'ಬನಸಿರಿ' - ಶ್ರೀಮತಿ ಭುವನೇಶ್ವರಿ ಹೆಗಡೆ ಅಭಿನಂದನ ಗ್ರಂಥದಲ್ಲಿ ಪ್ರಕಟವಾಗಿರುವ ಲೇಖನ (2017)
ತರಂಗ, ಸುಧಾ ಪತ್ರಿಕೆಗಳೆಲ್ಲ ವಾರವಾರವೂ ಅಜ್ಜನ ಮನೆಗೆ ಬರುತ್ತಿದ್ದುದರಿಂದ ಅಲ್ಲೇ ಓದಿ ಬೆಳೆದ ನನಗೆ ಹೈಸ್ಕೂಲು
ದಿನಗಳಿಂದಲೇ ಭುವನೇಶ್ವರಿ ಹೆಗಡೆ ಎಂಬ ಹೆಸರು ಚಿರಪರಿಚಿತವಾಗಿತ್ತು. ಓದಿದರೆ ನಗು ಗ್ಯಾರಂಟಿ ಎಂದು ಗೊತ್ತಿದ್ದರಿಂದ ಆ ಹೆಸರು ಕಂಡ ಕೂಡಲೇ ಇಡೀ ಲೇಖನವನ್ನು ಒಂದೇ ಗುಕ್ಕಿಗೆ ಓದಿ ಮುಗಿಸುತ್ತಿದ್ದೆ. ಸಣ್ಣಮಾವ ಅಂತೂ ಅವರ ಲೇಖನಗಳನ್ನು ಓದಿದರೆ ಆಯ್ದ ಭಾಗಗಳನ್ನು ಅಲ್ಲಲ್ಲೇ ಜೋರಾಗಿ ವಾಚಿಸಿ ಮನೆಮಂದಿಗೆಲ್ಲ ನಗುವಿನ ವಿತರಣೆ ಮಾಡುತ್ತಿದ್ದುದು ನನಗಿನ್ನೂ ಚೆನ್ನಾಗಿಯೇ ನೆನಪಿದೆ.
ಪಿಯುಸಿ ಕನ್ನಡ ಪಠ್ಯಪುಸ್ತಕ ಕೈಗೆ ಬಂದ ದಿನವಂತೂ ಹೊಸದೊಂದು ಅಚ್ಚರಿ ಕಾದಿತ್ತು. ನಮಗೆಲ್ಲ ಮೋಸ್ಟ್ ವಾಂಟೆಡ್ ಆಗಿದ್ದ ಭುವನೇಶ್ವರಿ ಹೆಗಡೆ ಸೀದಾ ಪಠ್ಯಪುಸ್ತಕಕ್ಕೇ ಬಂದುಬಿಟ್ಟಿದ್ದರು. ಅವರ ‘ಮೂಢನಂಬಿಕೆಗಳ ಬೀಡಿನಲ್ಲಿ’ ಲೇಖನ ಪಠ್ಯವಾಗಿತ್ತು. ‘ಇವರು ನನಗೆ ಬಹಳ ಸಮಯದಿಂದ ಗೊತ್ತು’ ಎಂದು ಸಹಪಾಠಿಗಳ ಬಳಿ ಹೇಳಿಕೊಂಡು ಸಂಭ್ರಮಪಟ್ಟದ್ದಿದೆ. ಅದೊಂದು ಪಾಠವನ್ನಂತೂ ಶ್ರದ್ಧಾಭಕ್ತಿಗಳಿಂದ ಮತ್ತೆಮತ್ತೆ ಓದಿ ಖುಷಿಪಟ್ಟದ್ದಿದೆ. ಬೆಣ್ಣೆ ಮಜ್ಜಿಗೆಯಲ್ಲಿ ಪೂರ್ತಿ ಮುಳುಗಿದ ದಿನ ಜಗತ್ಪ್ರಳಯ ಎಂಬ ಕಥೆ ಕೇಳಿದ್ದ ಲೇಖಕಿ ತನ್ನ ತಮ್ಮನೊಂದಿಗೆ ಸೇರಿಕೊಂಡು ಮನೆಯಲ್ಲಿದ್ದ ಬೆಣ್ಣೆಮುದ್ದೆಯನ್ನು ಮುಳುಗಿಸಲು ಹವಣಿಸಿದ ಪ್ರಸಂಗವನ್ನಂತೂ ಎಂದೂ ಮರೆಯಲಿಕ್ಕಾಗದು.
ಇಂತಿಪ್ಪ ಭುವನೇಶ್ವರಿ ಹೆಗಡೆಯವರೇ ಸಾಕ್ಷಾತ್ ಕಣ್ಣೆದುರು ಪ್ರತ್ಯಕ್ಷವಾಗಿಬಿಟ್ಟರೆ ಏನು ಗತಿ? ಆ ದಿನವೂ ಬಂತು. ಬಿ.ಎ. ಮೊದಲ ವರ್ಷದಲ್ಲಿದ್ದಾಗ ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಎನ್.ಎಸ್.ಎಸ್.ನ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ನಾನು ಭಾಗವಹಿಸಿದ್ದೆ. ಮಧ್ಯಾಹ್ನದ ಉಪನ್ಯಾಸ ಕಾರ್ಯಕ್ರಮಕ್ಕೆ ಭುವನೇಶ್ವರಿ ಹೆಗಡೆ ಬರುತ್ತಿದ್ದಾರೆ ಎಂದು ಸಂಘಟಕರು ಹೇಳಿದಾಗ ತುಂಬ ಸಂತೋಷವಾಗಿತ್ತು. ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ. ಮೇಡಂ ಅಂದು ತುಂಬ ರಸವತ್ತಾಗಿ ಮಾತಾಡಿ ಸಾಕಷ್ಟು ಚಪ್ಪಾಳೆ ಗಿಟ್ಟಿಸಿಕೊಂಡರು. ಓಹೋ ಇವರು ಬರೆಯುವಷ್ಟೇ ಚೆನ್ನಾಗಿ ಮಾತಾಡಬಲ್ಲರು ಕೂಡಾ ಎಂದು ಗೊತ್ತಾಗಿ ಅವರ ಬಗೆಗಿನ ಅಭಿಮಾನ ಹೆಚ್ಚಾಯಿತು.
ಕ್ಯಾಂಪಿನ ಭಾಗವಾಗಿ ನಮ್ಮದೊಂದು ದೈನಿಕ ಭಿತ್ತಿಪತ್ರಿಕೆಯಿತ್ತು. ಅದನ್ನು ಸಂಪಾದಿಸುವ ಹೊಣೆ ನನ್ನದೇ ಆಗಿದ್ದರಿಂದ ಪ್ರತಿದಿನ ಬರುವ ಅತಿಥಿಗಳ ಸಂದರ್ಶನ ಮಾಡುತ್ತಿದ್ದೆ. ಹೀಗಾಗಿ ಭುವನೇಶ್ವರಿ ಹೆಗಡೆಯವರನ್ನು ಸಂದರ್ಶಿಸುವ ಅವಕಾಶವೂ ಸಹಜವಾಗಿಯೇ ಒದಗಿಬಂತು. ಅವರಿಗೆ ಅಂದು ಏನೆಲ್ಲ ಪ್ರಶ್ನೆ ಕೇಳಿದ್ದೆನೋ ನೆನಪಿಲ್ಲ, ಆದರೆ ಸಂದರ್ಶನದ ಕೊನೆಗೆ ಅವರು ನನ್ನ ಬೆನ್ನು ಚಪ್ಪರಿಸಿ, ‘ಈ ಡೇಟು ಬರೆದಿಟ್ಟುಕೋ. ಒಂದು ದಿನ ನೀನು ಖಂಡಿತ ದೊಡ್ಡದೊಂದು ಪೊಸಿಶನ್‍ಗೆ ಹೋಗುತ್ತೀಯಾ’ ಎಂದು ಹೇಳಿದ್ದು ಮಾತ್ರ ನೂರಕ್ಕೆ ನೂರು ನೆನಪಿದೆ. ಕಿರಿಯರನ್ನು ಈ ರೀತಿ ಪ್ರೋತ್ಸಾಹಿಸುವ ಗುಣ ಎಲ್ಲರಿಗೂ ಬರುವುದಿಲ್ಲ. ಮೇಡಂ, ನಿಮ್ಮ ನಿಷ್ಕಲ್ಮಶ ಹೃದಯದ ಮಾತು ನಿಜವಾಗಲಿ. ಆದರೆ ಆ ದಿನ ಮಾತ್ರ ನಾನು ನಿಮ್ಮನ್ನು ಖ್ಯಾತ ಜ್ಯೋತಿಷಿ ಎಂದು ಕರೆಯುವುದು ಶತಃಸಿದ್ಧ.
ಆರೇಳು ವರ್ಷಗಳ ನಂತರ ನನ್ನ ಮತ್ತು ಸಂಗಾತಿ ಆರತಿಯ ಕವನ ಸಂಕಲನಗಳನ್ನು ನಮ್ಮ ಮದುವೆಯ ದಿನವೇ ಬಿಡುಗಡೆ ಮಾಡುವ ಅವಕಾಶ ಬಂದಾಗ ನನಗೆ ಮತ್ತೆ ನೆನಪಾದದ್ದು ಶ್ರೀಮತಿ ಹೆಗಡೆಯವರೇ. ‘ಮದುವೆಗೆ ಬಂದರೆ ಸಾಲದು, ಕವನ ಸಂಕಲನಗಳನ್ನೂ ಬಿಡುಗಡೆ ಮಾಡತಕ್ಕದ್ದು’ ಎಂಬ ನಮ್ಮ ಅಕ್ಕರೆಯ ಆದೇಶವನ್ನು ಅಷ್ಟೇ ಪ್ರೀತಿಯಿಂದ ಮನ್ನಿಸಿದವರು ಅವರು. ಮನಸ್ಸಿಗೆ ಹತ್ತಿರವಾದವಳನ್ನು ಮದುವೆಯಾದದ್ದು, ಇಬ್ಬರ ಕವನ ಸಂಕಲನಗಳೂ ಮದುವೆಯ ದಿನವೇ ಅನಾವರಣಗೊಂಡದ್ದು, ಅವನ್ನು ಹೆಗಡೆಯವರೇ ಬಿಡುಗಡೆ ಮಾಡಿ ‘ಖುಷಿಯಿಂದ ಇರ್ರಪ್ಪ’ ಎಂದು ಆಶೀರ್ವದಿಸಿ ಹೋದದ್ದು ಎಲ್ಲವೂ ಯೋಗಾಯೋಗವೆಂದೇ ನನಗನ್ನಿಸುತ್ತದೆ.
***
ಪತ್ರಿಕೆ ಪುಸ್ತಕಗಳನ್ನೆಲ್ಲ ಓದಿಕೊಂಡು ಬೆಳೆದ ನನ್ನಂತಹ ನೂರಾರು ಯುವಕರಿಗೆ ಭುವನೇಶ್ವರಿ ಹೆಗಡೆಯವರು ನಿಸ್ಸಂಶಯವಾಗಿ ಒಂದು ದೊಡ್ಡ ಪ್ರೇರಣೆ. ಬರವಣಿಗೆಯಲ್ಲಿ ಇರಬೇಕಾದ ಲಯ, ಸ್ವಾರಸ್ಯ, ಮೊನಚು, ವಿನೋದ, ಮಾಧುರ್ಯ, ಸರಳತೆ, ಲಾಲಿತ್ಯ ಎಲ್ಲವಕ್ಕೂ ತಮ್ಮ ಪ್ರಬಂಧಗಳ ಮೂಲಕ ತುಂಬ ಸುಂದರ ಮಾದರಿಗಳನ್ನು ಒದಗಿಸಿದವರು ಅವರು. ಅವರ ಬರಹಗಳು ಓದುಗರು ಗಹಗಹಿಸಿ ನಗುವಂತೆ ಮಾಡುವ ಕ್ಷಣಿಕ ಜೋಕುಗಳಲ್ಲ, ಉದ್ದಕ್ಕೂ ಮುಗುಳ್ನಗು ಮಿನುಗಿಸುತ್ತಾ ಅಲ್ಲಲ್ಲಿ ನಗುವಿನ ಒರತೆ ಚಿಮ್ಮಿಸುತ್ತಾ ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಮಾಡುವ ಸುಲಲಿತ ಪ್ರಬಂಧಗಳು.
ಅವರ ಎಲ್ಲ ಪ್ರಬಂಧಗಳು ಸ್ವಾನುಭವದ ನಿರೂಪಣೆಗಳ ಶೈಲಿಯಲ್ಲಿದ್ದರೂ ಅವು ಒಣ, ಗಂಭೀರ ಸ್ವಗತಗಳಲ್ಲ; ಅವು ಓದುಗರೊಂದಿಗೆ ನಡೆಸುವ ಆಪ್ತ ಸಂವಾದ. ದಿನನಿತ್ಯದ ಬದುಕಿನ ಸಣ್ಣಪುಟ್ಟ ಸಂಗತಿಗಳನ್ನೂ ಓದುಗರ ಕಣ್ಣಿಗೆ ಕಟ್ಟುವಂತೆ ನವಿರಾಗಿ ವಿವರಿಸುವ ಚಿತ್ರಕ ಶಕ್ತಿ ಈ ಪ್ರಬಂಧಗಳಿಗಿದೆ. ಸ್ವಚ್ಛಂದ ಬಂಧ, ಸಂಕ್ಷಿಪ್ತತೆ, ಆತ್ಮೀಯತೆ, ತಿಳಿಹಾಸ್ಯ, ಜೀವನಪ್ರೀತಿ, ವಿನೋದ, ವಿಡಂಬನೆ – ಇವೆಲ್ಲ ಪ್ರಬಂಧಗಳ ಮುಖ್ಯ ಲಕ್ಷಣಗಳೆಂದು ಹಿರಿಯರು ಗುರುತಿಸಿದ್ದಿದೆ. ಈ ಎಲ್ಲವನ್ನೂ ತಮ್ಮ ಒಂದೊಂದು ಬರಹಗಳಲ್ಲೂ ಅಚ್ಚುಕಟ್ಟಾಗಿ ಉಣಬಡಿಸುವ ಹೆಗಡೆಯವರು ನಮ್ಮನ್ನು ವಿದ್ಯಾರ್ಥಿ ಜೀವನದಲ್ಲೇ ಆಕರ್ಷಿಸಿದ್ದರಲ್ಲಿ ಅತಿಶಯವಿಲ್ಲ.
“ಮನುಷ್ಯ ಸಂತೋಷವಾಗಿರಬೇಕಾದರೆ ತನ್ನನ್ನು ತಾನು ತಮಾಷೆ ಮಾಡಿಕೊಳ್ಳಲು ಕಲಿಯಬೇಕು” ಎಂದು ಹೆಗಡೆಯವರು ಬೇರೆಬೇರೆ ಸಂದರ್ಭಗಳಲ್ಲಿ ಹೇಳಿದ್ದನ್ನು ನಾನು ಕೇಳಿದ್ದೇನೆ. ಸಹಜವಾಗಿಯೇ ಅವರ ಪ್ರಬಂಧಗಳಲ್ಲೂ ಅಂತಹದೊಂದು ವಿಶಿಷ್ಟ ಗುಣ ಎದ್ದು ಕಾಣುತ್ತದೆ. ತಮ್ಮ ಬಾಲ್ಯ, ಶಾಲಾ ಜೀವನ, ಕಾಲೇಜು, ಹಾಸ್ಟೆಲು, ವೃತ್ತಿಜೀವನಗಳಿಂದಲೇ ವಸ್ತುಗಳನ್ನು ಆಯ್ದುಕೊಳ್ಳುವ ಅವರು ತಮ್ಮನ್ನು ವಿಡಂಬಿಸಿಕೊಳ್ಳುತ್ತಲೇ ತಾವೂ ಖುಷಿಪಡುತ್ತಾ ಓದುಗರನ್ನೂ ಖುಷಿಪಡಿಸುತ್ತಾ ಹೋಗುವ ರೀತಿ ತುಂಬ ವಿಶಿಷ್ಟವಾದದ್ದು. ಬದುಕಿನ ಸಣ್ಣಪುಟ್ಟ ಘಟನೆಗಳನ್ನೂ ನೆನಪಿಸಿಕೊಂಡು ಆನಂದಿಸುವ ಅವರ ಜೀವನಪ್ರೀತಿಯೇ ಬಹುಶಃ ಅವರ ವಯಸ್ಸನ್ನು ಮರೆಸಿದೆ. ಅವರ ನಿಷ್ಕಪಟ ನಗು, ಆತ್ಮೀಯತೆ, ಸರಳತೆ, ಚುರುಕುತನಗಳೆಲ್ಲ ಅವರ ಬರವಣಿಗೆಯಲ್ಲೂ ಗೋಚರಿಸುತ್ತದೆ. ಬರವಣಿಗೆ-ವ್ಯಕ್ತಿತ್ವ ಎರಡೂ ಒಂದೇ ಆಗಿರುವುದರ ಚಂದವೇ ಬೇರೆ.
“ಲಘು ಪ್ರಬಂಧಕ್ಕೆ ವಿಷಯ ಇಂತಹದೇ ಆಗಬೇಕೆಂಬ ನಿಯಮವಿಲ್ಲ. ಸಣ್ಣ ವಿಷಯ ದೊಡ್ಡ ವಿಷಯ ಯಾವುದು ಬೇಕಾದರೂ ಆಗಬಹುದು. ಲಘು ಪ್ರಬಂಧವನ್ನು ಓದಿದ ಕೂಡಲೇ ಒಂದು ತೃಪ್ತಿಯ ಮನೋಭಾವ ಉಂಟಾಗಬೇಕು. ಹೇಳುವುದನ್ನೆಲ್ಲ ಹೇಳಿಯಾಯಿತು ಎಂಬಂತೆ ಇರಬಾರದು.... ಭಾವನೆಗಳು ಅನುಭವಗಳು ಹಾಸ್ಯನಗೆ ಇವು ಉದ್ದಕ್ಕೂ ಮಿಂಚುತ್ತಿರಬೇಕು. ಗುರಿಮುಟ್ಟುವುದೊಂದೇ ಮುಖ್ಯವಲ್ಲ, ಮಾರ್ಗ ಪ್ರಯಾಣವೂ ಆಕರ್ಷಕವಾಗಿರಬೇಕು” ಎನ್ನುತ್ತಾರೆ ಗೊರೂರು ರಾಮಸ್ವಾಮಿ ಅಯ್ಯಂಗಾರ್. ಭುವನೇಶ್ವರಿ ಹೆಗಡೆಯವರ ಪ್ರಬಂಧಗಳು ಈ ಚೌಕಟ್ಟಿನೊಳಗೆ ಎಷ್ಟು ಚೆನ್ನಾಗಿ ಕೂರುತ್ತವೆ!
ಹೆಗಡೆಯವರ ಬರಹಗಳು ಹೀಗೆ ಓದಿ ಹಾಗೆ ಮರೆಯುವ ಸಾಮಾನ್ಯ ಜೋಕುಗಳಲ್ಲವೆಂಬುದನ್ನು ಆಗಲೇ ಹೇಳಿದೆ. ಅವರ ಪ್ರತೀ ಪ್ರಬಂಧದಲ್ಲೂ ಒಂದು ಹೊಸತನ, ಕವಿಸಹಜ ಪ್ರತಿಭಾಸಂಪನ್ನತೆ, ಸೃಜನಶೀಲ ಅಭಿವ್ಯಕ್ತಿ ಥಟ್ಟನೆ ಎದ್ದುಕಾಣುತ್ತದೆ. ತಾಯಿಯ ಹೊಟ್ಟೆಯ ಮಾಂಸತೂಲಿಕಾತಲ್ಪ, ನನ್ನ ಬಾಲಾಗ್ರಫಿ, ಆಂಗ್ಲಾಶುಕವಿತ್ವ, ಹಳತಾವಾದಿಗಳು, ತರ್ಕಬದ್ಧ ಪ್ರೇಮ, ರೇಡಿಯಾಂಗನೆ, ಗದ್ಯವಿಮುಖೀ ಧೋರಣೆ, ವಿದ್ಯಾರ್ಥಿಗಳೆಂಬ ಪರೀಕ್ಷಾ ರೋಗಿಗಳು, ಮಾರಣಾಂತಿಕ ಕಾರಣಗಳು, ದೇಹ ಮನಸ್ಸು ಎಂಬೀ ಉಭಯ ಸದನಗಳಲ್ಲಿ... ಅವರ ಪ್ರಬಂಧಗಳಲ್ಲಿ ಧಾರಾಳವಾಗಿ ಸಿಗುವ ಈ ತರಹದ ಒರಿಜಿನಲ್ ಅಭಿವ್ಯಕ್ತಿಗಳಿಗೆ ಓದುಗರು ಭೇಷ್ ಅನ್ನದಿರಲಾರರು.
‘ಭಾಸ ಮೊದಲಾದ ಕವಿಗಳು ಸಾಕಿಕೊಂಡ ಬೆಕ್ಕೂ ಆ ಬೆಳದಿಂಗಳನ್ನು ಹಾಲೆಂದು ತಿಳಿದು ನೆಕ್ಕಬೇಕು’, ‘ಕೊಟ್ಟಿಗೆಯಲ್ಲಿರುವ ನಮ್ಮ ಎಮ್ಮೆ ತನ್ನ ಸಚ್ಚಿದಾನಂದ ಸ್ಥಿತಿಯಲ್ಲಿ ತನ್ನ ಕೋಡನ್ನು ಕಂಬಕ್ಕೆ ತಿಕ್ಕುತ್ತಿತ್ತು’ ಎಂಬಂತಹ ಅವರ ಅಭಿವ್ಯಕ್ತಿಗಳಲ್ಲಿ ಹಾಸ್ಯವಷ್ಟೇ ಅಲ್ಲದೆ, ಅವರಿಗಿರುವ ಸಾಹಿತ್ಯದ ವಿಸ್ತಾರ ಓದು ಕೂಡ ನಿಚ್ಚಳವಾಗಿ ಕಾಣುತ್ತದೆ. ಲಲಿತ ಪ್ರಬಂಧವೆಂದರೆ ನಾಲ್ಕು ಹಾಸ್ಯ ಚಟಾಕಿಗಳನ್ನು ಹಾರಿಸಿ ಜನರನ್ನು ನಗಿಸಿಬಿಡುವ ಸುಲಭಕಲೆಯಲ್ಲ, ಅದಕ್ಕೆ ಸಾಹಿತ್ಯದ ವಿಸ್ತಾರ ಓದಿನ ಹಿನ್ನೆಲೆ ಬೇಕು ಎಂಬುದಕ್ಕೆ ಹೆಗಡೆಯವರ ಬರಹಗಳು ಒಳ್ಳೆಯ ಉದಾಹರಣೆ. ಫೇಸ್‍ಬುಕ್ ವಾಟ್ಸಾಪುಗಳಲ್ಲಿ ನಾಲ್ಕು ಸಾಲು ಬರೆದು ದಿಢೀರ್ ಸಾಹಿತಿಗಳಾಗಿ ಹೊರಹೊಮ್ಮುವ ಇಂದಿನ ಹೊಸಹುಡುಗರು ಭುವನೇಶ್ವರಿ ಹೆಗಡೆಯವನ್ನು ಓದಿ ತಿಳಿದುಕೊಳ್ಳುವುದು ಬಹಳಷ್ಟಿದೆ.
ಭುವನೇಶ್ವರಿ ಹೆಗಡೆಯವರು ಇನ್ನೂ ಹತ್ತಾರು ವರ್ಷ ಹೀಗೆಯೇ ಬರೆಯುತ್ತಿರಲಿ. ನಮ್ಮಂತಹ ಕಿರಿಯರಿಗೆ ಪ್ರೋತ್ಸಾಹವನ್ನೂ ಪ್ರೇರಣೆಯನ್ನೂ ಪ್ರೀತಿಯನ್ನೂ ನೀಡುತ್ತಿರಲಿ.
ಶ್ರೀಮತಿ ಭುವನೇಶ್ವರಿ ಹೆಗಡೆ ಅಭಿನಂದನ ಗ್ರಂಥ |