ಅಪ್ಪ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅಪ್ಪ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜೂನ್ 19, 2022

ಅಪ್ಪನೆಂಬ ಅಂತರಂಗದ ಬೆಳಕು

'ಬೋಧಿವೃಕ್ಷ' 18-25 ಜೂನ್ 2022ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

Postmen in the Mountains ಎಂಬೊಂದು ಚೈನೀಸ್ ಚಲನಚಿತ್ರವಿದೆ. ಕಾಲ್ನಡಿಗೆಯಲ್ಲೇ ಕಡಿದಾದ ಬೆಟ್ಟಗುಡ್ಡಗಳನ್ನು ಏರಿಳಿಯುತ್ತಾ ಪತ್ರಗಳ ಬಟವಾಡೆ ಮಾಡಿಕೊಂಡು ತನ್ನ ಸುದೀರ್ಘ ವೃತ್ತಿಜೀವನವನ್ನು ಕಳೆದ ಅಂಚೆಯಣ್ಣನ ಕಥೆಯದು. ಸಿನಿಮಾ ಆರಂಭವಾಗುವುದು ಅಂಚೆಯಣ್ಣನ ವೃತ್ತಿಬದುಕಿನ ಕೊನೆಯ ದಿನದಿಂದ. ವಯೋಸಹಜ ಅನಾರೋಗ್ಯದಿಂದಾಗಿ ಅಂಚೆಯಣ್ಣ ತನ್ನ ಉದ್ಯೋಗಕ್ಕೆ ವಿದಾಯ ಹೇಳಬೇಕಾದ ಸಂದರ್ಭ ಬಂದಾಗ ಆ ಉದ್ಯೋಗ ಅವನ ಮಗನಿಗೆ ಸಿಗುತ್ತದೆ.  ಮಾಡಬೇಕಾದ ಕೆಲಸದಿಂದ ತೊಡಗಿ ನಡೆಯಬೇಕಾದ ದಾರಿಯವರೆಗೆ ಅವನಿಗೆ ಎಲ್ಲವೂ ಹೊಸದು. ಅದನ್ನು ಪರಿಚಯ ಮಾಡಿಕೊಡುವುದಕ್ಕಾಗಿ ಅಪ್ಪ ಮಗನೊಂದಿಗೆ ಹೊರಟುಬಿಡುತ್ತಾನೆ. ಬಹುಕಾಲದಿಂದ ಅಂಚೆಯಣ್ಣನ ಒಡನಾಡಿಯಾಗಿದ್ದ ನಾಯಿಯೂ ಜತೆಯಾಗುತ್ತದೆ. 

ಇಡೀ ಚಲನಚಿತ್ರದಲ್ಲಿ ಇರುವುದು ಅಪ್ಪ-ಮಗನ ಈ ಸಹಪಯಣದ ಕಥನ. ಅಂತಿಂಥ ಪಯಣವಲ್ಲ ಅದು. ಭರ್ತಿ ಇನ್ನೂರ ಅರವತ್ತು ಮೈಲಿಗಳ ನಡಿಗೆ. ಅಷ್ಟನ್ನು ಪೂರೈಸುವುದಕ್ಕೆ ಮೂರು ಹಗಲೂ ಮೂರು ಇರುಳೂ ಬೇಕು. ಗುಡ್ಡಗಾಡು ಪ್ರದೇಶಗಳಲ್ಲಿ ಚದುರಿಕೊಂಡಿರುವ ಸಣ್ಣಪುಟ್ಟ ಹಳ್ಳಿಗಳು, ಎಲ್ಲೋ ಅಡಗಿರುವ ಮನೆಗಳನ್ನು ಹುಡುಕಿ ಹೋಗಿ ಅಂಚೆ ಬಟವಾಡೆ ಮಾಡಿ ಮುಂದುವರಿಯಬೇಕು. ವಿಚಿತ್ರವೆಂದರೆ, ತರುಣ ಮಗ ತನ್ನ ದಿನನಿತ್ಯದ ಕೆಲಸಗಳನ್ನು, ಓಡಾಡಬೇಕಾದ ದಾರಿಯನ್ನು ಗಮನಿಸುವ ಬದಲು ತನ್ನ ತಂದೆಯನ್ನು ಗಮನಿಸಲು ಆರಂಭಿಸುತ್ತಾನೆ. ತಂದೆ ಮಗನನ್ನು ಗಮನಿಸಲು ಆರಂಭಿಸುತ್ತಾನೆ.

ಅವರಿಬ್ಬರೂ ಅಷ್ಟೊಂದು ಹತ್ತಿರದಿಂದ ನೋಡಿಕೊಂಡದ್ದು, ಮಾತನಾಡಿದ್ದು, ಒಬ್ಬರನ್ನೊಬ್ಬರು ಗಮನಿಸಿದ್ದು ಎರಡೂವರೆ ದಶಕದಲ್ಲಿ ಅದೇ ಮೊದಲು. ಅಂಚೆಚೀಲ ಬೆನ್ನಿಗೇರಿಸಿಕೊಂಡು ಒಮ್ಮೆ ಹೊರಟರೆ ಅಪ್ಪ ಹಿಂತಿರುಗುವುದು ಒಂದಷ್ಟು ದಿನಗಳಾದಮೇಲೆಯೇ. ಮನೆಯಲ್ಲಿ ಅಮ್ಮ-ಮಗ ಮಾತ್ರ. ಒಂದು ನಡಿಗೆ ಮುಗಿಸಿ ಮನೆಗೆ ಹಿಂತಿರುಗಿದ ಅಪ್ಪ ಮತ್ತೆ ಬೆಳಗಾಗುವ ಹೊತ್ತಿಗೆ ಎದ್ದು ಮುಂದಿನ ಪಯಣ ಆರಂಭಿಸಿರುತ್ತಾನೆ. ಮಗನ ಮನಸ್ಸಿನಲ್ಲಿರುವುದು ಅಪ್ಪನೆಂಬ ಆಕೃತಿ ಮಾತ್ರ. ಇಷ್ಟು ವರ್ಷಗಳಾದ ಮೇಲೆಯೂ ಅದರೊಂದಿಗೆ ಒಂದು ಭಾವಬಂಧ ಬಲಿತೇ ಇಲ್ಲ. ಅದಕ್ಕೆ ಸಣ್ಣ ಅವಕಾಶವೂ ಇರಲಿಲ್ಲ.  

ಅಂಥದ್ದೊಂದು ಅವಕಾಶವಾಗಿ ಒಲಿದು ಬಂದದ್ದು ಈ ಸಹಪಯಣದಿಂದ. ಪಯಣದಲ್ಲಿ ಎದುರಾಗುವ ಪ್ರತಿಕ್ಷಣವೂ ತರುಣ ಮಗನಿಗೆ ಹೊಚ್ಚಹೊಸದು. ಅವನಿಗೆ ಪ್ರತಿಯೊಂದರಲ್ಲೂ ವೈಶಿಷ್ಟ್ಯ, ಸ್ವಾರಸ್ಯ, ಕೌತುಕ. ಮುಕ್ಕಾಲು ಪಯಣ ಮುಗಿಯುವ ಹೊತ್ತಿಗೆ ನದಿಯೊಂದು ಎದುರಾಗುತ್ತದೆ. ಸೇತುವೆಯಿಲ್ಲದ ಅದನ್ನು ಹಾಗೆಯೇ ಕಾಲ್ನಡಿಗೆಯಲ್ಲಿ ದಾಟುವುದು ಕ್ರಮ. ಮಗ ನಾಯಿಯೊಂದಿಗೆ ಮೊದಲು ನದಿ ದಾಟಿ ಬೆನ್ನಮೇಲಿನ ಚೀಲವನ್ನು ಇನ್ನೊಂದು ದಡದಲ್ಲಿ ಇಟ್ಟು ಬರುತ್ತಾನೆ. ತಂದೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಇನ್ನೊಮ್ಮೆ ದಾಟುತ್ತಾನೆ. ಅಪ್ಪ-ಮಗ ಇಬ್ಬರಿಗೂ ಅದೊಂದು ವರ್ಣನಾತೀತ ಅನುಭೂತಿ.

“ಯಾವಾಗ ಮಗ ಅಪ್ಪನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಾನೋ ಆಗ ಮಗ ಬೆಳೆದು ದೊಡ್ಡವನಾದನೆಂದು ಅರ್ಥ ಅಂತ ನಮ್ಮೂರಿನ ಹಿರಿಯರು ಹೇಳ್ತಾ ಇದ್ರು. ನಾನು ಎಳೆಯವನಿದ್ದಾಗ ಅಪ್ಪ ನನಗೊಬ್ಬ ಭಾರೀ ಆಕೃತಿ ಆಗಿದ್ದ. ಇವನನ್ನು ನಾನು ಎಂದಾದರೂ ಹೊತ್ತುಕೊಂಡು ಹೋಗುವುದು ಸಾಧ್ಯವಿದೆಯೇ ಅಂತ ಕಳವಳಪಡುತ್ತಿದ್ದೆ...” ನದಿ ದಾಟುತ್ತಲೇ ಮಗ ಜ್ಞಾಪಿಸಿಕೊಳ್ಳುತ್ತಾನೆ.

ಅಪ್ಪನೊಳಗೂ ಇನ್ಯಾವುದೋ ಒಂದು ಭಾವಸ್ಫುರಣ ಉಂಟಾಗಿ ಮನಸ್ಸು ಒದ್ದೆಯಾಗಿರುತ್ತದೆ. ಬಹುಶಃ ಅವನ ಮನಸ್ಸಿನಲ್ಲೂ ಇರುವುದು ಮಗನ ಎದೆಯೊಳಗೆ ಹರಿದಾಡುತ್ತಿರುವ ಬೇಗುದಿಯೇ. ಅವನ ಕಣ್ಣುಗಳಲ್ಲಿರುವುದು ತಂದೆಯಾಗಿ ತಾನು ಮಾಡಬೇಕಾದ್ದನ್ನು ಮಾಡಿದ್ದೇನೆಯೇ ಎಂಬ ಪ್ರಾಮಾಣಿಕ ಪ್ರಶ್ನೆ. ನದಿಯನ್ನು ದಾಟುತ್ತಲೇ ಅಪ್ಪ-ಮಗ ಪರಸ್ಪರ ಮಾತುಗಳೇ ಇಲ್ಲದೆ ತಮ್ಮತಮ್ಮ ನೆಲೆಗಳನ್ನು, ಪಾತ್ರಗಳನ್ನು ಅರ್ಥೈಸಿಕೊಳ್ಳುವ ರೀತಿ ಮಾತ್ರ ಅದ್ಭುತ. ನದಿಯನ್ನು ದಾಟಿ ಮಗನ ಹೆಗಲಿನಿಂದ ಇಳಿದ ತಂದೆಗೆ ಆತನ ಮುಖ ನೋಡುವ ಧೈರ್ಯ ಇಲ್ಲ. ಮಗನಿಗೂ ಅಪ್ಪನ ಕಣ್ಣುಗಳನ್ನು ನೋಡುವ ಧೈರ್ಯ ಇಲ್ಲ. “ಈ ಪೋಸ್ಟ್ ಬ್ಯಾಗಿಗಿಂತಲೂ ನೀನೇ ಬಹಳ ಹಗುರ ಇದ್ದೀಯಾ” ಎಂದು ತಂದೆಯ ಮಾತುತಪ್ಪಿಸಲು ಪ್ರಯತ್ನಿಸುತ್ತಾನೆ.

ಅಪ್ಪನೆಂದರೆ ಹಾಗೆಯೇ. ಅದೊಂದು ವಿಚಿತ್ರ ವ್ಯಕ್ತಿತ್ವ. ಅಂಚೆಯಣ್ಣನ ಎಳೆಯ ಮಗನಿಗೆ ಕಂಡ ಹಾಗೆ ಅದೊಂದು ಭಯಂಕರ ಆಕೃತಿ. ಹೆಚ್ಚೆಂದರೆ ಅದು ಜಗತ್ತಿನ ಎಲ್ಲ ಕೆಲಸಗಳನ್ನೂ ಮಾಡಬಲ್ಲ, ಬೇಕಾದ್ದನ್ನು ತಂದುಕೊಡಬಲ್ಲ ಸೂಪರ್‍ಮ್ಯಾನ್ ಆಗಬಹುದು. ಇನ್ನು ಕೆಲವರಿಗೆ ಅದೊಂದು ಒರಟು ಮನುಷ್ಯ. ಅಮ್ಮನೊಂದಿಗೆ ಇರಬಹುದಾದ ಸಲುಗೆಯನ್ನು ಈ ವ್ಯಕ್ತಿಯೊಂದಿಗೆ ಇಟ್ಟುಕೊಳ್ಳುವುದು ಕಷ್ಟ. ಅಮ್ಮನಲ್ಲಾದರೆ ಏನು ಬೇಕಾದರೂ ಹೇಳಿಕೊಳ್ಳಬಹುದು. ಅಪ್ಪನೊಂದಿಗೆ ಮಾತಾಡುವುದಕ್ಕೆ ಅಮ್ಮನ ವಕಾಲತ್ತು ಬೇಕು. ಅನೇಕ ಸಲ ಅಮ್ಮನಿಗೂ ಬಚಾವಾಗುವುದಕ್ಕೆ ಈ ಅಪ್ಪನೆಂಬ ಗುರಾಣಿಯೇ ಬೇಕು. ‘ಇರು, ಅಪ್ಪ ಬರಲಿ, ಎಲ್ಲ ಹೇಳುತ್ತೇನೆ’ – ಆಕೆ ಹಾಗೆಂದು ಮಕ್ಕಳ ಬಹುಪಾಲು ಉಪಟಳಗಳನ್ನು ನಿಯಂತ್ರಿಸಿಯಾಳು.

ಆದರೆ ಅಪ್ಪನೆಂದರೆ ಅಷ್ಟೇ ಅಲ್ಲವೆಂದು ಮನದಟ್ಟು ಆಗುವ ಹೊತ್ತಿಗೆ ಬದುಕಿನ ಅರ್ಧ ಭಾಗವೇ ಸವೆದುಹೋಗಿರುತ್ತದೋ ಏನೋ! ಅಮ್ಮನೆಂದರೆ ಸುಲಭವಾಗಿ ಅರ್ಥವಾಗುವ ಸುಂದರ ಭಾವಗೀತೆ; ಅಪ್ಪನಾದರೋ ತಕ್ಷಣಕ್ಕೆ ಅರ್ಥವಾಗದ ಸುದೀರ್ಘ ಕಥನಕವನ. ಅಮ್ಮನೆಂದರೆ ಎರಡೂ ದಡಗಳಿಗೆ ತಂಪನ್ನುಣಿಸುತ್ತಾ ಮೆಲ್ಲಮೆಲ್ಲನೆ ಹರಿಯುವ ತಣ್ಣನೆಯ ತೊರೆ; ಅಪ್ಪನಾದರೋ ಆಳ-ಅಗಲ ತಕ್ಷಣಕ್ಕೆ ಅರಿವಿಗೆ ಬಾರದೆ ತನ್ನಷ್ಟಕ್ಕೇ ಹರಿಯುತ್ತಿರುವ ಘನಗಂಭೀರ ವಿಸ್ತಾರ ನದಿ. ಆತನ ಮುಖವನ್ನಷ್ಟೇ ನೋಡಿ ಏನನ್ನಾದರೂ ಅರ್ಥ ಮಾಡಿಕೊಳ್ಳುವುದು ಕಷ್ಟ. ಏಕೆಂದರೆ ಮುಖದಲ್ಲೇ ಆತ ಎಲ್ಲವನ್ನೂ ವ್ಯಕ್ತಪಡಿಸಲಾರ.

‘ನಿನ್ನನ್ನು ಪ್ರೀತಿಸುತ್ತೇನೆ ಎಂದು ತಂದೆ ಹೇಳುವುದಿಲ್ಲ, ಆದರೆ ಅದನ್ನು ಮಾಡುತ್ತಲೇ ಇರುತ್ತಾನೆ’ ಎಂಬ ಮಾತಿದೆ. ಹೌದು, ಆತ ಮಾತಿನಲ್ಲೇ ಎಲ್ಲವನ್ನೂ ಹೇಳಲಾರ. ಹತ್ತಿರದಿಂದ ನೋಡುವವರಿಗೆ ಕಂಡೀತು ಅಷ್ಟೆ. ತನ್ನೊಳಗೆ ತಾನೇ ಕರಗಿ ನೀರಾಗಿ ಮತ್ತೆ ಗಟ್ಟಿಯಾಗುವ ಮೇಣದಂತೆ ಅವನು- ಸಂತೋಷವಾದರೂ, ದುಃಖವಾದರೂ ಹೊರಮುಖದಲ್ಲಿ ಪ್ರಕಟವಾಗುವುದು ತುಸು ಅಪರೂಪವೇ. ಪ್ರಕಟವಾದ ಕ್ಷಣಕ್ಕೆ ಆತ ಅಪ್ಪನಾಗಿ ಉಳಿಯದೆ ಅಮ್ಮನಾಗುತ್ತಾನೆ: ಎಂಬಲ್ಲಿಗೆ ವಾಸ್ತವವಾಗಿ ಅಪ್ಪ-ಅಮ್ಮ ಇಬ್ಬರೂ ಒಂದೇ ಎಂದಾಯಿತು. ಗಂಡಿನೊಳಗೊಂದು ಹೆಣ್ಣು, ಹೆಣ್ಣಿನೊಳಗೊಬ್ಬ ಗಂಡು ಇರುವುದರಿಂದ ಅಲ್ಲವೇ ಪ್ರಕೃತಿ-ಪುರುಷರ ಪರಿಕಲ್ಪನೆ, ಆಕಾಶ-ಭೂಮಿಯ ತತ್ವಗಳು ಸಾಧ್ಯವಾಗಿರುವುದು? 

‘ಆತ್ಮಾ ವೈ ಪುತ್ರ ನಾಮಾಸಿ’- ಅಪ್ಪನೇ ಮಗನಾಗಿ ಹುಟ್ಟುತ್ತಾನೆ: ಇದು ಪೂರ್ವಿಕರ ನಂಬಿಕೆ. ತಂದೆಯಾಗುವುದು ಕಷ್ಟವಲ್ಲವಂತೆ, ತಂದೆಯಾಗಿರುವುದು ಕಷ್ಟ. ಎಳೆಯ ಮಗುವಿನಿಂದ ತೊಡಗಿ ವಯೋವೃದ್ಧರವರೆಗೆ ಎಲ್ಲ ಹೆಣ್ಣುಮಕ್ಕಳನ್ನೂ ‘ಅಮ್ಮಾ’ ಎಂದು ಸಂಬೋಧಿಸಬಹುದು. ಆದರೆ ‘ಅಪ್ಪ’ ಎಂದು ಕರೆಯುವುದು ಒಬ್ಬನನ್ನೇ. ಅದಕ್ಕೆ ಆ ಸ್ಥಾನ ಅಷ್ಟು ವಿಶಿಷ್ಟವಾದದ್ದು. ಆ ಸ್ಥಾನಕ್ಕೆ ತಲುಪುವುದು ಬದುಕಿನ ಸಹಜ ಪ್ರಕ್ರಿಯೆ, ಆದರೆ ತಂದೆಯಾಗಿ ಮಾಡಬೇಕಾದ್ದನ್ನು ಆತ್ಮತೃಪ್ತಿ ದಕ್ಕುವಂತೆ ಮಾಡುವುದು ಕೊಂಚ ನಿಧಾನಪ್ರಕ್ರಿಯೆ. ತಂದೆಯಾಗಿ ಯಾವ ಕರ್ತವ್ಯ ನಿರ್ವಹಿಸಬೇಕೋ ಅದನ್ನು ಸರಿಯಾಗಿ ನಿರ್ವಹಿಸದವನು  ಮುಂದೆ ತನ್ನ ಮಕ್ಕಳಿಂದಲೂ ಅಂತಹದನ್ನು ನಿರೀಕ್ಷಿಸಲಾಗದು.

ಮಕ್ಕಳು ಹದಿಹರೆಯ ದಾಟಿ ಪ್ರಾಯಪ್ರಬುದ್ಧರಾದ ಮೇಲೆ ಅಪ್ಪ ಅವರನ್ನು ಸ್ನೇಹಿತರಂತೆ ನೋಡಿಕೊಳ್ಳಬೇಕೆಂಬುದೊಂದು ಲೋಕರೂಢಿ. ಅಪ್ಪ ಗೆಳೆಯನೂ ಆಗಿರುವುದರಿಂದಲೇ ಅವನೊಳಗೊಬ್ಬ ಮಾರ್ಗದರ್ಶಕನೂ ಸಲಹೆಗಾರನೂ ಇರುತ್ತಾನೆ. ಅಪ್ಪ ಪ್ರತಿಯೊಬ್ಬನ ಬೆನ್ನಹಿಂದೆ ಇರುವ ಒಬ್ಬ ಫ್ರೆಂಡ್, ಗೈಡ್ ಅಂಡ್ ಫಿಲಾಸಫರ್. ಹಾಗೆಂದು ಆತ ವಾಚಾಳಿಗಳಂತೆ ಎಲ್ಲವನ್ನೂ ಮಾತಿನಲ್ಲೇ ಹೇಳಿರುತ್ತಾನೆ ಎಂದೇನೂ ಇಲ್ಲ.  ಅವನ ಮೌನವನ್ನೂ, ಮೌನದೊಳಗಿರುವ ಸೂಚನೆಗಳನ್ನೂ ಅರ್ಥಮಾಡಿಕೊಳ್ಳಬಲ್ಲವರೇ ಜೀವನದಲ್ಲಿ ಯಶಸ್ಸನ್ನು ಕಂಡಾರು. ಅಪ್ಪ ಎಂದರೆ ಅಂತರಂಗದಲ್ಲಿ ಸದಾ ಬೆಳಗುತ್ತಿರುವ ಹೊಂಬೆಳಕು. ಆ ಬೆಳಕು ಒಳಗಿನಿಂದಲೇ ಪ್ರಭೆಯನ್ನು ಹೊಮ್ಮಿಸುವ ಮಿಂಚುಹುಳ ಆಗಿರುವುದರಿಂದಲೇ ನಮ್ಮ ವ್ಯಕ್ತಿತ್ವವನ್ನೂ ಬೆಳಗುತ್ತದೆ, ಭವಿಷ್ಯದ ದಾರಿಯನ್ನೂ ತೋರಿಸುತ್ತದೆ. ಆ ಬೆಳಕು ಮುಗಿಯುವುದೇ ಇಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಮಾರ್ಚ್ 31, 2020

ಕಾಡಿನ ನಡುವೆ ಕಲಿಕೆಯ ಕನಸು: ಮುಂಡೂರುಪಳಿಕೆ ಶಾಲೆ ಎಂಬ ಊರ ಸಮಸ್ತರ ಕೂಸು

ಸುಮಾರು 11 ವರ್ಷಗಳ ಹಿಂದೆ, ಅಂದರೆ 2009ರಲ್ಲಿ, ಅಪ್ಪನ ನೆನಪುಗಳನ್ನು ಕೆದಕಿ ನಿರೂಪಿಸಿದ ಬರೆಹ  ಇದು. ನಮ್ಮ ಮುಂಡೂರುಪಳಿಕೆ ಶಾಲೆ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದಾಗ ಬೆಳ್ತಂಗಡಿಯ 'ಸುದ್ದಿ ಬಿಡುಗಡೆ'ಗಾಗಿ ಬರೆದದ್ದು. ಆಗ ಅದು ಪ್ರಕಟವಾಗಲಿಲ್ಲ. ಯಾಕೆ ಎಂದು ನನಗೆ ನೆನಪಿಲ್ಲ. ಈಗ ಯಾಕೋ ಪ್ರಕಟಿಸಬೇಕೆನಿಸಿತು.


ಗೊಂಡಾರಣ್ಯ. ಮೈಲುದೂರಕ್ಕೊಂದು ಮನೆ. ಜನರ ಮುಖ ಕಾಣಸಿಗುವುದೇ ಅಪರೂಪ.  ರಸ್ತೆ, ವಾಹನಗಳಂತೂ ಕನಸಿಗೂ ಮೀರಿದ ವಿಷಯಗಳು. ಇಂತಿಪ್ಪ ಮುಂಡೂರುಪಳಿಕೆಯೆಂಬೋ ಕಾಡೂರಿನಲ್ಲಿ ಒಂದು ಶಾಲೆ ಬೇಕೆಂಬ ಬಯಕೆ ನಮ್ಮಲ್ಲಿ ಯಾವ ಕ್ಷಣ ಮೊಳಕೆಯೊಡೆಯಿತೋ ಗೊತ್ತಿಲ್ಲ. ಆದರೆ ನಮ್ಮ ಮಕ್ಕಳಾದರೂ ಒಳ್ಳೆ ವಿದ್ಯಾವಂತರಾಗಿ ಈ ಊರಿಗೆ ಅಂಟಿರುವ ಪ್ರಗತಿಯ ತೊಡಕುಗಳನ್ನು, ಇಲ್ಲಿನ ಬಡತನವನ್ನು ನಿವಾರಿಸುವಂತಾಗಬೇಕು ಎಂಬುದು ನಮ್ಮೆಲ್ಲರ ಮಹದಂಬಲವಾಗಿದ್ದಂತೂ ನೂರಕ್ಕೆ ನೂರು ನಿಜ.

ನಾನು 1975ರ ಜೂನಿನಲ್ಲಿ ಮುಂಡೂರುಪಳಿಕೆಗಿಂತ ಇನ್ನೂ ಎರಡು ಮೈಲು ಆಚೆಗಿರುವ ಸಿಬಂತಿಯಲ್ಲಿ ಬಂದು ನೆಲೆಯೂರಿದ್ದೆ. ನಾನಿದ್ದ ಗುಡಿಸಲು ಬಿಟ್ಟರೆ ಅಲ್ಲೆಲ್ಲೋ ದೂರದ ಸಂಕುವೈಲು, ಅದರಾಚೆಯ ಬಾಳ್ತಿಮಾರು, ಕಕ್ಕುದೋಳಿಗಳಲ್ಲಿ ಎರಡು ಮೂರು ಕುಟುಂಬಗಳು. ಮೈಲುಗಳಷ್ಟು ದೂರ ದಟ್ಟ ಕಾಡಿನಲ್ಲಿ ನಡೆಯಲು ಸಾಧ್ಯವಾದರೆ ನೇತ್ರಾವತಿ ದಂಡೆಯಲ್ಲಿರುವ ಬೀಬಿಮಜಲು, ಸುದೆಪೊರ್ದು, ಚೆಂಬುಕೇರಿ, ಮೈಪಾಳ. ಇನ್ನೊಂದು ದಿಕ್ಕಿನಲ್ಲಿ ಹೋದರೆ  ಮಿತ್ತಡ್ಕ, ಪೊನ್ನಿತ್ತಿಮಾರು, ಕುರ್ಲೆ, ತೆಂಕುಬೈಲು, ಬದಿಜಾಲು. ನೀವು ನಂಬಲೇಬೇಕು- ಇಷ್ಟು ವಿಸ್ತಾರವಾದ ವ್ಯಾಪ್ತಿಯಲ್ಲಿ ಹುಟ್ಟಿದ ಯಾವುದೇ ಮಗುವೂ ಶಿಕ್ಷಣದಿಂದ ವಂಚಿತವಾಗಿಯೇ ಉಳಿಯಬೇಕಿತ್ತು. ಶಾಲೆ ಬೇಕೆಂದರೆ ಎಂಟೋ ಹತ್ತೋ ಕಿಲೋಮೀಟರ್ ನಡೆಯಬೇಕು. ಐದು ವರ್ಷದ ಒಂದು ಮಗು ಅಷ್ಟು ದೂರ ನಡೆದುಹೋಗಿ ಒಂದನೇ ಕ್ಲಾಸಾದರೂ ಮುಗಿಸುವುದುಂಟೇ?

ಮೊದಲೇ ಹೇಳಿದಂತೆ ನಮ್ಮದು ಅಂತಹ ಜನದಟ್ಟಣೆಯ ಊರಂತೂ ಆಗಿರಲಿಲ್ಲ. ಹಾಗೆಂದು ಇರುವ ಮಕ್ಕಳಿಗಾದರೂ ಶಿಕ್ಷಣದ ಬೆಳಕು ಕಾಣಿಸಲೇಬೇಕಿತ್ತು. ನಾನು ಪ್ರಾಥಮಿಕ ಶಿಕ್ಷಣವನ್ನೇ ಪೂರ್ತಿಯಾಗಿ ಮುಗಿಸಿರಲಿಲ್ಲವಾದರೂ ಜೀವನಾನುಭವದ ಪಾಠ ನನಗಿತ್ತು. ಒಂದು ಶಾಲೆ ಕೇವಲ ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕಷ್ಟೇ ಸೀಮಿತವಲ್ಲ, ಅದಕ್ಕೆ ಇಡೀ ಊರಿನ ಚಿತ್ರಣ ಬದಲಾಯಿಸುವ ಸಾಮರ್ಥ್ಯವಿದೆ ಎಂಬುದು ನನಗೆ ತಿಳಿದಿತ್ತು. ಆ ಪ್ರದೇಶದ ಕೆಲವು ಹಿರಿಕಿರಿಯ ತಲೆಗಳೂ ನನ್ನ ಯೋಚನೆಯನ್ನು ಬೆಂಬಲಿಸಿದವು. ಹಾಗೆ ಹುಟ್ಟಿಕೊಂಡಿತು ಒಂದು ಶಾಲೆಯ ಕನಸು.

ಆದರೆ ಸ್ವಂತ ಹಣ ಹಾಕಿ ಒಂದು ಖಾಸಗಿ ಶಾಲೆ ಆರಂಭಿಸುವ ಸಾಮರ್ಥ್ಯದವರು ನಾವ್ಯಾರೂ ಆಗಿರಲಿಲ್ಲ. ಮೂರು ಹೊತ್ತು ಗಂಜಿ ಊಟಕ್ಕೆ ಪರದಾಡುವವರೇ ಎಲ್ಲರೂ. ಹೆಚ್ಚಿನವರೂ ಕೂಲಿನಾಲಿ ಮಾಡಿ ಬದುಕುವವರು. ನಮಗೆ ಒಂದು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯೇ ಬೇಕಾಗಿತ್ತು.

ಅವು 1980ರ ದಶಕದ ಆರಂಭಿಕ ವರ್ಷಗಳು. ಕೊಕ್ಕಡ ಪಟ್ರಮೆ ಗ್ರಾಮಗಳಿಗೆ ಮಂಗನ ಕಾಯಿಲೆ (KFD)ಯ ಬರಸಿಡಿಲು ಬಡಿದಿತ್ತು. ಸಾವಿನ ಸಂಖ್ಯೆ ದಿನೇದಿನೇ ಬೆಳೆಯುತ್ತಲೇ ಇತ್ತು. ಊರಿನ ಅಭಿವೃದ್ಧಿಯ ಕನಸು ಹೊತ್ತಿದ್ದ ನಾವು ಅದಾಗಲೇ ಅಡ್ಡೈ-ಮುಂಡೂರುಪಳಿಕೆ-ಮೈಪಾಳ ರಸ್ತೆ ನಿರ್ಮಿಸಿಯಾಗಿತ್ತು. ವಿಪರ್ಯಾಸವೆಂದರೆ ಅದೇ ಹೊಸ ರಸ್ತೆಯಲ್ಲಿ ಬಂದ ಮೊದಲ ವಾಹನ ಮಂಗನಕಾಯಿಲೆಗೆ ಬಲಿಯಾದ ಇಬ್ಬರ ಶವವನ್ನು ಹೊತ್ತು ತಂದುದಾಗಿತ್ತು... ಇದೇ ಕೊನೆ, ಇನ್ನು ಈ ಊರಿನಲ್ಲಿ ಈ ರೀತಿ ಮೃತ್ಯುವಿನ ಪ್ರವೇಶವಾಗಬಾರದು ಎಂದು ನಿರ್ಧರಿಸಿದ ನಾವು ಊರಿನ ಹತ್ತು ಸಮಸ್ತರು ಒಂದಾಗಿ ಹೋಗಿ ಕೊಕ್ಕಡ ಮತ್ತು ಸೌತೆಡ್ಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಮನಸಾರೆ ಪ್ರಾರ್ಥಿಸಿದೆವು. ಹೌದು, ಅದೇ ದಿನ ನಾವು ದೇವರ ಎದುರು ನಿಂತು ನಮ್ಮೂರಿಗೊಂದು ಶಾಲೆ ತರುವ ಸಂಕಲ್ಪವನ್ನೂ ಮಾಡಿದೆವು.

ನಾನೂ ಮುಂಡೂರು ಲಕ್ಷ್ಮೀನಾರಾಯಣ ಶಬರಾಯರೂ ಒಂದೆಡೆ ಕುಳಿತು ಶಾಲೆ ಆರಂಭವಾದರೆ ಎಷ್ಟು ಮಕ್ಕಳು ಒಂದನೇ ಕ್ಲಾಸಿಗೆ ಸೇರಬಹುದೆಂದು ಒಂದು ಪಟ್ಟಿ ತಯಾರಿಸಿದೆವು. ಮೂವತ್ತು ಮಕ್ಕಳ ಪಟ್ಟಿ ಸಿದ್ಧವಾಯಿತು. ನಿಜ ಹೇಳಬೇಕೆಂದರೆ ಆ ಊರಿನಲ್ಲಿ ಏಕಾಏಕಿ ಆ ಕಾಲದಲ್ಲಿ 30 ಮಕ್ಕಳನ್ನು ಶಾಲೆಗೆ ಕರೆತರುವುದು ಸಾಧ್ಯವೇ ಇರಲಿಲ್ಲ. ಹಾಗೆಂದು ಒಂದು ಉತ್ಸಾಹದಾಯಕ ಸಂಖ್ಯೆಯನ್ನು ಸರ್ಕಾರಕ್ಕೆ ನಾವು ತೋರಿಸಲೇಬೇಕಿತ್ತು. ಆ ಪಟ್ಟಿ ಹಿಡಿದುಕೊಂಡು ನಾನೂ ಶಬರಾಯರೂ ಬೆಳ್ತಂಗಡಿಯಲ್ಲಿದ್ದ ಎಇಒ ಕಚೇರಿಗೆ ಹೋದೆವು. ನಮ್ಮ ಬೇಡಿಕೆ ಆಲಿಸಿದ ಆಗಿನ ಎಇಒ ರಾಮಚಂದ್ರರಾಯರು ನಮಗೇ ಆಶ್ಚರ್ಯವಾಗುವ ಹಾಗೆ, ಇಷ್ಟು ದಿನ ಯಾಕೆ ಬರಲಿಲ್ಲ? ಈಗ ಮೈಲಿಗೊಂದು ಶಾಲೆ ಎಂಬ ಸರ್ಕಾರದ ಕಾನೂನೇ ಇದೆಯಲ್ಲ? ಎಂದು ಕೇಳಿ ನಮ್ಮ ಉತ್ಸಾಹವನ್ನು ಇಮ್ಮಡಿಸಿದರು. ನಾಡಿದ್ದು ಮಂಗಳೂರಲ್ಲಿ ಡಿಡಿಪಿಐ ಅವರ ಮೀಟಿಂಗಿದೆ. ಎಲ್ಲ ವಿವರಗಳನ್ನು ನಾಳೆ ಸಂಜೆಯೊಳಗೆ ತಂದುಕೊಡಿ. ತಡ ಮಾಡಿದರೆ ಮುಂದಿನ ವರ್ಷದವರೆಗೆ ಕಾಯಬೇಕಾಗುತ್ತೆ, ಎಂದು ಪ್ರತ್ಯೇಕವಾಗಿ ನೆನಪಿಸಿದರು.
ಅಪ್ಪ
ಸರಿ, ತಿರುಗಿ ಬಂದವರೇ ನಾಳೆ ಮಾಡಬೇಕಾದ ಕೆಲಸಗಳ ತಯಾರಿಗೆ ತೊಡಗಿದೆವು. ಎಇಒ ಗ್ರಾಮನಕ್ಷೆ ಕೇಳಿದ್ದರು. ಅದು ಬೋಳೋಡಿ ವೆಂಕಟ್ರಮಣ ಭಟ್ರ ಕೈಲಿತ್ತು. ರಾತೋರಾತ್ರಿ ಅಲ್ಲಿಂದ ಅದನ್ನು ತಂದಾಯಿತು. ಮರುದಿನವೇ ನಮ್ಮ ಅರ್ಜಿ ಮತ್ತಿತರ ವಿವರಗಳನ್ನು ಎಇಒ ಅವರಿಗೆ ತಲುಪಿಸಿಯೂ ಆಯಿತು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಸೌತೆಡ್ಕದಲ್ಲಿ ನಾವೆಲ್ಲ ಸೇರಿ ಪ್ರಾರ್ಥನೆ ಸಲ್ಲಿಸಿದ 14ನೇ ದಿನಕ್ಕೆ ಮುಂಡೂರುಪಳಿಕೆಗೆ ಶಾಲೆ ಮಂಜೂರಾಯಿತು. ಬಹುಶಃ ಈಗಿನ ಕಾಲದಲ್ಲೂ ಸರ್ಕಾರಿ ಸೌಲಭ್ಯವೊಂದು ಇಷ್ಟೊಂದು ಶೀಘ್ರವಾಗಿ ಮಂಜೂರಾಗದೇನೋ?

ಅಲ್ಲಿಗೆ ದೊಡ್ಡದೊಂದು ಕೆಲಸ ಮುಗಿಯಿತು. ಆಗಿನ ಕೊಕ್ಕಡದ ಗ್ರಾಮಲೆಕ್ಕಿಗರಾಗಿದ್ದ ಭಂಡಾರಿ ಎಂಬವರೊಬ್ಬರು ಶಾಲೆಗೆಂದು ಒಂದೂವರೆ ಎಕ್ರೆಯಷ್ಟು ಜಾಗ ಅಳೆದು ಕೊಟ್ಟರು. ಆದರೆ ಕೂಡಲೇ ತರಗತಿ ಆರಂಭಿಸಬೇಕಿದ್ದರಿಂದ ನಮಗೆ ಮತ್ತೆ ಸಂಕಷ್ಟಕ್ಕಿಟ್ಟುಕೊಂಡಿತು. ಅಷ್ಟು ಬೇಗ ಕಟ್ಟಡ ಎಲ್ಲಿಂದ ಬರಬೇಕು? ಆ ಹೊತ್ತಿಗೆ ಮತ್ತೆ ಆಪದ್ಬಾಂಧವರಾದವರು ಮುಂಡೂರು ಶಬರಾಯರು. ತಮ್ಮ ಮನೆಯ ಒತ್ತಿಗಿದ್ದ ಕೊಟ್ಟಿಗೆಯಲ್ಲೇ ತತ್ಕಾಲಕ್ಕೆ ಶಾಲೆ ಆರಂಭಿಸಬಹುದೆಂದರು. ಜೂನ್ 27, 1984ರ ಶುಭಮುಹೂರ್ತದಲ್ಲಿ ಎಲಿಕಳ ಸೂರ್ಯನಾರಾಯಣ ಶರ್ಮರ ಅಧ್ಯಕ್ಷತೆಯಲ್ಲಿ ದ.ಕ.ಜಿ.ಪ. ಕಿರಿಯ ಪ್ರಾಥಮಿಕ ಶಾಲೆ ಉದ್ಘಾಟನೆಯಾಯಿತು. ಹಾಗೂಹೀಗೂ 13 ವಿದ್ಯಾರ್ಥಿಗಳು ಸೇರ್ಪಡೆಗೊಂಡರು. ಶಬರಾಯರನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆವು. ಆಗ ಜೋಡುಮಾರ್ಗ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ದಿ. ಲಿಗೋರಿ ಮಿನೆಜಸ್ ಡೆಪ್ಯುಟೇಶನ್ ಮೇಲೆ ಮೊದಲ ಅಧ್ಯಾಪಕರಾಗಿ ನಮ್ಮಲ್ಲಿಗೆ ಬಂದರು. ಆ ನಂತರ ಸ್ವಲ್ಪ ಸಮಯ ಅಶೋಕ ಮಾಸ್ಟ್ರು ಎಂಬವರು ಇದ್ದರು; ಅವರು ಪರವೂರಿನವರಾದ್ದರಿಂದ ನಮ್ಮ ಜೋಪಡಿಯಲ್ಲೇ ಉಳಿದುಕೊಂಡಿದ್ದರು.

ಅಲ್ಲಿಗೆ ನಮ್ಮ ಬಹುದಿನಗಳ ಕನಸೊಂದು ನನಸಾಯಿತಾದರೂ ಜವಾಬ್ದಾರಿ ಮುಗಿದಿರಲಿಲ್ಲ. ಶಾಲೆಗೊಂದು ಸ್ವಂತ ಕಟ್ಟಡ ಬೇಕಿತ್ತು. ಅದರ ಕೆಲಸವೂ ಆರಂಭವಾಯಿತು. ನಿಜ ಹೇಳಬೇಕೆಂದರೆ, ನಮ್ಮ ಶಾಲಾ ಕಟ್ಟಡಕ್ಕೆ ಯಾವ ಎಂಜಿನಿಯರೂ ಇರಲಿಲ್ಲ, ಯಾವ ಬಜೆಟ್ಟೂ ಇರಲಿಲ್ಲ. ಊರಿನ ಹಿರಿತಲೆಗಳೇ ಎಂಜಿನಿಯರುಗಳು, ನಮ್ಮ ಶ್ರಮದಾನವೇ ಬಜೆಟ್ಟು! ಅದೊಂದು ಏಕಕೊಠಡಿಯ ಮುಳಿಹುಲ್ಲು ಛಾವಣಿಯ ಮಣ್ಣಿನ ಗೋಡೆಯ ಸಣ್ಣ ಶಾಲಾ ಕಟ್ಟಡ. ಬದಿಜಾಲು ರಾಮಣ್ಣ ಗೌಡರು ಗೋಡೆ ಇಟ್ಟರು; ಕುರ್ಲೆಯ ಕಿಟ್ಟಣ್ಣ ಅದಕ್ಕೆ ಪೊಳಿಮ್ಮಣೆ ಹಾಕಿದರು; ಮುಂಡೂರಿನ ಶಬರಾಯ ಸಹೋದರರು ಎರಡು ಕಿಟಕಿ ಕೊಟ್ಟರು; ತೆಂಕುಬೈಲು ಶ್ಯಾಮ ಭಟ್ರು ಬಾಗಿಲು ಮಾಡಿಸಿಕೊಟ್ಟರು; ಸಿಬಂತಿಯ ಚಣ್ಣ ಗೌಡರು, ಸುದೆಪೊರ್ದು ಈಶ್ವರಗೌಡರು, ಕೊರಗಪ್ಪ ಗೌಡರು, ಚೆಂಬುಕೇರಿಯ ಬೋರ ಗೌಡರು ಹಗಲಿರುಳು ದುಡಿದರು. ಊರಿನ ಮಂದಿಯೆಲ್ಲ ಎಷ್ಟು ಉತ್ಸುಕರಾಗಿದ್ದರೆಂದರೆ ಪ್ರತೀ ಮನೆಯಿಂದ ಕನಿಷ್ಟ ಒಬ್ಬರಾದರೂ ಖುದ್ದು ಬಂದು ಶ್ರಮದಾನದಲ್ಲಿ ಪಾಲ್ಗೊಂಡರು. ಮೂರು ಪ್ರತ್ಯೇಕ ತಂಡಗಳಲ್ಲಿ ಜನ ದುಡಿದರು. ಒಟ್ಟು ೪೦ ಆಳಿನ ಕೆಲಸದಲ್ಲಿ ನಮ್ಮ ಶಾಲಾ ಕಟ್ಟಡ ಎದ್ದು ನಿಂತಿತು.
ನಮ್ಮೂರ ಮುಂಡೂರುಪಳಿಕೆ ಶಾಲೆ
ಇದೆಲ್ಲ ನಡೆದು ಈಗ 25 ವರ್ಷಗಳೇ ಉರುಳಿಹೋಗಿವೆ [ಈಗ 36 ವರ್ಷ ಆಯಿತು]. ನನಗೆ 78 ವರ್ಷ ದಾಟಿದೆ [ಈಗ 90]. ಅರೆ, ಇಷ್ಟು ಬೇಗ ನಮ್ಮ ಶಾಲೆಗೆ ರಜತ ಸಂಭ್ರಮ ಬಂತೇ ಎಂದು ಆಶ್ಚರ್ಯವಾಗುತ್ತದೆ. ಶಾಲೆಯಲ್ಲಿ, ಊರಿನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಶಾಲೆಗೆ ಸಿಮೆಂಟಿನ ಗೋಡೆ, ಹೆಂಚಿನ ಮಾಡು, ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಬಂದಿದೆ. ನೂರಾರು ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಹತ್ತಾರು ಅಧ್ಯಾಪಕರು ಬಂದು ಹೋಗಿದ್ದಾರೆ. ಊರಿನಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಜನ ಮೊದಲಿನಷ್ಟು ಬಡವರಾಗಿಲ್ಲ. ಅವರು ಬೇರೆಬೇರೆ ವಿಚಾರದಲ್ಲಿ ಜಾಗೃತಿ ಹೊಂದಿದ್ದಾರೆ. ಆದಾಗ್ಯೂ ಜನರ ಹತ್ತು ಹಲವು ಬೇಡಿಕೆಗಳು ಹಾಗೆಯೇ ಇವೆ. ಈಗ ಶಾಲೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ [ಈಗ 36] ಮುಖ್ಯೋಪಾಧ್ಯಾಯರಾಗಿರುವ ಜೋಸೆಫ್ ಪಿರೇರಾ ಅವರು ಈ ಊರಿಗೆ ಏನಾದರೂ ಶಾಶ್ವತವಾದ ಕೊಡುಗೆ ನೀಡಬೇಕೆಂಬ ವಿಶಿಷ್ಟ ಯೋಜನೆ ಹಾಕಿಕೊಂಡಿದ್ದಾರೆ. ಊರಿನ ಮಂದಿಯನ್ನೆಲ್ಲ ಒಟ್ಟು ಸೇರಿಸಿ ಇಲ್ಲಿನ ಸಮಸ್ಯೆ ಸವಾಲುಗಳಿಗೆ ಅವರ ಮೂಲಕವೇ ಪರಿಹಾರ ಹುಡುಕಿಸುವ ಹೊಸ ಪ್ರಯತ್ನಕ್ಕೆ ಧುಮುಕಿದ್ದಾರೆ. ಜನರೆಲ್ಲ ಅವರೊಂದಿಗೆ ಕೈಗೂಡಿಸಿ ಒಗ್ಗಟ್ಟಾಗಿ ದುಡಿದರೆ ಇದೊಂದು ಮಾದರಿ ಊರಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲಿಗೆ ಕಾಡಿನ ನಡುವೆ ಹುಟ್ಟಿದ ಈ ಕಲಿಕೆಯ ಕನಸಿಗೆ ನಿಜವಾದ ಅರ್ಥ ಬರುತ್ತದೆ.
- ಸಿಬಂತಿ ವೆಂಕಟ್ರಮಣ ಭಟ್

ಶನಿವಾರ, ಆಗಸ್ಟ್ 15, 2009

ನೇಗಿಲಯೋಗಿ, ಅಪ್ಪ ಮತ್ತು ಸ್ವಾತಂತ್ರ್ಯೋತ್ಸವ


"ಉಳುವಾ ಯೋಗಿಯ ನೋಡಲ್ಲಿ" ಎಂದು ಹಾಡಬೇಕೆಂದು ನಿರ್ಧರಿಸಿತು ಸರ್ಕಾರ. "ಅಳುವಾ ರೋಗಿಯ ನೋಡಲ್ಲಿ" ಎಂದು ಹಾಡಬೇಕೆನಿಸುತ್ತಿದೆ ಎಂದಿತು ಬುದ್ಧಿಜೀವಿಗಳ ಗಡಣ. ನಾನು ಆ ಬಗ್ಗೆ ವಿಶೇಷವಾಗಿ ತಲೆಕೆಡಿಸಿಕೊಂಡವನಲ್ಲ. ಆದರೆ, ಈ ಬೆಳಗ್ಗೆ ಮಣೇಕ್ ಶಾ ಪರೇಡ್ ಮೈದಾನದಲ್ಲಿ ಡಾ. ಅಶ್ವಥ್ ನೇತ್ರ್ ತ್ವದ ಮಕ್ಕಳ ಸಮೂಹ "ಉಳುವಾ ಯೋಗಿಯ ನೋಡಲ್ಲಿ" ಎಂದು ಉಚ್ಛಸ್ಥಾಯಿಯಲ್ಲಿ ಹಾಡುತ್ತಿದ್ದರೆ ಅತ್ತ ನೇಗಿಲನ್ನೂ ಹಿಡಿಯಲಾಗದೆ ಇತ್ತ ಅದನ್ನು ಬಿಟ್ಟು ಪೇಟೆಗೂ ಬರಲಾಗದೆ ಒದ್ದಾಡುತ್ತಿರುವ ಎಂಭತ್ತು ವರ್ಷದ ಅಪ್ಪನ ನೆನಪಾಗಿ ಕಣ್ಣಂಚಲ್ಲಿ ನೀರಾಡಿದ್ದಂತೂ ಅನ್ನದ ಬಟ್ಟಲಿನಷ್ಟೇ ಸತ್ಯ.


ನನಗರಿವಿಲ್ಲದಂತೆಯೇ ಕೆಲ ವರ್ಷಗಳ ಹಿಂದೆ ಬರೆದ ಕವನವೊಂದು ಮತ್ತೆ ಮತ್ತೆ ನೆನಪಾಗಿ ಕಾಡಿತು. ನಾನು ಬಹಳ ಸಮಯದ ಬಳಿಕ ಒಬ್ಬನೇ ಕುಳಿತು ಬಿಕ್ಕಳಿಸಿದೆ. "ತೀರ್ಥರೂಪರಿಗೆ..." ಎಂಬುದು ಆ ಕವನದ ಶೀರ್ಷಿಕೆ. (ಪ್ರತ್ಯೇಕವಾಗಿ ಅದನ್ನು ಮುಂದೆ ಪ್ರಕಟಿಸುವೆ).


ಹುಟ್ಟಿದ ಎರಡೇ ವರ್ಷಕ್ಕೆ ತನ್ನ ಅಮ್ಮನನ್ನು ಕಳಕೊಂಡರಂತೆ ಅಪ್ಪ. ಹೊಟ್ಟೆ ಪಾಡು ಎಂಟನೇ ವರ್ಷಕ್ಕೆ ಮನೆ ಬಿಟ್ಟು ಹೊರಡಲು ತಾಕೀತು ಮಾಡಿತಂತೆ. ಅಲ್ಲಿಂದ ಸತತ ನಲವತ್ತು ವರ್ಷಗಳ ಕಾಲ ಯಾರ್ಯಾರದೋ ತೋಟ-ಮನೆಗಳಲ್ಲಿ ಜೀತ. ಮದುವೆಯಾದಾಗ ಅಪ್ಪನಿಗೆ ೪೦ ದಾಟಿತ್ತಂತೆ. ಭವಿಷ್ಯಕ್ಕಾಯಿತು ಎಂದು ತಾನು ದುಡಿಯುತ್ತಿದ್ದ "ಧಣಿ"ಯ ಜಮೀನಿನ ಪಕ್ಕದಲ್ಲೇ ಇದ್ದ ಸರ್ಕಾರಿ ಜಾಗವನ್ನು ಸಜ್ಜುಗೊಳಿಸಿಕೊಂಡರಂತೆ. ಕ್ರಮೇಣ ವಾಸ್ತವ್ಯ ಅಲ್ಲಿಗೆ ಬದಲಾಯಿತು. ಆ ಬಳಿಕದ್ದು ಅಪ್ಪ-ಅಮ್ಮ ಜತೆಯಾಗಿ ರಕ್ತ ಬೆವರು ಬಸಿದ ಕನಸುಗಳ ಮಹಾಸತ್ರ. ಎಲ್ಲ ಸಂಕಟಗಳ ನಡುವೆಯೂ ಮೂವರು ಅಕ್ಕಂದಿರು ಮತ್ತು ನಾನು ಅಜ್ಜನ ಮನೆಯ ಒತ್ತಾಸೆಯಲ್ಲಿ ಕಲಿತೆವು ಬಲಿತೆವು. ತನ್ಮಧ್ಯೆ ಅಪ್ಪ ಹಾಸಿಗೆ ಹಿಡಿದರು. ಚಿಮಿಣಿ ದೀಪಕ್ಕೆ ಕಣ್ಣೀರು ಎರೆದೇ ಅಮ್ಮ ಹತ್ತಾರು ಇರುಳುಗಳನ್ನು ಬೆಳಗು ಮಾಡಿದರು. ಆಪರೇಷನ್ ಆಯಿತು. ಸಾವಿರಗಟ್ಟಲೆ ಮುಗಿಯಿತು. ಮೂರು ಹೊತ್ತು ಗಂಜಿ ಕುಡಿಯುವುದಕ್ಕೂ ಗತಿಯಿಲ್ಲದ ಆ ಹೊತ್ತಿನಲ್ಲಿ ಅಷ್ಟೊಂದು ಹಣ ಹೇಗೆ ಒಟ್ಟಾಯಿತೋ ಅಪ್ಪ ಹೇಗೆ ಮತ್ತೆ ಮನೆಗೆ ಮರಳಿದರೋ ಅದೊಂದು ವಿಸ್ಮಯ.


ಎಲ್ಲವೂ ಒಂದು ತಹಬದಿಗೆ ಬಂತೆನ್ನುವ ಹೊತ್ತಿಗೆ ಬಡಿದದ್ದು ಗಡಿ ತಕರಾರಿನ ಸಿಡಿಲು. ಅಷ್ಟು ವರ್ಷ ಚಾಕರಿ ಮಾಡಿಸಿಕೊಂಡ ಧಣಿ ಮಹಾಶಯನೇ ವರ್ಷಾನುಗಟ್ಟಲೆಯ ಬೆವರಿನ ಫಲಕ್ಕೆ ಕನ್ನವಿಟ್ಟ. ಅರ್ಧ ತೋಟ ಲಪಟಾಯಿಸಿದ. ಅಪ್ಪ ಕುಸಿದು ಹೋದರು. ಇನ್ನೂ ಶಾಲೆಗೆ ಹೋಗುತ್ತಿದ್ದ ನನ್ನನ್ನೂ ಸಣ್ಣಕ್ಕನನ್ನೂ ಕರೆದುಕೊಂಡು ತಿಂಗಳುಗಟ್ಟಲೆ ತಲಕಾವೇರಿ ಭಾಗಮಂಡಲ ಎಂದು ಹುಚ್ಚರಂತೆ ಅಲೆದರು. ಇತ್ತ ಅಮ್ಮ ಆ ಗೊಂಡಾರಣ್ಯದಲ್ಲಿ ಒಬ್ಬಂಟಿಯಾಗಿ ರೋದಿಸಿದರು. ಕೋರ್ಟು ಕಚೇರಿ ಪೋಲೀಸ್ ಸ್ಟೇಷನ್ ಅಂತ ಅಪ್ಪ ಮತ್ತೆ ಅಲೆದರು. ಇಷ್ಟರ ನಡುವೆಯೂ ಮೂವರು ಅಕ್ಕಂದಿರನ್ನು ಗೌರವಯುತವಾಗಿ ಮದುವೆ ಮಾಡಿಸಿದರು. "ನೀವು ತಿರುಗಾಡಿದ್ದು ಸಾಕು, ಇನ್ನು ಜಾಗದ ವಿಚಾರ ನಾನು ನೋಡಿಕೊಳ್ಳುವೆ" ಎಂದೆ ವಿದ್ಯಾಭ್ಯಾಸ ಮುಗಿಸಿದ ನಾನು. ನನಗೆ ಚೆನ್ನಾಗೇ ಗೊತ್ತಿತ್ತು ಅವರಿಗೆ ಬೇಕಿದ್ದುದು ಅದಲ್ಲ, ನನ್ನ ಸಾಮೀಪ್ಯ ಎಂಬುದು. ಆದರೆ ನೇಗಿಲ ಬಗ್ಗೆ ಅಪಾರ ಗೌರವವಿದ್ದಾಗ್ಯೂ ಆ ಸಂದರ್ಭ ನಾನು ಹೊರಗೆ ದುಡಿಯುವುದು ಅನಿವಾರ್ಯವಿತ್ತು. ದಶಕಗಳ ಕಾಲ ಇರುಳು ಹಗಲೆನ್ನದೆ ಬೇಸಾಯದ ತಪಸ್ಸು ಮಾಡಿದ ಅಪ್ಪ-ಅಮ್ಮ ಸಾಲದ ಸರಂಜಾಮಲ್ಲದೆ ಬೇರೇನನ್ನೂ ಕೂಡಿಡಲಾಗದೆ ಇದ್ದದ್ದು ನನಗೆ ಚೆನ್ನಾಗಿ ಅರಿವಿತ್ತು. ಇಷ್ಟು ವರ್ಷಗಳ ನಂತರವೂ ಜಾಗದ ತಕರಾರು ಹಾಗೆಯೇ ಇದೆ. ಇಂದಲ್ಲ ನಾಳೆ ಅದು ಮುಗಿಯುತ್ತದೆ, ಈ ಸುಳಿಯಿಂದ ಹೊರಬಂದು ಮಗನೊಂದಿಗೆ ನೆಮ್ಮದಿಯ ಬದುಕ ಸಂಜೆಗಳನ್ನು ಕಳೆಯಬಹುದೆಂಬ ಕನಸಿನೊಂದಿಗೆ ಅವರು ದಿನದೂಡುತ್ತಲೇ ಇದ್ದಾರೆ ಕರೆಂಟು, ಟೀವಿ, ಪತ್ರಿಕೆ ತಲುಪದ ಆ ವಿಚಿತ್ರ ದ್ವೀಪದಲ್ಲಿ. ಅವರೀಗ ಸ್ವಾತಂತ್ರ್ಯೋತ್ಸವಕ್ಕೆ ಕಾಯುತ್ತಿದ್ದಾರೆ.


ಹೇಳಿ, ಉಳುವಾ ಯೋಗಿಯ ನೋಡಲ್ಲಿ ಎಂಬ ಆರ್ದ್ರ ದನಿ ಕೇಳಿದಾಗಲೂ ನಾನು ಕಣ್ಣೀರಾಗದೆ ಉಳಿಯಲು ಹೇಗೆ ಸಾಧ್ಯ?