ಶನಿವಾರ, ಜನವರಿ 27, 2024

ಭಾರತೀಯ ಪತ್ರಿಕಾಲೋಕದ ಹಿಂದಿನ ಕಥೆ

28 ಜನವರಿ 2024ರ ʻಉದಯವಾಣಿ ಸಾಪ್ತಾಹಿಕ ಸಂಪದʼದಲ್ಲಿ ಪ್ರಕಟವಾದ ಲೇಖನ

ಕಾಫಿಯಿಲ್ಲದ ಬೆಳಗನ್ನಾದರೂ ಊಹಿಸಬಹುದು, ಪತ್ರಿಕೆಯಿಲ್ಲದ ಮುಂಜಾವನ್ನು ಊಹಿಸಿಕೊಳ್ಳುವುದು ಕಡುಕಷ್ಟ. ಪತ್ರಿಕೆಯ ಜಾಗದಲ್ಲಿ ಮೊಬೈಲೇನೋ ಬಂದು ಕೂತಿರಬಹುದು, ಆದರೆ ಮನುಷ್ಯನ ದಿನದ ಬಾಗಿಲನ್ನು ತೆರೆಯುವುದು ಯಾವುದೋ ಒಂದು ಮಾಧ್ಯಮ ಎಂಬುದರಲ್ಲಿ ಎರಡು ಮಾತಿಲ್ಲ. ಯಾವ ಮಾಧ್ಯಮ ಬಂದರೂ ಪತ್ರಿಕೆಯ ಮೇಲೆ ಕಣ್ಣಾಡಿಸದೆ ತೃಪ್ತಿಯಿಲ್ಲ ಎನ್ನುವ ಮಂದಿಯಂತೂ ಬೇಕಾದಷ್ಟಿದ್ದಾರೆ.

ಪತ್ರಿಕೆಗಳನ್ನು ಇಷ್ಟೊಂದು ಹಚ್ಚಿಕೊಂಡಿರುವ ಎಲ್ಲರಿಗೂ ‘ಜನರನ್ನು ಈ ಮಟ್ಟಕ್ಕೆ ಪ್ರಭಾವಿಸಿರುವ ಇಂತಹದೊಂದು ಮಾಧ್ಯಮ ಹೇಗೆ ಹುಟ್ಟಿಕೊಂಡಿತು? ಯಾವಾಗ ಹುಟ್ಟಿಕೊಂಡಿತು?’ ಎಂಬ ಪ್ರಶ್ನೆ ಕಾಡದಿರದು.  ಆ ಕಥೆ ಬಹಳ ಸ್ವಾರಸ್ಯಕರವಾಗಿದೆ. ಸದ್ಯಕ್ಕೆ ನಾವು ಭಾರತದಲ್ಲಿ ಪತ್ರಿಕೆಗಳು ಹೇಗೆ ಹುಟ್ಟಿಕೊಂಡವು? ನಮ್ಮ ದೇಶದ ಮೊದಲ ಪತ್ರಿಕೆಯ ಕಥೆ ಏನು? ಆರಂಭಿಸಿದವರು ಯಾರು? ಇತ್ಯಾದಿಗಳನ್ನು ಗಮನಿಸೋಣ. 

ಸುಮಾರು ಇನ್ನೂರೈವತ್ತು ವರ್ಷಗಳ ಹಿಂದೆ ಭಾರತದಲ್ಲಿ ಪತ್ರಿಕೆಗಳೇ ಇರಲಿಲ್ಲ. ಇರಲಿಲ್ಲ ಎಂದರೆ ಜನ ಪತ್ರಿಕೆಗಳನ್ನು ಕಂಡೇ ಇರಲಿಲ್ಲ ಎಂದಲ್ಲ. ಯುರೋಪಿನ ಪತ್ರಿಕೆಗಳನ್ನು ಜನರು ಓದುತ್ತಿದ್ದುದುಂಟು. ಇಲ್ಲಿ ಬ್ರಿಟಿಷರ ವ್ಯಾಪಾರ ವ್ಯವಹಾರ ಜೋರಾಗಿದ್ದುದರಿಂದ, ಇಂಗ್ಲೆಂಡಿನಿಂದ ಹಡಗುಗಳ ಮೂಲಕ ಪತ್ರಿಕೆಗಳೂ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದವು. ಅವು ಮೂರ್ನಾಲ್ಕು ತಿಂಗಳು ಹಳೆಯ ಪತ್ರಿಕೆಗಳು. ಅವನ್ನೇ ಇಲ್ಲಿನ ಮಂದಿ ಬಿಸಿಬಿಸಿ ಸುದ್ದಿಗಳೆಂದು ಭಾವಿಸಿ ಓದಬೇಕಿತ್ತು.

ವ್ಯಾಪಾರಿಯ ಕನಸು:

ಭಾರತದಲ್ಲೇ ಪತ್ರಿಕೆಗಳನ್ನು ಮುದ್ರಿಸಬೇಕು ಎಂಬ ಯೋಚನೆ ಮೊದಲು ಬಂದದ್ದು ವಿಲಿಯಂ ಬೋಲ್ಟ್ಸ್ ಎಂಬ ಯುರೋಪಿಯನ್ ವ್ಯಾಪಾರಿಗೆ. ಭಾರತದಲ್ಲಿ ಪತ್ರಿಕೆಗಳಿಲ್ಲದೆ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ ಎಂದೂ, ಯಾರಾದರೂ ಮುದ್ರಣಾಲಯವನ್ನು ಸ್ಥಾಪಿಸುವ ಆಸಕ್ತರಿದ್ದರೆ ಅವರಿಗೆ ತಾನು ಸಹಾಯ ಮಾಡುತ್ತೇನೆ ಎಂದೂ, ತನ್ನಲ್ಲಿ ಸಾಕಷ್ಟು ವಿಶೇಷ ಸುದ್ದಿಗಳಿದ್ದು ಅವನ್ನು ಓದಬಯಸುವವರು ತನ್ನಮನೆಗೆ ಬೆಳಗ್ಗಿನ ಹೊತ್ತು ಬರಬಹುದು ಎಂದೂ ಒಂದು ಕರಪತ್ರವನ್ನು ಸಿದ್ಧಪಡಿಸಿ ಅವನು ಕಲ್ಕತ್ತಾದ ಕೌನ್ಸಿಲ್ ಹೌಸಿನ ಹೆಬ್ಬಾಗಿಲಿನಲ್ಲಿ ಅಂಟಿಸಿದ. ಅದು 1760ರ ದಶಕದ ಕೊನೆಯ ಭಾಗ.

ಕಂಪೆನಿ ಸರ್ಕಾರಕ್ಕೆ ಅಲ್ಲೇ ಅಪಾಯದ ಮುನ್ಸೂಚನೆ ಕಂಡಿತು. ಇದನ್ನು ಚಿಗುರಲ್ಲೇ ಚಿವುಟದೆ ಹೋದರೆ ನಮಗೇ ಸಂಚಕಾರ ಉಂಟಾದೀತು ಎಂದು ಭಾವಿಸಿದ ಕಂಪೆನಿ ಅಧಿಕಾರಿಗಳು ಬೋಲ್ಟ್ಸ್‍ನನ್ನು ಗಡಿಪಾರು ಮಾಡುವುದೇ ಸರಿ ಎಂದು ಯೋಚಿಸಿದರು. ಆತ ಕೂಡಲೇ ಬಂಗಾಲ ತೊರೆದು ಮದ್ರಾಸಿಗೆ ಹೋಗಿ, ಅಲ್ಲಿಂದ ಇಂಗ್ಲೆಂಡ್‍ನ ಹಡಗು ಹಿಡಿಯಬೇಕು ಎಂದು ಸರ್ಕಾರ ಆದೇಶಿಸಿತು. ಅಲ್ಲಿಗೆ ಭಾರತದ ಮೊದಲ ಪತ್ರಿಕೆ ಹುಟ್ಟುವ ಮೊದಲೇ ಸತ್ತುಹೋಯಿತು.

ಬೆಂಗಾಲ್ ಗಜೆಟ್:

ಇದಾಗಿ ಹನ್ನೆರಡು ವರ್ಷಗಳ ಬಳಿಕ ಭಾರತದ ಮೊತ್ತಮೊದಲ ಪತ್ರಿಕೆ ‘ಬೆಂಗಾಲ್ ಗಜೆಟ್’ನ ಉಗಮವಾಯಿತು. 1780ರ ಜನವರಿ 29ರಂದು ಜೇಮ್ಸ್ ಆಗಸ್ಟಸ್ ಹಿಕಿ ಎಂಬ ಇನ್ನೊಬ್ಬ ಯುರೋಪಿಯನ್ ವ್ಯಾಪಾರಿ ‘ಬೆಂಗಾಲ್ ಗಜೆಟ್’ನ ಮೊದಲ ಸಂಚಿಕೆಯನ್ನು ಹೊರಡಿಸಿದ. ಅದಕ್ಕೆ ‘ದಿ ಒರಿಜಿನಲ್ ಕಲ್ಕತ್ತಾ ಜನರಲ್ ಅಡ್ವಟೈಸರ್’ ಎಂಬ ಇನ್ನೊಂದು ಹೆಸರೂ ಇತ್ತು. ಆ ಪತ್ರಿಕೆಗೆ ಹಿಕಿಯೇ ಲೇಖಕ, ವರದಿಗಾರ, ಪ್ರಕಾಶಕ, ಮುದ್ರಕ ಎಲ್ಲವೂ ಆಗಿದ್ದರಿಂದ ಅದಕ್ಕೆ ‘ಹಿಕೀಸ್ ಗಜೆಟ್’ ಎಂಬ ಹೆಸರೂ ಇತ್ತು.

ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕೇಂದ್ರಸ್ಥಾನ ಬಂಗಾಳದ ಕಲ್ಕತ್ತಾವೇ ಆಗಿದ್ದುದರಿಂದ ನಮ್ಮ ಪತ್ರಿಕೋದ್ಯಮದ ಜನ್ಮಸ್ಥಳವೂ ಅದೇ ಆಯಿತು. ‘ಬೆಂಗಾಲ್ ಗಜೆಟ್’ ಇಂಗ್ಲಿಷ್ ಭಾಷೆಯ ವಾರಪತ್ರಿಕೆ ಆಗಿತ್ತು. 12 ಇಂಚು ಉದ್ದ, 8 ಇಂಚು ಅಗಲದ ಈ ಪುಟ್ಟ ಪತ್ರಿಕೆಯಲ್ಲಿ ನಾಲ್ಕು ಪುಟಗಳಿದ್ದವು. ಪುಟಗಳನ್ನು ತಲಾ ಮೂರು ಕಾಲಂಗಳಾಗಿ ವಿಭಾಗಿಸಲಾಗಿತ್ತು. ಕಂಪೆನಿ ಅಧಿಕಾರಿಗಳು, ಇಂಗ್ಲಿಷ್ ಬಲ್ಲ ಕೆಲವು ಭಾರತೀಯರು ಇದರ ಓದುಗರಾಗಿದ್ದರು. ಸರಾಸರಿ 400 ಪ್ರತಿಗಳಷ್ಟು ‘ಗಜೆಟ್’ ಪ್ರಕಟವಾಗುತ್ತಿತ್ತು. ಅದರ ಮುದ್ರಣವೇನೂ ಅಷ್ಟೊಂದು ಸೊಗಸಾಗಿರಲಿಲ್ಲ. ಸುದ್ದಿಗಳಿಗಿಂತ ಜಾಹೀರಾತುಗಳೇ ಹೆಚ್ಚಾಗಿದ್ದವು.

ಯಾರೀತ ಹಿಕಿ?

‘ಈಸ್ಟ್ ಇಂಡಿಯಾ ಕಂಪೆನಿಯ ಮಾಜಿ ಮುದ್ರಕ’ ಎಂದು ಜೇಮ್ಸ್ ಆಗಸ್ಟಸ್ ಹಿಕಿ ತನ್ನನ್ನು ತಾನು ಪರಿಚಯಿಸಿಕೊಂಡಿದ್ದ. ಆತ ಮೂಲತಃ ಐರ್ಲೆಂಡಿನವನು. 1740ರ ಆಸುಪಾಸಿನಲ್ಲಿ ಜನಿಸಿದ. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಹಿಕಿ 1772ರಲ್ಲಿ ಭಾರತಕ್ಕೆ ಬಂದು ಈಸ್ಟ್ ಇಂಡಿಯಾ ಕಂಪೆನಿ ಸೇರಿಕೊಂಡ. ‘ಶಸ್ತ್ರಚಿಕಿತ್ಸಕ’ನಾಗಿ, ಮುದ್ರಣ ಸಹಾಯಕನಾಗಿ ಆತ ಕಾರ್ಯನಿರ್ವಹಿಸುತ್ತಿದ್ದ. ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿ ಸಾಲ ತೀರಿಸಲಾಗದೆ ಜೈಲುಪಾಲಾದ. ಜೈಲಿನಲ್ಲಿದ್ದಾಗಲೇ ಒಂದು ಮುದ್ರಣ ಯಂತ್ರ ಪಡೆದುಕೊಂಡು ಮುದ್ರಣದ ಕೆಲಸ ಆರಂಭಿಸಿದ. 1777ರಲ್ಲಿ ಜೈಲಿನಿಂದ ಹೊರಬಂದು ತನ್ನದೇ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದ. ಮೂರು ವರ್ಷಗಳ ಬಳಿಕ ಅವನಿಂದಲೇ ಭಾರತದ ಮೊದಲ ಪತ್ರಿಕೆ ಆರಂಭವಾಯಿತು.

ಹಿಕಿ ಒಬ್ಬ ವಿಲಕ್ಷಣ ಪ್ರವೃತ್ತಿಯ ವ್ಯಕ್ತಿ. ಆತನ ‘ಬೆಂಗಾಲ್ ಗಜೆಟ್’ ಆರಂಭದಲ್ಲಿ ಗಂಭೀರವಾಗಿಯೇ ಪ್ರಕಟವಾಗುತ್ತಿತ್ತು. ತನ್ನದು “ಎಲ್ಲ ಪಕ್ಷಗಳಿಗೂ ಮುಕ್ತವಾದ ಆದರೆ ಯಾರಿಂದಲೂ ಪ್ರಭಾವಕ್ಕೊಳಗಾಗದ ಪತ್ರಿಕೆ” ಎಂದು ಪತ್ರಿಕೆಯ ಮೇಲ್ಭಾಗದಲ್ಲೇ ಹಿಕಿ ಪ್ರಕಟಿಸುತ್ತಿದ್ದ. ಆದರೆ ಎಂಟ್ಹತ್ತು ತಿಂಗಳಲ್ಲಿ ‘ಇಂಡಿಯಾ ಗಜೆಟ್’ ಎಂಬ ಇನ್ನೊಂದು ಪತ್ರಿಕೆ ಆರಂಭವಾದಾಗ, ಹಿಕಿಗೆ ಆತಂಕವಾಯಿತು. ತನ್ನ ಓದುಗರು ಎಲ್ಲಿ ಕಡಿಮೆಯಾಗುತ್ತಾರೋ ಎಂಬ ಆತಂಕದಲ್ಲಿ ತನ್ನ ಪತ್ರಿಕೆಯ ಧ್ವನಿಯನ್ನೇ ಬದಲಾಯಿಸಿಕೊಂಡ. ಸುದ್ದಿಗಳಲ್ಲಿ, ಲೇಖನಗಳಲ್ಲಿ ಅಲ್ಲಿಯವರೆಗೆ ಇದ್ದ ಸಮತೋಲನ ಕಳೆದುಹೋಗಿ ವೈಯಕ್ತಿಕ ಪ್ರಹಾರಗಳನ್ನು ಆರಂಭಿಸಿದ.

ಪ್ರಖರ ಟೀಕಾಕಾರ:

ಸ್ವತಃ ಯುರೋಪಿಯನ್ನನಾಗಿದ್ದೂ ಹಿಕಿ ಈಸ್ಟ್ ಇಂಡಿಯಾ ಕಂಪೆನಿಯ ಪ್ರಖರ ಟೀಕಾಕಾರನಾಗಿದ್ದ. ಅಲ್ಲಿನ ಅಧಿಕಾರಿಗಳ ದಬ್ಬಾಳಿಕೆ ಹಾಗೂ ಭ್ರಷ್ಟಾಚಾರಗಳನ್ನು ತೀಕ್ಷ್ಣವಾಗಿ ಖಂಡಿಸಿ ಲೇಖನಗಳನ್ನು ಪ್ರಕಟಿಸುತ್ತಿದ್ದ. ‘ಬೆಂಗಾಲ್ ಗಜೆಟ್’ ಬ್ರಿಟಿಷ್ ಅಧಿಕಾರಿಗಳ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿತ್ತು. ಆಗ ಭಾರತದ ಗವರ್ನರ್ ಜನರಲ್ ಆಗಿದ್ದ ವಾರನ್ ಹೇಸ್ಟಿಂಗ್ಸ್, ಸುಪ್ರೀಂಕೋರ್ಟಿನ ಮುಖ್ಯನಾಯಾಧೀಶರಾಗಿದ್ದ ಸರ್ ಎಲಿಜಾ ಇಂಪೆಯವರನ್ನೂ ಬಿಡದೆ ಕಾಡಿದ ಹಿಕಿ.

ಆದರೆ ಟೀಕೆಯ ಭರದಲ್ಲಿ ಹಿಕಿ ವೈಯಕ್ತಿಕ ದಾಳಿಯಲ್ಲಿ ತೊಡಗಿದ. ತನಗಾಗದಿದ್ದವರ ಖಾಸಗಿ ಬದುಕಿನ ಕುರಿತು ವ್ಯಂಗ್ಯವಾಡಿದ. ಹೇಸ್ಟಿಂಗ್ಸ್‍ನ ಪತ್ನಿಯ ಕುರಿತೂ ದೋಷಾರೋಪಣೆ ಮಾಡಿದ. ಇದರಿಂದಾಗಿ ಹಿಕಿ ಪದೇಪದೇ ಮಾನನಷ್ಟ ಮೊಕದ್ದಮೆಗಳನ್ನು ಎದುರಿಸಬೇಕಾಯಿತು. ಕೋರ್ಟು ಕಚೇರಿ ಅಲೆದಾಡಬೇಕಾಯಿತು. ಸಾವಿರಾರು ರುಪಾಯಿ ದಂಡ ಹಾಕಿಸಿಕೊಳ್ಳಬೇಕಾಯಿತು. ಬೆಂಗಾಲ್ ಗಜೆಟ್‍ನ ಅಂಚೆ ಸೌಲಭ್ಯ ರದ್ದಾಯಿತು. ಕೊನೆಗೊಂದು ದಿನ ಹಿಕಿಯ ಮುದ್ರಣಾಲಯವನ್ನೇ ಸರ್ಕಾರ ವಶಪಡಿಸಿಕೊಂಡು ಬೀಗ ಜಡಿಯಿತು. 1782ರ ಮಾರ್ಚ್ 23ರಂದು ಗಜೆಟ್‍ನ ಕೊನೆಯ ಸಂಚಿಕೆ ಪ್ರಕಟವಾಯಿತು.

ಮರೆತುಹೋದ ಮಹಾನುಭಾವ:

ಹಿಕಿಯ ಬಗ್ಗೆ ಇತಿಹಾಸದಲ್ಲಿ ಅಂತಹ ಒಳ್ಳೆಯ ಅಭಿಪ್ರಾಯವೇನೂ ಇಲ್ಲ. ಆದರೆ ಆತನಿಂದಲೇ ಭಾರತೀಯ ಪತ್ರಿಕಾಲೋಕ ಹುಟ್ಟಿಕೊಂಡಿತು ಎಂಬುದರಲ್ಲಿ ಎರಡು ಮಾತಿಲ್ಲ. ಆತ ಒಳ್ಳೆಯ ಉದ್ದೇಶದಿಂದಲೇ ಪತ್ರಿಕೆ ಆರಂಭಿಸಿದ, ಬ್ರಿಟಿಷರ ಭ್ರಷ್ಟಾಚಾರಗಳನ್ನು ಕಟುವಾಗಿ ಟೀಕಿಸಿದ. ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಕೊನೆಯವರೆಗೂ ಹೋರಾಡಿದ. ಆದರೆ ಒಂದು ಹಂತದಲ್ಲಿ ಆತ ಬೆಳೆಸಿಕೊಂಡ ಕೀಳು ಅಭಿರುಚಿ ಹಾಗೂ ಕಂಪೆನಿಯ ಪೂರ್ವಗ್ರಹದಿಂದ ಆತನಿಗೆ ಹೆಚ್ಚುಸಮಯ ಪತ್ರಿಕೆಯನ್ನು ನಡೆಸಲಾಗಲಿಲ್ಲ. ಆತನನ್ನು ‘ಮರೆತುಹೋದ ಮಹಾನುಭಾವ’ ‘ಭಾರತೀಯ ಪತ್ರಿಕೋದ್ಯಮದ ಪಿತಾಮಹ’ ಅಂತಲೂ ಇತಿಹಾಸಕಾರರು ದಾಖಲಿಸಿದ್ದುಂಟು.

ಒಟ್ಟಿನಲ್ಲಿ, ಬೆಂಗಾಲ್ ಗಜೆಟ್‍ನ ಹುಟ್ಟಿನ ನೆನಪಲ್ಲಿ ಜನವರಿ 29 ‘ಭಾರತೀಯ ಪತ್ರಿಕಾ ದಿನ’ ಎಂದು ಪ್ರಸಿದ್ಧಿಪಡೆದಿದೆ. ನಮ್ಮ ಪತ್ರಿಕಾಲೋಕದ ಸಿಂಹಾವಲೋಕನಕ್ಕೆ ಇದು ಸುದಿನ.

- ಸಿಬಂತಿ ಪದ್ಮನಾಭ ಕೆ. ವಿ.