ಶನಿವಾರ, ಆಗಸ್ಟ್ 28, 2021

ಸ್ವಾತಂತ್ರ್ಯ ಚಳವಳಿ ಮತ್ತು ತುಮಕೂರು ಜಿಲ್ಲೆಯ ಪತ್ರಿಕೆಗಳು

15 ಆಗಸ್ಟ್ 2021ರ 'ವಿಜಯವಾಣಿ' ಪತ್ರಿಕೆಯ 'ಅಮೃತಭಾರತ' ಪುರವಣಿಯಲ್ಲಿ ಪ್ರಕಟವಾದ ಲೇಖನ

ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಪತ್ರಿಕಾವೃತ್ತಿಗೂ ಅವಿನಾಭಾವ ಸಂಬಂಧ. ನಮ್ಮ ರಾಷ್ಟ್ರೀಯ ಚಳವಳಿಯ ಇತಿಹಾಸವೂ ಪತ್ರಿಕಾ ಇತಿಹಾಸವೂ ಜತೆಜತೆಯಾಗಿಯೇ ಸಾಗುವುದು ಒಂದು ಕುತೂಹಲಕರ ವಿದ್ಯಮಾನ. ಅನೇಕ ಮಂದಿ ಸ್ವಾತಂತ್ರ್ಯ ಹೋರಾಟಗಾರರು ಸ್ವತಃ ಪತ್ರಕರ್ತರೂ ಆಗಿದ್ದರು ಎಂಬುದನ್ನು ಗಮನಿಸಬೇಕು. ದೇಶದಲ್ಲಿ ರಾಷ್ಟ್ರೀಯ ಪ್ರಜ್ಞೆಯ ಬೇರು-ಬಿಳಲುಗಳನ್ನು ಪೋಷಿಸುವ ಗುಪ್ತಗಾಮಿನಿಗಳಾಗಿ ಪತ್ರಿಕೆಗಳು ಹಾಗೂ ಪತ್ರಕರ್ತರು ಕಾರ್ಯನಿರ್ವಹಿಸಿದ್ದು ಒಂದು ಸ್ಮರಣೀಯ ಸಂಗತಿ. ದೇಶದ ರಾಷ್ಟ್ರೀಯ ಚಳವಳಿಯಲ್ಲಿ ತುಮಕೂರು ಜಿಲ್ಲೆಯ ಪತ್ರಿಕೆಗಳ ಹಾಗೂ ಪತ್ರಕರ್ತರ ಪಾತ್ರ ಏನು? ಹೀಗೆ ಕೇಳಿಕೊಂಡಾಗ ಜಿಲ್ಲೆ ಹೆಮ್ಮೆಪಡುವಂತಹ ಅನೇಕ ವಿಷಯಗಳು ನಮ್ಮ ಗಮನಕ್ಕೆ ಬರುತ್ತವೆ.

ತುಮಕೂರು ಜಿಲ್ಲೆಯ ಪತ್ರಿಕೋದ್ಯಮದ ಆರಂಭಿಕ ಹೆಜ್ಜೆಗುರುತುಗಳು 19ನೇ ಶತಮಾನದ ಕೊನೆಯಲ್ಲಿ ಹಾಗೂ 20ನೇ ಶತಮಾನದ ಆರಂಭದಲ್ಲಿ ಕಂಡುಬರುತ್ತವಾದರೂ, ಅವು ಹೆಚ್ಚು ಸ್ಪಷ್ಟವಾಗಿ ಕಾಣಲಾರಂಭಿಸಿದ್ದು ಸ್ವಾತಂತ್ರ್ಯ ಚಳವಳಿ ತೀವ್ರಸ್ವರೂಪವನ್ನು ಪಡೆದುಕೊಂಡ ಕಾಲದಲ್ಲೇ. ‘ಜನತೆಯಲ್ಲಿ ದೇಶಾಭಿಮಾನ, ಸ್ವಾತಂತ್ರ್ಯ ಪ್ರಜ್ಞೆಗಳನ್ನು ಮೂಡಿಸುವ ಸಲುವಾಗಿ ತುಮಕೂರು ಜಿಲ್ಲೆಯಲ್ಲಿ ಪತ್ರಿಕೋದ್ಯಮ ಆರಂಭವಾಯಿತು’ ಎಂದು ಇತಿಹಾಸಕಾರರು ಗುರುತಿಸಿದ್ದಿದೆ. ಈ ಪತ್ರಿಕೆಗಳು ಮುಖ್ಯವಾಹಿನಿಯಲ್ಲಿ ಇದ್ದುಕೊಂಡು ಚಳವಳಿಯನ್ನು ಪ್ರೇರೇಪಿಸಿದವು ಎಂಬುದಕ್ಕಿಂತಲೂ ಭೂಗತ ಪತ್ರಿಕೆಗಳ ರೂಪದಲ್ಲಿ, ಸೈಕ್ಲೋಸ್ಟೈಲ್ ಪತ್ರಿಕೆಗಳ ವೇಷದಲ್ಲಿ, ರಹಸ್ಯ ಕರಪತ್ರಗಳ ಮಾದರಿಯಲ್ಲಿ ಹತ್ತಾರು ಅವತಾರಗಳನ್ನು ತಾಳಿ ಸ್ವಾತಂತ್ರ್ಯ ಸಂಗ್ರಾಮದ ಅಂತಃಪ್ರವಾಹದಂತೆ ಕೆಲಸ ಮಾಡಿದವು ಎಂದರೆ ಹೆಚ್ಚು ಸರಿಯೆನಿಸೀತು.

ವೆಸ್ಲಿಯನ್ ಮಿಶನರಿಗಳಿಂದ ಜಿಲ್ಲೆಯಲ್ಲಿ ಪತ್ರಿಕೆಗಳು ಆರಂಭವಾದರೂ, ಇಲ್ಲಿನದೇ ಮಣ್ಣಿನಲ್ಲಿ ಪತ್ರಿಕೋದ್ಯಮದ ಗಿಡ ನೆಟ್ಟು ಜಿಲ್ಲೆಯ ಪತ್ರಿಕೋದ್ಯಮಕ್ಕೊಂದು ಅಧಿಕೃತತೆಯನ್ನು ತಂದುಕೊಟ್ಟವರು ಸ್ವಾತಂತ್ರ್ಯ ಹೋರಾಟಗಾರ ಕಡಬ ರಂಗಯ್ಯಂಗಾರ್. ‘ವಿಶ್ವಕರ್ನಾಟಕ’ ಪತ್ರಿಕೆ ತಿರುಮಲೆ ತಾತಾಚಾರ್ಯ ಶರ್ಮರ ನೇತೃತ್ವದಲ್ಲಿ ಇಡೀ ಮೈಸೂರು ಸಂಸ್ಥಾನದ ಸ್ವಾತಂತ್ರ್ಯ ಚಳವಳಿಯ ಕ್ರಾಂತಿಧ್ವನಿಯಾಗಿ ಮೂಡಿಬಂತಾದರೂ, ಆ ಪತ್ರಿಕೆಯ ಬೀಜ ಬಿತ್ತಿದವರು ರಂಗಯ್ಯಂಗಾರ್. ಅವರು ಆರಂಭಿಸಿದ ಇತರ ಪತ್ರಿಕೆಗಳಾದ ‘ತುಮಕೂರು ವರ್ತಮಾನ’ವಾಗಲೀ, ‘ಫೋರ್ಟ್‍ನೈಟ್ಲಿ ಕ್ರಾನಿಕಲ್’ ಆಗಲೀ ಬಹುಕಾಲ ನಡೆಯದಿದ್ದರೂ, ತುಮಕೂರು ಪತ್ರಿಕೋದ್ಯಮದ ಆರಂಭಿಕ ದಿನಗಳ ನೆಲೆಯಲ್ಲಿ ಅವು ಬಹು ಮಹತ್ವದ ಪತ್ರಿಕೆಗಳೇ. ಸಹಜವಾಗಿಯೇ ಅವರಿಗೆ ಜಿಲ್ಲೆಯ ಪತ್ರಿಕೋದ್ಯಮದ ಹರಿಕಾರ ಅಥವಾ ಪಿತಾಮಹ ಎಂಬ ಅಭಿದಾನ ಪ್ರಾಪ್ತವಾಗಿದೆ. 

ಮೂಲತಃ ಗುಬ್ಬಿಯವರಾದ ವಕೀಲ ರಂಗಯ್ಯಂಗಾರ್ ಪತ್ರಿಕೋದ್ಯಮ ಪ್ರವೇಶಿಸಿದ್ದು 1917ರಲ್ಲಿ - ‘ತುಮಕೂರು ವರ್ತಮಾನ’ ಎಂಬ ಕನ್ನಡ ವಾರಪತ್ರಿಕೆಯನ್ನು ಆರಂಭಿಸುವ ಮೂಲಕ. ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ರಂಗಯ್ಯಂಗಾರ್‍ಗೆ ಪತ್ರಿಕೋದ್ಯಮ ಒಂದು ಹೋರಾಟದ ಅಸ್ತ್ರವಾಗಿ ಕಾಣಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಪತ್ರಿಕೆಯ ಮೂಲಕ ಜನತೆಯಲ್ಲಿ ಸ್ವಾತಂತ್ರ್ಯಪ್ರಜ್ಞೆ ಮತ್ತು ರಾಷ್ಟ್ರಾಭಿಮಾನದ ಅರಿವು ಮೂಡಿಸುವುದು ಅವರ ಗುರಿಯಾಗಿತ್ತು. ತಮ್ಮ ಸ್ಪಷ್ಟ, ಸಮರ್ಥ ಬರವಣಿಗೆಯಿಂದ ಜನರನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗುವಂತೆ ಅವರು ಪ್ರೇರೇಪಿಸುತ್ತಿದ್ದರು. 1921ರಲ್ಲಿ ಆರಂಭವಾದ ರಂಗಯ್ಯಂಗಾರರ ‘ಮೈಸೂರು ಕ್ರಾನಿಕಲ್’ ಪತ್ರಿಕೆ ಮುಂದೆ ತಿರುಮಲೆ ತಾತಾಚಾರ್ಯ ಶರ್ಮರ ನೇತೃತ್ವದಲ್ಲಿ ‘ವಿಶ್ವಕರ್ನಾಟಕ’ವಾಗಿ ಮರುಹುಟ್ಟು ಪಡೆದ ಮೇಲೆ ಕನ್ನಡ ಪತ್ರಿಕೋದ್ಯಮಕ್ಕೂ ಸ್ವಾತಂತ್ರ್ಯ ಹೋರಾಟಕ್ಕೂ ಒಂದು ಹೊಸ ತಿರುವು ನೀಡಿದ್ದು ನಮ್ಮ ಪತ್ರಿಕಾ ಇತಿಹಾಸದ ಪ್ರಮುಖ ಮೈಲಿಗಲ್ಲು.

ತಿ.ತಾ. ಶರ್ಮರಿಗೆ ತುಮಕೂರಿನ ನಂಟು ಇಷ್ಟೇ ಅಲ್ಲ; ಅವರ ಪತ್ನಿ ತಿರುಮಲೆ ರಾಜಮ್ಮನವರೂ ತುಮಕೂರಿನವರೇ. ಶರ್ಮರಿಗೆ ಹೆಗಲೆಣೆಯಾಗಿ ನಿಂತು ಸಾಹಿತ್ಯ, ಸಂಗೀತ, ದೇಶಸೇವೆಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದಲ್ಲದೆ, ‘ವಿಶ್ವಕರ್ನಾಟಕ’ದ ಕಾರ್ಯಭಾರದಲ್ಲೂ ರಾಜಮ್ಮ ಸಕ್ರಿಯರಾಗಿದ್ದರು. 1924ರಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯವರ ಸಮ್ಮುಖ ವೀಣಾವಾದನ ಮಾಡಿದ ಹೆಗ್ಗಳಿಕೆ ರಾಜಮ್ಮನವರದು. 

ಸ್ವಾತಂತ್ರ್ಯಪೂರ್ವದ ತುಮಕೂರು ಪತ್ರಿಕಾಲೋಕದಲ್ಲಿ ಭೂಗತ ಪತ್ರಿಕೆಗಳದ್ದು ಒಂದು ದೊಡ್ಡ ಅಧ್ಯಾಯ. ಜನಜಾಗೃತಿ ಮೂಡಿಸುವಲ್ಲಿ ಮತ್ತು ಜನರನ್ನು ಹೋರಾಟಕ್ಕೆ ಒಗ್ಗೂಡಿಸುವಲ್ಲಿ ಉಳಿದ ಪತ್ರಿಕೆಗಳಿಗಿಂತಲೂ ಅವುಗಳದ್ದೇ ಸಿಂಹಪಾಲು. ಅಧಿಕೃತ ಪತ್ರಿಕೆಗಳು ಪ್ರಭುತ್ವದ ಕಾನೂನಿನ ಮಿತಿಯಲ್ಲಿ, ನೀತಿನಿಯಮಾವಳಿಗಳ ಪರಿಧಿಯ ಒಳಗೆ ಹೋರಾಟಕ್ಕೆ ತಮ್ಮಿಂದಾದ ಸ್ಫೂರ್ತಿ ನೀಡಬಲ್ಲವಾಗಿದ್ದರೆ, ಭೂಗತ ಪತ್ರಿಕೆಗಳು ಪರೋಕ್ಷ ಕಾರ್ಯಾಚರಣೆ ನಡೆಸುತ್ತಲೇ ಉಳಿದ ಪತ್ರಿಕೆಗಳು ಹೇಳಲಾರದ ವಿಚಾರಗಳಷ್ಟನ್ನೂ ಹೋರಾಟಗಾರರಿಗೆ ಮತ್ತು ಜನಸಾಮಾನ್ಯರಿಗೆ ತಲುಪಿಸುತ್ತಿದ್ದವು. ಅವು ಚಳವಳಿಯ ಕಾಲದ ಪ್ರಬಲ ಸಂವಹನ ಮಾಧ್ಯಮಗಳೇ ಆಗಿದ್ದವು. 

ತುಮಕೂರು ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲೂ ಭೂಗತ ಪತ್ರಿಕೆಗಳ ಪಾತ್ರ ಕಡಿಮೆಯೇನಲ್ಲ. ರಾಜ್ಯದ ಬೇರೆ ಕೆಲವು ಭಾಗಗಳಿಗೆ ಹೋಲಿಸಿ ನೋಡಿದರೆ ಸ್ವಾತಂತ್ರ್ಯಪೂರ್ವ ತುಮಕೂರಿನಲ್ಲಿ ಪತ್ರಿಕೆಗಳ ಸಂಖ್ಯೆ ಕಡಿಮೆಯೇ ಇತ್ತು. ಆದರೆ, ಅವುಗಳ ಕೊರತೆಯನ್ನು ಯಶಸ್ವಿಯಾಗಿ ನೀಗಿಸಿದ್ದು ಇಲ್ಲಿನ ಭೂಗತ ಬುಲೆಟಿನ್‍ಗಳೇ. ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿ ಮುಂತಾದ ಎಲ್ಲ ಮಹತ್ವದ ಹೋರಾಟಗಳಿಗೆ ಕಸುವು ತುಂಬಿದ್ದರಲ್ಲಿ ಈ ಬಗೆಯ ಪತ್ರಿಕೆಗಳ ಪಾತ್ರ ಬಲುದೊಡ್ಡದು. 

ಸ್ವಾತಂತ್ರ್ಯ ಹೋರಾಟ ಸಂಬಂಧೀ ಭೂಗತ ಪತ್ರಿಕಾ ಚಟುವಟಿಕೆಗಳಲ್ಲಿ ಆರ್. ಎಸ್. ಆರಾಧ್ಯರದು ಪ್ರಮುಖ ಹೆಸರು. ಜಿಲ್ಲೆಯ ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದ ಆರಾಧ್ಯರಿಗೆ ಭೂಗತ ಪತ್ರಿಕೆಗಳು ಜನಜಾಗೃತಿಯ ಪ್ರಮುಖ ಮಾಧ್ಯಮಗಳೂ, ಹೋರಾಟದ ಪ್ರಬಲ ಅಸ್ತ್ರಗಳೂ ಆಗಿದ್ದವು. ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರದವರಾದ ಆರಾಧ್ಯರು ವೃತ್ತಿಯಲ್ಲಿ ಮೂಲತಃ ವ್ಯಾಪಾರೋದ್ಯಮಿಗಳು. ಸ್ವಾತಂತ್ರ್ಯಾನಂತರವೂ ಅವರು ಕೈಗಾರಿಕೋದ್ಯಮಿಯಾಗಿ ಹೆಸರು ಮಾಡಿದವರು. ಆದರೆ ರಾಷ್ಟ್ರೀಯ ಚಳವಳಿಯ ಸೆಳವಿನಿಂದ ಅವರು ತಪ್ಪಿಸಿಕೊಳ್ಳಲಾಗಲಿಲ್ಲ. ಕೊರಟಗೆರೆ ಹಾಗೂ ಬೆಂಗಳೂರುಗಳಲ್ಲಿ ವಿದ್ಯಾಭ್ಯಾಸ ಪಡೆದ ಆರಾಧ್ಯರು ಮನೆಯವರ ಒತ್ತಾಯದ ಮೇರೆಗೆ ಓದನ್ನು ನಿಲ್ಲಿಸಿ ವ್ಯಾಪಾರದಲ್ಲಿ ತೊಡಗಿದ್ದರು. 1937ರಲ್ಲಿ ರಾಣೆಬೆನ್ನೂರಿನಲ್ಲಿ ಆರಂಭವಾದ ಕರ್ನಾಟಕ ರಾಜಕೀಯ ಪರಿಷತ್‍ನ ಒಂದು ಸಭೆಯಲ್ಲಿ ಯುವಕ ಆರಾಧ್ಯರು ‘ಸ್ವಾತಂತ್ರ್ಯ ಚಳವಳಿಯಲ್ಲಿ ಯುವಕರ ಪಾತ್ರ’ ಎಂಬ ವಿಷಯದಲ್ಲಿ ಭಾಷಣ ಮಾಡಿ ಎಲ್ಲರ ಗಮನ ಸೆಳೆದರು. 1938ರ ಶಿವಪುರದ ಧ್ವಜ ಸತ್ಯಾಗ್ರಹದಲ್ಲಿ ಭಾಗವಹಿಸಿದ ಬಳಿಕವಂತೂ ಅವರು ತಮ್ಮನ್ನು ತಾವು ಸಂಪೂರ್ಣವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡರು.

1939ರಲ್ಲಿ ಅರಣ್ಯ ಸತ್ಯಾಗ್ರಹ ಮುಂತಾದ ಕಾನೂನುಭಂಗ ಚಳುವಳಿಗಳು ಆರಂಭವಾದಾಗ ಹೋರಾಟಗಾರರಿಗೆ ಮಾಹಿತಿ, ಸಂದೇಶ ರವಾನಿಸಲು ಆರಾಧ್ಯರಿಗೆ ಗೋಚರಿಸಿದ್ದು ಪತ್ರಿಕಾ ಮಾಧ್ಯಮ. ಬೇರೆಬೇರೆ ಹೆಸರಿನ ಪತ್ರಿಕೆಗಳನ್ನು ರಹಸ್ಯವಾಗಿ ಮುದ್ರಿಸಿ ಜನತೆಯ ನಡುವೆ ಪ್ರಸಾರವಾಗುವಂತೆ ಅವರು ನೋಡಿಕೊಳ್ಳುತ್ತಿದ್ದರು. ಅಂದಿನ ಸನ್ನಿವೇಶದ ಕುರಿತು ಆರಾಧ್ಯರೇ ‘ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’ ಗ್ರಂಥದಲ್ಲಿ ಹೀಗೆ ಬರೆದಿದ್ದಾರೆ: “ಆಗ ನಾನು ಪತ್ರಿಕೆ ಮತ್ತು ಬುಲೆಟಿನ್‍ಗಳನ್ನು ಮುದ್ರಿಸಿ ದೇಶದೆಲ್ಲೆಡೆ ಪ್ರಚಾರ ಮಾಡಲು ಏರ್ಪಾಡು ಮಾಡುತ್ತಿದ್ದೆನು. ಆ ಬುಲೆಟಿನ್‍ಗಳು ಎಲ್ಲಿ ಮುದ್ರಣವಾಗುತ್ತಿದ್ದವು, ಹೇಗೆ ಹಂಚಲ್ಪಡುತ್ತಿದ್ದವು ಎಂಬುದು ಪೊಲೀಸಿನವರಿಗೆ ಒಂದು ಸಮಸ್ಯೆಯಾಗಿತ್ತು. ಕೆಲದಿನಗಳ ನಂತರ ಯಾವ ಮುದ್ರಣಾಲಯದವರೂ ನನಗೆ ಮುದ್ರಿಸಿಕೊಡಲು ಮುಂದೆ ಬರಲಿಲ್ಲ; ಅಧೈರ್ಯಪಟ್ಟರು. ಇದಕ್ಕೆ ಕಾರಣ ಆ ಪತ್ರಿಕೆಗಳನ್ನು ಮುದ್ರಿಸುವ, ಪ್ರಕಟಿಸುವ ಮತ್ತು ಓದುವವರ ಮೇಲೆ ಕ್ರಮ ಜರುಗಿಸುವುದು, ಮುದ್ರಣಾಲಯಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮುಂತಾದ ತೀವ್ರ ಕಾರ್ಯಕ್ರಮ ಸರ್ಕಾರ ಇಟ್ಟುಕೊಂಡಿತ್ತು. ಒಂದು ಪತ್ರಿಕೆ ಮುಟ್ಟುಗೋಲು ಹಾಕಿಕೊಂಡರೆ ಇನ್ನೊಂದು ಹೆಸರಿನಲ್ಲಿ ಪತ್ರಿಕೆ ಬರುತ್ತಿತ್ತು. ‘ತ್ರಿಶೂಲ’, ‘ಕ್ರಾಂತಿ’, ‘ಸಮರ’, ‘ಕಹಳೆ’ ಮುಂತಾದ ಹೆಸರಿನ ಪತ್ರಿಕೆಗಳು ಆಗ ಪ್ರಚಾರದಲ್ಲಿದ್ದವು.”

ಪತ್ರಿಕೆಗಳನ್ನು ಮುದ್ರಿಸಲು ಮುದ್ರಣಾಲಯಗಳೇ ಸಿಗಲಿಲ್ಲವೆಂದು ಆರಾಧ್ಯರ ತಂಡ ತಮ್ಮ ವಿಧಾನದಿಂದ ಹಿಂದೆ ಸರಿಯಲಿಲ್ಲ. ಸೈಕ್ಲೋಸ್ಟೈಲ್ ಯಂತ್ರ ತಂದು ಪತ್ರಿಕೆಗಳನ್ನು, ಬುಲೆಟಿನ್‍ಗಳನ್ನು ಪ್ರಕಟಿಸಲಾರಂಭಿಸಿದರು. ಆರಾಧ್ಯರ ಜೊತೆಯಲ್ಲಿದ್ದ ಅನೇಕ ಮಿತ್ರರು ಒಬ್ಬೊಬ್ಬರಾಗಿ ದಸ್ತಗಿರಿಯಾದರು. ಆದರೆ ಇಂತಹ ವಿಷಮ ಪರಿಸ್ಥಿತಿಯಲ್ಲೂ ಅವರಿಗೆ ಒತ್ತಾಸೆಯಾಗಿ ನಿಂತ ಕೆಲವು ಮಹಿಳೆಯರು ಗುಪ್ತವಾಗಿ ಸೈಕ್ಲೋಸ್ಟೈಲ್ ಮಾಡಿ ನೂರಾರು ಪ್ರತಿಗಳನ್ನು ಹಂಚಲು ನೆರವಾದರು. ಇಂತಹ ಕಾರ್ಯವನ್ನು ಬೇರೆಬೇರೆ ಹೆಸರಿನಲ್ಲಿ ಬೆಂಗಳೂರು ಮತ್ತು ತುಮಕೂರುಗಳಲ್ಲಿ ಆರಾಧ್ಯರು ನಡೆಸಿಕೊಂಡು ಹೋಗುತ್ತಿದ್ದರು. ಆದರೆ ಸುಮಾರು ಎರಡು ತಿಂಗಳೊಳಗಾಗಿ ಸ್ವತಃ ಆರಾಧ್ಯರನ್ನೂ ಸೈಕ್ಲೋಸ್ಟೈಲ್ ಮಷಿನ್ನಿನ ಸಮೇತ ದಸ್ತಗಿರಿ ಮಾಡಿ ವೃತ್ತಪತ್ರಿಕಾ ಕಾನೂನು ಪ್ರಕಾರ ಮೊಕದ್ದಮೆ ಹೂಡಿ ಆರು ತಿಂಗಳು ಕಾಲ ಜೈಲಿಗೆ ಕಳುಹಿಸಲಾಯಿತು. ಮುಂದೆ ಭಾರತ ಬಿಟ್ಟು ತೊಲಗಿ ಚಳುವಳಿಯ ವೇಳೆಯಲ್ಲೂ ಅವರು ಬುಲೆಟಿನ್ ಪ್ರಕಟಣೆಗಳನ್ನು ಮುಂದುವರಿಸಿದ್ದರು. ತುಮಕೂರಿನ ಖಾದಿ ಭಂಡಾರದ ನಂಜಪ್ಪ, ಪ್ರಹ್ಲಾದರಾವ್, ಎಂ. ಎಸ್. ಹನುಮಂತರಾವ್, ವಾಸು, ಜಿ. ವಿ. ನಾರಾಯಣ ಮೂರ್ತಿ, ಹನುಮಂತರಾಯ ಮುಂತಾದವರ ಬೆಂಬಲ ಆರಾಧ್ಯರಿಗಿತ್ತು. ಅವರು ಮುಂದೆ 1952ರಲ್ಲಿ ‘ಆರ್ಯವಾಣಿ’ ಎಂಬ ಪತ್ರಿಕೆಯನ್ನೂ ಆರಂಭಿಸಿದರು.

1939ರ ಅರಣ್ಯ ಸತ್ಯಾಗ್ರಹಕ್ಕೂ ಮುನ್ನ ಪಾನ ನಿರೋಧ ಚಳುವಳಿ ಜಿಲ್ಲೆಯಾದ್ಯಂತ ಕಾವೇರುವ ಹೊತ್ತು ಡಿ. ಆರ್. ಮುದ್ದಪ್ಪ ಎಂಬವರು ‘ಗುಡುಗು’ ಎಂಬ ಸೈಕ್ಲೋಸ್ಟೈಲ್ಡ್ ಬುಲೆಟಿನ್ ಪ್ರಕಟಿಸುತ್ತಿದ್ದರು. ಪೊಲೀಸರ ಕಣ್ಣು ತಪ್ಪಿಸಿ ಅದರ ಪ್ರತಿಗಳನ್ನು ಜನರಿಗೆ ತಲುಪಿಸುತ್ತಿದ್ದರು. ಭೂಗತ ಪತ್ರಿಕೆಗಳನ್ನು ಪ್ರಕಟಿಸುವಲ್ಲಿ ಸಕ್ರಿಯರಾಗಿದ್ದ ಇನ್ನೊಬ್ಬ ಹೋರಾಟಗಾರರು ಮಾಯಸಂದ್ರದ ಮಾ. ನಂ. ಶ್ರೀಕಂಠಯ್ಯ. ಎಳೇ ವಯಸ್ಸಿನಿಂದಲೇ ರಾಷ್ಟ್ರೀಯ ವಿಚಾರಗಳೆಡೆಗೆ ಆಕರ್ಷಿತರಾಗಿದ್ದ ಶ್ರೀಕಂಠಯ್ಯ 1928ರಿಂದಲೇ ಸ್ವಾತಂತ್ರ್ಯ ಚಳುವಳಿಯ ಸೆಳವಿಗೆ ಸಿಕ್ಕರು. ಅಸಹಕಾರ ಚಳುವಳಿಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡ ಅವರು ತುರುವೇಕೆರೆ, ದಂಡಿನಶಿವರ, ಶೀಗೇಹಳ್ಳಿ, ದಬ್ಬೆಗಟ್ಟ, ಬಾಣಸಂದ್ರ ಮುಂತಾದೆಡೆಗಳಲ್ಲಿ ಸಭೆ, ಮೆರವಣಿಗೆ ಆಯೋಜಿಸುವಲ್ಲಿ ಮುಂಚೂಣಿ ವಹಿಸಿದರು. ಶಾಲೆಗಳ ಬಹಿಷ್ಕಾರ, ಈಚಲುಮರಗಳ ನಾಶ, ತಂತಿ ಕಡಿತ, ಹೆಂಡದಂಗಡಿ ದಹನದಂತಹ ಕಾರ್ಯಕ್ರಮಗಳನ್ನು ಅವ್ಯಾಹತವಾಗಿ ರೂಪಿಸಿದರು. ಈ ಬಗ್ಗೆ ಕರಪತ್ರಗಳನ್ನು ಅಚ್ಚು ಹಾಕಿಸಿ ಹಳ್ಳಿಹಳ್ಳಿಗಳಲ್ಲಿ ಹಂಚಲು ವ್ಯವಸ್ಥೆ ಮಾಡಿದರು. ಮಾಯಸಂದ್ರದ ಬೆಟ್ಟಗುಡ್ಡಗಳಲ್ಲಿ ಅವಿತಿದ್ದು ಸೈಕ್ಲೋಸ್ಟೈಲ್ ಮೂಲಕ ಸುದ್ದಿಗಳನ್ನು ಮುದ್ರಿಸಿ ನಾಗಮಂಗಲ, ಕುಣಿಗಲ್, ಚನ್ನರಾಯಪಟ್ಟಣ ಮುಂತಾದ ಸ್ಥಳಗಳಿಗೆ ಹಂಚುವ ವ್ಯವಸ್ಥೆ ಮಾಡುತ್ತಿದ್ದರು. ಶ್ರೀಕಂಠಯ್ಯನವರು ಮುಂದೆ ‘ಜನವಾಣಿ’ ಮತ್ತು ‘ವಿಶ್ವಕರ್ನಾಟಕ’ ಪತ್ರಿಕೆಗಳಿಗೆ ಪ್ರತಿನಿಧಿಯಾಗಿಯೂ ಇದ್ದರು.   

ತುಮಕೂರಿನ ಭೂಗತ ಪತ್ರಿಕೆಗಳು ಜಿಲ್ಲೆಯ ಗಡಿಯಾಚೆಗೂ ತಮ್ಮ ಕಾರ್ಯವ್ಯಾಪ್ತಿ, ಪ್ರಭಾವ ವಿಸ್ತರಿಸಿಕೊಂಡಿದ್ದವು. 1932ರ ಕರ ನಿರಾಕರಣಾ ಚಳುವಳಿ ಕಾರವಾರ ಜಿಲ್ಲೆಯಲ್ಲಿ ನಡೆಯುತ್ತಿರುವಾಗ ಇಲ್ಲಿಂದಲೇ ಬುಲೆಟಿನ್‍ಗಳನ್ನು ಸೈಕ್ಲೋಸ್ಟೈಲ್ ಮಾಡಿ ಕಳುಹಿಸಲಾಗುತ್ತಿತ್ತು ಎಂದು ಚಳುವಳಿಗಾರ ಬಿ. ಸಿ. ನಂಜುಂಡಯ್ಯ ಸ್ಮರಿಸಿಕೊಂಡಿದ್ದಾರೆ. ತುಮಕೂರಿನವರೇ ಆದ ನಂಜುಂಡಯ್ಯ 1948-56ರ ಅವಧಿಗೆ ಶಾಸಕರೂ, 1957-66ರ ಅವಧಿಗೆ ಸಂಸದರೂ ಆಗಿದ್ದರು. ತುರುವೇಕೆರೆ ಮಾಯಸಂದ್ರ ಮೂಲದ ಸ್ವಾತಂತ್ರ್ಯ ಹೋರಾಟಗಾರ ಎಂ. ಎನ್. ಸೀತಾರಾಮಯ್ಯನವರು ಆರಂಭಿಸಿದ ‘ಪೌರವಾಣಿ’ ಪತ್ರಿಕೆಯೂ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರದ ಸ್ಥಾಪನೆ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತು. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತುಮಕೂರಿನ ಎಚ್. ಆರ್. ಗುಂಡೂರಾವ್ ಅವರು ಮುಂದೆ 1954ರಲ್ಲಿ ‘ವಿಜಯವಾಣಿ’ ಪತ್ರಿಕೆಯನ್ನು ಆರಂಭಿಸಿದ್ದು ಕೂಡ ಉಲ್ಲೇಖಾರ್ಹ ವಿಚಾರ.

ಜನತೆಯಲ್ಲಿ ರಾಷ್ಟ್ರೀಯಪ್ರಜ್ಞೆ, ದೇಶಾಭಿಮಾನ ಮೂಡಿಸುವ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಪೋಷಿಸಿದ ಕೀರ್ತಿ ಹೊಂದಿರುವ ತುಮಕೂರು ಜಿಲ್ಲೆಯ ಪತ್ರಿಕೋದ್ಯಮ ಇಂದಿಗೂ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಅಭಿನಂದನೀಯ. ತುಮಕೂರು ಜಿಲ್ಲೆಯ ಅನೇಕ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಮಾಧ್ಯಮರಂಗದಲ್ಲಿ ಹೆಸರು ಮಾಡಿರುವುದು ಕೂಡ ಪ್ರಶಂಸನೀಯ.

- ಸಿಬಂತಿ ಪದ್ಮನಾಭ ಕೆ. ವಿ.

ಬುಧವಾರ, ಆಗಸ್ಟ್ 18, 2021

ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಪತ್ರಿಕೆಗಳು

ವಿದ್ಯಾರ್ಥಿ ಪಥಆಗಸ್ಟ್ 2021 ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳು ವಹಿಸಿದ ಪಾತ್ರ ಅವಿಸ್ಮರಣೀಯ. ಒಂದೆಡೆ ರಾಷ್ಟ್ರೀಯ ಆಂದೋಲನದ ಕಿಚ್ಚನ್ನು ದೇಶದ ಮೂಲೆಮೂಲೆಗೆ ಪಸರಿಸುತ್ತಲೇ, ಇನ್ನೊಂದೆಡೆ ಬ್ರಿಟಿಷರ ಎದೆಯಲ್ಲಿ ನಡುಕವನ್ನು ಹುಟ್ಟಿಸಿದ ಹೆಗ್ಗಳಿಕೆ ಪತ್ರಿಕೆಗಳದ್ದು. ಹಾಗೆ ನೋಡಿದರೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವೂ ಪತ್ರಿಕೋದ್ಯಮದ ಇತಿಹಾಸವೂ ಜತೆಜತೆಯಾಗಿ ಸಾಗುತ್ತದೆ. ಸ್ವಾತಂತ್ರ್ಯ ಚಳುವಳಿ ತೀವ್ರ ಸ್ವರೂಪ ಪಡೆದಂತೆಲ್ಲಾ ಪತ್ರಿಕೋದ್ಯಮದ ಬೇರುಗಳು ಕೂಡ ವಿಸ್ತಾರಗೊಳ್ಳುತ್ತಾ ಹೋದವು. ಸ್ವಾತಂತ್ರ್ಯ ಚಳುವಳಿ, ರಾಷ್ಟ್ರೀಯತೆಯ ಭಾವ ಹಾಗೂ ಪತ್ರಿಕಾಲೋಕಗಳು ಒಟ್ಟೊಟ್ಟಿಗೆ ಬೆಳೆದವು. ಅನೇಕ ಮಂದಿ ಸ್ವಾತಂತ್ರ್ಯ ಹೋರಾಟಗಾರರು ಸ್ವತಃ ಪತ್ರಕರ್ತರಾಗಿದ್ದರು; ಪತ್ರಿಕೆಗಳನ್ನು ಸ್ವಾತಂತ್ರ್ಯ ಹೋರಾಟದ ಪ್ರೇರಕ ಸಾಧನಗಳೆಂದು ಬಲವಾಗಿ ನಂಬಿದ್ದರು.


ಇನ್ನೊಂದು ಪ್ರಮುಖ ವಿಚಾರವೆಂದರೆ, ನಮ್ಮ ಪತ್ರಿಕೋದ್ಯಮದ ಇತಿಹಾಸದ ಒಳಗೆಯೇ ಒಂದು ಸ್ವಾತಂತ್ರ್ಯಕ್ಕಾಗಿನ ಹೋರಾಟದ ಗಾಥೆಯಿದೆ. ಅದು ಪತ್ರಿಕಾ ಸ್ವಾತಂತ್ರ್ಯದ ಹೋರಾಟ; ಪತ್ರಿಕೆಗಳು ಹಾಗೂ ಪತ್ರಕರ್ತರು ತಮ್ಮ ಅಸ್ತಿತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟ. ಪತ್ರಿಕೆಗಳಿಂದ ಯಾವ ಕಾಲಕ್ಕೂ ತಮಗೆ ತೊಂದರೆ ತಪ್ಪಿದ್ದಲ್ಲವೆಂದು ತಿಳಿದ ಬ್ರಿಟಿಷರು ಒಂದರ ಮೇಲೊಂದರತೆ ಪತ್ರಿಕಾ ಶಾಸನಗಳನ್ನು ಜಾರಿಗೊಳಿಸುತ್ತಾ ಹೋದರು. ಪತ್ರಿಕೆಗಳ ಬಾಯಿಮುಚ್ಚಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದರು. ಅದಕ್ಕೆ ಪ್ರತಿಯಾಗಿ ನಮ್ಮ ಪತ್ರಿಕಾಲೋಕವೂ ಇನ್ನಷ್ಟು ಬಲಿಷ್ಟವಾಗುತ್ತಲೇ ಹೋಯಿತು- ಕೆಳಕ್ಕೆ ಬಡಿದಷ್ಟೂ ಹೆಚ್ಚು ಚೈತನ್ಯದಿಂದ ಚಿಮ್ಮುವ ಚೆಂಡಿನ ಹಾಗೆ. ಭಾರತದ ಪತ್ರಿಕೋದ್ಯಮದ ಇತಿಹಾಸವೆಂದರೆ ಪತ್ರಿಕಾ ಸ್ವಾತಂತ್ರ್ಯಕ್ಕಾಗಿನ ನಡೆದ ಹೋರಾಟದ ಇತಿಹಾಸ ಎಂಬ ಮಾತೂ ಇದೆ.

ಭಾರತದ ಮೊದಲ ಪತ್ರಿಕೆ ‘ಬೆಂಗಾಲ್ ಗಜೆಟ್’ (1780) ಅನ್ನು ಆರಂಭಿಸಿದ ಜೇಮ್ಸ್ ಆಗಸ್ಟಸ್ ಹಿಕ್ಕಿಯೇ ಕಂಪೆನಿ ಸರ್ಕಾರದಿಂದ ಸಾಕಷ್ಟು ದಬ್ಬಾಳಿಕೆಗೆ ಒಳಗಾಗಬೇಕಾಯಿತು. ಆತ ಸ್ವತಃ ಈಸ್ಟ್ ಇಂಡಿಯಾ ಕಂಪೆನಿಯ ನೌಕರನಾಗಿದ್ದವನು. ಎರಡು ವರ್ಷ ಪತ್ರಿಕೆ ನಡೆಸುವುದೇ ಅವನಿಗೆ ಹರಸಾಹಸ ಆಗಿಹೋಯಿತು. ಅಷ್ಟರಮಟ್ಟಿಗೆ ಪ್ರಭುತ್ವ ಆತನ ಬೆನ್ನಿಗೆ ಬಿದ್ದಿತ್ತು. ತನ್ನ ಪ್ರಕಟಣೆಯುದ್ದಕ್ಕೂ ಬೆಂಗಾಲ್ ಗೆಜೆಟ್ ಆಗಿನ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್ನ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.

ಭಾರತದ ಪತ್ರಿಕಾ ಇತಿಹಾಸದ ಆರಂಭಿಕ ವರ್ಷಗಳಲ್ಲಿ ಹೆಚ್ಚಿನ ಪತ್ರಿಕೆಗಳನ್ನು ಯುರೋಪಿಯನ್ನರೇ ಆರಂಭಿಸಿದ್ದರು. ಕುತೂಹಲಕರ ಅಂಶವೆಂದರೆ ಭಾರತದ ಸ್ವಾತಂತ್ರ್ಯವನ್ನು ಬೆಂಬಲಿಸಿದವರಲ್ಲೂ ಸಾಕಷ್ಟು ಮಂದಿ ಯುರೋಪಿಯನ್ನರಿದ್ದಾರೆ. ಅವರಲ್ಲಿ ಅನೇಕರು ಪತ್ರಕರ್ತರೂ ಆಗಿದ್ದರು. ‘ಕಲ್ಕತ್ತ ಜರ್ನಲ್’ (1818) ಆರಂಭಿಸಿದ ಜೇಮ್ಸ್ ಸಿಲ್ಕ್ ಬಕಿಂಗ್‌ಹ್ಯಾಮ್ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯುರೋಪಿಯನ್ನರಲ್ಲಿ ಮೊದಲಿಗ. ಇನ್ನೊಬ್ಬ ಬ್ರಿಟಿಷ್ ಪತ್ರಕರ್ತ ಬಿ. ಜಿ. ಹಾರ್ನಿಮನ್ ಭಾರತದ ಸ್ವಾತಂತ್ರ್ಯದ ಪ್ರಬಲ ಪ್ರತಿಪಾದಕನಾಗಿದ್ದು ಬ್ರಿಟಿಷರಿಗೆ ನುಂಗಲಾರದ ತುತ್ತಾಗಿದ್ದ. ಅನೇಕ ಭಾರತೀಯ ಪತ್ರಕರ್ತರಿಗೆ ಸ್ಫೂರ್ತಿಯಾಗಿದ್ದ.

‘ಭಾರತೀಯ ಪುನರುತ್ಥಾನದ ಪಿತಾಮಹ’ ಎಂದು ಹೆಸರಾಗಿದ್ದ ಶ್ರೇಷ್ಠ ಸಮಾಜಸುಧಾರಕ ರಾಜಾ ರಾಮಮೋಹನ ರಾಯರಿಗೂ ತಮ್ಮ ಧ್ಯೇಯೋದ್ದೇಶಗಳನ್ನು ಸಾಧಿಸಲು ಪತ್ರಿಕೆಗಳು ಪ್ರಮುಖ ಪರಿಕರಗಳಾಗಿದ್ದವು. ಜನರನ್ನು ವೈಚಾರಿಕವಾಗಿ ತಲುಪಲು ಪತ್ರಿಕೆ ಒಂದು ಸಮರ್ಥ ಮಾಧ್ಯಮ ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಂಡ ಮೊದಲ ಭಾರತೀಯರಾದ ಅವರು ಸಂಬದ್ ಕೌಮುದಿ, ಮೀರತ್-ಉಲ್-ಅಕ್ಬರ್, ಬ್ರಾಹ್ಮಿನಿಕಲ್ ಮ್ಯಾಗಜಿನ್, ಬ್ರಾಹ್ಮಿನ್ ಸೇವಡಿ ಪತ್ರಿಕೆಗಳನ್ನು ನಡೆಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಅವರು ನಡೆಸಿದ ಹೋರಾಟವೂ ದೊಡ್ಡದೇ. 1823ರಲ್ಲಿ ಕಂಪೆನಿ ಸರ್ಕಾರ ಪತ್ರಿಕಾ ನಿಯಂತ್ರಣ ಕಾಯ್ದೆ ಜಾರಿಮಾಡಲು ಹೊರಟಾಗ ಅದನ್ನು ಸಾರ್ವಜನಿಕವಾಗಿ ವಿರೋಧಿಸಿ ಸರ್ಕಾರಕ್ಕೆ ಬಲವಾದ ಸಂದೇಶ ಕಳಿಸಿದವರು ಅವರು. ಸಮಾನ ಮನಸ್ಕರೊಂದಿಗೆ ಅವರು ಸರ್ಕಾರಕ್ಕೆ ಸಲ್ಲಿಸಿದ ಲಿಖಿತ ಮನವಿ ‘ಭಾರತದ ಪತ್ರಿಕಾಲೋಕದ ಏರೋಪಗಿಟಿಕಾ’ ಎಂದೇ ಪ್ರಸಿದ್ಧ. ರಾಮಮೋಹನರಾಯರಿಗೆ ‘ದೇಶಭಾಷಾ ಪತ್ರಿಕೋದ್ಯಮದ ಪಿತಾಮಹ’ ಎಂಬ ಶ್ರೇಷ್ಠ ಮನ್ನಣೆಯೂ ಇದೆ.

1857ರ ಸಂಗ್ರಾಮದ ಬಳಿಕ:

ಭಾರತೀಯ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕುದೆಸೆ ಒದಗಿದ್ದು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಳಿಕ. ಒಂದು ದೃಷ್ಟಿಯಲ್ಲಿ ಈ ಘಟನೆ ಭಾರತೀಯ ವೃತ್ತಪತ್ರಿಕೆಗಳ ಬೆಳವಣಿಗೆಗೆ ತಾತ್ಕಾಲಿಕ ಅಡ್ಡಿಯುಂಟುಮಾಡಿದರೂ, ಅಲ್ಲಿಂದ ನಂತರ ಪತ್ರಿಕೆಗಳು ಭಿನ್ನ ಹಾದಿ ಹಿಡಿದವು. ಶಿಶಿರ್ ಕುಮಾರ್ ಘೋಷರ ‘ಅಮೃತ ಬಜಾರ್ ಪತ್ರಿಕೆ’, ತಿಲಕರ ‘ಕೇಸರಿ’, ಜಿ. ಸುಬ್ರಹ್ಮಣ್ಯ ಅಯ್ಯರ್ ಹಾಗೂ ವೀರರಾಘವಾಚಾರಿಯವರ ‘ದಿ ಹಿಂದೂ’, ಪಂಡಿತ ಮದನ ಮೋಹನ ಮಾಳವೀಯರ ‘ಅಭ್ಯುದಯ’ ಮೊದಲಾದ ಪತ್ರಿಕೆಗಳು ಬ್ರಿಟಿಷ್ ವಿರೋಧಿ ಸತ್ಯವನ್ನು ಹೇಳುವ ಕೆಲಸವನ್ನು ಸ್ವಯಂಪ್ರೇರಣೆಯಿಂದ ಹಾಗೂ ದಿಟ್ಟತನದಿಂದ ಮಾಡುತ್ತಾಹೋದವು.

ಬ್ರಿಟಿಷರ ಕಣ್ಣಲ್ಲಿ ಸಿಪಾಯಿ ದಂಗೆ ಎನಿಸಿಕೊಂಡ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪತ್ರಿಕೆಗಳಿಂದ ದೊರೆತ ವ್ಯಾಪಕ ಬೆಂಬಲ ನೋಡಿ, ಅವುಗಳನ್ನು ಹೇಗಾದರೂ ಮಾಡಿ ಹೊಸಕಿ ಹಾಕುವ ಯೋಚನೆಗಳು ಬ್ರಿಟಿಷರಲ್ಲಿ ಮೂಡತೊಡಗಿದವು.  ಅಲ್ಲಿಂದ ಪತ್ರಿಕಾ ನಿರ್ಬಂಧಗಳ ಸರಣಿ ಆರಂಭವಾಯಿತು. 1857 ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹೊಸದೊಂದು ಅಧ್ಯಾಯವಾಗಿದ್ದರೆ, ಭಾರತೀಯ ಪತ್ರಿಕೆಗಳ ಪಾಲಿಗೆ ಕರಾಳಯುಗದ ಆರಂಭವೂ ಆಯಿತು. 1857ರಲ್ಲೇ ಜಾರಿಗೆ ಬಂದ ಪತ್ರಿಕಾ ಕಾನೂನಿಗೆ ಪತ್ರಿಕೆ ಹಾಗೂ ಪುಸ್ತಕಗಳ ಪ್ರಸಾರವನ್ನು ನಿಯಂತ್ರಿಸುವ ಉದ್ದೇಶವೇ ಇತ್ತು. ಅದರ ಮೊದಲ ಬಲಿಯೇ ದ್ವಾರಕಾನಾಥ ಠಾಕೂರ್ ಮತ್ತು ಇತರ ದೇಶಪ್ರೇಮಿಗಳು ನಡೆಸುತ್ತಿದ್ದ ‘ಬೆಂಗಾಲ್ ಹರಕಾರು’ ಎಂಬ ಪತ್ರಿಕೆ.

ದೇಶಭಾಷಾ ಪತ್ರಿಕೆಗಳಾದ ಬಾಂಬೆ ಸಮಾಚಾರ, ಜಾಮೆ-ಜಮ್‌ಷೀರ್, ರಾಸ್ತ್ಗಾಫ್ತರ್ ಪತ್ರಿಕೆಗಳು ಮೊದಲನೇ ಸ್ವಾತಂತ್ರ್ಯ ಸಂಗ್ರಾಮವನ್ನು ಕೊಂಡಾಡಿದವು. ಅದರ ಮಹತ್ವವನ್ನು ಪ್ರಭಾವಶಾಲಿಯಾಗಿ ಓದುಗರಿಗೆ ತಲುಪಿಸಿದವು. ಇದನ್ನು ಮುಂಬೈಯ ಗುಜರಾತಿ ಪತ್ರಿಕಾ ಲೋಕವೂ ಬೆಂಬಲಿಸಿತು. ಹರೀಶ್‌ಚಂದ್ರ ಮುಖರ್ಜಿಯವರ ‘ಹಿಂದೂ ಪೇಟ್ರಿಯಟ್’ ಎಂಬ ಪತ್ರಿಕೆಯದ್ದು ಇಲ್ಲಿ ಪ್ರಮುಖ ಪಾತ್ರ. 

ಈಶ್ವರಚಂದ್ರ ವಿದ್ಯಾಸಾಗರ ಮತ್ತು ದ್ವಾರಕಾನಾಥ ವಿದ್ಯಾಭೂಷಣರು ನಡೆಸುತ್ತಿದ್ದ ‘ಸೋಮ್ ಪ್ರಕಾಶ್’ ಎಂಬ ಬಂಗಾಳಿ ಪತ್ರಿಕೆ ರಾಜಕೀಯ ಸ್ವಾತಂತ್ರ್ಯ ತತ್ವಗಳನ್ನು ಪ್ರತಿಪಾದಿಸಿತು. ಅದರಲ್ಲಿ ಪ್ರಕಟವಾಗುತ್ತಿದ್ದ ಬಿರುಸಾದ ಸಂಪಾದಕೀಯ, ಲೇಖನಗಳನ್ನು ಎದುರಿಸುವ ಶಕ್ತಿ ಸರ್ಕಾರಕ್ಕೆ ಇದ್ದಂತಿರಲಿಲ್ಲ. ಅದನ್ನೂ ಪತ್ರಿಕಾ ಕಾನೂನು ತಡೆದಾಗ ‘ನವಾಭಿ ಬಾಕರ್’ ಎಂಬ ಹೊಸ ಹೆಸರಿನೊಂದಿಗೆ ಪ್ರಕಟವಾಗತೊಡಗಿತು.

ಲಾರ್ಡ್ ಲಿಟ್ಟನ್ ಪ್ರಕಾರವಂತೂ ಸರ್ಕಾರದ ವಿರುದ್ಧ ಯಾವುದೇ ಸುದ್ದಿ, ಲೇಖನವನ್ನು ಪ್ರಕಟಿಸುವುದು ಕೂಡ ರಾಜದ್ರೋಹಕ್ಕೆ ಸಮನಾಗಿತ್ತು. ಈ ರಾಜದ್ರೋಹವನ್ನು ಹತ್ತಿಕ್ಕಲೆಂದೇ ಆತ 1878ರಲ್ಲಿ ಇನ್ನೊಂದು ಪತ್ರಿಕಾಶಾಸವನ್ನು ಜಾರಿಗೆ ತಂದ. ಇದರಲ್ಲಿ ದೇಶಭಾಷಾ ಪತ್ರಿಕೆಗಳ ಸುದ್ದಿನಿಯಂತ್ರಣಕ್ಕೆ ಅವಕಾಶವಿತ್ತು. ಆಗಷ್ಟೇ ಬೆಳೆಯತ್ತಿದ್ದ ಭಾರತೀಯ ಭಾಷೆಗಳ ಪತ್ರಿಕೋದ್ಯಮಕ್ಕೂ, ಸ್ವಾತಂತ್ರ್ಯ ಹೋರಾಟಕ್ಕೂ ಈ ಶಾಸನ ಕೊಡಲಿಪೆಟ್ಟು ನೀಡಿದ ಹಾಗಾಯಿತು. ಈ ಶಾಸನದ ಏಟಿನಿಂದ ತಪ್ಪಿಸಿಕೊಳ್ಳಲು ‘ಅಮೃತ ಬಜಾರ್ ಪತ್ರಿಕಾ’ ರಾತೋರಾತ್ರಿ ಬಂಗಾಳಿಯಿAದ ಇಂಗ್ಲಿಷ್ ಭಾಷೆಗೆ ಬದಲಾಯಿತು.

ಅಖಿಲ ಭಾರತ ಕಾಂಗ್ರೆಸ್‌ನ ಹುಟ್ಟು ಪತ್ರಿಕೋದ್ಯಮಕ್ಕೆ ಹೊಸ ಹುರುಪು ನೀಡಿತು. ದಿನಪತ್ರಿಕೆಗಳ ಬೆಳವಣಿಗೆ ದೃಷ್ಟಿಯಿಂದ ಪತ್ರಿಕಾರಂಗದಲ್ಲಿ ಸಾಕಷ್ಟು ಉತ್ಸಾಹ ಕಾಣಿಸಿಕೊಂಡಿತು. ಭಾರತೀಯ ನಾಯಕರುಗಳ ಭಾಷಣಗಳನ್ನು, ರಾಜಕೀಯ ವಿದ್ಯಮಾನಗಳನ್ನು ವಿವರವಾಗಿ ಪ್ರಕಟಿಸುವ ಪ್ರವೃತ್ತಿ ಆರಂಭವಾಯಿತು. ‘ದೇಶಭಾಷಾ ಪತ್ರಿಕೆಗಳ ಭಾಷೆಯಲ್ಲಿ ಸಮತೂಕ ತರುವ ಮತ್ತು ಸಾರ್ವಜನಿಕ ಚರ್ಚೆಗಳಲ್ಲಿ ನ್ಯಾಯವಿಮರ್ಶಕ ಭಾವನೆಯನ್ನುಂಟುಮಾಡುವ’ ಉದ್ದೇಶದಿಂದ 1891ರಲ್ಲಿ ಭಾರತದಲ್ಲಿ ಪ್ರಥಮ ಪತ್ರಿಕಾ ಸಂಘಟನೆ ‘ನೇಟಿವ್ ಪ್ರೆಸ್ ಅಸೋಯೇಶನ್’ ಆರಂಭವಾದದ್ದು ಕೂಡ ಈ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯೇ.

ತಿಲಕರ ಮರಾಠ ಹಾಗೂ ಕೇಸರಿ ಪತ್ರಿಕೆಗಳು ಭಾರತೀಯರ ಅಂತರಂಗವನ್ನು ಬಹುವಾಗಿ ತಟ್ಟಿದವು. ತಿಲಕರು ತಮ್ಮ ವಾಕ್ಚಾತುರ್ಯದಿಂದ ಹೋರಾಟಗಾರರನ್ನು ಬಡಿದೆಬ್ಬಿಸಬಲ್ಲ ಸಾಮರ್ಥ್ಯ ಹೊಂದಿದ್ದರೆ ಅವರ ಲೇಖನಗಳು ಕ್ರಾಂತಿಯ ಕಿಡಿಯನ್ನು ಹಚ್ಚುವಷ್ಟು ಪ್ರಖರವಾಗಿದ್ದವು. 1897ರಲ್ಲಿ ಅವರು ಕೇಸರಿಯಲ್ಲಿ ಬರೆದ ಲೇಖನವೊಂದು ರಾಜದ್ರೋಹಕರವಾಗಿದೆಯೆಂದು ಆರೋಪಿಸಿ ಎರಡು ವರ್ಷ ಕಠಿಣ ಶಿಕ್ಷೆ ವಿಧಿಸಲಾಯಿತು; ಇನ್ನೊಂದು ಸಂದರ್ಭವನ್ನು ಬಳಸಿ ಆರು ವರ್ಷ ಗಡೀಪಾರು ಮಾಡಲಾಯಿತು.

20ನೇ ಶತಮಾನದಲ್ಲಿ:

20ನೇ ಶತಮಾನದ ಆರಂಭ ರಾಷ್ಟ್ರೀಯತೆ ಒಂದು ಧರ್ಮವಾಗಿ ಬೆಳೆದ ಕಾಲ. 1905ರ ಬಂಗಾಳದ ವಿಭಜನೆಯನ್ನು ಪತ್ರಿಕೆಗಳು ವಿರೋಧಿಸಿ ಬರೆದವು. ಬ್ರಿಟಿಷ್ ಸರ್ಕಾರದ ಒಡೆದು ಆಳುವ ನೀತಿಯನ್ನು ಟೀಕಿಸಿದವು. ಹಾಗೆಯೇ, ಸ್ವದೇಶಿ ಚಳುವಳಿಯನ್ನು ಬೆಂಬಲಿಸಿದವು. ಆದರೆ ಮಾರ್ಲೆ ಮಿಂಟೋ ಸುಧಾರಣೆಗಳ ವಿಷಯದಲ್ಲಿ ಉದಾರವಾದಿ ಮತ್ತು ಉಗ್ರರಾಷ್ಟ್ರೀಯವಾದಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾದಂತೆ ಪತ್ರಿಕಾಲೋಕದಲ್ಲೂ ಎರಡು ಪಂಗಡಗಳಾದವು. ಇದೊಂದು ರೀತಿಯಲ್ಲಿ ಪತ್ರಿಕೆಗಳ ಸಂಘಟಿತ ಹೋರಾಟಕ್ಕೆ ಆದ ಒಂದು ಸಣ್ಣ ಹಿನ್ನಡೆಯೇ. ಆದರೂ ಎರಡೂ ಗುಂಪಿನ ಪತ್ರಿಕೆಗಳು ತಮ್ಮದೇ ಆದ ರೀತಿಯಲ್ಲಿ ಹೋರಾಟದ ಕಾವು ಉಳಿಸಿಕೊಂಡವು. ಸುಧಾರಣೆಗಳು ಅಪಕ್ಷವಾಗಿಯೆಂದು ಟೀಕಿಸಿದವು. ಸುಧಾರಣೆಗಳನ್ನು ಖಂಡಿಸಿದ ರಾಷ್ಟ್ರೀಯವಾದಿ ನಾಯಕರಿಗೆ ಜೈಲುಶಿಕ್ಷೆಯಾಯಿತು. ಪೂನಾದ ‘ಕೇಸರಿ’ ಹಾಗೂ ನಾಗಪುರದ ‘ದೇಶಸೇವಕ’ ಪತ್ರಿಕೆಗಳು ಉಗ್ರಪಂಥವನ್ನು ಬೆಂಬಲಿಸಿದವು. 1908ರ ಪತ್ರಿಕಾ ಶಾಸನದ ಪರಿಣಾಮವಾಗಿ ಏಳು ಮುದ್ರಣಾಲಯಗಳ ಜಪ್ತಿಯಾಯಿತು, ಐವರು ಸಂಪಾದಕರ ಮೇಲೆ ಮೊಕದ್ದಮೆ ಹೂಡಲಾಯಿತು, ಹಾಗೂ ಅನೇಕರಿಗೆ ಎಚ್ಚರಿಕೆ ನೀಡಲಾಯಿತು.

1910ರ ವೇಳೆಗೆ ಮಾಧವರಾವ್ ಮಧ್ಯೆ ಎಂಬವರು ‘ಹಿತವಾದ’ ಎಂಬ ಮರಾಠಿ ಪತ್ರಿಕೆಯನ್ನು ಆರಂಭಿಸಿದರು. 1913ರಲ್ಲಿ ಸರ್ವೆಂಟ್ಸ್ ಆಫ್ ಇಂಡಿಯಾ ಪತ್ರಿಕೆ ಅದರ ಮಾಲೀಕತ್ವ ವಹಿಸಿಕೊಂಡು ಇಂಗ್ಲಿಷ್ ಪತ್ರಿಕೆಯನ್ನಾಗಿ ಪರಿವರ್ತಿಸಿತು. ಅದೇ ವರ್ಷ ಫಿರೋಜ್ ಷಾ ಮೆಹ್ತಾ ‘ಬಾಂಬೆ ಕ್ರಾನಿಕಲ್’ ಆರಂಭಿಸಿದರು. ಪ್ರಸಿದ್ಧ ಪತ್ರಕರ್ತ ಬಿ. ಜಿ. ಹಾರ್ನಿಮನ್ ಅದರ ಸಂಪಾದಕರಾಗಿದ್ದರು. ಅನೇಕ ಸಂಕಷ್ಟಗಳ ನಡುವೆಯೂ ಸ್ವಾತಂತ್ರ್ಯ ಚಳುವಳಿಗೆ ಬೆಂಬಲ ನೀಡಿದ ಹಾರ್ನಿಮನ್ ಸ್ವತಂತ್ರ, ಮುಕ್ತ ಹಾಗೂ ನಿರ್ಭೀತ ಪತ್ರಿಕೋದ್ಯಮದ ಪ್ರವರ್ತಕರೂ ಆಗಿದ್ದರು.

ಆ ಕಾಲದ ಉರ್ದು ಪತ್ರಿಕೆಗಳು ಬ್ರಿಟಿಷರನ್ನು ಟೀಕಿಸಲು ಹಿಂಜರಿಯುತ್ತಿದ್ದ ಸಂದರ್ಭ ಮೌಲಾನಾ ಅಬುಲ್ ಕಲಾಂ ಆಜಾದ್ ‘ಅಲ್-ಹಿಲಾಲ್’ ಸ್ಥಾಪಿಸಿದರು. ಅಸಹಕಾರ ಚಳುವಳಿ ಉತ್ತುಂಗದಲ್ಲಿದ್ದ ಕಾಲದಲ್ಲಿ ಗಾಂಧೀವಾದಿ ಶಿವಪ್ರಸಾದ್ ಗುಪ್ತಾ ‘ಆಜ್’ ಎಂಬ ಹಿಂದಿ ಪತ್ರಿಕೆಯನ್ನು ಆರಂಭಿಸಿದರು.

1919ರ ಮಾಂಟೆಗೋ ಚೆಲ್ಮ್ಸ್’ಫರ್ಡ್  ಸುಧಾರಣೆಗಳ ಸಂದರ್ಭದಲ್ಲಿ ಮಂದಗಾಮಿಗಳು ತಮ್ಮ ಪಂಥವನ್ನು ಬಲಪಡಿಸಲು ಹೊಸ ಪತ್ರಿಕೆಯೊಂದರ ಅವಶ್ಯಕತೆ ಮನಗಂಡರು. ಪರಿಣಾವಾಗಿ ಪಂಡಿತ ಮದನಮೋಹನ ಮಾಳವೀಯರ ನೇತೃತ್ವದಲ್ಲಿ ‘ಲೀಡರ್’ ಎಂಬ ದಿನಪತ್ರಿಕೆ ಹುಟ್ಟಿಕೊಂಡಿತು. ಫಿರೋಜ್ ಷಾ ಮೆಹ್ತಾ, ಗೋಪಾಲಕೃಷ್ಣ ಗೋಖಲೆ ಮುಂತಾದವರು ಇದಕ್ಕೆ ಬೆಂಬಲ ನೀಡಿದರು. ಮಾಂಟೆಗೋ ಚೆಲ್ಮ್ಸ್’ಫರ್ಡ್  ಸುಧಾರಣೆಗಳ ಕಾರಣದಿಂದ ಭಾರತೀಯರಲ್ಲಿ ತೀವ್ರ ಅಸಮಾಧಾನ ಉಂಟಾದ ಹಿನ್ನೆಲಯಲ್ಲಿ ಅವುಗಳನ್ನು ಮರುಪರಿಶೀಲಿಸುವ ಉದ್ದೇಶದಿಂದ ಸೈಮನ್ ಆಯೋಗ ನೇಮಕವಾಯಿತು. ಆದರೆ ಸ್ವಾತಂತ್ರ್ಯ ಹೋರಾಟಗಾರರು ಇದಕ್ಕೆ ಪಂಥಗಳ ಭೇದವಿಲ್ಲದೆ ಒಕ್ಕೊರಲ ವಿರೋಧ ವ್ಯಕ್ತಪಡಿಸಿದರು ಮತ್ತು ಇದಕ್ಕೆ ಭಾರತದ ಪತ್ರಿಕೆಗಳು ಕೂಡ ದೊಡ್ಡ ಮಟ್ಟದ ಪ್ರಚಾರ ನೀಡಿದವು. ಪತ್ರಿಕೆಗಳು ತಮ್ಮ ಮುಕ್ಕಾಲು ಭಾಗವನ್ನೂ ಸೈಮನ್ ಆಯೋಗದ ವಿರೋಧದ ಸುದ್ದಿಗಳಿಗೆ ಮೀಸಲಿರಿಸಿದವು.

ಹಿಂದ್ ಸ್ವರಾಜ್ಯ, ಯುಗಾಂತರ, ಗುಜರಾತ್, ಶಕ್ತಿ, ಕಾಳ್, ಧರ್ಮ, ಹಿತೈಷಿ, ಖುಲ್ನವಾಸಿ, ಕಲ್ಯಾಣಿ, ಬೀದಾರಿ, ಪ್ರೇಮ, ವರ್ತಮಾನ್, ಆಕಾಶ್, ಕೇಸರಿ, ಕರ್ನಾಟಕ ವೈಭವ, ರಾಷ್ಟçಮತ, ವಿಶ್ವವೃತ್ತ, ನ್ಯೂ ಇಂಡಿಯಾ, ವಂದೇ ಮಾತರಂ, ಸಂಧ್ಯಾ, ಬೆಂಗಾಲಿ, ಹಿತವಾದಿ, ಡೆಕ್ಕಾ ಗಜೆಟ್, ನವಶಕ್ತಿ, ಸಹಾಯಕ್ ಮುಂತಾದ ಪತ್ರಿಕೆಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರದ ಗದಾಪ್ರಹಾರಕ್ಕೆ ತುತ್ತಾದವು. ಜಲಿಯನ್ ವಾಲಾಭಾಗ್ ಹತ್ಯಾಂಕಾಂಡವನ್ನು ಪತ್ರಿಕೆಗಳು ತೀವ್ರವಾಗಿ ವಿರೋಧಿಸಿದವು. ತಮಗೊದಗಬಹುದಾದ ತೊಂದರೆಗಳನ್ನೂ ಲೆಕ್ಕಿಸದೆ ಬ್ರಿಟಿಷರ ಪೈಶಾಚಿಕ ಕೃತ್ಯವನ್ನು ಉಗ್ರ ಪದಗಳಲ್ಲಿ ಜರೆದವು. 

ಮೂಲತಃ ಭಾರತದವರಲ್ಲದೇ ಹೋದರೂ ಸ್ವಾತಂತ್ರ್ಯ ಆಂದೋಲನವನ್ನು ಬೆಂಬಲಿಸಿದವರಲ್ಲಿ ಆ್ಯನಿಬೆಸೆಂಟ್ ಕೂಡ ಒಬ್ಬರು. ಅವರು ಅನೇಕ ರಾಷ್ಟ್ರೀಯವಾದಿ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದರು. ತಿಲಕರ ಬೆಂಬಲದೊಂದಿಗೆ ಹೋಂ ರೂಲ್ ಚಳುವಳಿ ಆರಂಭಿಸಿದ ಅವರು ಅದಕ್ಕೆ ಪೂರಕವಾಗಿಯೇ ‘ಕಾಮನ್ ವೀಲ್’ ಹಾಗೂ ‘ನ್ಯೂ ಇಂಡಿಯಾ’ ಪತ್ರಿಕೆಗಳನ್ನು ಹೊರತಂದರು. ಸರ್ಕಾರ ಆ್ಯನಿಬೆಸೆಂಟರನ್ನೂ ರಾಜದ್ರೋಹದ ಆರೋಪದಲ್ಲಿ ಜೈಲಿಗೆ ತಳ್ಳಿದಾಗ ಮದ್ರಾಸ್‌ನ ‘ದಿ ಹಿಂದೂ’ ಅವರ ಬೆಂಬಲಕ್ಕೆ ನಿಂತಿತು. ಅವರನ್ನು ‘ಭಾರತೀಯ ಸ್ವಾತಂತ್ರ್ಯದ ನಂದಾದೀಪ’ ಎಂದು ಅರ್ಹವಾಗಿಯೇ ಕರೆಯಲಾಗಿದೆ. 1920ರಲ್ಲಿ ಮದ್ರಾಸ್ ಸಮೀಪದ ಅಡ್ಯಾರಿನಲ್ಲಿ ದೇಶದ ಮೊತ್ತಮೊದಲ ಪತ್ರಿಕಾ ಶಿಕ್ಷಣವನ್ನು ಆರಂಭಿಸಿದ ಹೆಗ್ಗಳಿಕೆಯೂ ಆ್ಯನಿಬೆಸೆಂಟರದ್ದೇ. ‘ನ್ಯೂ ಇಂಡಿಯಾ’ ಕಚೇರಿಯೇ ಕಲಿಕಾರ್ಥಿಗಳ ಪ್ರಯೋಗಾಲಯ ಆಗಿತ್ತು.

ಮೋತಿಲಾಲ ನೆಹರು ಹಾಗೂ ಸಿ. ಆರ್. ದಾಸ್ ಸ್ಥಾಪಿಸಿದ್ದ ಸ್ವರಾಜ್ಯ ಪಕ್ಷ ತನ್ನ ಅಭಿಪ್ರಾಯಗಳ ಪ್ರಸಾರಕ್ಕಾಗಿ ಅದಾಗಲೇ ಆಕಾಲಿ ಸಿಖ್ಖರಿಂದ ಸ್ಥಾಪಿತವಾಗಿದ್ದ ‘ಹಿಂದೂಸ್ಥಾನ್ ಟೈಮ್ಸ್’ ಅನ್ನು ಖರೀದಿಸಿದರು. ಅದಕ್ಕೆ ಮದನ ಮೋಹನ ಮಾಳವೀಯ, ಲಾಲಾ ಲಜಪತರಾಯ್, ರಾಜಾ ನರೇಂದ್ರನಾಥ್, ಎಂ. ಆರ್. ಜಯಕರ್ ಬೆಂಬಲವಿತ್ತು. ಬಂಗಾಳ ಪ್ರಾಂತದಲ್ಲಿ ಸ್ವರಾಜ್ಯ ಪಕ್ಷಕ್ಕೆ ಬೆಂಬಲ ನೀಡಲು ಸಿ. ಆರ್. ದಾಸ್ 1923ರಲ್ಲಿ ‘ಫಾರ್ವರ್ಡ್’ ಎಂಬ ಪತ್ರಿಕೆ ಆರಂಭಿಸಿದರು. ಅವರು ಅರವಿಂದ ಘೋಷರ ‘ವಂದೇ ಮಾತರಂ’ ಪತ್ರಿಕೆಗೆ ಕ್ರಮವಾಗಿ ಲೇಖನ ಬರೆಯುತ್ತಿದ್ದರು.

ಗಾಂಧೀಯುಗದ ಪತ್ರಿಕೋದ್ಯಮ:

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪ್ರವೇಶ ಹೇಗೆ ಹೊಸ ಅಧ್ಯಾಯವನ್ನು ಆರಂಭಿಸಿತೋ, ಭಾರತೀಯ ಪತ್ರಿಕೋದ್ಯಮದಲ್ಲೂ ಹೊಸ ಹಾದಿಯನ್ನು ತೆರೆಯಿತು. ಗಾಂಧೀಜಿಯವರು ಸ್ವತಃ ಅಭಿಜಾತ ಪತ್ರಕರ್ತರಾಗಿದ್ದುದೇ ಇದಕ್ಕೆ ಪ್ರಮುಖ ಕಾರಣ. ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ‘ಇಂಡಿಯನ್ ಒಪಿನಿಯನ್’ ಪತ್ರಿಕೆ ನಡೆಸಿದ, ಅದರ ಮೂಲಕ ಹೋರಾಟಗಳನ್ನು ಸಂಘಟಿಸಿದ ಅನುಭವವಿತ್ತು. ತಮ್ಮ ತತ್ವ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದಕ್ಕೆ ಗಾಂಧೀಜಿಯವರಿಗೆ ಪತ್ರಿಕೆಗಳು ಪ್ರಧಾನ ಸಾಧನಗಳಾಗಿದ್ದವು. ಈ ವಿಚಾರದಲ್ಲಿ ಇಂಗ್ಲಿಷ್ ಪತ್ರಿಕೆಗಳಿಗಿಂತಲೂ ದೇಶಭಾಷಾ ಪತ್ರಿಕೆಗಳು ಹೆಚ್ಚಿನ ಪಾತ್ರ ವಹಿಸಬಲ್ಲವು ಎಂದು ಅವರಿಗೆ ತಿಳಿದಿತ್ತು. ಸತ್ಯ, ಅಹಿಂಸೆ, ಸತ್ಯಾಗ್ರಹ, ಚರಕ, ಖಾದಿ, ಪಾನನಿರೋಧ ಮೊದಲಾದ ಅವರ ವಿಶಿಷ್ಟ ಚಿಂತನೆಗಳನ್ನು ಪಸರಿಸಿ ಹಳ್ಳಿಹಳ್ಳಿಗೂ ಗಾಂಧೀವಾದವನ್ನು ಒಯ್ದ ಕೀರ್ತಿ ಪತ್ರಿಕೆಗಳಿಗೆ ಸಲ್ಲುತ್ತದೆ. ಅವರು ನಡೆಸಿದ ‘ಯಂಗ್ ಇಂಡಿಯಾ’, ‘ನವಜೀವನ’ ಹಾಗೂ ‘ಹರಿಜನ’ ಪತ್ರಿಕೆಗಳು ಕೂಡ ಅವರ ಒಟ್ಟಾರೆ ಹೋರಾಟದ ಮಾದರಿಯನ್ನೇ ಅನುಸರಿಸುತ್ತವೆ.

ಗಾಂಧೀಜಿಯವರ ಲೇಖನಗಳು ದೇಶದಾದ್ಯಂತ ವಿವಿಧ ಪತ್ರಿಕೆಗಳಲ್ಲಿ ಹಾಗೂ ವಿವಿಧ ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದವು. ಸರಳ ಹಾಗೂ ನೇರ ವಾಕ್ಯಗಳ ಪ್ರಭಾವಶಾಲಿ ಬರವಣಿಗೆ ಅವರಿಗೆ ಕರತಲಾಮಲಕವಾಗಿತ್ತು. ಅಲಂಕಾರಿಕ, ಉತ್ಪೆçÃಕ್ಷೆಯ ಭಾಷೆಯಲ್ಲಿ ಅವರು ಬರೆಯುತ್ತಿರಲಿಲ್ಲ. ವಾಸ್ತವಾಂಶಗಳಿAದ ದೂರಸರಿಯುತ್ತಿರಲಿಲ್ಲ. ವಿವೇಚನಾರಹಿತ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ವಿಚಾರಗಳನ್ನು ಹರಡುವಲ್ಲಿ ಸುದ್ದಿಪತ್ರಿಕೆಗಳು ಶಕ್ತಿಯುತ ಮಾಧ್ಯಮವಾಗಬಲ್ಲವು ಎಂಬುದನ್ನು ಅವರು ಅರಿತಿದ್ದರು. 1922ರಲ್ಲಿ ‘ಶೇಕಿಂಗ್ ದಿ ಮೀನ್’ ಎಂಬ ಲೇಖನದಲ್ಲಿ ಸರ್ಕಾರವನ್ನು ಉಗ್ರವಾಗಿ ಟೀಕಿಸಿದ್ದಕ್ಕೆ ರಾಷ್ಟçದ್ರೋಹದ ಆರೋಪದಲ್ಲಿ 6 ವರ್ಷ ಜೈಲುಶಿಕ್ಷೆಯಾಯಿತು.

ಅಸಹಕಾರ ಚಳುವಳಿ, ಕಾನೂನು ಭಂಗ ಚಳುವಳಿ ಹಾಗೂ ಕ್ವಿಟ್ ಇಂಡಿಯಾ ಹೋರಾಟಗಳಲ್ಲೂ ಪತ್ರಿಕೆಗಳು ಭಾಗವಹಿಸಿದ ರೀತಿ ಅನನ್ಯ. ಅಸಹಕಾರ ಚಳುವಳಿ ಆರಂಭವಾದಾಗ ಅದಕ್ಕೆ ಉತ್ತೇಜನ ಕೊಡುವ ಲೇಖನಗಳನ್ನು ಪ್ರಕಟಿಸುವ ಪತ್ರಿಕೆಗಳ ಮೇಲೆ ಕ್ರಮ ಕೈಗೊಳ್ಳುವ ಹೊಸ ಕಲಂ ಅನ್ನು ಆಗಿನ ಪತ್ರಿಕಾ ಶಾಸನಕ್ಕೆ ಸೇರಿಸಲಾಯಿತು. 1937ರಲ್ಲೂ ಇನ್ನೂ ಎರಡು ಹೊಸ ಕಾನೂನುಗಳನ್ನು ಜಾರಿಗೊಳಿಸಲಾಯಿತು. ಗಾಂಧೀಜಿಯವರ ದಂಡಿ ನಡಿಗೆಯನ್ನು ಪತ್ರಿಕೆಗಳು ಚೆನ್ನಾಗಿಯೇ ಬೆಂಬಲಿಸಿದವು. ಉಪ್ಪಿನ ಮೇಲೆ ಬ್ರಿಟಿಷರು ವಿಧಿಸಿದ ತೆರಿಗೆಯನ್ನು ಕಟುಶಬ್ದಗಳಿಂದ ಟೀಕಿಸಿದವು. ಇದೇ ಸಂದರ್ಭದಲ್ಲಿ ಜಾರಿಯಾದ ಭಾರತ ಪತ್ರಿಕೆಗಳ ತುರ್ತು ಶಾಸನಕ್ಕೆ ಅನೇಕ ಪತ್ರಿಕೆಗಳು ತುತ್ತಾದವು. ಠೇವಣಿ, ಮುದ್ರಣಾಲಯಗಳನ್ನು ಕಳೆದುಕೊಂಡವು.

ಪತ್ರಿಕೆಗಳಿಗೆ ಉಂಟಾದ ಚಿಂತಾಜನಕ ಪರಿಸ್ಥಿತಿಯನ್ನು ವಿರೋಧಿಸಲು ‘ದಿ ಹಿಂದೂ’ ಪತ್ರಿಕೆಯ ಸಂಪಾದಕ ಎ. ರಂಗಸ್ವಾಮಿ ಅಯ್ಯಂಗಾರರ ನೇತೃತ್ವದಲ್ಲಿ ಪತ್ರಿಕೋದ್ಯಮಿಗಳು ಹಾಗೂ ಸಂಪಾದಕರ ಮೊದಲ ರಾಷ್ಟçಮಟ್ಟದ ಸಭೆ ನಡೆಯಿತು. ಪತ್ರಿಕಾ ಶಾಸನವನ್ನು ಹಿಂತೆಗೆದುಕೊಳ್ಳಲು ಒತ್ತಡ ಹೇರಲಾಯಿತು. ಆದರೆ ಸರ್ಕಾರ ಅದನ್ನು ಲೆಕ್ಕಿಸಲಿಲ್ಲ. ಬದಲಿಗೆ, ಪತ್ರಿಕೆಗಳ ಮೇಲಿನ ದಬ್ಬಾಳಿಕೆಯೇ ಇನ್ನಷ್ಟು ಹೆಚ್ಚಾಯಿತು.

ಮದ್ರಾಸ್ ಪ್ರಾಂತ್ಯದಲ್ಲಿ ನವಜೀವನ, ಸ್ವರಾಜ್ಯ, ಸ್ವದೇಶಿ ಮಿತ್ರನ್, ದ್ರಾವಿಡಿಯನ್ ಪ್ರೆಸ್, ತಮಿಳುನಾಡು ಪ್ರೆಸ್, ಆಂಧ್ರಪತ್ರಿಕಾ ಪ್ರೆಸ್, ಹಿಂದಿ ಪ್ರಚಾರ ಪ್ರೆಸ್‌ಗಳನ್ನು ಮುಚ್ಚಲಾಯಿತು. ಅಮೃತ ಬಜಾರ್ ಪತ್ರಿಕಾ, ಸಕಾಲ್, ಹಿತವಾದ, ಬಾಂಬೆ ಕ್ರಾನಿಕಲ್, ಅಲ್ ಹಿಲಾಲ್, ಯಂಗ್ ಇಂಡಿಯಾ, ಆಜ್, ಹರಿಜನ್, ನವಜೀವನ್, ಫ್ರೀ ಪ್ರೆಸ್ ಜರ್ನಲ್, ಸಂಯುಕ್ತ ಕರ್ನಾಟಕ, ದಿ ಹಿಂದೂ, ಮಾತೃಭೂಮಿ, ಮಲಯಾಳ ಮನೋರಮ- ಈ ಕಾಲದ ಹೋರಾಟವನ್ನು ಬೆಳೆಸಿದ ಪ್ರಮುಖ ಪತ್ರಿಕೆಗಳು.

ಸ್ವಾತಂತ್ರ್ಯ ಚಳುವಳಿ ಉತ್ತುಂಗದಲ್ಲಿದ್ದಾಗ ದೇಶಾಭಿಮಾನಿ ಪತ್ರಕರ್ತ ಎಸ್. ಸದಾನಂದ ಆರಂಭಿಸಿದ ‘ಫ್ರೀ ಪ್ರೆಸ್ ಜರ್ನಲ್’ ಒಂದು ದೊಡ್ಡ ಕೊಡುಗೆ. ಅವರು ಅದಕ್ಕಿಂತ ಮೊದಲೇ ಸ್ವಾತಂತ್ರ್ಯ ಹೋರಾಟದ ಸುದ್ದಿಗಳನ್ನು ಪತ್ರಿಕೆಗಳಿಗೆ ಹಂಚುವುದಕ್ಕಾಗಿ ‘ಫ್ರೀ ಪ್ರೆಸ್ ಇಂಡಿಯಾ’ ಎಂಬ ಸುದ್ದಿಸಂಸ್ಥೆಯನ್ನು ಆರಂಭಿಸಿದ್ದರು. ಆದರೆ ಅನೇಕ ಪತ್ರಿಕೆಗಳು ಇದಕ್ಕೆ ಚಂದಾದಾರರಾಗಲು ಹೆದರಿದವು. ಕೊನೆಗೆ ಅವರೇ ಸ್ವತಃ ಪತ್ರಿಕೆ ಆರಂಭಿಸಬೇಕಾಯಿತು. ಗಾಂಧೀಜಿಯಂತೆ ಸದಾನಂದ ಕೂಡ ಪತ್ರಿಕವೃತ್ತಿಯನ್ನು ಸಮಾಜಸೇವೆ ಎಂದು ಪರಿಗಣಿಸಿದ್ದರು. ಗಾಂಧೀಜಿಯವರ ‘ಯಂಗ್ ಇಂಡಿಯಾ’ದಲ್ಲೇ ಅವರಿಗೆ ತರಬೇತಿ, ಮಾರ್ಗದರ್ಶನಗಳು ಲಭಿಸಿದ್ದವು.

ಭಾರತೀಯರ ಆತ್ಮಾಭಿಮಾನವನ್ನೂ, ಹೋರಾಟದ ಛಲವನ್ನೂ ಇಮ್ಮಡಿಗೊಳಿಸಿದ ಹೆಗ್ಗಳಿಕೆ ಪತ್ರಿಕೆಗಳದ್ದು. ಭ್ರೂಣಾವಸ್ಥೆಯಲ್ಲಿದ್ದ ರಾಷ್ಟ್ರೀಯತೆ ಪತ್ರಿಕೆಗಳ ನಿರಂತರ ಶ್ರಮದಿಂದ ವ್ಯಾಪಕವಾಗಿ ಹರಡಿತು. ಇದರ ಅರ್ಥ ಭಾರತದಲ್ಲಿದ್ದ ಎಲ್ಲ ಪತ್ರಿಕೆಗಳೂ ಸ್ವಾತಂತ್ರ್ಯ ಹೋರಾಟಕ್ಕೆ ಟೊಂಕ ಕಟ್ಟಿ ನಿಂತವು ಎಂದಲ್ಲ.  ಚಳುವಳಿಯನ್ನು ಬೆಂಬಲಿಸದ ಪತ್ರಿಕೆಗಳೂ ಇದ್ದವು. ಆಂಗ್ಲರ ಒಡೆತನದಲ್ಲಿದ್ದ ಟೈಮ್ಸ್ ಆಫ್ ಇಂಡಿಯಾ, ದಿ ಸ್ಟೇಟ್ಸ್ಮನ್, ಪಯೋನೀರ್ ಮುಂತಾದ ಪತ್ರಿಕೆಗಳು ರಾಷ್ಟ್ರೀಯ ಹೋರಾಟವನ್ನು ಖಂಡಿಸಿದವು. ದೇಶವಿಭಜನೆಯನ್ನು ಬೆಂಬಲಿಸಿದ ಪತ್ರಿಕೆಗಳೂ ಇದ್ದವು. ಉಳಿದ ಚಳವಳಿಗೆ ಸೃಷ್ಟಿಯಾದ ಜನಾಭಿಪ್ರಾಯವನ್ನು ದೇಶ ವಿಭಜನೆಯ ವಿರುದ್ಧವಾಗಿ ಪತ್ರಿಕೆಗಳು ಮೂಡಿಸಲಿಲ್ಲ ಎಂಬ ಅಭಿಪ್ರಾಯವೂ ಪತ್ರಿಕಾ ಇತಿಹಾಸಕಾರರಲ್ಲಿ ಇದೆ. ಆದರೂ ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸ ಹಾಗೂ ಪತ್ರಿಕಾ ಇತಿಹಾಸವನ್ನು ಒಟ್ಟಾಗಿ ನೋಡುವಾಗ ಅವೆರಡೂ ಪರಸ್ಪರ ಪೂರಕವಾಗಿ ಕೆಲಸ ಮಾಡಿದ್ದೇ ಪ್ರಧಾನವಾಗಿ ಕಾಣಿಸುತ್ತದೆ. ಅಂತಹದೊಂದು ಮಹಾನ್ ಪರಂಪರೆ ನಮ್ಮ ಪತ್ರಿಕೆಗಳಿಗೆ ಇದೆ ಎಂಬ ಭಾವನೆಯೇ ಅವುಗಳ ಕುರಿತಾದ ಗೌರವ ಹಾಗೂ ಆಶಾಭಾವನೆಯನ್ನು ಹೆಚ್ಚಿಸುತ್ತದೆ.

ಆಧಾರ:

1. ಭಾರತೀಯ ಪತ್ರಿಕೋದ್ಯಮ: ಡಾ. ನಾಡಿಗ ಕೃಷ್ಣಮೂರ್ತಿ, 1969

2. ಹಿಸ್ಟರಿ ಆಫ್ ಇಂಡಿಯನ್ ಪ್ರೆಸ್: ಬಿ. ಎನ್. ಅಹುಜಾ, 2009

3. ಜರ್ನಲಿಸಂ ಇನ್ ಇಂಡಿಯಾ: ರಂಗಸ್ವಾಮಿ ಪಾರ್ಥಸಾರಥಿ, 1997

4. ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಪತ್ರಿಕೋದ್ಯಮ: ಡಾ. ಎಲ್. ಪಿ. ರಾಜು, 2008


ಲೇಖನ: ಸಿಬಂತಿ ಪದ್ಮನಾಭ, ತುಮಕೂರು ವಿಶ್ವವಿದ್ಯಾನಿಲಯ