ಭಾನುವಾರ, ಜನವರಿ 9, 2022

ನಿಮ್ಮನ್ನು ನೀವು ನಂಬಿ, ಜಗತ್ತು ನಿಮ್ಮ ಕಾಲಬುಡದಲ್ಲಿ ಬಂದು ಮಂಡಿಯೂರುತ್ತದೆ...

ಜನವರಿ 2022 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ

ಕಾರ್ಯನಿಮಿತ್ತ ಪಟ್ಟಣದ ದೊಡ್ಡ ಆಸ್ಪತ್ರೆಯೊಂದರ ನಿರ್ಗಮನ ದ್ವಾರದಲ್ಲಿದ್ದೆ. ತಳ್ಳುಗಾಡಿಯೊಂದನ್ನು ಅನುಸರಿಸಿ ಏಳೆಂಟು ಮಂದಿ ನಡೆದುಹೋದರು. ಒಂದಿಬ್ಬರು ಗೋಳಾಡುತ್ತಿದ್ದರೆ, ಇನ್ನುಳಿದವ ಮುಖದಲ್ಲಿ ಗಾಢ ವಿಷಣ್ಣತೆ ಮಡುಗಟ್ಟಿತ್ತು. ಗಾಡಿಯ ಮೇಲೆ ಯುವಕನೊಬ್ಬ ಶವವಾಗಿ ಮಲಗಿದ್ದ. ಇನ್ನೂ 26ರ ಗಟ್ಟಿ ಜವ್ವನಿಗ.

“ಲವ್ ಫೈಲ್ಯೂರಂತೆ; ನಿದ್ದೆ ಮಾತ್ರೆ ನುಂಗಿದ್ದನಂತೆ...” ಆಸ್ಪತ್ರೆಯ ಕಾವಲು ಸಿಬ್ಬಂದಿ ನಿರ್ಲಿಪ್ತ ಧ್ವನಿಯಲ್ಲಿ ಮಾತಾಡಿಕೊಳ್ಳುತ್ತಿದ್ದರು. “ಯಾವುದಾದರೂ ಒಳ್ಳೆ ವಿಷ ಕುಡಿದು ಅಲ್ಲೇ ಸಾಯಬಹುದಿತ್ತು. ಅರೆಜೀವವಾಗಿ ಬಂದಿದ್ದ. ಆ ಅಪ್ಪ-ಅಮ್ಮನ ಗೋಳಾಟ ನೋಡಕ್ಕಾಗಲ್ಲ. ಯಾಕಾಗಿ ಇಂಥ ಮಕ್ಕಳು ಹುಟ್ತಾರೋ...” ಅದು ಅವರ ಮುಂದಿನ ಸಂಭಾಷಣೆಯ ಸಾರ.

ಯಾಕಾಗಿ ಇಂಥ ಮಕ್ಕಳು ಹುಟ್ತಾರೋ... ಆ ಪ್ರಶ್ನೆಯ ಹಿಂದೆ ನೋವು, ಅಸಹನೆ, ಸಿಟ್ಟು ಎಲ್ಲ ಇದೆ. ಆದರೆ ಆ ಪ್ರಶ್ನೆಯನ್ನು ಬೇರೆ ರೀತಿಯಲ್ಲಿ ಕೇಳಬೇಕು ಅನಿಸಿತು: ಯಾಕಾಗಿ ನಮ್ಮ ಮಕ್ಕಳು ಇಂತಹ ಯುವಕರಾಗಿ ಬದಲಾಗ್ತಾರೋ? ಯಾಕಾಗಿ ಅವರಲ್ಲಿ ಇಂತಹ ಮನಸ್ಥಿತಿ ನಿರ್ಮಾಣವಾಗುತ್ತೋ? ಯಾಕಾಗಿ ಇಂತಹ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೋ?

ನಿನ್ನೆ ಮೊನ್ನೆ ಪರಿಚಯವಾದ ಹುಡುಗಿ ಕೈಕೊಟ್ಟು ಹೋಗಿರಬಹುದು; ಇವನು ಹುಟ್ಟುವುದಕ್ಕೂ ಮೊದಲಿನ ಒಂಬತ್ತು ತಿಂಗಳಿಂದಲೇ ಹೊತ್ತು, ಬೆಳೆಸಿ, ಆ ಹುಡುಗಿಗಿಂತಲೂ ಹೆಚ್ಚು ಮುಚ್ಚಟೆಯಿಂದ 26 ವರ್ಷ ಸಾಕಿ ಸಲಹಿದ ಅಪ್ಪ-ಅಮ್ಮ ಎಂಬ ಜೀವಗಳಿಗೆ ಯಾವ ಬೆಲೆಯೂ ಇಲ್ಲವೇ? ಇಂತಹ ಪ್ರಶ್ನೆ ಎಲ್ಲರ ಮನಸ್ಸಿನಲ್ಲೂ ಮೂಡುವುದು ಸಹಜ. ಆದರೆ ಉತ್ತರಿಸುವುದು ಅಷ್ಟು ಸುಲಭವಲ್ಲ.

ಯುವಕರಲ್ಲೇ ಹೆಚ್ಚು ಆತ್ಮಹತ್ಯೆ:

ನಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಪೈಕಿ ಯುವಕರ ಸಂಖ್ಯೆಯೇ ಹೆಚ್ಚು. ರಾಷ್ಟ್ರೀಯ ಅಪರಾಧ ದಾಖಲು ಸಂಸ್ಥೆ (NCRB)ಯ 2019ರ ವರದಿಯ ಪ್ರಕಾರ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಪೈಕಿ ಶೇ. 35.1ರಷ್ಟು ಮಂದಿ 18ರಿಂದ 30 ವರ್ಷದವರೂ, ಶೇ. 31.8ರಷ್ಟು ಮಂದಿ 30ರಿಂದ 45 ವರ್ಷದವರೂ ಇದ್ದಾರೆ. ಅಂದರೆ ಒಟ್ಟಾರೆಯಾಗಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ. 67ರಷ್ಟು ಮಂದಿ 18ರಿಂದ 45ವರ್ಷ ವಯಸ್ಸಿನ ಯುವಕರೇ ಇದ್ದಾರೆ! 2019ರಲ್ಲಿ ದೇಶದಲ್ಲಿ ನಡೆದ 1,39,123 ಆತ್ಮಹತ್ಯೆಗಳ ಪೈಕಿ 93,061 ಮಂದಿ ಯುವಕರೇ ಆಗಿದ್ದಾರೆ. ಇದು ನಿಜಕ್ಕೂ ಆಘಾತಕಾರಿ ವಿಷಯ.

ಅತ್ಯಂತ ಮುಂದುವರಿದ ದೇಶ ಅಮೇರಿಕದಲ್ಲಿ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಯುವಕರಲ್ಲ, 65 ವರ್ಷ ಮೀರಿದ ವೃದ್ಧರು. ಅಲ್ಲಿ ಆತ್ಮಹತ್ಯೆಗೆ ಒಳಗಾಗುತ್ತಿರುವ ಈ ವಯೋಮಾನದ ಮಂದಿ ಲಕ್ಷಕ್ಕೆ 28ರಷ್ಟು.

ಆತ್ಮಹತ್ಯೆ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಏರುತ್ತಲೇ ಇದೆ. 2019ಕ್ಕೆ ಹೋಲಿಸಿದರೆ 2020ರಲ್ಲಿ ಆತ್ಮಹತ್ಯೆ ಪ್ರಮಾಣ ಶೇ. 10ರಷ್ಟು ಹೆಚ್ಚಾಗಿದೆ. 2020ರ ಎನ್‍ಸಿಆರ್‍ಬಿ ವರದಿಯ ಪ್ರಕಾರ ಕೊರೋನ ಮಹಾಮಾರಿ ಅಪ್ಪಳಿಸಿದ ಸದರಿ ವರ್ಷದಲ್ಲಿ ಇಲ್ಲಿಯವರೆಗಿನ ಅತಿಹೆಚ್ಚು ಆತ್ಮಹತ್ಯೆ ಪ್ರಕರಣಗಳು ಭಾರತದಲ್ಲಿ ದಾಖಲಾಗಿವೆ. 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ 1,53,052 ಮಂದಿಯ ಪೈಕಿ ವಿದ್ಯಾರ್ಥಿಗಳ ಪ್ರಮಾಣ ಶೇ. 21.20ರಷ್ಟು ಹೆಚ್ಚಾಗಿದೆ ಎಂಬುದು ಇನ್ನೂ ಗಂಭೀರವಾದ ವಿಷಯ.

ದೇಶದಲ್ಲಿ ಪ್ರತೀ ಗಂಟೆಗೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂಬುದು ಎನ್‍ಸಿಆರ್‍ಬಿಯ ವರದಿಯಿಂದ ವ್ಯಕ್ತವಾಗುವ ಅಂಶ. 2019ರಲ್ಲಿ ಕಳೆದ 25 ವರ್ಷಗಳಲ್ಲೇ ಅತಿಹೆಚ್ಚು ವಿದ್ಯಾರ್ಥಿಗಳ ಆತ್ಮಹತ್ಯೆ (10,335) ದಾಖಲಾಗಿದೆ. 1995ರಿಂದ 2019ರವರೆಗಿನ ಅಂಕಿಅಂಶಗಳನ್ನು ತೆಗೆದುಕೊಂಡರೆ ನಮ್ಮ ದೇಶದಲ್ಲಿ 1.7 ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಎಂಬ ಭೂತಕ್ಕೆ ಬಲಿಯಾಗಿದ್ದಾರೆ.

2019ರ ಅಂಕಿ ಅಂಶಗಳನ್ನು ನೋಡಿದರೆ, ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಆತ್ಮಹತ್ಯೆಗಳು ನಡೆದಿವೆ. ಹೆಚ್ಚು ಆತ್ಮಹತ್ಯೆ ನಡೆಯುವ ಐದು ರಾಜ್ಯಗಳಲ್ಲಿ ಕರ್ನಾಟಕವೂ ಸೇರಿಕೊಂಡಿದೆ ಎಂಬುದೊಂದು ಗಮನಾರ್ಹ ಸಂಗತಿ. ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಕರ್ನಾಟಕಗಳಲ್ಲಿ ನಡೆದ ಆತ್ಮಹತ್ಯೆ ಪ್ರಕರಣಗಳನ್ನು ಸೇರಿಸಿದರೆ ಒಟ್ಟಾರೆ ಪ್ರಕರಣಗಳ ಶೇ. 44ರಷ್ಟು ಆಗುತ್ತದೆ. ಅಂದರೆ ಸುಮಾರು ಅರ್ಧದಷ್ಟು ಪ್ರಕರಣಗಳು ಕೇವಲ ಐದು ರಾಜ್ಯಗಳಲ್ಲಿ ನಡೆದಿವೆ.

ಆತ್ಮಹತ್ಯೆಗೇನು ಕಾರಣ?

ಕೌಟುಂಬಿಕ ಸಮಸ್ಯೆಗಳು, ಅನಾರೋಗ್ಯ, ಡ್ರಗ್ಸ್ ಚಟದಿಂದ ಉಂಟಾಗುವ ಖಿನ್ನತೆ, ಮದುವೆಗೆ ಸಂಬಂಧಿಸಿದ ಸಮಸ್ಯೆಗಳು, ಪ್ರೇಮವೈಫಲ್ಯ, ಸಾಲದ ಸಮಸ್ಯೆ ಇತ್ಯಾದಿಗಳು ನಮ್ಮ ದೇಶದಲ್ಲಿ ನಡೆಯುತ್ತಿರುವ ಆತ್ಮಹತ್ಯೆಗಳಿಗೆ ಪ್ರಮುಖ ಕಾರಣಗಳು. ಕೌಟುಂಬಿಕ ಸಮಸ್ಯೆಗಳಿಂದಾಗಿ ಅತಿಹೆಚ್ಚು ಅಂದರೆ ಶೇ. 32.4ರಷ್ಟು ಆತ್ಮಹತ್ಯೆಗಳು ನಡೆಯುತ್ತವೆ. ಅನಾರೋಗ್ಯದಿಂದಾಗಿ ಶೇ. 17ರಷ್ಟು, ಸಾಲದಿಂದಾಗಿ ಶೇ. 4.2ರಷ್ಟು ಆತ್ಮಹತ್ಯೆಗಳು ನಡೆಯುತ್ತವೆ. ಶೇ. 5.6ರಷ್ಟು ಆತ್ಮಹತ್ಯೆಗಳು ಡ್ರಗ್ಸ್‍ಗೆ ಸಂಬಂಧಿಸಿದಂತೆ, ಶೇ. 5.5 ಆತ್ಮಹತ್ಯೆಗಳು ಮದುವೆಗೆ ಸಂಬಂಧಿಸಿದಂತೆ, ಶೇ. 4.5ರಷ್ಟು ಆತ್ಮಹತ್ಯೆಗಳು ಪ್ರೇಮವೈಫಲ್ಯದ ಕಾರಣಕ್ಕೆ ನಡೆಯುತ್ತವೆ ಎಂಬುದನ್ನು ನಾವಿಲ್ಲಿ ಗಂಭೀರವಾಗಿ ನೋಡಬೇಕು.

ಇವೆಲ್ಲ ಕಾರಣಗಳನ್ನು ಒತ್ತಟ್ಟಿಗಿರಿಸಿ, ‘ಯುವಕರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ?’ ಎಂದು ಸ್ಥೂಲವಾಗಿ ಕೇಳಿದರೆ ಮನೋವಿಜ್ಞಾನಿಗಳು ಕೊಡುವ ಮೊದಲನೇ ಉತ್ತರ: ‘ಕನಸುಗಳ ವೈಫಲ್ಯ’. ಅದು ಯಾವ ರೂಪದ್ದೂ ಆಗಿರಬಹುದು. ಆರ್ಥಿಕವಾಗಿ ತಾವೇನೋ ಘನವಾದದ್ದನ್ನು ಸಾಧಿಸಬೇಕು, ದೊಡ್ಡ ಉದ್ಯೋಗ ಹಿಡಿಯಬೇಕು, ಒಳ್ಳೆಯ ಜೀವನಸಂಗಾತಿ ಸಿಗಬೇಕು, ಚಂದದ ಸಂಸಾರ ನಡೆಸಬೇಕು... ಯಾವ ಕನಸೂ ಆಗಿರಬಹುದು. ಅದು ಅಂದುಕೊಂಡಂತೆ ಕೈಗೂಡದೆ ಇದ್ದಾಗ ಅವರಿಗೆ ಆತ್ಮಹತ್ಯೆಯ ದಾರಿ ಸುಲಭವಾಗಿ ಕಾಣುತ್ತದೆ.

ಯುವಕರೇಕೆ ಹೀಗೆ?

ಕನಸುಗಳನ್ನು ಕಟ್ಟಿಕೊಳ್ಳುವುದು ತಪ್ಪಲ್ಲ. ಕನಸುಗಳೇ ಬದುಕಿಗೆ ಆಧಾರ. ಅವೇ ನಮ್ಮನ್ನು ಮುನ್ನಡೆಸುವ ಶಕ್ತಿಗಳು. ಬಾಹ್ಯ ಬೆಂಬಲ ಕಡಿಮೆಯಾದಾಗ ಅಂತರಂಗವನ್ನು ತಬ್ಬಿಕೊಂಡು ನಮ್ಮೊಳಗೊಂದು ಬಲವನ್ನೂ ಛಲವನ್ನೂ ತುಂಬುವವು ಇವೇ ಕನಸುಗಳು. ಭವಿಷ್ಯದಲ್ಲಿ ದೊರೆಯಬಹುದಾದ ಯಶಸ್ಸಿನ ದೃಶ್ಶೀಕರಣ ನಮ್ಮೊಳಗೆ ಹೆಚ್ಚಿನ ಆತ್ಮವಿಶ್ವಾಸ ತುಂಬುತ್ತದೆ. ಇನ್ನಷ್ಟು ದೃಢ ಹೆಜ್ಜೆಗಳನ್ನು ಇಡುವುದಕ್ಕೆ ಸಹಕಾರಿಯಾಗುತ್ತದೆ. ಆದರೆ ನಾವು ಕಾಣುತ್ತಿರುವುದು ಕನಸು, ಇನ್ನೂ ನನಸಾಗಬೇಕಷ್ಟೆ ಎಂಬ ಎಚ್ಚರವೂ ಸದಾ ನಮ್ಮೊಂದಿಗೆ ಇರಬೇಕು. ಈ ಎಚ್ಚರ ಹೊರಟುಹೋದರೆ ನಾವು ಕಾಣುವುದು ಬರೀ ಹಗಲುಗನಸು ಆಗಿಬಿಡುತ್ತದೆ. ಅದಕ್ಕೆ ಆತ್ಮವಿಶ್ವಾಸ ತುಂಬುವ ಕಸುವು ಇರುವುದಿಲ್ಲ.

ನಮ್ಮ ಯುವತಲೆಮಾರು ಎಲ್ಲದರಲ್ಲೂ ಮುಂದಿದೆ. ಶಿಕ್ಷಣ, ಉದ್ಯೋಗ, ಸಂಶೋಧನೆ, ಸಾಧನೆ... ಯಾವ ಕ್ಷೇತ್ರವನ್ನು ತೆಗೆದುಕೊಂಡರೂ ಯುವಕರೇ ನಮ್ಮ ಮೂಲದ್ರವ್ಯ. ಅವರ ಸಾಧನೆ, ಉನ್ನತಿಗಳೇ ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತವೆ. ಎಲ್ಲದರಲ್ಲೂ ಜಗತ್ತು ಮೆಚ್ಚುವ ಸಾಧನೆ ಮಾಡಿರುವ ಯುವಕರು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಏಕೆ ಎಡವುತ್ತಿದ್ದಾರೆ?

ಹಾಗಾದರೆ ನಮ್ಮ ಯುವತಲೆಮಾರಿನ ಒಟ್ಟಾರೆ ಬೆಳವಣಿಗೆಯಲ್ಲೇ ಏನಾದರೂ ದೋಷವಿದೆಯೇ ಎಂದು ಕೇಳಿಕೊಳ್ಳಬೇಕಾಗುತ್ತದೆ. ಯೋಚಿಸಿದರೆ ‘ಹೌದು’ ಎಂಬ ಉತ್ತರ ಬರುತ್ತದೆ. ಬಾಲ್ಯ, ವಿದ್ಯಾರ್ಥಿ ಜೀವನದ ಕಾಲದಲ್ಲಿ ಏನು ಆಗಬೇಕೋ ಅದು ಆಗುತ್ತಿಲ್ಲ ಎಂಬುದು ಸ್ಪಷ್ಟ.

ಸೋಲುವುದನ್ನು ಕಲಿಸಿಲ್ಲ

ಹೊಸ ಕಾಲದ ಮಕ್ಕಳು ಬಹಳ ಬುದ್ಧಿವಂತರು. ಓದು-ಅಧ್ಯಯನದಲ್ಲಿ ಸದಾ ಮುಂದು. ಮಾತಿನಲ್ಲಿ ಪ್ರಚಂಡರು. ಚಟಪಟನೆ ಮಾತನಾಡಿ, ಹತ್ತೆಂಟು ಪ್ರಶ್ನೆಗಳನ್ನು ಕೇಳಿ ಎದುರಿಗಿರುವ ಹಿರಿಯರನ್ನು ಬೇಸ್ತು ಬೀಳಿಸಬಲ್ಲರು. ನಾವು ಅವರಿಗೆ ಕೇಳಿದ್ದೆಲ್ಲವನ್ನು ಕೊಡಿಸುತ್ತೇವೆ. ಗೊತ್ತಿದ್ದನ್ನೆಲ್ಲ ಕಲಿಸುತ್ತೇವೆ. ಟಿವಿ ತೋರಿಸುತ್ತೇವೆ. ಕಂಪ್ಯೂಟರ್ ಕೊಡಿಸುತ್ತೇವೆ. ವೀಡಿಯೋ ಗೇಮ್ ಆಡಿಸುತ್ತೇವೆ. ಅವರು ಎಲ್ಲವನ್ನೂ ಕ್ಷಣಮಾತ್ರದಲ್ಲಿ ಕಲಿತು ನಿಪುಣರಾಗಬಲ್ಲರು. ಎಲ್ಲವನ್ನೂ ಕಲಿಸುತ್ತೇವೆ, ಸೋಲುವುದನ್ನು ಮಾತ್ರ ಕಲಿಸುತ್ತಿಲ್ಲ.

ಹೌದು, ಗೆಲ್ಲುವುದನ್ನು ಕಲಿಸಬಹುದು, ಸೋಲುವುದನ್ನು ಕಲಿಸಲು ಕಷ್ಟ. ಮಕ್ಕಳಿಗೆ ಗೆಲುವಿನಲ್ಲೇ ಬದುಕಿನ ಸರ್ವಸ್ವವೂ ಇದೆ ಎಂಬ ಭ್ರಮೆ ಬೆಳೆಸುವ ನಾವು ಸೋಲೆಂದರೆ ಏನು, ಅದು ಹೇಗಿರುತ್ತದೆ, ಅದು ಎದುರಾದಾಗ ಮನಸ್ಸು ಎಷ್ಟು ಮುದುಡುತ್ತದೆ, ಅಂತಹ ಸಂದರ್ಭಗಳನ್ನು ಎದುರಿಸುವುದು ಹೇಗೆ, ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಹೇಗೆ, ಎಲ್ಲವನ್ನೂ ಮೆಟ್ಟಿನಿಂತು ಹೊಸ ಸಾಧನೆ ಮಾಡುವುದು ಹೇಗೆ ಎಂಬುದನ್ನು ಕಲಿಸಿಕೊಡುವುದೇ ಇಲ್ಲ. ಇದು ಸಮಸ್ಯೆಯ ಮೂಲ.

ಮಕ್ಕಳು ಕೇಳಿದ್ದನ್ನೆಲ್ಲ ಮರುಮಾತನಾಡದೆ ಕೊಡಿಸುವಲ್ಲಿಂದ ಇದು ಆರಂಭವಾಗುತ್ತದೆ. ಈಗಿನ ಬಹುತೇಕ ಮಕ್ಕಳಿಗೆ ದುಡ್ಡಿನ ಮೌಲ್ಯ ತಿಳಿಯದು. ಹಿಂದಿನ ತಲೆಮಾರು ಕಂಡುಂಡ ಕಷ್ಟ ಇವರಿಗಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಟ ಎಂದರೇನು ಎಂಬುದನ್ನು ಅವರು ಊಹಿಸಲೂ ಸಾಧ್ಯವಿಲ್ಲ. ಮೈಲುಗಟ್ಟಲೆ ನಡೆಯುವುದು ಏನು ಎಂಬುದು ಗೊತ್ತಿಲ್ಲ. ಅವರು ಹುಟ್ಟುವಾಗಲೇ ಮನೆಯಲ್ಲಿ ಒಂದು ಬೈಕಾದರೂ ಇದೆ. ಕಾರು ಇದ್ದರೆ ಕೇಳುವುದೇ ಬೇಡ, ಅನಿವಾರ್ಯಕ್ಕೂ ಹತ್ತು ಹೆಜ್ಜೆ ನಡೆದು ಹೋಗಲಾರರು ಅವರು. ಯಾವುದಾದರೂ ವಾಹನವೇ ಬೇಕು. ಸಾರ್ವಜನಿಕ ಬಸ್ಸುಗಳಲ್ಲಿಯೂ ಪ್ರಯಾಣಿಸಲು ಅವರು ಸಿದ್ಧರಿಲ್ಲ. ಬೇಕೆಂದಾಗ ಬಸ್ಸು ಸಿಗುವುದಿಲ್ಲ, ಅಲ್ಲಿ ಕೂರಲು ಸೀಟಿಲ್ಲ, ರಶ್ಶು ಜಾಸ್ತಿ, ಉಸಿರುಗಟ್ಟುವ ವಾತಾವರಣ, ಕುರುಕಲು ತಿಂಡಿ ತಿನ್ನಲೂ ಅವಕಾಶ ಇಲ್ಲ. ಅವರಿಗೆ ನೂರೆಂಟು ನೆಪಗಳು. ತಮ್ಮದೇ ಕಾರು ಇದ್ದರೆ ಬಹಳ ಒಳ್ಳೆಯದು. ಅಲ್ಲಿಯೂ ಧಾರಾಳ ಸ್ಥಳಾವಕಾಶ ಇರಬೇಕು. ಮಲಗಿಕೊಂಡು, ಕುಣಿದಾಡಿಕೊಂಡು ಹೋಗಲು ಸಾಧ್ಯವಿದ್ದರೆ ಇನ್ನೂ ಒಳ್ಳೆಯದು.

ಇದು ಅವರ ಮನಸ್ಥಿತಿ. ಒಂದೆರಡು ತಲೆಮಾರು ಹಿಂದಿನ ಮಂದಿ ಬಾಲ್ಯಕಾಲದಲ್ಲಿ ಅನುಭವಿಸಿದ ಕಷ್ಟ ಈಗಿನವರಿಗೆ ಇಲ್ಲ. ಕೇಳಿದ ತಕ್ಷಣ ಪೆನ್ನು, ಪೆನ್ಸಿಲು, ಪುಸ್ತಕ ಏನು ಬೇಕಾದರೂ ಹಾಜರಾಗುತ್ತದೆ. ಹಿಂದೆ ಒಂದು ಪೆನ್ನು ಸಿಗಬೇಕೆಂದರೆ ತಿಂಗಳುಗಟ್ಟಲೆ ಕಾಯಬೇಕಿತ್ತು. ಹೊಸ ಪೆನ್ಸಿಲು ಮುಂದಿನ ವರ್ಷವೇ ಸಿಗುವುದು. ಹಾಗಾಗಿ ಅದು ಬೇಗನೆ ಸವೆಯದಂತೆ, ಎಲ್ಲಿಯೂ ಕಳೆದುಹೋಗದಂತೆ ಜೋಪಾನ ಮಾಡಬೇಕು. ಚಾಕಲೇಟು ಅಪರೂಪಕ್ಕೊಮ್ಮೆ ನೆಂಟರು ತಂದರೆ ಅದೇ ವಿಶೇಷ. ಅದೂ ಐವತ್ತು ಪೈಸೆಯದ್ದು. ಈಗಿನ ಮಕ್ಕಳಿಗೆ ಐವತ್ತು ಪೈಸೆ ನೋಡಿಯೇ ತಿಳಿಯದು. ಅವರ ಕಣ್ಣಿಗೆ ಬೀಳುವುದು ಹತ್ತು ರೂಪಾಯಿ ಮೇಲಿನ ಚಾಕಲೇಟು ಅಥವಾ ಕುರುಕಲು ತಿನಿಸು.

ಒಟ್ಟಾರೆಯಾಗಿ ಇವರಿಗೆ ಕಷ್ಟಗಳ ಅರಿವು ಕಡಿಮೆ. ನಮ್ಮ ಮಕ್ಕಳು ನಮ್ಮಂತೆ ಕಷ್ಟಪಡಬಾರದು ಎಂದೇ ಎಲ್ಲ ಪೋಷಕರೂ ಭಾವಿಸುತ್ತಾರೆ. ಅದು ಸರಿ ಕೂಡ. ಆದರೆ ಬದುಕು ನಾವು ಅಂದುಕೊಂಡಹಾಗೆ ಇರುವುದಿಲ್ಲ. ಎಂತಹ ಸುಖಸವಲತ್ತುಗಳಲ್ಲಿ ಬೆಳೆದರೂ ಇಡೀ ಜೀವನ ಹೂವಿನ ಹಾಸಿಗೆಯಾಗಿರುವುದಿಲ್ಲ. ಯಾವುದಾದರೊಂದು ಸವಾಲು, ಕಷ್ಟ ಅಚಾನಕ್ಕಾಗಿ ಎದುರಾಗಿಯೇ ಆಗುತ್ತದೆ. ಅಂತಹ ಸಂಕಷ್ಟಗಳನ್ನು, ಸೋಲುಗಳನ್ನು ಎದುರಿಸುವ ಮನಸ್ಥಿತಿಯನ್ನು ಪೋಷಕರು ತಮ್ಮ ಮಕ್ಕಳಲ್ಲಿ ಬೆಳೆಸಲೇಬೇಕು. ಇಲ್ಲವಾದರೆ ಮುಂದೆ ಎದುರಾಗುವ ಸಣ್ಣ ಸಮಸ್ಯೆಯೂ ಅವರಿಗೆ ಬೆಟ್ಟದಂತೆ ಕಾಣತೊಡಗುತ್ತದೆ. ಆಗ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಳ್ಳುವ ದುರ್ಬಲ ಮನಸ್ಥಿತಿ ನಿರ್ಮಾಣವಾಗುತ್ತದೆ.

ಆಟ ಮತ್ತು ಸೋಲು

ಮನೆಮಂದಿಯ ಕತೆ ಹಾಗಿರಲಿ; ಇನ್ನೊಂದೆಡೆ ಶಾಲೆಗಳೂ ಅದನ್ನೇ ಮಾಡುತ್ತವೆ. ಮುಖ್ಯವಾಗಿ, ಶಾಲಾ ಹಂತದಲ್ಲಿ ಆಟೋಟಗಳಿಗೆ ಕೊಡುವ ಪ್ರಾಮುಖ್ಯತೆ ಗಣನೀಯವಾಗಿ ಕಡಿಮೆ ಆಗಿದೆ. ಒಂದನೇ ತರಗತಿಯಿಂದಲೇ ಅಂಕಗಳ ಓಟ ಆರಂಭವಾಗುವುದರಿಂದ ಮಕ್ಕಳಿಗೆ ಬಯಲಿನಲ್ಲಿ ಓಡುವ ಅಭ್ಯಾಸ ಇಲ್ಲ, ಅಥವಾ ಅವಕಾಶವಿಲ್ಲ. ಬಾಲ್ಯದಲ್ಲಿ ಆಟೋಟ ಬಹಳ ಮುಖ್ಯ. ಅವು ಸೋಲು ಗೆಲುವು ಎರಡನ್ನೂ ಕಲಿಸುತ್ತವೆ. ಆಟೋಟಗಳಲ್ಲಿ ಒಮ್ಮೆ ಗೆದ್ದವರು ಮರುದಿನ ಸೋಲುತ್ತಾರೆ, ಒಮ್ಮೆ ಸೋತವರು ಮಾರನೆಯ ದಿನ ಗೆಲ್ಲುತ್ತಾರೆ. ಸೋಲುಗೆಲುವುಗಳೆಲ್ಲ ಸಾಮಾನ್ಯ ಎಂಬ ಸೂಕ್ಷ್ಮ ಮಕ್ಕಳಲ್ಲಿ ಈ ಹಂತದಲ್ಲೇ ಬೆಳೆಯುತ್ತದೆ. ಆದರೆ ಅಂತಹದೊಂದು ಅವಕಾಶವನ್ನೇ ನಮ್ಮ ಸ್ಪರ್ಧಾಯುಗದ ಶಿಕ್ಷಣ ವ್ಯವಸ್ಥೆ ಕಸಿದುಕೊಂಡಿದೆ.

ಇನ್ನು ಪಠ್ಯಪುಸ್ತಕ ಆದಿಯಾಗಿ ಶಾಲಾ ಕಾಲೇಜುಗಳಲ್ಲಿ ಮಕ್ಕಳು ಯಾವ ಜೀವನ ಪಾಠ ಕಲಿಯುತ್ತಾರೆ ಎಂಬ ಪ್ರಶ್ನೆ ಈಗಲ್ಲ, ಸ್ವಾಮಿ ವಿವೇಕಾನಂದರ ಕಾಲದಿಂದಲೂ ಇದೆ. “ನಮ್ಮ ಶಿಕ್ಷಣವೆಲ್ಲ ನಿಷೇಧಾತ್ಮಕವಾಗಿದೆ; ವ್ಯಕ್ತಿಯನ್ನು ಬೆಳೆಸುವ ಬದಲು ಅದು ಆತನನ್ನು ಇನ್ನಷ್ಟು ನಿಸ್ಸತ್ವಗೊಳಿಸುತ್ತದೆ” ಎಂದು ಬಹಳ ಹಿಂದೆಯೇ ಬೇಸರಪಟ್ಟುಕೊಂಡಿದ್ದರು ಅವರು. “ಇದು ಪುರುಷಸಿಂಹರನ್ನು ಮಾಡುವ ವಿದ್ಯಾಭ್ಯಾಸವಲ್ಲ. ಇದು ಕೇವಲ ನಿಷೇಧಮಯವಾದುದು. ನಿಷೇಧಮಯ ಶಿಕ್ಷಣ ಮೃತ್ಯುವಿಗಿಂತ ಘೋರವಾದುದು... ನಮ್ಮ ಶಿಕ್ಷಣ ಅದನ್ನು ಮಾಡಬೇಡ, ಇದನ್ನು ಮಾಡಬೇಡ ಎಂದು ಬೋಧಿಸುತ್ತದೆಯೇ ಹೊರತು, ಇದನ್ನು ಮಾಡು ಎಂದು ವಿದ್ಯಾರ್ಥಿಗೆ ಸ್ಪಷ್ಟ ನಿರ್ದೇಶನವನ್ನು ನೀಡುವಲ್ಲಿ ಸೋತಿದೆ” ಎಂದಿದ್ದರು ವಿವೇಕಾನಂದರು. ಆ ಪರಿಸ್ಥಿತಿ ವಿಶೇಷವಾಗಿ ಸುಧಾರಿಸಿದಂತೆ ಕಾಣುತ್ತಿಲ್ಲ. ಇದೇ ತಲೆಮಾರು ಬೆಳೆದು ದೊಡ್ಡವರಾದ ಮೇಲೆ ಇನ್ನೆಂತಹ ಬಲಿಷ್ಠ ಮನಸ್ಥಿತಿ ನಿರ್ಮಾಣವಾದೀತು?

ಶಕ್ತಿಯೇ ಜೀವನ

‘ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ’- ಇದು ಸ್ವಾಮಿ ವಿವೇಕಾನಂದರ ಜೀವನ ಸಂದೇಶ. ಅವರು ನೀಡಿದ ಸಮಸ್ತ ಬೋಧನೆಯ ಸಾರ ಇದೇ. ಆತ್ಮವಿಶ್ವಾಸ ಕೊನೆಯಾದಲ್ಲಿಗೆ ಜೀವನ ಕೊನೆಯಾಯಿತೆಂದೇ ಅರ್ಥ. ಅದೊಂದು ಇದ್ದರೆ ಉಳಿದ ಯಾವ ಸಮಸ್ಯೆಗಳೂ ಸಮಸ್ಯೆಗಳೇ ಅಲ್ಲ. ಬೆಟ್ಟದಂತಹ ಸವಾಲುಗಳೂ ಆತ್ಮವಿಶ್ವಾಸದ ಎದುರು ಮಂಜಿನಂತೆ ಕರಗಬಲ್ಲವು.

ಲೇಖನದ ಆರಂಭದಲ್ಲಿ ಹೇಳಿದ- ಪ್ರೇಮವೈಫಲ್ಯದಿಂದ ನೊಂದು ಆತ್ಮಹತ್ಯೆಗೆ ಶರಣಾದ 26ರ ಯುವಕನ – ನಿದರ್ಶನವನ್ನು ಮತ್ತೆ ತೆಗೆದುಕೊಳ್ಳೋಣ. ಪ್ರೇಮವೈಫಲ್ಯವೆಂಬುದು ನಿಜಕ್ಕೂ ಪ್ರಾಣವನ್ನೇ ಕಳೆದುಕೊಳ್ಳುವಂತಹ ಸಮಸ್ಯೆಯೇ? ಜೀವನದಲ್ಲಿ ಒಮ್ಮೆಯಾದರೂ ಪ್ರೀತಿ-ಪ್ರೇಮದಂತಹ ಸೆಳೆತಕ್ಕೆ ಒಳಗಾಗದವರು ಬಹುಶಃ ಯಾರೂ ಇಲ್ಲ, ಅಥವಾ ಅವರದ್ದು ತೀರಾ ಸಣ್ಣಪ್ರಮಾಣ. ಅವರೆಲ್ಲ ಅದರಲ್ಲಿ ಯಶಸ್ವಿಯಾದರೆ? ಇಲ್ಲ ಎನ್ನುವವರೆಲ್ಲ ಆತ್ಮಹತ್ಯೆ ಮಾಡಿಕೊಂಡರೇ? ಆ ವಯಸ್ಸಿಗೆ ಇಷ್ಟಪಟ್ಟವರು ದೂರವಾದಾಗ ದೊಡ್ಡದೊಂದು ಸೊತ್ತು ಕಳೆದುಹೋದಂತೆ ಖಿನ್ನತೆಗೆ ಜಾರುವುದು ಸಹಜ. ಆದರೆ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚೆ ಮನಸ್ಸಿನ ನೋವನ್ನು ಇನ್ನೊಬ್ಬ ಸ್ನೇಹಿತನಲ್ಲಿ ಹಂಚಿಕೊಳ್ಳುವ ವ್ಯವಧಾನವೂ ಉಳಿಯದೆ ಹೋದರೆ ‘ಶಕ್ತಿಯೇ ಜೀವನ’ ಎಂಬ ಮಾತಿಗೆ ಮೌಲ್ಯವೇ ಉಳಿಯುವುದಿಲ್ಲ.

ಭಯಾನಕವಾದ ಬೇಸರವೊಂದು ಕಾಡಿದಾಗ ಮೊದಲು ಮಾಡಬೇಕಾದ್ದೇ ಅದನ್ನು ಯಾವುದೋ ಒಂದು ರೀತಿಯಲ್ಲಿ ಹೊರಗೆಡಹುವುದು. ಹಂಚಿದಷ್ಟೂ ಹೆಚ್ಚಾಗುವುದು ಸಂತೋಷ, ಹಂಚಿದಷ್ಟೂ ಕಡಿಮೆಯಾಗುವುದು ದುಃಖ. ಆಪ್ತ ಸ್ನೇಹಿತರಲ್ಲಿ ಎಲ್ಲವನ್ನೂ ಹೇಳಿಕೊಳ್ಳಬಹುದು. ಅಂತಹ ಯಾರೂ ಇಲ್ಲ ಎಂದುಕೊಂಡರೆ ಒಂದು ಕಾಗದದ ಮೇಲೆ ಎಲ್ಲವನ್ನೂ ಕಥೆಯೋ, ಕವಿತೆಯೋ, ಲೇಖನವೋ ಆಗಿ ಬರೆದುಕೊಳ್ಳಬಹುದು. ಒಳ್ಳೆಯ ಪುಸ್ತಕಗಳನ್ನು ಓದಬಹುದು. ಅಲ್ಲಿಗೆ ಮನಸ್ಸಿನೊಳಗಿನ ಒತ್ತಡ ಅರ್ಧ ಕಡಿಮೆಯಾದಂತೆ.

ಅತಿರೇಕದ ನಿರ್ಧಾರಗಳೆಲ್ಲ ಮೂಡುವುದು ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ. ಅದೊಂದು ಕ್ಷಣ ದಾಟಿಬಿಟ್ಟರೆ ಉಳಿದದ್ದೆಲ್ಲ ಸಲೀಸು. ಅಂತಹ ಘಳಿಗೆಯನ್ನು ದಾಟುವ ವ್ಯವಧಾನ, ಸೋಲನ್ನು ಎದುರಿಸುವ ಧೈರ್ಯ, ವೈಫಲ್ಯವನ್ನು ಮೆಟ್ಟಿನಿಲ್ಲುವ ಆತ್ಮವಿಶ್ವಾಸ, ಎಲ್ಲಿ ಸೋತಿದ್ದೇನೋ ಅಲ್ಲೇ ಬೆಳೆದುನಿಲ್ಲುತ್ತೇನೆ ಎಂಬ ಪಂಥ- ಇವಿಷ್ಟನ್ನು ನಮ್ಮ ಯುವಕರು ಬೆಳೆಸಿಕೊಳ್ಳಲೇ ಬೇಕು. ಇಲ್ಲವಾದ ಯೌವನ ಎಂಬ ಬದುಕಿನ ಅಮೂಲ್ಯ ಅವಧಿಗೆ ಅರ್ಥವೇ ಇಲ್ಲ. ‘ನಿಮ್ಮನ್ನು ನೀವು ನಂಬಿ, ಜಗತ್ತು ನಿಮ್ಮ ಕಾಲಬುಡದಲ್ಲಿ ಬಂದು ಮಂಡಿಯೂರುತ್ತದೆ’ ಎಂಬ ವಿವೇಕಾನಂದರ ಒಂದು ಮಾತು ನಮ್ಮ ಯುವಕರ ಹೃದಯದಲ್ಲಿ ಬೆಚ್ಚಗೆ ಮನೆಮಾಡಿದರೆ ಅಷ್ಟೇ ಧಾರಾಳ ಸಾಕು.

- ಸಿಬಂತಿ ಪದ್ಮನಾಭ ಕೆ. ವಿ.

2 ಕಾಮೆಂಟ್‌ಗಳು:

Unknown ಹೇಳಿದರು...

ಸತ್ಯ ಸಾರ್.....
ಗೆಲುವು ಹಾಗೂ ಸೋಲು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು.
ಲೇಖನ ಚೆನ್ನಾಗಿದೆ ಸಾರ್..

Revanasiddesh ಹೇಳಿದರು...

ತುಂಬಾ ಚೆನ್ನಾಗಿದೆ ಸರ್ ಮನಸಿಗೆ ಮುಟ್ಟುವಂತ ಬರಹ