ಬುಧವಾರ, ನವೆಂಬರ್ 28, 2018

ಕೃತಿಚೌರ್ಯಕ್ಕೆ ಆತ್ಮಸಾಕ್ಷಿಯ ಕಾನೂನು?

ಪ್ರಜಾವಾಣಿ ಭಾನುವಾರದ ಪುರವಣಿ | 25-11-2018
25 ನವೆಂಬರ್ 2018ರ 'ಪ್ರಜಾವಾಣಿ' ಭಾನುವಾರದ ಪುರವಣಿಯಲ್ಲಿ ಪ್ರಕಟವಾದ ಲೇಖನ

ಸುಮಾರು 15 ವರ್ಷಗಳ ಹಿಂದಿನ ಘಟನೆ. ನಾನು ಆಗಿನ್ನೂ ಎರಡನೇ ವರ್ಷದ ಪದವಿ ಓದುತ್ತಿದ್ದೆ. ಸರ್ಕಾರದ ಇಲಾಖೆಯೊಂದರಿಂದ ಪ್ರಕಟವಾಗುವ ಮಾಸ ಪತ್ರಿಕೆಯೊಂದನ್ನು ಕಾಲೇಜು ಗ್ರಂಥಾಲಯದಲ್ಲಿ ತಿರುವಿ ಹಾಕುತ್ತಿದ್ದೆ. ಮೊದಲ ಪುಟದಲ್ಲೇ ಪ್ರಕಟವಾಗಿದ್ದ ಸಂಪಾದಕೀಯ ಓದುತ್ತಿದ್ದಂತೆಯೇ ಇದನ್ನೆಲ್ಲೋ ಹಿಂದೆ ಓದಿದ್ದೆನಲ್ಲ ಎನಿಸಿತು. ಮುಂದಿನ ಒಂದೆರಡು ಸಾಲು ಓದುತ್ತಿದ್ದಂತೆಯೇ ಇದು ಎಲ್ಲೋ ಓದಿದ್ದಲ್ಲ, ನಾನೇ ಬರೆದದ್ದು ಎಂಬುದು ಸ್ಪಷ್ಟವಾಯಿತು. ಅದರ ಹಿಂದಿನ ವರ್ಷವಷ್ಟೇ ಪತ್ರಿಕೆಯೊಂದರಲ್ಲಿ ನಾನು ಬರೆದಿದ್ದ ಲೇಖನ ಈ ಪತ್ರಿಕೆಯಲ್ಲಿ ಸಂಪಾದಕೀಯವಾಗಿತ್ತು. ಕೊನೆಯಲ್ಲಿ ಐಎಎಸ್ ಅಧಿಕಾರಿಯೊಬ್ಬರ ಸಹಿಯೂ ಇತ್ತು. ಅವರು ಆ ಇಲಾಖೆಯ ಮುಖ್ಯಸ್ಥರಾದ್ದರಿಂದ ಅವರೇ ಆ ಪತ್ರಿಕೆಯ ಸಂಪಾದಕರು. ಚಕಿತನಾದ ನಾನು ಆ ಪುಟದ ಜೆರಾಕ್ಸ್ ಪ್ರತಿಯೊಂದನ್ನು ತೆಗೆದು ನಮ್ಮ ಅಧ್ಯಾಪಕರಿಗೆ ನೀಡಿ ವಿಷಯ ತಿಳಿಸಿದೆ. ಅವರು ಆಗ ಅವರು ಏನು ಹೇಳಿದರೋ ಅಮೇಲೇನು ಮಾಡಿದರೂ ಈಗ ನೆನಪಿಲ್ಲ. ಎಂತೆಂತಹ ಕಳ್ಳರಿದ್ದಾರೆ ಎಂದು ಮೊದಲ ಬಾರಿಗೆ ಖುದ್ದು ಅನುಭವಕ್ಕೆ ಬಂದ ಘಟನೆ ಅದು.

ಇತ್ತೀಚೆಗೂ ಇಂತಹ ಒಂದೆರಡು ಘಟನೆಗಳು ಗಮನಕ್ಕೆ ಬಂದವು. 2016 ಜೂನ್ 2ರ 'ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ನನ್ನ 'ಹಾಜರಾತಿ ಕೊರತೆಯ ಅಡಕತ್ತರಿ’ ಎಂಬ ಲೇಖನ ಕಳೆದ ವರ್ಷ ಎರಡು ಪತ್ರಿಕೆಗಳಲ್ಲಿ ಒಂದು ವಾರದ ಅಂತರದಲ್ಲಿ ಅದೇ ಶೀರ್ಷಿಕೆಯೊಂದಿಗೆ ಪ್ರಕಟವಾಯಿತು. ಒಂದೂ ಅಕ್ಷರ ಹೆಚ್ಚುಕಮ್ಮಿ ಇರಲಿಲ್ಲ. ಲೇಖಕ ಮಾತ್ರ ಬೇರೆ. ಈ ಪುಣ್ಯಾತ್ಮ ವಿಶ್ವವಿದ್ಯಾನಿಲಯವೊಂದರಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಓದುತ್ತಿದ್ದ ವ್ಯಕ್ತಿಯೆಂದು ಆಮೇಲೆ ತಿಳಿಯಿತು. ಪತ್ರಿಕೆಗಳಿಗೆ ಮಾಹಿತಿ ನೀಡಿದೆ. ಬರೆದವನಿಗೂ ಒಂದು ಮೇಲ್ ಮಾಡಿ 'ನೋಡಪ್ಪಾ, ಕೃತಿಸ್ವಾಮ್ಯ ಕಾಯ್ದೆಯ ಪ್ರಕಾರ ಇದೊಂದು ಗಂಭೀರ ಅಪರಾಧ. ನಾನು ನಿನ್ನ ಮೇಲೆ ಕೇಸ್ ಹಾಕಬಹುದು. ಆದರೆ ನೀನು ವಿದ್ಯಾರ್ಥಿ, ನಾನು ಅಧ್ಯಾಪಕ. ಹಾಗೆ ಮಾಡಲು ಹೋಗುವುದಿಲ್ಲ. ಇದು ಒಳ್ಳೆಯ ಕೆಲಸ ಅಲ್ಲ ಎಂಬುದನ್ನಾದರೂ ಅರ್ಥ ಮಾಡಿಕೋ. ಸ್ವಂತಿಕೆ ಬೆಳೆಸಿಕೋ. ಹೆಸರು ಮಾಡುವುದಕ್ಕೆ ತುಂಬ ದಾರಿಗಳಿವೆ’ ಎಂದೆ. ಅವನೋ ಆ ಘಟನೆ ಉದ್ದೇಶಪೂರ್ವಕ ಅಲ್ಲವೆಂದೂ ಆಕಸ್ಮಿಕವಾಗಿ ನಡೆದದ್ದೆಂದೂ ಸಮಜಾಯುಷಿ ನೀಡಿ, ಕ್ಷಮೆ ಕೋರಿದ. ಅವು ನಂಬುವಂತೆ ಇರಲಿಲ್ಲವಾದರೂ ಅದನ್ನು ಮುಂದಕ್ಕೆ ಒಯ್ಯುವ ಉದ್ದೇಶ ನನಗೆ ಇರಲಿಲ್ಲ.

ಕೆಲದಿನಗಳ ಹಿಂದೆ ಇಂಟರ್ನೆಟ್ ಜಾಲಾಡುತ್ತಿದ್ದಾಗ ಮತ್ತೆ ನಾನೇ ಬರೆದ ಸಾಲುಗಳು ಕಣ್ಣಿಗೆ ಬಿದ್ದವು. ಕನ್ನಡ ಪತ್ರಿಕೆಯೊಂದರ ಆನ್‌ಲೈನ್ ಆವೃತ್ತಿಯ ಲೇಖನದ ಲಿಂಕ್ ಅದು. ಪ್ರಕಟವಾಗಿ ಎರಡು ಮೂರು ತಿಂಗಳಾಗಿತ್ತು. ಆನ್‌ಲೈನ್ ಇದ್ದುದರಿಂದ ಈಗ ಗಮನಕ್ಕೆ ಬಂತು. ಪೂರ್ತಿ ಓದಿದರೆ ಹೆಚ್ಚುಕಡಿಮೆ ಮುಕ್ಕಾಲು ಪಾಲು ಲೇಖನ ನಾನು 2005ರಲ್ಲಿ ಪತ್ರಿಕೆಯೊಂದಕ್ಕಾಗಿ ಬರೆದ ಅಂಕಣವೊಂದರ ಯಥಾನಕಲು ಆಗಿತ್ತು. ಕೊನೆಯ ಎರಡು ಮೂರು ಪ್ಯಾರಾಗಳು ಮಾತ್ರ ಬೇರೆ ಇದ್ದವು. ನಡುನಡುವೆ ಒಂದೆರಡು ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಲಾಗಿತ್ತು. ನಾನು ಫೇಸ್‌ಬುಕ್ಕಿನಲ್ಲಿ ಎರಡು ಮಾತು ಬರೆದು ಸುಮ್ಮನಾದೆ.

ಅಂತರ್ಜಾಲವೆಂಬ ಬಟಾಬಯಲಲ್ಲಿ ಕದಿಯುವುದೂ ಸುಲಭ, ಸಿಕ್ಕಿಹಾಕಿಕೊಳ್ಳುವುದೂ ಸುಲಭ. ಆದರೆ ಕಾನೂನು ಕ್ರಮ ಕೈಗೊಳ್ಳುವುದೊಂದೇ ಇದಕ್ಕೆ ಪರಿಹಾರವಲ್ಲ. ಕೋರ್ಟ್ ಮೆಟ್ಟಿಲೇರಿದ ಕೂಡಲೇ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬುದರಲ್ಲೂ ಅರ್ಥವಿಲ್ಲ. ಕೃತಿಚೌರ್ಯವೆಂಬುದು ಇಂದು ನಿನ್ನೆಯ ವಿಷಯವೂ ಅಲ್ಲ. ಕ್ರಿ.ಶ. 1 ಮತ್ತು 2ನೇ ಶತಮಾನದ ನಡುವೆ ಬದುಕಿದ್ದ ಮಾರ್ಷಲ್ ಕವಿ ತನ್ನ ಸಾಲುಗಳನ್ನು ಇನ್ನೊಬ್ಬ ಕವಿ ಅಪಹರಿಸಿದ್ದಾನೆಂದು ದೂರಿದ ನಿದರ್ಶನವಿದೆ. ಆಮೇಲಿನ ನೂರಾರು ವರ್ಷಗಳಲ್ಲಿ ಕಲೆ-ಸಾಹಿತ್ಯದ ಇತಿಹಾಸದಲ್ಲಿ ಕೇಳಿಬಂದ ಕೃತಿಚೌರ್ಯದ ವಾಗ್ವಾದಗಳಿಗಂತೂ ಲೆಕ್ಕವೇ ಇಲ್ಲ. ಸೃಜನಶೀಲಯ ರಚನೆಗಳಲ್ಲಿ ಯಾವುದು ಮೂಲ, ಯಾವುದು ಖೋಟಾ ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವುದು ಕಷ್ಟ. ಅದರಲ್ಲೂ ಮುಕ್ತ ಬಳಕೆಯ ಹಕ್ಕುಗಳ ಚಳುವಳಿ (Free Book Culture) ವಿಸ್ತಾರಗೊಳ್ಳುತ್ತಿರುವ ಈ ಕಾಲದಲ್ಲಿ 'ಬೌದ್ಧಿಕ ಆಸ್ತಿ’, 'ಹಕ್ಕುಸ್ವಾಮ್ಯ’ ಮುಂತಾದ ಪದಗಳೂ ಗೊಂದಲಮಯ ಅನ್ನಿಸುವುದುಂಟು. ಹಾಗಂತ ಇನ್ನೊಬ್ಬ ದುಡಿದು ಬೆಳೆದ ಫಸಲನ್ನು ತಮ್ಮದೇ ಎಂದು ಉಂಡು ಬದುಕುವ ಮಂದಿಯನ್ನು ಸಮಾಜ ಎಚ್ಚರದಿಂದ ಗಮನಿಸುವ ಅಗತ್ಯವಂತೂ ಇದ್ದೇ ಇದೆ.

ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಸಂಶೋಧನ ವಲಯದಲ್ಲಿ ಕೃತಿಚೌರ್ಯವೆಂಬ ಅಪ್ರಾಮಾಣಿಕತೆ ಆಳವಾಗಿ ಬೇರುಬಿಟ್ಟಿದೆ. ಅದರಲ್ಲೂ ಭಾರತದ ಸಂಶೋಧನ ಕ್ಷೇತ್ರ ಪ್ರಪಂಚದಲ್ಲೇ ಕೃತಿಚೌರ್ಯಕ್ಕೆ ಕುಪ್ರಸಿದ್ಧವಾಗಿದೆ. ಜನಸಾಮಾನ್ಯರು ಕದ್ದರೆ ಕೃತಿಚೌರ್ಯ, ಪ್ರಾಧ್ಯಾಪಕರು ಕದ್ದರೆ ಸಂಶೋಧನೆ ಎಂಬಷ್ಟರ ಮಟ್ಟಿಗೆ ನಮ್ಮ ಅಕಡೆಮಿಕ್ ಕ್ಷೇತ್ರ ನಗೆಪಾಟಲಿಗೀಡಾಗಿದೆ. ಇನ್ನೊಬ್ಬರ ಸಂಶೋಧನ ಪ್ರಬಂಧವನ್ನೇ ಇಡಿಯಿಡಿಯಾಗಿ ಕದ್ದು ಪಿಎಚ್‌ಡಿ ಗಿಟ್ಟಿಸಿಕೊಂಡ ಮಹಾನುಭಾವರಿದ್ದಾರೆ. ಬೇರೊಬ್ಬರ ಸಂಶೋಧನ ಫಲಿತಾಂಶಗಳನ್ನು ತಮ್ಮದೇ ಎಂದು ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿಕೊಂಡು ರಾತೋರಾತ್ರಿ ಪ್ರಸಿದ್ಧರಾಗಿ ಅದನ್ನು ಸಮರ್ಥಿಸಿಕೊಂಡ ನಿರ್ಲಜ್ಜರಿದ್ದಾರೆ. ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಚಾರ ಸಂಕಿರಣ, ಸಮ್ಮೇಳನಗಳಲ್ಲಿ ಮಂಡನೆಯಾಗುವ ಪ್ರಬಂಧಗಳಲ್ಲಿ ಸ್ವಂತದ್ದಲ್ಲದ ಹೂರಣವೆಷ್ಟೋ ಲೆಕ್ಕಕ್ಕಿಲ್ಲ. ಈಗಂತೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವರ್ಷಕ್ಕೆ ಲಕ್ಷಗಟ್ಟಲೆ ಸಂಬಳ ಪೀಕುವ ಕೆಲವು ಅಧ್ಯಾಪಕರನ್ನು ವಿಷಯ ಪರಿಣಿತರು ಎನ್ನುವುದಕ್ಕಿಂತಲೂ 'ವಿಕಿಪೀಡಿಯ ತಜ್ಞ’ರೆಂದು ಕರೆಯುವುದೇ ಹೆಚ್ಚು ಸೂಕ್ತ.

ನೈನಿತಾಲ್‌ನ ಕುಮಾಲ್ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಪ್ರೊ. ಬಿ. ಎಸ್. ರಜಪೂತ್ ಕೃತಿಚೌರ್ಯದ ಆರೋಪದಿಂದಾಗಿ 2002ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಆರಂಭದಲ್ಲಿ ಅವರು ಆರೋಪಗಳನ್ನು ನಿರಾಕರಿಸಿದರೂ ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿಯೂ ಸೇರಿದಂತೆ ಜಗತ್ತಿನ ಹಲವು ಪ್ರಸಿದ್ಧ ಸಂಶೋಧಕರು ಇದನ್ನು ದೃಢಪಡಿಸಿ ಅಂದಿನ ರಾಷ್ಟ್ರಪತಿ ಎ. ಪಿ. ಜೆ. ಅಬ್ದುಲ್ ಕಲಾಂ ಅವರಿಗೆ ಪತ್ರ ಬರೆದ ಮೇಲೆ ಅವರು ಕೃತಿಚೌರ್ಯವನ್ನು ಒಪ್ಪಿಕೊಂಡು ರಾಜೀನಾಮೆ ನೀಡಿದರು.

2016ರಲ್ಲಿ ಪಾಂಡಿಚೇರಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಚಂದ್ರಾ ಕೃಷ್ಣಮೂರ್ತಿಯವರೂ ಇಂತಹದೇ ಆರೋಪ ಎದುರಾದ್ದರಿಂದ ತಮ್ಮ ಹುದ್ದೆ ತ್ಯಜಿಸಬೇಕಾಯಿತು. ಅವರೂ ತಮ್ಮನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದೊಂದಿಗೆ ದೀರ್ಘ ಹೋರಾಟ ನಡೆಸಿದ್ದರು. ಕೊನೆಗೂ ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರೇ ಅವರ ವಜಾಕ್ಕೆ ಆದೇಶಿದ ಬಳಿಕ ತಾವೇ ರಾಜೀನಾಮೆ ನೀಡಿದರು.

ಸಂಶೋಧಕರನ್ನೇಕೆ, ನ್ಯಾಯಾಧೀಶರನ್ನೂ ಕೃತಿಚೌರ್ಯದ ಆರೋಪ ಹೊರತು ಮಾಡಿಲ್ಲ ಎಂಬುದನ್ನು ಗಮನಿಸಬೇಕು. 2015ರಲ್ಲಿ ದೆಹಲಿ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವೊಂದು ನೀಡಿದ ತೀರ್ಪಿನಲ್ಲೇ ಮೂಲವನ್ನು ಉಲ್ಲೇಖಿಸದೆ ಶ್ವೇತ್ರಶ್ರೀ ಮಜುಂದಾರ್ ಮತ್ತು ಈಶಾನ್ ಘೋಷ್ ಎಂಬವರ ಪ್ರಬಂಧದ 33 ಪ್ಯಾರಾಗಳನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಯಿತು. ಕೊನೆಗೆ ಆ ತೀರ್ಪು ನೀಡಿದ ನ್ಯಾಯಾಧೀಶರು ಆಗಿರುವ ಪ್ರಮಾದವನ್ನು ಒಪ್ಪಿಕೊಂಡು 'ಇದು ಇಂಟರ್ನಿಯೊಬ್ಬರು ಮಾಡಿದ ತಪ್ಪಿನಿಂದಾದ ಎಡವಟ್ಟು’ ಎಂದು ವಿಷಾದ ವ್ಯಕ್ತಪಡಿಸಿದಲ್ಲಿಗೆ ಪ್ರಕರಣ ಸುಖಾಂತ್ಯ ಕಂಡಿತು.

ಅಕಡೆಮಿಕ್ ವಲಯದಲ್ಲದೆ ಕಲೆ, ಸಿನಿಮಾ, ಸಾಹಿತ್ಯ ಕ್ಷೇತ್ರದಲ್ಲೂ ಕೃತಿಚೌರ್ಯದ ಕುರಿತ ಗುರುತರ ಆರೋಪಗಳು ಕೇಳಿಬರುತ್ತಲೇ ಇವೆ. 2011ರ ಸ್ವರ್ಣಕಮಲ ಪ್ರಶಸ್ತಿ ಪುರಸ್ಕೃತ 'ಬ್ಯಾರಿ’ ಸಿನಿಮಾ ತಮ್ಮ 'ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯ ನಕಲು ಎಂದು ಸಾರಾ ಅಬೂಬಕ್ಕರ್ ಆರೋಪಿಸಿದರು. ಚೇತನ್ ಭಗತ್ ಅವರು ತಮ್ಮ 'ಒನ್ ಇಂಡಿಯನ್ ಗರ್ಲ್’ ಕೃತಿಯಲ್ಲಿ ತಮ್ಮ 'ಲೈಫ್, ಓಡ್ಸ್ & ಎಂಡ್ಸ್’ ಪುಸ್ತಕದ ಪಾತ್ರ, ಸ್ಥಳ ಹಾಗೂ ಭಾವನಾತ್ಮಕ ಹರಿವನ್ನು ಕದ್ದಿದ್ದಾರೆ ಎಂದು ಕಳೆದ ವರ್ಷ ಅನ್ವಿತಾ ಬಾಜಪಯೀ ಆರೋಪಿಸಿದರು. ಸ್ವತಃ ಚೇತನ್ ಭಗತ್ ಅವರು ರಾಜ್‌ಕುಮಾರ್ ಹಿರಾನಿ ಅವರ 'ತ್ರೀ ಈಡಿಯಟ್ಸ್’ ಸಿನಿಮಾ ತಮ್ಮ 'ಫೈವ್ ಪಾಯಿಂಟ್ಸ್ ಸಮ್‌ವನ್’ ಕೃತಿಯ ರೂಪಾಂತರದಂತಿದೆ ಎಂದು 2009ರಲ್ಲಿ ಆರೋಪಿಸಿದ್ದರು.

ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ 'ದಿ ಹಿಂದೂ’ ಪತ್ರಿಕೆಯಲ್ಲಿ ೨೦೧೫ರಲ್ಲಿ ಪ್ರಕಟಿಸಿದ 'ಫ್ರಂ ವೆಲ್‌ಫೇರ್ ಟು ಪ್ಯಾಟರ್ನಲಿಸಂ’ ಲೇಖನವು ಅದೇ ಪತ್ರಿಕೆಯಲ್ಲಿ ಪ್ರಕಟವಾದ ಜಿ. ಸಂಪತ್ ಅವರ 'ಮಿ. ಮೋದೀಸ್ ವಾರ್ ಆನ್ ವೆಲ್‌ಫೇರ್’ ಲೇಖನದಿಂದ ಅನೇಕ ಪ್ಯಾರಾಗಳನ್ನು ಒಳಗೊಂಡಿದೆ ಎಂದು ಆರೋಪಿಸಲಾಯಿತು. ಇದನ್ನು ಸ್ವತಃ ಮೊಯ್ಲಿಯವರೇ ಆಮೇಲೆ ಒಪ್ಪಿಕೊಂಡು ಕಣ್ತಪ್ಪಿನಿಂದಾದ ದೋಷ ವಿಷಾದಿಸಿದರು. ಅಮೀರ್ ಖಾನ್ ಅವರ 'ಪಿಕೆ’, ರಜನೀಕಾಂತ್ ನಟನೆಯ 'ಲಿಂಗಾ’, 'ಕಾಳಕರಿಕಾಳನ್’, ಉಪೇಂದ್ರ ನಟನೆಯ 'ಕಠಾರಿವೀರ ಸುರಸುಂದರಾಂಗಿ’ ಚಿತ್ರಗಳ ವಿರುದ್ಧವೂ ಕೃತಿಚೌರ್ಯದ ಆರೋಪಗಳು ಕೇಳಿಬಂದಿವೆ.

ಕೃತಿಸ್ವಾಮ್ಯ ಕಾಯ್ದೆ 1957ರ ಹೊರತಾಗಿ ಕೃತಿಚೌರ್ಯವನ್ನು ತಡೆಗಟ್ಟುವ ಯಾವುದೇ ನಿರ್ದಿಷ್ಟ ಕಾನೂನುಗಳು ಭಾರತದಲ್ಲಿಲ್ಲ. ವಾಸ್ತವವಾಗಿ ಕೃತಿಸ್ವಾಮ್ಯ ಹಾಗೂ ಕೃತಿಚೌರ್ಯದ ತಡೆಗಟ್ಟುವಿಕೆ ವಿಭಿನ್ನ ವಿಷಯಗಳು. ಕೃತಿಸ್ವಾಮ್ಯ ಕಾಯ್ದೆಯು ಕೃತಿಸ್ವಾಮ್ಯದ ಉಲ್ಲಂಘನೆ ಎಂದರೇನು ಎಂಬುದನ್ನು ವ್ಯಾಖ್ಯಾನಿಸುತ್ತದೆಯೇ ಹೊರತು ಕೃತಿಚೌರ್ಯವನ್ನು ವ್ಯಾಖ್ಯಾನಿಸುವುದಿಲ್ಲ. ಕಾಯ್ದೆಯ ಸೆಕ್ಷನಗ 63ರ ಪ್ರಕಾರ ಕಾಯ್ದೆಯನ್ನು ಉಲ್ಲಂಘಿಸಿದವರಿಗೆ 6 ತಿಂಗಳಿನಿಂದ 3 ವರ್ಷದವರೆಗೆ ಜೈಲುಶಿಕ್ಷೆ ಹಾಗೂ ರೂ. 50,000 ದಿಂದ ರೂ. 2 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ.

ಅಕಡೆಮಿಕ್ ಕ್ಷೇತ್ರದ ಕೃತಿಚೌರ್ಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು ಎಂಬ ಕೂಗು ಇತ್ತೀಚೆಗೆ ಜೋರಾಗಿ ಕೇಳುಬರುತ್ತಿದೆ. ಸಂಶೋಧನಾ ವಲಯದ ಕೃತಿಚೌರ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯುಜಿಸಿ ಇತ್ತೀಚೆಗೆ ಒಂದಷ್ಟು ನಿಯಮಗಳನ್ನು ರೂಪಿಸಿದೆ. ಯಾವುದೇ ಪಿಎಚ್‌ಡಿ ಪ್ರಬಂಧ ಸ್ವೀಕರಿಸುವ ಮೊದಲು ಕೃತಿಚೌರ್ಯ ಪರಿಶೀಲನೆ ಕಡ್ಡಾಯಗೊಳಿಸಿದೆ. ಪರಿಶೀಲನೆ ವೇಳೆಗೆ ಶೇ. 10-40ರಷ್ಟು ಕೃತಿಚೌರ್ಯ ಕಂಡುಬಂದರೆ ಸಂಶೋಧನಾರ್ಥಿಯು 6 ತಿಂಗಳೊಳಗೆ ಪ್ರಬಂಧವನ್ನು ಮರುಸಲ್ಲಿಸಬೇಕಾಗುತ್ತದೆ. ಶೇ. 40-60ರಷ್ಟು ಕೃತಿಚೌರ್ಯವಿದ್ದರೆ ಅಭ್ಯರ್ಥಿಯು ಒಂದು ವರ್ಷ ಡಿಬಾರ್ ಆಗಬೇಕಾಗುತ್ತದೆ. ಅದಕ್ಕಿಂತಲೂ ಹೆಚ್ಚಿದ್ದರೆ ನೋಂದಣಿಯನ್ನೇ ರದ್ದು ಮಾಡಬಹುದು. ಕೃತಿಚೌರ್ಯ ಸಾಬೀತಾದರೆ ಮಾರ್ಗದರ್ಶಕ ಪ್ರಾಧ್ಯಾಪಕರ ವೇತನ ಭಡ್ತಿಗೆ ಕತ್ತರಿ ಬೀಳಲಿದೆ. ಶೇ. 60ಕ್ಕಿಂತಲೂ ಹೆಚ್ಚು ಕೃತಿಚೌರ್ಯ ಕಂಡುಬಂದರೆ ವರನ್ನು ಅಮಾನತುಗೊಳಿಸುವ ಇಲ್ಲವೇ ಕೆಲಸದಿಂದ ವಜಾ ಮಾಡುವ ಅವಕಾಶವೂ ಹೊಸ ನಿಯಮದಲ್ಲಿದೆ.

ಕಾನೂನು ನಿಯಮಗಳಿಂದಲೇ ಎಲ್ಲ ಸಮಸ್ಯೆಗಳು ಪರಿಹಾರವಾಗುವುದಿದ್ದರೆ ಜಗತ್ತು ಯಾವತ್ತೋ ಕಲ್ಯಾಣರಾಜ್ಯವಾಗುತ್ತಿತ್ತು. ಆತ್ಮಸಾಕ್ಷಿಗಿಂತ ಮಿಗಿಲಾದ ಕಾನೂನು ಇದೆಯೇ?

ಮಂಗಳವಾರ, ನವೆಂಬರ್ 20, 2018

ಆಹಾ ಪುರುಷಾಕಾರಂ!

ನವೆಂಬರ್ 18, 2018ರಂದು ವಿಜಯ ಕರ್ನಾಟಕ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿರುವ ಲೇಖನ

ಯಾರು ನಿಮ್ಮ ಹೀರೋ? ಹಾಗೆಂದು ಆಗಷ್ಟೇ ಪದವಿ ತರಗತಿಗಳಿಗೆ ಹೊಸದಾಗಿ ಪ್ರವೇಶ ಪಡೆದು ಬೆರಗುಗಣ್ಣುಗಳೊಂದಿಗೆ ಕುಳಿತಿದ್ದ ಹುಡುಗ ಹುಡುಗಿಯರನ್ನು ಕೇಳಿದೆ. ಒಂದಷ್ಟು ಸಿನಿಮಾ ನಾಯಕರು, ಸ್ವಾತಂತ್ರ್ಯ ಹೋರಾಟಗಾರರು, ರಾಜಕೀಯ ನೇತಾರರರ ಹೆಸರುಗಳು ಒಂದಾದಮೇಲೊಂದು ಬಂದವು. ಅವೆಲ್ಲ ನಿರೀಕ್ಷಿತವೇ ಆಗಿದ್ದರೂ ಆ ಹೊಸ ಮಕ್ಕಳು ತಿರುಗಿ ಇನ್ನೊಂದು ಪ್ರಶ್ನೆ ಕೇಳಬಹುದೆಂದು ಅಂದುಕೊಂಡಿರಲಿಲ್ಲ. ‘ನಿಮ್ಮ ಹೀರೋ ಯಾರು ಸರ್?’ ನಾನು ಚಕಿತನಾಗಿ ಎರಡು ಕ್ಷಣ ತಡೆದು ‘ನನ್ನ ಅಪ್ಪ’ ಅಂದೆ. ಹ್ಞಾ? ಎಂದು ಚುರುಕಾದ ಅವರ ಮುಖದಲ್ಲೀಗ ಮಂದಹಾಸ ಬೆರೆತ ಸಣ್ಣ ಕುತೂಹಲವೂ ಇತ್ತು.

ಅವರಿಗೆ ಎರಡು ಮಾತಿನ ವಿವರಣೆ ಕೊಡುವುದು ನನಗೆ ಅನಿವಾರ್ಯವಾಗಿತ್ತು: ನನ್ನ ಅಪ್ಪ ಹುಟ್ಟಿ ಎರಡೂವರೆ ವರ್ಷಕ್ಕೆ ಅವರಮ್ಮ ತೀರಿಕೊಂಡರಂತೆ. ಎರಡು ಹೊತ್ತಿನ ಕೂಳು ಸಂಪಾದಿಸುವುದೇ ಬದುಕಿನ ಏಕೈಕ ಉದ್ದೇಶವಾಗಿದ್ದ ಮೇಲೆ ಓದು ಬರಹ ದೂರವೇ ಉಳಿಯಿತು. ಎಲ್ಲೋ ಎರಡನೇ ಕ್ಲಾಸು ಮುಗಿಸಿದ್ದರೆಂದು ಕಾಣುತ್ತದೆ. ಆಮೇಲಿನದ್ದೆಲ್ಲ ಅವರಿವರ ಮನೆ ಚಾಕರಿಯ ಗತವೈಭವ.

ಓಡಾಟ, ಹೋರಾಟ. ಮರಳಿನಿಂದ ಎಣ್ಣೆ ಹಿಂಡುವ ಛಲ. ಬರಡು ನೆಲದಲ್ಲಿ ಬೆಳೆ ತೆಗೆವ ಬಲ. ನಮಗೆ ನೆನಪಿರುವುದು ನಸುಕಿನ ಮೂರು ಗಂಟೆಗೆ ಎದ್ದು ತಲೆ ಮೇಲೆ ಬಾಳೆಗೊನೆ ಹೊತ್ತು ಹದಿನೈದು ಕಿಲೋಮೀಟರ್ ಕಾಡು ಹಾದಿ ಬಳಸಿ ಸಂತೆಗೆ ಹೋಗಿ ಮಾರಾಟ ಮಾಡಿ ಮಟಮಟ ಮಧ್ಯಾಹ್ನ ಅಕ್ಕಿ ದಿನಸಿ ಹೊರೆ ಹೊತ್ತು ಬಸವಳಿದು ಬಂದು ಮುಳಿಹುಲ್ಲಿನ ಮನೆಯ ಸೆಗಣಿ ಸಾರಿಸಿದ ಜಗುಲಿಯ ಅಂಚಿನಲ್ಲಿ ಕುಳಿತು ಮಜ್ಜಿಗೆ ನೀರು ಕುಡಿಯುತ್ತಿರುವ ಅಪ್ಪನ ಕಪ್ಪುಬಿಳುಪು ಚಿತ್ರ.

ಆ ಚಿತ್ರ ಕಣ್ಣೆದುರು ಬಂದಾಗಲೆಲ್ಲ ‘ನನಗೆ ಕೇಳಿಸದೇ ಅಪ್ಪಯ್ಯ/ ಆ ಬಿರುಕು ಬಿಟ್ಟಿರುವ ಬರಡು ಕೊಳಗಳ ಹಿಂದೆ/ ಮಡುಗಟ್ಟಿ ನಿಂತಿರುವ ಕೊಳಗಗಟ್ಟಲೆ ಉಪ್ಪುನೀರು?/ ಒಂದೊಮ್ಮೆ ಜೀವಜಲದಲ್ಲಿ ಮಿಂದೆದ್ದ ಮೀನುಗಳ ಕಳೇಬರ?/ ಕರಟಿ ಗಬ್ಬದ್ದಿರುವ ನೈದಿಲೆ, ತಾವರೆಗಳ ರಾಶಿರಾಶಿ?’ ಎಂಬಿತ್ಯಾದಿ ಕವಿತೆ ಸಾಲುಗಳನ್ನೆಲ್ಲ ಗೀಚಿ ಪುಸ್ತಕಗಳ ನಡುವೆ ಜೋಡಿಸಿದ್ದೂ ಉಂಟು. ಅಪ್ಪನ ಬಳಿ ನೂರೆಂಟು ಪುರಾಣ ಕತೆಗಳಿದ್ದವು, ಬರೆಯದ ಆತ್ಮಕಥೆಯ ಸಾವಿರದೆಂಟು ಪುಟಗಳಿದ್ದವು. ಎಷ್ಟು ಓದಿದೆವೋ ಎಷ್ಟು ಓದದೆ ಉಳಿದೆವೋ ಗೊತ್ತಿಲ್ಲ, ಆದರೆ ಮೂವತ್ತು ಚಿಲ್ಲರೆ ವರ್ಷಗಳಲ್ಲಿ ಅಪ್ಪನಂತಹ ಇನ್ನೊಬ್ಬ ಮಹಾತ್ಮ ಕಣ್ಣಿಗೆ ಬಿದ್ದಿಲ್ಲ. ಅದಕ್ಕೆ ಅವರೇ ನನ್ನ ಹೀರೋ.

ಎಂಬ ಇತಿವೃತ್ತವನ್ನು ಮೂರು ವಾಕ್ಯದಲ್ಲಿ ಹೇಳಿಮುಗಿಸಿದೆ. ಬಹುಶಃ ಅವರೆಲ್ಲರಿಗೂ ಅವರವರ ಬಾಲ್ಯದ ನೆನಪು ಬಂದಿರಬೇಕು. ಅವರಲ್ಲಿ ಬಹುತೇಕರು ತೀರಾ ಬಡತನದಿಂದ ಬಂದ ಕಷ್ಟಜೀವಿಗಳೇ. ಅದರಲ್ಲೂ ಹೆಚ್ಚಿನವರು ಅವರ ಕುಟುಂಬದಿಂದಲೇ ಮೊದಲ ಬಾರಿ ಶಾಲೆಯ ಮೆಟ್ಟಿಲು ಹತ್ತಿದವರು. ‘ಹೇಳಿ, ಅಪ್ಪ ಯಾವ ಹೀರೋಗೆ ಕಡಿಮೆ?’ ಎಂದು ಕೇಳಿದೆ. ಅಷ್ಟು ಹೊತ್ತಿಗೆಲ್ಲ ಅವರೂ ತಮ್ಮ ಮನಸ್ಸಿನೊಳಗೆ ಇದ್ದ ಹೀರೋನ ಪ್ರತಿಮೆಯನ್ನು ಬದಲಾಯಿಸಿಕೊಂಡಿದ್ದರು. ಜಗತ್ತಿನ ಶೇಕಡಾ ತೊಂಬತ್ತೊಂಬತ್ತು ಮಂದಿಯ ಮೊದಲ ಹೀರೋ-ಹೀರೋಯಿನ್ನುಗಳು ಅವರ ಮನೆಯಲ್ಲೇ ಇದ್ದಾರೆ.

ಹಾಗೆಂದುಕೊಂಡಿರುವುದು ವಾಸ್ತವವೇ ಅಥವಾ ಬರೀ ಗತಕಾಲದ ಭ್ರಮೆಯೇ ಎಂಬ ಪ್ರಶ್ನೆ ಕಾಡಿದ್ದು ಈ ಬಾರಿಯ ‘ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ’ಯ ಘೋಷವಾಕ್ಯವನ್ನು ನೋಡಿದಾಗ. ಧನಾತ್ಮಕ ಪುರುಷ ಮಾದರಿ (Positive Male Role Models) ಎಂಬುದೇ ಆ ಸ್ಲೋಗನ್. ವಾಟ್ಸಾಪು ಫೇಸ್ಬುಕ್ಕಿನ ಭಾಷೆಯಲ್ಲಿ ವ್ಯವಹರಿಸುವ ನಮ್ಮ ಹೊಸ ಜಮಾನಾದ ಹುಡುಗರಿಗೆ ಧನಾತ್ಮಕ ಪುರುಷ ಮಾದರಿಯೊಂದರ ಅಗತ್ಯ ಇದೆಯೇ? ಇದ್ದರೆ ಅವರ ಕಣ್ಣೆದುರು ಬರುವ ಮಾದರಿ ಯಾವುದು? ಅವರು ಬೆಳೆದು ವಿಶಾಲ ಸಮಾಜವೊಂದರ ಭಾಗವಾದಾಗ ಅವರ ಸಮಾಜೋ-ಸಾಂಸ್ಕೃತಿಕ ಬದುಕಿನ ಹಿಂದೆ ಈ ಮಾಡೆಲ್ಲಿನ ಪಾತ್ರ ಏನು?

ಪುರುಷನೆಂಬ ಆಕೃತಿ ಮನುಷ್ಯನ ಇತಿಹಾಸದಷ್ಟೇ ಹಳೆಯದು. ಅದ್ಯಾಕೆ ಇಷ್ಟು ಸಾವಿರ ವರ್ಷಗಳಲ್ಲಿ ಇಲ್ಲದ ಪುರುಷರ ದಿನಾಚರಣೆ ಈಗ ಆರಂಭವಾಗಿದೆ? ಪುರುಷನ ಧನಾತ್ಮಕ ಮಾದರಿಯ ಬಗ್ಗೆ ಚಿಂತಿಸುವ, ಚರ್ಚಿಸುವ ಅವಶ್ಯಕತೆಯೊಂದು ಜಗತ್ತಿನೆದುರು ಈಗ ಯಾಕೆ ತೆರೆದುಕೊಂಡಿದೆ? ಧನಾತ್ಮಕ ಮಾದರಿಯ ಬಗ್ಗೆ ಒತ್ತಿ ಹೇಳುತ್ತಿದ್ದೇವೆ ಎಂದರೆ ಋಣಾತ್ಮಕ ಮಾದರಿಯ ಪ್ರಭಾವ ಜಾಸ್ತಿ ಇದೆ ಎಂದು ಅರ್ಥ ಅಲ್ಲವೇ?

...ಗುಣಕೆ ಮಚ್ಚರವೇಕೆ? 
ಶ್ರೀರಾಮನಾಹ್ಲಾದ ರೂಪಿ. ಔದಾರ್ಯ ನಿಧಿ.
ನಿರಸೂಯೆಯಿಂ ಸರ್ವರನುರಾಗ ಭಜನಂ.
ಕಲಿ. ಮತ್ಸರವಿದೂರನತ್ಯಂತ ಶಾಂತಿಖನಿ.
ಪ್ರಿಯಭಾಷಿ. ಹಿತಸಖಂ. ಮಿತಮಾರ್ಗಿ. ಧೀರವಶಿ.
ನಗುಮೊಗದ ಸಂಯಮಿ. ಕೃತಜ್ಞತಾ ಮೂರ್ತಿ. ಮೇಣ್
ಜ್ಞಾನಿ. ಸಜ್ಜನಪ್ರೇಮಿ. ಸೂಕ್ಷ್ಮಮತಿ. ಪಂಡಿತಂ.
ಶೃತಿವಿದಂ; ಸುವಿಚಾರಿ; ನಿತ್ಯಪ್ರಜಾಪ್ರೇಮಿ!
ಸುಸ್ಥಿರಂ; ಸಂಬುದ್ಧ ಪ್ರಜ್ಞಾ ಮಹೇಶ್ವರಂ! 
ಇದು ಕುವೆಂಪು ಅವರ ದಶರಥ ಕಡೆದ ರಾಮನ ಚಿತ್ರ. ಲೋಕದಲ್ಲಿ ಕೋಟ್ಯಂತರ ಪುರುಷರಿದ್ದರೂ ರಾಮನೊಬ್ಬನೇ ಪುರುಷೋತ್ತಮನೆಂದು ಕರೆಯಲ್ಪಟ್ಟ. ಪುರುಷೋತ್ತಮನ ಹೊಸದೊಂದು ಮಾದರಿಗೆ ಆಧುನಿಕ ಜಗತ್ತು ತಹತಹಿಸುತ್ತಿದೆಯೇ?

ಒಂಬತ್ತು ತಿಂಗಳ ಹೆಣ್ಣು ಶಿಶುವಿನ ಮೇಲೆ ಅದನ್ನು ನೋಡಿಕೊಳ್ಳುವ ಸಹಾಯಕನೊಬ್ಬ ಮೊನ್ನೆ ಅತ್ಯಾಚಾರ ಮಾಡಿದನಂತೆ. ಅದಕ್ಕೂ ಮೂರು ದಿನದ ಹಿಂದೆ ಉತ್ತರ ಪ್ರದೇಶದ ಆಸ್ಪತ್ರೆಯೊಂದರ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾತು ಬಾರದ ಹದಿಹರೆಯದ ಹುಡುಗಿಯ ಮೇಲೆ ವಾರ್ಡ್‍ಬಾಯ್‍ಗಳೇ ಸಾಮೂಹಿಕ ಅತ್ಯಾಚಾರ ಎಸಗಿದರಂತೆ. ಇಂತಹ ಸುದ್ದಿಗಳು ಬೇಡವೆಂದರೂ ಪ್ರತೀದಿನ ಎಂಬ ಹಾಗೆ ಕಣ್ಣಿಗೆ ರಾಚುತ್ತವೆ. ಇನ್ನೂ ಜಗತ್ತಿನ ಬೆಳಕಿಗೆ ಕಣ್ಣು ತೆರೆಯುತ್ತಿರುವ ಹಸುಳೆಯ ಮೇಲೆ ಅತ್ಯಾಚಾರ ಎಸಗಬೇಕೆಂದು ಅನಿಸುವ ಆ ಪುರುಷನ ಒಳಗಿನ ಮನಸ್ಸು ಎಂತಹದು? ಚಿಕಿತ್ಸೆಗಾಗಿ ಬಂದು ಅಸಹಾಯಕಳಾಗಿ ಬಿದ್ದಿರುವ ಹುಡುಗಿಯ ಮೇಲೆ ಅತ್ಯಾಚಾರ ಎಸಗುವ ಆಸ್ಪತ್ರೆ ಹುಡುಗರ ಎದೆ ಇನ್ನೆಂತಹ ಬಂಡೆಗಲ್ಲು ಇದ್ದೀತು? ಇವರೆಲ್ಲ ಯಾವ ಸೀಮೆಯ ಪುರುಷರು?

ನಾವೆಲ್ಲೋ ದಯನೀಯವಾಗಿ ಸೋತುಬಿಟ್ಟಿದ್ದೇವೆ. ಈ ಸೋಲಿಗೆ ಯಾರು ಕಾರಣರು? ಅಪ್ಪನೇ, ಅಮ್ಮನೇ, ಅಧ್ಯಾಪಕನೇ, ಸ್ನೇಹಿತನೇ, ಸುತ್ತಲಿನ ಸಮಾಜವೇ? ಎದುರಿಗಿರುವ ಹೆಣ್ಣನ್ನು ಕಾಮದ ಕಣ್ಣಿನಿಂದಷ್ಟೇ ನೋಡುವ ಮನಸ್ಸು ಈ ಯುವಕರಲ್ಲಿ ಬೆಳೆದದ್ದಾದರೂ ಹೇಗೆ? ಹೆಣ್ಣೊಬ್ಬಳನ್ನು ಕಂಡಾಗ ತನ್ನ ಮನೆಯಲ್ಲೇ ಇರುವ ಅಕ್ಕನೋ ತಂಗಿಯೋ ಅಮ್ಮನೋ ಚಿಕ್ಕಮ್ಮನೋ ಯಾರೂ ನೆನಪಾಗುವುದಿಲ್ಲವೇ?

ನಮ್ಮ ಸೋಲಿನ ಮೂಲ ನಮ್ಮ ಮನೆಗಳಲ್ಲೇ ಇದೆ. ಪಕ್ಕದಲ್ಲಿರುವ ಹೆಣ್ಣುಮಗುವನ್ನು ಸಹೋದರಿಯಂತೆಯೋ ಒಳ್ಳೆಯ ಸ್ನೇಹಿತೆಯಂತೆಯೋ ಹೆತ್ತಮ್ಮನಂತೆಯೋ ನೋಡುವುದು ನಮ್ಮ ಪುರುಷರಿಗೆ ಸಾಧ್ಯವಾಗುತ್ತಿಲ್ಲವೆಂದರೆ ಅದಕ್ಕೆ ಸಂಸ್ಕಾರಹೀನತೆಯಲ್ಲದೆ ಬೇರೆ ಕಾರಣಗಳಿಲ್ಲ. ಮನೆಯಲ್ಲಿ ಕಲಿಯದ ಸಂಸ್ಕಾರ ಹೊರಗೆಲ್ಲಿ ದಕ್ಕೀತು? ಹೆಣ್ಣನ್ನು ಪ್ರಕೃತಿಯೆಂದು, ದೇವರೆಂದು ಕಂಡ ಪರಂಪರೆಯ ಪ್ರವಾಹ ನಮ್ಮ ಮನಸ್ಸುಗಳ ಕೊಳೆಯನ್ನು ತೊಳೆಯುತ್ತಿಲ್ಲ. ಸಂಸ್ಕಾರದ ವಿಶಾಲ ವಟವೃಕ್ಷ ಹೊಸ ಮನಸ್ಸುಗಳಲ್ಲಿ ಬೇರು ಬಿಡುತ್ತಿಲ್ಲ. ನಾವು ಯಾವುದೋ ಸುಂದರ ಜಲಪಾತದಲ್ಲಿ ಮೀಯುತ್ತಿರುವ ಭ್ರಮೆಯಲ್ಲಿ ನಮ್ಮದಲ್ಲದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದೇವೆ? ಯಾವುದೀ ಪ್ರವಾಹವು?

ಮನೆ, ಮನೆಯೊಳಗಿನ ಮಂದಿ ಮನಸ್ಸು ಮಾಡಿದರೆ ಏನೂ ಆಗಬಹುದು. ಆದರೆ ಅದಕ್ಕೆ ಯಾರಿಗೂ ವ್ಯವಧಾನವಾಗಲೀ ಸಮಯವಾಗಲೀ ಇಲ್ಲ. ಅಮೇರಿಕದಲ್ಲಿ ಪ್ರತೀ ತಂದೆ ತನ್ನ ಮಗುವಿನ ಜೊತೆಗೆ ದಿನವೊಂದಕ್ಕೆ 10 ನಿಮಿಷ ಕಳೆಯುತ್ತಿದ್ದಾನಂತೆ. ನಾವೂ ಹೆಚ್ಚೂ ಕಡಿಮೆ ಅದೇ ಹಾದಿಯಲ್ಲಿದ್ದೇವೆ. ಜಗತ್ತು ಹುಡುಕುತ್ತಿರುವ ಪಾಸಿಟಿವ್ ರೋಲ್ ಮಾಡೆಲ್ ಯಾವ ಸಿದ್ಧ ಮಾರುಕಟ್ಟೆಯಲ್ಲೂ ಲಭ್ಯವಿಲ್ಲ. ಒಬ್ಬ ಅಪ್ಪ, ಒಬ್ಬ ಅಧ್ಯಾಪಕ ಮನಸ್ಸು ಮಾಡಿದರೆ ಕಲ್ಮಷವಿಲ್ಲದ ಮನಸ್ಸಿನ ಮಕ್ಕಳನ್ನು ಸಮಾಜಕ್ಕೆ ಕೊಡಲು ಅಡ್ಡಿ ಬರುವವರು ಯಾರಿದ್ದಾರೆ? ಒಮ್ಮೆ ಅಂತಹದೊಂದು ಮಾದರಿ ಮನೆಯಿಂದ, ಶಾಲೆಯಿಂದ ಆಚೆ ಬಂದರೆ ಅದನ್ನು ಕೆಡಿಸುವ ತಾಕತ್ತು ಬೇರೆ ಯಾರಿಗಿದೆ? ಮನೆ-ಶಾಲೆಯಲ್ಲಿ ಸರಿಯಾದ ಮಾದರಿ ದೊರೆಯದೇ ಹೋದರೆ ಮಕ್ಕಳು ನಿಸ್ಸಂಶಯವಾಗಿ ಟಿವಿ, ಧಾರಾವಾಹಿ, ಸಿನಿಮಾ, ಮೊಬೈಲ್‍ನಲ್ಲಿ ಅಡ್ಡಾಡುವ ಮಾದರಿಗಳನ್ನೇ ಅನುಸರಿಸಬೇಕು. ಅದು ಅವರ ತಪ್ಪಲ್ಲ.

ಎಲ್ಲ ಪುರುಷನೊಳಗೂ ಒಬ್ಬಳು ಸ್ತ್ರೀ ಇದ್ದಾಳೆ, ಇರಬೇಕು. ಅಂತಹದೊಂದು ಪರಂಪರೆಯ ಛಾಯೆ ನಮ್ಮಲ್ಲಿದೆ. ನಾವು ವಿಸ್ಮøತಿಗೆ ಜಾರಿದ್ದೇವೆ ಅಷ್ಟೇ. ಶಿವೆಯನ್ನು ತನ್ನ ಹೃದಯೇಶ್ವರಿಯೆಂದ ಶಿವ ತನ್ನ ದೇಹದ ಅರ್ಧಭಾಗವನ್ನೇ ಆಕೆಗೆ ನೀಡಿ ಅರ್ಧನಾರೀಶ್ವರನಾದ. ಪ್ರಕೃತಿ-ಪುರುಷ, ದ್ಯಾವಾ-ಪೃಥೀವೀಗಳೆಂಬ ಪರಿಕಲ್ಪನೆ ಈ ನೆಲದಷ್ಟೇ ಹಳೆಯದು. ಅದನ್ನು ಹೊಸದಾಗಿ ಎಲ್ಲಿಂದಲೂ ಕಡ ತರಬೇಕಾಗಿಲ್ಲ. ಹಾಗೆ ನೋಡಿದರೆ ಮಹಿಳೆಗಿಂತ ಪುರುಷನೇ ದುರ್ಬಲ. ಜಗತ್ತಿನಲ್ಲಿ ಅತಿಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರು ಪುರುಷರೇ ಹೊರತು ಮಹಿಳೆಯರಲ್ಲ! ‘ಒರಟುತನವೆಂಬುದು ದುರ್ಬಲ ವ್ಯಕ್ತಿಯ ಬಲಾಢ್ಯತೆಯ ಸೋಗು’ ಎಂದ ಎಮರ್ಸನ್. ದುರ್ಬಲ ಪುರುಷನೇ ಅಹಮಿಕೆಯ ಒರಟುತನವನ್ನು ಬೆಳೆಸಿಕೊಂಡು ಬಲಾಢ್ಯನೆಂಬ ಸೋಗು ಹೊದ್ದುಕೊಂಡ. ಮಾನಸಿಕವಾಗಿ ಅವನಷ್ಟು ಪುಕ್ಕಲನೂ ದುರ್ಬಲನೂ ಇನ್ಯಾರೂ ಇಲ್ಲ. ಅದನ್ನು ಮರೆಮಾಚಲು ಹೆಣ್ಣನ್ನು ಅಬಲೆಯೆಂದು ಕರೆದ ಅಷ್ಟೇ.

ನೀರು-ನೆಲ ಸೇರದೆ ಯಾವ ತೆನೆಯೂ ಬಲಿಯದು. ಸ್ತ್ರೀ-ಪುರುಷರನ್ನು ಪ್ರತ್ಯೇಕವಾಗಿ ಇಟ್ಟು ಯಾವ ಮಾದರಿಯನ್ನೂ ಬೆಳೆಸಲಾಗದು. ಗಂಡು ತನ್ನೊಳಗಿನ ಹೆಣ್ಣನ್ನು ಒಪ್ಪಿಕೊಂಡು ವಾಸ್ತವವನ್ನು ಅರ್ಥ ಮಾಡಿಕೊಂಡರೆ ನಿಜವಾದ ಪುರುಷ ಮಾದರಿಯೊಂದು ತಲೆಯೆತ್ತೀತು. ಅಲ್ಲಿ ಹೆಣ್ಣಿನ ಬಗ್ಗೆ ಗೌರವ ತಾನಾಗಿಯೇ ಅರಳುತ್ತದೆ. ಆಗಷ್ಟೇ ಹೆಣ್ಣೂ ಯಾವುದೇ ಬಿಗುಮಾನವಿಲ್ಲದೇ ತೆರೆದ ಮನಸ್ಸಿನಿಂದ ಹೇಳಬಲ್ಲಳು: ಆಹಾ ಪುರುಷಾಕಾರಂ!