'ವಿದ್ಯಾರ್ಥಿಪಥ' ಪತ್ರಿಕೆಯ ಅಕ್ಟೋಬರ್ 2020ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ
ಅಸಲಿಗಳಿಗಿಂತ ನಕಲಿಗಳೇ ತುಂಬಿಹೋದಾಗ ಅಸಲಿ ಯಾವುದು, ನಕಲಿ ಯಾವುದು ಎಂದು ಗುರುತಿಸುವುದು ಕಷ್ಟ. ಅನೇಕ
ಬಾರಿ ನಕಲಿಗಳನ್ನೇ ಅಸಲಿಗಳೆಂದುಕೊಂಡು, ಅಸಲಿಗಳನ್ನೇ ನಕಲಿಗಳೆಂದುಕೊಂಡು ಗೊಂದಲಕ್ಕೆ ಬೀಳುವ ಸಾಧ್ಯತೆ ಉಂಟು. ಕೆಲವೊಮ್ಮೆ ಅಸಲಿಗಿಂತ ನಕಲಿಯೇ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಆದರೆ ಈ ಪರಿಸ್ಥಿತಿ ಶಿಕ್ಷಣ ವಲಯಕ್ಕೆ ಬಂದಿರುವುದು ಮಾತ್ರ ಒಂದು ದೊಡ್ಡ ವಿಪರ್ಯಾಸ.
ಹೆಸರಿಗಿಂತ ಮೊದಲು ‘ಡಾ.’ ಎಂಬ ಅಕ್ಷರ ಕಂಡರೆ ಅದಕ್ಕೊಂದು ದೊಡ್ಡ ಮರ್ಯಾದೆ ಇತ್ತು. ಹಾಗೆ ಹೆಸರು ಆರಂಭವಾದರೆ ಒಂದೋ ಅವರು ವೈದ್ಯರು, ಇಲ್ಲವೇ ವರ್ಷಾನುಗಟ್ಟಲೆ ಸಂಶೋಧನೆ ಮಾಡಿ ಪಿಎಚ್‍ಡಿ ಪಡೆದವರು, ಅಥವಾ ಬಹಳ ಸಾಧನೆ ಮಾಡಿ ಯಾವುದೋ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್‍ನ ಗೌರವಕ್ಕೆ ಪಾತ್ರರಾದವರು ಎಂಬ ಭಾವ ಮೂಡುತ್ತಿತ್ತು. ಈಗಿನ ಪರಿಸ್ಥಿತಿ ಬೇರೆ. ‘ಡಾ.’ ಎಂದು ಕಂಡಕೂಡಲೇ ಜನರು ‘ಇವರು ಯಾವ ಡಾ? ಎಲ್ಲಿಂದ ತಂದಿರಬಹುದು? ಎಷ್ಟು ಕೊಟ್ಟಿರಬಹುದು?’ ಎಂಬ ಯೋಚನೆಗೆ ಬೀಳುವ ಸಾಧ್ಯತೆಯೇ ಹೆಚ್ಚು.
ಇದೇ ಈ ಕಾಲದ ದುರಂತ. ಡಾಕ್ಟರೇಟ್ ಎಂದ ಕೂಡಲೇ ವಿದ್ವತ್ತಿನ ಚಿತ್ರ ಕಣ್ಣೆದುರು ಬರುವ ಬದಲು ನಕಲಿಗಳ ಸರ್ಕಸ್ಸೇ ಕುಣಿದಾಡತೊಡಗುತ್ತದೆ. ಸಂಶೋಧನೆಯೆಂದು ಊರೂರು ಅಲೆದಾಡಿಕೊಂಡು, ಪುಸ್ತಕಗಳ ನಡುವೆ ನಿದ್ದೆಗೆಟ್ಟು, ನಾಲ್ಕೈದು ವರ್ಷ ಪರಿಶ್ರಮಪಟ್ಟು ಪಿಎಚ್‍ಡಿ ಪದವಿ ಪಡೆದು ಇದೊಂದು ಜನ್ಮಕ್ಕೆ ಇಷ್ಟು ಸಾಕಪ್ಪ ಎಂದು ಸಂಶೋಧಕನೊಬ್ಬ ನಿಟ್ಟುಸಿರುಬಿಡುವ ಹೊತ್ತಿಗೆ, ನಿನ್ನೆಯವರೆಗೆ ಆರಾಮವಾಗಿ ಓಡಾಡಿಕೊಂಡಿದ್ದವರೆಲ್ಲ ಇವತ್ತು ಹೆಸರಿನೆದುರು ‘ಡಾ’ ನೇತಾಡಿಸಿಕೊಂಡು ಊರತುಂಬೆಲ್ಲ ಕಟೌಟ್ ಹಾಕಿಸಿಕೊಂಡು ಮೆರೆಯುತ್ತಿರುತ್ತಾರೆ. ಅವರಲ್ಲಿ ರಿಯಲ್ ಎಸ್ಟೇಟ್ ಏಜೆಂಟರು, ಗುತ್ತಿಗೆದಾರರು, ರಾಜಕೀಯ ಪುಢಾರಿಗಳು, ಸ್ಥಳೀಯ ವಿದ್ಯಾವಾಚಸ್ಪತಿಗಳು, ಹವ್ಯಾಸಿ ಹೋರಾಟಗಾರರು, ಅರೆಕಾಲಿಕ ಕಲಾವಿದರು, ಸ್ವಘೋಷಿತ ಸಮಾಜಸೇವಕರು, ಕೊಲೆ ಆರೋಪಿಗಳು ಮುಂತಾದವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.
ಪಿಎಚ್‍ಡಿ ಎಂಬುದು ಇಷ್ಟೊಂದು ಅಗ್ಗವಾಗಿ ಹೋಯಿತೇ? ಯಾರು ಬೇಕಾದರೂ ಡಾಕ್ಟರೇಟ್ ಗೌರವ ಪಡೆಯಬಹುದೇ? ಇಂತಹ ಪ್ರಶ್ನೆಗಳು ಶೈಕ್ಷಣಿಕ ವಲಯದಲ್ಲಿ ಮತ್ತು ಜನಸಾಮಾನ್ಯರಲ್ಲಿ ಮೂಡುವುದು ಸಹಜ. ಇತ್ತೀಚಿನ ವರ್ಷಗಳಲ್ಲಿ ಪಿಎಚ್‍ಡಿ ಎಂಬುದು ಯಾವುದೇ ನೈತಿಕ ನೆಲೆಗಟ್ಟಿಲ್ಲದ ಒಂದು ದಂಧೆಯಾಗಿ ಮಾರ್ಪಟ್ಟಿರುವುದೇ ಇದಕ್ಕೆ ಪ್ರಮುಖ ಕಾರಣ.
ಪರಿಶ್ರಮದ ಹಾದಿ ಬೇಕಿಲ್ಲ:
ಇದು ಶಾರ್ಟ್‍ಕಟ್‍ಗಳ ಯುಗ. ಸಮಾಜದ ಅನೇಕ ಮಂದಿಗೆ ಪರಿಶ್ರಮ ಬೇಕಾಗಿಲ್ಲ. ಎಲ್ಲರೂ ಸುಲಭದ ದಾರಿ ಹುಡುಕುವವರೇ. ಸುಲಭದ ವಿಧಾನಗಳಿರುವಾಗ ಕಷ್ಟಪಡುವುದು ಮೂರ್ಖತನ ಎಂಬುದೇ ಬಹುತೇಕರ ಭಾವನೆ. ಜ್ಞಾನವಿಜ್ಞಾನಗಳಿಗೂ ಈ ರೋಗ ಅಂಟಿಕೊಂಡರೆ ಏನಾಗುತ್ತದೆ ಎಂದು ನಕಲಿ ಪದವಿಗಳ ಲೋಕವನ್ನು ನೋಡಿದರೆ ಗೊತ್ತಾಗುತ್ತದೆ. ನಾನು ಸರಿಯಾದ ದಾರಿಯಲ್ಲೇ ಸಂಶೋಧನೆ ನಡೆಸಿ ಪಿಎಚ್‍ಡಿ ಪಡೆಯುತ್ತೇನೆ ಎಂದು ಹೊರಟವನಿಗೂ ‘ಅಯ್ಯೋ ಸುಮ್ಮನಿರೋ ಹುಚ್ಚಾ, ಎಲ್ಲರೂ ಬೆತ್ತಲೆಯಾಗಿ ಓಡಾಡುವಾಗ ಇವನೊಬ್ಬ ಹೊಸ ದಿರಿಸು ಧರಿಸಿಕೊಂಡು ಓಡಾಡಬೇಕಂತೆ. ಏನೋ ಒಂದು ಪ್ರಬಂಧ ಬರೆದು ಮುಗಿಸು. ನಾಳೆ ನಿನ್ನ ಪಿಎಚ್‍ಡಿ ಯಾರಿಗೆ ಬೇಕು?’ ಎಂದು ಕೇಳುವವರಿರುವಾಗ, ಆತನಿಗೆ ಅದೇ ಸರಿ ಎಂದು ಅನಿಸುವುದರಲ್ಲಿ ತಪ್ಪೇನೂ ಇಲ್ಲ.
ನಾಳೆ ನಮ್ಮ ಪಿಎಚ್‍ಡಿ ಯಾರಿಗೆ ಬೇಕು? ಯಾರಿಗೆ ಬೇಡದಿದ್ದರೂ ನಮಗೆ ಬೇಕು. ಯಾಕೆಂದರೆ ಅದರ ಹಿಂದೆ ಸಾಕಷ್ಟು ಪರಿಶ್ರಮವಿರುತ್ತದೆ. ಶಿಲ್ಪದ ಬಗ್ಗೆ ಶಿಲ್ಪಿಗಾದರೂ ಗೌರವ ಇರುತ್ತದೆ. ಒಂದು ಪಿಎಚ್‍ಡಿ ಪೂರೈಸಿದಾಗ ಒಂದು ಹೊಸ ಚಿಂತನೆ ಬೆಳೆಯಬೇಕು. ನೂರು ಹೊಸ ಸಾಧ್ಯತೆಗಳು ಗೋಚರವಾಗಬೇಕು. ಆ ಸಾಧ್ಯತೆಗಳಿಂದ ಜ್ಞಾನಜಗತ್ತು ವಿಸ್ತಾರವಾಗಬೇಕು. ಅದರಿಂದ ಸಮಾಜಕ್ಕೊಂದಿಷ್ಟು ಪ್ರಯೋಜನವಾಗಬೇಕು. ಆದ್ದರಿಂದ ನಮ್ಮ ಪಿಎಚ್‍ಡಿ ನಮಗಷ್ಟೇ ಅಲ್ಲ, ಸುತ್ತಲಿನ ಸಮಾಜಕ್ಕೂ ಬೇಕು. ಆ ಪದವಿ ಪಡೆದವನಿಗೆ ಉತ್ತರದಾಯಿತ್ವ ಇರಬೇಕು.
ಹೀಗೆ ಮಾತಾಡುವುದು ಕೇವಲ ಆದರ್ಶ ಎಂದು ಅನೇಕ ಸಲ ಅನೇಕ ಮಂದಿಗೆ ಅನಿಸುತ್ತದೆ. ಏಕೆಂದರೆ ಶಿಕ್ಷಣರಂಗದಲ್ಲಿ ಇಂದು ಬಹುಪಾಲು ಈ ಆದರ್ಶ ಬೇಕಾಗಿಲ್ಲ. ಅಲ್ಲಿ ಅಗತ್ಯವಿರುವುದು ಸರ್ಟಿಫಿಕೇಟು. ಕಷ್ಟಪಟ್ಟು ಸಂಶೋಧನೆ ನಡೆಸಿ ಪಿಎಚ್‍ಡಿ ಪಡೆದನೋ, “ಹೆಂಗೋ ಥೀಸೀಸ್ ಬರೆದು ಬಿಸಾಕಿ” ಪಿಎಚ್‍ಡಿ ತಂದನೋ, ಕೊನೆಗೆ ಗಣನೆಗೆ ಬರುವುದು ಅದೇ ಪ್ರಮಾಣಪತ್ರ. ಉದ್ಯೋಗದಲ್ಲಿ ಭಡ್ತಿ ನೀಡುವುದಕ್ಕೆ, ವೇತನ ಹೆಚ್ಚಿಸುವುದಕ್ಕೆ ಆ ಪ್ರಮಾಣಪತ್ರ ಬೇಕು. ಅಲ್ಲಿ ಪಿಎಚ್‍ಡಿ ಪ್ರಮಾಣಪತ್ರ ಅಸಲಿಯೋ ನಕಲಿಯೋ ಎಂದಷ್ಟೇ ಪರಿಶೀಲನೆ ನಡೆಯುವುದೇ ಹೊರತು, ಅಭ್ಯರ್ಥಿಯ ಮನಸ್ಥಿತಿ ಅಸಲಿಯೋ ನಕಲಿಯೋ ಎಂಬ ವಿಚಾರಣೆ ಅಲ್ಲ. ಸಂಶೋಧನೆಯ ಮಾನದಂಡಗಳನ್ನು ಸರಿಯಾಗಿ ಅನುಸರಿಸಿ ಪದವಿ ಪಡೆದವನಿಗೂ, ಸಂಶೋಧನೆಯ ನಾಟಕ ಆಡಿದವನಿಗೂ ದೊರೆಯುವ ಭಡ್ತಿ, ವೇತನ ಏರಿಕೆ ಒಂದೇ ಆಗಿರುವಾಗ ‘ನಿನ್ನ ಆದರ್ಶ ಕಟ್ಟಿಕೊಂಡು ಏನಾಗಬೇಕೋ ಮಹರಾಯ?’ ಎಂಬ ಪ್ರಶ್ನೆಯಲ್ಲಿ ಅಸಹಜವಾದದ್ದೇನೂ ಇಲ್ಲ.
ಆದರೆ ಇದರಿಂದ ನಮ್ಮ ಶಿಕ್ಷಣ-ಸಂಶೋಧನ ವಲಯಗಳು ಎಂತಹ ಬೆಲೆ ತೆರಬೇಕಾಗಿದೆ ಎಂಬುದು ನಮ್ಮ ಮುಂದಿರುವ ಗಂಭೀರ ಪ್ರಶ್ನೆ.
ನಕಲಿ ಪದವಿಗಳ ಹಾವಳಿ:
ನಕಲಿ ಅಂಕಪಟ್ಟಿಗಳ, ನಕಲಿ ಪದವಿಗಳ ವಿಚಾರ ಹೊಸದೇನೂ ಅಲ್ಲ. ಎಲ್ಲ ಕಾಲದಲ್ಲೂ ಇದೆ. ಎಷ್ಟೋ ಸಲ ಎಲ್ಲ ಪರಿಶೀಲನೆಗಳ ಕಣ್ಣುತಪ್ಪಿಸಿ ಇದೇ ನಕಲಿ ಅಂಕಪಟ್ಟಿ, ಪದವಿಗಳ ಆಧಾರದಲ್ಲಿ ಉದ್ಯೋಗ ಪಡೆದವರು ಅನೇಕ ವರ್ಷಗಳ ಬಳಿಕ ಸಿಕ್ಕಿಹಾಕಿಕೊಳ್ಳುವುದುಂಟು, ಯಾರ ಕಣ್ಣಿಗೂ ಬೀಳದೆ ನಿವೃತ್ತರಾಗುವುದೂ ಉಂಟು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಮಿತಿಮೀರಿದೆ.
2009 ಹಾಗೂ 2016ರಲ್ಲಿ ಕರ್ನಾಟಕದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ನಡೆದ ಸಂದರ್ಭದಲ್ಲಿ ನಕಲಿ ಪ್ರಮಾಣಪತ್ರಗಳ ವಿಚಾರ ಸಾಕಷ್ಟು ಚರ್ಚೆಗೆ ಬಂತು. 2009ರಲ್ಲಿ 2250 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‍ಸಿ)ದ ಮೂಲಕ ನೇಮಕಾತಿ ನಡೆದಾಗ ಅವರ ಪೈಕಿ 1718 ಮಂದಿ ಪಿಎಚ್‍ಡಿ ಹಾಗೂ ಎಂಫಿಲ್ ಪದವಿ ಹೊಂದಿದವರಿದ್ದು, ಅವರ ಪ್ರಮಾಣಪತ್ರಗಳ ಸಿಂಧುತ್ವ ಪರಿಶೀಲನೆ ಮಾಡದಿದ್ದುದರಿಂದ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಇವರಲ್ಲಿ ಸಾಕಷ್ಟು ಮಂದಿ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ ಎಂಬ ಆರೋಪ ಇತ್ತು. ಆಮೇಲೆ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಎಂಫಿಲ್ ಮಾನದಂಡವನ್ನು ತೆಗೆದುಹಾಕಿತು.
2016ರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಮೂಲಕ 2160 ಸಹಾಯಕ ಪ್ರಾಧ್ಯಾಪಕರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದಾಗ ಪ್ರಮಾಣಪತ್ರಗಳ ಸಿಂಧುತ್ವ ಪರಿಶೀಲನೆ ವೇಳೆ ಒಟ್ಟು 40 ಅಭ್ಯರ್ಥಿಗಳು ಸಲ್ಲಿಸಿದ್ದ ಪಿಎಚ್‍ಡಿ ಪ್ರಮಾಣಪತ್ರಗಳು ನಕಲಿ ಎಂದು ಸಾಬೀತಾಯಿತು. ಇವರಲ್ಲಿ 25 ಇಂಗ್ಲಿಷ್ ವಿಷಯದ ಅಭ್ಯರ್ಥಿಗಳು, 7 ವಾಣಿಜ್ಯ ವಿಷಯದ ಅಭ್ಯರ್ಥಿಗಳು, 6 ಕಂಪ್ಯೂಟರ್ ಸೈನ್ಸ್ ಅಭ್ಯರ್ಥಿಗಳು, ತಲಾ ಒಬ್ಬರು ಗಣಿತ ಹಾಗೂ ರಾಜ್ಯಶಾಸ್ತ್ರ ವಿಷಯದವರು ಇದ್ದರು. ಕೆಇಎ ವರದಿಯ ಆಧಾರದಲ್ಲಿ ಉನ್ನತ ಶಿಕ್ಷಣ ಇಲಾಖೆ ಇಂಥ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತು.
ಈ 40 ನಕಲಿ ಪಿಎಚ್‍ಡಿ ಪ್ರಮಾಣಪತ್ರಗಳ ಪೈಕಿ, 16 ಉತ್ತರ ಪ್ರದೇಶದ ಝಾನ್ಸಿಯ ಬುಂದೇಲ್‍ಖಂಡ ವಿಶ್ವವಿದ್ಯಾನಿಲಯದ ಹೆಸರಲ್ಲಿದ್ದವು; 9 ಬಿಹಾರದ ಬೋಧ್‍ಗಯಾದ ಮಗಧ್ ವಿವಿ ಹೆಸರಲ್ಲಿದ್ದವು; 8 ಮೇಘಾಲಯದ ಶಿಲ್ಲಾಂಗ್‍ನಲ್ಲಿರುವ ಸಿಎಂಜೆ ವಿಶ್ವವಿದ್ಯಾನಿಲಯದ ಹೆಸರಲ್ಲಿದ್ದವು; 3 ಉತ್ತರ ಪ್ರದೇಶದ ವಾರಾಣಸಿಯ ಮಹಾತ್ಮ ಗಾಂಧಿ ವಿವಿ ಹೆಸರಲ್ಲಿದ್ದವು; 2 ಕಾನ್ಪುರದ ಛತ್ರಪತಿ ಶಿವಾಜಿ ವಿವಿ ಹೆಸರಲ್ಲಿದ್ದರೆ ತಲಾ ಒಂದೊಂದು ಪ್ರಮಾಣಪತ್ರ ಅಸ್ಸಾಂನ ನಲ್ಬರಿ ಜಿಲ್ಲೆಯ ಕುಮಾರ ಭಾಸ್ಕರವರ್ಮ ವಿವಿ ಹಾಗೂ ಶಿಲ್ಲಾಂಗ್‍ನ ಟೆಕ್ನೋ ಗ್ಲೋಬಲ್ ವಿವಿ ಹೆಸರಲ್ಲಿದ್ದವು. ಇವುಗಳಲ್ಲಿ ಸಿಎಂಜೆ ವಿವಿ ಮತ್ತು ಟೆಕ್ನೋ ಗ್ಲೋಬಲ್ ವಿವಿ ಮಾತ್ರ ಖಾಸಗಿಯವು, ಉಳಿದವೆಲ್ಲ ಆಯಾ ರಾಜ್ಯ ಸರ್ಕಾರಗಳೇ ನಡೆಸುತ್ತಿದ್ದವು.
ಆದರೆ ಇಂತಹ ಬಹುತೇಕ ನಕಲಿ ಪ್ರಮಾಣಪತ್ರಗಳು ಉತ್ತರ ಭಾರತದ ವಿವಿಗಳ ಹೆಸರಿನಲ್ಲೇ ಇವೆ. ಬಿಹಾರ, ಉತ್ತರಪ್ರದೇಶ, ಮೇಘಾಲಯ, ರಾಜಸ್ಥಾನಗಳಲ್ಲಿರುವ ವಿವಿಗಳ ಹೆಸರು ಹೆಚ್ಚಾಗಿ ಕೇಳಿರುತ್ತದೆ. ಸರ್ಕಾರಿ ವಿಶ್ವವಿದ್ಯಾನಿಲಯಗಳ ಹೆಸರಿನಲ್ಲೂ ನಕಲಿ ಪ್ರಮಾಣಪತ್ರಗಳು ಕಂಡುಬರುವಾಗ ಇದರ ಹಿಂದೆ ಕೇವಲ ದಂಧೆಕೋರರ ಕೈವಾಡ ಅಷ್ಟೇ ಅಲ್ಲದೆ ಆಯಾ ವಿವಿಗಳ ನೌಕರರ ಪಾಲ್ಗೊಳ್ಳುವಿಕೆಯೂ ಇದೆ ಎಂಬ ಅನುಮಾನ ಗಟ್ಟಿಯಾಗುತ್ತದೆ.
ನಕಲಿ ಪಿಎಚ್‍ಡಿಗಳ ಹಾವಳಿ ಉತ್ತರ ಭಾರತದಲ್ಲಷ್ಟೇ ಇಲ್ಲ. ಬೆಂಗಳೂರು ವಿಶ್ವವಿದ್ಯಾನಿಲಯದ ಹೆಸರಿನಲ್ಲೂ ಸಾಕಷ್ಟು ನಕಲಿ ಪ್ರಮಾಣಪತ್ರಗಳು ಬಂದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಬೆಂಗಳೂರು ವಿವಿ ಹೆಸರಿನಲ್ಲಿದ್ದ ನಕಲಿ ಪಿಎಚ್‍ಡಿ ಪ್ರಮಾಣಪತ್ರ ಸಲ್ಲಿಸಿ ಹೈದರಾಬಾದಿನ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ಪಡೆದಿದ್ದ ಇಬ್ಬರು ಅಭ್ಯರ್ಥಿಗಳು 2018ರಲ್ಲಿ ಕೆಲಸ ಕಳೆದುಕೊಂಡಿದ್ದರು. ಕುಲಪತಿ, ಕುಲಸಚಿವರ ಸಹಿಗಳನ್ನೇ ಇಲ್ಲಿ ಫೋರ್ಜರಿ ಮಾಡಲಾಗಿತ್ತು. 2017ರಲ್ಲಿ ಉದ್ಯೋಗ ನೇಮಕಾತಿಗೆ ಸಂಬಂಧಿಸಿದಂತೆ ಸಿಂಧುತ್ವ ಪರಿಶೀಲನೆಗೆಂದು 180 ಪ್ರಮಾಣಪತ್ರಗಳನ್ನು ದುಬೈನಿಂದ ಬೆಂಗಳೂರು ವಿವಿಗೆ ಕಳಿಸಿಕೊಡಲಾಗಿತ್ತು. ಅವುಗಳಲ್ಲಿ 62 ಪ್ರಮಾಣಪತ್ರಗಳು ನಕಲಿ ಎಂದು ಸಾಬೀತಾಗಿತ್ತು.
ನಕಲಿ ಪ್ರಮಾಣಪತ್ರ ನೀಡುವವರೆಲ್ಲ ಉದ್ದೇಶಪೂರ್ವಕವಾಗಿಯೇ ಕೊಟ್ಟಿದ್ದಾರೆಂದೂ ಇದರರ್ಥವಲ್ಲ. ಖೋಟಾ ಸಂಸ್ಥೆಗಳ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೆ ಏಜೆಂಟರ ಬಲೆಗೆ ಬಿದ್ದು ಮೋಸಹೋಗುವವರೂ ಇದ್ದಾರೆ. ಇಂತಹ ಕನಿಷ್ಠ 25 ನಕಲಿ ವಿವಿಗಳ ಪಟ್ಟಿಯನ್ನು ಯುಜಿಸಿ ಪ್ರಕಟಿಸಿದೆ.
ನಮ್ಮಲ್ಲಷ್ಟೇ ಅಲ್ಲ ನಕಲಿ:
ಈ ನಕಲಿ ಡಿಗ್ರಿಗಳ ಹಾವಳಿ ಯಾವ ರಾಜ್ಯ, ದೇಶಗಳನ್ನೂ ಬಿಟ್ಟಿಲ್ಲ. ನಕಲಿ ಪಿಎಚ್‍ಡಿ ಪ್ರಮಾಣಪತ್ರ ಸಲ್ಲಿಸಿದ್ದಕ್ಕಾಗಿ ಕಳೆದ ವರ್ಷ ತಮಿಳುನಾಡಿನಲ್ಲಿ 11 ಉಪನ್ಯಾಸಕರು ಅಮಾನತಾದರು. ಹರ್ಯಾಣದಲ್ಲಿ ಸುಮಾರು 500 ಉಪನ್ಯಾಸಕರುಗಳ ಪಿಎಚ್‍ಡಿಗಳ ಸಾಚಾತನದ ಬಗ್ಗೆ ಇತ್ತೀಚೆಗಷ್ಟೇ ದೂರು ದಾಖಲಾಗಿದೆ.
ಶಿಕ್ಷಣ-ಸಂಶೋಧನೆಗಳ ಗುಣಮಟ್ಟಕ್ಕೆ ಹೆಸರಾದ ಅಮೇರಿಕಕ್ಕೂ ನಕಲಿಯ ಕಳಂಕ ತಪ್ಪಿಲ್ಲ. ಕೆಲವು ವರ್ಷಗಳ ಹಿಂದೆ ಅಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ, ಅಮೇರಿದಲ್ಲಿ ವರ್ಷವೊಂದರಲ್ಲಿ ಹೊರಬಂದ ಕ್ರಮಬದ್ಧ ಪಿಎಚ್‍ಡಿಗಳ ಸಂಖ್ಯೆ 45 ಸಾವಿರವಾದರೆ, ನಕಲಿ ಪಿಎಚ್‍ಡಿಗಳ ಸಂಖ್ಯೆ 50 ಸಾವಿರವಂತೆ! ಅಲ್ಲಿಯೂ ಅಸಲಿಗಳಿಗಿಂತ ನಕಲಿಗಳೇ ಹೆಚ್ಚು ಇವೆ ಎನ್ನಬಹುದೇ? ನಕಲಿಗಳಿಗೆ ಕಾಲ-ದೇಶಗಳ ಹಂಗಿಲ್ಲ.
‘ಗೌ.ಡಾ.’ಗಳ ಮಾಯಾಲೋಕ
ಅಕಡೆಮಿಕ್ ಕ್ಷೇತ್ರದ ಪಿಎಚ್‍ಡಿಗಳದ್ದು ಒಂದು ಕಥೆಯಾದರೆ, ‘ಗೌ.ಡಾ.’ಗಳದ್ದೇ ಇನ್ನೊಂದು ಕಥೆ. ಅಧಿಕೃತ ವಿಶ್ವವಿದ್ಯಾನಿಲಯಗಳೇ ನೀಡುವ ಗೌರವ ಡಾಕ್ಟರೇಟುಗಳ ತಮಾಷೆ ಒಂದೆಡೆಯಾದರೆ ಎಲ್ಲೂ ಅಸ್ತಿತ್ವದಲ್ಲಿಲ್ಲದ ‘ವರ್ಚುವಲ್’ ವಿಶ್ವವಿದ್ಯಾನಿಲಯಗಳು ಮಾರುವ ಗೌರವ ಡಾಕ್ಟರೇಟುಗಳ ಹಂಗಾಮ ಇನ್ನೊಂದೆಡೆ.
ವಿಸ್ಮಯವೆನಿಸುವಂಥ ಬದುಕು ನಡೆಸಿದ ಸಾಧಕರಿಗೆ ವಿಶ್ವವಿದ್ಯಾನಿಲಯಗಳು ಗೌರವಪೂರ್ವಕ ಡಾಕ್ಟರೇಟ್ ನೀಡುವಂಥ ಪದ್ಧತಿ ಬಹು ಹಿಂದಿನಿಂದಲೂ ಇದೆ. ಮರಗಳನ್ನೇ ಮಕ್ಕಳೆಂದು ಬಗೆದು ಬದುಕು ಸಾಗಿಸಿದ ಸಾಲು ಮರದ ತಿಮ್ಮಕ್ಕ, ಯಕ್ಷಗಾನ ರಂಗದ ದಂತಕಥೆಯಾಗಿ ಮೆರೆದ ಶೇಣಿ ಗೋಪಾಲಕೃಷ್ಣ ಭಟ್, ಸಾವಿರಾರು ಗ್ರಾಮೀಣ ಹೆಣ್ಮಕ್ಕಳಿಗೆ ಸುಖಪ್ರಸವ ಮಾಡಿಸಿದ ಸೂಲಗಿತ್ತಿ ನರಸಮ್ಮ ಮುಂತಾದವರನ್ನು ಕರೆದು ವಿವಿಗಳು ಡಾಕ್ಟರೇಟ್ ಪದವಿ ನೀಡಿದಾಗ ಜನಸಾಮಾನ್ಯರೂ ಸಂಭ್ರಮಿಸಿದರು. ಇವರ್ಯಾರೂ ಪ್ರಾಥಮಿಕ ಶಾಲೆಗಿಂತ ಆಚೆ ಕಾಲಿಟ್ಟವರಲ್ಲ, ಬಿರುದು ಬಾವಲಿಗಳ ಬೆನ್ನು ಬಿದ್ದವರಲ್ಲ, ಕೀರ್ತಿಶನಿಯನ್ನು ಹುಡುಕಿ ಹೋದವರಲ್ಲ. ಗೌರವ ಅವರನ್ನು ಅರಸಿಕೊಂಡು ಬಂತು, ಡಾಕ್ಟರೇಟುಗಳ ಮೌಲ್ಯ ಹೆಚ್ಚಾಯಿತು.
ಯಾವುದೇ ಕ್ಷೇತ್ರದಲ್ಲಾಗಲೀ, ನಾಲ್ಕು ಜನ ಮೆಚ್ಚುವಂತಹ ಸಾಧನೆ ಮಾಡಿದವರನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿದರೆ ಯಾರೂ ಆಕ್ಷೇಪಿಸುವುದಿಲ್ಲ. ಯಾವಾಗ ಗೌರವ ಡಾಕ್ಟರೇಟ್ ಎಂಬುದು ನೂರಕ್ಕೆ ನೂರು ದುಡ್ಡಿನ ವ್ಯವಹಾರವಾಗಿ ಬದಲಾಯಿತೋ ಅಲ್ಲಿಗೆ ‘ಗೌ.ಡಾ.’ಗಳನ್ನು ಜನಸಾಮಾನ್ಯರೂ ಲೇವಡಿ ಮಾಡುವಂತಾಯಿತು. ಉದ್ಯಮಿಗಳು, ನಕಲಿ ಸಮಾಜ ಸೇವಕರು, ಹೆಸರಿಗಾಗಿ ಹಪಹಪಿಸುವವರು, ವಶೀಲಿಬಾಜಿಗಳು ವಿಶ್ವವಿದ್ಯಾನಿಲಯಗಳೊಂದಿಗೆ ದಂಧೆ ಕುದುರಿಸಿಕೊಂಡಾಗ ‘ಗೌ.ಡಾ.’ಗಳು ಮಾರಾಟಕ್ಕಿಟ್ಟ ಸರಕುಗಳಾದವು.
ಅಧಿಕೃತ ವಿಶ್ವವಿದ್ಯಾನಿಲಯಗಳೇ ಇಂತಹ ಅನರ್ಥ ಪರಂಪರೆ ಹುಟ್ಟುಹಾಕಿದ ಮೇಲೆ ನಿಜವಾಗಿಯೂ ಬಿಸಿನೆಸ್ಸಿಗೆ ಹೊರಟವರು ಸುಮ್ಮನಿರುತ್ತಾರೆಯೇ? ಬಿರುದು ಬಾವಲಿಗಳ ಹಿಂದೆ ಬಿದ್ದವರೂ, ವ್ಯಾಪಾರಕ್ಕೆ ಕೂತವರೂ ಒಂದೇ ದಾರಿಗೆ ಬಂದ ಮೇಲೆ ಕೆಲಸ ಸಲೀಸು. ಈಗ ಗೌರವ ಡಾಕ್ಟರೇಟ್ ನೀಡುವ ನೂರಾರು ಸಂಸ್ಥೆಗಳು ಪ್ರಪಂಚದ ನಾನಾ ಕಡೆ ಹುಟ್ಟಿಕೊಂಡಿವೆ. ಅಮೇರಿಕ, ಶ್ರೀಲಂಕಾ, ಸಿಂಗಾಪುರದ ಡಾಕ್ಟರೇಟುಗಳು ಬೆಂಗಳೂರು, ಮೈಸೂರುಗಳಲ್ಲೇ ಸಿಗುವುದಾದರೆ ಯಾರಿಗೆ ಬೇಡ? ದುಡ್ಡು ಸುರಿದರೆ ಈ ಜಗತ್ತಿನಲ್ಲಿ ಸಿಗದಿರುವುದೇನುಂಟು?
ಇಂಡಿಯನ್ ವರ್ಚುವಲ್ ಯುನಿವರ್ಸಿಟಿ, ಯುನಿವರ್ಸಲ್ ತಮಿಳ್ ಯುನಿವರ್ಸಿಟಿ, ಕಿಂಗ್ಸ್ ಯುನಿವರ್ಸಿಟಿ, ಇಂಟರ್‍ನ್ಯಾಷನಲ್ ಪೀಸ್ ಯುನಿವರ್ಸಿಟಿ, ಇಂಟರ್‍ನ್ಯಾಷನಲ್ ತಮಿಳ್ ಯುನಿವರ್ಸಿಟಿ, ಯುನಿವರ್ಸಿಟಿ ಆಫ್ ಏಷ್ಯಾ... ಇಂತಹ ಹತ್ತಾರು ಯುನಿವರ್ಸಿಟಿಗಳು ಯಾರೆಲ್ಲ ಹಣಕೊಡಲು ಸಿದ್ಧರಿದ್ದಾರೋ ಅವರಿಗೆಲ್ಲ ಡಾಕ್ಟರೇಟಿನ ಗೌರವ ದಯಪಾಲಿಸುತ್ತವೆ. ಡಾ. ರಾಧಾಕೃಷ್ಣನ್ ಅವರ ಹೆಸರು ಇಟ್ಟುಕೊಂಡಿರುವ ಬೆಂಗಳೂರಿನ ‘ಸಂಶೋಧನ ಸಂಸ್ಥೆ’ಯೊಂದು ದೇಶವಿದೇಶಗಳ ಡಾಕ್ಟರೇಟುಗಳಲ್ಲದೆ ನೀವು ಬಯಸುವ ಯಾವುದೇ ಪದವಿಯನ್ನು ಹಂಚಲು ಸಿದ್ಧವಿದೆ. ನ್ಯಾಷನಲ್ ವರ್ಚುವಲ್ ಯುನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಶನ್, ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಶನ್ ಇವೆಲ್ಲ ಬೆಂಗಳೂರಿನಲ್ಲಿ ಅಕ್ಕಪಕ್ಕದಲ್ಲಿ ಅಂಗಡಿ ಇಟ್ಟುಕೊಂಡಿವೆ. ‘ವರ್ಚುವಲ್’ ಆಗಿರುವುದರಿಂದ ನಿಮ್ಮ ಕ್ಯಾಂಪಸ್ ಎಲ್ಲಿ, ಆಡಳಿತ ಕಚೇರಿ ಎಲ್ಲಿ ಎಂದು ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಂಟರ್‍ನ್ಯಾಷನಲ್ ತಮಿಳ್ ಯುನಿವರ್ಸಿಟಿ ಎಂಬ ‘ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯ’ಕ್ಕೆ ಸ್ವಂತ ಜಾಲತಾಣವೂ ಇಲ್ಲ. ಬಹ್ರೈನ್, ಯುಎಇ, ಮಲೇಷ್ಯಾ, ಸಿಂಗಾಪುರ ಮುಂತಾದ ಕಡೆ ತನ್ನ ಕಾರ್ಯವ್ಯಾಪ್ತಿ ಇದೆ ಎಂದು ಹೇಳಿಕೊಳ್ಳುವ ಈ ಸಂಸ್ಥೆ ತನ್ನ ಅಷ್ಟೂ ದಂಧೆಯನ್ನು ನಡೆಸುವುದು ಒಂದು ಬ್ಲಾಗ್ ಮೂಲಕ ಎಂದರೆ ನಂಬಲೇಬೇಕು.
ಇತ್ತೀಚೆಗೆ ಇಂತಹ ಸಂಸ್ಥೆಗಳು ತಮ್ಮ ಗೌರವ ಡಾಕ್ಟರೇಟುಗಳಿಗೆ ಸರ್ಕಾರದ ಮಾನ್ಯತೆ ಇಲ್ಲವೆಂದೂ, ಇವು ‘ಅಲಂಕಾರಿಕ’ ಪದವಿಗಳೆಂದೂ ಮುಕ್ತವಾಗಿಯೇ ತಮ್ಮ ಜಾಲತಾಣಳಗಳಲ್ಲಿ ಪ್ರಕಟಿಸಿಕೊಳ್ಳುತ್ತಿವೆ. ಆದರೆ ಅವುಗಳಿಗೆ ಗಿರಾಕಿಗಳ ಕೊರತೆಯೇನೂ ಇಲ್ಲ. ಮೂರು ವರ್ಷಗಳ ಹಿಂದೆ ಸಚಿವ ಸುರೇಶ್ ಕುಮಾರ್ ಅವರು ವಿಕ್ಟೋರಿಯಾ ಗ್ಲೋಬಲ್ ಯುನಿವರ್ಸಿಟಿ ಎಂಬ ಇಂಗ್ಲೆಂಡ್ ಮೂಲದ ಸಂಸ್ಥೆಯೊಂದು ಗೌರವ ಡಾಕ್ಟರೇಟ್ ನೀಡುವುದಾಗಿ ಸಂಪರ್ಕಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅವರಿಗೆ ಬಂದ ಪತ್ರದ ಪ್ರಕಾರ ಗೌರವ ಡಾಕ್ಟರೇಟಿನ ದರ ರೂ. 1.75 ಲಕ್ಷ, ಗೌರವ ಡಿ.ಲಿಟ್ ಪದವಿಯ ದರ ರೂ. 2.25 ಲಕ್ಷ. ಪದವಿ ಪ್ರದಾನ ಸಮಾರಂಭ ಬೆಂಗಳೂರಿನ ಪ್ರತಿಷ್ಠಿತ ಹೋಟೆಲಲ್ಲಿ ನಡೆಯುವುದಾಗಿಯೂ ಅದಕ್ಕೆ ಅಂದಿನ ರಾಜ್ಯ ಪೊಲೀಸ್ ವರಿಷ್ಠ ಆರ್. ಕೆ. ದತ್ತಾ ಮುಖ್ಯ ಅತಿಥಿಯಾಗಿರುವುದಾಗಿಯೂ ಪತ್ರದಲ್ಲಿತ್ತು. ಜತೆಗೆ ಇನ್ನೊಬ್ಬರನ್ನು ಕರೆದುಕೊಂಡು ಹೋದರೆ ಹತ್ತುಸಾವಿರ, ವೀಡಿಯೋ/ಫೋಟೋ ಬೇಕಾದರೆ ಏಳು ಸಾವಿರ ರೂ. ಹೆಚ್ಚುವರಿಯಾಗಿ ನೀಡಬೇಕಿತ್ತು.
ಇದಕ್ಕಿಂತ ಕಡಿಮೆ ದರದ ಗೌ.ಡಾ.ಗಳೂ ಲಭ್ಯ ಇವೆ. ಕಳೆದೆರಡು ವರ್ಷಗಳಿಂದ ಸುದ್ದಿಯಲ್ಲಿರುವ ಮಂಡ್ಯ-ಮೈಸೂರು ಗೌ.ಡಾ.ಗಳ ದರ 25 ಸಾವಿರದಿಂದ 1 ಲಕ್ಷದವರೆಗೂ ಇದೆ. 25 ಸಾವಿರದ ಗೌ.ಡಾ.ದಲ್ಲಿ ಐದು ಸಾವಿರ ನೋಂದಣಿಗೆ, ಹತ್ತು ಸಾವಿರ ಪ್ರಮಾಣಪತ್ರಕ್ಕೆ, ಐದು ಸಾವಿರ ಗೌನಿಗೆ, ಇನ್ನೈದು ಸಾವಿರ ಪದವಿ ಪಡೆದವನ ಸಾಧನೆಗಳನ್ನು ವೆಬ್ಸೈಟಿನಲ್ಲಿ ಪ್ರಕಟಿಸುವುದಕ್ಕೆ. ರಾತ್ರಿ ಬೆಳಗಾಗುವುದರೊಳಗೆ ಹೆಸರಿನೆದುರು ಡಾ. ಎಂದು ಹಾಕಿಕೊಳ್ಳುವುದು ಸಾಧ್ಯವಿರುವಾಗ ವರ್ಷಗಟ್ಟಲೆ ಒದ್ದಾಡುವವರೇ ಮೂರ್ಖರು.
ಗೌ.ಡಾ.ಗಳನ್ನು ನೀಡಲು ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸುವಂತೆ 2016ರಲ್ಲೇ ಕರ್ನಾಟಕದ ರಾಜ್ಯಪಾಲರು ವಿವಿಗಳಿಗೆ ಆದೇಶ ನೀಡಿದ್ದರು. ಕಳೆದ ವರ್ಷವಷ್ಟೇ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ಕರ್ನಾಟಕ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಗೌ.ಡಾ.ಗಳ ಸಾಚಾತನದ ವಿಚಾರವಾಗಿ ಸ್ಪಷ್ಟ ಮಾರ್ಗದರ್ಶೀ ಸೂತ್ರಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರ ಹಾಗೂ ಯುಜಿಸಿಗೆ ನೋಟೀಸ್ ಜಾರಿ ಮಾಡಿತ್ತು. ಕಳೆದ ವರ್ಷ ಮಂಡ್ಯದ 150ಕ್ಕೂ ಹೆಚ್ಚು ‘ಸಾಧಕರು’ ಗೌ.ಡಾ. ಪಡೆದ ತಮಾಷೆ ಇನ್ನೂ ಹಸಿಹಸಿಯಾಗಿರುವಾಗಲೇ ಈ ವರ್ಷ ಮತ್ತೆ ಅಷ್ಟೇ ಸಂಖ್ಯೆಯ ‘ಸಾಧಕರಿಗೆ’ ಗೌ.ಡಾ. ನೀಡುವ ಕಾರ್ಯಕ್ರಮಕ್ಕೆ ಪೊಲೀಸರೇ ದಾಳಿ ಮಾಡಿ ಕಾರ್ಯಕ್ರಮವನ್ನು ನಿಲ್ಲಿಸುವ ಪರಿಸ್ಥಿತಿ ಬಂದಿದೆ. ಇನ್ನು ಯಾವ ಕಾನೂನು, ಮಾರ್ಗದರ್ಶೀ ಸೂತ್ರಗಳಿಗೆ ಎಲ್ಲಿ ಬೆಲೆ?
ಪಿಎಚ್‍ಡಿ ಪ್ರಕ್ರಿಯೆ ಸುಲಭವಲ್ಲ:
ಅಕಡೆಮಿಕ್ ವಲಯದಲ್ಲಿ ಪಿಎಚ್‍ಡಿ ಪಡೆಯುವುದು ವಾಸ್ತವವಾಗಿ ಸುಲಭದ ವಿಚಾರವಲ್ಲ. ಪಿಎಚ್‍ಡಿ ನೀಡುವ ವಿವಿಗೆ ಯುಜಿಸಿಯ ಮಾನ್ಯತೆ ಇರಬೇಕು. ಅಭ್ಯರ್ಥಿ ನಿಯಮಾನುಸಾರ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಂಡು 3ರಿಂದ 6 ವರ್ಷ ಸಂಶೋಧನೆ ನಡೆಸಬೇಕು. ಸಂಶೋಧನ ವಿಧಾನಗಳನ್ನು ಅಭ್ಯಸಿಸುವುದಕ್ಕಾಗಿ ಆರಂಭದಲ್ಲಿ ಆರು ತಿಂಗಳ ಕೋರ್ಸ್ ವರ್ಕ್ ಪೂರೈಸಬೇಕು. ವಿವಿಯಿಂದ ಮಾನ್ಯತೆ ಪಡೆದಿರುವ ಮಾರ್ಗದರ್ಶಕರ ಉಸ್ತುವಾರಿಯಲ್ಲಿ ಕ್ಷೇತ್ರಕಾರ್ಯಾದಿ ಹಲವು ವಿಧಾನಗಳನ್ನು ಅನುಸರಿಸಿ ಸಂಶೋಧನೆ ಕೈಗೊಂಡು ಪ್ರಬಂಧ ರಚಿಸಬೇಕು. ಈ ನಡುವೆ ಸಂಶೋಧನೆ ನಡೆಸುವ ಕ್ಷೇತ್ರದ ವ್ಯಾಪ್ತಿಯಲ್ಲೇ ಕನಿಷ್ಠ ಎರಡು ಸಂಶೋಧನ ಲೇಖನಗಳನ್ನು ಸಿದ್ಧಪಡಿಸಿ ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಕಟಿಸಬೇಕು. ಪ್ರತೀ ಆರು ತಿಂಗಳಿಗೊಮ್ಮೆ ಸಂಶೋಧನೆಯ ಪ್ರಗತಿ ವರದಿಯನ್ನು ವಿವಿಗೆ ಸಲ್ಲಿಸಬೇಕು. ಅಂತಿಮವಾಗಿ ರಚನೆಯಾಗುವ ಪ್ರಬಂಧವನ್ನು ಇಬ್ಬರು ಬಾಹ್ಯ ಪರೀಕ್ಷಕರು ಮೌಲ್ಯಮಾಪನಕ್ಕೆ ಒಳಪಡಿಸಬೇಕು. ಕೃತಿಚೌರ್ಯ ನಡೆದಿಲ್ಲವೆಂದು ರುಜುವಾತಾಗಬೇಕು. ಅಭ್ಯರ್ಥಿ ಮುಕ್ತ ಸಂದರ್ಶನದಲ್ಲಿ ಸಂಶೋಧನೆಯ ಫಲಿತಾಂಶಗಳನ್ನು ಮಂಡಿಸಿ ಅವುಗಳನ್ನು ಸಮರ್ಥಿಸಿಕೊಳ್ಳಬೇಕು. ಇಷ್ಟಾದಮೇಲೆಯೇ ಪಿಎಚ್‍ಡಿ ಒಲಿಯುವುದು. ಅನೇಕ ಮಂದಿ ಮೂರ್ನಾಲ್ಕು ವರ್ಷಗಳಲ್ಲಿ ಪೂರೈಸಬೇಕಾದ ಪಿಎಚ್‍ಡಿಗೆ ಏಳೆಂಟು ವರ್ಷ ತೆಗೆದುಕೊಳ್ಳುವುದೂ ಇದೆ.
ಗೌರವ ಡಾಕ್ಟರೇಟುಗಳಾದರೂ ಅಷ್ಟು ಸುಲಭದಲ್ಲಿ ಮಾರಾಟಕ್ಕಿಡುವ ಸರಕುಗಳಲ್ಲ. ವಿಶ್ವವಿದ್ಯಾನಿಲಯ ಗುರುತಿಸುವ ಸಾಧಕರ ಪಟ್ಟಿ ಅಕಡೆಮಿಕ್ ಕೌನ್ಸಿಲ್, ಸಿಂಡಿಕೇಟ್‍ನಲ್ಲಿ ಚರ್ಚೆಗೆ ಬಂದು ಅಂತಿಮಗೊಳಿಸುವ ಪಟ್ಟಿಯನ್ನು ಕುಲಾಧಿಪತಿಗಳಾದ ರಾಜ್ಯಪಾಲರಿಗೆ ಕಳಿಸಿಕೊಡಬೇಕು. ರಾಜ್ಯಪಾಲರು ತಮ್ಮ ವಿವೇಚನೆಯನ್ನು ಬಳಸಿ ಯಾರಿಗೆ ಗೌರವ ಡಾಕ್ಟರೇಟ್ ನೀಡಬಹುದೆಂದು ನಿರ್ಧಾರ ಮಾಡುತ್ತಾರೆ. ಅವರಿಗಷ್ಟೇ ವಿವಿ ತನ್ನ ಘಟಿಕೋತ್ಸವದಲ್ಲಿ ಗೌರವ ಪ್ರದಾನ ಮಾಡಬಹುದು. 2016ರಿಂದ ಒಂದು ಘಟಿಕೋತ್ಸವದಲ್ಲಿ ಮೂವರಿಗೆ ಮಾತ್ರ ಗೌರವ ಡಾಕ್ಟರೇಟ್ ನೀಡಬಹುದೆಂಬ ನಿಯಮ ಜಾರಿಯಲ್ಲಿದೆ. ಹೋಟೆಲುಗಳು ಮಸಾಲೆ ದೋಸೆ ಹಂಚುವಂತೆ ಅಂತಹದೇ ಹೋಟೆಲುಗಳಲ್ಲಿ ಗೌರವ ಡಾಕ್ಟರೇಟ್‍ಗಳು ಹಂಚಲ್ಪಡಿತ್ತಿರುವುದು ಮಾತ್ರ ಇಂದಿನ ವ್ಯಂಗ್ಯ.
ಅಧಿಕೃತ ವಿಶ್ವವಿದ್ಯಾನಿಲಯಗಳದ್ದೇ ಹೆಸರಿನಲ್ಲಿ ನಕಲಿ ಪಿಎಚ್‍ಡಿ ಮತ್ತಿತರ ಪ್ರಮಾಣಪತ್ರ ತಯಾರಿಸಿ ಸಲ್ಲಿಸುವ ದಂಧೆಯಿಂದ ತೊಡಗಿ, ‘ವರ್ಚುವಲ್’ ವಿವಿಗಳು ಬಿಕರಿ ಮಾಡುತ್ತಿರುವ ಗೌ.ಡಾ.ಗಳವರೆಗೆ, ಈ ಎಲ್ಲ ಬೇಕಾಬಿಟ್ಟಿ ದಂಧೆಗಳಿಗೆ ಕಾನೂನಿನ ಕಡಿವಾಣ ತೊಡಿಸದೇ ಹೋದರೆ ನಮ್ಮ ಶೈಕ್ಷಣಿಕ ಹಾಗೂ ಸಂಶೋಧನ ವಲಯಕ್ಕೆ ಉಳಿಗಾಲವಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರವೇ ಸೂಕ್ತ ನಿರ್ಧಾರ ಕೈಗೊಂಡು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿ ಈ ಅವ್ಯವಹಾರಗಳನ್ನು ಮಟ್ಟಹಾಕುವುದು ಅನಿವಾರ್ಯ. ಕಳ್ಳತನ, ಕೊಲೆ, ಸುಲಿಗೆಗಳಂಥದ್ದೇ ಕ್ರಿಮಿನಲ್ ಕೃತ್ಯಗಳನ್ನಾಗಿ ಇಂಥವುಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳದೆ ಹೋದರೆ ನ್ಯಾಯಮಾರ್ಗದಲ್ಲಿ ಪದವಿಗಳನ್ನು ಪಡೆದವರನ್ನೇ ಸಮಾಜ ಕ್ರಿಮಿನಲ್‍ಗಳಂತೆ ನಡೆಸಿಕೊಳ್ಳುವ ದಿನ ದೂರವಿಲ್ಲ.
- ಸಿಬಂತಿ ಪದ್ಮನಾಭ ಕೆ. ವಿ.