ಸೋಮವಾರ, ಸೆಪ್ಟೆಂಬರ್ 30, 2019

NET ಪರೀಕ್ಷೆಗೆ ನೆಟ್ಟಗೆ ತಯಾರಾಗಿ!

01 ಒಕ್ಟೋಬರ್ 2019ರ ಉದಯವಾಣಿ (ಜೋಶ್ ಪುರವಣಿ)ಯಲ್ಲಿ ಪ್ರಕಟವಾದ ಲೇಖನ

ಏನಾದರಾಗಲಿ, ಈ ಬಾರಿ ನೆಟ್ ಪರೀಕ್ಷೆ ಪಾಸಾಗಿಬಿಡಬೇಕು ಎಂದು ಗಟ್ಟಿ ಮನಸ್ಸು ಮಾಡುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಸಾಫ್ಟ್‍ವೇರ್ ಇಂಜಿನಿಯರುಗಳಂತೆ ಸಂಬಳ ಪಡೆಯುತ್ತಿರುವುದು, ಇಂತಹ ಹುದ್ದೆಗೆ ಆಯ್ಕೆಯಾಗಲು ನೆಟ್ (NET) ಪರೀಕ್ಷೆ ಪ್ರಾಥಮಿಕ ಅರ್ಹತೆಯಾಗಿರುವುದೇ ಇದಕ್ಕೆ ಪ್ರಮುಖ ಕಾರಣ.

ಯುಜಿಸಿ-ಎನ್‍ಇಟಿ ಹಿಂದಿನಿಂದಲೂ ಒಂದು ಪ್ರತಿಷ್ಠಿತ ಪರೀಕ್ಷೆ. ಅದನ್ನು ತೇರ್ಗಡೆಯಾದವರೆಲ್ಲರಿಗೂ ಸರ್ಕಾರಿ ನೇಮಕಾತಿ ಖಾತ್ರಿಯಲ್ಲವಾದರೂ, ತೇರ್ಗಡೆಯಾಗುವುದೇ ಒಂದು ಹೆಮ್ಮೆಯ ಸಂಗತಿ. ಒಮ್ಮೆ ತೇರ್ಗಡೆಯಾದರೆ ಅದು ಜೀವಮಾನದ ಅರ್ಹತೆ - ಅದಕ್ಕೆ ಎಕ್ಸ್‍ಪಯರಿ ಡೇಟ್ ಇಲ್ಲ; ಅವಕಾಶ ಕೂಡಿ ಬಂದಾಗ ಈ ಅರ್ಹತೆ ಬೆನ್ನಿಗೆ ನಿಲ್ಲುತ್ತದೆ. ಖಾಸಗಿ ಕಾಲೇಜುಗಳೂ ನೆಟ್ ತೇರ್ಗಡೆಯಾದ ಅಭ್ಯರ್ಥಿಗಳಿಗೇ ಮಣೆ ಹಾಕುತ್ತವೆ. ಅತ್ಯುನ್ನತ ಶ್ರೇಣಿಯಲ್ಲಿ ನೆಟ್ ತೇರ್ಗಡೆಯಾದವರು ಪಿಎಚ್‍ಡಿ ಸಂಶೋಧನೆ ಕೈಗೊಳ್ಳುವುದಕ್ಕೆ ಸರ್ಕಾರದಿಂದ ಆಕರ್ಷಕ ಶಿಷ್ಯವೇತನ (JRF) ಪಡೆಯುವುದೂ ನೆಟ್ ಜನಪ್ರಿಯತೆಗೆ ಇನ್ನೊಂದು ಕಾರಣ.

ಕಷ್ಟದ ಪರೀಕ್ಷೆಯೇ?
ಕಷ್ಟವೆನ್ನುವವರಿಗೆ ಕಷ್ಟ, ಸುಲಭವೆನ್ನುವವರಿಗೆ ಸುಲಭ. ಈಜು ಬಲ್ಲವರಿಗೆ ಅದೊಂದು ಆಟ, ನಿಂತು ನೋಡುವವರಿಗೆ ಆತಂಕ. ಆದರೆ ಇದು ಎಂ.ಎ., ಎಂಎಸ್ಸಿ ಪರೀಕ್ಷೆಗಳನ್ನು ಬರೆದಂತೆ ಅಲ್ಲ. ರಾಷ್ಟೀಯ ಅರ್ಹತಾ ಪರೀಕ್ಷೆ. ತೇರ್ಗಡೆಯಾದವರು ದೇಶದ ಯಾವ ಭಾಗದಲ್ಲಾದರೂ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಬಹುದು. ಸ್ನಾತಕೋತ್ತರ ಹಂತದ ಪಠ್ಯಕ್ರಮವೇ ಆದರೂ, ಪರೀಕ್ಷಾ ವಿಧಾನ ಹಾಗೂ ಪ್ರಶ್ನೆಗಳ ಸಂಕೀರ್ಣತೆಯಿಂದಾಗಿ ಗಟ್ಟಿ ಮನಸ್ಸು, ಅಪಾರ ಬದ್ಧತೆ ಹಾಗೂ ಶ್ರದ್ಧೆಯ ತಯಾರಿಯನ್ನು ಅಪೇಕ್ಷಿಸುತ್ತದೆ.

ಯಾರು ಬರೆಯಬಹುದು?
ಸ್ನಾತಕೋತ್ತರ ಪದವೀಧರರು ಅಥವಾ ಅದರ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಈ ಪರೀಕ್ಷೆ ಬರೆಯಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ. 55, ಒಬಿಸಿ/ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳು ಶೇ. 50 ಅಂಕ ಪಡೆದಿರಬೇಕು. ಸ್ನಾತಕೋತ್ತರ ಪದವಿ ಅಂತಿಮ ವರ್ಷದಲ್ಲೇ ನೆಟ್ ತೇರ್ಗಡೆಯಾದರೆ, ಪದವಿ ಫಲಿತಾಂಶ ಬಂದಮೇಲಷ್ಟೇ ಅರ್ಹತಾ ಪ್ರಮಾಣಪತ್ರ ದೊರೆಯುತ್ತದೆ.

ನೆಟ್ ಬರೆದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆಯುವುದಕ್ಕೆ ಗರಿಷ್ಠ ವಯೋಮಿತಿ ಇಲ್ಲ. ಆದರೆ ಸಂಶೋಧನಾ ಫೆಲೋಷಿಪ್ (JRF) ಪಡೆಯಲು ಅರ್ಹರಾಗಬೇಕೆಂದರೆ 30 ವರ್ಷದ ಒಳಗಿನವರಾಗಿರಬೇಕು. ಒಬಿಸಿ/ಎಸ್‍ಸಿ/ಎಸ್‍ಟಿ/ಭಿನ್ನಲಿಂಗಿ ಅಭ್ಯರ್ಥಿಗಳಿಗೆ 35 ವರ್ಷದವರೆಗೆ ಅವಕಾಶವಿದೆ.

ಯಾರು ನಡೆಸುತ್ತಾರೆ?
ಹಿಂದೆ ಎನ್‍ಇಟಿ ಪರೀಕ್ಷೆಗಳನ್ನು ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC) ನಡೆಸುತ್ತಿತ್ತು. ಈಗ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಸ್ಥಾಪಿತವಾದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸುತ್ತದೆ. ಮಾನವಿಕ ವಿಷಯಗಳ (ಕಲೆ, ವಾಣಿಜ್ಯ, ಸಾಹಿತ್ಯ) ಎನ್‍ಇಟಿ ಪರೀಕ್ಷೆಗೆ ಯುಜಿಸಿ ಪ್ರಾಧಿಕಾರವಾದರೆ, ವಿಜ್ಞಾನ ವಿಷಯಗಳ ಎನ್‍ಇಟಿ ಪರೀಕ್ಷೆಗೆ ಯುಜಿಸಿ-ಸಿಎಸ್‍ಐಆರ್ ಪ್ರಾಧಿಕಾರವಾಗಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (CSIR) ನಮ್ಮ ದೇಶದ ಅತಿದೊಡ್ಡ ಸಂಶೋಧನ ಸಂಸ್ಥೆಗಳಲ್ಲೊಂದು. ಎರಡೂ ಪರೀಕ್ಷೆಗಳಿಗೆ ಬೇರೆಬೇರೆ ಸಮಯದಲ್ಲಿ ಪ್ರತ್ಯೇಕ ಅಧಿಸೂಚನೆ, ಪ್ರಕ್ರಿಯೆ ನಡೆಯುತ್ತದೆ.

ಮಾನವಿಕ ವಿಭಾಗದಲ್ಲಿ ಸುಮಾರು 100 ವಿಷಯಗಳಲ್ಲಿ ಎನ್‍ಇಟಿ ಪರೀಕ್ಷೆ ತೆಗೆದುಕೊಳ್ಳಬಹುದು. ವಿಜ್ಞಾನ ವಿಷಯಗಳಲ್ಲಿ ರಾಸಾಯನಿಕ ವಿಜ್ಞಾನ, ಭೂ ವಿಜ್ಞಾನ, ಜೀವ ವಿಜ್ಞಾನ, ಗಣಿತಶಾಸ್ತ್ರೀಯ ವಿಜ್ಞಾನ ಹಾಗೂ ಭೌತಶಾಸ್ತ್ರೀಯ ವಿಜ್ಞಾನಗಳೆಂಬ ಐದು ವಿಭಾಗಗಳಿವೆ. ತಾವು ಎಂಎಸ್ಸಿ ಓದಿದ ವಿಷಯದ ಎನ್‍ಇಟಿಯನ್ನು ಸಂಬಂಧಿತ ವಿಭಾಗದಲ್ಲಿ ಬರೆಯಬಹುದು. ಹಿಂದೆ ಇಂಜಿನಿಯರಿಂಗ್ ವಿಷಯಗಳಿಗೂ ಎನ್‍ಇಟಿ ನಡೆಯುತ್ತಿತ್ತು, ಈಗ ಇಲ್ಲ.

ಹೇಗಿರುತ್ತದೆ ನೆಟ್?
ಈಗ ಎನ್‍ಇಟಿ ಪರೀಕ್ಷೆ ಆನ್‍ಲೈನ್ ಮಾದರಿಯಲ್ಲಿ ನಡೆಯುತ್ತದೆ. ಕಲೆ/ವಾಣಿಜ್ಯ/ಸಾಹಿತ್ಯ ವಿಷಯಗಳಲ್ಲಿ ಎರಡು ಪ್ರತ್ಯೇಕ ಪತ್ರಿಕೆಗಳಿದ್ದು ಒಟ್ಟು ಮೂರು ಗಂಟೆಯ ಅವಧಿ ಇರುತ್ತದೆ. ಪ್ರಶ್ನೆಗಳು ಬಹುಆಯ್ಕೆಯ ವಸ್ತುನಿಷ್ಠ ಮಾದರಿಯವು. ಮೊದಲನೇ ಪತ್ರಿಕೆ ಎಲ್ಲ ವಿಷಯಗಳ ಅಭ್ಯರ್ಥಿಗಳಿಗೂ ಸಾಮಾನ್ಯ. ಇದರಲ್ಲಿ ಎರಡು ಅಂಕಗಳ 50 ಪ್ರಶ್ನೆಗಳಿದ್ದು ಅವು ಬೋಧನೆ ಹಾಗೂ ಸಂಶೋಧನ ಕೌಶಲಗಳಿಗೆ ಸಂಬಂಧಪಟ್ಟವು. ಎರಡನೇ ಪತ್ರಿಕೆ ಆಯಾ ಅಭ್ಯರ್ಥಿಗಳ ಸ್ನಾತಕೋತ್ತರ ಪದವಿಯಲ್ಲಿ ಓದಿದ ವಿಷಯಗಳಿಗೆ ಸಂಬಂಧಪಟ್ಟವು; ಉದಾ: ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ, ಕನ್ನಡ, ಇಂಗ್ಲಿಷ್, ಇತ್ಯಾದಿ. ಇದರಲ್ಲಿ ತಲಾ ಎರಡು ಅಂಕಗಳ 100 ಪ್ರಶ್ನೆಗಳಿರುತ್ತವೆ. ಎರಡೂ ಪರೀಕ್ಷೆಗಳ ನಡುವೆ ಬ್ರೇಕ್ ಇಲ್ಲ. ಪ್ರಶ್ನೆಗಳ ನಡುವೆ ಆಯ್ಕೆ ಇಲ್ಲ, ನೆಗೆಟಿವ್ ಮಾರ್ಕಿಂಗ್ ಕೂಡ ಇಲ್ಲ.

ವಿಜ್ಞಾನ ವಿಷಯಗಳಲ್ಲಿ ಮೂರು ಗಂಟೆ ಅವಧಿಯ ಒಂದೇ ಪರೀಕ್ಷೆ. ಎರಡು ಪತ್ರಿಕೆಗಳಿಲ್ಲ. 200 ಅಂಕಗಳ ಬಹು ಆಯ್ಕೆಯ ವಸ್ತುನಿಷ್ಠ ಮಾದರಿಯ ಪತ್ರಿಕೆ. ಇದರಲ್ಲಿ ಮೂರು ವಿಭಾಗಗಳಿರುತ್ತವೆ: ಮೊದಲನೇ ಭಾಗ (30 ಅಂಕ) ಎಲ್ಲರಿಗೂ ಸಾಮಾನ್ಯ; ಎರಡನೇ ಭಾಗ (70 ಅಂಕ) ಅವರವರ ಎಂಎಸ್ಸಿ ವಿಷಯಗಳಿಗೆ ಸಂಬಂಧಿಸಿದ್ದು; ಮೂರನೇ ಭಾಗ (100 ಅಂಕ) ಅದೇ ವಿಷಯ, ಕೊಂಚ ಹೆಚ್ಚಿನ ಸಂಕೀರ್ಣತೆ ಹೊಂದಿರುವ ಪ್ರಶ್ನೆಗಳಿರುತ್ತವೆ. ಇಲ್ಲಿ ಪ್ರಶ್ನೆಗಳ ಆಯ್ಕೆಯೂ ಇರುತ್ತದೆ, ನೆಗೆಟಿವ್ ಮಾರ್ಕಿಂಗ್ ಕೂಡ ಇರುತ್ತದೆ.

ಪರೀಕ್ಷೆ ಯಾವಾಗ? ಎಲ್ಲಿ?
ನೆಟ್ ಪರೀಕ್ಷೆಯನ್ನು ಜೂನ್ ಹಾಗೂ ಡಿಸೆಂಬರ್ ತಿಂಗಳಲ್ಲಿ- ಅಂದರೆ ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ. ಈ ಬಾರಿಯ ನೆಟ್ ಪರೀಕ್ಷೆಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಅಕ್ಟೋಬರ್ 9 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಅಕ್ಟೋಬರ್ 10ರ ರಾತ್ರಿವರೆಗೂ ಶುಲ್ಕ ಪಾವತಿಸಬಹುದು. ಸಾಮಾನ್ಯ ವರ್ಗದವರಿಗೆ ರೂ. 1000, ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ಒಬಿಸಿ ವರ್ಗದವರಿಗೆ ರೂ. 500 ಮತ್ತು ಎಸ್‍ಸಿ/ಎಸ್‍ಟಿ/ವಿಕಲಾಂಗ/ತೃತೀಯಲಿಂಗಿ ಅಭ್ಯರ್ಥಿಗಳಿಗೆ ರೂ. 250 ಶುಲ್ಕವಿರುತ್ತದೆ. ನವೆಂಬರ್ 9ರಿಂದ ಎನ್‍ಟಿಎ ಜಾಲತಾಣ ದಿಂದ ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.

ಯುಜಿಸಿ-ಎನ್‍ಇಟಿ ಈ ಬಾರಿ ಡಿಸೆಂಬರ್ 2ರಿಂದ 6ರವರೆಗೆ, ಸಿಎಸ್‍ಐಆರ್-ಎನ್‍ಇಟಿ ಡಿಸೆಂಬರ್ 15ಕ್ಕೆ ನಡೆಯಲಿದೆ. ಎರಡೂ ಪರೀಕ್ಷೆಗಳ ಫಲಿತಾಂಶ ಡಿಸೆಂಬರ್ 31ಕ್ಕೆ ಲಭ್ಯವಾಗಲಿದೆ. ಯುಜಿಸಿ-ಎನ್‍ಇಟಿ ಎರಡು ಪಾಳಿಗಳಲ್ಲಿ ನಡೆಯಲಿದ್ದು, ಬೆಳಗ್ಗಿನ ಶಿಫ್ಟ್ 9:30ರಿಂದ 12:30ರವರೆಗೆ, ಮಧ್ಯಾಹ್ನದ ಶಿಫ್ಟ್ 2:30ರಿಂದ 5:30ರವರೆಗೆ.

ಆನ್‍ಲೈನ್ ಪರೀಕ್ಷೆಗಾಗಿ ದೇಶದ ವಿವಿಧ ಭಾಗಗಳಲ್ಲಿ ಕಂಪ್ಯೂಟರ್ ಸೌಲಭ್ಯವಿರುವ ಕೇಂದ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಹಾಲ್ ಟಿಕೇಟಿನಲ್ಲಿ ಪರೀಕ್ಷೆಯ ಸ್ಥಳ, ದಿನಾಂಕ ಹಾಗೂ ಸಮಯ ನಮೂದಿಸುತ್ತಾರೆ.

ತಯಾರಿ ಹೇಗೆ?
ಎನ್‍ಇಟಿ ಪರೀಕ್ಷೆಗೆ ಕನಿಷ್ಠ ಆರು ತಿಂಗಳ ಗಂಭೀರ ತಯಾರಿ ಬೇಕು. ಮಾನವಿಕ ವಿಷಯಗಳ ಪಠ್ಯಕ್ರಮ https://www.ugcnetonline.in/syllabus-new.php ಜಾಲತಾಣದಲ್ಲಿಯೂ, ವಿಜ್ಞಾನ ವಿಷಯಗಳ ಪಠ್ಯಕ್ರಮ https://csirhrdg.res.in ಜಾಲತಾಣದಲ್ಲಿಯೂ ಲಭ್ಯವಿದೆ. ತಯಾರಿಯ ಮೊದಲು ಪಠ್ಯಕ್ರಮದ ಸಂಪೂರ್ಣ ಪರಿಚಯ ಮಾಡಿಕೊಳ್ಳುವುದು ಅಗತ್ಯ.

ನೆಟ್ ಸಾಮಾನ್ಯ ಪತ್ರಿಕೆಯ ಪಠ್ಯಕ್ರಮದಲ್ಲಿ 10 ಅಧ್ಯಾಯಗಳಿವೆ. ಬೋಧನೆ ಹಾಗೂ ಸಂಶೋಧನೆಯ ಕೌಶಲ, ವಿಷಯ ಗ್ರಹಿಕೆ, ಸಂವಹನ, ಪ್ರಾಥಮಿಕ ಗಣಿತ, ತಾರ್ಕಿಕ ಚಿಂತನೆ, ದತ್ತಾಂಶ ವಿಶ್ಲೇಷಣೆ, ಮಾಹಿತಿ ಸಂವಹನ ತಂತ್ರಜ್ಞಾನ (ICT), ಅಭಿವೃದ್ಧಿ ಮತ್ತು ಪರಿಸರ, ಉನ್ನತ ಶಿಕ್ಷಣ ವ್ಯವಸ್ಥೆ- ಹೀಗೆ ವೈವಿಧ್ಯಮಯ ವಿಷಯಗಳಿರುತ್ತವೆ. ಐಚ್ಛಿಕ ವಿಷಯದ ಪಠ್ಯಕ್ರಮ ಸ್ನಾತಕೋತ್ತರ ಕೋರ್ಸಿಗೆ ಸಮಾನವಾಗಿದ್ದು, ಸಮಗ್ರ ಹಾಗೂ ಆಳವಾದ ಅಧ್ಯಯನ ಅಗತ್ಯ.

ಒಂದು ವೇಳಾಪಟ್ಟಿಯನ್ನು ಹಾಕಿಕೊಂಡು ದಿನದಲ್ಲಿ ಕನಿಷ್ಠ 3-4 ಗಂಟೆಯನ್ನಾದರೂ ಅಭ್ಯಾಸಕ್ಕೆ ಮೀಸಲಿಡುವುದು ಒಳ್ಳೆಯದು. ಪರೀಕ್ಷೆ ವಸ್ತುನಿಷ್ಠ ಮಾದರಿಯದ್ದಾಗಿರುವುದರಿಂದ ಸಣ್ಣಸಣ್ಣ ವಿವರಗಳಿಗೂ ಹೆಚ್ಚಿನ ಗಮನ ಕೊಡುವುದು ಮುಖ್ಯ. ಓದುತ್ತಲೇ ನೋಟ್ಸ್ ಮಾಡಿಕೊಳ್ಳುವುದು ಕೊನೆಯ ಕ್ಷಣದ ರಿವಿಶನ್‍ಗೆ ಬಹಳ ಅಗತ್ಯ. ಈಗ ಮಾರುಕಟ್ಟೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಸಾಕಷ್ಟು ಪುಸ್ತಕಗಳು ಲಭ್ಯ. ಹತ್ತಾರು ಪುಸ್ತಕಗಳನ್ನು ತಂದು ಗುಡ್ಡೆ ಹಾಕಿ ಗೊಂದಲಕ್ಕೆ ಬೀಳುವುದಕ್ಕಿಂತ ಉತ್ತಮ ಗುಣಮಟ್ಟದ ಒಂದೋ ಎರಡೋ ಪುಸ್ತಕ ಸಾಕು.

ಹಳೆಯ ಪ್ರಶ್ನೆಪತ್ರಿಕೆಗಳ ಅಭ್ಯಾಸ ಅತ್ಯಂತ ಮುಖ್ಯ. ಕನಿಷ್ಠ 7-8 ವರ್ಷಗಳ ಹಿಂದಿನ ಎಲ್ಲ ಪ್ರಶ್ನೆಪತ್ರಿಕೆಗಳನ್ನು ಬಿಡಿಸಲು ಕಲಿತರೆ ಪರೀಕ್ಷೆ ತೇರ್ಗಡೆಯಾಗುವುದರಲ್ಲಿ ಅನುಮಾನವೇ ಇಲ್ಲ. ಆಯಾ ಪರೀಕ್ಷೆಗಳ ವೆಬ್‍ಸೈಟಿನಿಂದ ಅನೇಕ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗೆ ನೋಡಿದರೆ ಈ ಪರೀಕ್ಷೆಗೆ ಪ್ರತ್ಯೇಕ ಕೋಚಿಂಗ್ ಅನಿವಾರ್ಯವೇನೂ ಅಲ್ಲ. ಪರಿಶ್ರಮಪಟ್ಟು ಸ್ವಂತ ಅಧ್ಯಯನ ಮಾಡಿದರೆ ಸಾಕು. ಈಗಂತೂ ಇಂಟರ್ನೆಟ್ಟಲ್ಲಿ ಧಾರಾಳ ಅಭ್ಯಾಸ ಸಾಮಗ್ರಿಗಳು, ಮಾಕ್ ಟೆಸ್ಟ್ ಗಳು ದೊರೆಯುತ್ತವೆ. ತೀರಾ ಅರ್ಥವಾಗದ ವಿಷಯಗಳಿದ್ದರೆ ಸ್ನೇಹಿತರ ಅಥವಾ ಅಧ್ಯಾಪಕರ ಬಳಿ ಪಾಠ ಹೇಳಿಸಿಕೊಳ್ಳಬಹುದು. ವಿದ್ಯಾರ್ಥಿಗಳಾಗಿರುವಾಗಲೇ ನೆಟ್ ಬರೆಯುವುದು ತಯಾರಿ ದೃಷ್ಟಿಯಿಂದ ತುಂಬ ಒಳ್ಳೆಯದು.

ಉದಾಸೀನ ಸಲ್ಲದು
‘ಮೊದಲನೇ ಪತ್ರಿಕೆ ಜನರಲ್, ಅಷ್ಟಾಗಿ ಓದಿಕೊಳ್ಳದಿದ್ದರೂ ಪರವಾಗಿಲ್ಲ; ಐಚ್ಛಿಕ ಪತ್ರಿಕೆಗೆ ಚೆನ್ನಾಗಿ ತಯಾರಾಗೋಣ’ ಎಂದು ಭಾವಿಸುವವರು ಹೆಚ್ಚು. ಇಲ್ಲೇ ಅವರು ಎಡವುವುದು. ಮೊದಲನೇ ಪತ್ರಿಕೆ ಅಂದುಕೊಂಡಷ್ಟು ಸುಲಭವಲ್ಲ. ಅಂದಾಜಿನ ಮೇಲೆ ಉತ್ತರ ಗುರುತು ಮಾಡುವುದೂ ಸರಿಯಲ್ಲ. ಮೊದಲನೇ ಪತ್ರಿಕೆಯಲ್ಲೇ ತೇರ್ಗಡೆಯಾಗದೆ ಎರಡನೆಯದರಲ್ಲಿ ಉನ್ನತ ಶ್ರೇಣಿ ಪಡೆದೂ ಪ್ರಯೋಜನವಿಲ್ಲ. ಆದ್ದರಿಂದ ಎರಡೂ ಪತ್ರಿಕೆಗಳಿಗೆ ಸಮಾನ ಆದ್ಯತೆ ನೀಡಿ ತಯಾರಿ ನಡೆಸುವವರೇ ಜಾಣರು.

ಎಲ್ಲ ಅಧ್ಯಾಯಗಳನ್ನು ಸಂಪೂರ್ಣವಾಗಿ ಅಭ್ಯಾಸ ಮಾಡುವುದೂ ಅಷ್ಟೇ ಮುಖ್ಯ. ಪ್ರತಿ ಅಧ್ಯಾಯದಿಂದಲೂ ಸಮಾನ ಸಂಖ್ಯೆಯ ಪ್ರಶ್ನೆಗಳನ್ನು ಕೇಳಿರುತ್ತಾರೆ. ಸಾಮಾನ್ಯವಾಗಿ ಜನರಲ್ ಪತ್ರಿಕೆಯ ಮೆಥಮೆಟಿಕಲ್ ರೀಸನಿಂಗ್ & ಆಪ್ಟಿಟ್ಯೂಡ್, ಲಾಜಿಕಲ್ ರೀಸನಿಂಗ್ ಡೇಟಾ ಇಂಟರ್‍ಪ್ರಿಟೇಶನ್ ಅಧ್ಯಾಯಗಳನ್ನು ನಿರ್ಲಕ್ಷಿಸುವವರು ಹೆಚ್ಚು. ಅದರಲ್ಲೂ ಕಲಾ ವಿಭಾಗದ ಅಭ್ಯರ್ಥಿಗಳಿಗೆ ಇವೆಲ್ಲ ಕೊಂಚ ಕಷ್ಟ ಅನಿಸಿ ಬಿಟ್ಟುಬಿಡುವುದೂ ಇದೆ. ಹಾಗೆ ಮಾಡುವುದು ತಪ್ಪು. ಅನೇಕ ಅಭ್ಯರ್ಥಿಗಳು ಮೊದಲ ಪತ್ರಿಕೆಯಲ್ಲಿ ಫೇಲ್ ಆಗುವುದಕ್ಕೆ ಇದೇ ಕಾರಣ. ಒಂದಷ್ಟು ಮಾದರಿ ಪ್ರಶ್ನೆಗಳನ್ನು ಅಭ್ಯಾಸ ಮಾಡಿದರೆ ಇವೆಲ್ಲ ಅಂತ ಕಠಿಣ ವಿಷಯಗಳೇನಲ್ಲ.

ಎರಡನೇ ಪತ್ರಿಕೆಯಲ್ಲಂತೂ ಹೊಂದಿಸಿ ಬರೆಯುವ, ಕಾಲಾನುಕ್ರಮದಲ್ಲಿ ಜೋಡಿಸುವ, ಪ್ರತಿಪಾದನೆ-ತರ್ಕ (Assertion-Reasoning) ಮಾದರಿಯ ಪ್ರಶ್ನೆಗಳೇ ಹೆಚ್ಚಾಗಿರುವುದರಿಂದ ಸಮಯ ಬೇಗನೆ ಕಳೆದುಹೋಗುತ್ತದೆ. ಕೊಂಚ ಏಕಾಗ್ರತೆ ತಪ್ಪಿದರೂ ಚೆನ್ನಾಗಿ ಗೊತ್ತಿರುವ ಪ್ರಶ್ನೆಗೇ ತಪ್ಪು ಉತ್ತರ ಬರೆಯುವ ಸಾಧ್ಯತೆ ಹೆಚ್ಚು. ಹಳೆಯ ಪ್ರಶ್ನೆಪತ್ರಿಕೆಗಳನ್ನು ಹೆಚ್ಚುಹೆಚ್ಚು ಬಿಡಿಸಿದಷ್ಟೂ ಈ ಸಮಸ್ಯೆ ಮನವರಿಕೆ ಆಗುವುದರಿಂದ ಸಂಭವನೀಯ ತಪ್ಪುಗಳಿಂದ ಬಚಾವಾಗಬಹುದು.

ಏನಿದು JRF?
ನೆಟ್ ಪರೀಕ್ಷೆಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಜೂನಿಯರ್ ರಿಸರ್ಚ್ ಫೆಲೋಷಿಪ್ (JRF-Junior Research Fellowship) ಎಂಬ ಬಂಪರ್ ಬಹುಮಾನವಿದೆ. ಪಿಎಚ್‍ಡಿ ಮಾಡಲು ಯುಜಿಸಿ ಪ್ರತೀ ತಿಂಗಳೂ ಕೈತುಂಬ ಫೆಲೋಷಿಪ್ ನೀಡುತ್ತದೆ. ಮೊದಲ ಎರಡು ವರ್ಷ ಪ್ರತೀ ತಿಂಗಳೂ ರೂ. 31,000, ಮುಂದಿನ ಮೂರು ವರ್ಷ (SRF- Senior Research Fellowship) ಪ್ರತೀ ತಿಂಗಳೂ ರೂ. 35,000 ಲಭ್ಯ. ಬೇರೆ ಭತ್ಯೆಗಳೂ ಇವೆ. ಯಾವ ಉದ್ಯೋಗ ಹಿಡಿಯುವ ಆತಂಕವೂ ಇಲ್ಲದೆ ನೆಮ್ಮದಿಯಾಗಿ ಸಂಶೋಧನೆಯಲ್ಲಿ ನಿರತರಾಗಬಹುದು. ಜೆಆರ್‍ಎಫ್ ಬಯಸುವವರು ನೆಟ್ ಅರ್ಜಿ ತುಂಬುವಾಗ ಮಾತ್ರ ‘ಅಸಿಸ್ಟೆಂಟ್ ಪ್ರೊಫೆಸರ್ & ಜೆಆರ್‍ಎಫ್’ ಎಂಬ ಅಂಕಣವನ್ನು ಕಡ್ಡಾಯ ತುಂಬಬೇಕು. ಕೇವಲ ‘ಅಸಿಸ್ಟೆಂಟ್ ಪ್ರೊಫೆಸರ್’ ಎಂದು ತುಂಬಿದರೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೂ ಫೆಲೋಷಿಪ್‍ಗೆ ಪರಿಗಣಿಸುವುದಿಲ್ಲ.

ಕೆ-ಸೆಟ್ ಬರೆಯಿರಿ
ನೆಟ್ ಪರೀಕ್ಷೆಗೆ ಸಮಾನವಾಗಿ ರಾಜ್ಯಮಟ್ಟಗಳಲ್ಲಿ ಸೆಟ್ ಪರೀಕ್ಷೆ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಕೆಲವು ವರ್ಷಗಳಿಂದ ಮೈಸೂರು ವಿಶ್ವವಿದ್ಯಾನಿಲಯ ಕೆ-ಸೆಟ್ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆಯ ವಿಧಾನ, ಮಾದರಿ, ಪಠ್ಯಕ್ರಮ ಎಲ್ಲವೂ ಯುಜಿಸಿ-ನೆಟ್‍ನಂತೆಯೇ ಇರುತ್ತದೆ. ಆದರೆ ಇದನ್ನು ತೇರ್ಗಡೆಯಾದವರು ನಮ್ಮ ರಾಜ್ಯದ ಕಾಲೇಜು, ವಿವಿಗಳಲ್ಲಿ ಮಾತ್ರ ಉದ್ಯೋಗ ಪಡೆಯಬಹುದು, ಬೇರೆ ರಾಜ್ಯಗಳಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. http://kset.uni-mysore.ac.in/ ಜಾಲತಾಣದಲ್ಲಿ ಸಂಪೂರ್ಣ ವಿವರಗಳಿವೆ.

-ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಸೆಪ್ಟೆಂಬರ್ 24, 2019

ಉದ್ಯೋಗವಿದ್ದರೂ ನಿರುದ್ಯೋಗ!

25 ಸೆಪ್ಟೆಂಬರ್ 2019ರ ವಿಜಯವಾಣಿ (ಮಸ್ತ್ ಪುರವಣಿ)ಯಲ್ಲಿ ಪ್ರಕಟವಾದ ಲೇಖನ

ಎಲ್ಲೆಲ್ಲೂ ನೀರೋ ನೀರು, ಕುಡಿಯುವುದಕ್ಕೊಂದೂ ಹನಿಯಿಲ್ಲ! ಇದು ಕವಿ ಕೋಲರಿಜ್‍ನ ಪ್ರಸಿದ್ಧ ಹಾಡೊಂದರ ಸಾಲು. ಒಂದೂಕಾಲು ಶತಮಾನದ ಬಳಿಕ ಈ ಸಾಲು ಉದ್ಯೋಗದ ಅವಶ್ಯಕತೆಯಿರುವವರ ಹಾಗೂ ಉದ್ಯೋಗ ನೀಡುವವರ ಅಸಹಾಯಕ ಧ್ವನಿಯಾಗಿ ಕೇಳಿಸುತ್ತಿರುವುದು ಮಾತ್ರ ಕಾಕತಾಳೀಯ ಮತ್ತು ವಿಚಿತ್ರ.

ಪಿಎಚ್‍ಡಿ ಮಾಡಿದವರು ಹಾಸ್ಟೆಲ್ ಅಡುಗೆಯವರ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದಾರೆ. ಬಿಇ, ಎಂಎ ಪದವೀಧರರು ಗುಮಾಸ್ತರ ಕೆಲಕ್ಕೆ ದೌಡಾಯಿಸುತ್ತಿದ್ದಾರೆ. ನಮ್ಮ ಅರ್ಹತೆಗೆ ತಕ್ಕುದಾದ ಉದ್ಯೋಗ ದೊರೆಯುತ್ತಿಲ್ಲ ಎಂಬುದು ಅವರ ಅಳಲು. ಇನ್ನೊಂದೆಡೆ, ನಮ್ಮಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ, ಅರ್ಹ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂಬುದು ಹತ್ತುಹಲವು ಕಂಪೆನಿಗಳ ದೂರು. ಎಂಬಲ್ಲಿಗೆ ‘ನಿಮ್ಮ ಅಂಕಪಟ್ಟಿ, ಪ್ರಮಾಣಪತ್ರ ಯಾರಿಗೂ ಬೇಡ. ಉದ್ಯೋಗ ನೀಡುವವರಿಗೆ ಬೇಕಾಗಿರುವುದು ನೀವು, ಅಂದರೆ ನಿಮ್ಮೊಳಗಿನ ಕೌಶಲ’ ಎಂಬ ಹಳೆಯ ಮೇಷ್ಟ್ರುಗಳ ಮಾತು ನಿಜವಾಯಿತು.

‘ನಮ್ಮಲ್ಲಿ ನಿರುದ್ಯೋಗ ಸಮಸ್ಯೆ ಎಂಬುದೇ ಇಲ್ಲ. ಬೇಕಾದಷ್ಟು ಉದ್ಯೋಗಗಳು ಖಾಲಿ ಇವೆ. ಆದರೆ ಅರ್ಹ ಯುವಕರೇ ಇಲ್ಲ’ ಎಂಬ ಕೇಂದ್ರ ಕಾರ್ಮಿಕ ಸಚಿವರ ಇತ್ತೀಚಿನ ಹೇಳಿಕೆಯಿಂದ ವಿವಾದ ಉಂಟಾಯಿತು. ಅವರು ಹಾಗೆ ಹೇಳುವಾಗ ‘ಉತ್ತರ ಭಾರತದಲ್ಲಿ’ ಎಂಬ ಮಾತು ಸೇರಿಸಿದ್ದೇ ವಿವಾದಕ್ಕೆ ಕಾರಣ. ರಾಜಕೀಯದಲ್ಲಿ ವಿವಾದಗಳು ಸಾಮಾನ್ಯವೇ, ಆದರೆ ವಾಸ್ತವವನ್ನು ಒಪ್ಪಿಕೊಳ್ಳದಿರುವುದು ಹೇಗೆ? ಈವರೆಗಿನ ಹತ್ತಾರು ಅಧ್ಯಯನ ವರದಿಗಳು ಕೌಶಲದ ಕೊರತೆಯೇ ಭಾರತೀಯರ ನಿರುದ್ಯೋಗ ಸಮಸ್ಯೆಗೆ ಪ್ರಮುಖ ಕಾರಣ ಎಂಬುದನ್ನು ಮತ್ತೆಮತ್ತೆ ಹೇಳಿವೆ.

ಕೋರ್ಸುಗಳ ದುಸ್ಥಿತಿ
ಕಳೆದ ಸುಮಾರು ಹತ್ತು ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಬಿಎ, ಬಿಎಸ್ಸಿಯಂತಹ ಸಾಂಪ್ರದಾಯಿಕ ಕೋರ್ಸುಗಳು ಬಿಕೋ ಎನ್ನುತ್ತಿವೆ. ಉಪನ್ಯಾಸಕರು ತಮ್ಮ ಹುದ್ದೆ ಉಳಿಸಿಕೊಳ್ಳಲು ಬೀದಿ ಬಯಲು ಸುತ್ತಿ ಕನಿಷ್ಟ ದಾಖಲಾತಿ ಮಟ್ಟವನ್ನಾದರೂ ತಲುಪುವ ಸರ್ಕಸ್ ಮಾಡುತ್ತಿದ್ದಾರೆ. ನಗರ ಪ್ರದೇಶಗಳ ಬಹುತೇಕ ಕಾಲೇಜುಗಳು ಪಿಯುಸಿ, ಪದವಿ ಹಂತಗಳಲ್ಲಿ ಕಲಾ ವಿಭಾಗವನ್ನು ಮುಚ್ಚಿಯೇಬಿಟ್ಟಿವೆ.

ಕಾಲಾಂತರದಿಂದ ಇದ್ದ ಕೋರ್ಸುಗಳೆಲ್ಲ ಆಕರ್ಷಣೆಯನ್ನು ಕಳೆದುಕೊಂಡಿವೆಯೇ? ಅವುಗಳಲ್ಲಿ ನಮ್ಮ ಯುವಕರಿಗೆ ಕೂಳಿನ ದಾರಿ ಕಾಣುತ್ತಿಲ್ಲವೇ? ಎರಡೂ ಪ್ರಶ್ನೆಗಳಿಗೆ ಉತ್ತರ ‘ಹೌದು’ ಎಂದೇ ಆಗಿದೆ. ಹಾಗಾದರೆ ಮುಂದೇನು? ಇಲ್ಲಿಗೆ ಬರಬೇಕಿದ್ದ ಯುವಕರು ಬೇರೆಲ್ಲಿ ಹೋಗುತ್ತಿದ್ದಾರೆ? ಈ ಕೋರ್ಸು-ಕಾಲೇಜುಗಳನ್ನೆಲ್ಲ ಇಡಿಯಿಡಿಯಾಗಿ ಮುಚ್ಚಿಬಿಡುವುದೇ? ಹಾಗೆ ಮಾಡಿದರೆ ನಮ್ಮ ಸಮಾಜದ ಅವಿಭಾಜ್ಯ ಅಂಗಗಳಾಗಿರುವ ಮೂಲ ವಿಜ್ಞಾನ, ಮಾನವಿಕ ಶಾಸ್ತ್ರಗಳ ಭವಿಷ್ಯವೇನು?

ಕೋರ್ಸುಗಳೂ ಮುಚ್ಚಿಹೋಗಬಾರದು, ಉದ್ಯೋಗ ಮಾರುಕಟ್ಟೆಯ ಅವಶ್ಯಕತೆಗಳನ್ನೂ ಕಡೆಗಣಿಸಲಾಗದು ಎಂದರೆ ಬದಲಾಗಿರುವ ಕಾಲಕ್ಕೆ ತಕ್ಕಂತೆ ಅವುಗಳ ಸ್ವರೂಪದಲ್ಲಿ ಮಾರ್ಪಾಡು ತರುವುದು ಇಂದಿನ ಅನಿವಾರ್ಯತೆ. ಕಾಲ ಬದಲಾಯಿತೆಂದು ಸಾಬೂನು, ಚಪ್ಪಲಿ, ಉಡುಪುಗಳಂತಹ ವಸ್ತುಗಳ ಉತ್ಪಾದನೆ ನಿಂತು ಹೋಗಿಲ್ಲ; ಅವುಗಳ ಬಣ್ಣ, ವಿನ್ಯಾಸ ಬದಲಾಗಿದೆ ಅಷ್ಟೇ. ಇನ್ನು ಮನುಷ್ಯರ ಅಂತರ್ಗತ ಭಾಗವಾಗಿರುವ ಶಿಕ್ಷಣವು ಸಮಾಜದ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಗದಿದ್ದರೆ ಹೇಗೆ?

ಉದ್ಯೋಗಗಳಿವೆ, ಅವುಗಳಿಗೆ ಬೇಕಾದ ಅಭ್ಯರ್ಥಿಗಳು ದೊರೆಯುತ್ತಿಲ್ಲ. ಲಕ್ಷಾಂತರ ಅಭ್ಯರ್ಥಿಗಳು ಕಾಯುತ್ತಿದ್ದಾರೆ, ಅವರಿಗೆ ಉದ್ಯೋಗ ದೊರೆಯುತ್ತಿಲ್ಲ. ವಾಸ್ತವವಾಗಿ ಈ ಎರಡು ಪರಿಸ್ಥಿತಿಗಳ ಅರ್ಥ ಒಂದೇ. ಬೇಡಿಕೆ ಮತ್ತು ಸರಬರಾಜು-  ಉದ್ಯೋಗ ಜಗತ್ತಿನಲ್ಲಿ ಇವೆರಡರ ನಡುವೆ ದೊಡ್ಡ ಕಂದರ ಇದೆ. ಇದನ್ನು ಬೆಸೆಯದೇ ಹೋದರೆ ಮುಂದೆ ಉಳಿಗಾಲವಿಲ್ಲ.

ಉದ್ಯೋಗ ಮತ್ತು ಕೌಶಲ
ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಪ್ರಕಾರ, ನಮ್ಮ ದೇಶದ ಒಟ್ಟಾರೆ ದುಡಿಯುವ ವರ್ಗದ ಪೈಕಿ ಶೇ. 4.69ರಷ್ಟು ಮಾತ್ರ ಕೌಶಲಯುಕ್ತ ಮಂದಿಯಿದ್ದಾರೆ. ಉಳಿದವರೆಲ್ಲರೂ ಕೌಶಲ್ಯರಹಿತರು. ಅಮೇರಿಕದಲ್ಲಿ ಶೇ. 52, ಇಂಗ್ಲೆಂಡಿನಲ್ಲಿ ಶೇ. 68, ಜರ್ಮನಿಯಲ್ಲಿ ಶೇ. 75, ಜಪಾನ್‍ನಲ್ಲಿ ಶೇ. 80 ಹಾಗೂ ದಕ್ಷಿಣ ಕೊರಿಯಾದಲ್ಲಿ ಶೇ. 96 ಕೌಶಲ್ಯಯುಕ್ತ ಉದ್ಯೋಗಿಗಳಿದ್ದಾರೆ. ಒಂದು ದೇಶದ ಅಭಿವೃದ್ಧಿಗೂ ಅಲ್ಲಿನ ಕೌಶಲ್ಯಯುಕ್ತ ದುಡಿಯುವ ವರ್ಗಕ್ಕೂ ಸಂಬಂಧ ಇದೆ ಎಂದು ಬೇರೆ ಹೇಳಬೇಕೆ?

ಯಾವ ಕೆಲಸವನ್ನೂ ಇಂದು ಯಾಂತ್ರಿಕವಾಗಿ ಮಾಡಿ ಮುಗಿಸುವಂತಿಲ್ಲ. ಪ್ರತೀ ಕಾರ್ಯವೂ ಮೌಲ್ಯವರ್ಧನೆಯನ್ನು ಬಯಸುತ್ತದೆ. ಒಂದು ವಸ್ತುವನ್ನು ಇಲ್ಲಿಂದ ಅಲ್ಲಿಗೆ ಎತ್ತಿ ಇಡುವಲ್ಲೂ ಒಪ್ಪ ಓರಣ, ನಾಜೂಕುತನ ಇರಬೇಕು. ಯುವಕರು ಸ್ಮಾರ್ಟ್ ಮತ್ತು ಸ್ಕಿಲ್ಡ್ ಆಗಿರಬೇಕು, ಅವರಲ್ಲಿ ಸೃಜನಶೀಲತೆ, ನಿರ್ಧಾರ ಕೈಗೊಳ್ಳುವಿಕೆಯ ಸೂಕ್ಷ್ಮತೆ, ಗ್ರಾಹಕ ಸಂಬಂಧ, ಸ್ಪಷ್ಟ ಯೋಚನೆ, ಉತ್ತಮ ಸಂವಹನ, ಸಮಯ ನಿರ್ವಹಣೆ, ನಾಯಕತ್ವ- ಇತ್ಯಾದಿ ಗುಣಗಳಿರಬೇಕು ಎಂದು ಉದ್ಯೋಗ ಜಗತ್ತು ಬಯಸುವುದರಲ್ಲಿ ಏನಾದರೂ ತಪ್ಪಿದೆಯೇ? ನಮ್ಮ ಶೈಕ್ಷಣಿಕ ಜಗತ್ತಿನ ನೀತಿ ನಿರೂಪಕರು, ಶಿಕ್ಷಣ ಸಂಸ್ಥೆಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಅಷ್ಟೇ.

ಎಚ್ಚೆತ್ತುಕೊಳ್ಳುವ ಕಾಲ
ಶಿಕ್ಷಣದ ಯಾಂತ್ರಿಕತೆಯಿಂದ ಹೊರಬರದೆ ನಿರುದ್ಯೋಗ ಸಮಸ್ಯೆಗೆ ಪರಿಹಾರವಿಲ್ಲ ಎಂಬುದು ಆಡಳಿತಗಾರರಿಗೆ ತಡವಾಗಿಯಾದರೂ ಮನವರಿಕೆ ಆಗಿದೆ. ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಯನ್ನು ಜತೆಜತೆಯಾಗಿ ಕೊಂಡೊಯ್ಯಬೇಕು ಎಂಬ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಪ್ರಯತ್ನಗಳು ನಡೆದಿವೆ. ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಗಾಗಿ ಕೇಂದ್ರ ಸರ್ಕಾರ 2014ರಲ್ಲಿ ಪ್ರತ್ಯೇಕ ಸಚಿವಾಲಯವನ್ನೇ ಸ್ಥಾಪಿಸಿದೆ. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಂಸ್ಥೆ (ಎನ್‍ಎಸ್‍ಡಿಎ), ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (ಎನ್‍ಎಸ್‍ಡಿಸಿ), ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಧಿ (ಎನ್‍ಎಸ್‍ಡಿಎಫ್)ಗಳಲ್ಲದೆ ದೇಶದಾದ್ಯಂತೆ 28 ಸೆಕ್ಟರ್ ಸ್ಕಿಲ್ ಕೌನ್ಸಿಲ್‍ಗಳು ಹೊಸ ರೂಪ ಪಡೆದು ಕಾರ್ಯಕ್ಷೇತ್ರಕ್ಕೆ ಧುಮುಕಿವೆ. ರಾಷ್ಟ್ರೀಯ ಕೌಶಲ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎನ್‍ಎಸ್‍ಡಿಸಿ ಹಾಗೂ ಎನ್‍ಎಸ್‍ಡಿಎಫ್‍ಗಳನ್ನು ಪುನಾರಚಿಸುವ ನಿರ್ಧಾರವನ್ನೂ ಕೇಂದ್ರ ಸರ್ಕಾರ ಕೈಗೊಂಡಿದೆ.

2015ರಿಂದಲೇ ‘ಸ್ಕಿಲ್ ಇಂಡಿಯಾ’ ಅಭಿಯಾನ ಆರಂಭವಾಗಿದೆ. ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ, ದೀನ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ, ರಾಜೀವ ಗಾಂಧಿ ಚೈತನ್ಯ ಯೋಜನೆ - ಹೀಗೆ ಹತ್ತಾರು ಯೋಜನೆಗಳು ಚಾಲ್ತಿಯಲ್ಲಿವೆ. ಕರ್ನಾಟಕ ವೃತ್ತಿ ಶಿಕ್ಷಣ ನಿಗಮ ಈಗ ‘ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ’ಯಾಗಿ ಬದಲಾಗಿದೆ. ಸಾಂಪ್ರದಾಯಿಕ ಕೋರ್ಸುಗಳ ಜತೆಗೆ ಕೌಶಲಗಳಿಗೆ ಪ್ರಾಮುಖ್ಯತೆ ನೀಡುವ ಆ್ಯಡ್-ಆನ್ ಕೋರ್ಸುಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಎಂದು ಯುಜಿಸಿ ಕಾಲೇಜುಗಳಿಗೆ ದುಂಬಾಲು ಬಿದ್ದಿದೆ. ಬಿಎ/ಬಿಎಸ್ಸಿಯ ಜತೆಗೆ ಉದ್ಯೋಗ ಜಗತ್ತಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಬಿ.ವೋಕ್. ಕೋರ್ಸುಗಳನ್ನು ಪರಿಚಯಿಸಿದೆ.

ಸಮಸ್ಯೆಯಿರುವುದು ಯೋಜನೆಗಳ ಸಂಖ್ಯೆಯಲ್ಲಿ ಅಲ್ಲ; ಅವುಗಳ ಅನುಷ್ಠಾನದಲ್ಲಿ. ಇಷ್ಟೆಲ್ಲ ಯೋಜನೆಗಳು ಎಷ್ಟು ಮಂದಿಯನ್ನು ಪರಿಣಾಮಕಾರಿಯಾಗಿ ತಲುಪುತ್ತಿವೆ, ಎಷ್ಟು ಮಂದಿ ಇವುಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಯೋಜನೆಗಳ ಹೆಸರು ಬದಲಾಯಿಸಿದರೆ, ಜಾರಿಗೊಳಿಸಿದರೆ ಸಾಲದು, ಅವುಗಳ ಮಾಹಿತಿ ಒಬ್ಬೊಬ್ಬ ಯುವಕನಿಗೂ ಸಿಗಬೇಕು. ಮಧ್ಯವರ್ತಿಗಳಿಗೆ ಅವಕಾಶ ಇಲ್ಲದಂತೆ ಫಲಾನುಭವಿಗಳೇ ಅವುಗಳ ಪ್ರಯೋಜನ ಪಡೆಯಬೇಕು. ಇಂತಹ ಕೋರ್ಸುಗಳನ್ನು ಮಾಡಿದರೆ ತಮಗೆ ಉದ್ಯೋಗ ಸಿಗುತ್ತದೆ ಎಂಬ ಭರವಸೆ ಅವರಲ್ಲಿ ಬೆಳೆಯಬೇಕು. ಸರ್ಟಿಫಿಕೇಟ್ ದೊರೆತರೆ ಕೆಲಸ ಸಿಗುತ್ತದೆ ಎಂಬ ಯೋಚನೆ ಬಿಟ್ಟು ಜ್ಞಾನ ಮತ್ತು ಕೌಶಲ್ಯ ಬೆಳೆಸಿಕೊಳ್ಳಲು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಶ್ರಮಿಸಬೇಕು. ಇಲ್ಲವಾದರೆ ದುಡ್ಡು ಕೊಟ್ಟು ಪ್ರಮಾಣಪತ್ರ ಪಡೆಯುವ ಹಳೆಯ ದಂಧೆ ಮುಂದುವರಿಯುತ್ತದೆಯೇ ಹೊರತು ನಿರುದ್ಯೋಗ ಸಮಸ್ಯೆ ಪರಿಹಾರವಾಗದು.

*****************
ಕೌಶಲ್ಯ ಕೇಂದ್ರಗಳೆಲ್ಲಿವೆ?
ಕೌಶಲ್ಯ ತರಬೇತಿ ನೀಡುವವರಿಗೂ ಪಡೆಯುವವರಿಗೂ ಈಗ ಹೇರಳ ಅವಕಾಶ ಇದೆ. ಕೇಂದ್ರ ಹಾಗೂ ರಾಜ್ಯದ ಬಹುತೇಕ ಕೌಶಲಾಭಿವೃದ್ಧಿ ಯೋಜನೆಗಳು ಜಿಲ್ಲಾ ಮಟ್ಟದಲ್ಲೇ ಲಭ್ಯ ಇವೆ. ತರಬೇತಿ ಕೇಂದ್ರಗಳನ್ನು ನಡೆಸುವುದಕ್ಕೆ ಖಾಸಗಿಯವರಿಗೆ ಮಾನ್ಯತೆ ಹಾಗೂ ಅನುದಾನವನ್ನು ಸರ್ಕಾರವೇ ನೀಡುತ್ತಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯು ಪ್ರತೀ ಜಿಲ್ಲಾ ಕೇಂದ್ರದಲ್ಲೂ ಕಚೇರಿಯನ್ನು ಸ್ಥಾಪಿಸಿದೆ. https://www.kaushalkar.com/article/district-skill-mission/ ಜಾಲತಾಣ ಲಿಂಕಿನಲ್ಲಿ ಜಿಲ್ಲಾವಾರು ಕಚೇರಿಗಳ ಸಂಪರ್ಕ ವಿವರ ಇದೆ. ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ಯೋಜನೆಗಳೇನು, ಆಯಾ ಜಿಲ್ಲೆಗಳಲ್ಲಿ ಎಲ್ಲೆಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳಿವೆ ಇತ್ಯಾದಿ ಮಾಹಿತಿಗಳನ್ನು ಈ ಕೇಂದ್ರಗಳಿಂದ ಪಡೆಯಬಹುದು.

ಬಿ.ವೋಕ್. ಕೋರ್ಸುಗಳು ಎಲ್ಲಿವೆ?
ಕೌಶಲ್ಯಾಧಾರಿತ ಪದವಿಗಳನ್ನು ನೀಡುವ ಉದ್ದೇಶದಿಂದ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ದೇಶದಾದ್ಯಂತ 150ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬಿ.ವೋಕ್. ಕೋರ್ಸುಗಳನ್ನು ಮಂಜೂರು ಮಾಡಿದೆ. ಐಟಿ, ಪ್ರವಾಸೋದ್ಯಮ, ರೀಟೇಲ್ ಮ್ಯಾನೇಜ್ಮೆಂಟ್, ಫ್ಯಾಷನ್ ಡಿಸೈನಿಂಗ್, ಸಿನಿಮಾ ನಿರ್ಮಾಣ, ಆಹಾರ ಸಂಸ್ಕರಣೆ, ಸಾಫ್ಟ್‍ವೇರ್ ಅಭಿವೃದ್ಧಿ, ಫಾರ್ಮಸ್ಯುಟಿಕಲ್ಸ್, ನಿರ್ಮಾಣ ತಂತ್ರಜ್ಞಾನ, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಆನ್ವಯಿಕ ಕಲೆ, ಅಟೋಮೊಬೈಲ್ಸ್, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್, ಅನಿಮೇಶನ್ & ಗ್ರಾಫಿಕ್ಸ್, ಇಂಟೀರಿಯರ್ ಡಿಸೈನ್ ಇತ್ಯಾದಿ ಹತ್ತು ಹಲವು ಕೋರ್ಸುಗಳಿದ್ದು, ಉದ್ಯೋಗ ದೊರಕಿಸಿಕೊಡುವುದೇ ಇವುಗಳ ಪ್ರಮುಖ ಉದ್ದೇಶವಾಗಿದೆ. ಕರ್ನಾಟಕದಲ್ಲಿ ಇಂತಹ ಪದವಿಗಳನ್ನು ನೀಡುವ ಪ್ರಮುಖ ಸಂಸ್ಥೆಗಳು ಇವು:
ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜು, ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜು, ಸೈಂಟ್ ಜೋಸೆಫ್ಸ್ ಕಾಲೇಜು, ಎನ್‍ಎಂಕೆಆರ್‍ವಿ ಮಹಿಳಾ ಕಾಲೇಜು, ಬಿಎಂಎಸ್ ಮಹಿಳಾ ಕಾಲೇಜು, ತುಮಕೂರು ವಿಶ್ವವಿದ್ಯಾನಿಲಯ, ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿವಿ, ಮೈಸೂರಿನ ಜೆಎಸ್‍ಎಸ್ ಕಾಲೇಜು, ಸೈಂಟ್ ಫಿಲೋಮಿನಾ ಕಾಲೇಜು, ಉಜಿರೆಯ ಎಸ್‍ಡಿಎಂ ಕಾಲೇಜು, ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು, ಬೀದರಿನ ಕರ್ನಾಟಕ ಆಟ್ರ್ಸ್, ಸೈನ್ಸ್ & ಕಾಮರ್ಸ್ ಕಾಲೇಜು, ಮುಂತಾದವು.

ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಸೆಪ್ಟೆಂಬರ್ 13, 2019

ವಾಸ್ತವ ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸುವ ಬಗೆ

14-20 ಸೆಪ್ಟೆಂಬರ್ 2019ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

‘ಅಯ್ಯೋ ನೀವೇ ನನ್ನ ತಂದೆತಾಯಿಯರೆಂದು ಈವರೆಗೆ ನನಗೇಕೆ ಗೊತ್ತಾಗಲಿಲ್ಲ?’ ಹಾಗೆಂದು ಕೃಷ್ಣ-ಭಾಮೆಯರ ಘಾತಕ್ಕೆ ನೆಲಕ್ಕೊರಗಿ ಹಲುಬುತ್ತಾನೆ ನರಕಾಸುರ. ‘ನಿಮ್ಮ ಮಗನಾಗಿಯೂ ನಾನೇಕೆ ಹೀಗಾದೆ? ಬದುಕನ್ನೆಲ್ಲಾ ನಾನೇಕೆ ದುಷ್ಕೃತ್ಯದಲ್ಲೇ ಕಳೆದುಬಿಟ್ಟೆ?’ ಅವನು ಪಶ್ಚಾತ್ತಾಪದಲ್ಲಿ ಬೇಯುತ್ತಾನೆ. ವಿಷ್ಣು ವರಾಹಾವತಾರಿಯಾಗಿ ಬಂದು ಹಿರಣ್ಯಾಕ್ಷನನ್ನು ವಧಿಸಿದ ಬಳಿಕ ಭೂದೇವಿಯನ್ನು ಕೂಡಿದ್ದರಿಂದ ಹುಟ್ಟಿದವನು ಈ ನರಕಾಸುರ. ತಂದೆತಾಯಿಯರು ಜತೆಯಾಗಿ ಎದುರಿಸಿದಾಗ ಮಾತ್ರವೇ ತನಗೆ ಮರಣ ಎಂಬ ಬ್ರಹ್ಮನ ವರಬಲ ಅವನಿಗಿತ್ತು. ಸತ್ಯಭಾಮೆಯು ಭೂದೇವಿಯ ಅಂಶದಿಂದ ಕೂಡಿದವಳಾದ್ದರಿಂದ ಆಕೆಯೂ ಕೃಷ್ಣನೂ ಜತೆಯಾಗಿ ಹೋರಾಡಿ ದುಷ್ಟತನದಿಂದ ಮೆರೆಯುತ್ತಿದ್ದ ನರಕನನ್ನು ವಧಿಸಬೇಕಾಯಿತು.

ಬೋಧಿವೃಕ್ಷ | 14-20 ಸೆಪ್ಟೆಂಬರ್ 2019
‘ನೀನು ನಡೆದ ಹಾದಿ ನಿನಗೆ ಮುಳುವಾಯಿತು’ ಹಾಗೆನ್ನುತ್ತಲೇ ನರಕಾಸುರನ ಒಳಗೆ ಬೆಳಕನ್ನು ಹಚ್ಚುತ್ತಾನೆ ಕೃಷ್ಣ. ‘ಬೀಜವನ್ನು ಎಲ್ಲಿ ಬಿತ್ತಲಾಗುತ್ತದೆ ಎಂಬುದಷ್ಟೇ ಮುಖ್ಯವಲ್ಲ. ಅದು ಹೇಗೆ ಬೆಳೆಯುತ್ತದೆ ಎಂಬುದೂ ಮುಖ್ಯ’ ಎಂಬುದು ಆತನ ಮಾತಿನ ಸಾರ. ಬೆಳೆ ಕಳೆಯಾಗಬಲ್ಲುದು, ಕಳೆ ಬೆಳೆಯಾಗಬಲ್ಲುದು. ಅದು ನಿರ್ಧಾರವಾಗುವುದು ಹುಟ್ಟಿದ ಮೊಳಕೆ ಯಾವ ಬಗೆಯ ಪೋಷಣೆ ಪಡೆಯುತ್ತದೆ ಎಂಬುದರ ಆಧಾರದಲ್ಲಿ. ನರಕಾಸುರ ಹುಟ್ಟಿದ್ದು ದೈವೀಶಕ್ತಿಯಿಂದಲೇ ಆದರೂ ಬೆಳೆದದ್ದು ರಕ್ಕಸ ಪರಿವಾರದಲ್ಲಿ.

ಇಲ್ಲಿ ಬೀಜ ಅಥವಾ ಮೊಳಕೆಗಿಂತಲೂ ಬಿತ್ತುವವನ ಅಥವಾ ಬೆಳೆಯುವವನ ಜವಾಬ್ದಾರಿಯೂ ದೊಡ್ಡದೆಂಬ ಧ್ವನಿಯೂ ಇದೆ. ‘ಹೆತ್ತವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ಹೋದರೆ ಮಕ್ಕಳ ಪತನವನ್ನೂ ನೋಡಬೇಕಾಗುತ್ತದೆ’ ಎಂಬ ಆತ್ಮಾವಲೋಕನದ ವಿಷಾದವೂ ಇದೆ.

ಬರೀ ತೊಂಬತ್ತು ಅಂಕ ತೆಗೆದುಕೊಂಡಿದ್ದೀಯಾ, ಇನ್ನೂ ಹೆಚ್ಚು ಯಾಕೆ ತೆಗೆದುಕೊಂಡಿಲ್ಲ ಎಂದು ಅಪ್ಪ-ಅಮ್ಮ ಮಗನಲ್ಲಿ ಎರಡು ದಿನ ಮಾತು ಬಿಟ್ಟರಂತೆ; ಮೂರನೆಯ ದಿನ ಮಗ ನೇಣುಹಾಕಿಕೊಂಡು ಪ್ರಾಣಬಿಟ್ಟನಂತೆ. ಹೊಸ ಮೊಬೈಲ್ ಕೊಡಿಸುವುದಿಲ್ಲ ಎಂದು ಅಮ್ಮ ಖಡಕ್ಕಾಗಿ ಹೇಳಿದಳಂತೆ; ಮರುದಿನ ಹನ್ನೆರಡು ವರ್ಷದ ಮಗಳು ಮನೆಬಿಟ್ಟು ಓಡಿಹೋದಳಂತೆ. ಚಟಹಿಡಿಯುವ ಗೇಮ್ ಆಡಬೇಡವೆಂದು ಅಪ್ಪ ಕಟ್ಟುನಿಟ್ಟು ಮಾಡಿದನಂತೆ; ಮಗ ಮಧ್ಯರಾತ್ರಿ ಎದ್ದು ಅಪ್ಪನನ್ನು ಉಸಿರುಗಟ್ಟಿಸಿ ಸಾಯಿಸಿಯೇಬಿಟ್ಟನಂತೆ. ಶಿಸ್ತು ಸಂಯಮದಿಂದ ಇರಿ ಎಂದು ವಿದ್ಯಾರ್ಥಿಗಳಿಗೆ ಅಧ್ಯಾಪಕನೊಬ್ಬ ಕೊಂಚ ಗಟ್ಟಿ ದನಿಯಲ್ಲೇ ಬುದ್ಧಿವಾದ ಹೇಳಿದನಂತೆ; ಶಿಷ್ಯೋತ್ತಮನೊಬ್ಬ ತರಗತಿಯಲ್ಲೇ ಗುರುವಿಗೆ ಕಪಾಳಮೋಕ್ಷ ಮಾಡಿದನಂತೆ.

ಯಾಕೆ ಹೀಗಾಗುತ್ತಿದೆ? ಮಕ್ಕಳು ಯಾಕೆ ದೊಡ್ಡವರ ಮಾತನ್ನು ಕೇಳುತ್ತಿಲ್ಲ? ಇನ್ನೂ ಹದಿಹರೆಯದ ಹೊಸಿಲಲ್ಲಿರುವ ಮಕ್ಕಳು ‘ಇದು ನನ್ನ ಪರ್ಸನಲ್ ವಿಷ್ಯ. ನೀನು ಮೂಗು ತೂರಿಸಬೇಡ’ ಎಂದು ತಂದೆತಾಯಿಯರಿಗೆ ಕಟ್ಟಪ್ಪಣೆ ಮಾಡುವ ಮಟ್ಟಕ್ಕೆ ಹೋಗಿದ್ದಾರೆ? ಅವರೇಕೆ ಸಣ್ಣಪುಟ್ಟ ಸೋಲುಗಳನ್ನೂ ಎದುರಿಸುವ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ? ಅವರೇಕೆ ದಿನೇದಿನೇ ದುರ್ಬಲರಾಗಿ ಕಳೆಗುಂದುತ್ತಿದ್ದಾರೆ? ‘ಇಂದಿನ ಮಕ್ಕಳು ನಮ್ಮ ಕಾಲದವರಂತಲ್ಲ. ಮಹಾಬುದ್ಧಿವಂತರು. ತುಂಬಾ ಫಾಸ್ಟು’ ಹೀಗೆಂದು ಹಿರಿಯರು ಮಾತಾಡಿಕೊಳ್ಳುವುದಿದೆ. ಈ ಮಹಾಬುದ್ಧಿವಂತಿಕೆ ಎಂದರೇನು? ಬುದ್ಧಿವಂತಿಕೆಯ ಮಾನದಂಡ ಯಾವುದು? ಈ ಫಾಸ್ಟ್ ಮಕ್ಕಳು ವಾಸ್ತವದಲ್ಲಿ ಯಾಕಿಷ್ಟು ಸ್ಲೋ ಆಗಿದ್ದಾರೆ?

‘ಹುಟ್ಟುವ ಪ್ರತಿಯೊಂದು ಮಗುವೂ ಮನುಷ್ಯನ ಮೇಲೆ ತಾನಿನ್ನೂ ಮುನಿದಿಲ್ಲ ಎಂಬ ದೇವರ ಸಂದೇಶವನ್ನು ಭೂಮಿಗೆ ತರುತ್ತದೆ’ ಎನ್ನುತ್ತಾರೆ ಕವಿಗುರು ರವೀಂದ್ರನಾಥ ಠಾಕೂರ್. ಜಗತ್ತನ್ನು ಮುನ್ನಡೆಸುವ ಶಕ್ತಿಯ ಪ್ರತಿನಿಧಿಗಳಾಗಿ ಮಕ್ಕಳು ಹುಟ್ಟುತ್ತಾರೆ ಎಂದೂ ಆ ಮಾತನ್ನು ಅರ್ಥ ಮಾಡಿಕೊಳ್ಳಬಹುದಲ್ಲ? ಅಂದರೆ ಪ್ರತೀ ಮಗುವೂ ಮೂಲತಃ ದೈವಾಂಶಸಂಭೂತವೇ. ಮಕ್ಕಳನ್ನು ದೇವರೆಂದು ಕರೆಯುವುದೂ ಇದೇ ಕಾರಣಕ್ಕೆ ಅಲ್ಲವೇ? ‘ಚೈಲ್ಡ್ ಈಸ್ ದಿ ಫಾದರ್ ಆಫ್ ದಿ ಮ್ಯಾನ್’ ಎಂಬ ವರ್ಡ್ಸ್'ವರ್ತನ ಸಾಲಿನಲ್ಲೂ ಇದೇ ಧ್ವನಿ ಇದೆ. ಅಂತಹ ಮಗು ಬೆಳೆಬೆಳೆಯುತ್ತಾ ನಾವೀಗ ಆತಂಕಪಡುತ್ತಿರುವ ಪರಿಸ್ಥಿತಿಗೆ ಬಂದು ನಿಲ್ಲುತ್ತದೆ ಎಂದರೆ ಅದಕ್ಕೆ ಹೊಣೆಗಾರರು ಯಾರು?

ಹೌದು, ಮಾಡಬೇಕಾದ್ದನ್ನು ಮಾಡಬೇಕಾದ ಕಾಲದಲ್ಲಿ ಮಾಡದೆ ಹೋದರೆ ಆಗಬಾರದ್ದು ಆಗುತ್ತದೆ. ಬೇವು ಬಿತ್ತಿ ಮಾವಿನ ಫಲ ನಿರೀಕ್ಷಿಸಿದರೆ ಆಗುತ್ತದೆಯೇ? ಸಂಸ್ಕಾರವೆಂಬುದು ಮನೆಯಲ್ಲಿ ಬೆಳೆಯದೆ ಹೋದರೆ ಮನೆಯೆ ಮೊದಲ ಪಾಠಶಾಲೆ ಎಂಬ ಮಾತಿಗೆ ಯಾವ ಮಹತ್ವವೂ ಉಳಿಯುವುದಿಲ್ಲ. ಹಿರಿಯರೊಂದಿಗೆ, ಕಿರಿಯರೊಂದಿಗೆ, ಓರಗೆಯವರೊಂದಿಗೆ, ಕಲಿಸುವ ಗುರುಗಳೊಂದಿಗೆ, ಬೆಳೆಸುವ ಬಂಧುಗಳೊಂದಿಗೆ ಹೇಗೆ ವರ್ತಿಸಬೇಕು ಎಂಬ ತಿಳುವಳಿಕೆಯನ್ನು ಮಕ್ಕಳಿಗೆ ಎಳವೆಯಲ್ಲೇ ಕಲಿಸಲು ನಾವು ವಿಫಲರಾದೆವೆಂದರೆ ಆಮೇಲೆ ಅವರು ನಮ್ಮ ನಿರೀಕ್ಷೆಯಂತೆ ನಡೆದುಕೊಳ್ಳುತ್ತಿಲ್ಲ ಎಂದು ಅಲವತ್ತುಕೊಳ್ಳುವುದಕ್ಕೆ ನಮಗೆ ಯಾವ ನೈತಿಕತೆಯೂ ಉಳಿಯುವುದಿಲ್ಲ.

ಮಕ್ಕಳು ನಾವು ಹೇಳಿದ್ದನ್ನು ಕೇಳಲಾರರೇನೋ? ಆದರೆ ಮಾಡಿದ್ದನ್ನು ಮಾಡುತ್ತಾರೆ. ಯಾಕೆಂದರೆ ಮಕ್ಕಳದ್ದು ಕೇಳಿ ಕಲಿಯುವ ವಯಸ್ಸಲ್ಲ, ನೋಡಿ ಮಾಡುವ ವಯಸ್ಸು. ದೊಡ್ಡವರ ಒಣ ರಾಜಕೀಯ, ವಿನಾ ಪ್ರತಿಷ್ಠೆ, ಕ್ಲುಲ್ಲಕ ವೈಮನಸ್ಸು, ಅನಗತ್ಯ ದುರಹಂಕಾರ- ಎಲ್ಲವನ್ನೂ ಎಳೆಯ ಮಕ್ಕಳು ತಮಗೂ ಗೊತ್ತಿಲ್ಲದೆ ಅನುಸರಿಸುತ್ತಿರುತ್ತಾರೆ. ಅವರಿಗೆ ಅಪ್ಪ-ಅಮ್ಮಂದಿರಿಗಿಂತ, ಅವರಿಗಿಂತಲೂ ಹೆಚ್ಚು ಸಮಯ ಜತೆಯಲ್ಲಿ ಕಳೆಯುವ ಅಧ್ಯಾಪಕರುಗಳಿಗಿಂತ ದೊಡ್ಡ ಮಾದರಿಗಳಿಲ್ಲ. ಅವರು ತಮ್ಮ ನಡೆನುಡಿಗಳಲ್ಲಿ ತೋರಲಾಗದ್ದನ್ನು ಮಕ್ಕಳ ವರ್ತನೆಗಳಲ್ಲಿ ನಿರೀಕ್ಷಿಸುವುದರಲ್ಲಿ ಯಾವ ಅರ್ಥವೂ ಇಲ್ಲ.

ನಾವೆಲ್ಲ ಮಕ್ಕಳ ಐಕ್ಯೂ ಹಿಂದೆ ಬಿದ್ದುಬಿಟ್ಟಿದ್ದೇವೆ. ಅದನ್ನೇ ಬುದ್ಧಿವಂತಿಕೆಯೆಂದೂ, ಅದೇ ಬದುಕಿನ ಯಶಸ್ಸಿನ ಮಾನದಂಡವೆಂದೂ ತಪ್ಪು ತಿಳಿದುಕೊಂಡಿದ್ದೇವೆ. ಐಕ್ಯೂವಿನಷ್ಟೇ ಸಮಾನವಾದ ಇಕ್ಯೂ (ಇಮೋಶನಲ್ ಕೋಶೆಂಟ್)ವನ್ನು ಅವರಲ್ಲಿ ಬೆಳೆಸುವುದರಲ್ಲಿ ವಿಫಲರಾಗಿದ್ದೇವೆ. ಅವರಲ್ಲಿ ಪ್ರೀತಿ, ಗೌರವ, ಸಹನೆ, ಕರುಣೆ, ಅನುಕಂಪ, ಸಹಾನುಭೂತಿ ಇನ್ನಿತ್ಯಾದಿ ಭಾವ ವೈವಿಧ್ಯತೆಗಳ ಮರುಪೂರಣದ ಅಗತ್ಯ ತುಂಬ ಇದೆ. ದಿನದ ಇಪ್ಪತ್ನಾಲ್ಕು ಗಂಟೆಗಳನ್ನೂ ಮೊಬೈಲ್ ಉಪಾಸನೆ, ಸೀರಿಯಲ್ ಮಹಾಪೂಜೆಗಳಲ್ಲಿ ತಲ್ಲೀನರಾಗಿರುವ ಮನೆಮಂದಿಗೆ ಅದಕ್ಕಿಂತ ಭಿನ್ನವಾದ ಪ್ರಸಾದ ದೊರೆಯುವುದಾದರೂ ಹೇಗೆ?

ಸ್ಪಿರಿಚುವಲ್ ಕೋಶೆಂಟ್ ಇಂದು ಎಲ್ಲಕ್ಕಿಂತಲೂ ದೊಡ್ಡ ಅನಿವಾರ್ಯತೆ. ಮಕ್ಕಳಿಗೆ ಪುರಾಣದ, ಪಂಚತಂತ್ರದ ಕಥೆಗಳನ್ನು ಹೇಳಿ. ರಾಮಾಯಣ ಮಹಾಭಾರತ ಭಾಗವತಗಳನ್ನು ಸರಳವಾಗಿ ಪರಿಚಯಿಸಿ. ಸಂಗೀತ, ಕಲೆಗಳಲ್ಲಿ ಆಸಕ್ತಿ ಕುದುರುವಂತೆ ಮಾಡಿ. ಅವರೇನು ಮಹಾದೈವಭಕ್ತರಾಗಿ ಬೆಳೆಯಬೇಕಾಗಿಲ್ಲ, ಕನಿಷ್ಟ ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ, ಕೆಟ್ಟದು ಮಾಡಿದರೆ ಕೆಟ್ಟದಾಗುತ್ತದೆ, ಕೆಟ್ಟದ್ದನ್ನು ಶಿಕ್ಷಿಸುವ ಶಕ್ತಿಯೊಂದು ನಮ್ಮ ಬೆನ್ನಹಿಂದೆ ಸದಾ ಇದೆ ಎಂಬ ಭಾವನೆಯನ್ನಾದರೂ ಬೆಳೆಸಿ.  ಗೆಲ್ಲುವುದರೊಂದಿಗೆ ಸೋಲುವುದನ್ನೂ ಕಲಿಸಿ. ಸಣ್ಣಪುಟ್ಟ ಸೋಲುಗಳನ್ನು ದೊಡ್ಡದು ಮಾಡಲು ಹೋಗಬೇಡಿ. ಅವೆಲ್ಲ ಸಾಮಾನ್ಯ ಎಂಬ ಭಾವನೆಯನ್ನು ಬೆಳೆಸಿ. ಆಗ ಬದುಕಿನ ದೊಡ್ಡ ಸವಾಲುಗಳನ್ನು ಎದುರಿಸಲು ಮಗುವಿನ ಮನಸ್ಸು ಸಹಜವಾಗಿಯೇ ಸಿದ್ಧವಾಗುತ್ತದೆ.

-ಸಿಬಂತಿ ಪದ್ಮನಾಭ ಕೆ. ವಿ. 

ಶುಕ್ರವಾರ, ಸೆಪ್ಟೆಂಬರ್ 6, 2019

ಗುರಿಯಿಲ್ಲದ ಬದುಕು ಹಾಯಿ ಇಲ್ಲದ ದೋಣಿ

ಆಗಸ್ಟ್ 31- ಸೆಪ್ಟೆಂಬರ್ 6, 2019ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ.

ಓರಗೆಯ ಮಕ್ಕಳು ಚಿನ್ನಿದಾಂಡು ಆಡುತ್ತಿದ್ದರೆ ಇವನೊಬ್ಬ ಅಂಕೆಸಂಖ್ಯೆಗಳೊಂದಿಗೆ ಆಟವಾಡುತ್ತಿದ್ದ. ದಿನಕ್ಕೆ ಒಂದು ಹೊತ್ತು ಹೊಟ್ಟೆ ತುಂಬ ಉಣ್ಣಲಾಗದ ಕಡುಬಡತನವಿದ್ದರೂ ತಲೆಯೊಳಗೆ ಬಂಗಾರದ ಗಣಿಯಿತ್ತು. ಕೂತಲ್ಲಿ ನಿಂತಲ್ಲಿ ನಡೆದಲ್ಲಿ ಗಣಿತಶಾಸ್ತ್ರೀಯ ಸೂತ್ರಗಳು ಕಣ್ಣ ಮುಂದೆ ತಕತಕನೆ ಕುಣಿಯುತ್ತಿದ್ದವು. ಇನ್ನೂ ಹನ್ನೊಂದರ ಹುಡುಗ ಯಾರೋ ಹರಿದೆಸೆದ ಬಿಳಿ ಹಾಳೆಗಳ ಮೇಲೆ ಮನಸ್ಸಿಗೆ ಬಂದ ಬೀಜಗಣಿತದ ಸಮೀಕರಣಗಳನ್ನು ಗೀಚುತ್ತಿದ್ದರೆ ಕಾಲೇಜು ಪ್ರೊಫೆಸರುಗಳಿಗೂ ಅರಗಿಸಿಕೊಳ್ಳಲಾಗದ ವಿಸ್ಮಯ.

ಆತ ಜಗತ್ತು ಕಂಡ ಶ್ರೇಷ್ಠ ಗಣಿತಶಾಸ್ತ್ರಜ್ಞರಲ್ಲಿ ಒಬ್ಬರಾದ ಶ್ರೀನಿವಾಸ ರಾಮಾನುಜನ್. ಅವರು ಬರೆದಿಟ್ಟಿದ್ದ ಗಣಿತದ ಸಮೀಕರಣಗಳನ್ನು ಕಂಡು ವಿಶ್ವವಿಖ್ಯಾತ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೇ ಬೆಚ್ಚಿಬಿದ್ದಿದ್ದರು. ‘ಸರಿಯಾದ ಕಾಲೇಜು ಶಿಕ್ಷಣವೇ ಆಗಿಲ್ಲ ನಿನಗೆ. 'ಯೂನಿವರ್ಸಿಟಿ ಡಿಗ್ರಿಯೂ ಇಲ್ಲ. ಅತ್ಯಂತ ಕಠಿಣ ಸಮೀಕರಣಗಳನ್ನೆಲ್ಲ ಬಿಡಿಸಿದ್ದೀಯ. ಅದು ಹೇಗೆ? ಉತ್ತರ ಎಲ್ಲಿಂದ ಬಂತು?’ ಪ್ರೊ. ಹಾರ್ಡಿ ಕೇಳುತ್ತಿದ್ದರೆ ರಾಮಾನುಜನ್ ಉತ್ತರ: ‘ಗೊತ್ತಿಲ್ಲ ಸರ್. ನನ್ನ ಮನಸ್ಸಿಗೆ ಹೊಳೆಯಿತು. ಬರೆದಿದ್ದೇನೆ ಅಷ್ಟೇ.’

ಇವನ್ನೆಲ್ಲ ನಿಜಕ್ಕೂ ಈ ಹುಡುಗನೇ ಬರೆದನಾ ಎಂದು ಅವರೆಲ್ಲ ತಲೆಕೆಡಿಸಿಕೊಳ್ಳುವಷ್ಟರಮಟ್ಟಿನ ಅಪೂರ್ವ ಸಂಶೋಧನೆಗಳನ್ನು ರಾಮಾನುಜನ್ ಮಾಡಿದ್ದರು. ಕೊನೆಗೊಂದು ದಿನ ಲಂಡನ್‍ನ ವಿಶ್ವವಿಖ್ಯಾತ ರಾಯಲ್ ಸೊಸೈಟಿ ತನ್ನೆಲ್ಲ ನಿಯಮಗಳನ್ನು ಸಡಿಲಿಸಿ 30ರ ತರುಣ ರಾಮಾನುಜರನ್ನು ತನ್ನ ಫೆಲೋ ಎಂದು ಘೋಷಿಸಿತು. ಅವರು ಬರೆದಿಟ್ಟದ್ದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಇನ್ನೂ ನಮ್ಮ ಗಣಿತಲೋಕಕ್ಕೆ ಸಾಧ್ಯವಾಗಿಲ್ಲ. ಹಿ ವಾಸ್ ಎ ಜೀನಿಯಸ್!

ದೊಡ್ಡದೊಂದು ಗುರಿ, ಯಾರಿಂದಲೂ ತಡೆಯಲಾಗದ ಮಹತ್ವಾಕಾಂಕ್ಷೆ- ಇವೆರಡೂ ಇದ್ದರೆ ಮನುಷ್ಯ ಏನನ್ನೂ ಸಾಧಿಸಬಲ್ಲ ಎಂಬುದಕ್ಕೆ ಶ್ರೀನಿವಾಸ ರಾಮಾನುಜನರೇ ಸಾಕ್ಷಿ. ಗಣಿತ ಬಿಟ್ಟು ಅವರಿಗೆ ಇನ್ನೇನೂ ಅರ್ಥವಾಗುತ್ತಿರಲಿಲ್ಲ. ಪ್ರತಿಕ್ಷಣ, ಪ್ರತಿನಿಮಿಷವೂ ಅವರ ಮನಸ್ಸು ಗಣಿತಕ್ಕಾಗಿ ಹಪಹಪಿಸುತ್ತಿತ್ತು. ಊಟ, ನೀರು, ನಿದ್ದೆಯಿಲ್ಲದಿದ್ದರೂ ನಡೆಯುತ್ತಿತ್ತು; ಗಣಿತವಿಲ್ಲದೆ ಅವರಿಗೆ ಬದುಕು ಅಸಾಧ್ಯವಾಗಿತ್ತು. ಕೇವಲ 32 ವರ್ಷ ಬದುಕಿದ್ದ ರಾಮಾನುಜನ್ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಕಾರಣ ಅವರೊಳಗಿದ್ದ ಗುರಿಸಾಧನೆಯ ಕಿಚ್ಚು.

‘ದೊಡ್ಡ ಗುರಿಗಳಿಂದ ದೊಡ್ಡ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ. ತಾವು ಕಾಣದ ಗುರಿಯನ್ನು ಜನ ಹೇಗೆ ತಾನೇ ಬೇಧಿಸಿಯಾರು?’ ಎಂದು ಕೇಳುತ್ತಾರೆ ರಾಯ್ ಬೆನೆಟ್. ಅದನ್ನೇ ಸಾವಿರಾರು ವರ್ಷಗಳ ಹಿಂದೆ ದ್ರೋಣಾಚಾರ್ಯರು ತಮ್ಮ ಶಿಷ್ಯರಲ್ಲಿ ಕೇಳಿದ್ದರು. ಮರದ ಮೇಲೆ ಕುಳಿತಿರುವ ಹಕ್ಕಿಯ ಕಣ್ಣಿಗೆ ಗುರಿಯಿಡಲು ಸೂಚಿಸಿದ ಮೇಲೆ ‘ಹೇಳಿ ನಿಮಗೇನು ಕಾಣುತ್ತಿದೆ’ ಎಂದು ಅವರು ಎಲ್ಲರನ್ನೂ ಕೇಳಿದರಂತೆ. ಸುತ್ತಲಿನ ತೋಟ, ಅಲ್ಲಿನ ಮರಗಿಡಗಳು, ಹೂವು, ಹಣ್ಣು, ರೆಂಬೆಕೊಂಬೆ... ಒಬ್ಬೊಬ್ಬರಿಗೆ ಒಂದೊಂದು ಕಂಡರೆ ಅರ್ಜುನ ಮಾತ್ರ ‘ಹಕ್ಕಿಯ ಕಣ್ಣು ಕಾಣಿಸುತ್ತಿದೆ ಗುರುಗಳೆ’ ಎಂದಿದ್ದನಂತೆ. ಅದಕ್ಕೇ ಅವನು ಮುಂದೆ ತ್ರಿಲೋಕಗಳಲ್ಲೂ ಸಾಟಿಯಿಲ್ಲದ ಬಿಲ್ಗಾರ ಎನಿಸಿಕೊಂಡ. ತಾವು ಸಾಧಿಸಬೇಕಿರುವುದು ಏನೆಂದು ಅರ್ಥ ಮಾಡಿಕೊಳ್ಳಲಾಗದವರು ವಾಸ್ತವವಾಗಿ ಸಾಧನೆಯೊಂದನ್ನು ಮಾಡುವುದಾದರೂ ಹೇಗೆ?

ಗುರಿಯಿಲ್ಲದ ಬದುಕು ಸೂತ್ರವಿಲ್ಲದ ಗಾಳಿಪಟದ ಹಾಗೆ, ಹಾಯಿ ಇಲ್ಲದ ದೋಣಿಯ ಹಾಗೆ. ಬಸ್ಸು ಹತ್ತಿ ಕುಳಿತವನಿಗೂ ಎಲ್ಲಿಗೆ ಟಿಕೇಟು ತೆಗೆದುಕೊಳ್ಳಬೇಕು ಎಂದು ತಿಳಿದಿರುತ್ತದೆ. ಇನ್ನು ಬದುಕಿನ ಬಂಡಿ ಏರಿದವನಿಗೆ ಎಲ್ಲಿ ಇಳಿಯಬೇಕು ಎಂಬ ಅರಿವಿಲ್ಲದಿದ್ದರೆ ಹೇಗೆ? ಗುರಿಯ ಅರಿವು ಸಾಧನೆಗೆ ಬಲವನ್ನೂ, ಹುರುಪನ್ನೂ, ಏಕಾಗ್ರತೆಯನ್ನೂ, ಶ್ರದ್ಧೆಯನ್ನೂ ಕೊಡುತ್ತದೆ. ಗುರಿಯಿಲ್ಲದ ಉತ್ಸಾಹ ಕಾಳ್ಗಿಚ್ಚಿಗೆ ಸಮ. ಕಾಡು ಉರಿದು ಬೂದಿಯಾಗುತ್ತದೆಯೇ ಹೊರತು ಒಳ್ಳೆಯದೇನೂ ಆಗುವುದಿಲ್ಲ. ಅರ್ಧ ಆಯಸ್ಸು ಕಳೆದ ಮೇಲೂ ಅನೇಕ ಮಂದಿಗೆ ಜೀವನದಲ್ಲಿ ತಾವೇನು ಮಾಡಬೇಕು ಎಂಬ ಸ್ಪಷ್ಟತೆ ಇರುವುದಿಲ್ಲ. ಹುಟ್ಟಿದ ಮೇಲೆ ಎಲ್ಲರೂ ಸಾಯಲೇಬೇಕು, ಅವರೂ ಒಂದು ದಿನ ಸಾಯುತ್ತಾರೆ. ಒಂದು ಜೀವನದ ಘನತೆ ಅಷ್ಟೇ ಏನು? ಇನ್ನು ಕೆಲವರಿಗೆ ಸಮಸ್ಯೆಗಳೇ ಮುಗಿಯುವುದಿಲ್ಲ. ಜಗತ್ತಿನ ಎಲ್ಲ ಸಮಸ್ಯೆಗಳೂ ತಮಗೊಬ್ಬರಿಗೇ ಬಂದಿದೆ ಎಂದು ಹಲುಬುತ್ತಿರುತ್ತಾರೆ. ಏನಾದರೂ ಸಾಧಿಸಬೇಕು ಎಂಬ ಆಸೆಯೇನೋ ಇದೆ, ಆದರೆ ಈ ಸಮಸ್ಯೆಗಳು ತನ್ನನ್ನು ಬಿಡುವುದಿಲ್ಲ ಎಂಬ ನೆಪ ಹೇಳುತ್ತಾರೆ. ಅವರು ಸಮಸ್ಯೆಗಳ ನಡುವೆಯೇ ಜೀವನ ನೂಕುತ್ತಾ ಅತೃಪ್ತ ಆತ್ಮಗಳಾಗಿಯೇ ಉಳಿಯುತ್ತಾರೆಯೇ ವಿನಾ ಎಂದೂ ಸಂತೃಪ್ತಿ ಕಾಣುವುದೇ ಇಲ್ಲ.

ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು|
ಗುರುತಿಸೊಳಿತಿರುವುದನು ಕೇಡುಗಳ ನಡುವೆ||
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು|
ಹರುಷಕದೆ ದಾರಿಯೆಲೊ- ಮಂಕುತಿಮ್ಮ||
ಸರ್ಕಾರಿ ಬಸ್ಸಲ್ಲಿ ಕುಳಿತ ಬಹುಮಂದಿಯೂ ಚಾಲಕನ ಹಿಂದಿರುವ ಎರಡು ಗೆರೆಗಳ ಭಾಗ್ಯದ ವಿಚಾರವನ್ನು ಓದಿ ತಲೆಕೆರೆದುಕೊಂಡು ಸುಮ್ಮನಾಗುತ್ತಾರೆಯೇ ಹೊರತು ತಮ್ಮ ಹರುಷದ ದಾರಿಯ ಬಗ್ಗೆ ಯೋಚಿಸುವುದೇ ಇಲ್ಲ. ಗುರಿ-ದಾರಿಗಳ ಸ್ಪಷ್ಟ ಅರಿವು ಇಲ್ಲದಿರುವವರು ಜೀವನದಲ್ಲಿ ಯಾವ ನಿಲ್ದಾಣವನ್ನೂ ತಲುಪುವುದಿಲ್ಲ. ‘ತನ್ನ ಕಣ್ಣುಗಳನ್ನು ಗುರಿಯಿಂದ ಕದಲಿಸುವವನು ಮಾತ್ರ ದಾರಿಯಲ್ಲಿ ಅಡೆತಡೆಗಳನ್ನು ಕಾಣುತ್ತಾನೆ’ ಎಂಬ ಜೋಸೆಫ್ ಕಾಸ್ಮಾನ್ ಮಾತು ಇಲ್ಲಿ ನೆನಪಾಗಬೇಕು. ವ್ಯಕ್ತಿಯೊಬ್ಬನಿಗೆ ತನ್ನ ಹಾದಿಯಲ್ಲಿ ಬರೀ ಅಡ್ಡಿ ಆತಂಕಗಳೇ ಕಾಣುತ್ತವೆಂದರೆ ಆತನ ದೃಷ್ಟಿ ಭದ್ರವಾಗಿ ಗುರಿಯ ಮೇಲೆ ನೆಟ್ಟಿಲ್ಲ ಎಂದೇ ಅರ್ಥ.

ಬದುಕಿನಲ್ಲಿ ಸೋತರೆ ತಪ್ಪಲ್ಲ, ಆದರೆ ಸಣ್ಣ ಗುರಿಯನ್ನು ಇಟ್ಟುಕೊಳ್ಳುವುದು ಅಪರಾಧ ಎಂಬ ದಾರ್ಶನಿಕರ ಮಾತು ನಮಗೆ ದೊಡ್ಡ ಪಾಠ. ನಮ್ಮ ಪ್ರಯತ್ನಗಳು ಸುಖಾಸುಮ್ಮನೆ ವ್ಯರ್ಥವಾಗುವುದೇ ಇಲ್ಲ. ಒಂದು ಕಡೆ ಸೋತಂತೆ ಕಂಡರೂ ಅದಕ್ಕಾಗಿ ಹಾಕಿದ ಶ್ರಮ ಇನ್ನೆಲ್ಲೋ ಒಂದು ಕಡೆ ಫಲ ನೀಡಿಯೇ ನೀಡುತ್ತದೆ. ಹತ್ತು ಕಡೆ ಹಳ್ಳ ತೋಡುವುದಕ್ಕಿಂತ ಒಂದೇ ಕಡೆ ಹತ್ತುಕಡೆಯ ಶ್ರಮವನ್ನು ಹಾಕಿದರೆ ನೀರಾದರೂ ದೊರೆತೀತು. ಗುರಿಸಾಧನೆಯ ದಾರಿಯಲ್ಲಿ ಸಣ್ಣಪುಟ್ಟ ಆಕರ್ಷಣೆಗಳು ಎದುರಾಗುವುದು ಸಹಜ. ಅವುಗಳಿಂದ ವಿಚಲಿತರಾಗದ ಗಟ್ಟಿ ಮನಸ್ಸು ಬೇಕು. ಹೆದ್ದಾರಿಯ ತುದಿಯಲ್ಲಿ ಫಲಿತಾಂಶ ಖಚಿತ ಇದೆಯೆಂದು ತಿಳಿದಿರುವಾಗ ಅಡ್ಡದಾರಿಗಳ ಗೊಡವೆಯೇಕೆ?

- ಸಿಬಂತಿ ಪದ್ಮನಾಭ ಕೆ. ವಿ.