ಮಂಗಳವಾರ, ಜುಲೈ 30, 2019

ಕನಸಲ್ಲ ಐಎಎಸ್

30 ಜುಲೈ 2019ರಂದು 'ಉದಯವಾಣಿ' 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ

ಅಪ್ಪ ಆಟೋ ಡ್ರೈವರ್. ಅಮ್ಮಂದು ಕೂಲಿ ಕೆಲಸ. ಮನೆ ತುಂಬ ಮಕ್ಕಳು. ಬಡತನವೇ ಹೊದ್ದುಕೊಂಡಿರುವ ಕುಟುಂಬ. ಆಗಷ್ಟೇ ಡಿಗ್ರಿ ಪೂರೈಸಿದ್ದ ಅನ್ಸಾರ್ ಶೇಕ್ ಒಂದು ದಿನ ಓಡೋಡಿ ಬಂದು 'ಅಮ್ಮಾ ನಾನು ಪಾಸಾಗ್ಬಿಟ್ಟೆ’ ಎಂದು ಬಿಕ್ಕಳಿಸಿದರೆ ಆತ ಡಿಗ್ರಿ ರಿಸಲ್ಟ್ ಹೇಳುತ್ತಿದ್ದಾನೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಅವನು ಪಾಸ್ ಮಾಡಿದ್ದು ಬರೀ ಪದವಿ ಆಗಿರಲಿಲ್ಲ; ಈ ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಕಠಿಣ ಪರೀಕ್ಷೆಯಾದ ಐಎಎಸ್ ಆಗಿತ್ತು! ಆಗಿನ್ನೂ ಅವನಿಗೆ 21 ವರ್ಷ, ಅಂದರೆ ಎಲ್ಲರೂ ಡಿಗ್ರಿ ಪಾಸಾಗುವ ವಯಸ್ಸು. ಅನ್ಸಾರ್ ಶೇಕ್ ಈ ದೇಶದ ಅತ್ಯಂತ ಕಿರಿಯ ಐಎಎಸ್ ಅಧಿಕಾರಿ.

ನನ್ನದು ಮರಾಠವಾಡ ಪ್ರದೇಶದ ಕುಗ್ರಾಮ. ಆರ್ಥಿಕವಾಗಿ ತುಂಬ ಹಿಂದುಳಿದಿರುವ ಕುಟುಂಬ. ಸಾಮಾಜಿಕವಾಗಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವನು. ಅಪ್ಪನ ಮೂವರು ಹೆಂಡತಿಯರಲ್ಲಿ ನನ್ನ ಅಮ್ಮ ಎರಡನೆಯವಳು. ನನ್ನೂರಿನಂತಹ ಹತ್ತಾರು ಹಳ್ಳಿಗಳ ಕಡುಬಡವರಿಗೆ ಒಂದಿಷ್ಟು ನಿರಾಳತೆಯನ್ನು ತಂದುಕೊಟ್ಟ ದಿನ ನನಗೆ ನೆಮ್ಮದಿ ಹಾಗೆಂದು ಅನ್ಸಾರ್ ಹೇಳುತ್ತಿದ್ದರೆ ಇಡೀ ಶೆಡ್‌ಗಾಂವ್ ಗ್ರಾಮವೇ ಆನಂದಬಾಷ್ಪ ಮಿಡಿಯುತ್ತಿತ್ತು.

21 ವರ್ಷ ವಯಸ್ಸು ಐಎಎಸ್ ಪರೀಕ್ಷೆ ಬರೆಯಲು ಕನಿಷ್ಠ ವಯೋಮಿತಿ ಆಗಿದ್ದರೂ ಅದು ಸಾಮಾನ್ಯವಾಗಿ ಎಲ್ಲರೂ ಡಿಗ್ರಿ ಪೂರೈಸಿಕೊಳ್ಳುವ ಪ್ರಾಯ. ನಮ್ಮ ಅನೇಕ ಹುಡುಗರು ಅಲ್ಲಿಯೂ ಯಾವುದಾದರೊಂದು ಪೇಪರ್ ಪಾಸಾಗದೆ ಇನ್ನೂ ಒಂದಷ್ಟು ವರ್ಷ ಒದ್ದಾಡುವುದಿದೆ. ಅಂತಹದರಲ್ಲಿ ಅನ್ಸಾರ್ ಐಎಎಸ್ ಪರೀಕ್ಷೆಯನ್ನೇ ಮಣಿಸಿಬಿಟ್ಟಿದ್ದ.

ಐಎಎಸ್ ಈ ದೇಶದ ಲಕ್ಷಾಂತರ ಯುವಕ-ಯುವತಿಯರ ಹೃದಯದ ಮಿಡಿತ, ಕನಸಿನ ಲೋಕ. ಯುವಕರೇಕೆ, ಇನ್ನೂ ಸ್ಕೂಲುಗಳಲ್ಲಿರುವ ಪುಟ್ಟ ಮಕ್ಕಳಲ್ಲೇ 'ಮುಂದೇನಾಗ್ತೀರಾ?’ ಎಂದು ಕೇಳಿದರೆ 'ಐಎಎಸ್ ಆಫೀಸರ್’ ಎಂದು ಖಡಕ್ ಉತ್ತರಿಸುವವರ ಸಂಖ್ಯೆಯೇ ಬಹಳ. ಅಷ್ಟರ ಮಟ್ಟಿಗೆ ಅದೊಂದು ಬಲುದೊಡ್ಡ ಆಕರ್ಷಣೆ. ತಿಂಗಳಿಗೆ ಆರಂಕಿ ಸಂಬಳ ತರುವ ಸಾಕಷ್ಟು ಉದ್ಯೋಗಗಳಿದ್ದರೂ ಐಎಎಸ್‌ನಂತಹ ಹುದ್ದೆಗಳ ಖದರಿಗೆ ಮಾರು ಹೋಗದವರು ಕಡಿಮೆ.

ಪ್ರತಿವರ್ಷ ಐಎಎಸ್ ಪರೀಕ್ಷೆಗಳಿಗೆ ಅರ್ಜಿ ಹಾಕುವವರ ಸಂಖ್ಯೆ ಏನಿಲ್ಲವೆಂದರೂ ಹತ್ತು ಲಕ್ಷ. ಅವರಲ್ಲಿ ಅಂತಿಮ ರ‍್ಯಾಂಕ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುವವರು ಸುಮಾರು 1000 ಮಂದಿ. ಇಷ್ಟಾದ ಮೇಲೆ ಐಎಎಸ್, ಐಪಿಎಸ್ ಹುದ್ದೆಗಳಿಗೆ ಆಯ್ಕೆಯಾಗುವವರು ಹೆಚ್ಚೆಂದರೆ 150-200 ಮಂದಿ. ಇವರ ಪೈಕಿ ಮೊದಲ ರ‍್ಯಾಂಕ್ ಪಡೆದುಕೊಳ್ಳುವ ಯುವಕ/ ಯುವತಿ ಎಂತಹ ಛಲದಂಕಮಲ್ಲರಾಗಿರಬಹುದೆಂದು ಊಹಿಸಿನೋಡಿ.

ಬದ್ಧತೆಯ ಅಗ್ನಿಪರೀಕ್ಷೆ
ಐಎಎಸ್ ಎಂದೇ ಜನಪ್ರಿಯವಾಗಿರುವ ನಾಗರಿಕ ಸೇವಾ ಪರೀಕ್ಷೆ ನಮ್ಮ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು. ಅದು ಕೇವಲ ಜ್ಞಾನದ ಪರೀಕ್ಷೆಯಲ್ಲ. ವ್ಯಕ್ತಿಯ ಶ್ರದ್ಧೆ, ಬದ್ಧತೆ, ಸಿದ್ಧತೆ, ನಿರಂತರ ಪರಿಶ್ರಮಗಳ ಫಲಶ್ರುತಿ. ಬೌದ್ಧಿಕ ಸಾಮರ್ಥ್ಯ, ದೂರದೃಷ್ಟಿ, ನಾಯಕತ್ವ, ಸಾಧಿಸುವ ಛಲಗಳೆಲ್ಲ ಒಂದಾದ ವ್ಯಕ್ತಿತ್ವದ ಅಳತೆಗೋಲು.

'ಎಲ್ಲ ಕಾಂಪಿಟೀಟಿವ್ ಎಕ್ಸಾಂಗಳನ್ನೂ ಬರೀತಿದ್ದೀನಿ. ಐಎಎಸ್ ನನ್ನ ಅಂತಿಮ ಗುರಿ’ ಎನ್ನುವವರಿಗೆ ಅದು ದಕ್ಕುವ ಹಣ್ಣಲ್ಲ. ಅದೊಂದನ್ನೇ ಗಮ್ಯವಾಗಿಟ್ಟುಕೊಂಡು ಮುನ್ನಡೆಯುವವರ ಮುಡಿಗಷ್ಟೇ ಏರುವ ಯಶಸ್ಸಿನ ಕಿರೀಟ. ಅಂಥದ್ದೊಂದು ಬದ್ಧತೆ ಸಿವಿಲ್ ಸರ್ವಿಸ್ ಪರೀಕ್ಷೆಗಳ ಮೂಲಮಂತ್ರ. ಬದುಕಿನಲ್ಲಿ ದೊಡ್ಡ ಗುರಿಗಳನ್ನು ಸಾಧಿಸಬೇಕಾದರೆ ಸಣ್ಣಪುಟ್ಟ ಆಕರ್ಷಣೆಗಳನ್ನು ತ್ಯಜಿಸುವುದು ಅನಿವಾರ್ಯ ಎಂಬ ಹಿರಿಯರ ಮಾತು ಐಎಎಸ್ ಆಕಾಂಕ್ಷಿಗಳ ಕೈದೀವಿಗೆ. ನೀರು ಬೇಕೆಂದು ಹತ್ತು ಕಡೆ ಗುಂಡಿ ತೋಡುವುದಲ್ಲ, ಅಷ್ಟೂ ಪ್ರಯತ್ನವನ್ನೂ ಒಂದೇ ಕಡೆ ಮಾಡಬೇಕು.

ಯಾರು ಬರೆಯಬಹುದು?
21 ವರ್ಷ ವಯಸ್ಸಿನವರು ಅಂದರೆ ಪದವಿ ಅಂತಿಮ ವರ್ಷದಲ್ಲಿರುವವರು ಐಎಎಸ್ ಪರೀಕ್ಷೆ ಬರೆಯಲು ಅರ್ಹರು. ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಸಿಎ, ಬಿಎಸ್‌ಡಬ್ಲ್ಯೂ, ಇಂಜಿನಿಯರಿಂಗ್, ಮೆಡಿಕಲ್- ಯಾವ ಡಿಗ್ರಿ ಓದಿದವರೂ ಐಎಎಸ್ ಬರೆಯಬಹುದು. ಹಾಗೆಂದು ಡಿಗ್ರಿ ಮುಗಿಯುತ್ತಿದ್ದಂತೆ ಒಂದು ಅಟೆಮ್ಟ್ ಮಾಡಿಬಿಡೋಣ ಎನ್ನುವುದು ಜಾಣತನವಲ್ಲ. ಏಕೆಂದರೆ ಐಎಎಸ್‌ನಲ್ಲಿ ಪ್ರತಿ ಪ್ರಯತ್ನ ಅಮೂಲ್ಯ.

ಸಾಮಾನ್ಯ ವರ್ಗದ ಅಭ್ಯರ್ಥಿಗಳು ತಮ್ಮ 32ನೇ ವಯಸ್ಸಿನವರೆಗೆ ಆರು ಬಾರಿ ಮಾತ್ರ ಪರೀಕ್ಷೆ ಬರೆಯಬಹುದು. ಹಿಂದುಳಿದ ವರ್ಗಕ್ಕೆ ಸೇರಿದವರು 35 ವರ್ಷದವರೆಗೆ 9 ಬಾರಿ ಬರೆಯಬಹುದು. ಎಸ್‌ಸಿ/ಎಸ್‌ಟಿ ಸಮುದಾಯದ ಅಭ್ಯರ್ಥಿಗಳು 37 ವರ್ಷದವರೆಗೆ ಮಾತ್ರ ಐಎಎಸ್ ಬರೆಯಬಹುದು, ಪ್ರಯತ್ನದ ಮಿತಿ ಇಲ್ಲ.

ಪದವಿ ಮುಗಿದ ಮೇಲೆ ಒಂದೆರಡು ವರ್ಷ ಕಠಿಣ ಪರಿಶ್ರಮಪಟ್ಟ ಬಳಿಕ ಮೊದಲನೇ attempt ಕೊಡುವುದೇ ಬುದ್ಧಿವಂತಿಕೆ. ಆಮೇಲೆ ಪ್ರತಿವರ್ಷ ಪ್ರಯತ್ನಪಟ್ಟರೂ ಎಲ್ಲ ಲಭ್ಯ ಅವಕಾಶಗಳನ್ನು ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಎಂ.ಎ. ಎಂಎಸ್ಸಿಯಂತಹ ಸ್ನಾತಕೋತ್ತರ ಪದವಿ ಓದಿದ ಮೇಲೆ ಐಎಎಸ್ ಬರೆಯುತ್ತೇನೆ ಎಂದುಕೊಂಡರೂ ತಪ್ಪಲ್ಲ. ಆದರೆ ಕನಿಷ್ಟ ಪದವಿ ಓದುವಾಗಿಂದಲೇ ತಯಾರಿ ಆರಂಭಿಸುವುದು ತುಂಬ ಮುಖ್ಯ.

ಹೇಗಿರುತ್ತದೆ ಐಎಎಸ್ ಪರೀಕ್ಷೆ?
ಐಎಎಸ್ ಪರೀಕ್ಷೆ ಮೂರು ಹಂತದಲ್ಲಿ ನಡೆಯುತ್ತದೆ: ಸಿವಿಲ್ ಸರ್ವೀಸಸ್ ಆಪ್ಟಿಟ್ಯೂಡ್ ಟೆಸ್ಟ್ (ಪ್ರಿಲಿಮ್ಸ್ ಅಥವಾ ಪೂರ್ವಭಾವಿ ಪರೀಕ್ಷೆ), ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಸಂದರ್ಶನ. ಇವುಗಳ ಪೈಕಿ ಮೊದಲನೆಯದು ಸ್ಕ್ರೀನಿಂಗ್ ಟೆಸ್ಟ್. ವಸ್ತುನಿಷ್ಠ ಮಾದರಿಯ ಎರಡು ಪತ್ರಿಕೆಗಳಿರುತ್ತವೆ. ತಲಾ ಎರಡು ಗಂಟೆ ಅವಧಿಯವು. ಇವುಗಳ ಅಂಕಗಳನ್ನು ರ‍್ಯಾಂಕಿಗೆ ಪರಿಗಣಿಸುವುದಿಲ್ಲವಾದರೂ ಮುಖ್ಯ ಪರೀಕ್ಷೆ ಬರೆಯಲು ಇದರಲ್ಲಿ ತೇರ್ಗಡೆಯಾಗಬೇಕು. ಮುಖ್ಯ ಪರೀಕ್ಷೆ ವಿಸ್ತೃತ ಉತ್ತರ ಮಾದರಿಯದ್ದು. ಇಲ್ಲಿ ಒಂಭತ್ತು ಪತ್ರಿಕೆಗಳನ್ನು ಉತ್ತರಿಸಬೇಕಾಗುತ್ತದೆ. ಇದರಲ್ಲಿ ಆಯ್ಕೆಯಾದ ಮೇಲೆ ಅತ್ಯಂತ ನಿರ್ಣಾಯಕವಾದ ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆ. ವಿವಿಧ ವಿಷಯಗಳ ಕುರಿತ ಅಭ್ಯರ್ಥಿಯ ಜ್ಞಾನ, ಸಾಮರ್ಥ್ಯ, ಪ್ರಾಮಾಣಿಕತೆ, ಬದ್ಧತೆ, ನಾಯಕತ್ವ, ದೂರದರ್ಶಿತ್ವ ಮುಂತಾದವುಗಳನ್ನು ತಜ್ಞರ ಸಮಿತಿಯೊಂದು ಒರೆಗಲ್ಲಿಗೆ ಹಚ್ಚುತ್ತದೆ. ಈ ಹಂತವನ್ನೂ ದಾಟಿ ಗೆಲ್ಲುವವನೇ ಐಎಎಸ್ ಶೂರ.

ಏನನ್ನು ಓದಬೇಕು?
ಮೊದಲನೆಯ ಹಂತದ ಪರೀಕ್ಷೆಗೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನ, ಭಾರತ ಹಾಗೂ ಸ್ವಾತಂತ್ರ್ಯ ಹೋರಾಟದ ಇತಿಹಾಸ, ಭಾರತೀಯ ಮತ್ತು ಜಾಗತಿಕ ಭೂಗೋಳಶಾಸ್ತ್ರ, ಭಾರತದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆ, ಸಂವಿಧಾನ, ಪಂಚಾಯತ್ ರಾಜ್, ಆರ್ಥಿಕತೆ, ಬಡತನ, ಪರಿಸರ, ಜೀವ ವೈವಿಧ್ಯತೆ, ಹವಾಮಾನ ಬದಲಾವಣೆ, ಸಾಮಾನ್ಯ ವಿಜ್ಞಾನ ಮುಂತಾದ ವಿಷಯಗಳ ಬಗ್ಗೆ ಓದಿಕೊಳ್ಳಬೇಕು. ಹಾಗೆಯೇ, ವಿಷಯಗ್ರಹಿಕೆ, ಸಂವಹನ ಕಲೆ, ತಾರ್ಕಿಕ ಮತ್ತು ವಿಶ್ಲೇಷಣಾ ಸಾಮರ್ಥ್ಯ, ನಿರ್ಧಾರ ಕೈಗೊಳುವಿಕೆ, ಸಮಸ್ಯೆ ಪರಿಹಾರ, ಸಾಮಾನ್ಯ ಬೌದ್ಧಿಕ ಸಾಮರ್ಥ್ಯ, ಪ್ರಾಥಮಿಕ ಗಣಿತ ಜ್ಞಾನ, ದತ್ತಾಂಶ ವಿಶ್ಲೇಷಣೆ ಮುಂತಾದ ವಿಷಯಗಳ ತಿಳುವಳಿಕೆಯೂ ಇರಬೇಕು.

ಮುಖ್ಯ ಪರೀಕ್ಷೆಯಲ್ಲಿ ಇಂಗ್ಲಿಷ್ ಭಾಷೆ ಮತ್ತು ಯಾವುದಾದರೂ ಭಾರತೀಯ ಭಾಷೆ (ಉದಾ: ಕನ್ನಡ) ಕುರಿತ ಪ್ರತ್ಯೇಕ ಪತ್ರಿಕೆಗಳಿರುತ್ತವೆ. ಮೂರನೆಯ ಪತ್ರಿಕೆ ಪ್ರಬಂಧ ಬರವಣಿಗೆ. ಮುಂದಿನ ನಾಲ್ಕು ಪತ್ರಿಕೆಗಳು ಸಾಮಾನ್ಯ ಅಧ್ಯಯನದ ಬಗ್ಗೆ ಇರುತ್ತವೆ. ಪೂರ್ವಭಾವಿ ಪರೀಕ್ಷೆಗೆ ಹೇಳಿದ ವಿಷಯಗಳೇ ಇಲ್ಲಿ ಹೆಚ್ಚು ಆಳ ಮತ್ತು ವಿಸ್ತಾರವಾಗಿ ಇರುತ್ತವೆ. ಕೊನೆಯ ಎರಡು ಪತ್ರಿಕೆಗಳು ನಮ್ಮ ಐಚ್ಛಿಕ ವಿಷಯದ ಬಗ್ಗೆ ಇರುತ್ತವೆ. ಯುಪಿಎಸ್‌ಸಿ ಸೂಚಿಸುವ 26 ವಿಷಯಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇವುಗಳಲ್ಲಿ ನಾವು ಪದವಿಯಲ್ಲಿ ಓದಿದ ಯಾವುದಾದರೊಂದು ವಿಷಯ ಇದ್ದೇ ಇರುತ್ತದೆ.

ಯುಪಿಎಸ್ಸಿ ನೀಡುವ ಐಚ್ಛಿಕ ವಿಷಯಗಳ ಪಟ್ಟಿ ಹೀಗಿದೆ: ಕೃಷಿ, ಪಶುಸಂಗೋಪನೆ & ಪಶು ವೈದ್ಯಕೀಯ, ವೈದ್ಯಕೀಯ ವಿಜ್ಞಾನ,  ಮಾನವಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ,  ಭೌತಶಾಸ್ತ್ರ, ರಸಾಯನಶಾಸ್ತ್ರ, ಸಿವಿಲ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್,  ಗಣಿತಶಾಸ್ತ್ರ, ಸ್ಟಾಟಿಸ್ಟಿಕ್ಸ್, ತತ್ತ್ವಶಾಸ್ತ್ರ,  ಕಾಮರ್ಸ್ & ಅಕೌಂಟೆನ್ಸಿ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಭೂಗರ್ಭಶಾಸ್ತ್ರ, ಇತಿಹಾಸ, ಕಾನೂನು, ನಿರ್ವಹಣೆ, ರಾಜ್ಯಶಾಸ್ತ್ರ & ಅಂತಾರಾಷ್ಟ್ರೀಯ ಸಂಬಂಧಗಳು, ಮನಃಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಸಾಹಿತ್ಯ (23 ವಿವಿಧ ಭಾಷೆಗಳಲ್ಲಿರುವ ಸಾಹಿತ್ಯದ ಆಯ್ಕೆ ಇದೆ).

ತಯಾರಿ ಹೇಗೆ?
ಐಎಎಸ್ ಪರೀಕ್ಷೆಗೆ ಗಂಭೀರವಾಗಿ ತಯಾರಿ ಮಾಡುವವರೆಲ್ಲ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಓದುವುದರಿಂದ ಆರಂಭಿಸುವುದು ಸಾಮಾನ್ಯ. ಐಎಎಸ್ ಪರೀಕ್ಷೆಗೆ ಓದಬೇಕಾಗಿರುವ ಎಲ್ಲ ವಿಷಯಗಳ ಪ್ರಾಥಮಿಕ ಜ್ಞಾನ ಈ ಪಠ್ಯಪುಸ್ತಕಗಳಲ್ಲಿ ಲಭ್ಯವಿರುವುದರಿಂದ 6ನೇ ತರಗತಿಯಿಂದ 12ನೇ ತರಗತಿವರೆಗಿನ ಎಲ್ಲ ಪಠ್ಯಪುಸ್ತಕಗಳನ್ನು ಒಮ್ಮೆ ಓದಿಕೊಳ್ಳುವುದು ಸೂಕ್ತ. ಅದಾದ ಬಳಿಕ ಆಯಾ ವಿಷಯಗಳಿಗೆ ಸಂಬಂಧಿಸಿದ ವಿವಿಧ ಪುಸ್ತಕಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ.

ಅಂತಹ ಪುಸ್ತಕಗಳ ಪಟ್ಟಿಯನ್ನು ನೋಡಲು ಈ ಲಿಂಕನ್ನು ಬಳಸಿರಿ.

ಈ ಹಂತದಲ್ಲಿ ಐಎಎಸ್ ಪರೀಕ್ಷೆಯ ವಿಸ್ತೃತ ಸಿಲೆಬಸ್ ಅನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಯುಪಿಎಸ್‌ಸಿಯ ವೆಬ್‌ಸೈಟ್  www.upsc.gov.in ನಿಂದ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಮೇಲೆ ತಿಳಿಸಿದ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಪುಸ್ತಕಗಳು ಹಾಗೂ ಎಲ್ಲ ವಿಷಯಗಳೂ ಇರುವ ಸಿದ್ಧ ಅಧ್ಯಯನ ಸಾಮಗ್ರಿಗಳು ಈಗ ಪುಸ್ತಕದಂಗಡಿಗಳಲ್ಲಿ ಹೇರಳವಾಗಿ ಲಭ್ಯ. ಆದರೆ ಹತ್ತಾರು ಪುಸ್ತಕಗಳನ್ನು ತಂದು ಗುಡ್ಡೆ ಹಾಕಿ ಪ್ರಯೋಜನವಿಲ್ಲ. ಅದರಿಂದ ಗೊಂದಲವೇ ಹೆಚ್ಚು. ಪುಸ್ತಕ ಆಯ್ಕೆ ಮಾಡುವಾಗ ಗುಣಮಟ್ಟದ ಬಗ್ಗೆ ಎಚ್ಚರ ಅಗತ್ಯ.

ಇಂಗ್ಲಿಷ್ ಚೆನ್ನಾಗಿ ಬಲ್ಲವರಿಗೆ ಮಾತ್ರ ಐಎಎಸ್ ಒಲಿಯುತ್ತದೆ ಎಂಬೊಂದು ತಪ್ಪುತಿಳುವಳಿಕೆ ಬಹುಮಂದಿಯಲ್ಲಿದೆ. ಇಂಗ್ಲಿಷ್ ಪ್ರಯೋಜನಕಾರಿ ಎಂಬ ಮಾತು ನಿಜ. ಅದರ ತಿಳುವಳಿಕೆ ಇರುವುದರಿಂದ ಉತ್ತಮ ಪುಸ್ತಕಗಳನ್ನು ಓದಿ ಒಳ್ಳೆಯ ನೋಟ್ಸ್ ಮಾಡಿಕೊಳ್ಳಬಹುದು. ಆದರೆ ಅದೇ ಮುಖ್ಯವಲ್ಲ. ಕನ್ನಡದಲ್ಲೇ ಮುಖ್ಯ ಪರೀಕ್ಷೆಯನ್ನು ಬರೆಯುವುದಕ್ಕೆ ಹಾಗೂ ಸಂದರ್ಶನ ಎದುರಿಸುವುದಕ್ಕೆ ಅವಕಾಶವಿದೆ. ಇಂಗ್ಲಿಷ್ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಎದೆಗುಂದುವ ಅವಶ್ಯಕತೆ ಇಲ್ಲ. 

ಐಎಎಸ್ ಪಾಸಾಗಲು ದೆಹಲಿ, ಹೈದರಾಬಾದಿನಂತಹ ನಗರಗಳಲ್ಲಿ ಕೋಚಿಂಗ್ ಪಡೆಯುವುದು ಅನಿವಾರ್ಯ ಎಂದು ತಿಳಿದುಕೊಂಡಿರುವವರೂ ಬಹಳ. ಆರ್ಥಿಕವಾಗಿ ಹಿಂದುಳಿದಿರುವವರು ಸಾವಿರಾರು ರುಪಾಯಿ ಖರ್ಚು ಮಾಡಿ ಇಂತಹ ತರಬೇತಿ ಪಡೆಯುವುದು ಹೇಗೆ ಎಂಬ ಆತಂಕವೂ ಇದೆ. ಆದರೆ ಇವೆಲ್ಲ ನಿಜವಲ್ಲ. ಸ್ವಂತ ಅಧ್ಯಯನದಿಂದ ಯಶಸ್ಸು ಸಾಧಿಸಿದ ನೂರಾರು ಮಂದಿ ನಮ್ಮೊಂದಿಗಿದ್ದಾರೆ. ಅತ್ಯುತ್ತಮ ಅಧ್ಯಯನ ಸಾಮಗ್ರಿಗಳಲ್ಲದೆ ಸುಲಭವಾಗಿ ಕೈಗೆಟುಕುವ ಆನ್‌ಲೈನ್ ವೇದಿಕೆಗಳಿಂದ ಅನೇಕ ಬಡಹುಡುಗರ ಕನಸು ನನಸಾಗಿದೆ.

ಅನುಕೂಲವಿದ್ದರೆ ಕೋಚಿಂಗ್ ಪಡೆಯುವ ಯೋಚನೆ ಕೂಡ ಒಳ್ಳೆಯದು. ಉತ್ತಮ ಸಂಸ್ಥೆಗಳನ್ನು ಆಯ್ಕೆ ಮಾಡುವುದರಿಂದ ಸಮಯದ ಉಳಿತಾಯವಾಗುವುದಲ್ಲದೆ, ಉತ್ತಮ ಮಾರ್ಗದರ್ಶನವೂ ಲಭಿಸೀತು. ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸುವ ವಿವಿಧ ವರ್ಗಗಳ ಅಭ್ಯರ್ಥಿಗಳಿಗಾಗಿ ಈಗ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳು ಧಾರಾಳವಾಗಿ ಹಣಕಾಸಿನ ಬೆಂಬಲ ನೀಡುತ್ತಿವೆ. ದೊಡ್ಡ ನಗರಗಳಲ್ಲಿರುವ ಪ್ರಸಿದ್ಧ ತರಬೇತಿ ಸಂಸ್ಥೆಗಳ ಶುಲ್ಕವನ್ನು ಸರ್ಕಾರವೇ ತುಂಬಿ ಆಯ್ದ ಅಭ್ಯರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ. ನಮ್ಮ ಉತ್ಸಾಹಿ ಯುವಕರು ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.

ವೇಳಾಪಟ್ಟಿ ಹಾಕಿಕೊಂಡು ಓದುವುದು, ಓದಿದ್ದನ್ನೆಲ್ಲ ಸಂಕ್ಷಿಪ್ತವಾಗಿ ನೋಟ್ಸ್ ಮಾಡಿಕೊಂಡು ಮನನ ಮಾಡುವುದು, ಹಳೆಯ ಪ್ರಶ್ನೆಪತ್ರಿಕೆಗಳನ್ನು ಹೆಚ್ಚಾಗಿ ಅಭ್ಯಾಸ ಮಾಡುವುದು, ಸಮಾನ ಮನಸ್ಕ ಗೆಳೆಯರ ಸ್ಟಡಿ ಸರ್ಕಲ್ ಗಳನ್ನು ಮಾಡಿಕೊಂಡು ವಾರಕ್ಕೊಮ್ಮೆ ಜತೆ ಸೇರಿ ಚರ್ಚಿಸುವುದು, ದಿನಕ್ಕೆ ಕನಿಷ್ಟ ಎರಡು ಗಂಟೆ ವೃತ್ತಪತ್ರಿಕೆಗಳನ್ನು ವಿವರವಾಗಿ ಓದಿ ಟಿಪ್ಪಣಿ ಮಾಡಿಕೊಳ್ಳುವುದು, mock testಗಳನ್ನು ತೆಗೆದುಕೊಳ್ಳುವುದು- ಇವೆಲ್ಲ ಯಶಸ್ಸಿನ ಕೆಲವು ಸೂತ್ರಗಳು.

ಸಾಧಿಸುವ ಛಲವಿದ್ದರೆ ಯಶಸ್ಸಿನ ಬಲ ತಾನಾಗಿಯೇ ಒಲಿದುಬರುತ್ತದೆ. ಕನಸು ಕಂಡರೆ ಸಾಲದು, ಅದಕ್ಕೆ ಕಸುವು ತುಂಬುವ ದೃಢನಿರ್ಧಾರವೂ ಬೇಕಲ್ಲವೇ?

- ಸಿಬಂತಿ ಪದ್ಮನಾಭ ಕೆ. ವಿ.

ಸೋಮವಾರ, ಜುಲೈ 1, 2019

ಮುಂಗಾರು ಮಳೆಯ ಹೊಂಗಿರಣ

ಜೂನ್ 29-ಜುಲೈ 6ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಬೋಧಿವೃಕ್ಷ, ಜೂನ್ 29-ಜುಲೈ 6, 2019
ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ ಎಂಬ ರೈತನ ಮೊರೆ ಆಗಸವನ್ನು ತಲುಪಿದಂತೆ ಕಾಣುತ್ತಿದೆ. ದಿಕ್ಕಿನಿಂದ ದಿಕ್ಕಿಗೆ ಬರಿದೇ ಅಲೆದಾಡುತ್ತಿದ್ದ ಮೋಡಗಳು ಕೊಂಚ ನಿಧಾನಿಸಿ ಕರುಣೆಯ ತಂಪೆರೆಯುವ ಲಕ್ಷಣ ಗೋಚರಿಸುತ್ತಿದೆ. ಬಾಯೊಣಗಿದಾಗ ಮಾತ್ರ ನೀರಿನ ನೆನಪಾಗುವ ಆಸೆಬುರುಕ ಜಗತ್ತನ್ನಾದರೂ ಅವು ನಿರ್ಲಕ್ಷಿಸಿ ಮುಂದುವರಿದಾವು, ಆದರೆ ನೇಗಿಲ ಧರ್ಮವನ್ನೇ ನಂಬಿ ಬದುಕುವ ರೈತರನ್ನಲ್ಲ. ಕಾಯಕನಿಷ್ಠೆಗೆ ಒಲಿಯದ ವರ ಇದ್ದರೆಷ್ಟು ಬಿಟ್ಟರೆಷ್ಟು?

ಮಣ್ಣ ಕಣದಲ್ಲಿ ಚಿನ್ನ ಕಾಣುವ ರೈತನಂತಹ ಮತ್ತೊಬ್ಬ ಸಂತ ಭೂಮಿ ಮೇಲೆ ಸಿಗಲಾರ. ತಾನು ಬೆವರು ಬಸಿದು ಹಸನು ಮಾಡಿದ ನೆಲದಲ್ಲಿ ಚಿಗಿಯುವ ಒಂದೊಂದು ಮೊಳಕೆಯೂ ಅವನ ಸಂಭ್ರಮಾಚರಣೆಗೆ ಸಾಕ್ಷಿ. ಅದು ಬೆಳೆದು ತೆನೆ ಬಲಿತು ಫಲ ನೀಡುವ ಹಾದಿಯನ್ನು ಎದುರು ನೋಡುವುದೇ ಅವನಿಗೆ ಯುಗಾದಿ, ದೀಪಾವಳಿ ಎಲ್ಲ. ಅವನು ಅಷ್ಟೈಶ್ವರ್ಯ ಬೇಡುವುದಿಲ್ಲ, ಮಹಡಿ ಮನೆಯ ಕನಸು ಕಾಣುವುದಿಲ್ಲ, ದೊಡ್ಡ ಕಾರಿನ ಸುಖ ಬಯಸುವುದಿಲ್ಲ. ಒಳ್ಳೆಯ ಮಳೆಯಾಗಲಿ, ಹುಲುಸಾದ ಬೆಳೆಯಾಗಲಿ, ಜಗದ ಹೊಟ್ಟೆ ತಣ್ಣಗಿರಲಿ- ಅದಷ್ಟೇ ಅವನ ಪ್ರಾರ್ಥನೆ.

‘ಫಲವನು ಬಯಸದೆ ಸೇವೆಯ ಪೂಜೆಯ ಕರ್ಮವೆ ಇಹಪರ ಸಾಧನವು’ ಎಂದರು ರೈತನನ್ನು ನೇಗಿಲಯೋಗಿಯೆಂದು ಕರೆದ ಮಹಾಕವಿ ಕುವೆಂಪು. ರೈತನಿಗೆ ಕಾಯಕನಿಷ್ಠೆಗಿಂತ ಮಿಗಿಲಾದ ಪೂಜೆಯಿಲ್ಲ. ಚುನಾವಣೆ ಬರಲಿ, ಬಾರದಿರಲಿ, ಸರ್ಕಾರ ಬೀಳಲಿ, ಏಳಲಿ, ರಾಜಕಾರಣಿಗಳು ಸೋಲಲಿ, ಗೆಲ್ಲಲಿ, ರೈತನ ಚಿತ್ತ ನೆಟ್ಟಿರುವುದು ಮುಂಗಾರು ಮಳೆಯ ಹನಿಗಳ ಲೀಲೆಯ ಮೇಲೆ. ಕಾಯಕನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂಬ ಶರಣರ ಆಶಯವನ್ನು ಮೊತ್ತಮೊದಲು ಜಾರಿಗೆ ತಂದವನು ನಮ್ಮ ಅನ್ನದಾತ.

‘ಕೃತ್ಯಕಾಯಕವಿಲ್ಲದವರು ಭಕ್ತರಲ್ಲ, ಸತ್ಯಶುದ್ಧವಿಲ್ಲವಾದುದು ಕಾಯಕವಲ್ಲ’ ಎಂದಳು ಶಿವಶರಣೆ ಕಾಳವ್ವೆ. ಖುದ್ದು ತನಗಾಗಿ ಏನನ್ನು ಬಯಸದೆ ನಿಷ್ಕಾಮನಿಷ್ಠೆಯಿಂದ ದುಡಿಯುವ ರೈತನಿಗಿಂತ ಮಿಗಿಲಾದ ಭಕ್ತರು ಯಾರು? ಲೋಕದ ಹಸಿವಿನ ನಿವಾರಣೆಯೇ ಪರಮಗುರಿಯಾಗಿರುವ ಬೇಸಾಯಕ್ಕಿಂತ ಹೆಚ್ಚು ಸತ್ಯಶುದ್ಧವಾದ ಕಾಯಕ ಯಾವುದು?

ಅಂತಹ ಭಕ್ತಿ, ಅಂತಹದೊಂದು ಕಾಯಕ ಸಾರ್ಥಕವಾಗಬೇಕಾದರೆ ಬಾನು-ಭುವಿಯನ್ನು ಮುಂಗಾರಿನ ಮೋಡ ಒಂದು ಮಾಡಬೇಕು. ಮೊದಮೊದಲ ಸೋನೆಯಿಂದ, ಆಮೇಲಿನ ಧಾರಾಕಾರ ವರ್ಷದಿಂದ ದ್ಯಾವಾಪೃಥಿವೀಗಳ ಬೆಸುಗೆ ಆದ್ರ್ರಗೊಂಡು ಪ್ರೇಮಭಾವ ಮೊಳೆಯಬೇಕು. ‘ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು | ಧಗೆ ಆರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು’ (ಜಿಎಸ್ಸೆಸ್) ಎಂದು ಕವಿ ಮನಸ್ಸು ಹಾಡುವುದಕ್ಕೆ ಆ ಪ್ರೇಮಭಾವವೇ ನಿಮಿತ್ತ.

‘ಭರವಸೆಗಳ ಹೊಲಗಳಲ್ಲಿ ನೇಗಿಲ ಗೆರೆ ಕವನ | ಶ್ರಾವಣದಲಿ ತೆನೆದೂಗುವ ಜೀವೋತ್ಸವ ಗಾನ’ ಎಂದು ಹಾಡಿದರು ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ. ರೈತನಾದಿಯಾಗಿ ಜಗತ್ತಿನ ಸಮಸ್ತ ಜೀವ ಸಂಕುಲಕ್ಕೆ ವರ್ಷಧಾರೆಯೇ ಬದುಕಿನ ಭರವಸೆ. ಮನುಷ್ಯ ಚಂದ್ರನ ಮೇಲೆ ವಿಹರಿಸಿದ್ದಾನೆ; ಮಂಗಳನನ್ನು ತಲುಪಿದ್ದಾನೆ; ಪಾತಾಳಕ್ಕೂ ಈಜಿದ್ದಾನೆ; ಸೂರ್ಯನ ಬೆಳಕನ್ನೂ, ಹರಿಯುವ ನೀರನ್ನೂ, ಬೀಸುವ ಮಾರುತನನ್ನೂ ವಿದ್ಯುತ್ತಾಗಿ ಪರಿವರ್ತಿಸಿ ಜಗತ್ತನ್ನೇ ಬದಲಾಯಿಸಿದ್ದಾನೆ; ಪಂಚಭೂತಗಳೆಲ್ಲಾ ತನ್ನ ಮುಷ್ಟಿಯೊಳಗೆ ಇವೆ ಎಂಬಂತೆ ಆಡುತ್ತಿದ್ದಾನೆ. ಇಷ್ಟೆಲ್ಲ ಬಡಾಯಿ ಕೊಚ್ಚಿಕೊಳ್ಳುವ ಮನುಷ್ಯ ಸತ್ತ ಜೀವಿಯನ್ನು ಬದುಕಿಸಲಾರ. ಹೋಗಲಿ, ಒಂದು ಪುಟ್ಟ ಬೀಜವನ್ನು ತನ್ನ ಶಕ್ತಿಯಿಂದ ಮೊಳಕೆಯೊಡೆಯುವಂತೆ ಮಾಡಲಾರ. ಅದಕ್ಕೆ ಪ್ರಕೃತಿಯೇ ಮನಸ್ಸು ಮಾಡಬೇಕು.

ವೈಶಾಖದ ಬೇಗೆಯಲ್ಲಿ ಒಣಗಿ ನಿಸ್ತೇಜಗೊಂಡ ಬಯಲಿಗೆ ದೂರದ ಕೆರೆಗಳಿಂದ ಟ್ಯಾಂಕರುಗಳಲ್ಲಿ ನೀರು ತಂದು ಸುರಿದರೆ ಎಲ್ಲೋ ನಾಲ್ಕು ಗಿಡಗಳು ಚಿಗುರಿಕೊಂಡಾವೋ ಏನೋ? ಅದೇ ಎರಡು ದಿನ ಒಂದರ್ಧ ಗಂಟೆ ಸೋನೆ ಸುರಿದು ನೆಲ ತಂಪಾಗಲಿ, ಇಡೀ ಬಯಲು ಹೊಸ ಜೀವಕಳೆಯಿಂದ ನಳನಳಿಸಲು ಆರಂಭಿಸುತ್ತದೆ. ಇಂಚಿಂಚು ಜಾಗದಲ್ಲೂ ಹಸುರು ಮೊಳೆತು ಒಂದೇ ವಾರಕ್ಕೆ ಇಡೀ ಪರಿಸರ ಪಚ್ಚೆ ಸೀರೆ ಉಟ್ಟು ಮದುವಣಗಿತ್ತಿಯಂತೆ ಕಂಗೊಳಿಸುತ್ತದೆ. ಮನುಷ್ಯ ಸಾಧನೆಯೆಂಬ ಬೊಗಳೆಗೆ ಇದಕ್ಕಿಂತ ಹೆಚ್ಚಿನ ನಿದರ್ಶನ ಬೇಕೆ?

ಕೊಡಗಿನ ಗುಡ್ಡಗಳು ಕುಸಿದು ಸಹಸ್ರಾರು ಕುಟುಂಬಗಳು ನಿರಾಶ್ರಿತವಾದಾಗ, ಕೇರಳದ ಪ್ರವಾಹದಲ್ಲಿ ಮನೆ, ಮಠ, ಕಾರು, ತೇರುಗಳು ಅಡೆತಡೆಯೇ ಇಲ್ಲದೆ ಕೊಚ್ಚಿಕೊಂಡು ಹೋದಾಗ ಯಾವ ತಂತ್ರಜ್ಞಾನದಿಂದಲೂ ಪರಿಹಾರ ದೊರೆಯಲಿಲ್ಲ. ಆಗ ನೆರವಿಗೆ ಬಂದದ್ದು ಕರುಣೆ ಮತ್ತು ಸಹಾನುಭೂತಿ ಮಾತ್ರ. ‘ಹೊನ್ನ ನೆಕ್ಕಿ ಬಾಳ್ವರಿಲ್ಲ, ಅನ್ನ ಸೂರೆ ಮಾಡಿರಿ | ಅಣ್ಣಗಳಿರಾ ಅನ್ನದಲ್ಲಿ ಮಣ್ಣ ಕಲಸಬೇಡಿರಿ’ ಎಂದು ಬೇಡಿಕೊಂಡರು ಬೇಂದ್ರೆ. ಈ ಮುಂಗಾರು ನಮ್ಮ ಭ್ರಮೆಗಳನ್ನು ತೊಳೆದೀತೇ?

- ಸಿಬಂತಿ ಪದ್ಮನಾಭ ಕೆ. ವಿ.