ಭಾನುವಾರ, ಏಪ್ರಿಲ್ 15, 2018

ಪಾಸ್ ಮಾಡುವುದೇ ಪರಮ ಗುರಿ

ಏಪ್ರಿಲ್ 15, 2018ರ 'ವಿಜಯವಾಣಿ' ಪತ್ರಿಕೆಯ ಸಾಪ್ತಾಹಿಕ 'ವಿಜಯ ವಿಹಾರ'ದಲ್ಲಿ ಪ್ರಕಟವಾದ ಲೇಖನ

'ಮೈಹುಷಾರಿಲ್ದೇ ಏನೇನೂ ಓದಕ್ಕಾಗಿಲ್ಲ ಸಾರ್. ದಯಮಾಡಿ ಇದೊಂದು ಸಲ ಪಾಸ್ ಮಾಡಿ. ಪರೀಕ್ಷೆ ಬರೆಯೋಕೆ ಇದು ನಂಗೆ ಕೊನೇ ಅವಕಾಶ ಸಾರ್. ಹೇಗಾದರೂ ಮಾಡಿ ಪಾಸ್ ಮಾಡಿ ಪ್ಲೀಸ್. ನಿಮ್ಮ ಮಗ ಅಂತ ತಿಳಿದುಕೊಳ್ಳಿ...’ ಪ್ರತೀ ಬಾರಿ ಮೌಲ್ಯಮಾಪನ ಮಾಡುವಾಗಲೂ ಕೊನೆಯ ಪುಟದಲ್ಲಿ ಈ ಬಗೆಯ ಒಕ್ಕಣೆಗಳುಳ್ಳ ಉತ್ತರ ಪತ್ರಿಕೆಗಳು ಒಂದೆರಡಾದರೂ ದೊರೆಯುವುದು ಸಾಮಾನ್ಯ.

ವಿದ್ಯಾರ್ಥಿಗಳು ತಮಾಷೆಯ ಉದ್ದೇಶಕ್ಕೆ ಹೀಗೆ ಬರೆದಿದ್ದಾರೆ ಎಂದು ನನಗೆಂದೂ ಅನಿಸಿಯೇ ಇಲ್ಲ. ಇವುಗಳಲ್ಲಿ ಬಹುತೇಕ ಪ್ರಾಮಾಣಿಕ ಬೇಡಿಕೆಗಳೇ. ಸೆಮಿಸ್ಟರ್ ಉದ್ದಕ್ಕೂ ಉಡಾಫೆಯಿಂದಲೇ ಕಾಲಯಾಪನೆ ಮಾಡುವ ಮಹಾನುಭಾವರೂ ಪರೀಕ್ಷಾ ಕೊಠಡಿಯಲ್ಲಿ ತಮಾಷೆ ಮಾಡುವ ಮನಸ್ಥಿತಿಯಲ್ಲಿ ಖಂಡಿತ ಇರುವುದಿಲ್ಲ.

ವಾಸ್ತವವಾಗಿ ಹುಡುಗರನ್ನು ಫೇಲ್ ಮಾಡಲೇಬೇಕು ಎಂಬ ಉದ್ದೇಶ ಯಾವ ಮೌಲ್ಯಮಾಪಕನಿಗೂ ಇರುವುದಿಲ್ಲ. ಯಾರೂ ಫೇಲ್ ಆಗದಿರಲಪ್ಪಾ ಎಂಬ ಆಶಯದೊಂದಿಗೇ ಪ್ರತೀ ಬಾರಿಯೂ ಉತ್ತರ ಪತ್ರಿಕೆಗಳ ಪ್ಯಾಕೆಟ್ ಅನ್ನು ತೆರೆಯುವುದು ಮೌಲ್ಯಮಾಪಕರ ಸಾಮಾನ್ಯ ಗುಣ. ದುರದೃಷ್ಟವಶಾತ್ ಕೆಲವೊಮ್ಮೆ ಮೊತ್ತಮೊದಲ ಅಭ್ಯರ್ಥಿಯೇ ಫೇಲ್ ಆಗಿ ಮನಸ್ಸಿಗೆ ಪಿಚ್ಚೆನಿಸುವುದುಂಟು.

'ಪ್ಲೀಸ್ ಪಾಸ್ ಮಾಡಿ’ ಎಂಬ ಕೋರಿಕೆಯ ಮೇರೆಗೋ, ಮೊತ್ತಮೊದಲ ಉತ್ತರ ಪತ್ರಿಕೆ ಎಂಬ ಕಾರಣಕ್ಕೋ ತೀರಾ ಕಳಪೆಯಾಗಿರುವ ಉತ್ತರ ಪತ್ರಿಕೆಯನ್ನು ಪಾಸ್ ಮಾಡಲು ಬರುವುದಿಲ್ಲ. ಅದು ಮೌಲ್ಯಮಾಪಕನ ನಿಷ್ಠೆ ಮತ್ತು ಪ್ರಾಮಾಣಿಕತೆಯ ಪ್ರಶ್ನೆಯಾಗುತ್ತದೆ. ಆದರೆ ಒಬ್ಬ ವಿದ್ಯಾರ್ಥಿಗೆ ತೇರ್ಗಡೆಯಾಗುವ ಕನಿಷ್ಠ ಅರ್ಹತೆಯಿದ್ದರೂ ಆತನನ್ನು/ ಆಕೆಯನ್ನು ಶತಾಯಗತಾಯ ಫೇಲ್ ಆಗದಂತೆ ನೋಡಿಕೊಳ್ಳುವ ಉದ್ದೇಶವಂತೂ ಎಲ್ಲ ಮೌಲ್ಯಮಾಪಕರದ್ದೂ ಆಗಿರುತ್ತದೆ.

ಪರಿವೀಕ್ಷಕರಾಗಿ (ರಿವ್ಯೂವರ್) ಅಥವಾ ಮುಖ್ಯ ಪರೀಕ್ಷಕರಾಗಿ (ಚೀಫ್ ಎಕ್ಸಾಮಿನರ್) ಕರ್ತವ್ಯ ನಿರ್ವಹಿಸುವ ಹಿರಿಯ ಅಧ್ಯಾಪಕರು ಪ್ರತೀ ಮೌಲ್ಯಮಾಪನದ ಆರಂಭದಲ್ಲೂ ತಮ್ಮ ಸಹೋದ್ಯೋಗಿಗಳಿಗೆ ಕೊಡುವ ಸಲಹೆಯೂ ಇದೇ: ತಾಳ್ಮೆಯಿಂದ ಮೌಲ್ಯಮಾಪನ ಮಾಡಿ. ದಿನನಿತ್ಯದ ಬೇರೆ ಒತ್ತಡಗಳನ್ನು ಇಟ್ಟುಕೊಂಡು ಮೌಲ್ಯಮಾಪನ ಕೇಂದ್ರಕ್ಕೆ ಬರಬೇಡಿ. ನೀವು ಕೊಡುವ ಒಂದೊಂದು ಅಂಕವೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕವಾದದ್ದು ಅನ್ನೋದನ್ನು ಮರೆಯಬೇಡಿ. ಒಂದು ಉತ್ತರ ಪತ್ರಿಕೆಗೆ ಪಾಸ್ ಆಗುವ ಕನಿಷ್ಠ ಯೋಗ್ಯತೆಯಿದ್ದರೂ ಅದು ಫೇಲ್ ಆಗದಂತೆ ನೋಡಿಕೊಳ್ಳಿ.
ಅನೇಕ ಸಂದರ್ಭದಲ್ಲಿ ಫೇಲ್ ಆದ ಪತ್ರಿಕೆಯನ್ನೂ ಮತ್ತೆಮತ್ತೆ ತಿರುವಿ ಹಾಕಿ 'ನೋಡಿ ಇಲ್ಲೊಂದೆರಡು ಅಂಕಗಳನ್ನು ಕೊಡಬಹುದು. ಪಾಸ್ ಆಗುತ್ತಾ ನೋಡಿ’ ಎಂದು ಪರಿವೀಕ್ಷಕರು ಕಾಳಜಿ ತೋರುವುದೂ ಇದೆ.

ಕೆಲವು ಉತ್ತರ ಪತ್ರಿಕೆಗಳನ್ನು ಓದುವುದಂತೂ ಮೌಲ್ಯಮಾಪಕನ ತಾಳ್ಮೆಯ ಪರೀಕ್ಷೆಯೇ ಆಗಿರುತ್ತದೆ. ಯಾವ ಕೋನದಿಂದ ನೋಡಿದರೂ ಓದಲು ಪರದಾಡಬೇಕಿರುವ ಬ್ರಹ್ಮಲಿಪಿ ನಡುವೆ ಉತ್ತರ ಎಲ್ಲಿದೆ ಎಂದು ಹುಡುಕುವುದು ದೊಡ್ಡ ಸಾಹಸವೇ ಆಗಿರುತ್ತದೆ. ಆದರೂ ಬರೆದದ್ದರಲ್ಲಿ ಏನಾದರೂ ಒಂದಿಷ್ಟು ಹುರುಳಿದೆಯೇ ಎಂದು ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಅನಿವಾರ್ಯ.
ಅಧ್ಯಾಪಕರು ಎಷ್ಟೇ ಮುನ್ನೆಚ್ಚರಿಕೆ ಹೇಳಿದ್ದರೂ ಪರೀಕ್ಷೆ ಬರೆಯುವ ವೇಳೆ ಕನಿಷ್ಠ ಪ್ರಶ್ನೆ ಸಂಖ್ಯೆಯನ್ನು ನಮೂದಿಸದೆ ಇರುವ ಭೂಪರೂ ಎಷ್ಟೋ ಮಂದಿ. ಎಷ್ಟೇ ಚೆನ್ನಾಗಿ ಉತ್ತರ ಬರೆದರೂ ಅದರ ಪ್ರಶ್ನೆ ಸಂಖ್ಯೆಯನ್ನಾಗಲೀ, ಕಡೇ ಪಕ್ಷ ಒಂದು ಶೀರ್ಷಿಕೆಯನ್ನಾಗಲೀ ಬರೆಯದೇ ಹೋದರೆ ಅಂಕಗಳನ್ನು ಕೊಡುವುದು ಯಾವ ಆಧಾರದಲ್ಲಿ? ಆದರೂ ತಮ್ಮ ಕೆಂಪು ಪೆನ್ನು ಬದಿಗಿಟ್ಟು ಉತ್ತರ ಬರೆಯಲಾಗಿರುವ ಇಂಕಿನಲ್ಲೇ ಅಂತಹ ಉತ್ತರಗಳ ಬದಿಗೆ ಪ್ರಶ್ನೆ ಸಂಖ್ಯೆ ನಮೂದಿಸಿ ಅಂಕ ನೀಡುವ ಅಧ್ಯಾಪಕರೇ ಹೆಚ್ಚು. ಅಲ್ಲೆಲ್ಲ ನಿಯಮಪಾಲನೆಗಿಂತಲೂ ವಿದ್ಯಾರ್ಥಿಯ ಹಿತದೃಷ್ಟಿಯೇ ಹೆಚ್ಚಿನದಾಗುತ್ತದೆ.

ಎಣಿಕೆಯಲ್ಲಿ ಎಲ್ಲಿ ತಪ್ಪಾಗುತ್ತದೋ, ಪ್ರತೀ ಉತ್ತರ ಪತ್ರಿಕೆಯ ಅಂಕವನ್ನು ಅಂಕಪಟ್ಟಿಗೆ ನಮೂದಿಸುವಾಗ ಎಲ್ಲಿ ಅದಲುಬದಲಾಗುತ್ತದೋ, ನಾಳೆ ಎಷ್ಟೊಂದು ಅಭ್ಯರ್ಥಿಗಳು ಮರುಎಣಿಕೆಗೆ ಅಥವಾ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುತ್ತಾರೋ ಎಂಬ ಆತಂಕವೂ ಮೌಲ್ಯಮಾಪಕನಿಗೆ ಸಾಮಾನ್ಯ. ಅವನು ಸದಾ ಎಚ್ಚರವಾಗಿರುವುದಕ್ಕೆ ಈ ಆತಂಕ ಅನಿವಾರ್ಯ ಕೂಡಾ.

********************************************************

ಮೌಲ್ಯಮಾಪಕರನ್ನೂ ನಗಿಸುವವರು!
ಮೌಲ್ಯಮಾಪನದ ಸಮಸ್ತ ತಲ್ಲಣಗಳ ನಡುವೆಯೂ ಅಧ್ಯಾಪಕರನ್ನು ಹೊಟ್ಟೆತುಂಬ ನಗಿಸಿ ತಂಪಾಗಿಡುವ ಶಿಷ್ಯೋತ್ತಮರೂ ಇದ್ದಾರೆ. 'ತಲೆಬರಹ’ (ಶೀರ್ಷಿಕೆ) ಎಂಬ ಪದಕ್ಕೆ ವಿದ್ಯಾರ್ಥಿಯೊಬ್ಬ ಬರೆದ ಟಿಪ್ಪಣಿ ಹೀಗಿತ್ತು:
ತಲೆಯಿಂದ ಹಲವಾರು ಉಪಯೋಗಗಳು ಇವೆ. ತಲೆಯಿಂದ ಹಲವಾರು ತೊಂದರೆಗಳೂ ಇವೆ... ತಲೆಯಿಂದ ತಲೆನೋವು ಬರುತ್ತದೆ. ತಲೆಯಿಂದ ಮೆದುಳು ಜ್ವರ ಬರುತ್ತದೆ... ಜೀವನದಲ್ಲಿ ಹೆಚ್ಚು ತೊಂದರೆಗಳು ಬಂದಾಗ ತಲೆಬರಹ ಎಂದು ಕರೆಯುತ್ತೇವೆ. ತುಂಬ ಕೆಲಸ ಮಾಡಿ ಆಯಾಸವಾದಾಗ ತಲೆಬರಹ ಬರುತ್ತದೆ... ತಲೆ ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ...

ಬಹುಶಃ ಇಡೀ ಸೆಮಿಸ್ಟರಿನಲ್ಲಿ ಒಂದೂ ತರಗತಿಗೆ ಹಾಜರಾಗದ ಪುಣ್ಯಾತ್ಮನ ಪ್ರತಿಭೆಯೇ ಇದು. ಇಂತಹ ಶಿಷ್ಯರನ್ನು ಪಡೆಯುವುದು ಬಹುಶಃ ಮೇಷ್ಟ್ರ ಹಣೆಬರಹವೇ ಇರಬೇಕು ಎಂದು ನಕ್ಕು ಸುಮ್ಮನಾಗದೆ ಮೌಲ್ಯಮಾಪಕನಿಗೆ ಬೇರೆ ದಾರಿ ಇಲ್ಲ.

ಒಮ್ಮೆ ಪತ್ರಿಕೆಯ ಮಾಸ್ತ್‌ಹೆಡ್ ಪಕ್ಕದ ಇಯರ್‌ಪ್ಯಾನಲ್‌ಗಳನ್ನು ಕನ್ನಡಕ್ಕೆ 'ಕರ್ಣಗಳು’ ಎಂದು ಅನುವಾದಿಸಿ ಟಿಪ್ಪಣಿ ಬರೆಯಲು ಕೇಳಲಾಗಿತ್ತು. ಮನುಷ್ಯನಿಗೆ ಕರ್ಣಗಳು ತುಂಬ ಮುಖ್ಯ. ಮುಖದ ಸೌಂದರ್ಯದಲ್ಲಿ ಕರ್ಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಿವಿಗಳು ಇಲ್ಲದ ಮುಖವನ್ನು ನೋಡುವುದೇ ಕಷ್ಟ... ಹೀಗೆ ಸಾಗಿತ್ತು ವಿದ್ಯಾರ್ಥಿ ಮಹಾಶಯನೊಬ್ಬನ ಉತ್ತರ. ಪತ್ರಿಕೆಯ ಬಾಕ್ಸ್ ಐಟೆಮ್ ಬಗ್ಗೆ ಪ್ರಶ್ನೆ ಕೇಳಿದಾಗ ಮರದ ಹಾಗೂ ಕಬ್ಬಿಣದ ಪೆಟ್ಟಿಗೆಗಳ ಬಗ್ಗೆ, ಜಂಪ್ ಸ್ಟೋರಿ ಬಗ್ಗೆ ಕೇಳಿದಾಗ ಎತ್ತರ ಜಿಗಿತ ಮತ್ತು ಉದ್ದ ಜಿಗಿತದ ಬಗ್ಗೆ ವಿದ್ವತ್ಪೂರ್ಣ ಉತ್ತರಗಳನ್ನು ಬರೆದು ಮನಸ್ಸು ಹಗುರಾಗಿಸಿದ ಶಿಷ್ಯಶ್ರೇಷ್ಠರೂ ಇದ್ದಾರೆ.