ಕಾಂತಿ ಮತ್ತು ಶಾಂತಿ ಚರ್ಚ್ ಗಳ ಅಷ್ಟೆತ್ತರದ ಘಂಟೆಗೋಪುರಗಳಿಂದ ಹಾಗೊಂದು ಗಂಭೀರ ನಿನಾದ ಹೊರಟು ಕರಾವಳಿಯ ಮಂದಾನಿಲದೊಳಗೆ ಸೇರಿಕೊಂಡು ಮೆಲ್ಲಮೆಲ್ಲನೆ ಹರಡುತ್ತಿದ್ದರೆ, ಆಸ್ತಿಕ ಅನುಯಾಯಿಗಳು ಸರಸರನೆ ಒಟ್ಟಾಗಿ ಪ್ರಾರ್ಥನೆಗೆ ಅಣಿಯಾಗುತ್ತಾರೆ. ನಿನಾದ ನಿಧಾನವಾಗುತ್ತಿದ್ದಂತೆ, ಅದಕ್ಕೆ ಕಾರಣವಾದ ಘಂಟೆಗಳು ತಮ್ಮಷ್ಟಕ್ಕೇ ನಿಶ್ಚಲಗೊಂಡು ಮೌನದ ಗೂಡು ಸೇರುತ್ತವೆ.
ಆದರೆ ಆ ನಿನಾದ ಹುಟ್ಟಿಸಿದ ಕೌತುಕ ಅಲ್ಲಿಗೇ ಮೌನವಾಗುವುದಿಲ್ಲ. ಕುತೂಹಲದ ಕಣ್ಣು-ಕಿವಿಗಳನ್ನು ಎಳೆದುಕೊಂಡು ಬಂದು ದೈತ್ಯ ಘಂಟೆಗೋಪುರದೆದುರು ನಿಲ್ಲಿಸುತ್ತವೆ. ಚರ್ಚ್ ಗಳ ಶಿಖರದಿಂದ ತೇಲಿಬಂದದ್ದು ಬರೀ ಘಂಟೆಗಳ ಧ್ವನಿಯೇ? ಅಥವಾ ಆ ಧ್ವನಿಯ ಹಿಂದೆ ಏನಾದರೂ ಸೋಜಿಗದ ಕಥೆಯೊಂದಿದೆಯೇ? ಯಾಕೆ ಇರಬಾರದು! ಇದ್ದರೆ ನಾವ್ಯಾಕೆ ಅದಕ್ಕೆ ಕಿವಿಯಾನಿಸಬಾರದು?
ನಿಜ, ಆ ಘಂಟೆಗಳಿಂದ ಹೊರಟದ್ದು ಕೇವಲ ಧ್ವನಿಯಲ್ಲ. ಆ ಧ್ವನಿಯೊಳಗೆ ಮಂಗಳೂರನ್ನೂ ದೂರದ ಸ್ವಿಟ್ಜರ್ಲೆಂಡನ್ನೂ ಬೆಸೆಯುವ ಅಗೋಚರ ಸೇತುವೆಯೊಂದಿದೆ! ಆ ಸೇತುವೆ ಇಂದು ನಿನ್ನೆಯದಲ್ಲ; ಶತಮಾನಕ್ಕಿಂತಲೂ ಹಳೆಯದು. ಅದು ಇತಿಹಾಸದ ಪುಟಗಳನ್ನು ತೆರೆಯುತ್ತಾ ಹೋಗುತ್ತದೆ; ಸ್ವಾರಸ್ಯಗಳನ್ನು ಬಿಚ್ಚಿಡುತ್ತದೆ. ಅರೆ, ಎತ್ತಣ ಮಂಗಳೂರು, ಎತ್ತಣ ಸ್ವಿಟ್ಜರ್ಲ್ಯಾಂಡ್, ಇನ್ನೆತ್ತಣ ಚರ್ಚ್ ಘಂಟೆಗಳಯ್ಯ?
ಹಾಗೆಂದು ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ನಮ್ಮೆದುರು ಅನಾವರಣಗೊಳ್ಳುವುದು ಇತಿಹಾಸ ಪ್ರಸಿದ್ಧ ಬಾಸೆಲ್ ಮಿಶನ್ನ ಸಾಹಸದ ಕಥೆಗಳು. ಬಾಸೆಲ್ ಮಿಶನ್ಗೂ ಕರಾವಳಿಗೂ ಒಂದು ವಿಶಿಷ್ಟ ಬಾಂಧವ್ಯ. ಒಂದು ವೇಳೆ 19ನೇ ಶತಮಾನದ ಆರಂಭದಲ್ಲಿ ಬಾಸೆಲ್ ಇವಾಂಜೆಲಿಕಲ್ ಮಿಶನರಿ ಸೊಸೈಟಿ ಮಂಗಳೂರನ್ನು ಪ್ರವೇಶಿಸದೇ ಇದ್ದಿದ್ದಲ್ಲಿ, ಇಂದು ಕರಾವಳಿಯ ಚಿತ್ರ ಬೇರೆಯದೇ ಇರುತ್ತಿತ್ತೋ ಏನೋ? ಬಾಸೆಲ್ ಮಿಶನ್ ಬಂದರು ಪಟ್ಟಣವೆನಿಸಿದ ಮಂಗಳೂರಿಗೆ ಬಂದ ಮುಖ್ಯ ಉದ್ದೇಶ ಧರ್ಮಪ್ರಚಾರವೇ ಆಗಿದ್ದರೂ, ಕನರ್ಾಟಕದ, ಅದರಲ್ಲೂ ಕರಾವಳಿಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಅವರು ನೀಡಿದ ಕೊಡುಗೆ ಅಸಾಧಾರಣವಾದುದೇ ಆಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಹಳೆಯದೆನಿಸುವ ಯಾವುದೇ ಸ್ಮಾರಕ, ನಿರ್ಮಾಣಗಳ ಹತ್ತಿರ ಹೋಗಿ, ನವಿರಾಗಿ ಅವನ್ನು ನೇವರಿಸಿ, ನಿಮ್ಮ ಕುತೂಹಲದ ಕಿವಿಗಳನ್ನು ಆನಿಸಿ ಸುಮ್ಮನೆ ಕುಳಿತುಬಿಡಿ. ಸ್ವಾರಸ್ಯಭರಿತ ಕಥೆಗಳು ಒಂದಾದಮೇಲೊಂದರಂತೆ ತೆರೆದುಕೊಳ್ಳುತ್ತಲೇ ಹೋಗುತ್ತವೆ. ಈ ವಿಚಾರ ಕರಾವಳಿಗಷ್ಟೇ ಅಲ್ಲ, ಪ್ರಪಂಚದ ಯಾವುದೇ ಮೂಲೆಗಾದರೂ ನಿಜವೇ. ಈ ಕಟ್ಟಡಗಳು ತಮ್ಮೊಂದಿಗೆ ಶ್ರೀಮಂತ ಪರಂಪರೆಯನ್ನು ಒಯ್ಯುತ್ತಲೇ ಇಂದಿನ ಜನತೆಗೆ ಭೂತಕಾಲದ ಸಾಕಷ್ಟು ಕಥೆಗಳನ್ನೂ ಹೇಳುತ್ತವೆ. ಮಂಗಳೂರಿನ ಬಲ್ಮಠದಲ್ಲಿರುವ ಶಾಂತಿ ಕೆಥಡ್ರೆಲ್ ಹಾಗೂ ಜೆಪ್ಪುವಿನಲ್ಲಿರುವ ಕಾಂತಿ ಚರ್ಚ್ ಗಳ ತುದಿಯಲ್ಲಿ ಸ್ಥಾಪಿತವಾಗಿರುವ ಬೃಹತ್ ಘಂಟೆಗಳು ಮಂಗಳೂರು ಹಾಗೂ ಸ್ವಿಟ್ಜರ್ಲೆಂಡ್ ನಡುವಿನ ಐತಿಹಾಸಿಕ ಸಂಬಂಧವನ್ನು ಅನಾವರಣಗೊಳಿಸುತ್ತವೆ!
ಕರಾವಳಿ ಪ್ರಾಂತ್ಯದಲ್ಲೇ ಅತಿ ದೊಡ್ಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪಂಚಲೋಹದ ಈ ಘಂಟೆಗಳು ಶತಮಾನದ ಹಿಂದೆಯೇ ಸ್ವಿಟ್ಜರ್ಲೆಂಡಿನಲ್ಲಿ ತಯಾರಾದವು. ಸ್ವಾರಸ್ಯಕರ ಸಂಗತಿಯೆಂದರೆ, ನೂರಾರು ಕೆ.ಜಿ. ಭಾರವಿರುವ ಈ ಘಂಟೆಗಳ ಮೇಲ್ಮೈಯಲ್ಲಿ ಕನ್ನಡ ಭಾಷೆಯ ಬೈಬಲ್ ವಾಕ್ಯಗಳನ್ನು ಉಬ್ಬು ಅಚ್ಚಿನ ಮಾದರಿಯಲ್ಲಿ ಕೆತ್ತಲಾಗಿದೆ. ದುರದೃಷ್ಟವಶಾತ್, ಈ ಘಂಟೆಗಳ ಬಗ್ಗೆ ಬಾಸೆಲ್ ಮಿಶನ್ನ ಹಳೆಯ ದಾಖಲೆಗಳಲ್ಲಿ ಹೆಚ್ಚಿನ ಮಾಹಿತಿಯೇನೂ ದೊರೆಯುವುದಿಲ್ಲ. ಚರ್ಚ್ ಗಳ ಇತಿಹಾಸದ ಬಗ್ಗೆ ವಿವರ ನೀಡುವ ಬಲ್ಮಠದ ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನ (ಕೆಟಿಸಿ) ಪತ್ರಾಗಾರದ ಕೆಲವು ದಾಖಲೆಗಳು ಈ ಘಂಟೆಗಳ ಸ್ಥಾಪನೆಯ ಬಗೆಗಷ್ಟೇ ಕೆಲವು ಸಾಮಾನ್ಯ ಮಾಹಿತಿಗಳನ್ನು ನೀಡುತ್ತವೆ. ಆದರೂ, ಸಂಶೋಧಕರಿಗೂ ಜನಸಾಮಾನ್ಯರಿಗೂ ಆಸಕ್ತಿದಾಯಕವಾಗಬಲ್ಲ ಕೆಲವು ವಿವರಗಳನ್ನು ಘಂಟೆಗಳ ಮೇಲ್ಮೈಯಲ್ಲಿ ಕಾಣಬಹುದು.
ಕರ್ನಾಟಕ ಕ್ಕೆ ಆಗಮಿಸಿದ ಮೇಲೆ ಬಾಸೆಲ್ ಮಿಶನರಿಗಳು ಕಟ್ಟಿದ ಚರ್ಚ್ ಗಳಲ್ಲಿ ಶಾಂತಿ ಕೆಥಡ್ರೆಲ್ ಮೊದಲನೆಯದು. 1862ರಲ್ಲಿ ನಿರ್ಮಾಣಗೊಂಡ ಈ ಚರ್ಚ್ 1904ರಲ್ಲಿ ಘಂಟೆ ಗೋಪುರವೊಂದನ್ನು ಪಡೆಯಿತು.
ಗೋಪುರದಲ್ಲಿ ಸಾಲಾಗಿ ತೂಗು ಹಾಕಿರುವ ಮೂರು ಘಂಟೆಗಳಲ್ಲಿ ಒಂದು ದೊಡ್ಡದು, ಉಳಿದವೆರಡು ಕೊಂಚ ಸಣ್ಣವು. ದೊಡ್ಡ ಘಂಟೆಯ ತಳಭಾಗ ಸುಮಾರು 90 ಇಂಚುಗಳಷ್ಟು ಪರಿಧಿಯನ್ನು ಹೊಂದಿದ್ದು, 29 ಇಂಚು ವ್ಯಾಸವನ್ನು ಹೊಂದಿದೆ. ಉಳಿದೆರಡು ಘಂಟೆಗಳು ಒಂದೇ ಗಾತ್ರದವಾಗಿದ್ದು, 60 ಇಂಚು ಪರಿಧಿಯನ್ನೂ 20 ಇಂಚುಗಳಷ್ಟು ವ್ಯಾಸವನ್ನೂ ಹೊಂದಿವೆ.
ಮೊದಲನೆಯ ಘಂಟೆಯ ಮೇಲ್ಮೈಯಲ್ಲಿ ಈ ವಾಕ್ಯವನ್ನು ಉಬ್ಬು ಅಚ್ಚಿನ ಮಾದರಿಯಲ್ಲಿ ರಚಿಸಲಾಗಿದೆ: ಮಹೋನ್ನತವಾದವುಗಳಲ್ಲಿ ದೇವರಿಗೆ ಮಹಿಮೆಯು! ಭೂಮಿಯ ಮೇಲೆ ಸಮಾಧಾನವು! ಮನುಷ್ಯರಲ್ಲಿ ದಯವು!
ನಥಾನೆಲ್ ಮತ್ತು ಅನ್ನಾ ವೇಬ್ರೆಕ್ಟ್ ಎಂಬೆರಡು ಹೆಸರುಗಳಲ್ಲದೆ, 11 ನವೆಂಬರ್ 1873 ಮಂಗಳೂರು; 11 ನವೆಂಬರ್ 1898 ಎಸ್ಲಿಂಗೆನ್ ಎಂದೂ ಘಂಟೆಯ ಮೇಲೆ ಬರೆಯಲಾಗಿದೆ.
ಎರಡನೇ ಘಂಟೆಯ ಮೇಲೆ ಈ ರೀತಿ ಬರೆಯಲಾಗಿದೆ: ಎಲ್ಲಾ ಜನಾಂಗಗಳೆ, ಯೆಹೋವನನ್ನು ಸ್ತುತಿಸಿರಿ; ಎಲ್ಲಾ ಜನಗಳೇ, ಅವನನ್ನು ಹೊಗಳಿರಿ. ಅಲ್ಲಿಯೂ ಅರ್ನ್ಸ್ಟ್ ವೇಬ್ರೆಕ್ಟ್, ಮಂಗಳೂರಿನಲ್ಲಿ ಜನನ, 7 ಡಿಸೆಂಬರ್ 1874 ಎಂದು ಬರೆಯಲಾಗಿದೆ.
ಮೂರನೆಯ ಘಂಟೆಯ ಮೇಲೆ: ಕೂಸುಗಳು ನನ್ನ ಬಳಿಗೆ ಬರಗೊಡಿಸಿರಿ; ಯಾಕೆಂದರೆ ದೇವರ ರಾಜ್ಯವು ಇಂಥವರಿಂದಾಗಿದೆ ಎಂದು ಬರೆಯಲಾಗಿದ್ದು, ಎಲಿಜಬೆತ್ ಮಾಜ್ ವೇಬ್ರೆಕ್ಟ್, ಮಂಗಳೂರಿನಲ್ಲಿ ಜನನ, 25 ಜನವರಿ 1876 ಎಂಬ ಮಾಹಿತಿ ಕಾಣಸಿಗುತ್ತದೆ.
ಘಂಟೆಗಳ ಮೇಲೆ ಕೊಟ್ಟಿರುವ ಮಾಹಿತಿಯಂತೆ, ಅವುಗಳು 1900ರಲ್ಲಿ ಜೆಗೊಸೆನ್ ವೊನ್ ಹೆನ್ರಿಚ್ Curtsರಿಂದ Stutgart ನಲ್ಲಿ ತಯಾರಾಗಿವೆ. ಅಲ್ಲಿರುವ ಹೆಸರುಗಳು ಹಾಗೂ ಜನನ ದಿನಾಂಕಗಳ ಮೂಲಕ ಅವು ಆಯಾ ಹೆಸರಿನ ವ್ಯಕ್ತಿಗಳ ನೆನಪಿನಲ್ಲಿ ಕೊಡುಗೆಯಾಗಿ ನೀಡಲಾದವು ಎಂದು ಊಹಿಸಬಹುದು.
ಜೆಪ್ಪುವಿನ ಕಾಂತಿ ಚರ್ಚ್ ಪುರಾಣಪ್ರಸಿದ್ಧ ಮಂಗಳಾದೇವಿ ದೇಗುಲದಿಂದ ಕಣ್ಣಳತೆಯ ದೂರದಲ್ಲೇ ಇದೆ. ಇಲ್ಲಿ ಕೂಡ ಇದೇ ಬಗೆಯ ಮೂರು ಘಂಟೆಗಳನ್ನು ಕಾಣಬಹುದು. ಶಾಂತಿ ಚರ್ಚ್ ಗಿಂತ ನಂತರದ ವರ್ಷಗಳಲ್ಲಿ ಇವುಗಳು ಸ್ಥಾಪನೆಯಾದರೂ, ಇವು ಶಾಂತಿ ಚರ್ಚ್ ನ ಘಂಟೆಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿವೆ. ದೊಡ್ದ ಘಂಟೆ 118 ಇಂಚುಗಳಷ್ಟು (ಹೆಚ್ಚುಕಡಿಮೆ ಎರಡು ಮೀಟರ್) ಪರಿಧಿ ಹಾಗೂ 37 ಇಂಚು ವ್ಯಾಸ ಹೊಂದಿದೆ. ಇನ್ನೊಂದು ಘಂಟೆ 93 ಇಂಚಿನಷ್ಟು ಪರಿಧಿ ಹೊಂದಿದೆ. ಮೂರನೆಯ ಘಂಟೆ ಇನ್ನೂ ಕೊಂಚ ಸಣ್ಣದು. ನಿನ್ನ ನಾಮವು ಪರಿಶುದ್ಧವಾಗಲಿ, ನಿನ್ನ ರಾಜ್ಯವು ಬರಲಿ ಹಾಗೂ ನಿನ್ನ ಚಿತ್ತವು ಆಗಲಿ ಎಂಬ ವಾಕ್ಯಗಳು ಘಂಟೆಗಳ ಮೇಲೆ ಕಂಡುಬರುತ್ತಿದ್ದು, ಇದು ಬೈಬಲ್ನ ಭಾಗವಾದ 'ಲಾರ್ಡ್ಸ್ ಪ್ರೇಯರ್'ನಲ್ಲಿ ಇದೆ ಎಂದು ಚರ್ಚ್ ಗುರು ರೆ ವಿನ್ಫ್ರೆಡ್ ಅಮ್ಮನ್ನ ಅಭಿಪ್ರಾಯಪಡುತ್ತಾರೆ.
ಘಂಟೆಗಳ ಮೇಲೆ ಒದಗಿಸಿರುವ ಮಾಹಿತಿಯಂತೆ ಅವು, Geg. V. Bochumer Verein Iರಿಂದ Bochumನಲ್ಲಿ 1922ರಲ್ಲಿ ತಯಾರಾಗಿವೆ. ಕಾಂತಿ ಚರ್ಚನ್ನು 1883ರಲ್ಲಿ ನಿರ್ಮಿಸಲಾಯಿತು. ಇದಕ್ಕೆ Albert Glatfelder ಎಂಬ ತಂತ್ರಜ್ಞನ ಮೇಲ್ವಿಚಾರಣೆಯಲ್ಲಿ 1925ರಲ್ಲಿ ಘಂಟೆ ಗೋಫುರವನ್ನು ನಿರ್ಮಿಸಲಾಯಿತು. ಬಾಸೆಲ್ ಮಿಶನ್ನ ಇತರ ಯೋಜನೆಗಳಾದ ಮಲ್ಪೆ ಹಾಗೂ ಜೆಪ್ಪುವಿನ ಹೆಂಚಿನ ಕಾಖರ್ಾನೆಗಳಿಗೂ ಗ್ಲಾಟ್ಫೆಡ್ಲರ್ನೇ ವ್ಯವಸ್ಥಾಪಕನಾಗಿದ್ದ. 1977ರಲ್ಲಿ ಎರಗಿದ ಒಂದು ಸಿಡಿಲಿನ ಆಘಾತಕ್ಕೆ ಗೋಪುರವು ತೀವ್ರ ಹಾನಿಗೀಡಾಗಿತ್ತು. ಆದರೆ ಈ ಘಂಟೆಗಳಿಗೆ ಏನೂ ಆಗಲಿಲ್ಲ. ಒಂದು ಸಣ್ಣ ಸೀಳೂ ಕಾಣಿಸಿಕೊಳ್ಳಲಿಲ್ಲ, ಎನ್ನುತ್ತಾರೆ ಕೆಟಿಸಿ ಪತ್ರಾಗಾರದ ಉಸ್ತುವಾರಿ ಹೊತ್ತಿರುವ ಬೆನೆಟ್ ಅಮ್ಮನ್ನ.
ದೈತ್ಯಾಕಾರದ ಪ್ರತ್ಯೇಕ-ಪ್ರತ್ಯೇಕ ಅಚ್ಚು ತಯಾರಿಸಿ ಅದರೊಳಗೆ ಕನ್ನಡದ ಉಬ್ಬು ಅಕ್ಷರಗಳನ್ನು ಕೆತ್ತಿಸಿ ಪಂಚಲೋಹದ ಎರಕ ಹೊಯ್ದು ಶತಮಾನದ ಹಿಂದೆಯೇ ಘಂಟೆಗಳನ್ನು ತಯಾರಿಸಿರಬೇಕೆಂದರೆ ಅದೆಂತಹ ಸಾಹಸವಾಗಿರಬೇಕು! ಸ್ವಿಟ್ಜರ್ಲೆಂಡಿನಲ್ಲಿ ಈ ಕೆಲಸ ನಡೆದಿದೆಯೆಂದರೆ ಮಂಗಳೂರಿನಿಂದ ಯಾರಾದರೂ ಪರಿಣಿತ ಕೆಲಸಗಾರರನ್ನು ಅಲ್ಲಿಗೆ ಕರೆದೊಯ್ದಿರಬೇಕು ಅಥವಾ ಕನ್ನಡದ ವಾಕ್ಯಗಳ ಅಚ್ಚುಗಳನ್ನು ಇಲ್ಲೇ ತಯಾರಿಸಿ ಕೊಂಡೊಯ್ದು ಅಲ್ಲಿನ ಕೆಲಸಗಾರರಿಂದ ಮಾಡಿಸಿರಬೇಕು... ಅಷ್ಟು ಭಾರದ ಘಂಟೆಗಳನ್ನು ಸ್ವಿಟ್ಜರ್ಲ್ಯಾಂಡಿನಿಂದ ಇಲ್ಲಿಗೆ ತಂದು ಅಷ್ಟೆತ್ತರದ ಗೋಪುರದ ತುದಿಯಲ್ಲಿ ಆ ಕಾಲಕ್ಕೇ ನಿಲ್ಲಿಸಿದ್ದಾರೆಂದರೆ ಆವಾಗ ಬಳಸಿದ ತಂತ್ರಜ್ಞಾನ ಎಂತಹದೋ! ಎಂದು ಅಚ್ಚರಿಪಡುತ್ತಾರೆ ಅಮ್ಮನ್ನ.
ಏನೇ ಇರಲಿ, ಘಂಟೆಗಳ ಮೇಲಿರುವ ಕನ್ನಡ ವಾಕ್ಯಗಳು ಸ್ಥಳೀಯ ಭಾಷೆಯ ಮಹತ್ವವನ್ನು ಮಿಶನರಿಗಳು ಎಷ್ಟು ಚೆನ್ನಾಗಿ ಅರಿತಿದ್ದರೆಂಬುದನ್ನು ತೋರಿಸುತ್ತವೆ. ಇಲ್ಲವಾದರೆ ಬೈಬಲ್ನ ಹೇಳಿಕೆಗಳನ್ನು ಇಂಗ್ಲಿಷ್ನಲ್ಲೋ ಇನ್ಯಾವುದೋ ಭಾಷೆಯಲ್ಲೋ ನೀಡಬಹುದಿತ್ತು, ಕನ್ನಡವೇ ಆಗಬೇಕಿರಲಿಲ್ಲ. ಮಿಶನರಿಗಳು 1836ರಲ್ಲಿ ಕನ್ನಡದಲ್ಲಿ ಹಾಗೂ 1851ರಲ್ಲಿ ತುಳು ಭಾಷೆಯಲ್ಲಿ ಪ್ರಾರ್ಥನೆ ನಡೆಸುವ ಸಂಪ್ರದಾಯವನ್ನು ಆರಂಭಿಸಿದರೆಂಬುದನ್ನು ಇಲ್ಲಿ ಸ್ಮರಿಸಬಹುದು.
ಕುತೂಹಲಕರ ಸಂಗತಿಯೆಂದರೆ, ಕರಾವಳಿಯ ಮೊತ್ತಮೊದಲ ಮುದ್ರಣಾಲಯವಾದ ಮಂಗಳೂರು ಬಾಸೆಲ್ ಮಿಶನ್ ಪ್ರೆಸ್ನಿಂದ (1841) ಹೊರಬಂದ ಮೊತ್ತ ಮೊದಲ ಪುಸ್ತಕವೆಂದರೆ 'ತುಳು ಕೀರ್ತನೆಗಳು' ಎಂಬ ಶೀಷರ್ಿಕೆಯ ಕ್ರಿಸ್ತನ ಸ್ತುತಿ ಪದ್ಯಗಳು. ಬಾಸೆಲ್ ಮಿಶನ್ ಮುದ್ರಣಾಲಯವು ಕನ್ನಡ, ಮಲಯಾಳಂ, ತೆಲುಗು, ತಮಿಳು, ಇಂಗ್ಲಿಷ್, ಸಂಸ್ಕೃತ ಹಾಗೂ ಜರ್ಮನ್ ಬಾಷೆಗಳಲ್ಲೂ ಅನೇಕ ಪುಸ್ತಕಗಳನ್ನು ಮುದ್ರಿಸಿತು. ಕನ್ನಡದ ಮೊತ್ತಮೊದಲ ಪತ್ರಿಕೆ ರೆ ಹರ್ಮನ್ ಮೊಗ್ಲಿಂಗ್ರ 'ಮಂಗಳೂರ ಸಮಾಚಾರ', ರೆ ಫಡರ್ಿನೆಂಡ್ ಕಿಟೆಲ್ರ ಕನ್ನಡ-ಇಂಗ್ಲಿಷ್ ಶಬ್ದಕೋಶಗಳೆಲ್ಲ ಈ ಮುದ್ರಣಾಲದಲ್ಲೇ ಮುದ್ರಿಸಲ್ಪಟ್ಟವು. ಜೈಮಿನಿ ಭಾರತ, ದಶಪರ್ವ ಭಾರತ, ಬಸವ ಪುರಾಣ, ದಾಸರ ಪದಗಳು ಮುಂತಾದ ಅನೇಕ ಮಹತ್ವದ ಕೃತಿಗಳನ್ನು ಮಿಶನರಿಗಳು ಮುದ್ರಿಸಿ ಕನ್ನಡಿಗರಿಗೆ ದೊರಕಿಸಿಕೊಟ್ಟವು