ಗುರುವಾರ, ಜನವರಿ 16, 2020

ಈಗ ನಿಮ್ಮ ಟೈಮ್ ಶುರು

14 ಜನವರಿ 2020ರ 'ಉದಯವಾಣಿ'ಯ 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ

Winners don't do different things, but they do the things differently- ಅಂತಾರೆ ಮ್ಯಾನೇಜ್ಮೆಂಟ್ ಗುರು ಶಿವ ಖೇರಾ. ಗೆಲ್ಲುವವರು ಆ ವಿಧಾನ ಈ ವಿಧಾನ ಅಂತ ಸಮಯಹರಣ ಮಾಡುವುದಿಲ್ಲವಂತೆ, ಅವರು ಮಾಡುವುದನ್ನೇ ಉಳಿದವರಿಗಿಂತ ವಿಭಿನ್ನವಾಗಿ ಮಾಡುತ್ತಾರಂತೆ. ಪರೀಕ್ಷೆಗೆ ಸಿದ್ಧವಾಗುವವರೂ ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗೆ ಓದಿದರೆ ಸರಿಯೋ, ಹಾಗೆ ಓದಿದರೆ ಸರಿಯೋ ಎಂದು ಅಳೆದು ಸುರಿಯುವುದರಲ್ಲೇ ಸಮಯ ಕಳೆಯುವುದು ಜಾಣತನವಲ್ಲ. ಪರೀಕ್ಷಾ ತಯಾರಿಯಲ್ಲಿ ತೊಡಗಿರುವವರಿಗೆ ಸಮಯ ಬಹಳ ಮುಖ್ಯ; ಪರೀಕ್ಷೆ ಸಮೀಪಿಸಿದಾಗಲಂತೂ ಒಂದೊಂದು ನಿಮಿಷವೂ ಅಮೂಲ್ಯ.

ಉದಯವಾಣಿ- ಜೋಶ್ 14-01-2020
ಹೀಗಾಗಿ ಯಾವ ಸಬ್ಜೆಕ್ಟನ್ನು ಎಷ್ಟೆಷ್ಟು ಹೊತ್ತು ಓದಬೇಕು, ಹೇಗೆ ಪ್ಲಾನ್ ಮಾಡಿಕೊಳ್ಳಬೇಕು ಎಂದು ಅರ್ಥ ಮಾಡಿಕೊಳ್ಳದೇ ಹೋದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಎಲ್ಲರಿಗೂ ಎಲ್ಲ ಸಬ್ಜೆಕ್ಟೂ ಒಂದೇ ಥರ ಇರುವುದಿಲ್ಲ. ಕೆಲವರಿಗೆ ವಿಜ್ಞಾನ ಕಷ್ಟ, ಇನ್ನು ಕೆಲವರಿಗೆ ಗಣಿತ ಕಷ್ಟ. ಹೀಗಾಗಿ ಎಲ್ಲರಿಗೂ ಸರಿ ಬರುವಂತಹ ಒಂದು ಕಾಮನ್ ವೇಳಾಪಟ್ಟಿ ಹಾಕಿಕೊಳ್ಳಲಾಗದು. ಒಬ್ಬೊಬ್ಬರೂ ತಮ್ಮ ಪರಿಸ್ಥಿತಿಯನ್ನು ಗಮನಿಸಿಕೊಂಡು ಅದಕ್ಕೆ ತಕ್ಕುದಾದ ವೇಳಾಪಟ್ಟಿ ಮಾಡಿಕೊಳ್ಳಬೇಕು. ಅಂತೂ ಟೈಮ್‍ಟೇಬಲ್ ಹಾಕಿಕೊಳ್ಳದೆ ಓದುವುದೆಂದರೆ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಹಾಗೆಯೇ ಸರಿ.

ಎರಡು ರೀತಿಯ ವೇಳಾಪಟ್ಟಿ ಮಾಡಿಕೊಳ್ಳಬಹುದು. ಒಂದು ತರಗತಿಗಳು ನಡೆಯುತ್ತಿರುವಾಗ ಓದಿಕೊಳ್ಳುವುದಕ್ಕೆ; ಇನ್ನೊಂದು ಪರೀಕ್ಷೆಗಾಗಿಯೇ ಕೊಡುವ ರೀಡಿಂಗ್ ಹಾಲಿಡೇಸ್‍ನಲ್ಲಿ ಅಥವಾ ವಾರಾಂತ್ಯದಲ್ಲಿ ಓದಿಕೊಳ್ಳುವುದಕ್ಕೆ. ತರಗತಿಗಳಿನ್ನೂ ನಡೆಯುತ್ತಿರುವಾಗ ಓದುವುದಕ್ಕೆ ತಮ್ಮತಮ್ಮ ಶಾಲಾ/ಕಾಲೇಜು ಅವಧಿಯನ್ನು ಗಮನಿಸಿಕೊಂಡು ಟೈಮ್ ಟೇಬಲ್ ಸಿದ್ಧಪಡಿಸಿಕೊಳ್ಳಬೇಕು. ಉದಾಹರಣೆಗೆ, ಬೆಳಗ್ಗೆ 5ರಿಂದ 8ಗಂಟೆಯವರೆಗೆ, ಸಂಜೆ 8ರಿಂದ 11 ಗಂಟೆಯವರೆಗೆ ಓದುವ ಸಮಯ ಅಂತ ಮೀಸಲಿಡಬಹುದಾದರೆ, ಒಟ್ಟು ಐದು ಗಂಟೆ ಸಿಕ್ಕಹಾಗಾಯ್ತು.

ಒಂದೇ ದಿನ ಎಲ್ಲ ಸಬ್ಜೆಕ್ಟ್‍ಗಳನ್ನೂ ಒಂದಿಷ್ಟಿಷ್ಟು ಓದಿಕೊಳ್ತೀನಿ ಅಂತ ಹೊರಡುವುದಕ್ಕಿಂತ ಎರಡು ದಿನಗಳಲ್ಲಿ ಎಲ್ಲವನ್ನೂ ಕವರ್ ಮಾಡಿಕೊಳ್ಳುವುದು ಉತ್ತಮ. ಮೊದಲ ದಿನ ಬೆಳಗ್ಗೆ ದೊರೆಯುವ ಮೂರು ಗಂಟೆಗಳನ್ನು ನಿಮಗೆ ಅತ್ಯಂತ ಕಷ್ಟವೆನಿಸುವ ವಿಷಯಕ್ಕೆ ಮೀಸಲಿಡಿ. ಉದಾ: ಗಣಿತ ಅಥವಾ ವಿಜ್ಞಾನ. ಸಂಜೆಯ ವೇಳೆ, 7ರಿಂದ 8 ಗಂಟೆಯ ನಡುವೆ ಆಯಾ ದಿನ ಮಾಡಬೇಕಾದ ಹೋಂವರ್ಕ್ ಇತ್ಯಾದಿಗಳನ್ನು ಪೂರೈಸಿಕೊಳ್ಳಿ. ಆಮೇಲೆ ಒಂದರ್ಧ ಗಂಟೆ ಊಟದ ಬ್ರೇಕ್ ತೆಗೆದುಕೊಂಡರೆ 8-30ರಿಂದ 11 ಗಂಟೆಯವರೆಗೆ ಇನ್ನೊಂದು ಸಬ್ಜೆಕ್ಟನ್ನು ಓದಿಕೊಳ್ಳಬಹುದು.

ಎರಡನೆಯ ದಿನ ಇದೇ ಸಮಯದ ಮಿತಿಯಲ್ಲಿ ಉಳಿದ ನಾಲ್ಕು ಸಬ್ಜೆಕ್ಟ್‍ಗಳನ್ನು ಓದುವ ಪ್ಲಾನ್ ಮಾಡಿಕೊಳ್ಳಬೇಕು. ಅವರವರ ಆದ್ಯತೆಗನುಗುಣವಾಗಿ ಸಮಯವನ್ನು ಒಂದರಿಂದ ಒಂದೂವರೆಗಂಟೆವರೆಗೆ ಒಂದೊಂದು ವಿಷಯಕ್ಕೆ ಹಂಚಿಕೊಳ್ಳಬಹುದು. ಮರುದಿನದಿಂದ ಮತ್ತೆ ಇದೇ ಯೋಜನೆ ಪುನರಾವರ್ತನೆ ಆಗಬೇಕು.

ಇನ್ನು ರೀಡಿಂಗ್ ಹಾಲಿಡೇಸ್‍ನಲ್ಲಿ ಇಡೀ ದಿನಕ್ಕೆ ವೇಳಾಪಟ್ಟಿ ಹಾಕಿಕೊಳ್ಳುವುದು ತುಂಬ ಮುಖ್ಯ. ಇಲ್ಲವಾದರೆ ನಮಗೆ ಗೊತ್ತಿಲ್ಲದಂತೆಯೇ ಅಮೂಲ್ಯ ಸಮಯ ಎಲ್ಲೋ ಕಳೆದುಹೋಗಿಬಿಡಬಹುದು. ಸರಿಯಾಗಿ ಪ್ಲಾನ್ ಮಾಡಿಕೊಂಡರೆ ರಜಾದಿನದಲ್ಲಿ ಏನಿಲ್ಲವೆಂದರೂ 10-12 ಗಂಟೆ ಓದಿಗಾಗಿಯೇ ಬಳಸಿಕೊಳ್ಳಬಹುದು. ಉದಾಹರಣೆಗೆ, ಬೆಳಗ್ಗೆ 5ರಿಂದ 8ರವರೆಗೆ ನಿಮ್ಮ ಆಯ್ಕೆಯ ಪ್ರಮುಖ ವಿಷಯವನ್ನು ಅಭ್ಯಾಸ ಮಾಡುವುದು; 8ರಿಂದ 9ರವರೆಗೆ ಒಂದು ಬ್ರೇಕ್ ತೆಗೆದುಕೊಂಡು ಸ್ನಾನ, ತಿಂಡಿ ಪೂರೈಸಿಕೊಂಡರೆ 9ರಿಂದ 11ರವರೆಗೆ ಇನ್ನೊಂದು ಸಬ್ಜೆಕ್ಟ್ ತೆಗೆದುಕೊಳ್ಳಬಹುದು. ಆಮೇಲೆ ಒಂದರ್ಧ ಗಂಟೆ ಬ್ರೇಕ್ ತೆಗೆದುಕೊಂಡು ರಿಫ್ರೆಶ್ ಆದರೆ ಮತ್ತೆ ಮಧ್ಯಾಹ್ನ 1-30ರವರೆಗೂ ಓದಬಹುದು. ಅರ್ಧ ಗಂಟೆ ಲಂಚ್ ಬ್ರೇಕ್ ಎಂದುಕೊಂಡರೆ, ಇನ್ನೊಂದರ್ಧ ಗಂಟೆ ಸಣ್ಣ ನಿದ್ದೆ ಮಾಡಿ ರಿಫ್ರೆಶ್ ಆಗುವುದೂ ತಪ್ಪಲ್ಲ.

ಬಳಿಕ 2-30ರಿಂದ 4-30ರವರೆಗೆ ಒಂದು ಸ್ಲಾಟ್, 5ರಿಂದ 8ರವರೆಗೆ ಇನ್ನೊಂದು ಸ್ಲಾಟ್, 8-30ರಿಂದ 10-30ರವರೆಗೆ ಅಂದಿನ ಕೊನೆಯ ಸ್ಲಾಟ್. ಅಂತೂ ಪ್ರತೀ ಸ್ಲಾಟಿನ ನಡುವೆಯೂ ಒಂದಿಷ್ಟು ಗ್ಯಾಪ್ ತೆಗೆದುಕೊಳ್ಳವುದು ತುಂಬ ಮುಖ್ಯ. ಇಲ್ಲಿ ಯಾವ ಯಾವ ಸಬ್ಜೆಕ್ಟ್‍ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬೇಕು. ಬೆಳಗ್ಗೆ 5ರಿಂದ 8 ಎಷ್ಟು ಪ್ರಮುಖವಾದ ಸಮಯವೋ, ಸಂಜೆ 5ರಿಂದ 8 ಕೂಡ ಅಷ್ಟೇ ಪ್ರಮುಖ ಸಮಯ. ಊಟದ ಬಳಿಕ ಕೆಲವರಿಗೆ ಒಂದಿಷ್ಟು ಬಳಲಿಕೆ ಕಾಡಬಹುದು, ಆದರೆ 5ರಿಂದ 8ರ ಅವಧಿ ಮನಸ್ಸು ತುಂಬ ಆಕ್ಟೀವ್ ಆಗಿರುವ ಅವಧಿ.

ಎಲ್ಲ ಸಬ್ಜೆಕ್ಟ್‍ಗಳಿಗೂ ಒಂದೇ ಅಪ್ರೋಚ್‍ನಿಂದ ಅನುಕೂಲವಾಗದು. ಆಯಾ ವಿಷಯಕ್ಕನುಗುಣವಾಗಿ ತಯಾರಿಯ ವಿಧಾನದಲ್ಲೂ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಗಣಿತವನ್ನೇ ತೆಗೆದುಕೊಳ್ಳಿ. ಅದಕ್ಕೆ ಪ್ರಾಕ್ಟೀಸ್, ಪ್ರಾಕ್ಟೀಸ್, ಪ್ರಾಕ್ಟೀಸ್ ಎಂಬುದೇ ಮೂಲಮಂತ್ರ. ಓದಿ, ಕೇಳಿ ಕಲಿಯುವ ಸಬ್ಜೆಕ್ಟ್ ಅದಲ್ಲ, ಮಾಡಿ ಕರಗತ ಮಾಡಿಕೊಳ್ಳಬೇಕಾದ ಸಬ್ಜೆಕ್ಟ್ ಅದು. ಜಗತ್ತಿನಲ್ಲಿ ಜೀನಿಯಸ್ ಎನಿಸಿದ ಐನ್‍ಸ್ಟೀನ್ ಏನು ಹೇಳಿದ್ದಾನೆ ಗೊತ್ತಾ? ‘ನಾನೇನೂ ತುಂಬ ಬುದ್ಧಿವಂತ ಅಲ್ಲ. ಸಮಸ್ಯೆಗಳೊಂದಿಗೆ ಸ್ವಲ್ಪ ಹೆಚ್ಚು ಹೊತ್ತು ಕಳೆಯುತ್ತೇನೆ ಅಷ್ಟೇ’ ಅಂತ. ಎಷ್ಟೇ ಕಠಿಣ ವಿಷಯವಾದರೂ ನಮ್ಮ ಸಮಯ ಹಾಗೂ ಪ್ರಾಕ್ಟೀಸಿನ ಎದುರು ಸೋಲಲೇ ಬೇಕು. ಈ ಹಂತದಲ್ಲಿ ಮಾಡಬೇಕಾದ ಎರಡನೇ ಕೆಲಸ ಅಂದ್ರೆ ತಪ್ಪುಗಳನ್ನು ಅರ್ಥ ಮಾಡಿಕೊಳ್ಳುವುದು. ಗಣಿತದಲ್ಲಿ ಒಂದು ಸ್ಟೆಪ್‍ನಲ್ಲಿ ತಪ್ಪಾದರೆ ಉಳಿದದ್ದೆಲ್ಲ ತಪ್ಪಾದಂತೆಯೇ ಅಲ್ಲವೇ? ಹಾಗಾಗಿ ಯಾವ ಹಂತದಲ್ಲಿ ತಪ್ಪು ಮಾಡುತ್ತಿದ್ದೇವೆ ಎಂಬುದನ್ನು ಗಮನಿಸಿಕೊಳ್ಳಬೇಕು.

ಇನ್ನೊಂದು ಪ್ರಮುಖ ಸಂಗತಿ ಎಂದರೆ ಬೇಸಿಕ್ಸ್ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು. ಗಣಿತದಲ್ಲಿ ಫಾರ್ಮುಲಾ ಬಿಟ್ಟು ಬೇರೆ ಏನನ್ನೂ ಬೈಹಾರ್ಟ್‍ಮಾಡುವುದು ತುಂಬ ಕೆಟ್ಟದು. ಅರ್ಥವಾಗದ ಪ್ರಾಥಮಿಕ ವಿಷಯಗಳನ್ನು ಅಧ್ಯಾಪಕರು ಅಥವಾ ಸ್ನೇಹಿತರ ಸಹಾಯದಿಂದ ಆರಂಭದಲ್ಲೇ ಬಗೆಹರಿಸಿಕೊಳ್ಳಬೇಕು. ಗಣಿತದ ಓದಿನಲ್ಲಿ ತಾಳ್ಮೆ ತುಂಬ ಮುಖ್ಯ. ನಿಮ್ಮ ಮನಸ್ಥಿತಿಗೆ ಹೊಂದಿಕೊಳ್ಳುವ ಒಬ್ಬ ಅಥವಾ ಇಬ್ಬರು ಗೆಳೆಯರಿದ್ದರೆ ಅವರೊಂದಿಗೆ ಅಭ್ಯಾಸ ಮಾಡುವುದರಿಂದ ಅನುಕೂಲವಾಗಬಹುದು. ಅನೇಕ ಸಲ ಗಣಿತ ನಮ್ಮ ನಿಜ ಬದುಕಿಗೆ ತುಂಬ ಹತ್ತಿರವಾಗಿರುತ್ತದೆ. ದಿನನಿತ್ಯದ ಉದಾಹರಣೆಗಳೊಂದಿಗೆ ಅದನ್ನು ಸಮೀಕರಿಸಿಕೊಂಡಾಗ ಬೇಗ ಅರ್ಥವಾಗುತ್ತದೆ ಮತ್ತು ಮರೆತು ಹೋಗುವುದಿಲ್ಲ.

ಇನ್ನು ವಿಜ್ಞಾನಕ್ಕೆ ಬಂದರೆ, ಗೆಳೆಯನೊಬ್ಬನಿಗೆ ಪಾಠ ಮಾಡುವ ವಿಧಾನ ತುಂಬ ಉಪಯುಕ್ತ. ಇದರಿಂದ ವಿಷಯಗಳು ಮನಸ್ಸಿನಲ್ಲಿ ತುಂಬ ಗಟ್ಟಿಯಾಗಿ ನೆಲೆಯಾಗುತ್ತವೆ. ಓದುತ್ತಲೇ ಪಾಯಿಂಟ್ಸ್ ಮಾಡಿಕೊಳ್ಳುವುದು, ಈಕ್ವೇಶನ್‍ಗಳನ್ನು ಪ್ರತ್ಯೇಕ ಕಾರ್ಡ್‍ಗಳಲ್ಲಿ ಬರೆದಿಟ್ಟುಕೊಳ್ಳುವುದು, ಬೇಸಿಕ್ಸ್ ಯಾವುದನ್ನೂ ಬಿಡದೆ ಅರ್ಥ ಮಾಡಿಕೊಳ್ಳುವುದು, ಓದಿದ್ದನ್ನು ಆಗಾಗ ನೆನಪು ಮಾಡಿಕೊಳ್ಳಲು ಪ್ರಯತ್ನಿಸುವುದು, ಮಾಕ್ ಟೆಸ್ಟ್‍ಗಳನ್ನು ಬರೆಯುವುದು ಬಹಳ ಅಗತ್ಯ. ಕೊನೇ ಕ್ಷಣದಲ್ಲಿ ಹೊಸ ಟಾಪಿಕ್ ಅನ್ನು ಓದಲು ಹೊರಡದಿರುವುದೇ ಒಳ್ಳೆಯದು.

ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಜನವರಿ 3, 2020

ಅಹಂನ ಅಂತ್ಯ, ಸಾಧನೆಯ ಆರಂಭ

ಡಿಸೆಂಬರ್ 28, 2019ರಿಂದ ಜನವರಿ 3, 2020ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ನೂರಾರು ಯುದ್ಧಗಳನ್ನು ಗೆದ್ದು ಸಾಮ್ರಾಜ್ಯ ವಿಸ್ತರಿಸಿ ‘ದಿ ಗ್ರೇಟ್’ ಎಂದು ಕರೆಸಿಕೊಂಡ ಅಲೆಕ್ಸಾಂಡರ್ ತನ್ನ
ದಂಡಯಾತ್ರೆಯಿಂದ ಮರಳುತ್ತಿದ್ದಾಗಲೇ ಕಾಯಿಲೆ ಬಿದ್ದುಬಿಟ್ಟ. ರೋಗ ದೇಹವನ್ನೆಲ್ಲ ವ್ಯಾಪಿಸಿ ಗುಣಪಡಿಸಲಾರದ ಹಂತಕ್ಕೆ ಬಂದು ಮರಣಶಯ್ಯೆಯ ಮೇಲೆ ಮಲಗಿದ. ಸಾವನ್ನು ಎದುರು ನೋಡುತ್ತಿದ್ದ ಅಲೆಕ್ಸಾಂಡರ್ ತನ್ನ ಸೇನಾಧಿಪತಿಗಳನ್ನು ಕರೆದು ಹೀಗೆಂದನಂತೆ:

ಬೋಧಿವೃಕ್ಷ: ಸಿಬಂತಿ ಪದ್ಮನಾಭ
‘ನಾನು ಇನ್ನೇನು ಕೊನೆಯುಸಿರು ಎಳೆಯಲಿದ್ದೇನೆ. ನನ್ನ ಮೂರು ಆಸೆಗಳನ್ನು ದಯಮಾಡಿ ಈಡೇರಿಸಿ. ಮೊದಲನೆಯದು, ನನ್ನ ಶವಪೆಟ್ಟಿಗೆಯನ್ನು ಈವರೆಗೆ ನನಗೆ ಚಿಕಿತ್ಸೆ ನೀಡಿದ ವೈದ್ಯರುಗಳೇ ಹೊತ್ತೊಯ್ಯಬೇಕು. ಎರಡನೆಯದು, ನನ್ನ ಶವಯಾತ್ರೆ ಸಾಗುವ ದಾರಿಯಲ್ಲಿ ನನ್ನ ಭಂಡಾರದಲ್ಲಿರುವ ಮುತ್ತುರತ್ನಗಳನ್ನೆಲ್ಲ ಚೆಲ್ಲಿರಬೇಕು. ಮೂರನೆಯದು, ನನ್ನ ಎರಡೂ ಕೈಗಳನ್ನು ಶವಪೆಟ್ಟಿಗೆಯಿಂದ ಆಚೆ ಕಾಣುವಂತೆ ಹೊರಚಾಚಿಸಿ ಇಟ್ಟಿರಬೇಕು.’

ದುಃಖಭರಿತರಾಗಿದ್ದ ಮಂತ್ರಿ ಸೇನಾಧಿಪತಿಗಳು, ‘ತಮ್ಮ ಆಸೆಗಳನ್ನು ಖಂಡಿತ ಈಡೇರಿಸುವೆವು ದೊರೆ. ಆದರೆ ಇವುಗಳ ಮರ್ಮವೇನು ತಿಳಿಯಲಿಲ್ಲವಲ್ಲ?’ ಎಂದು ಕೇಳಿದರಂತೆ. ಪ್ರಾಣೋತ್ಕ್ರಮಣದ ಸ್ಥಿತಿಯಲ್ಲೂ ಅಲೆಕ್ಸಾಂಡರ್ ವಿವರಿಸಿದನಂತೆ: ‘ನನಗೆ ಚಿಕಿತ್ಸೆ ನೀಡಿದ ವೈದ್ಯರುಗಳೇ ನನ್ನ ಶವಪೆಟ್ಟಿಗೆ ಹೊರುವುದನ್ನು ನೋಡಿ ಮರಣ ಸಮೀಪಿಸಿದವನನ್ನು ವಾಸ್ತವವಾಗಿ ಯಾವ ವೈದ್ಯನೂ ಉಳಿಸಲಾರ ಎಂಬುದನ್ನು ಪ್ರಪಂಚ ಅರಿಯಲಿ.  ಶವಯಾತ್ರೆಯ ದಾರಿಯಲ್ಲಿ ಚೆಲ್ಲಿರುವ ಮುತ್ತು ರತ್ನಗಳನ್ನು ನೋಡಿ ನಾನು ಈವರೆಗೆ ಗುಡ್ಡೆಹಾಕಿದ ಯಾವ ಸಂಪತ್ತೂ ನನ್ನ ಪ್ರಾಣ ಉಳಿಸಲಿಲ್ಲ ಎಂಬುದನ್ನು ಜನ ತಿಳಿಯಲಿ. ಶವಪೆಟ್ಟಿಗೆಯಿಂದ ಹೊರಚಾಚಿರುವ ಕೈಗಳನ್ನು ನೋಡಿ ಇಷ್ಟೆಲ್ಲ ಸಾಧಿಸಿದ ಅಲೆಕ್ಸಾಂಡರ್ ಕೊನೆಗೆ ಬರಿಗೈಯಲ್ಲೇ ಮರಳಿದ ಎಂಬುದನ್ನು ಜಗತ್ತು ಅರ್ಥಮಾಡಿಕೊಳ್ಳಲಿ.’

ಹೌದು, ಮನುಷ್ಯ ತಾನೇನೇ ಸಾಧಿಸಿದ್ದೇನೆ ಅಂದುಕೊಂಡರೂ ಅಂತಿಮವಾಗಿ ಯಾವುದೂ ಉಳಿಯುವುದಿಲ್ಲ. ತನ್ನೊಳಗಿನ ಅಹಂ ಕರಗದ ಹೊರತು ತಾನೇನು, ತನ್ನ ಬದುಕಿನ ಉದ್ದೇಶವೇನು ಎಂಬುದು ಅರ್ಥವಾಗುವುದೂ ಇಲ್ಲ. ತಾವು ಯಾರನ್ನೋ ಸೋಲಿಸಿದ್ದೇವೆ, ಏನನ್ನೋ ಸಾಧಿಸಿದ್ದೇವೆ, ಮುಂದೇನೋ ಮಹತ್ತರವಾದದ್ದನ್ನು ಪಡೆಯಲಿದ್ದೇವೆ ಎಂದು ಬೀಗುವವರು ಬಹಳ. ಕೊನೆಗೆ ತಮಗೂ ಅಲೆಕ್ಸಾಂಡರನ ಗತಿಯೇ ಎಂಬ ಪ್ರಜ್ಞೆಯಿರುವವರು ವಿರಳ. ಆ ಪ್ರಜ್ಞೆಯಿರುವವರ ಒಳಗೆ ಅಹಂಕಾರ ಬೆಳೆಯುವುದಾದರೂ ಹೇಗೆ?

ಆಶಾಪಾಶಶತೈರ್ಬದ್ಧಾಃ ಕಾಮಕ್ರೋಧಪರಾಯಣಾಃ ||
ಈಹಂತೇ ಕಾಮಭೋಗಾರ್ಥಮನ್ಯಾಯೇನಾರ್ಥಂಚಯಾನ್ ||
ಎನ್ನುತ್ತಾನೇ ಗೀತಾಚಾರ್ಯ. ಆಶಾರೂಪೀ ನೂರಾರು ಹಗ್ಗಗಳಿಂದ ಬಂಧಿಸಲ್ಪಟ್ಟು, ಕಾಮ-ಕ್ರೋಧಾದಿಗಳ ಪರಾಯಣರಾಗಿ ವಿಷಯಭೋಗಗಳ ಪೂರೈಕೆಗಾಗಿ ಜನರು ಅನ್ಯಾಯದಿಂದ ಹಣವೇ ಮುಂತಾದ ವಸ್ತುಗಳನ್ನು ಕೂಡಿಡಲು ಪ್ರಯತ್ನಿಸುತ್ತಾರೆ. ಆಮೇಲೆ ತಾನೇ ಶ್ರೀಮಂತ, ತಾನೇ ಬಲಾಢ್ಯ, ತನ್ನ ಸಮಾನರು ಬೇರೆ ಯಾರೂ ಇಲ್ಲ ಎಂಬ ಮದವನ್ನು ಬೆಳೆಸಿಕೊಂಡು ಘೋರ ನರಕದಲ್ಲಿ ಬೀಳುತ್ತಾರೆ.

ಕೃಷ್ಣ ಮತ್ತೆ ಅರ್ಜುನನಿಗೆ ಹೇಳುತ್ತಾನೆ:
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ |
ಮಾಮಾತ್ಮ ಪರದೇಹೇಷು ಪ್ರದ್ವಿಷಂತೋಭ್ಯಸೂಯಕಾಃ ||
ಅಂದರೆ, ಅಹಂಕಾರ, ಬಲ, ದರ್ಪ, ಕಾಮ-ಕ್ರೋಧಾದಿ ಪರಾಯಣರೂ ಮತ್ತು ಪರನಿಂದಕರೂ ಆದ ಅವರು ತಮ್ಮ ಮತ್ತು ಇತರರೆಲ್ಲರ ದೇಹದಲ್ಲಿರುವ ಅಂತರ್ಯಾಮಿಯಾದ ನನ್ನನ್ನು ದ್ವೇಷಿಸುತ್ತಾರೆ.

ವಾಸ್ತವವಾಗಿ ತಮ್ಮೊಳಗನ್ನೇ ದ್ವೇಷಿಸುವ ಇಂತಹ ಮಂದಿ ಅಂತಿಮವಾಗಿ ತಮ್ಮನ್ನು ಅರಿಯುವ ಪ್ರಯತ್ನವನ್ನೇ ಮಾಡುವುದಿಲ್ಲ. ‘ಕಾಮ, ಕ್ರೋಧ ಹಾಗೂ ಲೋಭ ಈ ಮೂರು ವಿಧವಾದ ನರಕದ ದ್ವಾರವು ಆತ್ಮನನ್ನು ನಾಶಮಾಡುವವು ಅರ್ಥಾತ್ ಅಧೋಗತಿಗೆ ತಳ್ಳುವವು’ ಎಂದು ಎಚ್ಚರಿಸುತ್ತಾನೆ ಶ್ರೀಕೃಷ್ಣ.

ಇದನ್ನು ಅರ್ಥಮಾಡಿಕೊಂಡ ದಿನವೇ ಸಿದ್ಧಾರ್ಥನೂ ತನ್ನ ಸಕಲ ಸುಖಗಳನ್ನು ತೊರೆದು ಜ್ಞಾನೋದಯದ ಮಾರ್ಗ ಹುಡುಕಿ ಹೊರಟದ್ದು? ಕಾಯಿಲೆ, ಮುಪ್ಪು, ಸಾವು- ಈ ಮೂರು ಯಾವ ಮನುಷ್ಯನನ್ನೂ ಬಿಡಲಾರವು, ಎಲ್ಲರ ಬದುಕೂ ಒಂದು ದಿನ ಕೊನೆಯಾಗಲೇಬೇಕು ಎಂದ ಮೇಲೆ ಅಂತಹ ಬದುಕನ್ನು ಅಹಂಕಾರದಿಂದಲೇ ಕಳೆಯುವ ಬದಲು ಆತ್ಮಶೋಧನೆಯಲ್ಲಿ ಕಳೆಯುವುದು ಮೇಲಲ್ಲವೇ ಎಂದು ಅವನಿಗೆ ಅನಿಸಿದ್ದು ಆತನ ನಿಜವಾದ ಯಶಸ್ಸಿನ ಹಾದಿ ಆರಂಭವಾದ ಕ್ಷಣ.

‘ಅಹಂ ಎಂಬುದು ನಮ್ಮ ಕಣ್ಣಿಗೆ ಕವಿದ ಧೂಳು. ಈ ಧೂಳನ್ನು ತೊಲಗಿಸಿದರಷ್ಟೇ ನಮ್ಮನ್ನೂ ಪ್ರಪಂಚವನ್ನೂ ಸ್ಪಷ್ಟವಾಗಿ ನೋಡಿಕೊಳ್ಳಬಹುದು’ ಎಂದ ಬುದ್ಧ. ಧೂಳನ್ನಾದರೂ ತೊಳೆದುಕೊಳ್ಳಬಹುದು, ಆದರೆ ಅಹಂ ಧೂಳಿಗಿಂತಲೂ ಹೆಚ್ಚಾದ ಒಂದು ಭ್ರಮೆ. ಅದನ್ನೇ ಮಾಯೆ ಎಂದು ಕರೆದರು. ಮಾಯೆಯಿಂದ ಬಿಡಿಸಿಕೊಳ್ಳುವುದು ಬಲುಕಷ್ಟ. ಅಹಂನ ಮಾಯೆ ದೃಷ್ಟಿಯನ್ನು ಮಂದಗೊಳಿಸುವುದಷ್ಟೇ ಅಲ್ಲ, ಮನುಷ್ಯನನ್ನೇ ಸಂಪೂರ್ಣ ಕುರುಡನನ್ನಾಗಿಸಬಹುದು. ಅಂಧತ್ವ ಶಾಪ ಅಲ್ಲ, ಆದರೆ ಒಳಗಣ್ಣನ್ನು ಕಳೆದುಕೊಳ್ಳುವುದು ಮಾತ್ರ ಮಹಾಶಾಪ.

ಪಕ್ಕದ ಸಹಪ್ರಯಾಣಿಕನೊಂದಿಗೆ ಒಂದಿಂಚು ಹೊಂದಾಣಿಕೆ ಮಾಡಿಕೊಳ್ಳಲಾಗದ, ತನ್ನೆದುರಿನ ಸಣ್ಣ ವಾಹನಕ್ಕೆ ಸಂಯಮದಿಂದ ದಾರಿ ಬಿಟ್ಟುಕೊಡಲಾಗದ ಭೂಪ ಪ್ರಯಾಣದುದ್ದಕ್ಕೂ ಕಾಣಸಿಗುವ ದೇವಸ್ಥಾನಗಳಿಗೆಲ್ಲ ಕೈಮುಗಿಯುತ್ತಾ ಸಾಗುತ್ತಾನೆ. ಎಂತಹ ವಿಪರ್ಯಾಸ! ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ/ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನನ್ನೊಳಗೆ’ ಎಂದು ಆತ್ಮಶೋಧನೆ ಮಾಡಿಕೊಳ್ಳುತ್ತಾರೆ ಕವಿ ಜಿಎಸ್ಸೆಸ್. ತನ್ನೊಳಗಿನ ಅಂಧಕಾರವನ್ನು ನೀಗಿಸಿಕೊಳ್ಳದೆ ಯಾವ ದೇವರ ಮೊರೆಹೊಕ್ಕರೂ ಆತನ ಸಾಮೀಪ್ಯ ಅರಿವಿಗೆ ಬಾರದು.  ತೇನವಿನಾ ತೃಣಮಪಿ ನ ಚಲತಿ - ನೀನಿಲ್ಲದೆ ಒಂದು ಹುಲ್ಲುಕಡ್ಡಿಯೂ ಚಲಿಸದು, ನಾನೆಂಬುದು ಈ ಜಗತ್ತಿನಲ್ಲಿ ಏನೂ ಅಲ್ಲ ಎಂದು ಅರ್ಥ ಮಾಡಿಕೊಂಡವನಿಗೆ ಮುಂದಿನ ದಾರಿ ಸುಗಮ.

ನೀನು ಸ್ವರ್ಗಕ್ಕೆ ಹೋಗಬಲ್ಲೆಯಾ? ಎಂದು ಕೇಳಿದರಂತೆ ಶಿಷ್ಯ ಕನಕದಾಸರನ್ನು ಗುರುಗಳಾದ ವ್ಯಾಸರಾಯರು. ‘ನಾನು ಹೋದರೆ ಹೋದೇನು’ ಎಂದು ಉತ್ತರಿಸಿದರಂತೆ ಕನಕದಾಸರು. ನಾನು ಎಂಬುದನ್ನು ಕಳೆದುಕೊಳ್ಳುವುದೇ ಸಾಧನೆಯ ಆರಂಭ.
- ಸಿಬಂತಿ ಪದ್ಮನಾಭ ಕೆ. ವಿ.