ಆಗಸ್ಟ್ 28, 2021ರ ಉದಯವಾಣಿ 'ಫ್ಯೂಷನ್' ಸಂಚಿಕೆಯಲ್ಲಿ ಪ್ರಕಟವಾದ ಲೇಖನ
ಶಿಕ್ಷಣವೆಂದರೆ ಪಾತ್ರೆಯನ್ನು ತುಂಬಿಸುವ ಕೆಲಸ ಅಲ್ಲ, ದೀಪವನ್ನು ಹಚ್ಚುವ ಕ್ರಿಯೆ ಎಂಬ ಯೇಟ್ಸ್ ಕವಿಯ ಮಾತಿದೆ. ಪಾತ್ರೆಯನ್ನು ತುಂಬಿಸುವುದಾದರೂ, ದೀಪವನ್ನು ಹಚ್ಚುವುದಾದರೂ ಒಬ್ಬರಿಂದ ಆಗುವ ಕಾರ್ಯ ಅಲ್ಲ ಎಂಬುದು ಮುಖ್ಯ. ಪಾತ್ರೆ ತುಂಬಿಸುವ ಕ್ರಿಯೆಯಲ್ಲಿ ಪಾತ್ರೆ ಬೇಕು, ತುಂಬುವವನು ಬೇಕು, ತುಂಬಿಸಲು ಸೂಕ್ತ ದ್ರವ್ಯ ಬೇಕು; ದೀಪ ಹಚ್ಚುವ ಕೆಲಸಕ್ಕೆ ದೀಪ ಬೇಕು, ತೈಲ-ಬತ್ತಿ ಬೇಕು, ಹಚ್ಚುವವನು ಬೇಕೇ ಬೇಕು. ಅಂತೂ ಎಲ್ಲವೂ ಪರಸ್ಪರ.
ಶಿಕ್ಷಣದ ಒಟ್ಟಾರೆ ಪ್ರಕ್ರಿಯೆಯಲ್ಲಿ ಶಿಕ್ಷಕನ ಪಾತ್ರ ಬಲುದೊಡ್ಡದೇ. ಅವನು ಮನಸ್ಸು ಮಾಡಿದರೆ ಏನೂ ಮಾಡಿಯಾನು. ವಿದ್ಯಾರ್ಥಿಯ ಪ್ರಗತಿ ಪತನಗಳೆರಡೂ ಅವನ ಕೈಯಲ್ಲೇ ಇವೆ. ಆದರೆ ಯಾವ ಸಾವಯವ ಪ್ರಕ್ರಿಯೆಯೂ ಒಂದೇ ಮುಖದ್ದಲ್ಲ. ಒಬ್ಬನೇ ಕುಳಿತು ಮಾಡುವಂಥದ್ದಲ್ಲ. ಶಿಕ್ಷಣವೂ ಹಾಗೆಯೇ. ಅದೂ ಯಶಸ್ವೀ ಎನಿಸಬೇಕಾದರೆ ಗುರು-ಶಿಷ್ಯರಿಬ್ಬರ ಏಕಪ್ರಕಾರದ ಪ್ರತಿಸ್ಪಂದನೆ ಇರಬೇಕು.
ಪಾತ್ರೆ ತುಂಬಿಸುವ ಕೆಲಸ ಎಂದುಕೊಂಡರೂ ಆದೀತು. ಆದರೆ ಪಾತ್ರೆ ಎಷ್ಟು ದೊಡ್ಡದಿದೆ ಎಂಬುದು ಮುಖ್ಯ. ಶಿಷ್ಯ ತಂದ ಪಾತ್ರೆಗೆ ತುಂಬಿಸುವಷ್ಟು ಬಂಡವಾಳ ಶಿಕ್ಷಕನಲ್ಲಿ ಇದೆಯೋ ಎಂಬುದೂ ಮುಖ್ಯ. ಇಲ್ಲವಾದರೆ ವಿದ್ಯಾರ್ಥಿ ದೊಡ್ಡ ಪಾತ್ರೆ ತಂದಂತೆಯೋ, ಅಧ್ಯಾಪಕ ಅದಕ್ಕೆ ಮೊಗೆಮೊಗೆದು ತುಂಬಿಸಿದಂತೆಯೋ ನಟನೆ ಮಾಡಬೇಕಾಗುತ್ತದೆ. ಇದರಿಂದ ಪರಸ್ಪರರಿಗೂ ಸಮಾಜಕ್ಕೂ ಯಾವ ಪ್ರಯೋಜನವೂ ಇಲ್ಲ. ಕೊನೆಗೆ ಎರಡೂ ಖಾಲಿ ಪಾತ್ರೆಗಳು ಸದ್ದು ಮಾಡುವ ತಮಾಷೆ ಮಾತ್ರ ನಡೆಯುತ್ತದೆ.
ಸಮುದ್ರಕ್ಕೆ ಹೋದರೆ ಎಷ್ಟು ನೀರು ತುಂಬಿಸಿಕೊಂಡು ಬರಬಹುದು ಎಂದು ಶಿಷ್ಯನೊಬ್ಬ ಗುರುವಿನಲ್ಲಿ ಕೇಳಿದನಂತೆ. ನೀನು ಎಷ್ಟು ದೊಡ್ಡ ಪಾತ್ರೆ ತೆಗೆದುಕೊಂಡು ಹೋಗುತ್ತೀಯೋ ಅಷ್ಟು ತುಂಬಿಸಿಕೊಂಡು ಬರಬಹುದು ಎಂದು ಗುರು ಉತ್ತರಿಸಿದನಂತೆ. ಶಿಷ್ಯ ದೊಡ್ಡ ಪಾತ್ರೆ ತೆಗೆದುಕೊಂಡು ಹೋಗಬೇಕಿರುವುದು ನಿಜ. ಅನೇಕ ಸಲ ದೊಡ್ಡ ಪಾತ್ರೆ ಒಯ್ಯಬೇಕೆಂಬ ತಿಳುವಳಿಕೆ ಶಿಷ್ಯನಿಗೆ ಮೂಡಿರುವುದಿಲ್ಲ, ಮತ್ತು ಅದು ಅವನ ಅಪರಾಧವೂ ಅಲ್ಲ. ಅಂತಹದೊಂದು ತಿಳುವಳಿಕೆ ಮೂಡಿಸುವ ಜವಾಬ್ದಾರಿ ಗುರುವಿನದ್ದೂ ಆಗಿರುತ್ತದೆ. ಇಲ್ಲವಾದರೆ ಆ ಸ್ಥಾನಕ್ಕೆ ಏನು ಅರ್ಥ?
ಮಕ್ಕಳು ಹೇಳಿದ್ದನ್ನು ಮಾಡುವುದಿಲ್ಲ, ಮಾಡಿದ್ದನ್ನು ಮಾಡುತ್ತಾರೆ. ಇದು ಅವರ ವಯೋಸಹಜ ಸ್ವಭಾವ. ಗುರು ತಾನು ಮಾಡದ್ದನ್ನು ಮಕ್ಕಳಲ್ಲಿ ನಿರೀಕ್ಷೆ ಮಾಡಬಾರದು. ಉದಾಹರಣೆಗೆ, ಖುದ್ದು ಓದುವ ಅಭ್ಯಾಸ ಇಲ್ಲದ ಅಧ್ಯಾಪಕ ತನ್ನ ವಿದ್ಯಾರ್ಥಿಗಳು ಓದಬೇಕೆಂದು ನಿರೀಕ್ಷೆ ಮಾಡುವುದು ತಪ್ಪು. ಸ್ವಯಂಶಿಸ್ತು ಇಲ್ಲದ ಶಿಕ್ಷಕ ತನ್ನ ಮಕ್ಕಳು ಸ್ವಯಂಶಿಸ್ತು ರೂಢಿಸಿಕೊಳ್ಳಬೇಕೆಂದು ಅಪ್ಪಣೆ ಮಾಡುವುದು ನಗೆಪಾಟಲು. ಸಮಯಪಾಲನೆ ಮಾಡಲಾಗದ ಮೇಷ್ಟ್ರು ತನ್ನ ವಿದ್ಯಾರ್ಥಿಗಳು ಸಮಯಪಾಲನೆ ಮಾಡಬೇಕೆಂದು ಅಪೇಕ್ಷಿಸುವುದು ಅಸಂಗತ. ಪಾಠ ಇರುವುದು ವಾಸ್ತವವಾಗಿ ಪಠ್ಯಪುಸ್ತಕದಲ್ಲಿ ಅಲ್ಲ, ಅಧ್ಯಾಪಕನ ವರ್ತನೆಯಲ್ಲಿ. ವಿದ್ಯಾರ್ಥಿಗಳಿಗೆ ಅಧ್ಯಾಪಕನೇ ದೊಡ್ಡ ಪಠ್ಯಪುಸ್ತಕ. ಆತ ತನ್ನ ವರ್ತನೆ, ಕ್ರಿಯೆಗಳಲ್ಲಿ ಶ್ರೇಷ್ಠವಾದದ್ದನ್ನು ತೋರಿಸದೇ ಹೋದರೆ ಪಠ್ಯಪುಸ್ತಕ ಕೇವಲ ಅಕ್ಷರಗಳ ಮೊತ್ತವಷ್ಟೇ ಆದೀತು.
ಸಾಮಾನ್ಯ ಅಧ್ಯಾಪಕ ಪಾಠ ಮಾಡುತ್ತಾನೆ, ಉತ್ತಮ ಅಧ್ಯಾಪಕ ಪ್ರಾಯೋಗಿಕವಾಗಿ ವಿವರಿಸುತ್ತಾನೆ, ಶ್ರೇಷ್ಠ ಅಧ್ಯಾಪಕ ಪ್ರಭಾವಿಸುತ್ತಾನೆ ಎಂಬ ಮಾತು ಇದೇ ಕಾರಣಕ್ಕೆ ಹುಟ್ಟಿಕೊಂಡಿರುವುದು. ಯಾರೇ ಐತಿಹಾಸಿಕ ವ್ಯಕ್ತಿಯ ಬದುಕನ್ನು ನೋಡಿದರೂ ಆತನ ಹಿಂದೊಬ್ಬ ಶ್ರೇಷ್ಠ ಶಿಕ್ಷಕನ ಪಾತ್ರವಿರುವುದು ನಿಸ್ಸಂಶಯ. ಆತನ ಪ್ರಭಾವಲಯಕ್ಕೆ ಸಿಕ್ಕಿದ ಎಂತಹ ಸಾಮಾನ್ಯ ವ್ಯಕ್ತಿಯಾದರೂ ಜೀವನದಲ್ಲಿ ಎತ್ತರಕ್ಕೆ ಏರಬಲ್ಲ, ಸಮಾಜಕ್ಕೆ ಸಂಪನ್ಮೂಲವಾಗಬಲ್ಲ. ಶಿಕ್ಷಣದ ಒಟ್ಟಾರೆ ಉದ್ದೇಶ ಕನ್ನಡಿಗಳನ್ನು ಕಿಟಕಿಗಳನ್ನಾಗಿ ಪರಿವರ್ತಿಸುವುದು ಎಂಬ ಉಕ್ತಿ ಎಷ್ಟೊಂದು ಅರ್ಥಪೂರ್ಣ! ಕಿಟಕಿಗಳನ್ನು ತೆರೆಯುವ ಕೆಲಸ ಅಧ್ಯಾಪಕನದ್ದು. ನೋಡುವ ಜವಾಬ್ದಾರಿ ವಿದ್ಯಾರ್ಥಿಯದ್ದು. ಕಿಟಕಿ ತೆರೆದಿದ್ದರೂ ಹೊರಗೆ ದೃಷ್ಟಿ ಹಾಯಿಸದೆ ಮುಸುಕೆಳೆದು ಮಲಗಿದರೆ ಅಂತಹ ವಿದ್ಯಾರ್ಥಿಗೆ ಕತ್ತಲೂ ಒಂದೇ, ಬೆಳಕೂ ಒಂದೇ.
ಶಿಷ್ಯ ಕಲಿಯಲು ಸೋತನೆಂದರೆ ಶಿಕ್ಷಕ ಕಲಿಸಲು ಸೋತನೆಂದು ಅರ್ಥ ಎಂಬ ನಾಣ್ಣುಡಿಯೊಂದಿದೆ. ಅಂದರೆ ಶಿಷ್ಯನ ಸೋಲಿನ ಹಿಂದೆ ಗುರುವಿನ ಜವಾಬ್ದಾರಿಯೂ ಇದೆ ಎಂದಾಯ್ತು. ಶಿಷ್ಯ ಉನ್ನತಿಗೇರಿದರೆ ಅದರಲ್ಲಿ ಗುರುವಿಗೂ ಒಂದು ಪಾಲಿರುವುದು ನಿಜವಾದರೆ ಆತನ ಸೋತರೂ ಅದರದ್ದೊಂದು ಪಾಲು ಗುರುವಿನದ್ದಾಗುತ್ತದೆ. ತನ್ನ ವಿದ್ಯಾರ್ಥಿಗಳು ದಾರಿತಪ್ಪಿದರೆ, ಯಶಸ್ಸಿನ ಹಾದಿಯಲ್ಲಿ ಎಡವಿದರೆ ತಾನು ಇದನ್ನು ತಪ್ಪಿಸಬಹುದಿತ್ತೇ ಎಂಬ ಆತ್ಮಾವಲೋಕನವನ್ನಾದರೂ ಗುರು ಮಾಡಬೇಕು. ಏಕೆಂದರೆ ಗುರು ಎಂದರೆ ದೊಡ್ಡದು ಎಂಬ ಅರ್ಥವೂ ಇದೆ. ದೊಡ್ಡವರು ದೊಡ್ಡವರಂತೆ ಇದ್ದರೆ ಮಾತ್ರ ಬೆಲೆ.
- ಸಿಬಂತಿ ಪದ್ಮನಾಭ ಕೆ. ವಿ.