ಮಾಧ್ಯಮಶೋಧ-13, ಹೊಸದಿಗಂತ 16-02-2012
ಮುರ್ಡೋಕ್‌ನಂತಹ ಜಾಗತಿಕ ಮಾಧ್ಯಮ ದೊರೆಗಳ ಬಗ್ಗೆ ಕಳವಳಪಡುತ್ತಿದ್ದ ಭಾರತೀಯ ಮಾಧ್ಯಮರಂಗ ಈಗ ತಾನೇ ಅಪ್ಪಟ ಸ್ವದೇಶಿ ಮುರ್ಡೋಕ್‌ಗಳ ಸೃಷ್ಟಿಗೆ ಕಾರಣವಾಗಿರುವುದು ವಿಪರ್ಯಾಸವೇ ಇರಬಹುದು; ಆದರೆ ಸತ್ಯವನ್ನು ಒಪ್ಪಿಕೊಳ್ಳದೆ ವಿಧಿಯಿಲ್ಲ.
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರಾದ ರಿಲಯನ್ಸ್ ಇಂಡಸ್ಟ್ರೀಸ್‌ನ ಮಾಲೀಕ ಮುಕೇಶ್ ಅಂಬಾನಿ ನೆಟ್‌ವರ್ಕ್೧೮ ಹಾಗೂ ಟಿವಿ೧೮ ಸಮೂಹವನ್ನು ಭಾಗಶಃ ಖರೀದಿಸುವ ಮೂಲಕ ಮುರ್ಡೋಕ್ ಹಾದಿಯಲ್ಲಿ ಮೊದಲ ಹೆಜ್ಜೆ ಇರಿಸಿದ್ದಾರೆ. ಸುಮಾರು ರೂ. ೨,೧೦೦ ಕೋಟಿಗಳ ಈ ’ಮೆಗಾ ಡೀಲ್’ ಕಂಡು ಭಾರತೀಯ ಮಾಧ್ಯಮ ಮತ್ತು ವಾಣಿಜ್ಯ ರಂಗ ದಿಗ್ಭ್ರಮೆಗೊಂಡು ಕುಳಿತಿದೆ.
ಕೊಡುಕೊಳ್ಳುವಿಕೆ ವ್ಯವಹಾರ ಭಾರತೀಯ ಮಾಧ್ಯಮಕ್ಷೇತ್ರಕ್ಕೆ ಹೊಸತೇನೂ ಅಲ್ಲ. ಒಂದು ವೃತ್ತಪತ್ರಿಕಾ ಸಮೂಹ ಇನ್ನೊಂದನ್ನು ಭಾಗಶಃ ಅಥವಾ ಪೂರ್ತಿ ಖರೀದಿಸುವುದು, ಒಂದು ಚಾನೆಲ್ ಇನ್ನೊಂದರೊಂದಿಗೆ ವಿಲೀನವಾಗುವುದು ತೀರಾ ಹೊಸತೇನಲ್ಲ. ಇವೆಲ್ಲ ಇತ್ತೀಚಿನ ಕೆಲವು ವರ್ಷಗಳಿಂದ ನಡೆಯುತ್ತಲೇ ಬಂದಿವೆ. ಅಲ್ಲದೆ ಕೆಲವೇ ಕೆಲವು ಕೈಗಳಿಗೆ ದೇಶದ ಮಾಧ್ಯಮರಂಗದ ಲಗಾಮು ಹೋಗುತ್ತಿದೆ ಎಂಬ ಆತಂಕಭರಿತ ಚರ್ಚೆಯೂ ಜಾರಿಯಲ್ಲಿದೆ.
ಆದರೆ ಈಗ ಹೊಸ ಕಳವಳಕ್ಕೆ ಕಾರಣವಾಗಿರುವುದು ರಿಲಯನ್ಸ್‌ನಂತಹ ಭಾರೀ ಮಾಧ್ಯಮೇತರ ಉದ್ಯಮ ಕುಳ ಇಷ್ಟು ದೊಡ್ಡ ಮಟ್ಟದಲ್ಲಿ ಮಾಧ್ಯಮರಂಗಕ್ಕೆ ಪ್ರವೇಶ ಪಡೆದಿರುವುದು. ೨೦೦೮ರಲ್ಲೇ ರಿಲಯನ್ಸ್ ಕಂಪೆನಿ ದಕ್ಷಿಣದ ದೊಡ್ಡ ಕುಳ ರಾಮೋಜಿರಾವ್ ಒಡೆತನದ ಈಟಿವಿ ಸಮೂಹವನ್ನು ಭಾಗಶಃ ಖರೀದಿಸಿತ್ತಾದರೂ ಅದು ಇತ್ತೀಚಿನವರೆಗೂ ಅಧಿಕೃತವಾಗಿರಲಿಲ್ಲ. ಆಂಧ್ರ ಮುಖ್ಯಮಂತ್ರಿ ವೈ. ಎಸ್. ರಾಜಶೇಖರ ರೆಡ್ಡಿ ನಿಧನಾನಂತರ ಅವರ ಪತ್ನಿ ವೈ. ಎಸ್. ವಿಜಯಲಕ್ಷ್ಮಿ ಆಂಧ್ರ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದಾಗಲೇ ಇದು ಸ್ಪಷ್ಟವಾಗಿ ಬೆಳಕಿಗೆ ಬಂದದ್ದು. ಕೃಷ್ಣ-ಗೋದಾವರಿ ಜಲಾನಯನ ಪ್ರದೇಶದಲ್ಲಿ ಹೇರಳವಾಗಿದ್ದ ನೈಸರ್ಗಿಕ ಅನಿಲ ಸಂಪನ್ಮೂಲದ ಮೇಲೆ ಕಣ್ಣಿಟ್ಟಿದ್ದ ಅಂಬಾನಿಗೆ ಸಹಾಯ ಹಸ್ತ ಚಾಚಿದ್ದವರು ಆಂಧ್ರದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು. ನಾಯ್ಡು ಅವರಿಗೆ ರಾಮೋಜಿರಾವ್ ಖಾಸಾ ಸ್ನೇಹಿತ. ಹೀಗಾಗಿ, ರಾಮೋಜಿರಾವ್ ಅವರ ಮಾರ್ಗದರ್ಶಿ ಚಿಟ್‌ಫಂಡ್ ದಿವಾಳಿಯಂಚಿನಲ್ಲಿದ್ದಾಗ ಅಂಬಾನಿ ನಾಯ್ಡು ಅವರಿಗೆ ಪರೋಕ್ಷವಾಗಿ ಕೃತಜ್ಞತೆ ಅರ್ಪಿಸುವ ಅವಕಾಶ ಪಡೆದುಕೊಂಡರು. ಸುಮಾರು ರೂ. ೨,೬೦೦ ಕೋಟಿ ನೀಡಿ ರಾಮೋಜಿರಾವ್ ಒಡೆತನದ ಈಟಿವಿ ಚಾನೆಲ್‌ಗಳಲ್ಲಿ ಪಾಲು ಪಡೆದುಕೊಳ್ಳುವ ಮೂಲಕ ರಾಮೋಜಿಯವರನ್ನು ಸಂಕಷ್ಟದಿಂದ ಪಾರು ಮಾಡಿದರು. ಆಗ ಈಟಿವಿ ಸಮೂಹ ಅಂದರೆ ಉಷೋದಯ ಎಂಟರ್‌ಪ್ರೈಸಸ್ ಕೂಡ ರೂ. ೫೬.೬ ಕೋಟಿ ನಷ್ಟದಲ್ಲಿತ್ತು. ಈ ವ್ಯವಹಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಈಟಿವಿ ಸಮೂಹದ ಪ್ರಾದೇಶಿಕ ಸುದ್ದಿ ವಾಹಿನಿಗಳು ಹಾಗೂ ಮನರಂಜನಾ ಚಾನೆಲ್‌ಗಳಲ್ಲಿ ತಲಾ ಶೇ. ೧೦೦ ಹಾಗೂ ತೆಲುಗು ಚಾನೆಲ್‌ಗಳಲ್ಲಿ ಶೇ. ೪೯ ಪಾಲು ಪಡೆಯಿತು.
ಈಗ ಅಂಬಾನಿ ನೆಟ್‌ವರ್ಕ್೧೮ ಹಾಗೂ ಟಿವಿ೧೮ ಸಮೂಹವನ್ನು ಖರೀದಿಸಿದ್ದೂ ಅದರ ಸಂಕಷ್ಟದ ಲಾಭ ಪಡೆದೇ. ರಾಘವ್ ಬೆಹಲ್ ಮಾಲೀಕತ್ವದ ಸಿಎನ್‌ಎನ್-ಐಬಿಎನ್, ಸಿಎನ್‌ಬಿಸಿ-ಟಿವಿ೧೮, ಕಲರ್ಸ್ ಚಾನೆಲ್ ಮುಂತಾದವುಗಳ ಸಮೂಹ ನೆಟ್‌ವರ್ಕ್೧೮ ಸಾಲದ ಹೊರೆಯಿಂದ ಬಳಲಿ ಹೋಗಿರುವಾಗ ಅದಕ್ಕೆ ಸಹಾಯ ಹಸ್ತ ಚಾಚುವ ನೆಪದಲ್ಲಿ ಅಂಬಾನಿ ಅದರ ಭಾಗಶಃ ಪಾಲನ್ನು ಪಡೆದಿದ್ದಾರೆ. ತನ್ಮೂಲಕ ಬೆಹಲ್ ಒಡೆತನದಲ್ಲಿದ್ದ ಸುಮಾರು ೨೫ ಚಾನೆಲ್‌ಗಳ ಮೇಲೆ ಅಂಬಾನಿ ಹಿಡಿತ ಸಾಧಿಸಿದ್ದಾರೆ. ಇದಕ್ಕೂ ಮುನ್ನ ಅಂದರೆ ೨೦೧೦ ಜೂನ್‌ನಲ್ಲೇ ಮುಕೇಶ್ ರೂ. ೪,೮೦೦ ಕೋಟಿ ಬಂಡವಾಳ ಹೂಡಿ ಇನ್ಫೋಟೆಲ್ ಬ್ರಾಡ್‌ಬ್ಯಾಂಡ್‌ನ್ನು ಖರೀದಿಸಿದ್ದು, ಆ ಮೂಲಕ ಹೊಸಯುಗದ ಮಾಧ್ಯಮರಂಗದ ಮೇಲೂ ಅವರು ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವುದನ್ನು ಶ್ರುತಪಡಿಸಿದ್ದಾರೆ.
ಮಾಧ್ಯಮೇತರ ವರ್ಗದಿಂದಲೇ ಭಾರತದಲ್ಲಿ ಮುರ್ಡೋಕೀರಣ ಆರಂಭವಾಗಿರುವ ಸ್ಪಷ್ಟ ಸೂಚನೆ ಇದು.ರಿಲಯನ್ಸ್ ಮಾಡಿದ ಸಹಾಯಕ್ಕೆ ಪ್ರತಿಯಾಗಿ ನೆಟ್‌ವರ್ಕ್ ೧೮ ರೂ. ೨,೧೦೦ ಕೋಟಿ ನೀಡಿ ಈಟಿವಿ ಸಮೂಹದಲ್ಲಿರುವ ರಿಲಯನ್ಸ್ ಪಾಲಿನಲ್ಲಿ ಬಹುಭಾಗವನ್ನು ಖರೀದಿಸಿದೆ. ಈಟಿವಿ ಸುದ್ದಿಚಾನೆಲ್‌ಗಳ ಶೇ. ೧೦೦, ಮನರಂಜನಾ ಚಾನೆಲ್‌ಗಳ ಶೇ. ೫೦ ಹಾಗೂ ತೆಲುಗು ಚಾನೆಲ್‌ಗಳ ಶೇ. ೨೪.೫೦ ಪಾಲು ಈಗ ನೆಟ್‌ವರ್ಕ್೧೮ ಖಾತೆಗೆ ಬಂದಿದೆ. ರಿಲಯನ್ಸ್-ನೆಟ್‌ವರ್ಕ್೧೮ ಮಧುಚಂದ್ರದ ಹಿಂದೆಮುಂದೆ ಈ ಬಗೆಯ ಇನ್ನಷ್ಟು ವ್ಯವಹಾರಗಳು ನಡೆದಿವೆ. ರೋನಿ ಸ್ಕ್ರೂವಾಲ ಒಡೆತನದ ಯುಟಿವಿ ಸಾಫ್ಟ್‌ವೇರ್‌ನ್ನು ರೂ. ೨೦೦೦ ಕೋಟಿಗೆ ವಾಲ್ಟ್‌ಡಿಸ್ನಿ ಖರೀದಿಸಿದೆ. ಓಸ್ವಾಲ್ ಗ್ರೀನ್‌ಟೆಕ್ ರೂ. ೨೪ ಕೋಟಿ ನೀಡಿ ಎನ್‌ಡಿಟಿವಿಯ ಶೇ. ೧೪.೧೭ ಪಾಲನ್ನು ಖರೀದಿಸಿದೆ. ಆಸ್ಟ್ರೋ ಆಲ್ ಏಷ್ಯಾ ನೆಟ್‌ವರ್ಕ್ಸ್ ರೂ. ೧೮೦ ಕೋಟಿ ನೀಡಿ ಎನ್‌ಡಿಟಿವಿ ಲೈಫ್‌ಸ್ಟೈಲ್ ಚಾನೆಲ್‌ನ ಶೇ. ೪೯ ಪಾಲನ್ನು ಖರೀದಿಸಿದೆ. ಇನ್ನೊಂದೆಡೆ ಪ್ರಮುಖ ಚಾನೆಲ್ ಸಮೂಹಗಳು ಪ್ರಾದೇಶಿಕ ಚಾನೆಲ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಸ್ಪರ್ಧೆಗೆ ಹೊರಟಿವೆ. ಸ್ಟಾರ್ ಟಿವಿಯು ವಿಜಯ್ ಟಿವಿ ಹಾಗೂ ಏಷ್ಯಾನೆಟ್‌ಗಳನ್ನು ಖರೀದಿಸಿದರೆ, ಪ್ರತಿಸ್ಪರ್ಧಿ ಜ಼ೀ ಟಿವಿಯು ಪಶ್ಚಿಮ ಬಂಗಾಳದ ಚೋಬಿಶ್ ಗಂಟಾ ಹಾಗೂ ಆಕಾಶ್ ಬಾಂಗ್ಲಾ ಚಾನೆಲ್‌ಗಳನ್ನು ಕೊಂಡುಕೊಂಡಿದೆ.
ಮೂಲ ಭಾರತೀಯ ಟಿವಿ ಉದ್ಯಮಿಗಳು ಆರಂಭದಲ್ಲಿ ಒಳ್ಳೆಯ ಪ್ರಗತಿ ಸಾಧಿಸಿದರೂ, ಆಧುನಿಕ ಜಗತ್ತಿನ ಸವಾಲು ಎದುರಿಸಲಾಗದೆ ನಷ್ಟದತ್ತ ಸಾಗುತ್ತಿರುವುದೇ ಈ ಬಗೆಯ ಮಾರಾಟ-ಖರೀದಿಯ ಪ್ರಮುಖ ಕಾರಣ. ರಾಘವ್ ಬೆಹಲ್, ಪ್ರಣಯ್ ರಾಯ್, ರಾಮೋಜಿ ರಾವ್ ಇವರೆಲ್ಲ ಈ ಬೆಳವಣಿಗೆಗೆ ಜೀವಂತ ಉದಾಹರಣೆ. ಸದ್ಯಕ್ಕೆ ಇಂಡಿಯಾ ಟಿವಿಯ ರಜತ್ ಶರ್ಮ ಹಾಗೂ ದಕ್ಷಿಣದಲ್ಲಿ ಸನ್ ನೆಟ್‌ವರ್ಕ್‌ನ ಕಲಾನಿಧಿ ಮಾರನ್ ಮಾತ್ರ ನಷ್ಟದ ಹಾದಿ ಹಿಡಿಯದ ಅದೃಷ್ಟಶಾಲಿಗಳು. ಆದರೆ ಒಟ್ಟಾರೆಯಾಗಿ ಭಾರತದ ಟಿವಿ ಉದ್ಯಮ ಕ್ಷಿಪ್ರಗತಿಯ ಪ್ರಗತಿ ಸಾಧಿಸುತ್ತಿದೆ. ಪ್ರಸ್ತುತ ಭಾರತದ ಟಿವಿ ರಂಗದ ವಾರ್ಷಿಕ ವಹಿವಾಟು ರೂ. ೩೫,೦೦೦ ಕೋಟಿ ಆಗಿದ್ದು, ಶೇ. ೧೫ರಿಂದ ಶೇ. ೧೭ರ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ೨೦೧೫ರ ವೇಳೆಗೆ ಈ ವಹಿವಾಟು ರೂ. ೪೧,೬೦೦ ಕೋಟಿಗೆ ಏರಬಹುದೆಂದು ಅಂದಾಜಿಸಲಾಗಿದ್ದು, ಶೇ. ೨೦ ರ ಪ್ರಮಾಣದಲ್ಲಿ ಪ್ರಗತಿ ದಾಖಲಿಸಬಹುದೆಂದು ನಿರೀಕ್ಷಿಸಲಾಗಿದೆ. ಸದ್ಯಕ್ಕೆ ದೇಶದಲ್ಲಿರುವ ಒಟ್ಟು ಚಾನೆಲ್‌ಗಳ ಸಂಖ್ಯೆ ೭೪೫; ಇವುಗಳ ಪೈಕಿ ಸುಮಾರು ಅರ್ಧದಷ್ಟು, ಅಂದರೆ, ೩೬೬ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ವಾಹಿನಿಗಳೇ ಇವೆ. ಈ ನಡುವೆ ೬೦೦ ಹೊಸ ಚಾನೆಲ್‌ಗಳನ್ನು ಆರಂಭಿಸುವುದಕ್ಕೆ ಲೈಸೆನ್ಸ್‌ಗಾಗಿ ಬೇರೆಬೇರೆ ಮಂದಿ ಅರ್ಜಿ ಹಾಕಿದ್ದಾರೆ. ಮುಂದಿನ ಕೆಲವು ವರ್ಷಗಳಲ್ಲಿ ಭಾರತದ ಟಿವಿ ಉದ್ಯಮ ಯಾವ ಸ್ಥಿತಿಯಲ್ಲಿರಬಹುದು ಎಂಬುದನ್ನು ಊಹಿಸುವುದೂ ಕಷ್ಟ.
ಇಂತಹ ಸ್ಥಿತ್ಯಂತರ ಸನ್ನಿವೇಶದಲ್ಲಿ ಭಾರತೀಯ ಮುರ್ಡೋಕ್‌ಗಳು ತಯಾರಾಗುತ್ತಿರುವುದನ್ನು ತುಂಬ ಎಚ್ಚರದಿಂದ ಗಮನಿಸಬೇಕಾಗಿದೆ. ಭಾರತದ ಪ್ರಜಾಪ್ರಭುತ್ವ ಅಧಿಕಾರ ವಿಕೇಂದ್ರೀಕರಣದ ಮೇಲೆ ನಿಂತಿರುವಾಗ, ಪ್ರಜಾಪ್ರಭುತ್ವದ ನಾಲ್ಕನೇ ಆಯಾಮ ಎನಿಸಿರುವ ಮಾಧ್ಯಮ ರಂಗ ಮಾತ್ರ ಇದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ಅಪಾಯದ ಕರೆಗಂಟೆಯೆಂಬುದನ್ನು ಮರೆಯಬಾರದು.