ಬುಧವಾರ, ಮೇ 29, 2019

ಮೌಲ್ಯಮಾಪನದ ಎಡವಟ್ಟು: ಯಾರು ಹೊಣೆ?

ಮೇ 29, 2019ರ ವಿಜಯವಾಣಿ ('ಮಸ್ತ್' ಪುರವಣಿ)ಯಲ್ಲಿ ಪ್ರಕಟವಾದ ಲೇಖನ

ವಿಜಯವಾಣಿ | 29.05.2019
ಎರಡು ವರ್ಷಗಳ ಹಿಂದಿನ ಘಟನೆ. ಎಲ್ಲ ವಿಷಯಗಳಲ್ಲೂ ತೊಂಬತ್ತಕ್ಕಿಂತ ಹೆಚ್ಚು ಅಂಕ, ಹಿಂದಿಯಲ್ಲಿ ಮಾತ್ರ 60. ತರಗತಿಯಲ್ಲಿ ಸದಾ ಟಾಪರ್ ಆಗಿರುತ್ತಿದ್ದ ನೆಲಮಂಗಲದ ಹುಡುಗಿಯೊಬ್ಬಳು ಎಸ್ಸೆಸ್ಸೆಲ್ಸಿ ಫಲಿತಾಂಶ ನೋಡುತ್ತಿದ್ದಂತೆಯೇ ಆಘಾತಕ್ಕೊಳಗಾಗಿ ವಿಷ ಕುಡಿದುಬಿಟ್ಟಿದ್ದಳು. ಅವಳ ಅದೃಷ್ಟ ಚೆನ್ನಾಗಿತ್ತು, ಅವಳಮ್ಮ ವಿಷಯ ತಿಳಿದು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಪ್ರಾಣ ಉಳಿಯಿತು. ಕೆಲವು ದಿನಗಳಲ್ಲಿ ಮರುಮೌಲ್ಯಮಾಪನದ ಫಲಿತಾಂಶ ಬಂತು. ಹುಡುಗಿ ಹಿಂದಿಯಲ್ಲಿ ಒಂದೂ ಕಮ್ಮಿಯಿಲ್ಲದಂತೆ 100ಕ್ಕೆ 100 ಅಂಕ ಗಳಿಸಿದ್ದಳು. ಮುಗ್ಧ ಹುಡುಗಿ ಒಂದುವೇಳೆ ಪ್ರಾಣ ಕಳೆದುಕೊಂಡಿದ್ದರೆ ಆ ನಷ್ಟಕ್ಕೆ ಯಾರು ಹೊಣೆ?

ಇಂಜಿನಿಯರಿಂಗ್ ಓದುತ್ತಿದ್ದ ಜಮ್ಮು-ಕಾಶ್ಮೀರದ ಯುವಕನೊಬ್ಬನಿಗೆ ಭೌತಶಾಸ್ತ್ರದಲ್ಲಿ 28 ಅಂಕ ಬಂದಿತ್ತು. ಫೇಲಾಗಿದ್ದರಿಂದ ಅವಮಾನಿತನಾದ ಯುವಕ ಝೀಲಂ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ. ಮಗನನ್ನು ಕಳೆದುಕೊಂಡ ಆಘಾತದ ನಡುವೆಯೂ ಆತನ ತಂದೆ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದರು. ನಾಲ್ಕು ತಿಂಗಳ ಬಳಿಕ ಫಲಿತಾಂಶ ಬಂತು. ಯುವಕ 48 ಅಂಕಗಳೊಂದಿಗೆ ತೇರ್ಗಡೆಯಾಗಿದ್ದ. ‘ಇದು ನನ್ನ ಮಗ ಮಾಡಿಕೊಂಡ ಆತ್ಮಹತ್ಯೆ ಅಲ್ಲ, ಶಿಕ್ಷಣ ವ್ಯವಸ್ಥೆ ಮಾಡಿಸಿದ ಕೊಲೆ’ ಎಂದು ಯುವಕನ ತಂದೆ-ತಾಯಿ ಗೋಳಾಡಿದರು. ಅವರಿಗಾದ ನಷ್ಟವನ್ನು ತುಂಬುವವರು ಯಾರು?

ಮೊನ್ನೆಮೊನ್ನೆ ತೆಲಂಗಾಣದಲ್ಲಿ ಪಿಯುಸಿ ಫಲಿತಾಂಶ ಬಂದ ಬಳಿಕ ಒಂದೇ ವಾರದಲ್ಲಿ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಸೊನ್ನೆ ಅಂಕ ಪಡೆದ ವಿದ್ಯಾರ್ಥಿನಿಯೊಬ್ಬಳ ಉತ್ತರ ಪತ್ರಿಕೆ ತರಿಸಿಕೊಂಡು ನೋಡಿದಾಗ ಆಕೆಗೆ 99 ಅಂಕ ಬಂದಿರುವುದು ಗೊತ್ತಾಯಿತು.

ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ಪಾವಗಡದ ಬಡ ಹುಡುಗಿಯೊಬ್ಬಳು ಐದೂ ವಿಷಯಗಳಲ್ಲಿ 90ಕ್ಕಿಂತ ಹೆಚ್ಚು ಅಂಕ ಪಡೆದಿದ್ದಳು, ಕನ್ನಡದಲ್ಲಿ ಮಾತ್ರ 10 ಅಂಕ. ರೂ. 530 ತೆತ್ತು ಉತ್ತರ ಪತ್ರಿಕೆ ತರಿಸಿ ನೋಡಿದರೆ ಆಕೆ 79 ಅಂಕ ಪಡೆದಿದ್ದಳು. ‘ಫೀಸ್ ಕಟ್ಟೋದೇ ಕಷ್ಟ. ಇನ್ನು ಹಿಂಗೆಲ್ಲ ಸುಮ್‍ಸಮ್ನೇ ದುಡ್ಡುಕಟ್ಟೋ ಪರಿಸ್ಥಿತಿ ಬಂದ್ರೆ ಏನ್ಮಾಡೋಣ?’ ಎಂಬುದು ಕೂಲಿಕೆಲಸಕ್ಕೆ ಹೋಗುವ ಆಕೆಯ ಹೆತ್ತವರ ಪ್ರಶ್ನೆ. ಉತ್ತರ ಕೊಡಬೇಕಾದವರು ಯಾರು?

ಒಟ್ಟು 509 ಅಂಕ ಪಡೆದಿದ್ದ ನಾಗವಾರದ ಗಾರೆ ಕೆಲಸದವರ ಮಗಳೊಬ್ಬಳು ಕನ್ನಡದಲ್ಲಿ ಫೇಲ್ ಆಗಿ ಖಿನ್ನತೆಯಲ್ಲಿ ಬಿದ್ದಿದ್ದಳು. ಮರುಮೌಲ್ಯಮಾಪನದ ಬಳಿಕ ಆಕೆ ಪಡೆದ ಅಂಕ 17 ಅಲ್ಲ, 75 ಅಂತ ರಿಸಲ್ಟ್ ಬಂತು.

ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದಾಗ 625ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಇಬ್ಬರು ಟಾಪರ್ ಎನಿಸಿದ್ದರು. ಕಳೆದ ವಾರ ಮರುಮೌಲ್ಯಮಾಪನ ಫಲಿತಾಂಶ ಬಂದ ಬಳಿಕ 625 ಅಂಕ ಪಡೆದವರ ಸಂಖ್ಯೆ ಐದಕ್ಕೆ ಏರಿದೆ! ರಿಸಲ್ಟಿನ ಮರುದಿವಸ ಸಹಜವಾಗಿ ಇಬ್ಬರು ಸಾಧಕರು ಪತ್ರಿಕೆಗಳ ಮುಖಪುಟಗಳಲ್ಲಿ, ಟಿವಿ ಪರದೆಗಳಲ್ಲಿ ಮಿಂಚುವ ಅವಕಾಶ ಪಡೆದರು. ಅದೇ ಸಾಧನೆ ಮಾಡಿದ ಉಳಿದ ಮೂವರ ಸಂತೋಷ ಎಲೆಕ್ಷನ್ ರಿಸಲ್ಟಿನ ಭರಾಟೆಯಲ್ಲಿ ಕರಗಿ ಹೋಯಿತು. ಅವರು ಕೆಲವೇ ಪತ್ರಿಕೆಗಳ ಮೂಲೆಗಳಲ್ಲಿ ಸಣ್ಣ ಸುದ್ದಿಯಾದರು. ಪಿಯುಸಿಯಲ್ಲೂ ಹೀಗೇ ಆಯಿತು. ವಿಜ್ಞಾನ ವಿಭಾಗದಲ್ಲಿ 600ಕ್ಕೆ 594 ಅಂಕ ಪಡೆದಿದ್ದ ಬೆಂಗಳೂರಿನ ಹುಡುಗನೊಬ್ಬ ಟಾಪರ್ ಎನಿಸಿದ್ದ. ಮರುಮೌಲ್ಯಮಾಪನದ ಬಳಿಕ ಶಿವಮೊಗ್ಗದ ಇನ್ನೊಬ್ಬ ಹುಡುಗನೂ ಅದೇ ಸಾಧನೆಗೆ ಪಾತ್ರನಾದ. ಮರುಮೌಲ್ಯಮಾಪನ ಮಾಡಿದಾಗ ಇಂಗ್ಲಿಷಿನಲ್ಲಿ ಆತ 6 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದಿದ್ದ.

ಫಲಿತಾಂಶ ಕೊಂಚ ಹೆಚ್ಚುಕಡಿಮೆಯಾದ ಕೂಡಲೇ ಆತ್ಮಹತ್ಯೆ ಮಾಡಿಕೊಳ್ಳುವುದೇ? ಶೇ. 90ಕ್ಕಿಂತ ಹೆಚ್ಚು ಅಥವಾ ನೂರಕ್ಕೆ ನೂರು ಅಂಕ ಗಳಿಸುವುದೇ ದೊಡ್ಡ ಸಾಧನೆಯೇ? ಮಕ್ಕಳೇನು ಅಂಕ ಗಳಿಸುವ ಯಂತ್ರಗಳೇ? ಇವನ್ನೆಲ್ಲ ಮೀರುವಂತೆ ನಮ್ಮ ಮಕ್ಕಳನ್ನು ರೂಪಿಸಬೇಡವೇ? ಇಂತಹ ಹತ್ತಾರು ಪ್ರಶ್ನೆಗಳು ಆಗಾಗ ನಮಗೆದುರಾಗುತ್ತವೆ. ಈ ಪ್ರಶ್ನೆಗಳೆಲ್ಲ ಸಮಂಜಸವಾದವುಗಳೇ. ಅವುಗಳ ಬಗ್ಗೆ ಪ್ರತಿದಿನ ಎಂಬಂತೆ ಚರ್ಚೆಗಳು ನಡೆಯುತ್ತವೆ. ಆದರೆ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಆಗುವ ಎಡವಟ್ಟುಗಳು, ತದನಂತರದ ಪರಿಣಾಮಗಳು, ಅವುಗಳನ್ನು ತಡೆಯುವ ಬಗೆಗೂ ಗಂಭೀರವಾಗಿ ಯೋಚಿಸುವ ಅಗತ್ಯ ಇಲ್ಲವೇ?

ಕಳೆದ ವರ್ಷ ಪಿಯುಸಿ ಮರುಮೌಲ್ಯಮಾಪನದ ಬಳಿಕ ಸುಮಾರು ಎರಡೂವರೆ ಸಾವಿರದಷ್ಟು ವಿದ್ಯಾರ್ಥಿಗಳ ಅಂಕಗಳಲ್ಲಿ 10ರಿಂದ 35ರವರೆಗೆ ಏರಿಕೆಯಾಗಿತ್ತು. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದವರ ಪೈಕಿ ಸುಮಾರು ಹನ್ನೊಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಂಕಗಳಲ್ಲಿ ಯಾವುದೇ ಬದಲಾವಣೆ ಇರಲಿಲ್ಲವಾದರೂ 2500 ಸಣ್ಣ ಸಂಖ್ಯೆ ಅಲ್ಲ ಎಂಬುದನ್ನು ಗಮನಿಸಬೇಕು.

ಅಂಕಗಳ ಬಗೆಗಿನ ಚರ್ಚೆಗಳು ಏನೇ ಇದ್ದರೂ, ಫಲಿತಾಂಶದ ದಿನದ ವಿದ್ಯಾರ್ಥಿಗಳ ಮಾನಸಿಕತೆ ತುಂಬ ಸೂಕ್ಷ್ಮವಾದದ್ದು. ಇಡೀ ವರ್ಷ ಪಟ್ಟ ಪರಿಶ್ರಮ ಮುಖದ ಮೇಲೆ ಮಂದಹಾಸ ತರಿಸುವ, ಅದೇ ಸಮಯಕ್ಕೆ ನೂರಾರು ಮನಸ್ಸುಗಳು ಆಘಾತಕ್ಕೊಳಗಾಗುವ ಸಂದರ್ಭ ಅದು. ಒಂದೊಂದು ಅಂಕವೂ ವಿದ್ಯಾರ್ಥಿಗಳಿಗೆ ಬಹುಮುಖ್ಯ. ಇಂಜಿನಿಯರಿಂಗ್ ಮೆಡಿಕಲ್ ರ್ಯಾಂಕುಗಳಲ್ಲಂತೂ ಒಂದೇ ಅಂಕದಲ್ಲಿ ಭಾರೀ ವ್ಯತ್ಯಾಸಗಳಾಗುತ್ತವೆ.  ಕಷ್ಟಪಟ್ಟ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ನಿರೀಕ್ಷಿಸುವುದರಲ್ಲಿ ತಪ್ಪೇನೂ ಇಲ್ಲ. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಬಹುದಾದ ಮಗು ಇದ್ದಕ್ಕಿದ್ದಂತೆ ಯಾವುದೋ ವಿಷಯದಲ್ಲಿ ಫೇಲ್ ಅಂತ ಫಲಿತಾಂಶ ಬಂದಾಗ ಶಾಕ್ ಅನುಭವಿಸುವುದು ಸಹಜವೇ. ಅಂಕಗಳನ್ನು ಪರಾಂಬರಿಸಿ ನೋಡುವುದಕ್ಕೆ ಬೇಕಾದಷ್ಟು ಅವಕಾಶ ಇದೆ, ರಿವ್ಯಾಲುವೇಶನ್‍ನಲ್ಲಿ ಸರಿ ಹೋಗಬಹುದು, ಇದೇ ಜೀವನದ ಕೊನೆ ಅಲ್ಲ ಎಂದು ಯೋಚಿಸುವ ಪ್ರಬುದ್ಧತೆ ಅಷ್ಟಾಗಿ ಬಂದಿರದ ವಯಸ್ಸು ಅದು.

10ನೇ ತರಗತಿ, ಪಿಯುಸಿ ಸೇರಿದಂತೆ ಎಲ್ಲ ಪರೀಕ್ಷೆಗಳ ಫಲಿತಾಂಶ ಬಂದಾಗಲೂ ನೂರಾರು ವಿದ್ಯಾರ್ಥಿಗಳು ಖಿನ್ನತೆಗೊಳಗಾಗುವುದು, ಭವಿಷ್ಯದ ವಿಶ್ವಾಸ ಕಳಕೊಳ್ಳುವುದು, ಅನೇಕ ಮಂದಿ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಡೆದೇ ಇದೆ. ಪದವಿ ಮತ್ತು ಅದಕ್ಕಿಂತ ಮೇಲಿನ ಹಂತದ ವಿದ್ಯಾರ್ಥಿಗಳಾದರೂ ಪ್ರಾಯಪ್ರಬುದ್ಧರು. ಅನಿರೀಕ್ಷಿತ ಆಘಾತಗಳನ್ನು ಕೊಂಚಮಟ್ಟಿಗೆ ತಡೆದುಕೊಳ್ಳಬಲ್ಲರು. ಇವರು ಹಾಗಲ್ಲ. ಹದಿಹರೆಯದ ತುದಿಗೆ ತಲುಪಿದವರು. ದೇಹ, ಮನಸ್ಸುಗಳೆಲ್ಲವೂ ಚಂಚಲ. ತಕ್ಷಣದ ಏಟುಗಳನ್ನು ನುಂಗಿ ನಿರಾಳರಾಗುವ ಮನಸ್ಥಿತಿ ಅವರದ್ದಲ್ಲ.

ಸಿದ್ಧತೆಯ ಕೊರತೆ, ಪರೀಕ್ಷಾ ಭಯ ಇತ್ಯಾದಿ ಕಾರಣಗಳಿಂದಾಗಿ ಫಲಿತಾಂಶ ಕಡಿಮೆಯಾದವರಿಗೆ ಆತ್ಮಾವಲೋಕನಕ್ಕೆ ಕೊಂಚ ಅವಕಾಶ ಇದೆ. ತಮ್ಮದಲ್ಲದ ತಪ್ಪಿಗೆ, ಅಂದರೆ ಮೌಲ್ಯಮಾಪನದ ಸಂದರ್ಭದಲ್ಲಿ ಆಗುವ ತಪ್ಪುಗಳಲ್ಲಿ ಮಾತ್ರ ಅವರ ಪಾಲು ಏನೂ ಇರುವುದಿಲ್ಲ. ಯಾರೋ ಮಾಡುವ ಎಡವಟ್ಟುಗಳು ಎಷ್ಟೋ ವಿದ್ಯಾರ್ಥಿಗಳ ಖಿನ್ನತೆಗೆ, ಆತ್ಮಹತ್ಯೆಗೆ ಕಾರಣವಾಗುವುದು ಅಕ್ಷಮ್ಯ ಅಲ್ಲವೇ? ಮೌಲ್ಯಮಾಪಕರು ಇದನ್ನು ಗಂಭೀರವಾಗಿ ಪರಿಗಣಿಸಬೇಡವೇ?

ಸರಿಯಾದ ಉತ್ತರವನ್ನೂ ತಪ್ಪು ಎಂದು ಬಗೆದು ಅಂಕ ನೀಡದಿರುವುದು, ಒಂದೆರಡು ಪುಟಗಳನ್ನೇ ಮೌಲ್ಯಮಾಪನ ಮಾಡದೆ ಮುಂದಕ್ಕೆ ಹೋಗುವುದರಿಂದ ತೊಡಗಿ ಅಂಕಗಳ ಎಣಿಕೆಯಲ್ಲಿ ತಪ್ಪುವವರೆಗೆ ಹಲವು ಬಗೆಯ ಯಡವಟ್ಟುಗಳನ್ನು ಮೌಲ್ಯಮಾಪಕರು ಮಾಡುವುದಿದೆ. ಹಾಗೆಂದು ಫಲಿತಾಂಶದಲ್ಲಿ ಆಗುವ ಯಡವಟ್ಟುಗಳೆಲ್ಲವಕ್ಕೂ ಮೌಲ್ಯಮಾಪಕರೇ ಕಾರಣವಾಗಿರಬೇಕಿಲ್ಲ. ಕೆಲವೊಮ್ಮೆ ಕಂಪ್ಯೂಟರುಗಳ ತಂತ್ರಾಂಶ ದೋಷದಿಂದಲೂ ಫಲಿತಾಂಶ ಉಲ್ಟಾಪಲ್ಟಾ ಆಗುವ ಸಾಧ್ಯತೆಗಳಿವೆ. ಆದರೆ ಅಂತಿಮ ಬಲಿಪಶುಗಳು ವಿದ್ಯಾರ್ಥಿಗಳು ಮತ್ತವರ ಪೋಷಕರು.

ಯಾವ ಶಿಕ್ಷಕರೂ ಬೇಕೆಂದೇ ತಪ್ಪುಗಳನ್ನು ಮಾಡಲಾರರು. ಅವು ಅಯಾಚಿತವಾದುದರಿಂದಲೇ ಅವುಗಳಿಗೆ ಎಡವಟ್ಟು ಎನ್ನುವುದು. ಮನುಷ್ಯ ಸಹಜ ತಪ್ಪುಗಳು ಘಟಿಸುವುದು ಸಾಮಾನ್ಯ. ಒಬ್ಬ ವಿದ್ಯಾರ್ಥಿಯನ್ನು ಫೇಲ್ ಮಾಡಿಬಿಡಬೇಕೆಂಬ ಆಸೆ ಯಾವ ಮೌಲ್ಯಮಾಪಕನಿಗೂ ಇರುವುದಿಲ್ಲ. ಸಾಧ್ಯವಾದಷ್ಟೂ ವಿದ್ಯಾರ್ಥಿಗಳು ತೇರ್ಗಡೆಯಾಗಿ ಮುಂದಿನ ತರಗತಿಗೆ ಹೋಗಲಿ ಎಂಬ ಆಶಯವೇ ಎಲ್ಲ ಅಧ್ಯಾಪಕರದ್ದೂ ಆಗಿರುತ್ತದೆ. ತಕ್ಕಮಟ್ಟಿನ ಅಂಕಗಳನ್ನು ಪಡೆದಿದ್ದರೆ ಇನ್ನೊಂದಷ್ಟು ಗ್ರೇಸ್ ಅಂಕಗಳನ್ನು ನೀಡಿ ಅಂತಹ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ಪದ್ಧತಿ ಶಿಕ್ಷಣ ಇಲಾಖೆಯಲ್ಲಿ ಅಧಿಕೃತವಾಗಿಯೇ ಇದೆ.

ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 8.41 ಲಕ್ಷ. ಪಿಯುಸಿ ಪರೀಕ್ಷೆ ಬರೆದವರ ಸಂಖ್ಯೆ 6.71 ಲಕ್ಷ. ಪಿಯು ಪರೀಕ್ಷೆಗಳ ಮೌಲ್ಯಮಾಪನವನ್ನು ಮಾಡಿದ ಅಧ್ಯಾಪಕರ ಸಂಖ್ಯೆ ಬರೋಬ್ಬರಿ 22,746. ಹಿಂದೆ ಬೆರಳೆಣಿಕೆಯ ಕೇಂದ್ರಗಳಲ್ಲಷ್ಟೇ ಮೌಲ್ಯಮಾಪನ ನಡೆಯುತ್ತಿತ್ತು.  ಈಗ ಈ ಕಾರ್ಯವನ್ನು ಗಣನೀಯವಾಗಿ ವಿಕೇಂದ್ರೀಕರಣಗೊಳಿಸಲಾಗಿದೆ. ಈ ವರ್ಷ ರಾಜ್ಯದ 54 ಕೇಂದ್ರಗಳಲ್ಲಿ ಪಿಯು ಮೌಲ್ಯಮಾಪನ ನಡೆಸಲಾಯಿತು. ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮಗಳಿವೆ. ಒಬ್ಬ ಅಧ್ಯಾಪಕ ಒಂದು ದಿನ ಇಂತಿಷ್ಟೇ ಉತ್ತರ ಪತ್ರಿಕೆಗಳನ್ನು ಇಂತಿಷ್ಟು ಅವಧಿಯಲ್ಲಿ ವ್ಯಾಲ್ಯುವೇಶನ್ ಮಾಡಬೇಕೆಂಬ ನಿಯಮಗಳಿವೆ. ಈ ಬಾರಿಯಂತೂ ಮೌಲ್ಯಮಾಪನ ಮಾಡಿದ ಶಿಕ್ಷಕರೇ ಅಂಕಗಳನ್ನು ಕಂಪ್ಯೂಟರಿಗೆ ಫೀಡ್ ಮಾಡುವ ಕ್ರಮವೂ ಆರಂಭವಾಯಿತು. ಇವೆಲ್ಲವೂ ಮೌಲ್ಯಮಾಪಕರ ಮೇಲಿರುವ ಒತ್ತಡಗಳನ್ನು ಹಾಗೂ ಆಗಬಹುದಾದ ಯಡವಟ್ಟುಗಳನ್ನು ಕಡಿಮೆಗೊಳಿಸಲು ಇಲಾಖೆ ತೆಗೆದುಕೊಂಡ ಕ್ರಮಗಳು. ಇಷ್ಟನ್ನೂ ಮೀರಿ ತಪ್ಪುಗಳು ಆಗುತ್ತವೆಂದರೆ ಶಿಕ್ಷಕರು ಅವುಗಳ ಬಗ್ಗೆ ಮತ್ತು ತಮ್ಮ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯವಿದೆ ಅನಿಸುವುದಿಲ್ಲವೇ?

2017ರಲ್ಲಿ ಬಿಹಾರದಲ್ಲಿ ನಡೆದ ಘಟನೆ. ಪ್ರಿಯಾಂಕ ಸಿಂಗ್ ಎಂಬ ವಿದ್ಯಾರ್ಥಿನಿಗೆ ಸಂಸ್ಕೃತದಲ್ಲಿ 9 ಅಂಕ ಹಾಗೂ ವಿಜ್ಞಾನದಲ್ಲಿ 29 ಅಂಕ ಬಂದಿತ್ತು. ಪ್ರಿಯಾಂಕ ಪರೀಕ್ಷಾ ಮಂಡಳಿಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿಬಿಟ್ಟಳು. ಕೋರ್ಟು ವಿಚಾರಣೆ ನಡೆಸಿದಾಗ ಮಂಡಳಿಯು ತನ್ನಿಂದ ತಪ್ಪಾಗಿದೆಯೆಂದು ಒಪ್ಪಿಕೊಂಡಿತು. ವಿದ್ಯಾರ್ಥಿನಿಗೆ ಸಂಸ್ಕೃತದಲ್ಲಿ  80 ಹಾಗೂ ವಿಜ್ಞಾನದಲ್ಲಿ 61 ಅಂಕಗಳು ಬಂದವು. ಉಚ್ಚನ್ಯಾಯಾಲಯವು ಮಂಡಳಿಗೆ ರೂ. 5 ಲಕ್ಷ ದಂಡ ವಿಧಿಸಿತು. ಇತ್ತೀಚೆಗೆ ತೆಲಂಗಾಣದಲ್ಲಿ 99 ಅಂಕ ಪಡೆದಿದ್ದ ವಿದ್ಯಾರ್ಥಿಗೆ ಆರಂಭದಲ್ಲಿ ಸೊನ್ನೆ ಅಂಕ ನೀಡಿದ್ದಕ್ಕಾಗಿ ಮೌಲ್ಯಮಾಪಕರಿಗೆ ರೂ. 5000 ದಂಡ ವಿಧಿಸಿದ ಘಟನೆಯೂ ನಡೆದಿದೆ.

ನಮ್ಮಲ್ಲಿ ಈ ಬಗೆಯ ಕಟ್ಟುನಿಟ್ಟಿನ ಕ್ರಮಗಳನ್ನು ವಾಸ್ತವವಾಗಿ ತೆಗೆದುಕೊಳ್ಳುತ್ತಿಲ್ಲವೋ ಅಥವಾ ತೆಗೆದುಕೊಂಡುದು ಸಾರ್ವಜನಿಕರ ಗಮನಕ್ಕೆ ಬರುತ್ತಿಲ್ಲವೋ, ಅಂತೂ ಪ್ರತೀ ವರ್ಷ ದುರ್ಘಟನೆಗಳು ನಡೆಯುತ್ತಲೇ ಇವೆ. ಎಲ್ಲ ದೋಷಗಳೂ ಕಾನೂನು ಕ್ರಮಗಳಿಂದ ಪರಿಹಾರವಾಗಲಾರವು. ಇದು ಶಿಕ್ಷಕ ವೃತ್ತಿ ಕೈಗೊಂಡವರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಚಾರ ಅಷ್ಟೇ. ವೈದ್ಯರು ಮಾಡುವ ತಪ್ಪುಗಳು ಹೂಳಲ್ಪಡುತ್ತವೆ, ವಕೀಲರು ಮಾಡುವ ತಪ್ಪುಗಳು ನೇಣು ಹಾಕಲ್ಪಡುತ್ತವೆ, ಶಿಕ್ಷಕರು ಮಾಡುವ ತಪ್ಪುಗಳು ಶತಮಾನಗಳ ಕಾಲ ಸಮಾಜವನ್ನು ಕಾಡುತ್ತಿರುತ್ತವೆ ಎಂಬ ಮಾತು ಎಷ್ಟೊಂದು ನಿಜ ಅಲ್ಲವೇ?

- ಸಿಬಂತಿ ಪದ್ಮನಾಭ ಕೆ. ವಿ.

ಸೋಮವಾರ, ಮೇ 20, 2019

ಶಾಲೆ ತೆರೆಯುವ ಹೊತ್ತು

ಮೇ 19, 2019ರ 'ವಿಜಯ ಕರ್ನಾಟಕ' ಸಾಪ್ತಾಹಿಕ ಪುರವಣಿ (ಲವಲVK)ಯಲ್ಲಿ ಪ್ರಕಟವಾದ ಲೇಖನ

ವಿಜಯ ಕರ್ನಾಟಕ | ಸಾಪ್ತಾಹಿಕ ಲವಲVK | 19-05-2019
‘ಎದ್ದೇಳ್ತೀಯೋ ಇಲ್ಲ ತಲೆ ಮೇಲೆ ತಣ್ಣೀರು ಹೊಯ್ಯಲೋ?’ ಎಂಬುದು ಎಲ್ಲ ಮನೆಗಳಲ್ಲೂ ಶತಮಾನಗಳಿಂದ ಜಾರಿಯಲ್ಲಿರುವ ಜನಪ್ರಿಯ ಸುಪ್ರಭಾತ. ಇದು ವಿವಿಧ ರಾಗ, ತಾಳಗಳಲ್ಲಿ ಹೊರಹೊಮ್ಮಲು ಶುರುವಾಯಿತೆಂದರೆ ರಜೆ ಬಹುತೇಕ ಮುಗಿದು ಶಾಲಾಪ್ರಸಂಗ ಆರಂಭವಾಗುತ್ತಿದೆಯೆಂದು ಅರ್ಥ. ಸ್ಕೂಲಿನ ಮೊದಲನೇ ದಿನ ಬೆಳಗ್ಗೆ ಮನೆ ತುಂಬೆಲ್ಲ ನಡೆಯುವ ಮಹಾಪ್ರದರ್ಶನಕ್ಕೆ ಕನಿಷ್ಟ ಒಂದು ವಾರದ ಗ್ರ್ಯಾಂಡ್ ರಿಹರ್ಸಲ್ ಆದರೂ ನಡೆಯದಿದ್ದರೆ ಹೇಗೆ!

‘ಅಯ್ಯೋ ಯಾಕೆ ಹಾಗೆ ಗೋಳು ಹೊಯ್ಕೋತೀಯಾ, ಒಂದೈದು ನಿಮಿಷ ಮಲಗಲಿ ಬಿಡೇ’ ಎಂದು ಈ ರಿಹರ್ಸಲಿನ ಮಧ್ಯೆ ಗೌರವ ಪಾತ್ರದಲ್ಲಿ ಕಾಣಿಸಿಕೊಂಡು ಸದಾ ಮಕ್ಕಳ ಪರ ವಕಾಲತ್ತಿಗೆ ನಿಲ್ಲುವವನು ಅಪ್ಪನೇ. ಹಾಗೆಂದು ಅಮ್ಮ ಮಹಾ ನಿರ್ದಯಿ ಅಲ್ಲವೆಂದು ಖುದ್ದು ಮುಸುಕಿನೊಳಗಿನ ಮುದ್ದುಮನಸಿಗೂ ಗೊತ್ತು. ದಶಾವತಾರಿ ಅಮ್ಮನ ಶತಾವಧಾನದ ಕಲೆ ಸಂಪೂರ್ಣವಾಗಿ ಹೊರಹೊಮ್ಮುವುದು ಮಕ್ಕಳು ಶಾಲೆಗೆ ಹೊರಡುವ ಬೆಳಗ್ಗಿನ ಒಂದೆರಡು ಗಂಟೆಗಳಲ್ಲಿ.

ಮನೆಮಂದಿಗಿಂತ ಮೊದಲೇ ಎದ್ದು ದೀಪ ಹಚ್ಚಿ ಹೊಸಿಲಿಗೆ ಎರಡು ಗೆರೆ ರಂಗೋಲಿ ಎಳೆಯುತ್ತಲೇ ಕಾಲಿಗೆ ಚಕ್ರ ಕಟ್ಟಿಕೊಳ್ಳುವ ಅಮ್ಮನೆಂಬ ನಾನ್‍ಸ್ಟಾಪ್ ಎಕ್ಸ್‍ಪ್ರೆಸ್‍ಗೆ ಆಯಾಸವೆಂಬುದೇ ಇಲ್ಲ. ಹಾಲು ಬಿಸಿಮಾಡುವ, ಚಹಾಕ್ಕಿಡುವ, ತರಕಾರಿ ಹೆಚ್ಚುವ, ಕುಕ್ಕರ್ ಒಲೆಗೇರಿಸುವ, ಒಗ್ಗರಣೆಗಿಡುವ, ಚಪಾತಿ ಹಿಟ್ಟು ಕಲಸುವ, ಅದು ಇಷ್ಟವಾಗದವರಿಗೆ ಪುಳಿಯೋಗರೆ ಬೆರೆಸುವ, ಮಿಕ್ಸಿ ಸ್ವಿಚ್ ಅದುಮುವ, ಆ ಮಕ್ಕಳನ್ನು ಎಬ್ಬಿಸಿ ಮಾರಾಯ್ರೇ ಎಂದು ನಡುನಡುವೆ ನೆನಪಿಸುವ, ಯೂನಿಫಾರ್ಮ್‍ಗೆ ಇಸ್ತ್ರಿ ಹಾಕುವ, ಶೂ-ಸಾಕ್ಸ್ ಜೋಡಿಸಿಡುವ, ಮಕ್ಕಳನ್ನು ಸ್ನಾನಕ್ಕೆ ಅಟ್ಟುವ, ಟಿಫಿನ್ ಬಾಕ್ಸ್ ಸಿದ್ಧಪಡಿಸುವ, ಸ್ವತಃ ಕಚೇರಿಗೆ ಓಡಬೇಕಿರುವ ಗಂಡನಿಗೂ ತನಗೂ ಬೇಕಾದ ಸಮಸ್ತ ತಯಾರಿಗಳನ್ನೂ ಏಕಕಾಲಕ್ಕೆ ಮಾಡಿಕೊಳ್ಳುವ ಈ ಅಮ್ಮನಿಗೆ ಒಟ್ಟು ಕೈಕಾಲುಗಳೆಷ್ಟು ಎಂಬುದು ಈವರೆಗೆ ಯಾವ ಗಿನ್ನೆಸ್ ಪುಸ್ತಕದಲ್ಲೂ ದಾಖಲಾಗಿಲ್ಲ. ಮಕ್ಕಳಿಗೆ ಇದೆಲ್ಲ ಅರ್ಥವಾಗದ ಸಂಗತಿಯಲ್ಲವಾದರೂ ರಜೆಯ ಮಜಾ, ಬೆಳ್ಳಂಬೆಳಗ್ಗಿನ ಸಕ್ಕರೆ ನಿದ್ದೆಯ ತೆಕ್ಕೆಯಿಂದ ಹೊರಬರುವುದು ಕಡುಕಷ್ಟ.

ಆ ಹಳೆಯ ನೆನಪು
ದೊಡ್ಡ ರಜೆಯ ಗಮ್ಮತ್ತು, ಹೊಸ ಶಾಲೆ, ಹೊಸ ತರಗತಿಯಲ್ಲಿ ಕುಳಿತುಕೊಳ್ಳುವ ರೋಮಾಂಚನದ ಕತೆಯನ್ನು ಹೊಸ ಕಾಲದ ಮಕ್ಕಳಿಗೆ ಒಂದಾನೊಂದು ಕಾಲದ ಪುರಾಣದಂತೆ ಹೇಳುವ ಯುಗಕ್ಕೆ ಬಂದು ನಿಂತಿದ್ದೇವಾದರೂ ಅಪ್ಪ-ಅಮ್ಮಂದಿರಿಗೆ ಆ ಹಳೆಯ ನೆನಪುಗಳಿಂದ ಕಳಚಿಕೊಳ್ಳುವುದು ಕಷ್ಟ. ಅಜ್ಜನ ಮನೆ, ಸೋದರತ್ತೆ ಮನೆ, ಚಿಕ್ಕಮ್ಮನ ಮನೆಯೆಂದು ಸುತ್ತಾಡಿ ಕಸಿನ್ಸ್ ಎಂಬೋ ಅಪ್ಪಟ ಗೆಳೆಯರೊಂದಿಗೆ ಮಸ್ತಿ ಮಾಡಿ ಹೊಟ್ಟೆಬಿರಿಯುವಷ್ಟು ಉಂಡು ಕಣ್ತುಂಬ ನಿದ್ದೆ ಮಾಡಿ ಒಂದೆರಡು ಕೆಜಿಯಷ್ಟಾದರೂ ತೂಕ ಹೆಚ್ಚಿಸಿಕೊಂಡು ಮನಸು ಹಗುರಾಗಿಸಿ ಹೊಸ ಶೈಕ್ಷಣಿಕ ವರ್ಷಕ್ಕೆ ತಯಾರಾಗುತ್ತಿದ್ದ ಕಾಲ ಅದು. ಏಪ್ರಿಲ್ ಹತ್ತರಂದು ರಿಸಲ್ಟ್ ಬಂದಲ್ಲಿಂದ ಮೇ ಮೂವತ್ತೊಂದರವರೆಗೂ ನಡೆಯುವ ವಿದ್ಯಮಾನಗಳಿಗೆಲ್ಲ ದೊಡ್ಡರಜೆಯೆಂದು ಹೆಸರು. ಬೋರ್ ಎನಿಸುವುದಕ್ಕೆ, ಬೇಜಾರಾಗುವುದಕ್ಕೆ ಸಮಯವೇ ಇಲ್ಲದಷ್ಟು ಬ್ಯುಸಿ ಆಗಿರುತ್ತಿದ್ದ ದಿನಗಳವು. ಸುತ್ತುವುದಕ್ಕೆ ಮನೆಹಿಂದಿನ ತೋಟಗುಡ್ಡಗಳೇ ಸಾಕು, ತಿನ್ನುವುದಕ್ಕೆ ಕಾಡುಹಣ್ಣುಗಳು ಅನೇಕ ವಿಧದವು ದೊರೆತಾವು. ಇಲ್ಲದಿದ್ದರೆ ಅಮ್ಮನೋ ಅಜ್ಜಿಯೋ ಮಾಡಿಟ್ಟ ತಿನಿಸೇನಾದರೂ ಡಬ್ಬದಲ್ಲಿದ್ದೀತು! ಅವರಿಗೆ ಗೊತ್ತಾಗದಂತೆ ಲಪಟಾಯಿಸಿ ಗೆಳೆಯರೊಂದಿಗೆ ಹಂಚಿ ತಿಂದರೆ ಸುಖವೇ ಬೇರೆ.

ಮೇ ಇಪ್ಪತ್ತು ದಾಟುತ್ತಿದ್ದ ಹಾಗೇ ಎಲ್ಲೋ ಮೂಲೆಯಲ್ಲಿ ಮರೆಸಿಬಿಟ್ಟಿದ್ದ ಕಳೆದ ವರ್ಷದ ಬ್ಯಾಗು ನೆನಪಾಗಬೇಕು. ಹಾಗೇ ಅದರೊಳಗೆ ತುಂಬಿಟ್ಟಿದ್ದ ಪುಸ್ತಕಗಳಲ್ಲಿ ಖಾಲಿ ಉಳಿದ ಪುಟಗಳನ್ನು ಹರಿದು ತೆಗೆದು ನೀಟಾಗಿ ಜೋಡಿಸಿ ಹೊಲಿದು ಬೈಂಡು ಹಾಕಿದರೆ ಮುಂದಿನ ವರ್ಷದ ರಫ್ ಬುಕ್ ರೆಡಿ. ಮಿಕ್ಕವನ್ನೆಲ್ಲ ರದ್ದಿಗೆ ಹಾಕಿ ಹೊಸಪುಸ್ತಕಗಳಿಗೆ ಜಾಗ ಮಾಡಿಕೊಡಬೇಕು. ಹೊಸಪುಸ್ತಕಗಳ ಪರಿಮಳವೇ ಹಾಗೆ. ಹಟ್ಟಿಯಲ್ಲಿ ಹುಟ್ಟಿದ ಹೊಸ ಕರುವಿನ ನೆತ್ತಿಯನ್ನು ನೆಕ್ಕುವ ನಂದಿನಿಗೂ ಈಗಷ್ಟೇ ಹೊತ್ತುಕೊಂಡು ಬಂದ ಪಾಠಪುಸ್ತಕಗಳ ವಿಚಿತ್ರ ಸುವಾಸನೆಯನ್ನು ಆಘ್ರಾಣಿಸುತ್ತಾ ಕನಸು ಕಾಣುವ ಮುಗ್ಧ ಕಂದಮ್ಮನಿಗೂ ಏನೇನೂ ವ್ಯತ್ಯಾಸ ಇಲ್ಲ ಎಂದು ಅನಿಸುವುದು ಇಂತಹಾ ಹೊತ್ತಿನಲ್ಲೇ.

ರಜೆಯ ಗುಂಗು, ಹೊಸ ಪುಸ್ತಕಗಳ ರಂಗಿನ ನಡುವೆ ಆತಂಕದ ಬುಗ್ಗೆಯೊಂದು ನಾಭಿಯಿಂದ ಆರಂಭವಾಗಿ ಮೈಯೆಲ್ಲ ವ್ಯಾಪಿಸಿದಂತಾಗುವುದು ಟೀಚರ್ ಹೇಳಿದ್ದ ಮನೆಗೆಲಸ ಮಾಡದಿರುವುದು ಯೋಚನೆಯಾದಾಗ. ಕಾಪಿ ಬರೆಯಲೇ ಇಲ್ಲವಲ್ಲ, ಆಕಸ್ಮಾತ್ ಶಾಲೆ ತೆರೆದ ದಿನವೇ ಕೇಳಿದರೆ ಏನು ಗತಿ ಎಂಬುದು ನೆನಪಾದಾಗ. ಕನ್ನಡ, ಇಂಗ್ಲಿಷ್, ಹಿಂದಿ ಮೂರು ಭಾಷೆಗಳವೂ ದಿನಕ್ಕೆ ಅರ್ಧಪುಟದ ಲೆಕ್ಕದಲ್ಲಿ ಮೂವತ್ತು ಪುಟ ಬರೆಯಬೇಕು. ಮೇ ಮೂವತ್ತರಿಂದ ಶುರುವಾಗುವ ಕಾಪಿ ಅಭಿಯಾನದಲ್ಲಿ ಕೊನೆಗೆ ಅಪ್ಪ ಅಮ್ಮನೂ ಕೈಜೋಡಿಸಬೇಕು. ಅಕ್ಕಂದಿರ ಕೆಲಸವೂ ಕಮ್ಮಿಯಲ್ಲ. ರಜೆಯ ಅಷ್ಟೂ ಆನಂದವನ್ನು ಕಬಳಿಸುತ್ತಿದ್ದ ಅನುಭವ ಅದು. ಅಷ್ಟು ಸಾಲದ್ದಕ್ಕೆ ಇಪ್ಪತ್ತಿಪ್ಪೋತ್ಲಿವರೆಗೆ ಮಗ್ಗಿ ಬಾಯಿಪಾಠ ಬರಬೇಕು. ಆ ಒತ್ತಡದಿಂದ ಪಾರಾಗಿ ಮರುದಿನ ಬೆಳಗ್ಗೆ ಬೇಗನೇ ಎದ್ದು ಮಿಂದು ರೆಡಿಯಾಗಿ ಹಳೆಯ ಯೂನಿಫಾರಮ್ಮನ್ನು ಕೊಡವಿ ಹಾಕಿಕೊಂಡರೆ ಹೊಸಪಯಣ ಆರಂಭ.

ಬದುಕು ಬದಲಾಗಿದೆ. ಎಲ್ಲವೂ ಬದಲಾಗಿವೆ. ಹಳೆಯದನ್ನು ಹೊಸತಾಗಿಸುವ ಮಧುರವಾದ ಗುಂಗು ಇಂದಿಲ್ಲ. ಮಾರ್ಚ್ ತಿಂಗಳಲ್ಲಿಯೇ ಫಲಿತಾಂಶ ಗೊತ್ತಾಗುತ್ತದೆ. ಮತ್ತೊಂದೆರಡು ವಾರಗಳಲ್ಲಿ ಮುಂದಿನ ತರಗತಿಯ ಪಠ್ಯಪುಸ್ತಕಗಳೂ ಶಾಲೆಯಿಂದಲೇ ಕೊಡಲ್ಪಡುವ ನೋಟ್ ಬುಕ್ಕುಗಳೂ ಸಿಕ್ಕಿರುತ್ತವೆ. ಖಾಕಿ ಬೈಂಡು, ಶಾಲೆಯದ್ದೇ ಲೇಬಲ್ಲು! ಎಲ್ಲರ ಪುಸ್ತಕಗಳೂ ಒಂದೇ ಥರ ಇರಬೇಕು, ತಾರತಮ್ಯವಿಲ್ಲದಂತೆ. ಬ್ಯಾಗೂ ಅಷ್ಟೇ. ‘ನೀನೆಲ್ಲಿ ತಗೊಂಡೆ, ಎಷ್ಟು ಕೊಟ್ಟೆ? ಹೊಸದು ಕೊಡಿಸುವುದಕ್ಕೆ ಅಪ್ಪ ಒಪ್ಪಿದರಾ?’ ಎಂಬಿತ್ಯಾದಿ ಪ್ರಶ್ನೆಗಳಿಗೆ ಆಸ್ಪದವೇ ಇಲ್ಲ. ಶಾಲೆಯ ಫೀಸು ಕಟ್ಟಿದಂತೆ ಎಲ್ಲವೂ ಸಿದ್ಧ ಪ್ಯಾಕೇಜು ಎಂಬಂತೆ ದೊರೆತಾಗುತ್ತದೆ. ವರ್ಷದ ಕೊನೆಗೆ ಸೀನಿಯರ್‍ಗಳು ಯಾರಾದರೂ ಅರ್ಧ ರೇಟಿಗೆ ಮುಂದಿನ ವರ್ಷದ ಪುಸ್ತಕಗಳನ್ನು ಕೊಡುತ್ತಾರೋ ಎಂದು ಆಸೆಪಡುತ್ತಿದ್ದ, ಹಳೆ ಪತ್ರಿಕೆಯ ಪುಟಗಳನ್ನು ಐದು ಪೈಸೆಗೊಂದರಂತೆ ತಂದು ಪುಸ್ತಕಗಳಿಗೆ ಬೈಂಡು ಮಾಡುತ್ತಿದ್ದ ಪುರಾತನ ದಿನಗಳನ್ನು ನೆನೆದಾಗ ಒಂದಿನಿತು ಸಂಕಟವೆನಿಸಿದರೂ, ಆ ದಿನಗಳಲ್ಲೇ ಏನೋ ಸುಖವಿತ್ತಲ್ಲವೇ ಅನಿಸುವುದಿದೆ.

ಈಗಿನ ಕತೆ ಬೇರೆ. ಎಲ್‍ಕೆಜಿಗೆ ಸೀಟು ಬೇಕೆಂದರೆ ಮಗು ಇಂಟರ್‍ವ್ಯೂ ಪಾಸಾಗಬೇಕು. ಮಗು ಪಾಸಾಗಬೇಕು ಎನ್ನುವುದಕ್ಕಿಂತಲೂ ಅಪ್ಪ-ಅಮ್ಮಂದಿರು ಪಾಸಾಗಬೇಕು. ನೇರವಾಗಿ ಒಂದನೇ ತರಗತಿಗೆ ಸೇರುವ ಪ್ರಶ್ನೆ ಇಲ್ಲ. ಅದಕ್ಕಿಂತ ಮೊದಲೇ ಕನಿಷ್ಟ ಮೂರು ವರ್ಷದ ಶಿಕ್ಷಣ ಆಗಿರಬೇಕು. ಮಗುವಿಗೆ ಎರಡೂವರೆ ಮೂರು ವರ್ಷಗಳಾಗುವುದಕ್ಕೆ ಪುರುಸೊತ್ತಿಲ್ಲ, ಹೋಗಿ ಬಾ ಶಾಲೆಗೆ ಎಂದು ಅಟ್ಟಲೇಬೇಕು. ತೊಟ್ಟಿಲಿನಲ್ಲಿ ಎದ್ದು ಕುಳಿತು ನಗುವ ಮಗುವಿಗೆ ಸೀದಾ ಶಾಲೆಯ ಪುಟಾಣಿ ಕುರ್ಚಿಗೆ ಭಡ್ತಿ. ಹಾಗಾಗಬೇಕಾದರೂ ಸುಮಾರು ಸಿದ್ಧತೆಗಳು ಬೇಕು. ಎಬಿಸಿಡಿ, ಒನ್ ಟೂ ತ್ರೀ ಸರಾಗವಾಗಿ ಹೇಳಲು ಬರಬೇಕು. ವಾಟ್ ಈಸ್ ಯುವರ್ ನೇಮ್ ಅಂದರೆ ಮೈ ನೇಮ್ ಈಸ್.... ಎನ್ನಲು ಬರಬೇಕು. ಹೀಗೇ ಅಪ್ಪನ, ಅಮ್ಮನ ಹೆಸರೆಲ್ಲಾ ಹೇಳಲು ಬರಬೇಕು. ಫೋನ್ ನಂಬರ್ರು ಹೇಳಲು ಬಂದರೆ ಇನ್ನೂ ಉತ್ತಮ.

ಆದರೂ ಶಾಲೆಗೆ ಸೇರುವುದೆಂದರೆ ಸಂಭ್ರಮಪಡುವುದು ಮಕ್ಕಳ ಕಾಲಾತೀತ, ದೇಶಾತೀತ ಗುಣ. ಕೆಲವರಿಗೆ ಹೊಸ ಶಾಲೆಗೆ ಸೇರುವ ತವಕವಾದರೆ ಇನ್ನು ಕೆಲವರಿಗೆ ಹೊಸ ತರಗತಿಯಲ್ಲಿ ಕುಳಿತುಕೊಳ್ಳುವ ಕಾತರ. ಹೊಸ ಶಾಲೆ ಹೇಗಿರುತ್ತದೋ ಅಲ್ಲಿ ಎಂತಹ ಮಿಸ್ಸುಗಳಿರುತ್ತಾರೋ, ಎಂತಹ ಫ್ರೆಂಡ್ಸು ಸಿಗುತ್ತಾರೋ, ಆಟವಾಡಲು ಸಾಕಷ್ಟು ಸಮಯ-ಜಾಗ ಇದೆಯೋ, ಹೆಚ್ಚೆಚ್ಚು ರಜೆ ಕೊಡುತ್ತಾರೋ, ಹೋಂವರ್ಕು ಎಷ್ಟಿರತ್ತೋ ಎಂಬಿತ್ಯಾದಿ ನೂರೆಂಟು ಪ್ರಶ್ನೆ ಮೂಡದ ಮನಸ್ಸುಗಳೇ ಇಲ್ಲ. ಅಪ್ಪಾ ಹೊಸ ಶೂ-ಸಾಕ್ಸು ಯಾವಾಗ ಕೊಡಿಸ್ತೀ, ಅಮ್ಮಾ ಯೂನಿಫಾರ್ಮ್ ತಗೊಳೋಕೆ ಹೋಗೋದು ಯಾವಾಗ, ಬಾರ್ಬಿ ಜಾಮೆಟ್ರಿ ಬಾಕ್ಸು, ಆಂಗ್ರಿ ಬರ್ಡ್ ಲಂಚ್ ಬ್ಯಾಕ್ ತರೋದಕ್ಕೆ ಫ್ರೀ ಮಾಡ್ಕೋ... ಮಕ್ಕಳ ಪ್ರಶ್ನೆಗಳಿಗಂತೂ ಮಿತಿಯೇ ಇಲ್ಲ. ಬ್ಯಾಗಿನೊಳಗೆ ನೂರೆಂಟು ಪೆನ್ಸಿಲ್, ಕ್ರೇಯಾನು, ಇರೇಸರು, ಶಾರ್ಪನರ್ ಇದ್ದರೂ ಹೊಸ ಕ್ಲಾಸು ಶುರುವಾಗೋ ಹೊತ್ತಿಗೆ ಎಲ್ಲವೂ ಹೊಸಹೊಸದಾಗಿ ಇರಲೇಬೇಕು. ರಜೆಗೆ ಇನ್ನು ಎಷ್ಟು ದಿನ ಎಂದು ವರ್ಷದ ಕೊನೆಗೆ ಕೇಳಿದ್ದಕ್ಕಿಂತಲೂ ಎರಡು ಪಟ್ಟು ಚಡಪಡಿಕೆಯಲ್ಲೇ ಸ್ಕೂಲು ಶುರುವಾಗೋದಕ್ಕೆ ಇನ್ನು ಎಷ್ಟು ದಿನವಮ್ಮಾ ಎಂದು ಕೇಳದೇ ಹೋದರೆ ಅವರು ಮಕ್ಕಳೇ ಅಲ್ಲ.

ಹೈಸ್ಕೂಲಿನ ಮೆಟ್ಟಿಲು ಹತ್ತುವ ಹೊತ್ತು
ಸಣ್ಣ ಮಕ್ಕಳ ಕತೆ ಇದಾದರೆ, ಹೈಸ್ಕೂಲು ಮೆಟ್ಟಿಲು ಹತ್ತುವವರ ಅವಸ್ಥೆಯೇ ಬೇರೆ. ಎಂಟನೇ ತರಗತಿಗೆ ಬಂದರೆಂದರೆ ಮಕ್ಕಳಿಗಿಂತಲೂ ಹೆತ್ತವರೇ ಘನಗಂಭೀರ. ಅಯ್ಯೋ ಇನ್ನೇನು ಎಸ್ಸೆಸೆಲ್ಸಿಗೆ ಬಂದುಬಿಡ್ತಾನೆ/ಳೆ, ಒಂದಿಷ್ಟೂ ಸೀರಿಯಸ್‍ನೆಸ್ ಇಲ್ಲ, ಹಿಂಗೇ ಆದ್ರೆ ಮುಂದೆ ಇವನಿ/ಳಿಗೆ ಯಾರು ಸೀಟ್ ಕೊಡ್ತಾರೆ... ಎಂಬಿತ್ಯಾದಿಯಾಗಿ ಅಪ್ಪ-ಅಮ್ಮ ತಲೆ ಮೇಲೆ ಆಕಾಶ ಬಿದ್ದವರಂತೆ ಚರ್ಚಿಸುವುದು ನೋಡಿದರೆ ಆಗಷ್ಟೇ ಹದಿಹರೆಯಕ್ಕೆ ಕಾಲಿಟ್ಟ ಮಗುವಿನ ತಲೆ ತುಂಬ ಗೊಂದಲ.

ಹತ್ತನೇ ತರಗತಿ ಆರಂಭವಾಗುತ್ತಿದ್ದರಂತೂ ಮನೆಯಲ್ಲೊಂದು ಬಗೆಯ ಅಘೋಷಿತ ತುರ್ತುಪರಿಸ್ಥಿತಿ. ಶನಿವಾರ, ಭಾನುವಾರ, ಹಬ್ಬಹರಿದಿನಗಳೇ ಇಲ್ಲದ ಕ್ಯಾಲೆಂಡರು. ಎಂಗೇಜ್ಮೆಂಟು, ಮದುವೆ, ಬರ್ತ್‍ಡೇ, ಫ್ಯಾಮಿಲಿ ಗೆಟ್ ಟುಗೆದರ್ ಎಲ್ಲವೂ ರದ್ದು. ಸಂಗೀತ, ನೃತ್ಯ, ಕರಾಟೆ, ಸ್ಪೋಟ್ರ್ಸ್ ಕೇಳಲೇಬೇಡಿ. ಎಲ್ಲ ಪ್ರಶ್ನೆಗೂ ಒಂದೇ ಉತ್ತರ- ಅವ್ನು/ಅವ್ಳು ಎಸ್ಸೆಸ್ಸೆಲ್ಸಿ! ಅಮ್ಮನ ಉಳಿದೆಲ್ಲ ಜವಾಬ್ದಾರಿಗಳ ಜತೆ, ರಾತ್ರಿಯೆಲ್ಲ ಓದುವ ಮಗುವಿನ ಜತೆ ಎಚ್ಚರವಿದ್ದು ಟೀ-ಕಾಫಿ ತಯಾರಿಸುವ ಕೆಲಸ ಸೇರ್ಪಡೆ. ಹತ್ತನೇ ತರಗತಿಗೆ ಸೇರಿಸೋವಾಗ್ಲೂ ಆಯ್ಕೆಯ ಸಮಸ್ಯೆ. ಪಿಯುಸಿ, ಅದರ ನಂತರದ ಪರೀಕ್ಷೆಗಳಿಗೆ ಸಂಬಂಧಿಸಿದ ಕೋಚಿಂಗ್ ಇರೋ ಹೈಸ್ಕೂಲನ್ನು ಹುಡುಕುವ ಕಾಲ ಇದು. ಕೂಸು ಹುಟ್ಟುವ ಮುನ್ನವೇ ಸ್ಕೂಲು ಹುಡುಕುವ ಯುಗದಲ್ಲಿ ಇದೆಲ್ಲ ವಿಸ್ಮಯದ ವಿಷಯವಲ್ಲ ಬಿಡಿ.

ಪಿಯುಸಿಗೆ ಬಂದವರ ಕತೆ ಕೇಳಲೇ ಬೇಡಿ. ರಜೆಗಳ ಸಂಗತಿ ಹಾಗಿರಲಿ, ರಾತ್ರಿ-ಹಗಲುಗಳ ವ್ಯತ್ಯಾಸವೂ ಗೊತ್ತಾಗದ ಎರಡು ವರ್ಷವದು. ಕಾಲೇಜಿನಲ್ಲಿ ಸೀಟು ಸಿಕ್ಕರೆ ಸಾಕಪ್ಪಾ ಎಂದು ಹರಕೆ ಹೊರುವ ಕಾಲ ಹೋಗಿ ನಮ್ಮ ಕಾಲೇಜಿನಲ್ಲಿ ಕಡಿಮೆ ರೇಟಿನಲ್ಲಿ ಸೀಟು ಪಡೆಯಿರಿ ಎಂದು ಮನೆಮುಂದೆ ಬಂದು ದುಂಬಾಲು ಬೀಳುವ ಪ್ರೈವೇಟು ಕಾಲೇಜುಗಳಿಂದ ತಪ್ಪಿಸಿಕೊಂಡು ತಮ್ಮ ಆದ್ಯತೆಯ ಕಾಲೇಜು ಹುಡುಕುವ ಪಡಿಪಾಟಲು ಹೆತ್ತವರಿಗೇ ಪ್ರೀತಿ. ಒಳ್ಳೆಯ ಕಾಲೇಜು ಸಿಕ್ಕರೆ ಸಾಲದು, ಅಲ್ಲಿ ನೀಟ್ ಜೆಇಇ ಕೋಚಿಂಗ್ ಇರಬೇಕು, ಕಾಮರ್ಸ್ ಆದರೆ ಸಿಎ ಕೋಚಿಂಗ್ ಇರಬೇಕು. ಅದೇ ಊರಲ್ಲಿ ಮನೆಯಿದ್ದರೂ ಹಾಸ್ಟೆಲ್‍ಗೆ ಸೇರಿಸಿಕೊಳ್ಳಬೇಕು.

ಕಾಲ ಎಲ್ಲಿಯವರೆಗೆ ಬದಲಾಗಿದೆಯೆಂದರೆ ಶಾಲಾ ಕಾಲೇಜು ಆರಂಭವಾದ ಮೇಲೆ ಮಕ್ಕಳಿಗೆ ಪರೀಕ್ಷೆ, ಅದಕ್ಕೆ ಮೊದಲು ಅಪ್ಪ-ಅಮ್ಮಂದಿರಿಗೆ ಪರೀಕ್ಷೆ. ಫಲಿತಾಂಶ ಮಾತ್ರ ಒಂದೇ ಸಲ.

ಮಂಗಳವಾರ, ಮೇ 14, 2019

ಮಾಫಿ ಅಂದ್ರೆ ತ್ರಾಸು, ಮರುಪಾವತಿ ಲೇಸು!

ಮೇ 13, 2019ರ ವಿಜಯವಾಣಿ (ವಿತ್ತವಾಣಿ)ಯಲ್ಲಿ ಪ್ರಕಟವಾದ ಲೇಖನ

ವಿಜಯವಾಣಿ | ವಿತ್ತವಾಣಿ | 13-05-2019
ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಿರುವಾಗಲೇ, ಹತ್ತಿರ ಹತ್ತಿರ ತೊಂಬತ್ತರ ಇಳಿವಯಸ್ಸಿನಲ್ಲಿರುವ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ನಿಂಗಮ್ಮ ಕರಿಯಪ್ಪ ಮೂರುಣ್ಣಿ ಎಂಬ ಅಜ್ಜಮ್ಮ ಬೇರೊಂದು ವಿಷಯಕ್ಕೆ ಸುದ್ದಿಯಾದರು. ಅದೇನೆಂದರೆ, ಸಾಲ ಮರುಪಾವತಿಯ ಬಗ್ಗೆ ಅವರಿಗಿರುವ ಬದ್ಧತೆ. ಸಾಲ ಮನ್ನಾ ಆಗಲಿ, ಆಗದಿರಲಿ, ಅಜ್ಜಿಯಂತೂ ಪ್ರತೀ ವರ್ಷ ತಮ್ಮ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಪಡೆದ ಸಾಲವನ್ನು ಅವಧಿಗೆ ಮುನ್ನವೇ ತೀರಿಸಿಯೇ ಸಿದ್ಧ. 

‘ಸುಮ್ನಿರು ಅಜ್ಜೀ, ಸಾಲ ಯಾಕೆ ಕಟ್ತೀ? ಹೆಂಗೂ ಎಲ್ಲ ಮನ್ನಾ ಆಗುತ್ತೆ’ ಎಂದು ಪರಿಚಯದವರು ಕೀಟಲೆ ಮಾಡಿದರೆ ಅಜ್ಜಿಯ ಉತ್ತರ ಇದು: ‘ನಾವು ಸಂಕಷ್ಟದಲ್ಲಿರೋವಾಗ ಸೊಸೈಟಿಯೋರು ಹಿಂದೆ ಮುಂದೆ ನೋಡದೆ ಸಾಲ ಕೊಟ್ಟಿದ್ದಾರೆ ಅಂದ್ರೆ ಅದನ್ನ ಸಮಯದಲ್ಲಿ ಮರುಪಾವತಿಸೋದು ನನ್ನ ಧರ್ಮ. ಸಾಲ ನೀಡೋ ಸೊಸೈಟಿಯೊಂದಿಗೆ ನಂಬಿಕೆ ಉಳಿಸ್ಕೋಬೇಕು. ಸರ್ಕಾರದ ಋಣ ಇಟ್ಕೋಬಾರದು. ಸಾಲ ಕಟ್ರಿ ಅಂತ ಯಾರೂ ನನ್ನ ಮನೆಗೆ ಮರೋದು ನಂಗೆ ಇಷ್ಟವಿಲ್ಲ.’

ಬ್ಯಾಂಕುಗಳಿಗೆ ನೂರಾರು ಕೋಟಿ ಪಂಗನಾಮ ಹಾಕಿ ದೇಶ ವಿದೇಶಗಳಲ್ಲಿ ಅಡ್ಡಾಡಿಕೊಂಡಿರುವ ದುಡ್ಡಿನದೊರೆಗಳು ನಿಂಗಮ್ಮನಂತಹ ಪರಮಪ್ರಾಮಾಣಿಕ ರೈತರ ಎದುರು ತೀರಾ ಕುಬ್ಜರಾಗಿ ಕಾಣುತ್ತಾರೆ. ವಿಜಯ್ ಮಲ್ಯ, ನೀರವ್ ಮೋದಿಯಂಥವರದು ಕೇವಲ ಆರ್ಥಿಕ ವಿಚಾರ ಅಲ್ಲ. ಅದಕ್ಕಿಂತಲೂ ಸಂಕೀರ್ಣವಾದ ರಾಜಕೀಯ ಸಂಗತಿ ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಗೂ ಗೊತ್ತು.

ಇರಲಿ, ಇಲ್ಲಿ ಚರ್ಚಿಸ ಹೊರಟಿರುವುದು ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ಏರುತ್ತಿರುವ ಸಾಲ ಮರುಪಾವತಿ ಸಮಸ್ಯೆಯ ಬಗ್ಗೆ. ಒಂದೆಡೆ ರೈತರು ಸಾಲದ ಹೊರೆ, ಸರ್ಕಾರದ ಕೃಷಿ ನೀತಿ, ಭ್ರಷ್ಟಾಚಾರ, ಮಾನ್ಸೂನ್ ವೈಫಲ್ಯ, ಕೌಟುಂಬಿಕ ಕಾರಣಗಳಿಂದ ಕಂಗಾಲಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದರೆ, ಇನ್ನೊಂದೆಡೆ ದೇಶದ ಕೃಷಿ ಕ್ಷೇತ್ರದ ಸಾಲದ ಮೊತ್ತ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ. ಪ್ರಸ್ತುತ ದೇಶದ ಕೃಷಿ ಸಾಲದ ಮೊತ್ತ ರೂ. 12.6 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.

ಸಾಲಮನ್ನಾ ಎಂಬ ವರದಾನ:
ವೈಫಲ್ಯಗಳಿಂದ ಕಂಗೆಟ್ಟ ರೈತರಿಗೆ ಸಾಲಮನ್ನಾಕ್ಕಿಂತ ದೊಡ್ಡ ನಿರಾಳತೆ ಇನ್ನೊಂದಿಲ್ಲ. ಮುಂದೇನು ಎಂದು ದಾರಿತೋಚದೆ ಕುಳಿತ ರೈತರಿಗೆ ಸಾಲಮನ್ನಾ ಎಂಬುದು ಜೀವದಾನವೇ ಸರಿ. ದುರಂತವೆಂದರೆ ಸಾಲಮನ್ನಾ ರೈತರಿಗೆ ಸಹಾಯ ಮಾಡುವುದಕ್ಕಿಂತಲೂ ರಾಜಕಾರಣಿಗಳ ಓಲೈಕೆ ತಂತ್ರದ ಒಂದು ಭಾಗವಾಗಿ ಬಳಸಲ್ಪಡುತ್ತಿರುವುದು. ಚುನಾವಣೆ ಸಮೀಪಿಸುತ್ತಿದ್ದಂತೆ ಜನರನ್ನು ಸೆಳೆಯಲು ರಾಜಕೀಯ ಪಕ್ಷಗಳಿಗೆ ಇರುವ ಸುಲಭದ ತಂತ್ರವೆಂದರೆ ತಾವು ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿಬಿಡುವುದು. 

ಕಳೆದೊಂದು ವರ್ಷದಲ್ಲಿ ದೇಶದ 8 ರಾಜ್ಯಗಳು ಸುಮಾರು ರೂ. 1.9 ಟ್ರಿಲಿಯನ್‍ನಷ್ಟು ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿವೆ. ಉತ್ತರ ಪ್ರದೇಶದಿಂದ ಆರಂಭವಾದ ಈ ಅಭಿಯಾನ ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಛತ್ತೀಸ್‍ಗಡ, ರಾಜಸ್ತಾನ ಹಾಗೂ ಮಧ್ಯಪ್ರದೇಶಗಳಲ್ಲೆಲ್ಲ ಸುದ್ದಿ ಮಾಡಿದೆ. ಇತ್ತ ರಾಹುಲ್ ಗಾಂಧಿಯವರು ಕಾಂಗ್ರೆಸ್ ಮಿತ್ರಕೂಟ ಅಧಿಕಾರಕ್ಕೆ ಬಂದರೆ ದೇಶದ ಅಷ್ಟೂ ರೈತರ ಸಾಲ ಮನ್ನಾ ಮಾಡುವುದಾಗಿ ಭಾಷೆ ಕೊಟ್ಟಿದ್ದಾರೆ. ಇಡೀ ದೇಶದ ರೈತರ ಸಾಲ ಮನ್ನಾ ಮಾಡಲು ಎಷ್ಟು ಹಣ ಬೇಕು, ಅದರಿಂದಾಗಬಹುದಾದ ಪರಿಣಾಮಗಳೇನು ಎಂದವರು ಕನಿಷ್ಟ ಪಕ್ಷ ಕಲ್ಪಿಸಿಕೊಂಡಿದ್ದಾರೋ ಇಲ್ಲವೋ?

‘ಸಾಲಮನ್ನಾ ಒಂದು ಬ್ಯಾಂಡೇಜ್ ಪರಿಹಾರ ಅಷ್ಟೇ. ತಕ್ಷಣದ ಪರಿಹಾರ ಒದಗಿಸಲು ಕೆಲವೊಮ್ಮೆ ಇದು ಅಗತ್ಯವೂ ಹೌದು. ಆದರೆ ಹೆಚ್ಚುತ್ತಿರುವ ಖರ್ಚು ಮತ್ತು ಕುಸಿಯುತ್ತಿರುವ ಲಾಭ ಮುಂತಾದ ಮೂಲಭೂತ ಸಮಸ್ಯೆಗಳಿಗೆ ಇದು ಪರಿಹಾರ ನೀಡುವುದಿಲ್ಲ. ಇದು ರಾಜಕಾರಣಿಗಳ ಮಟ್ಟಿಗೆ ಮಾತ್ರ ಒಂದು ಸುಲಭದ ಪರಿಹಾರ’ ಎನ್ನುತ್ತಾರೆ ಮುಂಬೈ ಸಮಾಜ ವಿಜ್ಞಾನಗಳ ಟಾಟಾ ಸಂಸ್ಥೆಯ ಪ್ರಾಧ್ಯಾಪಕರೊಬ್ಬರು.

ನೈತಿಕ ಅಶಿಸ್ತು:
ರೈತರಿಗೆ ತಕ್ಷಣದ ಒತ್ತಡದಿಂದ ಸಾಲಮನ್ನಾ ಒಂದಿಷ್ಟು ಬಿಡುಗಡೆ ನೀಡಬಹುದೇನೋ? ಆದರೆ ಅದೊಂದು ದೂರದೃಷ್ಟಿಯ ಉಪಕ್ರಮ ಅಲ್ಲವೆಂಬುದನ್ನು ಇದುವರೆಗಿನ ಬೆಳವಣಿಗೆಗಳು ದೃಢಪಡಿಸಿವೆ. ವಾಸ್ತವವಾಗಿ ರೈತರಿಗೆ ಅಗತ್ಯವಿರುವುದು ಸಾಲಮನ್ನಾ ಅಲ್ಲ, ಸಾಲದ ವಿಷವರ್ತುಲದಿಂದ ಶಾಶ್ವತ ಬಿಡುಗಡೆ ಎಂಬುದನ್ನು ಸ್ವಾಮಿನಾಥನ್ ಆಯೋಗದ ವರದಿ ಸರಿಯಾಗಿಯೇ ಬೊಟ್ಟು ಮಾಡಿದೆ. ರೈತರ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ, ಬೆಂಬಲ ಬೆಲೆ ಒದಗಿಸುವುದರಿಂದ ರೈತರ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರ ಲಭಿಸೀತೇ ಹೊರತು ಸಾಲಮನ್ನಾ ಎಂಬ ತಕ್ಷಣದ ಆಕರ್ಷಣೆಯಿಂದ ಅಲ್ಲ.

ಇನ್ನೊಂದು ವಿಷಯವೆಂದರೆ ಸಾಲಮನ್ನಾದ ಹೆಚ್ಚಿನ ಲಾಭ ಪಡೆಯುತ್ತಿರುವುದು ದೊಡ್ಡ ಹಿಡುವಳಿಯ ಕುಳಗಳೇ ಹೊರತು ಸಣ್ಣಪುಟ್ಟ ಕೃಷಿ ಮಾಡಿಕೊಂಡು ಬದುಕುತ್ತಿರುವ ಬಡ ಕುಟುಂಬಗಳಲ್ಲ. ರೈತರಿಗೆ ದೊರೆಯುವ ಬಡ್ಡಿರಹಿತ ಸಾಲಸೌಲಭ್ಯದ ದೊಡ್ಡ ಫಲಾನುಭವಿಗಳೂ ಇವರೇ. ತಮಗೆ ಅಗತ್ಯವಿಲ್ಲದಿದ್ದರೂ ಸಹಕಾರ ಸಂಘಗಳಿಂದ ಶೂನ್ಯಬಡ್ಡಿದರದ ಗರಿಷ್ಠ ಸಾಲಗಳನ್ನು ಪಡೆದು ಅದೇ ಮೊತ್ತವನ್ನು ಮತ್ತೆ ಉಳಿತಾಯ ಖಾತೆಗೆ ಜಮಾ ಮಾಡಿ ಬಡ್ಡಿ ಪಡೆಯುವುದು ಅಥವಾ ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದು ಹಳ್ಳಿಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಸಹಜವಾಗಿಯೇ ಸಾಲಮನ್ನಾ ಆದಾಗ ಹೆಚ್ಚಿನ ಲಾಭ ಪಡೆಯುವುದೂ ಇದೇ ಕುಳಗಳು.

ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ರಘುರಾಂ ರಾಜನ್, ಊರ್ಜಿತ್ ಪಟೇಲ್ ಮುಂತಾದವರು ಸಾಲಮನ್ನಾ ಘೋಷಣೆಗಳಿಗೆ ಆಗಿಂದಾಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದರು. ‘ಸಕಾರಗಳು ಜನಪ್ರಿಯತೆ ಗಳಿಸುವ ಉದ್ದೇಶದಿಂದ ಘೋಷಿಸುವ ರೈತರ ಸಾಲಮನ್ನಾ ನಿರ್ಧಾರವು ಒಂದು ನೈತಿಕ ಅಶಿಸ್ತು. ಇದು ಹಣದುಬ್ಬರಕ್ಕೆ ಕಾರಣವಾಗುತ್ತದೆಯಲ್ಲದೆ, ಪ್ರಾಮಾಣಿಕ ಸಾಲ ಸಂಸ್ಕೃತಿ ದುರ್ಬಲವಾಗುತ್ತದೆ. ಮರುಪಾವತಿಯ ಶಿಸ್ತಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎಂದು 2017ರಲ್ಲೇ ಊರ್ಜಿತ್ ಪಟೇಲ್ ಎಚ್ಚರಿಸಿದ್ದರು.

ಪ್ರಾಮಾಣಿಕರ ನಿರ್ಲಕ್ಷ್ಯ:
‘ಸಾಲ ಮನ್ನಾದಿಂದ ಪ್ರಾಮಾಣಿಕವಾಗಿ ಸಾಲ ಹಿಂದಿರುಗಿಸುವವರನ್ನು ನಿರ್ಲಕ್ಷಿಸಿದಂತಾಗುತ್ತದೆ. ಇದು ಸಾಲ ಮರುಪಾವತಿ ಶಿಸ್ತಿಗೆ ಧಕ್ಕೆ ತರುತ್ತದೆ. ಇನ್ನು ಮುಂದೆ ಸಾಲ ಪಡೆಯುವವರು ಸಾಲ ತೀರಿಸಲು ಹಿಂದೇಟು ಹಾಕಲಾರಂಭಿಸುತ್ತಾರೆ. ತೆರಿಗೆದಾರರ ಹಣ ಸಾಲ ಪಡೆದವರಿಗೆ ಹೋದಂತಾಗುತ್ತದೆ’ ಎಂಬ ಇತ್ತೀಚೆಗೆ ಪ್ರಕಟವಾದ ಆರ್‍ಬಿಐ ದ್ವೈಮಾಸಿಕ ವಿತ್ತನೀತಿಯ ಹೇಳಿಕೆಯನ್ನು ಗಮನಿಸಬೇಕು.

ಕಾಲಕಾಲಕ್ಕೆ ಸಾಲ ಮರುಪಾವತಿಸುವವರಿಗೆ ಸರ್ಕಾರ ನೀಡುವ ಉತ್ತೇಜನ ಏನು? ಅವರು ಸಕಾಲಕ್ಕೆ ಸಾಲ ಮರುಪಾವತಿಸುತ್ತಲೇ ಇರುತ್ತಾರೆ. ಇನ್ನೊಂದೆಡೆ ವರ್ಷಾನುಗಟ್ಟಲೆ ಸಾಲ ತೀರಿಸದೆ ಉಳಿಯುವವರು ಮನ್ನಾದ ಲಾಭ ಪಡೆಯುತ್ತಾರೆ. ಇದು ಪ್ರಾಮಾಣಿಕರಿಗೆ ಮಾಡುವ ಅನ್ಯಾಯ ಅಲ್ಲವೇ ಎಂಬುದು ಕೂಡ ಗಂಭೀರ ಪ್ರಶ್ನೆಯೇ. ಇದಕ್ಕಿಂತ ಅಸಲು ಮರುಪಾವತಿಸಿದರೆ ಬಡ್ಡಿ ಮನ್ನಾ ಎಂಬ ಉಪಕ್ರಮಗಳು ನಿಜಕ್ಕೂ ಉತ್ತಮ ಹೆಜ್ಜೆ ಎನಿಸಬಲ್ಲವು. ಆಗ ಅಸಲನ್ನಾದರೂ ಪಾವತಿಸುವವರ ಪ್ರಮಾಣವಾದರೂ ಕೊಂಚ ಹೆಚ್ಚಾದೀತು. ಉತ್ತಮ ಬೆಳೆ ಹಾಗೂ ಧಾರಣೆ ದೊರಕಿದರೆ ಸಾಲ ಮರುಪಾವತಿ ಮಾಡದೆ ಇರುವಷ್ಟು ನಮ್ಮ ದೇಶದ ಯಾವ ರೈತನೂ ಅಪ್ರಾಮಾಣಿಕನಲ್ಲ. ಸಾಲಮನ್ನಾವನ್ನು ಮತಬೇಟೆಯ ತಂತ್ರವನ್ನಾಗಿ ಬಳಸುವ ಬದಲು ರಾಜಕೀಯ ಪಕ್ಷಗಳು ರೈತರ ಸಮಸ್ಯೆಗಳ ಪರಿಹಾರದ ಬಗ್ಗೆ ನೈಜ ಮನಸ್ಸಿನಿಂದ ಕೆಲಸ ಮಾಡಿದರೆ ಸಾಲಮರುಪಾವತಿ ಸಂಸ್ಕøತಿ ಮತ್ತೆ ನಿಸ್ಸಂಶಯವಾಗಿ ಬಲಗೊಳ್ಳುವುದು ಕಷ್ಟವೇನಲ್ಲ.

ಏರುತ್ತಿರುವ ಅನುತ್ಪಾದಕ ಆಸ್ತಿ
ಪಂಜಾಬ್ ಸರ್ಕಾರವು ಸಣ್ಣ ಮತ್ತು ಅತಿಸಣ್ಣ ರೈತರ ರೂ. 2 ಲಕ್ಷದವರೆಗಿನ ಸಾಲಗಳನ್ನು ಘೋಷಿಸಿದ ಮೇಲೆ ಕಟ್ಟಲು ಅನುಕೂಲವಿದ್ದವರೂ ಕಟ್ಟುವುದನ್ನು ನಿರ್ಲಕ್ಷಿಸಿದರು. ಇದು ಬಹುತೇಕ ಸಂದರ್ಭಗಳಲ್ಲಿ/ ರಾಜ್ಯಗಳಲ್ಲಿ ನಡೆಯುವ ವಿದ್ಯಮಾನ. ಸಾಲ ಮರುಪಾವತಿ ಮಾಡುವುದು ಹಾಗಿರಲಿ ಖಾತೆಗಳಲ್ಲಿ ಹಣವಿದ್ದರೆ ಬ್ಯಾಂಕ್ ಸಾಲದ ಕಂತನ್ನು ತೆಗೆದುಕೊಂಡೀತು ಎಂಬ ಆತಂಕದಿಂದ ಕೆಲವು ರೈತರು ಬ್ಯಾಂಕುಗಳಲ್ಲಿ ಹಣ ಡೆಪಾಸಿಟ್ ಮಾಡುವುದನ್ನೇ ನಿಲ್ಲಿಸಿಬಿಟ್ಟರಂತೆ. ಇದರಿಂದಾಗಿ ಬ್ಯಾಂಕುಗಳಲ್ಲಿನ ಅನುತ್ಪಾದಕ ಆಸ್ತಿ (ಎನ್‍ಪಿಎ) ಬೆಳೆಯುತ್ತಲೇ ಇದೆ. 

ಕುಸಿಯುತ್ತಿರುವ ಸಾಲಸೌಲಭ್ಯ
ವಾಸ್ತವವಾಗಿ ಸಣ್ಣ ರೈತರಿಗೆ ದೊರೆಯುವ ಸಾಲಸೌಲಭ್ಯ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಒಟ್ಟಾರೆ ಕೃಷಿ ಸಾಲದಲ್ಲಿ ರೂ. 2 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಸಾಲ ಪಡೆದವರ ಪ್ರಮಾಣ 2016ರಲ್ಲಿ ಶೇ. 45 ಇತ್ತು, ಇದು 2017ರಲ್ಲಿ ಶೇ. 40ಕ್ಕೆ ಇಳಿಯಿತು. ಹಾಗೆ ನೋಡಿದರೆ ದೊಡ್ಡ ಸಾಲಗಳನ್ನು ಪಡೆಯುವವರ ಪ್ರಮಾಣ ಹೆಚ್ಚಿದೆ. ಉದಾಹರಣೆಗೆ, ಎರಡು ಲಕ್ಷಕ್ಕಿಂತ ಹೆಚ್ಚು ಮತ್ತು ಒಂದು ಕೋಟಿಗಿಂತ ಕಡಿಮೆ ಸಾಲ ಪಡೆಯುವವರು ನಮ್ಮಲ್ಲಿ ಶೇ. 47 ಇದ್ದಾರೆ. ಒಂದು ಕೋಟಿಗಿಂತಲೂ ಕೃಷಿ ಸಾಲ ಪಡೆಯುವವರು ಶೇ. 13 ಇದ್ದಾರೆ. ದುರದೃಷ್ಟವೆಂದರೆ ದಾಸ್ತಾನು ಮಳಿಗೆಗಳು, ಕೋಲ್ಡ್ ಸ್ಟೋರೇಜ್, ರಸಗೊಬ್ಬರಗಳ ತಯಾರಕರು, ಅಹಾರ ಉತ್ಪನ್ನಗಳ ತಯಾರಕರೇ ಮೊದಲಾದ ದೊಡ್ಡ ಕುಳಗಳೇ ಇಂತಹ ಕೃಷಿ ಸಾಲದ ಪ್ರಯೋಜನೆ ಪಡೆಯುತ್ತಾರೆ.

ಗರಿಷ್ಠ ವಿತ್ತೀಯ ಕೊರತೆ
ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಸರ್ಕಾರದ ವಿತ್ತೀಯ ಕೊರತೆ ಗರಿಷ್ಠ ಹಂತವನ್ನು ತಲುಪಿದೆ. ಇದು ಹಣದುಬ್ಬರಕ್ಕೆ ಎಡೆ ಮಾಡಿಕೊಟ್ಟಿದೆ. ಸಾಲಮನ್ನಾ ನಿರ್ಧಾರಗಳು ಈ ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸಿವೆ. ಹಾಗೆಯೇ, ಸಾಲಮನ್ನಾ ನಿರ್ಧಾರವು ಭವಿಷ್ಯದಲ್ಲಿ ಸಾಲಗಾರರು ಸುಸ್ತಿದಾರರಾಗಲು ಉತ್ತೇಜನ ನೀಡುತ್ತದೆ. ಮುಂದೆ ಸಾಲ ಮರುಪಾವತಿಸುವ ಸಂದರ್ಭವೇ ಬರಲಿಕ್ಕಿಲ್ಲ ಎಂದು ಭಾವಿಸುವ ಸಾಲಗಾರರು ಹೆಚ್ಚೆಚ್ಚು ಪ್ರಮಾಣದಲ್ಲಿ ಸಾಲ ಪಡೆದು ಮರುಪಾವತಿಯನ್ನು ನಿರ್ಲಕ್ಷಿಸತೊಡಗುತ್ತಾರೆ ಎನ್ನುತ್ತಾರೆ ಆರ್ಥಿಕ ತಜ್ಞರು. 

ರೈತರ ಆತ್ಮಹತ್ಯೆ
ರೈತರ ಆತ್ಮಹತ್ಯೆ ಭಾರತದ ಕೃಷಿ ಕ್ಷೇತ್ರದ ಬಲುದೊಡ್ಡ ಸವಾಲು. ಉದಾರೀಕರಣದ ನೀತಿಯೊಂದಿಗೆ ದೇಶವನ್ನು ಪ್ರವೇಶಿಸಿದ ಈ ಭೂತ ಇನ್ನೂ ತನ್ನ ಆಟಾಟೋಪವನ್ನು ನಿಲ್ಲಿಸಿಲ್ಲ. ರಾಷ್ಟ್ರೀಯ ಅಪರಾಧ ದಾಖಲು ಬ್ಯೂರೋದ ಪ್ರಕಾರ, 1995ರಿಂದೀಚೆಗೆ ದೇಶದಲ್ಲಿ 2.96 ಲಕ್ಷದಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಸುಮಾರು 60,000ದಷ್ಟು ರೈತರು ಮಹಾರಾಷ್ಟ್ರದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಒಡಿಶಾ, ತೆಲಂಗಾಣ, ಆಂಧ್ರ, ಮಧ್ಯಪ್ರದೇಶ, ಗುಜರಾತ್ ಹಾಗೂ ಛತ್ತೀಸ್‍ಗಡ ನಂತರದ ಸಾಲಿನಲ್ಲಿವೆ. ಕೋಟಿಗಟ್ಟಲೆ ರೂಪಾಯಿಯಷ್ಟು ಸಾಲಮನ್ನಾ ಘೋಷಣೆ ಮಾಡಿದ್ದರಿಂದಲೂ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಕಡಿಮೆಯಾಗಿಲ್ಲ ಎಂದರೆ ಸಾಲಮನ್ನಾ ಒಂದು ಪರಿಣಾಮಕಾರಿ ಉಪಕ್ರಮ ಅಲ್ಲ ಎಂಬುದು ದೃಢವಾಗುತ್ತದೆ.

ಶುಕ್ರವಾರ, ಮೇ 10, 2019

ನಿಂದೆಯೆಂಬ ಆತ್ಮಾವಲೋಕನದ ಬೆಳಕು

ಏಪ್ರಿಲ್ 27-ಮೇ 3, 2019ರ ಬೋಧಿವೃಕ್ಷದಲ್ಲಿ ಪ್ರಕಟವಾದ ಬರಹ

ಸಂಸ್ಕೃತ ಕವಿ ಭಾರವಿಯ ಕುರಿತು ಒಂದು ಸ್ವಾರಸ್ಯಕರ ಕಥೆಯಿದೆ. ಪ್ರತಿಭಾಸಂಪನ್ನನಾಗಿದ್ದ ಭಾರವಿ ಬಾಲ್ಯದಿಂದಲೇ ಉತ್ತಮ ರಚನೆಗಳಿಂದ ಗಮನ ಸೆಳೆದಿದ್ದ. ಅವನ ಕಾವ್ಯವನ್ನು ಇಷ್ಟಪಟ್ಟು ಎಲ್ಲರೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. ಆದರೂ ಭಾರವಿಗೆ ಒಂದು ಕೊರಗು ಹಾಗೇ ಉಳಿದಿತ್ತು. ಅದೇನೆಂದರೆ ಎಷ್ಟೇ ಉತ್ತಮ ಕಾವ್ಯ ರಚನೆ ಮಾಡಿದರೂ ಅವನ ತಂದೆ ಅವನನ್ನು ಹೊಗಳುತ್ತಿರಲಿಲ್ಲ.
ಏಪ್ರಿಲ್ 27-ಮೇ 3, 2019 | ಬೋಧಿವೃಕ್ಷ

ಈ ಬೇಸರ ಯಾವ ಮಟ್ಟಕ್ಕೆ ಹೋಯಿತೆಂದರೆ, ಅದು ದ್ವೇಷವಾಗಿ ಬದಲಾಗುವಷ್ಟು. ಒಂದು ರಾತ್ರಿ ಹಿಟ್ಟು ಅರೆಯುವ ಕಲ್ಲನ್ನು ಎತ್ತಿಕೊಂಡು ಭಾರವಿ ಅಟ್ಟದ ಮೇಲೆ ಅಡಗಿ ಕುಳಿತನಂತೆ. ಇನ್ನೇನು ಅದನ್ನು ತಂದೆಯ ಮೇಲೆ ಎತ್ತಿಹಾಕುವ ಯೋಚನೆ ಮಾಡುತ್ತಿದ್ದವನಿಗೆ ತಂದೆ-ತಾಯಿ ಮಾತಾಡುತ್ತಿರುವುದು ಕೇಳಿಸಿತು.

‘ಅಲ್ಲಾ, ಆ ಮಗು ನಿಮಗೇನು ಮಾಡಿದೆ? ಎಷ್ಟು ಒಳ್ಳೆಯ ಕಾವ್ಯ ಬರೆಯುತ್ತಾನೆ! ನೀವು ಒಮ್ಮೆಯೂ ಅವನ ಬಗ್ಗೆ ಮೆಚ್ಚುಗೆಯ ಮಾತಾಡುವುದಿಲ್ಲವಲ್ಲ... ಪಾಪ, ಎಷ್ಟು ನೊಂದುಕೊಳ್ಳುತ್ತಾನೋ ಏನೋ?’ ಅಮ್ಮ ಅಪ್ಪನಿಗೆ ಕೇಳುತ್ತಿದ್ದಳು. ಭಾರವಿ ಚುರುಕಾಗಿ ಕಿವಿಗೊಡತೊಡಗಿದ. ಅಪ್ಪನ ಉತ್ತರ ಹೀಗಿತ್ತು:

‘ನೀನು ಹೇಳುವುದು ನಿಜ. ನಮ್ಮ ಮಗ ತುಂಬ ಪ್ರತಿಭಾವಂತ. ಉತ್ತಮ ಕಾವ್ಯ ರಚನೆ ಮಾಡುತ್ತಾನೆ. ಆದರೆ ಈಗಲೇ ನಾವು ಹೊಗಳಲು ಆರಂಭಿಸಿದರೆ ಆತನಿಗೆ ತಾನು ಬರೆಯುತ್ತಿರುವುದು ಶ್ರೇಷ್ಠ ಎಂಬ ಭಾವನೆ ಬಂದುಬಿಡಬಹುದು; ಮುಂದಕ್ಕೆ ಇನ್ನಷ್ಟು ಉತ್ತಮವಾದದ್ದನ್ನು ಬರೆಯಲು ಪ್ರಯತ್ನಿಸುವುದೇ ಇಲ್ಲ. ಅವನು ಇನ್ನೂ ಎತ್ತರಕ್ಕೆ ಏರಬೇಕಾಗಿದೆ...’.

ಈ ಸಂಭಾಷಣೆ ಕೇಳಿ ಭಾರವಿಯ ಮನಸ್ಸಿನಲ್ಲಿದ್ದ ದ್ವೇಷ ಜರ್ರನೆ ಇಳಿದು ಮನಸ್ಸಿನಲ್ಲಿ ಬೆಳಕು ಮೂಡಿತಂತೆ. ಕೂಡಲೇ ಕೆಳಗಿಳಿದು ಬಂದು ತಂದೆಯ ಕಾಲಿಗೆ ಬಿದ್ದು ಕ್ಷಮೆ ಕೋರಿದನಂತೆ. ಕೊಂಚ ದುಡುಕಿದ್ದರೂ ಎಂತಹ ಪಾಪಕೃತ್ಯ ಎಸಗುತ್ತಿದ್ದೆ ಎಂದು ಮಮ್ಮಲ ಮರುಗಿದನಂತೆ. ಮುಂದೆ ಅದೇ ಭಾರವಿ ‘ಕಿರಾತಾರ್ಜುನೀಯಮ್’ನಂತಹ ಅಜರಾಮರ ಕೃತಿ ರಚನೆ ಮಾಡಿದ್ದು ಈಗ ಇತಿಹಾಸ.

ಜಗತ್ತಿನಲ್ಲಿ ಟೀಕೆ ಇಷ್ಟಪಡುವವರು ಎಷ್ಟು ವಿರಳವೋ ಹೊಗಳಿಕೆಗೆ ಉಬ್ಬಿಹೋಗದವರೂ ಅಷ್ಟೇ ವಿರಳ. ಎರಡನ್ನೂ ಸಮಾನವಾಗಿ ಸ್ವೀಕರಿಸುವವರಂತೂ ವಿರಳಾತಿವಿರಳ. ‘ಜನರು ನಿಮ್ಮನ್ನು ಟೀಕಿಸುವಂತೆ ಕೇಳಿಕೊಳ್ಳುತ್ತಾರೆ. ಆದರೆ ಅವರು ಬಯಸುವುದು ಪ್ರಶಂಸೆಯನ್ನು ಮಾತ್ರ’ ಎನ್ನುತ್ತಾನೆ ಪ್ರಸಿದ್ಧ ಲೇಖಕ ಸಾಮರ್ಸೆಟ್‍ಮಾಮ್. ಎಂತಹ ಕಠಿಣ ಮನಸ್ಸಿನವನೂ ಹೊಗಳಿದಾಗ ಕೊಂಚ ಮೃದುವಾಗುತ್ತಾನೆ. ಅದು ಅಪರಾಧವೇನೂ ಅಲ್ಲ, ಮನುಷ್ಯನ ಸಹಜ ಗುಣ. ಸ್ವತಃ ಭಗವಂತನಿಗೇ ಸ್ತುತಿಯೆಂದರೆ ಇಷ್ಟವಂತೆ; ಇನ್ನು ಜನಸಾಮಾನ್ಯರ ಪಾಡೇನು?

ಆದರೆ ಹೊಗಳಿಕೆಯನ್ನು ಇಷ್ಟಪಡುವವರು ನಿಂದೆಗಳಿಗೂ ಮನಸ್ಸು ತೆರೆಯದಿದ್ದರೆ ಬದುಕು ನಿಶ್ಚಲವಾಗಿಬಿಡುತ್ತದೆ. ಬದುಕಿನ ಶ್ರೇಯಸ್ಸಿಗೆ ಸ್ತುತಿನಿಂದೆಗಳೆರಡೂ ಅಗತ್ಯ. ಹೊಗಳುವವರಿಲ್ಲದಿದ್ದರೂ ಸರಿ, ನಿಂದಕರಂತೂ ಇರಲೇಬೇಕು ಎಂದರು ಎಲ್ಲ ದಾರ್ಶನಿಕರು.

ನಿಂದಕರಿರಬೇಕು ಜಗದೊಳು ನಿಂದಕರಿರಬೇಕು|
ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ದಿಯೋ ಹಾಂಗೆ||
ಎಂದರು ಪುರಂದರದಾಸರು. ‘ಅಂದಂದು ಮಾಡಿದ ಪಾಪವೆಂಬ ಮಲ/ ತಿಂದು ಹೋಗುವರಯ್ಯ ನಿಂದಕರು’ ಎಂದ ದಾಸರು, ಟೀಕೆಗಳು ಆತ್ಮಶೋಧನೆಗೆ ಎಷ್ಟು ಅನಿವಾರ್ಯವೆಂಬುದನ್ನು ಒತ್ತಿಹೇಳಿದರು. ಅಂದಂದು ಮಾಡಿದ ಪಾಪವೆಂಬ ಕೊಳೆ ತೊಳೆದುಹೋಗಬೇಕಾದರೆ ಟೀಕಾಕಾರರು ಇರಲೇಬೇಕೆಂಬ ಅವರ ನಿಲವು ತುಂಬ ಮನೋಜ್ಞವಾಗಿದೆ.

ಟೀಕೆ ಮಾಡುವವರು ಇಲ್ಲದೇ ಹೋದರೆ ನಮಗೆ ನಮ್ಮ ಸ್ಥಾನ ಅರ್ಥವೇ ಆಗುವುದಿಲ್ಲ. ನಾನು ಮಾಡಿದ್ದೇ ಸರಿ ಎಂಬ ಭಾವನೆ ಗಟ್ಟಿಯಾಗಿಬಿಡುತ್ತದೆ. ಅಲ್ಲಿಗೆ ಬೆಳವಣಿಗೆಯೂ ನಿಂತುಹೋಗುತ್ತದೆ. ಎಲ್ಲಿ ನಿಂದೆ ಎದುರಾಗುತ್ತದೋ, ಅದು ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡುತ್ತದೆ. ಅನೇಕ ಬಾರಿ ಪಂಥಾಹ್ವಾನದಂತೆಯೂ ಗೋಚರಿಸಿ, ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತದೆ. ನಿನ್ನಿಂದೇನು ಸಾಧ್ಯ ಎಂಬ ಒಂದೇ ಮಾತಿಗೆ ಸಿಡಿದೆದ್ದು ತಮ್ಮ ಭವಿಷ್ಯವನ್ನೇ ಭವ್ಯವಾಗಿ ಕಟ್ಟಿಕೊಂಡ ನೂರಾರು ಮಂದಿಯ ಯಶೋಗಾಥೆಗಳು ಹೇರಳವಾಗಿ ಸಿಗುತ್ತವೆ.

ನಿಂದಂತು ನೀತಿ ನಿಪುಣಾ ಯದಿ ವಾ ಸ್ತುವಂತು ಲಕ್ಷ್ಮೀಃ
ಸಮಾವಿಶತು ಗಚ್ಛತು ವಾ ಯಥೇಷ್ಟಮ್|
ಅದ್ಯೈವ ವಾ ಮರಣಮಸ್ತು ಯುಗಾಂತರೇ ವಾ ನ್ಯಾಯಾತ್ 
ಪಥಾತ್ ಪ್ರವಿಚಲಂತಿ ಪದಂ ನ ಧೀರಾಃ||
ಎಂಬ ಸಂಸ್ಕೃತ ಸುಭಾಷಿತವೊಂದಿದೆ. ಅಂದರೆ- ‘ನಾವು ಕೈಗೊಳ್ಳುವಕಾರ್ಯವನ್ನು ನೀತಿಕುಶಲರು ನಿಂದಿಸಲಿ ಅಥವಾ ಹೊಗಳಲಿ, ನಮಗೆ ಲಾಭವಾಗಲಿ ಅಥವಾ ನಷ್ಟವೇ ಆಗಲಿ, ಇಂದೇ ಸಾವು ಬರಲಿ ಅಥವಾ ಯುಗಾಂತರದವರೆಗೆ ಬದುಕಲಿ, ಧೈರ್ಯಶಾಲಿಗಳು ನ್ಯಾಯವಾದ ಮಾರ್ಗದಿಂದ ಕದಲುವುದಿಲ್ಲ’ ಎಂಬುದು ಇದರರ್ಥ.

ಇದನ್ನೇ ಅಕ್ಕಮಹಾದೇವಿಯು ‘ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದಡೆಂತಯ್ಯ’ ಎಂದು ಪ್ರಶ್ನೆ ಮಾಡಿದ್ದು. ಮನುಷ್ಯ ವಿಶಾಲ ಸಮಾಜದ ಒಂದು ಭಾಗವೆನಿಸಿದ ಮೇಲೆ ಅಲ್ಲಿನ ಸುಖಸಂತೋಷಗಳನ್ನಷ್ಟೇ ಅಲ್ಲದೆ ಎಡರುತೊಡರುಗಳನ್ನೂ ಎದುರಿಸಲು ಸಿದ್ಧನಿರಬೇಕು.

ಬಸವಣ್ಣನವರಂತೂ ಟೀಕಾಕಾರರಿಗಿಂತಲೂ ಹೊಗಳುವವರೇ ಹೆಚ್ಚು ಅಪಾಯಕಾರಿಗಳೆಂದು ಹೇಳಿದರು. ‘ಎನ್ನವರೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ ಹೊಗಳಿ ಹೊಗಳಿ’ ಎಂದ ಬಸವಣ್ಣನವರು ‘ನಿಮ್ಮ ಮನ್ನಣೆಯ ಮಸೆದಲಗಾಗಿ ತಾಗಿತ್ತಲ್ಲಾ’ ಎಂದು ನೊಂದುಕೊಂಡರು. ‘ನೀನೆನಗೆ ಒಳ್ಳಿದನಾದಡೆ ಎನ್ನ ಹೊಗಳಿಕೆಗಡ್ಡಬಾರಾ ಧರ್ಮೀ!’ ಎಂಬ ಕೋರಿಕೆಯಂತೂ ಅದ್ಭುತವಾಗಿದೆ. ಒಂದು ವೇಳೆ ನೀನು ನನ್ನ ಶ್ರೇಯೋಭಿಲಾಷಿಯಾಗಿದ್ದರೆ ನನ್ನನ್ನು ಯಾರೂ ಹೊಗಳದಂತೆ ನೋಡಿಕೋ ಎಂಬ ಮಾತಂತೂ ಅತ್ಯಪೂರ್ವವಾದದ್ದು.

ಕತ್ತಲೆ ಇದ್ದಾಗಲಷ್ಟೇ ಬೆಳಕಿಗೆ ಬೆಲೆ. ಕಹಿ ಇದ್ದಾಗಲಷ್ಟೇ ಸಿಹಿಗೆ ಬೆಲೆ. ಕಷ್ಟಗಳಿದ್ದಾಗಲೇ ಸುಖಕ್ಕೆ ಬೆಲೆ. ನಿಂದಕರಿದ್ದಾಗಲೇ ಪ್ರಶಂಸೆಗೆ ಬೆಲೆ.

ಮಂಗಳವಾರ, ಮೇ 7, 2019

ಚುನಾವಣೆ ಉಳಿಸಿಹೋಗಿರುವ ಪ್ರಶ್ನೆಗಳು

ಮೇ 6, 2019ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ 

ರಾಜ್ಯದ ಪುಟ್ಟಹಳ್ಳಿಯ ಮತಗಟ್ಟೆಯೊಂದರಲ್ಲಿ ಪ್ರಿಸೈಡಿಂಗ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಾ ಬಂದುಹೋಗುವವರನ್ನು ಕುತೂಹಲದಿಂದ ಗಮನಿಸುತ್ತಾ ಇದ್ದೆ. ಮೊದಲ ಬಾರಿ ಮತ ಚಲಾಯಿಸುವ ಉಮೇದಿನ ನವತರುಣರು, ಈಗಷ್ಟೇ ಹಟ್ಟಿಯ ಗಂಜಳ ಬಳಿದು ಉಟ್ಟ ಬಟ್ಟೆಯಲ್ಲೇ ಬಂದು ಸರತಿಯಲ್ಲಿ ನಿಂತ ಹೆಮ್ಮಕ್ಕಳು, ಆಡು ಕುರಿ ಮಂದೆಯನ್ನು ಎಬ್ಬುತ್ತಾ ಒಂದಿಷ್ಟು ಹೊತ್ತು ವಿರಾಮ ತೆಗೆದುಕೊಂಡು ಹಾಗೇ ಓಟು ಹಾಕಿ ಹೋಗೋಣ ಎಂದು ಅಡಾವುಡಿಯಿಂದ ಧಾವಿಸುವ ಮಧ್ಯವಯಸ್ಕರು, ಏರಿದ ನಶೆಯಿಂದ ಓಲಾಡುತ್ತಿದ್ದರೂ ಮತಹಾಕುವ ಪ್ರಜ್ಞೆ ಮರೆಯದ ಮದ್ಯಪಾನಿಗಳು, ಮನೆಮಂದಿಯ ನೆರೆಹೊರೆಯವರ ಸಹಾಯದಿಂದಲಾದರೂ ಓಟು ಹಾಕೇಬಿಡಬೇಕೆನ್ನುವ ಹಠದಿಂದ ಬೂತಿಗೆ ಕಾಲಿಡುವ ವಯೋವೃದ್ಧರು, ಅಂಗವಿಕಲರು... ಅದೊಂದು ಪುಟ್ಟ ಗ್ರಾಮಭಾರತವೇ ಸರಿ.

ಪ್ರಜಾವಾಣಿ, ಮೇ 6-2019
ಹಳ್ಳಿ ಪುಟ್ಟದಾದರೂ ಒಂದೇ ಮತಗಟ್ಟೆಯಲ್ಲಿ 1200ಕ್ಕಿಂತಲೂ ಹೆಚ್ಚು ಮತದಾರರಿದ್ದರು. ಸಂಜೆಯಾಗುತ್ತಿದ್ದಂತೆ ಸರತಿ ಕರಗುವ ಬದಲು ಬೆಳೆಯುತ್ತಲೇ ಹೋಯಿತು. ತಾಂತ್ರಿಕ ದೋಷದಿಂದಾಗಿ ಎರಡು ಬಾರಿ ಮತದಾನದಲ್ಲಿ ಅರ್ಧರ್ಧ ಗಂಟೆ ತಡವಾದ್ದರಿಂದಲೂ ಮತಹಾಕಬೇಕಾದವರ ಗುಂಪು ಕೊಂಚ ದೊಡ್ಡದಾಗಿಯೇ ಇತ್ತು. ಇನ್ನೇನು ಐದೂವರೆ ಆಗುತ್ತಿದ್ದಾಗ ಹಳ್ಳಿಜನರಲ್ಲಿ ಆತಂಕ, ನೂಕಾಟ ತಳ್ಳಾಟ ಹೆಚ್ಚಾಯಿತು. ಏನಿಲ್ಲವೆಂದರೂ ನೂರೈವತ್ತು ಮಂದಿ ಸರತಿಯಲ್ಲಿದ್ದರು.

‘ನೋಡಿ, ಯಾರೊಬ್ಬರೂ ಗಡಿಬಿಡಿ ಮಾಡಿಕೊಳ್ಳಬೇಡಿ. ರಾತ್ರಿ ಹತ್ತಾದರೂ ಪರ್ವಾಗಿಲ್ಲ. ಎಲ್ಲರನ್ನೂ ಓಟು ಹಾಕಿಸಿಯೇ ಕಳಿಸೋದು. ನೀವು ಶಾಂತವಾಗಿದ್ದರೆ ನಮಗೆ ಅನುಕೂಲವಾಗುತ್ತೆ’ ಎಂಬ ಸಮಾಧಾನದ ಮಾತುಗಳನ್ನಾಡಿದ ಮೇಲೆ ಜನರು ಸುಮ್ಮನಾದರು. ಅಷ್ಟಾದರೆ ನಮ್ಮ ತಕರಾರಿಲ್ಲ ಎಂಬ ಹಾಗೆ ಮತ್ತೆ ಶಿಸ್ತಾಗಿ ನಿಂತರು. ಅಂತೂ ಬೂತಿಗೆ ಬಂದ ಪ್ರತಿಯೊಬ್ಬನೂ ಓಟು ಹಾಕಿದ್ದಾನೆಂದು ಖಾತ್ರಿಪಡಿಸಿ ಮತದಾನ ಮುಕ್ತಾಯಗೊಳಿಸಿದಾಗ ಸಂಜೆ ಏಳೂಮುಕ್ಕಾಲು.

ಹೊಸ ಸಹಸ್ರಮಾನ ಹೊಕ್ಕು ಎರಡು ದಶಕಗಳೇ ಉರುಳಿದರೂ ಮತದಾರರ ರಿಜಿಸ್ಟರಿನಲ್ಲಿ ಹೆಬ್ಬೆಟ್ಟು ಹಾಕಿದ ಮಂದಿ ಏನಿಲ್ಲವೆಂದರೂ ಶೇ. 40ರಷ್ಟು ಇದ್ದರು. ಉದ್ಯೋಗಕ್ಕಾಗಿ ಪಟ್ಟಣಕ್ಕೆ ವಲಸೆ ಹೋದವರಾದರೂ ಬಂದು ಮತದಾನದಲ್ಲಿ ಪಾಲ್ಗೊಳ್ಳದಿರಬಹುದು, ಆದರೆ ಈ ಹೆಬ್ಬೆಟ್ಟು ಮಂದಿ ಮಾತ್ರ ಓಟು ಹಾಕುವ ತಮ್ಮ ಹಕ್ಕನ್ನು ಬಿಟ್ಟುಕೊಟ್ಟವರಲ್ಲ. ಎಂಬತ್ತೈದು ದಾಟಿದ ಓರ್ವ ವೃದ್ಧನಂತೂ ತನ್ನ ಸಂಗಡಿಗನಿಗೆ ‘ಮಷಿನ್ ಬಳಿ ಬರ್ಬೇಕಾಗಿಲ್ಲ, ಓಟು ಒತ್ತೋದು ಹೆಂಗೇಂತ ನನಗ್ಗೊತ್ತು’ ಎಂದು ನಯವಾಗಿ ಗದರಿದ ರೀತಿಯಂತೂ ನೆನಪಿನಲ್ಲಿ ಉಳಿಯುವ ದೃಶ್ಯವಾಗಿತ್ತು. ಭಾರತದ ಆತ್ಮವು ಆಕೆಯ ಹಳ್ಳಿಗಳಲ್ಲಿದೆ ಎಂಬ ಮಾತಿನ ಅಂತರಾರ್ಥ ಮನವರಿಕೆಯಾಗುವುದು ಓಟಿನ ಬೂತಿನಲ್ಲಿಯೇ ಇರಬೇಕು.

ಇನ್ನೊಂದೆಡೆ ಬೆಂಗಳೂರಿನಲ್ಲಿ ಈ ಬಾರಿಯೂ ಶೇ. 55 ಮೀರಲಿಲ್ಲವಂತೆ ಎಂಬ ಸುದ್ದಿ ಒಳಮನಸ್ಸನ್ನು ಕಲಕುತ್ತಿತ್ತು. ‘ಯಾರೊಬ್ಬನೂ ಮತದಾನದಿಂದ ವಂಚಿತನಾಗಕೂಡದು’ ಎಂಬುದು ಈ ಬಾರಿ ಚುನಾವಣಾ ಆಯೋಗದ ಪ್ರಮುಖ ಘೋಷಣೆ. ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಎಲ್ಲ ಮಾಧ್ಯಮಗಳಲ್ಲೂ ಮತದಾನ ಮಾಡುವುದು ಎಷ್ಟು ಮಹತ್ವದ್ದು, ಯಾಕೆ ಆ ವಿಷಯದಲ್ಲಿ ಬೇಜವಾಬ್ದಾರಿ ತೋರಬಾರದು ಎಂಬ ಜಾಗೃತಿ ಅಭಿಯಾನ ನಭೂತೋ ಎಂಬಷ್ಟು ಜೋರಾಗಿ ನಡೆದಿತ್ತು. ಆದರೂ ಮಹಾನಗರಗಳಲ್ಲಿ ಮತದಾನದ ಪ್ರಮಾಣದಲ್ಲಿ ಅಂತಹ ಬದಲಾವಣೆಯೇನೂ ಆಗಲಿಲ್ಲ.

ಬೆಂಗಳೂರಿನಲ್ಲೇಕೆ ಮತದಾನದ ಪ್ರಮಾಣ ಹೆಚ್ಚಾಗಿಲ್ಲ ಎಂಬ ಪ್ರಶ್ನೆಗೆ ಈ ಬಾರಿ ಸಾಮಾಜಿಕ ತಾಣಗಳಲ್ಲಿ ಒಂದಿಷ್ಟು ಹೊಸ ವಿಶ್ಲೇಷಣೆಗಳು ಹೊರಬರುತ್ತಿವೆ. ಅವುಗಳಲ್ಲಿ ಒಪ್ಪುವಂಥವೂ ಇವೆ. ಬೆಂಗಳೂರಿನಲ್ಲಿರುವವರಲ್ಲಿ ಬಹುಪಾಲು ಉದ್ಯೋಗ ನಿಮಿತ್ತ ಬೇರೆ ಊರುಗಳಿಂದ ಬಂದವರು. ಅವರು ತಮ್ಮ ಊರಿನಲ್ಲಿಯೇ ಮತ ಹಾಕುತ್ತಾರೆ. ವಿಳಾಸದ ಉದ್ದೇಶಕ್ಕೆ ಬೆಂಗಳೂರಿನಲ್ಲಿಯೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಂಡಿದ್ದಾರೆ. ಇನ್ನೊಂದಷ್ಟು ಮಂದಿ ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ನೆರೆರಾಜ್ಯಗಳ ವಲಸಿಗರು. ಅವರ ಕತೆಯೂ ಇಷ್ಟೇ. ಎರಡೆರಡು ಕಡೆಗಳಲ್ಲಿ ಹೆಸರು, ಗುರುತಿನ ಚೀಟಿ. ಇದರಿಂದಾಗಿ ನಮ್ಮಲ್ಲಿ ಮತದಾನದ ಪ್ರಮಾಣ ಹೆಚ್ಚಾಗುತ್ತಿಲ್ಲ ಎಂಬುದೊಂದು ವಿಶ್ಲೇಷಣೆ.

ಇದು ನಿಜವಾಗಿದ್ದರೆ ಇದೂ ಇನ್ನೊಂದು ಅಕ್ರಮವಾಗುತ್ತದೆ. ಏಕೆಂದರೆ ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದೂ ಕಾನೂನು ಬಾಹಿರ. ಎರಡೆರಡು ಕಡೆ ಮತದಾನ ಮಾಡಿದಷ್ಟೇ ತಪ್ಪಾಗುತ್ತದೆ ಇದು. ಜೊತೆಗೆ ಹೀಗೆ ಒಬ್ಬನ ಹೆಸರು ಎರಡೆರಡು ಕಡೆ ಹೇಗೆ ಸೇರಿಕೊಂಡಿತು ಎಂಬುದು ಇನ್ನೊಂದು ಪ್ರಶ್ನೆಯಾಗುತ್ತದೆ. ಹೀಗೆ ಸೇರಿಸಿದವರು ಯಾರು? ಒಂದು ಕಡೆ ಹೆಸರು ಅಳಿಸಿದ ಮೇಲೆ, ಅದಕ್ಕೆ ಸೂಕ್ತ ದಾಖಲೆ ನೀಡಿದ ಮೇಲೆಯೇ ಇನ್ನೊಂದು ಕಡೆ ಹೆಸರು ಸೇರಿಸಲು ಸಾಧ್ಯ. ಹಾಗಾದರೆ ಇವರು ಹೇಗೆ ಅಕ್ರಮವಾಗಿ ಹೆಸರು ಸೇರಿಸಿಕೊಂಡರು? ಇನ್ನೊಂದೆಡೆ ಮತದಾನ ಮಾಡಲು ಹೋದರೂ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೆ ಹಿಂತಿರುಗಿದವರ ಸಂಖ್ಯೆಯೂ ದೊಡ್ಡದಿದೆ. ಇದೆಲ್ಲ ಹೇಗಾಯಿತು? ಯಾಕಾಯಿತು?

ಇಂತಹ ಪ್ರಕರಣಗಳ ಹೊರತಾಗಿಯೂ ಮತದಾನದಿಂದ ಹೊರಗುಳಿದವರ ಪ್ರಮಾಣ ದೊಡ್ಡದಾಗಿಯೇ ಇದೆ. ‘ಮತದಾನ ಮಾಡದಿರುವುದೂ ಒಂದು ಹಕ್ಕು, ನನ್ನನ್ನು ಯಾರೂ ಒತ್ತಾಯಿಸಲಾಗದು’ ಎಂಬ ಮಾತುಗಳೂ ಈ ಬಾರಿ ಕೇಳಿ ಬಂದವು. ಯಾವುದನ್ನೂ ಯಾರ ಮೇಲೂ ಒತ್ತಾಯಪೂರ್ವಕವಾಗಿ ಹೇರಬಾರದು ಎಂಬುದು ಪ್ರಜಾಪ್ರಭುತ್ವದ ಮೌಲ್ಯವಾಗಿದ್ದರೂ ಮತದಾನದ ವಿಷಯಕ್ಕೆ ಅದನ್ನು ಅನ್ವಯಿಸುವುದು ಎಷ್ಟು ಸಮಂಜಸವಾಗುತ್ತದೆ?

ಹಾಗಾದರೆ ಓಟು ಹಾಕದವರು ಯಾರು, ಅವರು ಯಾವ ಕಾರಣಕ್ಕೆ ಓಟು ಹಾಕಿಲ್ಲ ಎಂಬುದರ ಬಗ್ಗೆ ಒಂದು ಗಂಭೀರ ಅಧ್ಯಯನ ನಡೆಯಬೇಡವೇ? ಎಲ್ಲರಿಗೂ ಒಂದಲ್ಲ ಒಂದು ಕಾರಣ ಇದ್ದೇ ಇರುತ್ತದೆ. ಕೆಲವರು ಉದಾಸೀನದಿಂದ ದೂರವುಳಿದಿರಬಹುದು, ಇನ್ನು ಕೆಲವರು ಮತಪಟ್ಟಿಯಲ್ಲಿನ ದೋಷಕ್ಕೆ ಬಲಿಪಶುಗಳಾಗಿರಬಹುದು, ಅಥವಾ ತಮ್ಮದೇ  ಸಮಜಾಯುಷಿ ಹೊಂದಿರಬಹುದು. ಹಾಗಾದರೆ ಅದು ಏನು ಎಂಬುದನ್ನು ತಿಳಿದುಕೊಳ್ಳುವುದು ಭವಿಷ್ಯದ ಚುನಾವಣೆಗಳ ದೃಷ್ಟಿಯಿಂದ ಪ್ರಮುಖವಾಗುತ್ತದೆ.

ಈ ಬಾರಿಯ ಚುನಾವಣೆಯಂತೂ ನೂರು ಪ್ರತಿಶತ ಸೋಷಿಯಲ್ ಮೀಡಿಯಾ ಚುನಾವಣೆ ಆಗಿ ಹೋಯಿತು. ಚುನಾವಣಾ ಪ್ರಚಾರ, ಚುನಾವಣಾ ಪೂರ್ವ ವಿಶ್ಲೇಷಣೆ-ಸಮೀಕ್ಷೆ, ಮತದಾನ ಪ್ರಕ್ರಿಯೆ, ಫಲಿತಾಂಶ ಎಲ್ಲವೂ ಸಾಮಾಜಿಕ ಮಾಧ್ಯಮಗಳಲ್ಲೇ ನಡೆಯುತ್ತಿದೆ. ಸಾವಿರಾರು ಮಂದಿ ತಾವು ಯಾವ ಪಕ್ಷಕ್ಕೆ, ಯಾವ ಅಭ್ಯರ್ಥಿಗೆ ಮತ ಹಾಕಿದೆವೆಂದು ಕೂಡಲೇ ವಾಟ್ಸಾಪ್, ಫೇಸ್‍ಬುಕ್ಕಿನಲ್ಲಿ ಘೋಷಿಸಿಬಿಟ್ಟರು- ಎಂಬಲ್ಲಿಗೆ ಭಾರತದ ಸಂವಿಧಾನ ಒಪ್ಪಿಕೊಂಡಿರುವ ರಹಸ್ಯ ಮತದಾನ ಪದ್ಧತಿ ಸಂಪೂರ್ಣವಾಗಿ ಬಟಾಬಯಲಿಗೆ ಬಂತು.

ಜನಸಾಮಾನ್ಯರೇನು, ಚುನಾವಣೆಯ ವಿದ್ಯಮಾನಗಳನ್ನು ಸರಿಯಾಗಿ ಬಲ್ಲವರು, ಪತ್ರಕರ್ತರು- ಎಲ್ಲರೂ ಈ ವಿಚಾರದಲ್ಲಿ ಒಂದೇ ರೀತಿ ವರ್ತಿಸಿದರು. ತಾನು ಇಂಥವರಿಗೆ ಓಟ್ ಮಾಡಿದೆ, ನೀವೂ ಅವರಿಗೇ ಓಟ್ ಮಾಡಿ, ಅಥವಾ ನೀವು ಇಂಥ ವ್ಯಕ್ತಿಯ ವಿರುದ್ಧ ಮತ ಚಲಾಯಿಸಿ ಎಂದು ರಾಜಾರೋಷವಾಗಿ ಕರೆಕೊಟ್ಟರು. ಇದು ಸೀಕ್ರೆಟ್ ಬ್ಯಾಲಟ್ ಪದ್ಧತಿಯ ಸ್ಪಷ್ಟ ಉಲ್ಲಂಘನೆಯಲ್ಲವೇ?  ತಿಳುವಳಿಕೆಯಿಲ್ಲದವರಿಗೆ ತಿಳಿಸಿ ಹೇಳಬಹುದು, ಎಲ್ಲವನ್ನೂ ಬಲ್ಲವರಿಗೆ ಏನೆಂದು ಹೇಳಬೇಕು?

ಆದಾಗ್ಯೂ ಪೂರ್ತಿ ಚುನಾವಣೆಯೇ ಜಾತಿ ಲೆಕ್ಕಾಚಾರದ ಮೇಲೆ ನಡೆಯುತ್ತಿರುವಾಗ, ವೈಯುಕ್ತಿಕ ತೇಜೋವಧೆಯೇ ಚುನಾವಣಾ ಪ್ರಚಾರ ಆಗಿರುವಾಗ, ಹಾಡುಹಗಲೇ ಕೋಟ್ಯಂತರ ರೂಪಾಯಿ ಸಾಗಾಟ ನಡೆಯುತ್ತಿರುವಾಗ, ಹಣ-ಹೆಂಡ-ಉಡುಗೊರೆಗಳ ಆಧಾರದಲ್ಲೇ ಬಹುಪಾಲು ಮತದಾನ ನಡೆಯುತ್ತಿರುವಾಗ ಸೋಷಿಯಲ್ ಮೀಡಿಯಾದಲ್ಲಿ ಸೀಕ್ರೆಟ್ ಬ್ಯಾಲಟ್ ಪದ್ಧತಿಯನ್ನು ಉಲ್ಲಂಘಿಸಿದರು ಎಂದು ಪ್ರಲಾಪಿಸುವುದೂ ತಮಾಷೆಯಾಗಿ ಕಾಣಬಹುದು.