06-13 ಆಗಸ್ಟ್ 2022ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ
ಒಬ್ಬಂಟಿಯಾಗಿ ನಡೆಯುವ ಹಗಲಿಗಿಂತ, ಸ್ನೇಹಿತನೊಬ್ಬ
ಜೊತೆಗಿರುವ ಕತ್ತಲೇ ಆದೀತು ನನಗೆ ಎಂದಳಂತೆ ಹೆಲನ್ ಕೆಲ್ಲರ್. ಸ್ನೇಹ ಎಂಬ ರಮ್ಯ ಭಾವಕ್ಕೆ ಕತ್ತಲನ್ನೂ ತೊಲಗಿಸುವ ಶಕ್ತಿಯಿದೆ ಎಂದು ಆಕೆಗೆ ಅನಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಹುಟ್ಟಿ ಇನ್ನೂ ಎರಡು ವರ್ಷ ಉರುಳುವ ಮುನ್ನವೇ ದೃಷ್ಟಿಯನ್ನೂ ಶ್ರವಣ ಶಕ್ತಿಯನ್ನೂ ಕಳೆದುಕೊಂಡ ನತದೃಷ್ಟೆ ಆಕೆ. ಅವಳ ಬದುಕೆಲ್ಲ ಕತ್ತಲೇ ಆಗಿಹೋಯಿತು. ದುರಂತವೆಂದರೆ ಈ ಕತ್ತಲಿನ ಮಧ್ಯೆ ಶಬ್ದವನ್ನಾದರೂ ಕೇಳುವ ಅವಕಾಶ ಆಕೆಗೆ ಇರಲಿಲ್ಲ. ಆದರೆ ಈ ಕೊರತೆಯನ್ನು ಅವಳ ಬದುಕಿನಿಂದ ದೂರವಾಗಿಸಿದ್ದು ಗೆಳೆತನವೆಂಬ ಉತ್ಕಟ ಭಾವ. ಹೌದು, ಆ್ಯನ್ ಸುಲಿವಾನ್ ಆಕೆಯ ಬದುಕಿಗೆ ಅಂತಹದೊAದು ಅಂತರಂಗದ ಬೆಳಕು ಕೊಟ್ಟಳು.ಹೆಲನ್ ಏಳು ವರ್ಷದವಳಿದ್ದಾಗ ಆಕೆಗೆ ಶಿಕ್ಷಕಿಯಾಗಿ ಬಂದವಳು ಆ್ಯನ್. ವಿಶೇಷವೆಂದರೆ ಹೆಲನ್‌ಗಿಂತ ಹದಿನೇಳು ವರ್ಷಗಳಷ್ಟು ಹಿರಿಯಳಾಗಿದ್ದ ಆ್ಯನ್ ಕೇವಲ ಶಿಕ್ಷಕಿಯಾಗಿರಲಿಲ್ಲ, ಅವಳ ಬದುಕಿನ ಸುದೀರ್ಘ ಅವಧಿಗೆ ಗೆಳತಿಯಾಗಿ ಪರಿಣಮಿಸಿದಳು. ಸುಮಾರು ಐದು ದಶಕಗಳ ಕಾಲ ಅವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರದ ಪ್ರಾಣಸ್ನೇಹಿತೆಯರಂತೆ ಬದುಕಿದರು. ಆ್ಯನ್ ತನ್ನ ಗೆಳತಿಯ ಕಣ್ಣಾದಳು, ಕಿವಿಯಾದಳು, ಜ್ಞಾನವಾದಳು, ಭಾವನೆಯಾದಳು, ಬಣ್ಣವಾದಳು, ಬೆಳಕಾದಳು, ಪ್ರಪಂಚವೇ ಆದಳು. ಹೆಲನ್ ಓದುವಂತೆ, ಬರೆಯುವಂತೆ, ಮಾತಾಡುವಂತೆ ಮಾಡಿದಳು.
ಆ್ಯನ್ ಮೂಲಕ ಜಗತ್ತನ್ನು ಕಂಡ ಹೆಲನ್ ಹತ್ತಾರು ಪುಸ್ತಕ ಬರೆದಳು. ಮೂವತ್ತೈದು ದೇಶಗಳನ್ನು ಸುತ್ತಾಡಿದಳು. ನೂರಾರು ಭಾಷಣಗಳನ್ನು ಮಾಡಿದಳು. ದಿವ್ಯಾಂಗರ ಹಕ್ಕುಗಳಿಗಾಗಿ ಬದುಕೆಲ್ಲ ಹೋರಾಡಿದಳು. ಸ್ನೇಹವೆಂಬುದು ಕೇವಲ ಮನಸ್ಸಿನೊಳಗಿನ ಭಾವನೆಯಲ್ಲ, ಅಂತರAಗದ ಕಸುವು; ಸುತ್ತಲೂ ಕತ್ತಲು ಆವರಿಸಿದಾಗ ಅದರ ಮಧ್ಯೆ ಬೆಳಗುವ ಹಣತೆ. ದಾರಿ ತೋರಿಸುವ ಕೈದೀವಿಗೆ. ನಿರಾಶೆಯನ್ನು ಹೊಡೆದೋಡಿಸಿ ಆತ್ಮವಿಶ್ವಾಸವನ್ನು ತುಂಬುವ ಮಹಾಮಂತ್ರ. ಅದಕ್ಕೆ ಹೆಲನ್ ಕೆಲ್ಲರ್‌ರಂತಹ ಸಾಧಕರನ್ನು ಲೋಕಕ್ಕೆ ಕೊಡುವ ಸಾಮರ್ಥ್ಯವಿದೆ.
ಸೋಶಿಯಲ್ ಮೀಡಿಯಾದ ಕಾಲದಲ್ಲಿ ಸ್ನೇಹಿತರಿಗೇನೂ ಕೊರತೆಯಿಲ್ಲ. ಅವನಿಗೆ ಫೇಸ್ಬುಕ್ಕಲ್ಲಿ ಐದು ಸಾವಿರ ಸ್ನೇಹಿತರು. ಆಕೆಗೆ ಟ್ವಿಟರಿನಲ್ಲಿ, ಇನ್‌ಸ್ಟಾಗ್ರಾಮಿನಲ್ಲಿ ಲಕ್ಕಕ್ಕೂ ಹೆಚ್ಚು ಅನುಯಾಯಿಗಳು. ಅವನೊಂದು ಪೋಸ್ಟ್ ಹಾಕಿದರೆ ಅದಕ್ಕೆ ಸ್ನೇಹಿತರು ಹಾಕುವ ಲೈಕುಗಳು ಅರ್ಧವೇ ಗಂಟೆಯಲ್ಲಿ ಒಂದು ಸಾವಿರ ದಾಟುತ್ತದೆ. ಆಕೆಯದೊಂದು ವೀಡಿಯೋ ಬಂದರೆ ಏನಿಲ್ಲವೆಂದರೂ ಐವತ್ತು ಸಾವಿರ ಫ್ರೆಂಡ್ಸು ಮೆಚ್ಚಿಕೊಳ್ಳುತ್ತಾರೆ. ಅಬ್ಬಾ! ಸ್ನೇಹಿತರು ಎಂದರೆ ಹೀಗಿರಬೇಕು! ಎಂದುಕೊಳ್ಳುವ ಹೊತ್ತಿಗೆ ಅದ್ಯಾವುದೋ ದೊಡ್ಡ ಸಮಸ್ಯೆ ಅನಾಮತ್ತಾಗಿ ಕಚ್ಚಿಕೊಳ್ಳುತ್ತದೆ. ಇದ್ದಾರಲ್ಲ ಹಚ್ಚಿಕೊಂಡಿರುವ ಸಾವಿರಾರು ಸ್ನೇಹಿತರು ಎಂದುಕೊಂಡರೆ ಅವರೆಲ್ಲ ತಂಬಾಕನ್ನು ಮೂಸಿದ ಇಂಬಳಗಳಂತೆ ಆಗಲೇ ನಾಪತ್ತೆಯಾಗಿರುತ್ತಾರೆ. ಆಗಲೇ ಇವರ ದೇಹದ ರಕ್ತ ಪೂರ್ತಿ ಬಸಿದುಹೋಗಿರದಿದ್ದರೆ ಅದೇ ಅದೃಷ್ಟ.
ಇಂತಹ ಸ್ನೇಹಿತರು ಇದ್ದರೆಷ್ಟು ಇಲ್ಲದಿದ್ದರೆಷ್ಟು? ಇದ್ದರೆ ಇರಬೇಕು – ಸುಧಾಮನಿಗೊಬ್ಬ ಕೃಷ್ಣನಿದ್ದ ಹಾಗೆ, ಸುಯೋಧನನಿಗೊಬ್ಬ ಕರ್ಣನಿದ್ದ ಹಾಗೆ, ಹೆಲನ್‌ಗೊಬ್ಬಳು ಆ್ಯನ್ ಇದ್ದ ಹಾಗೆ. ಸ್ನೇಹಿತರೆಂದರೆ ಕಷ್ಟ ಬಂದಾಗ ಬಿಟ್ಟೋಡುವವರಲ್ಲ, ಜತೆಗಿದ್ದು ಧೈರ್ಯ ತುಂಬುವವರು. ಅವರೇನೂ ಪ್ರಾಣಕ್ಕೆ ಪ್ರಾಣ ಕೊಡಬೇಕಾಗಿಲ್ಲ, ಒಂದಿಷ್ಟು ನಂಬಿಕೆ ಉಳಿಸಿಕೊಂಡರೆ ಸಾಕು. ವಿಶ್ವಾಸ ಪ್ರಾಣಕ್ಕೆ ಸಮ, ಅಥವಾ ಅದಕ್ಕಿಂತಲೂ ದೊಡ್ಡದು. ವಿಶ್ವಾಸ ಕಳೆದುಕೊಳ್ಳುವುದೆಂದರೆ ಬದುಕಿಯೂ ಸತ್ತಹಾಗೆ.
‘ಬದುಕಿನ ತುಂಬ ಹಲವಾರು ಮಂದಿ ಓಡಾಡುತ್ತಾರೆ, ನಿಜವಾದ ಸ್ನೇಹಿತರು ಮಾತ್ರ ತಮ್ಮ ಹೆಜ್ಜೆಯ ಗುರುತುಗಳನ್ನು ಉಳಿಸಿಹೋಗುತ್ತಾರೆ’ ಎಂಬ ಮಾತಿದೆ. ಈ ಹೆಜ್ಜೆ ಗುರುತುಗಳಿಗೆ ವಿಶ್ವಾಸ, ಒಲುಮೆ, ಸಹಾನುಭೂತಿ, ನಿರ್ಮಾತ್ಸರ್ಯ, ಪ್ರಾಮಾಣಿಕತೆ ಇತ್ಯಾದಿ ಹೆಸರುಗಳೂ ಇವೆ. ಅವು ಸ್ನೇಹದ ಆಧಾರ ಸ್ತಂಭಗಳು ಕೂಡ. ಸ್ನೇಹವೆಂಬುದು ಕ್ಷಣಕಾಲ ಫಳ್ಳೆಂದು ಬೆಳಗಿ ಮರೆಯಾಗುವ ಮಿಂಚಲ್ಲ. ಸದಾ ಹೊಮ್ಮುವ ಚಂದಿರನ ಬೆಳದಿಂಗಳು. ಅದರಿಂದ ಮೈಮನಸ್ಸಿಗೆ ತಂಪಿನ, ಸೊಂಪಿನ ಅನುಭವ. ಈ ಸುದೀರ್ಘ ಸಹಪಯಣದಲ್ಲಿ ವಿಶ್ವಾಸವೇ ವಿಶ್ವ. ಒಮ್ಮೆ ಅಪನಂಬಿಕೆಯ ಸಣ್ಣ ಬಿರುಕು ಕಾಣಿಸಿಕೊಂಡರೂ ಬುನಾದಿ ಶಾಶ್ವತವಾಗಿ ಕುಸಿಯಬಲ್ಲುದು.
ಪರಸ್ಪರ ಪ್ರೀತಿ-ಕಾಳಜಿಗಳು ಕೂಡ ಈ ಬುನಾದಿಯ ಇಟ್ಟಿಗೆಗಳು. ಈ ಒಲುಮೆ ಸದಾ ಹರಿಯುವ ಝರಿಯ ಹಾಗೆ. ಅಲ್ಲಿ ಕಲ್ಮಶಗಳು ಉಳಿಯುವುದಿಲ್ಲ. ಸ್ನೇಹವಿದ್ದಲ್ಲಿ ಸಣ್ಣ ಸಿಟ್ಟು-ಸೆಡವುಗಳು ಇರಬಾರದೆಂದಿಲ್ಲ. ಆದರೆ ಅವೆಲ್ಲ ಬಹುಕಾಲ ಉಳಿಯುವುದಿಲ್ಲ. ಝರಿಯಲ್ಲಿ ಕೊಚ್ಚಿಹೋಗುವ ಕೊಳೆಯಂತೆ, ಕಸಕಡ್ಡಿಗಳಂತೆ ಅವೆಲ್ಲ ಕೆಲವೇ ಸಮಯದಲ್ಲಿ ಮರೆಯಾಗಿ ಶುಭ್ರತೆ, ತಾಜಾತನ ಆವರಿಸಿಕೊಳ್ಳುತ್ತದೆ. ಈ ಹರಿಯುವ ನೀರಿನ ಇನ್ನೊಂದು ಗುಣವೆಂದರೆ ಅದು ಮುಂದೆಮುಂದಕ್ಕೆ ಸಾಗುತ್ತಲೇ ತನ್ನ ಎರಡೂ ದಡಗಳಿಗೆ ಜೀವಸೇಚನ ಮಾಡುತ್ತದೆ. ಫಲವಂತಿಕೆಯನ್ನು ಸುತ್ತಲಿನವರಿಗೆಲ್ಲ ಉಡುಗೊರೆಯಾಗಿ ನೀಡುತ್ತದೆ. ಅಲ್ಲಿ ಒಬ್ಬರು ಮೇಲು ಇನ್ನೊಬ್ಬರು ಕೀಳು ಎಂಬುದೂ ಇಲ್ಲ. ಎಲ್ಲರಿಗೂ ಸಮಾನವಾಗಿ ಈ ಫಲದ ಹಂಚಿಕೆಯಾಗುತ್ತದೆ. ಅಂದರೆ ಒಳ್ಳೆಯ ಸ್ನೇಹಿತರ ಸಂಪರ್ಕಕ್ಕೆ ಬಂದವರು ಅದರ ಫಲಗಳನ್ನು ತಾವೂ ಉಣ್ಣುತ್ತಾರೆ. ಅದರಿಂದ ಬೇರೊಬ್ಬರಿಗೆ ತೊಡಕೆಂಬುದಿಲ್ಲ.
ಸ್ನೇಹಿತರ ಕಷ್ಟ, ಸವಾಲುಗಳನ್ನು ಕಂಡು ಮರುಗುವುದು, ಅದನ್ನು ತಮ್ಮ ಕಷ್ಟವೆಂದೇ ಬಗೆದು ಅವರ ಸಹಾಯಕ್ಕೆ ಧಾವಿಸುವುದು ಗೆಳೆತನದ ಇನ್ನೊಂದು ಗುಣ. ಅದಕ್ಕೆ ಸಹಾನುಭೂತಿಯೆಂದು ಹೆಸರು. ಕಷ್ಟಕ್ಕೊದಗುವವನೇ ನಿಜವಾದ ಸ್ನೇಹಿತ ಎಂಬ ಮಾತಿದೆಯಲ್ಲ. ಬಂಧುಬಳಗ ನೂರಾರು ಮಂದಿ ಇದ್ದರೂ ಆಪತ್ತಿಗೆ ಓಡಿ ಬರುವವರು ಸ್ನೇಹಿತರೇ. ಗೆಳೆಯ ಕಣ್ರೆಪ್ಪೆ ಇದ್ದ ಹಾಗೆ. ಎಷ್ಟೇ ಅಚಾನಕ್ಕಾಗಿ ಕಸಕಡ್ಡಿಯೋ ಧೂಳೋ ಎದುರಿನಿಂದ ಬಂದರೂ ರೆಪ್ಪೆ ಫಕ್ಕನೆ ತಾನೇತಾನಾಗಿ ಮುಚ್ಚಿಕೊಂಡು ಕಣ್ಮಣಿಗಳನ್ನು ಕಾಪಾಡುತ್ತದೆ. ಅದಕ್ಕೆ ಸ್ನೇಹಶೀಲತೆಯೆಂದು ಹೆಸರು.
ಸ್ನೇಹದೊಳಗೆ ಮತ್ಸರಕ್ಕೆ ಜಾಗವಿಲ್ಲ. ಇದ್ದರೆ ಅದು ಸ್ನೇಹವಲ್ಲ, ವ್ಯವಹಾರ. ಪರಸ್ಪರರ ಏಳಿಗೆಯನ್ನು ಕಂಡು ಕರುಬುವವರು ಗೆಳೆಯರಲ್ಲ. ತೋರಿಕೆಗೆ ಗೆಳೆಯರಂತೆ ನಟಿಸುತ್ತಾ ಅಂತರಂಗದಲ್ಲಿ ಮತ್ಸರಪಟ್ಟರೆ ಅಂತಹವರಿಗೆ ಶತ್ರುಗಳೆಂದು ಹೆಸರು. ಇವರಿಗಿಂತ ಘೋಷಿತ ಶತ್ರುಗಳಾದರೂ ಆಗಬಹುದು. ಅವರು ಶತ್ರುಗಳೆಂದು ಮೊದಲೇ ಗೊತ್ತಿರುತ್ತದಲ್ಲ? ನಿಜವಾದ ಸ್ನೇಹಿತ ತನ್ನ ಗೆಳೆಯನ ಸಾಧನೆಗಳಲ್ಲಿ ತನ್ನ ಸಾಧನೆಯನ್ನೂ ಸೌಖ್ಯವನ್ನೂ ಕಾಣುತ್ತಾನೆ. ಅವುಗಳಿಗಾಗಿ ಹೆಮ್ಮೆಪಡುತ್ತಾನೆ. ಪರಸ್ಪರರ ಸಾಧನೆಗಳಲ್ಲಿ ಆನಂದವನ್ನೂ ಪ್ರೇರಣೆಯನ್ನೂ ಪಡೆದು ಪ್ರಗತಿಯ ಹಾದಿಯಲ್ಲಿ ಜತೆಯಾಗಿ ಮುನ್ನಡೆಯುವವರೇ ನಿಜವಾದ ಸ್ನೇಹಿತರು.
ಸ್ನೇಹವನ್ನು ಕೊನೆಯವರೆಗೂ ಕಾಪಿಟ್ಟುಕೊಳ್ಳುವುದು ಪ್ರಾಮಾಣಿಕತೆಯೆಂಬ ಉಕ್ಕಿನ ಹೊದಿಕೆ. ಸ್ನೇಹವೊಂದು ತೆರೆದ ಪುಸ್ತಕ. ಅದನ್ನು ಇಬ್ಬರಿಗೂ ಯಾವಾಗ ಬೇಕಾದರೂ ಓದಿಗೆ ಲಭ್ಯವಿದ್ದಾಗ ಮುಚ್ಚಿಡುವುದು, ಬಚ್ಚಿಡುವುದು ಏನೂ ಇರುವುದಿಲ್ಲ. ಮನುಷ್ಯರೆಂದ ಮೇಲೆ ಭಿನ್ನಾಭಿಪ್ರಾಯಗಳು ಇರಬಾರದು ಎಂದೇನೂ ಇಲ್ಲ. ಅವೆಲ್ಲ ಬದುಕಿನ ಸಹಜ ಲಕ್ಷಣಗಳು. ಆದರೆ ಅಂಥವು ಕಾಣಿಸಿಕೊಂಡಾಗ ಅವುಗಳನ್ನು ಅಲ್ಲಲ್ಲೇ ಹಂಚಿಕೊಂಡರೆ, ಸಲಹೆಗಳನ್ನು ಸ್ವೀಕರಿಸುವ ಪ್ರಾಮಾಣಿಕತೆ ಇಬ್ಬರಲ್ಲೂ ಇದ್ದರೆ ಸ್ನೇಹ ಅನಂತವಾಗಿರುತ್ತದೆ.
ಹೇಳಿಕೇಳಿ ಗೆಳೆತನವೆಂಬುದು ಒಂದು ಅವಕಾಶವಲ್ಲ, ಜವಾಬ್ದಾರಿ. ಅದು ಇಬ್ಬರಿಗೂ ಸಂಬಂಧಿಸಿದ ಪದ. ಎರಡೂ ಕೈ ಸೇರಿದರೆ ಚಪ್ಪಾಳೆ. ಕಣ್ಣೆರಡು, ಕಿವಿಯೆರಡು, ಕೈಯೆರಡು, ಕಾಲೆರಡು. ಸ್ನೇಹಕ್ಕೂ ಇಬ್ಬರು ಬೇಕಲ್ಲ! ಇಬ್ಬರೂ ಜತೆಯಾಗಿ ಆ ಜವಾಬ್ದಾರಿ ನಿರ್ವಹಿಸಿದರೆ ಲೋಕಕ್ಕೊಂದು ಒಳ್ಳೆಯ ಮಾದರಿ ದೊರೆಯುತ್ತದೆ. ಇನ್ನೊಂದು ದಡ ಸೇರಿದ ಮೇಲೂ ಅಂಬಿಗನ ನೆನಪು ಬೇಕು. ಇಲ್ಲದಿದ್ದರೆ ಹಿಂತಿರುಗುವಾಗ ಸಮಸ್ಯೆಯಾಗುತ್ತದೆ.
- ಸಿಬಂತಿ ಪದ್ಮನಾಭ ಕೆ. ವಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ