(ಜನವರಿ 2016ರ 'ತುಷಾರ'ದಲ್ಲಿ ಪ್ರಕಟವಾದ ಪ್ರಬಂಧ)
ಅಯ್ಯೋ ರಾತ್ರಿಯೆಲ್ಲಾ ನಿದ್ದೆಗೆಟ್ಟು ಹಾಕಿದ ಗರಿಗರಿ ಇಸ್ತ್ರಿ ಏರ್‍ಪೋರ್ಟಿಗೆ ತಲುಪೋ ಮೊದಲೇ ಚುರುಮುರಿಯಾಯ್ತಲ್ಲ, ದೈವೀಸ್ವರೂಪಿಗಳಾದ ಆ ಗಗನಸಖಿಯರು ವಿಮಾನದೊಳಕ್ಕೆ ಸೇರಿಸಿಕೊಳ್ಳದಿದ್ದರೆ ಏನು ಗತಿಯೆಂದು ಟೆನ್ಷನ್ ಮಾಡಿಕೊಂಡು ಕಾರಿನಿಂದ ಇಳಿದೆ. ಆದರೆ ಅಲ್ಲೇ ಟುಸ್‍ಪುಸ್ ಮಾತಾಡಿಕೊಂಡು ವಿಮಾನಕ್ಕಿಂತಲೂ ದೊಡ್ಡ ಲಗೇಜು ಸಮೇತ ಓಡಾಡಿಕೊಂಡಿದ್ದ ಅನೇಕರು ಬರೀ ಚಡ್ಡಿ ಹಾಕಿಕೊಂಡಿದ್ದು ನೋಡಿ ಇವರಿಗಿಂತ ನಾನೇ ಪರವಾಗಿಲ್ಲ ಎಂದು ಸಮಾಧಾನ ಹೇಳಿಕೊಂಡೆ. ಅಲ್ಲ ಮಾರಾಯ್ರೆ ಏರ್‍ಪೋರ್ಟಿಗೆ ಬರುವಾಗಲಾದರೂ ಇವರು ನೆಟ್ಟಗೆ ಒಂದು ಪ್ಯಾಂಟು ಹಾಕಿಕೊಂಡು ಬರಬಾರದಾ ಎಂದು ಪಕ್ಕದಲ್ಲಿದ್ದ ಸಹೋದ್ಯೋಗಿ ಮಿತ್ರರನ್ನು ಕೇಳಿದೆ. ಅಯ್ಯೋ ಇವರೆಲ್ಲ ದಿನಾ ಎಂಬಂತೆ ವಿಮಾನದಲ್ಲಿ ಓಡಾಡೋರು ಮಾರಾಯ, ಇವರು ಚಡ್ಡಿ ಹಾಕಿಕೊಂಡು ಬರೋದೇ ಹೆಚ್ಚು ಎಂದವರು ವೈಜ್ಞಾನಿಕ ಕಾರಣ ನೀಡಿದರು. ನೀನೇನೋ ಮೊದಲ ಬಾರಿಗೆ ವಿಮಾನ ಹತ್ತುತ್ತಿದ್ದೀಯೆಂದು ದಿಬ್ಬಣಿಗನಂತೆ ಬಂದಿದ್ದೀಯ, ಇವರಿಗೆಲ್ಲ ಇದು ಸಿಟಿ ಬಸ್ಸುಗಳಲ್ಲಿ ಓಡಾಡಿದಷ್ಟೇ ಕಾಮನ್ನು ಎಂದವರು ಪ್ರತ್ಯೇಕವಾಗಿ ಹೇಳುವ ಅಗತ್ಯ ಇರಲಿಲ್ಲ.
ಅಲ್ಲಾ ಇಲ್ಲಿಗೆ ಬರೋರೆಲ್ಲಾ ಕಾರಿನಲ್ಲೇ ಬರಬೇಕಾ, ತಿಮ್ಮಪ್ಪಣ್ಣನ ಜೀಪಿನಲ್ಲೋ ಅದ್ದುಲನ ಆಟೋದಲ್ಲೋ ಬಂದರೆ ಏನಾಗುತ್ತೆ? ಈ ಲಗೇಜುಗಳನ್ನೆಲ್ಲ ಇವರ ತಳ್ಳುಗಾಡಿಗಳಲ್ಲೇ ಒಯ್ಯಬೇಕಾ, ಹೆಗಲು ಇಲ್ಲವೇ ತಲೆ ಮೇಲೆ ಏರಿಸಿಕೊಂಡರೆ ಏನಾಗುತ್ತೆ? ಎಂಬಿತ್ಯಾದಿ ಪ್ರಶ್ನೆಗಳು ಮನಸ್ಸಿಗೆ ಬಂದರೂ, ಕೇಳಿದರೆ ನನ್ನ ಅಜ್ಞಾನ ಎಲ್ಲಿ ಬಯಲಾಗುತ್ತದೋ ಎಂಬ ಭಯದಲ್ಲಿ ಎಲ್ಲರೂ ಮಾಡುತ್ತಿದ್ದ ಹಾಗೇ ನಾನೂ ಒಂದು ಗಾಡಿ ಎಳೆದುಕೊಂಡೆ. ಚಿಕ್ಕವರಿದ್ದಾಗ ತೋಟದಿಂದ ಸೋಗೆ ಸಮೇತ ಅಡಿಕೆ ಹಾಳೆ ತಂದು ಸ್ನೇಹಿತರನ್ನು ಕೂರಿಸಿ ದಾರಿಯುದ್ದಕ್ಕೂ ಎಳೆದುಕೊಂಡು ಹೋಗುತ್ತಿದ್ದುದು ನೆನಪಾಗಿ ಈ ಏರ್‍ಪೋರ್ಟಿನವರಿಗೂ ನಮ್ಮ ಐಡಿಯಾಗಳೇ ಬೇಕು ಎಂದು ಹೆಮ್ಮೆಯೆನಿಸಿತು. ಜತೆಗೇ, ಇಲ್ಲಿಗೆ ಮಾಡಿದ ಖರ್ಚಿನಲ್ಲಿ ಒಂದು ಸಾಸಿವೆಯಷ್ಟನ್ನು ನಮ್ಮ ಕೊಕ್ಕಡ-ಪಟ್ರಮೆ ರಸ್ತೆಗೂ ಉಪ್ಪಿನಂಗಡಿ ಬಸ್ಟ್ಯಾಂಡಿಗೂ ಹಾಕಿದ್ದರೆ ಜನ ವರ್ಷವಿಡೀ ಕಂಬಳ ಗದ್ದೆಯಲ್ಲಿ ಓಡಾಡುವುದು ತಪ್ಪುತ್ತಿತ್ತಲ್ಲ ಎಂಬ ಯೋಚನೆಯೂ ಬಂತು.
ಥೇಟ್ ಧರ್ಮಸ್ಥಳದ ಭೋಜನಶಾಲೆಗೆ ಹೊರಟ ಭಕ್ತಾದಿಗಳದ್ದೇ ಎಂಬಂತಿದ್ದ ನೂರೆಂಟು ಯೂ-ಟರ್ನ್‍ಗಳ ಕ್ಯೂವನ್ನು ನೋಡಿದ ಮೇಲಂತೂ ‘ಫ್ಲೈಟ್ ಟೈಮಿಗಿಂತ ಏನಿಲ್ಲವೆಂದರೂ ಒಂದು ಗಂಟೆ ಮೊದಲೇ ಏರ್‍ಪೋರ್ಟಿನಲ್ಲಿ ಇರಬೇಕು ನೋಡಿ’ ಎಂದು ಅನುಭವೀ ಸ್ನೇಹಿತರು ಪದೇಪದೇ ನೆನಪಿಸಿದ್ದೇಕೆಂದು ಮನವರಿಕೆಯಾಯಿತು. ಅಂತೂ ಕೌಂಟರ್ ತಲುಪುತ್ತಿದ್ದ ಹಾಗೆ, ‘ನಿಮ್ಮ ಲಗೇಜನ್ನು ಈ ಕಡೆ ಇಡಿ’ ಎಂಬರ್ಥದಲ್ಲಿ ಈಗಷ್ಟೇ ಮೇಕಪ್ ರೂಮಿನಿಂದ ಹೊರಬಂದಂತಿದ್ದ ಹೆಣ್ಣುಜೀವವೊಂದು ಉಲಿಯಿತು. ನನ್ನ ಮುಂದಿದ್ದ ಪ್ರಯಾಣಿಕರೊಬ್ಬರ ಬ್ಯಾಗು ನಿಗದಿಗಿಂತ ಮೂರ್ನಾಲ್ಕು ಕೆಜಿ ಜಾಸ್ತಿಯಿದೆಯೆಂದು ಒಂದೂವರೆ ಸಾವಿರ ರೂಪಾಯಿ ಹೆಚ್ಚುವರಿ ಕಕ್ಕಿದ್ದನ್ನು ನೋಡಿ ಗಾಬರಿಗೊಂಡಿದ್ದ ನಾನು ಆತಂಕದಿಂದಲೇ ಲಗೇಜು ಎತ್ತಿ ಬೆಲ್ಟಿನ ಮೇಲಿಟ್ಟೆ. ಸದ್ಯ, ತೂಕ ಸರಿಯಾಗಿತ್ತು. ಹಾಗೆಂದು ನಿರಾಳವಾಗುವ ಮೊದಲೇ, ಅಯ್ಯೋ ನನ್ನ ಬ್ಯಾಗು ಎಲ್ಲಿ ಹೋಯಿತೆಂದು ಹೌಹಾರಿದೆ. ಬೆಲ್ಟಿನ ಮೇಲೆ ಇತರ ಬ್ಯಾಗುಗಳೊಂದಿಗೆ ಸರಸರನೆ ಸಾಗಿದ ನನ್ನ ಲಗೇಜು ಮುಂದಿನ ತಿರುವಿನಲ್ಲಿ ನನ್ನನ್ನೊಮ್ಮೆ ನೋಡಿ ನಕ್ಕು ಮರೆಯಾಯಿತು. ‘ಡೋಂಟ್ ವರಿ, ಅದಿನ್ನು ಸಿಗೋದು ವಿಮಾನ ಇಳಿಯೋವಾಗಲೇ’ ಎಂದು ಸಹೋದ್ಯೋಗಿ ಸಮಾಧಾನ ಹೇಳಿದರಾದರೂ ಇಷ್ಟೆಲ್ಲ ಮಂದಿಯ ಲಗೇಜನ್ನು ಹೊತ್ತುಕೊಂಡು ಹೋಗಿ ವಿಮಾನಕ್ಕೆ ಲೋಡ್ ಮಾಡೋರ್ಯಾರು, ನಾವು ಹೋಗಬೇಕಾದ ವಿಮಾನಕ್ಕೇ ಇವೆಲ್ಲ ಲೋಡ್ ಆಗುತ್ತಾವೆಂದು ಏನು ಗ್ಯಾರಂಟಿ, ವಿಮಾನ ಇಳಿಯುವಾಗ ನಿಮ್ಮ ಲಗೇಜು ಲಂಡನಿಗೆ ಹೋಗಿದೆಯೆಂದು ಹೇಳಿದರೆ ಏನು ಮಾಡುವುದೆಂಬ ಟೆನ್ಷನ್ ಕಮ್ಮಿಯಾಗಲೇ ಇಲ್ಲ.
ಬನ್ನಿ ಇನ್ನು ಮೊದಲನೇ ಮಹಡಿಗೆ ಹೋಗಬೇಕು, ಅಲ್ಲಿ ಸೆಕ್ಯೂರಿಟಿ ಚೆಕ್ ಇರುತ್ತೆ ಎಂದು ಸಹೋದ್ಯೋಗಿ ಕರೆದರು. ಒಂದು ಕಡೆ ಸುಮ್ಮನೇ ನಿಂತು ಮೇಲೇರಬಹುದಾದ ಎಸ್ಕಲೇಟರ್ ಜನರಿಂದ ಗಿಜಿಗುಡುತ್ತಿದ್ದರೆ ಪಕ್ಕದಲ್ಲೇ ಯಾರ ಪಾದಸ್ಪರ್ಶವೂ ಇಲ್ಲದೇ ಮೆಟ್ಟಿಲು ಒಂಟಿಯಾಗಿ ಮಲಗಿತ್ತು. ಬನ್ನಿ ಮೆಟ್ಟಿಲಿಗೆ ಬೇಜಾರಾಗೋದು ಬೇಡ ಇಲ್ಲೇ ಹತ್ತೋಣ ಎಂದು ಸಹೋದ್ಯೋಗಿಯನ್ನು ಕರೆದುಕೊಂಡು ಹೋದೆ. ಕುತೂಹಲಕ್ಕಾಗಿ ಎರಡು ನಿಮಿಷ ಅಲ್ಲೇ ನಿಂತು ನೋಡಿದೆ. ಮೆಟ್ಟಿಲು ಹತ್ತಿ ಬರುವವರು ಯಾರೂ ಇರಲಿಲ್ಲ. ನೋಡ್ರೀ ಇಡೀ ಏರ್‍ಪೋರ್ಟಿನಲ್ಲಿ ಮೆಟ್ಟಿಲು ಹತ್ತೋ ತಾಕತ್ತಿರುವವರು ನಾವು ಮಾತ್ರ ಎಂದು ಹೆಮ್ಮೆಯಿಂದಲೇ ಪಕ್ಕದಲ್ಲಿದ್ದವರಿಗೆ ಜ್ಞಾಪಿಸಿದೆ.
ವಿಮಾನ ಹೊರಡೋದು ನಿಗದಿಗಿಂತ ಅರ್ಧ ಗಂಟೆ ತಡವಿದೆ ಎಂದು ಏರ್‍ಲೈನ್ಸ್ ಸಿಬ್ಬಂದಿ ಉದ್ಘೋಷಿಸಿದಾಗ ಮಾತ್ರ ಆತನ ಮೇಲೆ ಇನ್ನಿಲ್ಲದ ಸಿಟ್ಟು ಬಂತು. ನಿಮ್ಮ ಬಸ್ ಅಲ್ಲದಿದ್ರೆ ನಾವು ಬೇರೆ ಬಸ್‍ನಲ್ಲಿ ಹೋಗುತ್ತೀವಿ ಎಂದು ಹೇಳಬೇಕೆನಿಸಿದರೂ ಅದು ಬಸ್ಟ್ಯಾಂಡ್ ಅಲ್ಲವೆಂದು ನೆನಪಾಗಿ ಸುಮ್ಮನಾದೆ. ‘ಡ್ರೈವರ್ ಕಂಡಕ್ಟರ್ ಚಾ ಕುಡಿಯೋದಕ್ಕೆ ಹೋಗಿದಾರಂತೆ. ಬನ್ನಿ ನಾವೂ ಒಂದು ಕಾಫಿ ಕುಡಿದು ಬರೋಣ’ ಅಂತ ಸಹೋದ್ಯೋಗಿಯನ್ನು ಹೊರಡಿಸಿದೆ. ಎರಡು ಕಾಫಿ ಕೊಡಿ ಎಂದು ಗತ್ತಿನಲ್ಲಿ ಹೇಳಿದೆನಾದರೂ ಬಿಲ್ ಬರುವ ಹೊತ್ತಿಗೆ ಗತ್ತು ಮಾಯವಾಗಿತ್ತು. ಏನು ತಿಂದರೂ ಒಟ್ಟು ಹತ್ತು ರೂಪಾಯಿ ಎಂದು ನಮ್ಮ ಕಿಟ್ಟಣ್ಣ ಹೇಳುವಷ್ಟೇ ಕೂಲಾಗಿ ಕಾಫಿ ಅಂಗಡಿಯವ ‘ಟೋಟಲ್ಲೀ ಟೂಟ್ವೆಂಟಿ ಓನ್ಲೀ’ ಎಂದು ಹಲ್ಲುಗಿಂಜಿದ. ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತೆ ಹೇಗೋ ಕಾಫಿ ಮುಗಿಸಿ ಇನ್ನೆಂದೂ ಏರ್‍ಪೋರ್ಟಿನಲ್ಲಿ ಕಾಫಿ ಕುಡಿಯುವ ಯೋಚನೆ ಮಾಡಬಾರದೆಂದು ಶಪಥ ಮಾಡಿದೆ.
ಕಣ್ಣಳತೆಯ ದೂರದಲ್ಲೇ ವಿಮಾನ ನಿಂತಿದೆ, ನಾವು ನಡ್ಕೊಂಡೇ ಹೋಗ್ತೀವಿ ಮಾರ್ರೆ ಎಂದರೆ ಅಲ್ಲಿನವರು ಕೇಳಬೇಕಲ್ಲ. ಅಷ್ಟುದ್ದದ ಹಡಗಿನಂಥಾ ಬಸ್ಸೊಂದು ಬಂದು ಪ್ರಯಾಣಿಕರನ್ನೆಲ್ಲ ಹತ್ತಿಸಿಕೊಂಡಿತು. ಅಲ್ಲಾ ಮಾರಾಯ್ರೆ ವಿಮಾನದಲ್ಲಿ ಹೋಗಬೇಕೆಂದು ಬಂದರೆ ನೀವು ಬಸ್ಸಿನಲ್ಲಿ ಕರ್ಕೊಂಡು ಹೋಗ್ತಿದ್ದೀರಲ್ಲ ಎಂದು ನನ್ನಷ್ಟಕ್ಕೇ ಗೊಣಗಿಕೊಂಡೆ. ಹಾಗೇ ಹೊರಗಿಣುಕಿದರೆ ತರಹೇವಾರಿ ವಾಹನಗಳೆಲ್ಲ ಅತ್ತಿತ್ತ ಓಡಾಡಿಕೊಂಡಿದ್ದವು. ಕಾರಿನಿಂದ ತೊಡಗಿ ಟ್ರ್ಯಾಕ್ಟರ್‍ವರೆಗೆ ಎರಡು, ಮೂರು, ನಾಲ್ಕು ಚಕ್ರದ ವಾಹನಗಳೆಲ್ಲ ಲಗೇಜು, ಆಹಾರ, ಪ್ರಯಾಣಿಕರ ಸಾಗಾಣಿಕೆಯೆಂದು ಸರಭರನೆ ಚಲಿಸುತ್ತಿದ್ದವು. ಎಂತ ಮಾರಾಯ್ರೆ ಏರ್‍ಪೋರ್ಟ್ ಅಂತೆಲ್ಲ ಹೇಳಿ ಉಜಿರೆ ಬಸ್ಟ್ಯಾಂಡಿಗೆ ಕರೆದುಕೊಂಡು ಬಂದಿರಾ ಅಂತ ಕೇಳಬೇಕೆನಿಸಿತು.
ಅಂತೂ ಒಂದು ಉಪ್ಪರಿಗೆ ಮೆಟ್ಟಿಲು ಹತ್ತಿ ವಿಮಾನವೆಂಬೋ ವಿಮಾನದ ಒಳಗೆ ಸಾಗಿದ್ದಾಯಿತು. ಬಾಗಿಲಲ್ಲೇ ನಿಂತಿದ್ದ ಗಗನಸಖಿಯರು ಪಕ್ಕದ ಮನೆ ಸುಧಾ ಆಂಟಿಯಷ್ಟೇ ಪರಿಚಯದವರಂತೆ ಅಷ್ಟಗಲ ನಕ್ಕು ಸ್ವಾಗತ ಹೇಳಿದರು. ಪಾಪ ನಾವೆಲ್ಲಾ ಬರುತ್ತೇವೆಂದು ಎಷ್ಟು ಹೊತ್ತಿಂದ ಕಾದು ಕುಳಿತಿದ್ದಾರೋ ಎಂದುಕೊಂಡು ‘ರೈಟ್ ಪೋಯಿ’ ಎನ್ನುತ್ತಾ ಒಳನಡೆದರೆ, ಥೇಟ್ ರಾಜಹಂಸ ಬಸ್ಸು ಕಂಡಂತಾಗಿ ಒಂದು ಕ್ಷಣ ಆವಾಕ್ಕಾದೆ. ಎಂತ ಮಾರ್ರೆ ವಿಮಾನದ ಒಳಗೆ ಬಸ್ಸೇ ಇರುವುದಾ ಎಂದು ಬೆನ್ನಿಗೇ ನಿಂತಿದ್ದ ಸಹೋದ್ಯೋಗಿಯನ್ನು ಕೇಳಿದರೆ ಅವರು ನನ್ನ ಬಹುನಿರೀಕ್ಷಿತ ಪ್ರಶ್ನೆಗೆ ಘೊಳ್ಳೆಂದು ನಕ್ಕರು. ರಾಜಹಂಸವೋ ಐರಾವತವೋ ನೆಲದ ಮೇಲೆ ಹೋದರೆ ಬಸ್ಸು, ಗಾಳಿಯಲ್ಲಿ ಹೋದರೆ ವಿಮಾನ ಎಂದು ನನ್ನಷ್ಟಕ್ಕೇ ಹೇಳಿಕೊಂಡು ಸೀಟಿನಲ್ಲಿ ಕುಳಿತು ಏರ್‍ಹೋಸ್ಟೆಸ್ ಅಭಿನಯ ಸಮೇತ ಸಾದರಪಡಿಸಿದ ಸೂಚನೆಗಳನ್ನು ಶ್ರದ್ಧಾಭಕ್ತಿಗಳಿಂದ ಕೇಳಿ ಬೆಲ್ಟ್ ಕಟ್ಟಿಕೊಂಡದ್ದಾಯಿತು. ವಿಮಾನ ನಿಧಾನಕ್ಕೆ ಹೊರಟು ಮುಂದಮುಂದಕ್ಕೆ ಸಾಗತೊಡಗಿತು. ಒಂದು ಕಿಲೋಮೀಟರ್... ಎರಡು ಕಿಲೋಮೀಟರ್... ಇವರೆಂತ ಕಲ್ಕತ್ತಾವರೆಗೂ ರೋಡಿನಲ್ಲೇ ಹೋಗುತ್ತಾರಾ ಹೇಗೆ ಎಂಬ ಅನುಮಾನ ಬಂದರೂ ವಿಮಾನ ಹಾರೋ ಮೊದಲು ರನ್‍ವೇಯಲ್ಲಿ ಒಂದಷ್ಟು ದೂರ ಓಡಿ ಆಮೇಲೆ ಮೇಲಕ್ಕೇರುತ್ತದೆ ಎಂಬ ಹಳೇ ಪಾಠ ನೆನಪಾಯಿತು. ಇದ್ದಕ್ಕಿದ್ದ ಹಾಗೆ ಜಯಂಟ್ ವೀಲ್‍ನಲ್ಲಿ ಕುಳಿತಂತೆ ಮೈಯೆಲ್ಲ ಹಗುರವಾದಂತೆ ಭಾಸವಾಗುತ್ತಿದೆಯಲ್ಲ ಅಂತ ಒಂದಿಷ್ಟು ಕಳವಳದಿಂದ ಹೊರಗೆ ನೋಡಿದರೆ ಉಕ್ಕಿನ ಹಕ್ಕಿ ಅದಾಗಲೇ ನೆಲ ಬಿಟ್ಟು ಮೇಲಕ್ಕೇರುತ್ತಿತ್ತು.
ಕಿಟಕಿ ಪಕ್ಕ ಸೀಟು ಸಿಗೋ ಹಾಗೆ ಬೋರ್ಡಿಂಗ್ ಪಾಸ್ ಕೊಟ್ಟ ಪುಣ್ಯಾತ್ಗಿತ್ತಿಗೆ ಅಲ್ಲಿಂದಲೇ ಥ್ಯಾಂಕ್ಸ್ ಹೇಳಿ ಚಿಕ್ಕವನಿದ್ದಾಗ ಯಾವಾಗಲೂ ಕಿಟಕಿ ಬಳಿಯ ಸೀಟೇ ಬೇಕೆಂದು ಅಕ್ಕಂದಿರೊಟ್ಟಿಗೆ ಜಗಳವಾಡುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾ ಹಾಗೇ ಹೊರಗೆ ನೋಡಿದರೆ ಕೆಳಗೆ ಗೂಗಲ್ ಮ್ಯಾಪು ಕಾಣಿಸುತ್ತಿತ್ತು! ದೊಡ್ಡದೊಡ್ಡ ಕಟ್ಟಡಗಳು, ಮೇಲ್ಸೇತುವೆಗಳು, ಮರಗಿಡಗಳು, ನದಿ ಗುಡ್ಡಗಳೆಲ್ಲ ನಿಧಾನಕ್ಕೆ ಸಣ್ಣದಾಗುತ್ತ ಈ ಮ್ಯಾಪಿನೊಳಗೆ ಸೇರಿಹೋದವು. ಆಕಾಶದಲ್ಲಿ ಯಾರು ಮಾರಾಯ್ರೆ ಸುಡುಮಣ್ಣು ಇಡುವವರು ಎಂದು ಕೇಳಬೇಕೆನಿಸುವಷ್ಟು ಸಹಜವಾಗಿ ವಿಮಾನದ ಕೆಳಗೆ ಬೆಳ್ಳನೆಯ ಮೋಡಗಳು ತೇಲಾಡಿಕೊಂಡಿದ್ದವು.
ಎಂತ ವಿಮಾನ ಸಾರ್, ಇದಕ್ಕಿಂದ ನಮ್ಮ ಆಟೋ ಸ್ಪೀಡ್ ಹೋಗೋದಿಲ್ವಾ; ಇದರ ಜತೆ ನಡ್ಕೊಂಡು ಕೂಡ ಹೋಗ್ಬಹುದು ಎಂದು ಪಕ್ಕದಲ್ಲಿದ್ದ ಸ್ನೇಹಿತರ ಬಳಿ ಹೇಳಿದೆ. ‘ಹೌದೌದು ಹೀಗೇ ಹೋಗೋದು ಇದು. ದೊಡ್ಡಬಳ್ಳಾಪುರದಲ್ಲಿ ನಿಲ್ಸಿ ತಟ್ಟೆ ಇಡ್ಲಿ ತಿನ್ನಿಸ್ಕೊಂಡು ಹೋಗ್ತಾನೆ’ ಅಂತ ಅವರು ಮತ್ತೆ ನಕ್ಕರು. ಇನ್ನೂ ಎತ್ತರಕ್ಕೆ ಹೋಗಿ ಕ್ರೂಯಿಸಿಂಗ್ ಮಾಡತೊಡಗಿದಾಗಲಂತೂ ವಿಮಾನದ ಚಲನೆಯೂ ಅನುಭವಕ್ಕೆ ಬರದಂತಾಯಿತು. ಗಂಟೆಗೆ 840 ಕಿ.ಮೀ. ವೇಗ ಅಂತೆ, ಮಣ್ಣಾಂಗಟ್ಟಿ ಇವರದ್ದು, ಬಹುಶಃ ಆಕಾಶಕ್ಕೆ ಬಂದವನೇ ಸುಸ್ತಾಗಿ ಒಂದು ಕಡೆ ಪಾರ್ಕಿಂಗ್ ಮಾಡ್ಕೊಂಡಿದಾನೆ ಅಂತಂದೆ. ನನ್ನ ಕತೆ ಸರಿ, ಉಳಿದವರೆಲ್ಲ ಏನು ಮಾಡ್ತಿದಾರೆ ನೋಡೋಣ ಎಂದು ಹಾಗೇ ಸಹಪ್ರಯಾಣಿಕರತ್ತ ಒಮ್ಮೆ ದೃಷ್ಟಿ ಹರಿಸಿದೆ. ಬಹುತೇಕರು ಅದಾಗಲೇ ನಿದ್ದೆಗೆ ಜಾರಿ ಗೊರಕೆ ಹೊಡೆಯುತ್ತಿದ್ದರು. ಅಲ್ಲಾ ಮಾರ್ರೆ ವಿಮಾನಕ್ಕೆ ಬಂದು ನೀವೆಲ್ಲ ನಿದ್ದೆ ಮಾಡುತ್ತಿದ್ದೀರಲ್ಲ, ಮಾನ ಮರ್ಯಾದೆ ಉಂಟಾ ಎಂದು ಎಬ್ಬಿಸಿ ಕೇಳಬೇಕೆನಿಸಿದರೂ ವಾಪಸು ಬರುವಾಗ ನನ್ನದೂ ಇದೇ ಕಥೆ ಇರಬಹುದೆಂದು ಸುಮ್ಮನಾದೆ.
ವಿಮಾನ ಮೂವತ್ತೈದು ಸಾವಿರ ಅಡಿಯಷ್ಟು ಎತ್ತರದಲ್ಲಿ ಬಂಗಾಳ ಕೊಲ್ಲಿಯ ಮೇಲೆ ಹಾರುತ್ತಿರುವಾಗಲಂತೂ, ‘ಆಕಾಶ ಎಲ್ಲಿದೆ, ನಮ್ಮ ಮೇಲೆಯಾ ಕೆಳಗಾ’ ಎಂದು ನನ್ನನ್ನು ನಾನೇ ಕೇಳಿಕೊಂಡೆ. ಸೂರ್ಯನ ಪ್ರಖರ ಬೆಳಕಿಗೆ ಫಳಫಳನೆ ಮಿಂಚುತ್ತಿದ್ದ ವಿಮಾನದ ರೆಕ್ಕೆಗಳ ಹೊರತಾಗಿ ಹೊರಗೆ ಇನ್ನೇನೂ ಕಾಣುತ್ತಿರಲಿಲ್ಲ. ದೃಷ್ಟಿ ಹಾಯಿಸಿದಷ್ಟೂ ದೂರಕ್ಕೆ ಖಾಲಿ ನೀಲಾಕಾಶ. ಕೆಳಗೆ, ಮೇಲೆ, ಸುತ್ತಮುತ್ತ ಎಲ್ಲೆಲ್ಲೂ ನಿಗೂಢ ವ್ಯೋಮ. ಕೆಳಗಿನ ಗೂಗಲ್ ಮ್ಯಾಪೂ ಈಗ ಕಾಣುತ್ತಿಲ್ಲ. ಹಾಗಾದರೆ ಕೆಳಗಿರುವುದು, ಮೇಲಿರುವುದು ಎಲ್ಲವೂ ಆಕಾಶವೇ? ಭೂಮಿಗೂ ಆಕಾಶಕ್ಕೂ ಯತಾರ್ಥವಾಗಿ ಯಾವ ವ್ಯತ್ಯಾಸವೂ ಇಲ್ಲವೇ? ಭೂಮಿಯೇ ಆಕಾಶ, ಆಕಾಶವೇ ಭೂಮಿಯೇ? ಇದನ್ನೇ ದೊಡ್ಡವರು ದ್ಯಾವಾ-ಪೃಥಿವೀ ಎಂದಿರುವುದೇ? ನಾನು ಧ್ಯಾನಸ್ಥನಾದೆ.