ಗುರುವಾರ, ಜನವರಿ 11, 2018

ಇದು ಯುವೋತ್ಕರ್ಷದ ಕಾಲ

ದಿನಾಂಕ: 07-01-2018ರ 'ವಿಜಯ ಕರ್ನಾಟಕ' - 'ಸಾಪ್ತಾಹಿಕ ಲವಲVK'ಯಲ್ಲಿ ಪ್ರಕಟವಾದ ಲೇಖನ

(UNEDITED)

ಯೌವ್ವನವೆಂದರೆ ಏನು ಸೊಗಸು! ಎಂಥಾ ಪ್ರಕಾಶ!
ಎಷ್ಟೊಂದು ಭ್ರಮೆಗಳು, ಆಕಾಂಕ್ಷೆಗಳು, ಕನಸುಗಳು!
ಅದು ಕೊನೆಯೇ ಇಲ್ಲದ ಕಥೆಯ ಆರಂಭವೆಂಬ ಪುಸ್ತಕ
ಅಲ್ಲಿ ಪ್ರತೀ ಹುಡುಗಿಯೂ ನಾಯಕಿ, ಪ್ರತೀ ಪುರುಷನೂ ಸ್ನೇಹಿತ!
ಹೀಗೆ ಸಾಗುತ್ತದೆ ಕವಿ ಹೆನ್ರಿ ಲಾಂಗ್‌ಫೆಲೋ ಕವಿತೆ. ಯೌವ್ವನವೆಂದರೆ ಹಾಗೆಯೇ ಅಲ್ಲವೇ? ಅದು ಎಲ್ಲವನ್ನೂ ಮೀರಿ ನಿಂತ ಹಿಮಾಲಯ ಪರ್ವತ. ಕನಸುಗಳ ಬಿಳಲುಗಳನ್ನು ಸುತ್ತಲೂ ಹರಡಿ ಇನ್ನೆಂದೂ ಬೀಳದಂತೆ ನೆಲಕಚ್ಚಿ ನಿಂತ ಬೃಹತ್ ಆಲದ ಮರ. ಎಂತಹ ಬಂಡೆಗಲ್ಲುಗಳನ್ನೂ ಲೆಕ್ಕಿಸದೆ ಕೊಳೆಕಳೆಗಳನ್ನು ತೊಳೆಯುತ್ತಾ ರಭಸದಿಂದ ಹರಿಯುವ ಮಹಾಪ್ರವಾಹ. ಎಂತಹ ಕಠಿಣ ಗುರಿಗಳನ್ನೂ ಬೇಧಿಸಿ ಮುನ್ನುಗ್ಗುವ ಛಾತಿಯುಳ್ಳ ಬೆಂಕಿಚೆಂಡು. ಆತ್ಮವಿಶ್ವಾಸವೇ ಯೌವ್ವನದ ಸ್ಥಾಯೀಭಾವ.

ಯುವಜನತೆಯ ಈ ಆತ್ಮವಿಶ್ವಾಸದ ಔನ್ನತ್ಯವನ್ನೇ ಎಷ್ಟೊಂದು ಸುಂದರವಾದ ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಯುವಕರ ಸಾರ್ವಕಾಲಿಕ ರೋಲ್ ಮಾಡೆಲ್ ಸ್ವಾಮಿ ವಿವೇಕಾನಂದರು: ಪ್ರತೀ ಮಗುವೂ ಒಬ್ಬ ಹುಟ್ಟು ಆಶಾವಾದಿ, ಅವನು ಬಂಗಾರದ ಕನಸುಗಳನ್ನು ಕಾಣುತ್ತಾನೆ. ಯೌವ್ವನದಲ್ಲಿ ಆತ ಇನ್ನಷ್ಟು ಆಶಾವಾದಿಯಾಗುತ್ತಾನೆ. ಸಾವೆಂಬುದೊಂದಿದೆ, ಸೋಲೆಂಬುದೊಂದಿದೆ ಎಂಬುದನ್ನು ನಂಬುವುದೂ ಅವನಿಗೆ ಕಷ್ಟ! ರಾಷ್ಟ್ರನಿರ್ಮಾಣದ ಕಾರ್ಯ ಇಂತಹ ಯುವಕರಿಂದಲೇ ಸಾಧ್ಯ ಹೊರತು ಕಷ್ಟಗಳಿಗೆ, ಸವಾಲುಗಳಿಗೆ ಹೆದರುವ ಪುಕ್ಕಲರಿಂದಲ್ಲ ಎಂಬುದು ಅವರ ದೃಢ ನಂಬಿಕೆಯಾಗಿತ್ತು.

ಸಾಧನೆಯ ಹಾದಿಯಲ್ಲಿ
ಆಧುನಿಕ ಬದುಕಿನ ಬಗ್ಗೆ ಒಂದು ಕ್ಷಣ ಕಣ್ಮುಚ್ಚಿ ಕುಳಿತು ಯೋಚಿಸಿದರೆ ಅದು ಒಡ್ಡಿರುವ ಒತ್ತಡಗಳು, ಸವಾಲುಗಳು ವಿಸ್ಮಯ ತರಿಸುತ್ತವೆ. ಬದುಕು ಎಷ್ಟೊಂದು ಬದಲಾಗಿ ಹೋಗಿದೆ! ಹುಟ್ಟಿದ್ದೇವೆ, ಒಂದಷ್ಟು ಶಿಕ್ಷಣ ಪಡೆದಿದ್ದೇವೆ, ಇನ್ನು ಏನಾದರೂ ಉದ್ಯೋಗ ಮಾಡಿಕೊಂಡು ಸಂಸಾರ ಮುನ್ನಡೆಸಿಕೊಂಡು ಬದುಕಬೇಕು ಎಂಬ ನಿರ್ಲಿಪ್ತ ಮನಸ್ಥಿತಿ ಈಗಿನದ್ದಲ್ಲ. ಎಲ್ಲರೂ ಒಂದಲ್ಲ ಒಂದು ದಿನ ಜೀವನ ಮುಗಿಸಲೇಬೇಕು, ಆದರೆ ಅದಕ್ಕೂ ಮೊದಲು ಏನಾದರೊಂದು ಸಾಧಿಸಬೇಕು; ಇತರರಿಗಿಂತ ಭಿನ್ನವಾಗಿ ನಿಲ್ಲಬೇಕು; ಹೊಸದನ್ನು ಮಾಡಿತೋರಿಸಬೇಕು- ಇದು ಇಂದಿನ ಯುವಕರ ಮನಸ್ಥಿತಿ.

ಈ ಮಂದಿಯೇಕೆ ಕುಟುಂಬಕ್ಕೂ ಸಮಯ ಕೊಡದಂತೆ ಹೀಗೊಂದು ರಣೋತ್ಸಾಹದಿಂದ ಓಡಾಟ ಒದ್ದಾಟಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಒಮ್ಮೊಮ್ಮೆ ಅನಿಸಿದರೂ ಒಂದು ಕ್ಷಣವನ್ನೂ ವ್ಯರ್ಥವಾಗಿ ಕಳೆಯಬಾರದೆಂಬ ಅವರ ತುಡಿತ, ಏನಾದರೂ ಸಾಧಿಸಬೇಕೆಂಬ ಅವರ ಹುಮ್ಮಸ್ಸು, ಎಲ್ಲವನ್ನೂ ನಾಜೂಕಾಗಿ ನಿಭಾಯಿಸಿಕೊಂಡು ಹೋಗುವ ಅವರ ಕೌಶಲಕ್ಕೆ ಮನಸ್ಸು ಶಹಭಾಸ್ ಎನ್ನುತ್ತದೆ. ಅದಕ್ಕೇ ಇರಬೇಕು ಹೆಲನ್ ಕೆಲ್ಲರ್ ಹೇಳಿದ್ದು: ಜಗತ್ತಿನಲ್ಲಿ ಯುವಕರು ಇರುವವರೆಗೆ ನಾಗರಿಕತೆ ಹಿಮ್ಮುಖವಾಗಿ ಚಲಿಸುವುದು ಸಾಧ್ಯವೇ ಇಲ್ಲ!

ವಿವೇಕಾನಂದರ ಇನ್ನೊಂದು ಮಾತು ಇಲ್ಲಿ ಉಲ್ಲೇಖನೀಯ: ನನಗೆ ನನ್ನ ದೇಶದ ಮೇಲೆ, ವಿಶೇಷವಾಗಿ ದೇಶದ ಯುವಕರ ಮೇಲೆ ವಿಶ್ವಾಸವಿದೆ... ಯಾವುದಕ್ಕೂ ಹೆದರಬೇಡಿ, ನೀವು ಅದ್ಭುತವಾದದ್ದನ್ನು ಸಾಧಿಸಬಹುದು. ನೀವು ಭಯಗೊಂಡ ಕ್ಷಣಕ್ಕೆ ನೀವು ಯಾರೂ ಅಲ್ಲ. ಜಗತ್ತಿನ ದುಃಖಕ್ಕೆ ಭಯವೇ ಅತಿದೊಡ್ಡ ಕಾರಣ. ಅದೇ ಪ್ರಪಂಚದ ಅತಿದೊಡ್ಡ ಮೂಢನಂಬಿಕೆ ಕೂಡಾ. ನಿರ್ಭಯತೆಯಿಂದ ಒಂದೇ ಕ್ಷಣದಲ್ಲಿ ಸ್ವರ್ಗವನ್ನೂ ಧರೆಗಿಳಿಸಬಹುದು. ಈ ಕೆಚ್ಚಿನ ನುಡಿಗಳಿಗಾಗಿಯೇ ವಿವೇಕಾನಂದರು ಇಂದಿಗೂ ಎಂದೆಂದಿಗೂ ನಮ್ಮ ಅಭಿಮಾನ ಗೌರವಗಳಿಗೆ ಪಾತ್ರರಾಗುತ್ತಾರೆ. ಎಚ್ಚರಿಕೆ ಹೇಳುವ ನೆಪದಲ್ಲಿ ಕುಗ್ಗಿಸುವವರು ನಮ್ಮ ಸುತ್ತಮುತ್ತ ಬೇಕಾದಷ್ಟು ಮಂದಿ ಸಿಗುತ್ತಾರೆ; ಮುಂದಕ್ಕೆ ಹೋಗು ನಾವಿದ್ದೇವೆ ನಿನ್ನ ಜತೆ ಎನ್ನುವವರ ಸಂಖ್ಯೆ ಕಡಿಮೆಯೇ. ಅಂತಹ ಸಂದರ್ಭ ಬಂದಾಗಲೆಲ್ಲ ವಿವೇಕವಾಣಿ ಯುವಕರ ಕಿವಿಗಳಲ್ಲಿ ಮಾರ್ದನಿಸಬೇಕು.

ಭಗತ್‌ಸಿಂಗ್, ಸಾವರ್ಕರ್, ರಾಜಗುರು, ಸುಖದೇವ್, ಗಾಂಧೀ, ಪಟೇಲ್, ಖುದಿರಾಮ್, ಮಂಗಲ್‌ಪಾಂಡೆ, ಆಜಾದ್, ತಿಲಕ್ ಮುಂತಾದವರೆಲ್ಲ ತಮ್ಮ ಏರು ಜವ್ವನದ ದಿನಗಳನ್ನು ದೇಶಕ್ಕಾಗಿ ಮುಡಿಪಾಗಿಡದೇ ಹೋಗಿರುತ್ತಿದ್ದರೆ ಇಂದು ನಾವು ಏನಾಗಿರುತ್ತಿದ್ದೆವು? ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನೊಮ್ಮೆ ಕಣ್ತೆರೆದು ನೋಡಿಕೊಂಡರೆ ಸಾಕು, ನಮ್ಮ ಯುವಕರಿಗೆ ಸಾಲುಸಾಲು ಮಾದರಿಗಳ ದರ್ಶನವಾಗುತ್ತದೆ. ಯೌವ್ವನದಲ್ಲಿ ದೃಢತೆಯನ್ನು ಹೊಂದುವ ವ್ಯಕ್ತಿಗಳು ಬಹಳ ಸಂತುಷ್ಟರು; ಆ ಉತ್ಸಾಹವನ್ನು ಜೀವನದುದ್ದಕ್ಕೂ ಕಾಯ್ದುಕೊಂಡವರು ಅವರಿಗಿಂತಲೂ ಮೂರು ಪಟ್ಟು ಸಂತುಷ್ಟರು ಎಂಬ ಮಾತಿದೆ. ಮೇಲೆ ಹೇಳಿರುವ ಹೆಸರುಗಳು ಅವರ ಬದುಕಿನ ನಂತರವೂ ಶತಮಾನಗಳ ಕಾಲ ಚಿರಮಾದರಿಗಳಾಗಿ ಯುವಜನಾಂಗದ ಎದುರು ಕಾಣಿಸಿಕೊಳ್ಳುತ್ತವೆ ಎಂದರೆ ಆ ಚೇತನಗಳಿಗೆ ಸಾವಿಲ್ಲ ಎಂದೇ ಅರ್ಥ.

ಹೊಳೆವ ತಾರೆಗಳು ಹಲವು
ಭಾರತದ ಮೊತ್ತಮೊದಲ ಫಾರ್ಮುಲಾ ವನ್ ರೇಸಿಂಗ್ ಡ್ರೈವರ್ ನಾರಾಯಣ್ ಕಾರ್ತಿಕೇಯನ್‌ಗೆ ಈಗಿನ್ನೂ ಮೂವತ್ತು ವರ್ಷ. ಜಗತ್ತಿನ ಮೊತ್ತಮೊದಲ ಅತಿಕಿರಿಯ ಮಹಿಳಾ ಚೆಸ್ ಗ್ರ್ಯಾಂಡ್‌ಮಾಸ್ಟರ್ ಕೊನೆರು ಹಂಪಿ ಆ ಹೆಗ್ಗಳಿಕೆಗೆ ಪಾತ್ರರಾದಾಗ ಆಕೆಯ ವಯಸ್ಸು ಕೇವಲ ಹದಿನೈದು. ಕ್ರಿಕೆಟ್ ಪ್ರಿಯರ ಕಣ್ಮಣಿ ವಿರಾಟ್ ಕೊಹ್ಲಿ, ಕೋಟ್ಯಂತರ ಅಭಿಮಾನಿಗಳನ್ನು ಪಡೆದಿರುವ ದೀಪಿಕಾ ಪಡುಕೋಣೆ, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್‌ನ ಭರವಸೆ ಸೈನಾ ನೆಹ್ವಾಲ್, ಗ್ರಾಮ್ಮಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡ ಅನುಷ್ಕಾ ಶಂಕರ್, ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್‌ನ ಸಿಇಒ ಸತ್ಯಾ ನಾದೆಲ್ಲ, ಜಗತ್ಪ್ರಸಿದ್ಧ ಗೂಗಲ್ ಕಂಪೆನಿಯ ಸಿಇಒ ಸುಂದರ್ ಪಿಚೈ, ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿಯ ಪದಕ ತಂದುಕೊಟ್ಟ ಮೊದಲ ಮಹಿಳೆ ಪಿ. ವಿ. ಸಿಂಧು... ತಮ್ಮ ಯೌವ್ವನದ ದಿನಗಳಲ್ಲೇ ಕೀರ್ತಿ ಶಿಖರ ಏರಿರುವ ಇಂತಹ ಸಾಧಕರ ಪಟ್ಟಿ ಮಾಡುತ್ತಾ ಹೋದರೆ ಪುಟಗಳು ಸಾಲವು. ಹೊರಗೆಲ್ಲೂ ಕಾಣಿಸಿಕೊಳ್ಳದೆ ತಾವಾಯಿತು ತಮ್ಮ ಕೆಲಸವಾಯಿತು ಎಂದು ತೆರೆಯ ಹಿಂದೆಯೇ ಇರುತ್ತಾ ಶ್ರೇಷ್ಠ ಕೆಲಸಗಳನ್ನು ಸಾಧಿಸುತ್ತಿರುವ ಮುತ್ತುರತ್ನಗಳು ಇನ್ನೆಷ್ಟು ಇವೆಯೋ!

ನಮ್ಮ ದೇಶಕ್ಕೆ ಇಂದು ಬೇಕಾಗಿರುವುದು ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಗಳು ಇರುವ ವ್ಯಕ್ತಿಗಳು. ಅವರು ದುರ್ದಮವಾದ ಪ್ರಪಂಚದ ರಹಸ್ಯವನ್ನೆಲ್ಲ ಭೇದಿಸಿ ತಮ್ಮ ಇಚ್ಛೆಯನ್ನು ನೆರವೇರಿಸಿಕೊಳ್ಳಬಲ್ಲವರಾಗಿರಬೇಕು. ಸಮುದ್ರದ ಆಳಕ್ಕೆ ಬೇಕಾದರೂ ಹೋಗಿ ಮೃತ್ಯುವನ್ನಾದರೂ ಎದುರಿಸಲು ಅವರು ಸಿದ್ಧರಾಗಿರಬೇಕು- ಹೀಗೆಂದು ವಿವೇಕಾನಂದರು ನುಡಿದು ಶತಮಾನವೇ ಉರುಳಿದೆ. ಆದರೆ ಇಂದಿಗೂ ಆ ಮಾತೇ ನಮಗೆ ಮಾದರಿ, ಅದೇ ಯುವಜನಾಂಗದ ಎದುರಿರುವ ಘೋಷವಾಕ್ಯ.

ಶ್ರೀಕಾಂತ್ ಬೊಲ್ಲ ಅವರ ಹೆಸರು ನೀವು ಕೇಳಿರಬಹುದು. ಆಂಧ್ರಪ್ರದೇಶ ಮೂಲದ ಹುಟ್ಟು ಅಂಧ. ವ್ಯವಸಾಯವನ್ನೇ ನಂಬಿದ್ದ ಕುಟುಂಬದಲ್ಲಿ ಕುರುಡು ಮಗುವೊಂದು ಜನಿಸಿದಾಗ ಅದು ಹುಟ್ಟಿಯೇ ಇಲ್ಲ ಎಂದು ಭಾವಿಸಿ ಉಸಿರುಗಟ್ಟಿಸಿ ಎಲ್ಲಾದರೂ ಎಸೆದುಬಿಡಿ ಎಂದು ಸಲಹೆ ಕೊಟ್ಟವರೂ ಇದ್ದರಂತೆ. ಆದರೆ ಅಪ್ಪ ಅಮ್ಮ ಅಷ್ಟೊಂದು ನಿರ್ದಯಿಗಳಾಗಿರಲಿಲ್ಲ. ನಿರ್ಲಕ್ಷ್ಯ ಅಪಮಾನಗಳ ನಡುವೆಯೇ ಶ್ರೀಕಾಂತ್ ಬೆಳೆದ, ಶಿಕ್ಷಣ ಪಡೆದ. ಹತ್ತನೇ ತರಗತಿ ಬಳಿಕ ವಿಜ್ಞಾನ ಓದುವುದಕ್ಕೆ ಅವನಿಗೆ ಅವಕಾಶ ನಿರಾಕರಿಸಲಾಯಿತು. ಛಲ ಬಿಡದ ಶ್ರೀಕಾಂತ್ ಆ ಅವಕಾಶ ಪಡೆದುಕೊಂಡು ಶೇ. ೯೮ ಅಂಕ ಗಳಿಸಿದ್ದಲ್ಲದೆ, ಉನ್ನತ ವ್ಯಾಸಂಗಕ್ಕೆ ಅಮೇರಿಕದ ಪ್ರತಿಷ್ಠಿತ ಎಂಐಟಿ ವಿಶ್ವವಿದ್ಯಾನಿಲಯದಲ್ಲಿ ಸೀಟು ಪಡೆದುಕೊಂಡ. ಮಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರವೇಶ ಪ್ರಡೆದ ಮೊತ್ತಮೊದಲ ಅಂತಾರಾಷ್ಟ್ರೀಯ ಅಂಧ ವಿದ್ಯಾರ್ಥಿ ಶ್ರೀಕಾಂತ್ ಬೊಲ್ಲ ಇಂದು ರೂ. ೫೦ ಕೋಟಿ ವ್ಯವಹಾರವುಳ್ಳ ಬೊಲ್ಲಾಂಟ್ ಇಂಡಸ್ಟ್ರೀಸ್‌ನ ಹೆಮ್ಮೆಯ ಮಾಲೀಕ. ಆತನಿಗಿನ್ನೂ ೨೫ ವರ್ಷ ವಯಸ್ಸು ಎಂದರೆ ಅವನಿಗೆ ಅವಕಾಶಗಳನ್ನು ನಿರಾಕರಿಸಿದ ಸಮಾಜವೇ ನಂಬುತ್ತಿಲ್ಲ!

ಯುವಕರ ಶಕ್ತಿಯ ಬಗ್ಗೆ ನಾವಿನ್ನೂ ಅನುಮಾನಗಳನ್ನು ಇಟ್ಟುಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಯುವಜನತೆಯಿಂದ ಜಗತ್ತಿನಲ್ಲಿ ನೂರಾರು ತಪ್ಪುಗಳು ಘಟಿಸುತ್ತಿರಬಹುದು. ಅವುಗಳನ್ನು ನಿವಾರಿಸಲು ಪ್ರಯತ್ನಿಸೋಣ; ಆದರೆ ಅದೇ ಯುವಜನತೆ ಮಾಡುತ್ತಿರುವ ಸಾವಿರಾರು ಸಾಹಸಗಳು ನಮ್ಮೆದೆಯ ನೆಮ್ಮದಿಯನ್ನು ಹೆಚ್ಚಿಸಲಿ, ಮನಸ್ಸುಗಳನ್ನು ತಂಪಾಗಿರಿಸಲಿ!

ಮಂಗಳವಾರ, ಜನವರಿ 2, 2018

ಚಾರಣ ಹೋಮ! ಒಂದು ಟ್ರೆಕ್ಕಿಂಗ್ ಸ್ಟೋರಿ


ಉದಯವಾಣಿ 'ಜೋಶ್' ಪುರವಣಿಯಲ್ಲಿ ಜನವರಿ 2, 2018ರಂದು ಪ್ರಕಟವಾದ ಲೇಖನ

'ಭಾನುವಾರ ಎಲ್ಲರೂ ಫ್ರೀ ಇದ್ದೀರೇನ್ರೋ? ನಿಮ್ಗೆಲ್ಲ ಓಕೆ ಅಂದ್ರೆ ದೇವರಾಯನದುರ್ಗಕ್ಕೆ ಒಂದು ಟ್ರೆಕ್ಕಿಂಗ್ ಹೋಗ್ಬರೋಣ’
ಅಂದಿದ್ದೇ ತಡ ಇನ್ನೇನು ಸೇತುವೆ ಕಟ್ಟಿಯೇ ಸಿದ್ಧ ಎಂದು ಹೊರಟ ವಾನರ ಸೈನ್ಯದಂತೆ ಇಡೀ ಕ್ಲಾಸು ಜೈ ಎಂದು ಎದ್ದು ನಿಂತಿತು. 'ಅಂದ್ರೆ ನಡ್ಕೊಂಡೇ ಹೋಗೋದಾ ಸಾರ್?’ ಎಂದು ಸೈನ್ಯದ ನಡುವಿನಿಂದ ಕೀರಲು ಅಶರೀರವಾಣಿಯೊಂದು ಕೇಳಿಬಂದದ್ದೂ, 'ಅಲ್ಲ ನನ್ ತಾತ ಫ್ಲೈಟ್ ತರ್ತಾರೆ, ಟೆನ್ಷನ್ ಮಾಡ್ಕೋಬೇಡ’ ಎಂದು ಮತ್ತೊಂದು ದನಿ ಛೇಡಿಸಿದ್ದೂ, 'ಟ್ರೆಕ್ಕಿಂಗ್ ಅಂದ್ರೆ ನಡ್ಕೊಂಡೇ ಹೋಗೋದು ಕಣಮ್ಮಾ’ ಎಂದು ಇನ್ನೊಬ್ಬ ಸ್ಪಷ್ಟೀಕರಣ ಕೊಟ್ಟಿದ್ದೂ ಮುಂದಿನ ಮೂರು ಕ್ಷಣಗಳಲ್ಲಿ ನಡೆದುಹೋಯಿತು.

ಹದಿನೈದೂ ಕಿ.ಮೀ ನಡ್ಕೊಂಡು ಹೋಗೋದು ಬೇಡ, ಆಮೇಲೆ ಬೆಟ್ಟ ಹತ್ತೋದಕ್ಕಾಗಲೀ ಇಳಿಯೋದಕ್ಕಾಗಲೀ ಬ್ಯಾಟರಿ ಉಳಿಯದೆ ಅಲ್ಲೇ ತಪಸ್ಸಿಗೆ ಕೂರುವ ಪರಿಸ್ಥಿತಿ ಬಂದೀತೆಂದು ಯೋಚನೆ ಮಾಡಿ ನಾಮದ ಚಿಲುಮೆಯವರೆಗೆ ಲೋಕಲ್ ಬಸ್ಸಿನಲ್ಲಿ ಹೋಗಿ ಅಲ್ಲಿಂದ ಮುಂದಕ್ಕೆ ನಡೆದುಕೊಂಡು ಹೋಗೋಣವೆಂದು ತೀರ್ಮಾನಿಸಿದ್ದಾಯಿತು.

ಹೊರಟಿತು ಸವಾರಿ
ಅಂತೂ ಭಾನುವಾರದ ಚುಮುಚುಮು ಮುಂಜಾನೆ ಎಲ್ಲರನ್ನೂ ಹೊತ್ತು ತುಮಕೂರಿನಲ್ಲೇ ವರ್ಲ್ಡ್‌ಫೇಮಸ್ಸಾದ ಡಕೋಟಾ ಬಸ್ಸು ಬೆಳಗುಂಬ ಗ್ರಾಮ ದಾಟಿ ಮುಂದಕ್ಕೆ ತೆವಳಿತು. ಅಪರೂಪಕ್ಕೆ ಹುಡುಗ ಹುಡುಗಿಯರಿಂದಲೇ ತುಂಬಿ ತೊನೆದಾಡುತ್ತಿದ್ದ ಬಸ್ಸು ಯಾವ ಕೋನದಿಂದ ನೋಡಿದರೂ ಮದುವೆ ದಿಬ್ಬಣಕ್ಕಿಂತ ಕಡಿಮೆಯಿರಲಿಲ್ಲ. ಅರ್ಧ ಗಂಟೆಯಲ್ಲಿ ನಾವು ನಾಮದ ಚಿಲುಮೆ ತಲುಪಿಯಾಗಿತ್ತು. ಜಿಂಕೆವನಕ್ಕೆ ಸುತ್ತು ಹಾಕಿ, ಬಂಡೆಗಲ್ಲಿನ ನಡುವೆ ವರ್ಷವಿಡೀ ಬತ್ತದೆ ಹರಿಯುವ ಚಿಲುಮೆಯನ್ನು ನೋಡಲು ಮುನ್ನುಗ್ಗಿತು ಕಪಿಸೇನೆ.

ವನವಾಸದ ವೇಳೆ ಕಾಡಿನಿಂದ ಕಾಡಿಗೆ ಸಂಚರಿಸುತ್ತಾ ಶ್ರೀರಾಮ ಈ ಪ್ರದೇಶಕ್ಕೆ ಬಂದಾಗ ನೀರಿನ ಸೆಲೆ ಕಾಣದೆ ತಾನೇ ಬಾಣ ಪ್ರಯೋಗಿಸಿ ಒರತೆಯೊಂದನ್ನು ಚಿಮ್ಮಿಸಿದ ಕತೆಯನ್ನು ತಾನೇ ಕಣ್ಣಾರೆ ಕಂಡಂತೆ ವರ್ಣಿಸಿದಳು ಅದೇ ಏರಿಯಾದ ಮೂಲನಿವಾಸಿ ಸವಿತಾ. ಅಲ್ಲೇ ಸಮೀಪದ ಕಲ್ಲುಮಂಟಪವನ್ನು ಏರಿ ಫೋಟೋ ಸೆಶನ್ ಮುಗಿಸಿಕೊಂಡ ಮೇಲೆ ಆರಂಭವಾಯಿತು ನಿಜವಾದ ಟ್ರೆಕ್ಕಿಂಗ್.

ನಡೆ ಮುಂದೆ ನಡೆ ಮುಂದೆ
ತಂದಾನಿ ತಾನೋ ತಾನಿ ತಂದಾನೋ ಎಂದು ಕೈಕೈ ಹಿಡಿದು ಹುಡುಗಿಯರ ತಂಡ ಮುಂದುವರಿದರೆ ಡಕ್ಕಣಕಾ ಣಕಾ ಜಕಾ ಎಂದು ತಮ್ಮದೇ ಸ್ಟೈಲಲ್ಲಿ ಹೆಜ್ಜೆ ಹಾಕುತ್ತಾ ತಿರುವುಗಳಲ್ಲಿ ಸಾಗಿ ಬೆಟ್ಟದ ಬುಡ ತಲುಪಿತು ಹುಡುಗರ ಗಡಣ. ದುರ್ಗದ ಬಾಗಿಲಲ್ಲಿರುವ ಯೋಗಾನರಸಿಂಹಸ್ವಾಮಿ ದೇವಾಲಯದ ಎದುರೇ ಮನೆಕಟ್ಟಿಕೊಂಡಿರುವ ಕವಿತಾ ಜ್ಯೂಸು ಪಾನಕಗಳೊಂದಿಗೆ ಆಗಲೇ ಸಿದ್ಧವಾಗಿದ್ದರಿಂದ ಬೆಟ್ಟವೇರುವ ಸೈನ್ಯದ ಉತ್ಸಾಹ ಇಮ್ಮಡಿಸಿತು. ತಮ್ಮ ತಮ್ಮ ಟ್ಯಾಂಕ್‌ಗಳನ್ನು ಮತ್ತೊಮ್ಮೆ ಭರ್ತಿ ಮಾಡಿಕೊಂಡ ಹುಡುಗರು ಬೆಟ್ಟದತ್ತ ಸರಭರನೆ ಹೆಜ್ಜೆಯಿಟ್ಟೇಬಿಟ್ಟರು.

ಬ್ಯಾಗ್ ಹೊತ್ತೊಯ್ದ ಕೋತಿ
ಹುಡುಗಿಯರು ಸಲೀಸಾದ ಡಾಂಬಾರು ರಸ್ತೆಯಲ್ಲಿ ಗುಂಪುಗುಂಪಾಗಿ ಗೀಗೀಪದ ಹೊಸೆದುಕೊಂಡು ಸಾಗಿದರೆ ಹುಡುಗರು ತಮ್ಮ ಸಹಜ ಧರ್ಮವನ್ನು ಬಿಡಲಾಗದೆ ಕಲ್ಲುಬಂಡೆಗಳ ನಡುವೆ ಹಾದಿ ಹುಡುಕಿಕೊಂಡು ಏರತೊಡಗಿದರು. ದೇವರಾಯನದುರ್ಗವೆಂದರೆ ಕೇಳಬೇಕೇ? ತಮ್ಮ ಸ್ನೇಹಿತ ವರ್ಗ ಬರುತ್ತಿದೆಯೆಂದು ಮೊದಲೇ ತಿಳಿದವರಂತೆ ಕಾದುಕುಳಿತಿದ್ದವು ನೂರಾರು ಕೋತಿಗಳು. ತಮಗಿಂತಲೂ ಚೆನ್ನಾಗಿ ಬೆಟ್ಟವೇರಲು ಗೊತ್ತಿದ್ದ ಹುಡುಗರನ್ನು ಕಂಡು ಸೋಜಿಗದಿಂದ ತಾವೂ ಮರದಿಂದ ಮರಕ್ಕೆ ನೆಗೆಯುತ್ತಾ ಹಿಂಬಾಲಿಸಿಯೇಬಿಟ್ಟವು. ಚುರುಮುರಿ ಸೌತೆಕಾಯಿ ಮೆಲ್ಲುತ್ತಾ ಬೆಟ್ಟದ ತಪ್ಪಲಿನ ರಮಣೀಯ ಹಸಿರನ್ನು ನಿರಾಳವಾಗಿ ಕಣ್ತುಂಬಿಕೊಳ್ಳುತ್ತಿದ್ದ ಹುಡುಗಿಯರ ಗುಂಪೊಂದು ಕಿಟಾರನೆ ಕಿರುಚಿಕೊಂಡಾಗಲೇ ಕೋತಿಗಳ ನಿಜವಾದ ಕೌಶಲ ಎಲ್ಲರಿಗೂ ಅರ್ಥವಾದದ್ದು. ಕೆಂಪು ಮೂತಿಯ ದಢೂತಿ ಗಡವವೊಂದು ಅನಿತಳ ಹೊಚ್ಚಹೊಸ ಹ್ಯಾಂಡ್‌ಬ್ಯಾಗನ್ನು ಸರಕ್ಕನೆ ಲಪಟಾಯಿಸಿಕೊಂಡು ಹೋಗಿ ಮರದ ತುದಿಯಲ್ಲಿ ಪ್ರತಿಷ್ಠಾಪಿತವಾಗಿತ್ತು.

ಮಿಷನ್ ಬ್ಯಾಗ್ ವಾಪಸಿ
ಜಗತ್ತನ್ನೇ ಗೆದ್ದು ಬರುವ ಉತ್ಸಾಹದಲ್ಲಿ ಬೀಗುತ್ತಿದ್ದ ಹುಡುಗರಿಗೆ ಕೋತಿಯ ಕೈಯಿಂದ ಬ್ಯಾಗನ್ನು ಪಡೆಯುವ ಕೆಲಸ ಮಾತ್ರ ಹರಸಾಹಸವಾಯಿತು. ಮರದಿಂದ ಮರಕ್ಕೆ ಬಂಡೆಯಿಂದ ಬಂಡೆಗೆ ಬ್ಯಾಗ್ ಸಮೇತ ನೆಗೆಯುತ್ತಾ ಕೋತಿ ಮಜಾ ತೆಗೆದುಕೊಳ್ಳುತ್ತಿದ್ದರೆ ಬ್ಯಾಗಿನ ಒಳಗೆ ಪ್ರಾಣವನ್ನೆಲ್ಲಾ ಪ್ಯಾಕ್ ಮಾಡಿಟ್ಟಿದ್ದ ಹುಡುಗಿಯ ಕಣ್ಣುಗಳಿಂದ ಸ್ವತಃ ಜಯಮಂಗಲಿಯೇ ಧಾರಾಕಾರವಾಗಿ ಹರಿಯುತ್ತಿದ್ದಳು. ಅಂತೂ ಹದಿನೈದು ನಿಮಿಷ ಹೋರಾಡಿ ಹುಡುಗರೆಲ್ಲ ಸೋಲೊಪ್ಪಿಕೊಂಡ ಬಳಿಕ ಬ್ಯಾಗನ್ನು ಬಂಡೆಯೊಂದರ ತುದಿಯಲ್ಲಿ ಬಿಟ್ಟು ಮಾಯವಾಯಿತು ಮಂಗ.

ಮರಳಿ ಮನೆಗೆ
ಬೆಟ್ಟದ ತುದಿ ತಲುಪಿ ದುರ್ಗವೇ ಬೆಚ್ಚಿಬೀಳುವಂತೆ ಡ್ಯಾನ್ಸ್ ಮಾಡಿ ಇದ್ದ ಏಕೈಕ ಕೂಲಿಂಗ್ ಗ್ಲಾಸನ್ನೇ ಒಬ್ಬರಾದಮೇಲೊಬ್ಬರಂತೆ ತೊಟ್ಟು ಫೋಟೋ ಹೊಡೆಸಿಕೊಳ್ಳುವ ಹೊತ್ತಿಗೆ ಚಿಪ್ಸು ಪಪ್ಸಾದಿ ಸರಕುಗಳೆಲ್ಲ ಬಹುತೇಕ ಖಾಲಿಯಾಗಿದ್ದವು. ಮಟಮಟ ಮಧ್ಯಾಹ್ನದ ಬಿಸಿಲಿನ ನಡುವೆಯೇ ಬೆಟ್ಟವಿಳಿದು ರಸ್ತೆ ಸೇರಿದಾಗ ಮತ್ತೆ ನಡೆದುಕೊಂಡು ನಗರ ಸೇರುವ ಉತ್ಸಾಹ ಯಾರಿಗೂ ಉಳಿದಿರಲಿಲ್ಲ. ನಡೆದುಕೊಂಡೇ ವಾಪಸ್ ಬಂದೆವೆಂದು ಮರುದಿನ ಪ್ರಚಾರ ಮಾಡುವುದೆಂಬ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದ ಮೇಲೆ ಎಲ್ಲರೂ ಮತ್ತದೇ ಸೂಪರ್ ಡಿಲಕ್ಸ್ ಬಸ್ ಹತ್ತಿದ್ದಾಯಿತು.

ಮಾನವೀಯತೆಯೆಂಬ ದೈವತ್ವ

'ಬೋಧಿವೃಕ್ಷ' 16-22 ಡಿಸೆಂಬರ್ 2017 ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಅವನು ದನಮಾಝಿ. ಒಡಿಶಾ ಜಿಲ್ಲೆಯ ಬುಡಕಟ್ಟು ಜನಾಂಗಕ್ಕೆ ಸೇರಿದ ಕಡುಬಡವ. ಕ್ಷಯರೋಗದಿಂದ ನರಳುತ್ತಿದ್ದ ಪತ್ನಿಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದ. ಆದರೆ ಅದೃಷ್ಟ ಕೈಹಿಡಿಯಲಿಲ್ಲ, ಪ್ರಾರ್ಥನೆಗಳು ಫಲಿಸಲಿಲ್ಲ. ಸಾವು ಬದುಕಿನ ನಡುವೆ ಹೋರಾಡಿದ ಆಕೆ ಎರಡು ದಿನಗಳ ಬಳಿಕ ಸಾವನ್ನಪ್ಪಿದಳು. ಇನ್ನೀಗ ಶವವನ್ನು ಊರಿಗೆ ಸಾಗಿಸಬೇಕು, ಅಂತ್ಯಕ್ರಿಯೆ ನಡೆಸಬೇಕು. ಬರಿಗೈದಾಸ ದನಮಾಝಿ ಬಾಡಿಗೆಗೆ ವಾಹನ ಗೊತ್ತುಮಾಡಿ ಶವವನ್ನು ಒಯ್ಯುವ ಸ್ಥಿತಿಯಲ್ಲಿರಲಿಲ್ಲ. ಒಂದು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಎಂದು ಆಸ್ಪತ್ರೆ ಸಿಬ್ಬಂದಿಯನ್ನು ಗೋಗರೆದ. ಅವರೆಲ್ಲ ಬಂಡೆಗಲ್ಲುಗಳಂತೆ ಕುಳಿತಿದ್ದರು. ಪುಡಿಗಾಸೂ ಇಲ್ಲದ ಬಡಪಾಯಿಗೆ ನೆರವಾಗಿ ಅವರಿಗೇನೂ ಆಗಬೇಕಿರಲಿಲ್ಲ. ದನಮಾಝಿಗೆ ಬೇರೆ ದಾರಿಯಿರಲಿಲ್ಲ. ಹೆಂಡತಿಯ ಕಳೇಬರವನ್ನು ಬಟ್ಟೆಯಿಂದ ಸುತ್ತಿ ಹೆಗಲ ಮೇಲೆ ಹೊತ್ತು ನಡೆದೇ ನಡೆದ. ಒಂದೆರಡು ಫರ್ಲಾಂಗು ದೂರವಲ್ಲ, ಬರೋಬ್ಬರಿ ಹತ್ತು ಮೈಲಿ! ಅವನ ಹಿಂದೆಯೇ ಕಣ್ಣೀರಧಾರೆಯೊಂದಿಗೆ ಹೆಜ್ಜೆಹಾಕುತ್ತಿದ್ದಳು ಹನ್ನೆರಡು ವರ್ಷದ ಅಸಹಾಯಕ ಮಗಳು.

ಈ ಘಟನೆ ಕಂಡ ಕೆಲವು ಸ್ಥಳೀಯ ಪತ್ರಕರ್ತರು ಜಿಲ್ಲಾಡಳಿತಕ್ಕೆ ಸುದ್ದಿ ಮುಟ್ಟಿಸಿ, ಕೊನೆಗೂ ಅಂಬ್ಯುಲೆನ್ಸ್ ತರಿಸುವ ವ್ಯವಸ್ಥೆ ಮಾಡಿದರು. ಪತ್ನಿಯ ಶವ ಹೊತ್ತು ಮಗಳೊಂದಿಗೆ ಸಾಗುವ ದನಮಾಝಿಯ ದೌರ್ಭಾಗ್ಯವನ್ನು ಮರುದಿನ ಪತ್ರಿಕೆ-ಟಿವಿಗಳಲ್ಲಿ ಕಂಡ ಜನರು ಅಯ್ಯೋ ಎಂದು ಮರುಗಿದರು. ಆದರೆ ಕಾಲ ಮಿಂಚಿತ್ತು. ಈ ಪರಿಸ್ಥಿತಿಗೆ ಕಾರಣರಾದ ಮಂದಿಯ ಅಮಾನವೀಯತೆ ಜಗಜ್ಜಾಹೀರಾಗಿತ್ತು. ಗೌರವಯುತ ಬದುಕಂತೂ ಸಿಗಲಿಲ್ಲ, ಗೌರವಯುತವಾಗಿ ಸಾಯುವುದಕ್ಕೂ ನಿಮ್ಮಲ್ಲಿ ಅವಕಾಶವಿಲ್ಲವೇ ಎಂದು ಜಗತ್ತೇ ಕೇಳಿತು.

ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದುಹೋಗಿವೆ. ಬಡವ-ಹಿಂದುಳಿದವನೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಶವವನ್ನು ಹೆಗಲ ಮೇಲೆ ಹೊತ್ತು ಹತ್ತಾರು ಮೈಲಿ ನಡೆಯುವ ಪರಿಸ್ಥಿತಿ ನಮ್ಮಲ್ಲಿದೆ ಎಂದಾದರೆ ನಮ್ಮ ಸ್ವಾತಂತ್ರ್ಯಕ್ಕಾಗಲೀ ಅಭಿವೃದ್ಧಿಗಾಗಲೀ ಮಾನವೀಯತೆಗಾಗಲೀ ಏನರ್ಥ? ಇನ್ನೊಬ್ಬನ ಕಷ್ಟಕ್ಕೆ ಮರುಗಲಾರದ ಮನಸ್ಸುಗಳು ಯಾವ ಹುದ್ದೆಯಲ್ಲಿದ್ದರೇನು, ಎಷ್ಟು ಸಂಪಾದಿಸಿದರೇನು? ದಯೆ, ಅನುಕಂಪ, ಸಹಾನುಭೂತಿ, ಪ್ರೀತಿ, ವಿಶ್ವಾಸಗಳಿಗೆ ಜಾತಿ-ಮತ-ಧರ್ಮ-ಪಂಥಗಳ ಹಂಗಿದೆಯೇ? ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು, ಸುಡುವಗ್ನಿಯೊಂದೇ ಇರುತಿರಲು, ಕುಲಗೋತ್ರ ಎತ್ತಣದು ಎಂಬ ಸರ್ವಜ್ಞಕವಿಯ ಮಾತು ಇನ್ನೂ ಒಂದು ಶತಮಾನ ದಾಟಿದರೂ ನಮ್ಮ ಸಮಾಜದ ನರನಾಡಿಗಳಲ್ಲಿ ಹರಿದಾಡುವುದೇ?

ಇಡೀ ಜಗತ್ತು ನಿಂತಿರುವುದೇ ಮಾನವೀಯತೆ-ನಂಬಿಕೆಗಳೆಂಬ ಪರಮ ಸತ್ಯಗಳ ಮೇಲೆ. ಭೂಮಿಯ ಮೇಲೆ ಮನುಷ್ಯ ಹುಟ್ಟಿಕೊಂಡಾಗ ಅವನಿಗೆ ಯಾವ ಜಾತಿಯಿತ್ತು? ಅವನು ಯಾವ ಮತಕ್ಕೆ ಸೇರಿದವನಾಗಿದ್ದ? ಹಾಗಾದರೆ ಇವೆಲ್ಲ ಹೇಗೆ ಹುಟ್ಟಿಕೊಂಡವು? ಇದು ಮೇಲ್ಜಾತಿ, ಅದು ಕೀಳ್ಜಾತಿ, ಇದು ಶ್ರೇಷ್ಠ ಕುಲ, ಅದು ಕನಿಷ್ಠ ಕುಲ ಎಂದು ವಿಂಗಡಣೆ ಮಾಡಿದವರು ಯಾರು? ಬಾಯಾರಿದವನಿಗೆ ಬೇಕಾದದ್ದು ನೀರು. ಹಸಿದವನಿಗೆ ಬೇಕಾದದ್ದು ಊಟ. ಜೀವ ಉಳಿಸಿಕೊಳ್ಳಲು ಬೇಕಾದದ್ದು ಗಾಳಿ. ಈ ನೀರು-ಗಾಳಿ-ಆಹಾರವೆಲ್ಲ ಯಾರ ಆಸ್ತಿ? ಯಾವ ಜಾತಿಗೆ ಸೇರಿದ್ದು? ಯಾವ ಕುಲಕ್ಕೆ ಸೇರಿದ್ದು? ಯಾವ ಧರ್ಮಕ್ಕೆ ಸೇರಿದ್ದು?

ನೀರಡಿಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನಗೊರೆಯಬೇಕೇನು?
ನೊಂದವನ ಕಂಬನಿಯನೊರೆಸಿ ಸಂತೈಸುವೊಡೆ
ಶಾಸ್ತ್ರಪ್ರಮಾಣವದಕಿರಲೆ ಬೇಕೇನು?
ಎಂದು ಕೇಳುತ್ತಾರೆ ಮಹಾಕವಿ ಕುವೆಂಪು. ಅವರ ಪ್ರಕಾರ 'ನಮ್ಮ ಹೃದಯವೇ ನಮಗೆ ಶ್ರೀಧರ್ಮಸೂತ್ರ’. ಸರಿಯಾದುದನ್ನು ಮಾಡಲು, ಇನ್ನೊಬ್ಬರಿಗೆ ಒಳ್ಳೆಯದನ್ನು ಬಯಸಲು ಯಾರು ಯಾರನ್ನೂ ಕೇಳಬೇಕಿಲ್ಲ. ಏಕೆಂದರೆ ಯಾರೂ ಮಾತನಾಡದಿದ್ದಾಗ ಕೇಳಿಸುವ ಮಾತು ಒಂದೇ- ಅದು ಅಂತರಂಗದ ಮಾತು. ಅದೇ ಮಾನವೀಯತೆ. ಅದು ಜೀವಂತವಾಗಿರುವುದರಿಂದಲೇ ಜಗತ್ತಿನಲ್ಲಿ ಇನ್ನೂ ಪ್ರಳಯವಾಗಿಲ್ಲ. ಅದನ್ನು ಬೊಟ್ಟು ಮಾಡಿಯೇ ಕವಿ ಕೇಳಿರುವುದು:
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದು. 'ಎದೆಯ ದನಿ ಧರ್ಮನಿಧಿ! ಕರ್ತವ್ಯವದುವೆ ವಿಧಿ! ನಂಬದನು! ಅದನುಳಿದು ಋಷಿಯು ಬೇರಿಲ್ಲ!’ ಎಂಬ ಸಾಲಿನಲ್ಲೂ ಮನಸ್ಸಿನ ಮಾತಿಗಿಂತ ದೊಡ್ಡ ಶಾಸ್ತ್ರಪ್ರಮಾಣ ಇನ್ನೊಂದಿಲ್ಲ ಎಂಬ ಮಹಾಭಾಷ್ಯವಿದೆ.

ದಿನಬೆಳಗಾದರೆ ನೂರೆಂಟು ಬಗೆಯ ಸಂಕಟದ ಸುದ್ದಿಗಳನ್ನು ಕೇಳುತ್ತೇವೆ, ಹತ್ತಾರು ಅಮಾನವೀಯ ಘಟನೆಗಳನ್ನು ನೋಡುತ್ತೇವೆ: ವರದಕ್ಷಿಣೆಗೆ ಪೀಡಿಸಿ ಹೆಣ್ಣಿನ ಹತ್ಯೆ, ಸಾಲ ತೀರಿಸಲಿಲ್ಲ ಎಂಬ ಕಾರಣಕ್ಕೆ ಜೀತ, ಕೆಳಜಾತಿಯವರೆಂಬ ಕಾರಣಕ್ಕೆ ದೇವಾಲಯ ಪ್ರವೇಶ ನಿಷೇಧ, ಸ್ತ್ರೀಭ್ರೂಣ ಹತ್ಯೆ, ಬಾಲಕಾರ್ಮಿಕ ಪಿಡುಗು, ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ... ನಾವು ಯಾವ ಯುಗದಲ್ಲಿ ಬದುಕುತ್ತಿದ್ದೇವೆ? ಅತ್ಯಾಚಾರ ಮಾಡಿದರೆ ನಾಳೆ ಗಲ್ಲುಶಿಕ್ಷೆ ಕಾದಿದೆ ಎಂಬ ಅರಿವಿಲ್ಲದೆ ಪ್ರತಿದಿನವೆಂಬಂತೆ ಸಾಮೂಹಿಕ ಅತ್ಯಾಚಾರಗಳು ನಡೆಯುತ್ತವೆಯೇ? ಖಂಡಿತ ಇಲ್ಲ. ಅವರಿಗದು ಚೆನ್ನಾಗಿಯೇ ತಿಳಿದಿದೆ. ಮರೆತು ಹೋಗುವ ಮಾನವೀಯತೆ, ಅದರಿಂದಾಗಿ ಮನಸ್ಸಿಗೆ ಕವಿಯುವ ಮಬ್ಬು, ತನ್ನಂತೆ ಪರರ ಬಗೆವ ಕನಿಷ್ಠ ಮನಸ್ಥಿತಿ ಇಲ್ಲದಿರುವುದೇ ಎಲ್ಲ ಪೈಶಾಚಿಕತೆಗಳಿಗೂ ಕಾರಣ.

ಕಳೆದ ವರ್ಷ ಹೊಸದಿಲ್ಲಿಯಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಳ್ಳಿ: ರಸ್ತೆ ಅಪಘಾತಕ್ಕೆ ತುತ್ತಾದ ವ್ಯಕ್ತಿಯೊಬ್ಬ ನೆರವಿಗೆ ಅಂಗಲಾಚುತ್ತ ರಕ್ತದ ಮಡುವಿನಲ್ಲಿ ಸುಮಾರು ಒಂದು ಗಂಟೆ ಹೊತ್ತು ಬಿದ್ದಿದ್ದು ಆಮೇಲೆ ಕೊನೆಯುಸಿರೆಳೆದ. ಹತ್ತಿರದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿತ್ತು. ಅದರ ಪ್ರಕಾರ ಒಬ್ಬ ವ್ಯಕ್ತಿ ಅಪಘಾತಕ್ಕೀಡಾದವನ ಮೊಬೈಲನ್ನೇ ಎತ್ತಿಕೊಂಡು ಹೋಗಿದ್ದ; ಹತ್ತಾರು ಮಂದಿ ವೀಡಿಯೋ ಮಾಡಿಕೊಂಡಿದ್ದರು; ಈ ಅವಧಿಯಲ್ಲಿ ಸುಮಾರು ನೂರೈವತ್ತು ಕಾರುಗಳು, ಎಂಬತ್ತು ರಿಕ್ಷಾಗಳು, ಇನ್ನೂರು ಬೈಕ್‌ಗಳು ಆ ದಾರಿಯಾಗಿ ಹಾದು ಹೋಗಿದ್ದವು, ಹಲವಾರು ಪಾದಚಾರಿಗಳು ನಡೆದುಹೋಗಿದ್ದರು. ಆದರೆ ಯಾರೊಬ್ಬರೂ ಅವನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿರಲಿಲ್ಲ. ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿದ್ದರೆ ಅವನ ಪ್ರಾಣ ಉಳಿಯುತ್ತಿತ್ತು.

ಇಂತಹ ಅನೇಕ ಘಟನೆಗಳು ನಮ್ಮ ಜೀವನದಲ್ಲಿ ನಡೆಯುತ್ತಲೇ ಇರುತ್ತವೆ. ಅಪಘಾತ ನಡೆದು ಗಾಯಾಳುಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಅವರ ನೆರವಿಗೆ ಧಾವಿಸುವುದಕ್ಕೆ ಜನರಿಗೆ ಭಯ. ಎಲ್ಲಿ ಆಸ್ಪತ್ರೆಗೆ ಸೇರಿಸಿದವರನ್ನೇ ಪೊಲೀಸರು ಹಿಡಿದುಕೊಳ್ಳುತ್ತಾರೋ, ನಾಳೆ ಸಾಕ್ಷಿ ಹೇಳಲು ಕೋರ್ಟು ಕಚೇರಿಗಳಿಗೆ ಅಲೆದಾಡಬೇಕಾಗುತ್ತದೋ ಎಂಬ ಆತಂಕ. ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸೇರಿಸಲು ಹಿಂದೆಮುಂದೆ ನೋಡಬೇಡಿ ಎಂದು ಖುದ್ದು ಸರ್ವೋಚ್ಛ ನ್ಯಾಯಾಲಯವೇ ಹೇಳಿದ್ದರೂ ಜನ ತಮಗೇಕೆ ಇಲ್ಲದ ತಂಟೆಯೆಂದು ಪಲಾಯನ ಮಾಡುವುದಿದೆ.

ಹಾಗೆಂದು ಇಡೀ ಲೋಕವೇ ಕೆಟ್ಟು ಹೋಗಿದೆಯೆಂದು ನಿರಾಶೆ ತಾಳಬೇಕಿಲ್ಲ. ಎಂತಹ ವಿಷಮ ಪರಿಸ್ಥಿತಿಯಲ್ಲೂ ಪರರಿಗೆ ಉಪಕರಿಸುವ ಉನ್ನತ ಮನಸ್ಥಿತಿಯ ಸಾವಿರಾರು ಮಂದಿ ನಮ್ಮ ನಡುವೆ ಇದ್ದಾರೆ. ಗರ್ಭಿಣಿಯರು, ವಿಕಲಾಂಗರು, ವೃದ್ಧರು, ಅಶಕ್ತರು, ಮಕ್ಕಳು, ಅಸಹಾಯಕರಿಗೆ ನೆರವಾಗುವ ನೂರೆಂಟು ಮಾನವೀಯ ಹೃದಯಗಳೂ ನಮ್ಮ ನಡುವೆ ಇವೆ. ಇವರನ್ನು ಕಂಡಾಗಲೆಲ್ಲ ಗಾಂಧೀಜಿಯವರ ಭರವಸೆ ಕಣ್ಣೆದುರಿಗೆ ಬರುತ್ತದೆ: 'ಮಾನವತೆಯಲ್ಲಿ ನಂಬಿಕೆ ಕಳೆದುಕೊಳ್ಳಬೇಡಿ. ಅದೊಂದು ಮಹಾಸಾಗರವಿದ್ದಂತೆ. ಸಾಗರದ ಕೆಲವು ಬಿಂದುಗಳು ಕೊಳಕಾಗಿವೆಯೆಂಬ ಕಾರಣಕ್ಕೆ ಇಡೀ ಸಾಗರವೇ ಕೊಳಕಾಗುವುದಿಲ್ಲ’. ಅಲ್ಲವೇ?