದ ಎಚ್ಚೆತ್ತುಕೊಳ್ಳಬೇಕಾದ ಕಾಲ. ಪ್ರಜಾಪ್ರಭುತ್ವದ ನಿಜವಾದ ಅರ್ಥ ಹೊರಹೊಮ್ಮಬೇಕಾದ ಕಾಲ. ಪ್ರಜೆಯ ಪರಮಾಧಿಕಾರ ಏನೆಂಬುದನ್ನು ಶ್ರುತಪಡಿಸಿಕೊಳ್ಳುವುದಕ್ಕೆ ಇದು ಸಕಾಲ. ಆದರೆ ಈ ಅಂತಃಪ್ರಜ್ಞೆಯನ್ನು ಜಾಗೃತಗೊಳಿಸಬೇಕಾದವರು ಯಾರು? ರಾಜಕೀಯ ಪಕ್ಷಗಳು ಅಥವಾ ನೇತಾರರು ಎಂದು ಉತ್ತರಿಸುವುದು ಅಸಂಬದ್ಧ. ಎಲ್ಲೋ ಒಂದಿಬ್ಬರು ಪ್ರಾಮಾಣಿಕರು ಮರುಭೂಮಿಯ ಓಯಸಿಸ್‌ಗಳಂತೆ ಕಂಡರೂ ಅವರನ್ನು ಅಪ್ರಸ್ತುತರನ್ನಾಗಿಸುವ ಹುನ್ನಾರಗಳೇ ನಮ್ಮಲ್ಲಿ ಹೆಚ್ಚು. ಹಾಗಾದರೆ ಸಂಘಸಂಸ್ಥೆಗಳೇ? ಪ್ರತೀ ಸಂಘಸಂಸ್ಥೆಗೂ ತನ್ನದೇ ಆದ ರಾಜಕೀಯ ಹಿತಾಸಕ್ತಿ. ಅವುಗಳಿಂದ ವಸ್ತುನಿಷ್ಠ ಪ್ರಯತ್ನ ನಿರೀಕ್ಷಿಸುವುದು ಕಷ್ಟ. ನಾವು ಯಾರ ಪರವೂ ಅಲ್ಲ, ಎಲ್ಲ ರಾಜಕೀಯ ಪಿಡುಗುಗಳ ವಿರುದ್ಧವೂ ಜಾಗೃತಿ ಮೂಡಿಸುವವರಿದ್ದೇವೆ ಎಂದು ಹೇಳಿಕೊಳ್ಳುವ ಅನೇಕ ವೇದಿಕೆ, ಸಂಘಟನೆಗಳ ಮೇಲ್ಪದರ ಕೊಂಚ ಕೆರೆದು ನೋಡಿದರೆ ಒಳಗೆ ಮತ್ತದೇ ಕೊಳಕು ರಾಜಕೀಯದ ಹಗಲುವೇಷ. ಹಾಗಾದರೆ ಬುದ್ಧಿಜೀವಿಗಳೇ? ಬುದ್ಧಿಜೀವಿಗಳೆನಿಸಿಕೊಂಡ ಬಹುತೇಕರು ಗೆದ್ದೆತ್ತಿನ ಬಾಲ ಹಿಡಿಯುವವರೆಂದು ಲೋಕಕ್ಕೇ ಗೊತ್ತು. ಅವರು ಕಡೇಪಕ್ಷ ಮತದಾನ ಕೇಂದ್ರಕ್ಕಾದರೂ ಹೋಗುತ್ತಾರೆಯೇ ಎಂಬ ಬಗ್ಗೆ ಅನುಮಾನವಿದೆ.

ಎಲ್ಲಕ್ಕಿಂತ ದೊಡ್ಡದು ಶ್ರೀಸಾಮಾನ್ಯನ ಮನಃಸಾಕ್ಷಿ. ಜಾತಿ ಮತ್ತು ಹಣದ ಲೆಕ್ಕಾಚಾರಗಳಿಂದ ಕೊಳೆತು ನಾರುತ್ತಿರುವ ಈ ದೇಶದ ರಾಜಕೀಯದಲ್ಲಿ ಏನಾದರೂ ಬದಲಾವಣೆ ತರುವುದು ಸಾಧ್ಯವಿದ್ದರೆ ಅದು ಪ್ರಜಾಪ್ರಭುವಿನ ಅಂತಃಸಾಕ್ಷಿಯಿಂದ ಮಾತ್ರ ಸಾಧ್ಯ. ಆತ ಮನಸ್ಸು ಮಾಡಿದರೆ ನಿಜಕ್ಕೂ ಇಲ್ಲೊಂದು ಹೊಸ ಮಹಾಪರ್ವ ಘಟಿಸೀತು. ಎಷ್ಟಾದರೂ ಬಾಗಿಲು ಅರ್ಧ ಮುಚ್ಚಿದೆ ಎಂದುಕೊಳ್ಳುವುದಕ್ಕಿಂತ ಅದು ಅರ್ಧ ತೆರೆದುಕೊಂಡಿದೆ ಎಂದು ಭಾವಿಸುವುದೇ ಒಳ್ಳೆಯದಲ್ಲವೇ?

ಬುಧವಾರ, ಮೇ 7, 2014

ಮಾಧ್ಯಮಶೋಧ

(ಫೆಬ್ರವರಿ 6, 2014ರ 'ಉದಯವಾಣಿ'ಯಲ್ಲಿ ಪತ್ರಕರ್ತ ರಾಜೇಶ್‌ ಶೆಟ್ಟಿ 'ಮಾಧ್ಯಮಶೋಧ'ದ ಬಗ್ಗೆ)

ಮಾಧ್ಯಮ ಶೋಧ (ಮಾಧ್ಯಮ ವಿದ್ಯಮಾನ ಸಂಬಂಧೀ ಲೇಖನಗಳು)
ಲೇ- ಸಿಬಂತಿ ಪದ್ಮನಾಭ ಕೆ.ವಿ.
ಪ್ರ- ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್‌, ಕೆಂಪೇಗೌಡ ನಗರ, 1ನೇ ಮೇನ್‌, 8ನೇ ಕ್ರಾಸ್‌, ಮಾಗಡಿ ರಸ್ತೆ, ವಿಶ್ವನೀಡಂ ಅಂಚೆ, ಬೆಂಗಳೂರು- 560091.
ಬೆಲೆ- ರೂ. 130
ಪುಟ- 160

ಪತ್ರಿಕೋದ್ಯಮ ಪದವಿ ಪಡೆದು ಪತ್ರಿಕೆಗಳಿಗೆ ಕೆಲಸ ಹುಡುಕಿಕೊಂಡು ಬರುವ ಹುಡುಗ, ಹುಡುಗಿಯರಿಗೆ ಶುದ್ಧ ಕನ್ನಡದಲ್ಲಿ ಬರೆಯಲಿಕ್ಕೂ ಬರದಂಥ ಪರಿಸ್ಥಿತಿ ಇದೆ. ಅದಕ್ಕೆ ಕಾರಣಗಳೇನು ಅಂತ ಹುಡುಕುತ್ತಾ ಹೊರಟರೆ ಹಲವಾರು ಸಂಗತಿಗಳು ಕಣ್ಣಿಗೆ ಬೀಳುತ್ತವೆ. 

- ಯಾವುದನ್ನು ಓದಬೇಕು, ಹೇಗೆ ಬರೆಯಬೇಕು ಎಂಬಿತ್ಯಾದಿ ವಿಷಯಗಳನ್ನು ಪುರುಸೊತ್ತು ಮಾಡಿಕೊಂಡು ಅರ್ಥವಾಗುವಂತೆ ಹೇಳುವವರೂ ಇಲ್ಲ. 

- ಲೆಕ್ಚರರ್‌ಗಳೇ ಸರಿಯಾಗಿ ಓದಿರುವುದೂ ಇಲ್ಲ. ಅಪ್‌ಡೇಟ್‌ ಕೂಡ ಆಗಿರುವುದಿಲ್ಲ.

- ಹಳೇ ಪಾಠ ಪುಸ್ತಕಗಳನ್ನು ಇಟ್ಟುಕೊಂಡು, ನಾಲ್ಕೈದು ಪಾಯಿಂಟ್‌ಗಳನ್ನು ಬರೆದುಕೊಂಡು ಕ್ಲಾಸಿಗೆ ಬರುವವರ ಸಂಖ್ಯೆ ಹೆಚ್ಚಿದೆ. 

- ಮುಖ್ಯವಾಗಿ ಈ ಪಾಯಿಂಟುಗಳು ಎಲ್ಲರಿಗೂ ಅನ್ವಯವಾಗುವುದಿಲ್ಲ. 

ಪತ್ರಿಕೆಗಳಿಗೆ ಫೋನು ಮಾಡುವ, ರೆಸ್ಯೂಮ್‌ ಹಿಡಿದುಕೊಂಡು ಬರುವ ವಿದ್ಯಾರ್ಥಿಗಳ ಜೊತೆ ಮಾತಾಡಿದಾಗ ಈ ವಿಷಯ ಅರ್ಥವಾಗುತ್ತದೆ. ಅದನ್ನೆಲ್ಲಾ ಹತ್ತಿರದಲ್ಲಿದ್ದುಕೊಂಡು ನೋಡಿ ಬರೆದವರು ಸಿಬಂತಿ ಪದ್ಮನಾಭ. 

ಪತ್ರಿಕೆಯಲ್ಲಿದ್ದು ಕೆಲಸ ಮಾಡಿ ಗೊತ್ತಿರುವ, ಶಿಕ್ಷಣ ವ್ಯವಸ್ಥೆಯನ್ನು ಹತ್ತಿರದಿಂದ ನೋಡಿರುವ, ವಿದ್ಯಾರ್ಥಿಗಳ ಜೊತೆ ಒಡನಾಡಿರುವ ಸಿಬಂತಿ ಪದ್ಮನಾಭರು ಬರೆದ ಬರಹಗಳ ಗುತ್ಛ ಮಾಧ್ಯಮ ಕ್ಷೇತ್ರದ ಬಗೆಗೆ ಕುತೂಹಲ ಮತ್ತು ಆಸಕ್ತಿ ಇರುವವರಿಗೆ ಇಷ್ಟವಾಗುತ್ತದೆ. ಅಷ್ಟೇ ಅಲ್ಲ ಮಾಧ್ಯಮ ಕ್ಷೇತ್ರದ ಬಗೆಗೆ ಹಲವಾರು ಮಾಹಿತಿಗಳನ್ನು ನೀಡಿ ಅಚ್ಚರಿಗೊಳಿಸುತ್ತದೆ. 

ಸಿಬಂತಿಯವರದು ನೇರ ಮಾತು. ಯಾರಿಗೆ ಎಲ್ಲಿ ಮುಟ್ಟಬೇಕೋ ಅಲ್ಲೇ ಮುಟ್ಟುವಂತೆ ಸ್ಪಷ್ಟವಾಗಿ ಬರೆಯುತ್ತಾರೆ. ಶಿಕ್ಷಕರಿಗೂ ಬಿಸಿ ಮುಟ್ಟಿಸುತ್ತಾರೆ. ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ತಾಕುವಂತೆಯೂ ಬರೆಯುತ್ತಾರೆ. ಸ್ವತಃ ಶಿಕ್ಷಕರಾಗಿದ್ದುಕೊಂಡು ಇಷ್ಟು ನೇರವಾಗಿ ಬರೆದ ಸಿಬಂತಿಯವರ ನೇರ ಬರಹಗಳು ವಿದ್ಯಾರ್ಥಿಗಳಿಗೆ ದಾರಿದೀಪವಾದರೆ ಅಚ್ಚರಿಯಿಲ್ಲ. 

ನಿರಂಜನ ವಾನಳ್ಳಿಯವರು ಮುನ್ನುಡಿಯಲ್ಲಿ ಹೇಳಿರುವಂತೆ, ಬರೆಯಲು ಬಾರದವರೇ ಪತ್ರಿಕೋದ್ಯಮ ಕಲಿಸಲು ತೊಡಗುತ್ತಾರೆ ಎಂಬ ಆಕ್ಷೇಪಕ್ಕೆ ಉತ್ತರವೆಂಬಂತೆ ಪದ್ಮನಾಭ ತಾವು ಭಿನ್ನ ಹಾಗೂ ಸಮರ್ಥ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 
ಅಂದಹಾಗೆ ಈ ಪುಸ್ತಕ ಅಂಕಣ ಬರಹಗಳ ಗುಚ್ಛ. 

------------------------------------------------------------------------------------

ಕನ್ನಡ ಪುಸ್ತಕಗಳ ಜನಪ್ರಿಯ ತಾಣ 'ಚುಕ್ಕು-ಬುಕ್ಕು'ವಿನಲ್ಲಿ 'ಮಾಧ್ಯಮಶೋಧ'ದ ಬಗ್ಗೆ ಓದಿ. 

ಪುಸ್ತಕ ಬಿಡುಗಡೆ ಸಮಾರಂಭದ ಬಗ್ಗೆ ಇಲ್ಲಿ ನೋಡಿ.

ಪುಸ್ತಕದ ಪ್ರತಿಗಳಿಗೆ:

ಸಪ್ನಾ  ಆನ್ ಲೈನ್

ಶ್ರೀಧರ ಬನವಾಸಿ: 9740069123

ಸಿಬಂತಿ ಪದ್ಮನಾಭ: 9449525854

ಸಪ್ನಾ ಬುಕ್ ಹೌಸ್ ನ ಎಲ್ಲಾ ಶಾಖೆಗಳು

ಅಂಕಿತ ಪುಸ್ತಕ, ಬೆಂಗಳೂರು

ಚೈತ್ರ ಬುಕ್ ಹೌಸ್, ಬೆಂಗಳೂರು

ಬೆಳಗೆರೆ ಬುಕ್ಸ್ ಅಂಡ್ ಕಾಫಿ, ಬೆಂಗಳೂರು

ಯಶಸ್ಸು, ಆದರ್ಶ ಮತ್ತು ಪರೀಕ್ಷೆಯಲ್ಲಿ ಅಂಕಗಳಿಸುವ ಉತ್ತರ

('ಉದಯವಾಣಿ' ದೈನಿಕದ ಸಂಪಾದಕೀಯ ಪುಟದಲ್ಲಿ ಫೆಬ್ರುವರಿ 27, 2014ರಂದು ಪ್ರಕಟವಾದ ಲೇಖನ)

ಅನೇಕ ಸಲ ಹೀಗಾಗುವುದುಂಟು. ಪ್ರಶ್ನೆಯೊಂದಕ್ಕೆ ಉತ್ತರ ಹುಡುಕುತ್ತಾ ಹೊರಟರೆ ಸಿಗುವುದು ಉತ್ತರವಲ್ಲ, ಇನ್ನೂ ಒಂದಷ್ಟು ಪ್ರಶ್ನೆಗಳು. ಆ ಪ್ರಶ್ನೆಗಳ ಬೆನ್ನು ಹತ್ತಿದರೆ ಒಂದೊಂದರ ತುದಿಗೂ ಇನ್ನೂ ಅದೆಷ್ಟೋ ಪ್ರಶ್ನೆಗಳ ಮೂಟೆ. ಹಾಗಾದರೆ ಉತ್ತರ ಎಲ್ಲಿರುತ್ತದೆ? ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇರುವುದಿಲ್ಲವೇ?

ಸದ್ಯಕ್ಕೆ ನಮ್ಮ ಮುಂದಿರುವುದು ಅಂತಹ ಗಹನವಾದ ಪ್ರಶ್ನೆಯೇನಲ್ಲ. ತುಂಬ ಸರಳವಾದ, ಆದರೆ ಜನ ಆಗಾಗ್ಗೆ ತಮ್ಮೊಳಗೂ ಬೇರೆಯವರಿಗೂ ಕೇಳುವ ಪ್ರಶ್ನೆ. ಅಂದಹಾಗೆ ಈ ಪ್ರಶ್ನೆಯನ್ನು ಇತ್ತೀಚೆಗೆ ಒಂದು ಪರೀಕ್ಷೆಯಲ್ಲೂ ಕೇಳಿಬಿಟ್ಟರು. ಸಾಮಾನ್ಯ ಪರೀಕ್ಷೆ ಅಲ್ಲ. ವಿಶ್ವವಿದ್ಯಾನಿಲಯ/ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆ. ನಾಳೆ ಪ್ರಶ್ನೆಗಳನ್ನು ಕೇಳಬೇಕಿರುವ ಮೇಸ್ಟ್ರುಗಳಾಗಹೊರಟವರಿಗೂ ಒಂದು ಪ್ರಶ್ನೆ!

ಆ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೆಯನ್ನೇ ಯಥಾವತ್ತು ತೆಗೆದುಕೊಳ್ಳೋಣ. ಅದು ಬಹುಆಯ್ಕೆಯ ವಸ್ತುನಿಷ್ಠ ಮಾದರಿಯ ಪ್ರಶ್ನೆ. ’ಅತ್ಯಂತ ಸೂಕ್ತವಾದ ಆಯ್ಕೆಯಿಂದ ಕೆಳಗಿನ ವಾಕ್ಯವನ್ನು ಪೂರ್ಣಗೊಳಿಸಿ: ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಒಬ್ಬನು............ (ಎ) ತುಂಬ ಹಣ ಹೊಂದಿರಬೇಕು (ಬಿ) ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರಬೇಕು (ಸಿ) ಹಗಲು ರಾತ್ರಿ ಕಷ್ಟಪಟ್ಟು ದುಡಿಯಬೇಕು  (ಡಿ) ಪ್ರಾಮಾಣಿಕ ಮತ್ತು ನಿಜವಾದ ವ್ಯಕ್ತಿಯಾಗಿರಬೇಕು’.

ಪ್ರಶ್ನೆ ನನ್ನಲ್ಲೂ ಕುತೂಹಲ ಮೂಡಿಸಿತು. ಪ್ರತಿದಿನ ನೂರು ಮಕ್ಕಳಿಗೆ ಪಾಠ ಹೇಳುವ ಅಧ್ಯಾಪಕನಾಗಿ ನಾನು ಮೊದಲಿನ ಎರಡು ಆಯ್ಕೆಗಳನ್ನು ಗುರುತಿಸುವ ಸಾಧ್ಯತೆ ಕಡಿಮೆ. ಹೆಚ್ಚೆಂದರೆ ಕೊನೆಯ ಎರಡು ಉತ್ತರಗಳ ಪೈಕಿ ಯಾವುದು ಹೆಚ್ಚು ಸೂಕ್ತ ಎಂದು ಚಿಂತಿಸಬಲ್ಲೆ. ಆದರೆ ಮರುಕ್ಷಣದಲ್ಲೇ ನಾನು ಯೋಚನೆಗೆ ಬಿದ್ದೆ. ಯಾವುದು ನಿಜವಾದ ಉತ್ತರ? ನಮಗೆ ಆದರ್ಶ ಮುಖ್ಯವೋ? ವಾಸ್ತವ ಮುಖ್ಯವೋ? ವಾಸ್ತವಕ್ಕೆ ಹತ್ತಿರವಲ್ಲದ ಆದರ್ಶಕ್ಕೆ ಬೆಲೆಯಿದೆಯೇ? ಆದರ್ಶದ ಪಾಯವಿಲ್ಲದ ವಾಸ್ತವಕ್ಕೆ ಭವಿಷ್ಯವಿದೆಯೇ?

ಒಂದು ಫೇಸ್ ಬುಕ್ ಸಮೀಕ್ಷೆ

ಈ ಪ್ರಶ್ನೆಯನ್ನು ಒಂದಷ್ಟು ಸ್ನೇಹಿತರಿಗೆ ಕೇಳಬೇಕೆನ್ನಿಸಿತು. ಒಂದು ವಿಷಯವನ್ನು ದೊಡ್ಡ ಸ್ನೇಹಿತಸಮೂಹದೊಂದಿಗೆ ಏಕಕಾಲಕ್ಕೆ ಹಂಚಿಕೊಳ್ಳಬೇಕಾದರೆ ಅದು ಈಗ ಫೇಸ್‌ಬುಕ್‌ನಲ್ಲಿ ಅಲ್ಲದೆ ಇನ್ನೆಲ್ಲಿ ಸಾಧ್ಯ? ನಾನು ಪ್ರಶ್ನೆ ಹಾಗೂ ಆಯ್ಕೆಗಳನ್ನು ಯಥಾವತ್ತಾಗಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದೆ. ನಿರೀಕ್ಷೆಯಂತೆಯೇ ಒಬ್ಬೊಬ್ಬರು ಒಂದು ಉತ್ತರ ನೀಡಿದರು. ಆದರೆ ಅವರು ಬರೀ ಉತ್ತರಗಳನ್ನಷ್ಟೇ ನೀಡಿರಲಿಲ್ಲ. ಅವರ ಉತ್ತರಗಳಲ್ಲಿ ಇನ್ನಷ್ಟು ಪ್ರಶ್ನೆಗಳು ಅಡಗಿಕೂತಿದ್ದವು.

ಕೆಲವರು ’ಎ’ ಮತ್ತು ’ಬಿ’ಯ ಮಿಶ್ರಣ ಎಂದರೆ ಇನ್ನು ಕೆಲವರು ’ಸಿ’ ಮತ್ತು ’ಡಿ’ಯ ಮಿಶ್ರಣ ಎಂದರು. ಅಂದರೆ ’ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಒಬ್ಬನು ತುಂಬ ಹಣ ಹೊಂದಿರಬೇಕು ಮತ್ತು ಪ್ರಭಾವಿ ವ್ಯಕ್ತಿಗಳ ಸಂಪರ್ಕ ಹೊಂದಿರಬೇಕು’ ಎಂಬುದು ಕೆಲವರ ಉತ್ತರವಾದರೆ, ಇನ್ನು ಕೆಲವರ ಉತ್ತರ ’ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಹಗಲು ರಾತ್ರಿ ಕಷ್ಟಪಟ್ಟು ದುಡಿಯಬೇಕು ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿರಬೇಕು’ ಎಂಬುದಾಗಿತ್ತು.

’ಮೊದಲು ಯಶಸ್ಸು ಎಂದರೇನು ಎಂದು ವಿವರಿಸಿದರೆ ಉತ್ತರಿಸಲು ಪ್ರಯತ್ನಿಸಬಹುದು’ ಎಂದರು ಒಬ್ಬರು. ’ತುಂಬ ಪ್ರಸಿದ್ಧ ಪ್ರೊಫೆಸರ್ ಒಬ್ಬರು ಈ ಪ್ರಶ್ನೆಯನ್ನು ರೂಪಿಸಿರುವುದಂತೂ ನಿಸ್ಸಂಶಯ’ ಎಂದು ಮುಗುಳ್ನಕ್ಕರು ಇನ್ನೊಬ್ಬರು. ’ಅಲ್ಲಿ ನಾಲ್ಕೇ ಆಯ್ಕೆಗಳಿದ್ದುದು ನಿಜವೇ?’ ಎಂದು ಪ್ರಶ್ನಿಸಿದರು ಮತ್ತೊಬ್ಬರು. ’ಹಗಲು ರಾತ್ರಿ ಪ್ರಾಮಾಣಿಕವಾಗಿ ದುಡಿದ ಹಣದಿಂದ ಪ್ರಭಾವಿಯಾದ ’ಆಧಾರ್’ ಕಾರ್ಡ್ ಹೊಂದಿರಬೇಕು’ ಎಂದು ಮಾರ್ಮಿಕ ಉತ್ತರ ನೀಡಿದರು ನಾನು ತುಂಬ ಮೆಚ್ಚುವ ಹಿರಿಯ ಸಾಹಿತಿಗಳೊಬ್ಬರು.

ರಾಷ್ಟ್ರರಾಜಕಾರಣದಲ್ಲಿ ಸುದ್ದಿಯಲ್ಲಿರುವ ಯುವನಾಯಕನೊಬ್ಬನ ಉತ್ತರವಾದರೆ ಹೀಗಿರಬಹುದೆಂದು ಒಬ್ಬರು ತಮಾಷೆ ಮಾಡಿದರು: ’ಮೊದಲು ನಾವು ಯಶಸ್ಸು ಏನೆಂದು ತಿಳಿದುಕೊಳ್ಳಬೇಕು. ವ್ಯವಸ್ಥೆಯಲ್ಲಿ ಎಲ್ಲರೂ ಒಳಗೊಂಡು, ಆ ವ್ಯವಸ್ಥೆಯನ್ನು ಬದಲಿಸಿ, ಮಹಿಳಾ ಸಬಲೀಕರಣವಾದರೆ, ಅದನ್ನು ಆರ್‌ಟಿಐ ಮೂಲಕ ತಿಳಿದುಕೊಳ್ಳುವಂತಾದರೆ... ಆದನ್ನು ಯಶಸ್ಸು ಎನ್ನಬಹುದು’.

’ಪರೀಕ್ಷೆಯಲ್ಲಿ ಅಂಕ ಗಳಿಸಿಕೊಡುವ ಉತ್ತರ ’ಸಿ’ ಮತ್ತು ’ಡಿ’ ಎಂದರು ಒಬ್ಬರು ಹಳೇ ಸಹೋದ್ಯೋಗಿ. ಅದನ್ನೇ ಇನ್ನಷ್ಟು ಸ್ಪಷ್ಟವಾಗಿ, ’ಹಿಂದಿನ ಕಾಲಕ್ಕಾದರೆ ’ಸಿ’ ಮತ್ತು ’ಡಿ’, ಇಂದಿಗಾದರೆ ಮೊದಲನೆಯದೆರಡೂ ಸರಿಯೇ’ ಎಂದರು ಇನ್ನೊಬ್ಬ ಸ್ನೇಹಿತೆ. ’ಈ ಪ್ರಶ್ನೆಯೇ ಅಸಮರ್ಪಕವಾಗಿದೆ’ ಎಂದ ನನ್ನೊಬ್ಬ ಸಹಪಾಠಿ. ನಿಮ್ಮ ನಾಲ್ಕು ಉತ್ತರಗಳಲ್ಲಿ ’ತಾಳ್ಮೆ’ಯೇ ಕಾಣೆಯಾಗಿದೆ. ಬದುಕಿನಲ್ಲಿ ಯಶಸ್ಸನ್ನು ಪಡೆಯಲಿಕ್ಕೆ ಮುಖ್ಯವಾಗಿ ಬೇಕಿರುವುದು ತಾಳ್ಮೆ. ಈ ಪದವನ್ನು ನಾಲ್ಕನೇ ಉತ್ತರಕ್ಕೆ ಸೇರಿಸಿದರೆ, ಅದು ಸರಿಯೆಂದು ಕಾಣಿಸುತ್ತದೆ ಎಂದ ಮತ್ತೊಬ್ಬ ಗೆಳೆಯ.

ಯಾವುದು ವಾಸ್ತವ, ಯಾವುದು ಆದರ್ಶ?

ನಾನು ಮತ್ತೆ ಯೋಚನೆಗೆ ಬಿದ್ದೆ. ಪ್ರಶ್ನೆಗೆ ಪ್ರತಿಕ್ರಿಯಿಸಿದವರಲ್ಲಿ ಎಂಜಿನಿಯರುಗಳಿದ್ದರು, ಸಾಹಿತಿಗಳಿದ್ದರು, ಪತ್ರಕರ್ತರಿದ್ದರು, ಅಧ್ಯಾಪಕರುಗಳಿದ್ದರು, ವಿದ್ಯಾರ್ಥಿಗಳಿದ್ದರು, ಕಂಪೆನಿ ಉದ್ಯೋಗಿಗಳಿದ್ದರು. ಸಹಜವಾಗಿಯೇ ಒಬ್ಬೊಬ್ಬರಿಗೆ ಒಂದೊಂದು ಅಭಿಪ್ರಾಯವಿರುತ್ತದೆ. ಅಲ್ಲದೆ ಅವರೆಲ್ಲ ವಾಸ್ತವವನ್ನು ಅರ್ಥ ಮಾಡಿಕೊಳ್ಳಬಲ್ಲಷ್ಟು ವಿವೇಚನಾಶೀಲರೇ. ನನ್ನ ಮನಸ್ಸಿನಲ್ಲಿದ್ದ ಪ್ರಶ್ನೆಯಿಷ್ಟೇ: ಯಾವ ಉತ್ತರ ಹೆಚ್ಚು ಸರಿ? ಯಾವುದು ವಾಸ್ತವ, ಯಾವುದು ಆದರ್ಶ?

ಪರೀಕ್ಷೆಯಲ್ಲಿ ಅಂಕ ಗಳಿಸಿಕೊಡುವ ಉತ್ತರ ’ಸಿ’ ಮತ್ತು ’ಡಿ’ ಎಂಬ ನನ್ನ ಸ್ನೇಹಿತರೊಬ್ಬರ ಪ್ರತಿಕ್ರಿಯೆಯಲ್ಲಿ, ಪರೀಕ್ಷೆಯಲ್ಲಿ ಅಂಕ ಗಳಿಸಿಕೊಡುವ ಉತ್ತರವೇ ಬೇರೆ, ಜೀವನದ ಪರೀಕ್ಷೆಯಲ್ಲಿ ಅಂಕ ಗಳಿಸಿಕೊಡುವ ಉತ್ತರವೇ ಬೇರೆ ಎಂಬ ಸೂಚನೆಯಿದೆ. ಅದು ಬಹುಜನರ ಅಭಿಪ್ರಾಯ ಕೂಡ. ಆದರ್ಶಕ್ಕೂ ನಿಜಜೀವನಕ್ಕೂ ವ್ಯತ್ಯಾಸವಿದೆ ಎಂಬ ಮಾತನ್ನು ನಾವು ಯಾವಾಗಲೂ ಕೇಳುತ್ತೇವೆ. ಹಾಗಾದರೆ ಆದರ್ಶಗಳೆಲ್ಲ ನಿರರ್ಥಕವೇ? ನಿಜಜೀವನದಲ್ಲಿ ಪ್ರಯೋಜನಕ್ಕೆ ಬರದ ಆದರ್ಶಗಳನ್ನು ಇಟ್ಟಕೊಂಡು ಏನು ಮಾಡುವುದು?

ಆದರ್ಶವೆಂದರೆ ಮೇಸ್ಟ್ರುಗಳು ತರಗತಿಗಳಲ್ಲಿ ಚೆಲ್ಲಬೇಕಾಗಿರುವ ಕಸದ ಬುಟ್ಟಿಯೇ? ವಿದ್ಯಾರ್ಥಿಗಳು ಅಂಕಗಳಿಸುವುದಕ್ಕಾಗಿಯಷ್ಟೇ ಪರೀಕ್ಷೆಯಲ್ಲಿ ಬರೆಯಬೇಕಾದ ಅವಾಸ್ತವ ಉತ್ತರವೇ? ಅಧ್ಯಾಪಕ ತನ್ನ ವಿದ್ಯಾರ್ಥಿಗಳಿಗೆ ಆದರ್ಶವನ್ನು ಬೋಧಿಸಬೇಕೇ? ಅಥವಾ ಈ ಆದರ್ಶಗಳಿಂದ ವಾಸ್ತವ ಜಗತ್ತಿನಲ್ಲಿ ಏನನ್ನೂ ಸಾಧಿಸಲಾಗದು ಎಂದು ಮನವರಿಕೆ ಮಾಡಿಕೊಡಬೇಕೆ? ಮೇಸ್ಟ್ರು ಹೇಳಿದ ಆದರ್ಶಗಳನ್ನೇ ಯಥಾವತ್ತಾಗಿ ಅಳವಡಿಸಿಕೊಂಡು ಮುಂದುವರಿದ ವಿದ್ಯಾರ್ಥಿ ಕೊನೆಗೊಂದು ದಿನ ವಾಸ್ತವದ ಕಟುಸತ್ಯಗಳ ಎದುರು ಒಂದು ನಿಷ್ಪ್ರಯೋಜಕ ವಸ್ತುವಾಗಿ ಉಳಿಯಲಾರನೇ? ಆಗ ಅವನು ಯಾರನ್ನು ದೂರಬೇಕು? ಒಂದು ವೇಳೆ ಆದರ್ಶಗಳೆಲ್ಲ ಪುಸ್ತಕಗಳಿಗೆ ಲಾಯಕ್ಕು ಎಂದಾದರೆ ಶ್ರೇಷ್ಠ ಆದರ್ಶಗಳನ್ನು ಬಾಳಿಬದುಕಿದ ಎಷ್ಟೋ ಮಂದಿಯನ್ನು ನಮ್ಮ ಇತಿಹಾಸ ಮಹಾತ್ಮರು ಎಂದೇಕೆ ಗುರುತಿಸುತ್ತದೆ? ’ಹಿಂದಿನ ಕಾಲಕ್ಕಾದರೆ ’ಸಿ’ ಮತ್ತು ’ಡಿ’, ಇಂದಿಗಾದರೆ ಮೊದಲನೆಯದೆರಡೂ ಸರಿಯೇ’ ಎಂಬ ಪ್ರತಿಕ್ರಿಯೆ ಇದಕ್ಕೆ ಉತ್ತರವೇ?

ಕಾಲಕ್ಕೆ ತಕ್ಕಂತೆ ಕೋಲ

ಕಾಲ ಬದಲಾಗಿದೆ ಎಂಬುದು ನಿಜ. ನೈತಿಕತೆ ಹುಚ್ಚರ ಕೊನೆಯ ಆಶ್ರಯತಾಣ ಎಂಬವರ ಕಾಲ ಇದು. ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿದವನು ಕೊನೆಯವರೆಗೂ ಅಜ್ಞಾತನಾಗಿಯೇ ಉಳಿಯಬೇಕಾದ, ಮಾನವೀಯ ಸಂಬಂಧಗಳಿಗೆ ಬರಗಾಲವಿರುವ ಜಗತ್ತು ಇದು. ಆದರೆ ಈ ಕಾಲ ಎಲ್ಲಿಯವರೆಗೆ? ಬದಲಾವಣೆ ಜಗದ ನಿಯಮ ಎಂದಾದರೆ ಅದಕ್ಕೆ ಅಂತ್ಯವಿಲ್ಲ. ಬದಲಾವಣೆಯೇ ಪ್ರಪಂಚದಲ್ಲಿ ಹೆಚ್ಚು ಶಾಶ್ವತವಂತೆ. ಆದರ್ಶಗಳ ಯುಗ ಹೋಗಿ ವಾಸ್ತವದ ಯುಗ ಬಂದಿದೆ ಎಂದಾದರೆ ಈ ಕಟುವಾಸ್ತವಗಳ ಯುಗಹೋಗಿ ಆದರ್ಶಗಳಿಗೂ ಬೆಲೆಕೊಡುವ ಯುಗ ಮತ್ತೆ ಬರಲಾರದೇ? ಇತಿಹಾಸ ಮರುಕಳಿಸುತ್ತದೆಯೇ? ಆದರ್ಶಗಳಿಲ್ಲದೆ ಬದುಕಲಾರೆವು ಎಂಬ ಕಾಲ ಮತ್ತೆ ಬರುತ್ತದೆಯೇ? ಅಥವಾ ಅದೊಂದು ಭ್ರಮೆಯೇ? ಸದ್ಯಕ್ಕೆ ಕಾಲಕ್ಕೆ ತಕ್ಕಂತೆ ಕೋಲ ಎಂಬಂತೆ ನಾವಿರುವುದು ಜಾಣತನವೇ? ಈ ’ಕಾಲ’ವನ್ನು ರೂಪಿಸಿದವರು ಯಾರು? ನಾವೇ ಅಲ್ಲವೇ? ಹಾಗಾದರೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲವೇ?

ಕೊನೆಗೂ ಆ ಪ್ರಶ್ನೆ ಹಾಗೆಯೇ ಉಳಿದುಕೊಂಡು ನಮ್ಮನ್ನು ಕಾಡುತ್ತದೆ. ಜೀವನದಲ್ಲಿ ಯಶಸ್ಸು ಗಳಿಸಲು ಏನು ಮಾಡಬೇಕು? ಬಹುಶಃ ಸ್ನೇಹಿತರೊಬ್ಬರು ಹೇಳಿರುವಂತೆ ಮೊದಲು ಯಶಸ್ಸು ಎಂದರೆ ಏನೆಂಬುದನ್ನು ವ್ಯಾಖ್ಯಾನಿಸಿಕೊಳ್ಳಬೇಕು, ಅಲ್ಲವೇ?

ಒಂದು 'ನೋ'ವಿನ ಕಥೆ... ನಿಮ್ಮ ನೆಮ್ಮದಿಗಿಂತ ಅವರ ಬೇಸರ ದೊಡ್ಡದಾ?

(ಕನ್ನಡಪ್ರಭ 'ಬೈಟೂಕಾಫಿ'ಯಲ್ಲಿ ಫೆಬ್ರುವರಿ 26, 2014ರಂದು ಪ್ರಕಟವಾದ ಲೇಖನ)

'ತುಂಬಾನೇ ಕಾಟ ಇವನದ್ದು. ನನಗಂತೂ ಬೇಜಾರು ಬಂದುಹೋಯಿತು,’ ಎಂದಳು ಸ್ನೇಹಿತೆ. ಇದನ್ನವಳು ಹೇಳಿದ್ದು ಮೊದಲನೇ ಸಲ ಅಲ್ಲ. 'ಇಷ್ಟ ಆಗಲ್ಲ ಅಂದ್ರೆ ಕಾಂಟ್ಯಾಕ್ಟ್ ಬಿಟ್ಟುಬಿಡಬಹುದಲ್ಲ? ವ್ಯಕ್ತಿ ಸರಿ ಇಲ್ಲ ಅಂತ ಅನಿಸಿದ ಮೇಲೂ ಫ್ರೆಂಡ್‌ಶಿಪ್ ಇಟ್ಕೊಳೋದ್ರಲ್ಲಿ ಏನರ್ಥ ಇದೆ?’ ಈ ಬಾರಿ ನಾನು ಕೇಳಿದೆ. 'ನಂಗೆ ಇದೆಲ್ಲ ಇಷ್ಟ ಆಗಲ್ಲ, ತೊಂದ್ರೆ ಕೊಡ್ಬೇಡ ಅಂತ ಸ್ಪಷ್ಟವಾಗೇ ಹೇಳಿದ್ದೀನಿ. ನಾನು ಅವನ ಅವಾಯ್ಡ್ ಮಾಡ್ತಿದೀನಿ ಅನ್ನೋದು ಅವಂಗೆ ಸ್ಪಷ್ಟವಾಗಿ ಗೊತ್ತು. ಆದ್ರೂ ಅದೇ ಹಳೇ ಚಾಳಿ ಮುಂದುವರಿಸಿದ್ದಾನೆ’ ಎಂದಳು ಅವಳು. 'ಆದ್ರೆ, ನಿನ್ನ ವ್ಯಕ್ತಿತ್ವ ವರ್ತನೆ ನಂಗೆ ಹಿಡಿಸಿಲ್ಲ; ಸುಮ್ನೇ ಕಾಟ ಕೊಡ್ಬೇಡ ಅಂತ ನೇರವಾಗಿ ಹೇಳಿಬಿಡೋದಕ್ಕೆ ನಂಗೆ ಹಿಂಸೆ ಅನ್ಸತ್ತೆ’ ಎಂದು ಸೇರಿಸಿದಳು.

ಒಂದೇ ಕ್ಯಾಂಪಸ್‌ನಲ್ಲಿ ಓದಿದವರು. ಅನೇಕ ವರ್ಷಗಳ ಪರಿಚಯ. ಗೆಳೆತನ, ಸಂಪರ್ಕ ಸಹಜವೇ. ಆದರೆ ಅವನ ಸ್ನೇಹ ಬರೀ ಅಷ್ಟೇ ಅಲ್ಲ, ಅದರ ಹಿಂದೆ ಇನ್ನೂ ಏನೇನೋ ನಿರೀಕ್ಷೆಗಳಿವೆ. ಇದರಿಂದ ಅವಳು ಬೇಸತ್ತಿದ್ದಾಳೆ. ಹಾಗಂತ 'ನೀನಿರೋ ರೀತಿ ನಂಗೆ ಇಷ್ಟ ಇಲ್ಲ’ ಎಂದುಬಿಟ್ಟರೆ ಆತ ನೊಂದುಕೊಳ್ಳಬಹುದು, ಇನ್ನೊಬ್ಬನ ಮನಸ್ಸು ನೋಯಿಸೋ ಹಕ್ಕು ತನಗಿದೆಯೇ ಎಂಬುದು ಅವಳ ಮನದ ಶಂಕೆ.

'ಅರೆ, ತನಗೆ ಒಬ್ಬ ವ್ಯಕ್ತಿಯಿಂದ ತೊಂದ್ರೆಯಾಗ್ತಿದೆ ಅಂತ ಅನಿಸಿದ್ಮೇಲೂ ಅದನ್ನು ಸಹಿಸಿಕೊಳ್ಳೋದ್ರಲ್ಲಿ ಏನರ್ಥ ಇದೆ? ಇದ್ರಲ್ಲಿ ಹಿಂಸೆ ಅನ್ಸೋದೇನು ಬಂತು? ನೀನು ಬೇರೆ ವಿವಾಹಿತೆ. ಇದು ಜೀವನದ ಪ್ರಶ್ನೆ ಅಲ್ವಾ? ನಿನ್ನ ಮನಸ್ಸಿನ ನೆಮ್ಮದಿಗಿಂತ ಅವನ ಬೇಸರ ದೊಡ್ಡದಾ?’ ನಾನು ಕೇಳಿದೆ.

ಜೀವನದಲ್ಲಿ ರಾಜಿಗಳು ಅನಿವಾರ್ಯ. ಆದರೆ ಎಷ್ಟು ಮತ್ತು ಎಲ್ಲಿಯವರೆಗೆ? ನಮ್ಮ ಬದುಕೇ 'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ’ ಧಾರಾವಾಹಿ. ಇಲ್ಲಿ ಹೊಂದಾಣಿಕೆ ಇಲ್ಲದೆ ಹೋದರೆ ಪ್ರತಿಕ್ಷಣ, ಪ್ರತಿದಿನವೂ ಅಸಹನೀಯತೆಯ ಮಡು. ಗಂಡ, ಹೆಂಡತಿ, ಅಪ್ಪ, ಅಮ್ಮ, ಮಗ, ಮಗಳು, ಸೊಸೆ ಎಂಬಿತ್ಯಾದಿ ಕೌಟುಂಬಿಕ ಸಂಬಂಧಗಳಿಂದ ತೊಡಗಿ ಪ್ರತಿದಿನ ಅನಿವಾರ್ಯವಾಗಿ ಎದುರಾಗುವ ಫ್ರೆಂಡು, ಸಹೋದ್ಯೋಗಿ, ಮೇಲಧಿಕಾರಿ, ನೆರೆಹೊರೆಯಾತ, ಸಹಪ್ರಯಾಣಿಕ ಇವರೆಲ್ಲರೊಂದಿಗೆ ಒಂದಿಷ್ಟು ಅಡ್ಜಸ್ಟ್‌ಮೆಂಟು ಇಲ್ಲದೆ ಜೀವನ ಕಡುಕಷ್ಟ. ಎಲ್ಲರೂ ತನ್ನ ಇಷ್ಟಾನಿಷ್ಟಗಳಿಗೆ ಅನುಕೂಲವಾಗಿರಬೇಕು ಎಂದು ನಿರೀಕ್ಷಿಸುವ ಬದಲು ತಾನೇ ಒಂದಿಷ್ಟು ಹೊಂದಾಣಿಕೆ ರೂಢಿಸಿಕೊಂಡರೆ ದಿನನಿತ್ಯದ ಬದುಕು ಸಲೀಸು. ಮನಸ್ಸಿಗೂ ನೆಮ್ಮದಿ.

ಆದರೆ ಈ ಅಡ್ಜಸ್ಟ್‌ಮೆಂಟ್ ಎಲ್ಲಿಯವರೆಗೆ? ಸಾಮಾಜಿಕ ಬದುಕು ಒಂದಷ್ಟು ಮುಲಾಜುಗಳನ್ನು ಬಯಸುತ್ತದೆ. ದಾಕ್ಷಿಣ್ಯ ಪ್ರವೃತ್ತಿಯ ಮನುಷ್ಯ ಅನೇಕ ಮಂದಿಗೆ ಇಷ್ಟವಾಗುತ್ತಾನೆ. ಏಕೆಂದರೆ ಆತ ಯಾರು ಏನೇ ಕೇಳಿದರೂ, ಹೇಳಿದರೂ, ಮಾಡಿದರೂ 'ನೋ’ ಅನ್ನಲಾರ. ಆಗಲ್ಲ ಎಂದರೆ ಉಳಿದವರು ಎಲ್ಲಿ ಬೇಸರ ಮಾಡಿಕೊಳ್ಳುತ್ತಾರೋ ಎಂಬ ಆತಂಕ ಇವನಿಗೆ. ಅಷ್ಟಲ್ಲದೆ ತಾನು ಎಲ್ಲರಿಂದಲೂ ಒಳ್ಳೆಯವನು(ಳು) ಅನ್ನಿಸಿಕೊಳ್ಳಬೇಕು ಎಂಬ ಅಂತರ್ಯದ ಒಂದು ಕಂಡೂಕಾಣದ ಮಮಕಾರ. ತನ್ನಿಂದ ಬೇರೆಯವರಿಗೆ ತೊಂದರೆ, ಬೇಜಾರು ಆಗಬಾರದು ಎಂಬ ಭಾವ ಮೂಲದಲ್ಲಿ ತುಂಬಾ ಒಳ್ಳೆಯದೇ. ಆದರೆ ಎಲ್ಲರಿಗೂ ಎಲ್ಲಾ ಸಂದರ್ಭದಲ್ಲೂ ಎಲ್ಲಾ ವಿಷಯಗಳಲ್ಲೂ ಒಳ್ಳೆಯವರಾಗಿ ಇರುವುದಕ್ಕೆ ಆಗುತ್ತದೆಯೇ? ಆ ಗುಣ ವ್ಯಕ್ತಿಯ ವೈಯುಕ್ತಿಕ ಬದುಕನ್ನೇ ನುಂಗಿಹಾಕುವ ಹಂತಕ್ಕೆ ಬಂದರೆ ಆ ಒಳ್ಳೆಯತನಕ್ಕೆ ಏನರ್ಥ? ಮನುಷ್ಯ 'ನೋ’ ಎನ್ನಲೂ ಕಲಿಯಬೇಕು.

ಖಂಡಿತವಾದಿ ಲೋಕವಿರೋಧಿ ಅನ್ನುತ್ತಾರೆ. ಆದರೆ ಈ ಖಂಡಿತವಾದಿಗಳು ಅನೇಕ ಸಂದರ್ಭದಲ್ಲಿ ಇಷ್ಟವಾಗುತ್ತಾರೆ. ಅವರು ಅಡ್ಡಗೋಡೆಯ ಮೇಲೆ ದೀಪ ಇಡಲಾರರು. ಏಕ್ ಮಾರ್ ದೋ ತುಕ್ಡಾ, ಅಷ್ಟೇ. ಈ ಬಗೆಯ ನೇರಾನೇರ ಖಡಕ್ ಪ್ರವೃತ್ತಿಯಿಂದ ಕೆಲವರಿಗೆ ನೋವಾಗಬಹುದು. ಆದರೆ ಕಡ್ಡಿಮುರಿದಂತೆ ಮಾತಾಡುವ ಈ ಮಂದಿ ನಿರಪಾಯಕಾರಿ ಜೀವಿಗಳು. ಅವರ ನಡೆಯನ್ನು ಯಾರಾದರೂ ಊಹಿಸಬಹುದು. ತಮಗನಿಸಿದ್ದನ್ನು ತಕ್ಷಣ ಹೇಳಿಬಿಡುತ್ತಾರೆ. ಮುಖ್ಯವಾಗಿ ಮುಲಾಜುಗಳಲ್ಲಿ ಸಿಲುಕಿಕೊಂಡು ಆಮೇಲೆ ಒದ್ದಾಡುವುದಿಲ್ಲ.

ಈ ಖಂಡಿತವಾದಿಗಳ ಪೈಕಿ ಇನ್ನೊಂದು ವರ್ಗವಿದೆ. ಅವರು ಎಲ್ಲದಕ್ಕೂ 'ನೋ’ ಎನ್ನುವವರು. ತಗಾದೆ, ಕೊಂಕು ಅವರ ಇಷ್ಟದ ಹವ್ಯಾಸ. ಯಾರು ಏನೇ ಹೇಳಿದರೂ ಅವರ ಬಳಿ ಅದನ್ನು ವಿರೋಧಿಸುವ ಒಂದು ವಾದ ಇರುತ್ತದೆ. ತಾವು ಉಳಿದವರಿಗಿಂತ ಡಿಫರೆಂಟ್ ಅನ್ನಿಸಿಕೊಳ್ಳಬೇಕು, ಮುಖ್ಯವಾಗಿ ತಾವು ಎಲ್ಲರಿಂದಲೂ ಗುರುತಿಸಿಕೊಳ್ಳಬೇಕು ಎಂಬ 'ಐಡೆಂಟಿಟಿ ಕ್ರೈಸಿಸ್’ ಇವರದ್ದು. ಇವರು ಆರಂಭದಲ್ಲಿ ಖಂಡಿತವಾದಿಗಳಂತೆ ಕಂಡರೂ ಬಲುಬೇಗ ತಮ್ಮ ಬಣ್ಣ ಬಯಲುಮಾಡಿಕೊಳ್ಳುತ್ತಾರೆ ಮತ್ತು ನಗೆಪಾಟಲಿಗೀಡಾಗುತ್ತಾರೆ.

ದಾಕ್ಷಿಣ್ಯ ಪ್ರವೃತ್ತಿ ಒಳ್ಳೆಯದೋ ನಿರ್ದಾಕ್ಷಿಣ್ಯತೆ ಒಳ್ಳೆಯದೋ ಎಂಬುದನ್ನು ನಿರ್ಧಾರ ಮಾಡುವುದಂತೂ ಇಲ್ಲಿನ ಉದ್ದೇಶ ಅಲ್ಲ. ಎಲ್ಲ ಗುಣಗಳಿಗೂ ಅವುಗಳದ್ದೇ ಆದ ಅನುಕೂಲ, ಅನಾನುಕೂಲಗಳು ಇದ್ದೇ ಇವೆ. ಆದರೆ ಅತಿಯಾದರೆ ಎರಡೂ ಒಳ್ಳೆಯದಲ್ಲ ಎಂಬುದಂತೂ ನಿಜ. 'ಮನುಷ್ಯ ಒಬ್ಬಂಟಿಯಾಗಿ ಬದುಕಲಾರ. ಒಂಟಿಯಾಗಿರಬೇಕಾದರೆ ಒಂದೋ ಆತ ದೆವ್ವವಾಗಿರಬೇಕು ಇಲ್ಲವೇ ದೇವರಾಗಿರಬೇಕು’ ಎಂಬ ಮಾತಿದೆ. ಖಂಡಿತವಾದ ಒಬ್ಬ ಮನುಷ್ಯನನ್ನು ಒಂಟಿಯಾಗಿಸಿದರೆ ಅಂತಹ ಖಂಡಿತವಾದದ ಸಾರ್ಥಕತೆ ಏನು? ಎಲ್ಲವನ್ನೂ ಎಲ್ಲರನ್ನೂ ವಿರೋಧಿಸುತ್ತಾ ಕೊನೆಗೆ ತಾನೊಬ್ಬನೇ ಉಳಿದಾಗ ಕಾಡುವ ಅನಾಥಪ್ರಜ್ಞೆಗೆ ಅವನೇ ಹೊಣೆ ಅಲ್ಲವೇ? ಅದೇ ಹೊತ್ತಿಗೆ, ಯಾವುದಕ್ಕೂ 'ನೋ’ ಎನ್ನಲಾಗದ ಅತಿಯಾದ ದಾಕ್ಷಿಣ್ಯ ಗುಣ ವ್ಯಕ್ತಿಯ ಬದುಕಿನ ನೆಮ್ಮದಿಯನ್ನೇ ಕಸಿದುಕೊಳ್ಳತೊಡಗಿದರೆ ಅಂತಹ ಮುಲಾಜಿಗೆ ಅರ್ಥ ಇದೆಯೇ? ಒಳ್ಳೆಯತನಕ್ಕೆ ಪ್ರತಿಯಾಗಿ ಒಳ್ಳೆಯತನ ತೋರುವುದು ಸರಿ; ವಿಕೃತಿಗಳನ್ನೂ ಒಪ್ಪಿಕೊಳ್ಳುವುದು ಒಳ್ಳೆಯತನ ಹೇಗಾಗುತ್ತದೆ?

'ಸತ್ಯವನ್ನು ಹೇಳು, ಪ್ರಿಯವಾದುದನ್ನು ಹೇಳು, ಅಪ್ರಿಯವಾದ ಸತ್ಯವನ್ನು ಹೇಳಬೇಡ’ ಎಂಬ ಹಳೇತಲೆಮಾರಿನ ಬುದ್ಧಿಮಾತು, ’ಪ್ರಿಯವಾದ ಸುಳ್ಳನ್ನೂ ಹೇಳಬೇಡ’ ಎಂದೂ ಹೇಳುತ್ತದೆ. ಸತ್ಯ ಅಪ್ರಿಯವಾಗಿದ್ದರೂ ಕೆಲವೊಮ್ಮೆ ಹೇಳಲೇಬೇಕಾಗುತ್ತದೆ, ಆದರೆ ಇನ್ನೊಬ್ಬರಿಗೆ ಇಷ್ಟವಾಗುತ್ತದೆಂದು ಆಡುವ ಮನಸಿಗೊಪ್ಪದ ಮಾತು ಮುಂದೊಂದು ದಿನ ನಮ್ಮ ಮನಸ್ಸಿಗೇ ಮುಳ್ಳಾಗದೇ? ನಮ್ಮ ನೆಮ್ಮದಿಗಿಂತ ಉಳಿದವರ ಬೇಸರ ದೊಡ್ಡದಾ?