ಶುಕ್ರವಾರ, ಏಪ್ರಿಲ್ 14, 2023

ಮನದೊಳಗಣ ಕಿಚ್ಚು ಮನವ ಸುಡುವುದು

15-21 ಏಪ್ರಿಲ್ 2023ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ.

ಕಿಚ್ಚನಾರಿಸಬಹುದು ಹೊಟ್ಟೆಯ | ಕಿಚ್ಚಿಗೌಷಧವುಂಟೆ ಲೋಕದಿ | ಮಚ್ಚರವು ಜೀವಂತ ಸುಡುವುದು ನಿಚ್ಚವೆಮ್ಮ || ಎಂದು ಬರೆಯುತ್ತಾರೆ ಯುವ ಯಕ್ಷಗಾನ ಕವಿ ಶಿವಕುಮಾರ ಅಳಗೋಡು. ಅಸೂಯೆ ಎಷ್ಟು ಘೋರವಾದದ್ದು ಎಂಬುದನ್ನು ಎಷ್ಟೊಂದು ಸರಳವಾಗಿ ಚಿತ್ರಿಸಿದ್ದಾರೆ! ಭೌತಿಕವಾಗಿ ಕಾಣುವ ಬೆಂಕಿಯನ್ನು ಹೇಗಾದರೂ ನಂದಿಸಬಹುದು, ಆದರೆ ಒಳಗಿನ ಕಿಚ್ಚಿಗೆ ಪರಿಹಾರವಿಲ್ಲ; ಅದು ವ್ಯಕ್ತಿಯನ್ನು ದಿನವೂ ಸುಡುತ್ತಿರುತ್ತದೆ ಎಂಬ ಮಾತು ನೂರು ಪ್ರತಿಶತ ಸತ್ಯ.

ಅಸೂಯೆ ಎಂಬ ಬೆಂಕಿ ವ್ಯಕ್ತಿಗಳನ್ನಷ್ಟೇ ಅಲ್ಲ, ರಾಜ್ಯ-ಕೋಶಗಳನ್ನೇ ಸುಟ್ಟುಹಾಕಿದೆ,  ಸಾಮ್ರಾಜ್ಯಗಳನ್ನೇ ಬೂದಿಮಾಡಿದೆ, ವಂಶಗಳೇ ಅಳಿದುಹೋಗುವಂತೆ ಮಾಡಿದೆ. ಅದು ಅಂತಿಂಥ ಕಿಚ್ಚಲ್ಲ. ಬದುಕನ್ನೇ ನಿರ್ನಾಮ ಮಾಡುವ ಕಿಚ್ಚು. ಕಾಳ್ಗಿಚ್ಚನ್ನಾದರೂ ಕಟ್ಟಿಹಾಕಬಹುದು, ಈರ್ಷ್ಯೆಯನ್ನಲ್ಲ. ಬರಿಗಣ್ಣಿಗೆ ತಕ್ಷಣ ಕಾಣದೆ ಇರುವ ಈ ಜ್ವಾಲೆ ಕೆನ್ನಾಲಿಗೆಯಾದ ಮೇಲೆ ತಡೆಯುವುದು ಕಷ್ಟ.

ಕೈಕೇಯಿಯ ಅಸೂಯೆಯಿಂದ ರಾಮಾಯಣವಾಯಿತು; ಗಾಂಧಾರಿಯ ಅಸೂಯೆಯಿಂದ ಮಹಾಭಾರತವೇ ಸೃಷ್ಟಿಯಾಯಿತು. ರಾಮ ಕಾಡಿಗೆ ಹೋದದ್ದರಿಂದಲಾದರೂ ಭೂಭಾರ ಹರಣ ಆಯಿತು. ಆದರೆ ಗಾಂಧಾರಿ ಹೊಟ್ಟೆ ಹಿಸುಕಿಕೊಂಡದ್ದರಿಂದ ನೂರೊಂದು ಕೌರವರು ಹುಟ್ಟಿಕೊಂಡುಬಿಟ್ಟರು. ಇಡೀ ಮಹಾಭಾರತವೇ ದಾಯಾದಿ ಕಲಹದ ವೇದಿಕೆಯಾಯಿತು. ಗಾಂಧಾರಿ ಯಾವ ಅಸಹನೆಯಿಂದ ತನ್ನ ಗರ್ಭವನ್ನು ಹಿಸುಕಿಕೊಂಡಳೋ ಅದೇ ಅಸಹನೆ ಸಮಸ್ತ ಕೌರವರ ಸ್ಥಾಯೀಗುಣವೇ ಆಗಿ ಕೊನೆಗೆ ಕುರುಕ್ಷೇತ್ರವೇ ನಿರ್ಮಾಣವಾಯಿತು.

ಧೃತರಾಷ್ಟ್ರನಂತೂ ಹುಟ್ಟುಕುರುಡ. ಆತನಿಗಿಲ್ಲದ ದೃಷ್ಟಿ ತನಗೂ ಬೇಡ ಎಂದು ಗಾಂಧಾರಿ ತಾನೂ ದೃಷ್ಟಿಯನ್ನು ಬಂಧಿಸಿಕೊಂಡಳು. ವಿಚಿತ್ರವೆಂದರೆ ಕೌರವರೆಲ್ಲರೂ ಈರ್ಷ್ಯೆಯೆಂಬ ಬಟ್ಟೆಯಿಂದ ತಮ್ಮ ಅಂತರಂಗದ ಕಣ್ಣುಗಳನ್ನೇ ಕಟ್ಟಿಕೊಂಡರು. ಅಸೂಯೆ ಒಳಗಣ್ಣನ್ನೇ ಕುರುಡಾಗಿಸುತ್ತದೆ. ಅದು ಮನುಷ್ಯನನ್ನು ಯೋಚಿಸದಂತೆ ಮಾಡುತ್ತದೆ, ಆತ್ಮಾವಲೋಕನದ ಶಕ್ತಿಯನ್ನು ಕುಂದಿಸುತ್ತದೆ. ಹೇಗಾದರೂ ಮಾಡಿ ತನ್ನ ಪ್ರತಿಸ್ಪರ್ಧಿಯನ್ನು ಮಣಿಸಬೇಕು ಎಂಬ ಉದ್ದೇಶ ಪ್ರಬಲವಾಗುತ್ತದೆಯೇ ಹೊರತು ತಾನೇಕೆ ಹೀಗಾಗಿದ್ದೇನೆ ಎಂದು ಚಿಂತಿಸುವುದೇ ಇಲ್ಲ. ತನ್ನ ಒಂದು ಕಣ್ಣು ಹೋದರೂ ಅಡ್ಡಿಯಿಲ್ಲ, ಎದುರಾಳಿಯ ಎರಡೂ ಕಣ್ಣು ಹೋಗಲಿ ಎಂಬ ಭಾವನೆಯೇ ಇಲ್ಲಿ ಪ್ರಬಲ.

ಉದ್ಯೋಗ, ವ್ಯವಹಾರ, ಸಂಪತ್ತು, ಸಂಬಂಧ- ಎಲ್ಲ ಕಡೆಗಳಲ್ಲೂ ಮತ್ಸರ ಅನಾಹುತಗಳನ್ನು ಸೃಷ್ಟಿಸಬಲ್ಲದು. ಇನ್ನೊಬ್ಬ ತನಗಿಂತ ಮುಂದಿರಬಾರದು ಎಂಬ ಮನಸ್ಥಿತಿಯೇ ಈ ಮತ್ಸರಕ್ಕೆ ಕಾರಣ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಈ ಮನಸ್ಥಿತಿಯ ಮೂಲಕಾರಣ ಸ್ಪರ್ಧೆ ಎಂಬುದಕ್ಕಿಂತಲೂ ವ್ಯಕ್ತಿಯ ಕೀಳರಿಮೆ ಎಂಬುದೇ ನಿಜ. ‘ಅಸೂಯೆ ಎಂಬುದು ಒಬ್ಬ ವ್ಯಕ್ತಿಯ ಕೀಳರಿಮೆಯ ಅಂತಃಪ್ರಜ್ಞೆ. ಅದೊಂದು ಮಾನಸಿಕ ಕ್ಯಾನ್ಸರ್’ ಎನ್ನುತ್ತಾನೆ ಫೋರ್ಬ್ಸ್. ಗುಣ, ರೂಪ, ಹಣ, ಜ್ಞಾನ, ಅಂತಸ್ತು, ಜನಪ್ರಿಯತೆ- ಯಾವ ವಿಷಯದಲ್ಲಾದರೂ ಈ ಕೀಳರಿಮೆ ಹುಟ್ಟಿಕೊಳ್ಳಬಹುದು. ಇಂತಹ ವಿಷಯಗಳಲ್ಲಿ ಇನ್ನೊಬ್ಬನ ಮಟ್ಟಕ್ಕೆ ಏರುವುದು ತನಗೆ ಸಾಧ್ಯವಿಲ್ಲ ಎಂದು ವ್ಯಕ್ತಿಗೆ ಅನ್ನಿಸಿದಾಗ ಅದು ಕೀಳರಿಮೆಯಾಗಿ ಬೆಳೆಯುವುದುಂಟು. ಅಸೂಯೆ ಕೀಳರಿಮೆಯ ಇನ್ನೊಂದು ಮುಖ.

ಕೀಳರಿಮೆಗೆ ಕಾರಣ ವಾಸ್ತವವನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿ. ಒಬ್ಬೊಬ್ಬ ವ್ಯಕ್ತಿಯೂ ಅವನದೇ ನೆಲೆಯಲ್ಲಿ ವಿಶಿಷ್ಟ ಮತ್ತು ಅನನ್ಯ. ಒಬ್ಬ ವ್ಯಕ್ತಿ ಯಾವುದೋ ಒಂದು ವಿಷಯದಲ್ಲಿ ಗಟ್ಟಿಗನಾಗಿದ್ದಾನೆಂದರೆ ಇನ್ನೊಬ್ಬ ವ್ಯಕ್ತಿ ಎಲ್ಲ ವಿಷಯಗಳಲ್ಲೂ ದುರ್ಬಲ ಎಂದರ್ಥವಲ್ಲ. ಅವನಿಗೆ ಅವನದ್ದೇ ಆದ ವೈಶಿಷ್ಟ್ಯಗಳಿರಬಹುದು, ಮತ್ತು ಅವುಗಳ ಮೂಲಕ ಯಶಸ್ಸು ಸಾಧಿಸಬಹುದು. ಒಂದು ವಿಷಯದಲ್ಲಿ ಗಟ್ಟಿಗ ಎನಿಸಿಕೊಂಡವನು ಉಳಿದ ಹತ್ತಾರು ವಿಷಯಗಳಲ್ಲಿ ದುರ್ಬಲನಾಗಿರಬಹುದು. ನಿಜವಾಗಿ ನೋಡಿದರೆ ಪರಿಪೂರ್ಣತೆಯೆಂಬುದು ಒಂದು ಭ್ರಮೆ. ಒಬ್ಬ ವ್ಯಕ್ತಿ ಪರಿಪೂರ್ಣನಾಗಿರುವುದು ಸಾಧ್ಯವೇ ಇಲ್ಲ. ಇದಿಷ್ಟು ಸ್ಪಷ್ಟ ಇರುವವನಿಗೆ ಇನ್ನೊಬ್ಬನ ಕುರಿತು ಮತ್ಸರ ಹುಟ್ಟಿಕೊಳ್ಳುವುದು ಸಾಧ್ಯವೇ ಇಲ್ಲ. ‘ಹೋಲಿಸಿಕೊಳ್ಳದೆ ಬದುಕುವುದೆಂದರೆ ದೊಡ್ಡ ಹೊರೆಯೊಂದನ್ನು ಇಳಿಸಿಕೊಂಡಂತೆ’ ಎನ್ನುತ್ತಾರೆ ಜಿಡ್ಡು ಕೃಷ್ಣಮೂರ್ತಿ. 

ತಾನು ಯಾರೊಂದಿಗೂ ಸ್ಪರ್ಧಿಸಬೇಕಿಲ್ಲ, ತನಗೆ ತಾನೇ ಸ್ಪರ್ಧಿ; ಪ್ರತಿದಿನವೂ ತನ್ನನ್ನು ತಾನು ಮೀರುವ ದಾರಿಯಲ್ಲಿ ಸಾಗಬೇಕು ಎಂಬ ಮನಸ್ಥಿತಿ ಬೆಳೆಸಿಕೊಂಡರೆ ಪ್ರತಿಸ್ಪರ್ಧಿಗಳಿಂದ ತನಗೆ ತೊಂದರೆಯಿದೆ ಎಂದು ಯಾವ ವ್ಯಕ್ತಿಗೂ ಅನ್ನಿಸಲಾರದು. ಉದ್ಯೋಗ ಸ್ಥಳದಲ್ಲೇ ಆಗಿರಲಿ, ತಾನು ಗರಿಷ್ಠ ಪ್ರಯತ್ನದೊಂದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅದಕ್ಕೆ ಸೂಕ್ತ ಪ್ರತಿಫಲ ಇಂದಲ್ಲ ನಾಳೆಯಾದರೂ ಸಿಕ್ಕಿಯೇ ಸಿಗುತ್ತದೆ ಎಂದು ಭಾವಿಸಿದವನಿಗೆ ಅಸೂಯೆಯ ಕಿಚ್ಚು ಕಾಡಲಾರದು. 

ಇದು ನಮ್ಮನ್ನು ಅಸೂಯೆ ಕಾಡದಂತೆ ನೋಡಿಕೊಳ್ಳುವ ಬಗೆಯಾಯಿತು. ನಮ್ಮನ್ನು ನೋಡಿ ಇನ್ನೊಬ್ಬ ಅಸೂಯೆಪಟ್ಟುಕೊಳ್ಳುತ್ತಿದ್ದಾನೆ, ಹೋದ ದಾರಿಗೆಲ್ಲ ಅಡ್ಡಬರುತ್ತಿದ್ದಾನೆ ಎಂದು ಅನಿಸುತ್ತಿದೆಯೇ? ಅಂಥವರ ಬಗ್ಗೆ ಎಳ್ಳಷ್ಟೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಮತ್ಸರವೆಂಬುದು ವ್ಯಕ್ತಿಯ ಒಳಗಿನ ಕಿಚ್ಚು ಎಂದು ಆಗಲೇ ಹೇಳಿಯಾಯಿತು. ಕಿಚ್ಚು ಒಳಗೆ ಇದೆ ಎಂದ ಮೇಲೆ ಅದು ಲೋಕವನ್ನು ಸುಡುವುದಕ್ಕಿಂತ ಮುಂಚೆ ವ್ಯಕ್ತಿಯನ್ನೇ ಸುಡುತ್ತದೆ. ವಾಸ್ತವವಾಗಿ ಅಂಥವರು ಪ್ರತಿದಿನವೂ ತಮ್ಮೊಳಗೇ ಸುಟ್ಟುಹೋಗುತ್ತಿರುತ್ತಾರೆ; ಯಾವುದೋ ಒಂದು ದಿನ ನೋಡನೋಡುತ್ತಿದ್ದಂತೆಯೇ ಕರಕಲಾಗುತ್ತಾರೆ. ‘ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು’ ಎಂದು ಬಸವಣ್ಣನೇ ಹೇಳಿಲ್ಲವೇ? ಇನ್ನೊಬ್ಬನನ್ನು ನೋಡಿ ಅಸೂಯೆಪಡುವವರಿಗೆ ಮಾನಸಿಕ ನೆಮ್ಮದಿಯೇ ಇರುವುದಿಲ್ಲ. ಅವರು ಸದಾ ಅತೃಪ್ತಿ, ಅಶಾಂತಿಗಳಿಂದ ಒಳಗೊಳಗೇ ಬೇಯುತ್ತಿರುತ್ತಾರೆ. ಕುದಿಯುವವರು ಆವಿಯಾಗುತ್ತಾರೆ, ಉರಿಯುವವರು ಬೂದಿಯಾಗುತ್ತಾರೆ ಎಂಬ ಮಾತೇ ಇದೆಯಲ್ಲ! 

ಇನ್ನೊಂದು ವಿಚಾರ ಏನೆಂದರೆ, ಯಾರೋ ನಮ್ಮನ್ನು ನೋಡಿ ಮತ್ಸರಪಡುತ್ತಿದ್ದಾರೆ ಎಂದರೆ ನಾವು ಸಾಧನೆಯ ದಾರಿಯಲ್ಲಿದ್ದೇವೆ ಎಂದು ಅರ್ಥ. ಸೋತವರನ್ನು ನೋಡಿ ಯಾರೂ ಅಸೂಯೆಪಡುವುದಿಲ್ಲವಲ್ಲ! “ನಿಮ್ಮನ್ನು ನೋಡಿ ಅಸೂಯೆಪಡುವವರನ್ನು ದ್ವೇಷಿಸಬೇಡಿ. ಅವರು ವಾಸ್ತವವಾಗಿ ತಮಗಿಂತ ನೀವೇ ಉತ್ತಮ ಎಂದು ಭಾವಿಸಿಕೊಂಡಿರುತ್ತಾರೆ. ಅಂಥವರಿಗೆ ಮನಸ್ಸಿನಲ್ಲೇ ಕೃತಜ್ಞತೆ ಹೇಳಿ ಮುಂದಕ್ಕೆ ಹೋಗುತ್ತಾ ಇರಿ” ಎಂದು ದಾರ್ಶನಿಕರು ಇದೇ ಕಾರಣಕ್ಕೆ ಹೇಳಿರುವುದು.

ಯಾವ ಸುಯೋಧನನ ಮತ್ಸರದಿಂದ ಕುರುಕ್ಷೇತ್ರ ಸೃಷ್ಟಿಯಾಯಿತೋ, ಅದೇ ಸುಯೋಧನ ಒಂದು ಹಂತದಲ್ಲಿ ತನ್ನ ಪ್ರತಿಸ್ಪರ್ಧಿಯ ಶೌರ್ಯವನ್ನು ಮೆಚ್ಚಿದ್ದುಂಟಂತೆ. ಯುದ್ಧದಲ್ಲಿ ಭೀಮನ ಪರಾಕ್ರಮವನ್ನು ನೋಡಿದ ಕೌರವ ‘ಸದ್ಗುಣಕೆ ಮತ್ಸರವೆ’ ಎಂದುಕೊಳ್ಳುತ್ತಾನೆ (ಕುಮಾರವ್ಯಾಸಭಾರತ). ಇನ್ನೊಬ್ಬನ ಸದ್ಗುಣವನ್ನು, ಒಳ್ಳೆಯತನವನ್ನು, ನ್ಯಾಯಮಾರ್ಗದಲ್ಲಿ ಗಳಿಸುವ ಯಶಸ್ಸನ್ನು ನೋಡಿ ಖಂಡಿತ ಮತ್ಸರಪಟ್ಟುಕೊಳ್ಳಬಾರದು. ಇನ್ನೊಬ್ಬನನ್ನು ಪ್ರಾಮಾಣಿಕವಾಗಿ ಅಭಿನಂದಿಸುವುದರಲ್ಲಿ ಇರುವ ಆತ್ಮಸಂತೋಷ ಬೇರೆಡೆ ಸಿಗಲಾರದು. ‘ಸರ್ವಂ ಪರಿಕ್ರೋಶಮ್ ಜಹಿ’ (ಎಲ್ಲ ಬಗೆಯ ಮತ್ಸರವನ್ನು ತ್ಯಜಿಸು) ಎನ್ನುತ್ತದೆ ಋಗ್ವೇದ. ವೇದದ ಬೆಳಕು ನಮ್ಮನ್ನು ಮುನ್ನಡೆಸಲಿ.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಏಪ್ರಿಲ್ 11, 2023

ಉದ್ಯೋಗಸೇತುವಾಗಬಲ್ಲ ಕೌಶಲ ಕೋರ್ಸುಗಳು

03 ಏಪ್ರಿಲ್ 2023ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ನಮ್ಮ ಶಿಕ್ಷಣ ವ್ಯವಸ್ಥೆ ಹಾಗೂ ಉದ್ಯೋಗರಂಗದ ನಡುವೆ ಅಡ್ಡ ನಿಂತಿರುವ ದೊಡ್ಡ ಗೋಡೆ ಕೌಶಲಗಳ ಕೊರತೆ. ಶಿಕ್ಷಣ ಸಂಸ್ಥೆಗಳಿಂದ ಲಕ್ಷಾಂತರ ಪದವೀಧರರು ಪ್ರತಿವರ್ಷ ಹೊರಬರುತ್ತಲೇ ಇದ್ದರೂ ಉದ್ಯೋಗಜಗತ್ತಿನ ಅವಶ್ಯಕತೆಗಳು ಪೂರೈಕೆಯಾಗುತ್ತಿಲ್ಲ. ಒಂದೆಡೆ ಖಾಲಿ ಉಳಿದಿರುವ ಅಸಂಖ್ಯ ಉದ್ಯೋಗಗಳು, ಇನ್ನೊಂದೆಡೆ ಹೆಚ್ಚುತ್ತಲೇ ಇರುವ ನಿರುದ್ಯೋಗ.

ಈ ವೈರುಧ್ಯವನ್ನು ಸರಿಪಡಿಸುವ ಏಕೈಕ ದಾರಿಯೆಂದರೆ ಶಿಕ್ಷಣ ಹಾಗೂ ಉದ್ಯೋಗಜಗತ್ತಿನ ನಡುವಿನ ಅಂತರವನ್ನು ನಿವಾರಿಸುವುದು; ಅಂದರೆ ನಮ್ಮ ಯುವಕರನ್ನು ಹೊಸಕಾಲದ ಕೌಶಲ್ಯಗಳೊಂದಿಗೆ ಸಶಕ್ತರೂ ಸಮರ್ಥರೂ ಆಗಿ ಬೆಳೆಸುವುದು. ಕಾಲ ಬದಲಾಗಿದೆ, ಉದ್ಯೋಗಗಳೂ ಬದಲಾಗಿವೆ, ಅದಕ್ಕೆ ತಕ್ಕಂತೆ ಶಿಕ್ಷಣ ಹಾಗೂ ತರಬೇತಿ ಬದಲಾಗದೆ ಇರುವುದೇ ಇಂದಿನ ಎಲ್ಲ ಸಮಸ್ಯೆಗಳ ಮೂಲ. 

ಉದ್ಯೋಗ ಜಗತ್ತು ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸೈಬರ್ ಸೆಕ್ಯುರಿಟಿ, ವರ್ಚುವಲ್ ರಿಯಾಲಿಟಿ, 3-ಡಿ ಪ್ರಿಂಟಿಂಗ್, ರೋಬೋಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಮುಂತಾದ ಕ್ಷೇತ್ರಗಳೆಡೆಗೆ ಭರದಿಂದ ವ್ಯಾಪಿಸುತ್ತಿದೆ. ನಾವು ಕೇವಲ ಸಾಂಪ್ರದಾಯಿಕ ಉದ್ಯೋಗಗಳ ಕಡೆಗಷ್ಟೇ ಗಮನಹರಿಸಿದರೆ ಏನೇನೂ ಸಾಲದು. ಹೊಸತನದತ್ತ ತೆರೆದುಕೊಳ್ಳುವುದು ಇಂದಿನ ಅನಿವಾರ್ಯ.

ಹೊಸ ಉದ್ಯೋಗ ಸಾಧ್ಯತೆಗಳನ್ನು ಗಮನಿಸಿದಾಗ ತಕ್ಷಣಕ್ಕೆ ಇವೆಲ್ಲ ತಾಂತ್ರಿಕ ಹುದ್ದೆಗಳು ಎನಿಸಿದರೂ, ಇವು ಎಲ್ಲ ಹಿನ್ನೆಲೆಯ ಮಂದಿಯನ್ನೂ ಸ್ವಾಗತಿಸುವ ಕ್ಷೇತ್ರಗಳೆಂಬುದು ವಾಸ್ತವ ಸಂಗತಿ. ಬಿಎ, ಬಿಕಾಂ, ಬಿಎಸ್ಸಿಯಂತಹ ಸಾಂಪ್ರದಾಯಿಕ ಪದವಿಗಳನ್ನು ಪಡೆದವರೂ ಇವುಗಳನ್ನು ಪ್ರವೇಶಿಸಿ ಯಶಸ್ಸು ಸಾಧಿಸಬಹುದು. ದೊಡ್ಡದೊಡ್ಡ ಕಂಪೆನಿಗಳು ಇಂದು ಎದುರು ನೋಡುತ್ತಿರುವುದು ಕೌಶಲಗಳನ್ನೇ ಹೊರತು ಅಂಕಪಟ್ಟಿಗಳನ್ನಲ್ಲ. ಪದವಿ ವ್ಯಾಸಂಗ ಮಾಡುತ್ತಿರುವವರು ಅದರ ಜೊತೆಜೊತೆಗೆ ಕಲಿಯಬಹುದಾದ ನೂರಾರು ಕೋರ್ಸುಗಳು ಈಗ ಲಭ್ಯವಿವೆ. ಇವುಗಳಲ್ಲಿ ಅನೇಕವು ಉಚಿತ ಹಾಗೂ ಆನ್ಲೈನ್ ವಿಧಾನದಲ್ಲಿ ಲಭ್ಯ.  ಬಿಡುವಿನ ವೇಳೆಯಲ್ಲಿ ಒಂದೆರಡು ಕೋರ್ಸುಗಳನ್ನು ಮಾಡಿಕೊಂಡರೆ ಇವುಗಳ ನೆರವಿನಿಂದಲೇ ಒಳ್ಳೆಯ ಉದ್ಯೋಗಗಳನ್ನೂ ಪಡೆಯಬಹುದು.

ಡಿಜಿಟಲ್ ಮಾರ್ಕೆಟಿಂಗ್: ಯಾವುದೇ ಉತ್ಪನ್ನದ ಮಾರಾಟಗಾರರೂ ಇಂದು ಪ್ರಚಾರಕ್ಕಾಗಿ ಅವಲಂಬಿಸಿರುವುದು ಡಿಜಿಟಲ್ ಮಾಧ್ಯಮವನ್ನು. ಸಾಂಪ್ರದಾಯಿಕ ಮಾಧ್ಯಮಗಳ ಜಾಹೀರಾತು ಸಾಕಾಗುವುದಿಲ್ಲ. ಕಂಟೆAಟ್ ಡೆವಲಪ್ಮೆಂಟ್, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್- ಹೀಗೆ ಡಿಜಿಟಲ್ ಮಾರ್ಕೆಟಿಂಗ್‌ಗೆ ಸಂಬಂಧಿಸಿದಂತೆ ಹತ್ತಾರು ಆನ್ಲೈನ್ ಕೋರ್ಸುಗಳಿವೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್: ಬಹುತೇಕ ಆನ್ಲೈನ್ ಚಟುವಟಿಕೆಗಳು ಇಂದು ಕೃತಕ ಬುದ್ಧಿಮತ್ತೆ ಆಧರಿತವಾಗಿವೆ. ಅದನ್ನು ಬಳಸಿಕೊಂಡು ವ್ಯವಹಾರ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಹತ್ತಾರು ಉಚಿತ ಕೋರ್ಸುಗಳು ಲಭ್ಯವಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರಾಜೆಕ್ಟ್ಸ್, ಇಂಟ್ರೊಡಕ್ಷನ್ ಟು ಎಐ, ಸೆಕ್ಯೂರ್ & ಪ್ರೈವೇಟ್ ಎಐ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫಾರ್ ರೋಬೋಟಿಕ್ಸ್, ಡೆವಲಪಿಂಗ್ ಎಐ ಅಪ್ಲಿಕೇಶನ್ಸ್ – ಈ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಕೋರ್ಸುಗಳು.

ಡೇಟಾ ಅನಲಿಟಿಕ್ಸ್: ತಂತ್ರಜ್ಞಾನ ಬೆಳೆದಂತೆ ವಿವಿಧ ರಂಗಗಳಿಗೆ ಸಂಬಂಧಿಸಿದ ದತ್ತಾಂಶ ಬೆಟ್ಟದಂತೆ ಬೆಳೆಯುತ್ತಿದೆ. ಇದರ ವಿಶ್ಲೇಷಣೆ ಮತ್ತು ಅನ್ವಯ ದುಸ್ತರವಾಗುತ್ತಿದೆ. ಹೀಗಾಗಿ ಡೇಟಾ ಅನಲಿಟಿಕ್ಸ್ ಎಂಬ ಪ್ರಧಾನ ಉದ್ಯೋಗ ಕ್ಷೇತ್ರವೊಂದು ತೆರೆದುಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಕಂಪ್ಯೂಟಿಂಗ್  ಫಾರ್ ಡೇಟಾ ಅನಾಲಿಸಿಸ್, ಕ್ರಿಪ್ಟೋಗ್ರಫಿ & ನೆಟ್ವರ್ಕ್ ಸೆಕ್ಯುರಿಟಿ, ಡೇಟಾ ಅನಲಿಟಿಕ್ಸ್ ವಿದ್ ಪೈಥಾನ್. ಡೇಟಾ ಅನಾಲಿಸಿಸ್ ಫಾರ್ ಡಿಸಿಶನ್ ಮೇಕಿಂಗ್, ವಿಶುವಲೈಸೇಶನ್ ಫಾರ್ ಡೇಟಾ ಜರ್ನಲಿಸಂ- ಇಂತಹ ಹತ್ತಾರು ಕೋರ್ಸುಗಳಿವೆ.

ಸೈಬರ್ ಸೆಕ್ಯುರಿಟಿ: ಆನ್ಲೈನ್ ಜಗತ್ತಿನ ಕಳ್ಳಕಾಕರಿಂದ ಸುರಕ್ಷಿತವಾಗಿರುವುದು ಇಂದಿನ ಆದ್ಯತೆಗಳಲ್ಲೊಂದು. ಹೀಗಾಗಿ ಸೈಬರ್ ಭದ್ರತೆಯ ಜ್ಞಾನ ಹಾಗೂ ಕೌಶಲಗಳನ್ನು ಬೆಳೆಸಿಕೊಂಡವರಿಗೆ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ. ಸರ್ಟಿಫಿಕೇಟ್ ಇನ್ ಸೈಬರ್ ಸೆಕ್ಯುರಿಟಿ, ಇನ್ಫಾರ್ಮೇಶನ್ ಸೆಕ್ಯುರಿಟಿ & ಸೈಬರ್ ಫಾರೆನ್ಸಿಕ್ಸ್, ಆನ್ಲೈನ್ ಪ್ರೈವಸಿ, ಸೈಬರ್ ಸೆಕ್ಯುರಿಟಿ ಇನ್ ಹೆಲ್ತ್ಕೇರ್ ಪ್ರೋಗ್ರಾಮ್ಸ್- ಈ ಕ್ಷೇತ್ರದಲ್ಲಿ ಲಭ್ಯವಿರುವ ಕೆಲವು ಕೋರ್ಸುಗಳು.

ಡೇಟಾ ಸೈನ್ಸ್: ದತ್ತಾಂಶ ನಿರ್ವಹಣೆ ಕುರಿತ ಆನ್ಲೈನ್ ಕೋರ್ಸುಗಳನ್ನು ಇಂದು ಅಂತಾರಾಷ್ಟ್ರೀಯ ಮಟ್ಟದ ಕಂಪೆನಿಗಳು ಹಾಗೂ ವಿಶ್ವವಿದ್ಯಾನಿಲಯಗಳು ನೀಡುತ್ತಿವೆ. ಇವು ಉಚಿತವಾಗಿಯೂ ಲಭ್ಯವಿವೆ. ಪರ್ಡ್ಯು ಯೂನಿವರ್ಸಿಟಿಯ ಡೇಟಾ ಸೈನ್ಸ್ ಫಾರ್ ಸ್ಮಾರ್ಟ್ ಸಿಟೀಸ್, ಎಂಐಟಿ ಕೇಂಬ್ರಿಜ್‌ನ ಕೊಲಾಬೊರೇಟಿವ್ ಡೇಟಾ ಸೈನ್ಸ್ ಫಾರ್ ಹೆಲ್ತ್ಕೇರ್, ಐಬಿಎಂನ ಡೇಟಾ ಸೈನ್ಸ್ ಟೂಲ್ಸ್, ಯೂನಿವರ್ಸಿಟಿ ಆಫ್ ಲಂಡನ್‌ನ ಫೌಂಡೇಶನ್ಸ್ ಆಫ್ ಡೇಟಾ ಸೈನ್ಸ್ ಇಂತಹ ಉಪಯುಕ್ತ ಕೋರ್ಸುಗಳಿಗೆ ಉದಾಹರಣೆಗಳು.

ಗ್ರಾಫಿಕ್ ಡಿಸೈನಿಂಗ್: ಯೋಚನೆ-ಯೋಜನೆಗಳ ದೃಶ್ಶಿಕ ವಿವರಣೆ ಹೊಸಕಾಲದ ಅವಶ್ಯಕತೆಗಳಲ್ಲೊಂದು. ಹೀಗಾಗಿ ಎಲ್ಲೆಡೆಯೂ ಗ್ರಾಫಿಕ್ ವಿನ್ಯಾಸಕಾರರು ಇಂದು ಬೇಕೇಬೇಕು. ಜಾಹೀರಾತಿನಿಂದ ತೊಡಗಿ ಸಿನಿಮಾರಂಗದವರೆಗೆ ನೂರಾರು ಕ್ಷೇತ್ರಗಳು ಅವರನ್ನು ಸ್ವಾಗತಿಸುತ್ತವೆ. ಇಂಟ್ರೊಡಕ್ಷನ್ ಟು ಗ್ರಾಫಿಕ್ ಡಿಸೈನ್ ವಿದ್ ಫೋಟೋಶಾಪ್, ಫಂಡಮೆಂಟಲ್ಸ್ ಆಫ್ ಗ್ರಾಫಿಕ್ ಡಿಸೈನ್, ಗ್ರಾಫಿಕ್ಸ್ & ಅನಿಮೇಶನ್ ಡೆವಲಪ್ಮಂಟ್, ಕಂಪ್ಯೂಟರ್ ಗ್ರಾಫಿಕ್ಸ್- ಹೀಗೆ ಅನೇಕ ಕೋರ್ಸುಗಳು ಉಚಿತವಾಗಿ ದೊರೆಯುತ್ತವೆ.

ಫೋಟೋಗ್ರಫಿ & ವೀಡಿಯೋಗ್ರಫಿ: ಕೌಟುಂಬಿಕ ಕಾರ್ಯಕ್ರಮಗಳಿಂದ ತೊಡಗಿ ಕಾರ್ಪೋರೇಟ್ ಸಮಾರಂಭಗಳವರೆಗೆ ಎಲ್ಲರಿಗೂ ಬೇಕಾಗಿರುವುದು ಛಾಯಾಗ್ರಹಣ ಮತ್ತು ವೀಡಿಯೋಗ್ರಫಿ. ಹೀಗಾಗಿ ಕ್ಯಾಮೆರಾ ನಿರ್ವಹಿಸಬಲ್ಲವರಿಗೆ ಈಗ ಎಲ್ಲೆಡೆಯೂ ಬೇಡಿಕೆ. ಫೋಟೋಗ್ರಫಿ, ವೀಡಿಯೋಗ್ರಫಿ ಬಲ್ಲವರು ನಿರುದ್ಯೋಗಿಗಳಾಗಿ ಕುಳಿತುಕೊಳ್ಳುವ ಪ್ರಮೇಯವೇ ಇಲ್ಲ. ಹತ್ತಾರು ಸಂಖ್ಯೆಯಲ್ಲಿ ಲಭ್ಯವಿರುವ ಉಚಿತ ಆನ್ಲೈನ್ ಕೋರ್ಸುಗಳ ಮೂಲಕ ನಮ್ಮ ಫೋಟೋಗ್ರಫಿ ಕೌಶಲಗಳನ್ನು ಸುಲಭವಾಗಿ ಬೆಳೆಸಿಕೊಳ್ಳಬಹುದು.

ವೆಬ್ ಡಿಸೈನಿಂಗ್: ತಾಂತ್ರಿಕ ಪದವಿಗಳ ವ್ಯಾಸಂಗ ಮಾಡದೆಯೂ ಜಾಲತಾಣಗಳನ್ನು ಹಾಗೂ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವುದು ಈಗಿನ ಪ್ರವೃತ್ತಿಗಳಲ್ಲೊಂದು. ಅನೇಕ ಯುವಕರು ಇದನ್ನೊಂದು ಹವ್ಯಾಸವನ್ನಾಗಿ ಬೆಳೆಸಿಕೊಂಡು ದೊಡ್ಡ ಯಶಸ್ಸು ಸಾಧಿಸಿರುವುದುಂಟು. ಇಂಟ್ರೊಡಕ್ಷನ್ ಟು ವೆಬ್ ಡೆವಲಪ್ಮೆಂಟ್, ಯುಎಕ್ಸ್ ಡಿಸೈನ್ ಫಾರ್ ಮೊಬೈಲ್ ಡೆವಲಪರ್ಸ್, ಯೂಸರ್ ಇಂಟರ್‌ಫೇಸ್ ಡಿಸೈನ್. ಯೂಸರ್ ಎಕ್ಸ್ಪೀರಿಯನ್ಸ್ ಡಿಸೈನ್- ಈ ವರ್ಗಕ್ಕೆ ಸಂಬಂಧಿಸಿದ ಕೆಲವು ಕೋರ್ಸುಗಳು.

ಎಲ್ಲಿ ದೊರೆಯುತ್ತವೆ?

ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನಾ (PMKVY), ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮ (NSDC), ಸ್ವಯಂ (SWAYAM) ಮುಂತಾದ ಸರ್ಕಾರಿ ಸಂಸ್ಥೆಗಳಲ್ಲದೆ ನಾಸ್‌ಕಾಮ್, ಇನ್ಫೋಸಿಸ್‌ನಂತಹ ಸರ್ಕಾರೇತರ ಸಂಸ್ಥೆಗಳು ನೂರಾರು ಉಚಿತ ಹಾಗೂ ಪಾವತಿ ಕೋರ್ಸುಗಳನ್ನು ಒದಗಿಸುತ್ತಿವೆ. ಪ್ರಮಾಣಪತ್ರವನ್ನೂ ನೀಡುತ್ತವೆ. ಕೆಲವು ಉಪಯುಕ್ತ ಲಿಂಕ್‌ಗಳು ಇಲ್ಲಿವೆ:

https://infyspringboard.onwingspan.com/

http://www.pmkvyofficial.org/

https://futureskillsprime.in/

https://swayam.gov.in/

https://www.careers360.com/

2020ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪದವಿ ಹಾಗೂ ಉದ್ಯೋಗಗಳ ನಡುವಿನ ಅಂತರವನ್ನು ಮೌಲ್ಯ ಹಾಗೂ ಕೌಶಲ್ಯಗಳ ಚೌಕಟ್ಟಿನಲ್ಲಿ ನಿವಾರಿಸಿಕೊಳ್ಳುವ ದೊಡ್ಡ ಕನಸು ಇಟ್ಟುಕೊಂಡಿದೆ. ಇದರ ಸಮರ್ಥ ಅನುಷ್ಠಾನ ವಿದ್ಯಾರ್ಥಿಗಳ ಉತ್ಸಾಹ ಹಾಗೂ ಅಧ್ಯಾಪಕರ ಬದ್ಧತೆಯ ಮೇಲೆ ನಿಂತಿದೆ. ಕೌಶಲಾಭಿವೃದ್ಧಿ ಕೋರ್ಸುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಇದಕ್ಕಿರುವ ಸರಳ ಮಾರ್ಗ.

- ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಫೆಬ್ರವರಿ 24, 2023

ಒತ್ತಡ ಒಳ್ಳೆಯದು!

18-24 ಫೆಬ್ರವರಿ 2023ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಕಾಲೇಜು ಕಾಲದ ಅಥವಾ ಬೇರೆ ಯಾವುದೋ ಪರೀಕ್ಷೆಯ ದಿನಗಳನ್ನೊಮ್ಮೆ ನೆನಪಿಸಿಕೊಳ್ಳಿ. ತಡರಾತ್ರಿಯವರೆಗೆ, ಕೆಲವೊಮ್ಮ ರಾತ್ರಿಯೆಲ್ಲ ಓದು, ನಿದ್ದೆಯ ಕೊರತೆ, ದೈಹಿಕ-ಮಾನಸಿಕ ನಿತ್ರಾಣ... ಅಬ್ಬಾ, ಈ ಪರೀಕ್ಷೆ ಒಮ್ಮೆ ಮುಗಿದರೆ ಸಾಕಪ್ಪಾ, ಆಮೇಲೆ ಮೂರು ಹಗಲು ಮೂರು ರಾತ್ರಿ ಉದ್ದಕ್ಕೆ ನಿದ್ದೆ ಮಾಡುವುದೇ ಎಂದೆಲ್ಲ ನೀವು ಕನಸು ಕಾಣುತ್ತಿದ್ದಿರಬಹುದು. ಸರಿ, ಪರೀಕ್ಷೆ ಮುಗಿಯಿತು, ಇನ್ನು ಆರಾಮ; ಎಷ್ಟು ಬೇಕಾದರೂ ನಿದ್ದೆ ಮಾಡಬಹುದು ಅಂತೇನಾದರೂ ಮಲಗಲು ಪ್ರಯತ್ನಪಟ್ಟಿರೋ, ನಿದ್ದೆ ಅಷ್ಟು ಸುಲಭಕ್ಕೆ ನಿಮ್ಮ ಬಳಿ ಸುಳಿಯದು. ಪರೀಕ್ಷೆಯ ಜೊತೆಗೆ ಅದೂ ಎಲ್ಲೋ ದೂರಕ್ಕೆ ಹಾರಿರುತ್ತದೆ. ಒಂದೆರಡು ದಿನ ನೀವೂ ಅಯೋಮಯರಾಗಿ ಮಂಕುಬಡಿದವರಂತೆ ಕುಳಿತಿರುತ್ತೀರಿ. ನಿದ್ರೆಯೂ ಬಾರದು, ಹೊಸದೇನನ್ನಾದರೂ ಮಾಡುವುದಕ್ಕೆ ಮನಸ್ಸೂ ಒಪ್ಪದು. ‘ನನ್ನ ತಲೆಯೇ ಓಡುತ್ತಿಲ್ಲ’ ಎಂದು ಸಹವರ್ತಿಗಳ ಜೊತೆ ನೀವು ಹೇಳಿದ್ದನ್ನು ಜ್ಞಾಪಿಸಿಕೊಳ್ಳಿ.

ಪರೀಕ್ಷೆಯ ದಿನಗಳೇ ಆಗಬೇಕಿಲ್ಲ. ಬೇರೆ ಯಾವುದೇ ಒತ್ತಡದ ಸಂದರ್ಭ ಆಗಿರಬಹುದು. ಒಂದಷ್ಟು ದಿನ ನಿಮಿಷವೂ ಬಿಡುವಿಲ್ಲದೆ ನಿರಂತರವಾಗಿ ಕೆಲಸಕಾರ್ಯಗಳಲ್ಲಿ ವ್ಯಸ್ತರಾಗಿದ್ದು, ಅದು ಮುಗಿದ ಮೇಲೆ ಕಾಡುವ ಖಾಲಿತನವನ್ನು ನೆನಪಿಸಿಕೊಳ್ಳಿ. ಅಲ್ಲಿಯೂ ಹೀಗೆಯೇ ಆಗುತ್ತದೆ. ಎಲ್ಲ ಕೆಲಸ ಮುಗಿಸಿ ಕೊಂಚ ಬಿಡುವಾದ ಮೇಲೆ ಯಾವುದೋ ಒಂದು ಹೊಸದನ್ನು ಕೈಗೆತ್ತಿಕೊಳ್ಳೋಣ ಎಂದುಕೊAಡಿದ್ದರೆ, ಅದಕ್ಕೊಂದು ಮುಹೂರ್ತವೇ ಒದಗುವುದಿಲ್ಲ. ಮನಸ್ಸು ಏಕಾಗ್ರತೆ ಇಲ್ಲದೆ ಅತ್ತಿಂದಿತ್ತ ಇತ್ತಿಂದತ್ತ ಎತ್ತೆತ್ತಲೋ ಅಡ್ಡಾಡಿಕೊಂಡಿರುತ್ತದೆ. ಅರೆ, ಹತ್ತುಹಲವು ಕೆಲಸಗಳಿದ್ದಾಗ ಇದೊಂದನ್ನು ಮಾಡಿಮುಗಿಸಲು ಅರ್ಧ ಗಂಟೆ ಸಾಕಾಗುತ್ತಿತ್ತು, ಈಗ ದಿನಗಟ್ಟಲೆ ತೆಗೆದುಕೊಂಡರೂ ಕೆಲಸ ಪೂರ್ತಿಯಾಗುತ್ತಿಲ್ಲ ಎಂದು ನಿಮ್ಮೊಳಗೆಯೇ ಅಚ್ಚರಿಪಟ್ಟುಕೊಂಡ ಉದಾಹರಣೆಗಳೂ ಇರಬಹುದು.

ಹೌದು, ಇದು ಮನುಷ್ಯನ ಮೂಲಸ್ವಭಾವ. ಯಾವುದೇ ಕೆಲಸವನ್ನು ಗುಣಮಟ್ಟದೊಂದಿಗೆ ನಿರ್ವಹಿಸಬೇಕಾದರೆ ಒಂದು ‘ಫೋಕಸ್’ ಬೇಕು. ಈ ಫೋಕಸ್ ಹುಟ್ಟಿಕೊಳ್ಳುವುದು ಒತ್ತಡದಲ್ಲಿ. ‘ಅನಿವಾರ್ಯವೇ ಅನ್ವೇಷಣೆಯ ತಾಯಿ’ ಎಂಬ ಮಾತೇ ಇದೆಯಲ್ಲ! ಇಲ್ಲಿ ಒಂದು ಕೆಲಸವನ್ನು ಮಾಡಿಮುಗಿಸಲೇಬೇಕಾದ ಅನಿವಾರ್ಯವೇ ಕೆಲಸದ ಹಿಂದಿನ ಪ್ರೇರಣಾಶಕ್ತಿ. ಆಗ ಫೋಕಸ್ ತಾನೇತಾನಾಗಿ ಸೃಷ್ಟಿಯಾಗಿರುತ್ತದೆ. ಅದು ಇದ್ದಾಗ ಮನಸ್ಸು ಅಸ್ಥಿರಗೊಳ್ಳುವುದಿಲ್ಲ; ಮರ್ಕಟನಂತೆ ಅಲ್ಲಿ ಇಲ್ಲಿ ಅಡ್ಡಾಡುವುದಕ್ಕೆ ಎಡೆಯೇ ಇರುವುದಿಲ್ಲ. ಅರ್ಧ ದಿನದಲ್ಲಿ ಮಾಡಿಮುಗಿಸಬಹುದಾದ ಕೆಲಸ ಅರ್ಧ ಗಂಟೆಯಲ್ಲೇ ಆಗುವುದೂ ಇದೆ. 

ಸೃಜನಶೀಲ ಕೆಲಸಗಳಿಗೂ ಅನೇಕ ಬಾರಿ ಇಂತಹ ಒತ್ತಡ ಬೇಕು. ಒಂದು ಲೇಖನ ಬರೆಯಬೇಕೆಂದುಕೊಂಡಿರುತ್ತೇವೆ. ಹಾಗಂದುಕೊಂಡೇ ದಿನಗಟ್ಟಲೆ ಸಮಯ ಕಳೆದಿರುತ್ತೇವೆ. ಬರೆವಣಿಗೆ ಒಂದಂಗುಲವೂ ಮುಂದೆ ಹೋಗಿರುವುದಿಲ್ಲ. ಯಾವುದೋ ಒಂದು ದಿನ ನಾಳೆ ಬೆಳಗ್ಗೆ ಆ ಲೇಖನ ಮುಗಿದಿರಲೇಬೇಕು ಎಂಬ ಅನಿವಾರ್ಯ ಹುಟ್ಟಿಕೊಳ್ಳುತ್ತದೆ ನೋಡಿ; ಅನುಮಾನವೇ ಬೇಡ, ಲೇಖನ ಸಿದ್ಧವಾಗುತ್ತದೆ. ಕೆಲಸ ಆಗಲೇಬೇಕು ಎಂಬ ಒಳಗಿನ ಒತ್ತಡ ಕೆಲಸವನ್ನು ಆಗುಮಾಡುತ್ತದೆ. ತರ್ಕಗಳು, ಯೋಚನೆಗಳು, ಅಗತ್ಯ ನಿದರ್ಶನಗಳು ತಾವಾಗಿಯೇ ಹುಟ್ಟಿಕೊಂಡು ಮನಸ್ಸಿನ ಎದುರು ಬಂದು ಕುಣಿಯುತ್ತವೆ. ಕೈ ಬರೆಯುತ್ತಾ ಸಾಗುತ್ತದೆ. 

ಇದರರ್ಥ ಮನುಷ್ಯ ಸದಾ ಒತ್ತಡಗಳ ಮಧ್ಯೆ ಬದುಕಬೇಕು ಎಂದಲ್ಲ. ವ್ಯಕ್ತಿಗೆ ಬಿಡುವು, ವಿಶ್ರಾಂತಿ ಬಹಳ ಮುಖ್ಯ. ಅವುಗಳ ಕೊರತೆಯಿಂದ ಆರೋಗ್ಯವೇ ಹಾಳಾಗುತ್ತದೆ. ಆರೋಗ್ಯ ಕೈಕೊಟ್ಟರೆ ಉತ್ಸಾಹವೇ ಕುಂದಿಬಿಡುತ್ತದೆ. ಯಾವ ಹೊಸ ಕೆಲಸವೂ ಆಗುವುದಿಲ್ಲ. ದೈಹಿಕ, ಮಾನಸಿಕ ಆರೋಗ್ಯ ಎಲ್ಲದಕ್ಕಿಂತಲೂ ಮುಖ್ಯ. ಅದು ಇದ್ದಾಗ ಮಾತ್ರ ಎಂತಹ ಒತ್ತಡಗಳನ್ನೂ ನಿಭಾಯಿಸಬಹುದು. ಮನಸ್ಸನ್ನು ಜಡವಾಗಿರಲು ಬಿಡಬಾರದು ಎಂಬುದಷ್ಟೇ ಇಲ್ಲಿ ಒತ್ತಡ, ಗಮನ ಇತ್ಯಾದಿ ಪದಗಳನ್ನು ಬಳಸಿರುವ ಉದ್ದೇಶ.

An idle mind is a devils' workshop ಎಂಬ ನಾಣ್ಣುಡಿಯೇ ಇದೆ. ಸೋಮಾರಿ ಮನಸ್ಸು ದೆವ್ವಗಳ ಕಮ್ಮಟವಂತೆ! ಯಾವುದನ್ನೇ ಖಾಲಿಬಿಟ್ಟರೂ ಅದನ್ನು ಇನ್ನೊಬ್ಬರು ಆಕ್ರಮಿಸಿಕೊಳ್ಳುವ ಕಾಲ ಇದು. ಇನ್ನು ಮನಸ್ಸನ್ನು ಖಾಲಿ ಬಿಟ್ಟರೆ ಆಗುತ್ತದೆಯೇ? ಇಲ್ಲಸಲ್ಲದ ಯೋಚನೆಗಳು, ಅನಗತ್ಯ ವಿಚಾರಗಳು ಅಲ್ಲಿ ಬಂದು ತುಂಬಿಕೊಳ್ಳುತ್ತವೆ. ಅವುಗಳಿಗಿಂತ ದೊಡ್ಡ ದೆವ್ವಗಳಿಲ್ಲ. ನಮ್ಮ ಮನಸ್ಸನ್ನು, ಕೆಲಸಗಳನ್ನು ಕೆಡಿಸಲು ಬೇರೆಯಾರೂ ಬರಬೇಕಿಲ್ಲ. ಅದಕ್ಕೆ ನಾವೇ ಸಾಕು. ಮನಸ್ಸು ಸದಾ ಯಾವುದೋ ಕಾರ್ಯದ ಕಡೆ ವ್ಯಸ್ತವಾಗಿದ್ದರೆ ಅಲ್ಲಿ ಬೇರೆ ಇನ್ನೇನೋ ಬಂದು ಠಿಕಾಣಿ ಹೂಡುವುದಕ್ಕೆ ಅವಕಾಶವೇ ಇರುವುದಿಲ್ಲ. ನಿಮ್ಮ ಅನುಮತಿಯಿಲ್ಲದೆ ಅದು ಹೇಗೆ ಅನಗತ್ಯ ಕಿರಿಕಿರಿಗಳು ನಿಮ್ಮ ಮನಸ್ಸಿನ ಮನೆಯೊಳಗೆ ಬಂದು ಬಾಡಿಗೆ ಹಿಡಿಯುತ್ತವೆ ಹೇಳಿ?

ಬ್ಯುಸಿ ಆಗಿರುವುದರಿಂದ ಇನ್ನೊಂದು ಪ್ರಯೋಜನವೂ ಇದೆ. ‘ಬ್ಯುಸಿ ಆಗಿರುವುದು ಒಳ್ಳೆಯದು. ಏಕೆಂದರೆ ಅಂತಹ ಸಮಯದಲ್ಲಿ ಬೇರೆಯವರನ್ನು ಟೀಕಿಸುವುದಕ್ಕೆ ಸಮಯ ಇರುವುದಿಲ್ಲ’ ಎನ್ನುತ್ತಾನೆ ಒಬ್ಬ ಲೇಖಕ. ಇದಂತೂ ಒಂದು ಅದ್ಭುತ ಮಾತು. ಬಹಳ ಮಂದಿ ಇನ್ನೊಬ್ಬರ ತಪ್ಪುಗಳನ್ನು ಹುಡುಕುವುದರಲ್ಲಿ, ಅವರನ್ನು ಹಳಿಯುವಲ್ಲೇ ತಮ್ಮ ಆಯುಷ್ಯವನ್ನು ಕಳೆದುಬಿಡುತ್ತಾರೆ. ಬೇರೆಯವರನ್ನು ಸದಾ ವಿಮರ್ಶೆಯ ತಕ್ಕಡಿಯಲ್ಲಿ ತೂಗುವ ಇವರಿಗೆ ತಮ್ಮ ತಪ್ಪುಗಳು ಕಾಣಿಸುವುದೇ ಇಲ್ಲ, ಅಥವಾ ಕಂಡರೂ ಕಾಣದಂತೆ ಇರುತ್ತಾರೆ. ಯಾವಾಗಲೂ ಇನ್ನೊಬ್ಬರನ್ನು ದೂರುತ್ತಾ ಕೂರುವವರಿಗೆ ತಮ್ಮ ಉದ್ಧಾರದ ದಾರಿ ಕಾಣಿಸುವುದೇ ಇಲ್ಲ. ಅವರು ಸರಿ ಇಲ್ಲ, ಇವರು ಸರಿ ಇಲ್ಲ ಎನ್ನುತ್ತಲೇ ಇಂಥವರು ಮನಸ್ಸನ್ನು ಸದಾ ವಿಷದ ಕುಲುಮೆ ಮಾಡಿಕೊಂಡು ಅಸಂತುಷ್ಟಿಯಲ್ಲಿ ಒದ್ದಾಡುತ್ತಿರುತ್ತಾರೆ. ‘ಉದ್ಧರೇದಾತ್ಮನಾತ್ಮಾನಾಂ’ ಎಂದು ಗೀತಾಚಾರ್ಯನೇ ಹೇಳಿಲ್ಲವೇ? ಆತನ ಮಾತನ್ನು ನಾವು ಪ್ರಮಾಣವನ್ನಾಗಿ ಇಟ್ಟುಕೊಳ್ಳಬಹುದು. ನಮ್ಮ ಉದ್ಧಾರವನ್ನು ಮಾಡಲು ಇನ್ನೊಬ್ಬ ಬರುವುದಿಲ್ಲ, ಅದನ್ನು ನಾವೇ ಮಾಡಿಕೊಳ್ಳಬೇಕು. ಅದಾಗಬೇಕೆಂದರೆ ಮನಸ್ಸು ಭೂತಬಂಗಲೆಯಾಗದಂತೆ ಎಚ್ಚರವಹಿಸಬೇಕು. ‘ಏನಾದರೊಂದು ಕೆಲಸದಲ್ಲಿ ಸದಾ ನಿರತವಾಗಿರಿ, ಕಾರ್ಯನಿರತ ವ್ಯಕ್ತಿಗೆ ಅಸಂತೋಷದಿಂದಿರಲು ಸಮಯವೇ ಸಿಗುವುದಿಲ್ಲ’ ಎಂದಿದ್ದ ಪ್ರಸಿದ್ಧ ಕವಿ ಆರ್. ಎಲ್. ಸ್ಟೀವನ್‌ಸನ್. 

ಸದಾ ಬ್ಯುಸಿ ಆಗಿರುವುದು, ಒತ್ತಡಗಳ ಮಧ್ಯೆ ಬದುಕವುದು ಸರಿ; ಆದರೆ ಅದು ಎಂತಹ ಒತ್ತಡ ಎಂಬುದರ ಕುರಿತೂ ನಮಗೆ ಸ್ಪಷ್ಟತೆ ಬೇಕು. ಇಲ್ಲಿ ಬ್ಯುಸಿ ಆಗಿರುವುದು ಎಂದರೆ ನಮ್ಮಿಂದಾಗದ ಕೆಲಸಗಳನ್ನು ತಲೆಯ ಮೇಲೆ ಎಳೆದುಕೊಳ್ಳುವುದು ಎಂದಲ್ಲ, ನಮಗೆ ಒಗ್ಗುವ ಕೆಲಸಗಳಲ್ಲಿ ಸದಾ ನಿರತವಾಗಿರುವುದು ಎಂದರ್ಥ. ನಮಗೆ ಇಷ್ಟವಾದ ಕೆಲಸಗಳು ಎಷ್ಟಿದ್ದರೂ ಅದು ಒತ್ತಡ ಎನಿಸುವುದೇ ಇಲ್ಲ. ‘ಜಗತ್ತಿನಲ್ಲಿ ಅತ್ಯಂತ ಪ್ರಬಲವಾದ ಒತ್ತಡವೆಂದರೆ ಸ್ನೇಹಮಯ ಒತ್ತಡ’ ಎಂಬ ಮಾತೊಂದಿದೆ. ನಮ್ಮ ಹೊಣೆಗಾರಿಕೆಗಳನ್ನು ಸ್ನೇಹಮಯ ಒತ್ತಡಗಳನ್ನಾಗಿ ಮಾಡಿಕೊಳ್ಳುವುದು ನಮ್ಮ ಮನಸ್ಥಿತಿಯಲ್ಲಿ ಇದೆ. 

ಕೆಲಸಗಳ ಅಡಾವುಡಿಯಲ್ಲಿ, ಈಗಿಂದೀಗಲೇ ಆಗಬೇಕು ಎಂಬ ಒತ್ತಡದಲ್ಲಿ ಕವಿತೆಯೊಂದು ಹುಟ್ಟಿಕೊಳ್ಳುವುದು ಸಾಧ್ಯವೇ ಎಂದು ನೀವು ಕೇಳಬಹುದು. ಆ ಪ್ರಶ್ನೆ ಸರಿಯಾದದ್ದೇ ಆಗಿದೆ. ಸೃಜನಶೀಲ ಕೃತಿಯೊಂದು ಹುಟ್ಟಿಕೊಳ್ಳುವುದರ ಹಿಂದೆ ತಣ್ಣನೆಯ ಧ್ಯಾನವೊಂದು ಅಗತ್ಯ. ಸದಾ ಧಾವಂತದಲ್ಲಿ ಓಡಾಡುವ ಮಂದಿಗೆ ಇಂತಹ ಧ್ಯಾನಕ್ಕೆ ಸಮಯ ದೊರೆಯುವುದಿಲ್ಲ. ಧಾವಂತಗಳ ಮಧ್ಯೆ ನಮ್ಮನ್ನು ನಾವು ಕಳೆದುಕೊಳ್ಳುವ ಪರಿಸ್ಥಿತಿ ಬರಬಾರದು. ಎಲ್ಲ ಒತ್ತಡಗಳ ನಡುವೆಯೂ ನಮ್ಮದೇ ಆದ ಒಂದು ಪುಟ್ಟ ಏಕಾಂತ ಬೇಕು. ದಿನಚರಿಯನ್ನು ಸರಿಯಾಗಿ ನಿಭಾಯಿಸಿಕೊಳ್ಳಲು ಕಲಿತರೆ ಎಲ್ಲ ಒತ್ತಡಗಳ ಮಧ್ಯೆ ನಮ್ಮದೇ ಆದ ಸಮಯವೂ ಸಿಗುತ್ತದೆ. ‘ಬ್ಯುಸಿ ಆಗಿದ್ದರಷ್ಟೇ ಸಾಲದು; ಇರುವೆಗಳೂ ಬ್ಯುಸಿ ಆಗಿರುತ್ತವೆ. ನಾವು ಯಾವುದರಲ್ಲಿ ಬ್ಯುಸಿ ಆಗಿರುತ್ತೇವೆ ಎಂಬುದು ಮುಖ್ಯವಾದ ಪ್ರಶ್ನೆ’ ಎನ್ನುತ್ತಾನೆ ಒಬ್ಬ ಕವಿ. ಯಾವುದರಲ್ಲಿ ಬ್ಯುಸಿ ಆಗಿರಬೇಕು, ಅದರೊಳಗೆ ಎಷ್ಟು ಸಮಯವನ್ನು ಏಕಾಂತಕ್ಕಾಗಿ ಇಟ್ಟುಕೊಳ್ಳಬೇಕು ಎಂದು ಅರ್ಥಮಾಡಿಕೊಂಡವರನ್ನು ಯಶಸ್ಸು ಹುಡುಕಿಕೊಂಡು ಬರುತ್ತದೆ.

- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಜನವರಿ 21, 2023

ಹೇಳದೆ ನೆಪ, ಮಾಡೋಣ ಶಿಸ್ತಿನ ಜಪ

(24-30 ಡಿಸೆಂಬರ್ 2022ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ)

ಇವತ್ತು ಟ್ರೇನು ಹಿಡಿಯಲೇಬೇಕೆಂದು ಹೊರಟಿದ್ದೆ, ಒಂದೇ ನಿಮಿಷದಲ್ಲಿ ಮಿಸ್ ಆಯ್ತು. ಇವತ್ತು ಬಸ್ಸು ತಪ್ಪಿಸಿಕೊಳ್ಳಲೇಬಾರದು
ಅಂದುಕೊಂಡಿದ್ದೆ; ಕಣ್ಣೆದುರೇ ಹೊರಟುಹೋಯ್ತು... ಇಂತಹ ಮಾತುಗಳನ್ನು ಪ್ರತಿದಿನ ಅವರಿವರಿಂದ ಕೇಳಿಸಿಕೊಳ್ಳುತ್ತಲೇ ಇರುತ್ತೇವೆ. ಪ್ರತಿದಿನ ಯಾಕೆ ಕೇಳುತ್ತೇವೆ ಎಂದರೆ ಈ ಬಗೆಯ ಮಂದಿ ಎಲ್ಲ ಕಡೆ ಇರುತ್ತಾರೆ ಅಥವಾ ಇವರು ಪ್ರತಿದಿನವೂ ಟ್ರೇನು-ಬಸ್ಸುಗಳನ್ನು ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ. ಕೊನೆಗೆ ಇವರು ‘ನನ್ನ ಹಣೆಬರಹವೇ ಸರಿ ಇಲ್ಲ’ ಎಂದೋ, ಇನ್ನೊಬ್ಬರಿಂದಾಗಿ ಹೀಗಾಯ್ತು ಎಂದೋ ಷರಾ ಬರೆದುಕೊಳ್ಳುತ್ತಾ ಹೋಗುತ್ತಾರೆ. ಆದರೆ ಸಮಸ್ಯೆ ಸರಿಹೋಗುವುದಿಲ್ಲ. ಸಾಮಾನ್ಯ ಟ್ರೇನು-ಬಸ್ಸುಗಳು ತಪ್ಪಿಹೋದರೆ ಚಿಂತೆಯಿಲ್ಲ, ನಿಜಜೀವನದ ಬಂಡಿಗಳನ್ನು ತಪ್ಪಿಸಿಕೊಂಡರೆ ಮುಂದೆ ದೊಡ್ಡ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಇವರು ಟ್ರೇನು-ಬಸ್ಸುಗಳ ವಿಷಯದಲ್ಲಿ ಮಾತ್ರವಲ್ಲ, ಬಹುತೇಕ ಎಲ್ಲ ವಿಷಯಗಳಲ್ಲೂ ಗೊಂದಲ-ಗೋಜಲು ಮಾಡಿಕೊಳ್ಳುತ್ತಾರೆ. ಯಾವುದೋ ದಿನದ ಒಳಗೆ ನಿರ್ದಿಷ್ಟ ಉದ್ದೇಶಕ್ಕೆ ಅರ್ಜಿ ಸಲ್ಲಿಸಬೇಕಿರುತ್ತದೆ; ಕೊನೆಯ ದಿನಾಂಕ ಮುಗಿದ ಮರುದಿನ ಅದು ನೆನಪಾಗಿ ತಲೆತಲೆ ಚಚ್ಚಿಕೊಳ್ಳುತ್ತಾರೆ. ಇವತ್ತು ಐದು ಕೆಲಸ ಮಾಡಿ ಮುಗಿಸಲೇಬೇಕು ಎಂದು ಮನೆಯಿಂದ ಹೊರಟಿರುತ್ತಾರೆ. ಸಂಜೆಯ ವೇಳೆಗೆ ಅವುಗಳಲ್ಲಿ ಒಂದೆರಡನ್ನೂ ಮಾಡಲಾಗದೆ ಆತಂಕ ಹೆಚ್ಚಿಸಿಕೊಳ್ಳುತ್ತಾರೆ. ಯಾಕೆ ಹೀಗಾಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅರ್ಥವಾಗುವುದೇನೆಂದರೆ ಇವರು ‘ಫೋಕಸ್’ ಕಳೆದುಕೊಂಡಿರುತ್ತಾರೆ, ಅಥವಾ ಎಂದೂ ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡುವ ಬಗ್ಗೆ ತಲೆಕೆಡಿಸಿಕೊಂಡಿರುವುದಿಲ್ಲ. ಸರಳವಾಗಿ ಹೇಳಬೇಕೆಂದರೆ ಜೀವನಶಿಸ್ತು ಕುರಿತು ಇವರಿಗೆ ಆಸಕ್ತಿ ಕಡಿಮೆ.

‘ಅಶಿಸ್ತಿನಿಂದ ಬದುಕಿರಿ! ಆರಾಮವಾಗಿರಿ!’ ಎಂದು ಹೇಳುವ ಕೆಲವು ಮಂದಿ ಸಿಗುತ್ತಾರೆ. ಆದರೆ ಈ ಅಶಿಸ್ತಿನ ಸೂತ್ರ ಕೆಲವರಿಗಷ್ಟೇ ಸಂತೋಷ-ಸಮಾಧಾನ ತಂದುಕೊಡಬಹುದು. ಬೇರೆಯವರಿಗೆ ಮಾದರಿಯಾಗುವಂತೆ, ಪ್ರೇರಣೆಯಾಗುವಂತೆ ಬದುಕುವುದು ಕಷ್ಟ. ಜೀವನದಲ್ಲಿ ಎಲ್ಲವನ್ನೂ ನಿರೀಕ್ಷಿಸಿದಂತೆ, ನಿರ್ದಿಷ್ಟ ಯೋಜನೆಯಂತೆ ಮಾಡಿಕೊಂಡು ಹೋಗುವುದು ಅಸಾಧ್ಯ ಎಂಬುದೇನೋ ನಿಜ. ಆದರೆ ಎಲ್ಲರೂ ಅಶಿಸ್ತಿನಿಂದ ಬದುಕುತ್ತೇವೆ, ಆರಾಮವಾಗಿರುತ್ತೇವೆ ಎಂದುಕೊಂಡರೆ ಬದುಕೇ ಗೊಂದಲದ ಗೂಡಾಗಬಹುದು.

ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಪಾತ್ರದ ಚೌಕಟ್ಟಿನಲ್ಲೇ ಜೀವಿಸುತ್ತ ಇರುತ್ತಾನೆ. ವಿದ್ಯಾರ್ಥಿ, ಉದ್ಯೋಗಿ, ಮಾಲೀಕ, ತಂದೆ, ತಾಯಿ, ಪತಿ, ಪತ್ನಿ, ಗೃಹಿಣಿ... ಯಾವುದೋ ಒಂದು ಹೊಣೆಗಾರಿಕೆ ಹೆಗಲ ಮೇಲೆ ಸದಾ ಇರುತ್ತದೆ. ಅನೇಕ ಬಾರಿ ಒಬ್ಬ ವ್ಯಕ್ತಿ ಅನೇಕ ಚೌಕಟ್ಟುಗಳೊಳಗೆ ಏಕಕಾಲಕ್ಕೆ ಪಾತ್ರನಿರ್ವಹಿಸುತ್ತಾ ಇರುತ್ತಾನೆ. ಪ್ರತಿ ಚೌಕಟ್ಟೂ ಮಹತ್ವದ್ದೇ. ಅಲ್ಲಿ ನಿರ್ದಿಷ್ಟ ಯೋಚನೆ-ಯೋಜನೆಗಳು ಇಲ್ಲದೇ ಹೋದಾಗ ಬದುದು ಪ್ರತಿದಿನವೂ ಆತಂಕಕಾರಿ ಎನಿಸತೊಡಗುತ್ತದೆ.

ಟ್ರೇನು ತಪ್ಪಿಸಿಕೊಳ್ಳುವವನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಆ ಟ್ರೇನಿಗೆ ಆತ ಮೊದಲ ಬಾರಿ ಹೋಗುವವನೇನಲ್ಲ. ಪ್ರತಿದಿನದ ಪ್ರಯಾಣಿಕನೇ. ಅದು ಇಂತಹ ಸಮಯಕ್ಕೆ ಬರುತ್ತದೆ ಎಂಬ ತಿಳುವಳಿಕೆ ಸಹಜವಾಗಿಯೇ ಇರುತ್ತದೆ. ಆದರೂ ಯಾಕೆ ಪದೇಪದೇ ತಪ್ಪಿಸಿಕೊಳ್ಳುತ್ತಾನೆ? ಎಲ್ಲೋ ಒಂದು ಕಡೆ ಆತ ಸಮಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿಕೊಳ್ಳುವಲ್ಲಿ, ಮುಂದಾಲೋಚನೆ ಮಾಡುವಲ್ಲಿ ಸೋತಿದ್ದಾನೆ ಎಂದು ಅರ್ಥ. ಅನಿರೀಕ್ಷಿತವಾಗಿ ಬರುವ ಕೆಲವು ಅಡೆತಡೆಗಳು ಎಲ್ಲ ಕಡೆ ಇರುತ್ತವೆ, ಅವುಗಳಿಂದ ತೊಂದರೆಗೊಳಗಾಗುವುದನ್ನು ತಪ್ಪಿಸಿಕೊಳ್ಳಲಾಗದು. ಆದರೆ ಅನಿರೀಕ್ಷಿತವೇ ಒಂದು ದಿನಚರಿ ಆಗಬಾರದು. 

ಕೆಲವರಿಗೆ ಜೀವನಶಿಸ್ತು ಸಹಜವಾಗಿಯೇ ಬಂದಿರುತ್ತದೆ. ಅವರ ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟುತನ ಎದ್ದುಕಾಣುತ್ತದೆ. ಅವರು ಏನೇ ಮಾಡಿದರೂ ಚಂದ. ‘ಅಯ್ಯೋ ಯಾವುದಕ್ಕೂ ಟೈಮೇ ಸಿಗುತ್ತಿಲ್ಲ’ ಎಂಬ ದೂರು ಅವರಲ್ಲಿ ಕಡಿಮೆ. ಇರುವ ಸಮಯವನ್ನು ಅವರು ಅತ್ಯುತ್ತಮವಾಗಿ ಬಳಸಿಕೊಳ್ಳಬಲ್ಲರು. ಇನ್ನು ಕೆಲವರು ಯಾವುದನ್ನೂ ಸರಿಯಾಗಿ ಮಾಡುವುದಿಲ್ಲ. ಎಲ್ಲವೂ ಅರ್ಧಂಬರ್ಧ. ದಿನಕ್ಕೆ ನಲ್ವತ್ತೆಂಟು ಗಂಟೆ ಕೊಟ್ಟರೂ ಅವರು ಅದನ್ನು ಯಶಸ್ವಿಯಾಗಿ ಹಾಳುಗೆಡಹಬಲ್ಲರು. ಇವರಿಗೆ ಪ್ರತಿಯೊಂದಕ್ಕೂ ಏನಾದರೊಂದು ನೆಪ ಇದ್ದೇ ಇರುತ್ತದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಿಡಬೇಕೆಂದು ಅಂದುಕೊಳ್ಳುತ್ತೇನೆ, ಆದರೆ ನಮ್ಮ ಮನೆ ತುಂಬ ಸಣ್ಣದು. ಯಾವುದಕ್ಕೂ ಜಾಗ ಇಲ್ಲ ಎನ್ನುತ್ತಾರೆ. ತಮಾಷೆಯೆಂದರೆ ದೊಡ್ಡ ಮನೆ ಕೊಟ್ಟರೂ ಇವರು ಹೀಗೆಯೇ ಇರುತ್ತಾರೆ. ಏಕೆಂದರೆ ಅಶಿಸ್ತನ್ನು ಇವರು ಹುಟ್ಟುತ್ತಲೇ ಆವಾಹಿಸಿಕೊಂಡಿರುತ್ತಾರೆ. ಇವರು ಯಾವುದನ್ನೂ ಎತ್ತಿದಲ್ಲೇ ಮತ್ತೆ ಇಡಲಾರರು. ಇರುವ ಜಾಗವನ್ನು ಸದುಪಯೋಗಪಡಿಸಿಕೊಳ್ಳಲಾರರು. 

ಬಾಚಣಿಗೆ, ಪೌಡರು, ಕ್ಲಿಪ್ಪು, ಮತ್ತೊಂದು- ಇಂಥವನ್ನೆಲ್ಲ ಇಡಲು ಗೊತ್ತುಪಡಿಸಿದ ಒಂದು ನಿರ್ದಿಷ್ಟ ಜಾಗ ಇದ್ದರೂ ಅವನ್ನು ಅಲ್ಲೇ ಇಡಲಾರರು. ತಾವೆಲ್ಲಿಗೆ ಎತ್ತಿಕೊಂಡು ಹೋಗಿರುತ್ತಾರೋ ಅಲ್ಲೇ ಬಿಟ್ಟು ಮುಂದಿನ ಕೆಲಸಕ್ಕೆ ಹೋದಾರು. ಮುಂದಿನ ಸಲ ಆ ಜಾಗ ಮರೆತುಹೋಗಿರುತ್ತದೆ. ಅವುಗಳನ್ನು ಮನೆಯೆಲ್ಲ ಹುಡುಕಿ ಇರುವ ಸಮಯವನ್ನು ಕಳೆದುಕೊಂಡಾರು. ನೈಲ್ ಕಟ್ಟರ್ ಬಳಸಿ ಮತ್ತೆ ಅಲ್ಲೇ ತಂದು ಇಡಲಾರರು. ಮತ್ತೊಮ್ಮೆ ನೈಲ್ ಕಟ್ಟರ್ ಬಳಸುವ ಸಂದರ್ಭ ಬಂದಾಗ ಮತ್ತೆ ಮನೆಯೆಲ್ಲ ಹುಡುಕಾಟ. ತಮ್ಮ ಸ್ನಾನದ ಟವೆಲನ್ನು ಒಂದೇ ಕಡೆ ಒಣಹಾಕುವ ಅಭ್ಯಾಸ ಬೆಳೆಸಿಕೊಳ್ಳಲಾರರು. ಸ್ನಾನದ ಹೊತ್ತಿಗೆ ಗಡಿಬಿಡಿ ಮಾಡಿಕೊಂಡು ಅದೆಲ್ಲೆಂದು ಸಿಗದೆ ಹೊಸದೊಂದು ಟವೆಲ್ ಎಳೆದುಕೊಂಡಾರು. ತಾವು ಪ್ರತಿದಿನ ಬಳಸುವ ಪೆನ್ನು-ಪುಸ್ತಕ-ವಾಚು-ಬ್ಯಾಗುಗಳನ್ನೇ ಒಂದು ನಿರ್ದಿಷ್ಟ ಕಡೆ ಇರಿಸಿಕೊಳ್ಳಲಾರರು. ಆಮೇಲೆ ಅವುಗಳನ್ನೇ ಹುಡುಕುತ್ತಾ ಅರ್ಧರ್ಧ ಗಂಟೆ ಕಳೆದುಕೊಂಡಾರು, ಬರಿದೇ ಆತಂಕ ಹೆಚ್ಚಿಸಿಕೊಂಡಾರು.

ಇವೆಲ್ಲ ಸಣ್ಣಪುಟ್ಟ ಸಂಗತಿಗಳು ಎನಿಸಬಹುದು. ಆದರೆ ದಿನನಿತ್ಯದ ಬದುಕನ್ನು ಕಟ್ಟಿಕೊಡುವ ಸಣ್ಣ ತುಣುಕುಗಳು ಇವೇ. ಸ್ವಭಾವತಃ ಈ ಶಿಸ್ತು ಬಂದಿಲ್ಲ ಎಂದಿಟ್ಟುಕೊಳ್ಳಿ; ಕೆಲವನ್ನಾದರೂ ಪ್ರಜ್ಞಾಪೂರ್ವಕ ರೂಢಿಸಿಕೊಳ್ಳಬಹುದು. ಹುಟ್ಟುಗುಣ ಸುಟ್ಟರೂ ಹೋಗದು ಎಂಬ ಮಾತಿದೆ. ಆದರೆ ನಮ್ಮದೇ ಬದುಕಿನ ನಿರಾಳತೆಗಾಗಿ, ನೆಮ್ಮದಿಗಾಗಿ ಕೆಲವು ವಿಷಯಗಳನ್ನು ಪ್ರಜ್ಞಾಪೂರ್ವಕವಾಗಿಯೇ ಅಳವಡಿಸಿಕೊಳ್ಳುವುದು ಅನಿವಾರ್ಯ.

ದಿನಚರಿಯಲ್ಲಿ ಒಂದು ಸರಳ ವೇಳಾಪಟ್ಟಿಯನ್ನು ಅಳವಡಿಸಿಕೊಳ್ಳುವುದರಿಂದ ಬಹುತೇಕ ಅಶಿಸ್ತನ್ನು ಮತ್ತು ಅದರಿಂದುAಟಾಗುವ ಗೊಂದಲಗಳನ್ನು ತಡೆಯಬಹುದು. ಇದು ಶಾಲೆಯ ಟೈಂಟೇಬಲ್ ರೀತಿಯಲ್ಲಿ ಇರಬೇಕಾಗಿಲ್ಲ. ದಿನನಿತ್ಯದ ಅನೇಕ ಕೆಲಸಗಳನ್ನು ನಿಮಿಷ, ಸೆಕೆಂಡುಗಳ ಲೆಕ್ಕ ಇಟ್ಟುಕೊಂಡು ಮಾಡಲಾಗುವುದಿಲ್ಲ. ಆದರೆ ಅಂತಹದೊಂದು ವೇಳಾಪಟ್ಟಿಯ ಚೌಕಟ್ಟು ಇಲ್ಲದೆ ಹೋದಾಗ ಆಯಾ ದಿನದ ಉದ್ದೇಶ-ಗುರಿಗಳೆಲ್ಲ ಗೊಂದಲಗಳಾಗಿ ಮಾರ್ಪಟ್ಟು ಆತ್ಮವಿಶ್ವಾಸವನ್ನೇ ಕಳೆದುಕೊಂಡುಬಿಡುತ್ತೇವೆ. ಅದೇ ನಾವೆಂದುಕೊAಡAತೆ ಕೆಲಸಗಳು ನಡೆದಾಗ ಒಂದು ಸಂತೃಪ್ತಿಯ ನಿದ್ದೆಗೆ ಜಾರುತ್ತೇವೆ. ಮನುಷ್ಯನಿಗೆ ಆತ್ಯಂತಿಕವಾಗಿ ಬೇಕಾದುದು ಒಂದು ಸಮಾಧಾನದ ನಿದ್ದೆಯೇ ಹೊರತು ಇನ್ನೇನು!

ಬೆಳಗ್ಗೆ ಬೇಗನೆ ಏಳುವ ಅಭ್ಯಾಸದಿಂದ ಸಾಕಷ್ಟು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆರೂವರೆಗೋ ಏಳೂವರೆಗೋ ಏಳುವವರಿದ್ದರೆ ಐದುಗಂಟೆಗೆ ಎದ್ದುನೋಡಿ, ನಿಮ್ಮ ದಿನಚರಿಯೇ ಬದಲಾಗಿ ಹೋಗುತ್ತದೆ. ಸಾಮಾನ್ಯ ದಿನಗಳಿಗಿಂತ ಒಂದೆರಡು ಗಂಟೆ ಹೆಚ್ಚು ಸಮಯ ನಿಮ್ಮದಾಗುತ್ತದೆ. ನಾನು ರಾತ್ರಿ ತಡವಾಗಿ ಮಲಗುವವನು, ಆದ್ದರಿಂದ ಬೆಳಗ್ಗೆ ತಡವಾಗಿ ಏಳುವವನು- ಹೀಗೆ ಸಮಜಾಯುಷಿ ಕೊಡುವುದುಂಟು. ಕೆಲವರಿಗೆ ಒಂದೊAದು ಬಗೆಯ ದಿನಚರಿ ಒಗ್ಗುವುದುಂಟು; ಕೆಲವರ ಕೆಲಸದ ಸ್ವರೂಪ ಹೆಚ್ಚಿನ ಸಮಯ ಬೇಡುವುದೂ ಉಂಟು. ಆದರೂ ಮುಂಜಾನೆಯ ಸದುಪಯೋಗದ ಮೌಲ್ಯ ಒಂದು ಬೇರೆಯದೇ ಮಟ್ಟದ್ದು. ಮುಂಜಾನೆ ಎದ್ದು ನೀವು ಏನೇ ಮಾಡಿ, ಅದು ಉತ್ಕೃಷ್ಟವಾಗಿಯೇ ಇರುತ್ತದೆ. ಮುಂಜಾನೆ ಕೇಳುವ ಒಂದೊಳ್ಳೆಯ ಹಾಡು ಇಡೀ ದಿನ ಮನಸ್ಸಿನಲ್ಲಿ ಗುನುಗುವಂತೆ ಇರುವುದಿಲ್ಲವೇ- ಹಾಗೆ. ಇದರ ಜೊತೆಗೆ ಸಣ್ಣದೊಂದು ‘ಪ್ಲಾನಿಂಗ್’ ನಮ್ಮ ದಿನಚರಿಗೆ ಕೊಂಚ ನಿರಾಳತೆಯನ್ನು ತಂದುಕೊಡಬಹುದು. ರಾತ್ರಿ ಮಲಗುವ ಮುನ್ನ ಇವತ್ತೇನು ಮಾಡಿದೆ, ಏನೆಲ್ಲ ಬಾಕಿಯಿದೆ, ನಾಳೆಯೇನು ಮಾಡಬೇಕು ಎಂಬ ಒಂದೆರಡು ನಿಮಿಷಗಳ ಯೋಚನೆ, ಬೆಳಗ್ಗೆ ಎದ್ದ ತಕ್ಷಣ ಆ ದಿನ ಮಾಡಬೇಕಾದ ಕೆಲಸಗಳ ಕುರಿತ ಸಣ್ಣದೊಂದು ಚಿಂತನೆ- ಸಾಕಷ್ಟು ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಅನೇಕ ಜವಾಬ್ದಾರಿಗಳನ್ನು ಒಟ್ಟೊಟ್ಟಿಗೆ ನಿರ್ವಹಿಸುವವರಾದರೆ ಬಾಕಿ ಕೆಲಸಗಳ ಚೆಕ್‌ಲಿಸ್ಟ್ ಮಾಡಿಕೊಳ್ಳುವುದು ಉತ್ತಮ. ಇದರಿಂದ ಸಣ್ಣಪುಟ್ಟ ಕೆಲಸಗಳು ಮರೆತುಹೋಗುವುದನ್ನು ನಿವಾರಿಸಬಹುದು.

ನಮ್ಮ ಯಶಸ್ಸಿಗೆ ನಾವೇ ಕಾರಣರು ಎನ್ನುವುದು ನಿಜವಾದರೆ, ನಮ್ಮ ಗೊಂದಲಗಳಿಗೂ ನಾವೇ ಕಾರಣರು.

- ಸಿಬಂತಿ ಪದ್ಮನಾಭ ಕೆ.ವಿ.