ಭಾನುವಾರ, ಮಾರ್ಚ್ 13, 2022

ಹೀಗುಂಟು ಸಾಹಿತ್ಯ-ಮಾಧ್ಯಮಗಳ ನಂಟು

ಮಾರ್ಚ್ 2022ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾಗಿರುವ ಲೇಖನ

‘ಪತ್ರಿಕೋದ್ಯಮವು ಒಂದು ಅವಸರದ ಸಾಹಿತ್ಯ’ ಎಂಬ ಮಾತಿದೆ. ಪತ್ರಿಕಾ ಬರೆಹಗಳು ಅವಸರದಲ್ಲಿ ತಯಾರಾಗುವ ಪಾಕ ಎಂಬ ಧ್ವನಿ ಇಲ್ಲಿರುವಂತೆಯೇ, ಅವು ಸಾಹಿತ್ಯದ ಒಂದು ಭಾಗ ಎಂಬ ಸೂಚನೆಯೂ ಇದೆ. ಸಾಹಿತ್ಯಕ್ಕೂ ಪತ್ರಿಕಾವೃತ್ತಿಗೂ ಮೊದಲಿನಿಂದಲೂ ಒಂದು ಅವಿಭಾಜ್ಯ ಸಂಬಂಧ. ಒಂದೆಡೆ, ಪತ್ರಿಕಾವೃತ್ತಿ ಬೆಳೆಯುವಲ್ಲಿ ಸಾಹಿತ್ಯದ ಕೊಡುಗೆ ಗಣನೀಯವಾಗಿದ್ದರೆ, ಇನ್ನೊಂದೆಡೆ ಭಾಷೆ ಹಾಗೂ ಸಾಹಿತ್ಯದ ವಿಕಾಸದಲ್ಲಿ ಪತ್ರಿಕೋದ್ಯಮದ ಕೊಡುಗೆ ವಿಶಿಷ್ಟವಾಗಿದೆ. ಜನರಿಗೆ ಸುದ್ದಿಸಮಾಚಾರಗಳ ಕುರಿತಾದ ಕುತೂಹಲ ತುಸು ಹೆಚ್ಚೇ. ಆದರೆ ಅಷ್ಟಕ್ಕೇ ಅವರ ಆಸಕ್ತಿ ಮುಗಿಯವುದಿಲ್ಲ. ಕೇವಲ ಸುದ್ದಿಯಷ್ಟೇ ಅವರಿಗೆ ಸಾಕಾಗುವುದಿಲ್ಲ. ಸುದ್ದಿಸಮಾಚಾರಗಳೊಂದಿಗೆ ಸಾಹಿತ್ಯದ ವಿವಿಧ ಪ್ರಕಾರಗಳನ್ನೂ ಆಸ್ವಾದಿಸುವ ಅವಕಾಶ ಸಿಕ್ಕಾಗಲಷ್ಟೇ ಅವರಿಗೆ ಪತ್ರಿಕೆ ಇತ್ಯಾದಿ ಮಾಧ್ಯಮಗಳು ಹೆಚ್ಚು ಕುತೂಹಲಕರ ಹಾಗೂ ಪ್ರಯೋಜನಕರ ಎನಿಸುತ್ತವೆ.

ಆದರೆ ಸಾಹಿತ್ಯ ಮತ್ತು ಮಾಧ್ಯಮಗಳ ಸಂಬಂಧವನ್ನು ಗಮನಿಸಿದಾಗ, ಅದು ಕೇವಲ ಮುದ್ರಣ ಮಾಧ್ಯಮಕ್ಕಷ್ಟೇ ಸೀಮಿತವಾದದ್ದಲ್ಲ ಎಂಬುದು ಅರಿವಾಗುತ್ತದೆ. ಪತ್ರಿಕೆಗಳಿಂದ ತೊಡಗಿ ಆನ್ಲೈನ್ ವೇದಿಕೆಗಳವರೆಗೆ ವಿವಿಧ ಸಮೂಹ ಮಾಧ್ಯಮಗಳು ತಮ್ಮದೇ ನೆಲೆಯಲ್ಲಿ ಸಾಹಿತ್ಯದ ಪೋಷಣೆಯಲ್ಲಿ ತೊಡಗಿಸಿಕೊಂಡಿವೆ. ಕಾಲದಿಂದ ಕಾಲಕ್ಕೆ ಬದಲಾಗುವ ಜನರ ಆಸಕ್ತಿ-ಅಭಿರುಚಿಗಳನ್ನು ಮಾಧ್ಯಮಗಳು ಗಮನಿಸಿಕೊಂಡು ತಮ್ಮನ್ನು ತಾವು ಮರುರೂಪಿಸಿಕೊಳ್ಳಬೇಕಾಗುತ್ತದೆ.

ಪತ್ರಿಕಾ ಮಾಧ್ಯಮ:

ಮುದ್ರಣ ಮಾಧ್ಯಮದ ಸಾಹಿತ್ಯ ಪರಿಚಾರಿಕೆ ಎರಡು ಬಗೆಯದ್ದು. ಕಲೆ-ಸಾಹಿತ್ಯಕ್ಕೆಂದೇ ಮೀಸಲಾದ ಪತ್ರಿಕೆಗಳ ಕಾರ್ಯವೈಖರಿ ಒಂದು ತೆರನಾದರೆ, ಮುಖ್ಯ ವಾಹಿನಿಯ ಪತ್ರಿಕೆಗಳು ಸಾಹಿತ್ಯಕ್ಕೆ ಕೊಡುವ ಮಹತ್ವ ಇನ್ನೊಂದು ವಿಧವಾದದ್ದು. ಎರಡೂ ಬಗೆಯ ಪತ್ರಿಕೆಗಳು ತಮ್ಮದೇ ಆದ ರೀತಿಯಲ್ಲಿ ಸಾರಸ್ವತಲೋಕದ ಬೆಳವಣಿಗೆಯಲ್ಲಿ ಪಾತ್ರ ವಹಿಸಿವೆ. ಸಾಹಿತ್ಯ ಕ್ಷೇತ್ರದ ಹಲವು ದಿಗ್ಗಜರು ಸ್ವತಃ ಪತ್ರಕರ್ತರಾಗಿದ್ದರು ಎಂಬುದು ಗಮನಾರ್ಹ ಸಂಗತಿ. ಆಂಗ್ಲಸಾಹಿತ್ಯದ ಶ್ರೇಷ್ಠ ಪ್ರಬಂಧಕಾರರೆನಿಸಿದ ರಿಚರ್ಡ್ ಸ್ಟೀಲ್, ಡೇನಿಯಲ್ ಡೆಫೋ ಮೊದಲಾದವರೆಲ್ಲ ಉತ್ತಮ ಪತ್ರಿಕಾ ಬರೆಹಗಾರರೂ ಆಗಿದ್ದರು. ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ಮಾಸ್ತಿ, ಡಿವಿಜಿ, ತಿ. ತಾ. ಶರ್ಮ, ನಿರಂಜನ, ನಂಜನಗೂಡು ತಿರುಮಲಾಂಬಾ, ಸಿದ್ಧವನಹಳ್ಳಿ ಕೃಷ್ಣಶರ್ಮ, ಅ.ನ.ಕೃ. ಮುಂತಾದವರು ಸಾಹಿತ್ಯವನ್ನೂ ಪತ್ರಿಕೋದ್ಯಮವನ್ನೂ ಜತೆಜತೆಗೇ ಬೆಳೆಸಿಕೊಂಡು ಬಂದರು.

19ನೇ ಶತಮಾನ ಹೊಸಗನ್ನಡ ಸಾಹಿತ್ಯದ ಉದಯಕಾಲ. ಕನ್ನಡ ಪತ್ರಿಕೋದ್ಯಮವೂ ಅದೇ ಅವಧಿಯಲ್ಲೇ ಬೆಳೆಯಿತು. ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರಗಳ ವಿಕಾಸದ ಪಾತಳಿ ಒಂದೇ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಮುದ್ರಣಕಲೆ ಬೆಳೆದುದಕ್ಕೂ, ಸಾಹಿತ್ಯ ಕೃತಿಗಳು ದೊಡ್ಡ ಸಂಖ್ಯೆಯಲ್ಲಿ ಮುದ್ರಣಗೊಂಡು ವಿಸ್ತಾರ ಓದುಗವರ್ಗವನ್ನು ತಲುಪಿದ್ದಕ್ಕೂ ಸಂಬಂಧವಿರುವುದನ್ನು ಕೂಡ ನಾವಿಲ್ಲಿ ಗಮನಿಸಬಹುದು. ಪತ್ರಿಕೋದ್ಯಮವು ಮುದ್ರಣತಂತ್ರಜ್ಞಾನದ ಇನ್ನೊಂದು ಕೂಸು.

ಪತ್ರಿಕಾವೃತ್ತಿ ಬೆಳೆದುಬರುತ್ತಾ, ರಂಗಭೂಮಿ, ಸಂಗೀತ, ಜಾನಪದ, ಯಕ್ಷಗಾನ, ಕಾವ್ಯ, ಹಾಸ್ಯ, ಕತೆ - ಹೀಗೆ ಸಾಹಿತ್ಯದ ವಿವಿಧ ಮಗ್ಗುಲುಗಳಿಗೆ ಸಂಬಂಧಿಸಿದ ವಿಶೇಷ ಪತ್ರಿಕೆಗಳು ಹುಟ್ಟಿಕೊಂಡವು. ಬೆನೆಗಲ್ ರಾಮರಾಯರ ‘ಸುವಾಸಿನಿ’, ರಾಶಿಯವರ ‘ಕೊರವಂಜಿ’, ಅನಕೃ ಅವರ ‘ಕಥಾಂಜಲಿ’, ಮಾಸ್ತಿಯವರ ‘ಜೀವನ’, ಅಡಿಗರ ‘ಸಾಕ್ಷಿ’, ಕಾರಂತರ ‘ವಸಂತ’, ಮೈಸೂರು ವಿವಿ ಪ್ರಕಟಿಸುತ್ತಿದ್ದ ‘ಪ್ರಬುದ್ಧ ಕರ್ನಾಟಕ’- ಹೀಗೆ ಹತ್ತಾರು ಉಪಕ್ರಮಗಳನ್ನು ಗುರುತಿಸಬಹುದು ಪತ್ರಿಕೋದ್ಯಮ ಪ್ರಾಧ್ಯಾಪಕ ಡಾ. ನಿರಂಜನ ವಾನಳ್ಳಿಯವರು ತಮ್ಮ ‘ಕನ್ನಡದಲ್ಲಿ ಕಲೆ-ಸಾಹಿತ್ಯ ಪತ್ರಿಕೆಗಳು’ ಎಂಬ ಪಿಎಚ್.ಡಿ. ಪ್ರಬಂಧದಲ್ಲಿ ಈ ಐತಿಹಾಸಿಕ ಹೆಜ್ಜೆಗಳನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ. 

ಕನ್ನಡ ಪತ್ರಿಕೆಗಳ ಸಾಹಿತ್ಯ ಸೇವೆಯನ್ನು ಅವರು ಈ ಕೆಳಕಂಡಂತೆ ಪಟ್ಟಿಮಾಡಿದ್ದಾರೆ:

1. ದಿನಪತ್ರಿಕೆಗಳು ಹಾಗೂ ನಿಯತಕಾಲಿಕಗಳು ಸಾಮಾನ್ಯ ಆಸಕ್ತಿಯ ಪತ್ರಿಕೆಗಳೇ ಆಗಿರುವ ಸಂದರ್ಭದಲ್ಲಿಯೂ ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಹಾಸ್ಯಬರಹಗಳು, ಮುಂತಾದವನ್ನು ತಪ್ಪದೇ ಪ್ರಕಟಿಸುತ್ತವೆ.

2. ಕಾದಂಬರಿಗಳು ಧಾರಾವಾಹಿಗಳಾಗಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತವೆ. ಹಿಂದೆ ನಿಯತಕಾಲಿಕಗಳಿಗಷ್ಟೇ ಧಾರಾವಾಹಿಗಳು ಸೀಮಿತವಾಗಿದ್ದವು. ಈಗ ದಿನಪತ್ರಿಕೆಗಳೂ ಧಾರಾವಾಹಿಗಳನ್ನು ಪ್ರಕಟಿಸುತ್ತವೆ.

3. ಸಾಹಿತಿಗಳ ಅಂಕಣಗಳನ್ನು ಪ್ರಕಟಿಸುವ ಮೂಲಕ ಅಂಕಣ ಸಾಹಿತ್ಯವೇ ಕನ್ನಡದಲ್ಲಿ ಪ್ರತ್ಯೇಕ ಸಮೃದ್ಧ ಸಾಹಿತ್ಯ ಪ್ರಕಾರವಾಗಿ ಬೆಳೆಯಲು ಕಾರಣವಾಗಿವೆ.

4. ಪತ್ರಿಕೆಗಳು ಏರ್ಪಡಿಸುವ ಸಾಹಿತ್ಯ ಸ್ಪರ್ಧೆಗಳು ಹೊಸತಲೆಮಾರಿನ ಬರಹರಾರರನ್ನು ಹೆಕ್ಕಿ ತೆಗೆಯಲು ನೆರವಾಗುತ್ತವೆ.

5. ದೀಪಾವಳಿ, ಯುಗಾದಿ, ಸಂಕ್ರಾಂತಿ, ಮುಂತಾದ ಹಬ್ಬದ ಸಂದರ್ಭಗಳಲ್ಲಿ ನಮ್ಮ ಪತ್ರಿಕೆಗಳು ಹೊರತರುವ ವಿಶೇಷಾಂಕಗಳು ಸಾಹಿತ್ಯ ಸಂಪುಟಗಳೇ ಎಂದು ಕರೆಯಬಹುದಾದಷ್ಟು ಸಮೃದ್ಧವಾಗಿರುತ್ತವೆ.

6. ಕಾಲಕಾಲಕ್ಕೆ ಪ್ರಶ್ನೆ ಮಾಲಿಕೆಗಳನ್ನು ಏರ್ಪಡಿಸಿ ಒಂದೇ ರೀತಿಯ ಪ್ರಶ್ನೆಗಳಿಗೆ ಸಾಹಿತಿಗಳಿಂದ ಉತ್ತರಗಳನ್ನು ಬರೆಯಿಸಿ ಸಾಹಿತ್ಯ ಪಡೆದುಕೊಳ್ಳುವ ತಿರುವುಗಳಿಗೆ ಸೈದ್ಧಾಂತಿಕ ರೂಪ ನೀಡುತ್ತವೆ.

7. ಪತ್ರಿಕೆಗಳೇ ಸಾಹಿತ್ಯ ಪ್ರಕಾಶನದ ಸಂಸ್ಥೆಗಳಾಗಿ ಕೆಲಸ ಮಾಡುವುದಿದೆ. ಅಂದರೆ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವುದು.

8. ನವ ಪ್ರಕಾಶನಗಳ ಪಟ್ಟಿಯನ್ನು ಪ್ರಕಟಿಸಿ ಓದುಗರಿಗೆ ಹೊಸ ಕೃತಿ ಹೊರಬಂದುದರ ಬಗ್ಗೆ ತಿಳಿಯಲು ಅನುವುಮಾಡಿಕೊಡುತ್ತವೆ.

9. ಪುಸ್ತಕಗಳ ಸಮೀಕ್ಷೆ, ವಿಮರ್ಶೆಗಳನ್ನು ತಜ್ಞರಿಂದ ಬರೆಸುತ್ತವೆ.

10. ಓದುಗರಿಗೆ ವಿಮರ್ಶಾ ಸ್ಪರ್ಧೆಗಳನ್ನು ಏರ್ಪಡಿಸುತ್ತವೆ.

11. ಚಿತ್ರಕವನ ಸ್ಪರ್ಧೆ ಹಾಗೂ ಅಪೂರ್ಣ ಕಥೆಗಳನ್ನು ಪೂರ್ಣಗೊಳಿಸುವಂಥ ಸ್ಪರ್ಧೆಗಳ ಮೂಲಕ ಓದುಗರ ಸೃಜನಶೀಲತೆಯನ್ನು ಹೆಚ್ಚಿಸುತ್ತವೆ.

12. ಇವೆಲ್ಲ ಸಾಮಾನ್ಯ ಆಸಕ್ತಿಯ ಪತ್ರಿಕೆಗಳ ಮಾತಾದರೆ, ಸಾಹಿತ್ಯಕ್ಕೇ ಮೀಸಲಾಗಿ ನಿಯತಕಾಲಿಕಗಳನ್ನು ಹೊರಡಿಸುವುದೂ ಕನ್ನಡ ಪತ್ರಿಕೋದ್ಯಮ ಮಾಡುವ ಸಾಹಿತ್ಯ ಸೇವೆಯ ಮಾದರಿ.

ಸಾಹಿತ್ಯದ ಬೆನ್ನೆಲುಬೆನಿಸಿರುವ ಭಾಷೆಯ ಬೆಳವಣಿಗೆಯಲ್ಲೂ ಪತ್ರಿಕೆಗಳ ಕೊಡುಗೆ ಅದ್ವಿತೀಯ. ಕಾಲದಿಂದ ಕಾಲಕ್ಕೆ ಭಾಷೆ ವಿಕಾಸವಾಗುವಲ್ಲಿ, ಹೊಸ ಪದಗಳ ಸೃಷ್ಟಿಯಾಗುವಲ್ಲಿ, ಹೊಸ ಪದಪುಂಜಗಳ ಅನ್ವೇಷಣೆ ಮಾಡುವಲ್ಲಿ ಮಾಧ್ಯಮಗಳ ಪಾತ್ರ ತುಂಬ ದೊಡ್ಡದು. ಆಧುನೀಕರಣ ಮತ್ತು ಆ ಕಾರಣದಿಂದ ನಡೆದಿರುವ ಟಂಕೀಕರಣ, ಭಾಷಾಂತರೀಕರಣ, ಅನ್ಯ ಭಾಷಾ ಸ್ವೀಕರಣ, ನುಡಿಬೆರಕೆ ಮೊದಲಾದವುಗಳಿಂದ ಒಂದು ಭಾಷೆಗೆ ಹೊಸ ಪದಗಳು ಸೇರ್ಪಡೆಯಾಗುತ್ತಾ ಹೋಗುತ್ತವೆ; ಈ ಪ್ರಕ್ರಿಯೆಯಲ್ಲಿ ಮಾಧ್ಯಮಗಳ ಪಾತ್ರ ತುಂಬ ದೊಡ್ಡದು ಎಂದು ಭಾಷಾತಜ್ಞರು ಗುರುತಿಸಿದ್ದುಂಟು. ಉದಾಹರಣೆಗೆ: ಕಪ್ಪುಹಣ, ಪ್ರಣಾಳಿಕೆ, ಏಕಸ್ವಾಮ್ಯ, ಯಥಾಸ್ಥಿತಿ, ಭೂಗತಲೋಕ, ಸ್ವಜನಪಕ್ಷಪಾತ, ಮಾಹಿತಿ ತಂತ್ರಜ್ಞಾನ, ಶೀತಲ ಸಮರ, ವಿಕೇಂದ್ರೀಕರಣ, ಬೆರಳಚ್ಚು, ನುಡಿಚಿತ್ರ, ಗೃಹಬಂಧ, ಪ್ರಣಾಳಶಿಶು, ಹಕ್ಕೊತ್ತಾಯ, ಅಜೇಯ ಶತಕ- ಇವೆಲ್ಲ ಆಯಾ ಸಂದರ್ಭದ ಅನಿವಾರ್ಯಗಳಲ್ಲಿ ಹುಟ್ಟಿಕೊಂಡಿರುವ ಬಳಕೆಗಳು.

ಗಣನೀಯ ಇಳಿಮುಖ:

ಕಲೆ-ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಓದುಗರ ಸಾಹಿತ್ಯಾಸಕ್ತಿಯಲ್ಲಿ ಆಗಿರುವ ಬದಲಾವಣೆ, ಪತ್ರಿಕೆ ನಡೆಸುವವರ ಹಣಕಾಸಿನ ಸಂಕಷ್ಟ, ಮಾರಾಟ-ಪ್ರಸರಣೆಯಲ್ಲಿ ವೃತ್ತಿಪರತೆಯನ್ನು ಕಾಯ್ದುಕೊಳ್ಳಲು ಆಗದೇ ಇರುವುದು, ಬಹುತೇಕ ಸಾಹಿತ್ಯ ಪತ್ರಿಕೆಗಳ ವಹಿವಾಟು ಏಕವ್ಯಕ್ತಿ ಹೋರಾಟ ಆಗಿರುವುದು- ಹೀಗೆ ಅನೇಕ ಕಾರಣಗಳನ್ನು ಈ ನಿಟ್ಟಿನಲ್ಲಿ ಊಹಿಸಬಹುದು.

ಮುಖ್ಯವಾಹಿನಿಯ ಪತ್ರಿಕೆಗಳನ್ನು ಗಮನಿಸಿದರಂತೂ ಬಹುತೇಕ ಪತ್ರಿಕೆಗಳು ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯವನ್ನು ದೂರ ಸರಿಸಿರುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಮೇಲೆ ಪಟ್ಟಿಮಾಡಿರುವ, ನಿರಂಜನ ವಾನಳ್ಳಿಯವರು ಗುರುತಿಸಿರುವ ಅಂಶಗಳನ್ನು ಗಮನಿಸಿದರೆ, ದಶಕಗಳ ಹಿಂದೆ ಪತ್ರಿಕೆಗಳು ಸಾಹಿತ್ಯಕ್ಕೆ ನೀಡುತ್ತಿದ್ದ ಆದ್ಯತೆಗೂ ಇಂದಿನ ವಾಸ್ತವಕ್ಕೂ ಸ್ಪಷ್ಟ ವ್ಯತ್ಯಾಸವಿರುವುದು ಸಾಮಾನ್ಯ ಓದುಗನಿಗೂ ಅರ್ಥವಾಗುತ್ತದೆ.

ಒಂದು ಕಾಲದಲ್ಲಿ ಪತ್ರಿಕೆಗಳ ಭಾನುವಾರದ ಪುರವಣಿ, ವಾರ್ಷಿಕ ವಿಶೇಷಾಂಕಗಳಲ್ಲಿ ಕಥೆ-ಕವಿತೆಗಳನ್ನು ಬರೆದು ಬಹುಮಾನ ಪಡೆದು ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ನೂರಾರು ಮಂದಿಯ ಉದಾಹರಣೆ ಇದ್ದರೆ, ಅಂತಹದೊಂದು ಕಾಲ ಇತ್ತೇ ಎಂದು ಅಚ್ಚರಿಪಡುವ ಸಂದರ್ಭ ಇಂದಿನದು. ಕಳೆದ ಹತ್ತು ವರ್ಷಗಳಲ್ಲಿ ಅನೇಕ ಪತ್ರಿಕೆಗಳ ಸಾಹಿತ್ಯ ಪುರವಣಿಗಳು ಗುರುತೇ ಸಿಗದಷ್ಟು ಸೊರಗಿ ಹೋಗಿವೆ. ಕಥೆ, ಕಾವ್ಯ ವಿಭಾಗಗಳೆಲ್ಲ ಮಾಯವಾಗಿವೆ. ‘ಅವನ್ನೆಲ್ಲ ಓದುವವರು ಇಲ್ಲ’ ಎಂಬುದು ಎಲ್ಲರೂ ಕೊಡುವ ಸುಲಭ ಸಬೂಬು. ‘ಜಾಹೀರಾತುದಾರರಿಗೆ ಅಂತಹ ಪುಟಗಳ ಬಗ್ಗೆ ಆಸಕ್ತಿ ಇಲ್ಲ’ ಎಂಬುದು ಒಳಗಿನಿಂದ ಕೇಳುವ ಧ್ವನಿ. ವಾಸ್ತವ ಏನು ಎಂಬುದು ಯಕ್ಷಪ್ರಶ್ನೆ. ಕೊರೋನ ಅಂತೂ ಸಾಪ್ತಾಹಿಕ ಪುರವಣಿಗಳನ್ನೇ ನಿಲ್ಲಿಸಿಬಿಡುವುದಕ್ಕೆ ಒಳ್ಳೆಯ ನೆಪವಾಗಿದೆ. ಕೊರೋನದ ಆತಂಕಗಳು ಕಡಿಮೆಯಾಗಿ ಮಾಧ್ಯಮಗಳು ಆರ್ಥಿಕವಾಗಿ ಚೇತರಿಸಿಕೊಂಡರೂ, ಅವುಗಳ ಸಾಹಿತ್ಯಪ್ರೀತಿ ಚೇತರಿಸಿಕೊಂಡಂತೆ ಕಾಣುವುದಿಲ್ಲ. ಸಾಧ್ಯವಾದಷ್ಟು ಕಾಲ ಯಥಾಸ್ಥಿತಿ ಮುಂದುವರಿದರೆ ವ್ಯಾವಹಾರಿಕ ದೃಷ್ಟಿಯಿಂದ ಅನುಕೂಲವೇ ಹೆಚ್ಚು ಎಂದು ಅವು ಭಾವಿಸಿಕೊಂಡಂತಿದೆ.

ವಿದ್ಯುನ್ಮಾನ ಮಾಧ್ಯಮ:

ವಿದ್ಯುನ್ಮಾನ ಮಾಧ್ಯಮಗಳ ಪೈಕಿ, ದೂರದರ್ಶನ ಮೊದಲಿನಿಂದಲೂ ಕಲೆ-ಸಾಹಿತ್ಯಕ್ಕೆ ಸಾಕಷ್ಟು ಒತ್ತು ನೀಡುತ್ತಾ ಬಂದಿದೆ. ಸಾಹಿತ್ಯ, ಕಲಾ ಮೌಲ್ಯವುಳ್ಳ ಧಾರಾವಾಹಿಗಳು ವಿವಿಧ ಭಾಷೆಗಳಲ್ಲಿ ಬಂದಿವೆ. ಹಿಂದಿಯಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದ ರಾಮಾಯಣ, ಮಹಾಭಾರತ ಧಾರಾವಾಹಿಗಳು, ಕನ್ನಡದಲ್ಲಿ ಬಂದ ಮಲೆಗಳಲ್ಲಿ ಮದುಮಗಳು, ಗೃಹಭಂಗ, ಕಾನೂರು ಹೆಗ್ಗಡತಿ; ‘ಕತೆಗಾರ’ನಂತಹ ಸರಣಿಗಳು, ಲೇಖಕರು-ಕಲಾವಿದರ ಕುರಿತ ಸಾಕ್ಷ್ಯಚಿತ್ರ, ಸಂದರ್ಶನಗಳು, ನಿಯಮಿತವಾಗಿ ಪ್ರಸಾರವಾಗುವ ನಾಟಕ, ಸಿನಿಮಾ, ಯಕ್ಷಗಾನ, ಹರಿಕಥೆ, ಸಂಗೀತ, ನೃತ್ಯ, ರೂಪಕಗಳು ಒಟ್ಟಾರೆ ಸಾಹಿತ್ಯ ಸಂವರ್ಧನೆಗೆ ಗಣನೀಯ ಕೊಡುಗೆ ನೀಡಿವೆ. 

ಆದರೆ ಖಾಸಗಿ ವಾಹಿನಿಗಳಲ್ಲಿ ಈ ಕುರಿತ ಆಸಕ್ತಿಯಾಗಲೀ ಕಾಳಜಿಯಾಗಲೀ ವ್ಯಕ್ತವಾಗುವುದು ಅಪರೂಪ. ಟಿಆರ್‍ಪಿಯನ್ನು ಹುಟ್ಟಿಸದಿರುವ ಯಾವ ವಿಷಯದಲ್ಲೂ ಅವುಗಳಿಗೆ ಆಸಕ್ತಿ ಇಲ್ಲ. ಟಿವಿ ವಾಹಿನಿಗಳು ಕಲೆ-ಸಾಹಿತ್ಯಕ್ಕೆ ಒತ್ತು ನೀಡುವ ಬಗ್ಗೆ ಮಾತಾಡುವುದು ವ್ಯಾವಹಾರಿಕ ಜಗತ್ತಿನ ಬಗ್ಗೆ ಏನೂ ಅರಿವಿಲ್ಲದವರ ಹಳಹಳಿಕೆ ಎಂಬಂತಾಗಿದೆ.

ನಾಡು-ನುಡಿ-ಸಂಸ್ಕೃತಿಯ ಪ್ರಸರಣೆಯಲ್ಲಿ ಆಕಾಶವಾಣಿಯೂ ಹಿಂದೆ ಬಿದ್ದಿಲ್ಲ. ಕಲೆ-ಸಾಹಿತ್ಯಗಳನ್ನು ಜನಸಾಮಾನ್ಯರ ಬಳಿಗೆ ಒಯ್ಯುವಲ್ಲಿ ಬಾನುಲಿಯ ಪಾತ್ರವನ್ನು ಯಾರೂ ಅಲ್ಲಗಳೆಯಲಾಗದು. ಶಾಸ್ತ್ರೀಯ ಸಂಗೀತ, ಜಾನಪದ ಹಾಡುಗಳು, ಚಲನಚಿತ್ರ ಗೀತೆಗಳು, ಭಾವಗೀತೆ, ಗಮಕ ವಾಚನ, ನಾಟಕ, ರೂಪಕ, ಭಾಷಣ, ಸಂವಾದ, ಹರಿಕಥೆ, ಯಕ್ಷಗಾನ, ಹೀಗೆ ವಿವಿಧ ಮಾದರಿಗಳಲ್ಲಿ ಅಭಿವ್ಯಕ್ತಗೊಳ್ಳುವ ಆಕಾಶವಾಣಿಯ ಸಾಹಿತ್ಯಪ್ರೀತಿಯಿಂದಾಗಿ ಅದು ಸಾಮಾನ್ಯ ಕೇಳುಗರ ಹೃದಯದಲ್ಲಿ ಸುಭದ್ರ ಸ್ಥಾನ ಪಡೆದುಕೊಂಡಿದೆ. ಆದರೆ ಆಕಾಶವಾಣಿಯ ಪ್ರಾದೇಶಿಕ ಪ್ರಸಾರಕ್ಕೆ ದೊರೆಯುತ್ತಿದ್ದ ಪ್ರಾಮುಖ್ಯತೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಆಕಾಶವಾಣಿಯ ಅಸ್ತಿತ್ವ ಇರುವುದೇ ಅದರ ಪ್ರಾದೇಶಿಕ ಪ್ರಸಾರದಲ್ಲಿ ಮತ್ತು ಅದು ಒಳಗೊಂಡಿರುವ ಕಲೆ-ಸಾಹಿತ್ಯ-ಸಂಸ್ಕೃತಿಯ ಸತ್ವದಲ್ಲಿ. ಅದೇ ಕಳೆದುಹೋದರೆ ಬಾನುಲಿ ಇನ್ನೊಂದು ಯಾಂತ್ರಿಕ ಮಾಧ್ಯಮವಾಗುವುದರಲ್ಲಿ ಸಂಶಯವಿಲ್ಲ.

ನವಮಾಧ್ಯಮ:

ನಾವು ಗಮನಿಸಬೇಕಾಗಿರುವ ಮಾಧ್ಯಮಗಳ ಇನ್ನೊಂದು ಮುಖ ಆನ್ಲೈನ್ ಮಾಧ್ಯಮ ಅಥವಾ ನವ ಮಾಧ್ಯಮ. ಇಂಟರ್ನೆಟ್ ಇಂದು ಬಹುಜನರನ್ನು, ಅದರಲ್ಲೂ ಯುವತಲೆಮಾರನ್ನು ಬಹುವಾಗಿ ಆಕರ್ಷಿಸಿದೆ. ಅದನ್ನು ನಾವು ಅಲಕ್ಷಿಸುವಂತಿಲ್ಲ. ಯುವಕರು ಹೆಚ್ಚುಹೆಚ್ಚಾಗಿ ಅಂತರಜಾಲವನ್ನು, ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ ಎಂದರೆ ಅಲ್ಲಿ ಸಾಹಿತ್ಯದ ನೆಲೆ-ಬೆಲೆ ಏನು, ಎಷ್ಟು ಎಂಬುದನ್ನು ನಾವು ಯೋಚಿಸಬೇಕಾಗುತ್ತದೆ. ಸಾಮಾನ್ಯ ಆಸಕ್ತಿಯ ಜಾಲತಾಣಗಳು, ಸಾಹಿತ್ಯಕ್ಕೇ ಮೀಸಲಾದ ವೆಬ್ ಮ್ಯಾಗಜಿನ್‍ಗಳು ಇಂದು ನೂರಾರು ಸಂಖ್ಯೆಯಲ್ಲಿ ಇವೆ. ಅವುಗಳನ್ನು ಗಮನಿಸುವವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲೇ ಇದೆ. ಫೇಸ್ಬುಕ್, ವಾಟ್ಸಾಪ್‍ನಂತಹ ಮಾಧ್ಯಮಗಳಲ್ಲೂ ಸಾಹಿತ್ಯದ ಗಂಭೀರ ಚರ್ಚೆಗಳಾಗುವುದಿದೆ. ಕೊರೋನ ಒಂದು ನೆಪವಾಗಿ ಮುಖ್ಯಭೂಮಿಕೆಗೆ ಬಂದ ಆನ್ಲೈನ್ ವೇದಿಕೆಗಳು, ಇತ್ತೀಚೆಗೆ ಜನಪ್ರಿಯವಾದ ಕ್ಲಬ್‍ಹೌಸ್ – ಇವನ್ನೆಲ್ಲ ನಾವು ಕಡೆಗಣಿಸುವಂತಿಲ್ಲ.

ಹಾಗೆ ನೋಡಿದರೆ, ಯುವಕರಲ್ಲಿ ಸಾಹಿತ್ಯಾಸಕ್ತಿ ಕುಸಿದಿದೆ ಎಂದು ಸಾರಾಸಗಟಾಗಿ ಹೇಳಿಬಿಡುವಂತಿಲ್ಲ. ಅವರು ಬಯಸುವ ಸಾಹಿತ್ಯ ಹಾಗೂ ಅದು ಅನಾವರಣಗೊಳ್ಳುವ ಮಾಧ್ಯಮದ ಸ್ವರೂಪ ಬದಲಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು.  ಪುಸ್ತಕ ಹಿಡಿದು ಓದುವವರಿಗಿಂತ ಮೊಬೈಲ್, ಕಂಪ್ಯೂಟರ್, ಟ್ಯಾಬ್ ಅಥವಾ ಕಿಂಡಲ್ ಮೂಲಕ ಓದುವವರ ಪ್ರಮಾಣ ಹೆಚ್ಚಾಗುತ್ತಿದೆ. ಈಗಿನ ಹೊಸ ತಲೆಮಾರಿಗೆ ಈ ಪರಿಕರಗಳು ಹೆಚ್ಚು ಆಕರ್ಷಕವೂ, ಅನುಕೂಲಕರವೂ ಆಗಿರಬಹುದು. ಅವರಿಗೆ ನಾವು ಪುಸ್ತಕಗಳ ಹಾರ್ಡ್ ಪ್ರತಿಯನ್ನೇ ಓದಿ ಎಂದು ಒತ್ತಾಯಿಸುವುದರಲ್ಲಿ ಅರ್ಥವಿಲ್ಲ. ಅವರು ಬಯಸುವ ಮಾದರಿಗೆ ಬದಲಾಯಿಸಿಕೊಡುವುದು ಹೆಚ್ಚು ಪ್ರಶಸ್ತ. ಕಾಲ ಬದಲಾದಂತೆ ಜನರ ಅವಶ್ಯಕತೆ, ಆದ್ಯತೆಗಳಲ್ಲಿ ಬದಲಾವಣೆ ಉಂಟಾಗುವುದು ವಿಚಿತ್ರವೇನೂ ಅಲ್ಲ. ಈ ಬದಲಾವಣೆಯನ್ನು ಗಮನಿಸದೆ, ಅದಕ್ಕೆ ಹೊಂದಿಕೊಳ್ಳದೆ ಹೋದರೆ ನಷ್ಟವೇ ಹೆಚ್ಚು.

‘ಸಾಹಿತ್ಯ ಮತ್ತು ಮಾಧ್ಯಮ’ ವಿಚಾರವನ್ನು ಧನಾತ್ಮಕ ದೃಷ್ಟಿಕೋನದಿಂದ ನೋಡುತ್ತಾ ಹೋದರೆ ಈ ಬಗೆಯ ಆಯಾಮಗಳು ಗೊತ್ತಾಗುತ್ತಾ ಹೋಗುತ್ತವೆ. ಆದ್ದರಿಂದ ನಿರಾಶೆಗೊಳ್ಳದೆ, ಬದಲಾದ ಕಾಲದಲ್ಲಿ ಒಟ್ಟಾರೆ ಸಮಾಜ ಮಾಡಬಹುದಾದ್ದೇನು ಎಂದು ಯೋಚಿಸುವುದು, ಮತ್ತು ಇರುವ ಅವಕಾಶಗಳನ್ನು ಗರಿಷ್ಠ ಸದುಪಯೋಗಪಡಿಸಿಕೊಳ್ಳುವುದು ಒಳ್ಳೆಯದು.

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: