12-18 ಮಾರ್ಚ್ 2022 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ
ಬದುಕೊಂದು ಅಚ್ಚರಿಗಳ ಮೂಟೆ. ದಿನಾ ಓಡಾಡುವ ಹಾದಿಗಳಲ್ಲೇ ಅಂದುಕೊಂಡಂತೆ ಹೋಗಿ ವಾಪಸ್ ಬರುತ್ತೇವೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಇನ್ನು ಕ್ಷಣಕ್ಷಣ ಬದಲಾಗುವ ಬದುಕಿನಲ್ಲಿ ನಾವಂದುಕೊಂಡಂತೆ ಎಲ್ಲವೂ ನಡೆಯುತ್ತದೆ ಎಂದು ಹೇಳುವುದು ಹೇಗೆ?
ಒಳ್ಳೆಯ ಬಿಸಿಲೆಂದು ಬಕೆಟುಗಟ್ಟಲೆ ಬಟ್ಟೆ ಒಗೆದು ಹರವಿ ಎಲ್ಲೋ ಹೊರಗೆ ಹೋಗಿರುತ್ತೇವೆ; ಎಂದೂ ಇಲ್ಲದ ಮಳೆ ಅಂದೇ ಬರುತ್ತದೆ. ಅಪರೂಪಕ್ಕೊಮ್ಮೆ ಪೂರ್ತಿ ದಿನ ಬಿಡುವು ದೊರೆತಿದೆ, ಒಳ್ಳೆಯ ಅಡುಗೆ ಮಾಡಿಕೊಂಡು ಉಣ್ಣಬೇಕು ಎಂದು ಕನಸು ಕಾಣುತ್ತೇವೆ; ಇಡೀ ದಿನ ಕರೆಂಟೇ ಇರುವುದಿಲ್ಲ. ಕುಟುಂಬ ಸಮೇತ ಪ್ರವಾಸ ಹೋಗಬೇಕೆಂದು ದಿನಗಟ್ಟಲೆ ಸಿದ್ಧತೆ ಮಾಡಿಕೊಂಡು ಕುಳಿತಿರುತ್ತೇವೆ; ಹೊರಡುವ ಮುನ್ನಾದಿನ ಅದ್ಯಾವುದೋ ಅನಾರೋಗ್ಯ ಅಮರಿಕೊಳ್ಳುತ್ತವೆ. ಸಂಜೆಯತನಕವೂ ಹತ್ತಿರದ ಬಂಧುವಿನೊಂದಿಗೋ ಸ್ನೇಹಿತನೊಂದಿಗೋ ಸಂತೋಷವಾಗಿ ಮಾತಾಡಿಕೊಂಡು ಕಾಲ ಕಳೆದಿರುತ್ತೇವೆ; ಬೆಳಗ್ಗೆ ಏಳುವಾಗ ಆತ ಬದುಕಿಲ್ಲ ಎಂಬ ಸುದ್ದಿ ಬರುತ್ತದೆ.ದಿನನಿತ್ಯದ ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಘಟನೆಗಳಿಂದ ತೊಡಗಿ ಮನಸ್ಸು ವಿಹ್ವಲಗೊಳ್ಳುವ ಆಘಾತಗಳವರೆಗೆ ಇಂಥವು ನಡೆಯುತ್ತಲೇ ಇರುತ್ತವೆ. ಆಗೆಲ್ಲ ‘ಬದುಕೆಂದರೆ ಇಷ್ಟೇ ಏನು?’ ಎಂಬ ಪ್ರಶ್ನೆ ಮತ್ತೆಮತ್ತೆ ಕಾಡುತ್ತದೆ. ನಾವಂದುಕೊಂಡಂತೆ ಯಾವುದೂ ನಡೆಯುವುದಿಲ್ಲ ಎಂದ ಮೇಲೆ ಹಾಗಾಗಬೇಕು ಹೀಗಾಗಬೇಕು ಎಂದು ಹಂಬಲ ಕಟ್ಟಿಕೊಳ್ಳುವ, ಏನೇನೋ ಕನಸು ಕಾಣುವ ಅಗತ್ಯವಾದರೂ ಏನು ಎಂದೆನಿಸುತ್ತದೆ. ಅಂತಹ ಸಂದರ್ಭಗಳಲ್ಲೆಲ್ಲ ಗಾಢ ನೈರಾಶ್ಯ ಆವರಿಸಿಕೊಳ್ಳುತ್ತದೆ. ಮನಸ್ಸು ಕೈಕಾಲುಗಳನ್ನು ಒಳಸರಿಸಿಕೊಂಡು ಮುದುಡಿ ಕೂರುತ್ತದೆ.
ಎಲ್ಲರೂ ಇಂತಹದೊಂದು ಮನಸ್ಥಿತಿಗೆ ಬಂದರೆ ಜಗತ್ತು ವರ್ಣಮಯವಾಗುವುದು ಹೇಗೆ? ಜೀವನದಲ್ಲಿ ಉಲ್ಲಾಸ ನಲಿದಾಡುವುದು ಹೇಗೆ? ಬದುಕನ್ನು ಮತ್ತೆ ಉತ್ಸಾಹದ ಹಳಿಗಳ ಮೇಲೆ ಎಳೆದುತರುವುದು ಹೇಗೆ?
ಹೌದು, ಬಹುತೇಕ ನಿರಾಶೆಗಳೆಲ್ಲ ಕ್ಷಣಿಕ. ಕೆಲವು ಒಂದೆರಡು ಗಂಟೆಗಳಲ್ಲಿ, ಮತ್ತೆ ಕೆಲವು ಒಂದೆರಡು ದಿನಗಳಲ್ಲಿ ಹೊರಟುಹೋಗಬಹುದು. ಇನ್ನು ಕೆಲವು ವಾರಗಟ್ಟಲೆ, ತಿಂಗಳುಗಟ್ಟಲೆ ಉಳಿಯಬಹುದು. ಕೆಲವೇ ಕೆಲವು ಬದುಕಿಡೀ ಕಾಡಬಹುದು. ಅಂಥವುಗಳ ಪ್ರಮಾಣ ತೀರಾ ಕಮ್ಮಿ. ಅವುಗಳಿಗೆ ಕಾಲವೇ ಪರಿಹಾರ ಎಂದುಕೊಳ್ಳಬೇಕಷ್ಟೆ. ಆದರೆ ಎಲ್ಲದಕ್ಕೂ ಹಾಗೆಂದು ಭಾವಿಸಿದರೆ ನಮ್ಮ ಪ್ರಯತ್ನ ಏನೂ ಇಲ್ಲ ಎಂಬಂತಾಗುತ್ತದೆ.
ಅನಿರೀಕ್ಷಿತ ಘಟನೆಗಳು ತೀರಾ ಸಾಮಾನ್ಯವಾದ್ದೇ ಇರಲಿ, ಗಂಭೀರವಾದ್ದೇ ಇರಲಿ, ವಾಸ್ತವವನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಂಡರೆ ಆಗಬಹುದಾದ ನಿರಾಸೆಯನ್ನು ಒಂದಿಷ್ಟಾದರೂ ಕಡಿಮೆ ಮಾಡಿಕೊಳ್ಳಬಹುದು. ಇಂಥದ್ದೊಂದು ನಡೆದುಹೋಗಿದೆ, ಅದನ್ನು ಮತ್ತೆ ಹಿಮ್ಮುಖವಾಗಿಸಲಾಗದು ಎಂಬುದನ್ನು ನಮಗೆ ನಾವೇ ಅರ್ಥಮಾಡಿಸಿಕೊಳ್ಳುವುದು ಮುಖ್ಯ. ಅಪಘಾತ, ಸಾವುಗಳಂತಹ ದೊಡ್ಡ ಪ್ರಮಾಣದ ಆಘಾತಗಳು ಸಂಭವಿಸಿದಾಗ ಇಂತಹ ಮಾತುಗಳನ್ನು ಹೇಳುವುದು ತಕ್ಷಣಕ್ಕೆ ಅರ್ಥಹೀನ ಅನ್ನಿಸಬಹುದು, ಆದರೆ ಅದು ನಿಜ.
ಮನಸ್ಸು ಉತ್ಸಾಹದಿಂದ ಕೂಡಿದ್ದಾಗ ನಡೆಯುವ ಕೆಲವು ಅನಿರೀಕ್ಷಿತಗಳು ದೊಡ್ಡಮಟ್ಟದ್ದಾಗಿದ್ದರೂ ಅವುಗಳನ್ನು ಎದುರಿಸಲು ನಾವು ಹೇಗೋ ಸಿದ್ಧರಾಗುತ್ತೇವೆ. ಮನಸ್ಸು ದುರ್ಬಲವಾಗಿರುವ ಹೊತ್ತು ಸಣ್ಣಪುಟ್ಟ ಏಟು ಸಿಕ್ಕರೂ ನಿರಾಶೆಯ ಸಮುದ್ರದಲ್ಲಿ ಬೀಳುತ್ತೇವೆ. ಸಾಧ್ಯವಾದಷ್ಟು ಮನಸ್ಸು ಉಲ್ಲಾಸದಿಂದ ಕೂಡಿರುವಂತೆ ನೋಡಿಕೊಳ್ಳುವುದೇ ಇದನ್ನು ನಿಭಾಯಿಸುವ ಸುಲಭದ ದಾರಿ. ಒಳ್ಳೆಯ ಪುಸ್ತಕಗಳ ನಿರಂತರ ಓದು, ಉತ್ತಮ ಗೆಳೆಯರ ಒಡನಾಟ, ಧನಾತ್ಮಕ ಚಿಂತನೆಯಿಂದ ಇದು ಸಾಧ್ಯವಾದೀತು.
ಧನಾತ್ಮಕವಾಗಿ ಯೋಚಿಸುವುದರಿಂದ ಪರ್ವತವನ್ನು ಜರುಗಿಸಲಾದೀತೋ ಗೊತ್ತಿಲ್ಲ, ಪರ್ವತದಂತಹ ಸವಾಲುಗಳನ್ನಂತೂ ಅಲುಗಾಡಿಸಬಹುದು. ಅನೇಕ ಸಲ ಬದುಕಿನಲ್ಲಿ ಸಂಭವಿಸುವ ಋಣಾತ್ಮಕವೆನ್ನಿಸುವ ಘಟನೆಗಳು ಪರೋಕ್ಷವಾಗಿ ವರದಾನವೂ ಆಗಬಹುದು. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಸಕಾರಾತ್ಮಕ ಯೋಚನೆ ಯಾವುದೇ ಘಟನೆಯ ಇನ್ನೊಂದು ಮಗ್ಗುಲನ್ನೂ ನಾವು ಅವಲೋಕಿಸುವಂತೆ ಮಾಡಬಹುದು. ಎಲ್ಲೋ ಅಡಗಿದ್ದ ಛಲವೊಂದು ಛಂಗನೆ ಪುಟಿದೇಳುವಂತೆಯೂ ಆಗಬಹುದು.
ಯಾವುದೋ ಒಂದು ಗುರಿಯನ್ನು ಸಾಧಿಸಲೇಬೇಕೆಂದು ಹೊರಟಿರುತ್ತೇವೆ; ಅನಿರೀಕ್ಷಿತವಾಗಿ ಅದು ಕೈತಪ್ಪಿಹೋದಾಗ ಒಂದು ಕ್ಷಣ ಮನಸ್ಸು ಕುಗ್ಗಬಹುದು. ಆದರೆ ಇನ್ನೊಂದು ರೀತಿಯಲ್ಲಿ ಅದರಿಂದಾಗಿ ನಮಗೆ ಅನುಕೂಲವೂ ಆಗಿರಬಹುದು. ಅದನ್ನು ಅರ್ಥ ಮಾಡಿಕೊಂಡರೆ ಅರ್ಧ ನಿರಾಶೆ ಅಲ್ಲೇ ಕರಗಿಹೋಗುತ್ತದೆ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ, ಜೀವನದಲ್ಲಿ ಯಾವುದೇ ಉಪಕ್ರಮಕ್ಕೆ ಹೊರಟಾಗಲೂ ನಮ್ಮಲ್ಲೊಂದು ಪರ್ಯಾಯ ವ್ಯವಸ್ಥೆ ಇರಲೇಬೇಕು. ಪ್ಲಾನ್-ಎ ಯಶಸ್ವಿಯಾಗದಿದ್ದರೆ ತಕ್ಷಣಕ್ಕೆ ಏನು ಮಾಡಬೇಕೆನ್ನುವ ಪ್ಲಾನ್-ಬಿ ಕೂಡ ನಮ್ಮಲ್ಲಿರಬೇಕು. ಸೋಲು ಗೆಲುವು ಎರಡಕ್ಕೂ ಸಿದ್ಧವಾದ ಮನಸ್ಥಿತಿಯೊಂದಿಗೆ ಯೋಜನೆಯನ್ನು ಕೈಗೆತ್ತಿಕೊಂಡಾಗ, ಅಕಸ್ಮಾತ್ ಗೆಲುವು ದೊರೆಯದೆ ಹೋದರೆ ಕುಸಿದುಬೀಳುವಂತಹ ದುರಂತವೇನೂ ಸಂಭವಿಸದು. ಮೆಡಿಕಲ್ ಓದಲೇಬೇಕೆಂದು ಹಗಲು ರಾತ್ರಿ ಪ್ರಯತ್ನಪಡುವ ವಿದ್ಯಾರ್ಥಿಯೂ ಪ್ಲಾನ್-ಬಿ ಒಂದನ್ನು ಇಟ್ಟುಕೊಂಡಿರಲೇಬೇಕು. ಆಗ ಬಯಸಿದ ಯಶಸ್ಸು ಸಿಗದೇ ಹೋದರೂ ತಾನು ಸಾಗಬೇಕಾದ ಹಾದಿಯ ಬಗ್ಗೆ ಸ್ಪಷ್ಟತೆ, ಮನಸ್ಸಿನ ದೃಢತೆ ಇದ್ದೇ ಇರುತ್ತದೆ.
ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಘಟನೆ ದುಃಖ ತರುವುದೇ ಆಗಬೇಕಿಲ್ಲ. ಸಂತೋಷದಾಯಕವೂ ಆಗಿರಬಹುದು. ಆದರೆ ಅದನ್ನು ಸ್ವೀಕರಿಸುವುದಕ್ಕೂ ಒಂದು ಹದಗೊಂಡ ಮನಸ್ಸು ಬೇಕು. ಅತಿಯಾದ ಆಘಾತ, ಅತಿಯಾದ ಸಂತೋಷ ಎರಡರ ಪರಿಣಾಮವೂ ಅಂತಿಮವಾಗಿ ಒಂದೇ ಆಗಿರಬಹುದು. ಜೀವನದ ಸುದೀರ್ಘ ಪಯಣದ ನಂತರ ಯಾರೋ ಗುರುತಿಸಿ ತನಗೊಂದು ಯೋಗ್ಯ ಪ್ರಶಸ್ತಿ ಘೋಷಿಸಿದರು ಎಂಬ ಸಂತೋಷದ ಪರಾಕಾಷ್ಠೆಯಲ್ಲಿ ಕಲಾವಿದರೊಬ್ಬರು ಇತ್ತೀಚೆಗೆ ಇಹಲೋಕ ತ್ಯಜಿಸಿಬಿಟ್ಟರಂತೆ. ದುಃಖವನ್ನು ಸಂಭಾಳಿಸಿಕೊಂಡಂತೆ ಸಂತೋಷದ ಪ್ರವಾಹವನ್ನು ನಿಭಾಯಿಸಿಕೊಳ್ಳುವುದು ಕೂಡ ಮುಖ್ಯ. ಎಷ್ಟಾದರೂ ಪ್ರವಾಹ ಪ್ರವಾಹವೇ ಅಲ್ಲವೇ? ಕೊಚ್ಚಿಕೊಂಡು ಹೋಗುವುದು ಅದರ ಗುಣ.
ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ|
ವೀತರಾಗಭಯಕೋಧಃ ಸ್ಥಿತಧೀರ್ಮುನಿರುಚ್ಯತೇ||
“ದುಃಖದಾಯಕ ಪ್ರಸಂಗದಲ್ಲಿ ಯಾರ ಮನಸ್ಸು ಉದ್ವಿಗ್ನಗೊಳ್ಳುವುದಿಲ್ಲವೋ, ಸುಖಗಳ ಪ್ರಾಪ್ತಿಯಲ್ಲಿ ಯಾರಿಗೆ ಸರ್ವಥಾ ಇಚ್ಛೆಯಿಲ್ಲವೋ, ಹಾಗೆಯೇ ಯಾರಿಗೆ ಪ್ರೀತಿ, ಭಯ, ಕ್ರೋಧ ಇವು ಇಲ್ಲವಾಗಿವೆಯೋ, ಇಂತಹ ಮುನಿಯೇ ಸ್ಥಿರಬುದ್ಧಿಯವನು” ಎನ್ನುತ್ತಾನೆ ಗೀತಾಚಾರ್ಯ. “ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ” ಎಂದು ಅರ್ಜುನನಿಗೆ ಆತ ಹೇಳಿದ್ದೂ ಇದೇ ಅರ್ಥದಲ್ಲಿ. ಸ್ಥಿತಪ್ರಜ್ಞನೆಂದರೆ ಯಾರು ಎಂಬ ಕೌತುಕ ಪಾರ್ಥನದ್ದು.
ಸ್ಥಿತಪ್ರಜ್ಞನ ಅತಿದೊಡ್ಡ ಲಕ್ಷಣ ತಾಳ್ಮೆ. ಎಂತಹ ಆಘಾತ ಎದುರಾದರೂ ಎರಡು ಕ್ಷಣ ತಾಳ್ಮೆ ತೆಗೆದುಕೊಂಡರೆ ಪರಿಹಾರದ ಸಣ್ಣ ಎಳೆಯೊಂದು ಕಂಡೇ ಕಾಣುತ್ತದೆ. ಈ ಎರಡು ಕ್ಷಣಗಳ ತಾಳ್ಮೆ ನೂರಾರು ಕದನಗಳನ್ನು, ಸಾವಿರಾರು ಸಾವುಗಳನ್ನು ತಪ್ಪಿಸಬಲ್ಲುದು. ಯುದ್ಧವೇ ಆರಂಭವಾಗದಿದ್ದರೆ ಕದನವಿರಾಮ ಘೋಷಿಸುವ ಅಗತ್ಯವೂ ಬಾರದು ಅಲ್ಲವೇ?
- ಸಿಬಂತಿ ಪದ್ಮನಾಭ ಕೆ. ವಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ